ರಾಗ ಕೇದಾರಗೌಳ ಅಷ್ಟತಾಳ
ಪರಮ ಸುಂದರಿ ಪೇಳ್ನೀನ್ಯಾರೆ ನಿನ್ನನು ಪೆತ್ತ ಧೊರೆ | ಯಾರು ಪೇಳು ಪೇಳೆ |
ವರಿಸೀಗ ಸೌಭದೇಶದ ಧೊರೆಯಾದೆನ್ನ | ಕರೆವರು ಸಾಲ್ವನೆಂದು ||74||
ಸುರನರೋರಗಿಂಗಿಂತಧಿಕನಾ ಶೌರ್ಯದಿ | ಧರಣಿ ಪಾಲಕನಾಗಿಹೆ ||
ಕರುಣದಿ ಒಲಿಸೆನ್ನ ಸ್ಮರಕೇಳಿಯಲಿ ನಿನ್ನ | ಹರುಷಗೊಳಿಪೆ ಸುಂದರಿ ||75||
ಧರಣಿಪಾತ್ಮಜೆ ಧನುಜೇಂದ್ರನ ಕಾಣುತ್ತ | ಸ್ಮರಹತಿಯೊಳು ಬಳಲಿ ||
ಶಿರವ ಬಗ್ಗಿಸಿ ಕಾಶೀಪತಿ ಕುವರಿ ಎನ್ನ | ಕರೆವರು ಅಂಬೆಯೆಂದು ||76||
ಪರಮ ವಿಕ್ರಮದೊಳು ಸಕಲರ ಗೆಲಿದರ್ಗೆ | ಕರೆದೀವೆನೆಂದೆನುತ ||
ಧರಣಿಪಾಲಕರನ್ನು ಬರಿಸಿಹ ಮತ್ಪಿತ | ಕರುಣದಿ ಲಾಲಿಸೈಯ್ಯ ||77||
ಧರಣೀಶರು ಬಂದರೊಳಿತಾಯ್ತು | ಮನವೀಗ ಸೂರೆಯಾಗಿದೆ ನಿನ್ನೊಳು ||
ನಾರಿ ಸ್ವಯಂವರಕ್ಕೊಪ್ಪದೆನ್ನನು ಕೂಡಿ | ಭೂರಿ ತೋಷವಗೊಳಿಸು ||78||
ಕೇಳಯ್ಯ ಸಾಲ್ವ ರಾಜೇಂದ್ರನೆನ್ನಯ ಪಿತ | ನಾಳೆ ಎನ್ನನುಜೆಯರ ||
ಭೂಲಲಾಮರಿಗ್ಯಾರಿಗಿತ್ತರೀಯಲಿ ನಾ ನಿ | ನ್ನೋಲೈಸಿ ವರಿಸುವೆನು ||79||
ಭಾಮಿನಿ
ಧರಣಿಪತಿ ಕೇಳಂಬೆ ಸಾಲ್ವಗೆ |
ಭರವಸವನಿತ್ತಾಗ ಸಖಿಯರ |
ವೆರಸಿ ತೆರಳಲು ಗಹಕೆ ಖಳಪತಿಯಾಗ ತೋಷದಲಿ ||
ತ್ವರಿತದೊಳು ಕಾಶೀಶನಲ್ಲಿಗೆ |
ಹರಿತರಲು ಕಂಡಾಗ ಭಯದಲಿ |
ಧರಣಿಪಾಲ ಪ್ರತಾಪಸೇನನು ನಡುಗುತಿದ್ದಾಗ ||80||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಪರಮ ದೈನ್ಯದೊಳಿದಿರುಗೊಳ್ಳುತ |
ಕರೆದುತಂದಾಸನವ ನಿತ್ತುಪ |
ಚರಿಸಿ ಕುಶಲವೆ ಎನಲು ದೈತ್ಯನು | ಒರೆದನಾಗ ||81||
ಧರಣಿಪತಿ ಕೇಳೆಮಗೆ ಕುಶಲವು |
ಪುರವ ಶಂಗರಿಸೀರ್ಪುದೇಕೈ |
ದೊರೆಕುಮಾರಕರೆಲ್ಲ ಬಂದಿಹ | ಪರಿಯದೇನೈ ||82||
ದನುಜಪತಿ ಕೇಳ್ಸಕಲ ಭೂಮಿಪ |
ರನು ಧುರದಿ ಗೆಲಿದವರಿಗೆನ್ನಯ |
ತನುಜೆಯರನೀಯುವೆನೆನುತ್ತಲಿ | ಪಣವಗೈದು ||83||
ಪೊಡವಿಪರ ಕರೆಸಿರ್ಪೆನಾಗಲೆ |
ಕಡು ಬಲಾಢ್ಯರ ಸಮರಮುಖದಲಿ |
ದಢಗೆಡಿಪುದೆಂದೆನಲು ಪೇಳಿದ | ಕಿಡಿಯುಗುಳುತ ||84||
ಅರರೆ ಸಕಲ ನಪಾಲವರ್ಗದಿ |
ಮರವೆಯಾದೆಯ ಎನಗೆ ಪತ್ರವ |
ಬರೆಸದಿಹ ಕಾರಣಗಳೇನಿದು | ಅರುಹು ನಿಜವ ||85||
ರಾಗ ಕಾಪಿ ಅಷ್ಟತಾಳ
ಖಳರಾಯನೆಂದುದ ಕೇಳಿ | ನಪ | ಕಳವಳಿಸುತ ಭೀತಿ ತಾಳಿ ||
ಕಳುಹಿರ್ಪೆ ಚರರ ನಿನ್ನೆಡೆಗೆ ಈ ದಿನದೊಳು |
ಗಳಿಗೆಯೊಂದಾಯಿತು ಸಟೆಯಲ್ಲ ಸೈರಿಸು ||86||
ಎನೆ ಕೇಳಿ ಸಹಜವೆಂದೆನುತ | ಖಳ | ಘನ ತೋಷದಿಂದ ಮನ್ನಿಸುತ ||
ಜನಪರ ಕೈಚಳಕವಕಾಂಬೆ ನಾಳೆಗೆ |
ನಿನಗತಿ ಪ್ರೇಮವಗೊಳಿಪೆ ಸಂಗರದಲಿ ||87||
ಕೇಳುತ್ತ ಸಾಲ್ವನ ನುಡಿಯ | ಕಾಶಿ | ಪಾಲ ಮನ್ನಿಸಿ ಶೂರನಯ್ಯ |
ಭೂಲಲಾಮರೊಳೆ ನಗಿದಿರುಂಟೆನ್ನುತಲಿಹ |
ಕಾಲದೊಳಗೆ ರವಿಯಸ್ತಮಿಸಲು ಬೇಗ ||88||
ಪೊಡವಿಪಾಲಕ ಸಾಲ್ವದೊರೆಯ | ಮತ್ತೆ | ಬಿಡದಿಯೊಳಿಹ ನಪತತಿಯ ||
ಒಡನುಪಚರಿಸಿ ಭೋಜನಗೈಸಿ ಶಯನಿಸೆ |
ಜಡಜಬಾಂಧವನುದಿಸಲಿಕೆದ್ದು ತೋಷದಿ ||89||
ನಿತ್ಯಾಹ್ನಿಕವ ಗೈದು ಬೇಗ | ಭೂಮಿ | ಪೋತ್ತಮರೊಡಗೊಳ್ಳುತಾಗ ||
ಅರ್ತಿಯಿಂ ಸಭೆಗೈದು ಪೇಳ್ದ ನಿಮ್ಮಯ ಭುಜ |
ಸತ್ವ ಪರಾಕ್ರಮ ತೋರಿರೆಂದೆನಲಾಗ ||90||
ರಾಗ ಘಂಟಾರವ ಅಷ್ಟತಾಳ
ಧರಣಿಪಾಲನ ನುಡಿಕೇಳಿ ದೃಢಸೇನ |
ಕರದಿ ಧನು ಝೇಂಕರಿಸಿ ಸಾಹಸ | ಧುರ ಪರಾಕ್ರಮರ್ಕೇಳರೈ ||91||
ಶಂಡರಂದದಿ ಕುಳಿತಿಹುದೇತಕೆ |
ಗಂಡುಗಲಿಯಾದವರು ಸಮರ ಪ್ರ | ಚಂಡತನಗಳ ತೋರಿರೈ ||92||
ಎನುತ ರಣಾಂಗಣಕಿಳಿಯೆ ಕಳಿಂಗನು |
ಕಿನಿಸಿನಿಂದ ಸುಕೇತು ರಾಯನು | ಧನುಶರವ ಕೊಂಡೆಂದನು ||93||
ಎಲೆಲೆ ಕ್ಷಾತ್ರಿಯ ಕುಲಜ ನೀನೋರ್ವನೆ |
ಛಲದಿ ಪೇಳಿದ ನಿನ್ನ ಜಿಹ್ವೆಯ | ಘಳಿಲನರಿವೆನು ತಾಳೆಲೊ ||94||
ಹುಚ್ಚ ಭೂಪನೆ ಮುಚ್ಚೆಲೊ ಬಾಯನು |
ಹೆಚ್ಚು ಮಾತುಗಳೇತಕೇನುತ | ಲೆಚ್ಚ ಶರವ ಕಳಿಂಗನು ||95||
ಖತಿಯ ತಾಳುತ ಮಾದ್ರೇಶನಾಕ್ಷಣ |
ಪ್ರತಿಯ ಶರದಿಂ ಬಡಿದು ಪೇಳಿದ | ಪಥಿವಿಪತಿ ದೃಢಸೇನಗೆ ||96||
ರಾಗ ನಾದನಾಮಕ್ರಿಯೆ ಅಷ್ಟತಾಳ
ಎಲೆ ಕಾಳಿಂಗನೆ ಚತುರಾಸ್ಯನು | ಈ | ಲಲನೆಯರ್ಯಾರಿಗೆಂಬುವುದನ್ನು ||
ತಿಳಿದು ಸಷ್ಟಿಯನೆ ಗೈದಿರುವನು | ಬರಿ | ಛಲದಿಂದ ಸಿಕ್ಕಳು ಯಾಕಿನ್ನು ||97||
ಹರಿಹರರೈತರೆ ಕೇಳೇನು | ಈ | ಧರಣಿಪಾತ್ಮಜೆಯರ ಬಿಡೆ ನಾನು ||
ಪರಮೇಷ್ಟಿ ಎನ್ನ ವಿಕ್ರಮವನ್ನು | ನಾರಿ | ಯರಿಗೆಂದೆನುತ್ತ ನಿರ್ಮಿಸಿದನು ||98||
ತರುಣಿಯ ಮೋಹವು ತಲೆಗೇರಿ | ನೀನು ಮರುಳನಾಗಿಹೆ ತೋರುವೆನು ದಾರಿ ||
ಬರಿದೆ ಪೌರುಷಕಾನು ಬೆದರೆನು | ಈ | ಸರಸಿಜಾಕ್ಷಿಯರನು ಬಿಡೆ ನಾನು ||99||
ದುರುಳ ಮಾದ್ರೇಶ ನಿನ್ನನು ಕೊಂದು | ಸುರ | ತರುಣಿಯರ್ಜೊತೆಗೂಡಿಸುವೆನಿಂದು ||
ಸ್ಮರಿಸಬೇಡಾ ಸುದತಿಯರನ್ನು | ಶಿರ | ವರಿಯುವೆ ನೋಡು ಸಾಹಸವನು ||100||
ಭಾಮಿನಿ
ಅರರೆ ದಢಸೇನಾಖ್ಯ ಕೇಳೆಲೊ |
ಧುರದಿ ಮಡಿದರೆ ಸುರರ ಸತಿಯರು |
ದೊರೆಯುವರು ನಾಬಲ್ಲೆ ನಿನ್ನನು ಸೆರೆಯ ಹಿಡಿದೀಗ ||
ಕರೆದು ಕೊಂಡೀಗೆನ್ನ ಪುರದೊಳ |
ಗಿರುವ ದಾಸೀ ಜನರ ಮುದದಲಿ |
ಪರಿಣಯವ ಗೈಸುವೆನು ನೋಡೆನೆ ಕೇಳಿ ಹೂಂಕರಿಸಿ ||101||
ರಾಗ ಶಂಕರಾಭರಣ ಮಟ್ಟೆತಾಳ
ದುರುಳ ಕಳಿಂಗೇಶ ನಿನ್ನ | ಪರಮ ಸಾಹಸ ತೋರೆನುತ್ತ ||
ಗುರಿಯೊಳೊಂದು ಶರವನೆಸೆಯ | ಲರಿತು ಮಾದ್ರನು ||102||
ಕಿಡಿಯ ಸೂಸುತಾ ಕಳಿಂಗ | ಗೊಡನೆ ಸಾಣೆಯಲಗಿನಿಂದ ||
ಧಡಿಗ ಮಾದ್ರಪಾಲ ಮುರಿದ | ತಡೆದು ಧನುವನು ||103||
ಮಲ್ಲ ಯುದ್ಧಕೊದಗಿ ನಿಲಲು | ಹಲ್ಲು ಕಡಿಯುತಾ ಕಳಿಂಗ ||
ಜಳ್ಳು ನಪಗೆ ಭುಜದಿ ತಿವಿದ | ನುಳ್ಳ ಬಲುಹಿಲಿ ||104||
ಭರದಿ ಮಾದ್ರ ನಪನ ಬಿಗಿದು | ಕರವನುಳಿದ ಭೂಮಿಪರನು ||
ಧುರಕೆ ಕರೆಯೆ ಕಂಡು ಕಾಶೀ ಧೊರೆಯು ಪೇಳಿದ ||105||
ಭಾಮಿನಿ
ಧರಣಿಪಾಲ ಕಳಿಂಗ ಭಾಪುರೆ |
ಪರಮ ವಿಕ್ರಮಿಯಹುದು ಸೈರಿಸು |
ತೆರಳಿದುದು ಮಧ್ಯಾಹ್ನ ಸಮಯವು ಭೋಜನವ ಗೈದು ||
ತ್ವರಿತದಿಂ ಬಂದುಳಿದ ನಪರೊಳು |
ಧುರವೆಸಗಬಹುದೆನುತ ಪೇಳಲು |
ತೆರಳಿದರು ತಂತಮ್ಮ ಬಿಡದಿಗೆ ಮಕುಟವರ್ಧನರು ||106||
ಕಂದ
ಕರಿಪುರದರಸನ ಬೇಹಿನ |
ಚರನೀ ಸಂಗರದ ಪರಿಯನರಿಯುತ ಜವದಿಂ ||
ಸುರನದಿ ತನಯನ ಬಳಿಗಂ |
ತೆರಳುತಲೊಂದಿಸಿ ವಿನಯದೊಳರಿದುದನೆಂದಂ ||107||
ರಾಗ ಮುಖಾರಿ ಏಕತಾಳ
ಸುರನದೀಜಾತ ಲಾಲಿಸಯ್ಯ | ನಾ ಪೇಳ್ವ ನುಡಿಯ ||
ಸುರನದೀ ಜಾತ ಲಾಲಿಸಯ್ಯ || ಪಲ್ಲವಿ ||
ಧರಣಿಪಾಲರ ಪಟ್ಟಣದೊಳಗೆ | ಚರಿಸುವ ಗುಪ್ತ |
ಚರರು ನಾವ್ ನಿಮ್ಮಪ್ಪಣೆಮೇರೆಗೆ ||
ಪರಿಪರಿ ದೇಶವ ಸುಳಿಯುತ ತೊಳಲುತ |
ಹರಿತರೆ ಕಾಶೀಪುರವರದೆಡೆಯಲಿ |
ಚರಣದಿ ಸುಳ್ಳು ಸಟೆಗಳನಾಡೆನು |
ಒರೆಯುವದೇನಾ ದೊರೆಯೆ ಕುಶಾಲನು || ಸುರನದೀಜಾತ ||108||
ತರಳೆಯರಿಹರು ಮೂವರವಗೆ | ಮಿರಿಮಿರಿ ಎಂಬ |
ಉರಿವ ಬೆಂಕಿಯ ಬಣ್ಣದಿ ಬೆಳಗೆ ||
ಕರೆವರಂಬೆ ಅಂಬಿಕೆ ಅಂಬಾಲಿಕೆ |
ಧುರದೊಳಗೆಲ್ಲ ನಪಾಲರ ಗೆಲಿದಗೆ |
ಪರಿಣಯ ರಚಿಸುತ ಪತ್ರಗಳ |
ಬರೆಸಿ ಕಾಶೀಶನು ಕರೆಸಿಹ ಭೂಪರ || ಸುರನದೀಜಾತ ||109||
ಧುರದೊಳಗಿಂದು ದೃಢಸೇನನು | ಸೆರೆ ಪಿಡಿದಾ ಮಾದ್ರಾ |
ದರಸನಾಗಿಹ ಸುಕೇತನನು ||
ಪರಮ ವಿಕ್ರಮದೊಳಗೋರ್ವರಿಂದೋರ್ವರು |
ಮೆರೆವರು ಸ್ವಾಮಿಯವರ ಸವಾರಿಯು |
ತೆರಳಿದರನಿಬರ ಸೊಕ್ಕಡಗಿಸುತಲಿ |
ತರಳೆಯರನು ತಾವ್ ತರಬಹುದನುಜಗೆ || ಸುರನದೀಜಾತ ||110||
ರಾಗ ಮಾರವಿ ಏಕತಾಳ
ಚರನಿಂತೆಂದುದ ಕೇಳುತ ಗಂಗಾ | ತರಳನು ಹೂಂಕರಿಸಿ ||
ಅರಿತೆಯೊ ಮಂತ್ರಿ ಸುನೀತಿಯೆ ಚಾರಕ | ನೊರೆದಿಹ ಚರಿತೆಯನು ||101||
ದುಷ್ಟ ಕಾಶೀಶನು ಮಮತೆಯೊಳ್ಬರಿಸಿ ವಿ | ಶಿಷ್ಟ ನಪಾಲಕರ ||
ಶ್ರೇಷ್ಠತೆಯಿಂ ತನುಜೆಯರನು ವರಿಸಲು | ಇಟ್ಟಿರುವನೆ ಪಣವ ||102||
ಶಶಿ ಪರಂಪರೆಯೊಳು ಜನಿಸಿಹ ಹಸ್ತಿನ | ಪುರ ಸಿಂಹಾಸನದಿ ||
ವಸುಧೆಯಾಳ್ಪರತ್ಯುತ್ತಮರೆಂಬರು | ಎಸೆವ ಪರಾಕ್ರಮದಿ ||103||
ಮಾನನಿಧಿಗಳೆಮ್ಮನ್ವಯ ಗುರುತನು | ಜ್ಞಾನವಿಲ್ಲದೆ ಮರೆತು ||
ಹೀನ ಕಾಶೀಶನು ಕ್ಷಾತ್ರ ದುರ್ಮದದೊಳು | ತಾನೇನೆಸಗಿದನು ||104||
ಅರರೆ ಹಿಮಾಚಲ ಸೇತು ಮಧ್ಯದೊಳ | ಗಿರುತಿಹ ರಾಷ್ಟ್ರದೊಳು ||
ಇರುತೆಮ್ಮಾಜ್ಞೆಯು ಚಕ್ರವರ್ತಿತ್ವವು | ಬರಿದಾದುದೆಯಲ್ಲೆ ||105||
ರಾಗ ಕಾಂಭೋಜಿ ಝಂಪೆತಾಳ
ಇಳೆಯೊಳ್ವಿಕ್ರಮಿಗಳೊಳಗಾರೆಂದು ಕಾಶಿಪತಿ | ತಿಳಿದಿರುವನೀಗ ಕಡು ಮೂರ್ಖ ||
ಕಲಿಗಳಾಗಿಹ ಚಕ್ರವರ್ತಿಗಳು ನಾವಿರಲು | ಫಲವಿಲ್ಲದಾಯ್ತೆ ಪಾಮರಗೆ ||106||
ತರಳೆಯರ ವೈವಾಹಕಾ ಭೂಮಿಪಾಲಕರ | ಪರಮ ವಿಕ್ರಮವೆಂಬ ಪಣವ ||
ಮರುಳನೆಸಗಿವನಾದರೊಳ್ಳಿತೈ ಮನದೊಳಿದ | ನರಿತು ಕಾರ್ಯವನು ಗೈದಿಹನೊ ||107||
ಸುರರ ಸಭೆಯೊಳು ಪಿಂದೆ ಮರ್ತ್ಯಲೋಕದೊಳಿರ್ಪ | ದೊರೆ ಕುಮಾರಕ ವರ್ಗದೊಳಗೆ ||
ಪರಮ ವಿಕ್ರಮಿಗಳು ಸೆಣಿಪ ಕಾಲದಿ ಭೀಷ್ಮ | ಸರುವರಿಗು ಶ್ರೇಷ್ಠನೆಂದೆನುತ ||108||
ಮೆರವಷ್ಟ ದಿಕ್ಪಾಲೆನ್ನ ಕೊಂಡಾಡಿದುದ | ನರಿಯದಾದನೆ ಮೂಢನಿದನು ||
ಕುರುವಂಶ ಕೀರ್ತಿ ಕಾಪಾಡೆ ಪುಟ್ಟಿದ ಭೀಷ್ಮ | ನಿರಲು ವ್ಯರ್ಥಗಳಾಯಿತರರೆ ||109||
ಎಲೆ ಸಚಿವ ಸ್ಯಂದನಕೆ ತುರಗಮಂ ಬಂಧಿಸುತ | ನಿಲಿಸೀಗ ನಾ ಕಾಶಿಪುರಕೆ ||
ಘಳಿಲನೀ ಕ್ಷಣದೈದಿ ಭೂಪಾಲರೊಡನೆ ಕೈ | ಚಳಕಮಂ ತೋರ್ಪೆನೆಂದೆನುತ ||110||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಂದ ಮಾತಿಗೆ ನೇಮವೀಯುತ |
ಬಂದು ಮಾತೆಯ ಚರಣಕೆರಗಲು |
ಕಂದ ಬಾರೇನ್ ದುಗುಡವೆಂದೆನ | ಲೆಂದನಾಗ ||111||
ಮಾತೆ ಲಾಲಿಸು ಕಾಶಿಯಧಿಪತಿ |
ಜಾತೆಯರನು ಪ್ರತಾಪಸೇನನು |
ಭೂತಳೇಶರಗೆಲಿದರ್ಗೀವೆ ಸಂ ಪ್ರೀತಿಯಿಂದ ||112||
ಬರೆಸಿ ಲೇಖನ ಸಕಲ ಪಥ್ವೀ |
ಶ್ವರರ ಕರೆಸಿಹನಂತೆ ದುರುಳನು |
ಗರುವದೊಳು ಮರೆತಿರುವ ಎನ್ನನು | ತೆರಳುತೀಗ ||113||
ಪೊಡವಿಪರ ಗರುವವನು ಭಂಗಿಸಿ |
ಹುಡುಗಿಯರ ನಾ ತಂದು ತಮ್ಮಗೆ |
ಸಡಗರದಿ ಪರಿಣಯವ ಮಾಳ್ಪೆನು | ಒಡನೆ ಕಳುಹು ||114||
ಎನುತ ವಂದಿಸಲೆಂದಳ್ ಚಿನುಮಯ |
ನಿನಗೊಲಿದು ಜಯವೀಯಲೆನ್ನುತ |
ವನಿತೆ ಹರಸುತ ಕಳುಹಲಾ ಸ್ಯಂ | ದನವನೇರಿ ||115||
ವಾರ್ಧಕ
ಸುರತರಂಗಿಣಿ ತನಯ ಪೋಗುತಿರಲತ್ತಲಾ |
ಧರಣಿಪರ ಸಭೆಯೊಳಗೆ ಕಾಶೀಶ ಕೈಮುಗಿದು |
ಪರಮ ಶೌರ್ಯಾನ್ವಿತರು ಧುರವೆಸಗ ಬಹುದೆನಲು ಸಾಲ್ವ ನಪಗಿಂತೆಂದನು ||
ಧುರದಿ ವಿಕ್ರಮಿಗಳುಂ ನೋಡಿ ವರಿಸುವದೊಂದು |
ಪರಮ ಸೌಂದರ್ಯಾತಿಶಯಕೆ ಮೋಹಿಪುದೊಂದು |
ತರಳೆಯರು ತಾವೆ ನಿಶ್ಚಯಗೈವರೀಕ್ಷಣದಿ ಕರೆದು ತಾರೆನೆ ಭೂಪನು ||116||
ರಾಗ ಕೇತಾರಗೌಳ ಅಷ್ಟತಾಳ
ತರಳೆಯರನು ವೇಗದಿಂ ಶಂಗರಿಸಿ ತಂದು | ಮೆರೆವ ರಾಜಾಂಗಣದಿ ||
ಸುರುಚಿರ ವಿಷ್ಟರದೊಳಗೆ ಕುಳ್ಳಿರಿಸುತ್ತ | ಧರಣಿಪರಿಂಗೆಂದನು ||117||
ಏಳಿರೈ ನಿಮ್ಮಯ ವೀರ ಪೌರುಷಗಳ | ಕಾಳಗ ಮುಖದೊಳಗೆ ||
ಬಾಲಕಿಯರ ಮನ ತೋಷವ ಪಡಿಸಿರೈ | ಭೂಲಲಾಮರೆ ದಯದಿ ||118||
ಈ ರೀತಿಯಲಿ ಪೇಳ್ದ ನುಡಿಗೆಂದ ಸಾಲ್ವನು | ಭೂರಿ ಪರಾಕ್ರಮದಿ ||
ಶೂರರಾಗಿಹರೆನ್ನ ಸರಿಸದಿ ಮಾರಾಂತು | ತೋರಿರೈ ಚಳಕವನು ||119||
ಧಡಿಗತನವ ಕಂಡು ಖತಿಯೊಳು ಗಾಂಧಾರ | ಪೊಡವಿಪ ಚಿತ್ರವರ್ಮ ||
ಘುಡುಘುಡಿಸುತ ಧನುಶರವ ಕೊಂಡಾ ಸಾಲ್ವ | ನೊಡನೆಂದನೊಂದು ಮಾತ ||120||
ರಾಗ ಭೈರವಿ ಏಕತಾಳ
ಬರಿ ಪೌರುಷವೇಕಿನ್ನು | ಸಂ | ಗರದೊಳ್ವಿಕ್ರಮವನ್ನು ||
ದುರುಳನೆ ತೋರೆಂದೆನುತ | ಶರ | ವರುಷ ಸುರಿಯೆ ಖತಿಗೊಳುತ ||121||
ತರಿವುತೆಂದ ಹುಲುನಪನೆ | ಸತಿ | ಯರ ಭ್ರಾಂತಿಯೊಳೆನ್ನೊಡನೆ ||
ಧುರದಲಿ ಬಿಡದಿರು ಪ್ರಾಣ | ಕ | ತ್ತರಿಸಿದೆ ಬಿಟ್ಟಿಹ ಬಾಣ ||122||
ಭೋರನೆ ಗದೆಗೊಂಡಾಗ | ಗಾಂ | ಧಾರನು ಹೊಡೆಯಲು ಬೇಗ ||
ಶೂರತ್ವದಿ ಖಳಪತಿಯು | ಖತಿ | ಏರಿ ಸೆಳೆಯೆ ಭೂಪತಿಯು ||123||
ಭಾಮಿನಿ
ಪರಮ ಕೋಪಾಟೋಪದಿಂದಲಿ |
ಧುರವಗೈಯ್ಯುತ್ತಿರಲಿಕಾ ಕ್ಷಣ |
ಧರಣಿ ಮಂಡಲ ಕೆಳಗೆ ಕುಸಿದುದೊ ಎಂಬ ತೆರನಂತೆ ||
ಕುರುಕುಲಾನ್ವಯ ದೀಪ ಗಂಗಾ |
ತರಳ ಸ್ಯಂದನದಲ್ಲಿ ನಡೆತರೆ |
ಕರವ ಜೋಡಿಸಿ ಸಕಲ ಧರಣಿಪರೆಲ್ಲ ನಿಂದಿರಲು ||124||
ರಾಗ ಮಾರವಿ ಏಕತಾಳ
ಸುತ್ತಲು ನೋಡುತ ಗಂಗಾತನಯನು | ಪಥ್ವೀಶರ ಸಭೆಯ ||
ಚಿತ್ತಜ ಸತಿಯನು ಧಿಕ್ಕರಿಪರಸನ | ಪುತ್ರಿಯರನು ಕಂಡ ||125||
ಅರರೆ ಕಾಶೀಶನೆ ಗರ್ವದಿ ಭೀಷ್ಮನ | ಮರೆತೀ ಭೂಪರನು ||
ನೆರೆಹಿದ ಫಲವನು ತೋರುವೆ ಸಕಲರು | ಪರಿಕಿಸಲೀಕ್ಷಣದಿ ||126||
ಧರಣಿಪ ತನುಜೆಯರಾಲಿಸಿ ಎನ್ನುನು | ಧುರದಲಿ ಜೈಸುವರು ||
ಪರಿಕಿಸಿ ಲೋಕತ್ರಯದಲಿ ಕಾಣೆನು | ಸುರ ನರ ಗರುಡರಲಿ ||127||
ಏರಿರಿ ಎನ್ನಯ ರಥವನು ತ್ವರೆಯಲಿ | ಧಾರಿಣಿಪಾಲಕರ ||
ಶೂರತ್ವವ ನಿಮ್ಮಿದಿರೊಳು ಕ್ಷಣದಲಿ | ತೋರುವೆನೆನಲಾಗ ||128||
ಸುರನದಿ ತನಯನ ಕಾಣುತ ತೋಷದಿ | ಧರಣಿಪ ತನುಜೆಯರು ||
ಚರಣದೊಳೆರಗುತಲೈ ತಂದಾಕ್ಷಣ | ಹರುಷದಿ ರಥವೇರಿ ||129||
ಪರಮ ವಿಕ್ರಮದೊಳು ಭೀಷ್ಮನು ಮುಂದಿಹ | ಧರಣಿಪರನು ಕಂಡು ||
ಕರದಲಿ ಧನು ಝೇಂಕರಿಸುತ ಮೀಸೆಯ | ತಿರುಹುತಲಿಂತೆಂದ ||130||
ವಾರ್ಧಕ
ಶಶಿಕುಲಾಧಿಪರುಗಳ ಶೌರ್ಯವಕ್ಷಂಗಳೊಳ |
ಗೆಸೆವ ಫಲರೂಪನಾದರಿಗಜಕೆ ಪಂಚಾಸ್ಯಂ |
ವಸುಧೆಯೊಳ್ಸಕಲರಿಂ ಪೂಜ್ಯತೆಯಗೊಂಡಿರ್ಪ ಶಂತಸುತ ಬಂದೀಗಳು ||
ವಸುಮತೀಶರ ಸಭೆಯ ಮಧ್ಯದಲಿ ಕುಳ್ಳಿರ್ಪ |
ಶಶಿಮುಖಿಯರಂ ಎನ್ನ ಪುರಕೊಯ್ವೆನೀಕ್ಷಣದಿ |
ಅಸಮ ವಿಕ್ರಮಿಗಳೆನ್ನನು ಜೈಸಬಹುದೆನುತ ಹರಿನಾದಮಂಗೈದನು ||131||
ರಾಗ ಭೈರವಿ ಝಂಪೆತಾಳ
ಸುರತರಂಗಿಣಿಯ ಸುಕುಮಾರನಂತಕನಂತೆ |
ಪರಮ ರೌದ್ರದೊಳಿರಲು ಕಂಡು ಕಾಶೀಶ ||
ಧರಣಿಯೊಳು ಪೊಡಮಟ್ಟು ನಡನಡುಗಿ ಭಯದೊಳಗೆ |
ಕರುಣನಿಧಿ ಬಿನ್ನಪವನವಧರಿಸ ಬೇಕು ||132||
ತರಳೆಯರ ಪರಿಣಯಕೆ ವಿಕ್ರಮವೆ ಪಣವೆಂದು |
ಬರೆದು ಕರೆಸಿಹ ಸಕಲ ಧಾತ್ರೀಶರಿವರ ||
ಚರರ ನಿಮ್ಮೆಡೆಗಿಂದು ಕಳುಹಿಸುವ ಮನದೊಳಿರೆ
ಚರಣ ದರ್ಶನವನಿತರೊಳಗಾಯ್ತು ನಮಗೆ ||133||
ಪೊಡವಿಯೊಳು ಶೂರಾಗ್ರಗಣ್ಯರಾಗಿಹ ನಿಮಗೆ |
ಹುಡುಗಿಯರ ಕೊಡದನ್ಯರೊಳಗೆ ಮನವುಂಟೆ ||
ಕಡು ಪರಾಕ್ರಮ ಚಕ್ರವರ್ತಿಗಳು ನೀವೀಗ |
ಜಡಜಾಕ್ಷಿಯರ ಪುಣ್ಯದಿಂದ ದೊರಕಿದಿರಿ ||134||
ಕನ್ಯೆಯರ ಕೈಪಿಡಿದು ಎನ್ನ ಕುಲಕೋಟಿಯನು |
ಧನ್ಯರಾಗುವ ತೆರನ ಮಾಡುವದು ಮನದಿ ||
ಇನ್ನು ತಮ್ಮಿಷ್ಟಗಳು ಬಂದ ತೆರಗೈಯ್ಯ ಬೇ |
ಕೆನ್ನುತಿರೆ ಕಾಶೀಶಗೆಂದರಾನಪರು ||135||
ರಾಗ ಮಧ್ಯಮಾವತಿ ಆದಿತಾಳ
ಕೇಳಯ್ಯ ಕಾಶಿಪುರೇಶನೆ ನುಡಿಂು |
ಮೂಲೋಕದೊಳು ಭೀಷ್ಮಗೆಣೆಯಿಲ್ಲವಯ್ಯ ||136||
ಕ್ಷಾತ್ರಕುಲದಿ ಚಂದ್ರವಂಶದರಸರು ||
ಧಾತ್ರಿಯೊಳುತ್ತಮ ಸತ್ಕೀರ್ತಿಯುತರು ||137||
ಅದರೊಳ್ಮೂರ್ಲೋಕ ಪಾವನೆ ಗಂಗೆಗಿವನು ||
ಉದಿಸಿದ ಕಾರಣ ಪೇಳ್ವುದಿನ್ನೇನು ||138||
ಹರುಷದಿ ನಿನ್ನಾತ್ಮಭವೆಯರನಿವಗೆ ||
ಪರಿಣಯ ಗೈದರೆ ಬಹುತೋಷವೆಮಗೆ ||139||
ರಾಗ ಘಂಟಾರವ ಅಷ್ಟತಾಳ
ಭೂಪರೆಂದುದ ಕೇಳುತ್ತಾ ಸಾಲ್ವನು |
ಕೋಪದಿಂದಾರ್ಭಟಿಸಿ ತನ್ನಯ |
ಚಾಪವನು ಝೇಂಕರಿಸುತ ||140||
ಭಳಿರೆ ಭೀಷ್ಮನು ಶೂರನಲ್ಲದೆ ಮಿಕ್ಕ |
ಇಳೆಯಪಾಲರು ಶಂಡರಾದರೆ |
ಕುಲದಿ ಕ್ಷತ್ರಿಯರಲ್ಲವೆ ||141||
ಆದರೊಳಿತು ಸಮರದಿ ಭೀಷ್ಮನ |
ಛೇದಿಸದೆ ಬಿಡೆನೆಂದು ರಣಕನು |
ವಾದ ಸಾಲ್ವನ ಕಾಣುತ ||142||
ಧರಣಿಪಾಲ ಕಳಿಂಗ ಮಾದ್ರೇಶರು |
ಮರುಳೆ ಭೀಷ್ಮನಯಿದಿರು ನಿನ್ನಯ |
ಧುರ ಪರಾಕ್ರಮ ಸಲ್ಲದು ||143||
ಬಿಡು ಬಿಡೀತನ ಚರಣಕೆರಗು ನಿನ್ನ |
ಸಡಗರದಿ ಕಾಯುವನು ವ್ಯರ್ಥದಿ |
ನಡೆಯಬೇಡೆಮಸದನಕೆ ||144||
ಭಾಮಿನಿ
ಹಿತವ ಪೇಳೆ ಕಳಿಂಗ ಮಾದ್ರರು |
ಖತಿಯ ತಳೆಯುತ ಸಾಲ್ವಗರ್ಜಿಸಿ |
ಪಥಿವಿಪರು ನೀವೆಲ್ಲ ಭೀಷ್ಮನ ಭತ್ಯವರ್ಗಗಳು ||
ಸತಿಯರನು ಪಿಡಿದೊಯ್ವುನೀತನು |
ಜೊತೆಯೊಳಗೆ ನೀವೈದಿ ವಸನವ |
ಪ್ರತಿದಿನದೊಳೊಗೆಯುತ್ತ ಸೇವೆಯ ಗೈಯ್ಯಲೊಳಿತಹುದು ||145||
ವಾರ್ಧಕ
ಧುರದಿ ಮಾರಾಂತು ನೀವ್ ಭೀಷ್ಮನೊಳು ನಿಮ್ಮಸುವ |
ತೊರೆಯದಿರಿ ಪುರಕೈದಿ ನಿಮ್ಮ ಸತಿಯರ ಮುಂದೆ |
ಕುರುಕುಲೇಶನು ಜೀವ ದಾನಗಳನಿತ್ತನೆಂದರುಹಿ ಸುಖದೊಳಗಿರ್ಪುದು ||
ಧುರ ಪರಾಕ್ರಮವೆಲ್ಲ ಭೀಷ್ಮನಲಿ ಮಾರಿಹುದೆ |
ಸುರನರೋರಗರೆಲ್ಲ ಪರಿಕಿಸಲಿ ಸಂಗರದಿ |
ಶಿರವನರಿದೆಳತಹೆನು ಕಾಶಿನಪ ತರಳೆಯರ ತಾನೆಂದು ಮುಂಬರಿಯಲು ||146||
Leave A Comment