ಭಾಮಿನಿ

ಧರೆಯೊಳಪ್ಪಳಿಸಲ್ಕೆ ವದನದಿ |
ಸುರಿಯೆ ಶೋಣಿತಧಾರೆ ಗಿರ‌್ರನೆ |
ತಿರುಗಿ ಶಿರ ಕಂಪಿಸುತಲಾ ಮಣಿಮಂತ ಮೂರ್ಛೆಯಲಿ ||
ಪೊರಳುತೊಂದರೆಗಳಿಗೆ ಪರಿಯಂ |
ತರದಿ ಚೇತನಗೊಂಡು ಸುಯ್ವುತ |
ಪರಿಕಿಸುತಲಾ ವೀರಮಣಿಯೊಡನೆಂದ ಪೊಗಳುತಲಿ || 70 ||

ರಾಗ ಕೇದಾರಗೌಳ ಅಷ್ಟತಾಳ

ಭಳಿಭಳಿರೆಲೆ ವೀರಮಣಿ ನಿನಗೆಣೆ ಕಾಣೆ | ನಿಳೆಯೊಳ್ಸಾಹಸಿಯಹುದು ||
ಛಲವಂತ ನಿನ್ನಾಜ್ಞಾ ತೆರದೊಳಗಿಹೆನಿನ್ನು | ಉಳುಹೆನ್ನ ಪ್ರಾಣಗಳ || 71 ||

ಆದರೆ ಕೇಳಯ್ಯ ಮಣಿವಂತ ನೀನೀಗ | ಮೋದದಿಂದೆನ್ನೊಡನೆ ||
ಭೇದವಿಲ್ಲದೆ ಕೂಡಿ ಕರಿಪುರಕೀಗಳು | ಸಾದರದಿಂ ಬಹುದು || 72 ||

ಹಸನಾದುದೆನಗೀಗ ಬರುವೆ ನಿನ್ನೊಡನೆನು | ತುಸಿರುತ್ತ ಮಣಿಮಂತನು ||
ಕುಶಲದಿ ಸೈನ್ಯಗಳೊಡಗೂಡಿ ಪೊರಡಲು | ವಸುಧೀಶನರಸುತಲಿ || 73 ||

ಹಂದಿಯ ಪೊತ್ತು ಕೊಂಡೆಲ್ಲರು ನಡೆದರು | ಮಂದಾಕಿನಿಯ ತೀರದಿ ||
ಮುಂದಕಯ್ತರೆ ಶಂತ ನಪನು ಒಂದೆಡೆಯೊಳು | ಚಂದದಿ ಕುಳ್ಳಿರಲು || 74 ||

ನಮಿಸುತ್ತ ಶಬರರು ನಡೆದ ವತ್ತಾಂತವ | ಕ್ಷಮೆಯಪಾಲನಿಗರುಹೆ ||
ಮಮತೆಯೊಳ್ ಮಣಿಮಂತನನು ಮನ್ನಿಸಿದನಾಗ | ಹಿಮಕರಕುಲಜನ್ಮನು || 75 ||

ವಾರ್ಧಕ

ಧರಣಿಪಾಲಕ ಲಾಲಿಸಲ್ಲಿ ಶಂತನಪಾಲ |
ನಿರುವ ಸಮಯದೊಳೊಂದು ಚೋಹ ನಡೆದುದ ಪೇಳ್ವೆ |
ಸುರನದಿಯು ಸರ್ವಾಂಗ ಸೌಂದರ್ಯವಿಭ್ರಮದಿ ಸ್ತ್ರೀರೂಪಮಂ ತಾಳುತ ||
ಸಿರಿ ವಾಣಿ ಪಾರ್ವತಿಯ ರೂಪಿಂದ ಮಿಗಿಲೆನಿಸಿ |
ಹರಿಣಾಕ್ಷಿ ದಿವ್ಯ ಪೀತಾಂಬರವನಳವಟ್ಟು |
ವರತರಂಗದ ಮಧ್ಯದಿಂದ ಪೊರಮಟ್ಟಾಗ ತರುಣಿ ತನ್ನೊಳು ನುಡಿದಳು || 76 ||

ರಾಗ ಕಾಂಭೋಜಿ ಝಂಪೆತಾಳ

ಸ್ಮರಿಸಿದಳು ಪೂರ್ವದಲಿ | ಪರಮೇಷ್ಠಿ ಸಭೆಗಾನು |
ತೆರಳಿರ್ದ ಕಾಲದಲಿ | ಮರುತನುಪಟಳದಿ ||
ಧರಿಸಿದೆನ್ನಯ ವಸನ | ಭರದಿ ಜಾರಲ್ಕಾಗ |
ನೆರೆದ ಸುಮನಸರೆಲ್ಲ | ಕಣ್ಣ ಮುಚ್ಚಿರಲು  || 77 ||

ತರಣಿವಂಶಜ ಶತ | ಕ್ರತುವ ಗೈದವನೋರ್ವ |
ನಿರೆ ಮಹಾಭಿಷನೆಂಬ | ದೊರೆಯಾಗ ಮುದದಿ ||
ಸ್ಮರತಾಪದಿಂದೆನ್ನ | ಪರಿಕಿಸುತಲಿರೆ ಕಂಡು |
ಸರಸಿಜೋದ್ಭವ ಕೋಪ | ಗೊಂಡು ಮನದೊಳಗೆ  || 78 ||

ದುರುಳ ಕಾಮಾತುರನೆ | ಪರನಾರಿಗಳುಪಿದಕೆ |
ತೆರಳಿದುದು ತವ ಸುಕತ | ಧರೆಗೆ ಪೋಗೀಗ ||
ನರಜನ್ಮದೊಳು ಪುಟ್ಟು | ಮತ್ತೆ ಪುಣ್ಯವ ಗೈದು |
ಮರಳಿ ಬಹುದೆನುತವನ | ಶಪಿಸಿ ಮತ್ತೆನಗೆ || 79 ||

ವಾರ್ಧಕ

ಪುರುಷರಿರ್ದಲ್ಲುಟ್ಟ ವಸನದ್ಯೋಚನೆ ತೊರೆದು |
ಸುರತರಂಗಿಣಿಯೆನಿಸಿ ನಿರ್ಲಜ್ಜೆಯಿಂದಲೀ |
ನರಪತಿಯ ರೂಪಿಂಗೆ ಸೋತು ನಿರ್ಭಯದಿ ನೀ ಪರಿಕಿಸಿದ ಕಾರಣದೊಳು ||
ಧರಣಿಯೊಳಗೀತಂಗೆ ಸತಿಯಾಗು ಪೋಗೆನುತ |
ಸರಸಿಜಾಸನ ಶಾಪವಿತ್ತ ತೆರದೊಳಗಿವನೆ |
ನರಪತಿ ಮಹಾಭಿಷನು ಶಂತನಪನೆನುತೀಗಳಿರುತಿರ್ಪ ನಾನೀಗಳು || 80 ||

ಭಾಮಿನಿ

ತೆರಳಿ ನಾನೀತನನು ಯುಕ್ತಿಯೊಳ್ |
ಮರುಳುಗೆಯ್ಯುವೆನೆನ್ನ ಪುಣ್ಯದಿ |
ದೊರೆತ ಮನ್ಮಥಸಮರಕೆನುತೈತರುವ ಕಾಲದಲಿ ||
ಮರುಗುತಾಕ್ಷಣ ಅಷ್ಟ ವಸುಗಳು |
ಚರಣಕೊಂದಿಸಿ ತಾಯೆ ರಕ್ಷಿಸು |
ಸುರತರಂಗಿಣಿ ಲೋಕಪಾವನೆ ಎನುತ ಸ್ತುತಿಸಿದರು || 81 ||

ರಾಗ ಆಹೇರಿ ಅಷ್ಟತಾಳ

ಯಾರು ನೀವ್ಯಾರೀಗ ಮರುಗುವಿರಯ್ಯ |
ಭೂರಿ ಶೋಕಗಳೇಕೆ ಬಿಡಿ ಬಿಡಿರಯ್ಯ ||
ವೀರ ವಿಕ್ರಮರೆಂದು ತೋರ್ಪಿರಲ್ಲಯ್ಯ |
ಕ್ರೂರ ಕಷ್ಟಗಳೇನು ನೀವ್ ಪೇಳಿರಯ್ಯ || 82 ||

ಅರವಿಂದಾಕ್ಷಿಯೆ ಕೇಳ್ ನಾವಷ್ಟವಸುಗಳು |
ತೆರಳೆ ವಸಿಷ್ಠರಾಶ್ರಮಕೆ ಮೋದದೊಳು ||
ಸುರಭಿಯನೆಮ್ಮ ಪತ್ನಿಯರಪೇಕ್ಷಿಸಲು |
ದುರುಳತ್ವದಿಂದ ನಾವ್ ಪಿಡಿಯೆ ಕೋಪದೊಳು || 83 ||

ನರರಂತೆ ನೀವ್ ಮಂದಮತಿಯೊಳು ಬಂದು |
ಸುರಭಿಯ ಪಿಡಿದಿರಜ್ಞಾನಿಗಳೆಂದು ||
ಧರೆಯೊಳು ನರಜನ್ಮದಲಿ ಪುಟ್ಟಿರೆಂದು |
ಪರಮ ತಪೋನಿಧಿ ಶಪಿಸಿದನಂದು || 84 ||

ವಾರ್ಧಕ

ಪರಮಪಾವನೆ ಬ್ರಹ್ಮಶಾಪದಿಂ ಧರೆಯೊಳಗೆ |
ನರನ ಸಂಗವ ಬಯಸಿ ಬರುವ ನಿನ್ನುದರದೊಳ್ |
ತರಳರುದ್ಭವಿಸುವೆವು ಪುಟ್ಟಿದಾಕ್ಷಣವೆಮ್ಮ ಕೊರಳನರಿ ನೀ ದಯದೊಳು ||
ಸುರತರಂಗಿಣಿ ನಿನ್ನ ಜಠರ ಪಾವನಮೆಮಗೆ |
ವರಮುನಿಯ ಶಾಪಮಂ ಪರಿಹರಿಸೆನಲ್ಕಾಗ |
ಕುರುಕುಲೇಂದ್ರನ ವರಿಸಿದೆನ್ನಿಂದಲಾತನನ್ವಯದೇಳಿಗೆಯ ಪೇಳಿರೈ || 85 ||

ರಾಗ ಸೌರಾಷ್ಟ್ರ ಅಷ್ಟತಾಳ

ಗುಟ್ಟ ಕೇಳೌ ತಾಯೆ ಎಮ್ಮೋಳ್ | ಅಷ್ಟಮನು ಸುರಭಿಯ ಬೆ |
ನ್ನಟ್ಟಿ ಪೊಯ್ದ ಮುಳ್ಳಿನಿಂದ ದ್ಯೌ ಎಂಬಾತನು || 86 ||

ಪರಮ ಮುನಿಪನಿವಗೆ ಪೇಳ್ದ | ಚಿರಕಾಲೀರ್ದು ಮನುಜನಾಗಿ |
ಮರಣವಹುದು ಮುಳ್ಳಿನೊಳ ಗಂತ್ಯಕಾಲದಿ || 87 ||

ಉಳಿದ ಜನರಲ್ಪಾಯುವಾಗಿ | ಇಳೆಯೊಳ್ ಪುಟ್ಟಬಹುದೆನುತ್ತ |
ಛಲದೊಳೆಮಗೆ ಶಪಿಸಿದಂತೆ ಉಳಿವನೊರ್ವನು || 88 ||

ಮಾತೆ ಕೇಳೌ ದ್ಯೌ ಎಂಬಾತ | ಭೂತಳೇಂದ್ರಗಿಹನು ನಿನ್ನ |
ಜಾತನಾತ ನುಳಿದೆಮ್ಮನು ಹನನ ಮಾಳ್ಪುದು || 89 ||

ಎನೆ ಹಸಾದವೆಂದು ಭಾಷೆ | ವಿನಯದಿಂದಲಿತ್ತು ಕಳುಹಿ |
ವನಿತೆ ತೋಷದಿಂದ ತೆರಳೆ ಜನಪನಲ್ಲಿಗೆ || 90 ||

ಕಂದ

ತರತರ ರತ್ನಗಳಿಂದಲಿ |
ಕೊರಳಲಿ ಶೋಭಿಸೆ ಪದಕದಿ ಮುಂದಿಹ ಜನಪಂ ||
ತರಣಿಶತೋಪಮ ಮುಖಮಂ |
ಪರಿಕಿಸಿ ನಮಿಸಲ್ ಕಾಣುತ ನಪನಿಂತೆಂದಂ || 91 ||

ರಾಗ ಸಾರಂಗ ತ್ರಿವುಡೆತಾಳ

ಯಾರು ನೀನೆಲೆ ಸುಂದರಿ | ಮೋಹನಕಾರಿ |
ಮೂರ್ಲೋಕಹ್ಲಾದಕಾರಿ | ಪಲ್ಲವಾಧರೆ |
ನೀರೆ ನೀ ಸುಮನೋಹಾರಿ ||
ಯಾರು ನೀನಪ್ಸರಳೊ ಕಿನ್ನರ | ಗಾರುಡಳೊ ಕಿಂಪುರುಷಸಾಧ್ಯಳೊ |
ಚಾರಣಳೊ ಪನ್ನಗಳೊ ಯಕ್ಷಳೊ |
ನಾರಿ ಪೇಳ್ ಗಂಧರ್ವವಧುವೋ || ಯಾರು || 92 ||

ನರಜನ್ಮ ಸತಿಗಳೊಳು | ನಿನ್ನಂದದೊ |
ಳಿರದು ಸೌಂದರ್ಯಗಳು | ಮನ್ಮಥನೆನ್ನ |
ಉರವ ಭೇದಿಪನು ಕೇಳು ||
ಪರಿಕಿಸುತ ತವ ಮುಖವ ಚಂದ್ರನು | ಧರಿಸುವನು ನಾಚಿಕೆಯ ತನ್ನೊಳು |
ಹರಿಯು ಕಟಿಯಂ ಕಂಡು ಗುಹೆಯೊಳು |
ಮರಳುತಾಶ್ಚರ್ಯವನೆ ತಾಳ್ವುದು || ಯಾರು || 93 ||

ಸ್ವರಕೆ ಮೌನವ ತಾಳುತ | ಕೋಗಿಲೆ ತನ್ನೊಳ್ |
ಮರುಗಿ ಶೋಕವ ಕೊಳ್ಳುತ | ಬಾರದು ಮುಂದೆ |
ವರಹಂಸನಡೆಗಂಜುತ ||
ಸರಸಿಜಂಗಳು ನಿನ್ನ ನಯನಕೆ | ಸರಿಯುತಾವಲ್ಲೆಂದು ಜವದಲಿ |
ಭರದಿ ಮುಳುಗುತ್ತಿಹವು ತರುಣೀ |
ಮಣಿಯೆ ನೀನ್ಯಾರೆಂದು ನುಡಿ ನುಡಿ || ಯಾರು || 94 ||

ರಾಗ ಜಂಜೂಟಿ ಅಷ್ಟತಾಳ

ಮನಸಿಜೋಪಮ ಕೇಳು ನಾನು | ಒರ್ವ |
ಮುನಿಪಾತ್ಮಭವೆಯಾಗಿ ಇಹೆನು ||
ವನ ಗಿರಿ ಗುಹೆ ಪುಣ್ಯಕ್ಷೇತ್ರವ ಚರಿಸುತ್ತ |
ವನಧಿಯೊಳು ಮಜ್ಜನವ ವಿರಚಿಸಿ |
ಜನಪ ನಿನ್ನೆಡೆಗೀಗ ಬಂದಿಹೆ || 95 ||

ವನದೊಳಗಿಹ ಶ್ರೇಷ್ಠ ಮುನಿಗೆ | ನೀನು |
ತನಯಳು ಸೌಂದರ್ಯದೊಳಗೆ ||
ಇನಕೋಟಿ ಪ್ರಭೆಯೊಳಗಿಹುದು ನೋಡಿದರೀಗ |
ಘನತರದ ಕುಶದೊಳಗೆ ಪರಿಮಳ |
ವನುಸರಿಸಿದಂದದಲಿ ತೋರ್ಪುದು || 96 ||

ಪಡೆದ ಪೂರ್ವದ ಪುಣ್ಯೋದಯದಿ | ನಾನು |
ಪೊಡವಿಯೊಳುತ್ತಮಕುಲದಿ ||
ಕಡು ಸೌಂದರ್ಯದಿ ಪುಟ್ಟಿ | ಕ್ಷೇತ್ರವ ತೊಳಲಿದೆ |
ಮಡನು ಮುಂದಣ ಭವವ ತೊಲಗಿಸಿ |
ಒಡನೆ ಮೋಕ್ಷವನಿತ್ತು ಸಲಹಲಿ || 97 ||

ಋಷಿಕುಲಸಂಭೂತೆ ಕೇಳು | ನೀನು |
ತಪಸಿನೊಳಿದ್ದು ಕಾನನದೊಳು ||
ಕುಶಲದಿ ಭವವನುತ್ತರಿಪುದು ಮುಂದಕೆ |
ಎಸೆವ ಯವ್ವನದೊಳಗೆ ವರನನು |
ಬಿಸಜಗಂಧಿನಿಕೂಡಿ ಸುಖಿಪುದು || 98 ||

ರಾಗ ಶಂಕರಾಭರಣ ತ್ರಿವುಡೆತಾಳ

ಮುನಿಕುಲದೊಳುದ್ಭವಿಸಿ ತಪದಲಿ | ಜನುಮಸಫಲ ಗೆಯ್ಯದೆ ||
ಇನಿಯನೊಳು ಪ್ರೀತಿಪುದು ಎನ್ನಯ | ಮನದೊಳಿಲ್ಲ || 99 ||

ರಾಗ ಕೇದಾರಗೌಳ ಅಷ್ಟತಾಳ

ಚೆಲುವೆ ಕೇಳ್ ದಿವ್ಯ ಪುಷ್ಪಂಗಳು ನಿನ್ನಂಥ |
ಲಲನೆಯರ್ಮುಡಿಯನೇರಿ |
ಪೊಳೆಯುವುದಲ್ಲದೆ ಧರೆಯೊಳು ಬಿದ್ದೊಣ |
ಗಲಿಕೇನು ಫಲವಹುದು || 100 ||

ರಾಗ ಶಂಕರಾಭರಣ ತ್ರಿವುಡೆತಾಳ

ತರುಣಿಯರಿಗನುರೂಪು ಗುಣಯುತ | ದೊರಕಲೆಂದು ತಪವನು |
ವಿರಚಿಸಿಯೆ ಪಡೆದಾಗ ಕಾಂತನ | ಚರಣಸೇವೆಯೆ ಮುಖ್ಯವು || 101 ||

ರಾಗ ಕೇದಾರಗೌಳ ಅಷ್ಟತಾಳ

ಇಂದಿನವರೆಗೆ ನೀ ಚರಿಸಿದ ತಪಕೆ ನಾ | ಬಂದಿಹೆ ಬಿಡು ಬಿಡಿನ್ನು |
ಸುಂದರಾಂಗಿಯೆ ಎನ್ನ ಕೂಡುತ್ತ ಮನಸಿಗಾ | ನಂದವಪಡಿಸು ಬೇಗ || 102 ||

ರಾಗ ಶಂಕರಾಭರಣ ತ್ರಿವುಡೆತಾಳ

ಮಾರಸನ್ನಿಭ ನಿನ್ನ ಪರಿಕಿಸೆ | ಶೂರ ಧರಣಿಪನೆಂಬುದು |
ತೋರುತಿದೆ ಭುಜಬಲದೊಳೆತ್ತಣ | ಧಾರಿಣಿಯ ನೀ ಪಾಲಿಪೆ || 103 ||

ರಾಗ ಕೇದಾರಗೌಳ ಅಷ್ಟತಾಳ

ಶರದಿಂದುಮುಖಿಯೆ ಕೇಳ್ ಭರತಪರಂಪರೆ | ಕುರುಧರೆಗಧಿಪ ನಾನು |
ಕರೆವರು ಶಂತನುವೆಂದೆನ್ನ ರಾಷ್ಟ್ರದಿ | ಮರೆಯ ಮಾತಲ್ಲ ಕೇಳು || 104 ||

ರಾಗ ಶಂಕರಾಭರಣ ತ್ರಿವುಡೆತಾಳ

ಧರಣಿಪರ ಮಾನಾಪಮಾನವ | ನರಿವರೇನೈ ವನದೊಳ |
ಗಿರುವ ಋಷಿಕನ್ಯೆಯರು ವ್ಯರ್ಥದಿ | ಸಿರಿಗೆ ಭ್ರಮಿಪೆನೆ ಯಾತಕೆ || 105 ||

ವಾರ್ಧಕ

ಕುಂದಕುಟ್ಮಲರದನೆ ಶುಕ್ಲಕೃಷ್ಣಗಳೆಂಬ |
ದ್ವಂದ್ವ ಪಕ್ಷಂಗಳೊಳು ಕಲೆಗುಂದದಿಂದುಮುಖಿ |
ಮಂದಗಾಮಿನಿ ನಿನ್ನ ಮುಖಪದ್ಮದಂದಮಂ ಚಂದಿರನು ಪಡೆವೆನೆನುತ ||
ಅಂಧಕಾರಿಯ ಜಟೆಯನಾಶ್ರೈಸಿ ತಪದೊಳಿಹ |
ಸುಂದರಾಂಗಿಯೆ ನಿನ್ನ ಕಂಠದಂದದೊಳಿಲ್ಲ |
ವೆಂದು ಶಂಖವು ಸಾರಿ ಮುಳುಗಿದುದು ಶರಧಿಯಲಿ ನೊಂದು ವ್ಯಾಕುಲದಿಂದಲಿ || 106 ||

ಕಂದ

ನರಪತಿ ಭ್ರಮಿಸುವೆ ಯಾತಕೆ |
ಧರೆಯೊಳಗೆನ್ನಿಂದಧಿಕದಿ ಮೆರೆಯುವ ಚೆಲುವಿಂ ||
ತರುಣಿಗಳಿಲ್ಲವೆ ಗುಣನಿಧಿ |
ವರಿಸೀಗನ್ಯಳ ಪರಿಕಿಸಿ ತೆರಳೆನಲಾಗಳ್ || 107 ||

ರಾಗ ನವರೋಜು ಏಕತಾಳ

ಮರಿದುಂಬಿಗುರುಳಿಂದ | ಸುರ | ತರುಣಿಯರ ಬೆಡಗಿಂದ |
ಮೆರೆವ ಸೊಬಗಿನಿಂ ರಂಜಿಪ ನಿನ್ನನು |
ಪರಿಕಿಸುತೀಗ ನಾ ಧನ್ಯನು ಧರೆಯೊಳು || 108 ||

ಎನ್ನನು ಸ್ವೀಕರಿಸೀಗ | ಮಗು | ಳೆನ್ನಯ ರಾಷ್ಟ್ರದ ಭೋಗ |
ನಿನ್ನಾಧೀನಗಳಲ್ಲದೆ ಸರ್ವವು |
ಎನ್ನೊಶವಿಲ್ಲವು ತನು ಮನ ಪ್ರಜೆಗಳು || 109 ||

ಕಡುಪಾಪಿ ಮನುಮಥನು | ಶರ | ಬಿಡುತಲೆನ್ನುರವನ್ನು |
ಸುಡುತಿಹುದನು ತುಂಗ ಕುಚಯುಗ್ಮದಿ ಬಿಗಿ |
ವಡೆದಪ್ಪುತಲುರಿ ಶಮಿಸೆನೆ ಪೇಳ್ದಳು || 110 ||

ರಾಗ ಸಾರಂಗ ಅಷ್ಟತಾಳ

ಕ್ಷಿತಿಪ ಕೇಳ್ ವರಿಸೆ ನಾನು | ನಿನ್ನಯ ಪ್ರೇಮ |
ಸತಿಯರಿಂ ಕೀಳಾಹೆನು ||
ವ್ಯಥಿಪೆನದಕೆ ಇನ್ನು ಹಿತದಿ ತಪವ ಗೈದು |
ಪತಿಯ ಪಡೆವೆನೆನಲಾಗಲಿಂತೆಂದನು || 111 ||

ವನಿತೆಯರಿಲ್ಲೆನಗೆ | ಭೇದಿಪನೆನ್ನ |
ಮನಸಿಜ ಖತಿಯೊಳಗೆ ||
ಎಣಿಸಬೇಡೆನಗಿದು ಪ್ರಥಮ ಸ್ತ್ರೀಪರಿಗ್ರಹ |
ಕನಿಕರದಿಂದೆನ್ನ ಕೂಡು ನೀ ದಯಮಾಡು || 112 ||

ಪಟ್ಟದ ರಾಣಿಯಾಗಿ | ಶಂತನುವಿನ |
ಅಷ್ಟೈಶ್ವರ್ಯಕು ನೀ ಭಾಗಿ ||
ದಿಟ್ಟ ಮನ್ಮಥನನಟ್ಟುಳಿಯ ಮರ್ದಿಸುವಂಥ |
ಬಟ್ಟಕುಚಳೆ ನಿನ್ನ ಬಿಟ್ಟಿನ್ನಾರಿಹರೀಗ || 113 ||

ರಾಗ ತೋಡಿ ಆದಿತಾಳ

ಧರಣಿಪಾಲ ಕೇಳು ನಿನ್ನ | ವರಿಸಲೆನ್ನ ಪ್ರತಿಜ್ಞೆಗ |
ಳಿರುವುದನ್ನು ನಡೆಸಲೀಗ | ಬರುವೆ ಮನದೊಳರಿತು ನೋಡು || 114 ||

ರಾಗ ತುಜಾವಂತು ಝಂಪೆತಾಳ

ಸತಿಶಿರೋಮಣಿ ಕೇಳು | ಬಾಹುಬಲ ಶಂತನುಗೆ |
ಪಥಿವಿಯೊಳಗಸಾಧ್ಯ | ಕಾರ್ಯಂಗಳಿಹುದೆ ||
ಅತಿದುರ್ಘಟಂಗಳನು | ಸುಲಭದಿಂ ಸಾಧಿಸುವೆ |
ಮತಿವಂತೆ ನಿನ್ನ ಪ್ರ | ತಿಜ್ಞೆ ಪೇಳೆನಗೆ || 115 ||

ರಾಗ ತೋಡಿ ಆದಿತಾಳ

ಅರಿತು ಪಾಪಪುಣ್ಯಫಲವ | ವಿರಚಿಸೆ ನಾ ಶುಭಾಶುಭವ |
ಒರೆಯಲಾಗದೆನಗೆ ಪ್ರತಿಯ | ನಿರತ ಕ್ರೋಧವ್ಯಸನದಿಂದ || 116 ||

ರಾಗ ತುಜಾವಂತು ಝಂಪೆತಾಳ

ಶಶಿನಿಭಾನನೆಯೆನಗೆ | ವ್ಯಸನವಹ ಕಾರ್ಯವನು |
ಎಸಗೆ ಸಹಿಸುತ ಪ್ರತಿಯ | ನುಸಿರದೆಯೆ ನಾನು ||
ವಸುಧೆಪಾಲಕನಾಗಿ | ಸತಿಗೆ ಬೆದರಿರೆ ಜನರು |
ನಸುನಗುತ ನಿಂದಿಸರೆ | ಬಿಸಜಾಕ್ಷಿ ಕೇಳು || 117 ||

ರಾಗ ತೋಡಿ ಆದಿತಾಳ

ಕರಿಪುರೇಂದ್ರನೆನ್ನಾಚರಣೆ | ಸರಿಯು ಸರಿಯೆಂದೆನ್ನದಿರಲು |
ವರಿಪಳಲ್ಲ ನಿನ್ನ ನಾನು | ತೆರಳು ವ್ಯರ್ಥ ಮಾತಿದ್ಯಾಕೆ || 118 ||

ರಾಗ ತುಜಾವಂತು ಝಂಪೆತಾಳ

ತರುಣಿ ಕೇಳೆನ್ನ ಪಿತ | ನೊರೆದಿಹನು ಪೂರ್ವದಲಿ |
ಬರುವಳೋರ್ವಳು ಸುದತಿ | ಮುಂದೆ ತಾನಾಗಿ ||
ವರಿಸವಳ ಕುಲಗೋತ್ರ | ನಾಮವ ವಿಚಾರಿಸದೆ |
ಹರಿಣಾಕ್ಷಿಯಿಂದ ಸಂ | ತಾನವಹುದೆನುತ  || 119 ||

ವ್ಯಥಿಸುವೆನದಕೆ ನಿನ್ನ | ಜೊತೆಯನಗಲುವೆನೆಂತು |
ಹಿತವು ನೀನೆಸಗುವದು | ಮುಂದೆ ಕೇಳಿನ್ನು ||
ಗತಿಸದಿರು ಕಾಲವನು | ಮತಿವಂತೆ ರಥವೇರು |
ಸತತ ನಿನ್ನಯ ಮನೋ | ರಥದಂತೆ ನಡೆವೆ || 120 ||

ರಾಗ ತೋಡಿ ಅಷ್ಟತಾಳ

ಹಿಂದೆ ನಡೆದುದ ಕೇಳು ಭೂವರ | ನೊಂದು ದಿನ ತವ ಪಿತ ಪ್ರತೀಪನು |
ಬಂದು ಕುಳ್ಳಿರಲಿಲ್ಲಿ ನಾ ನೋಡಿ ||
ಕಂದಿ ಕುಂದುತ ಸ್ಮರನ ತಾಪದೊ | ಳಂದು ಭೂಪನ ಬಲದ ತೊಡೆಯೊಳು |
ಚಂದದಿಂ ಕುಳ್ಳಿರಲು ಕಾಣುತಲಿ || 121 ||

ಯಾರು ನೀ ಬಂದೆನ್ನ ತೊಡೆಯೊಳ | ಗೇರಿರುವ ಕಾರಣಗಳೇನೆನೆ |
ಧೀರನೆನ್ನನು ವರಿಸಬೇಕೆನಲು |
ನಾರಿ ಕೇಳ್ ನೀ ಬಂದು ಎಡದೊಡೆ | ಏರಿರಲು ಸತಿಸ್ಥಾನವದು ದಿಟ |
ಕೂರುವರು ಸೊಸೆ ಮಕ್ಕಳೀ ತೊಡೆಯೊಳ್ || 122 ||

ಬರುವನೀ ಎಡೆಗಿನ್ನು ಎನ್ನಯ | ತರಳ ಶಂತನು ಮುಂದೆ ಆತನ |
ವರಿಸು ನೀನೆನುತಂದು ತೆರಳಿದನು ||
ಧರಣಿಪತಿ ನಾನಂದಿನಿಂ ತವ | ಬರವ ಹಾರೈಸುತ್ತಲಿರ್ದೆನು |
ಬರುವೆ ಸಂಶಯವಿಲ್ಲವೆಂದೆನಲು || 123 ||

ವಾರ್ಧಕ

ತರುಣಿಯೆಂದುದ ಕೇಳಿ ಶಂತನಪ ತೋಷದಿಂ |
ಸರಿಯಾದುದುಭಯರಿಗೆ ಮತ್ಪಿತನ ವಚನಗಳು |
ತೆರಳಿ ಬಾರೀಗೆನ್ನ ಪುರಕೆನಲ್ಕಾಕ್ಷಣವೆ ರಥವೇರಲಾನಂದದಿ ||
ಪರಿವಾರದೊಡಗೂಡುತರಮೆನೆಗೆ ನಡೆತರಲ್ |
ಸ್ಮರಹತಿಗೆ ಬೆಂಡಾಗಿ ಪಶ್ಚಿಮಾಂಗನೆಯೊಡನೆ |
ಸುರತಸುಖಮಂ ಬಯಸಿ ಪೋದನೆನೆ ಭಾಸ್ಕರಂ ಸರಿಯೆ ಕತ್ತಲೆಯಾದುದು || 124 ||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವಸುಧೆಪಾಲಕ ಕುಶಲದಿಂದಲಿ | ನಿಶಿಯ ಕಳೆದಾ ಪೂರ್ವಶೈಲದಿ |
ಬಿಸಜಬಾಂಧವನುದಿಸೆ ನಿತ್ಯಾ | ಹ್ನಿಕವ ಗೈದು || 125 ||

ಕರೆಸಿ ಮಂತ್ರಿಯ ಮುಖದಿ ಪೌರೋ | ಹಿತರನುಜ್ಞೆಯ ಕೊಂಡು ಗಂಗಾ |
ತರುಣಿಪಾಣಿಗ್ರಹಣ ಗೈದತಿ | ಹರುಷದಿಂದ || 126 ||

ಸ್ಮರರತಿಯೊ ಪೌಲೋಮಿಶುಕ್ರರೊ | ಪರಮ ಸೌಂದರ್ಯದೊಳು ಭೋಗದಿ |
ಧರಣಿಪನ ಕರಿಪುರವು ಸುರಪುರ | ಕಧಿಕವಾಗೆ || 127 ||

ಸುರನದಿಯ ಕೂಡಿರ್ದ ಭೂಪಗೆ | ಸುರತದಿಂದೋಲಾಡಿ ಕಳೆದಿಹ |
ಇರುಳು ಪಕ್ಷವು ಮಾಸ ವತ್ಸರ | ವರಿಯದಾಗೆ || 128 ||

ರಾಗ ಕೇದಾರಗೌಳ ಅಷ್ಟತಾಳ

ಇರಲು ಒಂದೊಂದು ವತ್ಸರಕೆ ಒಂದೊಂದರ |
ತೆರದಿ ಗರ್ಭವ ಧರಿಸಿ ||
ಸುರಗಂಗೆ ಕ್ರೂರ ರಕ್ಕಸಿಯಂತೆ ಶಿಶುಗಳ |
ನರಿದಿಕ್ಕಿ ಮೆರೆದಿರಲು || 129 ||

ಏಳು ಗರ್ಭವನಿಂತು ಪಾಳುಮಾಡಿದರು ಭೂ |
ಪಾಲನು ದುರ್ನುಡಿಯ ||
ಪೇಳಲು ತನ್ನನು ತ್ಯಜಿಸುವಳೀಕೆ ದು |
ಶ್ಶೀಲೆಯೆಂದಿರುತಿರ್ದನು || 130 ||

ಅಷ್ಟಮಗರ್ಭದೊಳುದಿಸಿದರ್ಭಕನನ್ನು |
ದುಷ್ಟೆ ತಾ ಕೊಲ್ವೆನೆಂದು ||
ತಟ್ಟನೆ ಪಿಡಿಯಲು ಕಂಡು ವ್ಯಾಮೋಹದಿ |
ಸಷ್ಟೀಶ ಪೇಳಿದನು || 131 ||

ರಾಗ ತೋಡಿ ಏಕತಾಳ

ಘೋರ ರಕ್ಕಸಿ ನೀನ್ಯಾರೆ | ಕಡು ಪಾಪಿ ಕ್ರೂರೆ |
ಘೋರ ರಕ್ಕಸಿ ನೀನ್ಯಾರೆ || ಪ ||

ಹಿಂದೆ ನಿನ್ನಯ ಕುಲವ | ಪೇಳದೆ ಮೋಸ |
ದಿಂದೆನ್ನ ಕೂಡಿ ಪಾಪವ ||
ಮಂದಮತಿಯೆ ಗೆಯ್ಯುವಂದಗಳೇನಿದು |
ಬಂಧಿಪೆ ನಿನ್ನ ನಾನೆಂದಿಗು ಕ್ಷಮಿಸೆನು || ಘೋರ || 132 ||

ಪುಟ್ಟಿದ ಶಿಶುವೇಳನು | ಕೊಂದುದಕಾನು |
ಬಿಟ್ಟಿರ್ಪೆನ್ಯಾಕದನು ||
ಕೊಟ್ಟಿಹೆ ವಚನ ನೀನೇನ ಗೈದರು |
ನಿಷ್ಠೂರವಾಡೆನೆಂದೆನುತ ಪೂರ್ವದಲಿ || ಘೋರ || 133 ||

ಎನ್ನಯ ಪ್ರೇಮನೀತ | ಅಷ್ಟಮ ಸುತ |
ನನ್ನು ನೀ ಕೊಡು ಕೊಡಿತ್ತ ||
ನಿನ್ನ ದುರ್ಬುದ್ದಿಯ ಬಿಡು ಬಿಡು ಕೊಲದಿರು |
ಮುನ್ನ ನಾನಿತ್ತ ವಾಗ್ದಾನಕಂಜುವನಲ್ಲ || ಘೋರ || 134 ||

ರಾಗ ನೀಲಾಂಬರಿ ಏಕತಾಳ

ಪತಿಯೆ ಲಾಲಿಸೆನ್ನ ನುಡಿಯನು | ಮುನಿವರಜಹ್ನು |
ಸುತೆಯು ಭಾಗೀರಥಿಯು ನೋಡ್ ನಾನು ||
ಸುತರ ಕೊಂದೆನೆಂದು ಮನದೊಳು | ಗ್ರಹಿಸುತ್ತ ನೀನು |
ವ್ಯಥಿಸದಿರು ಪೇಳ್ವೆ ಕರುಣಾಳು || 135 ||

ಕಮಲಾಸನನ ಶಾಪದಿಂದಲಿ | ನಿನ್ನನು ಕೂಡೆ |
ಭ್ರಮಿಸಿ ನಾನೈತರುವ ಮಾರ್ಗದಿ ||
ಕ್ಷಮೆಯೊಳ್ ನರರಾಗುದಿಸಲೋಸುಗ | ವ್ಯಥಿಸುತ್ತಾ ವಸುಗಳ್ |
ನಮಿಸುತ್ತಿಹರ ಕಂಡು ನಾ ಬೇಗ || 136 |