ಭಾಮಿನಿ
ಅಸ್ತ್ವೆನುತ ಜಾಹ್ನವಿಯ ಕುವರನು |
ಸತ್ಯವತಿಸುತರಿಂಗೆ ವಿಧವಿಧ |
ಶಸ್ತ್ರವಿದ್ಯೆಗಳನ್ನು ಸಾಂಗೋಪಾಂಗದಿಂದರುಹಿ ||
ಚಿತ್ತಜೋಪಮರೊಡನೆಯೋಲಗ |
ವಿತ್ತು ವಿಭವದಿ ಭೀಷ್ಮನೊಂದಿನ |
ಪೃಥ್ವಿಪಟ್ಟವ ವಹಿಸುನೀನೆಂದೆನಲು ಚಿತ್ರಾಂಗ || 292 ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚರಣಕೆರಗುತಲಗ್ರಜನೆ ನೀ | ಹಿರಿಯವನು ಪಟ್ಟಾಭಿಷೇಕವ |
ಹರುಷದಿಂ ಕೈಗೊಂಡು ನಮ್ಮನು | ಪೊರೆವುದೆನಲು || 293 ||
ತರಳ ಕೇಳೈ ನಿನ್ನ ಮಾತಾ | ಮಹಗೆ ಒರೆದಿಹೆ ಭಾಷೆ ಪೂರ್ವದಿ |
ಮಹಿಯ ಪಾಲಿಪನಲ್ಲವೆಂದಿಗು | ಕೇಳು ನುಡಿಯ || 294 ||
ಧರಣಿಯಧಿಪತಿಯಾಗು ನೀನೆನೆ | ಬರುವೆ ನಾ ದಿಗ್ವಿಜಯ ಗೆಯ್ಯುತ |
ವಿರಚಿಸುವುದಭಿಷೇಕ ಕಡೆಯೊಳ | ಗೆನಗೆ ನೀವು || 295 ||
ಎನುತಲಪ್ಪಣೆಗೊಂಡು ತನ್ನಯ | ಜನನಿಯಾಜ್ಞೆಯ ಪೊತ್ತು ಕರದಲಿ |
ಧನುವ ಕೊಂಡಾಸೇನೆಸಹಿತಲೆ | ಪೊರಟನಾಗ || 296 ||
ರಾಗ ಸೌರಾಷ್ಟ್ರ ಮಟ್ಟೆತಾಳ
ನಡೆದನಾ ದಿಗ್ವಿಜಯಕೆನುತಲಿ | ಸಚಿವ ಸಹಿತ ನಪಕುಮಾರ |
ನಡೆದನಾ ದಿಗ್ವಿಜಯಕೆನುತಲಿ || ಪ ||
ಕರಿರಥಾಶ್ವಸೇನೆ ಸಹಿತಲಿ | ಶಂತಸುತನು | ತೆರಳೆ ದ್ವಿಜರ ಪರಕೆಯಿಂದಲಿ ||
ಹರಿಣನೇತ್ರೆಯವರು ಮುಂದೆ | ಹರಳಿನಾರತೀಯನೆತ್ತಿ |
ತರತರದಲಿ ಪಾಡುತಿರಲು | ಕರಿಯನಗರ ಪೊರಟು ನಡೆದ || 297 ||
ಅಂಗ ಕಾಳಿಂಗ ಗುರ್ಜರ | ನಪರ ಗೆಲಿದು | ವಂಗ ಕಾಶ್ಮೀರ ಮಗಧರ ||
ತುಂಗಬಲ ವಿದರ್ಭ ಸೌ | ರಾಷ್ಟ್ರ ಕಾಂಭೋಜರನ್ನು |
ಭಂಗಪಡಿಸಿ ಕಪ್ಪಗೊಳುತ | ಹಿಂಗದುತ್ತರಕೆ ನಡೆದ || 298 ||
ಭರದಿ ಸೌವೀರನಗರಕೆ | ಪಡೆಯ ತರುಬಿ | ತೆರಳಿ ಮುತ್ತಲಾಗ ಸಮರಕೆ ||
ಚರರು ದ್ವಾರದಲ್ಲಿ ತಡೆದು | ಮರುಳು ಜನರೆ ನಿಲ್ಲಿರೆನುತ |
ಧುರಕೆ ಮುಂದೊತ್ತಿ ಬರಲು | ಸೆರೆಯ ಪಿಡಿದು ಕರವ ಬಿಗಿದು || 299 ||
ಕಂದ
ಕರಿನಗರಾಧಿಪ ಶಂತನು |
ತರಳನು ಖ್ಯಾತಿಯೊಳರಿಮರ್ದನ ಚಿತ್ರಾಂಗಂ ||
ಧುರಕೈತಂದಿಹನೆನ್ನುತೆ |
ಪುರಪತಿಗರುಹನೆ ಚಾರಕರೈತಂದಾಗಳ್ || 300 ||
ರಾಗ ಸಾರಂಗ ಅಷ್ಟತಾಳ
ಧರಣಿಪ ಲಾಲಿಸಯ್ಯ | ಕಾಂತೀವರ್ಮ | ಧುರಪರಾಕ್ರಮಿಯೆ ಜೀಯ ||
ಕರಿಪುರದರಸನ ತರಳ ಚಿತ್ರಾಂಗದ |
ಪರಮವಿಕ್ರಮನೀಗ ಧುರಕೈತಂದಿರ್ಪನು || 301 ||
ಶೂರನಾದಡೆ ಯುದ್ಧದಿ | ಜಯವ ಪೊಂದಿ | ಸಾರಲಿ ಬಹುತ್ವರ್ಯದಿ ||
ಮಾರಾಂತು ನಿಲದಿರೆ ಕಪ್ಪವನೀಯಲಿ |
ಧಾರಿಣಿಪನ ಮುದದಿ ಸಲಹುವೆನೆಂದನು || 302 ||
ಜವನ ಪಾಳೆಯದಂದದಿ | ಮುತ್ತಿದೆ ಸೈನ್ಯ | ಭುವನೇಶ ಕೇಳ್ ದಯದಿ ||
ಬವರಕೆ ಪೊರಡಯ್ಯ ತಡವ್ಯಾಕೆಂದೆನಲಾಗ |
ಜವದೊಳಾಸನದಿಂದಲೆದ್ದು ಹೂಂಕರಿಸುತ್ತ || 303 ||
ರಾಗ ಕೇದಾರಗೌಳ ಝಂಪೆತಾಳ
ದಂತಿನಗರಾಧೀಶರು | ತಾವೆ ಬಲ | ವಂತರೆನ್ನುತ ಮೆರೆವರು ||
ಪಂಥದಿಂದಿವರಸುವನು | ತೊರೆಸಿ ಕಲಿ | ಯಂತೆಯಾಳುವೆ ಧರೆಯನು || 304 ||
ಕೊಡೆನು ಕಪ್ಪವ ಸಾಮದಿ | ಮುಂದರಿದು | ಮಡನೊಮ್ಮೆ ಬರೆ ಸಮರದಿ ||
ನಡುಗಿಸುವ ಸೌವೀರನು | ತಿಳಿಯದೀ | ಹುಡುಗ ಬಂದನೆ ಮರುಳನು || 305 ||
ಎಲೆ ಮಂತ್ರಿ ಸೌರಂಭನೆ | ಏಳೇಳು | ಬಲಸಹಿತಲತಿ ಶೂರನೆ ||
ಕಲಹ ಕೈತಂದಿರ್ಪನ | ಜವಗೆಡಿಪೆ | ಬವರದೊಳಗಾ ಮೂರ್ಖನ || 306 ||
ಎನೆ ಮಂತ್ರಿ ಸೈನ್ಯವೆರಸಿ | ಬರೆ ಯುದ್ಧ | ಕೆನುತ ನಡೆದನು ಸಾಹಸಿ ||
ಜನಪ ರೋಷದಿ ಬರುತಿರೆ | ಚಿತ್ರಾಂಗ | ನನುವರಕೆ ಮಾರಾಂತಿರೆ || 307 ||
ಅರಸಗೊಂದಿಸಿ ಸಚಿವನು | ಪೋಪೆನನು | ವರಕೆಂದು ಸೌರಂಭನು ||
ಬರೆ ಕಂಡು ರಣಧೀರನು | ಇದಿರಾಗಿ | ತೆರಳುತಿರೆ ಚಿತ್ರಾಂಗನು || 308 ||
ಕುರಿಯ ಗೆಲುವರೆ ಮಗಪತಿ | ಬೇಕೆ ತವ | ಶರಣನಿರೆ ನಾ ಸುನೀತಿ ||
ಕರುಣಿಸಪ್ಪಣೆ ಎನ್ನುತ | ನಮಿಸುತಲೆ | ತೆರಳಿ ಪೇಳ್ದನು ಗಜರುತ || 309 ||
ರಾಗ ಭೈರವಿ ಅಷ್ಟತಾಳ
ದುರುಳ ಸೌರಂಭ ಕೇಳು | ಬರಿದೆ ಎನ್ನ | ಧುರಕನುವಾಗೀಗಳು ||
ಹರಣವ ಸುಮ್ಮನೆ ಬಲಿಯನೀಯಲಿ ಬೇಡ |
ತೆರಳು ಪಿಂದಕೆ ಘಮ್ಮನೆ || 310 ||
ಅರರೆ ಸುನೀತಿ ನೀನು | ಓರ್ವನೆ ಮಿಕ್ಕ | ಪುರುಷರು ಧರೆಯೊಳಿನ್ನು ||
ಇರರೆಂದು ಗ್ರಹಿಸಿದೆ ಧುರಪರಾಕ್ರಮಿಯೆಮ್ಮ |
ಧೊರೆಯ ಪರಿಯ ಬಲ್ಲೆಯ || 311 ||
ಕಾಂತಿವರ್ಮನು ಶೂರನು | ಎಮ್ಮಯ ನಪ | ಶಾಂತರಾಯನಿಗಿವನು ||
ಹೊಂತಕಾರಿಯು ಕಪ್ಪವೀಯುತ್ತಲಿರ್ದನ |
ನೆಂತು ನೀ ಪೊಗಳುವೆಯ || 312 ||
ಹಿಂದಾತಗಿತ್ತನೆಂದು | ಕಷ್ಟದ ಭ್ರಾಂತಿ | ಯಿಂದ ನೀವ್ ಬಂದಿರಿಂದು ||
ಮಂದಮತಿಯೆ ಎನ್ನ ಶರದೊಳು ಪ್ರಾಣಕೆ |
ಬಂದೀತು ಕಡೆಗಾಲವು || 313 ||
ರಾಗ ಶಂಕರಾಭರಣ ಮಟ್ಟೆತಾಳ
ಎಲೆಲೆ ಸೌರಂಭ ನಿನ್ನ | ಛಲವ ನೋಳ್ಪೆ ನಿಲ್ಲೆನುತ್ತ |
ಕಲಿ ಸುನೀತಿ ಸುರಿದನಸ್ತ್ರ | ಮಳೆಯ ಗಜರುತ || 314 ||
ಬರುವ ಬಾಣತತಿಯ ತರಿದು | ಗರಳ ಸುರಿಸುತಿರುವ ಸರ್ಪ |
ಶರವನೆಸೆಯೆ ಗರುಡಬಾಣ | ದಿಂದ ಮುರಿದನು || 315 ||
ತಿಮಿರಶರವನಾಗ ಸೌ | ರಂಭ ಬಿಡಲು ಕಾಣುತದರ |
ನಮಿತ ಬಲನು ಮಿಹಿರಶರದಿ | ಶಮಿಸಲಾಕ್ಷಣ || 316 ||
ಪರುವತಾಸ್ತ್ರವೈಂದ್ರವಹ್ನಿ | ಶರದಿ ಸೌರಂಭ ಪೊಡೆಯೆ |
ತರಿದ ಕುಲಿಶ ವೈಷ್ಣವಾಸ್ತ್ರ | ವಾರುಣಾಸ್ತ್ರದಿ || 317 ||
ಮಲ್ಲಯುದ್ಧಕೆನುತ ನಿಲಲು | ಖುಲ್ಲ ತಾಳು ತಾಳೆನುತ್ತ |
ಮೆಲ್ಲನವನ ಸೆರೆಯ ಪಿಡಿದ | ನಾ ಸುನೀತಿಯು || 318 ||
ಭಾಮಿನಿ
ಧುರದಿ ಸಚಿವನ ಸೆರೆಯ ಪಿಡಿದಿಹ |
ಕುರಿಯ ತರಿದ್ಹೆಮ್ಮಾರಿಗೌತಣ |
ವಿರಿಚಿಪೆನು ತಾನೆನುತ ಗರ್ಜಿಸುತಾಗಲಡಿಗಡಿಗೆ ||
ಧರಣಿಪಾಲಕ ಕಾಂತಿವರ್ಮನು |
ಬರಲು ಚಿತ್ರಾಂಗದನು ಸಮರಕೆ |
ಭರದಿ ಬಂದಡ್ಡೈಸೆ ಪೇಳಿದನಾಗ ರೋಷದಲಿ || 319 ||
ರಾಗ ಸೌರಾಷ್ಟ್ರ ಮಟ್ಟೆತಾಳ
ಚಂದವಾಯ್ತು ಕಾಂತಿವರ್ಮನೆ | ಛಲದಿ ರಣವ ಕೊಡಲು ಬಂದೆ |
ಚಂದವಾಯ್ತು ಕಾಂತಿವರ್ಮನೆ ||
ಮಂದಮತಿಯೆ ಎನ್ನ ಪಿತಗೆ | ಹಿಂದೆ ನೀನು ಕಪ್ಪವಿತ್ತು |
ಬಂದ ಸಹಸಿಯಹುದು ಬಲ್ಲೆನು | ನಿಲ್ಲು ನಿಲ್ಲು |
ಕೊಂದು ನಿನ್ನ ಧರೆಯ ಕೊಂಬೆನು || 320 ||
ದುರುಳ ಚಿತ್ರಾಂಗ ಕೇಳೆಲೊ | ನಿನ್ನ ತರಿದು ಪಿಂದಕಿತ್ತ |
ಕರವ ನಾನು ಕೊಂಬೆ ತಾಳೆಲೊ ||
ಪರಮ ಶೌರ್ಯಗಳನು ತೋರು | ಸೆರೆಯ ಪಿಡಿದು ನಿನ್ನನೀಗ |
ಕರಿಪುರವ ಸೆಳೆದು ಕೊಂಬೆನು | ಭಳಿರೆ ಭಳಿರೆ |
ಧರೆಯೊಳೇಕಛತ್ರವಾಳ್ವೆನು || 321 ||
ರಾಗ ಮಾರವಿ ಏಕತಾಳ
ಕೊಡುವೆನು ಕರಿಪುರ ಶರಮೊನೆಯಲಿ ಕೇ | ಳೊಡನಿದ ಕೊಳ್ಳೆನುತ ||
ಬಿಡೆ ಚಿತ್ರಾಂಗನು ತರತರದಸ್ತ್ರವ | ಪೊಡವಿಪ ಪರಿಕಿಸುತ || 322 ||
ಕಡಿಯುತ ನಡುಪಥದೊಳಗಾ ಶರಗಳ | ಕಿಡಿಯೇರುತಲಂದು ||
ಬಿಡೆ ಪೊಸ ಬಾಣವ ಚಿತ್ರಾಂಗನು ಗುಡು | ಗುಡಿಸುತ ಕತ್ತರಿಸೆ || 323 ||
ಮುರಿಯುತ ಧನುವನು ರಥವನು ಚೂರ್ಣಿಸಿ | ತುರಗವ ಸಾರಥಿಯ ||
ತರಿಯುತ ಕುಶಲದಿ ವಿರಥನ ಮಾಡಿದ | ಧರಣಿಪ ಚಿತ್ರಾಂಗ || 324 ||
ಗದೆಗೊಳ್ಳುತ ಬರೆ ಸೆಳೆದಾ ಕ್ಷಣದೊಳು | ಕುದಿಯುವ ಕೋಪದಲಿ ||
ಚದುರ ಚಿತ್ರಾಂಗನು ಸೆರೆಪಿಡಿದಾತನ | ವಿಧವಿಧ ಮೂದಲಿಸೆ || 325 ||
ರಾಗ ಸಾಂಗತ್ಯ ರೂಪಕತಾಳ
ಧರಣಿಪಾಲಕ ಕಾಂತಿವರ್ಮನು ಮೌನದಿ |
ಧರೆಯ ನೋಡುತಲಿರೆ ಕಂಡು ||
ಕರಿಪುರವನು ಕೊಂಬ ವೀರ ಬಾರೆನ್ನಯ |
ಪುರದಿ ಬಂಧಿಪೆ ನಿನ್ನನೆನಲು || 326 ||
ಚರಣದೊಳೆರಗಿ ನಾ ಪರಮ ಮೂರ್ಖನು ಎನ್ನ |
ಕೊರಳ ಕತ್ತರಿಸೀಗ ನೀನು ||
ಧರೆಯ ಭಾರಕನೆನ್ನ ಕೊಲಬೇಕೆಂದೆನಲಾಗ |
ಧರಣಿಪಾತ್ಮಜನೆಂದನವಗೆ || 327 ||
ಧರಣೀಶ ಕೇಳ್ ನಿನ್ನ ಹರಣ ಕೊಂಬುವನಲ್ಲ |
ತೆರಳೀ ಬಾರೆನ್ನೊಡನೀಗ ||
ಧರೆಯೊಳು ದಿಗ್ದೇಶ ಗೆಲುವರೆ ವೇಗದಿ |
ಪೊರಡುವನೆನೆ ನಪವರನು || 328 ||
ಹರುಷದಿ ಕಪ್ಪಕಾಣಿಕೆಯಿತ್ತು ಮಂತ್ರಿಯ |
ನಿರಿಸಿ ತನ್ನಯ ಪುರವರದಿ ||
ಭರದೊಳು ಬಲಸಹ ಚಿತ್ರಾಂಗನೊಡನೆ ತಾ |
ತೆರಳಿ ಬಂದನು ಕಾಂತಿವರ್ಮ || 329 ||
ಧರಣಿ ಕಂಪಿಸುವಂತೆ ಪೊರಮಟ್ಟು ವೇಗದಿ |
ತೆರಳಿದರ್ ಕುಂತಳಪುರಕೆ ||
ಹೊರಗಿನುದ್ಯಾನದೊಳ್ ನಿಂತು ತನ್ನಯ ಚಾರ |
ಕರೆದೆಂದ ಚಿತ್ರಾಂಗನಂದು || 330 ||
ಭಾಮಿನಿ
ಚಾರಕನೆ ಪೋಗೀಗ ಕುಂತಳ |
ಧಾರಿಣಿಪನೊಡನುಸಿರು ಸಮರಕೆ |
ಧೀರ ಚಿತ್ರಾಂಗದನು ಸೇನೆಯ ಕೂಡಿ ಬಂದಿಹನು ||
ವೀರನಾದಡೆ ಸಮರ ವದಕವ |
ಬಾರದಿರೆ ಕರವೀಯಲೆನ್ನುತ |
ಭೋರನರುಹೆನೆ ಪೋಗಿ ವಂದಿಸುತೆಂದನರಸಂಗೆ || 331 ||
ಆರ್ಯ ಸವಾಯ್
ಸಲಾಮು ಸೂರ್ಯಸೇನ ದೊರೆಯೆ | ಸಲಾಮು ಕುಂತಳಪಾಲಕ ||
ಕಲಾಪ ಕರಿಪುರದೊರೆ ಚಿತ್ರಾಂಗನ | ಗುಲಾಮನೆನ್ನಯ ಬಿನ್ನಪ || 332 ||
ಒಡೆಯನ ಹುಕ್ಕುಂ ಆಗೈತೀಗ | ತಡೆಯದೆ ಕಪ್ಪವನೀಯುವದು ||
ಕೊಡದಿರೆ ಪಡೆಗಳ ಜಮ್ಕಾಯ್ಸುತ ನ | ಮ್ಮೊಡನೆ ಯುದ್ಧವ ಗೈಯುವುದು || 333 ||
ಕುಡಿಕುಡಿ ಮಾಸೆಯ ಹುಡುಗ ಶಿಪಾಯ್ ಬಲ | ಪಿಡಿಯುತ ಖಡುಗವನಿಂತಿಹರು ||
ಹೊಡೆತವ ತಿಂದೂ ಕಡೆಯೊಳ್ ಕಪ್ಪವ | ಕೊಡುವದು ಹೇಸಿಕೆ ನೋಡಿರು || 334 ||
ಭಾಮಿನಿ
ಚಾರನಿಂತೆನಲಾಗ ಕುಂತಳ |
ಭೂರಮಣ ಹೂಂಕರಿಸುತೆಂದನು |
ಭೂರಿಕೊಬ್ಬಿನೊಳಿವನು ಸೇನೆಯ ತರುಬುತೆಮ್ಮೆಡೆಗೆ ||
ಸಾರಿ ಬಂದನೆ ಭಳಿರೆ ರಣದಲಿ |
ತೋರಿಸುವೆ ಕೈಚಳಕವೆಲ್ಲವ |
ಧಾರಿಣಿಯೊಳೆನಗಿದಿರು ನಿಲ್ಲುವ ಭಟರದಾರೆಂದ || 335 ||
ರಾಗ ಪುನ್ನಾಗ ತೋಡಿ ಅಷ್ಟತಾಳ
ಪುಂಡ ಚಿತ್ರಾಂಗನು | ಬಲ್ಲನೆ ಎನ್ನ |
ಚಂಡ ಸಾಹಸವನ್ನು || ಪ ||
ಖಂಡಿಪೆನವನ ಮಸ್ತಕವ | ಕಳ | ಕೊಂಡ ವ್ಯರ್ಥದೊಳಾಯುಷವ ||
ದಂಡ ಧರನಿಗೆ ಸಮನು ಕುಜನರ | ದಂಡಿಸುವ ಮತ್ಸಖನ ಕರೆಸುವೆ |
ಪಾಂಡ್ಯನಪ ಶಶಿಬಿಂದುರಾಯನ | ಷಂಡನಿವನಿಗೆ ಕಪ್ಪಗೊಡುವೆನೆ || 336 ||
ಎಂದು ಚಾರಕರನ್ನು ಕರೆದು | ವೇಗ | ದಿಂದ ಪತ್ರಗಳನ್ನು ಬರೆದು ||
ಚಂದದಿಂದಿದನಿತ್ತು ಪಾಂಡ್ಯನ | ನಿಂದು ಕರೆತಹುದೆಂದು ಕಳುಹುತ |
ಸಂಧಿಗೈತಂದಿರುವ ದೂತನೊ | ಳೆಂದನಾ ನಪ ರೋಷದಿಂದಲಿ || 337 ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಚರನೆ ಪೋಗೈ ನಿನ್ನ ಧರಣಿಪ | ಗರುಹು ನಾಳಿನ ದಿನದಿ ಬಲಗಳ |
ವೆರಸಿ ಬರುವೆನು ಸಮರಕೆನ್ನುತ | ಕಳುಹಲಾಗ || 338 ||
ಬಂದು ವೇಗದಿ ಚಾರಕನು ನಪ | ನಂದನಂಗೆರಗುತ್ತ ಪೇಳ್ದನು |
ಮಂದಿ ಸಹ ನಾಳಿನೊಳು ರಣಕೈ | ತಹೆನು ತಾನು || 339 ||
ಕೊಡೆನು ಕಪ್ಪವ ಸಾಮದಿಂದಲಿ | ಮಡನಿಗಂಜೆನೆನುತ್ತ ಕುಂತಳ |
ಪೊಡವಿಪಾಲಕನೆಂದನೆನಲದ | ಕೇಳುತಾ || 340 ||
ಹಸನವಾಯಿತು ಬರಲಿ ಸಮರಕೆ | ಅಸಮವಿಕ್ರಮ ನೋಳ್ಪೆನೆನ್ನುತ |
ವಸುಧೆ ಪತಿಸುತನಿರಲಿಕಿತ್ತಲು | ಪಾಂಡ್ಯನೆಡೆಗೆ || 341 ||
ಚರನು ನಡೆತಂದೆರಗಿ ಪತ್ರವ | ದೊರೆಗೆ ಕೊಡಲದ ಬಿಡಿಸಿ ತವಕದಿ |
ಹರುಷದಿಂ ವಾಚಿಸಿದನಾ ಶಶಿ | ಬಿಂದುರಾಯ || 342 ||
ವಾರ್ಧಕ
ಪರಮಸಖ ಸೂರ್ಯಸೇನು ಮಾಳ್ಪ ಬಿನ್ನಹಂ |
ಕರಿಪುರದ ಚಿತ್ರಾಂಗ ಧುರಕೆಂದು ಕುಂತಳಕೆ |
ಹರಿತಂದು ನೆಲಸಿರ್ಪನಕಾಗಿ ಬಲಸಹಿತ ಬರಬೇಕು ತಾವೀಗಳು ||
ಧುರದೊಳವನಂ ತರಿದು ತೆರಳಬೇಕೆಂದೆನುತ |
ಬರೆದುದಂ ವಾಚಿಸುತ ಶಶಿಬಿಂದು ವೇಗದಿಂ |
ಪರಿವಾರದೊಡಗೂಡಿ ಕುಂತಳಕೆ ನಡೆ ತಂದು ಧರಣಿಪತಿಯಂ ಕಂಡನು || 343 ||
ರಾಗ ಕೇದಾರಗೌಳ ಅಷ್ಟತಾಳ
ಧರಣಿಪಾಲಕನಾಗ ಶಶಿಬಿಂದುರಾಯನ | ಪರಿಪರಿ ಮನ್ನಿಸುತ ||
ಕರಿಪುರದರಸನೋಳ್ ಧುರವನ್ನು ಗೆಲುವರೆ | ಕರೆಸಿದೆ ನಿನ್ನೆನಲು || 344 ||
ಹಸನಾದುದೆಲೆ ಭೂಪ ನಮ್ಮೊಳು ಕಾದುವರ್ | ವಸುಧೆಯೊಳಿಹರೆ ನೋಡು ||
ಅಸಮವಿಕ್ರಮ ತೋರ್ಪೆನೆನುತಿರಲಾ ದಿನ | ಮಸಗಿತು ಕತ್ತಲೆಯು || 345 ||
ನಿಶಿಯನು ಕಳೆದರುಣೋದಯಕಾಲದಿ | ಬಿಸಜಬಾಂಧವಗರ್ಘ್ಯವ ||
ಕುಶಲದೊಳಿತ್ತುಭಯರು ಪೊರಮಟ್ಟರು | ಎಸೆವಕ್ಷೋಹಿಣಿ ಸೈನ್ಯದಿ || 346 ||
ಭೇರಿ ತಮ್ಮಟೆ ಕಹಳಾರವ ಮೊಳಗಲು | ಶೂರ ಚಿತ್ರಾಂಗದನು ||
ಧಾರಿಣಿಪತಿ ಕಾಂತಿವರ್ಮನೊಂದಿಗೆ ಬಂದು | ದ್ವಾರದಿ ನಿಂದಿರಲು || 347 ||
ಹರಿನಾದವನು ಗೈವ ಕರಿಪುರದರಸನಿ | ಗೆರಗುತ್ತ ಕಾಂತಿವರ್ಮ ||
ತೆರಳಿ ನಾನೀ ನಪರುರವ ಬೇಧಿಪೆ ನೀನು | ಕರುಣಿಸಪ್ಪಣೆಯೆಂದನು || 348 ||
ಒಳ್ಳಿತೈ ಪೋಗೆಂದು ವೀಳ್ಯವ ಕರುಣಿಸೆ | ಬಿಲ್ಲಿಗೆ ಹೆದೆಯ ಪೂಡಿ ||
ಮಲ್ಲ ಸಾಹಸಿ ಬಂದು ನಿಂದಿರೆ ಶಶಿಬಿಂದು | ನಿಲ್ಲೆನುತಿದಿರಾಗುತ್ತ || 349 ||
ರಾಗ ಮಾರವಿ ಮಟ್ಟೆತಾಳ
ಅರರೆ ಕಾಂತಿವರ್ಮ ಭಾಪು | ಭಳಿರೆ ಮೆಚ್ಚಿದೆ ||
ಧುರದಿ ಸೋತು ವೈರಿನಪನ | ಸೇವೆ ಗೈಯುವೆ || 350 ||
ಧರೆಯೊಳಖಿಳ ರಾಯರಿಂದ | ಕಪ್ಪ ಗೊಂಬುವ ||
ದೊರೆ ಚಿತ್ರಾಂಗಗುಭಯರಾವು | ಸೇವೆಗೈಯುವ || 351 ||
ಮುಚ್ಚು ಮುಚ್ಚು ಬಾಯೊಳವನ | ಪೊಗಳುತಿರುವೆಯ ||
ತುಚ್ಛ ನೀನು ಮಾತ್ರ ರಣದಿ | ಬೆದರಿ ಪೋದೆಯ || 352 ||
ನಿಲ್ಲು ನಿನ್ನ ಶೌರ್ಯಗಳನು | ತೋರಿಸೆನುತಲಿ ||
ಬಿಲ್ಲಿಗಸ್ತ್ರ ಪೂಡುತೆಸೆದ | ರೋಷದಿಂದಲಿ || 353 ||
ರಾಗ ಮಾರವಿ ಏಕತಾಳ
ಭರದೊಳು ಪಾಂಡ್ಯನು ಕನಲುತ ಮುರಿದದ | ಪರಮ ಪರಾಕ್ರಮದಿ ||
ಹರಿನಾದದಿ ಸ್ವರ್ಣಪುಂಖಶರೌಘವು | ಸುರಿಸಿದನಾಕ್ಷಣದಿ || 354 ||
ಶರಜಾಲಕೆ ಚಂಡಮರುತನ ತೆರದೊಳು | ಉರುತರ ವಿಶಿಖದಲಿ ||
ತರಿದಾರ್ಭಟಿಸುವ ಕಾಂತಿವರ್ಮನ ಸಂ | ಗರವನು ಪರಿಕಿಸುತ || 355 ||
ಉರಿಯಸ್ತ್ರವ ಶಶಿ ಬಿಂದುವು ಪೊಡೆಯಲು | ವರುಣಾಸ್ತ್ರದೊಳದನು ||
ತರಿಯಲ್ ಖತಿಯೊಳಗುರಗಾಸ್ತ್ರವ ಬಿಡೆ | ಗರುಡಾಸ್ತ್ರದಿ ಶಮಿಸೆ || 356 ||
ಖತಿಯೊಳು ಪಾಂಡ್ಯನು ಧನುವ ಕತ್ತರಿಸಲು | ಕ್ಷಿತಿಪನು ಭೋರ್ಗರೆದು ||
ಅತಿಶಯವಹ ಪರಿಘಾಯುಧ ನೆಗಹುತ | ಕ್ಷಿತಿಯೊಳಗುರುಳಿಸಿದ || 357 ||
ವಾರ್ಧಕ
ಧುರದೊಳಗೆ ಮೂರ್ಛೆಯಂ ತಳೆದ ಶಶಿಬಿಂದುವಂ |
ಕರವ ಬಿಗಿದಾ ಕಾಂತಿವರ್ಮ ಸೆರೆವಿಡಿಯಲ್ಕೆ |
ಧರಣಿ ಬಾಯ್ದೆರೆವಂತೆ ಗರ್ಜಿಸುತ ಕುಂತಳದ ದೊರೆ ಸೂರ್ಯಸೇನ ಭರದಿ ||
ವರರಥವನೇರಿ ಚಾಪವ ಕೊಂಡು ಮಾರ್ಮಲೆತು |
ಹರಿನಾದದಿಂದಿರುವನಂ ಕಂಡು ಚಿತ್ರಾಂಗ |
ಕೆರಳಿ ಹೂಂಕರಿಸುತ್ತ ಧನುವ ಝೇಂಕತಿಗೈದು ಪಲ್ಗಡಿವುತಿಂತೆಂದನು || 358 ||
ರಾಗ ಭೈರವಿ ಏಕತಾಳ
ಧುರವ್ಯಾತಕೆ ನೀ ತೆರಳೊ | ಎಲೆ | ಮರುಳನೆ ಸೈರಣೆ ತಾಳೊ ||
ಭರದೊಳ್ ಕಪ್ಪವ ನೀನು | ಕೊಡೆ | ಪರಿಪಾಲಿಪೆನೈ ನಾನು || 359 ||
ಷಂಢರೊಳೀ ಮಾತುಸಿರು | ಶಿರ | ಖಂಡಿಪೆ ಶೌರ್ಯವ ತೋರು ||
ಚಂಡಪರಾಕ್ರಮಿ ನಾನು | ಬಿಲು | ಗೊಂಡೇಳೀಕ್ಷಣ ನೀನು || 360 ||
ನಿಲ್ಲು ನಿಲ್ಲೆನುತಾಕ್ಷಣದಿ | ಕಿಡಿ | ಚೆಲ್ಲಿ ಚಿತ್ರಾಂಗನು ಭರದಿ ||
ಬಿಲ್ಲಿಗೆ ಶರಮಂ ಪೂಡಿ | ಬಿಡ | ಲುಲ್ಲಾಸದಿ ಗುರಿಮಾಡಿ || 361 ||
ಕುಂತಳಪತಿಯದ ತರಿದ | ಕಾ | ಲಾಂತಕನಂತೆ ಬೊಬ್ಬಿರಿದ ||
ಹೊಂತಕಾರಿಯು ಬಾಣವನು | ಬಿಡೆ | ಶಂತನಪಾಲಾತ್ಮಜನು || 362 ||
ರಾಗ ಶಂಕರಾಭರಣ ಮಟ್ಟೆತಾಳ
ಬಂದ ಶರವ ತರಿದು ಕೋಪ | ದಿಂದ ಸೂರ್ಯಸೇನನಿಂಗೆ |
ಒಂದು ನೂರು ಶರವ ನೋ | ರಂತೆ ಎಚ್ಚನು || 363 ||
ಭರ್ಗನಂತೆ ಕೆರಳಿ ಬಿಂಡಿ | ವಾಲ ಭ್ರುಶುಂಡಿ ಮುಸಲ |
ಮುದ್ಗರಂಗಳಿಂದ ಪೊಯ್ದ | ಕುಂತಳಾಧಿಪ || 364 ||
ತಂಡತಂಡವಾದ ಶರವ | ತುಂಡು ಗೆಯ್ಯುತ ಪ್ರ |
ಚಂಡ ಚಿತ್ರಾಂಗನವನ | ರಥವ ಮುರಿದನು || 365 ||
ವಿರಥನಾಗಿ ಧುರದಿ ಭೂಪ | ಧರೆಗೆ ಧುಮುಕಿ ಮುಷ್ಟಿಯಿಂದ |
ಲೆರಗೆ ಗದೆಯೊಳ್ ಬಡಿದು ಕೈ | ಸೆರೆಯ ಪಿಡಿದನು || 366 ||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಸೆರೆಯ ಸಿಕ್ಕಿಹನನ್ನು ಕಾಣುತ | ಕರಿಪುರೇಶನು ಪೇಳ್ದನವನಿಗೆ |
ಮರುಳೆ ನಾ ಮೊದಲರುಹಲಿಲ್ಲವೆ | ಸಮರಗೈದೆ || 367 ||
ಧರೆಯೊಳಗೆ ನಿನ್ನಂಥ ಸಹಸಿಗ | ರಿರರು ಕಪ್ಪವ ತರಿಸು ಮೂಢನೆ |
ಬರಿದೆ ನಿನ್ನನು ಕೊಲಲು ಹೇಸಿಕೆ | ಬೇಡವೆನಗೆ || 368 ||
ಕೊಡದಿರಲು ಕಪ್ಪವನು ಸಂಕಲೆ | ಯಿಡಿಸಿ ಕರಿಪುರ ಕೊಯ್ವೆ ನಿನ್ನನು |
ಬಿಡೆನು ತವ ಸಖ ಪಾಂಡ್ಯಭೂಪನ | ಸಹಿತ ನಾನು || 369 ||
ಭಾಮಿನಿ
ಕರಿಪುರೇಂದ್ರನ ನುಡಿಗೆ ಭೂಪತಿ |
ಸುರಿವ ನೇತ್ರೋದಕವನೊರಸುತ |
ಪರಮ ಪಾತಕಿಯೆನ್ನ ಕರುಣದಿ ಸಲಹು ಕಪ್ಪವನು ||
ಚರಣಕೀಯುವೆನೆನುತ ರತ್ನಾ |
ಭರಣವರ್ಪಿಸಿ ಪಾಂಡ್ಯಸಹಿತಲೆ |
ತೆರಳಿ ಬರೆ ಚಿತ್ರಾಂಗ ಮುದವನು ಪೊಂದಿ ಮನ್ನಿಸುತ || 370 ||
Leave A Comment