ವಾರ್ಧಿಕ

ಧರಣಿಪರ ದಿಗ್ವಿಜಯಮಂ ಗೈದು ಚಿತ್ರಾಂಗ |
ಸುರಪಾದಿ ದಿಕ್ಪಾಲರಂ ಗೆಲುವೆ ತಾನೆನುತ |
ಹರುಷಾತಿಶಯದಿಂದ ತೆರಳುತಿರೆ ಸುರಗಂಗೆ ಕಂಗೊಳಿಸೆ ಕುರುಕ್ಷೇತ್ರದಿ ||
ಭರದೊಳೈತಂದಾಗ ಜಾಹ್ನವಿಯ ಸಲಿಲದೊಳ್ |
ವಿರಚಿಸುತ ಮಜ್ಜನವ ನಿತ್ಯಕರ್ಮವ ಗೈದು |
ಪರಿಹರಿಸಿ ತಷ್ಣೆಯನ್ನನುಚರರ ಮನ್ನಿಸುತ ತರುವಿನೆಡೆ ಮಂಡಿಸಿದನು || 371 ||

ರಾಗ ಸಾಂಗತ್ಯ ರೂಪಕತಾಳ

ಧರಣಿಪಾಲಕ ಕೇಳು ಚಿತ್ರಾಂಗನೆಂಬ ಖೇ |
ಚರನು ಪುಷ್ಪಕದೊಳುಚರಿಸಿ ||
ತರುಣಿಯರೊಡಗೊಂಡು ಕುರುಕ್ಷೇತ್ರಕೈತಂದು |
ಪರಮ ಸ್ಯಮಂತ ಪಂಚಕದಿ || 372 ||

ಮೆರೆವ ಮಂದಾಕಿನಿಯನು ಕಂಡು ರುಷದಿ |
ವರಜಲ ಕೇಳಿಗೆಂದೆನುತ ||
ಹರಿಣಾಕ್ಷಿಯರನೊಡಂಬಡಿಸಿ ಗಂಧರ್ವನು |
ಸಲಿಲದೊಳಿಳಿಯುತ್ತ ಭರದಿ || 373 ||

ರಾಗ ಬೇಹಾಗ್ ಆದಿತಾಳ

ಹರುಷದಿಂದಾಡಿದರು | ಜಲಕೇಳಿಯ | ಹರುಷದಿಂದಾಡಿದರು || ಪ ||

ಮೆರೆವ ಪೆರ್ನೊರೆ ಜಲ | ವೆರಚಿ ಕೊಳ್ಳುತ ತಮ್ಮೊಳ್ |
ಕಿರುನಗೆ ನಗುತಲಿ | ಎರೆಯನ ಮೋಹಿಸಿ || ಅ ||

ಮುಳುಗುತೋರ್ವರನೋರ್ವರು | ಪಾದವ ಪಿಡಿ | ದೆಳೆದು ಹಾಸ್ಯವ ಗೈದರು ||
ಚೆಲುವನ ಬಿಗಿದಪ್ಪಿ | ಚುಂಬನವೀಯುತ |
ಕಲಕೀರವಾಣಿಯರ್ | ನಲಿದು ವ್ಯಾಮೋಹದಿ || ಹರುಷದಿಂ || 374 ||

ಭಾಮಿನಿ

ಪರಮ ಸಂತೋಷದಲಿ ಖಚರನು |
ಸರಸಿಜಾಕ್ಷಿಯರೊಡನೆ ಜಲದೊಳು |
ಪರಿ ಪರಿಯ ಕ್ರೀಡೆಗಳನಾಡುತಲಿರುವ ಕಾಲದೊಳು ||
ಧರಣಿಪತಿ ಚಿತ್ರಾಂಗದಾಖ್ಯನ |
ಪರಿಕಿಸುತ ಕೋಪದಲಿ ಖಚರನು |
ದುರುಳನ್ಯಾರಿವ ಸುದತಿಯರನೀಕ್ಷಿಸುತ ಕುಳಿತಿಹನು || 375 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಯಾರು ನೀನೆಲೆ ಮನುಜನೆಮ್ಮಯ |
ನಾರಿಯರ ಜಲಕೇಳಿ ಸಮಯದಿ |
ತೋರದಂದದಿ ಕುಳಿತು ನೋಡುವೆ | ಜಾರಪುರುಷ || 376 ||

ಹಸ್ತಿನಾಪುರವಾಳ್ವ ಶಂತನು |
ಪೃಥ್ವಿಪನ ಸುತ ನಪರ ಗೆಲಿದಿಹ |
ನುತ್ತಮನು ಚಿತ್ರಾಂಗದೊರೆ ಕೇ | ಳೆನ್ನ ಪೆಸರು || 377 ||

ಮಂದಮತಿ ಕೇಳ್ಯಾತಕಿಲ್ಲಿಗೆ |
ಬಂದು ಮಂಡಿಸಿ ಎಮ್ಮ ಸತಿಯರ |
ವಂದವನು ಪರಿಕಿಸಿದೆ ನಿನ್ನನು | ಕೊಂದು ಕಳೆವೆ || 378 ||

ಕಾಮುಕನು ನಾನಲ್ಲ ಸತಿಯರ |
ಸ್ತೋಮದೊಳು ಮೆರೆದಿರ್ಪ ಪ್ರೌಢನೆ |
ನಾಮವ್ಯಾವುದು ಯಾರು ನೀನೆನ | ಲೆಂದ ಖಚರ || 379 ||

ಮುಚ್ಚು ಬಾಯ್ ಗಂಧರ್ವರೆಮ್ಮಯ |
ಸ್ವೇಚ್ಛೆಯೊಳು ಕ್ರೀಡಿಪೆವು ದುರುಳನೆ |
ಸಚ್ಚರಿತ ಚಿತ್ರಾಂಗ ನಾನಹೆ | ಜಯಿಸು ಎನ್ನ || 380 ||

ರಾಗ ಮಾರವಿ ಏಕತಾಳ

ಒಳ್ಳಿತು ನಿನ್ನನು ಗೆಲುವೆನು ಸಮರದಿ | ಬಿಲ್ಲನು ಪಿಡಿ ಬೇಗ ||
ಖುಲ್ಲನೆ ರಣದುರ್ಧರ ನಾನಹೆ ಕೇ | ಳೆಲ್ಲಿದೆ ಮೋಹಗಳು || 381 ||

ರಾಗ ಭೈರವಿ ಅಷ್ಟತಾಳ

ಬಲ್ಲೆನು ನಹುಷಾಖ್ಯನ | ಕಾಮಿಸಿ ಶಚಿ | ಯಲ್ಲಿಗೆ ಪೋಗಿರ್ಪನ |
ಖುಲ್ಲ ನಿನ್ನನ್ವಯದೊಳಗಜಗರನಾದ | ಕಳ್ಳ ಕಾಮುಕ ರಾಜನ || 382 ||

ರಾಗ ಮಾರವಿ ಏಕತಾಳ

ಸುರರು ಶ್ರೇಷ್ಠರು ಸಹಜವಹಲ್ಯೆಯ | ಸುರತಕೆ ಪೋಗಿರುವ ||
ದುರುಳ ನಿನ್ನೊಡೆಯನ ದೇಹದೊಳ್ ಯೋನಿಯು | ಭರತದಿ ತುಂಬಿಹುದು || 383 ||

ರಾಗ ಭೈರವಿ ಅಷ್ಟತಾಳ

ಸುತರನ್ನು ಛೇದಿಸುವ | ಗಂಗೆಗೆ ಸೋತು | ರತಿಸುಖದೊಳು ಮನವ ||
ಹಿತದೊಳಿಟ್ಟಿಹ ತವ ತಾತ ಶಂತನುಭೂಪ | ನತಿ ಕಾಮಿಯೆಂಬೆ ನಾನು || 384 ||

ರಾಗ ಮಾರವಿ ಏಕತಾಳ

ಸುರನದಿಗಿತ್ತಹ ಮತ್ಪಿತ ಭಾಷೆಯ | ವಿರಚಿಸೆ ಹಿತವಹಿತ ||
ತೊರೆಯೆನು ನಿನ್ನನೆಂದೆನುವುದಕೋಸುಗ | ತರುಣಿಯ ಕ್ಷಮಿಸಿದನು || 385 ||

ರಾಗ ಭೈರವಿ ಅಷ್ಟತಾಳ

ಸುರರು ಸತ್ಯಾನ್ವಿತರು | ಮಾರ್ಗವ ತಪ್ಪಿ | ತೆರಳುವದಿಲ್ಲವರು ||
ದೊರೆ ಪುರಂದರ ಹಿಂದೆ | ಪರಕಾರ್ಯಕೋಸುಗ | ಗಿರಿಪಕ್ಷಗಳನರಿದ || 386 ||

ರಾಗ ಮಾರವಿ ಏಕತಾಳ

ಚೋರತನದಿ ದಿತಿಗರ್ಭವ ಪೊಕ್ಕುರೆ | ಧೀರ ಪುರಂದರನು ||
ಭೋರನೆ ಶಿಶುವನ್ನರಿದಿಹ ವಂಚಕ | ಶೂರನ ಪೊಗಳುವೆಯ || 387 ||

ರಾಗ ಭೈರವಿ ಅಷ್ಟತಾಳ

ಹೇಳಿದಂದದಿ ಮಾತನು | ಕೇಳುವೆನೆಂದು | ಪೇಳಿಹ ತವ ತಾತನು ||
ಬಾಲನ ಮೋಹಕೆ ಸಿಲುಕಿ ಗಂಗೆಯ ಬಿಟ್ಟ | ಖೂಳನೆ ವಂಚಕನು || 388 ||

ವಾರ್ಧಕ

ಧಾರಿಣಿಪ ಚಿತ್ರಾಂಗ ಕರಿಯ ಕಂಡಾರ್ಭಟಿಪ |
ವೀರ ಕಂಠೀರವನ ತೆರನಂತೆ ಭೋರ್ಗುಡಿಸಿ |
ತೋರು ನಿನ್ನಯ ಚಳಕವೆನುತಲಿದಿರಾಗಲಾ ಸೂರ್ಯಸೇನನು ನಮಿಸುತ ||
ಭೋರನೀತನ ತರಿವೆನಪ್ಪಣೆಯ ನೀಡೆನಲ್ |
ಚಾರುತರ ವೀಳ್ಯವನ್ನಿತ್ತು ಕಳುಹಲ್ಕಾಗ |
ವೀರ ನಿಲ್ಲೆಂದೆನುತ ಧನುವ ಝೇಂಕರಿಸಿ ಖತಿಯೇರಿ ಖಚರನು ಪೇಳ್ದನು || 389 ||

ರಾಗ ಮಾರವಿ ಮಟ್ಟೆತಾಳ

ಯಾತಕೀಗ ಧೀರರೊಡನೆ | ಹಳಚಿ ವ್ಯರ್ಥದಿ ||
ಸೋತಬಾಳ್ವೆ ಭೂಪ ಬೇಡ | ಪೋಗು ವೇಗದಿ || 390 ||

ಷಂಢ ಗಂಧರ್ವ ಸುದತಿ | ಸುರತಸಮರದಿ ||
ಚಂಡಸಹಸಿಯಹುದು ಬೇಡ | ನಡೆಯೊ ಗಾಢದಿ || 391 ||

ತಣವ ಮುರಿಯೆ ಪರುಶುವ್ಯಾಕೆ | ಬಿನುಗು ನಪವರ ||
ಹನನ ಮಾಳ್ಪೆನೆನುತಲೆಚ್ಚ | ಶರವ ಖೇಚರ || 392 ||

ಕುಂತಳೇಂದ್ರನದರ ಮುರಿದು | ಕ್ರೂರಶರದಲಿ ||
ಹೊಂತಕಾರಗೆಚ್ಚು ನಿಲಲು | ಕಂಡು ಭರದಲಿ || 393 ||

ವಾರ್ಧಕ

ಮುರಿದು ಖೇಚರನೊಂದು ಶರದಿಂದ ಬಿಲ್ಗಡಿದು |
ಭರದೊಳೆಂಟಸ್ತ್ರದಿಂ ರಥವ ಚೂರ್ಣಿಸಿ ನಪನ |
ಕರಪಿಡಿದು ವಸುಧೆಯೊಳ್ ತಿರುಹಿ ಸೆರೆವಿಡಿಯಲ್ಕೆ ಧರಣೀಶರೆಲ್ಲ ಕನಲಿ ||
ಹರಿನಾದದಿಂ ಮುಂದುವರಿಯಲ್ಕೆ ಖೇಚರನು |
ತರತರಾಸ್ತ್ರದೊಳವರ ಭಂಗಿಸುತ ಮಾಸೆಯಂ
ತಿರುಹಿ ರಣಧೀರರಿನ್ನಿರೆ ಬನ್ನಿ ಬೇಗೆನುತ ಕರೆಯುತಿರೆ ಮೂದಲಿಸುತ || 394 ||

ಭಾಮಿನಿ

ಭೂತಳಾಧಿಪರಾಗ ಖಚರನ |
ಘಾತದಿಂ ಮೂರ್ಛಿಸಲು ಕಾಣುತ |
ಖ್ಯಾತಿ ಪೋದುದೆನುತ್ತ ಶಂತನುಜಾತ ಹಂಬಲಿಸಿ ||
ಭೂತಳವನೆಲ್ಲವನು ಗೆಲಿದಿಹೆ |
ಪಾತಕಿಯ ನಾನೆಂತು ಜಯಿಸುವೆ |
ನೀತನನು ಗೆಲ್ಲುವರು ಎಮ್ಮಯ ವ್ರಾತದೊಳಗಿಲ್ಲ || 395 ||

ರಾಗ ಕಾಂಭೋಜಿ ಝಂಪೆತಾಳ

ಇರುವನೆಮ್ಮಯ ಮಾತಾ | ಮಹಿಯದ್ರಿಕೆಯ ಜಾತ |
ಧುರವಿಜಯ ಗಂಧರ್ವ | ಪಿಂಗಾಕ್ಷವೀರ ||
ಭರದೊಳವನನು ನೆನೆವೆ | ನೆನುತ ಹಂಬಲಿಸಲತಿ |
ತ್ವರೆಯೊಳವನೈತಂದು | ಪೇಳ್ದನಳಿಯಂತೆ || 396 ||

ಮರುಕವೇನೆಲೆ ಕುವರ | ನೆನೆದಿರುವುದ್ಯಾಕೆನ್ನ |
ಒರೆಯೆನಲು ಪೇಳಿದನು | ಮಾತುಲಗೆ ಮುದದಿ ||
ಧರೆಯೆಲ್ಲವನು ಜಯಿಸಿ | ಬರಲಿಲ್ಲಿಗೀ ದಿನದಿ |
ದುರುಳ ಚಿತ್ರಾಂಗನೆಂ | ತೆಂಬ ಖೇಚರನು || 397 ||

ಬಂದು ಮಾರಾಂತೆನ್ನ | ಸೈನ್ಯಗಳ ಕೆಡಹಿದನು |
ಮಂದಮತಿ ಬಲವಂತ | ನಾಗಿರ್ಪನಯ್ಯ ||
ಇಂದಿವನ ಜಯಿಸುವರೆ | ಸಂದೇಹದಿಂದ ನಾ |
ನಿಂದು ನೆನೆದಿಹೆ ನಿನ್ನ | ರಣದಿ ಜಯಿಸೆನಲು || 398 ||

ರಾಗ ಕೇದಾರಗೌಳ ಅಷ್ಟತಾಳ

ಎಂದ ಮಾತಿಗೆ ಪಿಂಗಾಕ್ಷನು ಗಜರುತ | ಗಂಧರ‌್ವಾಧಿಪನು ತಾನು ||
ಬಂದನ್ಯಾತಕೆ ನರರೊಡನೆ ಸಂಗರಕೀಗ | ಲಿಂದಿವನನು ತರಿವೆ || 399 ||

ಎನುತಲೆ ಧನುವನ್ನೆ ತೂಗುತ್ತಾ ಸಮರಕೆ | ಕಿನಿಸಿನೊಳೈತಹನ ||
ಘನತೆಯ ನೋಡಿ ಗಂಧರ್ವ ಚಿತ್ರಾಂಗದ | ನನುವಾಗುತಿಂತೆಂದನು || 400 ||

ಮರಿಯಾದೆ ನಿನಗುಂಟೆ ನರನ ಮಾತಿಲಿ ಬಂದು | ಬರಿದೆ ಸ್ವಜಾತಿವೈರ ||
ವಿರಚಿಪೆ ಮೂಢನೆ ನಿಲ್ಲೆನುತಸ್ತ್ರವ | ಸುರಿಯೆ ಪಿಂಗಾಕ್ಷ ಪೇಳ್ದ || 401 ||

ನರರಿಂದ ಮೇಲಾಗಿ ಗಂಧರ್ವಧೊರೆ ನೀನು | ಮರುಳನಾಗಿಲ್ಲಿ ಬಂದು ||
ಮೆರೆಯುವೆ ಮಾನವ ನೊಡನ್ಯಾತಕೆನ್ನೊಳು | ಧುರವಿತ್ತು ಗೆಲ್ಲೆಂದನು || 402 ||

ರಾಗ ಶಂಕರಾಭರಣ ಮಟ್ಟೆತಾಳ

ಅರರೆ ಬಿಡು ಬಿಡಸ್ತ್ರವೆನುತ | ಕೆರಳಿ ಖಚರಪತಿಯು ಶರವ |
ಗುರಿಯೊಳೆಸೆಯೆ ಮುರಿದು ಪಿಂ | ಗಾಕ್ಷ ಗಜರುತ || 403 ||

ಪರಮ ಗಂಧರ್ವ ಶಕ್ತಿ | ಗಳನು ತೆಗೆದು ಖಚರಪತಿಗೆ |
ಕೆರಳುತಿಡಲು ಪ್ರತಿಯ ಶಕ್ತಿ | ಯಿಂದ ಶಮಿಸಿದ || 404 ||

ಪರಿಘದಿಂದ ಖೇಚರಂಗೆ | ಎರಗೆ ಮುರಿಯಲದರ ವೇಗ |
ಪರಮ ರೋಷದಿಂದ ಕುಂತ | ದೊಳಗೆ ಪೊಯ್ದನು || 405 ||

ಹಿಂಗದವನ ಕುಂತ ಸೆಳೆದು | ತುಂಗಬಲಿ ಚಿತ್ರಾಂಗನಾಗ |
ಭಂಗಿಸುವೆನೆನುತ್ತ ಗದೆಯೊ | ಳಂಗಕೆಸೆದನು || 406 ||

ವಾರ್ಧಕ

ಧುರವಿಜಯ ಚಿತ್ರಾಂಗನೆರಗಿರ್ಪ ಗದೆಯಿಂದ |
ಲೊರಗಿರ್ದ ಪಿಂಗಾಕ್ಷನಂ ಕಂಡು ಬೊಬ್ಬಿಡುತ |
ಕರಿಪುರಾಧಿಪ ಧನುವ ಪಿಡಿದು ಮುಂದೈತರಲ್ ಪರಮ ರೋಷದಿ ಖಚರನು ||
ಧುರವೆಸಗದಿರು ಎನ್ನ ಪೆಸರ ಬಿಡು ಬೇರೊಂದ |
ನಿರಿಸಿಕೊಂಡೆನ್ನ ಮರೆಪೊಕ್ಕು ಬದುಕೆಂದೆನಲ್ |
ಹರಿನಾದಮಂ ಗೈದು ಧನುವ ಝೇಂಕರಿಸುತ್ತ ಧರಣಿಪಾತ್ಮಜನೆಂದನು || 407 ||

ರಾಗ ಭೈರವಿ ಅಷ್ಟತಾಳ

ದುರುಳ ಖೇಚರನೆ ಕೇಳೊ | ಖಂಡಿಸಿ ನಿನ್ನ | ಹರಣ ನೀಗುವೆನು ತಾಳೊ ||
ಹರಿ ಹರ ಪರಮೇಷ್ಠಿಗಂಜೆವು ಕ್ಷಾತ್ರಿಯ | ಧುರ ಸಾಹಸವ ನೋಡೆಲೊ || 408 ||

ಮರುಳು ಮಾತುಗಳೇತಕೊ | ಖೇಚರರಿಂಗೆ | ಮರಣಗಳಿಹುದೆ ಸಾಕೊ ||
ಕೊರಳನರಿದು ಭೂತಗಳಿಗೆ ಔತಣ ಗೈವೆ | ಪರಿಕಿಸೆನುತಲೆಚ್ಚನು || 409 ||

ಪೊಡವಿಪ ಸಂಭವನು | ಮಂತ್ರಾಸ್ತ್ರವ | ನೊಡನೆ ಕೀಲಿಸುತೆಚ್ಚನು ||
ದಡಿಗನಾದಡೆ ಪರಿಹರಿಸೆನೆ ಖೇಚರ | ಕಡಿದೆಚ್ಚ ಪ್ರತಿ ಶರವ || 410 ||

ರಾಗ ಶಂಕರಾಭರಣ ಮಟ್ಟೆತಾಳ

ಕನಲಿ ಶಂತನಪಕುಮಾರ | ಘನತರಾಸ್ತ್ರಗಳನು ತೆಗೆದು |
ಮನುಮಥಾರಿಯನ್ನು ನೆನೆವು | ತೆಸೆದನಾಕ್ಷಣ || 411 ||

ಎಚ್ಚ ಶರವ ಮುರಿದು ಖಚರ | ಬಿಚ್ಚಿ ಗಾಂಧರ್ವಮಂತ್ರ |
ಉಚ್ಚರಿಸಿಯೆ ಬಿಟ್ಟನಾಗ | ಅಗಣಿತಾಸ್ತ್ರವ || 412 ||

ಧರಣಿಪಾತ್ಮಭವನು ಬಿಡಲು | ಗುರಿಯ ನೋಡಿ ಕಾಲಚಕ್ರ |
ಪರಮದಂಡ ಚಕ್ರವೈಂದ್ರ | ಸೌರಚಕ್ರವ  || 413 ||

ಭೋರನದಕೆ ಪ್ರತಿಯ ಖಚರ | ವಾರುಣಾಸ್ತ್ರ ಕ್ರೌಂಚ ಮುಸಲ |
ದಾರುಣಂಗಳೆಂಬ ಶರದಿ | ಖಂಡಿಸಿದನು || 414 ||

ಮತ್ತೆ ಕರಿಪುರೇಶ ರಭಸ | ಸತ್ಯಶರಭಶಿಖರವೆಂಬ |
ಉತ್ತಮಾದ ಶರವ ಬಿಡಲು | ಕಂಡು ಖಚರನು || 415 ||

ಪರತೇಜೋಪಕರ್ಷ ಗಾಂ | ಧರ್ವಕಂಕಾಲವೆಂಬ |
ಶರದೊಳದರ ತರಿದು ಮಾನ | ವಾಸ್ತ್ರವೆಚ್ಚನು || 416 ||

ಭಾಮಿನಿ

ಮಾನವಾಸ್ತ್ರವ ಬಿಡಲು ಶಂತನು |
ಸೂನು ಕಂಗೆಟ್ಟಿರಲು ಸುಳಿವುತ |
ಭಾನುಕಿರಣಗಳಂತೆ ಜ್ವಲಿಸುತೆ ಕಿಡಿಯನುಗುಳುತಲಿ ||
ಜಾನುಜಂಘೆಯ ಸುತ್ತಿ ಗಂಟಲ |
ಗಾಣವಾಗಿಯೆ ಕೊರೆದು ಕೆಡಹಲು |
ಕ್ಷೋಣಿಯಲಿ ಧೊಪ್ಪೆಂದು ಬೀಳಲ್ಕಾಗ ಸೈನಿಕರು || 417 ||

ವಾರ್ಧಕ

ಮರುಗಿ ದೆಸೆದೆಸೆಗೋಡುತಿರುವ ಸೇನೆಯ ಕಂಡು |
ಪರಮ ಹರುಷದಿ ಖಚರಪಾಲ ಚಿತ್ರಾಂಗದನು |
ತರುಣಿಯರನೊಡಗೂಡಿ ಪೋಗೆ ಸುರಪುರಕಿತ್ತ ತರಹರಿಸಿ ನಪಸಾರಥಿ ||
ಮರುಗಿ ಕಣ್ಣಿನೊಳ್ ಸುರಿವ ಜಲದಿ ವಾಘೆಯ ಪಿಡಿದು |
ಬರಿಯ ರಥದೊಳ್ ಬರುವ ಮಾತಲಿಯ ಕಂಡಾಗ |
ತರುಣಿಮಣಿ ಸತ್ಯವತಿ ನಡುಗಿ ಹಮ್ಮೈಸುತ್ತ ಬೆಸಗೊಳಲ್ಕವನೆಂದನು || 418 ||

ಕಂದ

ಧರಣಿಪರೆಲ್ಲರ ಜಯಿಸುತೆ |
ವರಕುರುಕ್ಷೇತ್ರದೊಳಿರುತಿರೆ ನಿನ್ನಯ ಕುವರಂ ||
ಧುರದೊಳ್ ಖೇಚರನಿವನಂ |
ಹರಣವ ತೀರ್ಚಿದನಿಂತೆನೆ ಕೇಳುತಲಾಗಳ್ || 419 ||

ಭಾಮಿನಿ

ತರಳ ಹಾ ಹಾ ಎನ್ನ ಒಡಲಿಗೆ |
ಉರಿವ ಬಡಬಾನಲನ ಪೊಗಿಸುತ |
ತೆರಳಿದೆಯ ಸುಕುಮಾರ ಬಾ ಬಾರೆನ್ನ ಮರಿಯಾನೆ ||
ಕರುವನಗಲಿದ ಧೇನುವಂದದಿ |
ಧರೆಯ ಭಾರಕಳಾಗಿ ವ್ಯರ್ಥದೊ |
ಳಿರುವೆ ಶೌರ್ಯೋದಾರಗುಣ ನಿಧಿ ಕಂದ ಚಿತ್ರಾಂಗ || 420 ||

ರಾಗ ನೀಲಾಂಬರಿ ರೂಪಕತಾಳ

ಭಾನುಶತೋಪಮ ಸುಂದರ | ಸೂನುವೆ ನೀನೆಲ್ಲೆದಿದೆ |
ಕ್ಷೋಣಿಯ ಜಯಿಸಿದ ಮೇಲಕೆ | ಹಾನಿಯುವೊದಗಿದುದೆ || 421 ||

ಚಂದಿರಮಂಡಲ ಮೊಗಸಿರಿ | ಎಂದಿಗೆ ಕಾಂಬೆನೊ ನಿನ್ನನು |
ಕಂದನೆ ಬಿಟ್ಟಿರಲಾರೆನು | ಚಂದದಿ ನೀ ಬಾರೋ || 422 ||

ಯಾತಕೆ ಪುಟ್ಟಿದೆ ಎನ್ನೊಳು | ಪಾತಕಿಯೆಂಬುದನರಿಯದೆ |
ಜಾತನೆ ಬಾರೈ ದಯದಲಿ | ಮಾತುಗಳಾಡೀಗ || 423 ||

ವನಕೈದಿದ ತಪಕೆ ನಿನ್ನ | ಜನಕನು ನೀನೀಗೈದಿದೆ |
ಘನತರ ವ್ಯಥೆಗಳು ಎನ್ನಯ | ಮನಸಿಗೆ ವ್ಯಾಪಿಸಿತೆ || 423 ||

ರಾಗ ಕೇದಾರಗೌಳ ಅಷ್ಟತಾಳ

ತರುಣಿ ಈಪರಿಯೊಳು ಶೋಕಿಪ ಪರಿಗಳ | ನರಿತು ಗಂಗಾತ್ಮಜನು ||
ಹರಿತಂದು ಚಿತ್ರಾಂಗನಿರವ ಕೇಳುತಲಾಗ | ಕೆರಳಿ ಹೂಂಕರಿಸುತೆಂದ || 424 ||

ಸುಡುವೆ ಗಂಧರ್ವಲೋಕವನೆಲ್ಲ ಖಚರರ | ಬಡೆದು ಸಂಹರಿಪೆನೀಗ ||
ಒಡನೆನ್ನ ತಮ್ಮನ ವಿಧಿಯು ತಾನೊಯ್ದಿರೆ | ಬಿಡದೀಗ ತಹೆನು ನಾನು || 425 ||

ಮಂದಾಕಿನಿಯ ಸುಕುಮಾರನೀತೆರದೊಳ | ಗಂಧಕಾರಿಯ ತೆರದಿ ||
ಗಂಧರ್ವಲೋಕಕೆ ಪೊರಡಲಂಬರವಾಣಿ | ಚಂದದಿಂ ಕೇಳಿದುದು || 426 ||

ಬಿಡು ಬಿಡು ನಿನ್ನಯ ಸಹಜಾತ ಪೂರ್ವದಿ | ಪಡೆದ ಪುಣ್ಯೋದಯದಿ ||
ನಡೆದ ಸದ್ಗತಿಗೀಗ ಜ್ಞಾನಿ ಸೈರಿಸು ಎಂಬ | ನುಡಿ ಕೇಳಿ ಕ್ಷಮೆಯ ತಾಳ್ದು || 427 ||

ರಾಗ ಸಾಂಗತ್ಯ ರೂಪಕತಾಳ

ತನ್ನೊಳು ಯೊಚಿಸುತಾಗ ಮಾತೆಯ ಮನ |
ವನ್ನು ಸೈರಣೆಗೊಳಿಸುತಲೆ ||
ಚಿಣ್ಣ ಚಿತ್ರಾಂಗಗೆ ತಿಲಜಲಂಗಳನಿತ್ತು |
ಎಣ್ಣಿ ತನ್ನಯ ಮನದೊಳಗೆ || 428 ||

ವಿರಚಿಸಿದನು ಶುಭದಿನದೊಳು ಪಟ್ಟವ |
ಕಿರಿಯ ವಿಚಿತ್ರ ವೀರ್ಯನಿಗೆ ||
ಕುರುಪರಂಪರೆಯಾಳ್ದ ಭೂಪರಿಮ್ಮಡಿಯೆನೆ |
ಧರೆಯ ಪಾಲಿಸುತಿರ್ದ ಸುಖದಿ || 429 ||

ಎಂದು ಭೀಷ್ಮೋತ್ಪತ್ತಿಚರಿತೆಯನುತ್ತರಾ |
ಕಂದನ ಸುತಗೆ ಪೂರ್ವದಲಿ ||
ಚಂದದಿ ವೈಶಂಪಾಯನ ಪೇಳ್ದ ಕಥನವ |
ನಿಂದು ಶ್ರೀಹರಿಯನುಗ್ರಹದಿ || 430 ||

ವರತುಂಗಾದಕ್ಷಿಣಾಕೂಲದೊಳ್ ಪನಸಾಖ್ಯ |
ಪುರಿವಾಸ ಹವ್ಯಕದ್ವಿಜನು ||
ಉರಗೇಂದ್ರಶಾಸ್ತ್ರಿಯ ತರಳನು ನರಹರಿ |
ವಿರಚಿಸಿಹೆನು ತಿಳಿದಂತೆ || 431 ||

ಪರಮಮಂಗಲಕ್ರೋಧಿವೈಶಾಖಶುಕ್ಲದಿ |
ಪರಿಸಮಾಪ್ತಿಯ ಗೈದೆನಿದನು ||
ಧರೆಯೊಳು ವಿದ್ವಾಂಸರಿದ ತಿದ್ದಿ ಮೆರೆಸಲಿ |
ತರಳ ನಾನರಿಯೆನು ಕತಿಯ || 432 ||

ಮಂಗಲ

ರಾಗ ಮೋಹನ ಅಷ್ಟತಾಳ

ಮಂಗಲ ಮಂಗಲ ಮತ್ಸ್ಯರೂಪನಿಗೆ | ಮಂಗಲ ಮಂಗಲ ಕೂರ್ಮನಿಗೆ ||
ಮಂಗಲ ವರಹವತಾರ ನಸಿಂಹಗೆ | ಮಂಗಲ ವಾಮನಮೂರುತಿಗೆ ||
ಮಂಗಲಂ | ಜಯ | ಮಂಗಲಂ || 433 ||

ಮಂಗಲ ಮಂಗಲ ಪರಶುರಾಮನಿಗೆ | ಮಂಗಲ ದಶರಥರಾಮನಿಗೆ ||
ಮಂಗಲ ಶ್ರೀಕೃಷ್ಣ ಬೌದ್ಧ ಕಲ್ಕ್ಯನಿಗೆ | ಮಂಗಲ ಲಕ್ಷುಮಿನಾರಾಯಣಗೆ |
ಮಂಗಲಂ | ಜಯ | ಮಂಗಲಂ || 434 ||

ಸುರರ ಪ್ರಾರ್ಥನೆಯೊಳು ಶೋಣಿತಪುರದಿ | ದುರುಳ ಹಿರಣ್ಯನ ಸೀಳುತ ಮುದದಿ ||
ತರಳ ಪ್ರಹ್ಲಾದಗೆ ಸ್ಥಿರಸಾಮ್ರಾಜ್ಯವ | ಕರುಣಿಸಿ ಪೊರೆದ ಶ್ರೀನರಸಿಂಹಗೆ ||
ಮಂಗಲಂ | ಜಯ | ಮಂಗಲಂ || 435 ||

 

ಯಕ್ಷಗಾನ ಭೀಷ್ಮೋತ್ಪತ್ತಿ ಮುಗಿದುದು
ಶ್ರೀಕಷ್ಣಾರ್ಪಮಸ್ತು