ರಾಗ ನೀಲಾಂಬರಿ, ಏಕತಾಳ
ಯಾರಿಗೆ ಪೇಳುವೆ ನಾನೂ |
ತರಳರ ಸಂಹರಿಸಿದನೂ ||
ಮರೆವುದುನಾನೆಂತಿದನೂ |
ಹರನೇ ಬಲ್ಲನು ತಾನೂ || ||274||
ರಾಘವನೆಂಬಾಮನುಜಾ |
ನೀಗಿದರಸು ಮಮ ತನುಜಾ |
ರ್ನಗೆ ಗೇಡಾಯ್ತೈ ಸಹಜಾ |
ಹಗರಣಕೈದುವೆನೀಗಾ ||275||
ದನುಜರನೆಲ್ಲರ ಸದೆದೂ |
ವನಚರರೆಲ್ಲರುನೆರೆದೂ ||
ಮನ ಮರುಗಲೇನಹುದೂ |
ಜನಪತಿ ಗರ್ವವ ಮುರಿದೂ ||276||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಅಂಗವೇ ಸುಭಟರಿಗೆ ಹೆಂಗಸಿ |
ನಂಗವಳಿವುದು ವಿಹಿತವೇ ಎನು |
ತಂಗವಣೆ ಲೇಸಾಯ್ತು ಕುಭಟರ | ಭಂಗಿಸುವೆನೂ ||277||
ಕಾಲನಾಗಲಿ ನೀಲನಾಗಲಿ |
ಕಾಲಕಾಲ ಕಪಾಲಿಯಾಗಲಿ |
ಮೂಲ ನಾಲ್ಕರಶರಧಿ ಮಧ್ಯದೊ | ಳಿರಲಿ ಬಳಿಕಾ ||278||
ಹಿಡಿದು ತಂದಾ ಹುಡುಗರೀರ್ವರ |
ಹಡೆಮುಡಿಯ ಕಟ್ಟುಗಿದು ಬಿಡುವೆನು |
ಕಡೆಯ ಮಾತೇನವರ ದೇವಿಗೆ | ಕೊಡುವೆ ಬಲಿಯಾ ||279||
ಭರದಿ ಮಾರೀಮುಖನು ರಣಸ |
ನ್ನದ್ಧನಾಗುತ ರಥವನೇರ್ದನು |
ಪರಿಪರಿಯ ಬಹು ವಾದ್ಯಘೋಷದಿ | ಪೂರಟನಾಗಾ ||280||
ರಾಗ ಭೈರವಿ, ತ್ರಿವುಡೆತಾಳ
ನಡೆದನಾಗ | ಸಮರಕೆ | ನಡೆದನಾಗ || || ಪಲ್ಲವಿ ||
ನಡೆದನಾಸಮಯದಲಿ ದಾನವ |
ಪಡೆಯ ಸಹಿತೊಡಗೊಂಡು ಭೂಮಿಪ |
ರೊಡನೆಕಾದುವೆನೆಂಬ ತವಕದಿ |
ಘುಡಿಘುಡಿಸುತಡಿಯಿಡಲು ಮುಂದಕೆ |
ಪೊಡವಿ ಕುಸಿದಿದು ಒಡನೆ ಫಣಿಪನ |
ಹೆಡೆಗಳತಿ ಕುಕ್ಕರಿಸುವಂತಿರೆ |
ಹೊಡೆವ ಭೇರಿಯ ರವ ನಿಧಾನಕೆ |
ಮಡಸುರೇಂದ್ರಾದಿಗಳು ಬೆರಗಿಡೆ || ನಡೆದನಾಗಾ ||281||
ಹತ್ತು ಸಾವಿರ ಭಾರಿಗದೆಗಳಿ |
ಪ್ಪತ್ತು ಸಾವಿರ ಶರದ ಭಂಡಿ ಮೂ |
ವತ್ತು ಸಾವಿರ ರಥಗಳನುನಾ |
ಲ್ವತ್ತು ಸಾವಿರ ಕುದುರೆಗಳು ಐ |
ವತ್ತು ಸಾವಿರ ರಥಿಕರೊಡನರು |
ವತ್ತು ಸಾವಿರ ಸೇನೆಗಳು ಸಹ |
ಮತ್ತೆಗಣನೆಗೆ ಎರಡು ಲಕ್ಷದ |
ಹತ್ತು ಸಾವಿರವನ್ನು ಕೂಡಿಸಿ || ನಡೆದನಾಗಾ ||282||
ಮುತ್ತಿರೋ ಮುಂಬರಿವ ಸುಭಟರ |
ಹಸ್ತಗಳ ಬಿಗಿ ಬಿಗಿದು ಕಟ್ಟಿರೋ |
ಕತ್ತಿಯವರೊಗ್ಗಾಗಿ ಕಪಿಗಳ |
ಮೊತ್ತವನು ಸಂಹರಿಸಿ ಕೆಡಹಿರೊ |
ನೆತ್ತಿ ಒಡೆವಂದದಲಿ ಸುಭಟರ |
ಹಸ್ತಿಯಿಂದಲಿ ತುಳಿಸಿರೋಯೆನು |
ತೆತ್ತಲಿತ್ತಲು ಹೋಗಗೊಡದಿರೆ |
ನುತ್ತ ಖಳಪತಿ ಬೆಸಸೆ ದನುಜರು || ನಡದನಾಗಾ ||283||
ಭಾಮಿನಿ
ಅವನಿಪತಿ ಕಾಣುತ್ತ ಶರಣನೊ |
ಳಿವನುದಾರೈ ಯಿಂಥ ರಕ್ಕಸ
ರವನಿಯೊಳಗಿನ್ನೇಸು ಜನರಿದೆ ಶಿವ ಮಹಾದೇವಾ ||
ಇವನು ಮೊದಲಲಿ ಬಂದ ಕುಂಭ |
ಶ್ರವಣನೋ ದೇವಾಂತಕನೊ ವರ |
ದಿವಿಜರಿಪುವೋ ಅವನಿಚೋರನೊ ಯಾರು ಪೇಳೆನಲೂ ||284||
ರಾಗ ತೋಡಿ, ಅಷ್ಟತಾಳ
ಜಲಜನಾಭನೆ ಕೇಳೂ | ಮೊದಲವನಲ್ಲಾ |
ಕಲಹದೊಳರಿಭಟನೂ || ಬಲುಧೀರ ರಕ್ಕಸ |
ರಲಿ ಈತಗೆಣೆಯಿಲ್ಲ | ಛಲದೊಳಗತಿಶ್ರೇಷ್ಠನೂ ||285||
ಖೂಳರಾವಣನೀತನಾ | ಕಳುಹಿದರಿಂದ |
ಕಾಳಗಕೈತಂದನೂ || ಹೇಳುವುದೇನಿನ್ನು |
ಖೂಳನ ಗೆಲಲಿಕ್ಕೆ | ಭಾಳಾಕ್ಷ ನೋಳ್ತೀರದೂ ||286||
ದೊರೆಯೆ ನೀ ದಯಮಾಡೀ | ಪೊರಟಾರೆ ರಣದೊಳು |
ದುರುಳನ ಗೆಲಬಹುದೂ || ಬರಿದೆ ಇನ್ಯಾರಿಂದ |
ತೀರದು ಸಮರದಿ || ಅಸುರನ ಕೊಲುವುದಕೆ ||287||
ರಾಗ ಮಾರವಿ, ಏಕತಾಳ
ಎನುತ ವಿಭೀಷಣ ಪೇಳುತಲಿರಲಾ |
ಘನ ಕೋಪದಿ ರವಿಜಾ ||
ಕನಕಾದ್ರಿಯಂದದ ಗಿರಿಯನು ಧರಿಸುತ |
ಚಿನುಮಯಾತ್ಮಕಗೆಂದನೂ ||288||
ಖಳ ಮಾರೀಮುಖನೆಂಬಸುರನ ಶಿರ |
ಹೋಳುಗಳವೆನೀಗಾ ||
ಕೇಳಸುರರ ಬಲ ಸಹಿತೀಗ ಸಮರದಿ |
ಸೀಳಿ ಬಿಸಾಡುವೆನೂ || ||289||
ಅಪ್ಪಣೆಯನು ಕೊಡು ಕೊಡು ಬೇಗದೊಳಗೆನು |
ತಿಪ್ಪವರನು ರಾಮಾ ||
ಮುಪ್ಪಿನ ಜಾಂಬವನೋರ್ವನ ನಮ್ಮಲ್ಲಿ |
ಒಪ್ಪಿಸಿ ನಡಿರೆಂದಾ ||290||
ಭಾಮಿನಿ
ರಾಘವನ ನೇಮದಲಿ ಕಪಿಪತಿ |
ಸ್ತೋಮ ಸಹ ನಡೆತಂದು ನಗವನು |
ತೂಗಿ ಬಿಟ್ಟನು ಖಳನ ಸಮ್ಮುಖಕಾಗಿ ರವಿಜಾತಾ ||
ಬೇಗದಲಿ ರಕ್ಕಸನು ತನ್ನಯ |
ಬಾಗೆಕಾರರು ಬಂದರೆನುತಲಿ |
ತೂಗಿದನು ಮಕುಟವನು ಒಲೆದೊಲೆದಾಗ ಸೈಗರೆದೂ ||291||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಎಲವೊ ಮಾರೀಮುಖನೆ ನಿನ್ನಯ |
ಬಲುಹ ಬಲ್ಲೆನು ನಿಲ್ಲು ಸಮರದಿ ||
ತಲೆಯ ಗೊಂಬೆನೆನುತ್ತ ರವಿಜನು | ನಲಿದು ನುಡಿದಾ ||292||
ಬಲ್ಲೆ ಸೂರ್ಯಕುಮಾರ ವಾಲಿಯ |
ಖುಲ್ಲ ತನದಲಿಕೊಲಿಸಿದಮನೆ ||
ಪಲ್ಲಗಳೆವೆನು, ನಿಮಿಷ ಮಾತ್ರದೊ | ಳಿಲ್ಲಿ ರಣದೀ ||293||
ಎಂದ ಮಾತನು ಕೇಳಿ ಖಳ ಖತಿ |
ಯಿಂದ ಪರಶು ಮುಸುಂಡಿ ಮುದ್ಗರ ||
ಖಂಡೆಯಾದಿ ಕಪಾಣ ತೋಮರ | ದಿಂದ ಮುದದೀ ||294||
ಬಿಡ ಬಿಡಲುಶಸ್ತ್ರಾಸ್ತ್ರವೆಲ್ಲವ |
ಕಡಿದು ರವಿಜನು ಬಡಿದು ಮರದಲಿ |
ಕಡೆಯ ಕಾಲವಿದೆನುತ ನುಡಿದನು | ಧಡಿಗಗಾಗಾ ||295||
ರಾಗ ಪಂಚಾಗತಿ, ಮಟ್ಟೆತಾಳ
ಎಂದು ಸೂರ್ಯಕುವರ ಖಳನ | ಬಂದು ತಿವಿದನೂ ||
ನಿಂದು ಚಪಳ ಫಡ ಫಡೆನುತ | ಲಂದು ಪೊಯ್ದನೂ ||296||
ಭಳಿರೆ ದನುಜ ಸುಭಟ ನೀನು | ಬಲು ಸಮರ್ಥನೂ ||
ಕಲಹದಲ್ಲಿ ನಿನ್ನ ಪೋಲ್ವ ಭಟರ ಕಾಣೆನೂ ||297||
ಕೇಳು ಕಪಿಯೆ ಖಳರ ಸಹಸ | ಬಲ್ಲೆಯಾ ನೀನೂ ||
ತಾಳು ತಾಳೆನುತ್ತ ಪೊಯ್ದನಾಗ ರವಿಜನೂ ||298||
ಖಳನು ಶಕ್ತಿಯಾ ಯುಧಗಳ | ಶೆಳೆದು ಪೊಯ್ದನೂ ||
ಇಳೆಗೆ ಮೂರ್ಛೆಯಾಗಿ ಬಿದ್ದ | ನಳಿನಸಖಜನೂ ||299||
ಭಾಮಿನಿ
ಖಳನ ಶರದುರುಬೆಯಲಿ ಭಾಸ್ಕರ |
ತನಯನಿಳೆಗೊರಗಿದನೆ ಹಾ ಹಾ |
ನಳಿನಸಖವಂಶಜನು ಕೇಳಿದರೀಗ ತನ್ನವನೂ ||
ಹಳಿಯದಿರಿ ತಾನಿನ್ನು ಸುಮ್ಮನೆ |
ಕುಳಿತೆನಾದರೆ ರಾಜಕಾರ್ಯವ |
ನಳಿದವನು ತಾನಾಪೆನೆನುತಾ ವರ ವಿಭೀಷಣನೂ ||300||
ರಾಗ ಮಾರವಿ ಏಕತಾಳ
ಬಾರೆಲೊ ಮಾರೀಮುಖ ನೀ ಎನ್ನೊಳು |
ತೋರಿಸು ಕೈಗುಣವಾ ||
ಬೀರುವೆ ಕರುಳನು ಶಾಕಿನಿಯರ ಪರಿ |
ವಾರಕೆ ನಿಮಿಷದಲೀ || ||301||
ಒಡೆಯನ ವೈರಿಯ ಕಡೆಯೆಂಜಲ ತಿಂ |
ದೊಡಲನುಪೊರೆದಿರುವಾ |
ಕಡುಹನು ನಿಲಿಸುವೆನೆನುತಾಕ್ಷಣ ಶರ |
ಬಿಡೆಯೊರಗಿದ ಶರಣಾ || ||302||
ಕಂದ
ಈ ಪರಿಯಿಂದಾ ಶರಣಂ |
ತಾಪಕಿರಣಜರ್ ಹವದೊಳ್ ಬೀಳಲ್ ಹನುಮಂ ||
ಕೋಪದೆ ಕಿಡಿಕಿಡಿಯಾಗುತು |
ಮಾಪತಿಯಂತೆ ರೋಷಿತನಾಗುತಿಂತೆಂದಂ ||303||
ರಾಗ ಸೌರಾಷ್ಟ್ರ, ಮಟ್ಟೆತಾಳ
ಕೇಳೊ ಮಾರೀಮುಖನೆ ದುಷ್ಟ ದನುಜ ಪಾತಕಿ |
ಖೂಳನಾವ ಬಗೆಗೆ ಬಂದೆ ನೀನಿ ಘಾತಕಿ ||304||
ಬಲ್ಲೆ ನಿಲ್ಲು ಯೆನುತ ಬಾಣತತಿಯ ಗರೆದನೂ ||
ಕಳ್ಳತನದೊಳಾಗ ಮಾಯಾ ಶರವನೆಸೆದನೂ ||305||
ಖಳನ ಮಾಯವರಿಯದಾಗ ಮರುತಸಂಭವಾ ||
ಮುಳಿದು ಗಿರಿಯ ಶಿಲೆಯನಿತ್ತನಂಜನೆಯ ಭವಾ ||306||
ಬರುವ ಗಿರಿಯದಾಯುಧಗಳ ತರಿದು ಘಾತಿಸೀ ||
ಭರದಿ ಗುರಿಯೊಳ್ ಶಕ್ತಿಶರವ ತಿರುವಿಗೇರಿಸೀ ||307||
ಬಿಡಲು ಶಕ್ತಿಶರದಿ ಹನುಮ ಮೂರ್ಛೆ ಗೈದನೂ ||
ಪೊಡವಿಯೊಳಗೆ ಸರಿಯದಾರೆನುತಲೀರ್ದನೂ ||308||
ಭಾಮಿನಿ
ಧರಣಿಯಲಿ ಮೈಮರೆಯೆ ಮರುತಜ |
ಭರದಿ ಗವಯ ಗವಾಕ್ಷ ಶತಬಲಿ |
ವರ ಸುಷೇಣಕ ನೀಲ ನಳ ಗಜ ಗಂಧಮಾದನರೂ ||
ಒರಗಿರಲು ಕಾಣುತ್ತ ಲಕ್ಷ್ಮಣ |
ಧರಣಿಪತಿಗಭಿನಮಿಸಿ ತನ್ನಯ |
ಶರಧನುವ ಝೆಂಕರಿಸಿ ನಡೆದನು ವೀರನಾಹವಕೇ ||309||
ರಾಗ ಭೈರವಿ, ಏಕತಾಳ
ಎಲ ಮಾರೀಮುಖನೆ ಕೇಳೂ | ಬಲು |
ಬಲವನು ಜಯಿಸಿದೆತಾಳೂ ||
ನಿಲು ನಿಲು ನಿಲು ಯೆಂದೆನುತಾ | ಬಲು |
ಶರಗಳನೆಚ್ಚನುಬೊಬ್ಬಿಡುತಾ ||310||
ಹುಡುಗ ಲಕ್ಷ್ಮಣ ಕೇಳೀಗಾ | ನಿ |
ನ್ನೊಡಲನು ಬಗೆದತಿ ಬೇಗಾ ||
ತಡೆಯದೆ ತರಳರ ತೆಗೆವೆ | ಕೇಳ್ |
ಬಿಡುಗಣ್ಣರ ಪುರ ತೋರಿಸುವೇ ||311||
ಮೂಢ ರಕ್ಕಸ ಕೇಳೀಗಾ | ಎ |
ನ್ನೊಡಲೊಳಗಿಲ್ಲವರೀಗಾ ||
ಮಾಡಿಹರೆಮನಲಿ ಮನೆಯಾ | ನೀ |
ನೋಡಲು ಬಹುದೀಗಲೆ ಗೆಣೆಯಾ ||312||
ರಾಗ ಪಂತುವರಾಳಿ, ಮಟ್ಟೆತಾಳ
ಎನಲು ಕೇಳುತಾಗ ಖಳನು ಉರಗಶರವನೂ ||
ಕನಲಿ ಪೊಡೆಯಲಾಗ ಗರುಡಶರದಿ ತರಿದನೂ ||313||
ಗೋತ್ರವೈರಿ ಶರವ ತೆಗೆದಸುಮಿತ್ರೆಯಾತ್ಮಜಾ ||
ರಾತ್ರಿಚರನಿಗೆಸೆಯೆ ಬಿದ್ದ ಧರೆಯೊಳ್ದನುಜಾ ||314||
ಹರುಷದಿಂದಲಿರಲಿಕತ್ತಲಮರರಾಕ್ಷಣ ||
ಹರಣವುಳಿಯಿತೆನುತಿರೆದ್ದ ದನುಜನಾಕ್ಷಣಾ ||315||
ಏಳುತಾಗ ಶಕ್ತಿಶರವ ತೆಗೆಯುತಾಕ್ಷಣ ||
ತಾಳು ತಾಳೆನುತ್ತ ಪೊಡೆಯಲ್ಬಿದ್ದ ಲಕ್ಷ್ಮಣಾ ||316||
ಭಾಮಿನಿ
ತರುಣಿವಂಶಜ ಕೇಳು ಲಕ್ಷ್ಮಣ |
ಧರಣಿಯಲಿ ಮೈಮರೆಯೆ ಕಾಣುತ |
ಶಿರವರಿದು ಕೊಂಡೊಯ್ದು ಕೊಡುವೆನು ರಾವಣೇಶ್ವರಗೇ ||
ಕರದಿ ಖಡ್ಗವ ಧರಿಸಿ ದಾನವ |
ಶಿರದೆಡೆಗೆ ಬರಲಾಗ ಶ್ವಾಸದ |
ಉರಿಗೆಮುಂದಕೆ ಸೇರಲರಿಯದೆ ತಿರುಗೆ ರಾಘವನಾ ||317||
ಕಂದ
ಶಿರವರಿದೀಕ್ಷಣ ತಡೆಯದೆ |
ಭರದಿಂದೊಡೆಯಗೆ ಕೊಡುವೆನೆನುತ ಯೋಚಿಸುತಂ ||
ಹರುಷಿಸೆ ರಾಘವನಿತ್ತಂ |
ಉರಿತಾಪವಿದೇನೆನುತಾ ಜಾಂಭವಗುಸುರ್ದಂ ||318||
ರಾಗ ಸೌರಾಷ್ಟ್ರ, ತ್ರಿವುಡೆತಾಳ
ಕೇಳು ಜಾಂಬವದೇವ ಜಠರದೊ |
ಳೇಳುತಿದೆ ಉರಿತಾಪ ಶಿಖಿ ಛ |
ಡಾಳಿಸುವದೇನಿನ್ನು ರಣದಲಿ | ಹಾಳು ಕೆಲಸಾ ||319||
ಹೇಳಿಫಲವೇನಿನ್ನು ಲಕ್ಷ್ಮಣ |
ಖೂಳನುಪಹತಿಯಿಂದ ಮೈಮರೆ |
ದೇಳದೊರಗಿದರೆಲ್ಲ ಮರುತಜ | ಜಾಂಬವಂತಾ ||320||
ಸುಮ್ಮನಿಹುದನುಚಿತಗಳಲ್ಲವೆ |
ಒಮ್ಮೆ ನೋಡಲುಬೇಕು ಸಮರವ |
ನಿಮ್ಮ ಚಿತ್ತದೊಳೇನನೆಸಗಿದಿ | ರೆಮ್ಮೊಳುಸುರೀ ||321||
ಭಾಮಿನಿ
ಹೇಳಲಿಕೆ ಹೊತ್ತಿಲ್ಲ ರಾಘವ |
ಕೋಳುಹೋದುದು ನಮ್ಮ ಸೇನೆಯು |
ಏಳಿ ಮರುತಜನಿರವ ನೋಡುವ ಯೆನುತ ಜಾಂಬವನೂ ||
ಹೇಳೆದೀ ಮಾತಹುದು ಎನುತಲೆ |
ಖೂಳರುಪಹತಿಯಿಂದ ಬಿದ್ದಿಹ |
ರಾಳುಗಳನೀಕ್ಷಿಸುತ ಬಂದರು ಮರುತಜನ ಹೊರಗೆ ||322||
ಕಂದ
ಮರುತಜ ರವಿಜರ ಕಾಣುತ |
ಪರಿಪರಿ ಗುಣಗಳ ನೆನೆಯುತೆ ಶೋಕಿಸಿ ರಘುಜಂ ||
ಕರಕರದೆಬ್ಬಿಸುತಿರೆ ಸುರ |
ತರುಗಳಿವೆಂಬಂತೆದ್ದರು ಕಪಿವರರಾಗಂ ||323||
ದ್ವಿಪದಿ
ಮರುತಜನ ಕರವಿಡುದು ಬರಲು ರಘುನಾಥ ||
ಪರಿಪರಿಯೊಳ್ ಶವವ ಶೋಧಿಸುರ್ತಿದನಾತ ||324||
ವರವಿಭೀಷಣದೇವನಿರವ ನೋಡುತ್ತಾ ||
ಮರುಗಿದನು ಮನದೊಳಗೆ ಹಲವನೆಣಿಸುತ್ತಾ ||325||
ಮಿತ್ರಭಾವದಿ ಬಂದು ಸೇರೆ ನಮ್ಮವನೂ ||
ಧಾತ್ರಿಯಧಿಪತಿತನಕೆ ಧಾರೆಯೆರೆದಿಹೆನೂ ||326||
ಉಳಿವ ಯತ್ನವದೇನ ಕಾಣಬೇಕೆನುತಾ ||
ತಿಳಿದು ಜಾಂಬವದೇವನಿಂದ ರಘುನಾಥಾ ||327||
ಕರದಿ ತಡವರಿಸಲಾ ಸುರ ವಿಭಿಷಣನೂ ||
ಶಿರವ ನೆಗಹುತಲೇಳಲನುಜನೆಲ್ಲಿಹನೂ ||328||
ಅನುಜ ಲಕ್ಷ್ಮಣನಿರವ ಕಾಣೆನೀ ಯೆಡೆಯಾ ||
ದನುಜ ನಿಲ್ಲುದು ಮನಸು ತೋರಾವ ಕಡೆಯಾ ||329||
ಭಾಮಿನಿ
ಅನುಜನನು ನೆನೆಯುತ್ತ ರಾಘವ |
ಹನುಮ ಜಾಂಬವ ವರ ವಿಭೀಷಣ |
ರನುವರವ ಶೋಧಿಸುತ ಬಂದರು ಪೂರ್ವಮುಖವಾಗೀ ||
ಧನುವ ಕರದಲಿ ಪಿಡಿದು ಲಕ್ಷ್ಮಣ |
ತನುವ ಮರೆದೊರಗಿರಲು ಕಾಣುತ |
ಮನದೊಳತಿ ಚಿಂತಿಸುತ ಬಿದ್ದನು ಮರುಗಿ ಬಿಸುಸುಯ್ದೂ ||330||
ರಾಗ ನೀಲಾಂಬರಿ, ರೂಪಕಕತಾಳ
ಯಾತಕೆ ಮಲಿಗಿದೆ ರಣದಲಿ | ನ್ಯಾತಕೆ ಮಾತುಗಳಾಡದೆ ಮ |
ಮತ್ಯಾತಕೆ ತನ್ನೊಳು ಈಪರಿ ಮನಮನಿಸೂ ||331||
ನೋಡಿರೆಜಾಂಬವ ರವಿಜರೀ | ರೀ | ಡಾಡಿದರನುಜನನನು ಮಾ |
ತಾಡಿಸಿದರೆ ತಾ ಮಾ | ತಾಡನು ಯಾಕೈ ||332||
ಇಂದಿನ ದಿನ ಪರಿಯಂತರ | ಕಂದನ ಸಲಹಿದೆ ನಾ |
ನಿಂದಿನ ದಿನಧಾರಭ್ಯವು ಋಣವದು | ಸಂದುದೆ ಯೆನಗೆನುತಾ ||333||
ಕಂದನ ಕರದಿತ್ತಿಹ ಜನನಿತ | ನ್ನಂದದ ಮಗನನುತೋರಿಸು |
ಯೆಂದೆನುತಲೆ ಕೇಳಿದರಿ | ನ್ನೆಂಬುದು ತಾನೇನೂ ||334||
ಭರತ ಶತ್ರುಘ್ನರು ತಾವರಿಯರು ವಿವರವದನುಜನ
ಕರೆಕರೆ ತೋರಿಸು ಎಂದರೆ | ತೆರನಾವುದುತನಗೆ ||335||
ಮಡದಿಯ ೋಹಕೆ ಅನುಜನ | ಕಡಿ | ದಾಡಿಸಿ ರಣದಲಿ ಬಂ
ದೊಡನೆಯೆಕೇಳಿದರೇನೈ ಹರ ಹರ ಶಿವ ವಿಧಿಯೇ ||336||
ರಾಗ ಮಾರವಿ, ಏಕತಾಳ
ಬಂದೆವು ಮೂವರಾರಣ್ಯದೊಳೊಂದಿನ ಸುಖ |
ದಿಂದಿರಲಿಲ್ಲವಲ್ಲೊ ತಮ್ಮಾ ||
ಬಂದುದೈ ಮಾರೀಚ ಬಹು ಮೃಗ |
ಕೊಂದಾಹುತಿಯಿತ್ತೆವಲ್ಲೊ ತಮ್ಮಾ ||337||
ಸತಿಯ ಹೋಗಾಡಿಕೊಂಡಾದರು ನಾನಿನ್ನ |
ಜತೆಯೊಳೀರ್ದೆನಲ್ಲೊ ತಮ್ಮಾ ||
ಗತಿಯಿನ್ನಾವುದು ಸಹ ಜಾತರತುನ |
ನೀನಿಲ್ಲವೇನೋ ತಮ್ಮಾ || ||338||
ವರುಷ ಹನ್ನೆರಡಾಗುವ ಪರಿಯಂತ |
ನಿರಶನವಾಯಿತಲ್ಲೊ ತಮ್ಮಾ ||
ಎನ್ನಂಥ ಪಾಪಿಯ ಸಂಗಡ ಜನಿಸಿದು |
ನಿನಗಿಂಗಾಯಿತಲ್ಲೊ ತಮ್ಮಾ ||339||
ಮೆರೆಸಿದೆ ಭುಜಬಲನೆಂಬ ಶಕ್ರಾರಿಯ |
ಶಿರವರಿದೆಯಲ್ಲೊ ತಮ್ಮಾ ||
ನಿನ್ನಂಥ ಗುಣಿಗಳಿನ್ನಿರುವರೆ ಲೋಕದಿ ||
ಪುಣ್ಯ ಹೀನನಾನಯ್ಯ ತಮ್ಮಾ ||340||
Leave A Comment