ಶ್ರೀಮನ್ಮಹಾಭಾರತದೊಳಗಣ

ಯಕ್ಷಗಾನ ಭೀಷ್ಮೋತ್ಪತ್ತಿ

ಶಾರ್ದೂಲವಿಕ್ರೀಡಿತಂ

ಸರ್ವೇಶಂ ಸುರಸೇವ್ಯಮಾನಚರಣಂ ದೈತ್ಯೇಭಪಂಚಾನನಂ
ಸರ್ವಾತ್ಮಂ ತ್ರಿಗುಣಾಕರಂ ಗುಣನಿಧಿಂ ಕ್ಷೀರಾಬ್ಧಿವಾಸಂ ಹರಿಂ |
ಸರ್ವಾನಂದಕಪಾರ್ಣವಂ ಹರಸಖಂ ಲಕ್ಷ್ಮೀಮನೋಹಾರಕಂ
ಸರ್ವೇಷ್ಟಾರ್ಥಫಲಪ್ರದಂ ನರಹರಿಂ ಧ್ಯಾಯಾಮಿ ಕಂಠೀರವಮ್ || || 1 ||

ರಾಗ ನಾಟಿ ಝಂಪೆತಾಳ

ಹರಿಭಾನುಶಶಿನಯನ | ಕರಿರಾಜವರವದನ |
ಸುರಮುನೀಂದ್ರಾದಿ ನುತ | ಚರಣೇಕರದನ ||
ಜಯ ಜಯತು ಜಯತು || 2 ||

ವಾರಾಹಿ ಕರಕಮಲ | ಕೀರ ಗಣಪತಿ ವಿಮಲ |
ಸಾರಸಾಂಬಕಮಿತ್ರ | ಪುತ್ರ ಶುಭಗಾತ್ರ ||
ಜಯ ಜಯತು ಜಯತು || 3 ||

ಬಾಲಾರ್ಕಸಂಕಾಶ | ಲೋಲ ಶ್ರೀವಿಘ್ನೇಶ |
ಪಾಲಿಸೈ ಸರ್ವೇಶ | ಬಾಲೇಂದುಭಾಸ ||
ಜಯ ಜಯತು ಜಯತು || 4 ||

ರಾಗ ಸುರುಟಿ ಏಕತಾಳ

ರಕ್ಷಿಸು ಜಗದಂಬೆ | ಸುಮನಸ | ಪಕ್ಷಿಣಿ ಮೂಕಾಂಬೆ ||
ಅಕ್ಷಯಾತ್ಮೆ ನಿಟಿ | ಲಾಕ್ಷಮನೋಹರೆ |
ಯಕ್ಷಮಹೋರಗ | ಪಕ್ಷಿಸದಾನುತೆ || ರಕ್ಷಿಸು || || 5 ||

ವಾರಿಜದಳನಯನೆ | ಶೈಲಜೆ | ವಾರಿಧಿಸಖವದನೆ ||
ಮಾರಿ ಮಹಂಕಾಳಿ | ಘೋರ ದೈತ್ಯಾಂತಕಿ |
ವಾರಣಾರಿಧ್ವಜೆ | ಸಾರಸಾಲಯೆ ದೇವಿ || ರಕ್ಷಿಸು || || 6 ||

ಸರಸಿಜಾಕ್ಷನಂದು | ಯೋಗದೊ | ಳಿರುತಿರೆ ಗುಣಸಿಂಧು ||
ದುರುಳರು ಕರ್ಣದೊ | ಳುದಿಸಿ ವಿರಂಚಿಯ |
ಪರಿಪರಿ ಬಾಧಿಸೆ | ಖಳರನು ತರಿದಿಹೆ || ರಕ್ಷಿಸು || || 7 ||

ಘೋರ ಮಹಿಷ ಖಳನ | ಮತ್ತಾ | ಶೂರ ಧೂಮ್ರಾಕ್ಷಕನ ||
ಕ್ರೂರಕರ್ಮರು ಚಂಡ | ಮುಂಡ ಶುಂಭಾದ್ಯರ |
ನಾರಸಿಂಹಿಯೆ ನೀ | ತರಿದೆ ಜಗನ್ಮಯೆ || ರಕ್ಷಿಸು || || 8 ||

ಭಾಮಿನಿ

ಮಾರಪಿತ ಪುರಹರ ವಿಧಾತಗೆ |
ಸಾರಸೋದ್ಭವೆ ಗಿರಿಜೆವಾಣಿಗೆ |
ನಾರದಾದಿ ಸಮಸ್ತ ಮೌನಿವ್ರಜಕೆ ತಲೆವಾಗಿ ||
ಸಾರಶುಕಪಿತಶರಧಿಯಿಂದಲಿ |
ಭಾರತಾಮತ ಜನಿಸೆ ರತಿಯಲಿ |
ಪೀರುತಿರ್ಪೀ ವಿಬುಧತತಿಗಾನೊರೆವೆ ಭಕ್ತಿಯಲಿ || 9 ||

ದ್ವಿಪದಿ

ಪರಮ ವೇದವ್ಯಾಸಮುನಿಗೆರಗಿ ನಾನು |
ಗುರು ಮಾತಪಿತಗಳಿಂಗಭಿವಂದಿಸುವೆನು  || 10 ||

ವರಕವೀಶ್ವರರಿಂಗೆ ನಮಿಸಿ ಸಂತಸದಿ |
ಅರಿತ ತೆರದೊಳು ಕತಿಯ ಗೈವೆ ಶಶಿಕುಲದಿ || 11 ||

ಅರಸನಹ ಶಂತನುಗೆ ಸತಿಯು ಜಾಹ್ನವಿಯಾ |
ತರಳ ಭೀಷ್ಮನು ಜನಿಸಿ ದಾಶಕನ್ನಿಕೆಯ || 12 ||

ಪಿತಗೆ ಲಗ್ನವ ಗೆಯ್ಯಲಾ ತರುಣಿಯೊಳಗೆ |
ಸುತರೀರ್ವರಂ ಪಡೆದ ನಪ ಹರುಷದೊಳಗೆ || 13 ||

ಜ್ಯೇಷ್ಠನಿಗೆ ಚಿತ್ರಾಂಗದಾಖ್ಯ ನಾಮವನು |
ಶ್ರೇಷ್ಠತೆಯೊಳನುಜನು ವಿಚಿತ್ರವೀರ್ಯಕನು || 14 ||

ಇನಶಶಿಗಳಂತಿರಲು ನಪನಲ್ಪ ದಿನದಿ |
ವನಕಯ್ದೆ ಸದ್ಗತಿಯ ಪಡೆಯುವರೆ ಮುದದಿ || 15 ||

ತರಳ ಚಿತ್ರಾಂಗದನು ಗಂಧರ್ವನೊಡನೆ |
ಧುರಗೈದು ಸ್ವರ್ಗಮಂ ಪೊಂದಲಾ ಕ್ಷಣವೆ || 16 ||

ಸಹಜನು ವಿಚಿತ್ರವೀರ್ಯಗೆ ಪಟ್ಟವನ್ನು |
ವಹಿಸಿರ್ದ ಗಾಂಗೇಯಚರಿತೆ ಪೇಳುವೆನು || 17 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧರಣಿಪಾಲ ಪರೀಕ್ಷಿತನು ಗಜ | ಪುರವ ಪಾಲಿಸುತಿರುವ ಕಾಲದೊ |
ಳುರಗನಿಂ ಮತಿಯಾಗೆ ಜನಮೇ | ಜಯನು ಕೇಳ್ದು || 18 ||

ತಂದೆಯನು ಮಡುಹಿರ್ದ ಕಾರಣ | ಬಂಧಿಸುತ ಸರ್ಪಗಳನಧ್ವರ |
ದಿಂದಲುರುಹಲು ಕುಷ್ಠವ್ಯಾಧಿ | ಗ್ರಸ್ತನಾಗೆ || 19 ||

ಮರುಗುತಿರೆ ಮನದೊಳಗೆ ಭೂಪತಿ | ಭರದಿ ವೈಶಂಪಾಯ ಮುನಿಪನು |
ಬರಲು ಸತ್ಕರಿಸುತ್ತ ತನ್ನಯ | ವಿಧಿಯ ನರುಹೆ || 20 ||

ಅರಸ ಕೇಳೈ ನಿಮ್ಮ ಪೂರ್ವಜ | ಧರಣಿಪಾಲರ ಕಥೆಯ ಕೇಳಲು |
ಹರಿಪುದೀ ಕಿಲ್ಬಿಷಗಳೆನ್ನುತ | ಲಾಗ ಪೇಳ್ದ || 21 ||

ವಾರ್ಧಕ

ಅರಸ ಕೇಳ್ ಸರಸಿಜಗೆ ಮಾನಸದೊಳತ್ರಿಮುನಿ |
ವರನಿಂದ ಸೋಮನುದ್ಭವಿಸಲೀತಗೆ ಬುಧನು |
ತರಳನಿವಗೆ ಪುರೂರವಾಖ್ಯನಾತ್ಮಜ ನಹುಷನುದಿಸಲಿವಗೆ ಯಯಾತಿಯ ||
ತರಳ ಪೂರುವಿನೊಳಗೆ ದುಷ್ಯಂತನುದಿಸಲಾ |
ಭರತನಿವನಾತ್ಮಜಗೆ ಸಂವರಣನೆಂಬ ಸುತ |
ಕುರುನಪನ ಪಡೆಯೆ ಸಂಯಾತಿ ಜನಿಸಿದನಿವಗೆ ಧರಣಿಪಾತ್ಮಜ ಹಸ್ತಿಯು || 22 ||

ಭಾಮಿನಿ

ಹಸ್ತಿನಪ ನಿರ್ಮಿಸಿದನಿಳೆಯೊಳು |
ಹಸ್ತಿನಾಪುರವನ್ನು ಹರುಷದಿ |
ಚಿತ್ತಜೋಪಮಸುತ ಪ್ರತಿಶ್ರವ ಜನಿಸಲೀತಂಗೆ ||
ಪೃಥ್ವಿಪತಿ ಪ್ರತಿಶ್ರವನ ಸಂಭವ |
ನುತ್ತಮಾಂಗ ಪ್ರತೀಪನೆಂಬನು |
ಪುತ್ರನಹ ಶಂತನುಗೆ ರಾಜ್ಯವನಿತ್ತು ವನಕೈಯೆ || 23 ||

ಇಳೆಯೊಳುಳ್ಳ ಸಮಸ್ತ ದೇಶಂ |
ಗಳಿಗೆ ಮಂಗಳ ಹಸ್ತಿನಾವತಿ |
ಬೆಳಗುತಿರ್ದುದು ಕೋಟಿಚಂದ್ರಮರಂತೆ ಕಣುಮನಕೆ ||
ಇಳೆಯ ಪಾಲಿಪ ರಾಯರೊಳಗ |
ಗ್ಗಳನಲಾ ಶಂತನುನಪಾಲಕ |
ನೆಲೆ ಕ್ಷಿತಿಪ ಕೇಳೊಂದು ದಿನ ಓಲಗಕೆ ನಡೆತಂದ || 24 ||

ರಾಗ ಕೇದಾರಗೌಳ ಅಷ್ಟತಾಳ

ಶಂತನುಚಕ್ರವರ್ತಿಗೆ ಪೊಡಮಟ್ಟು ಸಾ | ಮಂತರಾಯರು ಮುದದಿ ||
ನಿಂತಿರೆ ಸಚಿವ ಸುನೀತಿಯೊಳೆಂದ ಭೂ | ಕಾಂತನು ತೋಷದಲಿ || 25 ||

ಇರುವೆನು ಸಕಲಸಂಪತ್ತಿನ ಭೋಗದಿ | ವರಚಕ್ರವರ್ತಿಯೆಂದು ||
ಪರಮ ಶೌರ್ಯದಿ ದಿಗ್ದೇಶವ ಗೆಲಿದನು | ನರಹರಿ ಕಪೆಯೊಳಗೆ || 26 ||

ಪೃಥ್ವಿಯೊಳಾವ ರಾಜನು ಪ್ರಜೆಗಳ ಕೈಯ | ಕಿತ್ತು ಸಂಪತ್ತುಗಳ ||
ಮತ್ತವರಿಗೆ ಚಿಂತೆಯಿಲ್ಲದ ಸೌಖ್ಯವ | ನಿತ್ತು ಸಂರಕ್ಷಿಸದೆ || 27 ||

ಹರುಷದೊಳ್ತನ್ನ ಭೋಗದೊಳ್ಮನವೆಳಸುವ | ದುರುಳ ನಪಾಲನಿಗೆ ||
ಧರೆಯೊಳು ಪ್ರಜೆಯ ದ್ರವ್ಯಾಪಹಾರಕ ಚೋರ | ವರನೆಂದು ಕರೆವರಯ್ಯ || 28 ||

ವಾರ್ಧಕ

ಧರಣಿಯೊಳಗಾ ತಪೋಜ್ವಾಲೆಯಂ ಶಮಿಸುವರೆ |
ಕರದಿ ಛತ್ರವ ಧರಿಪ ಮತಿಯುತರ ತೆರನಂತೆ |
ಪರಿಜನರ ತಾಪವನ್ನುಳಿದು ಸುಪ್ರೇಮದಿಂ ಪೊರೆವನುತ್ತಮ ಭೂಪನು ||
ವರಸಚಿವ ಕೇಳ್ ವನದಿ ತಾಪಸರ ತಪಕೀಗ |
ನಿರುಪದ್ರದಿಂದಹುದೆ ಪರಿಜನರು ಕುಶಲಿಗಳೆ |
ಧರೆ ಸಕಾಲದ ವಷ್ಟಿಯಿಂದ ಬೆಳೆ ಪೆರ್ಚಿಹುದೆ ಒರೆಯೆನಲ್ಕವನೆಂದನು || 29 ||

ರಾಗ ಮಧುಮಾಧವಿ ತ್ರಿವುಡೆತಾಳ

ದೊರೆಯೆ ಕೇಳ್ ನಿನ್ನಾಜ್ಞೆಯಿಂದಲಿ | ಧರೆಯೊಳೆಲ್ಲವು ಸುಖದೊಳಿರ್ಪುದು |
ಒರೆಯಲಸದಳ ನಿನ್ನ ದರ್ಪವ | ನುರಗಸಂಕುಲಧೀಶಗೆ || 30 ||

ನೀನು ವಾರ್ಧಿಕ್ಯವನು ಪೊಂದಿಹ | ಪ್ರಾಣಿಗಳ ಸ್ಪರ್ಶಿಸಿದಮಾತ್ರಕೆ |
ಮೇಣು ಯೌವನ ಧರಿಪ ಕಾರಣ | ಕ್ಷೋಣಿಯೊಳಗೇ ನಿನ್ನನು || 31 ||

ಕರೆಯುವರು ನಾಮದಲಿ ಶಂತನು | ಧರಣಿಪತಿ ದುಷ್ಯಂತ ಭರತರ |
ತೆರದೊಳೇಕಚ್ಛತ್ರ ಪರಿಯಾ | ಗಿರಲು ಕ್ಷೋಭೆಗಳೇನಿದೆ || 32 ||

ಪರಮ ಶೌರ್ಯೋದಾರ ಸದ್ಗುಣ | ಸಿರಿಯ ಭೋಗಗಳಿಂಗೆ ಮೆರೆಯುವ |
ತರುಣಿಯನು ಸ್ವೀಕರಿಸದಿರ್ಪುದ | ನರುಹೆನಲ್ಕಿಂತೆಂದನು || 33 ||

ಭಾಮಿನಿ

ಒರೆದ ಮತ್ಪಿತನೆನಗೆ ಪೂರ್ವದಿ |
ತರುಣಿಯೋರ್ವಳು ಕೆಲವು ದಿನದೊಳು |
ತ್ವರಿತದಿಂದೈತಹಳು ನಿನ್ನೆಡೆಗವಳ ತಾನಾಗಿ ||
ವರಿಸು ಕುಲ ನಾಮವನು ಕೇಳದೆ |
ತರುಣಿಯೊಳು ಸಂತತಿಗಳಹುದೆನು |
ತೊರೆದು ನಡೆದನು ವನಕೆ ಕೇಳೈ ಮಂತ್ರಿಶೇಖರನೆ || 34 ||

ಕಂದ

ಇಂತೀಪರಿಯೊಳು ದೊರಕಿಪ |
ಸುಂದರ ತರುಣೀಮಣಿರತಿಸುಖ ಕಾಂ ಬಯಸಿರ್ಪೆ ||
ನೆಂದುಸಿರಲ್ ವನಚರರೈ |
ತಂದು ಧರಣಿಪಗೆರಗಿ ಬೆಸಸಿದರೀಪರಿಯಿಂ || 35 ||

ರಾಗ ಮುಖಾರಿ ಆದಿತಾಳ

ಕರಿಪುರಧೀಶ ಸಲಾಂ ಸಾಮಿ | ಸಜ್ಜನಪ್ರೇಮಿ |
ಕರಿಪುರಧೀಶ ಸಲಾಂ ಸಾಮಿ || ಪ ||

ದುರುಳಮಗಗಳೆಲ್ಲ ಬಂದು | ವನದೊಳಗಿಂದು |
ಮೆರೆಯುತ್ತ ಮನಕೆ ಬಂದಂತಿಂದು ||
ಕರಡಿ ಶಾರ್ದೂಲವು ಕೇಸರಿ ಖಡ್ಗಿಯು |
ತರುಚರಮುಂಗುಸಿ ಮಶಕಶಶಂಗಳು |
ಶರಭ ಚಮರಿ ಕಾಳ್ಬೆಕ್ಕುಗಳ್ಮೂಷಕ |
ವರಹ ಹರಿಣ ಗಜ ಜಂಬುಕನಿವಹವು || ಕರಿಪುರ || 36 ||

ಕಲಹಂಸಚಕ್ರವಾಕಾದಿಗಳು | ತಿತ್ತಿರಿ ಗಧ್ರ |
ಜಲಕಾಕಬಕ ಮಯೂರಗಳು ||
ಬಲಿಪುಷ್ಪವು ಕಲವಿಂಕದಿವಾಂಧವು |
ನಲಿವುತಲಿಹ ಪಾರಾವತ ಗೊರವಕ |
ಕಲಕಲರವ ಶುಕಪಿಕಕಾರಂಡವು |
ಕುಲಗಿರಿಯಂದದ ಭೇರುಂಡಗಳು || ಕರಿಪುರ || 37 ||

ಹರುಷದಿ ಕದಳೀವನಕೆ ಬಂದು | ಕುಣಿಯುತ್ತಲಿಂದು |
ಮುರಿದೆಲ್ಲ ತಾವ್ ತಿಂದವಿಂದು ||
ಸುರಗಿ ಬದರಿವರತಾಲತಮಾಲವ |
ಪರಿಪರಿ ಚೂತವ ಪನಸ ಮಂದಾರವ |
ಗಿರಿಕರ್ಣಿಕ ಜಂಬೀರ ಕಪಿತ್ಥವ |
ಸರಭಸದಿಂದಲೆ ನಾಶವಗೈದವು || ಕರಿಪುರ || 38 ||

ಮುಲ್ಲೆ ಸಂಪಿಗೆ ಸೇವಂತಿಕೆಯು | ಇರವಂತಿ ಜಾಜಿ |
ಬಿಲ್ವ ಕೇತಕಿ ಗೋರಂಟಿಗೆಯು ||
ಚೆಲ್ವ ಪುನ್ನಾಗವು ಬಕುಳ ಕಮಲ ಸಂ |
ಪುಲ್ಲಕುಮುದ ವರ ಮಲ್ಲಿಕಾದಿ ಸುಮ |
ಝಲ್ಲಿಝಲ್ಲಿಗಳ್ ಮುರಿದಿಕ್ಕುತ |
ಉಲ್ಲಾಸದಿ ಕುಣಿಕುಣಿದಾರ್ಬಟಿಪವು || ಕರಿಪುರ || 39 ||

ರಾಗ ಕೇದಾರಗೌಳ ಝಂಪೆತಾಳ

ವನಪಾಲನೆಂದ ನುಡಿಗೆ | ಪೇಳಿದನು | ಜನಪಾಲನಾಮಾತ್ಯಗೆ ||
ಘನವೇಗ ಕೈರಾತರ | ಮಗಬೇಟೆ | ಗೆನುತ ಕರೆಸೆನೆ ಭೂವರ || 40 ||

ಚಾರರಿಂ ಕರೆಸಲಾಗ | ತಮ್ಮ ಪರಿ | ವಾರದಿಂ ಬಂದು ಬೇಗ ||
ವೀರಮಣಿ ಎಂಬ ಶಬರ | ಪದಕೆರಗೆ | ಭೂರಿತೋಷದಿ ಭೂವರ || 41 ||

ಎಲೆ ಕಿರಾತೇಶ ಕೇಳು | ವನಗಳೊಳು | ಸಲುಗೆಯಿಂದಲಿ ಮಗಗಳು ||
ನೆಲಸಿಹುದನರಿತು ಈಗ | ಬೇಂಟೆಮನ | ವೆಳಸಿರ್ಪೆನೆನ್ನಲಾಗ || 42 ||

ರಾಗ ಮಾರವಿ ಏಕತಾಳ

ಅರಿಕೆಯ ಮಾಳ್ಪೆವು ಜೀಯ ಕಿರಾತರ |
ಪರಿವಾರಕೆ ಬಲ್ ಮೋಜಿನಲಿ ||
ದೊರಕದೆ ಮಾಂಸಾಹಾರವು ಬಹುದಿನ |
ತೆರಳಿತು ನಾವತಿ ಚಿಂತೆಯಲಿ || 43 ||

ಮರುಳುಗಳಂದದಿ ಚರಿಸುವ ನಮ್ಮಾ |
ಹುರಿಮಾಸೆಯ ಸಿಪಾಯಿಬಲವು ||
ದೊರೆ ನಿನ್ನಪ್ಪಣೆ ಹಾರೈಸುತಲಿದೆ |
ತ್ವರಿತದಿ ಪೋಪರೆ ಬಂದಿಹೆವು || 44 ||

ಕಿರಿ ಕರಿ ಖಡ್ಗಿಯ ತರಿತರಿದೆಲ್ಲವ |
ಮರಿ ಮರಿ ನಾಯ್ಗಳ ಛೂಬಿಡುತ ||
ಸರಳು ಕಠಾರಿಯ ಕುಂತದೊಳೆಸೆವುತ |
ಬರುವೆವು ಬಲೆಗಳ ಸಂಗಾತ || 45 ||

ಭಾಮಿನಿ

ವೀರಮಣಿಯಿಂತೆನಲು ಭೂಪತಿ |
ಭೂರಿತೋಷವ ತಾಳ್ದು ಬೇಂಟೆಗೆ |
ಸಾರುವರೆ ವೀಳೆಯವನಿತ್ತುಪಚರಿಸಿ ವೈಭವದಿ ||
ವಾರಣಾಶ್ವಾರೋಹಕರ ಪರಿ |
ವಾರದಿಂ ಭೂಮಾಶನಾಕ್ಷಣ |
ಭೇರಿ ಕಹಳಾರವದಿ ಕಾನನದೆಡೆಗೆ ನಡೆತಂದ || 46 ||

ರಾಗ ಸೌರಾಷ್ಟ್ರ ಮಟ್ಟೆತಾಳ

ನಡೆದನಂದು ಬೇಟೆಯಾಡುತ್ತ | ಪಡೆಯ ತರುಬಿ ಶಂತನಪನು |
ನಡೆದನಂದು ಬೇಟೆಯಾಡುತ || ಪ ||

ಕುತ್ತುರೊಳಗೆ ಪೊಗುತಲರಸುತ | ಶಬರ ವಿತತಿ |
ಕತ್ತಿಗಳನು ತಿರುಹಿ ತೂಗುತ ||
ಮತ್ತಗಜವ ತಿವಿದು ಕೆಡಹಿ | ಸುತ್ತ ಬಲೆಯನೊಡ್ಡಿ ವರಹ |
ನೆತ್ತಿಗಳನು ಬಗಿದು ಉ | ನ್ಮತ್ತ ವ್ಯಾಘ್ರಗಳನು | ಕೊಲುತ | ನಡೆದ || 47 ||

ಕರಡಿ ಸಿಂಗ ಚಮರಿ ಖಡ್ಗಿಯ | ತರಿದು ಕೆಡಹಿ |
ಸೆರೆಯ ಪಿಡಿದು ಬರ್ಹಿಕ್ರೌಂಚವ ||
ಮೆರೆವ ಪಾರ್ವಾಣ ಗಧ್ರ | ಗೊರವ ಕಾದಿ ಪಕ್ಷಿಗಳನು |
ಶರವನೆಸೆದು ಧರೆಗೆ ಕೆಡಹಿ | ಹರುಷದಿಂದ ಮೆರೆವು ತಿರಲು || ನಡೆದ  || 48 ||

ತುರಗವೇರಿ ಹರಿಣಯುಗ್ಮವ | ಬೆರಸಿ ನಪನು |
ತೆರಳುತಾಗ ಶಬರಸೈನ್ಯವ ||
ತೊರೆದು ಓರ್ವ ನಡೆದು ಮುಂದೆ | ತರಣಿಕಿರಣದಿಂದ ಬಳಲಿ |
ಸುರನದಿಯ ದಡದಿ ಬಂದು | ಧರಣಿಪಾಲ ಕುಳಿತುಕೊಳಲು || ನಡೆದ || 49 ||

ಭಾಮಿನಿ

ಶಂತನಪ ಜಾಹ್ನವಿಯ ತಡಿಯೊಳ |
ಗಿಂತು ವಿಶ್ರಮಿಸುತ್ತಲಿರಲಾ |
ನಂತರದಿ ಕೈರಾತಸೇನೆಗಳರಸುತೀತನನು ||
ಸಂತಸದೊಳೈತರಲಿಕಾ ಮಣಿ |
ಮಂತನೆಂಬನು ಮಾಲತೀವಿಪಿ |
ನಾಂತರದಿ ನೆಲೆಗೊಂಡ ಶಬರನು ಬಲಗಳೊಡಗೂಡಿ || 50 ||

ವಾರ್ಧಕ

ಪರಮವಿಕ್ರಮಿ ಬೇಂಟೆಯಾಡುತೈತರಲಾಗ |
ಸರಭಸದಿ ಗುರ್ಗುರು ಧ್ವನಿಗೊಡುತಲೆದುರಿನೊಳ್ |
ಬರುತಿರ್ಪ ವರಹನಂ ಕಾಣುತಲಿ ಮಣಿಮಂತ ಗುರಿಯಿಂದ ಶರವೆಸೆಯಲು ||
ಶರಹತಿಯೊಳ್ ಸೂಸುತಿಹ ರಕ್ತಧಾರೆಗಳಿಂದ |
ಧರೆಯ ಕೋರ್ದಾಡೆಯಿಂ ಕೆದರಿ ುಟನೆಗೆವುತಿರೆ |
ಪರಿಕಿಸುತ ಶಬರಪತಿ ವೀರಮಣಿಯೊಂದಲಗ ಶಿರಕಿಡಲ್ಕಿಳೆಗುರುಳಿತು || 51 ||

ರಾಗ ಘಂಟಾರವ ಏಕತಾಳ

ಏಟುಗಾರ ಸಿಪಾಯಿ ನಾ ಮಣಿಮಂತ |
ಬೇಟೆಯೊಳು ಸೋವಿಹುದ ನೀ ಪುಂ | ಡಾಟದಿಂದಲೆ ಪೊಯ್ದೆಯ || 52 ||

ಯಾರು ನಿನ್ನಯ ನಾಮವೇನೆಲೊ ಹೊಂತ |
ಕಾರಿಯೆ ಕೈರಾತವಂಶಬಿ | ಕಾರಿ ನೀನೆಲ್ಲಿರ್ಪುದು || 53 ||

ಮಾರಿ ನಿನ್ನಯ ಹತಿಗೆ ತಪ್ಪುತ ಮುಂದೆ |
ಸಾರುತಿಹುದನು ಪೊಯ್ದ ವಿಕ್ರಮ | ವೀರಮಣಿ ನಾ ನೋಡೆಲೊ || 54 ||

ತೆರಳು ಸುಮ್ಮನೆ ಮುಟ್ಟದಿರೆಲೊ ನೀಚ |
ಶಿರದೊಳೆನ್ನಯ ಶರವಿಘಾತದಿ | ಧರಣಿಯೊಳು ಬಿದ್ದಿರ್ಪುದು || 55 ||

ರಾಗ ನಾದನಾಮಕ್ರಿಯೆ ಅಷ್ಟತಾಳ

ನುಡಿಯ ಕೇಳುತ ಮಣಿಮಂತನು | ಪ |

ಲ್ಗಡಿದು ಹೂಂಕರಿಸುತ್ತಲೆಂದನು ||
ಅರರೆ ನಾ ಸೋವಿರ್ಪ ಹಂದಿಯ | ಧರೆ |
ಗುರುಳಿಸಿ ಶೌರ್ಯದಿ ಮೆರೆವೆಯ || 56 ||

ಅಟವಿಯ ಮಗವನ್ನೆ ಕೊಲ್ಲಲು | ಪರ |
ರಟಕಗಳೇನಿದೆ ನೀ ಪೇಳು |
ನಿಟಿಲಾಕ್ಷನುಗ್ರಹದಿಂ ಕೇಳ್ಮ್ಯಾ | ಸಂ |
ಘಟಿಸಿದ ಹಂದಿಯ ಬಿಡೆ ಕಾಣ್ಮ್ಯಾ || 57 ||

ಎಲೆ ನೀಚ ನೀನ್ಯಾವ ಕುಲದೊಳು | ಪುಟ್ಟಿ |
ನೆಲಸಿಹ ಠಾವ್ಯಾವುದೈ ಪೇಳು ||
ನಳಿನಭವಾದ್ಯರಿಗಂಜೆನು | ನಿನ್ನ |
ಛಲಗಳೆನ್ನಿದಿರೊಳ ಗ್ಯಾಕಿನ್ನು || 58 ||

ಸೆಣಸಲು ಬಂದ ಸಾಹಸಿಗನು | ನಾಮ |
ಗುಣಗಳ ತಿಳಿಯುವದ್ಯಾಕಿನ್ನು |
ಕೆಣಕಿ ನೋಡ್ ಕೈರಾತಪತಿ ನಾನು | ವೀರ |
ಮಣಿ ಕರಿಪುರನೆಲೆವಾಸನು || 59 ||

ಲಾವಣಿ

ಹೊಂತಕಾರಿಯಹುದೊ ಭಳಿರೆ | ಪಂಥ ತೋರು ತೋರೈ ||
ಕಂತು ಹರಗೆ ಬೆದರೆ ನಾ ಮಣಿ | ಮಂತ ಶೂರ ಕಾಣೈ || 60 ||

ಶೂರನೆಂಬ ಪರಿಯ ಬಾಯೊಳ್ | ತೋರಬೇಡ ಕಾಣ್ಮ್ಯಾ ||
ವೀರಮಣಿಯ ಸಹಸ ರಣಕೆ | ಮಾರಾಂತೀಗ ನೋಡ್ಮ್ಯಾ || 61 ||

ಬಿಲ್ಲ ಪಿಡಿ ನೀ ಮಲ್ಲ ಸಹಸಿ | ಸಳ್ಳು ಬಿಡು ಬಿಡು ಬೇಗ ||
ಖುಲ್ಲ ನಿನ್ನ ಕಳ್ಳನುಗಿವೆ | ನಿಲ್ಲೆಂದೆಚ್ಚನಾಗ || 62 ||

ವೀರಮಣಿಯು ಶೂರತನದಿ | ಭೂರಿಕೋಪದಿಂದ ||
ಕ್ರೂರಶರವ ಮುರಿದು ಪೌರುಷ | ತೋರು ತೋರೀಗೆಂದ || 63 ||

ರಾಗ ಶಂಕರಾಭರಣ ಮಟ್ಟೆತಾಳ

ಅರರೆ ಧೂರ್ತ ನಿನ್ನ ಶಿರವ | ನರಿದು ಮೆರೆವೆ ನೋಡೆನುತ್ತ |
ಶರವ ನೊಂದನೆಸೆದ ವೀರ | ಮಣಿಗೆ ರೋಷದಿ || 64 ||

ಬರುವ ಶರವ ಕಡಿದು ವೀರ | ಮಣಿಯು ಪೇಳ್ದನೆಲವೊ ನಿನಗೆ |
ಸರಿಯ ಕಾಣೆ ಬಿಡು ಬಿಡಸ್ತ್ರ | ವೆನುತ ನಿಂದನು || 65 ||

ಮಂದಮತಿಯೆ ಹುಲ್ಲುಶರವ | ನೊಂದ ಮುರಿದೆನೆಂಬ ಗರ್ವ |
ದಂಡಗೆಡಿಪೆನೆನುತ ಕ್ರೂರ | ಶರವನೆಚ್ಚನು || 66 ||

ಅಗಡುತನ ಸಿಪಾಯಿಯಹುದೊ | ಬಗೆಯ ತೋರ್ಪೆನೆನುತ ಮುರಿದು |
ನಗುತ ವೀರಮಣಿಯು ಬಿಟ್ಟ | ನಗಣಿತಾಸ್ತ್ರವ || 67 ||

ರಾಗ ಭೈರವಿ ಏಕತಾಳ

ಮಲ್ಲಯುದ್ಧಕೆ ಮಣಿಮಂತ | ಗೆಲ | ವಿಲ್ಲೆನುತಲೆ ಬಲವಂತ ||
ಚಲ್ಲಣಕಾಶೆಯ ಬಿಗಿದು | ಬರ | ಲುಲ್ಲಾಸದಿ ಮೇಲ್ವಾಯ್ದು || 68 ||

ವೀರಮಣಿಯು ಹೂಂಕರಿಸಿ | ಖತಿ | ಯೇರುತ ಬಂದಾ ಸಹಸಿ ||
ಶೂರನಶಿರ ಬಿಗಿಹಿಡಿದ | ನಭ | ಕೇರಿಸಿ ಭುವನಕೆ ಬಡಿದ || 69 ||