ಶಾರ್ದೂಲ ವಿಕಿ್ರೀಡಿತಂ

ಶ್ರೀವಾಣೀಧವಸನ್ನುತಂ ಶ್ರುತಿನುತಂ ವಂದಾರುವಂದಾನ್ವಿತಂ |
ಶರ್ವಾಣೀಪತಿ ಸೇವಿತಂ ಸ್ಮರಪಿತಂ ಶ್ರೀಶಂ ಸುರೇಶಾರ್ಚಿತಂ ||
ಸರ್ವಾಭೀಷ್ಟ ಫಲಪ್ರದಂನುತವದಂ ಹೇಮಾಕ್ಷನಾಮಾಪರಂ ||
ಊರ್ವೀಸಜ್ಜನ ಸಂಪದಂ ಪ್ರತಿಪದಂ ಧ್ಯಾಯಾಮಿ ಮಾಯಾಸ್ಪದಂ ||1||

ರಾಗ ನಾಟಿ ಝಂಪೆತಾಳ

ಜಯತು ಜಯ ಗಜಕರ್ಣ | ಜಯತು ಧೂಮಲವರ್ಣ ||
ಜಯತು ಸುರಗಣ ಸ್ತುತ್ಯ | ಜಯನಾಗವಕ್ತ್ರ ||
ಜಯ ಜಯತು ಜಯತು ||2||

ಜಯ ಸಿದ್ಧಿ ಗಣನಾಥ | ಜಯ ಭಕ್ತಜನ ಪ್ರೀತ ||
ಜಯ ಕಾತ್ಯಾಯಿನೀ ತನುಜ | ಜಯತು ವಿಖ್ಯಾತ ||
ಜಯ ಜಯತು ಜಯತು ||3||

ಈಶ ಸುತ ಕಮ್ಮರಡಿ | ವಾಸ  ದುಃಖವಿನಾಶ ||
ಮೂಷಿಕ ಧ್ವಜ ಸಲಹು | ಸಿದ್ಧವಿಘ್ನೇಶ ||
ಜಯ ಜಯತು ಜಯತು ||4||

ಭಾಮಿನಿ

ಗಿರಿಜೆ ತ್ರಿಜಗಜ್ಜನನಿ ದಕ್ಷನ |
ವರ ಕುಮಾರಿಯೆ ದುರಿತನಾಶಿನಿ |
ಪರಮಮಂಗಳ ಮೂರ್ತಿ ಶುಭದಾಯಕಿಯೆ ಶರ್ವಾಣಿ ||
ದುರುಳ ಶುಂಭನಿಶುಂಭ ಮರ್ದಿನಿ |
ಹರನ ಮೋಹದ ರಾಣಿ ಮಾಹೇ |
ಶ್ವರಿಯೆ ನಡೆಸೀಕತಿಯ ಕರುಣದಿ ದುರ್ಗೆ ವಾರಾಹಿ ||5||

ರಾಗ ಸುರುಟಿ ಏಕತಾಳ

ಪಾಲಿಸು ಗೀರ್ವಾಣಿ | ಕೀರ್ತಿವಿ | ಶಾಲೆ ಪುಸ್ತಕಪಾಣಿ ||
ನೀಲ ಕುಂತಳೆ ಖಳಜಾಲವಿದಾರಿಣಿ | ಲೋಲನಯನೆ ಗುಣಶೀಲೆ ಕಲ್ಯಾಣಿಯೆ ||6||

ಶಾರದೆ ಮಹಾಮಾತೆ | ವೀಣಾ | ಧಾರಿ ಕಮಲನೇತ್ರೆ ||
ನಾರದ ಮುನಿ ಮುಖ್ಯಾವರ ಪೂಜಿತೆ | ಸಾರಸಭವನರ್ಧಾಂಗಿ ಕಪಾನ್ವಿತೆ ||7||

ವರ ಶಂಗಾಪುರದಿ | ನಂಬಿದ | ಶರಣರ ಸಂತಸದಿ ||
ಪೊರೆಯುತ ನೆಲಸಿಹ ಭಾರತಿ ಎನ್ನನು | ಕರುಣದಿ ರಕ್ಷಿಸು ಚರಣಕೆ ನಮಿಸುವೆ ||8||

ದ್ವಿಪದಿ

ತರಣಿ ಶಶಿ ಕುಜ ಬಹಸ್ಪತಿ ಬುಧಗೆ ನಮಿಸಿ ||
ಪರಮ ಹಿತ ಶನಿ ರಾಹುಕೇತುಗಳ ಸ್ಮರಿಸಿ ||9||

ಮುನಿ ಕಶ್ಶ್ಯಪಾತ್ರಿ ಭರದ್ವಾಜ ಕೌಶಿಕರ ||
ನೆನೆವೆ ಜಮದಗ್ನಿ ಗೌತಮ ವಸಿಷ್ಠರನು ||10||

ಸುರಪ ಶಿಖಿಯನ್ನು ನಿಯತಿ ವರುಣಾಗ್ನಿ ಸಖರ ||
ಸ್ಮರಿಸುವೆನು ಕಾಲನೀಶಾನ್ಯದಾಧಿಪತ ||11||

ಪರಮ ವೇದವ್ಯಾಸ ಪಿತಮಾತಗಳಿಗೆ ||
ಎರಗುತೀ ಕತಿಗೈವೆನರಿತ ತೆರನೊಳಗೆ ||12||

ವರ ಮಹಾಭಾರತದ ಪೌರಾಣದೊಳಗೆ |
ಸುರನದೀಸುತ ಭೀಷ್ಮನತಿ ಶೌರ್ಯದೊಳಗೆ ||13||

ಕಾಶಿದೇಶದಿ ನಪರ ಗೆಲ್ದ ಕಥನವನು ||
ತೋಷದಿಂದೆಕ್ಷಗಾನದಿ ಪೇಳ್ವೆನಿದನು ||14||

ಯತಿಗಣಪ್ರಾಸ ವಿಷಮಾಕ್ಷರಗಳರಿಯೆ ||
ಪಿತ ಸುತರ ಪೊರೆವಂತೆ ಸಲಹೊ ನರಹರಿಯೆ ||15||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅರಸ ಜನಮೇಜಯನು ವೈಶಂ | ಪಾಯ ಮುನಿಪನ | ಚರಣಕೆರಗುತ |
ಸುರನದೀಸುತ ಭೀಷ್ಮಕಾಶೀ | ಅರಸನೆಡೆಗೆ ||16||

ತೆರಳಿ ಸಕಲ ನಪಾಲರನು ಸಂ | ಗರದಿ ಸೋಲಿಸಿ ತತ್ಕುಮಾರಿಕೆ |
ಯರನು ತಂದನುಜನಿಗೆ ವಿರಚಿಸಿ | ಪರಿಣಯವನು ||17||

ಪರಮ ದುಶ್ಚಾರಿತ್ರೆಯಂಬೆಯ | ವರಿಸದಿರೆ ದುರ್ಬೋಧೆಯಿಂದಲಿ |
ಧುರಕೆ ಬಂದಿಹ ಪರಶುಧಾರಿಯ | ಗರುವ ಮುರಿದು ||18||

ಧರೆಯೊಳಗೆ ಸತ್ಕೀರ್ತಿ ಪಡೆದಿಹ | ಚರಿತೆ ಎಲ್ಲವ ಸಾಂಗದಿಂದಲಿ |
ಕರುಣದಿಂದಲೆ ಪೇಳಬೇಕೆಂ | ದೆರಗಲಾಗ ||19||

ಧರಣಿಪನ ತಕ್ಕೈಸಿ ಮುನಿಪನು | ಸುರನದಿಯ ಸುಕುಮಾರ ವಿಜಯವ |
ನರುಹುವೆನು ಕೇಳೆನುತಲೆಂದ ವಿ | ಸ್ತರಿಸುತವಗೆ ||20||

ವಾರ್ಧಕ

ಅರಸ ಕೇಳ್ಕಮಲಜಗೆ ಮಾನಸದೊಳತ್ರಿಮುನಿ |
ವರರಿಂದ ಸೋಮನುಧ್ಭವಿಸತಲೀತಗೆ ಬುಧನು |
ತರಳನಿವಗೆ ಪುರೂರವಾಖ್ಯನಾತ್ಮಜ ನಹುಷನುದಿಸಲವಗೆ ಯಯಾತಿಯು |
ತರಳ ಪೂರುವಿಗೆ ದುಷ್ಯಂತ ಸಂಜನಿಸಲಾ |
ಭರತನಿವನಾತ್ಮಜಗೆ ಸಂವರುಣನೆಂಬ ಸುತ |
ಕುರು ನಪನ ಪಡೆಯಲ್ಕೆ ಸಂಜನಿಸಿದಯಿವಗೆ ಧರಣಿಪಾತ್ಮಜ ಹಸ್ತಿಯು ||21||

ಭಾಮಿನಿ

ಧರಣಿಪತಿ ಹಸ್ತಿಯೊಳು ಪ್ರತಿಶ್ರವ |
ನಿರಲವನ ಸಂಭವ ಪ್ರದೀಪನು |
ಪರಮ ವಿಕ್ರಮಿ ಶಂತ ನಪನನು ಪಡೆಯೆ ಸಂತಸದಿ ||
ಸುರನದಿಯೊಳಾ ಶಂತಭೂಪಗೆ |
ಧುರ ಪರಾಕ್ರಮಿ ಭೀಷ್ಮ ಜನಿಸಿರೆ |
ಎರಡನೆಯ ಸತಿಯಾದ ಯೋಜನಗಂಧಿಯೊಳಗಿವಗೆ ||22||

ಧುರ ವಿಜಯ ಚಿತ್ರಾಂಗನೆರಡನೆ |
ತರಳನಾದ ವಿಚಿತ್ರವೀರ್ಯಕ |
ರಿರಲು ಗಂಧರ್ವನಲಿ ಮಡಿದನು ವೀರ ಚಿತ್ರಾಂಗ ||
ಸುರನದೀಸುತನರಿತು ತನ್ನೊಳು |
ಕುರು ಪರಂಪರೆಯಾಳ್ದ ಹಸ್ತಿನ |
ಪುರದ ಪಟ್ಟ ವಿಚಿತ್ರವೀರ್ಯಕಗಿತ್ತು ವಿಭವದಲಿ ||23||

ರಾಗ ಕೇದಾರಗೌಳ ಅಷ್ಟತಾಳ

ಹರುಷದಿ ಭೀಷ್ಮ ವಿಚಿತ್ರವೀರ್ಯನ ಕರಸಿ |
ಹರಿತಂದೋಲಗ ವೀಯುತ ||
ಮೆರೆದಿರೆ ಮಂತ್ರಿ ಸುನೀತಿ ಸಾಮಂತರು |
ಕರವ ಜೋಡಿಸಿ ನಿಂದಿರೆ ||24||

ಎಡ ಬಲ ನೋಡುತ್ತ ಕಲರ ಯೋಗ್ಯತೆ |
ವಿಡಿದು ಕುಳ್ಳಿರಿಸುತ್ತಲಿ ||
ಕಡು ಪ್ರೇಮದೊಳು ಭೀಷ್ಮನನುಜನ ಬಿಗಿದಪ್ಪಿ |
ಸಡಗರದೊಳಗೆಂದನು ||25||

ಕುರು ಪರಂಪರೆಯಾಳ್ದು ಹಸ್ತಿನಾವತಿ ಎಂಬೀ |
ಧರೆಯಾಧಿಪತ್ಯವನ್ನು ||
ಕರುಣದಿ ಪಟ್ಟವನೆಸಗಿಹೆ ನಿನಗಾನು |
ವರ ಚಕ್ರವರ್ತಿಯೈಸೆ ||26||

ತರುಣ ಕೇಳ್ನಮ್ಮ ಪೂರ್ವಿಕನಾದ ದುಷ್ಯಂತ |
ಭರತ ಸಂವರಣ ಮತ್ತೆ ||
ಕುರುರಾಜ ಶಂತನು ಎಂಬರೀ ಧಾತ್ರಿಯೊಳ್ |
ವರ ಚಕ್ರವರ್ತಿಯಾಗಿ ||27||

ಸುರನರೋರಗರೆಲ್ಲ ಮೆಚ್ಚುವಂದದಿ ಪೂರ್ಣ |
ಧರಣೀ ಮಂಡಲವನಾಳಿ ||
ಸರಿಯುಂಟೆಯಿವರಿಗೆಂದೆಂಬ ಖ್ಯಾತಿಯ ಸರ್ವ |
ರರಿತಿಹರೈ ಜಗದಿ ||28||

ಬರೆದಿರಿಸಿದ ಪುರಾತನದ ಲೇಖನದಿಂದ |
ನರರಿಗಸಾಧ್ಯ ಕಾರ್ಯ ||
ವಿರಚಿಸೀರ್ಪರು ಎಂಬ ಪರಿಯ ನೀನರಿತಿಹೆ |
ಪೊರೆಯುವದೇತಕಿನ್ನು ||29||

ಅಂಥಾ ಮಹಾತ್ಮರ ರಾಜಾಧಿಕಾರಕೆ |
ನಿಂತಿಹೆ ನೀನು ಕೇಳು ||
ಪಿಂತೆ ಸಂದವರಂತಾಚರಿಸದಿರಲು ಕೀರ್ತಿ |
ಎಂತು ಸಂಪಾದಿಸುವೆನು ||30||

ರಾಗ ಮಧುಮಾಧವಿ ತ್ರಿವುಡೆತಾಳ

ಆದಿಧರ್ಮವ ಕೇಳು ಸಹಜನೆ | ಮೇದಿನಪ ವರ್ಣಾಶ್ರಮಂಗಳ ||
ಬಾಧೆಯಿಲ್ಲದ ತೆರದಿ ರಕ್ಷಿಸಿ | ಸಾಧಿಪುದು ಯಶಲೋಕದಿ ||31||

ದುಷ್ಟನಿಗ್ರಹ ಶಿಷ್ಟಪಾಲನ | ಕೆಟ್ಟ ಸ್ತ್ರೀ ದ್ಯೂತಾದಿ ಮದ್ಯವ ||
ದಷ್ಟಿಸದೊಲತಿ ಬೇಟೆಯೋಳ್ಮನ | ಗೊಟ್ಟಿರದೆ ನೀ ಸಂತತ ||32||

ತರುಣ ಕೇಳ್ ಸಜ್ಜನರ ಶಾಪವ | ಧರಿಸಬಾರದು ದುಷ್ಟ ಮೈತ್ರಿಯ ||
ನಿರಿಸಬೇಡತಿ ಕಾಮದಿಂ ಪರ | ತರುಣಿಯರ ಮನಮಾಡದೆ ||33||

ತನ್ನ ರಾಷ್ಟ್ರದೊಳುಳ್ಳ ಪ್ರಜೆಗಳಿ | ಗುನ್ನತೋತ್ಸಹಿಯೆನುತ ದ್ರವ್ಯಗ ||
ಳನ್ನು ಷಷ್ಟಾಂಶಕ್ಕೆ ಮೀರದೆ | ಮುನ್ನ ಕೊಳ್ಳುತ ಪಾಲಿಸು ||34||

ಶರಣು ಹೊಕ್ಕರ ಕೋಪದಿಂ ಸಂ | ಹರಿಸದಿರು ಬಲು ಲೋಭದಿಂದಲಿ ||
ಧರಣಿಯಮರರಿಗಿತ್ತುದನ್ನು ಸ್ವೀ | ಕರಿಸಬಾರದು ಸಹಜವೈ ||35||

ಬರಿದೆ ಮೋಹದೊಳುಂ ಕರಂಗದೊ | ಳಿರುವ ಪರಮಾತ್ಮನನು ತಿಳಿಯದೆ ||
ಮರೆಯದಿರು ಮುದದಿಂದ ಮಿತ್ರಾ | ದ್ಯರುಪಕತಿ ಗೈದಿರ್ಪರ ||36||

ವಾರ್ಧಕ

ಪರಿಪರಿಯ ನೀತಿಯನ್ನರುಹಿ ಗಂಗಾತ್ಮಜಂ |
ಚರರುಗಳ ಕರೆದನ್ಯ ದೇಶವತ್ತಾಂತಮಂ |
ಪರರರಿಯದಂತೆ ತಿಳಿದಡಿಗಡಿಗೆ ಬೆಸಸಿರೆಂದರುಹಿ ಮಜ್ಜನಕೈದಲು ||
ತೆರಳಲಾ ಸಭಿಕರೆಲ್ಲರು ತಮ್ಮ ಬಿಡದಿಗಂ |
ಮರುದಿವಸದುದಯದೊಳಗಿತ್ತು ಕಾಶೀ ದೇಶ |
ಧರಣಿಪ ಪ್ರತಾಪಸೇನನು ಮಂತ್ರಿ ಸುಮತಿಯಂ ಕರೆದೆಂದನೋಲಗದೊಳು ||37||

ರಾಗ ಪುನ್ನಾಗ ಅಷ್ಟತಾಳ

ಲಾಲಿಸೊ ಮಂತ್ರಿನಾ ಪೇಳುವ ನುಡಿಯ |
ಜಾಲ ಮಾತುಗಳಲ್ಲ ಬಂದಿಹ ವ್ಯಥೆಯ || ಪಲ್ಲವಿ ||

ತರಳಿಯಂಬಿಕೆ ಅಂಬೆ ಅಂಬಾಲಿಕೆಯರು |
ಪರಿಣಯ ಕಾಲ ಬಂದೊದಗಿ ಶೋಭಿಪರು ||
ಕರೆಸಿ ಭೂಪರನೆಲ್ಲ ನೋಡಿ ಬಾಲೆಯರು |
ವರಿಸಲಿ ತಮ್ಮಿಷ್ಟ ಬಂದವನಿಪರು ||38||

ಬರೆಸು ಲೇಖನಗಳ ಸಕಲ ರಾಜರಿಗೆ ||
ಕರಿಪುರದಲಿ ಭೀಷ್ಮಗರಿಯದ ಹಾಗೆ ||
ಧುರದೊಳೆಲ್ಲವರನ್ನು ಗೆಲಿದ ಭೂಮಿಪಗೆ |
ತರಳೆಯರ್ಮೂವರ ಕೊಡುವೆ ನೀ ಬಗೆಗೆ ||39||

ಕುರುಜು ಮೇರ್ವೆಗಳಿಂದ ಪುರವಲಂಕರಿಸು |
ನೆರಹು ಸಂಭಾರಗಳ್‌ವಿಬುಧರ ಕರೆಸು ||
ಭರದಿ ನಾಟಕ ಗಾಯಕಾದಿಗಳ್ಬರಿಸು |
ಧರಣಿಪಾಲಕರಿಂಗೆ ದಿನವನ್ನು ತಿಳಿಸು ||40||

ಬರುವ ಚೈತ್ರದ ಶುಕ್ಲ ಪಂಚಮಿ ದಿನದ |
ತರಳೆಯರಾ ಸ್ವಯಂವರವೆಂದು ಮುದದಿ ||
ಪುರದಿ ಡಂಗುರಹೊಯಿಸು ನಪರಿಂಗೆ ಬಿಡದಿ |
ವಿರಚಿಸು ತೋರಣಾಲಂಕತ ಪುರದಿ ||41||

ಭಾಮಿನಿ

ಧರಣಿಪನ ನೇಮದೊಳು ಸಚಿವನು |
ಬರೆಸಿ ಕಳುಹಿದ ಸಕಲ ನಪರಿಗೆ |
ಪುರವ ಶಂಗರಗೈಸಿ ಸಂಭಾರಗಳ ನೆರಹಿದನು ||
ಚರರು ಪತ್ರವಗೊಂಡು ತವಕದಿ |
ಧರಣಿಪರ ಬಳಿಗೆಲ್ಲ ಗಮಿಸಲು |
ತ್ವರಿತದೊಳು ಬಂದೋರ್ವ ಕಾಳಿಂಗೇಶಗಿಂತೆಂದ ||42||

ರಾಗ ಸಾರಂಗ ಅಷ್ಟತಾಳ

ಕೇಳ್ ಧಢಸೇನರಾಯ | ಕಾಶೀಶನು | ಪೇಳಿದಾ ಬಗೆಯ ಜೀಯ ||
ಭೂಲಲಾಮರನೆಲ್ಲ ಕರೆಸಿ ಸಭೆಯಗೈದು |
ನಾಳೆ ಬರುವ ಚೈತ್ರದಿ | ಪಂಚಮಿ ದಿನದಿ ||43||

ಧರಣಿಪಾಲಕರೊಳಗೆ | ಸರ್ವರ ಗೆದ್ದ | ಧುರ ಧೀರ ವಿಕ್ರಮಿಗೆ ||
ತರಳೆಯರಂಬೆಯಂಬಿಕೆಯಂಬಾಲಿಕೆಯರ |
ಹರುಷದಿ ಕೊಡುವೆನೆಂದು | ಮಾಡಿಹನಿಂದು ||44||

ತ್ವರಿತದಿ ಬಿಜಯ ಮಾಡು | ನಿನಗೆ ತಕ್ಕ | ತರುಣಿಯರವರು ನೋಡು ||
ಪರಬ್ರಹ್ಮಲಿಖಿತವಿದ್ದರೆ ತಪ್ಪಲರಿಯದು |
ತೆರಳುವೆ ನಾನೆಂದನು | ಚಾರಕ ತಾನು ||45||

ರಾಗ ಕೇದಾರಗೌಳ ಝಂಪೆತಾಳ

ಚರನೆಂದ ನುಡಿಯ ಕೇಳಿ | ಕಾಳಿಂಗ | ನುರುತರಾನಂದ ತಾಳಿ ||
ಬರುವನೀಕ್ಷಣವೆನ್ನುತ | ಬಂದವಗೆ | ಪರಿಪರಿಯೊಳುಪಚರಿಸುತ ||46||

ಒಡನೆ ರಥವನ್ನೇರುತ | ಚಾರಕನ | ಸಡಗರದಿ ಬೀಳುಗೊಡುತ ||
ದಢ ಸೇನ ಪೊರಡಲಾಗ | ಮಾದ್ರೇಶ | ನೆಡೆಗೆ ಚರನೈದಿ ಬೇಗ ||47||

ವಾರಣಾವತಿ ಯರಸನು | ಕಳುಹಿರ್ಪ | ಚಾರನೆಂದೆರಗುತವನು ||
ಧಾರಣೀಶಗೆ ಪತ್ರವ | ಕೊಡಲು ಮುದ | ವೇರಿಯೋದಿದನರ್ಥವ ||48||

ರಾಗ ಕೇದಾರಗೌಳ ಅಷ್ಟತಾಳ

ಸ್ವಸ್ತಿ ಮಾದ್ರೇಶ ಸುಕೇತುರಾಯಗೆ ನಿಮ್ಮ | ಮಿತ್ರ ಕಾಶೀಪತಿಯು ||
ಚಿತ್ತಶುದ್ಧದೊಳೆರಗುವೆ ನಾವು ಕುಶಲಿಗ | ಳತ್ತ ನೀವ್ ಕ್ಷೇಮಿಗಳೆ ||49||

ಬರುವ ಚೈತ್ರದ ಶುಕ್ಲ ಪಂಚಮಿ ದಿನದೊಳು | ಧರಣಿಪಾಲರ ನೆರಹಿ ||
ಧುರದೊಳು ಸಕಲರ ಗೆಲಿದವರ್ಗೆನ್ನಯ | ತರಳೆಯರನು ಕೊಡುವೆ ||50||

ಪರಮ ಸ್ವಾಮಿಯು ಬಿಜಯವ ಮಾಡಿ ಸತ್ವವ | ನೆರೆದ ಭೂಪಾಲರೊಳು ||
ಮೆರಸಿ ಕುಮಾರಿಯರೊಲಿಸಿರೆಂದೆನುತೀಗ | ಅರಿಕೆಯ ಗೈದಿಹೆನು ||51||

ಎಂದೀ ಪರಿಯೊಳಿರ್ಪಪತ್ರವನೋದುತ್ತಾ | ನಂದದಿ ಮಾದ್ರೇಶ್ವರ ||
ಅಂದವಾಯಿತು ಬಹೆನೆನ್ನುತ ಪೊರಮಟ್ಟ | ಸ್ಯಂದನವೇರುತಾಗ ||52||

ಗಾಂಧಾರಪತಿಗೆ ದೂತರುವಾಲೆ ಕೊಡಲದ | ಚಂದದಿಂದರಿತುಕೊಂಡು ||
ಮಂದಿ ಮಾರ್ಬಲ ಕೂಡಿ ಸಿಂಗಾರದಿಂದಲಿ | ಬಂದ ಕಾಶೀಪುರಕೆ ||53||

ಮತ್ತೆ ಸೌರಾಷ್ಟ್ರ ಕೊಂಕಣ ಮತ್ಸ್ಯ ಮಗದಾಧಿ | ಪಥ್ವೀಶರಿಗೆ ದೂತರು ||
ಯಿತ್ತು ಲೇಖನಗಳ ಕರೆತರೆ ಕಾಶೀಶ | ನರ್ತಿಯಿಂದಿದಿರುಗೊಂಡು ||54||

ಕುಶಲವೆ ಸಕಲ ರಾಯರೆ ನಿಮ್ಮ ಪುರದಲ್ಲಿ | ಪಶು ಗಜ ಪ್ರಜೆಗಳಿಗೆ |
ಶಶಿಮುಖಿಯರ ನಿಮ್ಮ ಶೌರ್ಯದಿಂದೊಲಿಸಿರೆಂ | ದುಸುರುತ್ತ ಜನಪಾಲನು ||55||

ಸಾಂಗತ್ಯ ರೂಪಕ ತಾಳ

ಧೊರೆ ಕುಮಾರಕರೆಲ್ಲ ವಿಶ್ರಾಂತಿಗೊಳಿರೆಂದು |
ಅರುಹುತ್ತ ಕಾಶೀಂದ್ರನವರ ||
ಹರುಷದಿಂದುಪಚರಿಸುತಿರಲತ್ತಲು |
ಅರಿತಿದರಂ ಸಾಲ್ವಚರನು ||56||

ಖಳರಾಯ ಸಾಲ್ವನೋಲಗದೊಳಗಿರೆ ಬಂದು |
ಇಳೆಗೆ ಬಾಗುತ ನಿಂದು ಪೇಳ್ದ |
ಹಲವು ದೇಶವ ಸುತ್ತಿ ಪೋಗಲು ಕಾಶೀಶ |
ನಿಳಯದಿ ನಡೆದುದು ಕೇಳೈ ||57||

ದೊರೆಯಾ ಪ್ರತಾಪಸೇನಾಖ್ಯನೆಂಬವನಿಂಗೆ ||
ಪರಮ ರೂಪದ ಸುಂದರಿಯರು ||
ತರಳೆಯರಿಹರಂಬಾಲಿಕೆಯೆಂಬೆ ಅಂಬಿಕೆ |
ಯರು ಮೂರು ಮಂದಿ ಬಾಲೆಯರು ||58||

ಧುರದೊಳು ಕೆಲ ರಾಜರ ಗೆದ್ದ ನಪನಿಗೆ |
ಪರಿಣಯಗೈದೀವೆನೆನುತ ||
ಕರೆಸಿರ್ಪ ಛಪ್ಪನ್ನದೇಶದ ಭೂಪರ |
ಬರೆಸಿ ಪತ್ರ ತೋಷದಿಂದ ||59||

ಸುರನರೋರಗರನ್ನು ಲೆಕ್ಕಿಸದಿಹ ನಿಮ್ಮ |
ಕರೆಸದೆ ಗೈವನೀಕಾರ್ಯ ||
ಪರಮ ಸುಂದರಿಮಣಿಗಳು ನಿಮ್ಮ ಠೀವಿಗೆ |
ಸರಿಯಹರೆಂದು ಕೈಮುಗಿಯೆ ||60||

ರಾಗ ಭೈರವಿ ಅಷ್ಟತಾಳ

ದೂತನೆಂದುದ ಕೇಳುತ | ಸೌಭಾವನೀ | ನಾಥನು ಗರ್ಜಿಸುತ ||
ಪೂತುರೆ ಸಕಲ ರಾಯರ ಕರೆಸುತ ಕಾಶೀ |
ನಾಥನು ಮರೆತನೆನ್ನ ||61||

ಎಲ್ಲ ಭೂಪರ ತೆರದಿ | ಶೌರ್ಯಳು ನಾ | ನಲ್ಲವೆನ್ನುತ ಗರ್ವದಿ ||
ಖುಲ್ಲವನು ಪತ್ರವ ಬರೆಸದಿರ್ದುದಕೀಗ |
ಪಲ್ಲ ಕೀಳುವೆ ಧುರದಿ ||62||

ಎನುತಲಾ ಖಳರಾಯನು | ಪಲ್ಕಡಿಯುತ ಕಿನಿಸಿಂದ ಖಡುಗವನು ||
ಧನುಶರ ಮುಂತಾದಾಯುಧಗಳ ಕೈಗೊಂಡು |
ಘನವೇಗ ನಡೆದನತ್ತ ||63||

ಭಾಮಿನಿ

ಧರಣಿಪತಿ ಕೇಳಿತ್ತ ಕಾಶೀ |
ಪುರದಿ ನಪಸುತೆ ಅಂಬೆಯೊಂದಿನ ||
ಪರಿವಿಡಿದು ಬಳಸಿರುವ ಸಖಿಯರ ನೋಡಿ ಸಂತಸದಿ ||
ಉರಗವೇಣಿಯರೆಲ್ಲ ಕೇಳಿರೆ |
ಸುರನದಿಯೊಳೀದಿನದೊಳೆರಕದಿ |
ಸರಸದಿಂ ಜಲಕೇಳಿಯಾಡುವಯೇಳಿರೆಂದನಲು ||64||

ಕಂದ

ಧರಣಿಪನಾತ್ಮಜೆ ನುಡಿಗಂ |
ಪರಮಾನಂದದಿ ಸಖಿಜನ ಪೊರಮಟ್ಟಾಗಲ್ ||
ಸುರನದಿ ತಡಿಯಂ ಸಾರುತ |
ಸರಸಿಜಮುಖಿಯರು ಜಲದೊಳಗಿಳಿಯುತ ಮುದದಿಂ ||65||

ರಾಗ ಪಂತುವರಾಳಿ ಆದಿತಾಳ

ಆಡಿದರ್ಸುದತಿಯರು | ಗಂಗೆಯೊಳ್ಜಲ |
ಕ್ರೀಡೆಯ ಸುಮುಖಿಯರು || ಪಲ್ಲವಿ ||

ಮುಳುಗುತ್ತೋರ್ವರ ಪಾದವ | ನ್ನೋರ್ವರು ಪಿಡಿ |
ದೆಳೆದು ಬೊಗಸೆ ಜಲವ ||
ಘಳಿಲದಿಂದೋರ್ವರಿಗೋರ್ವರೆರಚಿಕೊಂಡು |
ಚಲುವೆಯರಾಡಿದರು | ಮೇಲಕೆ ಎದ್ದು |
ಪುಳಿನಾದಿ ಮಡಿಯುಟ್ಟರು ||66||

ಸಾಂಗತ್ಯ ರೂಪಕತಾಳ

ಸುತಿಯರೆಲ್ಲರು ಮಿಂದು ಮಡಿಯನುಟ್ಟು |
ಮುದದಿ ಗಂಗೆಯ ತಡಿಯೊಳಗೆ ||
ವಿಧವಿಧ ಪುಷ್ಪಫಲಂಗಳ ಕೊಯ್ಯುತ |
ಲಧಿಕ ಸುಪ್ರೀತಿಯೊಳಿರಲು ||67||

ಅನಿತರೊಳಗೆ ಸಾಲ್ವ ಬಂದನಾ ಎಡೆಗಾಗಿ |
ವನದೊಳಗಿಹರನ್ನು ಕಂಡು ||
ವನಿತೆಯರ‌್ಯಾರೆಂಬುದರಿಯಬೇಕೆನುತಲಿ |
ದನುಜನು ಮರೆಯೊಳಗಿರಲು ||68||

ದೊರೆಕುಮಾರಿಯ ಕಾಣುತ್ತೋರ್ವಳೆಂದಳು ತಾಯೆ |
ಪರಿಕಿಸು ವರಚೂತ ದ್ರುಮವ ||
ಪರಮ ಕೋಮಲ ಮಲ್ಲಿಕಾಲತೆ ಹಬ್ಬಿರೆ |
ಮೆರೆವುದು ಜಗವೇನ ಪೇಳ್ವೆ ||69||

ಮತ್ತೋರ್ವ ಚದುರೆಯು ಪೇಳ್ದಳೆನಗೆ ಮಿತ್ರೆ |
ಪೃಥ್ವಿಪ ಚೂತ ದ್ರುಮಕ್ಕೆ ||
ಪುತ್ರಿಯರೆಂಬ ಮಲ್ಲಿಕಾಲತೆಯಿಡಲು ಸ |
ಮಸ್ತರ ನಪ ಕರೆಸಿಹನು ||70||

ಎಂದಮಾತಿಗೆ ನಪನಂದನೆ ನಾಚುತ್ತ |
ಲೆಂದಳು ಬಡಿವಾರ ಸಾಕೆ ||
ಎಂದೂ ಇಲ್ಲದ ಸರಸೋಕ್ತಿಯನುಡಿವಿರಿ |
ಮುಂದೇನಪ್ಪದೊ ಬಲ್ಲರ‌್ಯಾರು ||71||

ಚೆಲ್ಲೆವು ಸುಂದರ ಪುರುಷನ ಕೂಡಿ ನ |
ಮ್ಮೆಲ್ಲರ ಮರೆಯುವ ನೀನು ||
ಚಲ್ವೆ ನೀ ರಾಜಪುತ್ರಿಯು ನಾವು ಬಡವರು |
ಸುಳ್ಳಲ್ಲ ನೋಡಿಕೊ ಮನದಿ ||72||

ಭಾಮಿನಿ

ಇನಿತು ಬಹುಪರಿ ಮಾತನಾಡುತ |
ವನಿತೆಯರು ನಗುತಿರುವ ಕಾಲದಿ |
ಜನಪನಾತ್ಮಜೆಯೆಂದು ನಿಶ್ಚೈಸುತ್ತ ಖಳಪತಿಯು ||
ವನಜ ಮುಖಿಯರನೊರಿಸೆ ಬಂದಿ |
ರ್ಪೆನಗೆ ವಧು ದರ್ಶನವು ಮಂಗಲ |
ವೆನುತ ಮಾತಾಡಿಸುವೆನೀಕೆಯ ಮಧುರ ವಚನದಲಿ ||73||