ಭಾಮಿನಿ
ಧರಣಿಗುರುಳಿದ ಭೀಮನನು ಕಂ |
ಡುರುತುರಾನಂದದಲಿ ನರಕನ |
ತರಳ ಪ್ರತಿಭಟರನ್ನು ನೋಡುತಲಿರಲು ಗರ್ಜಿಸುತ ||
ಕರಿಯ ಕಂಡಾರ್ಭಟಿಪ ಕೇಸರಿ |
ತೆರದಿ ರೌದ್ರಾವೇಶದಿಂದಲಿ |
ನರನ ಸುತನಭಿಮನ್ಯು ಬಂದಿದಿರಾಗಿ ಮಾರಾಂತ || ೧೯೩ ||
ರಾಗ ಘಂಟಾರವ ಏಕತಾಳ
ಬಾರೆಲೊ ಭಗದತ್ತನೆನ್ನೊಳು ಶೌರ್ಯ |
ದೋರು ಪಾಮರನೆನುತ ಕಣೆಗಳ | ತೂರಿದನು ಭೋರ್ಗರೆಯುತ || ೧೯೪ ||
ತಂಡತಂಡದ ಶರಗಳ ಖಂಡಿಸಿ |
ದಂಡಧರನಿಗೆ ಬೆದರೆ ಪೋರನೆ | ಹಿಂಡುವೆನು ನಿನ್ನಸುವನು || ೧೯೫ ||
ಎಂದ ಮಾತನು ಕೇಳುತ್ತ ಪಾರ್ಥನ |
ನಂದನನು ಖತಿಗೊಂಡು ಕೂರ್ಗಣೆ | ಸಂಧಿಸಿದ ಭೋರ್ಗರೆಯುತ || ೧೯೬ ||
ಭಳಿರೆ ಭಾಪುರೆ ಬಾಲ ಸಾಹಸಿ ನೀನು |
ಕಲಿಗಳೊಳು ತೋರುವೆಯ ವಿಕ್ರಮ | ವೆನುತ ಮುರಿದನು ನರಕಜ || ೧೯೭ ||
ಸ್ತಂಭದಿಂದಲೆ ಪೊರಮಟ್ಟ ನರಹರಿ |
ಡಂಬರದ ಗರ್ಜನೆಯನೀಯುತ | ಲಂಬು ಸುರಿಸಿದ ನರಜನು || ೧೯೮ ||
ರಾಗ ಭೈರವಿ ಏಕತಾಳ
ಉರಗಾಸ್ತ್ರದಿ ನರಕಜನು | ಹೆದೆ | ಗಿರಿಸುತ ಬಿಡೆ ನರಸುತನು |
ತರಿದನು ಗಾರುಡಶರದಿ | ಬೊ | ಬ್ಬಿರಿಯುತ ಕೇಸರಿರವದಿ || ೧೯೯ ||
ಗಿರಿಮಾರ್ಗಣವನು ತೆಗೆದು | ಶಿರ | ಕೆರಗಿದ ನರಕಜ ಮುಳಿದು ||
ನರಸಂಭವ ಕುಲಿಶದೊಳು | ತುಂ | ಡರಿಯುತಲತಿ ವೇಗದೊಳು || ೨೦೦ ||
ಕಿಡಿಗೆದರುತ ಪಾರ್ಥಜನು | ಮು | ಕ್ಕಡಿಗೆಯ್ದಿರೆ ಚಾಪವನು |
ಖಡುಗವ ತಿರುಹುತ ಬರಲು | ಮುರಿ | ದಡದನು ಬಲು ವೇಗದೊಳು || ೨೦೧ ||
ಭಾಮಿನಿ
ಗದೆಯ ತಿರುಹುತ ಬರಲು ನರಕಜ |
ಸದೆದು ಕೆಡಹುತ ಪಾರ್ಥನಂದನ |
ಕುದಿವ ಕೋಪದೊಳೊಂದು ಶರವೆದೆಗೆಸೆಯೆ ಬಲುಮೆಯಲಿ ||
ಒದಗಿ ಮೂರ್ಛೆಯ ತಳೆಯೆ ಕಾಣುತ |
ಲಧಿಕ ರೋಷದಿ ಗಂಗೆಯಣುಗನು |
ಎದುರಿನೊಳು ನಡೆತಂದು ತಡೆದಿರೆ ಕಾಣುತಭಿಮನ್ಯು || ೨೦೨ ||
ರಾಗ ಕೇದಾರಗೌಳ ಝಂಪೆತಾಳ
ತಾತ ಸಂಗರಶೂರನೆ | ತ್ರೈಭುವನ | ಖ್ಯಾತ ಶಂತನುಪುತ್ರನೆ ||
ಪ್ರೀತಿಯಿಂ ಬಾಲಕನೊಳು | ಧುರಗೆಯ್ವ | ಖಾತಿಗಳ ಶಮಿಪೆ ತಾಳು || ೨೦೩ ||
ತರಳನಾದರು ರಣದಲಿ | ಪೆಸರ್ವಡೆದ | ಧುರಧೀರನಹೆ ನಿನ್ನಲಿ ||
ಕರಚಮತ್ಕೃತಿ ನೋಡಲು | ಬಂದೆನೆಂ | ದೊರೆದ ಭೀಷ್ಮನು ಮುದದೊಳು || ೨೦೪ ||
ಸುರನರೋರಗಮಧ್ಯದಿ | ಧುರದೊಳಗೆ | ಸರಿಯಿಲ್ಲವೆಂದು ಜಗದಿ ||
ಧರಿಸಿರ್ಪ ಸತ್ಕೀರ್ತಿಯ | ಮಮ ತಾತ | ತರಳನೊಳು ಕಳೆಕೊಂಬೆಯ || ೨೦೫ ||
ಒಂದೆ ಶರಕೀಡೆ ಕುವರ | ಪೆತ್ತಿರುವ | ತಂದೆ ವೀರಾಗ್ರೇಸರ ||
ಕೊಂದರೆನಗಳುಕಾಪುದು | ನಿನ್ನ ನುಡಿ | ಗಿಂದು ಖತಿಯೇರುತಿಹುದು || ೨೦೬ ||
ರಾಗ ಭೈರವಿ ಝಂಪೆತಾಳ
ನಡುಗುತಿವೆ ಎಲೆ ವೃದ್ಧ ನಿನ್ನ ಕೈಕಾಲುಗಳು | ಬಡಿವಾರ ಪೌರುಷವ ನುಡಿವೆ ||
ಹುಡುಗನೆನ್ನೊಳು ತೋರು ಶಸ್ತ್ರವಿದ್ಯೆಯನೆನುತ | ಕಿಡಿಗೆದರುತೆಚ್ಚನಭಿಮನ್ಯು || ೨೦೭ ||
ಹಸುಳೆ ಕೇಳೆಲೊ ವೀರಕ್ಷಾತ್ರಿ ನಿನ್ನನು ಪಡೆದು | ವಸುಧೆಯೊಳ್ ಕೃತಕೃತ್ಯನಾದ ||
ಶಶಿಕುಲಾನ್ವಯದೀಪ ಸುಕುಮಾರ ಭಳಿರೆನುತ | ಕುಶಲದಿಂದದ ತರಿದ ಭೀಷ್ಮ || ೨೦೮ ||
ಕೀಶಧ್ವಜಾತ್ಮಜನು ಧನುವ ಝೇಂಕರಿಸುತ್ತ | ರೋಷದಿಂ ಮಾರ್ಗಣಗಳುಗಿದ |
ಗಾಸಿಗೆಯ್ಯುವೆನೆನುತ ತೂರುತಿರೆ ಗಾಂಗೇಯ | ತೋಷದಿಂ ಚೂರ್ಣಿಸಿದನಾಗ || ೨೦೯ ||
ರಾಗ ಪಂಚಾಗತಿ ಮಟ್ಟೆತಾಳ
ಕೆರಳಿ ನರಜನು | ಶರವನೊಂದನು |
ಶಿರಕೆ ಗುರಿಯೊಳಿಡಲು ಭೀಷ್ಮ | ಗಾಯವಡೆದನು || ೨೧೦ ||
ಪ್ರಳಯಭೈರವ | ನಂತೆ ಭೀಷ್ಮನು |
ಜ್ವಲಿಪ ತೀವ್ರ ಶರಧಿ ಧನುವ | ಮುರಿದು ಕೆಡೆದನು || ೨೧೧ ||
ಗದೆಯ ಕೊಳುತಲಿ | ತಿರುಹಿ ಭರದಲಿ |
ಸದೆಯೆ ಕಸಿದು ಭೀಷ್ಮ ಸೆರೆಯ | ಪಿಡಿದ ಖತಿಯಲಿ || ೨೧೨ ||
ವಾರ್ಧಕ
ಸೆರೆಯು ಸಿಕ್ಕಿದನರರೆಯಭಿಮನ್ಯುವೆಂದೆನುತ |
ಹರುಷದೊಳು ಗುರುಜಕೃಪ ದುಶ್ಯಾಸ ಮುಖ್ಯರ |
ಯ್ತರುತಿರಲು ಗಾಂಗೇಯನರಿತು ತನ್ನೊಳಗಾಗ ತರಳ ಮಹರಥನೀತನು ||
ಕುರುಕುಲದ ಬಾಲಕರೊಳಿವನ ಪೋಲುವರಿಲ್ಲ |
ಪರಮಸತ್ಕೀರ್ತಿಯುತನೆಂದು ಬಿಡಲಾ ಕ್ಷಣವೆ |
ಹರಿನಾದದಿಂ ಖಡ್ಗ ಝಳಪಿಸುತಲಭಿಮನ್ಯು ಸುರನದೀಸುತಗೆಂದನು || ೨೧೩ ||
ಭಾಮಿನಿ
ಹಿರಿಯನೆಂಬುದಕಾಗಿ ತಡೆದರೆ |
ಪರಮ ಶೂರತ್ವಗಳ ತೋರಿದೆ |
ಶಿರವರಿವೆನೆಂದೆನುತ ಕಿಡಿಕಿಡಿಯೇರಿ ಪಲ್ಮೊರೆದು ||
ಭರದಿ ಮುಂದಯ್ತರಲು ದ್ರುಪದಜ |
ನರಜನನು ಮನ್ನಿಸುತ ಭೀಷ್ಮನ |
ಧುರಕೆ ಬಂದಿದಿರಾಗಿ ಮೂದಲಿಸುತ್ತ ಪೇಳಿದನು || ೨೧೪ ||
ರಾಗ ಭೈರವಿ ಅಷ್ಟತಾಳ
ಧುರಪರಾಕ್ರಮವೆನ್ನೊಳು | ತೋರುವುದೀಗ | ತರಳನ ಗರ್ವದೊಳು ||
ಸೆರೆವಿಡಿದೆನು ಎಂಬ ಪೌರುಷ ಬೇಡ ನಾ | ದ್ರುಪದಜ ಧೃಷ್ಟದ್ಯುಮ್ನ || ೨೧೫ ||
ಅಕ್ಷಿ ಮೂರಿಹುದೆ ಪೇಳು | ಷಡಾನನ | ಪಕ್ಷಿವಾಹನನೊ ತಾಳು ||
ಮಕ್ಷಿಕವದ್ರಿಯ ಭಕ್ಷಣೆಗೆಯ್ವುದೆ | ದಕ್ಷ ನಾ ಭೀಷ್ಮ ನೋಡು || ೨೧೬ ||
ಹರವಿಧಿಗಂಜೆ ನಾನು | ಚಂದ್ರಾನ್ವಯ | ಹಿರಿಯ ಪಿತಾಮಹನು ||
ಶಿರವ ಖಂಡಿಸಿ ಕೀರ್ತಿ ಪಡೆವೆನೆನುತ ಶರ | ವರುಷವ ಕರೆದನಾಗ || ೨೧೭ ||
ಪುಡಿಗೆಯ್ದು ಭೀಷ್ಮನಾಗ | ಧೃಷ್ಟದ್ಯುಮ್ನ | ಪಿಡಿದ ಕಾರ್ಮುಕವ ಬೇಗ ||
ನಡುವೆ ಖಂಡಿಸಿ ಕೆಡಹಲ್ಕೆ ಖಡ್ಗವ ಕೊಂಡು | ಝಳಪಿಸುತಯ್ತಂದನು || ೨೧೮ ||
ರಾಗ ಶಂಕರಾಭರಣ ಮಟ್ಟೆತಾಳ
ಕಸಿದು ಖಡ್ಗವನ್ನು ಭೀಷ್ಮ | ವಸುಧೆಯೊಳಗೆ ಬಿಸುಡಲಾಗ |
ಲಸಮ ಸಹಸಿ ದ್ರುಪದಜಾತ | ಗದೆಯೊಳೆರಗಿದ || ೨೧೯ ||
ಭರಕೆ ತಪ್ಪುತಾಗ ಭೀಷ್ಮ | ಭಿಂಡಿವಾಲದಿಂದ ಪೊಯ್ಯೆ |
ಶಿರವು ಕಂಪಿಸುತ್ತ ಮೂರ್ಛೆ | ತಳೆಯುತೆದ್ದನು || ೨೨೦ ||
ಕೆರಳಿ ಧೃಷ್ಟದ್ಯುಮ್ನನಾಗ | ಭರದಿ ಮುಂದಕೊತ್ತಿ ಪೊಗಲು |
ಪರಿಕಿಸುತ್ತ ಪಾರ್ಥ ತಡೆದು | ಧುರಕೆ ನಡೆದನು || ೨೨೧ ||
ಭಾಮಿನಿ
ಫಲುಗುಣನು ಸಮ್ಮುಖಕೆ ಬರುತಿರೆ |
ಜಲಜಬಾಂಧವನಸ್ತಶೈಲಕೆ |
ಚಲಿಸುತಿಹುದನು ಕಂಡು ಭೀಷ್ಮನು ರಜನಿಯೊದಗಿಹುದು ||
ಹಳಚುವುದು ಕಮಲಾಪ್ತನುದಯದಿ |
ನಿಲಿಸು ಸಮರವನೆನಲು ಕೇಳುತ |
ಬಲಸಹಿತ ತಂತಮ್ಮ ಶಿಬಿರವ ಪೊಕ್ಕು ಸಂತಸದಿ || ೨೨೨ ||
ರಾಗ ಕಾಂಭೋಜಿ ಝಂಪೆತಾಳ
ನಿಶಿಥಕಾಲದೊಳುಭಯಸೇನೆ ಸೇನಾಧ್ಯಕ್ಷ | ರೆಸಗಿರುವ ನೇಮದೊಳು ಶಿಬಿರವನು ಪೊಕ್ಕು ||
ಕುಶಲದಿಂ ಪವಡಿಸುತ ಯಾಮಿನಿಯ ಕಳೆಯುತಿರೆ | ಬಿಸಜಬಾಂಧವನುದಯಶೈಲವಡರಿರಲು || ೨೨೩ ||
ಸುರನದೀನಂದನನು ನಿತ್ಯ ಕರ್ಮವ ರಚಿಸಿ | ಹುರಿಗೊಳಿಸುತಿರೆ ಸೈನ್ಯವಿತ್ತ ಫಲುಗುಣನು ||
ಸರಸಿರುಹನಾಭನಡಿಗೊಂದಿಸುತ ದೈನ್ಯದಿಂ | ಕರವ ಜೋಡಿಸುತೆಂದ ಕುಂದಿ ವ್ಯಥೆಯೊಳಗೆ ||೨೨೪||
ಆರು ದಿನವಾಯ್ತೀಗ ಧುರದಿ ಭೀಷ್ಮನು ರಥಿಕ | ಶೂರರನು ದಿನದಿನದಿ ಹತ್ತು ಸಾಸಿರವ ||
ಧಾರಿಣಿಗೆ ಕೆಡಹುತಿಹ ಪನ್ನೆರಡು ದಿನವಿಹುದು | ವಾರಿಜಾಕ್ಷನೆ ಜಯದ ಹಂಬಲಿಲ್ಲೆನಗೆ || ೨೨೫ ||
ಗುರು ಗುರುಜಕೃಪ ಶಲ್ಯ ಕೌರವಾದಿಗಳಿಹರು | ಧುರಧೀರ ಕರ್ಣನಿಹನೆಂತು ಹಳಚುವರೊ ||
ತರಿದ ಗಾಂಗೇಯನೊರ್ವನೆ ಬಹಳ ಸೇನೆಯನು | ಧುರದಿ ಜಯವಿಲ್ಲೆನಲು ಹರಿಯು ನಸುನಗುತ || ೨೨೬ ||
ರಾಗ ಕೇದಾರಗೌಳ ಅಷ್ಟತಾಳ
ನರನೆ ನೋಡರಿಬಲದಲಿ | ಹನನವಾ | ಗಿರುವಂತೆ ಎಮ್ಮವರಲಿ ||
ಧುರದಿ ಸಂಹೃತರಾಗದೆ | ಹೆಣಗುತಿಹ | ರರಿಯದೀ ಪರಿ ಪೇಳ್ವುದೆ || ೨೨೭ ||
ಎಷ್ಟು ಬಲವಿರಲವನಿಗೆ | ಜಯವಿಲ್ಲ | ಕೆಟ್ಟ ಕುರುಪತಿ ಮೂರ್ಖಗೆ ||
ಸೃಷ್ಟಿಭಾರಕನಾತನು | ಭೀಷ್ಮಮನ | ವಿಟ್ಟು ಕಾದನು ಪ್ರಾಜ್ಞನು || ೨೨೮ ||
ಮರುತನಂದನತನುಜನು | ಮಾಯಕದ | ಧುರಧೀರ ಹೈಡಿಂಬನು ||
ಬರಲಿಲ್ಲ ನೆನೆ ಬೇಗನೆ | ಈ ದಿನದೊ | ಳರಿವಿಜಯಕೆಲೆ ಪಾರ್ಥನೆ || ೨೨೯ ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಿತು ಮನದೊಳಗಾಗ ಪಾರ್ಥನು | ಸರಿಯೆನುತ ರಿಪು ವಿಜಯ ಕೋಸುಗ |
ಪರುಠವಿಸಿ ಕಟ್ಟಿದನು ಸೇನಾ | ವ್ಯೂಹವನ್ನು || ೨೩೦ ||
ಮರುತಸುತ ಮುಖದಲ್ಲಿ ನೇತ್ರಗ | ಳೆರಡರೊಳಗೆ ಶಿಖಂಡಿ ದ್ರುಪದಜ |
ಶಿರದಿ ಸಾತ್ಯಕಿ ಕಂಠದೇಶದಿ | ಸವ್ಯಸಾಚಿ || ೨೩೧ ||
ಅರಸ ದ್ರುಪದ ವಿರಾಟರೆಡಬಲ | ವೆರಡು ರೆಕ್ಕೆಯೊಳ್ ವಾಹಿನಿಯು ಸಹಿ |
ತಿರಲು ನರಜನು ದ್ರೌಪದೇಯರು | ಬೆನ್ನಿನೊಳಗೆ || ೨೩೨ ||
ವಾಲದೊಳು ಮಾದ್ರೇಯ ಧರ್ಮಜ | ಪಾಳೆಯದ ಮೊತ್ತದಲಿ ನಿಲಿಸುತ |
ಕಾಳಗಕೆ ಕಳುಹುವರೆ ನೆನೆದನು | ಭೀಮಸುತನ || ೨೩೩ ||
ಘೋರನಾದದಿ ದಾಡೆ ಮಸೆಯುತ | ಭೋರನಯ್ತಂದಾ ಘಟೋತ್ಕಚ |
ಕಾರಿಯವ ನೇಮಿಪುದು ನೆನೆದಿಹು | ದೇತಕೆನಲು || ೨೩೪ ||
ಕುರುಪತಿಯ ವಾಹಿನಿಯ ಸಮರದಿ | ತರಿದು ಗಂಗಾಸುತನ ದರ್ಪವ |
ಮುರಿಯೆನುತ ಕಳುಹಲ್ಕೆ ಸೇನೆಯೊ | ಳತ್ತ ಭೀಷ್ಮ || ೨೩೫ ||
ವಾರ್ಧಕ
ಗರುಡವ್ಯೂಹವ ಗೆಯ್ದು ಕೊಕ್ಕಿನೊಳ್ ಗಾಂಗೇಯ |
ನೆರಡಕ್ಷಿಯೊಳ್ ದ್ರೋಣಕೃಪರು ನಿಂದಿರಲಾಗಿ |
ಶಿರದೊಳಶ್ವತ್ಥಾಮ ಕಂಠದೊಳಗೆ ವಿಕರ್ಣ ಮಾದ್ರನರಕಜರುರದಲಿ ||
ಧರಣಿಪತಿ ವಿಂದಾನುವಿಂದ ಕಾಳಿಂಗೇಶ |
ರಿರೆ ವಾಮದಕ್ಷಿಣದ ಪಕ್ಷದೊಳ್ ಬಲಸಹಿತ |
ಕುರುರಾಯರನುಜಾತರೊಡಗೊಂಡು ಪುಚ್ಛದಲಿ ಮೆರೆದಿರ್ದ ತಾನಂದದಿ || ೨೩೬ ||
ರಾಗ ಭೈರವಿ ಏಕತಾಳ
ಕಟ್ಟಿಹ ಕೋಟೆಯ ನೋಡಿ | ಕರ | ತಟ್ಟುತ ಶಿರವೊಲೆದಾಡಿ ||
ಕುಟ್ಟಿ ನುಗ್ಗೊತ್ತುವೆನೆನುತ | ಜಗ | ಜಟ್ಟಿ ಘಟೋತ್ಕಚ ನಗುತ || ೨೩೭ ||
ಖಡುಗವ ಝಳಪಿಸುತಾಗ | ಖಳ | ಕಿಡಿಗಳನುಗುಳುತ ಬೇಗ ||
ತುಡುಕಿ ಮುಂದಯ್ತರೆ ಕಂಡು | ಕುರು | ಪೊಡವಿಪ ಕೋಪವ ಕೊಂಡು || ೨೩೮ ||
ದುರುಳಖಳಾಧಮ ಕೇಳೊ | ಶಿರ | ವರಿಯುವೆನರೆಕ್ಷಣ ತಾಳೊ ||
ಕುರುಪತಿ ಬಂದಿಹೆ ನಾನು | ನೀ | ಪರಿಕಿಸು ಶರವಿದ್ಯೆಯನು || ೨೩೯ ||
ಗಳಹದಿರೆಲೊ ಪೌರುಷವ | ಬಾ | ಕೊಳುಗುಳದೊಳು ನಿನ್ನಸುವ ||
ತೊಲಗಿಪೆ ಖಡುಗದೊಳೀಗ | ಕೈ | ಚಳಕವ ತೋರೈ ಬೇಗ || ೨೪೦ ||
ರಾಗ ಭೈರವಿ ಅಷ್ಟತಾಳ
ವನಮೃಗಗಳ ತರಿದು | ತಿಂಬುವ ಘೋರ | ದನುಜನೆ ಸಮರವಿದು ||
ಘನತೆಯಾಗಿದೆ ದುಷ್ಟ ಖಳರು ಕ್ಷತ್ರಿಯರೊಳ | ಗನುವರವೆಸಗುವುದು || ೨೪೧ ||
ಕುರುಪತಿ ಕೇಳೊ ನಿನ್ನ | ಸೇನೆಗಳೆಂಬ | ವರಘೋರತರದಾರಣ್ಯ ||
ಗುರುಭೀಷ್ಮಕೃಪಶಲ್ಯರೆಲ್ಲ ಮೃಗಂಗಳ | ತೆರನೀಗ ತಿಂಬೆ ನೋಡು || ೨೪೨ ||
ದಶಶಿರವೃತ್ತ ಬಲ | ಹಿರಣ್ಯಕ | ನಸಿಲೋಮ ಜಂಭ ಕೇಳಾ ||
ಅಸಮ ಸಾಹಸರಗ್ರಗಣ್ಯರೆಲ್ಲ್ಯಯ್ದಿದ | ರುಸಿರೆಂದ ಕೌರವನು || ೨೪೩ ||
ಖಳರಿಗೆ ನಾಶಗಳು | ಬರ್ಪುದ ನಾನು | ತಿಳಿದಿರ್ಪೆ ಪೂರ್ವದೊಳು ||
ಕಳುಹಿದೆ ವನಕೆ ಗೋಳ್ಗುಡಿಸಿ ಸೋದರರನ್ನು | ಖಳ ನೀನು ಬಾಳುವೆಯ || ೨೪೪ ||
ಎಂದಾ ಮಾತನು ಕೇಳುತ್ತ | ಕೌರವ ಕ್ರೋಧ | ದಿಂದ ಚಾಪವನೆತ್ತುತ್ತ ||
ಸಂಧಿಸಿದನು ನೂರು ಬಾಣವನನಿಲಜ | ನಂದನನಿಗೆ ಭರದಿ || ೨೪೫ ||
ರಾಗ ಶಂಕರಾಭರಣ ಮಟ್ಟೆತಾಳ
ಶರವ ತರಿದು ಭೀಮಸುತನು ಭಿಂಡಿವಾಲದಿ |
ಕರದ ಚಾಪವನ್ನು ಮುರಿದು ಕೆಡೆದ ವೇಗದಿ || ೨೪೬ ||
ಚಾಪ ಪೋಗೆ ಖಡುಗವೆತ್ತಿ ಕೌರವೇಂದ್ರನು |
ಕೋಪದಿಂದಲೆಸೆಯೆ ಚೂರ್ಣಗೆಯ್ದು ಬಿಸುಟನು || ೨೪೭ ||
ಚಂಡಕೋಪದಿಂದ ಗದೆಯನೆತ್ತಿ ಎಸೆಯಲು |
ಖಂಡಿಸುತ್ತಲದರ ಹೈಡಿಂಬಿ ಖತಿಯೊಳು || ೨೪೮ ||
ಮುಷ್ಟಿಯನ್ನು ಬಲಿದು ಶಿರಕೆ ಥಟ್ಟನೆರಗಲು |
ಸೃಷ್ಟಿಯೊಳಗೆ ಮೂರ್ಛೆತಳೆದ ಭೂಪನಾಗಳು || ೨೪೯ ||
ವಾರ್ಧಕ
ಅಸುರಕೋಟಿತ್ರಯವ ಸೃಜಿಸಿದಂ ಕ್ಷಣದೊಳಗೆ |
ಮುಸುಕಿದಂ ಕೈದುಗಳ ಮಳೆಯ ಭೋರ್ಗರೆಯುತ್ತ |
ಮಸಗಿರುವ ಕಾರ್ಬೊಗೆಯ ಜ್ವಾಲೆ ದಳ್ಳುರಿಗಳೊಳ್ ಮಿಂಚು ಸಿಡಿಲಾಗೆರಗುತ ||
ವಿಷಜಂತು ವಾರಾಹ ಸಿಂಹ ಚಮರಿ ಗಜಾಶ್ವ |
ದೆಸೆಗೆಡಿಪ ಪುಲಿ ಕರಡಿ ಖಡ್ಗಿ ಗೋಮಯು ಶರಭ |
ಅಸುರ ನಿರ್ಮಿಸುತಾಗ ರಿಪುಸೇನೆಗಳಿಗೆರಗಿ ಕಂಗೆಡಿಸೆ ಕ್ಷಣಮಾತ್ರದಿ || ೨೫೦ ||
ರಾಗ ನಾದನಾಮಕ್ರಿಯೆ ಅಷ್ಟತಾಳ
ಖಡುಗವ ಝಳಪಿಸಿ ಪೊಕ್ಕನು | ಖಳ | ಕಡಿದಿಳುಹುತ ಕೋಟೆ ಮುರಿದನು ||
ತುಡುಕಿ ಮಹಾರಥವರ್ಗವ | ಕಂ | ಗೆಡಿಸಲು ಕುರುಸೇನೆಯೆಲ್ಲವ || ೨೫೧ ||
ಕರಿಗಳ ತಂಡವ ತರಿದನು | ರಥ | ತುರಗ ಕಾಲ್ಬಲಗಳ ಮುರಿದನು ||
ಧುರಧೀರರನು ಭಿಂಡಿವಾಲದಿ | ಬಡಿ | ದುರುಳಿಸಿದನು ಕ್ಷಣ ಮಾತ್ರದಿ || ೨೫೨ ||
ಕೆಲರೋಡಿದರು ದೆಸೆದೆಸೆಗಾಗ | ಮತ್ತೆ | ಕೆಲರು ಚಾಪವ ಬಿಸುಡುತ ಬೇಗ ||
ಸಲಹಬೇಕೆನ್ನುತ್ತ ಕೆಲವರು | ಬೀಳು | ತ್ತಿಳೆಯೊಳು ಸ್ತುತಿಗೆಯ್ಯುತಿರ್ದರು || ೨೫೩ ||
ಕಂದ
ಕರಗಳ ಜೋಡಿಸಿ ದೈನ್ಯದಿ |
ಮರುಗುತಲಿಹರಂ ಕಾಣುತ ಮಾರುತಿ ತನಯಂ ||
ಭರವಸೆಯೀಯುತ ಮುದದಿಂ |
ತಿರುಗಲು ಕೌರವ ಚೇತರಿಸುತ ಕಂಡಾಗಳ್ || ೨೫೪ ||
ರಾಗ ಸಾಂಗತ್ಯ ರೂಪಕತಾಳ
ಶಿವ ಶಿವ ಕರ್ಬುರನೆಸಗಿದ ವಿಕ್ರಮ | ತವಕದಿ ಕಂಡಿರೆ ಭಟರು |
ಬವರಕೆ ನಿಂದಿಹ ರಥಿಕರೆಲ್ಲರು ನಿಮ್ಮೊಳ್ | ಕವಲು ಬುದ್ಧಿಯ ಯೋಚಿಸಿದಿರೆ || ೨೫೫ ||
ಗುರು ದ್ರೋಣ ಭೀಷ್ಮಾದ್ಯರೆಲ್ಲ ಲಾಲಿಪುದೀಗ | ಹರವಿಧಿಗಳಿಗಸಾಧ್ಯಕರು ||
ಧುರಪರಾಕ್ರಮರು ಪಾಂಡವರನ್ನು ಸತ್ಯದಿ | ತರಿಯುವಿರೆಂದರಿತಿರ್ದೆ || ೨೫೬ ||
ಅಂತರಂಗದಿ ಪೂರ್ಣ ಕರುಣ ಪಾಂಡವರೊಳು | ನಿಂತಿರಿ ಎನ್ನ ಪಕ್ಷದೊಳು ||
ಪಿಂತೆನಗರಿತಿರೆ ಕರ್ಣನೊಂದಿಗೆ ಮನ | ವೆಂತು ತೋರ್ಪುದೊ ಗೆಯ್ಯುತಿರ್ದೆ || ೨೫೭ ||
ಕೂಡಿದ ಸಭೆಯೊಳು ನಿಂದೆಗೆಯ್ದುದಕಾಗಿ | ಮಾಡಿದ ಶಪಥವ ಕರ್ಣ ||
ಮಾಡೆನು ಸಮರವ ಭೀಷ್ಮ ಸೌರಂಭದಿ | ಹೂಡೆನಸ್ತ್ರವನೆಂದು ನಡೆದ || ೨೫೮ ||
ಮೊದಲೆ ಪಾಂಡವರ ಪಕ್ಷಕೆ ಪೋದರೊಳಿತೆಂದ | ಹೃದಯದೊಳ್ ಗರಳವನಿರಿಸಿ ||
ಸುಧೆಯುಕ್ತ ವಚನ ಬೀರಿರೆ ನಂಬಿ ಎನಗಿಂಥಾ | ಕದನದೊಳಪಹಾಸ್ಯವಾಯ್ತು || ೨೫೯ ||
ರಾಗ ಮಾರವಿ ಏಕತಾಳ
ಇನಿತೀ ಪರಿ ಧಿಕ್ಕರಿಸುವ ಕುರುಕುಲ | ಜನಪನನೀಕ್ಷಿಸುತ ||
ಘನ ಕ್ರೋಧಗಳನು ತಾಳುತ ಗಂಗಾ | ತನಯನು ಪೇಳಿದನು || ೨೬೦ ||
ಖರೆ ಖರೆ ಕರ್ಣನು ನಿನ್ನಯ ಜೀವವ | ಪೊರೆಯುವ ವಿಕ್ರಮನು ||
ಬರಿದೇ ಕಲಹವ ತಂದಿಕ್ಕಿದ ಮಹ | ಪುರುಷನೆ ಹಿತ ನಿನಗೆ || ೨೬೧ ||
ಶರಧಿಯೊಳಡಗಿಹ ಚಿಪ್ಪಿನ ಮಧ್ಯದಿ | ಮೆರೆಯುವ ಮೌಕ್ತಿಕಕೆ ||
ಸರಸಿಜಪತ್ರದೊಳಿರುತಿಹ ಜಲಕಣ | ಸರಿಸಮವಾಗುವುದೆ || ೨೬೨ ||
ಗಳಿಸಿದೆ ಋಣ ಕೌರವನೊಳಗೆನ್ನುತ | ಛಲವಿಡಿದೀವರೆಗೆ ||
ಹಳಚಿದೆ ಖಾಡಾಖಾಡಿಯೊಳಹಿತರ | ಬಲಗಳ ತರಿದಿಹೆನು || ೨೬೩ ||
ಆದರೆ ಎನ್ನಯ ಶಪಥವ ಲಾಲಿಸು | ಮಾಧವನನು ಧುರಧಿ ||
ಮೋದದಿ ಚಕ್ರವ ಪಿಡಿಸದಿರಲು ನಾ | ಮೇದಿನಿಯೊಳಗಿರೆನು || ೨೬೪ ||
ವಾರ್ಧಕ
ಒರೆಯುತೀ ಪರಿ ತನ್ನ ಮನದೊಳಗೆ ಯೋಚಿಸುತ |
ದುರುಳಸಹವಾಸವೇನೆಂಬೆ ಮೌನದೊಳಿರಲು |
ಬರುತಿಹುದು ಮೂಕನೆಂದಭಿಧಾನ ಮಾತಾಡೆ ಬಹುಭಾಷಿಯೆಂತೆಂಬರು ||
ಬರಲು ಹತ್ತಿರೆ ಗರ್ವಿಯೆಂಬುವರು ದೂರಿರಲು |
ಪುರುಷರೊಳಗಧಮನಿವನೆಂಬರನ್ಯರ ಸೇವೆ |
ಪರಮಸಂಕಟವೆನುತ ಪೊರಮಟ್ಟು ಗಾಂಗೇಯ ಮಾದ್ರೇಶನೊಡನೆಂದನು || ೨೬೫ ||
ರಾಗ ತೋಡಿ ಅಷ್ಟತಾಳ
ಕೇಳು ಕೇಳೈ ಶಲ್ಯ ಕರ್ಬುರ | ಖೂಳನೊಳು ಕುರುಸೇನೆ ಬಳಲುತ |
ಕೋಳುಗೊಂಡೋಡಿಹುದು ದಿಗ್ದೆಸೆಗೆ ||
ಜಾಲವನು ನೆರಹೀಗ ಧೈರ್ಯವ | ಪೇಳಿ ಸಂತೈಸುವೆನು ವೇಗದಿ |
ಕಾಳಗಕೆ ನೀ ಪೋಗು ರಿಪುಗಳಲಿ || ೨೬೬ ||
ಮುರಹರಂಗೆಣೆ ನೀನು ಧುರದೊಳ | ಗರಿತಿರುವ ಮಹರಥಿಯು ಕುಂತಿಯ |
ತರಳರೊಳು ಹಳಚೆನಲು ಸಂತಸದಿ |
ಧರಿಸಿ ಚಾಪವ ಪೊರಟು ಬರುತಿಹ | ಪರಿಯರಿತು ಹರಿಯೊಳಗೆ ಪಾರ್ಥನು |
ಧುರಕೆ ಬರುತಿಹ ರಥಿಯ ನೋಡೀಗ || ೨೬೭ ||
ಇವನೊಡನೆ ಹಳಚುವರೆ ಎನ್ನಯ | ಕುವರನೋರುವನಿಹನು ಪನ್ನಗ |
ಯುವತಿ ಲೂಪಿಯ ಸುತನಿರಾವಂತ ||
ತವಕದಿಂ ಬಹನೆನುತ ನೆನೆಯಲು | ಪವನವೇಗದಿ ಬಂದು ನಮಿಸುತ |
ಲವಲವಿಕೆಯಿಂದಾಗ ಪಿತನೊಡನೆ || ೨೬೮ ||
ರಾಗ ಜಂಜೂಟಿ ಅಷ್ಟತಾಳ
ಯಾತಕೆ ನೆನಸಿದೆಯೆನ್ನ | ಸಂ | ಪ್ರೀತಿಯೊಳರುಹು ಸಂಪನ್ನ |
ಆತುರಗೊಂಡಿಹುದೇನೆನೆ ಕುರುಕುಲ |
ವ್ರಾತವನು ಮಾಯಕದ ಸಮರದಿ | ಘಾತಿಸೆನೆ ಕೈ ಮುಗಿಯುತೆದ್ದನು || ೨೬೯ ||
ಸ್ಯಂದನ ಕಾರ್ಮುಕಂಗಳನು | ಬೇಗ | ದಿಂದ ನಿರ್ಮಿಸಿ ಲೂಪಿಸುತನು ||
ಬಂದನು ಹರಿನಾದಗೆಯ್ಯುತ್ತಾ ಸಮರಕೆ |
ಮುಂದೆ ಬರುತಿಹ ಮಾದ್ರಪಾಲನ | ನಂದಗೆಡಿಸುವೆನೆನುತರೋಷದಿ || ೨೭೦ ||
Leave A Comment