ವಾರ್ಧಕ

ಯಾರು ನೀವೆನಲಷ್ಟವಸುಗಳಾವ್ ಮಾತೆ ಕೇಳ್ |
ಕ್ರೂರತನಕೆ ವಸಿಷ್ಠಮುನಿರಾಯ ಶಪಿಸಿದಂ |
ಸಾರುವೆವು ನರರಾಗಿ ಜನಿಸುವರೆ ಕಾರುಣ್ಯ ವಾರಿಧಿಯೆ ನಿನ್ನುದರದಿ ||
ಪಾರಮಾರ್ಥಕವಿಡದೆ ಪುಟ್ಟಿದೇಳ್ಮಂದಿ ಸಂ |
ಹಾರ ಗೈಯಲ್ಕಡೆಯ ಮಗನೋರ್ವ ಬಹುಕಾಲ |
ಶೂರನಾಗಿರುತಿರ್ಪನೆಂದುಸಿರಿದಂದದೊಳಗೇಳ್ಮಕ್ಕಳಂ ಕೊಂದೆನು || 137 ||

ರಾಗ ಕೇದಾರಗೌಳ ಝಂಪೆತಾಳ

ಎರೆಯ ಲಾಲಿಸು ನುಡಿಯನು | ಎಂಟನೆಯ |
ತರಳನೀತನು ಸುಗುಣನು ||
ಚಿರಕಾಲ ಬಾಳಿರ್ಪನು | ನಿನ್ನ ಕುಲ |
ಪರಮಪಾವನಗೈವನು || 138 ||

ಗಂಗೆಯಿಂ ಜನಿಸಿದಿವಗೆ | ಪೆಸರು ಕೇಳ್ |
ಗಾಂಗೇಯ ಧಾತ್ರಿಯೊಳಗೆ ||
ತುಂಗವಿಕ್ರಮಿ ಛಲದೊಳು | ದೇವತೆಗ |
ಳಿಂಗೆ ಸಮಸತ್ತ್ವ ಕೇಳು  || 139 ||

ಭೂವರೇಣ್ಯನೆ ಸುಗುಣನ | ಕರೆಯುವದು |
ದೇವವ್ರತೆಂಬೀತನ ||
ಕಾವನೈ ಹರಿ ಕರುಣದಿ | ಸಲಹೆನ್ನ |
ಠಾವಿಗಾಂ ಪೋಪೆ ಭರದಿ || 140 ||

ಕಳುಹು ಮುಂದೆನ್ನ ಬಳಿಗೆ | ವಿದ್ಯೆಗಳ |
ಕಲಿಸುವೆನು ನಾನೀತಗೆ ||
ಇಳೆಯರಸ ಕೇಳಿಂದಿಗೆ | ವಿಧಿಶಾಪ |
ಕಳೆದುದೈ ಪೋಪ ನನಗೆ  || 141 ||

ಪಾಲಿಸಪ್ಪಣೆ ಎನ್ನುತ | ಜಹ್ನುಋಷಿ |
ಬಾಲಕಿಯು ವಂದಿಸುತ್ತ ||
ಭೂಲಲಾಮನ ತೊರೆಯುತ | ೊರಮಟ್ಟು |
ಶೀಲೆ ತಾ ಪೋಗಲಿತ್ತ || 142 ||

ರಾಗ ಸಾಂಗತ್ಯ ರೂಕತಾಳ

ಸುರತರಂಗಿಣಿಯನ್ನು ತೊರೆದು ಭೂವರನಾಗ |
ಸ್ಮರಹತಿಗಳುಕಿ ಚಿಂತಿಸುತ ||
ತರಣಿಮಂಡಲವೀಚಿಯಂತೆ ಶೋಭಿಸುತಿರ್ಪ |
ತರಳನನೆತ್ತಿ ಮುದ್ದಿಸುತ || 143 ||

ಕುರುಕುಲಾಂಬುಧಿಚಂದ್ರಮನ ಸಲಹುತ ಭೂಪ |
ನಿರೆ ನಾಲ್ಕೆಂಟಬ್ದಗಳಾಗೆ ||
ತರಳಂಗೆ ಚೌಲೋಪನಯನವ ವಿರಚಿಸಿ |
ಹರುಷದೊಳಿರಲೊಂದು ದಿವಸ || 144 ||

ಭರದಿಂದ ಗಾಲವಋಷಿವರ್ಯ ದುಗುಡದಿ |
ಭರಿತ ಶಿಷ್ಯರ ಮೊತ್ತದಿಂದ ||
ಸುರಿವಶ್ರುಜಲಗಳನೊರೆಸುತೈತರೆ ಭೂಪ |
ಪರಮಾಶ್ಚರ್ಯವ ತಾಳಿ ಮನದಿ || 145 ||

ರಾಗ ತೋಡಿ ಅಷ್ಟತಾಳ

ಮುನಿವರೇಣ್ಯನ ಬರವ ಕಾಣುತ | ಜನಪ ವೇಗದೊಳೆದ್ದು ವಂದಿಸಿ |
ವಿನಯದಿಂ ಪೂಜಿಸುತ ಕುಳ್ಳಿರಿಸಿ ||
ವನಜಸಖಲಾವಣ್ಯ ವದನದಿ | ಘನ ತರದ ಚಿಂತೆಗಳು ತೋರ್ಪುದು |
ಮನದೊಳದ ವಂಚಿಸದೆ ಪೇಳುವದು || 146 ||

ಮಾನನಿಧಿಗಳೆ ತಪಕೆ ವಿಘ್ನವೊ | ನ್ಯೂನತೆಗಳೇ ಯಜ್ಞ ಹೋಮಕೆ |
ಹಾನಿ ಬಂದುದೊ ದೇವತಾರ್ಚನೆಗೆ ||
ಜ್ಞಾನಿಗಳಿಗಿವು ಮಿಕ್ಕ ಕೊರತೆಗ | ಳೇನು ಕಾಣೆನು ಪೇಳಿ ನಿಮ್ಮಾ |
ಧೀನದೊಳಗಿಹ ಚರಣಸೇವಕಗೆ  || 147 ||

ಕ್ಷಿತಿಪನಿಂತೆನೆ ಕೇಳುತಲಿ ಮುನಿ | ಪತಿಯು ಗಾಲವನೆಂದನಮ್ಮಯ |
ವ್ಯಥೆಯ ಪರಿಹರಿಪಾತ ನೀನೆಂದು ||
ಅತಿ ತ್ವರೆಯೊಳೈತಂದೆವಿಲ್ಲಿಗೆ | ಸತತ ಜಪತಪ ಸ್ನಾನ ಹೋಮಕೆ |
ಹಿತವನಾಚರಿಸುವನೆ ಕೇಳೀಗ || 148 ||

ರಾಗ ಕಾಪಿ ಅಷ್ಟತಾಳ

ಕರುಣದಿ ಲಾಲಿಸು ನೀನು | ನಪ |
ವರನೆ ಚಿಂತೆಯನು ಪೇಳುವೆನು ||
ದುರುಳನು ಕ್ರೌಂಚಾರಣ್ಯೊಳಿರುತಿಹ |
ಪರಮ ಪಾಪಿಯು ವಜ್ರಕೇತು ದೈತ್ಯನಿಗೆ || 149 ||

ಪುಟ್ಟಿದಸುರನೋರ್ವನಿಹನು | ಆ |
ದುಷ್ಟನ ಪೆಸರ ಕೇಳ್ ನೀನು ||
ಸಷ್ಟಿಯೊಳವಗೆ ತಮಾಲಕೇತೆಂಬರು |
ಭ್ರಷ್ಟನಟ್ಟುಳಿಯ ನಾ ಪೇಳಲಾರೆನು ಭೂಪ || 150 ||

ಹೋಮವ ಗೈದಾಜ್ಯಾಹುತಿಯ | ನಾವ್ |
ಪ್ರೇಮದೊಳೆಸಗಿದ ಸ್ಥಿತಿಯ ||
ಧೂಮಗಂಧದೊಳಾತ ತಿಳಿದೆಜ್ಞ ಕುಂಡಕೆ |
ಭೂಮಿಭಾರಕ ಮೂತ್ರ ಸುರಿಸಿ ತಾ ನಲಿಯುವ || 151 ||

ಹರಿದುರೆ ಕಷ್ಣಾಜಿನವನು | ನಮ್ಮ |
ಕೊರಳ ಯಜ್ಞೋಪವೀತವನು ||
ಹರಿವನು ಕೌಪೀನ ಕಾವಿ ಮುಂತಾದುದ |
ಮುರಿವನು ದಂಡಕಮಂಡಲ ಒಡೆವನು || 152 ||

ಹವಿಗಾಗಿ ರಚಿಸಿದ ಚರುವ | ದಾ |
ನವನು ತುಪ್ಪದ ಕೊಡ ಕೊಡವ ||
ತವಕದಿ ಸುರಿದು ಮುದ್ದೆಯ ಕಟ್ಟಿ ನುಂಗುವ |
ಭುವನೇಶ ನಮ್ಮಯ ಕಷ್ಟವೇನೆಂಬೆನು || 153 ||

ಭಾಮಿನಿ

ಪೃಥ್ವಿಪತಿ ಕೇಳವಗೆ ಶಾಪವ |
ನಿತ್ತರೆಮ್ಮಯ ತಪದ ಫಲಗಳು |
ವ್ಯರ್ಥವಹುದೆಂದೆನುತ ನಿನ್ನೆಡೆಗೀಗ ಬಂದಿಹೆವು ||
ಕತ್ತರಿಸು ನೀನವನ ಶಿರವನು |
ಚಿತ್ತವಿಸು ನಮ್ಮೊಡನೆ ನರಪತಿ |
ಸತ್ಯಸಂಧನೆ ಕರುಣಿಸೆನಲಿಂತೆಂದ ಮುನಿಗಳಿಗೆ || 154 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ತಾಳಿ ಸೈರಣೆ ಮುನಿವರೇಣ್ಯರೆ |
ನಾಳಿನುದಯದಿ ಬಹೆನು ದೈತ್ಯನ |
ಕಾಲನೆಡೆಗೈದಿಸುವೆ ಭಯ ಬೇ | ಡಿನ್ನು ನಿಮಗೆ || 155 ||

ಚರುಪುರೋಡಾಶಾದಿ ಸಂಗ್ರಹ |
ವೆರೆದು ಹೋಮವನೆಸಗುತಿರ್ಪುದು |
ದುರುಳ ಬಹನದ ನೋಡಿ ವಿಭವದಿ | ಕೊರಳನರಿವೆ || 156 ||

ನಡಿರಿ ನಡಿರೆಂದೆನುತಲೊಂದಿಸಿ |
ಸಡಗರದಿ ಕಳುಹುತ್ತ ಮುನಿಪರ |
ಪೊಡವಿಪತಿ ಯೋಚಿಸಿದ ತನ್ನಯ | ಸುತನ ನೋಡಿ || 157 ||

ಪರಶುಧಾರಿಯೊಳಿವಗೆ ವಿದ್ಯವ |
ಕರುಣಿಸುವ ತೆರ ಮಾಳ್ಪೆನೆನ್ನುತ |
ಸುರತರಂಗಿಣಿ ಪೇಳ್ದಳೀಗಳೆ | ಕಳುಹೆ ಲೇಸು || 158 ||

ರಾಗ ಕೇದಾರಗೌಳ ಝಂಪೆತಾಳ

ಕರೆಸಿ ಭೂಸುರನೋರ್ವನ | ಪೇಳ್ದ ನಪ | ತೆರಳು ಬಾಲಕನೀತನ ||
ಸುರನದಿಯೊಳಿತ್ತು ಮುದದಿ | ವಿದ್ಯೆಗಳ | ನರುಹಿಸಲು ಪೇಳು ದಯದಿ || 159 ||

ಧರಣಿಸುರನೊಡನೆನ್ನುತ | ಪೊರಮಟ್ಟು | ತರಳನನು ಬಿಗಿದಪ್ಪುತ ||
ಶಿರವನಾಘ್ರಾಣಿಸುತಲಿ | ಭೂಮಿಪತಿ | ತೆರಳಿಸಿದನು ತ್ವರೆಯಲಿ || 160 ||

ಸತಿಸುತರನಗಲಿ ನಪನು | ಯಾಮಿನಿಯ | ನತಿವಿರಾಗದಿ ಕಳೆದನು ||
ಶತಪತ್ರಸಖನುದಯದಿ | ಮಜ್ಜನವ | ನತಿಶಯದೊಳೆಸಗಿ ಭರದಿ || 161 ||

ವಿರಚಿಸುತಲಾಹ್ನಿಕವನು | ಧನುಶರವ | ಧರಿಸುತರಮನೆ ಪೊರಟನು ||
ತುರಗವಡರುತ ಮುನಿಪರ | ಸನ್ನಿಧಿಗೆ | ತೆರಳಿ ವಂದಿಸಿ ಭೂವರ || 162 ||

ವಾರ್ಧಕ

ಪರಮ ಋತ್ವಿಜಶೋಭ್ಯ ಕುಂಡತ್ರಯಂಗಳೊಳ್ |
ಹರಿಯ ದೇದೀಪ್ಯದಿಂ ಜ್ವಲಿಸಿ ವಿಧಿಪೂರ್ವಕದಿ |
ವಿರಚಿಸಿರಿ ಹೋಮಗಳನೆನುತ ಮುನಿಪರ ಕಳುಹಿ ದ್ವಾರದೊಳಗಿರೆ ಭೂಪನು ||
ಉರಿಯೊಳಾಜ್ಯಾಹುತಿಯ ಗೈಯುತಿರಲನ್ನೆಗಂ |
ಪರಿಮಳವ ಪಿಡಿದಸುರ ಭೋಯೆಂದು ಬರುತಿರಲ್ |
ದುರುಳ ನಿಲ್ಲೆಂದೆನುತ ಶಂತನಪ ತಡೆಯಲ್ಕೆ ಹೂಂಕರಿಸಿ ಖಳನೆಂದನು || 163 ||

ರಾಗ ನಾದನಾಮಕ್ರಿಯೆ ಅಷ್ಟತಾಳ

ಎಲೆಲೆ ನರಾಧಮನ್ಯಾರೆಲೊ | ಎನ್ನ |
ಬಲೆಗೆ ಸಿಕ್ಕಿಹೆ ತಿಂಬೆ ನೋಡೆಲೊ ||
ಮಲೆತು ಎನ್ನಿದಿರೊಳು ನಿಲ್ಲುವ | ಕಡು |
ಛಲಗಳ ತೋರಿಸು ನೋಡುವ || 164 ||

ಕಡು ಪಾಪಿ ನಿನ್ನಂಥ ಮೂರ್ಖರ | ಸದೆ |
ಬಡಿವಾ ಶಂತನುವೆಂಬ ಭೂವರ ||
ಕೊಡು ಯುದ್ಧವೆನ್ನೊಡನೀಗಳು | ಬಾಯ್ |
ಬಡಿಕನ್ಯಾತಕೆ ಕೂಗುವೆ ಹೇಳು || 165 ||

ಮನುಜರಿಗಂಜಿದಮೇಲಿನ್ನು | ನಾ |
ದನುಜನೆ ಹರಿವಿಧಿಗಂಜೆನು ||
ಮುನಿಗಳ ಮಾತಿಲಿ ಬಂದೆಯ | ನೀ |
ಘನ ಮದೋನ್ಮತದಿಂದ ನಿಂದೆಯ || 166 ||

ಕೆಟ್ಟ ಪಾತಕಿಗೊಂದು ಕಾಷ್ಟವು | ಬ |
ಲಿಷ್ಠ ಬಾಣಗಳಾಗಿ ತರಿವುದು ||
ದುಷ್ಟ ಕೇಳ್ ನೀನಿಂಥ ಮುನಿಪರ | ಗೋ |
ಳ್ಗುಟ್ಟಿಪೆಯೆಂದೆಚ್ಚ ಭೂವರ || 167 ||

ರಾಗ ಶಂಕರಾಭರಣ ಮಟ್ಟೆತಾಳ

ಬಿಟ್ಟ ಶರವ ತರಿದು ದುರುಳ | ಭ್ರಷ್ಟ ಮುನಿಗಳಿವನಿಗೊರೆದು |
ದಿಟ್ಟ ತನದಿ ಕರೆದು ತಂದೀ | ಗಟ್ಟಹಾಸದಿ || 168 ||

ಮೆರೆವರೈಸೆ ಕರುಳನುಗಿದು | ಹುರಿದು ತುಪ್ಪದೊಳಗೆ ತಿಂಬೆ |
ಮರುಳು ಮುನಿಗಳೆನುತ ಖಳನು | ಬೆರಸುತಿರ್ದನು || 169 ||

ಹಿಂದೆ ಬೆರಸಿಕೊಂಡು ಬರುವ | ಮಂದಮತಿಯ ಕಂಡೋಡುತ್ತ |
ಬಂದು ನಪತಿ ಖಳನ ಕೊಲ್ಲೀ | ಗೆಂದು ಕೂಗಲು || 170 ||

ಕಾಲನಂತೆ ಕಿಡಿಯ ಸೂಸಿ | ಖೂಳನನ್ನು ತಡೆದು ಭೂಪ |
ತಾಳಿಕೊಳ್ಳೆನುತ್ತಲೊಂದು | ಕೋಲನೆಚ್ಚನು || 171 ||

ರಾಗ ಮಾರವಿ ಮಟ್ಟೆತಾಳ

ಬಂದ ಶರವ ತರಿದು ದೈತ್ಯ ಮಂದಹಾಸದಿ |
ಸಂಧಿಸಿದನು ಶರವ ನಪಗೆ ಭರಿತರೋಷದಿ || 172 ||

ದುರುಳನಸ್ತ್ರವನ್ನು ತರಿದು ನಪತಿ ವೇಗದಿ |
ಕರದ ಚಾಪವನ್ನು ಕಡಿದನತಿ ವಿಲಾಸದಿ || 173 ||

ಭರದಿ ಖಡ್ಗದಿಂದ ನಪನಿಗೆಸೆಯೆ ದೈತ್ಯನು |
ಮುರಿದು ಧರೆಗೆ ಕೆಡೆದನದರ ಭೂಪ ಶಂತನು || 174 ||

ಗದೆಯ ಕೊಂಡು ಕನಲಿ ದೈತ್ಯ ಸದೆಯೆ ತಪ್ಪುತ |
ಕುದಿವ ಕೋಪದಿಂದ ನಪತಿ ಚಾಪ ನೆಗಹುತ || 175 ||

ಮಸೆದ ಸಾಣೆಯಲಗ ದೈತ್ಯನೆದೆಗೆ ಗಜರುತ |
ವಸುಧೆಪಾಲ ಬಿಡಲು ಬಿದ್ದ ರಕುತ ಕಾರುತ || 176 ||

ಭಾಮಿನಿ

ದುರುಳನಂತಕಪುರಕೆ ತೆರಳಲು |
ಹರುಷದಿಂ ಮುನಿವರರು ಪೊಗಳುತ |
ಧರಣಿಪಗೆ ಕೌಪೀನ ಕಷ್ಣಾಜಿನವು ಕಾವಿಗಳ ||
ವರಕಮಂಡಲದಂಡ ಮೌಂಜಿಯ |
ಪರಸುತುಚಿತವನೀಯಲೊಂದಿಸಿ |
ಹರುಷದಿಂದಪ್ಪಣೆಯ ಕೊಳ್ಳುತಲಡರಿ ತುರಗವನು || 177 ||

ರಾಗ ಕೇದಾರಗೌಳ ಅಷ್ಟತಾಳ

ಪೊರಟು ಕಾಳಿಂದಿಯ ತೀರದಿ ಮೆರೆಯುವ | ತರುಲತೆಗಳ ನೋಡುತ ||
ಪುರದ ಮಾರ್ಗವ ಪಿಡಿದೈತರೆ ಘಮಘಮ | ಪರಿಮಳ ಬರಲು ಕಂಡು || 178 ||

ಏನಿದಚ್ಚರಿ ದಿವ್ಯ ಸೌಗಂಧವೀಯೆಡೆ | ಕಾನನಸುಮಗಳೆಂತೊ ||
ಧ್ಯಾನಿಸೆ ಮೌನಿಗಳಾದರು ಭ್ರಮಿಪರು | ಮಾನಕೇತನಶರದಿ || 179 ||

ಶಿರವನೊಲದು ಮೋಹಾವೇಶದಿ ಶಂತನು | ಧರಣಿಪಾಲನು ಮುಂದಕೆ ||
ತುರಗವ ನಡೆಸುತ ಬರಲು ತಿಮಿರಮಧ್ಯ | ಪೊರಟ ಚಂದ್ರನ ತೇಜದಿ || 180 ||

ನಾರಿಯೊರ್ವಳು ನವಯೌವನಚದುರೆ ವೈ | ಯಾರಿ ಮಿಂಚಿನ ತೆರದಿ ||
ಧಾರಿಣಿಪಾಲನ ಕಣ್ಗೆ ಗೋಚರಿಸಲು | ಮಾರಹತಿಗೆ ಬಳಲಿ || 181 ||

ವಾರ್ಧಕ

ಚಂದ್ರಮಂಡಲಸದಶವದನದೆಳೆನಗೆಯು ನವ |
ಚಂದ್ರಿಕೆಯ ಪೋಲುತಿರೆ ವಿಟರುರವ ಭೇದಿಸುವ |
ಚಂದ್ರಬಿಂಬಾಧರೆಯ ಕಡೆಗಣ್ಣ ನೋಟದಿಂ ಚಂದ್ರ ತಿಲಕದ ಶೋಭೆಯಿಂ ||
ಇಂದ್ರನೀಲದ ಮಣಿಯ ಧಿಕ್ಕರಿಪ ಬೈತಲೆಯು |
ಚಂದ್ರಗಾವಿಯ ವಸನಮನ್ನುಟ್ಟು ತನ್ನ ನಯ |
ನೇಂದ್ರಿಯವ ಸೆಳೆಯುತಿಹ ಸತಿಯ ಕಂಡಾ ನಪಂ ಸುಂದರಾಂಗಿಯೊಳೆಂದನು || 182 ||

ರಾಗ ತುಜಾವಂತು ಝಂಪೆತಾಳ

ಕಲಕೀರವಾಣಿ ನೀನಾರಾತ್ಮಭವಳು |
ಚೆಲುವೆ ನಿನ್ನಯ ಪೆಸರ ವಂಚಿಸದೆ ಪೇಳು ||
ಮಲಯಗಂಧಿನಿ ಎನ್ನ ಸ್ಮರ ದಹಿಪ ಕೇಳು |
ಒಲಿಸುವರೆ ಬಂದಿಹೆನು ವೇಗದಿಂದೇಳು || 183 ||

ರಾಗ ಪುನ್ನಾಗ ಆದಿತಾಳ

ಅಂಬಿಗರಿಂಗಧಿಪನಾದ | ಕಂಧರಾತ್ಮಜೆ ನಾನು |
ಕುಂಭಿನಿಯೊಳೆನಗೆ ಯೋಜನ | ಗಂಧಿಯೆಂಬರ್ ||
ಪಂಬಲಿಪೆ ಯಾಕೆ ಬರಿದೆ | ಪರರಾಧೀನೆ ನಾನು |
ಡಂಭ ಮಾತುಗಳಲ್ಲ ಪಿತನ | ಕೇಳಿಕೊಂಬುದು ನೀನು || 184 ||

ರಾಗ ತುಜಾವಂತು ಝಂಪೆತಾಳ

ತರುಣಿ ನಿನ್ನಯ ಪಿತನು ಕೋಪಿಸನಿದಕೆ |
ವರಿಸೆನ್ನ ವೇಗದೊಳು ಸ್ಮರನ ಸಂಗರಕೆ ||
ಕರುಣದೊಳು ಮನಮಾಡಿ ಬಾರೆನ್ನ ಪುರಕೆ |
ಧರಣಿಯನು ಪಾಲಿಸುವೆ ಬರಿದೆ ಭ್ರಮೆ ಯಾಕೆ || 185 ||

ರಾಗ ಪುನ್ನಾಗ ಆದಿತಾಳ

ಕೇಳೊ ನಪತಿ ಸತಿಗಳೆಲ್ಲ | ಬಾಲ್ಯದಿ ಪಿತನಾಧೀನ |
ಮೇಲೆ ಯೌವನ ಬರಲು ತನ್ನನು | ವರಿಸಿದ ಪತಿಯಾಧೀನ ||
ಬಾಲಕರಾಧೀನ ಮುಪ್ಪಿನೊ | ಳೆಂಬ ಶಾಸ್ತ್ರವಯ್ಯ |
ಜಾಲಮಾತುಗಳೇಕೆ ಜ್ಞಾನ | ಶೀಲ ನೀನಹೆಯಯ್ಯ || 186 ||

ರಾಗ ತುಜಾವಂತು ಝಂಪೆತಾಳ

ಎಲ್ಲಿಹನು ತವ ಪಿತನು ಸಕಲಗುಣಶೀಲೆ |
ಎಲ್ಲ ಸಂಪದ ನಿನ್ನಾಧೀನಗಳು ಕೇಳೆ ||
ಸಲ್ಲಿಸೆನ್ನಯಭೀಷ್ಟ ವೇಗದಿಂ ಬಾಳೆ |
ನಲ್ಲೆ ಎನ್ನೊಳು ಮನವನಿಟ್ಟು ನೀ ಪೇಳೆ || 187 ||

ರಾಗ ಪುನ್ನಾಗ ಆದಿತಾಳ

ನುಡಿವೆ ಕೇಳೈ ಎನ್ನ ಪಿತನೀ | ನದಿಯೊಳ್ ನಾವೆಯನ್ನು |
ನಡಿಸಿಕೊಂಡು ಪೋಗಿರ್ಪನು | ಕ್ಷಣದೊಳೀಗೈತಹನು ||
ಒಡನೆಯಾತನ ಕೇಳಿ ಎನ್ನ | ವರಿಸಿಕೊಂಬುದು ನೀನು |
ಕಡೆಗೆ ನಿನ್ನ ಮನಕೆ ತೋಷ | ಗೊಳಿಪೆ ನೋಡೈ ನಾನು || 188 ||

ಭಾಮಿನಿ

ತರುಣಿಮಣಿಯಿಂತೆನಲು ಕೇಳುತ |
ಹರುಷದಿಂದಲೆ ಶಂತನಪತಿಯು |
ತೆರಳುತೆದುರಿನ ಕೂಲದೊಳಗಿರುತಿರ್ಪ ದಾಶನನು ||
ಕರೆಸೆ ಚಾರಕರಿಂದಲಾ ಕ್ಷಣ |
ತೆರಳುತಂಬಿಗರಾಜ ಕಂಧರ |
ತರುವೆ ನಾವೆಯ ನಿಲ್ಲಿರೆನ್ನುತಲಾಗ ಬೆಡಗಿನಲಿ || 189 ||

ರಾಗ ಕಲ್ಯಾಣಿ ಅಷ್ಟತಾಳ

ತಡವಿಲ್ಲದೆ ಬೇಗ ಹೋಯ್ಕು | ಆಚೆ |
ತಡಿಯೊಳಿಪ್ಪರ ಕೊಂಡು ಬರ್ಕು ||
ಬಿಡದೆನ್ನ ಕೂಲಿ ತೆಕ್ಕೊಣಕು | ಬೇಗ |
ಕೊಡದಿರ್ದಡಲ್ಲಿಯೆ ಬಿಡಕು || 190 ||

ಹಾರೋರು ಕಾಸ್ಕಳ್ಳರೆನ್ನು | ಹರ |
ದಾರಿಗಾದರು ದುಡ್ಡಿಗೋಡ್ಕು ||
ಪಾರಮಾರ್ಥದಿ ನಾವು ದಾಟ್ಸ್ಕು | ಮ |
ಜೂರಿಗೆ ನಾಮವೆ ಕೊಡ್ಕು || 191 ||

ಅಬ್ಬರಿಸಿ ಕರೆವಾರು ಕಾಣಿ | ವಬ್ಬ |
ರೊಬ್ಬರ್ ಹಿಂದೊಂದು ಮಾಣಿ |
ಡಬ್ಬೋರತಿಲ್ಲ ಠಿಕಾಣಿ | ನನ |
ಗೊಬ್ಬರು ಕೊಡರು ಪಾವಾಣಿ || 192 ||

ರಾಗ ಸಾಂಗತ್ಯ ರೂಪಕತಾಳ

ಎನುತಲೆ ದಾಶರಾಜನು ನಾವೆಯನು ಕೊಂಡು |
ಘನವೇಗ ಬಂದು ಕಾಣುತಲೆ ||
ಬನಿರಯ್ಯ ದೋಣಿಯನೇರಿ ಬೇಗದೊಳೆನೆ |
ಜನಪತಿ ಪೇಳ್ದನಂಬಿಗಗೆ || 193 ||

ಬರುವವರಲ್ಲ ನಿನ್ನೊಳು ಮಾತನಾಡ್ವರೆ |
ತ್ವರೆಯಿಂದ ಕಾದುಕೊಂಡಿಹೆನು ||
ಕರಿಪುರದರಸ ಶಂತನುವೆನ್ನ ಪೆಸರು ಕೇಳ್ |
ತರಳೆಯನೀಯಬೇಕೆನಗೆ || 194 ||

ಹುಚ್ಚು ಮಾತುಗಳೇಕೆ ದಾಶಕನ್ನಿಕೆಯನ್ನು |
ತುಚ್ಛರಾಗಿಹ ಕ್ಷತ್ರಿಕುಲಕೆ ||
ಮೆಚ್ಚಿ ಕೊಡಲು ನಮ್ಮ ಕುಲದವರರಿತರೆ |
ಹೆಚ್ಚಿನ ಕಟ್ಟನೀಯುವರು || 195 ||

ಎಲೆಲೆ ಧೀವರ ಚಾತುರ್ವರ್ಣದೊಳೆರಡನೆ |
ಕುಲವೆ ಕ್ಷತ್ರಿಯ ನಾನು ಕೇಳು ||
ಬಲದೊಳೆನ್ನಿದಿರಿಲ್ಲ ಎನ್ಮಾತ್ಮ ಭವನೊರ್ವ |
ಕಲಿಗಂಜದಿಹ ವೀರನಿಹನು || 196 ||

ರಾಗ ಕೇದಾರಗೌಳ ಝಂಪೆತಾಳ

ಯಾರಿಗೆನ್ನುತ ಕೇಳ್ವೆಯ | ನಿನಗೊ ಸುಕು | ಮಾರಗೆನ್ನುತ ಬಾಲೆಯ ||
ಧಾರಿಣೀಪಾಲ ನೀನು | ಪೇಳೆನಲು | ಭೂರಿ ತೋಷದೊಳೆಂದನು || 197 ||

ಎನಗೆ ಸತಿಯಿಲ್ಲ ಕೇಳು | ಸುತಗಲ್ಲ | ತನುಜೆಯಂ ನೀನೀಗಳು ||
ಮನವಿಟ್ಟು ಕೊಡಲು ನಾನು | ಶಶಿಮುಖಿಯ | ವಿನಯದಿಂ ಪಾಲಿಸುವೆನು || 198 ||

ಹಿರಿಯ ಸುತನಿರೆ ನಿನ್ನಲಿ | ನಪ ಕೇಳು | ಧರಣಿಪಟ್ಟವ ಮುದದಲಿ ||
ವಿರಚಿಸುವೆ ಎನ್ನ ಸುತೆಯ | ತನುಜರಿಗೆ | ಚರಣ ಸೇವೆಯ ನಿಶ್ಚಯ || 199 ||

ಧರಣಿಪರ ಧರ್ಮಂಗಳು | ಕಂಧರನೆ | ಹಿರಿಯಂಗೆ ಪಟ್ಟ ಕೇಳು ||
ಕಿರಿಯನಿಗೆ ಯುವ ರಾಜ್ಯದ | ಪದವಿಯನು | ಕರುಣಿಪರು ಕೇಳ್‌ನೀನದ || 200 ||

ನಂದನೆಯ ಕೊಡಲಿವಳಿಗೆ | ಪುಟ್ಟಿರ್ದ | ಕಂದಗಲ್ಲದೆ ಜ್ಯೇಷ್ಠಗೆ ||
ಮುಂದೆ ರಾಜ್ಯವನಿತ್ತರೆ | ಕೊಡೆನು ನಾ | ನೆಂದಿಗೂ ನೋಡೈ ದೊರೆ || 201 ||

ವಾರ್ಧಕ

ಕಂಧರನ ನುಡಿ ಕೇಳಿ ಭೂಪಾಲ ದುಗುಡದಿಂ |
ಕಂದನಹ ಗಾಂಗೇಯ ನಂ ಬಿಟ್ಟು ಧಾತ್ರಿಯಂ |
ಮುಂದೋರ್ವಗೀಯಲೆನಗಂದಮಲ್ಲವು ಜನರು ನಿಂದಿಪರು ಮಗುಳೆನ್ನುತ ||
ಸಂದೇಹಗೊಳುತ ನಪ ನೀಚಸಹವಾಸದಿಂ |
ಬಂದಿಹುದು ದುರ್ಭಾಷೆ ಬೇಡ ಪೋಗುವೆನೆಂದು |
ಪಿಂದೆ ತಿರುಗುತ ಖಿನ್ನನಾಗಿ ಭೂಮಿಪ ಪುರಕೆ ಬಂದನತಿ ಜವದಿಂದಲಿ || 202 ||

ಕಂದ

ಕನ್ನೆಯ ನೆನೆವುತ ಶಂತನು |
ತನ್ನೊಳು ಸುಯ್ವುತ ವ್ಯಥೆಯೊಳ್ ದಿನ ದಿನ ಬಳಲುತೆ ||
ತನ್ನಯ ರಾಜಕಿ ಕಾರ್ಯಗ |
ಳನ್ನು ವಿಚಾರವ ಗೆಯ್ಯದೆ ಶಯನಿಸಲಾಗಳ್ || 203 ||

ರಾಗ ಮಾರವಿ ಏಕತಾಳ

ಪರುಶುಧಾರಿಯೊಳಿತ್ತ ಚೌಷಷ್ಟಿವಿದ್ಯವ | ನರಿತು ಗಂಗಾತ್ಮಜನು ||
ಇರಲೊಂದಿನದೊಳು ಮಾತೆಗೆ ಭಕ್ತಿಯೊ | ಳೆರಗುತ ಪೇಳಿದನು || 204 ||

ಜನಕನು ಪುರದೊಳಗನುವಿಂದೆನ್ನನು | ನೆನೆಯುತ ದುಃಖಿಪನು ||
ಜನನಿಯೆ ನೇಮವ ಕೊಡು ನಾ ಪೋಗುವೆ | ನೆನುತಿಹ ಕುವರನನು || 205 ||

ಪಿಡಿದಪ್ಪುತ ಸುಕುಮಾರನೆ ಎನ್ನೆಡೆ | ಗಡಿಗಡಿಗೈತಹುದು ||
ನಡೆ ನೀ ಬಂದುದು ಬಹು ದಿನವಾಯಿತು | ಸಡಗರದಿಂ ಪುರಕೆ || 206 ||

ಭಾಮಿನಿ

ನಾರಿಮಣಿಯಿಂತುಸುರಿ ತನ್ನ ಕು |
ಮಾರನನು ಕಳುಹಲ್ಕೆ ವ್ಯೋಮದಿ |
ಚಾರಣರು ಕಿಂಪುರುಷ ವಿದ್ಯಾಧರರು ಸುಮನಸರು ||
ಮೂರು ಲೋಕದಿ ಶಸ್ತ್ರವಿದ್ಯದೊ |
ಳಾರು ಸಮವಿಲ್ಲಿವನ ಪೋಲ್ವರು |
ಶೂರನಾಗಿಹನೆನುತ ಸುಮ ಮಳೆಗರೆದರಂಬರದಿ || 207 ||

ರಾಗ ಕೇದಾರಗೌಳ ಅಷ್ಟತಾಳ

ಸುರತರಂಗಿಣಿಯನ್ನು ತೊರೆದು ಗಾಂಗೇಯನು |
ಪೊರಟತಿ ವೇಗದಿಂದ ||
ಕರಿಪುರಕೈತಂದು ಪಿತನಾಸ್ಥಾನವ ಪೊಕ್ಕು |
ಪರಿಕಿಸಲಾಕ್ಷಣದಿ || 208 ||

ಪರಿತ್ಯಜಿಸಿರೆ ಸಿಂಹವಿಷ್ಟರವನು ತಂದೆ |
ತೆರಳಿದನೆಲ್ಲಿಗೆಂದು ||
ಆರರೆ ಸಾಮಂತ ನಿಯೋಗಿಗಳೀದಿನ |
ಬರಲಿಲ್ಲವ್ಯಾಕೆನುತ || 209 ||

ಕೇಳಿದ ಮಂತ್ರಿ ಸುನೀತಿಯ ಕರೆದು ಭೂ |
ಪಾಲನೆಲ್ಲಿಗೆ ಪೋದನು ||
ಓಲಗಕೀದಿನ ಬರಲಿಲ್ಲವ್ಯಾತಕೆ |
ಪೇಳೆನಲಿಂತೆಂದನು || 210 ||

ತೆರಳಿದ ಯಮುನೆಯ ತಡಿಯಿಂದ ಬಂದಂತಃ |
ಪುರದೊಳು ಮಲಗಿರುವ ||
ತೆರಳಲ್ಲಿಗೆನಲಾಗಲೈತಂದು ಪರಿಕಿಸೆ |
ಧರಣಿಪನಿರೆ ಮಂಚದಿ || 211 ||

ರಾಗ ಕಾಂಭೋಜಿ ಝಂಪೆತಾಳ

ಮಲಗಿರುವ ಪಿತನ ತಾನೆಬ್ಬಿಸುತ ಗಾಂಗೇಯ |
ಘಳಿಲನೊಂದಿಸಲಾಗಲಪ್ಪಿ ಪರಸುತಲಿ ||
ಚೆಲುವ ಸುಕುಮಾರ ನೀ ಬಂದೆಯಾ ಕ್ಷೇಮದಲಿ |
ಕಲಿತೆಲ್ಲ ವಿದ್ಯವನು ಗುರುವರನ ದಯದಿ || 212 ||

ಎಂದ ಮಾತಿಗೆ ನಪನ ನಂದನನು ಪೇಳಿದನು |
ತಂದೆ ಕೇಳಯ್ಯ ಭಗುನಂದನನ ದಯದಿ ||
ಅಂದವಹಚೌಷಷ್ಟಿವಿದ್ಯೆಗಳ ಗ್ರಹಿಸಿದೆನು |
ಬಂದೆ ನಿನ್ನನು ನೋಳ್ಪ ತವಕದಲಿ ನಾನು || 213 ||

ಪಿತನೆ ಕೇಳ್ ಸಾಮಂತ ಪೃಥ್ವಿಪಾಲರು ನಿನಗೆ |
ಸತತ ಸೇವಕರೈಸೆ ಮತಿಯುತನೆ ಕೇಳು ||
ವ್ಯಥೆಗಳೇನಿಹುದೀಗ ಬಾಡಿಹುದು ಮುಖಕಮಲ |
ಸುತನಮೇಲಣ ಪ್ರೀತಿಯೆಂದಿನಂತಿಲ್ಲ || 214 ||