ಭಾಮಿನಿ

ಸುರನದೀಸುತ ಕೇಳು ನಿನ್ನಯ |
ಶಿರವ ಗರಗರನರಿವೆನೀ ಕ್ಷಣ |
ಕುರುಬಲವ ಸಂಹರಿಸಿ ಧರಣಿಯನಿತ್ತು ಧರ್ಮಜಗೆ ||
ಧರಿಪೆ ಪಾಂಡವ ವೀರರಯ್ವರ |
ನಿರತಸ್ಥಾಪಕನೆಂಬ ಬಿರುದನು |
ಪರಿಕಿಸೆನುತಾ ಕ್ಷಣದಿ ಚಕ್ರವ ತಿರುಹುತಯ್ತರಲು || ೩೪೮ ||

ರಾಗ ಕೇದಾರಗೌಳ ಝಂಪೆತಾಳ

ಹೃದಯಕಮಲಸುಪೀಠವ | ನಡರಿರ್ಪ | ಸದಮಲಾತ್ಮಕ ತೇಜವ ||
ನದಿತನಯ ನಂಬಿರ್ಪೆನು | ಮಾನಸದಿ | ಮುದದಿಂದಲರ್ಚಿಸುವೆನು  || ೩೪೯ ||

ತೊರೆಯೆ ಭವಭಯದೋಷವ | ಗೆಯ್ಯುತಿಹೆ | ವರ ಶ್ರದ್ಧೆಯಭಿಷೇಕವ ||
ಚರಣಭಕ್ತಿಯ ಗಂಧದಿ | ತಪವೆಂಬ | ಪರಮಕುಸುಮಸಮೂಹದಿ || ೩೫೦ ||

ಅಂತರಂಗದಿ ನೋಡದೆ | ಮುಂದೆಸೆಯ | ನಿಂತ ಮೂರ್ತಿಯೊಳೇನಿದೆ ||
ಕಂತುಪಿತ ಛಲವಿಡಿದೆಯ | ಬೆದರೆ ನಾ | ನೆಂತು ಮರಣಕೆ ನಿಶ್ಚಯ || ೩೫೧ ||

ಬಿಡು ಬಿಡೀ ಕ್ಷಣ ಚಕ್ರವ | ನಿನ್ನಿಂದ | ಮಡಿದರೆನ್ನಯ ಶಪಥವ |
ನುಡಿವೆ ಲಾಲಿಸು ಭಕ್ತನು | ನಾನಲ್ಲ | ಕಡು ದುರುಳರೊಳಗಾಹೆನು || ೩೫೨ ||

ಹರಿಯು ಮನದೊಳಗರಿಯುತ | ಪರರಿಂದ | ಮರಣವಿಲ್ಲಿವಗೆನ್ನುತ ||
ತಿರುಗಿ ರಥವನ್ನಡರಿದ | ಪಾರ್ಥನನು | ಪರಿಕಿಸುತಲಾಗ ನುಡಿದ  || ೩೫೩ ||

ಕೇಳು ಫಲಗುಣ ರಣದಲಿ | ವಿಜಯವನು | ತಾಳು ಶಪಥದ ತೆರದಲಿ ||
ಕಾಲಹರಣಗಳೇತಕೆ | ಕಳುಹು ಶರ | ಜಾಲಗಳ ರಿಪುಮಥನಕೆ || ೩೫೪ ||

ವಾರ್ಧಕ

ಅಸುರಮರ್ದನನೆಂದ ನುಡಿ ಕೇಳಿ ಫಲುಗುಣಂ |
ಶಶಿಜೂಟನಿತ್ತಗಾಂಡೀವ ಝೇಂಕರಿಸುತ್ತ |
ಲುಸಿರಿದಂ ಗಾಂಗೇಯನೊಡನೆ ಶಪಥಗಳಂತೆ ವಿಜಯ ಪೊಂದುವುದೆಂದನು ||
ಎಸೆವ ಕಾರ್ಮುಕವೆತ್ತಿ ಪಾರ್ಥನೊಡನೆಂದ ನೆಲೆ |
ದಶಸಹಸ್ರದ ರಥಿಕವರ್ಗವನು ದಿನ ತರಿದೆ |
ಎಸಗಿರ್ದ ಶಪಥದಂದದಿ ದಿವಸವೊಂಭತ್ತು ಛಲದಂತೆ ಸಂದಿರ್ಪುದು || ೩೫೫ ||

ರಾಗ ಮಾರವಿ ಏಕತಾಳ

ತೊಟ್ಟ ಛಲವ ನಾ ಬಿಟ್ಟರೆ ಗಂಗೆಗೆ | ಪುಟ್ಟಿಹ ಸುತನಹೆನೆ ||
ದಿಟ್ಟನೆ ಮಹಶರ ತೊಟ್ಟೀ ಕ್ಷಣ ಬಿಡು | ಶ್ರೇಷ್ಠತೆ ಕಾಂಬುವೆನು || ೩೫೬ ||

ರಕ್ಷಾಕರಿ ಶರ ತೆಗೆಯುತ ಪಾರ್ಥನು | ದಕ್ಷಾರಿಯ ನೆನೆದು ||
ವಕ್ಷಕೆ ಗುರಿಯೊಳು ಸಿಂಜಿನಿಗೇರಿಸು | ತಾ ಕ್ಷಣ ಪೇಳಿದನು || ೩೫೭ ||

ಪರಿಕಿಸು ಗಂಗಾತನಯನೆ ಶರವಿದ | ಮುರಿಯಲು ವಿಜಯವನು |
ಧರಿಸಿಹ ಶೂರನು ನೀನೆನೆ ಕೇಳುತ | ಲೊರೆದನು ನದಿಸುತನು || ೩೫೮ ||

ಕಾಲಾಂಜನಶರ ಪೂಡಿಹೆ ಪಾರ್ಥನೆ | ಮೇಲಿದನೀ ಮುರಿಯೆ ||
ತಾಳಿದೆ ವಿಜಯವನೆನ್ನೊಳಗಿಂದಿಗೆ | ಶೂಲಿಸಮೋಪಮನು || ೩೫೯ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏಕಕಾಲದೊಳುಭಯಶೂರರು | ಸಾಕರದಿ ಕರ್ಣಾಂತಕುಗಿಯುತ |
ಭೀಕರದ ಶರವೆಸೆಯುಲಾ ಕ್ಷಣ | ಲೋಕ ನಡುಗೆ || ೩೬೦ ||

ನರನ ಶರ ಕಿಡಿಸೂಸಿ ಭೀಷ್ಮನ | ಕರದ ಚಾಪವ ಮುರಿದು ಕೆಡಹಲು |
ಭರದಿ ಭೀಷ್ಮನ ಸರಳು ಪಾರ್ಥನ | ಶಿರಕೆ ಎರಗೆ || ೩೬೧ ||

ಸುರಿವ ನೆತ್ತರಮಯದಿ ಮೂರ್ಛೆಯೊ | ಳೊರಗೆ ಪಾರ್ಥನು ಕಂಡು ಶ್ರೀಹರಿ |
ಭರದಿ ಶೈತ್ಯುಪಚರಿಸಲೆದ್ದನು | ನಾಚಿ ಮನದಿ || ೩೬೨ ||

ರಾಗ ಕೇದಾರಗೌಳ ಅಷ್ಟತಾಳ

ನೋಡಿ ಗಾಂಗೇಯನು ನಗುತಾಗ ಪೇಳಿದ | ಮಾಡಿದ ಶಪಥದಂತೆ ||
ಗಾಢದಿ ಗೆಲಿದವನಾರೆನೆ ಪಾರ್ಥನು | ಕೂಡೆರೋಷವ ತಳೆಯೆ || ೩೬೩ ||

ಮುರಹರನೆಂದನು ಧುರದಿ ಶೂರನು ಪೊತ್ತ | ಕರದ ಚಾಪಕೆ ಭಂಗವು ||
ದೊರೆತರೆ ಪ್ರತಿಭಟ ಗೆಲಿದಂತೆಯಾದುದು | ಬರಿಯಹಂಕೃತಿಯೇತಕೆ || ೩೬೪ ||

ಸರಿಸಮಬಲರೆಂದು ತೋರಿತಿಂದಿಗೆ ಸಾಕು | ತರಣಿಯಸ್ತಕೆ ಪೋದನು ||
ತೆರಳುವ ಶಿಬಿರಕೆಂದೆನಲು ಮುರಾರಿಯು | ಸರಿಯೆಂದು ಪೊರಟರಾಗ || ೩೬೫ ||

ಉಭಯ ಸೈನಿಕರು ಶಸ್ತ್ರಾಸ್ತ್ರವನಿಳುಹುತ | ಶಿಬಿರಕಯ್ತರಲಿತ್ತಲು ||
ಸೊರಗಿ ಚಿಂತೆಯ ತಾಳಿ ಧರ್ಮಜ ಮುರರಿಪು | ಚರಣಕೆ ನಮಿಸುತೆಂದ || ೩೬೬ ||

ರಾಗ ದೇವಡಿ ರೂಪಕತಾಳ

ಪುಂಡರೀಕಾಕ್ಷನೆ ಚಂಡಭೀಷ್ಮನು ದಿನಕೆ | ಖಂಡಿಸಿ ದಶಸಾವಿರ ಭಟರ ||
ಕೊಂಡ ಛಲಗಳಂತೆ ತೆರಳಿತು ನವದಿನ | ಖಂಡಿತ ಜಯವಿಲ್ಲವೆಮಗೆ || ೩೬೭ ||

ಧುರಸಹಯಕೆ ಸಕಲ ಧೊರೆಗಳ ಕರೆತಂದು | ಕರಿ ತುರಗವು ಪತ್ತಿಸಹಿತ ||
ಧುರಯಜ್ಞದೀಕ್ಷಿತ ಭೀಷ್ಮಶಸ್ತ್ರಾಗ್ನಿಗೆ | ನಿರತ ಪಶುವ ಗೆಯ್ವುದೆಂತು || ೩೬೮ ||

ಇಷ್ಟು ಸೇನೆಯ ಕೊಲಿಸಿ ಸೃಷ್ಟಿ ಕೈಗೊಂಬುದು | ವಿಟ್ಠಲ ಮೂರುತಿ ಬೇಡ ||
ಶ್ರೇಷ್ಠವೆ ಕಾಂತಾರವಾಸ ಮೌನೀಶರ | ನೊಟ್ಟುಗೂಡಿರುವುದೆ ಸೌಖ್ಯ || ೩೬೯ ||

ರಾಗ ರೇಗುಪ್ತಿ ಅಷ್ಟತಾಳ

ತಾಳು ಧರ್ಮಜ ಸೈರಣಿಯನು | ನಾ | ಪೇಳುವೆ ಯುಕ್ತಿಗಳನ್ನು ||
ಶೀಲ ಭೀಷ್ಮನು ದಿವ್ಯಜ್ಞಾನಿ ನಿಮ್ಮೈವರ | ಮೇಲವಗತಿ ಪಾರಮಾರ್ಥಕವಿಹುದಯ್ಯ || ೩೭೦ ||

ಈ ರಾತ್ರೆಯೊಳಗಲ್ಲಿ ಪೋಗಿ | ಧುರ | ಧೀರಾಗ್ರಗಣ್ಯಗೆ ಬಾಗಿ ||
ಭೂರಿ ದೈನ್ಯದಿ ಬೇಡಿಕೊಳಲು ಕಾಪಾಡುವ | ಪಾರಮಾರ್ಥದಿ ಜಿತನಾಗುವನಾತನು || ೩೭೧ ||

ಪೊರಡಿರೆಂದಯ್ವರ ಕೂಡಿ | ಹರಿ | ತೆರಳಿದ ಸಮನಿಸಿ ನೋಡಿ ||
ಸುರನದಿತನಯನ ಶಿಬಿರದ್ವಾರದಿ ನಿಂದು | ಚರನೊಳು ಸೂಚಿಸಿ ಕಳುಹಿದ ಭೀಷ್ಮಗೆ || ೩೭೨ ||

ಭಾಮಿನಿ

ಚರನು ನಡೆತಂದಾಗ ಭೀಷ್ಮನ |
ಚರಣಕೊಂದಿಸಿ ದ್ವಾರದೊಳು ಮುರ |
ಹರನು ಪಾಂಡವರೊಡನೆ ಬಂದಿಹನೆಂದು ಬಿನ್ನವಿಸೆ ||
ಶಿರವನೊಲೆದಾಡುತ್ತ ಜಾಹ್ನವಿ |
ತರಳ ತನ್ನೊಳು ಯೋಚಿಸುತ್ತಲಿ |
ಕುರುಪತಿಯು ತಾ ಕೆಟ್ಟನೆನ್ನನು ನಂಬಿ ದೃಢದೊಳಗೆ || ೩೭೩ ||

ವಾರ್ಧಕ

ಸುರರು ತ್ರಿಂಶತ್ಕೋಟಿಗಧಿಪ ತಾನೆಂದೆನಿಸಿ |
ಶರಧಿಸಂಜಾತ ಪುನ್ನಾಗ ವಾಹನ ಕುಲಿಶ |
ಧರಿಸಿ ಸುರತರುಕಾಮಧೇನು ತುರಗಾದ್ಯಖಿಳ ಸರುವ ಸಂಪದಶೋಭಿತ ||
ಧರೆ ಮೂರಕರಸನಾಗಿರ್ಪ ವಾಸ್ತೋಷ್ಪತಿಗೆ |
ವಿರಚಿಸಿಹ ಪ್ರಾಚೀನಕರ್ಮದಲಿ ದಾನವರು |
ಪರಿಪರಿಯ ಪೀಡೆಗಳನಿತ್ತ ಮೇಲದ ನೋಡೆ ಶರಣೆಂಬೆ ಕರ್ಮಗಳಿಗೆ || ೩೭೪ ||

ರಾಗ ಮಧುಮಾಧವಿ ತ್ರಿವುಡೆತಾಳ

ಕುರುಪತಿಯ ಪ್ರಾಚೀನಕರ್ಮಗ | ಳರಿಯಲೀ ಪರಿ ತೊಡಕು ಬಂದುದು |
ನರನು ನಾನಾಗಿರ್ಪೆ ಕರ್ಮದಿ | ಶಾಪದಿಂದ ವಸಿಷ್ಠನ || ೩೭೫ ||

ಪರಮ ಪುರುಷನು ದ್ವಾಪರಾಂತ್ಯದಿ | ಧರಣಿಭಾರಕರನ್ನು ಮಡುಹಲು |
ಧರಿಸಿದವತಾರವಿದು ಕೃಷ್ಣನು | ಹರಿ ಜಗನ್ಮಯಮೂರುತಿ || ೩೭೬ ||

ದುಷ್ಟನಿಗ್ರಹ ಮಾಳ್ಪ ಕಪಟದಿ | ಶಿಷ್ಟಪಾಲನೆ ಗೆಯ್ಯಲೋಸುಗ |
ತಟ್ಟನಯ್ತಂದಿಹನು ಶರಣನ | ಗುಟ್ಟ ತಿಳಿಯೆ ವಿನೋದದಿ || ೩೭೭ ||

ವಸುಗಳೊಳು ನಾ ಜನಿಸಿ ಧರೆಯೊಳ | ಗೆಸಗಿದೆನು ಮನಬಂದ ಕಾರ್ಯವ |
ವ್ಯಸನವಹುದಾನಿರಲು ಮುಂದಕೆ | ಅಸುವ ನೀಗುವ ಕುರುಪತಿ || ೩೭೮ ||

ಅಷ್ಟಶತವತ್ಸರಗಳಾಯಿತು || ಪುಟ್ಟಿದೆನು ಗಂಗೆಯೊಳು ಜಗದಲಿ |
ತಟ್ಟನಯ್ದುವುದೊಳಿತು ವ್ಯೋಮಕೆ | ಕೆಟ್ಟ ಕಲಿಯುಗ ಬರುವುದು || ೩೭೯ ||

ರಾಗ ಕಾಂಭೋಜಿ ಝಂಪೆತಾಳ

ನೆನೆಯುತೀ ಪರಿ ಗಂಗಾತನುಜ ಚಾರನೊಳೆಂದ |
ಘನವೇಗ ಬರಹೇಳೆಂದೆನುತ ಕಳುಹಿಸಲು ||
ವಿನಯದಿಂದಲೆ ನಮಿಸಿ ಒಳಗೆ ಚಿತ್ತೈಸಿರೆನೆ |
ಚಿನುಮಯನು ಕೌಂತೇಯರೊಡನೆ ತೆರಳಿದನು || ೩೮೦ ||

ಮಿಸುನಿ ಪೀಠವನಿತ್ತು ಹರಿಚರಣಪಂಕಜಕೆ |
ವಸುಧೆಯೊಳಗೆರಗುತ್ತಲಿರುವ ಭೀಷ್ಮನನು ||
ಕುಶಲದಿಂ ಕರವಿಡಿದು ಕುಳ್ಳಿರಿಸಿ ಕೇಶವನು |
ಶಶಿಕುಲಾನ್ವಯರೈವರನು ಕೆಡಹಿ ಪದಕೆ || ೩೮೧ ||

ಪೊರೆದಿಹಿರಿ ಬಾಲಾಪ್ಯದಿಂದಿವರನೈವರನು |
ಕರುಣದೊಳು ರಕ್ಷಿಪುದು ನಿಮ್ಮ ನಂಬಿಹರು ||
ಭರವಸೆಯನೀಯಬೇಕೆಂದು ನರಹರಿನುಡಿಯೆ |
ಶಿರವನೊಲೆದಾಡುತ್ತ ಭೀಷ್ಮನಿಂತೆಂದ || ೩೮೨ ||

ರಾಗ ಜಂಜೂಟಿ ಅಷ್ಟತಾಳ

ಜಲಚರಾವಳಿ ತೋರಿ ಜಲದಿ | ಮತ್ತೆ | ಮುಳುಗುವಂದದ ಮಾಯಾಸ್ಪದದಿ ||
ಹೊಳೆದು ಮಿಂಚುವ ಬ್ರಹ್ಮಾಂಡಕೋಟಿಯು ಮತ್ತೆ |
ವಿಲಯವಾಪುದು ನಿನ್ನ ದೇಹದಿ | ಸುಲಭದಿಂದಲೆ ಮತ್ತೆ ಜನಿಪುದು || ೩೮೩ ||

ಆರು ಬಲ್ಲರು ಮಹಿಮೆಯನು | ಮತ್ತಿ | ನ್ನಾರು ನಿನ್ನಯ ಮಾಯವನು ||
ಪಾರುಗಂಡವರಿಲ್ಲ ಮನು ಮುನಿ ದಿಕ್ಪಾಲ |
ನಾರದಾದಿಗಳಿಂಗಗೋಚರ | ವಾರಿಜಾಂಬಕನೇಕೆ ನುಡಿಯುವೆ || ೩೮೪ ||

ಹರಿಯೆ ನಿನ್ನಂಶದಿ ಜನಿಸಿ | ಕುರು | ಧರೆಯಧಿಪರ ಕೀರ್ತಿ ಮೆರೆಸಿ ||
ಪರಿಭವಗಳ ಕಾಂಬ ಯೋಗ್ಯತೆಯೆನಗಿಲ್ಲ |
ಒರೆದೆ ನಾನಾತೆರದ ನೀತಿಯ | ಮರುಳ ಕೌರವ ಮನಕೆ ತಾರನು || ೩೮೫ ||

ಪರಮ ಸಜ್ಜನರನ್ನು ಭರದಿ | ಜಯ | ಸಿರಿಯು ಕೈಪಿಡಿವಳು ದಯದಿ ||
ದುರುಳರ ತೊರೆವಳು ದಿಟವಿದು ಧರ್ಮಜ |
ಪರಮ ಸಾತ್ವಿಕ ಸದ್ಗುಣಾಕರ | ಕುರುಧರೆಯ ಪಾಲಿಪನು ವಿಭವದಿ || ೩೮೬ ||

ವಾರ್ಧಕ

ಇಷ್ಟಮಿತ್ರಾನುಜಾತ ಬಾಂಧವರು ಸಹಿತಾಗಿ |
ಕೆಟ್ಟನಿಂದಿಗೆ ಕೌರವೇಂದ್ರನಿಗೆ ನೀತಿಯ |
ನ್ನೆಷ್ಟು ಪೇಳ್ದರು ಮನಕೆ ತರನು ವಿಧಿವಶದಿಂದ ಚಿಂತೆ ಪಡುತಿಹುದೇತಕೆ ||
ಸೃಷ್ಟಿಪತಿ ಬಾರೆನ್ನ ಕಂದ ಧರ್ಮಜನೆನುತ |
ತಟ್ಟನಪ್ಪುತ ಭೀಷ್ಮನೆಂದನೆಲೆ ಸುಕುಮಾರ |
ದುಷ್ಟಮರ್ದನ ನಿನ್ನ ರಕ್ಷಿಪನು ಸಂತಸದಿ ಕೊರತೆಯೊಂದಿದೆ ಪೇಳುವೆ || ೩೮೭ ||

ಭಾಮಿನಿ

ತರಳ ಕೇಳಾನಿರಲು ಜೀವದಿ |
ಕುರುಬಲವ ಗೆಲಲರಿದು ನಿಮ್ಮೊಳು ||
ಧರಣಿ ದೊರಕದು ಸಿದ್ಧವೆನ್ನವಸಾನಪರಿಯಂತ ||
ಧುರದಿ ಮಡುಹಿದರೆನ್ನನಂದಿಗೆ |
ಕುರುಪತಿಯು ಬಲಸಹಿತಲಳಿವನು |
ಮರೆಯ ಮಾತುಗಳೇತಕಿದು ದಿಟವೆನಲು ಧರ್ಮಜನು || ೩೮೮ ||

ರಾಗ ಮಧುಮಾಧವಿ ಏಕತಾಳ

ಸುರನದೀಸುತ ಕೇಳು ನಿನ್ನ ಸಂಹರಿಸಿ | ಬರುವ ರಾಜ್ಯದೊಳೇನು ಫಲವಿದೆ ಸಹಸಿ ||
ಪರಿ ಪರಿ ತೊಳಲಿಸಿ ಭ್ರಾತೃವರ್ಗವನು | ತರುಣಿಸಹಿತ ವಿಪಿನದಿ ಬಳಲಿದೆನು || ೩೮೯ ||

ತಿಳಿದಿಲ್ಲಿಗಯ್ತಂದು ಬೇಡಿಕೊಂಡಿಹೆನು | ಒಲವಿಂದ ವಿಪಿನಕೆ ಪೋಗುವೆ ನಾನು ||
ಸಲಹಿದಿರೆಮ್ಮನು ಬಾಲಾಪ್ಯದಿಂದ | ಕೊಲಲು ನಮ್ಮನು ಭೂಮಿ ಹೊರಳು ಖತಿಯಿಂದ || ೩೯೦ ||

ರಾಗ ಕೇದಾರಗೌಳ ಏಕತಾಳ

ನುಡಿಯ ಕೇಳುತ ಭೀಷ್ಮನೆಂದ ಕೇಳೆಲೊ ಬಾಲ | ನುಡಿಯೆ ನಾ ಪರರೊಳಗೆ ||
ಪೊಡವಿಯೊಳಿರಲಾರೆ ಸಮರಮುಖದೊಳೆನ್ನ | ತುಡುಕಲಿ ಪಾರ್ಥನಾಳೆ || ೩೯೧ ||

ಗೆಲುವನು ಖಾಡಾಖಾಡಿಯೊಳೆನ್ನ ಸರಸದಿ | ಎಲೆ ಧರ್ಮಜಾತ ಕೇಳು ||
ಕಳೆಯಬಾರದು ವೇಳೆ ಫಲವೇನುಪಾಯದಿ | ಹಳಚಲಿ ಸಮ್ಮುಖದಿ || ೩೯೨ ||

ರಾಗ ಸಾಂಗತ್ಯ ರೂಪಕತಾಳ

ಕರುಣವಾರಿಧಿ ತಾತ ನಿನ್ನ ಗೆಲ್ಲುವುದೆಂತು | ಒರೆಯಬೇಹುದು ಯುಕ್ತಿಗಳನು ||
ಧುರದೊಳು ಪ್ರಳಯಭೈರವನೆಂದು ತಿಳಿದಿರ್ಪೆ | ತರಳರೆಮ್ಮನು ಸಲಹೆಂದ || ೩೯೩ ||

ನರನೊರ್ವ ಮತ್ತೆ ಶ್ರೀಹರಿಯೊರ್ವನಲ್ಲದೆ | ಧುರದೊಳೆನ್ನನು ಬಯಸುವರು ||
ಧರೆಯೊಳಿಲ್ಲೆಲೆ ಕಂದ ಶಸ್ತ್ರವ ಪಿಡದುರೆ | ಬರರು ಮಿಕ್ಕಿನ ಮಹಾರಥರು  || ೩೯೪ ||

ಮಾಡಿದೆ ಶಪಥ ಶಸ್ತ್ರಾಸ್ತ್ರಶೂನ್ಯಕರನ್ನು | ಓಡುತಿಹರ ವಂದಿಸುವರ ||
ಮೂಢರ ಸತಿಯರ ಮತ್ತೇಕಪುತ್ರರ | ಕೂಡೆಶಸ್ತ್ರವ ಧರಿಸೆ ನಾನು || ೩೯೫ ||

ಸತಿರೂಪದೊಳು ಪುಟ್ಟಿ ಮತ್ತೆ ಪುಂಸತ್ವವ | ನತಿಶಯದೊಳು ಪಡೆದಿರುವ ||
ಸತಿಪೂರ್ವನಾದ ಶಿಖಂಡಿಯ ಮುಂದಿಟ್ಟು | ಖತಿಯೊಳಸ್ತ್ರವ ಬಿಡೆ ಪಾರ್ಥ  || ೩೯೬ ||

ತೊರೆಯುವೆ ಸಮರವ ಕಡೆಯೊಳ್ ದೇಹ ನೀಗಿ | ತೆರಳುವೆ ಸುರಪುರಕಾನು ||
ತ್ವರಿತದೊಳೆತ್ನಗೆಯ್ಯಲು ಬೇಕು ಎನ್ನಯ | ತರಳ ಧರ್ಮಜ ಸದ್ಗುಣಾಢ್ಯ || ೩೯೭ ||

ಭಾಮಿನಿ

ತೆರಳಿರೀ ಕ್ಷಣ ನೀವು ಬಂದುದ |
ನರಿತನಾದಡೆ ಕೌರವೇಂದ್ರನು |
ಬರಿದೆ ನಿಂದಿಪನೆನಲು ಪದಕಭಿನಮಿಸಿ ಪಾಂಡವರು ||
ಭರದೊಳಪ್ಪಣೆಗೊಳಲು ಕೃಷ್ಣನ |
ಚರಣಕೊಂದಿಸಿ ಕಳುಹೆ ಭೀಷ್ಮನು |
ತೆರಳಿ ಬಂದುದನೆಲ್ಲ ಯೋಚಿಸುತೆಂದ ಶ್ರೀಹರಿಯು || ೩೯೮ ||

ಸಂತೋಷದಲಿ || ೧೦೮ ||

 

ರಾಗ ಸೌರಾಷ್ಟ್ರ ಮಟ್ಟೆತಾಳ

ಕುರುಕುಲೇಶ ಕೇಳು ಮುದದೊಳು | ಭೇದವೊರೆವೆ | ಪರಿಕಿಸಯ್ಯ ನಿಂತು ರಥದೊಳು ||
ತುರಗ ರಥ ಪದಾತಿ ಸೂತ | ಕರಿಘಟಾಳಿಗಳನು ವೈರಿ |
ಶರದ ಹತಿಗೆ ಸಿಲುಕದಂತೆ | ಹೊರೆವನಾತ ಸಮರಥಾಖ್ಯನು |
ಪಡೆವನಿಂಥ | ಬಿರುದೆ ಮಹಾರಥಿಕನೆಂಬನು || ೧೦೯ ||

ವೀರಷಡುರಥಾಖ್ಯನೆಂಬನು | ತುರಗರಥವ | ಸಾರಥಿಯ ಪೊರೆದುಕೊಂಬನು |
ಸಾರಥಿಯು ತನ್ನ ಸಹಿತ | ಹೋರಿ ಸಲಹಿಕೊಂಬನೋರ್ವ |
ಶೂರನತಿರಥಾಖ್ಯ ಮತ್ತೆ | ಕ್ರೂರಶರದಿ ತಪ್ಪಿಕೊಂಬನು |
ಅರ್ಧರಥಿಕ | ನೊರ್ವ ತನ್ನನುಳುಹಿಕೊಂಬನು || ೧೧೦ ||

ರಾಗ ಶಂಕರಾಭರಣ ತ್ರಿವುಡೆತಾಳ

ಎಂದು ಕುರುಪತಿಯನ್ನು ತೊಲಗುತೆ | ನಿಂದಿರಲು ರಥವೇರುತ ||
ಬಂದು ಧರ್ಮಜನೆರಗಲಪ್ಪುತ | ಮುದವ ತಾಳಿ || ೧೧೧ ||

ಸತ್ಯಸಂಧನೆ ಸುಗುಣ ಮತ್ಪ್ರಿಯ | ಪೌತ್ರ ನಿನ್ನನು ಕಾಣಲು |
ಹೊತ್ತಿದುದು ಶೋಕಾಗ್ನಿ ಜಠರಕೆ | ಪೇಳ್ವುದೇನು || ೧೧೨ ||

ಕಂದ ಕೇಳೈ ವನದಿ ವಿಧವಿಧ | ದಿಂದ ಶೋಕಿಸುತಿರ್ದೆಯ |
ಬಂದುದೇ ಧುರವೀಗ ಗೆಲಿಸುವ | ಇಂದಿರೇಶ  || ೧೧೩ ||

ಅರಿಗಳುರೆ ನಾವ್ ನಿಮಗೆ ತರಳನೆ | ಧುರಕೆ ನಿಂದಿಹ ಕಾಲದಿ |
ಬರುವುದನುಚಿತ ಪ್ರತಿಭಟರು ನೀ | ನರಿತು ನೋಡು || ೧೧೪ ||

ಕುಳಿತು ಕೊಳ್ಳೈ ಸತ್ಯಸಂಧನೆ | ಘಳಿಲನೇತಕೆ ಬಂದೆಯ |
ತಿಳುಹೆನುತಲಿರೆ ಭೀಷ್ಮನಿತ್ತಲು | ಸೇನೆಯೊಳಗೆ || ೧೧೫ ||

ಭಾಮಿನಿ

ಪರಿಯ ನೋಡುತಲಿತ್ತ ಫಲುಗುಣ |
ಮರುತಸುತ ಸಾತ್ಯಕಿಯರೆಲ್ಲರು
ಧುರಪರಾಕ್ರಮರಾಗಿ ನಾವಿರೆ ವೈರಿಮೋಹರದಿ ||
ಅರಿಗಳೆಡೆ ಧರ್ಮಜನು ಸಾರುತ |
ಶರಣುವೊಕ್ಕನಿದೇನೆನುತ್ತಿರೆ |
ಪರಮರೋಷದಿ ಭೀಮ ಪಲ್ಗಡಿಯುತ್ತಲಿಂತೆಂದ ||೧೧೬||

ರಾಗ ಘಂಟಾರವ ಏಕತಾಳ

ಯುದ್ಧಕೋಸುಗ ಸನ್ನದ್ಧರಾಗಿರೆ |
ಶುದ್ಧ ಕ್ಷತ್ರಿಯಛಲವ ತ್ಯಜಿಸುತ | ಬಿದ್ದನೇತಕೆ ಚರಣಕೆ  || ೧೧೭ ||

ಷಂಡರಾದೆವೆ ಧರ್ಮಜನೆಸಗಿದ |
ಭಂಡತನಗಳು ಸರಿಯೆ ರಿಪುಗಳಿ | ಗಂಡಲೆದು ಮಣಿದಿರ್ಪುದು || ೧೧೮ ||

ತರಿವೆನೀ ಕ್ಷಣ ಕುರುಸೇನೆಯೆಲ್ಲವ |
ಧರಣಿ ಸೆಳೆಯದೆ ಬಿಡಲು ಭೀಮನೆ | ಪುರುಷನಲ್ಲವೆ ಶಿವ ಶಿವ || ೧೧೯ ||

ಧುರಕೆ ನಿಂತಪಹಾಸ್ಯವ ತಂದನು |
ಹರನೆ ಮುನಿದರು ಬಿಡೆನು ಗದೆಯೊಳ | ಗೆರಗಿ ರಿಪುಗಳ ಸದೆವೆನು || ೧೨೦ ||

ಎಂದು ಕಂಕಾಲರುದ್ರನಂದದಿ ಭೀಮ |
ಮುಂದುವರಿಯಲು ಕಂಡು ಶ್ರೀಗೋ | ವಿಂದಮೂರುತಿ ನುಡಿದನು || ೧೨೧ ||