ರಾಗ ಕೇದಾರಗೌಳ ಝಂಪೆತಾಳ

ಕೆರಳಿ ಮಾದ್ರೇಶನೊಡನೆ | ಪೇಳಿದನು | ಗರಳದುರಿಯಲಿ ನಿನ್ನನೆ ||
ಉರುಹುವೆನು ನೋಡೆನ್ನುತ | ಅಹಿಕುಲದ | ಪರಿಯ ಕಾಂಬುದು ಸಂತತ  || ೨೭೧ ||

ಅಳಿಯು ಸಂಪಿಗೆಮಧುವನು | ಸೇವಿಸಿದ | ರುಳಿಯುವುದೆ ಮಾದ್ರೇಶನು |
ಮಲೆತಿಹೆನು ರಾಜನ್ಯನು | ಪನ್ನಗಕೆ | ಕಲಿತಾರ್ಕ್ಷ್ಯಸಮರೂಪನು || ೨೭೨ ||

ಕೊಚ್ಚದಿರು ಪೌರುಷವನು | ಮಾದ್ರೇಶ | ಮುಚ್ಚು ನಿನ್ನಯ ಬಾಯನು |
ಬೆಚ್ಚುವೆನೆ ನಾನೀಗಳು | ದೇಹಗಳ | ಕೊಚ್ಚಿ ಕೆಡಹುವೆ ಧುರದೊಳು || ೨೭೩ ||

ತರಳನುತ್ತರನೊರ್ವನು | ಮಾದ್ರಪತಿ | ಶರ ಹತಿಯೊಳೆಮನೂರನು ||
ತೆರಳಿ ಪೊಂದಿದ ಮುದದೊಳು | ಧುರಗೆಯ್ದು | ಮರುಳೆ ಕೇಳಿಕೊ ಭರದೊಳು || ೨೭೪ ||

ಪವನಾಶನನ್ವಯದೊಳು | ಪುಟ್ಟಿರ್ದ | ಯುವತಿ ಫಲುಗುಣರಿಂದಲು ||
ಭುವನದೊಳಗುದಿಸಿರ್ದರೆ | ಗೆಲುತಿಹೆನು | ತವಕದಿಂ ನೋಡೈ ಖರೆ || ೨೭೫ ||

ರಾಗ ಶಂಕರಾಭರಣ ಮಟ್ಟೆತಾಳ

ಪೂತು ಮಝರೆ ಎನುತ ಶಲ್ಯ | ಖಾತಿಯಿಂದಲುಗಿದು ವಿಶಿಖ |
ವ್ರಾತಗಳನು ಸುರಿದನಿರಾವಂತನಂಗಕೆ  || ೨೭೬ ||

ಒಡನೆ ಬರುವ ಶರವ ತರಿದು | ಕಿಡಿಯ ಸೂಸುತಾಗ ಶಲ್ಯ |
ಪಿಡಿದ ಧನುವ ಮುರಿದನಿರಾವಂತ ಗರ್ಜಿಸಿ || ೨೭೭ ||

ಅನ್ಯಧನುವ ಪಿಡಿದು ಶಲ್ಯ | ಘನ್ನಘಾತಕಿ ತಾಳೆನುತ್ತ |
ಪನ್ನಗೇಂದ್ರ ಸುತೆಯ ಕುವರಗೆಸೆದ ಶರಗಳ || ೨೭೮ ||

ಮತ್ತೆ ಧನುವ ಮುರಿಯೆ ಶಲ್ಯ | ಕತ್ತಿಯನ್ನು ನೆಗಹಿ ಬರಲು |
ಕಿತ್ತು ಸೆಳೆದನದರನಿರಾವಂತ ಕನಲುತ  || ೨೭೯ ||

ಮಲ್ಲಯುದ್ಧಕೊದಗಿ ಶಲ್ಯ | ಹಲ್ಲ ಕಡಿಯುತಾಗ ನಿಲಲು |
ಖುಲ್ಲ ತಾಳೆನುತ್ತಲಿರಾವಂತ ಮಾಯದಿ || ೨೮೦ ||

ಭಾಮಿನಿ

ಘೋರ ಸರ್ಪಾಕೃತಿಯ ತಾಳುತ |
ಭೋರೆನುವ ನಾದದಲಿ ಶಲ್ಯನ |
ಚಾರು ತನು ಕರಚರಣವೆಲ್ಲವ ಸುತ್ತಿ ಬಿಗಿವಡೆದು ||
ಕಾರುತಿಹ ವಿಷಯುಕ್ತ ಪೆಡೆಯೊಳ |
ಗೂರಿ ಭುವನದಿ ಕೆಡಹೆ ವೇಗದಿ |
ಮೀರಿತೆಂದರಿತಾಗ ಧನುಶರವಾಂತು ಗುರುತನುಜ || ೨೮೧ ||

ರಾಗ ಘಂಟಾರವ ಏಕತಾಳ

ಎತ್ತಿ ಚಾಪವ ಗರುಡಾಸ್ತ್ರವನು ಪೂಡಿ |
ಕೃತ್ತಿವಾಸನ ತೆರದಿ ಗರ್ಜನೆ |  ಯಿತ್ತು ಹೊಡೆದನು ವೇಗದಿ || ೨೮೨ ||

ಬಿಟ್ಟನಾ ಕ್ಷಣ ಶಲ್ಯನಂಗವ ಧುರ |
ಕಟ್ಟಹಾಸದಿ ಬಂದು ನಿಲ್ಲುತ | ದಿಟ್ಟ ಲೂಪಿಕುಮಾರಕ  || ೨೮೩ ||

ಎಲೆಲೆ ಭೂಸುರ ನಿನಗೇಕೊ ರಣರಂಗ |
ಛಲದಿ ತರತರ ಭಕ್ಷ್ಯಮೆಲ್ಲುವ | ಪರಿಗಳಲ್ಲವೊ ಸಂಗರ || ೨೮೪ ||

ತೋರೋ ನಿನ್ನಯ ಬಲಪರಾಕ್ರಮಗಳ |
ಗಾರುಗೆಡಿಸುವೆನೆನುತ ಗುರುಜನು | ತೂರಿದನು ಶರಜಾಲವ || ೨೮೫ ||

ರಾಗ ಭೈರವಿ ಏಕತಾಳ

ಬರುವಸ್ತ್ರವ ಪುಡಿಗೆಯ್ದು | ಪಲ್ | ಮೊರೆವುತ ಬಾಣವನುಗಿದು |
ಗುರಿಯೊಳಗೆಸೆಯಲ್ ಮುರಿದ | ಗುರು | ತರಳನು ಕ್ರೋಧವ ತಳೆದ || ೨೮೬ ||

ವೀರಾಗ್ನ್ಯಸ್ತ್ರವ ತೆಗೆದು | ಹೆದೆ | ಗೇರಿಸಿ ಗುರಿಯೊಳಗುಗಿದು |
ಭೋರನೆ ಗುರುಜನು ಬಿಡಲು | ಧರೆ | ಗೂರಿದ ಶಿರ ಮೂರ್ಛೆಯೊಳು || ೨೮೭ ||

ಭಾಮಿನಿ

ಭರದೊಳಯ್ತಂದಾಗ ಶಲ್ಯನ |
ಶಿರಚರಣ ತಡವರಿಸಿ ಗುರುಜನು |
ಗರುಡಮಂತ್ರವ ಜಪಿಸಲೆದ್ದನು ನೋಡುತೆಡಬಲವ ||
ದುರುಳನೆಲ್ಲಿಹನೆಂದು ಧನು ಝೇಂ |
ಕರಿಸಿ ಮುಂದಯ್ತುರುವ ಕಾಲದಿ |
ಸುರನದೀಸುತ ಬಂದು ಸಂತಯ್ಸುತ್ತಲಿಂತೆಂದ || ೨೮೮ ||

ರಾಗ ಕೇದಾರಗೌಳ ಅಷ್ಟತಾಳ

ಲಾಲಿಸು ಮಾದ್ರ ನೀ ಸೈರಿಸು ಪನ್ನಗ | ಜಾಲಮಾಯಾವಿಯಾತ |
ಕಾಳಗದೊಳು ಜಯವಿಲ್ಲ ಮಂತ್ರೌಷಧ | ಮೂಲದಿ ಗೆಲಬೇಕಯ್ಯ || ೨೮೯ ||

ತೆರಳುವೆ ನಾನೀಗ ಸಮರಕೆ ಸೈರಿಸು | ಅರೆಕ್ಷಣವೆನ್ನುತಿರೆ ||
ಶಿರವನೆತ್ತುತಲಿರಾವಂತ ತನ್ನಯ ವೈರಿ | ಯರಸುತ್ತಲಿರೆ ಪಾರ್ಥನು || ೨೯೦ ||

ತರಳನೆ ತಾಳು ನೀ ಸೈರಿಸರೆಕ್ಷಣ | ಗುರುಜನ ದರ್ಪವನ್ನು ||
ಮುರಿಯಬಹುದು ನಾಳೆ ವೈರಿಮೋಹರಕಾನು | ತೆರಳುವೆನೆನುತೆದ್ದನು || ೨೯೧ ||

ಬಂದು ಪಾರ್ಥನು ರಥವೇರೆ ಮುರಾಂತಕ | ನಂದು ಚಮ್ಮಟಿಕೆಯನ್ನು ||
ಚಂದದಿ ಪಿಡಿದು ಚಪ್ಪರಿಸಲು ತುರಗವ | ಮುಂದರಿಯುತ ಭೀಷ್ಮನು || ೨೯೨ ||

ಮುರಹರನನು ನೋಡಿ ನಗುತ ಗಾಂಗೇಯನು | ಶರಣರ ಪೊರೆಯುವರೆ ||
ನಿರತ ವ್ಯಾಮೋಹಗಳೆಷ್ಟಿರಬಹುದೀತ | ಗೆನುತಾಗ ಪೇಳಿದನು || ೨೯೩ ||

ರಾಗ ಕಾಂಭೋಜಿ ಝಂಪೆತಾಳ

ಚಿನ್ಮಯನೆ ಲಾಲಿಪುದು ಪುಣ್ಯವಂತಗೆ ಘೋರಾ | ರಣ್ಯಗಳು ಪಟ್ಟಣಗಳ್ ಮಣ್ಣೆ ಹೊನ್ನಹುದು||
ಪುಣ್ಯಹೀನಗೆ ರಾಜ್ಯ ಕಾನನವೆ ಕೇಳ್ ಮತ್ತೆ | ಚಿನ್ನಗಳು ಮೃತ್ತಿಕೆಗಳಂತೆ ತೋರುವುವು || ೨೯೪ ||

ಮಂದಮತಿ ಕೌರವನು ಧುರಕೆ ಸಹಯವ ಪಡೆಯೆ | ಬಂದವನು ನಿನ್ನ ಯಾಚಿಸದೆ ಬಿಟ್ಟಿಹನು ||
ಮುಂದಿನ್ಯೋಚನೆಯುಳ್ಳ ಪಾರ್ಥ ನಿನ್ನನು ನಂಬಿ | ಹೊಂದಿದಕೆ ಧನ್ಯನವನೆಂದು ನಾ ಪೇಳ್ವೆ || ೨೯೫ ||

ಪೇಳಲಾರೆನು ಕರ್ಮ ಸಕಲರನು ಬಾಧಿಪುದು | ಶೂಲಿಯನು ಬಳಲಿಸಿತು ಬ್ರಹ್ಮನ ಕಪಾಲ ||
ಕೂಲಿಯಾಳುಗಳಂತೆ ಸೃಷ್ಟಿಗೆಯ್ಯುವನಜನು | ಶ್ರೀಲಲನೆಪತಿ ನಿನ್ನ ಬೆನ್ನನಟ್ಟಿಹುದು  || ೨೯೬ ||

ಧರಿಸಿದೆಯ ಮತ್ಸ್ಯಾದಿ ರೂಪುಗಳ ನೋಡೀಗ | ನರನ ಸಾರಥಿಯಾದ ವಿಧಿಯನೇನೆಂಬೆ ||
ಕುರುಪತಿಯ ದುಷ್ಕರ್ಮವೇಕೆ ನಿಂದಿಪುದೀಗ | ಧರೆ ಚತುರ್ದಶ ಪೊರೆವ ಮಹಿಮಗಿಂತಾಗೆ || ೨೯೭ ||

ರಾಗ ಮಾರವಿ ಏಕತಾಳ

ಗರುಡಧ್ವಜನದ ಕೇಳುತ ಗಂಗಾ | ತರಳನ ನುಡಿಗಳನು ||
ದುರಿತಗಳೊದಗದ ತೆರದೊಳು ಶರಣರ | ಪೊರೆವುದೆ ಬಿರುದೆನ್ನ || ೨೯೮ ||

ರಾಗ ಕಾಂಭೋಜಿ ಏಕತಾಳ

ಪಂಕಜಾಕ್ಷ ಭೇದವೇಕೊ | ಕಿಂಕರನಲ್ಲವೆ ನಾನು ||
ಶಂಕೆಯೇನೈ ಪಾರ್ಥನಧಿಕ | ಕಿಂಕರನಾಗಿಹನೇ ನಿನಗೆ || ೨೯೯ ||

ರಾಗ ಮಾರವಿ ಏಕತಾಳ

ಭೇದವು ನಿಮ್ಮೊಳಗುಭಯರ ಪಾಲಿಪ | ನಾದಿಪಿತಾಮಹನು |
ಕಾದಿಹ ತೈಲವ ತೊಡೆದನೆ ಧರ್ಮಜ | ಹೋದೆಯೊ ಕುರುಬಲಕೆ || ೩೦೦ ||

ರಾಗ ಕಾಂಭೋಜಿ ಆದಿತಾಳ

ಕುರುಪತಿಯೊಳಿರ್ದು ಜೀವ | ಪೊರೆದು ಋಣವ ಗಳಿಸಿದೆನು ||
ತೊರೆಯಲಾರೆ ಹರಿಯೆ ಕುಂತೀ | ತರಳರ ಹಂಗೇನೊ ನಿನಗೆ || ೩೦೧ ||

ರಾಗ ಮಾರವಿ ಏಕತಾಳ

ನಿಶ್ಚಲ ಭಕ್ತಿ ದೃಢಾತ್ಮದಿ ನಂಬಿಹ | ಸಚ್ಚರಿತರ ಬಿಡದೆ ||
ಮೆಚ್ಚುತ ದುರಿತವ ಹರಿಪುದೆ ಎನ್ನಯ | ಹೆಚ್ಚಿನ ಬಿರುದಹುದು || ೩೦೨ ||

ರಾಗ ಕಾಂಭೋಜಿ ಆದಿತಾಳ

ಅಂಬುಜಾಕ್ಷ ನಿನ್ನ ನಾನು | ನಂಬಿದನಲ್ಲವೆ ಪೇಳು |
ಸಂಭ್ರಮದೊಳನ್ನ ತೊರೆದು | ಬೆಂಬಲನಾಗಿಹೆ ನರಗೆ || ೩೦೩ ||

ರಾಗ ಮಾರವಿ ಏಕತಾಳ

ದುಷ್ಟ ಸುಯೋಧನನೊಡಗೊಂಡಿಹೆ ನೀ | ನೆಷ್ಟಾಡಿದರೇನು ||
ತಟ್ಟನೆ ನಿನ್ನನು ಸಮರದಿ ಗೆಲುವರೆ | ತೊಟ್ಟಿಹೆ ಛಲಗಳನು || ೩೦೪ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಿಯೆ ಲಾಲಿಸು ಭಾಪು ಭಕ್ತರ | ಪೊರೆವ ಬಿರುದಿರೆ ನಿನ್ನ ಪದಗಳ |
ಶರಣು ಪೊಂದಿದ ನರನೊಳೆನ್ನನು | ವಿಜಯಪಡಿಸೊ || ೩೦೫ ||

ಭಳಿರೆ ಗಂಗಾ ತನಯ ಭಕ್ತರ | ನೊಲಿದು ಪಾಲಿಪೆನಾದಡೀ ದಿನ |
ಕಲಿ ಕಿರೀಟಿಯ ಧುರದಿ ನಿನ್ನನು | ಗೆಲಿಸುತಿಹೆನು || ೩೦೬ ||

ದೇವದೇವ ಮುರಾರಿ ನಿನ್ನನು | ಸಾವಧಾನದಿ ಭಜಿಪನಾದಡೆ |
ದೇವರಾಜನ ಸುತನ ಗೆಲುವನು | ಭೀಷ್ಮನಿಂದು || ೩೦೭ ||

ವಾರ್ಧಕ

ಮುರಮಥನನುಗ್ರದೊಳ್ ಫಲುಗುಣನೊಳಿಂತೆಂದ |
ಕುರುಪತಿಯನೆಳೆದೊಯ್ದ ಚಿತ್ರಸೇನನ ಗೆಲಿದೆ |
ಸುರಲೋಕದಿಂದ ಮದಕರಿಯನಿಳಿಸಿದೆ ಧರೆಗೆ ದಹಿಸಿರ್ಪೆ ಖಾಂಡವನವ ||
ದುರುಳ ದೈತ್ಯ ನಿವಾತಕವಚಾದಿಗಳ ಕೊಂದೆ ||
ಧರೆಯೊಳೀ ಪರಿ ಕೀರ್ತಿ ಧರಿಸಿರ್ದಡೀ ದಿನದಿ |
ಧುರದಿ ಭೀಷ್ಮನ ಜಯವ ಪೊಂದೆನಲ್ ಕಿಡಿಗೆದರಿ ಧನುವ ಝೇಂಕೃತಿಗೆಯ್ಯುತ || ೩೦೮ ||

ಭಾಮಿನಿ

ಕೇಳು ಕಮಲಾಂಬಕನೆ ಸೇತುಹಿ |
ಮಾಲಯದ ಮಧ್ಯದಲಿ ಬಾಹುಜ |
ಮೌಳಿರಂಜಿತಪಾದಕಮಲಾನ್ವಿತ ನದೀಸುತನ ||
ಶೂಲಿಸನ್ನಿಭ ಭೀಷ್ಮನನು ನಾ |
ಕಾಳಗದಿ ಜಯ ಪೊಂದದಿರ್ದಡೆ |
ನೀಲಮೇಘಶ್ಯಾಮ ನಿನ್ನಯ ಭಜಕ ನಾನಲ್ಲ || ೩೦೯ ||

ರಾಗ ಶಂಕರಾಭರಣ ಮಟ್ಟೆತಾಳ

ಎಂದು ಶಪಥ ಗೆಯ್ದು ಪಾರ್ಥ | ನಂದು ಗಾಂಡೀವ ನೆಗಹಿ |
ಮುಂದೆ ರಥದೊಳಿರ್ಪ ಭೀಷ್ಮ | ಗೆಂದನಾ ಕ್ಷಣ || ೩೧೦ ||

ಧುರದಿ ಪ್ರಾಜ್ಞ ನಿನ್ನೊಳೆನ್ನ | ಶರದ ಪಾಂಡಿತ್ಯಗಳನು |
ಪರಿಪರಿಯ ತೋರಿ ಕೀರ್ತಿ | ಪಡೆವೆ ನೋಡೆಲ  || ೩೧೧ ||

ಎನ್ನ ಪೌತ್ರನಸ್ತ್ರಕುಶಲ | ವನ್ನು ನೋಳ್ಪ ತವಕವಿಹುದು |
ಧನ್ಯನಹೆನು ಗೆಲಿದರೆನ್ನ | ಕುಲದಿ ಶೂರನು || ೩೧೨ ||

ಶೂಲಿಯೊಡನೆ ಕಾದಿ ವಿಜಯ | ತಾಳಿ ಪಾಶುಪತವ ಕೊಂಡೆ |
ಶೀಲ ಸದ್ಗುಣಾಢ್ಯ ತಾತ | ಬಲ್ಲೆಯೆನ್ನನು || ೩೧೩ ||

ಬೇಡ ಬೇಡ ಗರ್ವ ಪಾರ್ಥ | ಖಾಡಾಖಾಡಿ ಭೃಗುಜನೊಡನೆ |
ಮಾಡಿ ಧುರವ ಜಯವ ಪಡೆದೆ | ಕೇಳಿ ಬಲ್ಲೆಯ || ೩೧೪ ||

ರಾಗ ಭೈರವಿ ಝಂಪೆತಾಳ

ಬಾಲತನದೊಳು ನಿಮ್ಮ ತೊಡೆಯ ಮೇಲೇರಿಸುತ | ಲಾಲಿಸುವ ಕಾಲದೊಳಗೆಮ್ಮ ||
ಸೀಳಿ ಬಿಸುಡದೆ ವಿದ್ಯೆ ಕಲಿಸಿ ಗುರುಮುಖದಿಂದ | ಕಾಳಗಕೆ ಮನ ಬಂತೆ ತಾತ || ೩೧೫ ||

ಬಿತ್ತುವುದು ಬೀಜ ಮೊಳೆಯುತ್ತ ಬರೆ ಕೃಷಿಗೆಯ್ದು | ಅರ್ತಿಯಿಂ ಬೆಳೆಸುವುದು ತರುವ ||
ಚಿತ್ತರಂಜಕ ಫಲವ ಕೊಂಬರಲ್ಲದೆ ವೃಕ್ಷ | ಕತ್ತರಿಪುದುಂಟೆ ಬಲ್ಲವರು || ೩೧೬ ||

ಅನುಜನಾದ ವಿಚಿತ್ರವೀರ್ಯಕ್ಷೇತ್ರೋತ್ಪನ್ನ | ತನುಜಾತರ್ ಯುಗ್ಮಕಟಕದಲಿ ||
ಸನುಮತವೆ ಕರುಣ ಕೌರವರಲ್ಲಿ ತೋರುವಿರಿ | ಘನತರದ ಕ್ರೋಧವೆಮ್ಮೊಳಗೆ || ೩೧೭ ||

ಇರುವೆ ಹಂಗಿಲಿ ಕೌರವೇಂದ್ರಗಹಿತರು ನಿಮ್ಮ | ಧುರದಿ ಜಯಿಸದೆ ಪಿಂದೆ ಸರಿಯೆ ||
ಸುರನರೋರಗರೆನ್ನ ನಿಂದಿಪರು ಕಾಶ್ಯಪಿಯು | ಹೊರಳೆನ್ನ ಬಲವೈರಿಜಾತ || ೩೧೮ ||

ರಾಗ ಮಾರವಿ ಏಕತಾಳ

ಕರುಣಗಳಿರೆ ಕೌರವನೊಳಗೀ ಪರಿ | ಧುರದೊಳು ಖೇಚರನು ||
ಕರಗಳ ಬಂಧಿಸುತೊಯ್ಯುವ ಕಾಲದಿ | ತೆರಳಿದಿರ್ಯಾವೆಡೆಯ || ೩೧೯ ||

ತೆರಳಿದ ಮದ್ವಚನವನುರೆ ಮೀರುತ | ಪುರದೊಳಗೆನ್ನಿರಿಸಿ |
ಕುರುಪತಿ ಸೋತಿಹ ಖಚರಗೆ ನಾನಿರೆ | ಬರದಪಜಯ ಪಾರ್ಥ || ೩೨೦ ||

ಬಲ್ಲೆನು ತಮ್ಮಯ ಸ್ವಾರಿಗೋಗ್ರಹಣದಿ | ಬಿಲ್ಲನು ಪಿಡಿದಿಹುದು ||
ಮೆಲ್ಲನೆ ಪಿಂದಕೆ ತಿರುಗಿದಿರೇತಕೆ | ಗೆಲ್ಲದೆ ರಿಪುಭಟರ || ೩೨೧ ||

ವನದೊಳು ತೊಳಲಿದಿರೆಂಬ ಕಾರುಣ್ಯದಿ | ರಣದೊಳು ಜಯಸಿರಿಯ |
ಮನವೊಲಿದಿತ್ತೆನು ಫಲುಗುಣ ಸೋತವ || ನೆನುತಲೆ ತಿಳಿದಿಹೆಯ || ೩೨೨ ||

ಎತ್ತಿದೆ ಧನು ಪಾಂಚಾಲೆವಿವಾಹದಿ | ಪೃಥ್ವಿಪರೆಲ್ಲರಿಗೆ ||
ಚಿತ್ತದಿ ತಲ್ಲಣಗೊಳಿಸಿಹೆ ತಾತನೆ | ಸತ್ಯವ ತಿಳಿದಿಹೆಯ || ೩೨೩ ||

ತಂದಿಹೆನನುಜಗೆ ನೃಪರನು ದಂಡಿಸಿ | ಪಿಂದೆ ಕಾಶೀಪತಿಯ ||
ನಂದನೆಯನು ನಿನಗರಿಯದು ಪೌರುಷ | ದಿಂದೇತಕೆ ನುಡಿವೆ || ೩೨೪ ||

ರಾಗ ಕೇದಾರಗೌಳ ಝಂಪೆತಾಳ

ಮಾತೆಯಭಿಮತದಂದದಿ | ಸುರಗಜವ | ಭೂಳತಕೆ ತರಿಸಿ ಮುದದಿ ||
ಖ್ಯಾತನೆಂಬುವ ಬಿರುದನು | ಪೊತ್ತಿರುವೆ | ತಾತ ಬಿಡು ಬಿಡು ಛಲವನು || ೩೨೫ ||

ತೊರೆದೆ ಸಕಲ ಸುಖಂಗಳ | ಪಿತಗಾಗಿ | ವರಬ್ರಹ್ಮಚರ್ಯಂಗಳ ||
ಧರಿಸಿಹೆನು ಸುರನರರಲಿ | ಛಲದಂಕ | ಬಿರುದ ಮೂರ್ಲೋಕಗಳಲಿ || ೩೨೬ ||

ವ್ರತಿಪಗೇತಕೆ ಸಮರವು | ಮುನಿವರರ | ಜೊತೆಗೊಂಬುದತಿ ವಿಹಿತವು ||
ಅತಿ ದುರುಳ ಕೌರವನೊಳು | ಬೆರೆತಿಹುದು | ವ್ಯಥೆಯಾಪುದೆನಗೀಗಳು || ೩೨೭ ||

ಬಾಲ ಭಾಷೆಗಳೇತಕೊ | ನಿಂದಿಹೆವು | ಕಾಳಗಕೆ ಪನ್ನಿ ಸಾಕೊ |
ಶ್ರೀಲಲನೆಪತಿ ಬಲ್ಲನು | ಅಂತರವ | ಕೋಳುಗೊಂಬುವೆ ನಿನ್ನನು || ೩೨೮ ||

ರಾಗ ಭೈರವಿ ಏಕತಾಳ

ತೋರಿಸು ಸಹಸಗಳೆನುತ | ಖತಿ | ಯೇರುತ ಚಾಪವ ಕೊಳುತ ||
ಏರಿಸಿ ಸಿಂಜಿನಿಯೊಳಗೆ | ಶರ | ವಾರವ ಬಿಡೆ ಭೀಷ್ಮನಿಗೆ || ೩೨೯ ||

ಸುರನದಿ ಸುತನಾ ಕ್ಷಣದಿ | ಬಹ | ಶರಗಳ ತುಂಡಿಸಿ ರವದಿ ||
ವರಮಂತ್ರಾಸ್ತ್ರವ ತೆಗೆದ | ಹೆದೆ | ಗಿರಿಸಿ ಯುಗಂಧರವೆಸೆದ || ೩೩೦ ||

ಪ್ರಶಮನಶರವನು ಪೂಡಿ | ಮುರಿ | ದೆಸಗಿದನಿಂದ್ರಜ ನೋಡಿ ||
ಕುಶಲದೊಳೈಂದ್ರಾಸ್ತ್ರವನು | ಬೇ | ಗೆಸೆಯಲು ಗಂಗಾಸುತನು || ೩೩೧ ||

ಸರಸಿಜಭವಶರವನ್ನು | ತೆಗೆ | ದಿರಿಸುತ ಮುರಿದದರನ್ನು |
ಹರುಷದಿ ನಿಂದಿರೆ ನರನು | ಖತಿ | ವೆರಸುತ ಗಂಗಾಸುತನು || ೩೩೨ ||

ರಾಗ ಮಾರವಿ ಮಟ್ಟೆತಾಳ

ಕಾಲಚಕ್ರವನ್ನು ತೆಗೆಯು | ತೆಸೆದನುಗ್ರದಿ ||
ಸೀಳಿ ಬಿಸುಟನದರ ನರನು | ದಂಡಚಕ್ರದಿ  || ೩೩೩ ||

ಪರತೇಜೋಪಕರ್ಷಬಾಣ | ಬಿಡಲು ಭೀಷ್ಮನು ||
ಮುರಿದ ಕಾಮರುಚಿರವೆಂಬ | ಶರದಿ ಪಾರ್ಥನು || ೩೩೪ ||

ಭಳಿರೆ ಭಳಿರೆ ಪಾರ್ಥ ಸಹಸಿ | ಭಾಪು ಮೆಚ್ಚಿದೆ ||
ಕಲಿಯೆ ಸಹಜ ಪುಟ್ಟಿ ಕೀರ್ತಿ | ವಡೆದೆ ಮಾಜದೆ || ೩೩೫ ||

ರಾಗ ಭೈರವಿ ಅಷ್ಟತಾಳ

ಸಾರಥಿ ಬಲುಮೆ ಕೇಳೊ | ಎನ್ನಸ್ತ್ರವ | ವೀರ ನೀ ಗೆಲಿದೆ ತಾಳೊ ||
ವಾರಿಜನಯನ ಸ್ಯಂದನದೊಳಗಿರಲಿಂತು | ಪೋರ ಮುರಿದೆ ಗರ್ವದಿ || ೩೩೬ ||

ಧರಣಿ ಬಾಯ್ದೆರೆಯಲೀಗ | ಮೇರೆಯ ತಪ್ಪಿ | ಶರಧಿಯೆ ಮಗುಚೆ ಬೇಗ |
ನರನಿನ್ನ ಸೂತನ ಕಪಟವ ನಿಲಿಸುವೆ | ಪರಿಕಿಸೆಂದೆನುತ ಭೀಷ್ಮ || ೩೩೭ ||

ಅಸಿರತ್ನ ಶರವನಾಗ | ಬಿಲ್ಲಿಗೆ ಪೂಡು | ತೆಸೆಯಲು ಭೀಷ್ಮ ಬೇಗ |
ಎಸಕದಿ ತರಿವೆನೆಂಬನಿತರೊಳ್ ದೇವನ | ನೊಸಲ ಭೇದಿಸೆ ಭರದಿ || ೩೩೮ ||

ರಾಗ ಘಂಟಾರವ ಏಕತಾಳ

ಕಡು ಮಹೋಗ್ರದಿ ಮುರರಿಪು ರಥದಿಂದ |
ಪೊಡವಿಯೊಳು ಪುಟನೆಗೆದು ಫಣೆಯನು | ಪಿಡಿದು ರಕ್ತವನೊರೆಸುತ || ೩೩೯ ||

ಭರದೊಳೀ ಕ್ಷಣ ಭೀಷ್ಮನ ಕೊರಳನ್ನು |
ಗರಗರನೆ ತರಿದೀಗ ಕೆಡಹುವೆ | ಕರುಣವೇನೀಗವನೊಳು  || ೩೪೦ ||

ನೆನೆಯಲಾಗ ಸುದರ್ಶನ ಕರದೊಳ |
ಗನುವಿನಿಂದಲೆ ಬಂದು ಕೂರಲು | ಘನದಿ ತಿರುಹುತ ಚಿನ್ಮಯ || ೩೪೧ ||

ಭಾಮಿನಿ

ಪ್ರಳಯ ಭೈರವನಂತೆ ಖತಿಯೊಳು | ಚಲಿಸುತಿಹ ಮುರಹರನ ಕಾಣುತ |
ಘಳಿಲನಾ ಕ್ಷಣ ಪಾರ್ಥ ಬಂದಡಗಟ್ಟಿ ಚರಣವನು ||
ಒಲವಿನಿಂದಲೆ ಪಿಡಿದು ಕೇಶವ | ಹಳಚುವೆನು ರಿಪುಯೋಧರೆಲ್ಲರ |
ಕಳುಹಿಸುವೆನಂತಕನ ನಿಳಯಕೆ ನಿನ್ನ ಕೃಪೆಯಿಂದ || ೩೪೨ ||

ವಾರ್ಧಕ

ಕ್ಷೀರಾಬ್ಧಿವಾಸ ಕೇಳ್ ಪಾರ್ಥನಿಂದೀ ದಿನಂ |
ದಾರುಣದಿ ಗೆಲಿಸುತಿಹೆನೆಂಬ ಭಾಷೆಯನುಳಿದು |
ಕ್ರೂರಕೋಪದಿ ಚಕ್ರವಿಡಿದು ಪೋಗುವುದೇಕೆ ಚರಣಕಿಂಕರ ನಾನಿರೆ ||
ಧೀರತನದಿಂ ಮಲೆತು ನಿಂದ ಗಾಂಗೇಯನಂ |
ಭೋರನೀ ಕ್ಷಣ ಗೆಲುವೆನೆಂದು ಸಂತವಿಸುತಿರೆ |
ವಾರಿಜಾಕ್ಷನಿಗೆರಡು ಕರಗಳಂ ಜೋಡಿಸುತ ಶಂತನುಜನತಿ ದೈನ್ಯದಿ || ೩೪೩ ||

ರಾಗ ಆಹೇರಿ ಆದಿತಾಳ

ಅಕ್ಷಯಾತ್ಮಕ ಕೇಶವ | ಸುರನರಭುಜಗ | ಪಕ್ಷಿವಂದಿತ ಮಾಧವ    || ಪಲ್ಲವಿ ||

ತ್ರ್ಯಕ್ಷಸಖನೆ ಖಳ | ಶಿಕ್ಷ ಸಜ್ಜನರಕ್ಷ | ರಕ್ಷ ಮಾಂ ಚೇತನ | ವೃಕ್ಷ ಕೌಸ್ತುಭವಕ್ಷ  || ಅ.ಪ ||

ಧರಣಿ ನಿನ್ನಯ ಪಾದವು | ಮೇಲಂತರಿಕ್ಷ | ದುರಿತಾರಿ ತವ ನಾಭಿಯು ||
ಮೆರೆವ ದಿಕ್ಕುಗಳ್ ನಿನ್ನ | ಶ್ರೋತ್ರ ರವಿ ಶಶಿನೇತ್ರ | ಮರುತ ಶ್ವಾಸವು ಪರಮ | ವಿಶ್ವಮೂರುತಿ ದೇವ || ೩೪೪ ||

ಹರಿ ನೀನಾಡುವೆ ಪಗಡೆಯ | ಧರಣಿಯೆ ದಿವ್ಯ | ತರದ ದ್ಯೂತದ ಮಣೆಯ ||
ಹರುಷದಿಂದಲೆ ಸೃಜಿಸಿ | ದಿವನಿಶಿ ಕವಡೆಯ | ಭರದಿ ಲತ್ತೆಯನಿಕ್ಕಿ | ಜೀವಕಾಯ್ಗಳ ನಡಿಪೆ || ೩೪೫ ||

ಪರರಿಗೀಯದೆ ಕಷ್ಟವ | ತೃಣಗಳ ಮೆದ್ದು | ಚರಿಸಿಕೊಂಡಿಹ ಹರಿಣವ |
ನಿರಪರಾಧಿಗೆ ಬಾಣವೆಚ್ಚ ಶಬರನಂತೆ | ಹರಿಯೆ ನಿನ್ನನು ಪೊಯ್ದೆ | ಕರುಣದಿ ರಕ್ಷಿಸು || ೩೪೬ ||

ಬಿಡು ಬಿಡೀ ಕ್ಷಣ ಚಕ್ರವ | ದುಷ್ಕಾರ್ಯ ಗೆಯ್ದೆ | ಪೊಡವಿಗಿಳಿಸು ಶಿರವ ||
ಜಡಜಲೋಚನ ಕೇಳು | ಕುರುಪತಿಯೊಳು ನಾನು | ನುಡಿದು ಬಂದಿಹ ಶಪಥ |
ದಂತೆ ಪಿಡಿದೆ ಚಕ್ರ || ಅಕ್ಷಯಾತ್ಮಕ ಕೇಶವ  || ೩೪೭ ||