ರಾಗ ಬೇಗಡೆ ಏಕತಾಳ

ಹರಿ ಹರ ಬ್ರಹ್ಮಾದಿ ವಿಭುಗಳಿಗೆ | ಬಿಟ್ಟಿರ್ಪುದುಂಟೆ |
ಕೊರತೆಗಳು ಗಾಂಗೇಯ ಜಗದೊಳಗೆ ||
ನರರ ಪಾಡೇನಿನ್ನು ಮೋಹದ | ತರಳ ನಿನ್ನ ವಿಯೋಗದಿಂದಲಿ |
ಮರುಗುತಿರ್ದೆನು ಬೇರೆ ಮತ್ತಿ | ನ್ನಿರದು ಕಾರಣ ಕೇಳು ಕುವರನೆ || 215 ||

ನಿಂದಿರಲು ನಾ ಬಂದು ಮುಂದೆಸೆಯಾ | ತವ ಹತ್ಸರೋಜವು |
ಕುಂದಿ ದುಃಖಾತಪದಿ ನ್ಯೂನತೆಯ ||
ಹೊಂದಿಹುದ ತ್ಯಜಿಸಿಲ್ಲಮತ್ಪಿತ | ಕಂದನೊಳು ದಯದಿಂದ ಪೇಳ್ವುದು |
ಚಂದಿರಾನ್ವಯ ಸಾರ್ವಭೌಮಕ | ಗಿಂದು ಸಂಘಟಿಸಿರ್ಪುದೇನೈ  || 216 ||

ತರಳ ಕೇಳೀಗಷ್ಟ ಸಂಪದದಿ | ನ್ಯೂನಂಗಳಿಲ್ಲದೆ |
ಹರುಷದೊಳಗಿರುತಿಹೆನು ನಾ ಜಗದಿ ||
ಪರಮ ಶೂರಾಗ್ರಣಿಯೆ ನಿನ್ನನು | ಪರಿಕಿಸುತ ನಾ ಧನ್ಯನಾಗಿಹೆ |
ವರ ಹಿಮಾಚಲ ಸೇತು ಪರಿಯಂ | ತರಕು ಎನ್ನಯ ಬಿರುದು ಮೆರೆದಿದೆ || 217 ||

ರಾಗ ಮಧುಮಾಧವಿ ತ್ರಿವುಡೆತಾಳ

ಪಿತನ ನುಡಿಯನು ಕೇಳಿ ಗಂಗಾ | ಸುತನು ತನ್ನೊಳು ತಾನೆ ಯೋಚಿಸಿ |
ಕ್ಷಿತಿಯೊಳಷ್ಟೈಶ್ವರ್ಯ ಭೋಗದಿ | ಸತಿವಿಹೀನತೆಯಾಗಿಹ || 218 ||

ಅರಿಯಬೇಕಿವನಂತರಂಗವ | ಹರುಷಗೊಳಿಪೆ ಪ್ರಯತ್ನದಿಂದಲಿ |
ತರಳನಾಗುದಿಸಿರ್ಪೆ ಸಫಲವ | ನಿರದೆ ಗೈವೆನೆನುತ್ತಲಿ || 219 ||

ಧರೆಯ ಬೆಳಗುವ ಮಿಹಿರದುಗುಡದಿ | ಭರಿತ ಕತ್ತಲೆಯೆಂದು ಕುಳಿತಿರೆ |
ಪರರು ತೋರ್ಪರೆ ಬೆಳಕ ಮತ್ಪಿತ | ನರಿತು ನೋಡೈ ನಿನ್ನೊಳು || 220 ||

ಪರಿಜನರ ರಕ್ಷಿಸುವ ಭೂಪತಿ | ಕೊರತೆ ತಾಳಲು ಪೊರೆವರಾರೈ |
ತರಳ ನಾನಿರೆ ಬಿಡು ಬಿಡೀಕ್ಷಣ | ಅರುಹು ನೀ ವ್ಯಸನಂಗಳ || 221 ||

ರಾಗ ಸಾರಂಗ ಅಷ್ಟತಾಳ

ತರಳ ಗಾಂಗೇಯ ಕೇಳು | ಮನ್ಮನಸಿನ | ಕೊರತೆಯ ನಾನೀಗಳು ||
ಒರೆಯುವೆ ಶಶಿಪರಂಪರೆ ಭರತಾನ್ವಯ |
ಕಿರುವ ನಾನೋರ್ವಂಗೆ ನೀನೋರ್ವ ಜನಿಸಿಹೆ || 222 ||

ಪರಮ ವಿಕ್ರಮಿಯು ನೀನು | ಶಸ್ತ್ರಾಸ್ತ್ರದಿ | ಮೆರೆದಪೆ ಕೀರ್ತಿಯನು ||
ನರಗೆ ಪುಟ್ಟಿದ ಕ್ಷಣದೊಳು ಮತ್ಯು ಬಹುದೆಂದು |
ಸ್ಥಿರವಾಗಿ ನಂಬಿಕೊ ಶ್ರುತಿಸಾರ ವಚನವು || 223 ||

ಪುತ್ರನೋರ್ವನೆ ಜಗದೀ | ಪೆತ್ತವನಾ | ಪುತ್ರವಂತನೆ ಶಾಸ್ತ್ರದಿ ||
ವಿಸ್ತರಿಪುದು ಸುಗುಣನೋರ್ವ ದುರ್ಗುಣಶತ |
ಪುತ್ರರಿಂದಧಿಕ ತಾನುತ್ತಮನೆನಿಪನು || 224 ||

ತರಳ ನೋರ್ವನೆ ಎಂಬುವ | ಚಿಂತೆಯು ಕೇಳೊ | ಪರಮಾಪ್ತ ಮಮ ಸಂಭವ ||
ನಿರತ ಪೂರ್ಣಾಯುವನಿತ್ತು ಶ್ರೀಹರಿ ನಿನ್ನ |
ಪೊರೆಯಲಿಯನುದಿನ ಪರಮ ಸಾಹಸಿ ಕೇಳು || 225 ||

ರಾಗ ಘಂಟಾರವ ಏಕತಾಳ

ಬಿಡು ಬಿಡೈ ಪಿತ ಭುಜಪರಾಕ್ರಮದಿಂದ |
ಮಡನಿಗಂಜದ ವೀರ ನಾನಿರೆ | ಕಡು ಮನೋವ್ಯಥೆ ಯಾತಕೈ || 226 ||

ಎಂದೊಡಂಬಡಿಸುತ ತಂದೆ ಗೊಂದಿಸಿ |
ಬಂದು ಮಂತ್ರಿಯೊಳೆಂದನಾಕ್ಷಣ |
ಮಂದಹಾಸಗಳಿಂದಲಿ || 227 ||

ಜಾತನೋರ್ವನೆ ಎಂಬ ಚಿಂತೆಗಳಿಂದ |
ತಾತನಿರ್ಪುದ ನೋಡೆ ಪೆಣ್ಣಿಗೆ | ಸೋತು ಭ್ರಮೆಯೊಳಗಿರ್ಪನು || 228 ||

ಹಿಂದೆ ಕಾಳಿಂದೀತೀರದಿಂದೈತಂದು |
ಕುಂದಿ ಕೊರಗುತಲಿರ್ಪನಿವನಿಂ | ತೆಂದು ಪೇಳಿದೆ ಎನ್ನೊಳು || 229 ||

ಹರಿಣನೇತ್ರೆಯ ಕಂಡಿರಬಹುದಲ್ಲಿ |
ತ್ವರಿತದಿಂ ನಾವುಭಯರಲ್ಲಿಗೆ |
ತೆರಳಿ ಕಾಂಬುದೆನುತ್ತಲಿ || 230 ||

ಭಾಮಿನಿ

ಸುರನದಿಜನಿಂತೆಂದು ವೇಗದಿ |
ಪೊರಟು ಸಚಿವಸಮೇತ ಯಮುನಾ |
ವರನದಿಯ ತೀರದೊಳು ಬರುತಿರಲನಕ ಘಮಘಮಿಸಿ ||
ಪರಿಮಳಿಪ ಸೌಗಂಧ ರೊಂಪಿಲಿ |
ಶರದ ಚಂದಿರವದನೆ ನದಿಯೊಳು |
ಭರದಿ ನಾವೆಯ ನಡೆಸಿಕೊಂಡಯ್ತಹುದನೀಕ್ಷಿಸುತ || 231 ||

ರಾಗ ನವರೋಜು ಏಕತಾಳ

ಪರಿಕಿಸು ಮಂತ್ರಿಯೆ ನೀನು | ಈ | ತರುಣಿಯ ಸಂಭ್ರಮವನ್ನು ||
ಸರಸಿಜನಾಭನ ರಾಣಿಯೊ ಬ್ರಹ್ಮನ |
ವರ ಮನೋಹರೆಯೊ ಭೂತೇಶನ ಸತಿಯೊ || 232 ||

ಧರಣಿಪನೀಕೆಯ ನೋಡಿ | ತಾ | ವರಿಸಲಪೇಕ್ಷೆಯ ಮಾಡಿ ||
ಮರುಗುತಲಿಹ ದಿಟವ್ಯಾರಿವಳೆಂಬುದ |
ನರಿಯುವೆನೆನುತಲಿ ಕೇಳಿದ ನದಿಜನು || 233 ||

ಆರಾತ್ಮಭವೆ ನೀನು | ಈ | ನೀರೊಳು ನಾವೆಗಳನ್ನು ||
ನೀರಜಾಂಬಕಿ ದಾಶರಂದದಿ ನಡೆಸುವೆ |
ಶೂರ ಕ್ಷಾತ್ರಿಯ ತೇಜ ಕಾಂಬುದು ಮುಖದಲಿ || 234 ||

ಸಟೆಯ ಪೇಳಲು ಬೇಡ | ಪೇಳ್ | ಕುಟಿಲಕುಂತಳೆ ಗಾಢ ||
ಅಟವಿಯ ವಸತಿಯೇಂ ಕಾರಣವೆನ್ನಲು |
ದಿಟವನು ಪೇಳುವೆನೆನುತಲಿಂತೆಂದಳು || 235 ||

ರಾಗ ಜಂಜೂಟಿ ಅಷ್ಟತಾಳ

ವೀರಾಗ್ರೇಸರ ಲಾಲಿಸಯ್ಯ | ಎನ್ನ | ಪಾರಮಾರ್ಥವ ಪೇಳ್ವೆನಯ್ಯ ||
ಶೂರನೆನ್ನಯ ತಾತ ಕಂಧರನೆಂಬನು |
ಧೀರನಂಬಿಗರಾಜನೆಮ್ಮ ಕು | ಟೀರದೊಳಗಿಹ ಕೇಳು ಮುದದಲಿ || 236 ||

ಕನ್ನೆತನದೊಳಿಹೆ ನಾನು | ಮೋಹ | ವನ್ನು ಬೀರುತ ಶಂತನಪನು ||
ಮುನ್ನ ಪಿತನ ಕೇಳೆ ಕೊಡದಿರೆ ವೋದನು |
ನಿನ್ನ ಪರಿಕಿಸಲೇಕರೂಪವು | ಭಿನ್ನವಿಲ್ಲದೆ ಕಾಂಬುದಾತಗೆ || 237 ||

ಕುವರನೋರುವನಿಹನೆಂದು | ಆ | ಭುವನೇಶ ಪೇಳಿದನಂದು ||
ವಿವರಿಸು ನಿನ್ನ ವತ್ತಾಂತವ ತವಕದಿ |
ಜವದೊಳಿಲ್ಲಿಗೆ ಬಂದ ಕಾರಣ | ರವಿಸಮೋಪಮತೇಜ ಪೇಳೈ || 238 ||

ರಾಗ ಕೇದಾರಗೌಳ ಅಷ್ಟತಾಳ

ದೇವವ್ರತಾಖ್ಯನು ಶಂತನಪನ ಸುತ | ದೇವಿ ಕೇಳ್ ಪೆಸರೆನಗೆ ||
ಭೂವರೇಣ್ಯಾತ್ಮಜಳಹುದೊ ವಂಚಿಸದೆ ಪೇ | ಳಾವ ನಪಾತ್ಮಜೆಯು || 239 ||

ರಾಗ ಆಹೇರಿ ಆದಿತಾಳ

ಮಾತೆಯೆನಗಪ್ಸರಸಂ | ಭೂತೆಯದ್ರಿಕೆಯು ಪದ್ಮ |
ಜಾತ ಶಾಪದಿಂದ ಮತ್ಸ್ಯ | ಜಾತಿಯಾದಳಯ್ಯ ಕೇಳು || 240 ||

ರಾಗ ಕೇದಾರಗೌಳ ಅಷ್ಟತಾಳ

ಪುಟ್ಟಿದ ಕಾರಣವರುಹು ಮತ್ಸ್ಯದಿ ನೀನು | ಶ್ರೇಷ್ಠಳು ಮರೆಮಾಚೆ ||
ಗುಟ್ಟು ಮಾಡಲು ಬೇಡವೆನಲು ಪೇಳಿದಳಾಗ | ಸಷ್ಟಿಪಸಂಭವಗೆ || 241 ||

ರಾಗ ಆಹೇರಿ ಆದಿತಾಳ

ಚೇದಿಯರಸ ವಸುರಾಜನು | ಹೋದ ಬೇಟೆಗಂದು ವನಕೆ |
ಮೋದದಿಂದ ಹರಿಣಮಿಥುನ | ವಾದ ಪರಿಯ ಕಂಡ ಭೂಪ || 242 ||

ರಾಗ ಕೇದಾರಗೌಳ ಅಷ್ಟತಾಳ

ಹರಿಣಮಿಥುನವನ್ನು ಕಂಡರೇನಾಯಿತು | ಜಲಚರಪ್ರಾಣಿಯೊಳು ||
ತರಳೆಯಾಗುದಿಸಿದ ಕಾರಣ ಮೊದಲೆನ | ಗರುಹೆನಲಿಂತೆಂದಳು || 243 ||

ವಾರ್ಧಕ

ಸ್ಮರಶರದಿ ಭೂವರಗೆ ಸ್ಖಲಿಸಲಿಂದ್ರಿಯವಾಗ |
ಕರೆದೊಂದು ಗಧ್ರನೊಡನಿತ್ತು ವೇಗದಿ ಪುರಕೆ |
ಗಿರಿಕೆ ಎಂಬುವ ತನ್ನ ಸತಿಯಳಿಂಗೀಯೆನುತ ತೆರಳಿಸಲ್ಕದನೀಕ್ಷಿಸಿ ||
ಭರದಿ ಮಾಂಸಭ್ರಾಂತಿಯೊಳಗನ್ಯ ಗಧ್ರ ಬಂ |
ದೆರಗುತಲೆ ಕೊಕ್ಕಿನೊಳ್ ಕುಕ್ಕಿ ಕಾದುತ್ತಿರಲ್ |
ಶರಧಿಯೊಳಗೆರಡುತುಂಡಾಗಿ ಬಿದ್ದುದು ತೇಜ ನುಂಗಲಪ್ಸರಜಲಚರಿ || 244 ||

ರಾಗ ಸಾಂಗತ್ಯ ರೂಪಕತಾಳ

ಬೆಳೆದುಕೊಂಡಿರೆ ಮತ್ಸ್ಯಜಠರದೊಳಾ ಗರ್ಭ |
ಬಲೆಯೊಳು ಪಿಡಿದು ಕಂಧರನು ||
ಕೊಲಲದರೊಳಗಾನು ಎನ್ನಗ್ರಭವನೋರ್ವ |
ನೆಲಸಿರೆ ಕಾಣುತಂಬಿಗನು || 245 ||

ಪರಮಾಶ್ಚರ್ಯವ ತಾಳಲಂತರಿಕ್ಷದೊಳಾಗ |
ಮೆರೆವ ಪುಷ್ಪಕದೊಳಪ್ಸರೆಯು ||
ಧರಿಸಿ ತನ್ನಯ ರೂಪದಿಂದ ಪೇಳ್ದಳು ದಾಶ |
ವರನೆ ಕೇಳೆನ್ನಯ ನುಡಿಯ || 246 ||

ವಸುಚಕ್ರವರ್ತಿಯ ತೇಜದೊಳ್ ಜನಿಸಿಹ |
ಶಿಶುಗಳ ಕೊಂಡೊಯ್ದು ನಪಗೆ ||
ಕುಶಲದೊಳೀಯಬೇಹುದು ನೀನೀಗಲೆನುತಲೆ |
ಶಶಿಮುಖಿ ತೆರಳಲಂಬರಕೆ || 247 ||

ಭಾಮಿನಿ

ತ್ವರಿತದೊಳಗಂಬಿನು ಎಮ್ಮನು |
ಧರಣಿಪತಿಗೀಯಲ್ಕೆ ಪುತ್ರನ |
ಹರುಷದೊಳ್ ಕೈಕೊಂಡು ಸುತೆಯನು ಸಲಹು ನೀನೆನುತ ||
ತಿರುಗಿಕೊಡಲಿವ ತಂದು ಎನ್ನನು |
ಪೊರೆದನಾದಿಯೊಳ್ ಮತ್ಸ್ಯಗಂಧಿನಿ |
ಎರಡನೆಯ ಪೆಸರಾಯ್ತು ಯೋಜನಗಂಧಿ ಸತ್ಯವತಿ || 248 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎನಲು ಗಂಗಾತ್ಮಜನು ಕೇಳಿದ | ಜನುಮಕಥನವ ತಿಳಿದೆಯೆಂತೌ |
ಗುಣವತಿಯೆ ಪೇಳೆನಲು ಶಶಿಮುಖಿ | ಎಂದಳಾಗ || 249 ||

ರೀತಿಯನು ತಿಳಿದಿರ್ದೆ ಎನ್ನಯ | ಮಾತೆಯದ್ರಿಕೆಯಿಂದಲೊಂದಿನ |
ಭೂತಳಕೆ ಬಂದೆನ್ನ ಮುದ್ದಿಸಿ | ಪೇಳ್ದಳಿದನು || 250 ||

ಒಳಿತು ನಿನ್ನನು ಸಲಹಿದಾತನು | ನೆಲಸಿರುವನ್ಯಾವೆಡೆಗೆ ಪೇಳನೆ |
ಸುಲಲಿತಾಂಗಿಯು ಬನ್ನಿರೆನುತಲೆ | ತೆರಳೆ ಮನೆಗೆ || 251 ||

ಕಂದ

ತ್ವರೆಯೊಳ್ ಬರುತಿರಲಂಬಿಗ |
ಹರಿತಂದೊಂದಿಸುತಾಸನವಿತ್ತುಂ ||
ಬರವೇಂಕಾರಣ ಬೆಸಸಿರಿ |
ಹರುಷದಿ ನೀವಾರಿಂತೆನೆ ನದಿಸುತನೆಂದಂ || 252 ||

ರಾಗ ಜಂಜೂಟಿ ಅಷ್ಟತಾಳ

ಬೆಸ್ತಾಧಿಪತಿ ಕೇಳು ನೀನು | ವರ | ಹಸ್ತಿನಾವತಿ ಶಂತನಪನು ||
ಪೆತ್ತ ಬಾಲಕನೆನ್ನ ಗಾಂಗೇಯನೆಂಬರು |
ಮತ್ತೆ ಎಮ್ಮಯ ಸಚಿವನೀತನು | ವಿಸ್ತರಿಪೆ ನಾವ್ ಬಂದ ಕಾರ್ಯವ || 253 ||

ಹಿಂದೆ ನಿನ್ನೆಡೆಗೆನ್ನ ಪಿತನು | ನೆ | ತಂದು ನಿನ್ನಾತ್ಮಜೆಯನು ||
ಚಂದದಿಂದೀಯೆನೆ ಸಮ್ಮತಿಸದೆ ನೀ |
ನಂದು ಕಳುಹಿದಕಾನು ಬಂದಿಹೆ | ಕಂದಳನು ಕೊಡು ಎನ್ನ ಪಿತನಿಗೆ || 254 ||

ಕರುಣಿಸಿ ಕೇಳೆನ್ನ ಸುತಗೆ | ಕುರು | ಧರೆಯಧಿಪನು ಪತಿಯಾಗೆ ||
ಸರಿಯಹುದೀಕೆಯ ತಂದೆ ನಾನದಕಾಗಿ |
ಒರೆವೆ ಮುಂದಣ ಪರಿಯಲ್ಯೋಚಿಸಿ | ನಿರತ ಸುಖವಿರೆ ಕೊಡುವೆ ಕಡೆಯೊಳು || 255 ||

ನಿನ್ನಯ ಮನಸಂಕೋಚವನು | ಪೇ | ಳೆನ್ನೊಳೊಂಚಿಸಬೇಡದನು ||
ಕನ್ನೆಯನತಿಪ್ರಿಯದಿಂದ ಕಾಪಾಡುವ |
ಎನ್ನ ಜನಕನ ಕ್ಷೇಮವನೆ ನಾ | ನೆಣ್ಣುತಿರ್ಪೆನು ಸರ್ವಕಾಲದಿ || 256 ||

ರಾಗ ಮಧುಮಾಧವಿ ತ್ರಿವುಡೆತಾಳ

ಸಷ್ಟಿಪಗೆ ಕೊಡಲೀಕೆಯುದರದಿ | ಪುಟ್ಟಿದರ್ಭಕರಿಂಗೆ ಸುರನರ |
ದುಷ್ಟ ದಾನವರಿಂಗೆ ಬೆದರದ | ದಿಟ್ಟ ನೀನರಿಯಾಗಿಹೆ | ಕೊಡೆನು ನಾನು || 257 ||

ಚಿತ್ತವಿಸು ತವ ಸುತೆಯ ಕುವರರ | ನರ್ತಿಯೊಳು ನಾ ಸಲಹಿಕೊಂಬೆನು |
ಮತ್ತೆ ಜನಕಗೆ ಹಿತವ ಬಯಸದ | ಮತ್ಯುಬಾಲಕನಲ್ಲವೈ | ಸತ್ಯವಿದನು || 258 ||

ಸವತಿಮಕ್ಕಳ ಸ್ನೇಹವೆಂಬುದು | ಭುವನದೊಳು ಪ್ರಖ್ಯಾತಿಯಿದೆ ಕೇಳ್ |
ಕುವರಿಯರ್ಭಕರಿಂಗೆ ಪಟ್ಟವ | ತವಕದಿಂದಲಿ ರಚಿಸಲು | ಕೊಡುವೆನೀಗ || 259 ||

ಎನ್ನ ವಂಶೋದ್ಭವನು ಪೂರುವು | ತನ್ನ ಪಿತ ಯಯಾತಿನಪತಿಗೆ |
ಮುನ್ನ ಯವ್ವನವಿತ್ತು ಜರೆಯನು | ಚೆನ್ನವಾಗನುಭವಿಸಿದ | ಪೇಳ್ವೆ ಕೇಳು || 260 ||

ಬಲ್ಲೆನಾ ದುಷ್ಯಂತಭೂಪನು | ವಲ್ಲಭೆಯ ಧಿಕ್ಕರಿಸಿ ಮರೆತಿಹು |
ದೆಲ್ಲವನು ಕೇಳಿರ್ಪೆ ಕ್ಷತ್ರಿಯ | ಖುಲ್ಲರೆಸಗುವ ಚರಿತೆಯ | ಪೇಳ್ವೆ ಯಾಕೆ || 261 ||

ಭಾಮಿನಿ

ಭರತಕುಲದರಸುಗಳು ಧರ್ಮವ |
ತೊರೆದು ಪೋಗುವರಲ್ಲವೆಂದಿಗು |
ಸುರರು ಮುನಿಗಳು ಸಿದ್ಧಸಾಧ್ಯರು ಕೇಳಲೀಕ್ಷಣದಿ ||
ಒರೆವೆನೆನ್ನಯ ಶಪಥ ಲಾಲಿಸು |
ಪರಮ ಸಿಂಹಾಸನವನೇರುತ |
ಧರೆಯ ಪಾಲಿಪನಲ್ಲ ತಪ್ಪಲು ಶಂತಸುತನಲ್ಲ || 262 ||

ರಾಗ ಸುರುಟಿ ಏಕತಾಳ

ಬಿಡು ಬಿಡು ಗಾಂಗೇಯ | ಮೆಚ್ಚಿದೆ | ಒಡನೀವೆನು ಸುತೆಯ ||
ಕಡು ಸಂತೋಷದೊಳೀಕೆಯು ಪೆತ್ತಿಹ | ಹುಡುಗಗೆ ಪಟ್ಟವ ಕಟ್ಟುವೆ ನಿಶ್ಚಯ || 263 ||

ತರಳೆಯ ಸುತನಿಂಗೆ | ಮುಂದಾ | ದುರಿತಗಳ್ ಬರದ್ಹಾಂಗೆ ||
ನಿರತ ನೀ ಪಾಲಿಪುದೆಂಬುದು ಸಹಜವು | ಕೊರತೆ ಇನ್ನೊಂದಿದೆ ಲಾಲಿಸಿ ಕೇಳೈ || 264 ||

ತರಳರು ನಿನಗಾಗೆ | ತೇಜದಿ | ಹಿರಿಯರು ಧುರದೊಳಗೆ ||
ತರಳೆಯಕುವರರ ನರಿಯುತ ಧರೆಯನು | ಪೊರೆಯುವರೆನಲಾಗೆಂದ ನಪಾತ್ಮಜ || 265 ||

ರಾಗ ದೇಶಿ ಅಷ್ಟತಾಳ

ಆದರಾಲಿಸು ಶಪಥ ಇನ್ನೊಂದಿದೆ |
ಖೇದಪಡದಿರು ನಿನ್ನ ಮನಸಿಗೆ | ಮೋದದಿಂದಲೆ ಪೇಳ್ವೆನು || 266 ||

ಸುರರು ಸಿದ್ಧರು ಸಾಧ್ಯಗಂಧರ್ವರು |
ಗರುಡಪನ್ನಗರೆಲ್ಲ ಕೇಳ್ವುದು | ಒರೆವೆನೆನ್ನಯ ಶಪಥವ || 267 ||

ಸುತವಿಹೀನಗೆ ಗತಿಯಿಲ್ಲವೆಂಬುವ |
ಶ್ರುತಿಯು ಜನಕನ ಕಾರ್ಯಕೋಸುಗ | ಗತಿಯ ಪಡೆದಪೆ ಮುಂದಕೆ || 268 ||

ಇಂದಿನಾರಭ್ಯ ಮರಣ ಪರ್ಯಂತರ |
ವೊಂದೆ ಮನದೊಳು ಬ್ರಹ್ಮಚರ್ಯವು | ಇಂದುಮುಖಿಯರ ಪೊಂದೆನು  || 269 ||

ಎಲೆ ಮಾತಾಮಹ ಕಳುಹೆನ್ನ ಮಾತೆಯ |
ನಿಳೆಯಪಾಲನು ಚಿಂತೆಯೊಳಗಿಹ | ಕಳೆಯಬೇಡೈ ಕಾಲವ || 270 ||

ರಾಗ ಕೇದಾರಗೌಳ ಝಂಪೆತಾಳ

ದಿವಿಜವರರೆಲ್ಲ ನೋಡಿ | ಜಾಹ್ನವಿಯ | ಕುವರ ಭಾಪೆಂದು ಪಾಡಿ ||
ಪರಮ ವಿಭೀಷಣ ಶಪಥವ | ಗೈದನಿವ | ತೊರೆದು ಮುಂದಣ ಸೌಖ್ಯವ  || 271 ||

ಕರೆಯುವುದು ಭೀಷ್ಮನೆಂದು | ಜಗದೊಳಗೆ | ವರಪ್ರಾಜ್ಞ ಸುಗುಣಸಿಂಧು ||
ಸರಿಯೆಂದು ಪೂಮಳೆಯನು | ಕರೆಯುತಲೆ | ಸುರರಿರಲ್ ದಾಶವರನು || 272 ||

ಜನಪಸಂಭವನೆ ಕೇಳು | ಸತ್ಯವತಿ | ಗುಣಯುತಳು ಕೇಳ್ ಕಪಾಳು ||
ಜನಕಗೊಪ್ಪಿಸು ಎನ್ನುತ | ಕಳುಹಿಸಲು | ಘನವೇಗ ಮುದತಾಳುತ || 273 ||

ಭಾಮಿನಿ

ಹರುಷದಿಂದಲೆ ಭೀಷ್ಮ ಮಾತೆಯ |
ಚರಣಕೆರಗುತ ರಥವನೇರಿಸಿ |
ಪರಿಪರಿಯ ಕೊಂಡಾಡಿ ಕಂಧರನನ್ನು ಬೀಳ್ಗೊಳುತ ||
ತ್ವರಿತದೊಳಗಾಮಾತ್ಯ ಸಹಿತಲೆ |
ಕರಿಪುರಕೆ ನಡೆತಂದು ಜನಕನಿ |
ಗೆರಗಿ ಕೈಮುಗಿಯುತ್ತ ಸುದತಿಯ ಕರೆದು ಮುಂದೆಸೆಯ || 274 ||

ವಾರ್ಧಕ

ಮೋದದಿಂದವಧರಿಸು ಮಜ್ಜನಕ ಶಶಿಮುಖಿಯ |
ಸಾದರದಿ ಕೈಗೊಂಡು ಪೊರೆಯೆಮ್ಮ ರಾಷ್ಟ್ರವನೆ |
ಪಾದಕಾನತಳಾಗಿ ನಿಂದಿರುವಳಂ ನೋಡಿ ಮೇದಿನಿಪ ಸಂತಸದೊಳು ||
ಬೋಧಿಸಿದನೆಂತೆನ್ನ ಸುಕುಮಾರನಂಬಿಗಗೆ |
ಬಾಧಿಪುದು ಮನ್ಮನವ ಪೇಳೆನಲ್ ಸಚಿವನಂ |
ಹೇ ದಯಾನಿಧೆ ಕೇಳಬೇಕೆಂದು ಪೊಡಮಡುತಲಾದ ಚರಿತೆಯ ವಿವರದಿ || 275 ||

ರಾಗ ಮಾರವಿ ಏಕತಾಳ

ಅರಸ ಲಾಲಿಸು ದಾಶನೊಳ್ ನಿನ್ನಯ | ತರಳನು ಒರೆದಿರುವ ||
ಉರುತರದ ಶಪಥವನಿನ್ನೇನೆಂಬೆನು | ಸುರರು ಕೊಂಡಾಡಿದರು || 276 ||

ಕ್ಷಿತಿಯ ಪಟ್ಟವ ನಾ ವಹಿಸೆನು ಸತ್ಯ | ವತಿಯಾತ್ಮಜರುಳಿದು ||
ಸತಿಯರನೊಲಿಸೆನು ಮರಣಾವಧಿಯೆಂ | ದತಿ ಪೌರುಷ ಗೈದ || 277 ||

ಭೀಷಣ ಶಪಥವ ಗೆಯ್ಯಲು ನಭದಲಿ | ತೋಷದಿ ಸುಮನಸರು ||
ಭೀಷ್ಮನು ಎನ್ನುತ ನಾಮವನಿತ್ತರು | ದಾಶನು ತೋಷಿಸಿದ || 278 ||

ರಾಗ ಆನಂದಭೈರವಿ ಆದಿತಾಳ

ಭರತಾನ್ವಯದ ವಕ್ಷವು | ಪುಷ್ಪಿತವಾಯ್ತು |
ಧರೆಗಾನಂದದ ಫಲವು || ಪ ||

ಮೆರೆವುದು ಮುಂದಕೆ | ತರಳನ ದೆಸೆಯಿಂದ |
ಸುರನರೊಳಗಿವನ | ಪೋಲ್ವ ಸದ್ಗುಣರುಂಟೆ || ಅ ||

ತೊರೆದ ತನ್ನಯ ಸೌಖ್ಯವ | ಪರ ಕಾರ್ಯಕಾಗಿ |
ಧರಿಸಿ ಸಾತ್ತ್ವಿಕಭಾವವ ||
ಎರೆದು ಜಲವ ರಕ್ಷಿ | ಪಂಗೆ ತೆಂಗಿನವಕ್ಷ |
ಶಿರದೊಳು ವಹಿಸುತ್ತ | ಲೀವಂತೆ ಎಳೆನೀರ || 279 ||

ಇಳೆಯೊಳ್ ನಿನ್ನಂಥ ಶೂರರ | ಕಾಣೆನು ಮುದ್ದು |
ಛಲದಂಕ ಮಮ ಕುವರ ||
ಕುಲಕೀರ್ತಿ ಸಂಪದ | ಗಳಿಸಲೋರ್ವನೆ ಸಾಕು |
ಜಲಜನಾಭನು ನಿನ್ನ | ಸಲಹಲಿ ಸಂತತ || 280 ||

ಇಚ್ಛೆ ಬಂದಾಗ ಮತಿಯು | ಒದಗಲಿ ನಿನಗೆ |
ಸಚ್ಚರಿತನೆ ದಿಟವು ||
ಹೆಚ್ಚಿನ ಪೌರುಷಗೈದೆ ನೀನೆನಗಾಗಿ |
ಮೆಚ್ಚಾ ಕೇಶವ ನಿನ | ಗಿತ್ತ ಕ್ಲೇಶಕೆ ಎನಗೆ || 281 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇಂತು ಮರುಗುವ ಜನಕನಂಘ್ರಿಗೆ | ಸಂತಸದಿ ಮಣಿಯುತ್ತ ಭೀಷ್ಮನು |
ಚಿಂತೆಯಾತಕೆ ಪಿತನೆ ಎನ್ನಯ | ಧರ್ಮ ಕೇಳು || 282 ||

ಪಿತನಿಗತಿಹಿತ ಕಾರ್ಯಗೈಯದ | ಸುತನ ಪೊರಳೀ ವಸುಧೆ ಕೇಳೈ |
ಗತಿಯ ಪಡೆದಪೆಯಂತ್ಯ ದೊಳಗಿಹ | ದಿಂದಲೇನು || 283 ||

ವರಿಸಬೇಕೀ ಸತ್ಯವತಿಯನು | ಕರುಣಿ ನೀನೆನೆ ಶಂತಭೂಪನು |
ಹರುಷದಿಂ ಗಾಂಧರ್ವವಿಧಿಯೊಳು | ಸ್ವೀಕರಿಸಿದ || 284 ||

ರತಿಸಮೋಪಮ ಸತಿಯ ಪೊಂದಿದ | ಕ್ಷಿತಿಪನಿಗೆ ನಿರ್ಧನಿಕ ನಿಧಿಯನು |
ಹಿತದಿ ಕೈಕೊಂಡಂತೆ ವಿಭವದೊ | ಳಿರ್ದನಂದು || 285 ||

ವಾರ್ಧಕ

ಇಂತು ನಪನನುದಿನದಿ ಸತ್ಯವತಿಯಂ ಕೂಡಿ |
ಕಂತುಸುಖದಿಂದಿರಲ್ಕೊಂದು ವತ್ಸರಮಾಗ |
ಲಂತರಂಗದಿ ಗರ್ಭ ಬೆಳೆದು ನವಮಾಸದೊಳ್ ಕಾಂತೆ ಪೆತ್ತಳು ಯಮಳರ ||
ಸಂತಸದೊಳೀ ವಾರ್ತೆಯಂ ಕೇಳುತಾಕ್ಷಣವೆ |
ಶಂತನಪ ಜಾತಕರ್ಮವ ಗೈದು ವಿಭವದಿಂ |
ದಂತಿಪುರದೊಳಗಿರ್ಪ ದ್ವಿಜರಿಂಗೆ ದಕ್ಷಿಣೆಯನಿತ್ತು ಪರಿಪರಿ ಮನ್ನಿಸಿ || 286 ||

ರಾಗ ಕೇದಾರಗೌಳ ಅಷ್ಟತಾಳ

ಪುಟ್ಟಿದರ್ಭಕರಿಂಗೆ ದ್ವಾದಶ ದಿನದೊಳು | ತೊಟ್ಟಿಲೊಳಿಕ್ಕುತಲಿ ||
ಪಟ್ಟಣದೊಳಗಿರ್ಪ ಮುತ್ತೈದೆರೆಲ್ಲರು | ಒಟ್ಟಾಗಿ ತೂಗಿದರು || 287 ||

ಧರಣಿಪಾಲನು ಹಿರಿಯನಿಗೆ ಚಿತ್ರಾಂಗದ | ನೆರಡನೆ ಕುವರನಿಗೆ |
ಹರುಷದೊಳ್ ವಿಚಿತ್ರ ವೀರ್ಯನೆನ್ನುತ ನಾಮ | ಕರಣವ ವಿರಚಿಸಿದ || 288 ||

ದಿನದಿನದೊಳಗಭಿ ವದ್ಧಿಯನೈದುತ್ತ | ಜನನಿ ಮುಂತಾದರಿಗೆ |
ಘನತೋಷಗೊಳಿಸುತ್ತ ನಾಲ್ಕೆಂಟಬ್ದಗಳಾಗೆ | ಜನಪಾಲನುಭಯರಿಗೆ  || 289 ||

ವಿರಚಿಸಿ ಚೌಲೋಪ ನಯನವ ಮೋದದಿ | ಧರಣಿಪನೊಂದಿನದಿ ||
ತರಳರ ಶಂಗರಿಸುತ ಕರೆತಹುದೆಂದು | ಅರುಹಿದ ಮಂತ್ರಿಯೊಳು || 290 ||

ವಾರ್ಧಕ

ಕಡಗ ಕಂಕಣ ಕರ್ಣಕುಂಡಲಂಗಳನಿಟ್ಟು |
ನಡುವಿನೊಡ್ಯಾಣದಿಂ ಶೋಭಿಸುವ ತರಳರಂ |
ಪೊಡವಿಪನ ಬಳಿಗಾಗಿ ಸಚಿವನುಂ ಕರೆತರಲ್ ಪಿಡಿದಪ್ಪುತಾನಂದದಿ ||
ಒಡನೀರ್ವರಂ ಭೀಷ್ಮಗೊಪ್ಪಿಸುತ ಪೇಳಿದಂ |
ಹುಡುಗರಿಗೆ ವಿದ್ಯಮನ್ನರುಹಿ ಪೊರೆವುದು ನೀನು |
ಜಡಜನಾಭನ ಧ್ಯಾನದಿಂದಿರ್ಪೆನೆಂದೆನುತ ಪೊಡವೀಶನಿರೆ ಸೌಖ್ಯದಿ || 291 ||