ಎತ್ತಿ ತನ್ನಯ ತೊಡೆಯೊಳಿರಿಸುತ್ತ | ವ್ಯಾಮೋಹದಿಂದಲಿ |
ನೆತ್ತಿಯಾಘ್ರಾಣಿಸುತ ಮುದ್ದಿಸುತ ||
ಇತ್ತ ಕೇಳುವರಿಲ್ಲ ನಿನ್ನನು | ಪೆತ್ತ ತಾಯ್ ಶಶಿರೇಖೆಯೆಂಬಳು |
ಪುತ್ರಿಯಾಗಿಹಳೆನ್ನ ಸಂಜಯ | ಹೋತ್ರವಹನೆಂದೆಂಬರೀಗಳು ||316||

ತರಳೆ ಕೇಳ್ದೌಹಿತ್ರಿ ನೀನೆನಗೆ | ವಿಪಿನಾಂತರಾಳದಿ |
ಚರಿಪ ಕಾಲದಿ ಬಂತೆ ವಿಧಿ ಹೀಗೆ ||
ದುರುಳ ನಿನ್ನಯ ಪಿತನು ನಿನಗೀ | ಪರಿಯ ಕಷ್ಟವನಿತ್ತ ಮಿಗೆ ನೀ |
ತೆರಳಬೇಡಿನ್ನಿಲ್ಲಿ ನಿಲು ನಾ | ಕರುಣದೊಳು ಪೊರೆಯುವೆನು ಕೇಳೌ ||317||

ಭಾಮಿನಿ

ತರಳೆ ಕೇಳ್‌ನಿನ್ನರಿಯು ಭೀಷ್ಮನೊ |
ತೊರೆದ ಸಾಲ್ವನೊ ಪೇಳು ಕೊಲುವೆನು |
ವರಿಸುತಿರ್ಪೆಯೊಳವರೊಳಾರನು ಮಾಜದುಸುರೆನಲು |
ಧುರದೊಳಗೆ ಗೆಲಿದೆನ್ನನೊದನು |
ಸುರನದೀಸುತ ಬಂದು ಸಾಲ್ವನೊ |
ಳಿರಿಸಿರುವೆ ಮನವನ್ನು ಪೂರ್ವದಿ ವೈರಿಯೆಂತೆನಲಿ ||318||

ಪರಪುರುಷರೊಡನೈದೆ ಸಾಲ್ವನು |
ತೊರೆದ ದುಷ್ಕೃತವಿಲ್ಲವವನೊಳು |
ಬರಿದೆ ಯಾರರಿಯೆಂದು ಪೇಳಲಿ ನೀವೆ ಯೋಚಿಪುದು ||
ಸುರನದೀಸುತನೆನ್ನ ತೊರೆದಿರೆ |
ವರಿಸುತಿರ್ದನು ಸಾಲ್ವನವನೊಳು |
ಸರುವಥಾ ತಪ್ಪಿಲ್ಲ ಭೀಷ್ಮನೆ ಮೂಲ ಕಾರಣನು ||319||

ರಾಗ ಪುನ್ನಾಗ ಆದಿತಾಳ

ಬಾಲಕಿ ಎನ್ನಯ ಪ್ರಿಯಸಖನಿಹನು |
ನೀಲಕಂಠನಿಗಂಜದಿರುವ ಭಾರ್ಗವನು ||
ಖೂಳ ಭೂಪಾಲರ ಪೂರ್ವದೊಳವನು |
ಏಳು ಮೂರ್ಬಾರಿಯೊಳ್ತರಿದ ವಿಕ್ರಮನು ||320||

ತಿಳಿಸಲವಗೆ ಭೀಷ್ಮನೆಂಬ ದುರ್ಮದನ |
ಗೆಲಿದು ಲಗ್ನವ ಗೈಸೆ ಪರಶುಧಾರಕನು ||
ಒಲವಿಲಿ ಕರೆಸುವೆ ಎನ್ನ ಸ್ನೇಹಿತನ |
ಕಲಿಯಾದ ತವಪಿತ ಕಡು ಮತಿಹೀನ ||321||

ರಾಗ ಕೇತಾರಗೌಳ ಝಂಪೆತಾಳ

ಅಡಿಗಡಿಗೆ ಬಿಸುಸುಯ್ವುತ | ಮೊಮ್ಮಗಳು |
ಪಿಡಿದೆತ್ತುತಾಧರಿಸುತ ||
ಬಿಡು ಚಿಂತೆಗನಿಂದಿಗೆ | ಎನುತಿರಲು |
ಜಡಜಾಪ್ತನಸ್ತನಾಗೆ ||322||

ಎಸಗಿ ಕಮಗರ್ಳೆಲ್ಲರು | ನಿದ್ರಿಸಲು |
ಕುಶ ಶಯಯದೊಳಗೆಲ್ಲರು ||
ಬಿಸಜಾಪ್ತ ನುಡಿಸಲಾಗ | ಮುನಿಗಡಣ |
ವೆಸಗಿ ಮಜ್ಜನವ ಬೇಗ ||323||

ನಿತ್ಯಕರ್ಮವ ಗೈಯುತ | ಹೋಮಗಳ |
ನರ್ತಿಯೊಳ್ವೆರಣಿಸುತ್ತ ||
ಹೋತ್ರವಹನಾದ್ಯರೆಲ್ಲ | ಕುಳಿತು ನುತಿ |
ಸುತ್ತಿರಲು ಮುನಿಗಳೆಲ್ಲ ||324||

ವಾರ್ಧಕ

ಪರಿವಿಡಿದು ಶತಸೂರ್ಯ ಭಾಸದಿಂ ತೋಷದಿಂ |
ವರ ಜಟಾಮಂಡಲ ವಿರಾಜಿತದಿ ಸೋಜಿಗದಿ |
ಧರಸಿರುವ ಪರಶು ಕಷ್ಣಾಜಿನದ ತನುವಿಗದ ಪೊದಕೆಯೊಳು ವೇಗದಿಂದ ||
ಭರದಿ ದೇದೀಪ್ಯಮಾನದೊಳೈದಿರಲು ಭಯದಿ |
ಪರಶುರಾಮನ ಕಂಡು ಋಷಿಗಳೆಲ್ಲರು ಎದ್ದು |
ಪರಮ ಭಕ್ತಿಯಲಿ ಕುಳ್ಳಿರಿಸುತಾಸನದಿ ಪಾದ್ಯಾದಿಗಳ ಗೈದೆರಗಲು ||325||

ರಾಗ ಮಾರವಿ ಏಕತಾಳ

ಕರಗಳ ಜೋಡಿಸಿ ನಿಂತಿಹ ಮುನಿಗಳ | ಹರುಷದಿ ಕುಳಿರೆನುತ್ತ ||
ಪರಶುಧರ ನೇಮವಿತ್ತು ಮುಂದಿಹ | ತರುಣಿಯ ಕಾಣುತಲೆ ||326||

ವದ್ಧನು ಶೈಖ್ಯಾವತ್ಯನು ತಪದೊಳ | ಗಿರ್ದು ಪ್ರಪಂಚವನು ||
ಶುದ್ಧಜ್ಞಾನದಿ ತೊರೆದೀ ಸತಿಯನು | ಹೊದ್ದಿದ ಮಝ ಭಲರೆ ||327||

ತರಗೆಲೆ ಮೆಲುವಗೆ ಭಕ್ಷ್ಯದೊಳಭಿರುಚಿ | ಸರಿಯಪ್ಪುದೆ ಬರಿದೆ ||
ವರ ಋಷಿಯಾಶ್ರಮಕೀ ವಿಧಿ ಧರ್ಮವೆ | ಪರಿಹಾಸಿಕವರರೆ ||

ಎಲ್ಲಿಂದೀ ಪ್ರಾಚೀನವು ದೊರೆತಿಹು | ದೆಲ್ಲವ ಪೇಳ್ಮುನಿಯೆ ||
ಖುಲ್ಲ ಮನ್ಮಥ ಹರಿಹರರನು ಬಾಧಿಪ | ನೆಲ್ಲರ ಪಾಡೇನು ||328||

ಪರಶುಧರನ ನುಡಿ ಕೇಳುತ ನೇತ್ರದಿ | ಸುರಿಸುತ ಜಲಗಳನು ||
ಪರಮ ಸಖನೆ ಕೇಳೆನುತ ಹೋತ್ರವಹ | ನೊರೆದನು ವಿನಯದಲಿ ||329||

ರಾಗ ಅಹೇರಿ ಆದಿತಾಳ

ಪರಶುರಾಮನೆ ಲಾಲಿಸು | ಸದ್ಗುಣನಿಧೇ | ಪುರಿಪೂರ್ಣ ದಯವಿರಿಸು ||
ಸರಸಿಜದಳನೇತ್ರ | ವರ ಕಮನೀಯ ಗಾತ್ರ |
ಸುರಮುನಿಗಣ ಸ್ತೋತ್ರ | ಶರಣು ಸನ್ನುತಿ ಪಾತ್ರ ||330||

ಕುವರಿಯರ್ಮೂವರನು | ಪೆತ್ತಿಹ ಕಾಶಿ | ಭುವನಪಾಲಕನೆಂಬನು ||
ಭುವನದೊಳೆಲ್ಲರ ಗೆಲಿದಂಗೀಯುವೆನೆನುತ್ತ |
ವಿವರಿಸಿ ಕರೆಸಿದನಂತೆ ಭೂಪಾಲರ ||331||

ಸುರನದೀಸುತ ಭೀಷ್ಮನು | ಬಂದಲ್ಲಿಗೆ | ಧುರದಿ ನಪರ ಗೆಲ್ದನು ||
ತರುಣಿಮಣಿಯರನು ರಥದಲ್ಲಿ ಕರೆದೊಯ್ದು |
ವರಿಸಿರೆಂದನುಜನ ತರವಲ್ಲೆಂದಳು ಅಂಬೆ ||332||

ತಿರುಗಿ ಭೀಷ್ಮನಿಗೊಂದಿಸಿ | ಕೇಳಿಲು ಅಂಬೆ | ಭರಿತ ಭಯದಿ ಪ್ರಾರ್ಥಿಸಿ ||
ಸರಸಿಜಾಕ್ಷಿಯನು ಖತಿಯೊಳಾತ ತೊರೆದನು |
ವಿರಚಿಪೆ ತಪವನಾನೆನುತ ಬಂದಿಹಳೀಕೆ ||333||

ಭಾಮಿನಿ

ಕರುಣನಿಧಿಯವಧರಿಸು ಎನ್ನಯ |
ತರಳೆ ಶಶಿರೇಖೆಯೊಳು ಜನಿಸಿಹ |
ಸರಸಿಜಾಂಬಕಿ ಪೆರಳೆ ಕೇಳವಳೆನಗೆ ಮೊಮ್ಮಗಳು ||
ಕೊರತೆಯಾಂತಿರಲೆಂತು ಸೈರಿಪೆ |
ಸುರನದೀಸುತ ವರಿಸಲೆತ್ನಿಸು |
ಗುರುವರನು ನೀನವಗೆ ವಚನವ ಮಾಡಿ ಮರ್ದಿಪುದು ||334||

ರಾಗ ಸೌರಾಷ್ಟ್ರ ಮಟ್ಟೆತಾಳ

ಕೇಳು ಹೋತ್ರವಹನ ಮುದದೊಳು |
ಹರುಷಗೊಳಿಪೆನಿವಳಮನವ  || ಕೇಳು || ಪಲ್ಲವಿ ||

ಕೇಳು ಭೀಷ್ಮ ಶಿಷ್ಯನೆನಗೆ | ಖೂಳನಲ್ಲ ಸತ್ಯಧರ್ಮ |
ಶೀಲ ಸಾಧು ಸುಗುಣವಂತ | ಕೇಳದಿರನು ಎನ್ನ ಮಾತ |
ಬಾಲಕಿಯ ವರಿಸಿಕೊಂಬನು || ವ್ಯರ್ಥವಾಗಿ |
ಹಾಳುಮಾಡಲಾರನಿವಳನು | ಸಂತೋಷದಿಂದ |
ಪಾಲಿಸುವನು ಧೀರ ಶೂರನು || ಕೇಳು ||335||

ದುರುಳತನವ ಗೈದರವನ | ಪುರವು ಸಹಿತ ಭಸ್ಮಗೈವೆ |
ಪರಿಕಿಸುವುದು ಸಕಲ ಜನರು | ಧರೆಯಮರರ ಕಾರ್ಯ ಹೊರತು ||
ಧರಿಸೆ ಶಸ್ತ್ರವೆನುತ ನೇಮವ || ಗೈದರಾನು |
ಸುರನದಿಯ ಸುತನೊಳ್ಸಮರವ | ರಚಿಸಲ್ಯಾಕೆ |
ಬರಿಯ ಮಾತಿನಿಂದಲೊಪ್ಪುವ ಕೇಳು ||336||

ರಾಗ ಭೈರವಿ ಏಕತಾಳ

ಪರಶುಧರನ ನುಡಿ ಕೇಳಿ | ಸತಿ | ಹರುಷಾಂಬುಧಿಯೊಳಗಾಳಿ ||
ದುರುಳನು ಸುರನದಿಸುತನು | ಶಿರ | ತರಿ ವರಿಸಲಿ ಎನ್ನುವನು ||337||

ಚಲುವೆ ಕೇಳ್ ಶಸ್ತ್ರಾಸ್ತ್ರದೊಳು | ಮಾ | ರ್ಮಲೆಯಲಾರೆ ಪ್ರತಿಜ್ಞೆಗಳು ||
ಫಲಿಸದೆ ಪೋಗುವುದೆನಗೆ | ಮ | ತ್ತಿಳೆಯೊಳು ಹೊಗಳಿಕೆ ಹೇಗೆ ||338||

ಎನಲಾ ಹೋತ್ರವಹನನು | ಎಲೆ | ಚಿನುಮಯ ಕೇಳೈ ನೀನು ||
ವನಿತೆಯ ರಕ್ಷಣೆಗೀಗ | ನೀ ಧನುವನು ಕೊಳ್ಳೈ ಬೇಗ ||339||

ರಾಗ ಕೇತಾರಗೌಳ ಅಷ್ಟತಾಳ

ಅನಿತರೊಳ್ಮುನಿ ಶೈಖ್ಯಾವತ್ಯ ಕೈಮುಗಿಯುತ | ಚಿನುಮಯಾತ್ಮಕನೆ ಕೇಳು ||
ಅನುವರದೊಳು ಭೀಷ್ಮಾಚಾರ್ಯನ ಕೊಲುವುದು | ಘನತೋಷವೆಲ್ಲರಿಗು ||340||

ಹಿಂದೇಕೋವಿಂಶತಿ ಬಾರಿ ಕ್ಷತ್ರಿಯರನ್ನು | ಕೊಂದು ಭೂಸುರಕುಲಕೆ ||
ಮುಂದೆ ದ್ವೇಷಿಗಳಾದ ಖೂಳರ ತರಿಪೆ ನಾ | ನೆಂದು ಭಾಷೆಯಗೈದಿದೆ ||341||

ಮತ್ತೆ ಸಮಸ್ತ ಭೂಕಾಂತರ ಜೈಸ್ಯೇಕ |  ಛತ್ರದೊಳಾಳುತಿಹ ||
ಕ್ಷತ್ರಿ ಶೂರನ ತರಿಯಲು ಚಾಪಗೊಂಬೆನೆ | ನುತ್ತಲು ಶಪಥ ಗೈದೆ ||342||

ನೋಡು ನೋಡೀ ಭೀಷ್ಮ ಸಕಲರ ಗೆಲಿದೀಗ | ರೂಢಿಯೊಳಧಿಕ ವೀರ ||
ಗಾಢದಿ ಸಂಹರಿಸಲು ಧನುಕೊಳ್ಳಯ್ಯ | ಮಾಡಿಹ ಶಪಥದಂತೆ ||343||

ಭಾಮಿನಿ

ಕೇಳಿರೈ ಮುನಿವರರು ತೋಷವ |
ತಾಳಿರೈ ನಾ ಗೆಲುವೆ ಭೀಷ್ಮನ |
ಹೇಳಿ ಕಳುಹುವೆ ನೀಲಕುಂತಳೆಯಳನು ವರಿಪುದಕೆ ||
ಕೇಳದಿರೆ ನೀತಿಯನು ಶಸ್ತ್ರದಿ |
ಸೀಳುವೆನು ತಪ್ಪಿಲ್ಲವೀಕ್ಷಣ |
ಪೇಳಿರೈ ನೀವೆನುತ ಹೊರಡಲು ಪರಶುಧಾರಕನು ||344||

ಕಂದ

ತರುಣಿಯನೊಡಗೊಂಡಾಕ್ಷಣ |
ತೆರಳುತ ಮುನಿ ಗಡಣ ಹಿಂದೆ ಕರಿಪುರಕಾಗಳ್ ||
ವರ ಕುರುಕ್ಷೇತ್ರದೊಳಿಳಿಯುತ |
ಹರುಷದಿ ಕರೆಯುತ ಕೃತೌವ್ರಣಗೆಂದಂ ಭಗುಜಂ ||345||

ವಾರ್ಧಕ

ತೆರಳಿ ಗಾಂಗೇಯನೊಳು ಕಾಶೀಶ ಕುವರಿಯಂ |
ಪರಿಣಯವ ಗೈಸುವನು ಪರಶುಧರನೀ ದಿನಂ |
ಪರಮ ಋಷಿ ಗಡಣದಿಂ ದಿಬ್ಬಣವನೊಡಗೊಂಡು ಕುರುಕ್ಷೇತ್ರಕ್ಕೈತಂದಿಹಂ ||
ತರುಣಿಯಂ ವರಿಸಿ ಪೋಗುವದೆಂದು ಪೇಳಿ ನೀ
ನೊರೆದು ಬಾರೆಂದೆನಲು ಮುನಿ ಕೃತೌವ್ರಣನಾಗ |
ಬರಲು ಗಾಂಗೇಯ ಕುಳ್ಳಿರಿಸಿ ಪೂಜಿಸುತ ಬರವೇನೆನಲು ಪೇಳ್ದನವಗೆ ||346||

ರಾಗ ಶಂಕರಾಭರಣ ಅಷ್ಟತಾಳ

ಕೇಳಯ್ಯ | ಭೀಷ್ಮ | ಕೇಳಯ್ಯ || ಪ ||

ಕೇಳಯ್ಯ ಭಿಷ್ಮ ನಾ ಬಂದ ಕಾರ್ಯವನು |
ಕೇಳು ಸಕಲ ಭೂಮಿಪರ ವರ್ಗವನ್ನು ||
ಕಾಳಗದೊಳು ಗೆದ್ದು ಬಾಲಕಿಯರನು |
ತೋಳಬಲದಿ ತಂದ ಸಾಹಸಿ ನೀನು || ಕೇಳಯ್ಯ ||347||

ತೊರೆದ ನೀನಂಬೆಯನೆಂಬ ವಾರ್ತೆಯನು |
ಪರಶುರಾಮನು ಕೇಳಿ ಕರೆತಂದಾಕೆಯನು ||
ಕುರುಕ್ಷೇತ್ರದೊಳು ಮುನಿ ದಿಬ್ಬಣವನ್ನು |
ನೆರಹಿಕೊಂಡಿಹ ಬಂದು ವರಿಸಯ್ಯ ನೀನು || ಕೇಳಯ್ಯ ||348||

ಗುರು ಮುಖದೊಳು ಕುರುಕ್ಷೇತ್ರದಿ ನಿನಗೆ |
ತರುಣಿಯ ಲಗ್ನ ಗೈಸುವೆನೆಂಬ ಬಗೆಗೆ ||
ಪರಶುರಾಮನು ಹೇಳಿ ಕಳುಹಿದ ಹೀಗೆ |
ಹೊರಡು ಮಂಗಲ ಮಜ್ಜನವ ಗೈದಾಯೆಡೆಗೆ || ಕೇಳಯ್ಯ ||349||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇನಿತು ಪೇಳ್ದುದ ಕೇಳಿ ಭೀಷ್ಮನು | ವನಿತೆಯರ ಸಾಹಸಗಳೆಂತುಟೊ |
ಘನ ಬಲಾಢ್ಯಳು ಸಹಸಿಮಯವೆಂ | ದೆನುತಲೆಂದ ||350||

ಮರಣ ಪರಿಯಂತರವು ಸತಿಯರ | ವರಿಸೆನೆಂಬಾ ವ್ರತವು ಗುರುಗಳಿ |
ಗರಿಕೆಯಾಗಿರೆ ಮತ್ತೆ ಯಾತಕೆ | ಪರಿಕಿಸುವುದು ||352||

ಧರೆಯು ತಲೆ ಕೆಳಗಾಗಿ ಶರಧಿಗ | ಳ್ಭರಿತ ಶುಷ್ಕೀಭೂತವಾಗಲಿ |
ಹರಿಹರಾದ್ಯರು ಬಂದು ಪೇಳ್ದರು | ವರಿಸೆ ಸತಿಯ ||353||

ಇಷ್ಟು ಶಪಥಗಳಿರಲು ಭೀಷ್ಮನೆ | ಥಟ್ಟ ನೀಕ್ಷಣ ಸಮರಕೋಸುಗ |
ತೊಟ್ಟು ಶರಚಾಪವನು ಬಾ ಗುರು | ವಿಷ್ಟದಂತೆ ||354||

ಮಾತೆಯಂಘ್ರಿಗೆ ನಮಿಸಿ ಧನುಶರ | ವಾತ ಕೊಳ್ಳುತ ಸಾಧುವೆನುತಲಿ |
ಖ್ಯಾತ ಕಾಲ್ನಡೆಗೆಯಿಂದ ಗಂಗಾ | ಜಾತ ಪೊರಟ ||355||

ಭಾಮಿನಿ

ಪರಮ ಋಷಿಮಂಡಲದ ಮಧ್ಯದಿ |
ಮೆರೆವ ಯಜ್ಞೇಶ್ವರನ ಪ್ರಭೆಯಲಿ |
ವರ ಜಟಾಮಂಡಲದಿ ಶೋಭಿಪ ಭಾರ್ಗವೇಶ್ವರನ ||
ಪರಿಕಿಸುತಲಭಿನಮಿಸಿ ಭೀಷ್ಮನು |
ಚರಣ ಪ್ರಕ್ಷಾಳನವ ಗೈಯುತ |
ಶಿರದಿ ತೀರ್ಥವ ಧರಿಸಿ ಮಧುಪರ್ಕಾದಿಗಳನಿತ್ತು ||356||

ವರ ರತುನಮಯ ಪೀಠವೀಯುತ |
ಕರವಿಡಿದು ಕುಳ್ಳಿರಿಸಿ ದೈನ್ಯದಿ |
ಶಿರವ ಬಾಗುತ ಗುರು ನಮೋ ಎಂದೆನುತ ನಿಂದಿರಲು ||
ಪರಶುಧರನಾಕ್ಷಣದಿ ಶಿಷ್ಯನ |
ಪರಮ ಭಕ್ತಿಗೆ ಮೆಚ್ಚಿ ಮನದೊಳು |
ಧರೆಯೊಳಗೆ ಎಣೆಯುಂಟೆ ಎನ್ನುತಲಾಗ ಪೇಳಿದನು ||357||

ರಾಗ ಭೈರವಿ ಝಂಪೆತಾಳ

ಎತ್ತಲಿರಿಸಿದೆ ಭೀಷ್ಮ ಬುದ್ಧಿಗಳ ನೀನೀಗ |
ಮತ್ತಕಾಶಿನಿ ಈಕೆಯನ್ಯ ಪುರುಷನೊಳು ||
ಚಿತ್ತವಿಟ್ಟಳ ತಂದು ತೊರೆದ ಕಾರಣವೇನು |
ಮತ್ತಿವಳ ನೀ ಬಿಟ್ಟರಾರು ವರಿಸುವರು ||358||

ವನ ಪುರುಷನಹ ನೀನು ತಂದ ಕಾರಣ ಸಾಲ್ವ |
ತರುಣಿಯನು ಬಿಟ್ಟಿಹನು ವರಿಸು ನೀನವಳ ||
ಸರಸಿಜಾನನೆ ಸತ್ಯವಾಗಿಹಳು ಕೈಪಿಡಿದು |
ಪೊರೆಯೊ ಸತಿ ಜನವನುಯೆನ್ನ ನೇಮದಲಿ ||359||

ಮೊದಲೆ ಪೂರ್ವಾಪರವ ಯೋಚಿಸದೆ ಕಾರ್ಯವನು |
ಚದುರನಾಗಿಹ ನೀನು ಗೈದು ಈ ತೆರದಿ ||
ಸುದತಿಗಪಮಾನವನು ಮಾಡಿರ್ದ ಕಾರಣದಿ |
ಮುದದೊಳೀಕೆಯ ಪೊಂದಿ ಸುಖವ ಪಡೆಯೆನಲು ||360||

ಸಾಂಗತ್ಯ ರೂಪಕತಾಳ

ಗುರುವರ್ಯ ಕೇಳೀಕೆ ಸಾಲ್ವನನೊಪ್ಪಿದ |
ಪರಿಯನು ತಿಳಿಯದೆ ನಾನು ||
ಕರೆತಂದೆ ಸಕಲರ ಗೆಲಿದೆನ್ನ ತಮ್ಮಗೆ |
ಪರಿಣಯವನು ಮಾಳ್ಪೆನೆನುತ ||361||

ಅರಿತೆನು ಕಡೆಗೆ ಸಾಲ್ವನಿಗೆ ಸೋತಿಹಳೆಂದು |
ತೊರೆದ ನಾ ಸರಿಯಲ್ಲವೆಂದು ||
ತಿರುಗೆನ್ನ ಸಹಜಾತನಿಗು ಬೇಡವೆನ್ನುತ |
ಹೊರಡಿಸಿದೆನು ಪುರದಿಂದ ||362||

ರಾಗ ಕೇದಾರಗೌಳ ಅಷ್ಟತಾಳ

ತಮ್ಮನಿಗಾದರು ಪರನಾರಿಯರ ನೀನು | ಹೆಮ್ಮೆಯೋಳ್ಕರವಿಡಿದು ||
ದುರ್ಮಾರ್ಗತನದಿಂದ ತರುವುದು ನಿನ್ನಯ | ಧರ್ಮವೇ ವರಿಸವಳ ||363||

ಸಾಂಗತ್ಯ ರೂಪಕತಾಳ

ತಂದೆಗೋಸುಗ ಬ್ರಹ್ಮಚರ್ಯದೊಳಿಹ ಭೀಷ್ಮ |
ನೆಂದಿಗಾದರು ದುರ‌್ಮಾರ್ಗದಲಿ ||
ನಿಂದಿತವಹ ಕಾರ್ಯಗೈವನೆ ಗುರುರಾಯ |
ಸಂದೇಹವೇಕೆ ಮತ್ತಿನ್ನು ||364||

ರಾಗ ಕೇದಾರಗೌಳ ಅಷ್ಟತಾಳ

ತೆರಳಿ ಸ್ವಯಂವರ ಕಾಲದಿ ತಂದಿಹೆ | ವರಿಸೆನ್ನ ಮಾತಿನಂತೆ ||
ಗುರುವಿನ ನೇಮಗಳನು ಮೀರಿ ನಡೆಯಲು | ಪರಮ ಪಾತಕ ಬಪ್ಪುದು ||365||

ಸಾಂಗತ್ಯ ರೂಪಕತಾಳ

ಒಂದೇ ಬುದ್ಧಿಯು ವ್ರತ ಒಂದೇ ಮಾರ್ಗವು ತೊರೆ |
ದಿಂದಿಗು ನಡೆವವ ನಾನಲ್ಲ |
ತಂದೆಗೋಸುಗ ಗೈದ ಶಪಥವ ನಡೆಸಲು |
ಮುಂದೇನು ಪಾತಕವಿಲ್ಲ ||366||

ರಾಗ ಕೇದಾರಗೌಳ ಅಷ್ಟತಾಳ

ಗುರುವಾಕ್ಯೋಲ್ಲಂಘನ ದೋಷವು ನಿನ್ನನು | ಸರಿಪುದು ಬೆಂಬಿಡದೆ ||
ತರುಣಿ ಸಂತಾಪದ ದೆಸೆಯಿಂದ ಸಂಪತ್ತು | ಹರಿದು ಪೋಪುದು ದಿಟವು ||367||

ಸಾಂಗತ್ಯ ರೂಪಕತಾ

ಬೆದರುವವ ನಾನಲ್ಲ ಭಯ ಕೋಪಗಳಿಗಿನ್ನು |
ನದಿಸುತಗಿಲ್ಲ ವಿತ್ತಾಸೆ ||
ಮದದಿ ಕಾಮಕೆ ಪಾತ್ರನಲ್ಲ ಕ್ಷತ್ರಿಯ ಧರ್ಮ |
ಕೊದಗಿ ಗೈದಿಹ ಶಪಥಬಿಡೆನು ||368||

ರಾಗ ಕೇದಾರಗೌಳ ಅಷ್ಟತಾಳ

ಎನ್ನಯ ಮಾತನು ನಡೆಸದಿದ್ದರೆ ನಾನು | ನಿನ್ನನು ಸಂಹರಿಸಿ ||
ಉನ್ನತವಹ ರಾಜ್ಯ ಸಹಿತ ಭಸ್ಮೀಕತ | ವನ್ನು ಗೈಯುವೆ ನೋಡೆಲೊ ||369||

ಸಾಂಗತ್ಯ ರೂಪಕತಾಳ

ಗುರುವರ್ಯ ಸಕಲ ವಿದ್ಯೆಗಳನು ದಯದಿಂದ |
ಕರುಣಿಸಿ ಶಿಷ್ಯನಾಗಿರುವ ||
ಚರಣ ಸೇವಕನೊಳು ಧುರಕಾಂಕ್ಷೆಗೈವುದು |
ಸರಿ ಬಂತೆ ಮನಕೆ ಈ ಕ್ರಮವು ||370||

ರಾಗ ಮಾರವಿ ಏಕತಾಳ

ಗುರು ಭಾವನೆಗಳಿರೆ ವರಿಸೀಕೆಯೆ ನೀ | ಪರಿಪಾಲಿಪೆ ನಾನು ||
ತೊರೆದರೆ ವನಿತೆಗೆ ಗತಿಯಿಲ್ಲದೆ ಬಹು | ಕೊರತೆಯು ಘಟಿಸುವುದು ||371||

ರಾಗ ಭೈರವಿ ಝಂಪೆತಾಳ

ಗುರುಗಳಾದರು ಗರ್ವದಿಂದ ಕಾರ್ಯಾಕಾರ್ಯ |
ವರಿಯದಾಜ್ಞೆಯ ಗೈಯ್ಯೆ ಶಿಷ್ಯನಾದವನು ||
ತೊರೆಯುವುದು ನೇಮವನು ಸರಿಯೆಂದೆನುತ ಸರ್ವ |
ರರಿತಿಹರು ಸದ್ಧರ್ಮ ನೀತಿ ಶಾಸ್ತ್ರವನು ||372||

ರಾಗ ಮಾರವಿ ಏಕತಾಳ

ಗರ್ವೋದ್ರೇಕದಿ ಮಾರ್ಗವ ತಪ್ಪುವ | ಗುರುವಿಗೆ ನೀ ಪೇಳ್ದೆ ||
ಪರ ತತ್ವವು ನಾ ನಿಜವಹ ನೀತಿಯ | ನರುಹಿದೆ ಕೇಳೆಲವೊ ||373||

ರಾಗ ಭೈರವಿ ಝಂಪೆತಾಳ

ತಡೆದೆ ನಾ ಗುರುವೆಂದು ಬಹುಮಾನವಿಟ್ಟಿಹೆನು |
ಒಡನೆ ಗುರುವಿನ ನೀತಿ ತಪ್ಪಿದಿರಿ ನೀವು ||
ಪಿಡಿದ ಛಲದಂದದಿಂ ವರಿೆನೀಕೆಯ ಗುರುವೆ |
ಪೊಡವಿ ತಲೆ ಕೆಳಗಾಗೆ ಮಡನುಸುರಲೀಗ ||374||