ವಾರ್ಧಕ

ಎಲೆ ದುರಾತ್ಮನೆ ಎನ್ನ ಪತಿ ಶೂನ್ಯಳಂಗೈದೆ |
ಚಲಿಸಿ ಘೋರಾರಣ್ಯದೋಳ್ತಪವನಾಚರಿಸಿ |
ಕುಲಗೇಡಿ ನಿನಗೆ ಶಾಪವನೀವೆನಲ್ಲದಿರೆ ಧುರಪರಾಕ್ರಮಿಗಳನ್ನು ||
ಒಲಿಸಿ ನಿನ್ನಯ ಶಿರವ ಚೆಂಡನಾಡಿಸದಿರಲು |
ಮೊಲೆಯಲ್ಲಪೊತ್ತಿಹುದು ಕಾಶೀಶ ಸುತೆಯಲ್ಲ |
ಛಲವ ಕಾಂಬುವೆನೆನುತ ವಿಂಧ್ಯವನದೆಡೆಗಾಗಿ ನಡೆದಳತಿ ಶೋಕಿಸುತಲಿ ||226||

ಭಾಮಿನಿ

ಅರಸ ಕೇಳಾ ತರುಣಿ ತನ್ನೊಳು |
ಸೊರಗಿ ಮರುಗುತ ಘೋರ ವಿಪಿನದಿ |
ತೆರಳುತಿರಲಾ ವನವ ಪಾಲಿಪ ಶಬರನೋರುವನು ||
ಧುರಪರಾಕ್ರಮಿ ಏಕಲವ್ಯನು |
ಭರಿತ ಸೇನೆಯ ಕೂಡಿ ವನದೊಳು |
ಹರುಷದಿಂ ಮಗಬೇಟೆಗೆನ್ನುತ ಬಂದನಾಕ್ಷಣದಿ ||227||

ರಾಗ ಸೌರಾಷ್ಟ್ರ ಮಟ್ಟೆತಾಳ

ಬಂದನಾಗ ಬೇಟೆಯಾಡುತ | ಏಕಲವ್ಯ ಹರುಷದಿಂದ || ಬಂದನಾಗ  || ಪಲ್ಲವಿ ||

ತರುಬುತಾಗ ಸಕಲ ಸೇನೆಯ | ವಿಪಿನ ಮಧ್ಯೆ |
ತೆರಳಿ ಬಲೆಯ ಬೀಸುತೀಟಿಯ ||
ಕರದಿ ಪಿಡಿದು ಸುತ್ತ ಕೋಟೆ |
ತೆರದಿ ಚಮರಿ ಸಿಂಗ ಶರಭ |
ವರಹ ಮಹಿಷ ಗಜಗಳನ್ನು |
ತರಿದು ತರಿದು ಕೆಡಹುತಾಗ || ಬಂದನಾಗ ||228||

ಬರುತ ಬರುತ ವನದ ಮಧ್ಯದಿ |  ಶರದ ಶಶಿಯ
ತೆರದಿ ಕಾಂಬ ಮುಖವಿಲಾಸದಿ ||
ತರುಣಿಮಣಿಯು ತೆರಳುತಿಹುದ |
ಪರಿಕಿಸುತ್ತ ಏಕಲವ್ಯ |
ಸ್ಮರನಶರದಿ ತಾಪಗೊಳುತ |
ಸರಸಿಜಾಕ್ಷಿಯೊಡನೆ ಪೇಳ್ದ || ಬಂದನಾಗ ||229||

ಲಾವಣಿ

ಯಾರಮ್ಮಾ ಪೋಪೆ ಈ ವಿಪಿನದೊಳಗೆ ನೀ | ನೋರ‌್ವಳೆಲ್ಲೀ ದೆಸೆಗೆ ||
ಬಾರಮ್ಮ ಎನ್ನ ಕೈ ಪಿಡಿದರೆ ಬಲು ಮಾಸ | ಮಾರನ ಸುಖವನುಂಬ್ತಿ ||230||

ಪೆಸರ ಪೇಳು ನಿನ್ನಿಷ್ಟ ಬರಲು ನಾ | ಖುಶಿಯಾಗೈತೆ ನೋಡಲೆ ||
ವ್ಯಸನವೇತಕೆ ಹಚ್ಚಿಕೊಂಡೈದೆ | ಬೆಸಸೆನ್ನೊಡನೀಗಳ್ ||231||

ಮೇಲ್ಮಹಡಿ ಚಪ್ಪರ ಪಲ್ಲನ್ಗಾ | ಚಾಲಕ ನೋಡಂಜದೆ ಬಲ್ ||
ಹಾಲಾಹಲಿ ನೌಕರರ ಶಿಪಾಗಳ್ | ಓಲೈಸಿರ್ಪರೀಗಳ್ ||232||

ಕಂದ

ಸ್ಮರಶರಹತಿಯೊಳ್ ಬಳಲುತ |
ಬರುವ ಶಬರನನು ಕಂಡು ಸುದತಿಯು ಗಂಗಾ ||
ತರಳನ ವಧಿಸಲ್ಕಿವನೊಡ |
ತೆರಳಿ ಪ್ರಯತ್ನವ ಗೈಯ್ಯುವೆನೆನುತಲಿ ನುಡಿದಳ್ ||233||

ರಾಗ ಜಂಜೂಟಿ ಅಷ್ಟತಾಳ

ಕೇಳು ಕಿರಾತೇಶ ನೀನು | ಕಾಶೀ | ಪಾಲನ ಸುತೆಯಂಬೆ ನಾನು ||
ಕಾಳಗದೊಳಗೆಲ್ಲರನು ಗೆದ್ದ ವರನಿಗೆ |
ಲೀಲೆಯೊಳು ನಾನೀವೆನೆನ್ನುತ | ಪಾಳು ಪಣವನೆ ಗೈದಮತ್ಪಿತ ||234||

ಧರಣಿಪಾಲಕರೆಲ್ಲ ಕೂಡಿ | ಸಂ | ಗವ ಗೈಯ್ಯಲು ಮನ ಮಾಡಿ ||
ದುರುಳ ಭೀಷ್ಮನು ಸರ್ವರನು ಗೆದ್ದು ಬಳಿಕೆಮ್ಮ |
ಕರೆದು ಕೊಂಡೈದಿದನು ಹಸ್ತಿನ | ಪುರಿಗೆ ರಥವೇರಿಸುತ ಬೇಗದಿ ||235||

ಅನುಜ ವಿಚಿತ್ರ ವೀರ್ಯನನು | ವರಿ | ಸೆನುತ ಪೀಡಿಸಿ ಕೇಳೆ ನಾನು ||
ಘನ ಪರಾಕ್ರಮಿ ನೀನೆ ವರಿಸೆಂದು ಪೇಳಲು |
ಕಿನಿಸಿ ನಿಂದಲಿ ಬೈದು ನೂಕಿದ | ವನಕೆ ಬಂದೆನು ಕೇಳ್ವರಿಲ್ಲೆ ||236||

ಧುರದಿ ಭೀಷ್ಮನ ಕೊಲ್ಲೆ ನೀನು | ಪಟ್ಟ | ದರಸಿಯಾಗುವೆ ಕೇಳು ನಾನು
ಘನ ಪರಾಕ್ರಮಿಯಾದಡೀಗ ನೀ ಪೊರಡೆನೆ |
ತರುಣಿ ಮಝ ಬಾಪೆನ್ನ ಸಾಹಸ | ಪರಿಕಿಸೆನ್ನುತ ಪೊರಟನಾಕ್ಷಣ ||237||

ರಾಗ ಕಾಂಭೋಜಿ ಝಂಪೆತಾಳ

ತರುಣಿ ಏಳೇಳೆನುತ ಶಬರಪತಿ ಹೂಂಕರಿಸಿ | ಕರದಿ ಧನುಶರಗಳನು ಧರಿಸಿ ||
ಕರಿ ನಗರಮಂ ಪೊಕ್ಕು ದ್ವಾರದಲಿ ನಿಂತಿರುವ | ಚರನೋರ್ವನಂ ಕರೆದು ಪೇಳ್ದ ||238||

ನಡೆ ನಿಮ್ಮ ಭೀಷ್ಮನಿಂಗಂಬೆಯನು ಕೈಪಿಡಿಸೆ | ಧುರ ಪರಾಕ್ರಮಿ ಏಕಲವ್ಯ |
ಒಡನೆ ಬಂದಿಹನೆಂದು ಕರೆದು ತಾರೆಂದೆನುತ | ಸಡಗರದಿ ಕಳುಹೆ ಚಾರನನು ||239||

ಸುರನದೀಸುತ ಭೀಷ್ಮನೆಡೆಗೆ ನಡೆತಂದಾಗ |  ಧುರಪರಾಕ್ರಮಿಗೆ ಕರಮುಗಿದು |
ಹೊರದ್ವಾರದೊಳಗಂಬೆ ಕೈರಾತನೋರುವನ | ಕರೆತಂದಿಹಳು ತವಕದಿಂದ ||240||

ಸುರನದೀ ಸುತಗೆ ಲಗ್ನವ ಮಾಳ್ಪೆ | ಬರಹೇಳು | ತ್ವರಿತದಿಂದೀಗೆನುತ ಶಬರ ||
ಕರದಿ ಧನುಶರ ಪಿಡಿದು ನಿಂತಿಹನು ಘರ್ಜಿಸುತ | ತೆರಳಬಹುದು ಸ್ವಾಮಿ ನೀವು ||241||

ದೂತರನಿಂತೆನೆ ಖತಿಯುಗೊಳುತ ಸುರನದೀ | ಜಾತ ಧನುಶರ ಪಿಡಿಯುತಾಗ ||
ಆತನ್ಯಾರೈ ಶೂರ ನೋಡಬೇಕೆನುತ ಬಹ | ಳಾತುರದಿ ಬರೆ ಕಂಡ ಶಬರ ||242||

ರಾಗ ಭೈರವಿ ಅಷ್ಟತಾಳ

ಸುರನದೀಸುತನೆ ನೀನು | ಶಾಸ್ತ್ರಾರ್ಥವ | ನರಿತಿಹ ಧರ್ಮಜ್ಞನು ||
ಬರಿದೆ ಕಾಶೀಶನ ತರಳೆಯರನು ತಂದು | ವರಿಸದೇತಕೆ ಬಿಟ್ಟೆಲೊ ||243||

ನೀತಿ ಶಾಸ್ತ್ರವ ಪೇಳಲು | ಶೌನಕ ಗಾರ್ಗ್ಯ | ಸೂತನೊ ಪೇಳೀಗೆನಲು ||
ಈ ತರುಣಿಯ ಮಾತಿನಿಂದ ಬಂದವರಾರು | ಜಾತಿ ಯಾವುದು ಪೇಳೆಲೊ ||244||

ಒಳ್ಳೆ ಮಾತಿನೊಳೀಕೆಯ ಕೂಡನೆ ಬಿಡೆ ಕಳ್ಳುಗಿವೆನು ನಿಶ್ಚಯ ||
ಎಲ್ಲ ಜನರಿಗರಿವಂತೆ ಶಿಕ್ಷಿಪೆ ಧುರ | ಮಲ್ಲ ನಾನೇಕಲವ್ಯ ||245||

ಸತಿಯ ತಮ್ಮನೊ ಭಾವನೊ | ಮಾವನೊ ಪಿತ | ಪಿತನೊ ಬಾಂಧವ ನೆಂಟನೊ ||
ವ್ಯಥೆಯೇನು ನಿನಗೆಲೊ ದುರುಳ ಕೈರಾತನೆ | ಮತಿಹೀನ ಮುಚ್ಚು ಬಾಯ ||246||

ವಿನಯ ತಪ್ಪಿದ ಮೂರ್ಖಗೆ | ನೀತಿಯ ಪೇಳ | ಲನುಬಂಧವೇಕೊ ಹೀಗೆ ||
ಮನುಜರೊಳ್‌ನ್ಯಾಯ ಧರ್ಮದ ನಡತೆಗೆ ಸರ್ವ | ಜನರು ಕಾರಣಭೂತರು ||247||

ಬ್ರಹ್ಮಚರ್ಯವು ಎನಗೆ | ವೈವಾಹ ಅ | ಸಮ್ಮತ ನೋಳ್ಪರಿಗೆ ||
ನಮ್ಮ ಕುಲದಿ ತಪ್ಪಿ ನಡೆದರಿಲ್ಲ | ಹೆಮ್ಮೆ ಮಾತಾಡದಿರು ||248||

ತಿಳಿದು ತಿಳಿದು ವ್ಯರ್ಥದಿ | ಕೆಡಿಸಿದೆ ತಂದೀ | ಲಲನೆಯ ಬಿಡೆ ಧುರದಿ ||
ಗೆಲಿದು ಲಗ್ನವ ಗೈಸಿ ಪೋಗುವೆ ನೋಡಿನ್ನು | ಹಲವು ಮಾತುಗಳೇತಕೊ ||249||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸುರನರೋರಗರಿಂಗೆ ಬೆದರದ | ಧುರ ಪರಾಕ್ರಮಿ ಭೀಷ್ಮನೆಂಬವ |
ಸರಿಸದಲಿಸಲೆ ನಿನ್ನ ವಿಕ್ರಮ | ಮೆರೆಯಲುಂಟೆ ||250||

ನಿನ್ನ ಬಿಡು ಮುಕ್ಕಣ್ಣಗಂಜೆನು | ಕುನ್ನಿಗಳು ಸಾಕೆನುತ ಶಬರನು |
ಕಣ್ಣಿನೊಳು ಕಿಡಿಯುಗುಳುತಸ್ತ್ರವ | ಭೀಷ್ಮಗೆಸೆದ ||251||

ತ್ವರಿತದಿಂ ಗಾಂಗೇಯ ತರಿವುತ | ದುರುಳನಾಯುಧಗಳನು ಸೆಳೆದಾ |
ನೆರೆಪಿಡಿದು ಶಬರನನು ಮೀಸೆಯ | ತಿರುಹುತೆಂದ ||252||

ಎಲೆಲೆ ಕುರಿ ಕೇಳ್ನಿನ್ನ ಪೌರುಷ | ಸಲುವುದೇ ನಮ್ಮಿದಿರು ಬಿಡಿಸುವ |
ಕಲಿಗಳಿಹರ‌್ಯಾರೀಗ ಕರೆತಾ | ಛಲವ ನೋಳ್ಪೆ ||253||

ಸಾಂಗತ್ಯ ರೂಪಕತಾಳ

ಈ ತೆರದೊಳು ಸೆರೆ ಪಿಡಿದು ಗರ್ಜಿಸುತಿರೆ | ಸೋತೆನೆಂದೆನ್ನುತ ಶಬರ ||
ಪೂತುರೆ ನಿನ್ನೊಳು ಧುರದಿ ಗೆಲ್ಲುವರನು | ಭೂತಳದೊಳು ಕಾಣೆನಯ್ಯ ||254||

ದುಷ್ಟ ಮಾನಿನಿಯಳ ಮಾತಿಗೋಸುಗ ಬಂದೆ | ಕೆಟ್ಟೆನು ಸಲಹೆನ್ನದಯದಿ ||
ಕೆಟ್ಟ ಮಾತುಗಳುಸುರಿದೆ ಕ್ಷಮಿಸೆನ್ನುತ | ಸಷ್ಟಿಯೊಳೆರಗಲು ಕಂಡು ||255||

ಕುಲಗೇಡಿ ಭ್ರಷ್ಟೆ ನಿವಾಳಿ ಮಾನಿನಿ ಈಕೆ | ಕಲಹಕಾರಿಣಿ ದುಶ್ಚಾರಿತ್ರೆ ||
ಛಲದಿ ಮರುಳುಮಾಡಿ ಕರೆತಂದಳ್ನಿನ್ನನು | ಸಲಹುವೆ ಪೋಗು ಪೋಗೆಂದ ||256||

ವಾರ್ಧಕ

ಸೆರೆಯ ಬಿಡೆ ಕೈರಾತರರಸ ಸಂತೋಷದಿಂ |
ದೆರಗಿ ನೇಮವಗೊಂಡು ಕೆಟ್ಟ ಮೂರ್ಖಳೆ ನಿನ್ನ |
ಶಿರವರಿವೆನೆಂದೆನುತ ಖಡುಗಮಂ ಝಳಪಿಸಲು ಸುರನದೀಸುತ ಕಾಣುತ ||
ತರುಣಿಹತ್ಯವ ಗೈಯ್ಯಬೇಡ ಪೋಗೆಂದೆನಲು |
ತಿರುಗಿ ವಿಂಧ್ಯಾರಣ್ಯ ಮಾಗರ್ಮಂ ಪಿಡಿಯಲವ |
ಭರಿತ ರೋಷವ ತಾಳಿ ಮನದೊಳಗೆ ಕಾಶೀಶತರಳೆ ಭೀಷ್ಮನೊಳೆಂದಳು ||257||

ರಾಗ ಕೇದಾರಗೌಳ ಝಂಪೆತಾಳ

ನೋಡೆನ್ನ ಸಾಹಸವನು | ಶಿರವ ಚೆಂ | ಡಾಡುತಿಹ ಸುಭಟರನ್ನು |
ಕೂಡೆ ಕರೆತಹೆನೆನ್ನನು | ವರಿಸದಿರೆ | ಖೋಡಿ ನಿನ್ನಿರಿಸೆ ನಾನು ||258||

ಭ್ರಷ್ಟೆನೀ ತಂದ ಪಡೆಗೆ | ಸಂಭಾರ | ವೆಷ್ಟಾದರೀವೆ ಕಡೆಗೆ ||
ದಿಟ್ಟೆಪೋಗದೆ ಉಳಿದರೆ | ದಂತಗಳ | ಕುಟ್ಟಿ ಮುರಿಯುವೆ ನಿಂತರೆ ||259||

ವರಿಸದಿರಲೆನ್ನ ನೀನು | ನಿನ್ನ ಸಂ | ಹರಿಸೆ ಪುಟ್ಟಿರುವೆ ನಾನು ||
ತರುಣಿ ಜನ್ಮವ ವ್ಯರ್ಥದಿ | ಕೆಡಿಸಿದೆಯೊ | ಪರಮ ಪಾತಕಿ ಗರ್ವದಿ ||260||

ದುರುಳೆ ನಿನ್ನಯ ಮುಖವನು | ನೋಡೆ ನೀ | ಪುರದಿಂದ ನೂಕಿಸುವೆನು ||
ಅರೆ ಕಾಸಿನವಳೆ ನಿನಗೆ | ಛಲವೆಷ್ಟೈ | ತೆರಳು ನೀ ಬಂದಹಾಗೆ ||261||

ಕಟ್ಟು ಸೆರಗಲಿ ಗಂಟನು | ಮುಂದೆನ್ನ | ದಿಟ್ಟತನವನು ತೋರ್ಪೆನು ||
ಭ್ರಷ್ಟ ತಡೆ ತಡೆಯೆನ್ನುತ | ಪಲ್ಗಡಿದು | ಥಟ್ಟನಲ್ಲಿಂತೆರಳುತ ||262||

ರಾಗ ಪಂತುವರಾಳಿ ರೂಪಕತಾಳ

ಧುರದೊಳವನನು | ಗೆಲುವ ಶೂರನು ||
ಧರೆಯೊಳೆಲ್ಲಿಯು | ಕಾಣೆ ಸಹಜವು ||263||

ವನಕೆ ಪೋಗ್ವೆನು | ತಪವಾಚರಿಪೆನು ||
ಹನನಗೈವೆನು | ಶಪಿಸುತಿವನನು ||264||

ಎಂದು ವೇಗದಿ | ಪೊರಟು ಶೀಘ್ರದಿ ||
ಕಂದಿ ನೊಂದು ತಾ | ನಡೆಯೆ ಬೈಯ್ಯುತ  ||265||

ದ್ವಿಪದಿ

ಹದಯದೊಳು ಕಳವಳಿಸಿ ಪೋಗಿ ಬಲು ಪಥದಿ ||
ಬದರಿಕಾವನಗಳನು ನೋಡಿ ಸಂತಸದಿ ||266||

ಋತುಭೇದವಿಲ್ಲದಿಹ ಪುಷ್ಪಲತೆಗಳಲಿ ||
ಲತೆವಕ್ಷ ಸಂಕುಲವ ನೋಡಿ ಹಿಗ್ಗುತಲಿ ||267||

ಪುಲಿ ಗೋವು ಹರಿಗಜಗಳತಿ ಸ್ನೇಹದಿಂದ ||
ಚಲಿಸುತಿಹ ಭಾವಮಂ ಕಂಡು ಮುದದಿಂದ ||268||

ಋಷಿಯ ವನಗಳಿದೆಂದು ಪೋಗುತಿರಲಾಗ ||
ಕುಶ ಸಮಿಧೆಗೆನುತ ವಟುವರರು ಬರಲಾಗ ||269||

ಅಜಪುಚ್ಛ ಶಶಿಪುಚ್ಛ ವಾಘ್ರ ಪುಚ್ಛಕರು ||
ಗಜಪುಚ್ಛಹಯಪುಚ್ಛರೆಂಬ ಬಾಲಕರು  ||270||

ಬರುತಿರಲು ದಾರಿಯೊಳು ಕಾಣುತೀಕೆಯನು ||
ಅರರೆ ಏನೆಂದೆನುತ ತಾಳಿ ಭೀತಿಯನು ||271||

ರಾಗ ಮಧುಮಾಧವಿ ತ್ರಿವುಡೆತಾಳ

ಪರಿಕಿಸಲು ಮಗವಲ್ಲ ಮನುಜರ | ತೆರದಿ ಕಾಂಬುದು ಮೀಸೆ ಗಡ್ಡವು ||
ಶಿರದಿ ಜಟೆ ಕೌಪೀನವಲ್ಲವಿ | ದರಿಯೆ ತನುವಿಂಗೇನಿರೊ ||272||

ಗಳದ ರುದ್ರಾಕ್ಷೆಗಳು ಥಳಥಳ | ಹೊಳೆಯುತಿವೆ ಕಿವಿಯೊಳಗೆ ಲತೆಗಳ ||
ಮೊಳೆಯೊಳಿಹ ಕರಿ ಬಿಳಿದು ಮೊಗ್ಗೆಯ | ಬಳಗದಂದದಿ ತೋರ್ಪುದು ||273||

ಭೂತ ಪ್ರೇತವೂ ನಮಗೆ ತಿಳಿಯದಿ | ದೇತಕೋಸುಗ ಬಂತೊ ನಡೆವಡೆ ||
ಈ ತತೂಕ್ಷಣವೆನುತ ವಟುಗಳು | ಪೂತುಗೆಡೆ ಕಂಡಂಬೆಯು ||274||

ನಿಲ್ಲಿರೈ ನೀವ್ಯಾರು ಪೇಳೀ | ಗೆಲ್ಲಿ ಗೈದುವಿರೆನಲು ವಟುಗಳು ||
ಮೆಲ್ಲಮೆಲ್ಲನೆ ತರುವನೇರುತ | ನಿಲ್ಲೆ ಗಡ ಗಡ ನಡುಗುತ ||275||

ರಾಗ ಕೇತಾರಗೌಳ ಅಷ್ಟತಾಳ

ಪರಿಕಿಸೆ ನಮ್ಮಂತೆ ಮಾತನಾಡುತಲಿದೆ | ನರಜನ್ಮವಿರಬಹುದೆ ||
ಕರೆದು ಕೇಳುವ ನಾವೆಂದೋರ್ವ ಬಾಲಕನಾಗ | ತರುಣಿಯೊಡನೆ ಪೇಳ್ದನು ||276||

ಯಾರು ನೀನೆಲ್ಲಿಂದ ಬಂದೆ ನಿನ್ನಯ ರೂಪ | ಭೂರಿ ವಿಕಾಸಗಳು ||
ಘೋರ ಪಿಶಾಚಿಯೊ ಜನ್ಮ ಠಾವ್ಯಾವುದು | ಪಾರಮಾರ್ಥಕದಿ ಪೇಳು ||277||

ಎನಲಾ ಮಾತಿಗೆ ನಸುನಗುತಲಿ ತರುಣಿಯು | ಮನುಜಳೀ ಸ್ತ್ರೀ ಜನ್ಮವು ||
ಜನಪನ ಕುವರಿಯು ಬೆದರದಿರೆಂದೆನೆ | ಘನತರಚ್ಚರಿ ತಳೆದು ||278||

ಹೆಣ್ಣೆಂದರೇನು ನಾವ್ಕಾಣೆವು ಸರ್ವಥಾ ಕಣ್ಣು ಕಟ್ಟುವೆ ನಮ್ಮನು ||
ಬಣ್ಣದ ಮಾತಾಡಿ ಬಂದುದು ರಣವಿದು | ತಿನ್ನಲೋಸುಗ ದೈವದೆ ||279||

ಸರುವಥಾ ಸುಳ್ಳಲ್ಲ ನಿಮ್ಮ ಗುರುಗಳ್ಯಾರು | ಕರುಣದಿ ಪೇಳಿರಯ್ಯ ||
ಬರುವೆನು ನಿಮ್ಮಯ ಪರ್ಣಾಶ್ರಮಕೆ ಎನೆ | ತರುಣಿಯೊಡನೆ ಪೇಳ್ದರು ||280||

ಗುರುಗಳೆಮಗೆ ಶೈಖ್ಯಾವತ್ಯರು ಬಾರೀಗ | ಇರುವರೀ ವನದೊಳೆಂದು ||
ತರುವಿಂದಿಳಿದು ಮುಂದೆ ತಿರುಗಿ ನೋಡುತ ಹಿಂದೆ |
ತೆರಳೆ ಬೆಂಗಡೆ ಪೋದಳು ||281||

ತೆರಳುತ್ತ ತರುಣಿಯ ಬಿಟ್ಟು ದ್ವಾರದಿ ವಟು | ವರರು ಪರ್ಣಾಶ್ರಮಕೆ ||
ಸರಿದು ನಡುಗುತಲಿ ವರ ಮುನಿಪಾಲನ | ಚರಣಕೆರಗುತೆಂದರು ||282||

ರಾಗ ನವರೋಜು ಏಕತಾಳ

ಕರುಣದಿ ರಕ್ಷಿಸು ಮುನಿಯೆ | ನೀ | ಪರಮ ಸದ್ಗುಣಮಣಿಯೆ ||
ತೆರಳಿರೆ ವನದಲಿ ಕುಶ ಸಮಿಧೆಗಳನು |
ಅರಸಲು ಬಂತು ವಿಕಾರ ಪಿಶಾಚಿಯು ||283||

ಕರ ಚರಣ ನಾಸಿಕವು | ಕೇಳ್ | ಶಿರಕೇಶಾಂಗುಲಿ ಮುಖವು ||
ಪರಿಕಿಸೆ ನರರಂತೆಸೆವುದು ಮುಖದೊಳ |
ಗಿರದು ಮೀಸೆ ಮತ್ತೆದೆಯುಬ್ಬಾಗಿದೆ ||284||

ನಡುವಿನೊಳಿಲ್ಲುಡುದಾರ | ಬಲ್ | ಬೆಡಗಿಲಿ ತೋರ‌್ಪ ವಿಕಾರ ||
ಅಡಿಯುಗಳ ಪರಿಯಂತರ ವಸನವು  |
ತೊಡಕಿನ ಕೆಂಪು ಮಕುಟ ರುದ್ರಾಕ್ಷೆಯು  ||285||

ಥರ ಥರ ಗೊಂಚಲುಗಳನು | ಕಿವಿ | ಗಿರಿಸಿ ಹಣೆಕೆಮ್ಮಣ್ಣು ||
ಬರಿದಿದೆ ನಮ್ಮೋಲ್ಮಾತನಾಡುತಲಿ |
ವರ ಮುನಿಪನ ತೋರೆಂದು ಬಂದಿಹುದು ||286||

ಭೂತವೂ ಪೈಶಾಚಿಕವೊ | ಮುನಿ | ನಾಥನ ಕೇಳ್ ರಾಕ್ಷಸವೊ ||
ಮಾತನಾಡಿ ಅನುಸರಿಸಿ ಬಂದಿರುವುದು |
ಘಾತಿಸಿ ಎಮ್ಮನು ಸಲಹೈ ದೈನ್ಯದಿ ||287||

ಕಂದ

ಇಂತೆನೆ ಕೇಳುತ ಮುನಿಪತಿ |
ಅಂತರ್ಯದೊಳರಿತು ಕಾಶಿಯರಸನ ಸುತೆಯಂ ||
ಚಿಂತೆಯ ಬಿಡಿ ಕರೆರೀಕ್ಷಣ |
ವೆಂತೆನಲವರೈದಿ ಬೇಗ ಕರೆತರಲವಳಂ ||288||

ಭಾಮಿನಿ

ಪರಮ ತೇಜಃಪುಂಜ ಮೂರುತಿ |
ಭರಿತ ಶಿಷ್ಯರ ಗಡಣದಿಂದಲೆ |
ನಿರತಿಶಯದಾನಂದ ಶೈಖ್ಯಾವತ್ಯ ಮುನಿರಾಯ ||
ಹರುಷದಿಂ ಕುಳ್ಳಿರಲು ಕಾಣುತ |
ಕರುಣಿ ರಕ್ಷಿಸು ರಕ್ಷಿಸೆನುತಲಿ |
ತರುಣಿಯಭಿನಮಿಸುತ್ತ ಶೋಕಿಸಲಾಗ ಮುನಿಪೇಳ್ದ ||289||

ರಾಗ ಭೈರವಿ ಝಂಪೆತಾಳ

ಯಾರಮ್ಮ ನಿನ್ನ ಪುರ ಯಾವೆಡೆಯೊ ಪೆಸರೇನು |
ಯಾರು ಪೆತ್ತಿಹ ಸುತೆಯೊ ಪೇಳು ಭಯವೇನು ||
ತೋರುತಿಹೆ ನಪಕನ್ಯೆಯಂತೆ ರೂಪಿನೊಳೀಗ |
ಭೂರಿ ಚಿಂತೆಯು ನಿನ್ನಗಾರುಗೆಡಿಸಿಹುದು ||290||

ಋಷಿವರ್ಯನಿಂತೆನಲು ಕೇಳೆನುತ್ತಾ ಬಾಲೆ |
ಯುಸುರಿದಳು ಕಾಶಿಪತಿ ಸುತೆಯಂಬೆ ನಾನು ||
ವ್ಯಸನ ಬಂದುದ ಪೇಳ್ವೆ ಎನ್ನ ಭಗಿನಿಯರೀರ್ವ |
ರೆಸೆದಿಹರು ಮತ್ಪಿತನು ನಮ್ಮ ಮೂವರನು ||291||

ಧುರದೊಳೆಲ್ಲರ ಗೆಲಿದವರಿಗೆ ಕೊಡುತಿಹೆನೆಂದು |
ಬರಿಸೆ ಪಥ್ವೀಶರಿಗೆ ನಡೆತಂದರೆಲ್ಲ ||
ಪರಿಕಿಸುತ ಸಾಲ್ವನೊಳು ಮನವಿರಿಸಿಕೊಂಡಿರ್ದ |
ಸುರನದೀಸುತ ಭೀಷ್ಮ ಬಂದನಾಕ್ಷಣದಿ ||292||

ಗೆಲಿದೆಲ್ಲ ನಪತಿಗಳ ಪುರಕೆಮ್ಮ ಕರೆದೊಯ್ದು |
ವಲಿಸು ಅನುಜನನೆಲು ಮನವೊಪ್ಪದಾನು ||
ಛಲದಿಂದ ನೀನೆ ಪತಿಯಾಗೆಂದು ಪೇಳಿದಡೆ |
ನೆಲಸಿಕೊಂಡಿದೆ ಬ್ರಹ್ಮಚರ್ಯ ವ್ರತವೆಂದ ||293||

ಮನದೊಳಗೆ ಸಾಲ್ವನನು ವರಿಸಿರ್ಪೆ ಕಳುಹೆನಲು |
ವನಿತೆ ಪೋಗೆಂದೆನ್ನ ತೆರಳಿಸಿದ ದಯದಿ ||
ದನುಜನಿದಿರೊಳು ಪೋಗಿ ವರಿಸೆನಲು ನಾನವರ |
ಮನೆಗೆ ಪೋಗಿಹೆ ಮುಖವ ನೋಡೆ ತೆರಳೆಂದ ||294||

ರಾಗ ಮಧ್ಯಮಾವತಿ ಏಕತಾಳ

ಬಂದೆನು ಭೀಷ್ಮನ ಬಳಿಗೆ ತ್ವರ್ಯದೊಳು ||
ಕಂದಿ ಕುಂದುತ ವರಿಸೆಂದೆ ದೈನ್ಯದೊಳು ||295||

ಎಷ್ಟು ಪೇಳ್ದರು ನಿನ್ನ ನೋಡೆನೆಂದೆನುತ ||
ಸಿಟ್ಟಿನಿಂ ಬೆದರಿಸಿ ಕಳುಹಿಸಿದನಾತ ||296||

ಬರುವ ಕಾಲದೊಳೋರ್ವ ಶಬರನು ಕಂಡು ||
ಸುರನದೀಸುತ ಗೈವ ಪರಿಗೆ ಖತಿಗೊಂಡು ||297||

ಧುರದಿ ಭೀಷ್ಮಗೆ ಸೋತು ತೆರಳಿನವನು ||
ಭರದೊಳು ವಿಪಿನಕೆ ಬಂದೆನು ನಾನು ||298||

ಯತಿಗಳ ಧರ್ಮದೊಳಿರಲು ಬಂದಿಹೆನು ||
ಹಿತದಿ ಮಂತ್ರೋಪದೇಶವ ಗೈಯ್ಯ ನೀನು ||299||

ವಾರ್ಧಕ

ತರುಣಿಯೆಂದುದ ಕೇಳಿ ಮುನಿಪ ಶೈಖ್ಯಾವತ್ಯ |
ಮರುಗಿ ತನ್ನಯ ಮನದಿ ಸನ್ಯಾಸ ವತ್ತಿಗಳ್ |
ಸರಸಿಜಾನನೆ ಬೇಡ ಯವ್ವನಾವಸ್ಥೆಯೊಳು ಪರಮ ದುರ್ಘಟಮಾದುದು ||
ಮರುಗದಿರು ಯೋಚಿಸುತ ಪೇಳ್ವೆ ಯುಕ್ತಿಗಳಿಂದು |
ಪರಮ ಪ್ರಿಯರಿಹ ಕಪಿಲ ಮೈತ್ರೇಯ ಶಿಷ್ಯರೊಳು |
ಪರಿಯ ಯೋಚಿಸುತಿರಲು ವರ ಕೃತೌವ್ರಣನೆಂಬ ಮುನಿಪನೈತರೆ ಕಾಣುತ ||300||

ರಾಗ ಕಲ್ಯಾಣಿ ಅಷ್ಟತಾಳ

ಬಂದ ಕೃತೌವ್ರಣನಂ ಕಂಡು | ಮುದ | ದಿಂದ ಕುಳ್ಳಿರಿಸಿ ನೇಮವಗೊಂಡು ||
ಸುಂದರಾಂಗಿಗೆ ಬಂದ ವ್ಯಥೆಯೆಲ್ಲ ಸೂಚಿಸಿ | ಮುಂದೇನ ಗೈವುದೆಂದೆನೆ ಶೈಖ್ಯಾವತ್ಯನು ||301||

ತಂದೆ ಮನೆಗೆ ಕಳುಹುವುದು | ಬೇ | ರೊಂದು ವರನ ವರಿಸುವುದು ||
ಚಂದವಹುದು ಎನ್ನುತ್ತಾ ಕೃತೌವ್ರಣ ಪೇಳೆ | ನಿಂದಿತವದು ಬೇಡೆಂದೆನುತ ಸುಹೋತ್ರನು ||302||

ಸುರನದಿಸುತನಿರ್ಪ ಬಳಿಗೆ | ನಾವು | ಕರೆದೊದು ವರಿಸುವ ಹಾಗೆ ||
ಪರಿಪರಿ ನೀತಿಯನರುಹಿ ಕೂಡಿಸುವುದು | ಪರಮ ಧರ್ಮಗಳೆನೆ ಕಪಿಲನಿಂತೆಂದನು ||303||

ಮುದದಿ ಸಾಲ್ವನ ಬಯಸಿಹಳು | ನೀ | ವದನು ಯೋಚಿಸಿ ದನುಜನೊಳು ||
ಮದನಾಂಗಿಯನು ವಲಿಸುವ ತೆರಗೈದರೆ | ಸುದತಿಯ ಪತಿವ್ರತಾ ಧರ್ಮವು ಸಾರ್ಥಕ ||304||

ಎನಲು ಶೈಖ್ಯಾವತ್ಯ ನಗುತ | ಪರ | ರನುಸರಿಸಲು ಖಳನಾಥ ||
ವನಿತೆಯೊಬ್ಬಳ ಮತ್ತೆ ಸ್ವೀಕರಿಪನೆಂದನು | ಜನು ವರ ನೀತಿ ವಿಶಾರದನಿಹನಿಹನಾತ ||505||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಂದು ಶೈಖ್ಯಾವತ್ಯ ಮುನಿಪನು | ಸುಂದರಿಯೆ ನೀ ಕೇಳು ಸುದತಿಯ |
ರಿಂದು ಪತಿಗತಿಯಿಹುದ ಮಿಕ್ಕರೆ | ತಂದೆ ಗತಿಯು ||306||

ಪರಮ ಸನ್ಯಾಸವನು ಪೊಂದಿರೆ | ತರುಣಿಯರಿಗತಿ ಕಷ್ಟ ಮತ್ತಾ |
ಸರಸಿಜಾಸ್ಯೆಯೆ ರೂಪು ಯೌವನ | ವರೆದು ಮೆರೆವ ||307||

ವರ ತಪದಿ ಕುಳ್ಳಿರಲು ನಿನ್ನನು | ಪರಮ ಕಾಮುಕ ಧರಣಿಪಾಲರು |
ಪರಿಕಿಸುತ ಮರುಳಾಗಿ ಭ್ರಮಿಸದೆ | ಇರುವರ‌್ಯಾರು ||308||

ಅದಕೆ ನೀಪಿತನೆಡೆಗೆ ಪೋಗೈ | ಬದಲು ವರನಿಗೆ ಕೊಡುವನಾತನು |
ಚದುರೆ ಬಳಲಿಸಬೇಡ ನೀ ವ್ಯ | ರ್ಥದಲಿ ದೇಹ ||309||

ಎನಲು ಕೇಳುತ್ತಂಬೆ ಅವನತಿ | ಯನು ತಳೆಯೆ ನಾನೆಂದಿಗಾದರು |
ಜನಕನಲ್ಲಿಗೆ ಪೋಪಳಲ್ಲವು | ಮುನಿವರೇಣ್ಯ ||310||

ಎನ್ನ ದೌಭಾರ್ಗಗ್ಯಗಳು ಪತಿ ಸುಖ | ವಿನ್ನು ಪಡೆಯೆನು ಪ್ರಾಯಕಾಲದಿ |
ಮುನ್ನ ತಪವಾಚರಿಪೆ ಮುನಿಪನೆ | ಚೆನ್ನವಾಗಿ ||311||

ಭಾಮಿನಿ

ತರುಣಿ ಶೋಕಾತುರದಿ ಕುಳ್ಳಿರೆ |
ಪರಮ ಋಷಿ ಸಮುದಾಯ ಯೋಚಿಸು |
ತಿರುವ ಕಾಲದಿ ಹೋತ್ರವಹನೆಂದೆಂಬ ರಾಜಋಷಿ ||
ತ್ವರಿತದಿಂದೈತರಲು ಸರ್ವರು |
ಹರುಷದಿಂ ಪಾದಾರ್ಘ್ಯವೀಯುತ |
ಕರವಿಡಿದು ಕುಳ್ಳಿರಿಸಿ ಕುಶಲವ ಕೇಳ್ದು ಮನ್ನಿಸುತ ||312||

ವಾರ್ಧಕ

ಪರಮ ಋಷಿವರನು ಶೈಖ್ಯಾವತ್ಯನಿಂತೆಂದ |
ಸರಸಿಜಾನನೆ ಕೇಳು ಕಾಶೀಶ ಧಾರ್ಮಿಕಂ |
ತರಳೆಯಹಳಿವಳ ಪ್ರಾಚೀನ ಕರ್ಮದ ಫಲದಿ ಪರಿಣಯಕ್ಕಿಂತ ಮೊದಲೆ ||
ವರಿಸಲೆಳಸಿದ ಸಾಲ್ವನಂ ಜೈಸಿ ಗಾಂಗೇಯ |
ಕರೆದೊಯಿದು ಪರಿತ್ಯಜಿಸಿ ಮತ್ತೆ ಖಳನೆಡೆಗೈದಿ |
ಪರಿಪರಿಯ ಕೇಳಿರಲು ತೊರೆದ ಕಾರಣವಿವಳು ಪಿತನೆಡೆಗೆ ಪೋಪುದುಚಿತ ||313||

ರಾಗ ಬೇಗಡೆ ಏಕತಾಳ

ಮುನಿಪ ಕೇಳ್ಸಂಗರದಿ ಸಕಲರನು | ಗೆಲಿದರಿಗೆ ತನ್ನಯ |
ತನುಜೆಯರ ಕೊಡುತಿರ್ಪೆನೆಂಬುದನು ||
ಜನಕನೆಸಗಿದ ಕಾರಣದೊಳೆನ | ಗಿನಿತು ಶೋಕಗಳೊದಗಿಕೊಂಡಿದೆ |
ವನಿತೆ ಜನ್ಮವ ಸಫಲಗೈವರೆ | ವನದಿ ತಪಿಸುವೆ ಪೋಪುದಿಲ್ಲವು ||314||

ಬಾಲಕಿಯ ನುಡಿ ಕೇಳುತಾಕ್ಷಣದಿ | ದುಃಖಾಂಬುಧಿಯೊಳ್ಮುನಿ |
ಪಾಲ ನಡುನಡುಗುತ್ತ ವ್ಯಾಕುಲದಿ ||
ಶೀಲೆ ಬಾ ಬಾರವ್ವ ಬಾರಿ | ನ್ನೇಳೆನುತ್ತಲಿ ಹೋತ್ರವಹನನು |
ಬಾಳ ವ್ಯಸನವು ತಪಕೆ ಬಂದರು | ಮೇಲೆ ಮೇಲವಘಡಿಸಿ ಬಂದುದೆ ||315||