ಶಾರ್ದೂಲವಿಕ್ರೀಡಿತ ವೃತ್ತ

ಶ್ರೀ ಸೀತಾಸ್ಮಿತವಕ್ತ್ರಪದ್ಮಭ್ರಮರಂ ಬಾಲಾರ್ಕಕೋಟಿ ಪ್ರಭಂ |
ಕೌಸಲ್ಯಾ ಜಠರಾರ್ಣವೇಂದುರುಚಿರಂ ಸಾಕೇತಸನ್ಮಂದಿರಂ ||
ಆಶಾಪಾಶವಿನಾಶಶ್ಯಾಮಲವಪುಂ ರಾಜಾಧಿರಾಜಂನುತಂ |
ವಾಸಿಷ್ಠಾದಿಭಿರರ್ಚಿತಂ ರಘುವರಂ ಧ್ಯಾಯೇತ್ಸದಾಮಾನಸೇ ||1||

ರಾಗ ನಾಟಿ ರೂಪಕತಾಳ

ಶ್ರೀ ಗಣರಾಜಗಜಾನನ | ನೈಗಮತತಿನುತಸ ದ್ಗುಣ |
ಸಾಗರ ಎಲರುಣಿವಸಿರಸ | ದಾಗಮ ಸರ್ವಜ್ಞ ||
ಪೂಗೋಲಾರಿ ಕುಮಾರಕ | ಯೋಗಿ ಜನಾನತ ಸುಬೆನಕ |
ನೀಗೆಮಗುರೆ ನಿರ್ವಿಘ್ನತೆ | ಬೇಗದಿ ಕವಿ ಪ್ರಜ್ಞ ||
ಜಯಜಯ ಜಯಜಯತು | ||2||

ವರ್ಣಿಸೆ ಶಿವ ಪೆರೆದಲೆಯನು | ಸೊನ್ನೆಯವೆಟ್ಟಂಬಿಲ್ಲನು |
ಬಾನ್ನವಿರನು ಮಿಗಗೈಯ್ಯನು | ಪೆಣ್ದೊಡೆಯನು ಸತತ ||
ಎಣ್ಮೆಯ್ಯ ಸೊಡವಲಿ ವನೆಯನೆ | ಮನ್ಮಥ ಹರಮೇಣ್‌ಪಿರಿತಿನಿ |
ಯಾಣ್ಮನೆನಿಪ ವಿಶ್ವೇಶ್ವರ | ಮನ್ಮನದೊಳು ನಿಲುಗೆ ||
ಜಯಜಯ ಜಯಜಯತು | ||3||

ಐಕಿಲ್‌ವೆಟ್ಟಣುಗಿಯಪದ | ಕೋಕನದಕ್ಕೆರಗುತಲಜ |
ನಾಕೆಗೆ ಮಣಿದಲರ್ವೊಡೆಯನ | ಶ್ರೀಕರದಿಂ ನಮಿಸಿ ||
ತಾಕುಡುವಿಲ್ಲನ ಮಾತೆಗೆ | ನಾ ಕೈಮುಗಿಯುತ ಹಿರಿಯರ |
ನೇಕ ಸ್ತುತಿಸುತ ಪೇಳುವೆ | ನೀ ಕೃತಿ ಸಂಭ್ರಮದಿ ||
ಜಯಜಯ ಜಯಜಯತು | ||4||

ಭಾಮಿನಿ

ಜಾಣಸಮರಧುರೀಣ ಕವಿಸ |
ತ್ರಾಣನುತ ಗೀರ್ವಾಣ ಕವಿ ಪೂ |
ಬಾಣಬಾಣ ಸುರಾದ್ರಿ ವೇದಪುರಾಣ ಬಲ್ ನಿಪುಣ ||
ಊಣಯವು ತುಸಗಾಣದೈನಿ |
ನ್ನಾಣುವಿಕೆಗೇನ್ ಕೇಣ ರಘುಪತಿ |
ಪ್ರಾಣಮಿತ್ರ ಪ್ರವೀಣ ಭುವನ ಪ್ರಾಣಜಂವಂದೇ | ||5||

ವಾರ್ಧಕ

ಜಗದ ಕವಿ ಚೂತವನ ಚೈತ್ರ ವಾಲ್ಮೀಕಿಪದ |
ಯುಗಕೆರಗುತಲಿ ನಮೋ ಎಂದು ಬುಧಜನರೊಲ್ಮೆ |
ಮಿಗೆಯಾಂತು ರಾಮಾಯಣಾಖ್ಯ ಚರಿತಾಬ್ಧಿಯೊಳು ಲಂಕೆಯ ಪುನರ್ದಹಿಸುತ ||
ರಘುವೀರ ಮಕರಾಕ್ಷನಂ ಗೆಲ್ದ ಸತ್ಕಥಾ |
ದಿಗಳ ಸಂಗ್ರಹಿಸಿ ಧಾತ್ರಿಯೊಳೆಕ್ಷಗಾನದಿಂ |
ಜಗದುದಯ ಸ್ಥಿತಿಲಯಕ್ಕೊಡೆಯ ವಿಶ್ವೇಶ್ವರನ ವರಕಟಾಕ್ಷದಿ ಪೇಳ್ವೆನು | ||6||

ರಾಗ ಸೌರಾಷ್ಟ್ರ ತ್ರಿವುಡೇತಾಳ

ರವಿಕುಲೋದ್ಭವರಾದ ಕುಶಲವ |
ಕುವರರಾ ವಾಲ್ಮೀಕಿ ಮುನಿಪದ |
ಕುವಲಯಕ್ಕಭಿನಮಿಸಿ ಕೇಳ್ದರು | ತವಕದಿಂದ | ||7||

ಎಲೆ ಮುನೀಶ್ವರತವವಚೋದಿತ |
ಲಲಿತರಾಮಕಥಾಸುಧೆಯ ಕುಡಿ |
ದಲಸದೆಮ್ಮಯ ಕರ್ಣಗಳದೇನ್ | ಬಲುರುಚಿಪುದೈ | ||8||

ಅದುನಿಮಿತ್ತಾ ರಘುನಪಾಲನು |
ಪದುಮಭಾನುವಿಭಾವರಿಯೊಳುರಿ |
ಪದರಿಸಿದನುಗಡೇಕೆ ಲಂಕೆಗೆ | ಯದುಭುತದೊಳು | ||9||

ಹತ್ತು ತಲೆಯವಗೈದನೇನನು |
ಸತ್ತರೆಂತು ನಿಕುಂಭಮುಖ್ಯರು |
ಮತ್ತ ಮಕರಾಕ್ಷನನು ರಘುವರ | ಕತ್ತರಿಸಿದ | ||10||

ಎಂತೆನುವಚಾರಿತ್ರ ಸಾಂಗದಿ |
ನೀಂತಳುವದುಸಿರೆನಲುಯತಿವರ |
ಕಂತುಜನಕನನೆನೆದುಸಿರ್ದನು | ಸಂತಸದಲಿ | ||11||

ವಾರ್ಧಕ

ದಿನನಾಥನನ್ವಯ ಶಿರೋಮಣಿಗಳಿರಕೇಳಿ |
ವನಜಾಂಬಕಂ ಸುರರ ದೂರಿಂದ ದಶರಥನ |
ತನುಜನೆಂದೆನಿಸಿ ಕುಶಿಕಜನಮಖಮುದ್ಧರಿಸಿ ಶಿವಧನುವ ಮೇಣ್ ಖಂಡಿಸಿ ||
ವನರುಹದಳಾಕ್ಷಿ ವೈದೇಹಿಯೊಡವೆರೆದು ಭಗು |
ಜನಗೆಲ್ದುಪಿತನಾಜ್ಞೆಗನುವಾಗಿ ಸತಿಸಹಿತ |
ವನವಾಸಕಂ ಪೊಕ್ಕು ಪಂಚವಟಿಗೈದಿ ಶೂರ್ಪನಖಿಯಂ ಭಂಗಗೊಳಿಸಿ | ||12||

ವನಿತೆಯಂಗಳೆದಿಂದ್ರಜನ ಮುರಿದು ಸುಗ್ರೀವ |
ನನುಬೆರದು ಹನುಮನಿಂ ಸತಿಯಿರವ ತಿಳಿದಬ್ಧಿ |
ಯನು ಕಟ್ಟೆ ಲಂಕೆಯಂ ಮುತ್ತಿ ಕಪಿಭಟರೊಡನೆ ದನುಜರನಿಬರಜೈಸಲು ||
ಅನುವರಕ್ಕಿದಿರಾದ ಕುಂಭಕರ್ಣಾಸುರಾ |
ಧ್ಯನಿಮಿಷ ವಿರೋಧಿಗಳ ನುಗ್ಗರಿದನೆಂಬ ಕಥೆ |
ಯಿನಿತು ಮಂದಟವಾಯ್ತು ಲವನೆಕೇಳ್ ಮೇಲ್ಗಥೆಯನನುಗೊಳಿಪೆನೆನುತಾಗಲು | ||13||

ನುಡಿದ ಮುನಿಶಾರ್ದೂಲ ಕೇಳಿರೈ ಕುಶಲವರು |
ಮಡಿದನನುಜಾತನೆಂಬುದ ಕೇಳ್ದು ದಶಮುಖಂ |
ಕಡುತಾಪವೆತ್ತಿರಲ್ಕತಿಕಾಯ ಪಿತನೊಡಂಬಡಿಸಿ ಸಂಗರಕೈದುತ ||
ಕಡಿದಾಡಿ ರಾಮಾನುಜನಶರದಿದಿವದತ್ತ |
ನಡೆಯಲಾ ಲಕ್ಷ್ಮುಮಣಂ ಮಿಕ್ಕಸುರರಂಗೆಲ್ದು |
ಪಡೆಸಹಿತ ವಿಜಯೋತ್ಸವದೊಳಣ್ಣ ನೆಡೆಗೈದಿ ಮಣಿದಡರಸಂನೆಗಹುತ | ||14||

ರಾಗ ಭೈರವಿ ಝಂಪೆತಾಳ

ಲವನೆ ಕೇಳ್ ಬಳಿಕ ಸಹ | ಭವನಬಿಗಿದಪ್ಪಿಯು |
ತ್ಸವದೊಳಿನ ಸುತಗೆಂದ | ಕುವಲಯದಳಾಕ್ಷ | ||15||

ಧುರದೊಳಿಂದಿನಲಿ ಖಳ | ವರರ ನುಗ್ಗೊತ್ತಿದಿರಿ |
ಸರಿಯಾರು ನಿಮಗೆ ಸುರ | ನರ ಭುಜಂಗರಲಿ | ||16||

ಒರ್ವರಿಂದೋರ್ವರತಿ | ಗರ್ವಿಗಳು ಸಾಹಸರು |
ಸರ್ವಥಾ ಪೊಗಳುವರೆ | ಶರ್ವಗಸದಳವು | ||17||

ಭಾಮಿನಿ

ಎನುತರಘುರಾಜೇಂದ್ರ ಚಂದ್ರಮ |
ನನುಜನೊಡನೈತಂದ ಶಿಬಿರಕೆ |
ದಿನಪನೋಲಗ ಹರಿದುದತ್ತಲು ಮೆರೆಯೆನಿಶಿಯೋಗ ||
ಅನಕ ದಶಮುಖ ನಿತ್ತನೋಲಗ |
ವನುಸುರಾರಿಗಳೊಗ್ಗಿನಲಿ ನಿಜ |
ತನಯನತಿಕಾಯಾಂಕನಳಿವನು ಕೇಳ್ದು ಖಳನಾಗ ||18||

ರಾಗ ನಾದನಾಮಕ್ರಿಯೆ ಅಷ್ಟತಾಳ

ಚಿತ್ತದಿ ಹಲವ ಹಂಬಲಿಸುತ್ತ | ಕಾಡ |
ಹತ್ತಿದ ಕುರುಡನೊಲಲೆವುತ್ತ |
ಅತ್ತಿತ್ತ ನೋಡುತ್ತ ಸೊರಗಿದ | ರಣ |
ಕುತ್ತರವೇನೆಂದು ಮರುಗಿದ | ||19||

ಅನುಜನಧುರಕಟ್ಟಿ ಕಳೆದೆನು | ಮತ್ತೆ |
ತನಯನರಾಂತಕ ನಳಿದನು ||
ಘನಪರಾಕ್ರಮಶಾಲಿಯತಿಕಾಯ | ರಣಾ |
ವನಿಯೊಳಿಂದಸ್ತಮಿದಪ್ರೀಯ | ||20||

ಅರಿಗಳುಪೆರ್ಚಿದರೆನ್ನುತ್ತ | ಮನ |
ಕರಗಿರಕ್ಕಸರಾಯನಿರೆಮತ್ತ ||
ಸುರರಾಯಜೀತು ನಡೆತಂದನು | ತಂದೆ |
ಗೆರಗಿ ಪಲ್ಮೊರೆವುತ್ತ ನುಡಿದನು | ||21||

ರಾಗ ಸೌರಾಷ್ಟ್ರ ತ್ರಿವುಡೇತಾಳ

ಜನಕ ದುಗುಡವಿದೇಕೆ ನಾಳೆಯೊ
ಳನುವರದಿನರಪ್ಲವಗರನು ಶಾ |
ಕಿನಿಯರಿಂಗೀಯದಿರೆ ಕೇಳ್ ತವ | ತನುಜನಲ್ಲ |   ||22||

ಅಸುರ ಪತಿ ಕೇಳ್ ನಿನ್ನ ಸೋಲದ |
ಸಸಿಯಕಿತ್ತಿಕ್ಕುವೆನು ರಾಮನ |
ಬಸುರಿನಲಿ ಬೆಳಗುವೆನು ಲಕ್ಷ್ಮಣ | ನುಸುರ ಜಲದಿ | ||23||

ಮತ್ತೆ ಸುಗ್ರೀವನಕಪಾಲವ |
ನೊತ್ತಿ ಪಾತ್ರೆಯನೆಸಗಿ ಕಪಿಗಳ |
ನೆತ್ತರನು ತುಂಬುವೆನು ಬಿಡು ಪರ | ರಿತ್ತ ವ್ಯಥೆಯ | ||24||

ಅಳಿದ ಧೂಮ್ರಾಕ್ಷಾದಿಸುಭಟಾ |
ವಳಿಯ ನಿನ್ನೋಲಗದಸಭೆಯಲಿ |
ಸುಳಿಸುವೆನು ಕೊಡದಿರೆ ಕತಾಂತನ | ನುಳಿಯಗೊಡೆನು | ||25||

ಅರಿಯೆಯಾ ಮಮಶೌರ‌್ಯದೇಳ್ಗೆಯ |
ಧುರದೊಳಿಂದಾ ಸೋತುಬಂದರೆ |
ಉರಿಯಕುಂಡವಪೊಗುವೆ ಕಳುಹೈ | ಭರದೊಳೆನ್ನಾ | ||26||

ಕಂದ

ಮಣಿದಿಂತೆಂದಾಖಳ ರಾ |
ವಣನಿಂ ನೇಮವ ಕೊಂಡಡರುತರಥಮಾಗಂ |
ಎಣಿಸುತ ರಾಕ್ಷಸಬುಧ ತಿಂ |
ಥಿಣಿಯೊಡನೈದಿಯೆ ಪೊಕ್ಕುನಿ ಕುಂಭಿಣಿಯೊಳಗಂ | ||27||

ಭಾಮಿನಿ

ಉರಿಯನುದರವ ಬಗಿದುತಾ ವಿ |
ಸ್ತರಿಸಿದನು ಕುಂಡದಲಿ ಮಾಂಸದ |
ಚರುವಿನರುಣಜಲಾಜ್ಯ ಧಾರೆಯನರದ ದರ್ಭೆಗಳ ||
ಬೆರಳ ಸಮಿಧೆಯಲಾಭಿಚಾರಾ |
ಧ್ವರವ ನಿರ್ವರ್ತಿಸಿದನಾನಡು |
ವಿರುಳೊಳಂಚೆಯ ನೇರಿಬಂದಜ ನುಡಿಸಿದನು ಖಳನ | ||28||

ರಾಗ ನವರೋಜು ಏಕತಾಳ

ಸಾಕುಸಾಕೆಲೆ ಮಗನೆ | ಇನಿ |
ತ್ಯಾಕೊ ರಾಕ್ಷಸವರನೆ ||
ಈ ಕಠಿಣಾಧ್ವರ | ವೇಕೈ ಚಿತ್ತಕೆ |
ಬೇಕಾದುದ ಕೇ | ಳಾ ಕೊಡುವೆನು ಭಲ ||29||

ತಿಳಿದೆನು ನಿನ್ನಯ ಪರಿಯ | ಈ
ಕೊಳುಗುಳ ಜೈಸುವ ಬಗೆಯ ||
ಘಳಿಲನೆಯೋಚಿಸಿ | ತಳುವದೆ ಮಖಮ |
ನ್ನಿಳೆಯೊಳಗೆಸಗಿದೆ | ಭಳಿರೆ ಪರಾಕ್ರಮ ||30||

ಇದಕೊರಥ ಬಲಹಯವ | ಮ |
ತ್ತಿದಕೋಶರಾಸನಶರವ ||
ಇದಕೊನಿಧಾನಿಸು | ಒದಗಿದ ಸಂಗರ |
ವದ ಜೈಸೆನ್ನುತ | ಪದುಮಜ ನಡೆದನು | ||31||

ರಾಗ ಮಾರವಿ ಏಕತಾಳ

ಕೆರಳುತಮಿಗೆ ಹುಂಕರಿಸುತ ರಾವಣಿ |
ಪೊರಟು ನಿಕುಂಭಿಣಿಯ ||
ಧಿರುರೆಶಭಾಸೆಂ | ದರಿಗಳ ಮೊತ್ತವ |
ತರಿದಾರಘುಪತಿಯ | ||32||

ಬಿಂಕವ ನಿಲಿಸುವೆ ಬಿಡೆ ಕೈತಡೆಯಲಿ |
ಶಂಕರನುಗ್ರದೊಳು ||
ಶಂಕಿಪೆನೇ ಫಡ ಶಾಕಿನಿಯವರೇನ್ನ |
ಕಿಂಕರರಿಂದಿನೊಳು | ||33||

ತಾತನೊಳಾಡಿದ ಮಾತನು ಸಲಿಸಲಿ |
ನ್ನೇತರ ಭಯವೆನುತ |
ಖಾತಿಯೊಳುಬ್ಬಿರಿ ದಾತನುಲಿದಸುರ |
ವ್ರಾತಬೆದರಲಿತ್ತ | ||34||

ವಾರ್ಧಕ

ತೋರಿದಂ ಶಕ್ರನಿನಕುಲಗಚ್ಚಮುಕುರಮೆನೆ |
ಸಾರಿದಂ ಭಾನು ಪೂರ್ವಾಚಲದೊಳಾಗ ಖಳ |
ಸಾರಿದಂ ಭಟರಿಂಗೆ ಕರ್ಪೂರ ವೀಳ್ಯಮಂ ಭುವನತ್ರಯಂ ಬೆಚ್ಚಲು ||
ಏರಿದಂ ಮಣಿರಥವರಿಪುರಾಯಮೋಹರಕೆ |
ಹಾರಿದಂ ಭೀತಿಯಂ ನಿಜಧನುರ್ನಾದದಿಂ |
ಮಾರಿದಂ ಕಾಲಾಗ್ನಿಗೆಂಟುಮಡಿ ಕೋಪದಿಂದೈತಂದನಿಳೆಯದುರಲು | ||35||

ಭಾಮಿನಿ

ಉಕ್ಕಿದವು ನದಿ ಧೂಮಕೇತುವಿ |
ದಿಕ್ಕಿನಲಿ ತೋರಿದವು ನೆಲ ಬೊ |
ಬ್ಬಿಕ್ಕಿದವು ವರಮಾನಗಂಗಳುಹಾರಲಗ್ನಿಕಣ ||
ಮುಕ್ಕುರಿಕಿ ಸಿಡಿಲೊದರಿದವು ಕಾ |
ಲಿಕ್ಕಿದುದು ಕಡುಭೀತಿಪರ ಬಲ |
ಕಕ್ಕಜದೊಳದಕಂಡು ತರಣಿಜಗೆಂದ ಹರಿಶರಣ | ||36||

ರಾಗ ಸಾರಂಗ ಏಕತಾಳ

ನೋಡಿದೆಯಾ | ಇನಜ | ನೋಡಿದೆಯಾ    || ಪಲ್ಲವಿ ||
ನೋಡಿದೆಯ ಇನಜಬಪ್ಪ | ಕೇಡಿನಸೂಚನೆಯ ಮುಂದೇ |
ನ್ಮಾಡಿರಿವರೊಖಳರುನಾವ್ ಮಾ | ತಾಡಲವಧಿಯಿಲ್ಲವಯ್ಯ | ||37||

ಏನೇನ ಮಾಡಿದರು ಕೇಳೈ | ಹಾನಿಬಲಕಿಂದಾಗದಿರದು |
ನಾನೇನೆಂಬೆ ಕೇಳದರಿಂದ | ನೀನೀಗ ಪೋಗಿ |
ಭಾನುವಂಶ ತಿಲಕರಿಗೆ ಸುಯ್ | ಧಾನಕಿಟ್ಟು ಮತ್ತೆ ಧುರಕೆ |
ಸೈನಿಕರನುನೆರಹಿಬಾರೈ | ನಾನು ಮುಂದಾಗಿ | ||38||

ಬರುವ ಭಟನತೇರ ತಡೆದು | ಮರಳಿಚುವೆನುತ್ಪಾತಶತಗ |
ಳಿರವನು ಕಂಡೆನ್ನ ಮನಸು | ಜರುಗಿತಲ್ಲಯ್ಯ ||
ಇರುಳೊಳು ಶಕ್ರಾರಿ ನಮಗೆ | ಅರಿಯದಂತೆಯಾಭಿಚಾರಾ |
ಧ್ವರವಗೈದನೇನೊ ಬಪ್ಪ | ಬರವ ನೋಡಯ್ಯ | ||39||

ಕಂದ

ಎಂದು ವಿಭಿಷಣ ಗದೆಕೊಂ |
ಡಂದದಿ ಮರಳಿದನತ್ತಲು ಮತ್ತಾ ರವಿಜಂ ||
ಬಂದಭಿನಮಿಸುತ ಕೌಸಲೆ |
ನಂದನಗುಸಿರಿದತಾ ಮುಗಿಯುತ ಕರಯುಗಮಂ | ||40||

ರಾಗ ಸುರುಟಿ ಏಕತಾಳ

ಲಾಲಿಸು ರಾಜೇಂದ್ರ | ದಶರಥ |
ಬಾಲಸುಗುಣಸಾಂದ್ರ ||
ಕಾಲಾಂತಕ ಕಮನೀಯಸುವಿಕ್ರಮ |
ಬಾಲಾರ್ಕಾಮಿತತೇಜಸುಧಾರ್ಮಿಕ | ||41||

ಇಂದಿನೊಳಾಜಿಯಲಿ | ಜೈಸುವ |
ಡಿಂದುಧರನೆ ಬರಲಿ ||
ಹೊಂದದುಗಡ ಖಳರಾವಣಿಯೊಡನೆನು |
ತೊಂದರುಹಿದ ಪದಕಮಲಾರಾಧಕ | ||42||

ತೆರಳಿದ ಧುರಕತ್ತ | ನಿಮ್ಮೊಳ |
ಗೊರೆಯಲು ತಾನಿತ್ತ ||
ಮರಳಿದೆ ನೋಡತಿದುರ್ಧರ ಶಕುನವ |
ಹರಿನಮ್ಮೆಲ್ಲರ | ಪೊರೆಯೆನುತೆರಗಿದ | ||43||

ಭಾಮಿನಿ

ಇರಿಸಿದನು ಬಳಿಕವನಿಪತಿ ಹ |
ತ್ತಿರ ಸಮಾರನಸುತಸುಷೇಣರ |
ಧುರದ ಮೂಡಣಬಾಗಿಲಲಿ ಶತಬಲಿಗವಾಕ್ಷರನು ||
ಪರುಠವಿಸಿ ಪಡುವಲಿಗೆ ಪನಸನ |
ಶರಭ ಮೈಂದದ್ವಿವಿಧರನು ನಿಲಿ |
ಸಿದರೆ ನೀಲಾಂಗದರು ಸಹ ನಡೆತಂದರಾಹವಕೆ | ||44||

ರಾಗ ಶಂಕರಾಭರಣ ಮಟ್ಟೆತಾಳ

ಇತ್ತಲನಿತರೊಳಗೆರಣಸಂ |
ವರ್ತ ಶಿಖಿಯ ಹೊರಳಿಯಂತೆ |
ಮತ್ತಗಜ ತುರಂಗರಧಿಕ | ಮೊತ್ತದೊಗ್ಗಿಲಿ ||
ವತ್ರವೈರಿಜಿತನು ಬರೆಕಾ |
ಣುತ್ತಲಿದಿರು ಹಾದುಶರಣ |
ಎತ್ತ ಪೋಪೆ ಫಡ ಎನುತ್ತ | ಮತ್ತೆ ಭರದಲಿ | ||45||

ಕುಲಕುಠಾರ ಭಳಿರೆಬಂದು |
ಸಿಲುಕಿದೆಯಲ ನಿಂದು ನಿನ್ನ |
ತಲೆಯ ಕಾವ ದೈವ ವಾವ | ನೆಲೊ ಮದಾಂಧನೆ |
ತೊಲಗು ಫಡಫಡೆನುತ ಸರಳ |
ನಿಲದೆ ತುಡುಕಿದನು ಮಹಾಂತ |
ಬಲ ವಿಭೀಷಣಾಂಕ ನದರ | ಕಲಕಿಗಮ್ಮನೆ | ||46||

ದುರುಳ ಕೇಳು ಬಾಯ್ಗೆ ಬಂದ |
ತೆರದಿ ಬಗುಳ್ದರೆಲವೊ ನಿನ್ನ |
ಪರಿಯನರಿಯ ದವನೆ ತಾನು | ಧಿರುರೆ ಮೆಚ್ಚಿದೆ ||
ಕರದ ಬಲುಹ ನೋಡೆನುತ್ತ |
ಲೆರಗಿದಡೆ ಗದಾಗ್ರದಿಂದ |
ಭರಕೆತಪ್ಪಿ ಮಗುಳೆ ಜರೆದ ನರಿಯಲೇನಿದೆ | ||47||

ಶಿರವ ತರಿವೆನೆನಲು ದ್ರೋಹಿ |
ಕಿರಯ ಜನಕನಾದೆ ಸತ್ವ |
ದಿರವ ನೋಡೆನುತ್ತ ತನ್ನೊ | ಳರಿದು ನಿಮಿಷಕೆ ||
ಮರುತ ಬಾಣವೆಚ್ಚಡಾಗ |
ತೆರಳಿಚಿತು ಮೇಣಭಕತ್ತ |
ತಿರುಗಿದನು ಶಕ್ರಾರಿಯಿತ್ತ | ಲರಿಸಮೂಹಕೆ | ||48||

ಕಂದ

ಅರಿಭಟನಂಗವ ಕಾಣುತ |
ತರಣಿಜನತಿಶಯ ಕೋಪದಿಕಿಡಿಯಿಡುತಾಗಳ್ |
ಭರದಿಂದಾನೆಯ ಶಿರಕಂ |
ಹರಿತಾಲಂಘಿಪ ವೊಲುಧಿಂ ಕಿಟ್ಟವಗೆಂದಂ | ||49||

ರಾಗ ಘಂಟಾರವ ಅಷ್ಟತಾಳ

ಎಲ್ಲಿಗೈದುವೆ ನಿಲ್ಲೆಲೊ ಶಕ್ರಾರಿ ||
ಮಲ್ಲಸಾಹಸದಂದಗಳನೆ |
ನ್ನಲ್ಲಿ ತೋರಿಸೊ ತೋರಿಸೊ | ||50||

ತೋರಲೇನುಂಟುಫಡ ಕೋತಿನಿಲು ನಿನ್ನ ||
ಭಾರಿನೆತ್ತರ ಹೀರಿಸುವೆರಣ |
ಮಾರಿಯರೊಳಿಂದೆಲವೆಲ | ||51||

ಸಾಕು ಸಾಕೆಲೊ ಬಗುಳದಿರೆನುತಲಿ ||
ಪಾಕಶಾಸನ ಮೆಚ್ಚುವೋಲು |
ದ್ರೇಕಬಲಖಳಗೆರಗಿದ | ||52||

ವಾರ್ಧಕ

ನೊರಜುರುಬೆಗಮರಾದ್ರಿ ಜರಿವುದೇ ತರಣಿಜನ |
ಕರಹತಿಗೆ ಯಳುಕುವನೆ ಶಕ್ರಾರಿಗಣಿಸದದ |
ಕುರುಳಿಚಿದನಿನಜನಂ ಬಲುಬಾಣಘಾತದಿಂದೇನೆಂಬೆ ನಾಕ್ಷಣದೊಳು ||
ಹರಿಮೊಮ್ಮನಿದಿರಾಗಲಡಗೆಡಹಿಮೇಣ್ ಬಂದ |
ಹರಿಜನಗಳಜ ವಷಭರಂ ಜೈಸಿಮುಂದೆರಥ |
ಹರಿಸಿದಂ ಹರಿಯೆಡೆಗೆ ಹರಿಸುತಂಕಂಡಾಗ ಹರಿವೈರಿಯಂ ಖತಿಯೊಳು | ||53||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಬಾರೆಲವೊರಕ್ಕಸನಪುಂಸನೆ |
ತೋರುನಿನ್ನಯವಿಕ್ರಮಾದ್ರಿಯ |
ದೀರ ಮರುತಕುಮಾರ ನೆನ್ನೊಳು | ಸಾರುಮತ್ತೆ | ||54||

ಇನಿಬರೊಳು ನೀ ಪ್ರೌಢನೆಂಬುದ |
ನೆನೆಸಿಕೊಂಡಿಹೆನಾದರಿಂ ದಿನ |
ದಿನದೊಳೆನ್ನನು ತಡೆದುಬಾಳ್ವೆಯ | ಹನುಮ ನೀನು | ||55||

ಆದಡಿದಕೋ ಎನುತ ಮುಷ್ಟಿಯೊ |
ಳಾದುರಾಗ್ರಹಗೆರಗೆತಪ್ಪಿಸಿ |
ಮೇದಿನಿಯೊಳಜಶರದಿ ಹನುಮನಕಾದನಂದು | ||56||

ಕಂದ

ನಿಂತುಮಹೋಗ್ರದಿತಾ ಮುಂ |
ದಂತರಿಸುತಬೃಹಶಕ್ರಾರಿಯನಡಹಾಯ್ದುಂ ||
ಅಂತಕಹರನೋಲೂರ್ಮಿಳೆ |
ಕಾಂತಂ ಕೂರ್ಗಣೆಸುರಿಸುತ ತೊಲತೊಲಗೆಂದಂ | ||57||

ರಾಗ ಭೈರವಿ ಅಷ್ಟತಾಳ

ಎಲೆ ಮೇಘನಾದಕೇಳು | ಉಳ್ಳಡೆಭುಜ |
ಬಲವ ತೋರದೆ ಯೆನ್ನೊಳು ||
ಚಲಿಸುವೆ ಮುಂದೆಲ್ಲಿ | ನಿಲ್ಲೆಂದು ತೆಗೆದೆಚ್ಚ |
ಬಲುತರ ಶರಗಳನು | ||58||

ಅತಿರಥನಂಬುಗಳ | ಕತ್ತರಿಸುತ್ತ |
ಲತಿಪರಾಕ್ರಮಿ ದುರುಳ ||
ಅತಿಕಾಯನನು ಗೆದ್ದು | ನ್ನತಿಯನ್ನು ತೋರ್ದರೆ |
ಹತಿಸ ದಿರ್ಪೆನೆ ಪೋಗೆಲಾ ||59||

ಬಗುಳದಿರೇಲವೊ ಹೇಡಿ | ಮಾಯಕಮಂತ್ರಾ |
ದಿಗಳೊಳು ನೀ ಪ್ರೌಢಿ ||
ಬಗೆಯೆಲ್ಲಬಲ್ಲೆ ಪ | ನ್ನಗ ಪಾಶದೊಳು ಗೆದ್ದ |
ಬಗೆತೋರೆಂದೆಚ್ಚಡಾಗ | ||60||