ರಾಗ ಕೇದಾರಗೌಳ ಅಷ್ಟತಾಳ

ಕೇಳು ಧರ್ಮಜ ಭೀಷ್ಮನಿರನಿನ್ನು ಭುವನದಿ | ನಾಳಿನ ಧುರದೊಳಗೆ ||
ಪೇಳಿದ ತೆರದಿ ಶಿಖಂಡಿಯ ಮುಂದಿಟ್ಟು | ಕೋಳುಗೊಂಬುದು ವೇಗದಿ || ೩೯೯ ||

ಆತನ ಮಡುಹದಿರ್ದಡೆ ಮತ್ತೆ ಕೌರವ | ವ್ರಾತವಳಿಯಲಾರದು ||
ಭೂತಳದಾಸೆಯು ನಿಮಗಿಲ್ಲವೆಂಬುವ | ಮಾತು ನಿಶ್ಚಯವೆಂದನು || ೪೦೦ ||

ಕಂದ

ನುಡಿಯಂ ಕೇಳುತ ಪಾರ್ಥನು |
ಗಡಗಡ ನಡುಗುತಲಾ ಕ್ಷಣ ಮರುಕದಿ ಬಳಲುತೆ ||
ಪೊಡವಿಯು ಬೇಡೆಮಗಿಂದಿಗೆ |
ಕಡುವಿಪಿನಾಂತರವಾಸವೆ ಲೇಸೆನುತಾಗಳ್ || ೪೦೧ ||

ರಾಗ ಸಾವೇರಿ ಆದಿತಾಳ

ಪರಮಜ್ಞಾನಿಯು ಭೀಷ್ಮನು | ಸುರಲೋಕಕೀಗ | ತೆರಳಲೆತ್ನವಗೆಯ್ದನು ||
ಧುರದೊಳೆನ್ನಯ ಶರದಿ | ಹರಣವನಳಿವ | ತೆರನ ಪೇಳಿದ ದಯದಿ || ೪೦೨ ||

ತರಳತನದೊಳೆನ್ನನು | ಮರುಕದೊಳೆತ್ತಿ | ಪೊರೆದಿಹ ಮಮ ತಾತನು ||
ಕರೆದು ಕರೆದು ಭಕ್ಷ್ಯವ | ಮೆಲುವರೆ ಇತ್ತು | ಹರುಷದಿ ಮುದ್ದಿಸುವ || ೪೦೩ ||

ತರಳರೊಳಾಡಿ ಮಣ್ಣನು | ಮೈಯೊಳು ಮೆತ್ತು | ತಿರಲದ ಮುತ್ತಯ್ಯನು ||
ಸೆರಗಿಂದೊರಸುವನು | ಪೊರೆದನು ಪಿತ | ನಿರದಿರಲೆಮ್ಮ ಪ್ರೇಮನು || ೪೦೪ ||

ಬರದು ಎನ್ನಯ ಕರಗಳು | ಮಹಿಮನಕೊಂದು | ಇರುವುದಿನ್ನೇಕೆ ಬಾಳು ||
ಧುರಕೆ ನಿಲ್ಲೆನು ಸರ್ವಥಾ | ಭೀಷ್ಮನೊಳಾನು | ಶರವ ಕೀಲಿಸೆ ಶ್ರೀನಾಥ || ೪೦೫ ||

ರಾಗ ಭೈರವಿ ಝಂಪೆತಾಳ

ಯಾತಕೀ ನುಡಿ ಪಾರ್ಥ | ಭೂತಳೇಶರ ಮುಂದೆ | ನೋತು ಶಪತಥವ ಗೆಯ್ದೆ ಹಿಂದೆ ||
ಘಾತಿಸುವೆ ಭೀಷ್ಮನನು | ನಾನೆಂದು ನುಡಿದಿರುವೆ | ಮಾತಮೀರುವುದುಂಟೆ ಜಗದಿ || ೪೦೬ ||

ಪುಟ್ಟಿರುವೆ ಕ್ಷತ್ರಿಯೊಳು | ತೊಟ್ಟ ಛಲ ತ್ಯಜಿಸಿದರೆ | ಸೃಷ್ಟಿಭಾರಕನಾದೆ ನೀನು ||
ಶ್ರೇಷ್ಠನೆನ್ನುತ ಬಿಡಲು | ಬಾರದೈ ಧುರಕೆ ಮುಂ | ದಟ್ಟಿ ಬಂದರನರಿಯಬಹುದು || ೪೦೭ ||

ವಾರ್ಧಕ

ಜಡಜಲೋಚನನೆಂದ ನುಡಿ ಕೇಳಿ ಫಲುಗುಣಂ |
ಕಡು ಬಲಾಢ್ಯ ಶಿಖಂಡಿ ಭೀಷ್ಮನಿಂಗಿದಿರಾಗೆ |
ತುಡುಕಲೆತ್ನವ ಗೆಯ್ದು ಹಿಂದೆ ಬೆಂಬಲಕಾನು ಒದಗಿ ಸಮರವ ಗೆಯ್ವೆನು ||
ನುಡಿಯುತಿರಲನ್ನೆಗಂ ದ್ಯುಮಣಿಯುದ್ಭವನಾಗೆ |
ಸಡಗರದಿ ನಿತ್ಯಕರ್ಮವ ಗೆಯ್ದು ಪಾಂಡವರು |
ನಡೆತಂದು ರಣಭೂಮಿಯಂ ಪೊಕ್ಕು ವಾದ್ಯಗಳ ನಾದದಿಂ ಭೋರ್ಗುಡಿಸಲು || ೪೦೮ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸುರನದೀಸುತನೆದ್ದು ವಿಭವದಿ | ವಿರಚಿಸುತ ಜಪತಪಗಳೆಲ್ಲವ |
ಕರದಿ ಧನುಶರವಾಂತು ಪೊರಡಲು | ಕಾಣುತಾಗ || ೪೦೯ ||

ಕರಿ ತುರಗ ರಥಪತ್ತಿ ಸಕಲವು | ಪರುಠವಿಸಿ ಬಳಸಿರುವ ಕುರುಪತಿ |
ಚರಣಕೊಂದಿಸುತೆಂದ ಭೀಷ್ಮಗೆ | ಮರುಕದಿಂದ || ೪೧೦ ||

ಸಂತು ದಿನವೊಂಭತ್ತು ನಿಮ್ಮೊಳ | ಗೆಂತು ಪಾಂಡವರಲ್ಲಿ ಕರುಣವ |
ನಂತರಂಗದೊಳಿರಿಸಿಯೆಮ್ಮನು | ಕೊಲಿಸುತಿಹಿರೊ || ೪೧೧ ||

ಹತಿಸಿಹುದು ಬಹು ಸೇನೆಯೆನ್ನಯ | ವ್ಯಥೆಯ ಪೇಳಲಸಾಧ್ಯ ಮನದೊಳು |
ಖತಿಯ ತಾಳಲು ಬಾರದಿಂದಿಗೆ | ಕರವ ಮುಗಿವೆ  || ೪೧೨ ||

ಧುರಕೆ ಕರ್ಣನಿಗಾಜ್ಞೆಯಾದರೆ | ಪರಿಕಿಸಲು ಬೇಕೆಮ್ಮ ರಿಪುಗಳ |
ಶಿರವ ಚೆಂಡಾಡುವನು ಶೂರನು | ಬಾಹುಬಲನು || ೪೧೩ ||

ಬಳಲಿದಿರಿ ಸಾಕೀಗ ಸಂಗರ | ನಿಳಯದೊಳು ಸುಖದಿಂದಲಿರ್ದರೆ |
ಹಳಚುವೆವು ಮತ್ಪುಣ್ಯದಂದದೊ | ಳಹುದು ಮುಂದೆ || ೪೧೪ ||

ರಾಗ ಕೇದಾರಗೌಳ ಝಂಪೆತಾಳ

ಎಂದ ಮಾತನು ಕೇಳುತ | ಗಾಂಗೇಯ | ನಂದು ರೋಷವ ತಾಳುತ ||
ಹಿಂದೆ ನಾ ಪೇಳ್ದ ತೆರದಿ | ಪಟುಭಟರ | ಕೊಂದಿಹೆನು ನೋಡು ರಣದಿ  || ೪೧೫ ||

ಪುರುಷನೊರ್ವನೆ ಕರ್ಣನು | ನಾನಲ್ಲ | ಧುರಗೆಯ್ಯೆ ಕಡುವೃದ್ಧನು ||
ಕರುಣವಿದೆ ಪಾಂಡವರಲಿ | ಉಭಯರಿಗು | ಹಿರಿಯನಾದೆನು ಕುಲದಲಿ || ೪೧೬ ||

ಯಾತಕೀ ಪರಿ ನುಡಿಯುವೆ | ರಿಪುಸೈನ್ಯ | ಘಾತಗಳ ನೋಡಿಲ್ಲವೆ ||
ಮಾತನಾಡಿದರೇನಿದೆ | ರಣದಿ ಪೆಣ | ವ್ರಾತ ಮುಂದೆಸೆ ಬಿದ್ದಿದೆ || ೪೧೭ ||

ಭಾಮಿನಿ

ಗಜಘಟಿಯ ನಕ್ರದಲಿ ತುರಗ |
ವ್ರಜದ ಮತ್ಸ್ಯದಿ ವೀರವರ್ಗದ |
ಭುಜ ಮಹೋರಗದಿಂದ ವಿಶಿಖಾವಳಿಯ ಗುಲ್ಮದೊಳು ||
ನಿಜ ಕರಾಗ್ರದಿ ಪಿಡಿದ ಕಾರ್ಮುಕ |
ವ್ರಜ ತರಂಗಗಳಿಂದ ಕಾಲನ |
ವಿಜಯಸಾಗರ ನೋಡು ಕೌರವ ಏಕೆ ನಿಂದಿಸುವೆ || ೪೧೮ ||

ವಾರ್ಧಕ

ತರಣಿಯಸ್ತಾಚಲವ ಸಾರ‍್ವವರೆಗೀ ದಿನಂ |
ಧುರದೊಳೆನ್ನಯ ಶೌರ್ಯ ವೈರಿ ಮೋಹರದೊಳಗೆ |
ಮೆರೆಸಿಕೊಂಬೆನು ಶಕ್ತಿಮೀರಿ ಹೆಣಗಾಡುತಿಹೆ ಹರಿಯು ಪಾಂಡವಪಕ್ಷದಿ ||
ಇರುವ ಕಾರಣವೆನಗೆ ವಿಜಯಮೆಂತಾಗುವುದೊ |
ದೊರೆ ನಿನ್ನ ಪುಣ್ಯದಿಂದಪಜಯವ ಪೊಂದಿದರೆ |
ಶರವ ತೊಡೆನಾ ಮೇಲೆ ಕರ್ಣ ಶಕುನಿಗಳಿಂದ ಮನ ಬಂದ ತೆರ ಗೆಯ್ವುದು || ೪೧೯ ||

ರಾಗ ಮಾರವಿ ಏಕತಾಳ

ಎನುತಲೆ ಗಂಗಾತನಯನನೀಕಿಯ | ಕಣನೊಳು ನಿಲಿಸುತಲಿ ||
ಮಣಿಮಯ ಸ್ಯಂದನವೇರುತ ಕರದಲಿ | ಧನುಶರಗಳನಾಂತು || ೪೨೦ ||

ನಡೆಸುತ ರಿಪುಮೋಹರದೊಳು ರಥಗಳ | ತುಡುಕುತ ಶರಗಳನು ||
ಹೊಡಕರಿಸುತ ಕರಿಘಟೆ ಕಾಲ್ಬಲಗಳ | ಕಡಿದೊಟ್ಟುತ ಛಲದಿ || ೪೨೧ ||

ಇರಿದನು ಶೂಲದಿ ತರಿದನು ಶರದಲಿ | ಕೊರೆದನು ಖಡ್ಗದೊಳು ||
ಮೆರೆದನು ರಿಪುಮೋಹರದೊಳಗೆತ್ತಲು | ಸುರನದಿನಂದನನು || ೪೨೨ ||

ಇತ್ತ ಶಿಖಂಡಿಯು ಕೇಶವನಾಜ್ಞೆಯ | ಪೊತ್ತಡರುತ ರಥವ ||
ಚಿತ್ತದಿ ಖತಿಮಸಗುತ್ತಲೆ ಗಂಗಾ | ಪುತ್ರನನರಸುತಲಿ || ೪೨೩ ||

ಭಾಮಿನಿ

ಪರಿಕಿಸುತಲಾ ಕೌರವೇಂದ್ರನು |
ಒರೆದಿಹನು ಗಾಂಗೇಯನೆನ್ನೊಳು |
ಮರಣವೆನಗೆ ಶಿಖಂಡಿಮುಖದೊಳಗೆಂದು ಪೂರ್ವದಲಿ ||
ಧುರದಿ ಮುಂದರಿದೀಗ ದುರುಳನ |
ಶಿರವರಿಯಬೇಕೆನುತ ಗುರುಕೃಪ |
ಗುರುಜ ಮುಖ್ಯರೊಳುಸಿರಿ ಕೌರವ ಬಂದು ಮಾರ್ಮಲೆಯೆ || ೪೨೪ ||

ರಾಗ ಶಂಕರಾಭರಣ ಮಟ್ಟೆತಾಳ

ಕಿಡಿಯ ಸೂಸುತಾ ಶಿಖಂಡಿ | ಧಡಿಗತನದಿ ವಿಶಿಖಗಳನು |
ತುಡುಕಿ ಬಿಟ್ಟ ಕೌರವೇಂದ್ರ | ಗಾಗಲಾ ಕ್ಷಣ || ೪೨೫ ||

ಕುರುಕುಲೇಂದ್ರ | ತರಿದು ಮತ್ತೆ | ಉರುತರಾಸ್ತ್ರವೆಸೆಯಲಾಗ |
ತರಿದನೊಂದೆಯಲಗಿನಿಂದ | ಕಲಿ ಶಿಖಂಡಿಯು || ೪೨೬ ||

ಗುರಿಯ ನೋಡುತಾ ಶಿಖಂಡಿ | ಕುರುಪತಿಯ ಧನುವ ಕಡಿಯೆ ||
ಭರದೊಳನ್ಯಚಾಪಗೊಳಲು | ತುಂಡುಗೆಯ್ದನು || ೪೨೭ ||

ಶಕ್ತಿಯಿಂದ ಕೌರವೇಂದ್ರ | ಮತ್ತೆ ಗದೆಯ ತೂಗಿ ಬಿಡಲು |
ಕಿತ್ತು ಶಿರಕೆ ಬಡಿಯೆ ಮೂರ್ಛೆ | ತಳೆದನಾ ಕ್ಷಣ || ೪೨೮ ||

ಭಾಮಿನಿ

ತ್ವರಿತದಿಂದೇಳುತ್ತ ಕೌರವ |
ಪರಮ ರೋಷವ ತಳೆದು ಬರುತಿರ |
ಲರಿತು ಮುಂದಡಗಟ್ಟಿಯಗ್ರಜನಡಿಗೆ  ವಂದಿಸುತ ||
ಪರುಠವಿಸಿ ದುಶ್ಯಾಸ ಸಮರಕೆ |
ತೆರಳುವೆನು ನಾನೆನುತ ಬರುತಿರೆ ||
ಕೆರಳಿದನು ಝೇಂಕರಿಸಿ ದ್ರುಪದಕುಮಾರನಾ ಕ್ಷಣದಿ || ೪೨೯ ||

ರಾಗ ಮಾರವಿ ಮಟ್ಟೆತಾಳ

ಯಾತಕೆನ್ನ ಧುರವು ಬೇಡ | ಸೋತು ಪೋಪೆಯ ||
ಪಾತಕಿಯೆ ಎನ್ನ ಭಗಿನಿ | ಮಾನ ಕಳೆದೆಯ || ೪೩೦ ||

ಪಾಪಿ ನಾನಲ್ಲ ಪರರ | ಕೊಲಲು ಜನ್ಮವ ||
ಈ ಪರಿಯೊಳೆತ್ತಿ ಬಂದ | ಕಡು ನರಾಧಮ || ೪೩೧ ||

ತೊಟ್ಟ ಛಲವ ಬಿಡುವದುಂಟೆ ಶೂರಜನಗಳು ||
ಕುಟ್ಟಿ ಕೊಲುವ ಭೀಮ ನಾಳೆ | ಪರಿಕಿಸಾಗಳು || ೪೩೨ ||

ಬರಿಯ ಮಾತಿದೇಕೆ ಧನುವ | ತಾಳು ತಾಳೆಲ ||
ಶರವನಿದರ ಮುರಿಯೆ ಶೂರ | ನೆಂಬೆ ನೋಡೆಲ || ೪೩೩ ||

ರಾಗ ಭೈರವಿ ಏಕತಾಳ

ಕೆರಳಿ ಶಿಖಂಡಿಯು ಬೇಗ | ಬಹ | ಶರವನು ತುಂಡಿಸಲಾಗ ||
ಗುರಿಯೊಳಗೆಂಟಸ್ತ್ರವನು | ಖತಿ | ವೆರಸುತ ಬಿಡೆ ಕಂಡದನು || ೪೩೪ ||

ಮುರಿದೊಟ್ಟುತ ಚಾಪವನು | ತುಂ | ಡರಿಯಲ್ಕಾಗಸಿಯನ್ನು ||
ತಿರುಹುತ ಬರೆ ಸೆಳೆಯುತ್ತ | ಧರೆ | ಗಿರಿಸೆ ಶಿಖಂಡಿಯು ನಗುತ || ೪೩೫ ||

ತೋರೋ ಸಹಸಗಳೀಗಾ | ಮಹ | ಶೂರಾಗ್ರಣಿ ನೀ ಬೇಗ |
ಭಾರಿಯ ಪೌರುಷವೇಕೊ | ಕಡು | ಕ್ರೂರ ದುಷ್ಕರ್ಮಿಯೆ ಸಾಕೊ || ೪೩೬ ||

ವಾರ್ಧಕ

ನುಡಿಯ ಕೇಳುತಲಾಗ ಕಿಡಿಗೆದರಿ ದುಶ್ಯಾಸ |
ಘುಡುಘುಡಿಸುತಯ್ತಂದು ಭುಜವ ಚಪ್ಪರಿಸುತಂ |
ಧಡಿಗತನದಿಂ ಮಲ್ಲಯುದ್ಧಕೊದಗೆ ಶಿಖಂಡಿ ಪಿಡಿದು ಶರಮಂ ವೇಗದಿ ||
ಕಡು ದುರುಳ ನಿನ್ನ ನಾ ಕೊಲೆನೆಂದು ಮೀಸೆಯಂ |
ಖಡುಗದಿಂ ಕತ್ತರಿಸೆ ಪಾಂಡವಾನೀಕಗಳ್ |
ಬಡಿದು ಕರಚಪ್ಪಳೆಯನಿಕ್ಕಿ ಖೋಯೆಂದೆನಲ್ ಕಡು ನಾಚಿ ಪಿಂತಿರುಗಿದ || ೪೩೭ ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚಂಡಭೈರವನಂತೆ ರಿಪುಗಳ | ತಂಡದಲಿ ಹೊಕ್ಕಾ ಶಿಖಂಡಿಯು |
ದಿಂಡುದರಿದನು ಪ್ರತಿಭಟರ ಮುಂ | ಕೊಂಡು ರಣದಿ || ೪೩೮ ||

ಕಕ್ಕುಲತೆ ಬೇಡೀಗ ನಿಮ್ಮನು | ಮುಕ್ಕುವೆನು ಧುರಧೀರರಿಲ್ಲವೆ |
ಪೊಕ್ಕು ಹೆಣಗುವ ಬನ್ನಿರೀ ಕ್ಷಣ | ವೆಂದು ಕರೆದ || ೪೩೯ ||

ಬಹೆನು ತಡೆತಡೆಯೆನುತ ಶಲ್ಯನು | ಮಹಬಲಾನ್ವಿತನಹುದೊ ಎನ್ನನು |
ವಿಹಿತದಿಂ ಗೆಲಬಹುದುಯೆನ್ನುತ | ಮುಂದೆ ನಿಲಲು || ೪೪೦ ||

ಎಲವೊ ಬಿಲುಗೊಳ್ಳೀಗ ಬೇಗದಿ | ಗಳಿಗೆಯೊಂದರೊಳೀಗ ನಿನ್ನ |
ಗ್ಗಳಿಕೆಯನು ತೋರುವೆನೆನುತ್ತಲೆ | ದ್ರುಪದತನಯ || ೪೪೧ ||

ಎಚ್ಚನಾ ಕ್ಷಣ ಬಾಣಮಯವನು | ಕಿಚ್ಚು ಕಿಡಿಕಿಡಿಗೆದರಿ ದ್ರುಪದಜ |
ಮುಚ್ಚಿ ಮುಸುಕಿದ ಶಲ್ಯನಂಗವ | ನೇನನೆಂಬೆ || ೪೪೨ ||

ರಾಗ ಮಾರವಿ ಏಕತಾಳ

ತರಿತರಿದೊಟ್ಟುತ ಶರಗಳ ಶಲ್ಯನು | ಪರುಠವಿಸುತ ಬರಲು ||
ಕೆರಳಿ ಶಿಖಂಡಿಯು ಸಾರಥಿಯನು ಬಡಿ | ದುರುಳಿಸೆ ನೆಲನೊಳಗೆ || ೪೪೩ ||

ಮತ್ತೊರ್ವನ ಕರೆದೇರಿಸಿ ರಥದೊಳು | ಶಕ್ತಿಯೊಳಾ ಶಲ್ಯ ||
ಬಿತ್ತರಿಸುತ ಶರವೃಷ್ಟಿಯ ಕರೆಯಲು | ಪೃಥ್ವಿಗೆ ಮುರಿದೊಟ್ಟಿ || ೪೪೪ ||

ವಿರಥನ ಗೆಯ್ಯುತ ಶಲ್ಯನ ಧರಣಿಯೊ | ಳುರುಳಿಸಿ ಮೂರ್ಛೆಯಲಿ ||
ಅರಿಮೋಹರವನು ಮುರಿಮುರಿದಿಕ್ಕುತ | ತಿರುಗಿದ ನಾಲ್ದೆಸೆಗೆ || ೪೪೫ ||

ಭಾಮಿನಿ

ಹರಿಯು ಕರೆತಂದಾ ಶಿಖಂಡಿಯ |
ನಿರಿಸಿ ಪಾರ್ಥನ ರಥದಿ ಬೇಗನೆ |
ನರನೊಳೆಂದನು ಭೀಷ್ಮಸಮ್ಮುಖವಯ್ದಿ ಸಮರವನು ||
ಸುರನರರು ಭಾಪೆನುವ ಪರಿಯಲಿ |
ಧುರವೆಸಗಬೇಕೆನುತ ರಥವನು |
ತೆರಳಿಸಲು ಫಲುಗುಣನು ಭೀಷ್ಮನೊಳೆಂದ ತವಕದಲಿ || ೪೪೬ ||

ರಾಗ ಕೇದಾರಗೌಳ ಅಷ್ಟತಾಳ

ಅರಿತುದಿಲ್ಲವೊ ತಾತ ಭರತಪರಂಪರೆ | ದೊರೆಗಳನ್ವಯದಿ ಹಿಂದೆ ||
ಸರಿಸಮ ನಿನ್ನಂಥ ಪ್ರಾಜ್ಞ ಸತ್ಯಾನ್ವಿತ | ಛಲವಂತರಿಲ್ಲವೆಂದು || ೪೪೭ ||

ಕರುಣ ನಿಧಿಯೆ ಧುರಧೀರಾಗ್ರಗಣ್ಯನೆ | ತರಳರ ಶ್ರೇಯಸ್ಸನ್ನು |
ನಿರತ ಹಾರೈಸುವ ಗಳಿತಿಹ ತನುವಿಗೆ | ಶರಗಳೆಂತೆಸೆಯುವೆನು || ೪೪೮ ||

ಫಲುಗುಣ ಕ್ಷತ್ರಿಧರ್ಮಕೆ ಹಾನಿ  ತರಬೇಡ | ಹಳಚುವ ಪ್ರತಿಭಟನ ||
ಗೆಲುವುದೊಂದೇ ಮನವಿರಿಸಬೇಕಲ್ಲದೆ | ಕರುಣಗಳಿಡಬಾರದು || ೪೪೯ ||

ಕುರುಪತಿವೈರಿಯಾತನ ಸೇನಾಪತಿ ನಿನ್ನ | ಧುರದಿ ಕೊಲ್ಲುವುದೆನ್ನಯ |
ನಿರತ ಪ್ರಯತ್ನವೆಂದೆನಲಾಗ ಭೀಷ್ಮನು | ಕಿರುನಗು ನಗುತಲೆಂದ || ೪೫೦ ||

ಕುವರ ಕೇಳ್ ನಿನ್ನಿಂದಲಾಗದು ಹರಿಹರ | ಪರಮೇಷ್ಠಿಯಯ್ತಂದರು ||
ಬವರದಿ ಸಾಯುವನಲ್ಲ ಜಯದ ಮಾತು | ವಿಧಿವಶವಾಗಿಹುದು || ೪೫೧ ||

ರಾಗ ಮಾರವಿ ಏಕತಾಳ

ಕೊಲ್ಲುವ ಮನವೆನಗಿಲ್ಲೈ ನಿನ್ನನು | ಗೆಲ್ಲುತ ಕಡೆಯೊಳಗೆ ||
ಖುಲ್ಲ ಸುಯೋಧನವಾಹಿನಿ ಸಹಿತಲೆ | ತಲ್ಲಣಗೊಳಿಸುವೆನು || ೪೫೨ ||

ಹರಿಕಿಂಕರ ತ್ರೈಭುವನವ ಗೆಲುತಿಹೆ | ಸಿರಿಯರಸಗೆ ನಾನು ||
ಶರಣನು ವಿಜಯವ ಪಡೆವುದಸಾಧ್ಯವು | ಭರವಸೆಯಿಲ್ಲೆನಗೆ || ೪೫೩ ||

ಕೊಡುವೆನು ತಾತನೆ ನಿನ್ನೊಳು ವಿಶಿಖವ | ತೊಡೆಯಲು ನೇಮವನು ||
ನುಡಿಯೊಳಗೇನಿದೆ ಫಲಗಳು ಸಮರದಿ | ಸಡಗರ ಕಾಂಬುವುದು || ೪೫೪ ||

ಇಂದಿರೆಯರಸನ ಪ್ರಾರ್ಥಿಸು ರಣದಲಿ | ಹೊಂದಲು ಜಯಗಳನು |
ಕಂದನೆ ಎನ್ನೊಳಗೇಕೆ ವಿಚಾರಿಪೆ | ಸಂಧಿಸು ಶರಗಳನು || ೪೫೫ ||

ರಾಗ ಶಂಕರಾಭರಣ ಮಟ್ಟೆತಾಳ

ನರನು ಗಾಂಡೀವಧನುವ | ನೆಗಹಿ ವಿಜಯಶಿಖರಿ ಶರವ |
ಭರದಿ ಪೂಡಿ ಬಿಟ್ಟನಾಗ | ಗುರಿಯ ನೋಡುತ || ೪೫೬ ||

ಶಂತಸುತನು ಕೋಪದಿಂದ | ಹೊಂತಕಾರಿ ಭಳಿರೆಯೆನುತ |
ಪಂಥದಿಂ ಪ್ರದೀಪಶರದಿ | ಮುರಿದು ಕೆಡಹಿದ  || ೪೫೭ ||

ಕೆರಳಿ ಜಂಭಭೇದಿಸುತ ಪ್ರ | ಚಂಡ ಭೈರವಾಸ್ತ್ರವೆಸೆಯೆ |
ತರಿದ ನದರ ಘೋರ ಪರ್ಜ | ನ್ಯಾಸ್ತ್ರದಿಂದಲೆ || ೪೫೮ ||

ಹರಿಹಯಾತ್ಮಭವನು ಕೋಟಿ | ಶರವನೊಂದೆ ಕಾಲದೊಳಗೆ |
ಭರಿತ ಪಂಜರವನು ಗೆಯ್ದ | ಭೀಷ್ಮನಂಗಕೆ  || ೪೫೯ ||

ಯೋಗತಿಮಿರಶರದಿ ಭೀಷ್ಮ | ಬೇಗದಿಂದ ಚೂರ್ಣಗೆಯ್ಯ |
ಲಾಗ ಮುಸುಕಲಂಧಕಾರ | ಕಂಡು ಪಾರ್ಥನು || ೪೬೦ ||

ಚಂಡಮಾರ್ತಾಂಡ ಶರದಿ | ದಿಂಡುಗೆಯ್ಯೆ ಭೀಷ್ಮತೋಷ |
ಗೊಂಡು ಪೂತು ಮಝರೆ ಪಾರ್ಥ | ಸಹಸಿಯೆಂದನು || ೪೬೧ ||

ರಾಗ ಭೈರವಿ ಅಷ್ಟತಾಳ

ಜ್ವಾಲಾಗ್ನಿಶಿಖಿಯಸ್ತ್ರವ | ಪೂಡಿಹೆನಿದ | ತಾಳಿಕೊಂಡರೆ ಶೌರ್ಯವ ||
ಪೆಳುವುದೇನಿನ್ನು ಧೀರ ನೀನಹೆಯೆಂದು | ಕೀಲಿಸುತೆಚ್ಚ ಪಾರ್ಥ || ೪೬೨ ||

ಕಿಡಿಯ ಸೂಸುತ ಬರುವ | ಜ್ವಾಲಾಗ್ನಿಯ | ನೊಡನೆ ಕಾಣುತ ಚಾಪವ ||
ತುಡುಕಿ ಝೇಂಕರಿಸಿ ಮಹೇಂದ್ರಾವರುಣಿಯನ್ನು | ಬಿಡುತದ ಶಮೆಯಗೆಯ್ದು || ೪೬೩ ||

ಪಾಶುಪತಾಸ್ತ್ರದಿಂದ | ಭೀಷ್ಮನ ಚಾಪ | ರೋಷದಿ ಕಡಿದುನಿಂದ |
ಭಾಸುರಮಾಗಿಹ ಧನುವನ್ಯ ಪಿಡಿಯಲು | ವಾಸವಾತ್ಮಜ ಮುರಿದ  || ೪೬೪ ||

ಮತ್ತನ್ಯಚಾಪವನ್ನು | ಕೊಳ್ಳುತ ಭೀಷ್ಮ | ನೆತ್ತುತ ಧ್ವನಿಗೆಯ್ದನು ||
ಪೃಥ್ವಿಪ ದ್ರುಪದನ ತನಯ ಶಿಖಂಡಿಯು | ಕತ್ತರಿಸಿದನದನು || ೪೬೫ ||

ಭಾಮಿನಿ

ನೋಡಿದನು ಕಲಿಪಾರ್ಥನುಬ್ಬಟೆ |
ಪಾಡಿದನು ಗಾಂಗೇಯ ಶಿರವೊಲೆ |
ದಾಡಿದನು ತನ್ನಾತ್ಮದೊಳು ಪ್ರಾಚೀನ ದುಷ್ಕೃತಿಯ ||
ಆಡಿ ಫಲವೇನಿನ್ನು ದೈವದ |
ಘಾಡಣೆಗಳೆಂತಿಹುದೊ ಶಿವ ಶಿವ |
ಖೋಡಿತನಕಿದಿರಿಲ್ಲ ಧರೆಯೊಳಗಖಿಳಜನ್ಮದೊಳು || ೪೬೬ ||