ರಾಗ ಭೈರವಿ ಅಷ್ಟತಾಳ

ಕಿಡಿಗೆದರುತ ಭೀಷ್ಮನು | ಸಾಲ್ವನ ಕಂಡು | ಘುಡುಘುಡಿಸುತಲೆಂದನು ||
ಧಡಿಗ ಖಳಾಧಮ ತೊಡುತೊಡು ಬಾಣವ | ನೊಡನೆ ತೋರುವೆ ಶೌರ್ಯವ ||147||

ಎನೆ ಕೋಪದೊಳು ಸಾಲ್ವನು | ನೆರೆದಿರುವಂಥ | ಜನಪರು ಮಣಿದರೇನು ||
ರಣದಿ ಜೈಸುತ ನಿನ್ನ ರಥದೊಳಿರುವ ಸ್ತ್ರೀಯ | ರನು ಒಯ್ಯದಿರೆನೆಂದನು ||148||

ಸುರನದಿ ಸುಕುಮಾರನು | ಕೀಲಿಸುತಾಗ | ಭರದೊಳೊಂದಸ್ತ್ರವನು ||
ದುರುಳಗೆಸೆದು ಧನು ಮುರಿದು ವೇಗದಿ ಬಂದು | ಸೆರೆ ಪಿಡಿಯುತಲೆಂದನು ||149||

ಸಾಂಗತ್ಯ ರೂಪಕತಾಳ

ದುರುಳ ಸಾಲ್ವನೆ ಎನ್ನಸರಿಸಕೆ ನಿಂತೀಗ |
ಸೆರೆಯ ಸಿಕ್ಕಿದ ವೀರ ನಿನ್ನ ||
ಹರಣವನುಳುಹಿಕೊ ಪೋಗೆಂದು ಭೀಷ್ಮನು |
ಚರಣದೊಳೊದೆದು ನೂಕಿದನು ||150||

ಶಿರವ ತಗ್ಗಿಸಿಕೊಂಡು ಖಳನಂತರಂಗದಿ |
ಪರಮಕ್ರೋಧವ ತಾಳುತಾಗ ||
ತಿರುಗಿ ತನ್ನಯ ಪುರಕೈದನಿತ್ತಲು ಸರ್ವ |
ಧರಣಿಪಾಲರು ಕೊಂಡಾಡಿದರು ||151||

ಹರುಷದಿ ಗಾಂಗೇಯ ಕಾಶೀಶನೊಡನೆಂದ |
ಸರಸಿಜಾಕ್ಷಿಯರೊಡಗೊಂಡು ||
ಕರಿಪುರಕೈದುವೆ ಪರಿಣಯ ಕಾಲಕೆ |
ಕರೆಸುವೆ ಬಹುದಾಗ ನೀನು ||152||

ಧರಣಿಪ ಕಾಳಿಂಗ ಗಾಂಧಾರ ಮಾದ್ರಾದಿ |
ಅರಸರೆ ನಿಮ್ಮಯ ಪುರಕೆ ||
ತೆರಳಿರೆಂದುಸುರುತ್ತ ರಥವನು ತಿರುಗಿಸಿ |
ಕರಿಪುರಕೈದಾಗ ಭರದಿ ||153||

ಹರುಷದಿ ಗಾಂಗೇಯ ಮಾತೆಯ ಚರಣಕ್ಕೆ |
ಎರಗುತ್ತ ಸುಂದರಾಂಗಿಯರ ||
ಧರಣಿಪರನು ಗೆದ್ದುತಂದಿಹೆನನುಜಗೆ |
ಪರಿಣಯ ಗೈವೆನೆಂದೆನೆಲು ||154||

ರಾಗ ಮಧುಮಾಧವಿ ತ್ರಿವುಡೆತಾಳ

ಪರಮಸಾಹಸಿ ನಿನ್ನ ಪೋಲುವ | ರಿರುವರೇ ಮೂರ್ಲೋಕದಲಿ ಸುರ ||
ನರ ಉರಗ ಮುಖ್ಯರಲಿ ಕಾಣೆನು | ಹರಿಯೆ ರಕ್ಷಿಸಲನುದಿನ ||155||

ಪರರಿಗುಪಕರಿಸುವರೆ ತನ್ನಯ | ಪರಮ ಸೌಖ್ಯವತೊರೆದೆ ಕುವರನ ||
ಶಿರವನಾಘ್ರಾಣಿಸುತಲೆಂದಳು | ಮೆರೆವೆ ಕೀರ್ತಿಯೊಳ್ ಲೋಕದಿ ||156||

ಹರುಷದೊಳು ಗಾಂಗೇಯ ಮಂತ್ರಿಯ | ಕರೆದು ಪೇಳ್ದ ವಿಚಿತ್ರವೀರ್ಯಗೆ ||
ಪರಿಣಯ ಗೈಯುವೆನು ತ್ವರಿತದಿ | ಪುರವಲಂಕತವಾಗಲಿ ||157||

ಎನುತಲಾಜ್ಞೆಯನಿತ್ತು ಕಾಶೀ | ಜನಪ ನಂದನೆಯರನು ಕರೆಯುತ ||
ವಿನಯದಿಂ ಪೇಳಿದನು ಗಂಗಾ | ತನಯನವರೊಳು ಮೋದದಿ ||158||

ರಾಗ ಕಲ್ಯಾಣಿ ಅಷ್ಟತಾಳ

ಸರಸಿಜಾಂಬಕಿಯರೆ ಕೇಳಿ | ಶಶಿ | ಪರಂಪರೆಯೊಳು ರಾಜ್ಯವಾಳಿ ||
ದೊರೆಗಳೇರಿದ ಸಿಂಹವಿಷ್ಟರವೀಗೆಮ್ಮ |
ಕಿರಿಯ ವಿಚಿತ್ರವೀರ್ಯಕನೇರಿಯಾಳುವ ||159||

ಕುರುಧರೆಯನು ಪಾಲಿಸುವನು | ಸಾಧು | ಪರಮಸುಂದರ ರೂಪಾನ್ವಿತನು ||
ಹರುಷದೊಳಾತನ ವರಿಸಿ ಮೂವರು ನಮ |
ಗುರುತರಾನಂದವ ಗೈಯ್ಯಲೋಸುಗತಂದೆ ||160||

ಶಶಿಕುಲದಭ್ಯುದಯಗಳು | ನಿಮ್ಮ | ದೆಸೆಯಿಂದಾಗುವುದು ನಿಶ್ಚಯವು ||
ಕುಶಲದೊಳಿದಕೆ ಸಮ್ಮತಿಸಬೇಕೆನಲಂಬೆ |
ವಸುಧೆಯೊಳೆರಗುತ್ತಲೆಂದಳು ದೈನ್ಯದಿ ||161||

ರಾಗ ಬೇಗಡೆ ಏಕತಾಳ

ಕೇಳು ಭೀಷ್ಮಾಚಾರ್ಯ ಬಿನ್ನಪವ | ಸತ್ಕೀರ್ತಿ ಸದ್ಗುಣ |
ಶೀಲಪೇಳುವೆನೆನ್ನ ಮನದೊಲವ ||
ಭೂಲಲಾಮರ ಜೈಸಿ ಮೆರೆದಿಹ | ತೋಳಿನೊಳು ಬಿಗಿದಪ್ಪಿ ಮನ್ಮಥ |
ಕೇಳಿಯೊಳು ನೀನೆನ್ನ ಮನವನು | ಕಾಲಕಾಲಕು ತಪ್ತಿಪಡಿಸದೆ ||162||

ಅನುಜನಾದ ವಿಚಿತ್ರವೀರ್ಯನನು |
ವರಿಸೆಂಬ ನುಡಿಗಳು |
ಘನವು ಪೌರುಷದಗ್ಗಳಿಕೆಯೇನು ||
ಜನಪಕುಲ ಬಿರುದಲ್ಲ ಪಣದಲಿ | ವನಿತೆಯರ ಪಡೆದನ್ಯ ವರನಿಂ |
ಗನುಕರಿಸಿದವರುಂಟೆ ಪೂರ್ವದೊ | ಳೆನಗೆ ಪೇಳೆನಲಾಗಲೆಂದನು ||163||

ಸರಸಿಜಾನನ ಕೇಳು ಪೇಳುವೆನು | ಪಿತನಾದ ಶಂತನು |
ಧರಣಿಪಾಲಗೆ ಸತ್ಯವತಿಯಳನು ||
ತರುವ ಕಾಲದೊಳವಳ ಪಿತ ಕಂ | ಧರನ ಬಳಿಯೊಳು ಗೈದ ಶಪಥವ |
ಮರಣಪರಿಯಂತರವು ಸತಿಯರ | ನೊರಿಸೆ ರಾಜ್ಯವನಾಳೆನೆನ್ನುತ ||164||

ಸುರನರೋರಗ ಸಿದ್ಧಸಾಧ್ಯರಿಗೆ | ಗಂಧರ್ವಕಿನ್ನರ |
ಗರುಡ ಗುಹ್ಯಕ ಚಾರಣಾದ್ಯರಿಗೆ ||
ನಿರುತ ನಾನೆಸಗಿರುವ ಶಪಥಗ | ಳರಿಕೆಯಾಗಿದೆ ಬ್ರಹ್ಮಚರ್ಯದೊ |
ಳಿರುವೆ ಸತಿಯರನೊರಿಸೆನೆಂದಿಗು | ಪರಮ ಸಿಂಹಾಸನವನೇರೆನು ||165||

ರಾಗ ತುಜಾವಂತು ಝಂಪೆತಾಳ

ಕರುಣನಿಧಿಯವಧರಿಸು ಸರ್ವಜ್ಞ ನೀನು |
ಚರಣ ಚಿತ್ತಂಗಳಂ ಗೈಯ್ಯೋ ಪ್ರಾರ್ಥಿಪೆನು ||
ಧರಣಿಪತಿ ಸಾಲ್ವನೊಳು ಪೂರ್ವದಲಿ ನಾನು |
ಭರಿತ ಮನವಿಟ್ಟವನ ಮೆಚ್ಚಿ ಒಲಿದಿಹೆನು ||166||

ಎನ್ನ ಪಿತನಿಗೆ ತಿಳಿಯದಂತೆ ಸಾಲ್ವನೊಳು |
ನಿನ್ನ ವರಿಸುವೆನೆಂದು ಒಪ್ಪಿಹೆನು ಕೇಳು ||
ಮನ್ಮನದೊಳೊಲಿಸಿದನ ಬಿಡಬಹುದೆ ಪೇಳು |
ನಿನ್ನೊಡನೆ ನಾನಾಡಲೆಂತೀ ಕಾಲದೊಳು ||167||

ಪರಮ ಧಾರ್ಮಿಕ ಸತ್ಯಸಂಧ ಕುರುಕುಲದಿ |
ಕರುಣಿ ನೀ ಜನಿಸಿರ್ಪೆ ನೀತಿ ಸದ್ಗುಣದಿ ||
ಅರಿತಿರುವೆ ಷಟ್ ಶಾಸ್ತ್ರವರ ಪಾರಂಗತದಿ |
ಪರರಪೇಕ್ಷೆಯೊಳಿಹಳ ತರಬಹುದೆ ಧುರದಿ ||168||

ವಾರ್ಧಕ

ಎಂದ ನುಡಿಯಂ ಕೇಳ್ದು ಗಾಂಗೇಯ ನಸುನಗುತೆ |
ಸುಂದರಾಂಗಿಯೆ ನಿನ್ನ ಮನದ ಸಂಕಲ್ಪಮೆನ |
ಗಂದು ತಿಳಿದರೆ ತರೆನು ನಡೆದ ಕಾರ್ಯಕ್ಕಿನ್ನು ಮುಂದೇನ ಮಾಳ್ಪುದೆನಲು ||
ಚಂದಿರಾನ್ವಯ ದೀಪ ಕೇಳು ದಯದಿಂ ಸತ್ಯ |
ಸಂಧ ನೀನೆಂಬುದಂ ಅರಿತಿರ್ಪೆ ನೀನೆನ್ನ |
ಯೆಂದಿಗೈತಹಳೆನುತ ಮಾರ್ಗವಂ ನೋಡುತಿಹ ಸಾಲ್ವನಲ್ಲಿಗೆ ಕಳುಹಿಸು ||169||

ರಾಗ ಕೇತಾರಗೌಳ ಅಷ್ಟತಾಳ

ಎನುತಸುರಿದ ಮಾತ ಲಾಲಿಸಿ ಶಂತನ | ತನಯನು ಯೋಚಿಸುತ ||
ಜನಪಕುಮಾರಿಯು ಖಳಗೆ ಮೆಚ್ಚಿದಳೆಂತು | ಹಣೆಯಲಿಪಿಯು ಭಲರೆ ||170||

ಚಲುವಿಕೆ ಯೌವನದಿಂದ ಶೋಭಿಪಳೀಕೆ | ಕಳುಹಲೆಂತೋರ್ವಳನು |
ಫಲವನೀಯ ಬಲ್ಲ ಭೀಷ್ಮನೇನ್ಗೈದನೆಂ | ದಿಳೆಯೊಳು ನಿಂದಿಪರು ||171||

ಅರಿತೋರ‌್ವ ವದ್ಧ ಭೂಸುರನನು ಕರೆದೆಂದ | ಧರಣಿಪಾತ್ಮಜೆಯಿವಳು ||
ವರಿಸೆ ಸಾಲ್ವನ ಬಳಿಗೈವಳು ಜತೆಯಲಿ | ತೆರಳುವದಯ್ಯ ನೀವು ||172||

ಎಂದಾಜ್ಞಾಪಿಸುತಲಿ ಸುದತಿಯ ಕಳುಹಲಾ | ನಂದದಿ ದ್ವಿಜನೊಡನೆ ||
ಮುಂದರಿಯುತ ಕರಿಪುರವನ್ನು ಪೊರಮಡ | ಲೆಂದನು ಭೂಸುರನು ||173||

ರಾಗ ಶಂಕರಾಭರಣ ತ್ರಿವುಡೆತಾಳ

ನಡೆಯಲಾರೆನು ಕೇಳೆ ಮಾನಿನಿ | ನಡುಗುತಿವೆ ಕೈಕಾಲ್ಗಳು ||
ಕಡು ಮದಾಂಧದ ಪ್ರಾಯ ಕೊಬ್ಬಿದ | ಹುಡುಗಿ ನೀನು ||174||

ವರುಷವೆಂಭತ್ತೆನಗೆ ಕ್ಷಣದಲಿ | ಶಿರವು ಕಂಪಿಸುತಿರ್ಪುದು ||
ಬರುವದುಬ್ಬಸದಡಿಯಿಡಲು ಕೇ | ಳ್ತೆರಳು ಮೆಲ್ಲನೆಯೊಬ್ಬಳೆ ||175||

ಮೀರಲಾರೆನು ಭೀಷ್ಮನಾಜ್ಞೆಯ | ಸಾರಿ ಜತೆಯಲಿ ಬಂದೆನು ||
ನಾರಿ ಕೈಪಿಡಿದೀಗ ನಡೆಸಲು | ಬರುವೆನೆನಲು ||176||

ಮರುಳೆ ಭೂಸುರ ಪರರಕೈಯನು | ಪರಮ ಪತಿವ್ರತೆ ಪಿಡಿಯೆನು ||
ಧರಣಿಗಧಿಪತಿ ಸಾಲ್ವನಲ್ಲದೆ | ಪರರನೋಡೆನು ನೇತ್ರದಿ ||177||

ಬಿಡು ಬಿಡೆಲೆ ಬಡಿವಾರ ಕೊಬ್ಬಿನ | ಹುಡುಗಿ ಕರಿಪುರಕ್ಯಾತಕೆ ||
ಸಡಗರದಿ ನೀ ಬಂದೆ ಕೈಪಿಡಿ | ದೊಡನೆ ನಡೆಸು ||178||

ಅಲ್ಲಿಗಲ್ಲಿಗೆ ಕುಳಿತು ಏಳುತ | ಮೆಲ್ಲ ನೀನೈತಾರೆಲೊ ||
ಕಳ್ಳ ಬ್ರಾಹ್ಮಣ ಕರವ ಪಿಡಿಯೆನು | ಬಲ್ಲೆ ನಿನ್ನಯ ಠಕ್ಕನು ||179||

ಚದುರೆ ಕೇಳೆಲೆ ಕೋಲನಾದರು | ಮುದದಿ ಪಿಡಿಯುತಲೆನ್ನನು ||
ಸುದತಿ ನಡೆಸದಿರಲ್ಕೆ ಮುಂದಕೆ | ಪದವನಿಡೆನು ||180||

ಭಾಮಿನಿ

ಧರಣಿಸುರನಿಂತೆನಲಿಕಂಬೆಯು |
ಬರಿದೆ ಹೊತ್ತನು ಕಳೆಯ ಬೇಡೈ |
ಭರಿತ ದ್ರವ್ಯವ ಕೊಡುವೆ ಸಾಲ್ವನ ಬಳಿಗೆ ತೆರಳಿದರೆ ||
ತರುಣಿ ಭಾಪುರೆ ಬರುವೆ ನಡೆನಡೆ |
ಕರುಣಿಸೆಲೆ ಧನವೊಂದು ಲಕ್ಷವ |
ಪರಮ ಮಂಗಳವೆನುತ ದಾರಿಯ ಪಿಡಿದು ವೇಗದಲಿ ||181||

ರಾಗ ಕೇತಾರಗೌಳ ಝಂಪೆತಾಳ

ಭರದಿ ಸಾಲ್ವನ ಪುರಿಯನು | ಕಂಡಿವರು | ಬರುತ ಬಾಗಿಲ ಚರನನು ||
ಕರೆದು ಪೇಳಿದ ವಿಪ್ರನು | ದೊರೆ ಸಮಯ | ದೊರಕುವದೆ ಈಗೆಂದನು ||182||

ಎನೆ ಚರನು ವಿಪ್ರನನ್ನು | ಹೊಂದಿರ್ಪ | ವನಿತೆಯಳ ಚಲ್ವಿಕೆಯನು ||
ಘನವೇಗ ಪರಿಕಿಸುತಲಿ | ನಪ ಕುವರಿ | ಎನುತಲರಿತನು ಮನದಲಿ ||183||

ಅರರೆ ಮುದಿಹಾರ್ವ ನಿಂತು | ನಿನಗಿವಳು | ದೊರೆತಿಪ್ಪ ಪರಿಯದೆಂತು ||
ತರುಣಿಯಾಭರಣಂಗಳ | ಅಪಹರಿಸೆ | ಕರೆತಂದೆ ನೀನು ದುರುಳ ||184||

ಎಂದ ನುಡಿಗಾ ವಿಭುದನು | ಚಾರ ಕೇ | ಳಿಂದು ನಿಮ್ಮರಸನನ್ನು ||
ಸುಂದರಾಂಗಿಯು ಕಾಣಲು | ಎನ್ನೊಡನೆ | ಬಂದಿಹಳು ನಪ ತನಯಳು ||185||

ಖಳರಾಯಗರುಹು ನೀನು | ನಡೆಹೊತ್ತು | ಕಳೆಯಬೇಡೆನೆ ದೂತನು ||
ತಿಳಿದು ಪೇಳುವೆನೆನ್ನುತ | ತ್ವರಿತದಿಂ | ದೊಳಗೈದಿ ದೊರೆಗೆರಗುತ ||186||

ಆರ್ಯ ಸವಾಯ್

ಸಲಾಮು ತೆಕ್ಕೊ ಸಾಲ್ವ | ಮಹಾ ಖಳ | ಸಲಾಮು ವೈರಿಕುಠಾರ |
ಸಲಾಮು ಮಾರಾಕಾರಾ |  ಗುಣಾಕರ | ಸಲಾಮು ಧೀರ ಪ್ರಚೂರ ||187||

ಹೊರ ಬಾಗಿಲಿನೋಳ್ಮೋಜಿನ ಹುಡುಗಿಯು | ಮಿರಿಮಿರಿ ಮಿಂಚುತೆ ಠೀಕು ||
ಗೊರಗೊರ ಕೆಮ್ಮುವ ಮುದಿ ಹಾರ್ವಯ್ಯನ | ಕರಕೊಂಡೈತಂದಿಹಳು ||188||

ರಾಗ ನಾದನಾಮಕ್ರಿಯೆ ಅಷ್ಟತಾಳ

ಚರನೆಂದ ನುಡಿಕೇಳಿ ಸಾಲ್ವನು | ಬೇಗ | ತರುಣಿಯ ಕರೆ ಒಳಗೆಂದನು ||
ತ್ವರಿತದಿ ಬಂದಾಗ ದೂತನು | ಸುಂ | ದರಿ ಬುಧರೊಳಪೋಗಿರೆಂದನು ||189||

ಚಂದದಿ ಭೂಸುರನೊಡಗೊಂಡು | ಒಳ | ಬಂದಾಗ ಖಳಪತಿಯನು ಕಂಡು ||
ಚಂದ್ರವದನೆಯಭಿನಮಿಸುತ್ತ | ಮೋಹ | ದಿಂದ ನೋಡುತ್ತಿರೆ ಕಾಣುತ್ತ ||190||

ಧರಣಿದೇವಗೆ ಪೀಠವಿತ್ತನು | ಖಳನು | ತರುಣಿಯ ನೋಡುತ್ತಲೆಂದನು ||
ಬರವೇನು ಕಾರಣವೆನಲಾಗ | ಸರ | ಸಿರುಹಲೋಚನೆ ಪೇಳ್ದಳತಿ ಬೇಗ ||191||

ರಾಗ ತುಜಾವಂತು ಝಂಪೆತಾಳ

ಕೇಳಯ್ಯ ಖಳರಾಯ ಪೂರ್ವದಲಿ ನಾನು |
ಪೇಳಿದಂದದಿ ನಿನ್ನ ಬಯಸಿ ಬಂದಿಹೆನು ||
ಗೋಳುಗೊಂಡುದು ಮನವು ವರಿಸೆನ್ನ ನೀನು |
ಕೇಳಿಕೊಂಬೆನು ನಿನ್ನ ದೈನ್ಯದಲಿ ನಾನು ||192||

ರಾಗ ಸಂವಾದ ಅಷ್ಟತಾಳ

ಇಂಥಾ ಮಾತ್ಯಾಕೆಂಬೆ ಬರಿದೆ ಸುಂದರಾಂಗಿ ನೀನು |
ಪಿಂತೆ ಭೀಷ್ಮನೊಡನೆ ಪೋದೆ ಬಲ್ಲೆ ಬಲ್ಲೆ ನಾನು ||
ಪಂಥದೊಳೆಲ್ಲರ ಗೆಲ್ದು ನಿಮ್ಮನೊಯ್ದನವನು |
ಎಂತು ಬಂದು ಎನ್ನ ಬಯಸುತೀರ್ಪೆ ಈಗ ನೀನು ||193||

ರಾಗ ತುಜಾವಂತು ಝಂಪೆತಾಳ

ಹಿಂದೆ ನಾ ಭೀಷ್ಮನೊಳು ಮನವಿಡದೆ ನಿನ್ನ |
ಸುಂದರತ್ವಕೆ ಮೆಚ್ಚಿ ಕೊಂಡಿರ್ಪಳೆನ್ನ ||
ಮಂದಮತಿಯಪಹರಿಸಿ ಕೊಂಡೊಯ್ದನವನು ||
ಬಂದಿಹೆನು ಬಿಡದೆನ್ನ ಪರಿಗ್ರಹಿಸು ನೀನು ||194||

ರಾಗ ಸಂವಾದ ಅಷ್ಟತಾಳ

ತರುಣಿ ಕೇಳೆ ನಿನ್ನ ಮನಗಳಿರಲಿ ಪೋಗಲಿನ್ನು |
ಪರಮ ಸಹಸಿ ಭೀಷ್ಮ ನಾಮ ಸ್ಮರಿಸೆ ಹದಯವಿನ್ನು ||
ಕೊರೆಯುತಿಹುದು ಬೇಡ ಪೋಗು ತಿರುಗಿ ಬೇಗ ನೀನು |
ಧರೆಯೊಳವನ ಪೋಲ್ವರುಂಟೆ ಭೀತಿಗೊಂಬೆ ನಾನು ||195||

ರಾಗ ತುಜಾವಂತು ಝಂಪೆತಾಳ

ಅಸುರೇಶ ಕೇಳಯ್ಯ ಶಂತಪುತ್ರನನು |
ಕುಶಲದಿಂದೊಡಬಡಿಸಿ ನೀತಿ ಮಾರ್ಗವನು ||
ಉಸುರಿ ನೇಮವಗೊಂಡು ಬಂದಿರ್ಪೆ ನಾನು |
ವ್ಯಸನವನು ತ್ಯಜಿಸೀಗ ವರಿಸಯ್ಯ ನೀನು ||196||

ರಾಗ ಸಂವಾದ ಅಷ್ಟತಾಳ

ಬೇಡ ಬೇಡ ನಂಬಲಾರೆ ವರಿಪನಲ್ಲ ನಾನು |
ಮೂಢ ಮಾತಿನಿಂದ ಕಣ್ಣಕಟ್ಟಬೇಡ ನೀನು ||
ಗಾಢಗಾರ್ತಿ ಸುಮ್ಮನೆ ಮಾತಾಡಬೇಡ ಇನ್ನು |
ಖೋಡಿತನವ ಗೈಯೈ ಶಿಕ್ಷೆಯನುಭವಿಸುವೆ ನೀನು ||197||

ಕಂದ

ಖಳನಿಂತೆಂದುದ ಕೇಳುತ |
ಲಲನೆಯು ನೇತ್ರದೊಳು ಜಲವ ಸುರಿಸುತಲಿರಲಾ ||
ಛಲಯುತ ಭೂಸುರವರ್ಯನು |
ಇಳೆಯೊಳ್ ಭೀಷ್ಮನ ಬೆದರಿಕೆ ಕೇಳ್ದವಗೆಂದ ||198||

ರಾಗ ಸಾಂಗತ್ಯ ರೂಪಕತಾಳ

ಅಸುರೇಶ ಕೇಳಯ್ಯ ಎನ್ನಯ ಜೊತೆಯೊಳು |
ಬಿಸಜಗಂಧಿಯ ನಿನ್ನ ಬಳಿಗೆ ||
ಕುಶಲದಿ ಪೋಗೆಂದು ಕಳುಹಿ ಕೊಟ್ಟನು ನಮ್ಮ |
ಅಸಮ ವಿಕ್ರಮಿ ಭೀಷ್ಮ ಕೇಳು ||199||

ತಂದನಲ್ಲದೆ ಸ್ಪರ್ಶಗೈಯ್ಯಲಿಲ್ಲವ ತನ್ನ |
ತಂದೆಗೋಸುಗ ಶಪಥ ಗೈದು ||
ಒಂದೇ ಮನದಿ ಬ್ರಹ್ಮಚರ್ಯದೊಳಿಹನೆಂದು |
ಹಿಂದೆಸಗಿದನಂತರಿಯೆಯ ||200||

ಅರಿತಿಹೆ ನಾನು ಜ್ಯೋತಿಷ ಗಣಿತಗಳನ್ನು |
ಪರಿಶೋಧಿಸಲ್ನಿಮ್ಮುಭಯರಿಗೆ ||
ಸರಿಬರುತಿದೆ ಕೂಟ ಗಣಗಳು ತಾನಾಗಿ |
ಹರಿತಂದಳನು ಬಿಡಬೇಡ ||201||

ಚದುರೆಯು ಗುಣವಂತೆ ಧೈರ್ಯ ಸಾಹಸದೊಳು |
ಬೆದರಿಕೆ ಬೇಡೊಲಿಸಿವಳ ||
ಸುದತಿಯರಲ್ಲಿವಳಂಥವಳಿಲ್ಲ ಒ |
ಲಿದು ತಾನೇ ಬಂದಳು ವರಿಸು ||202||

ರಾಗ ಮಾರವಿ ಏಕತಾಳ

ಧರಣಿ ವಿಬುಧನಿಂತೆನಲಾ ದೈತ್ಯನು | ಒರೆಯದಿರ್ನೀತಿಯನು ||
ಪರ ಪುರುಷರ ಜೊತೆಗೈದಿದ ಸುದತಿಯ | ಪರಿಕಿಸೆ ನೇತ್ರದಲಿ ||203||

ಖಳಪತಿ ಕೇಳ್ತನ್ನನುಜಗೆ ವರಿಸಲು | ಛಲದೊಳು ಕೊಂಡೊಯ್ದು ||
ನಳಿನಾಕ್ಷಿಯರೊಳಗೀಕೆಯು ನಿನ್ನನು | ಒಲಿಸಲು ಬಂದಿಹಳು ||204||

ಭೂಸುರ ಕೇಳಾ ಭೀಷ್ಮನ ತಮ್ಮನ | ನೀ ಸುದತಿಯು ಬಿಟ್ಟ ||
ದೋಷಿಯು ಯಾತಕೆ ಬಂದಳು ಗ್ರಹಿಸಲು | ಮೋಸಕಾರಿಣಿಯಿವಳು ||205||

ನುಡಿದಳು ಭೀಷ್ಮನೊಳೀಕೆಯು ವಿನಯದಿ | ಪೊಡವಿಪ ಸಾಲ್ವನೊಳು ||
ಒಡಬಡುವುದು ಮನ ಪೋಗುವೆನೆನಲವ | ನೊಡನಪ್ಪಣೆಯಿತ್ತನು ||206||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಷ್ಟು ಪೇಳಿದರೀಕೆಯನು ಮನ |
ಮುಟ್ಟಿ ಕೂಡುವನಲ್ಲವೆಂದಿಗು |
ದಿಟ್ಟ ಭೀಷ್ಮನ ಬೆರೆದು ಬಂದಿಹ | ಳಿಷ್ಟು ಖರೆಯು ||207||

ತರುಣಿಯರ ಕೇಳುತ್ತಲೆಂದಳು |
ಪರರ ಸ್ಪರ್ಶವ ಗೈಯ್ಯಲಿಲ್ಲೆಂ |
ದುರುತರ ನಂಬಿಕೆ ಪ್ರಮಾಣವ | ವಿರಚಿಸುವೆನು ||208||

ತರುಣಿಕೇಳ್ ವ್ಯಭಿಚಾರಿ ಪರರೊಳ |
ಗಿರಿಸಿ ಮನವನ್ಯಾಯ ಸಹಸಕೆ |
ಪರಮ ಧೈರ್ಯಸ್ತೈರ್ಯ ಶಪಥವ | ನೊರೆವರಹುದು ||209||

ಯಾರೆಲಾ ವ್ಯಭಿಚಾರಿ ನಿನ್ನೆಡೆ |
ಸಾರಿ ಬಂದುದಕಿಷ್ಟು ಪೇಳಿದೆ |
ಭೂರಿ ವಿನಯವ ತೋರ್ದೆ ಪೂರ್ವದಿ | ಜಾರ ನೀನು ||210||

ಹೆಚ್ಚು ಮಾತುಗಳಾಡೆ ನಿನ್ನನು | ಕೊಚ್ಚಿ ಕಡಿದೀಡಾಡಿ ಬಿಡುವೆನು |
ಹುಚ್ಚು ಮೂಳಿ ನಿವಾಳಿ ನಡೆತುಟಿ | ಬಿಚ್ಚದೀಗ ||211||

ಬಂದೆ ನಾನೆಂದೆನುತಲೀ ಪರಿ | ಎಂದೆಯೊಳ್ಳಿತು ಪೋಪೆ ದ್ವಿಜನೇ |
ಳೆಂದು ಕರೆಯಲು ವದ್ಧ ಸುದತಿಯೊಳೆ | ಂದನಾಗ ||212||

ರಾಗ ಕೇದಾರಗೌಳ ಅಷ್ಟತಾಳ

ತರುಣಿ ನಾ ಪೇಳಿದ ದ್ರವ್ಯವನಿತ್ತರೆ | ಬರುವೆ ನಿನ್ನೊಡನೀಗಲು ||
ಬರಿದೇಕೆ ಕರೆವೆ ನೀನೆನೆ ಕೇಳೆ ಸಾಲ್ವನು | ಹರುಷದಿ ಗಹಗಹಿಸಿ ||213||

ಅರರೆ ಶಭಾಸು ದ್ರವ್ಯವನೀವೆನೆನುತಲಿ | ಕರೆತಂದಳೇ ವದ್ಧನ ||
ಸುರನದಿಸುತನು ಕಳುಹಲಿಲ್ಲವೆಂಬುದು | ಭರವಸವೀಗಾಯಿತು ||214||

ಇನಿತು ಯೋಚಿಸಿ ಖಳ ದ್ವಿಜಗೀಯೆ ವೀಳ್ಯವ | ವಿನಯದಿ ಕೈಗೊಳುತ ||
ದನುಜ ಭಾಪುರೆ ಶಾಭಾಸೆನುತಲಿ ಪೊರಮಟ್ಟ | ವನಿತೆಯನೊಡಗೊಳ್ಳುತ ||215||

ಬಂದಳು ಕರಿಪುರಕೆಂದು ಸಾಲ್ವನ ಕೋಪ | ದಿಂದಾಗ ಬೈಯುತಲಿ ||
ನಿಂದಿತವಾಯಿತೆಂದೆನುತಂಬೆ ಬಹು ಪರಿ | ಯಿಂದ ಶೋಕಿಸುತೆಂದಳು ||216||

ರಾಗ ನೀಲಾಂಬರಿ ರೂಪಕತಾಳ

ತರುಣಿಯ ಜನ್ಮದಿ ಎನ್ನಯ |  ತೆರನಹ ಪಾಪಿಗಳಿರುವರೆ |
ಪರಿ ತ್ಯಜಿಸಿದೆ ಬಾಂಧವರನು | ಹರಹರ ವಿಧಿ ಲಿಪಿಯೆ ||
ಸುರನದಿ ಸುತನೊಳಗಪ್ಪಣೆ | ಒರೆದೆನು ಸಾಲ್ವನ ವರಿಸಲು |
ತೆರಳಿದೆ ವ್ಯರ್ಥದಿ ಎನ್ನನು | ಪರಿತ್ಯಜಿಸಿದ ದುರುಳ ||217||

ಮುನ್ನವೆ ಧರ್ಮದ ಪಥದಲಿ | ಬನ್ನ ಬಡುವ ಸುರನದಿಸುತ |
ನೆನ್ನ ವರಿಸನೆಂದಿಗು ಪೋದರೆ ಈ ಪಾತಕಿಯ ||
ಎನ್ನ ಮನೋಗತವೆಲ್ಲವ | ಭೀಷ್ಮನೊಳ್ಯಾತಕೆ ಪೇಳ್ದೆನೊ |
ಎನ್ನನು ಕೊಂದನೆ ಸಾಲ್ವನು | ಕನ್ಯಾಘಾತಕಿಯು ||218||

ಸುರನದಿಜಾತನ ಬಳಸದೆ | ತಿರುಗಿಯೆ ಸೌಭಪುರೇಶನ |
ವರಿಸದೆ ನಿಂತೆನು ಪೂರ್ವದಿ | ತೆರಳಿ ಕೆಟ್ಟೆನಲ್ಲ ||
ಧುರ ವಿಕ್ರಮವೆಂಬೀ ಪಣ | ವಿರಚಿಸಿ ನಮ್ಮನು ಮಾರಿದ |
ದುರುಳನೆ ಜನಕನು ಸಾಧುವೆ | ಹರಹರ ಮಹದೇವ ||219||

ಭಾಮಿನಿ

ಮರುಳೆ ನಾನಾಗಿರ್ಪೆ ಮತ್ಪಿತ |
ಪರಮ ಪಾತಕಿ ಸಾಲ್ವ ಮೂರ್ಖನು |
ಸುರನದೀಸುತ ಬುದ್ಧಿಹೀನನು ಎನ್ನ ಸಷ್ಟಿಸಿದ ||
ಸರಸಿಜಾಸನ ದುಷ್ಟನಿದರೊಳು |
ಸರುವ ಕಾರಣಮೂಲ ಭೀಷ್ಮನೆ |
ತರಳತನವೇನೆಂಬೆ ಪೋಗುವೆನವನ ಬಳಿಗೆನುತ ||220||

ರಾಗ ಬೇಗಡೆ ಏಕತಾಳ

ಎಂದು ನಿಶ್ಚಯಗೈಯ್ಯುತಾಕ್ಷಣದಿ | ಗಾಂಗೇಯನಲ್ಲಿಗೆ |
ಬಂದು ಪೇಳಿದಳಾಗಲಾತುರದಿ ||
ಹಿಂದೆ ರಥದೊಳಗಿರಿಸಿ ಎನ್ನನು | ತಂದುದಕೆ ಪರಪುರುಷ ಸ್ಪರ್ಶನ |
ವೆಂದು ಸಾಲ್ವನು ಬಿಟ್ಟು ಕಳುಹಿದ | ನಿಂದು ನೀನೇ ವರಿಸು ಎನ್ನನು ||221||

ಎಲೆಲೆ ಮೂರ್ಖಳೆ ಖೂಳದಾನವನು || ಒಲಿದವನು ತ್ಯಜಿಸಿದ |
ಬಳಿಕ ನೀ ಬಂದಿಲ್ಲಿಗಿನ್ನೇನು ||
ಒಲಿಸಿ ಬ್ರಹ್ಮಚರ್ಯ ವ್ರತಗಳು | ನೆಲಸಿಹುದು ಮತ್ತೆನ್ನ ತಮ್ಮಗೆ |
ಲಲನೆ ನೀ ಬೇಡಧಿಕ ನಿಪುಣೆಯು | ಚಲಿಸು ಮನ ಬಂದಂತೆ ಬೇಗನೆ ||222||

ಒರೆಯಲೀಪರಿ ಕೇಳುತಾ ಸತಿಯು | ಪೇಳಿದಳು ಭೀಷ್ಮಗೆ |
ಉರಿಯನುಗುಳುತ ನಿನ್ನ ಸಂಗತಿಯು ||
ವರಮನೋಹರ ಪುಷ್ಪಮಾಲೆಯ | ನಿರಿಸೆ ದೇವರಿಗೆಂದುಶ್ವಾನ ಉ |
ದರದಿ ಮಾಂಸ ಭ್ರಾಂತಿಯಿಂದಪ | ಹರಿಸಿದಂದವ ಗೈದಪಾತಕಿ ||223||

ಶೂರ ರಾಜಾಧಿಪನು ರಾಜಿಪನು | ತಪ್ಪಿಲ್ಲವವನಲಿ |
ಭೂರಿ ವಿಕ್ರಮಿ ಸಾಲ್ವ ಭೂಮಿಪನು ||
ಸಾರಿ ಬಂದಾಗೆನಗೆ ನಂಬಿಗೆ | ಹೋರಿಪೋದನ ತೊರೆದ ವ್ಯರ್ಥದಿ |
ಕ್ರೂರಕರ್ಮಿಯೆ ತಂದು ಕೆಡಿಸಿದೆ | ನಾರಿ ಹತ್ಯವ ಪಡೆದೆ ಸುಮ್ಮನೆ ||224||

ತರುಣಿ ಜನ್ಮಕೆ ದುಷ್ಟ ಪ್ರಕತಿಗಳು | ಬೇಕಾದ ತೆರದಲಿ |
ಇರುವುದೆಂಬುದು ಸಕಲ ಶಾಸ್ತ್ರದೊಳು ||
ಮರುಳೆ ನಿನಗಾ ಸಾಲ್ವನೆಂಬವ | ಪರಮರಾಜರ ರಾಜನಾದನೆ |
ತೆರಳು ಬಾಯ್ಮುಚ್ಚೀಗ ಸುಮ್ಮನೆ | ಚರರಮುಖದಿಂ ನೂಕಿ ಬಿಡುವೆನು ||225||