ಭಾಮಿನಿ

ಬಿದ್ದೊಡನೆ ಲಯ ರುದ್ರನುಗ್ರವ |
ಕದ್ದನೆನೆ ಭುಗುಭುಗಿಸೆಕ್ರೋಧದೊ |
ಳೆದ್ದುಖಳಲಕ್ಷುಮಣನಮುಳುಗಿಸಿ ಬಾಣವಾರ್ಧಿಯಲಿ ||
ಹೊದ್ದಿಸಲು ಕಂಡೊಡನೆ ಖತಿತಳೆ |
ದೊದ್ದು ಬಿಲುಝೇವಡೆದು ರಘುಪತಿ |
ಬದ್ಧ ಶರಜಾಲಗಳ ಕೆದರಿದಸಿಹ್ಮನಾದದಲಿ | ||61||

ರಾಗ ಮಾರವಿ ಏಕತಾಳ

ಬಲ್ಲಿದನಾದೆಯ ರಕ್ಕಸ ಕುನ್ನಿ ನ |
ಮ್ಮೆಲ್ಲರ ಮಾರ್ಬಲವ ||
ಚಲ್ಲ ಬಡಿದು ಮೇಣೆಲ್ಲಿಗೆ ಗಮನವೊ |
ನಿಲ್ಲೆನೆ ಕೇಳ್ದಾಗ | ||62||

ಪೂತುರೆ ರಾಘವ ಘಾತಿಸಿದೀಬಲ |
ದಾತರ ಬೆಂಬಲಕೆ |
ತಾತವೆ ಕಳುಹವೆ ನಿನ್ನನು ಬಿಡುನಡೆ |
ಸೀತೆಯ ಬರಿಬಯಕೆ | ||63||

ಮಘವಾರಿಯೆ ಬಲುಬಗುಳುವ ನಾಲಿಗೆ |
ಸಿಗಿದು ಮೊದಲೆ ನಿನ್ನ ||
ಮುಗಿಸಿ ನಿನ್ನಯ್ಯನ ಮಗಮದಗಂಧಿಯ |
ತೆಗೆವೆನು ನೋಡೆನ್ನ | ||64||

ಧಿರುರೆ ಪರಾಕ್ರಮ ನಹೆಯೆನುತಂಬಿನ |
ಸುರಿಮಳೆ ಸುರಿಯಲ್ಕೆ ||
ತರಿದೆಚ್ಚನು ರಘುವರ ಹುಂಕರಿಸುತ |
ಧರಣಿಗಗನಮುಸುಕೆ | ||65||

ಭಾಮಿನಿ

ಖಚರಿಯರ ಹೂಮುಡಿಗೆ ಸುರಪನ |
ಶಚಿಯಮುಖಸಾರಸಕೆ ರುದ್ರನ |
ಕಚದ ಗಂಗಾಂಬುಧಿಗೆ ಸರಸಿಜಭವನ ಗದ್ದುಗೆಗೆ ||
ಪ್ರಚುರದಿಗ್ವನಿತಾಬ್ಜಕುಟ್ಮಳ |
ಕುಚಗಳಿಗೆ ಮೊಗಚುವ ಶಿಳೀಮುಖ |
ನಿಚಯವೆನಲಡರಿದವುರಾಮ ಶಿಳೀಮುಖಗಳವಗೆ | ||66||

ರಾಗ ಭೈರವಿ ತ್ರಿವುಡೆತಾಳ

ತರಳ ಕೇಳೇನೆಂಬೆನಂದಿನ |
ಧುರವನೆಯಸಂರಂಭವನುಖಳ |
ನೊರೆದತನ್ನೊಳುತಾನೆ ರಾಮನ ||
ಧುರವ ಜೈಸಲಸಾಧ್ಯ ನಾನಿಂ |
ತಿರಲು ಹರಿಯದೆನುತ್ತ ಕುಂಭಿಣಿ |
ಪರಮ ದೇವತೆಯಂಘ್ರಿನೆನೆದಜ |
ಕರುಣಿಸಿದ ಶರತೆಗೆದು ಮೈಗೊ |
ಟ್ಟಿರದೆ ಮಾಯವ ಕವಿಸುತೆಸೆದನ | ದೇನನೆಂಬೆ | ||67||

ಎಲೆಲೆ ಕವಿತಿವಿಕೊಲ್ಲು ಕಡಿಯೆಂ |
ದುಲಿದುಬಿದ್ದ ಬಲೌಘ ಸಹ ರಘು |
ಕುಲಜ ನಿದಿರೊಳು ಸುಳಿಯೆ ಕಾಣು |
ತ್ತಲಘುಮತಿ ಶಕ್ರಾರಿಸುಳಿಸಿದ |
ನೆಲರಮಿಗೆ ಕಲ್ಮಳೆಯಸಿಡಿಲನು |
ಬಲುಭಟರ ತನ್ನಂತ ರಕ್ಕಸ |
ಬಲವನಯುತಾಯುತ ಕವಿಸಿಕ |
ಗ್ಗೊಲೆಗೆತೊಡಗಿದನಜ ಮಹಾಸ್ತ್ರದಿ || ಏನೆನೆಂಬೆ | ||68||

ತಾಗಿದನುಟಗರಾಗಿ ಕರ್ಬೊಗೆ |
ಯಾಗಿಕವಿದನು ಹೊದನಾಹರಿ |
ಯಾಗಿ ಹೊರಳಿದನದ್ರಿ ಶರಧಿಗ
ಳಾಗಿಸೆಣಸಿದಕಾಲಭೈರವ |
ನಾಗಿ ಜಟ್ಟಿಗನಾಗಿ ವಿಷದುರಿ |
ಯಾಗಿ ಬೆಚ್ಚಿಸಿಗೆಲಿದನನಿಬರ |
ಮೇಗೆರಾಘವ ಲಕ್ಷ್ಮಣಾಂಕನ |
ತಾಗಿ ಖಳದಿಗ್ವಿಜಯಿಯಾದನ | ದೇನನೆಂಬೆ | ||69||

ಭಾಮಿನಿ

ಬಳಿಕಶಕ್ರಾರಾತಿ ರಥದಿಂ |
ದಿಳಿದುರಣ ಶ್ರೀಗೆರಗಿ ಶೋಣಿತ |
ದೊಳು ಲಲಾಟಕೆ ತಿಲಕವಿರಿಸುತ ಹರುಷ ಪೂರದಲಿ ||
ಹೊಳಲಿಗಭಿಮುಖ ನಾದನಾದಶ |
ಗಳನು ವಾರ್ತೆಯ ಕೇಳಿಬಲು ಹೆ |
ಕ್ಕಳದ ತೋಷದೊಳಾತ್ಮ ಜನನಿದಿರ್ಗೊಂಡನುಚಿತದಲಿ | ||70||

ರಾಗ ಕಾಂಭೋಜಿ ಝಂಪೆತಾಳ

ಖಗವಂಶಜರುಕೇಳಿ ಮಗನ ಶಿರಮುಂಡಾಡಿ |
ನಗುತ ದಶಕಂಠ ಮನ್ನಿಸುತ ||
ಮಗನೆ ನೀ ಕೊಟ್ಟ ಭಾಷೆಗೆ ಹಾನಿಯಿಲ್ಲದತಿ |
ಬಿಗಿದಛಲ ನಡೆಸಿದೆಯಜಾತ | ||71||

ನಿನ್ನಂಥ ವಿಕ್ರಮಸಂಪನ್ನರೇಳ್ ಭುವನದೊಳ |
ಗೆಣ್ಣಿಸಿದರುಂಟೆ ಮರಿಯಾನೆ ||
ನಿನ್ನಂದದಾಪ್ತಸುತರಿನ್ನಾವರೆನಗೆನುತ |
ಮನ್ನಿಸುತ ಮಿಗೆ ಕಳುಹಿತಾನೆ | ||72||

ವಾರ್ಧಕ

ದರಹಸಿತಮುಖದಿಂದ ಧುರಕಣವಭರದಿಂದ |
ಪರಿವೇಷ್ಠಿಸಲು ಪೊರಟವರ ಪುಷ್ಪಕದೊಳ ಧಟ |
ಬರುತಕಡಿ ಖಂಡದಿಂ ರುಂಡದಿಂ ಮುಂಡದಿಂ ದುರುದುರಿಪನೆತ್ತರಿಂದ ||
ಪರಿಪರಿಯೊಳಾಡುತ್ತ ಮರುಳ್ಗಳಿರೆಪಾಡುತ್ತ |
ತರಳನಂ ಪೊಗಳುತ್ತ ದುರುಳಬರೆಮುಂದತ್ತ |
ಲುರಿಕೆಂಡಕಾರುತ್ತ ನೆರೆಸುದರ್ಶನವತ್ತಮೊರೆದಟ್ಟೆ ಖಳನುಬಂದ | ||73||

ಭಾಮಿನಿ

ತೆರಳಿಖಳ ನಿಜಪುರಕೆ ಸಂತಸ |
ಶರಧಿಯೊಳ ಗೋಲಾಡುತಿರ್ದನು |
ತರುಣಕೇಳನಿತರೊಳಗಿತ್ತಲು ವರವಿಭೀಷಣನು ||
ಮರುತಪಾಶವ ಹರಿದು ಶ್ರೀ ನರ |
ಹರಿಯ ಪರಿಭವನೆನೆದು ಸಂಗರ |
ಧರಣಿಯಲಿ ನಡೆತಂದು ಹನುಮನ ಕಂಡು ನುಡಿಸಿದನು | ||74||

ರಾಗ ಕೇದಾರಗೌಳ ಅಷ್ಟತಾಳ

ಏನಯ್ಯರಿಪು ಮದದಾನೆಯಂಕುಶ ಪವ |
ಮಾನಸಂಭವನಿನಗೆ ||
ಈನಕ್ತಂಚರನೆಚ್ಚ | ಬಾಣವೆಗ್ಗಳವೆಪೇಳ್ |
ನೀನೊಂದನಿರದೆನಗೆ | ||75||

ನೆನೆಹರಿಹರಸುರೇಶ್ವರರಿತ್ತ ವರಗಳ |
ದನುಜನಜಾಸ್ತ್ರವನು ||
ಹನನಮಾಡೆನ್ನಯಮರಿಯಾನೆ ಕಂಡೆಯ |
ಮನುವಂಶ ತಿಲಕರನ್ನು | ||76||

ಹುಡುಕ ಬೇಕಯ್ಯನಾವ್ ತಡೆಯದೆನ್ನಯಮನ |
ನಡುಕ ಹೆಚ್ಚಿತುಹನುಮ ||
ಮಡಪರಾಕ್ರಮಿಯೆನಲೊಡನೆದ್ದುರಿಪುಶರ |
ಪುಡಿಗೈದಸಮರಭೀಮ | ||77||

ಕಂದ

ಮತ್ತವರೀರ್ವರು ಧುರದೊಳು |
ಸತ್ತವರಂಕಂಡತಿ ಮರುಗುತಬೀಳುತ್ತಂ ||
ತತ್ತರಗೊಳ್ಳುತಲೇಳುತ |
ನೆತ್ತರೊಳ್ ಬಳಲುತ ಬಂದಜಜನಕಾಣುತ್ತಂ | ||78||

ರಾಗ ಸಾಂಗತ್ಯ ರೂಪಕತಾಳ

ವರವಿಭೀಷಣ ಹರಿಸ್ಮರಣೆಮಾಡುತ್ತ ನಿಂ |
ದಿರಲರಿತನಿತರೊಳಾತ ||
ತರಣೀವಂಶಲಲಾಮನಿರತಸೇವಕಬಂದೈ |
ಮರುತಜ ಬಾರೆಂದಡೀತ | ||79||

ಜೀಯಕೇಳಾನುವಿಭೀಷಣನಹೆನಲ್ಲ ||
ವಾಯುಸಂಭವನೆನೆ ಕೇಳ್ದು ||
ನೋಯದೈತಂದೆಯಾ ಮಗನೆಕಂಡೆಯ
ರಘು | ರಾಯ ಸೇವಕನ ನೀನಿಂದು | ||80||

ಮಗನೆ ಕೇಳುವನೊಬ್ಬನಿರ್ದಡೆಮ್ಮಯಸೈನ್ಯ |
ಖಗವಂಶೋದ್ಭವರು ಮುಂತಾದ |
ವಿಗಡ ವಿಕ್ರಮರಸುವಿಹುದೆಂದು ತಿಳಿಯೆನೆ |
ಮಿಗೆಮಾತ ಶರಣನಿಂತೆಂದ | ||81||

ಪುಸಿಯಲ್ಲ ನೋಡಿ ಕೈಮುಗಿದು ನಿಂದಿಹ ಬೇಗ |
ಬೆಸಸಿರಿಹನುಮಂತನಿಂದ ||
ಬಿಸಜಾಕ್ಷಾದಿಗಳಭಿವದ್ದಿಯನೆನೆ ನೋಡಿ |
ಶ್ವಸನಸಂಭವನೊಡನೆಂದ | ||82||

ಅಣುಗನೀನುಳಿದೆ ಭಾಗ್ಯದಕಣಿರಾಮಗಿ |
ನ್ನಣುಮಾತ್ರ ಬಂದಸೋಲದೊಳು ||
ಎಣಿಸಬೇಡೆನ್ನನೀಕ್ಷಣಕೊದು ಮಾದಿನ |
ಮಣಿವಂಶಜರ ತೋರಿರೆನಲು | ||83||

ಕಂದ

ಹನುಮವಿಭೀಷಣರಿಬ್ಬರು |
ವನಜೋದ್ಭವನ ಕುಮಾರನ ನೆರೆಪೋಗಳುತ್ತಾಗಳ್ ||
ಇನವಂಶಾಬುಧಿಚಂದ್ರಮ |
ನನುವಿಂ ಸೇರಿದರುನ್ನತಖೇದದೊಳಾಗಳ್ | ||84||

ಭಾಮಿನಿ

ದೇವದೇವನ ಸಕಲದೇವರ |
ದೇವ ಚಕ್ರೇಶ್ವರನ ನಾನಾ |
ಜೀವನಾಟಕ ಸೂತ್ರಧಾರಚರಚರಾತ್ಮಕನ ||
ಪಾವಕಾನಿಲ ಪಥ್ವಿಪುಷ್ಕರ |
ಜೀವನಾಖಿಲತತ್ವಮಯ ಮಾ |
ಯಾ ವಿನೋದವಕಂಡು ಮರುಗಿದರೇನ ಬಣ್ಣಿಪೆನಾ  ||85||

ರಾಗ ನೀಲಾಂಬರಿ ರೂಪಕತಾಳ

ಹಾ ರಘುರಾಜ ಶಿರೋಮಣಿ | ವೈರಿತಮೋದ್ಧತ ದಿನಮಣಿ |
ಯಾರೊಡನೀಪರಿ ಮುನಿಸುವಿ | ಚಾರಿಸುನಮ್ಮರಸು |  || ಪಲ್ಲವಿ ||

ತಾಟಕಿ ಮುಖ್ಯರ ಮೊದಲಲಿ | ನಾಟಿದೆ ಎತ್ತಿದೆಯಾಶಶಿ |
ಜೂಟನಧನುವನು ಪಥದಲಿ | ದಾಟುತ ಭಾರ್ಗವನ ||
ಓಟವ ಕೆಡಿಸಿದೆ ಮಿಗೆಖರ | ನಾಟವ ಜೈಸಿದೆ ಗಡಕಪಿ |
ರಾಟನ ಮುರಿದನಿಗೇನು ನಿ | ಶಾಟನ ಶರಕಠಿಣ | ||86||

ನರನಾಟಕದ ವಿನೋದದ | ಪರಿಯಿನಿತೇತಕೆ ಲಕ್ಷುಮಾ |
ಯರಸಜಗನ್ಮಯಪರತರ | ಪರಮಾನಂದಕರ ||
ಪರಿಕಿಸಲಾದಿ ಮಧ್ಯಾಂತರ | ವಿರದವನಹೆ ನೀ ನಮಗೀ |
ತೆರಕೈತೊರೆದರೆ ಬೇರಾರ್ | ಪೊರೆವರು ನುಡಿಮಧುರ | ||87||

ಭಾಮಿನಿ

ಕೊಟ್ಟ ಭಾಷೆಯಮರೆದು ತನ್ನನು |
ಬಿಟ್ಟು ವೈಕುಂಠಕ್ಕೆಪೋಪರೆ |
ಹುಟ್ಟು ಒಂದೇ ನಿನಗೆ ಸೀತಾಕಾಂತನುಡಿಯೆಂದ ||
ಬಿಟ್ಟರಿನ್ನಾನಾರ ಸೇರುವೆ |
ನಟ್ಟಡವಿಯಲಿಹೊಲಬನಳಿದಗೆ |
ಬಟ್ಟೆಯಾವುದೆನುತ್ತಶರಣಾಭರಣನಡೆಗೆಡೆದ | ||88||

ಕಂದ

ಇಂತು ಪ್ರಲಾಪಿಸಿ ಬಳಿಕ ವ |
ರುಂ ತಡೆಯದೆ ಧೊಪ್ಪನೆ ಕೆಡೆದಿರದೇಳುತ್ತಂ ||
ನಿಂತಿಹಹನುಮನ ಕಾಣುತ |
ಮುಂತೆವಿರಿಂಚಿ ಕುಮಾರಕ ತಾನೆಂದನಣಂ | ||89||

ರಾಗ ನೀಲಾಂಬರಿ ತ್ರಿವುಡೆತಾಳ

ಹರಿಕುಲಾಂಬುಧಿ ಪೂರ್ಣ ಶುಭ್ರಾಂಶು | ಶೌರ್ಯೋ |
ದ್ದರ ಸಾಧು ಗುಣಮಣಿ ಲಾಲಿಸು ||
ತರಣಿಕುಲೇಂದ್ರರ ಪರಿಭವ | ವಿದ |
ನೆರೆಕಂಡೆಯಾವಾತಸಂಭವ | ||90||

ಅಂತರಂಗವನಾರೊಡನೆ ಪೇಳ್ವೆ | ವಾರ್ಧಿ |
ಯಂತರಿಸಿದಕೇನಾಯ್ತೈ ಬಾಳ್ವೆ ||
ಅಂತಕಾಂತಕನಿಲ್ಲದಿಹಪೀಠ | ಮೆರೆ |
ವಂತಾಯಿತಲ್ಲಿಂದು ನಮ್ಮಾಟ | ||91||

ಅದರಿಂದ ನಿನ್ನೊಡನೀಗೊಂದ | ಪೇಳ್ವೆ |
ನಿದರಂತೆಮ್ಮಯ ಬಲವನುಹಿಂದಾ ||
ಮದಮುಖ ಭುಜಗಾಸ್ತ್ರದೊಳುಗೆದ್ದ | ಡಾಗ |
ಚದುರಸುಷೇಣಪೇಳಿದಮದ್ದ | ||92||

ವಾರ್ಧಕ

ಮರುತಭವ ಕೇಳು ಸಂಧ್ಯಾಕರಣಿಮೊದಲಾದ |
ಮೆರೆವನಾಲ್ಕೌಷಧಿಗಳಿಹುದುಚಂದ್ರದ್ರೋಣ |
ಗಿರಿಯೊಳಲ್ಲಿಗೆ ದಾರಿಯರಿವೈಪುರಾಂತಕನ ಗಿರಿಯಿಂದೀಶಾನ್ಯಮಾಗಿ ||
ತೆರಳು ಪಥದೊಳಗೇಳು ಶರಧಿ ದ್ವೀಪಗಳೇಳು |
ತ್ತರಿಸೆತದ್ಗಿರಿ ತೋರ್ಪುದೈಯುದಯದೊಳಗೆ ನೀ |
ಬರಬೇಕುಗಳಿಗೆಯೇಳಲ್ಲದಿಲ್ಲೆಲೆಮಗನೆ ಮರಿಯಾನೆಯೆಂದಡೆರಗಿ | ||93||

ರಾಗ ಮಾರವಿ ಏಕತಾಳ

ನುಡಿದನು ಮುಖ್ಯಪ್ರಾಣನು ಕೇಳೈ |
ಜಡಜಜನಂದನನೆ ||
ನುಡಿಗಳನೆಲ್ಲವ ನಡೆಸುವೆ ನಾನೆ |
ಮ್ಮೊಡೆಯನಪದದಾಣೆ | ||94||

ತರಹೇಳಿದರೆ ಕತಾಂತನ ಶಕ್ರನ |
ಸರಸಿಜ ಸಂಭವನ ||
ಪುರಸಂಹಾರನ ಸೂರ್ಯನಶೇಷನ |
ತರುವೆನಿದೇನು ಘನ | ||95||

ತಡೆಯೆಚತುರ್ದಶಭುವನವತಿಕ್ಕುವೆ |
ಗಡಣಿಸೆನಣುವಿಂಗೆ ||
ಕಡುಹನಿರೀಕ್ಷಿಸುತಪ್ಪಿದೆನಾದರೆ |
ನುಡಿದಪೆನಾನಿನಗೆ | ||96||

ಭಾಮಿನಿ

ಕೇಳು ಜಾಂಬವ ಭಾಷೆಯನು ಈ |
ರೇಳು ಸಾಗರವಿರಲಿಮತ್ತೀ |
ರೇಳು ದ್ವೀಪಗಳಿರಲಿ ದಾಟುವೆನವನು ಬಗೆಗೊಳದೆ ||
ಕೀಳುವೆನು ಪರಮೌಷಧವ ತಡೆ |
ನೇಳುಗಳಿಗೆಗೆ ಮುನ್ನತರದಿರೆ |
ಬೀಳುವೆನುಶಿಖಿಕುಂಡಕೆಂದುದ್ಯೋಗಪರನಾದ | ||97||

ವಾರ್ಧಕ

ಗುರುಗಣಪಸಿರಿಶಕ್ರಹರದುರ್ಗೆಗುಹಧರಣಿ |
ಯರಿಗೆರಗಿ ಮಾತಪಿತ ಶ್ರೀರಾಮಜಾಂಬವಾ |
ದ್ಯರನುತಿಸಿ ಹಾರಿದಂ ಹರಿಗರುಡರಂ ಮಿಕ್ಕಿ ಗಮನದೊಳು ಹನುಮಂತನು ||
ಭರಕೆ ಬ್ರಹ್ಮಾಂಡ ಘಟವಲ್ಲಾಡಿತಾಗ ದಶ |
ಶಿರನರಿದುಖಳಕಾಲನೇಮಿಯಂಬರಿಸುತ್ತಾ |
ಧುರದ ವತ್ತಾಂತಮಂ ಪೇಳಿ ಮಗುಳಾತನೋಡನರುಹಿದಂ ಯಿತೆರದೊಳು | ||98||

ರಾಗ ತೋಡಿ ಅಷ್ಟತಾಳ

ಕೇಳು ಕಾಲನೇಮಿಧುರದಿ | ಕಾಳುಗೆಡದ ಭಟರಿಗಿರದಿಂ |
ದೇಳಿಸಬೇಕೆಂಬ ಚಿತ್ತದಿ ||
ಗಾಳಿಯಾತ್ಮಜಾತದ್ರೋಣ | ಶೈಲಕಾಗಿ ಪೋಪನದಕೊ |
ಕೀಳಿತಾರದರಮಹೌಷಧಿ | ||99||

ಪೊಗಿನೀನಾಗಿರಿಯ ಮೂಲ | ಕಾಗಿ ಬೇಗದಿಂದ ನಿನ್ನೊ |
ಳಾಗುವ ಪ್ರಯತ್ನಸಾಧಿಸಿ ||
ಹಾಗುಹೀಗು ಕಪಿಯಕಾರ್ಯ | ವಾಗಗೊಡಲುಬೇಡವೆನಗಿ |
ದೀಗನಿನ್ನುಪಕಾರಸಾಹಸಿ | ||100||

ಈಸುಕಜ್ಜಕಾಗಿಯೆನ್ನ | ನೀಸುಘನತೆ ಮಾಳ್ಪುದೇತ |
ಕಾಸುರೇಂದ್ರ ನಿನ್ನಚಿತ್ತದ ||
ಆಸರವನು ತೀರಿಸುವೆಕೇ | ಳಾ ಸಮಾರಸುತನ ತಡೆದು |
ಬಾಸೆಬೇರೇಕೆಂದು ಎರಗಿದ | ||101||

ವಾರ್ಧಕ

ಜಡಜಸಖಕುಲಜಾತಕೇಳ್ ಕಾಲನೇಮಿಖಳ |
ನಡೆದುಂ ಮನೋವೇಗದಿಂದಾಮಹೀಧರದ |
ಬುಡದಿ ನಿರ್ಮಿಸಿದನೈ ನಂದನವಕೈತವದಿ ಖಗ ಮಗವಮೇಣ್‌ಗೈದನು ||
ಜಡಜ ಕೈರವಕೋಕ ಚೂತಮಾದಳಬದರಿ |
ವಿಡಿದತಿಯತರುಗುಲ್ಮಸುಮಗಳಂ ರಚಿಸುತಲೆ |
ಜಡೆತಲೆ ವಿಭೂತಿಜಪಸರವಾಂತು ಸಾಕ್ಷಾತು ಋಷಿಯಾಗಿ ತಾನಿರ್ದನು | ||102||

ಕಂದ

ಆಗೆ ಮರುತ್ಸುತನನ್ನೆಗ |
ಮಾಗಸದೊಳು ಬರುತಲಿ ಕಂಡ್ವನಮಂ ||
ಸಾಗಿದುಕೌಳಿಕಮರಿಯದೆ |
ಬೇಗದೊಳೆರಕದಿ ಮಣಿದೆಂದನು ಮುನಿಪತಿಗಂ | ||103||

ರಾಗ ಸಾಂಗತ್ಯ ರೂಪಕತಾಳ

ಪರಮ ಸಂಯಮಿ ನಿನ್ನ ಚರಣನೋಡಿದರಿಂದ |
ನೆರೆಧನ್ಯನಾದೆನಾನಿಂದು ||
ಇರದತಿದೂರದಿಂ ಬರುತಲಿಬಳಲಿದೆ |
ನರಿದೊಂದುಕೊಳ ತೋರುನಿಂದು | ||104||

ರಾಗ ಕೇದಾರಗೌಳ ಅಷ್ಟತಾಳ

ಎನೆಮೊಗವೆತ್ತಿ ಕೌಳಿಕ ಮುನಿನುಡಿದಕೇಳ್ |
ವನಚರೋತ್ತಮನೆ ನಿನ್ನ ||
ಮನದಿಷ್ಟವೀವೆ ನೀನೆಲ್ಲಿಂದ ಬಂದೇನು |
ಘನ ಕಾರ್ಯವೆಲ್ಲಿ ಜಾಣ | ||105||

ರಾಗ ಸಾಂಗತ್ಯ ರೂಪಕತಾಳ

ಪರಮ ಮುನೀಂದ್ರಕೇಳ್ ತರಣಿವಂಶಜ ರಾಮ |
ದುರುಳರೊಳಿಂದಿನಾಹವದಿ |
ನೆರೆಮೂರ್ಛಿಸಿದರಿಂದ ವರಸಂಜೀವನಿಗಾಗಿ |
ಮರುತಜನಾ ಬಂದೆ ಭರದಿ | ||106||

ರಾಗ ಕೇದಾರಗೌಳ ಅಷ್ಟತಾಳ

ಲೇಸುಲೇಸಲೆ ವೀರನೀಪುರ ಹೊರಟಿಂದಿ |
ಗೇಸುದಿವಸವಾಯಿತು |
ಆ ಸಮರದೊಳಳಿದವರು ಜೀವಿಸಲುಂಟೆ |
ನೀ ಸುಡು ಬಯಲಭ್ರಾಂತು | ||107||

ರಾಗ ಸಾಂಗತ್ಯ ರೂಪಕತಾಳ

ಅವಧರಿಸಲೆಮುನಿ ದಿವಸವೆಷ್ಟೇಕೆಜಾಂ |
ಬವರ ನುಳಿದು ಘಟೀಗರ್ಧ |
ಸವೆದುದೈತಡವಾತು ತವೆತೋರು ಸರಸಿಯ |
ಜವದೊಳೆನಲು ಬೆರಗಾದ | ||108||

ವಾರ್ಧಕ

ತತ್ತ ಬಲವಿಲ್ಲದಡೆ ವೈರಿಗಳ ಜೈಸುವಡೆ |
ಮತ್ತೆ ಬಲಯುತರ ಬೆರೆದೊತ್ತ ಬೇಕಹಿತರೆಂ |
ದುತ್ತಮರ ವಚನೀಯ ಮುಂಟಲಾಮದರಿಂದಲೀ ಸರಸಿಯಂ ಪೊಗಿಸಲು ||
ಸತ್ತಲ್ಲದಿರನಿವಂನೆಗಳಿಂದಲೆನುತ ಖಳ |
ಮತ್ತವನ ಕರತಂದು ವಿಷ ಸರೋವರ ಕಿಳಿಸೆ |
ಚಿತ್ತದಾನಂದದಿಂ ಕಾಲ್ಮೊಗವ ತೊಳೆದಿರದೆ ನೀರ್ಗುಡಿಯಲನುವಾದನು | ||109||

ಭಾಮಿನಿ

ಬೇಡ ಕುಡಿಯದಿರನಿಲಜನೆ ವಿಷ |
ಕೂಡಿದೀಜಲವಿದರೊಳಿಪ್ಪುದು |
ಕೇಡು ಬಯಸಲು ಮೊಸಳೆಯೆಂದೆನಲಾಗಲಶರೀರ ||
ಗಾಢ ಬಳಲಿಕೆಯಿಂದಲದ ಬಗೆ |
ಗೂಡದಾಕೊಳಕಿಳಿದು ಸೇವಿಸೆ |
ನೋಡಿ ನುಂಗಿತು ಮಕರಿವಾತೋದ್ಭವನಸಶರೀರ ||110||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಆಗ ಖಳನಿದು ಸಮಯವೆನುತಲಿ |
ಬೇಗ ಕಿತ್ತೊಂದದ್ರಿಯನು ಕೊಳ |
ಕಾಗಿ ಮುಚ್ಚಿದನೆಲರುಸಹತುಸ | ಹೋಗದಂತೆ ||111||

ಇತ್ತಲಾ ಪವಮಾನ ಸಂಭವ |
ನೊತ್ತಿ ಮಕರಿಯ ಸುತ್ತಿ ಬಾಲದಿ |
ತತ್ತಳಕೆಮಿಗೆ ಬಂದ ಶಿಖರವ | ಪೊತ್ತು ಕರದಿ | ||112||

ಅನಿತರೊಳಗಾನಕ್ರ ರೂಪವ |
ತನುವ ಕಳಚುತ ನಿರ್ಜರಾಂಗನೆ |
ಯನಿಲಜನಪದಕೆರಗಿ ಪೇಳಿದ | ಳನುನಯದೊಳು | ||113||

ರಾಗ ಸಾಂಗತ್ಯ ಮಟ್ಟೆತಾಳ

ಜಯನಮೋಕಪಾಲವಾಲನೆ | ಆಂಜನೇಯ |
ಭಯನಿವಾರರಿಪುಕುಠಾರನೆ ||
ಪ್ರಿಯನಶಾಪದಿಂದನಿನ್ನನೆ | ಕಾದಿರ್ಪೆಯುಗ |
ತ್ರಯದೊಳಿಂದು ದೊರೆದೆ ಜೀಯನೆ ||114||

ಪತಿತಳಾದೆ ಮಕರಿ ಜನ್ಮದಿ | ನಾನಿಂದು ಪೋಪೆ |
ಗತಿಗೆ ನೋಡು ಮೆರೆವ ವಿಪಿನದಿ ||
ಯತಿಪನಂತೆ ಕುಳಿತು ತೋಷದಿ | ಇರುವನವನೆ |
ದಿತಿಜಕಾಲನೇಮಿಕತಕದಿ ||115||

ಕಂದ

ತಕ್ಕುದನೆಸಗವಗೆನುತದಿ |
ವಕ್ಕವಳೈದಿದಡಿತ್ತಲು ಮರುತಜನಾಗಳ್ |
ಮುಕ್ಕಣ್ಣನ ವೋಲ್ ಬರೆ ಕಂ |
ಡಕ್ಕಜದಿಂ ತಾಪಸನಾಗಿರ್ದವನೆಂದಂ | ||116||

ರಾಗ ಶಂಕರಾಭರಣ ಮಟ್ಟೆತಾಳ

ಮರುತ ಜಾತಸಹಸಿನೀನೆ |
ನರಿಯದವನೆ ಗುರುದಕ್ಷಿಣೆಯ |
ತೆರುವೆಯಾ ಮಂತ್ರೋಪದೇಶ | ಒರೆವೆಕೇಳಯ್ಯ | ||117||

ತೆರುವೆ ನಿನಗೆ ಗುರುದಕ್ಷಿಣೆಯ |
ನಿರದೆ ಮೊದಲು ಮತ್ತೆ ಮಂತ್ರ |
ಒರೆಯ ಬಹುದು ಕುನ್ನಿಕೇಳೆಂ | ದೆರಗಲದ್ರಿಯ | ||118||

ತಡೆದು ದನುಜ ನಿಜವ ತಾಳಿ |
ಫಡ ಸಮರ್ಥನಹೆಯೊ ಕೋತಿ |
ಕೆಡಹಿನಿನ್ನ ಭೂತತತಿಗೆ | ಕೊಡುವೆನೆನ್ನುತಾ | ||119||

ದಡಿಗ ನಿಟ್ಟ ಹತಿಯ ತಡೆದು |
ನುಡಿದನೆಲೆ ಮದಾಂಧ ನೋಡು |
ಕಡುಹನೆಂದು ಮುಷ್ಟಿಯಿಂದ | ಝಡಿಯೆಗಜರುತ | ||120||