ರಾಗ ಮಾರವಿ ಏಕತಾಳ

ಅರರೆ ಪಿಡಿ ಪಿಡಿ ಧನುವನು ಎನ್ನಲಿ | ಧುರಕನುವಾಗೀಗ ||
ಗುರುಗಳ ಮೇಲ್ ಕೈ ಮಾಡಿದ ಪಾಪಕೆ || ತೆರಳುವೆ ಘಡ ಮರುಳೆ ||375||

ರಾಗ ಭೈರವಿ ಝಂಪೆತಾಳ

ಅರಿತಿರ್ಪೆ ವಿಪ್ರರನು ಗುರು ತಪೋವದ್ಧರನು |
ತರಿಯಬಾರದು ಎಂಬ ಪರಮ ನೀತಿಯನು ||
ಗುರುವೆ ವಿಪ್ರರ ಕುಲದಿ ಪುಟ್ಟಿ ಕ್ಷಾತ್ರಿಯರಂತೆ |
ಧುರಕೆ ಬಂದರೆ ತರಿಯೆ ದೋಷವೇನಿಲ್ಲ ||376||

ರಾಗ ಮಾರವಿ ಏಕತಾಳ

ಎಲೆ ಎಲೆ ಗಂಗಾತನುಜನೆ ಭಾಪುರೆ | ಕಲಹಕೆ ನಿಲು ಮದದ ||
ನೆಲವಿದು ಕುರು ರಣರಂಗದ ಕ್ಷೇತ್ರವು | ಸಲೆ ಚಾಪವ ಧರಿಸು ||377||

ಭಾಮಿನಿ

ಪರಶುಧರ ಕೇಳ್ನೀನು ಪೂರ್ವದಿ |
ದುರುಳ ಕ್ಷಾತ್ರಿಜರನ್ನು ತರಿದೀ |
ಪರಮ ಕ್ಷೇತ್ರ ಶಮಂತ ಪಂಚಕದಲ್ಲಿ ಪಿತಗಳಿಗೆ ||
ಕರುಣದಿಂದಲೆ ರಕ್ತ ಶೌಚದಿ |
ವಿರಚಿಸಿದೆ ತರ್ಪಣವನಿಲ್ಲಿಯೆ |
ಶಿರವರಿದು ತವ ರಕ್ತದಿಂ ಗುರು ತರ್ಪಣವ ಗೈವೆ ||378||

ವಾರ್ಧಕ

ದುರುಳ ಭೀಷ್ಮನೆ ನಿನ್ನ ಮಾತೆ ಭಾಗೀರಥಿಯು |
ಹರಿಯುತಿಹಳೀಕ್ಷೇತ್ರದಲ್ಲಿ ನಿನ್ನನು ಕೊಲುವೆ |
ಕರುಳು ಮಾಂಸಾದಿಗಳ ಗಧ್ರಜಂಬುಕ ಕಾಕ ಹರುಷದಿಂ ಮೆಲ್ಲುತಿಹುದು ||
ಪರಿಕಿಸುತ ಜಾಹ್ನವಿಯ ನೇತ್ರದಿಂ ಸುರಿಯುತಿಹ |
ಪರಮ ಶೋಕಾತುರದ ಬಿಂದುಸಾರವನೋಳ್ಪ |
ಗುರು ಪರಶುರಾಮನನು ಪರಿಕಿಸುವ ಸಕಲ ವಂದಾರಕರು ಸಾಕ್ಷಿ ಕೇಳು ||379||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಳಿತು ಗುರುವರನೆನ್ನ ಶರದಲಿ |
ಚಲಿಸಿ ಸ್ವರ್ಗವ ಕಾಂಬಯೋಗವು |
ನೆಲಸಿಕೊಂಡಿದೆ ವಿಧಿಯೆ ನಿನಗೇನ್ | ತಿಳುಹಲಿನ್ನು ||380||

ಎಂದು ಮಂತ್ರಿಯ ಕಳುಹಿ ಭೀಷ್ಮನು | ಸ್ಯಂದನವ ತರಿಸುತ್ತ ಭಕ್ತಿಗ |
ಳಿಂದ ಗುರು ಸಾಮೀಪ್ಯಕೈದಾತ | ಲೆಂದನೆರಗಿ ||381||

ಗುರುವೆ ನಿನ್ನೊಳು ಸಮರ ಗೈವೆನು | ಹರಸುವುದು ಜಯವಾಗುವಂದದಿ |
ಪರಮ ಕರುಣಾಸಿಂಧುವೆನ್ನುತ | ಚರಣಕೆರಗೆ ||382||

ಧುರವನೊಪ್ಪಿದೆ ನೀನು ಸಾಕೈ | ಧರೆಯೊಳಗೆ ಶ್ರೇಯಸ್ಸು ಬಯಸುವ |
ರರಿತು ನಿನ್ನಂತೆಸಗುವರು ಯಾ | ರಿರುವರಯ್ಯ ||383||

ಈ ಪರಿಯೊಳಪ್ಪಣೆಯಗೊಳ್ಳದೆ | ಚಾಪ ಪಿಡಿದಿರೆ ನಿನಗೆ ಕ್ಷಣದಲಿ |
ಶಾಪವೀಯುತ್ತಿರ್ದೆ ಮೆಚ್ಚಿದೆ | ತೋಷದಿಂದ ||384||

ತರಳ ಕೇಳೈ ನಿನಗೆ ಜಯವಹ | ಧುರವಗೈವೆನು ನಿನ್ನ ಗೆಲುವರೆ |
ಹರಕೆ ಸಲಿಸುವೆ ನಿಲ್ಲು ಸಮರಕೆ | ತ್ವರಿತದಿಂದ ||385||

ರಾಗ ತೋಡಿ ಅಷ್ಟತಾಳ

ಪರಶುಧರೆ ನೀ ಕೇಳು ಸ್ಯಂದನ | ವಿರುತಿಹುದು ಎನಗೀಗ ಸಮರಕೆ |
ತ್ವರಿತದೊಳು ತರಿಸೀಗ ರಥವನ್ನು ||
ಬರಿದೆ ನೆಲದೊಳು ನಿಂತು ಗುರುಗಳು | ಧುರವ ಗೈಯಲು ವ್ಯಥೆಗಳಪ್ಪುದು |
ಸರಿಯಿದಲ್ಲವು ಶಿಷ್ಯತನಕೀಗ ||386||

ರೂಢಿಯೇ ರಥ ವೇದ ಹಯಗಳು | ನೋಡು ವಾಯುವೆ ಸೂತ ಕವಚವು |
ಕೂಡಿದೋಂಕಾರಗಳು  ಕೇಳೆಲವೊ ||
ಗಾಢದಿಂ ರಥವೇರು ಪೌರುಷ | ಗೂಡಿ ಸಮರವಗೈಯ್ಯ ನೀನೆನೆ |
ನೋಡಿ ಗಂಗಾತನಯನಾಕ್ಷಣದಿ ||387||

ಗುರುವಿಗೊಂದಿಸಿ ರಥವನೇರುತ | ಸುರ ನದೀಸುತನಾಗ ಸಾರಥಿ |
ಗೊರೆದನಿವರಿಹ ಬಲದ ಭಾಗದೊಳು ||
ಚರಣ ಸೇವಕ ಶಿಷ್ಯ ನಿಲುವುದು | ಪರಮ ಧರ್ಮವು ಹರಿಸು ಸ್ಯಂದನ |
ವಿರದೆನುತ್ತಿರೆ ರಾಮನಿಂತೆಂದ ||388||

ರಾಗ ಶಂಕರಾಭರಣ ಮಟ್ಟೆತಾಳ

ಪಿಂದಕಿಪ್ಪತ್ತೊಂದು ಬಾರಿ | ಕೊಂದ ಕ್ಷಾತ್ರಿಕುಲವ ರಾಮ ||
ನೆಂದು ತಿಳಿಯದೀಗ ರಣಕೆ | ನಿಂದೆ ಭಾಪುರೆ ||389||

ಜನಿಸಲಿಲ್ಲ ಭೀಷ್ಮನಾಗ | ಇನಿತು ಶೌರ್ಯವಿರಲು ಎಣೆಯೆ ||
ಘನ ಬಲಾಢ್ಯ ತೇಜ ಸುಭಟ | ರೆನಗೆ ಯಿರುವರೆ ||390||

ಬಲ್ಲೆ ಕ್ಷಾತ್ರತೇಜ ವಿಶ್ವಾ | ಮಿತ್ರಮುನಿ ವಶಿಷ್ಟನನ್ನು ||
ಗೆಲ್ವೆನೆಂದು ಕೆಣಕಿ ಶೌರ್ಯ | ವೆಲ್ಲ ತೋರ್ದುದ ||391||

ಪರಿಪರಿಯ ಕಷ್ಟದಿಂದ | ಲಿರುತ ತಪಿಸಿ ಕಡೆಗೆ ಬ್ರಹ್ಮ ||
ಪರಮ ಪದವ ಪಡೆದ ಗಾಧಿ | ತರಳ ಕೌಶಿಕ ||392||

ಮುನಿದರೆ ವಿಪ್ರರು ಕ್ಷಾತ್ರ | ಜನಪರು ಬಾಳುವರೆ ಕಡೆಗೆ ||
ಮನಕೆ ತಿಳಿಯೆ ದ್ವಿಜರ ಬಲುಹು | ನಿನಗೆ ಸಾರಿದೆ ||393||

ಸ್ವಾಮಿ ನೀವು ಬ್ರಹ್ಮಕುಲನಿ | ಸ್ಸೀಮರಾಗಿ ಚಾಪವನ್ನು ||
ರಾಮನೆಂಬ ಕ್ಷತ್ರಿ ತೇಜ | ವೇತಕಿತ್ತಿರಿ ||394||

ಗುರುಗಳನ್ನು ಹಿರಿಯರನ್ನು | ಜರೆದ ದುರುಳ ಭೀಷ್ಮ ನಿನಗೆ ||
ತೊರೆದರೀಗ ರಾಜ್ಯಲಕ್ಷ್ಮಿ | ಬರಿದೆಯೆಲ್ಲವೊ ||395||

ನಡತೆಯಹುದು ಕಾರ್ತವೀರ್ಯ | ಪೊಡವಿಯಲ್ಲಿ ತಪ್ಪಿದುದಕೆ ||
ಕೆಡಹಿದಿರಿ ಕ್ಷಾತ್ರಿಯರನು | ನಡೆಯದೆನ್ನಲಿ ||396||

ಭಾಮಿನಿ

ದುರುಳ ಭೀಷ್ಮನೆ ಕೇಳು ನೀನೀ |
ಗಿರುವೆ ವ್ರತದೊಳು ಬ್ರಹ್ಮಚಾರಿಯು |
ಮರುಳೆ ನಿನ್ನಯ ಪಿತನು ಶಂತನು ಸತ್ಯವತಿಗಾಗಿ ||
ತೊರೆಸಿದನು ನಿನಗೆಲ್ಲ ಸುಖವನು |
ತರಳ ನೀನವಗುದಿಸಿದಾತನು |
ತೊರೆದಪೆಯ ಸ್ತ್ರೀ ಭ್ರಾಂತಿ ಪೌರುಷವೇಕೆ ನೀ ಪೇಳ್ವೆ ||397||

ರಾಗ ನಾದನಾಮಕ್ರಿಯೆ ಅಷ್ಟತಾಳ

ಪರ ತಪದೊಳಗಿಹ ಮುನಿಪನು | ವನ | ಚರಿಪ ಕಿರಾತರ ತೆರ ನೀನು |
ಪರಹಿಂಸಾ ಧರ್ಮವು ಸಹಜವೆ | ಪರ | ರರಿಯರೆಂಬುವ ಬಗೆಪೇಳುವೆ ||398||

ನಿನ್ನ ಕುಲದ ದುಷ್ಯಂತನೊ | ಮೋ | ಹನ್ನೆ ಶಕುಂತಳೆ ಮರೆತನೊ ||
ದುರ್ನೀತಿವಂತನ ಪೌತ್ರನು | ಸಂ | ಪನ್ನನಾಪೆಯ ದುಷ್ಟ ಪೇಳ್ನೀನು ||399||

ನಿರಪರಾಧಿನಿಯು ರೇಣುಕೆಯನ್ನು | ಮಹ | ಪರಮ ಜ್ಞಾನಿಯು ತವ ತಾತನು ||
ಕೊರಳ ಕೊಯಿಸಿದನೇಕೆ  ಪೇಳ್ವುದು | ಬೇಡ | ಪರರ ನಿಂದೆಗಳನ್ನು ಮಾಳ್ಪುದು ||400||

ಬರಿಯ ಮಾತುಗಳಿಂದ ಫಲವೇನು | ನಾ | ಶರವನೆಚ್ಚುವೆನು ತಾಳಿಕೊ ನೀನು |
ಕರುಣವಿಲ್ಲೆನಗೆ ಗಾಂಗೇಯನೆ | ಬಲು | ದುರುಳ ವತ್ತಿಯ ತಾಳ್ದೆ ಮೂಢನೆ ||401||

ಗುರುಗಳಾಚರಿಸಿದ ಪಥವನ್ನು | ಶಿಷ್ಯ | ತೊರೆಯ ಬಾರದು ಬಂದ ಶರವನ್ನು ||
ಧರೆಯೊಳು ಕೆಡಹಿದೆ ಗುರುರಾಯ || ನೀನೆ | ಬರೆದಿಹ ವಿದ್ಯೆಯ ನೋಡಯ್ಯ ||402||

ರಾಗ ಭೈರವಿ ಏಕತಾಳ

ಉರಿಯಸ್ತ್ರವ ಭಾರ್ಗವನು | ತಾ | ಕೆರಳುತ ಬಿಡೆ ನದಿಸುತನು |
ವರುಣಾಸ್ತ್ರದಿ ಪರಿಹರಿಸಿ | ನಿಂ | ದಿರುತಿರೆ ಕಂಡಾ ಸಹಸಿ ||403||

ತರತರಾಸ್ತ್ರ ಬಿಡಲದನು | ಆ | ಸುರನದಿ ಸುತ ಮುರಿದದನು ||
ಭರದೊಳು ಧನುಕತ್ತರಿಸಿ | ಗುರು | ವರನನು ನೋಡುತ ಸಹಸಿ ||404||

ಬಿಡಲಂಜನ ಶರವನ್ನು | ಬಂ | ದೊಡನೆಯೆ ಭಗುರಾಮನನು |
ಪೊಡವಿಯೊಳುರುಳಿಸಿ ಬಂದು ಮುಂ | ಗಡೆಯೊಳು ನಿಂದಿರಲಂದು ||405||

ಭಾಮಿನಿ

ಧರೆಯೊಳಗೆ ಮೂರ್ಛೆಯಲಿ ಬಿದ್ದಿಹ |
ಪರಶುರಾಮನ ಕಂಡು ಭೀಷ್ಮನು |
ಕರದ ಚಾಪವನಿಳುಹಿ ರಥದೊಳು ಬಂದು ವೇಗದಲಿ ||
ಎರಡು ಕೈಯೊಳಗಪ್ಪಿ ಗುರುವಿನ |
ಸುರಿವ ಶೋಣಿತವನ್ನು ಸೆರಗಿನೊ |
ಳೊರಸಿ ತೊಡೆಯೊಳಗಿಟ್ಟು ಹಾ ಎನುತಾಗ ಹಲುಬಿದನು ||406||

ರಾಗ ನೀಲಾಂಬರಿ ರೂಪಕತಾಳ

ದುರುಳನು ನಾನೇನೆಸಗಿದೆ | ಕರುಣವದಲ್ಲದೆ ಗುರುವಿಗೆ ||
ಶರಗಳನೆಸೆಯುತ ಕೊಂದೆನೊ | ಪರಮ ಪಾತಕಿಯಾದೆ ||407||

ಏತಕೆ ಅಂಬೆಯ ತಂದೆನೊ | ಪಾತಕಿ ಸತಿಯಳ ದೆಸೆಯೊಳು |
ನೀತಿಯ ಪೇಳಿದ ಗುರುವಿಗೆ | ಘಾತಕ ಮಾಡಿದೆನೊ ||408||

ಭರತಾನ್ವಯದೊಳು ಸಂದಿಹ | ಹಿರಿಯರು ಸತ್ವಗುಣಾಢ್ಯರ ||
ನುರುತರು ಶಾಪಕೆ ಪಾತ್ರನು | ಬರಿದೆ ನಾನಾದೆನಲ ||409||

ಭಾಮಿನಿ

ಹರಿಯು ತಾನೆಚ್ಚರ್ತು ಭೀಷ್ಮನ |
ಪರಿಕಿಸುತ ಹೂಂಕರಿಸಿ ಚಾಪವ |
ಕರದಿ ಝೇಂಕತಿಗೈದು ದುರುಳನೆ ನಿಲ್ಲು ನಿಲ್ಲೆನುತ ||
ಪರಶುಧರ ಸನ್ನದ್ಧನಾಗುತ |
ಲರಿತು ಮನದಲಿ ತನಗೆ ವಿದ್ಯೆಯ |
ಕರುಣಿಸಿದ ಗಣಪತಿಯ ಮರೆದೆನು ಬಂದುದಪಜಯವು ||410||

ರಾಗ ಸಾವೇರಿ ಅಷ್ಟತಾಳ

ಎನುತ ರಾಮನು ಗಣಪನನ್ನು | ಪೂಜಿ | ಪೆನು ತಾನೆಂದೆನುತ ಮೂರ್ತಿಯನು ||
ಮುದದಿ ಧ್ಯಾನಿಸುತೇಕದಂತ ಲಂಬೋದರ |
ಎನಗೆ ಪ್ರಸನ್ನನಾಗೆನುತಭಿನಮಿಸುತ್ತ ||411||

ಕರಿವದನನೆ ಗಣಾಧಿಪನೆ | ದೇವ | ಗಿರಿಜಾತ್ಮನೆ ವಿನಾಯಕನೆ |
ಗುರು ನಿನ್ನ ಮರೆತ ಕಾರಣ ಬಂದುದಪಜಯ |
ಪರಿಪಾಲಿಸೈ ಲಂಬೋದರ ತಪ್ಪ ಕ್ಷಮಿಸುತ್ತ ||412||

ರಾಗ ಕೇತಾರಗೌಳ ಅಷ್ಟತಾಳ

ಪರಮ ಭಕ್ತಿಗೆ ಮೆಚ್ಚಿ ಗಣಪ ಮೈದೋರುತ |
ಪರಶುಧಾರಿಯ ಕಾಣುತ ||
ಕೊರತೆಯೇನೆನೆ ದೇವ ಶಿಷ್ಯನೊಳಪಜಯ |
ಧುರಮೊಳು ಪೊಂದಿದೆನಾ ||413||

ಎನಲಾಗ ಗಣಪತಿ ಪೇಳ್ದ ಭಾರ್ಗವ ಕೇಳು |
ನಿನಗೆ ಬೆಂಬಲಕೆ ನಾನು ||
ಗಣರೊಳು ಸೇನಾನಿ ಭ್ರುಕುಟಿಯ ಕಳುಹುವೆ |
ನೆನುತಂತರ್ಧಾನನಾದ ||414||

ಭಾಮಿನಿ

ಭೋರಿಡುತ ಕೆಂಜೆಡೆಯ ದುಷ್ಟ್ರಾ |
ಕಾರ ವದನ ಮಹೋಗ್ರತೇಜದಿ |
ಕೋರದಾಡೆಗಳೂರ್ಧ್ವ ರೋಮದಿ ಭ್ರುಕುಟಿಯಾಕ್ಷಣದಿ ||
ಘೋರ ಹರಿನಾದವನು ಗೈಯುತ |
ಸಾರಿ ಬರುತಿರೆ ಕಂಡು ರಾಮನು |
ಶೂರನಹೆ ಬಾರೀಗ ಭೀಷ್ಮನ ತರಿದು ಕೆಡಹೆನಲು ||415||

ರಾಗ ಮಾರವಿ ಏಕತಾಳ

ಕರಕರ ದಂತವ ಕಡಿಯುವ ಭ್ರುಕುಟಿಯು | ಬರುವುದನುಂ ಕಂಡು ||
ಪರಿಕಿಸುತಾಕ್ಷಣ ಭೀಷ್ಮನ ವಸುಗಳು | ಕರೆದೆಂದರು ನಭದಿ ||416||

ಸುರನದಿ ತನಯನೆ ಪ್ರಮಥನ ತರಿಯಲು | ತ್ವರಿತದಿ ಖೇಚರರ ||
ಅರಸ ಸುವೇಗನ ಕಳುಹುವೆ ನೀಕ್ಷಣ | ಪರಿಕಿಸು ನಭವೆನಲು ||417||

ಎಂದಾ ವಚನವ ಕೇಳುತ ಸುರನದಿ | ನಂದನನಾಕ್ಷಣದಿ ||
ಹಿಂದಕೆ ನೋಡಲು ಧನುಝೇಂಗೈಯುತ | ಬಂದನು ಗಂಧರ್ವ ||418||

ಅರರೇ ಪ್ರಮಥನೆ ನಿಲ್ಲೆನುತಾಕ್ಷಣ | ಶರಗಳ ಜೋಡಿಸುತ ||
ಗುರಿಯೊಳು ಗಂಧರ್ವೇಶನು ಬಿಡಲದ | ಮುರಿಯುತಲಾ ಭ್ರುಕುಟಿ ||419||

ಸರಿಸಮಯುದ್ಧವ ಗೈಯ್ಯುತಲುಭಯರು | ಮೆರೆದಿರಲೊಂದೆಸೆಯು ||
ಪರಶುಧರನು ಖತಿಯೇರುತ ತನ್ನೊಳ | ಗರಿತು ವಿಧಾನವನು ||420||

ಭಾಮಿನಿ

ಸಾರಥಿಯು ಎನಗಿಲ್ಲವದರಿಂ |
ಶೂರನಾಗಿಹ ಭೀಷ್ಮ ಧುರದಲಿ |
ತೋರುವನು ವಿಕ್ರಮ ಕೃತೌವ್ರಣ ಪೋಗು ನೀನೀಗ ||
ಸಾರಿ ಸೂತತ್ವವನು ಮಾಡೆನೆ |
ಚಾರು ವಾಘೆಯ ಪಿಡಿದು ಮುನಿಪತಿ |
ಏರಿ ಸ್ಯಂದನವನ್ನು ನಡೆಸುತ್ತಿರಲು ಭಾರ್ಗವನು ||421||

ರಾಗ ಶಂಕರಾಭರಣ ಮಟ್ಟೆತಾಳ

ಸುರನದಿಯ ತನಯ ಕೇಳು | ಶರದೊಳಥವಾ ಶಾಪದಿಂದ ||
ದುರುಳ ನಿನ್ನ ಸಂಹರಿಸಿ | ಧುರದಿ ಮೆರೆವೆನು ||422||

ಬೆದರಲಾರೆ ಶಾಪಶರಕೆ | ಕದನವೇಕೆ ಪಿಂದಕಿನ್ನು |
ಮುದದಿ ತೆರಳೆ ಒಳ್ಳಿತಹುದು | ಸದರವಲ್ಲವು ||423||

ನಾನು ದೇವತಾಂಶ ಪುರುಷ | ಹೀನ ಮನುಜ ವಿಷ್ಣುಶಕ್ತಿ ||
ಗೇನು ಪರಿಹರಂಗಳನ್ನು | ನೀನು ಬಲ್ಲೆಯೊ ||424||

ಅಷ್ಟವಸುಗಳಿಷ್ಟದಿಂದ | ಪುಟ್ಟಿದವನು ನಾನು ಎನಗೆ ||
ಕೊಟ್ಟ ವರವ ಪಿತನು ಇಚ್ಛಾ | ಮರಣವೈದಲು ||425||

ರಾಗ ಭೈರವಿ ಅಷ್ಟತಾಳ

ವಸುಗಳ ಪರಿಯ ನಾನು | ಬಲ್ಲೆನು ಹೆಂಡ |
ರುಸುರಲು ಧೇನುವನು ||
ಅಸಮ ವಿಕ್ರಮದಿಂದ ಬೆರಸೆ ವಸಿಷ್ಠನು |
ಎಸೆದಿತ್ತ ಶಾಪವನು ||426||

ಅರಿಪೆ ನಾ ಭಗು ಋಷಿಯ | ನಿಮ್ಮೆದೆಯೊಳು |
ಚರಪವಿಟ್ಟಿಹ ಪರಿಯ ||
ಭರದೊಳವರ ಪಾದಲಾಂಛನ ಸೆಳೆದಿರ್ಪ |
ಪರಮ ಮಹಾತ್ಮರೆಂದು ||427||

ದುರುಳರಾ ಕ್ಷಾತ್ರಿಯರು | ಪೆತ್ತಿಹ ಸುತ |
ರರಿಯರು ಕಡು ಮೂರ್ಖರು ||
ತರುಣಿಯಾಸೆಗೆ ಶಂತನಪ ನಿನ್ನ
ಸಾಮ್ರಾಜ್ಯ | ತೊರೆಸಿದನೊದರದಿರು ||428||

ಕಿವಿಯೊಳಗುದಿಸಿದರು | ಕೈಟಭ ಮಧು |
ತವ ತನು ಸಂಭವರು ||
ಬವರವನೆಸಗುತ್ತ ತೊಡೆಯೊಳು ಮಲಗಿಸಿ |
ತವಕದಿ ಕೊರಳರಿದೆ ||429||

ಭಾಮಿನಿ

ಸುರನದೀಸುತನೆಂದುದಕೆ ಖತಿ |
ವೆರದು ಯಿಂದ್ರಾಸ್ತ್ರವನು ರಾಮನು |
ಭರದೊಳೆಚ್ಚಡೆ ಭೀಷ್ಮ ಮೂರ್ಛಿಸೆ ಕಂಡು ಋಷಿವರರು ||
ಕರವ ಚಪ್ಪಳಿಸುತ್ತ ಭಾಪುರೆ |
ಪರಶುಧರನೆಂದಾಗ ಪೊಗಳುತ |
ಲಿರಲಿಕಂಬೆಯುತೋಷ ಪಡುತಿರಲಾಗ ಜಾಹ್ನವಿಯು ||430||

ಕಂದ

ತ್ವರಿತದಿ ನಡೆತಂದಾಕ್ಷಣ |
ಧರೆಯೊಳ್ಮಲಗಿಹ ತನಯನ ಕಾಣುತ ಗಂಗಾ ||
ಭರದಿಂದಪ್ಪುತ ಧರೆಯೊಳ್ |
ಮರುಗುತ ತೊಡೆಯೊಳಗಿರಿಸುತ ಹಾಯೆನುತಾಗಳ್ ||431||

ರಾಗ ಸಾವೇರಿ ಆದಿತಾಳ

ವೀರಾಧಿ ವೀರ ನಿನ್ನನು | ಪೋಲುವರಿನ್ನೀ | ಧಾರಿಣಿಯೊಳು ಕಾಣೆನು ||
ಕ್ರೂರ ಗುರುವಿನೊಡ | ಸಂಗರವ ಗೈದು | ಸಾರಿದೆಯಲ್ಲೊ ಮಗನೆ ||432||

ಪುತ್ರಹೀನೆ ನಾನಾದೆನು | ಬಾಳುವದಿನ್ನು | ವ್ಯರ್ಥಕೇಳ್ಸುತನೆ ನಾನು ||
ಪೃಥ್ವಿ ಮೂರಕೆಧೀರನು | ನೀನೆಂಬ ಖ್ಯಾತಿ | ಎತ್ತ ಪೋದುದು ಪೇಳ್ನೀನು  ||433||

ಹಿಡಿದ ಬಲಗೈಯ್ಯ ಭಟನು | ಭೀಷ್ಮನೆಂದೆಂಬ | ನುಡಿಯು ಮೂರ್ಲೋಕವನು ||
ಬಿಡದೆ ತುಂಬಿದೆ ಖ್ಯಾತಿಯು | ನಿನಗೆ ಬಂತೆ | ಹುಡುಗ ಪ್ರಾಯದಿ ಮತಿಯು ||434||

ಭಾಮಿನಿ

ಪರಶುಧರನೆಲ್ಲಿಹನು ಶಿರವಂ |
ತರಿವೆನೀಕ್ಷಣವಾದುದಾಗಲಿ |
ಹರಿಹರರು ಮುನಿಸಿದರು ಬಿಡೆನೆಂದೆದ್ದು ಗಾಂಗೇಯ ||
ಕರದಿ ಚಾಪವಗೊಂಡು ಗರ್ಜಿಸು |
ತಿರುವ ಕಾಲದಿ ಗಂಗೆ ಕುವರನ |
ಕರವ ಪಿಡಿದಿಂತೆಂದಳಾಕ್ಷಣ ತಾಳು ತಾಳೆನುತ ||435||

ರಾಗ ತೋಡಿ ಆದಿತಾಳ

ಬೇಡ ಮಗನೆ ಗುರುವಿನೊಳು | ಮಾಡಬೇಡ ಧುರವ ನೀನು ||
ರೂಢಿಯೊಳಗೆ ನಗೆಗೇಡಹುದು | ಮೂಢಮತಿಯೇನೊ ನೀನು ||436||

ರಾಗ ಕೇತಾರಗೌಳ ಅಷ್ಟತಾಳ

ಮಾತೆ ಕೇಳ್ ರಣಕೆ ನಿಂದವನು ನಾನೀದಿನ | ಸೋತು ಹಿಂದಿರುಗುವೆನೆ ||
ಖ್ಯಾತಿಯಾಗಿಹ ಭರತಾನ್ವಯ ಬಿರುದೀಗ | ಮಾತೊಂದೆ ಮತಿಯುತನು ||437||

ರಾಗ ತೋಡಿ ಆದಿತಾಳ

ತೆರಳಿ ಪರಶುರಾಮನೆಡೆಗೆ | ತೊರೆಯಬೇಡೆಂದೆನುತ ಗಂಗೆ ||
ಭರದಿ ಬಂದು ಶಿಷ್ಯನೊಡನೆ | ಧುರಗಳ್ಯಾಕೆ ಬೇಡವೆನಲು ||438||

ರಾಗ ಕೇತಾರಗೌಳ ಅಷ್ಟತಾಳ

ಗುರುವೆಂಬ ಭಾವನೆಯರಿಯದೆ ನಿಂದಿಹ | ಸರಿವೆನೆ ಬೆದರಿ ನಾನು ||
ಮರಳೆ ನಿನ್ನಯ ಸುತ ಸೋತನೆಂದರೆ ನಾನು | ಧುರವ ಬಿಡುವೆ ನೀಕ್ಷಣ ||439||

ರಾಗ ತೋಡಿ ಆದಿತಾಳ

ಪಿಡಿದ ಛಲವ ಭೀಷ್ಮ ಬಿಡನು | ಒಡನೆ ದಯವನಿರಿಸಿ ನೀನು ||
ಬಿಡಲು ಸಮರವನ್ನು ಮೊದಲು | ಕಡೆಯೊಳವ ತಾ ಸುಮ್ಮನಿಹನು ||440||

ರಾಗ ಕೇತಾರಗೌಳ ಅಷ್ಟತಾಳ

ಮೂಢೆ ಕೇಳ್ನಿನ್ನಯ ಮಗ ತಾನೆ ಛಲವಂತ | ಹೇಡಿಯೆ ನಾನೀಗಲು ||
ನೋಡಾತನನ್ನು ಜೈಸದೆ ಹಿಂದಿರುಗುವದೆ | ಗಾಢದಿ ನಡೆಯಬೇಗ ||441||

ರಾಗ ತೋಡಿ ಆದಿತಾಳ

ಪರಶುಧರನೆ ಕೇಳಾದರೆ | ತರಳ ಭೀಷ್ಮನಿಂಗೆ ನಾನು ||
ವಿರಚಿಪೆನು ಸೂತತ್ವವ | ಧುರದಿ ಜೈಸಬಹುದು ನೀನು ||442||

ಭಾಮಿನಿ

ಎಂದು ಗಂಗಾದೇವಿಯಾಕ್ಷಣ |
ಬಂದು ಭೀಷ್ಮನ ಕಂಡು ಕುವರನೆ |
ಸ್ಯಂದನವನೀನೇರು ಸೂತತ್ವವನು ನಾ ಮಾಳ್ಪೆ ||
ಕಂದ ನಿನ್ನಯ ಧರ್ಮ ಕೈಬಿಡ |
ದೆಂದಿಗಪಜಯವಾಗಲರಿಯದು |
ಹಿಂದೆ ತಿರುಗದಿರೆನುತ ವಾಘೆಯು ಪಿಡಿದು ರಥವೇರಿ ||443||

ರಾಗ ಶಂಕರಾಭರಣ ಮಟ್ಟೆತಾಳ

ಸುರನದಿಯ ಸುತನೆನುತ | ಗರುವಗೊಂಡಿರ್ಪೆ ಭಲರೆ ||
ತರುಣಿ ಎಂತು ರಕ್ಷಿಸುವಳು | ಶಿರವ ಭೀಷ್ಮನೆ ||444||

ಗುರುವೆ ಸಂದೇಹವಿಲ್ಲ | ಹರಿ ಪದಾರವಿಂದ ಜಾತೆ ||
ಸರುವ ಪೂಜ್ಯಳೆನ್ನ ಮಾತೆ | ಪೊರೆಯುತಿರುವಳು ||445||

ತರುಣಿಯಧರ್ಮದೊಳೀಕೆ | ನರನ ವರಿಸಲೆನುತ ಶಾಪ ||
ಧರಿಸಿ ಪೆತ್ತಳಾಗ ನಿನ್ನ | ಗುರು ದ್ರೋಹಿಯ ||446||

ಎಂದ ನುಡಿಗೆ ಜಹ್ನುತನಯ | ಳೆಂದಳೆಲವೊ ಪತಿವ್ರತೆಯ ||
ನಿಂದೆ ಗೈದುದಕ್ಕೆ ನಿನಗೆ | ಬಂದುದು ಶಾಪ ||447||

ಧಾರಿಣಿಯೊಳಿರ್ಪ ಸಕಲ | ಕ್ರೂರಜಂತು ದೇಹತಾಳಿ ||
ಭಾರಿ ಸುಖವ ಪಡೆವೆ ಹತ್ತು | ಬಾರಿ ಜನ್ಮದಿ ||448||

ಹುಟ್ಟಿದೇಳು ಶಿಶುವ ಕೊಂದು | ಅಷ್ಟು ಮಾನವುಳುಹಿಕೊಂಡ ||
ಪಟ್ಟದರಸನನ್ನು ತೊರೆದ | ಳೆಷ್ಟು ಪತಿವ್ರತೆ  ||449||

ಸತ್ಯವಾದರೆನ್ನ ಪಾತಿ | ವ್ರತ್ಯ ಗರ್ಭ ಜಾತನಿವನು ||
ಕ್ಷತ್ರಿಕುಲವ ತರಿದ ನಿನ್ನ | ಸತ್ವನಿಲಿಪನು ||450||

ರಾಗ ಮಧ್ಯಮಾವತಿ ಅಷ್ಟತಾಳ

ಭಾಪು ಭಳಿ ಭಳಿರೆ | ಮೆಚ್ಚಿದೆ ನಾನು | ಭಾಪು ಭಳಿ ಭಳಿರೆ || ಪಲ್ಲವಿ ||

ಹರನಶರದಿ ಮರ್ದಿಸುವೆನು | ಎಂದು | ಶಿರದೊಳು ಬಿದ್ದ ಮಾರ್ಗವನು ||
ಅರಸಿಕಾಣದೆ ಸುತ್ತಿತೊಳಲಿದೆ | ಪರಮ ಋಷಿ ಜಹ್ನುವನು ಕೆರಳಿಸಿ |
ಭರದಿ ಅಪೋಶನಕೆ ಒದಗಿದ | ತರುಣಿ ನಿನ್ನಯ ಕುವರ ಶೂರನೆ || ಭಾಪು ||451||

ಗುರುವರ ಕೇಳೆನ್ನ ನುಡಿಯ | ಮಾತೆ | ಪರ ದೇವತಾ ಎಂಬ ಶತಿಯ ||
ಅರಿಯದೆನ್ನಿದಿರಿನೊಳಗೀಕೆಯ | ಜರಿವೆ ನಿನ್ನಯ ಶಿರವನೀಕ್ಷಣ |
ಗರಗರನೆ ಚೆಂಡಾಡದಿರ್ಪೆನೆ | ಧುರಕೆ ನಿಲ್ಲೆಂದೆನುತ ಭೀಷ್ಮನು  || ಭಾಪು ||452||

ಭಾಮಿನಿ

ಹರಿಯನಾದವಗೈದು ಸಮರದಿ |
ತರಳ ಧನು ಝೇಕರಿಸಿ ಪೂರ್ವದೊ |
ಳರಿತ ಪ್ರಸ್ಥಾಪನದ ಶರವನು ಮಂತ್ರಿಸುತ ಭರದಿ ||
ಗುರಿಯ ನೋಡುತ ಪೂಡೆ ಚಾಪಕೆ |
ಹರಿಪದಾಂಬುವನು ನೆನೆಯುತ |
ಸುರಮುನಿಪ ನಾರದನು ಬರುತಲಿ ತಡೆದು ಪೇಳಿದನು ||453||

ರಾಗ ಸುರುಟಿ ಏಕತಾಳ

ಸುರನದಿಸುತ ತಾಳು | ಪೇಳ್ವುದ | ಕರುಣದಿ ನೀ ಕೇಳು ||
ಗುರುವಿನ ಮೇಲೀಯಸ್ತ್ರವ ಬಿಡದಿರು |
ಪರಮ ಪಾತಕಗಳು ಬರುವುದು ತಡೆ ತಡೆ ||454||

ಸಿಟ್ಟಿಗೆ ಕಾರಿಯವು | ನೋಡಲು | ಕೆಟ್ಟು ಪೋಪುದು ದಿಟವು |
ದಿಟ್ಟನು ದಿವ್ಯಜ್ಞಾನಿ ಧರ್ಮಾತ್ಮನು ||
ಎಷ್ಟಾದರೂ ಗುರುವರನನು ಕೊಲದಿರು ||455||

ಮುನಿಪನ ನುಡಿ ಕೇಳಿ | ಸುರನದಿ | ತನಯ ಕ್ಷಮೆಯ ತಾಳಿ ||
ಧನುವಿಗೆ ಪೂಡಿದ ಶರವನು ತೆಗೆಯಲು |
ಮನದೊಳು ಭಾರ್ಗವರಾಮನು ಯೋಚಿಸಿ ||456||

ಸುರ ಮುನಿ ನುಡಿಗಿವನು | ಪೂಡಿದ | ಶರವನು ಕಳಚಿದನು ||
ಪರಮ ಸಾಹಸಿಯಿವನಹುದು ಮಹಾಸ್ತ್ರವ |
ಸ್ಮರಿಸುತ ಪೂಡಿದನರರೆ ಪರಾಕ್ರಮಿ ||457||

ಸಾಂಗತ್ಯ ರೂಪಕತಾಳ

ಎನುತ ರಾಮನು ಯೋಚಿಸುತ್ತಿರಲಾಕ್ಷಣ | ವನಧಿ ಭೋರ್ಗರೆವಂತೆ ನಭದಿ |
ಚಿನುಮಯಾತ್ಮಕ ಕೇಳು ಕಲಹ ಬೇಡೆಲೊ ಈಗ | ನಿನಗೆ ಸೋಲುವನಲ್ಲ ಭೀಷ್ಮ ||458||

ಎಂದಾಗಲಂಬರವಾಣಿ ಭೋರ್ಗರೆಯಲು | ಕುಂದಿ ಮೌನವ ತಾಳಿ ರಾಮ |
ಪೊಂದಿ ಸೈರಣೆಯನ್ನು ಹರುಷದಿಂ ಸುರನದಿ | ನಂದನನೊಡನೆಂದನಾಗ ||459||

ಪರಮ ಶಿಷ್ಯನೆ ನಿನ್ನ ಧುರಕಾನು ಮೆಚ್ಚಿದೆ | ತೆರಳುವೆ ನಿನಗೆ ನಾ ಸೋತೆ ||
ಪೊರಡು ಹಿಂದಕೆ ನಿನ್ನ ಮನ ಬಂದ ತೆರದೊಳು | ಗಿರು ಪೋಪೆನೆನ್ನುತ ರಾಮ ||460||

ಪರಮ ಮುನೀಂದ್ರರ ಜತೆಯೊಳು ಪೊರಮಡಲು | ಚರಣಕೆರಗಿ ಭೀಷ್ಮನಾಗ ||
ತರಳನ ದೋಷವ ಕ್ಷಮಿಸೆಂದು ನೇಮವ | ಧರಿಸಿ ಹಿಂತಿರುಗಲಾಕ್ಷಣದಿ ||461||

ಪರಶುರಾಮನು ಕಾಶಿರಾಜ ಕನ್ನಿಕೆಯನ್ನು | ಕರೆದು ಪೇಳಿದ ನೋಡು ನಾನು ||
ಧುರಗೈದೆ ಬಲು ದಿನ ಭೀಷ್ಮನು ಬಲವಂತ | ಹರಿಯದೆನ್ನೊಳು ಕಾಡುವುದಕೆ ||462||

ಮುಂದೆ ನಿನ್ನಯ ಮನವಿದ್ದಂತೆ ಮಾಡೆಂದು | ಬಂದ ದಾರಿಯ ಪಿಡಿದಾಗ ||
ಚಂದದಿ ಮುನಿಗಳ ಕೂಡಿ ಪೋಗಲು ಬಂದು | ಎಂದಳು ಸತಿ ಭೀಷ್ಮನೊಡನೆ ||463||

ರಾಗ ಕೇತಾರಗೌಳ ಅಷ್ಟತಾಳ

ಸುರನದೀಸುತ ಕೇಳು ವರಿಸದಿರಲು ಮಹ | ಧುರಧೀರನನು ತರುವೆ ||
ಕೊರಳಕೊಯಿಸುವೆನೆನ್ನ ಸ್ವೀಕರಿಸೆನ್ನಲು | ಕೆರಳುತ್ತಲಿಂತೆಂದನು ||464||

ಭ್ರಷ್ಠೆ ನಿನ್ನಯ ಮೋರೆನೋಡಬಾರದು ಯಿಂದೆ | ಥಟ್ಟನೆ ಪೋಗದಿರೆ ||
ಕುಟ್ಟಿ ಕೆನ್ನೆಗೆ ಪಲ್ಲ ಮುರಿಸುವೆನೆನ್ನಲು | ಸಿಟ್ಟಿನೊಳಿಂತೆಂದಳು ||465||

ಪಿಡಿ ಪಿಡಿ ಧನುವನು ನಿಲ್ಲೆನ್ನ ಸರಿಸದಿ | ಧಡಿಗತನವ ತೋರ್ಪೆನು ||
ಬಿಡುವೆನೆ ನೋಡೆಂದು ಶರಗಳ ಕೊಳ್ಳೆಂದು | ನುಡಿಯುತ್ತಲಿರೆ ಭೀಷ್ಮನು ||466||

ಮೊಂಡು ಹೆಂಗಸನು ನೂಕಿರೊ ಬೇಗ ಚಾರರೆ | ಮಂಡೆಗೆ ತಟ್ಟಿ ಬೇಗ ||
ಪುಂಡುತನವ ತೋರ್ಪಳಿವಳನೆಂದೆನಲಾಗ | ಚಂಡಿಯಂದದೊಳಂಬೆಯು  ||467||

ಮಾಡಿದಳಗ್ನಿ ಕುಂಡವನಲ್ಲಿ ದಶದಿಕ್ಕು | ನೋಡಿ ಕೈಮುಗಿವುತಂಬೆ ||
ನೋಡು ನಿನ್ನನು ಕೊಲ್ಲೆ ಪುಟ್ಟಿ ಬರುವೆನೆಂದು | ಗಾಢದಿ ದುಮುಕಿದಳು ||468||

ತರುಣಿ ಭಸ್ಮೀಭೂತವಾಗಲು ಭೀಷ್ಮನು | ಕರಗಿ ತನ್ನಯ ಮನದಿ ||
ಅರರೆ ಸ್ತ್ರೀ ಹತ್ಯವಾಯಿತು ಮುಂದಕೆನ್ನಯ | ಕೊರಳ ಕೊಯಿಸುವಳೆನ್ನುತ ||469||

ಭಾಮಿನಿ

ಸುರನದೀಸುತ ಚಿಂತಿಸುತ್ತಿರೆ |
ಭರದಿ ನಾರದ ಬಂದು ಪೇಳಿದ |
ತರುಣಿ ಮರು ಜನ್ಮದಲಿ ದ್ರುಪದನ ಸತಿಯೊಳುದಿಸುತ್ತ ||
ಬರುವಳೈ ನಾಮದಿ ಶಿಖಂಡಿಯು |
ಧುರಕೆ ಧನುವನೆ ಧರಿಸಿ ನಿನ್ನಯ |
ಸರಿಸಕೈತರೆ | ಬಿಡು ರಣಾಗ್ರವ ಪವಡಿಸಾದಿನದಿ ||470||

ರಾಗ ಭೈರವಿ ಅಷ್ಟತಾಳ

ಪರರೊಡನೆ ನಿನಗಿಲ್ಲ ಮರಣ ಕೇಳೆಲೊ ಭೀಷ್ಮ |
ಮರುಳಾದೆ ನೀನಿಚ್ಛಾಮರಣಿ ನೋಡಯ್ಯ ||
ನರನ ಶರಹತಿ ಯಾವ ಕಾಲದಲಿ ಬರುತಿಹುದೊ |
ಧುರವ ಬಿಡು ನೀನಂದು ಪರಮ ಸುಜ್ಞಾನಿ ||471||

ತರುಣಿ ಹತ್ಯಾ ದೋಷ ನಿನಗಿಲ್ಲವೈ ಮರುಳೆ |
ತನಗೆ ತಾನಾಗಸುವ ತೊರೆದಳು ನೋಡು ||
ತೆರಳು ನೀನೆಂದೆನುತ ಗಮಿಸಲ್ಕೆ ನಾರದನು |
ಭರದಿ | ಪೊರಟಾ ಭೀಷ್ಮ ಬಂದ ಪುರವರಕೆ ||472||

ಮಾತೆಯಂಘ್ರಿಗೆ ನಮಿಸುತರುಹಿ ವತ್ತಾಂತಮೀ |
ಯುತ್ತ ಗಾಂಗೇಯ ಪಟ್ಟಣವ ಶಂಗರಿಸಿ ||
ಭೂತಳೇಶನು ಮತ್ತೆ ಕಾಶಿಪತಿಯನು ಕರೆಸಿ |
ಸೂತ ಮಾಗಧರನ್ನು ಪ್ರೀತಿಯಲಿ ಬರಿಸಿ ||473||

ಹರುಷದಿಂದಲಿ ಕಾಶಿರಾಜ ಕನ್ನಿಕೆಯರನು |
ಕರುಣದಲಿ ಸಹಜನು ವಿಚಿತ್ರವೀರ್ಯನಿಗೆ ||
ಪರಿಣಯವ ಗೈದು ಸಂತೋಷದಿಂದಿಹ ವಾರ್ತೆ |
ಯೊರೆದಿಹೆನು ಜನಮೇಜಯಾಖ್ಯ ನೀ ಕೇಳು ||474||

ರಾಗ ಸೌರಾಷ್ಟ್ರ ತ್ರಿವುಡೆತಾಳ

ವರ ಮಹಾಭಾರತದ ಕಥೆಯನು |
ವಿರಚಿಸಿಹೆ ನಾ ಯಕ್ಷಗಾನದಿ
ಅರಿಯೆ ಯತಿಗಣ ಗೈದೆಕತಿಯನು | ಧರಣಿಸರರು ||475||

ತಿದ್ದಿ ಮೆರೆಸುವರೆನುತ ನಂಬಿಹೆ |
ಬುದ್ಧಿಶಾಲಿಗಳೆಲ್ಲ ಮುದದಲಿ |
ಸಿದ್ಧಿ ಗಣಪತಿ ದೇವನೆನ್ನನು |
ವದ್ಧಿಸುವದು ||476||

ವಿರಚಿಸಿಹೆ ವಿಶ್ವಾವಸಾಬ್ದದಿ |
ಪರಮ ಭಾದ್ರಪದಾಖ್ಯ ಶುಕ್ಲದಿ |
ಮೆರೆವ ಚಾತುರ್ದಶಿ ದಿನದಿ ಮುಗಿ |
ಸಿರುಪೂರ್ಣ ||477||

ಪನಸಪುರದುರಗೇಂದ್ರ ಶಾಸ್ತ್ರಿಯ |
ತನಯ ನರಹರಿಯೆನ್ನನುದಿನ |
ಚಿನುಮಯಾತ್ಮಕ ದೇವ ಕರುಣದ |
ಮನದಿ ಸಲಹೆ ||478||

ಮಂಗಳ ಪದ ಅಷ್ಟತಾಳ

ಮಂಗಳ ಯದುಕುಲತಿಕನಿಗೆ ಜಯ | ಮಂಗಳ ಉದಧಿಯ ಶಯನನಿಗೆ ||
ಮಂಗಳ ನಿಗಮವ ತಂದಿಹ ಮತ್ಸ್ಯಗೆ | ಮಂಗಳ ಕೂರ್ಮಾವತಾರನಿಗೆ |
ಮಂಗಳಂ ಜಯ ಮಂಗಳಂ ||479||

ಮಂಗಳ ವರಹಾವತಾರ ಜಯ ಮಂಗಳ ನರಹರಿ ರೂಪನಿಗೆ ||
ಮಂಗಳ ವಾಮನ ಮೂರುತಿಗೆ ಶುಭ | ಮಂಗಳ ಭಾರ್ಗವ ರಾಮನಿಗೆ ||
ಮಂಗಳಂ ಜಯ ಮಂಗಳಂ ||480||

ಮಂಗಳ ರಶರಥ ರಾಮನಿಗೆ ಜಯ | ಮಂಗಳ ಕಷ್ಣಾವತಾರನಿಗೆ ||
ಮಂಗಳ ಬೌದ್ಧ ಕಲ್ಕ್ಯ ಸ್ವರೂಪಗೆ | ಮಂಗಳ ಲಕ್ಷ್ಮೀ ನರಸಿಂಹಗೆ |
ಮಂಗಳಂ ಜಯ ಮಂಗಳಂ ||481||

 

ಭೀಷ್ಮ ವಿಜಯವೆಂಬ ಪ್ರಸಂಗವು ಮುಗಿಯಿತು