ವಾರ್ಧಕ

ವಜ್ರಮುಖನೆಂಬಸುರ ಬೀಳಲ್ಕೆ ದಾನವರ |
ಗರ್ಜನೆಯೊಳೈ ತಂದನಾ ಪ್ರಲಂಭಾಸುರಂ |
ಪ್ರಜ್ವಲಿಪ ಶಿಖಿಯಂತೆ ತೋರ್ದನಾ  ಕಪಿ ಬಲದೊಳರ್ಧಚಂದ್ರಾಕೃತಿಯೊಳೂ ||
ನೊರ್ಜುಗಳಿಂಗಜುವುದೆ ಮಹಮೇರುಪರ್ವತವು |
ವಜ್ರದಿಂ ಸಲೆ ಜಯಿಸಲೊಲ್ಲದೊಡೆ ಮಿಕ್ಕದರೊ |
ಳು ಜಯವಾಗದೆಂದೆನುತನಿಲಜಂ ನಿಮಿಷದೊಳ್ ಕೊಂದನೇಳರ್ಬುದವನೂ ||209||

ಭಾಮಿನಿ

ಮಾರುತಿಯ ಕರಹತಿಗೆ ದುರುಳನ |
ಭೂರಿ ಸೇನೆಯು ಕಾಲನೂರನು |
ಸೇರೆ ರೋಷಾವೇಶದಿಂದ ಪ್ರಲಂಭಾಸುರನೂ ||
ಭಾರಿ ಶಸ್ತ್ರಾಸ್ತ್ರಗಳ ಧರಿಸುತ |
ಘೋರ ದೈತ್ಯನು ಸೆರಿ ಬರುತಿರೆ |
ಮಾರುತಿಯ ಕಂಡಾಗ ತ್ವರಿತದಲಸುರಗಿದಿರಾದಾ ||210||

ರಾಗ ನಾದನಾಮಕ್ರಿಯೆ ಅಷ್ಟತಾಳ

ಯಾತಕೆ ವಜ್ರನೆಂಬಸುರನಾ | ಕೊಂದ |
ಪಾತಕಿ ಸಿಕ್ಕಿದೆಅಡಗಿಹನಾ ||
ಭೀತಿಯಿಲ್ಲದೆ ಸೀಳ್ವೆನೂ | ಎಂದು |
ಖಾತಿಯೊಳ್ನುಡಿದಪ್ರಲಂಭನೂ ||211||

ಹತ್ತು ಸಾವಿರ ಶರಗಳನೂ | ಮದೋ |
ನ್ಮತ್ತಹನುಮನಿಗೆಸದನೂ ||
ಮತ್ಯುವ ನಿನಗೀವನೆಂದನೂ | ವಾಯು |
ಪುತ್ರ ಬಿಡದೆ ತಾ ಮುರಿದನೂ ||212||

ಉಂಡು ಸೊಕ್ಕಿದ ಖೂಳ ನಿನ್ನ | ಬಾರೆಲೊ |
ರುಂಡವೀಗಿಳಿಸುವೆ ಕೇಳೆಲೊ ||
ಭಂಡ ರಕ್ಕಸ ನಿನ್ನಸುವನೂ | ಯಮ |
ಕುಂಡಕೆ ನೂಕಿಸಿ ಬಿಡುವೆನೂ ||213||

ರಾಗ ಪಂತುವರಾಳಿ, ರೂಪತಾಳ

ಎಲವೂ ಖೂಳ ಸುರರೊಳ್ಕಾದಿ |
ಗೆಲುವ ಕಾಣದಂಜುತೋಡಿ |
ತಲೆಯೆ ಮರೆಸಿಕೊಂಡು ವಿತಳ | ದಲ್ಲಿ ಹರುಷದೀ ||
ನಿಳಯವನ್ನುರಚಿಸಿಕೊಂಡು |
ಬಳಗ ಸಹಿತಲಿರ್ದು ಮತ್ತೆ |
ಖಳನಿಗಾಗಿ ವ್ಯರ್ಥನಮಗೆ ತಲೆಯ ತೆರುವೆಯಾ ||214||

ಬರಿದೆ ಸಾಯಬೇಡವಿನ್ನು |
ಕರವ ಮುಗಿದು ರಾಮನೊಡನೆ |
ಚರಣಕೆರಗಿ ಬೇಡಿಕೊಳಲು | ಪೊರವ ಕರುಣದೀ ||
ಧುರಸಮರ್ಥನಾದಡೀಗ |
ಪರಮ ಶಸ್ತ್ರಗಳನುಪಿಡಿದು |
ಭರದಿ ರಥವನೇರಿ ಕೈಯ | ಗುರಿಯ ತೋರೆಲೋ ||215||

ಅಷ್ಟರೊಳಗೆ ಧನುಜ ರಥವ |
ಥಟ್ಟನೇರಿ ಪೊಯ್ಪುತಿರಲು |
ಸಿಟ್ಟಿನಿಂದಹನುಮ ರಥವ |  ಮೆಟ್ಟಿ ಮುರಿದನೂ ||216||
ಆಗ ಪ್ರತಿ ರಥವನೇರ್ದು |
ತಾಗಲದರ ಮೆಟ್ಟಿ ಮುರಿಯೆ |
ಬೇಗದಿಂದ ತೇರನಡರೆ | ರೇಗಿ ಮುರಿದನೂ ||217||

ಭಾಮಿನಿ

ಕನಕರಥ ಹದಿನೆಂಟು ಸಾವಿರ |
ವನಿತುವಜಿಗಿಜಿಯಾಗುತಿರಲಾ |
ಅಕನ ಯೋಚಿಸುತಿರ್ದ ತನ್ನಯ ತನುವನುರೆ ಮರೆದೂ ||
ಧನುಜ ರಾವಣನನ್ನು ಮನದಲಿ |
ನೆನೆದು ಯೋಚಿಸುತಿರಲಿಕಾಕ್ಷಣ |
ಚಿನಿಮಯಾತ್ಮಕಭಕ್ತ ಪೊಯ್ದನು ಮರನ ಕೊಂಬೆಯಲೀ ||218||

ರಾಗ ಪಂಚಾಗತಿಮಟ್ಟೆತಾಳ

ರಥವ ಮುರಿಯಲಾಗ ಧನುಜ |
ಪ್ರತಿರಥವನೇರಿಕೊಂಡು |
ಖತಿಯೊಳೆಚ್ಚನಾಗ ದಿವ್ಯ | ವಜ್ರದೇಹನಾ ||219||

ವಿತಳದೇಶದರಸ ನನುಜ |
ಪ್ರತಿಭಟಾಖ್ಯ ಬಂದೆನಿದಕೊ |
ಗತಿಯ ತೋರ್ಪೆನೆನುತಹನುಮ | ಖತಿಯೊಳ್ಪೊಯ್ದನೂ ||220||

ಭಳಿರೆ ಹನುಮ ಸಹಸವನ್ನು |
ತಿಳಿಯದಾದೆನುತ್ತ ಚಾಪ |
ವೆಳೆದು ಸುರಿದನಾಗ ಕೋಲ | ಮಳೆಯ ಗಜರುತಾ ||221||

ತಿಳಿಯದಾದೆನಹುದೊ ನಿನ್ನ |
ತಿಳಿವಪರಿಯ ನೋಡೆನ್ನುತ್ತ |
ಮುಳಿದು ಮುಷ್ಟಿಯಿಂದ ತಿವಿದ | ಖಳನಉದರವಾ ||222||

ಭೂರಿರೋಷದಿಂದ ಹನುಮ |
ಭಾರಿ ಮರದಿಪೊಡೆಯೆ ರಕುತ |
ಕಾರಿ ಬಿದ್ದನಾಗ ದನುಜ | ಧಾರುಣೀಯಲೀ ||223||

ಭಾಮಿನಿ

ಕುಶನೆ ಕೇಳಿನ್ನೇನ ಹೇಳುವೆ |
ನಸುರ ಮಾರೀಮುಖನ ಅನುಜರು |
ಅಸುವ ತೊಲಗಿದ ಬಳಿಕ ಚರರಿಗೆ ಬರೆದು ಸುಣ್ಣವನೂ ||
ಉಸುರಿ ನಿಮ್ಮಯ ದೊರೆಗೆ ಸಂಗರ |
ವೆಸಗದಿರೆ ಪಟ್ಟಣವನಗ್ನಿಯ |
ವಶಗೊಳಿಪೆನೆಂದಟ್ಟೆ ಮಾರೀಮುಖಗೆ ಪೇಳಿದರೂ ||224||

ರಾಗ ಸಾರಂಗ, ಆದಿತಾಳ

ಲಾಲೀಸು ಬಿನ್ನಪವಾ | ಸಂಗರದೊಳೀಗಾ
ಲಾಲೀಸು ಬಿನ್ನಪವಾ || ಪಲ್ಲವಿ ||

ದೊರೆಯೆ ಪೇಳುವುದಿನ್ನೇನೂ | ಸಂಗರದಿಂದ |
ಹರಣವುಳಿದು ಬಂದೇವೂ ||
ಅರಹುವುದೇನಿನ್ನು ವಜ್ರಮುಖನ ಕುಟ್ಟಿ |
ಭರದಿಪ್ರಲಂಭನ ಶಿರವನರಿದು ಮತ್ತೆ ||225||

ಪರಿಕಿಸಿ ನೀ ನೋಡಯ್ಯ | ನಮಗಾದ ಭಂಗ  |
ವಿವರಿಸಲಳವವೆ ಜೀಯಾ ||
ಬರೆದು ಮೂಗಿಗೆಸುಣ್ಣ ತರುಚರನಟ್ಟಿದ |
ಧೊರೆಯೊಳಗರುಹಿ ನೀವೆನುತ ಪೇಳಿದ ಮತ್ತೆ ||226||

ಅರುಹಿ ನಿಮ್ಮೊಡೆಯನಿಗೆ | ಸಂಗರಕವ
ಬರಲಿಯೆಂದೆನುತ ಹೀಗೆ |
ಕರೆದು ಪೇಳಿದನೀಗ | ತೆರಳಾದೆ ಕುಳಿತರೆ |
ಪುರವನುರಿಪೆನೆಂದು ಭರದಿಂದಲಟ್ಟಿದಾ ||227||

ಭಾಮಿನಿ

ಚರರ ವಾಕ್ಯವ ಕೇಳ್ದು ಮನದೊಳು |
ಮರುಗಿ ತನ್ನಯ ತರಳರನುಜರ |
ಮರಣವನು ನೆನೆನೆನೆದು ಕರೆಸಿದ ವರ ಘಟೋದರಿಯಾ ||
ತರಳೆ ಕೇಳಿಂದಿನಲಿ ರಾಮನು |
ವರಕುಮಾರರ ಸಹಿತಲನುಜರ |
ಶಿರವರಿದು ಮೆರೆದಿಹನು ಹನನವ ಗೈದು ಬಾರೀಗಾ ||228||

ರಾಗ ಭೈರವಿ, ಝಂಪೆತಾಳ

ತಂದೆ ನೀವಿನಿತ್ಯಾಕೆ |  ನೊಂದುಕೊಳುವಿರಿ ಮನದಿ |
ಬಂದ ಕಪಿಗಳನೆಲ್ಲ | ತಿಂದು ತೇಗುವೆನೂ ||229||

ಪತಿ ನಿನ್ನೆ ರಾಘವನ |  ಖತಿಯೊಳಗೆ ಪಿಡಿತಂದು |
ಕ್ಷಿತಿಯೊಳಗೆ ಮತ್ತೋರ್ವ | ರರಿಯದಂದದಲೀ ||230||

ಮಡಗಿರಲು ದುರುದುಂಡಿ |  ನುಡಿದು ಮರುತಜನೊಡನೆ |
ಕಡೆಗೆ ಕೊಲಿಸಿದಳೆನ್ನ | ಒಡಯನಿರುಳಿನಲೀ ||231||

ಒಡಗೊಂಡುರಾಘವನ |  ನಡೆದ ಮರುತಜನಿಂಗೆ |
ಬಿಡುವೆನೇ ನಾನಾವನ | ಕೊಡು ತನಗೆ ನೇಮಾ ||232||

ರಾಘವನ ಸೇನೆಯನು | ಸಾಗಿಸುತ ಯಮಪುರಿಗೆ |
ಈಗ ಪಿಡಿತಹೆನೆನುತ | ಸಾಗಿದಳು ಬೇಗಾ ||233||

ವಾರ್ಧಕ

ಲವನೆ ಕೇಳ್ಬಳಿಕಲೈರಾವಣಾಖ್ಯನ ಸತಿಯು |
ತವಕದಲಿವರ ಘಟೋದರಿಯೆಂಬ ದಾನವಿಯು |
ಭುವನದಂತ್ಯದ ಸಿಡಿಲ ರವದಂತೆ ಘರ್ಜಿಸುತ ರಣಕಾಗಿ ನಡೆತಂದಳೂ ||
ದಿವಿಜರೆಲ್ಲರು ಭೀತಿಯಿಂದಲೋಡುತಲಿರಲು |
ಅವನಿಪತಿ ಶ್ರೀರಾಮನೆಂತು ಜಯಿಸುವೆನೆನುತ |
ಕವ ಕವಿಸುತಿರಲಿತ್ತ ದಾನವಿಯು ಹರಿತರಲ್ಪ್ರಳಯಭೈರವಿಯಂದದೀ ||234||

ಕಂದ

ರಕ್ಕಸಿ ಕಾಣುತ ಮನದೊಳ್ |
ಶಿಕ್ಕಿದರಿವರೆಂದೆನುತಲಿ ಬಲುತೋಷಿಸುತಂ ||
ಅಕ್ಕರದಲಿ ತಾ ರಾಮನ |
ತೆಕ್ಕರುಳನು ತಿನ್ನುವೆನೆನುತೈತರಲಾಗಂ ||235||

ರಾಗ ಭೈರವಿ ಏಕತಾಳ

ದೂರದಿ ಬಹ ರಕ್ಕಸಿಯಾ | ಕಪಿ |
ವೀರರು ಕಾಣುತಚ್ಚ ರಿಯಾ ||
ವಾರಿಜಭವನೆಂತಿವಳಾ | ಧರೆ |
ಭಾರಕೆ ರಚಿಸಿದನಿವಳಾ ||236||

ತೋರುವದೇನಿದು ಗಿರಿಯೊ | ಖಳ |
ನಾರಿಯ ಹದಯದ ಮೊಲೆಯೊ ||
ಸಾರುತ ಬೃಹಳು ದಾನವಳೂ | ಒಂದೇ |
ಬಾರಿಗೆ ಪಿಡಿದು ತಿನುವಳೂ ||237||

ಹಲುಗಳು ನೋಡಿದರಿವಳಾ | ಕಪಿ |
ಕುಲಗಳು ಒಂದೆ ಕಬಳಾ ||
ಬಲು ಕೋಪದಿಯಡ್ಡಗಟ್ಟಿ | ಬರೆ |
ಕಲಿ ಹನುಮನು ಭುಜ ತಟ್ಟಿ ||238||

ನಳ ನೀಲಾಂಗದರುಮರೂ | ಶತ |
ಬಲಿ ಗವಯನು ಜಾಂಬವರೂ ||
ಬಲುತರ ಕೋಪದಿ ಹನುಮಾ | ರಿರೆ |
ನಿಲಿಸಿದನಾ ರಾಮಾ ||239||

ಬಲುಹುಳ್ಳ ಭಟರೆ ಕೇಳಿ | ನಿಮ್ಮ |
ಬಲುಮೆಗೆ ಸರಿಯೆ ನಿವಾಳಿ  ||
ಕೊಲುವುದುಚಿತವಿದಲ್ಲಾ | ಮಾನ |
ವಳಿದರೆ ಮತವಹುದಲ್ಲಾ ||240||

ಗಂಡನ ಕಳಕೊಂಡಿಹಳೂ | ಸ್ವಾಮಿ |
ದಿಂಡೆತನದಿ ಬಾಳುವಳೂ ||
ಕೊಂದಲ್ಲದೆ ಬಿಡೆ ನಾವೂ | ಇವ |
ಳಂದವ ನೋಡಿರಿ ನೀವೂ | ||241||

ಇಂದಿರೆಯರಸನೆ ರಾಮಾ | ಈಗ |
ಸಂದರೆ ಇವಳತಿ ಕ್ಷೇಮಾ ||
ಬಂದ ದಾರಿಯ ನಾ ತೋರಿ | ಇವಳ |
ಕೊಂದು ಹರಹುವೆವೀಸಾರಿ ||242||

ಅಟ್ಟುತನಿವಳನು ಭರದಿ | ಬೇಗ
ತಟ್ಟನೆ ಕೊಲುವೆನು ರಣದಿ ||
ಕುಟ್ಟುವೆ ತಲೆಯನು ಬೇಗಾ | ಎನೆ |
ಸೃಷ್ಟಿಪ ನಿಲಿಸಿದನಾಗ | ||243||

ವಚನ

ರಘುವರನಿಂತೆನೆ ಕೇಳ್ದು ಕಪಿವರರೆಲ್ಲರು ಸುಮ್ಮನೆ ಇರುತಿರಲಾಗಳ್ |
ಮುಗದೆ ದಾನವಿ ತಾನು ಜಗದುದರನೊಳ್ ವಾಚಿಸುತೀರ್ದಳದಂತನೆ ||243||

ರಾಗ ಘಂಟಾರವ, ಆದಿತಾಳ

ಯಾರೆಲೊ ಮನುಜ ನೀನೀಗಾ | ಬಂದ |
ವಾರೆತೆಯನು ಕೇಳಿಬಂದೆ ನಾನೀಗಾ  || ಪಲ್ಲವಿ ||

ಜಾರಿ ಹೋಗಲು ಬಿಡೆನೀಗಾ | ನಿನ್ನ |
ಪಾರಣೆಯನು ಮಾಡಿಬಿಡುವೆ ನಾನೀಗಾ    || ಅನುಪಲ್ಲವಿ ||

ನರಮಾಂಸ ವನು ನಾನು ಮೆಲ್ಲದೆ || ಆರು |
ವರುಷಗಳಾಯಿತು ತುಡುವೆದ್ದುನಲಿವೆ ||
ಕರದೊಯ್ವೆನಿವರನು ಕೊಲ್ಲದೆ | ನಾನು |
ಭರದಿ ಪಿಡಿದೆನೆಂದುತಂದೆಯೊಳೊರೆವೆ | ||244||

ಮನೆದೇವತೆಯ ಪೂಜೆಮಾಡ್ದು | ನಾನು |
ಘನವಾಗಿ ಮಾಂಸಗಳನು ಪಾಕ ಮಾಡ್ದು ||
ನೆನೆದ ಕಾರ್ಯವ ಕೈ ಗೊಡ್ದು | ಎನ್ನ |
ಮನದಿಷ್ಟವೀಯೆಂದು ಶಿರವ ಚಂದಾಡ್ದು | ||245||

ಹೊಟ್ಟೆ ಕರುಳನೆ ತೆಗೆವೆ | ತಾನು |
ತಟ್ಟನೆ ರಕ್ತದೋಕುಳಿಯ ಲೋಲಾಡ್ವೆ ||
ನೆಟ್ಟೆನೆ ಚರ್ಮವ ಸುಲಿವೆ | ಅದರ |
ಮೊಟ್ಟೆಯಂದದಿ ಯೆಣ್ಣೆಲಿಕ್ಕಿ ಹುರಿವೆ ||246||

ಎದೆಯ ಗುಂಡಿಗೆಯನ್ನೆ ಮುರಿದೂ | ಬಲು
ವಿಧದಿ ಪಾಕವ ಮಾಡಿ ನಲಿದೂ ||
ಮದುವೆಯಾದನ ಬೇಗ ನೆನದೂ | ಮತ್ತೇ |
ಚದುರತನದಿ ತಿಂಬೆ ನಲಿದೂ ||247||

ಎಂಟು ಭಾಗವ ಮಾಡಿ ಕೊರೆವೆ | ಮುಂದೆ |
ಶುಂಠಿ ಸಂಭಾರ ಸಾಸಿವೆಯನು ಬೆರೆವೆ ||
ನೆಂಟರಿಷ್ಟರನೆಲ್ಲ ಕರೆವೆ | ಇಂದು |
ಪಂಟಿಯ ಮಾಡಿ ಸಂತೋಷದಿಂದರುವೆ ||248||

ಎನುತ ರಕ್ಕಸಿ ಪೇಳಲಾಗಾ | ರಾಮಾ |
ಮನದಿ ಹಿಗ್ಗುತಶೂರ್ಪನಖಿ ಯೆಂದೀಗಾ ||
ಅನುಜ ಲಕ್ಷ್ಮಣ ನೋಡು ಬೇಗಾ | ನೀನು |
ಧನುವ ಪಿಡಿದು ಇತ್ತ ಬಾರೆಂದನಾಗಾ ||249||

ಭಾಮಿನಿ

ಇತ್ತ ನೋಡೈಯನುಜ ಮೊದಲಲಿ |
ಸತ್ತ ತಾಟಕಿಯಲ್ಲಲೇಯೆನು |
ತೆತ್ತಿ ಕರಗಳ ನೆಗಹಿ ನುಡಿದ ಸುಮಿತ್ರೆಯಾತ್ಮಜಗೇ ||
ಮತ್ತೆ ಬಂದಿದೆ ನಿನ್ನ ಭಾಗದ |
ಮತ್ಯು ನೋಡೈ ಅನುಜ ಇವಳನು |
ಸತ್ತು ಹೋಗದ ತೆರದಿ ನಾಸಿಕ ಕೆತ್ತಿಬಿಸುಡೆಂದಾ ||250||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಅಣ್ಣನಾಜ್ಞೆಯ ಕೇಳಿ ಲಕ್ಷ್ಮಣ |
ಕಣ್ಣಿನೊಳು ಕಿಡಿಸೂಸೆರೋಷದಿ |
ಮಣ್ಣುಗೂಡಿಸಿ ಬಿಡುವೆನಸುರರ | ಹೆಣ್ಣನೀಗಾ ||251||

ಕಣ್ಣಿಗಚ್ಚರಿಯಾದ ಕೌತುಕ |
ಯೆಣ್ಣಿಸುತ ಶಾಕಿನಿಗೆ ಔತಣ |
ಉಣ್ಣ ಬಡಿಸುವೆನಸುರ ಮಾಂಸದೊ | ಳಣ್ಣ ಕೇಳೂ ||252||

ಹುಣ್ಣಿಮೆಯ ಶಶಿಯಡಗಿ ಪೊದರು |
ಪುಣ್ಯವಾರುಧಿ ವಿತಳಕಿಳಿದರು |
ಗಣ್ಯವೇ ಎನಗೀಗ ನಿಮ್ಮಯ | ಪುಣ್ಯಬಲದೀ ||253||

ರಾಗ ನೀಲಾಂಬರಿ, ಮಟ್ಟೆತಾಳ

ಅನುಜ ಲಕ್ಷ್ಮಣಾ | ಮಮ ಮನೋಹರಾ |
ದನುಜ ಜನ್ಮದಾ | ತರುಣಿಯಲ್ಲವೆ  ||254||

ಕೊಲಲು ಬಾರದು | ಕೊಂದರೀಗದು |
ಕುಲಕೆ ಕುಂದಯ್ಯ | ಮಾತ ಕೇಳಯ್ಯ ||255||

ರಾಗ ನೀಲಾಂಬರಿ, ರೂಪಕತಾಳ

ಅಣ್ಣ ರಾಘವಾ ಅಸುರೆ ತಾಟಕಿ |
ಗಣ್ಯವಿಲ್ಲದೆ ಅರಣ್ಯ ಮಧ್ಯದಿ ||
ಕಣ್ಣ ಹಬ್ಬವ ಮಾಡಿ ಮುನಿಗಳಾ |
ಮನ್ನಿಸುತ್ತಲೆ ಕೊಂದುದಿಲ್ಲವೆ ||256||

ಮುನಿಪ  ಕೌಶಿಕ ಪೇಳ್ದ ಮಾತಿಗೆ |
ಘನಮದಾಂಧೆಯ ಕೊಂದೆನಾಕೆಯಾ |
ಇನಿತುಮಲ್ಲದೆ ಮಮ ಸ್ವತಂತ್ರದಿ |
ದನುಜೆಯಾಕೆಯಾ ಕೊಂದುದಿಲ್ಲಯ್ಯ ||257||

ಪುಣ್ಯವಾರುಧಿ ನಿಮ್ಮನುಜ್ಞೆಯೊಳ್ |
ಹೆಣ್ಣೂಮೂಳಿಯ ಕೊಲ್ವೆನೀಕ್ಷಣಾ ||
ಅಣ್ಣ ದೇವನೆ ಅಲಸವೇತಕೊ |
ಮಣ್ಣಿಗಿಕ್ಕುವೆ ಭ್ರಷ್ಟೆ ದನುಜೆಯಾ ||258||

ಘನಪರಾಕ್ರಮಿ ಕೇಳು ಅಸುರೆಯಾ |
ಘನಕುಚದ್ವಯಗಳನು ನಾಸೆಯಾ ||
ಕನಲಿ ಕೊಯ್ವದು ಉಳಿದ ಕಿವಿಗಳಾ |
ಎನಗೆ ಸನುಮತವೆನುತಪೇಳ್ದನೂ ||259||

ಭಾಮಿನಿ

ಅಗ್ರಜನ ನೇಮದಲಿ ಲಕ್ಷ್ಮಣ |
ಶೀಘ್ರದಲಿ ದಾನವಿಯ ಕುಚವಕ |
ರಾಗ್ರದಿಂ ಪಿಡಿದೆತ್ತಿ ಕೆತ್ತಿದನಾಗ ಕಿವಿಮೂಗಾ ||
ನಿಗ್ರಹಿಸಿ ಬಿಡಲಾಗ ದಾನವ |
ವರ್ಗದಲಿ ತಾ ಜನಿಸಿದಾದಡಿ |
ವರ್ಗೆ ಬಿಡುವೆನೆನುತ್ತ ಹಾಯ್ದಳು ತನ್ನ ಪಿತನೆಡಗೇ ||260||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಅತ್ತಲಾ ದಾನವಿಯು ಭಾಷೆಯ |
ಹೊತ್ತು ತೆರಳಲಿಕಾಗ ಲಕ್ಷ್ಮಣ |
ನಿತ್ತ ರಾಮನ ಚರಣದೆಡೆಗೈ | ವುತ್ತಲಾಗಾ ||261||

ಅತ್ಯಧಿಕ ಹರುಷದಲಿ ವರ ಕಪಿ |
ಮೊತ್ತ ಸಹಿತಾ ರಾಮನಿರುತಿರ |
ಲತ್ತ ದಾನವನಿರ್ದನಸುರರ | ಮೊತ್ತವೆರಸೀ ||262||

ಭಾಮಿನಿ

ಅತ್ತಲಾ ದನುಜೇಶ ಮುತ್ತಿನ |
ಸತ್ತಿಗೆಯ ನೆರಳಿನಲಿ ಖಳನೆಂ |
ಭತ್ತು ಸಾವಿರ ರಥಿಕರೊಡನುನ್ಮತ ಹರುಷದಲೀ ||
ಚಿತ್ತದಲಿ ರಾಘವನ ಜಯಿಸುವ |
ಯತ್ನವೇನೆಂದೆನುತಲಿರಲಾ |
ಸತ್ಯದಿಂದೈತಂದು ನುಡಿದಳು ಮತ್ಯುರೂಪಿನಲೀ ||263||

ಕಂದ

ಘೋರಾರ್ಭಟೆಯಿಂದೊದರು |
ತ್ತ ರಕ್ಕಸಿಯೈದೆ ವೇಗದಲಾತನ ಬಳಿಗಂ ||
ನೀರೆಯರೊಳ್ ತಾನಿವಳಾ |
ರರರೆನುತಚ್ಚರಿಯೋಳ್ಕರೆದು ತಾನುಸುರ್ದಂ ||264||

ರಾಗ ಭೈರವಿ, ಝಂಪೆತಾಳ

ಯಾರೆ ದಾನವಿ ನೀನು | ಘೋರಾಕಾರವಿದೇನು |
ಸೋರುವಾರುಣವೇನು | ಕಾರಣವಿದೇನೂ ||265||

ಅನುಮಾನವನು ಮಾಡ | ದೆನಗೆಸಾಂಗದಿ ಪೇಳು |
ಮಾನ ಸೂರೆಯಗೊಂಡು | ಶಿರವರಿವೆನವನಾ ||  ||266||

ಏನಹೇಳುವೆನಪ್ಪ | ಮಾನವರ ಹಿಡಿತಪ್ಪ |
ಜ್ಞಾನದಿಂದಿರುತ್ತಿಪ್ಪ | ದನುವರಿತರಪ್ಪಾ ||267||

ಹುಡುಗನೋರುವನಿಪ್ಪ | ನೋಡಿದರೆ ಕಂದರ್ಪ |
ಕಡೆಯಮಾತೇನಪ್ಪ | ಕುಚಕೊಯ್ದನಪ್ಪಾ ||268||

ಕಿವಿ ಮೂಗುಗಳಕೊಯ್ದ | ಬವಣೆಬಡಿಸುತ ಬೈದು |
ನಡೆ ನಡೆಯೆನುತೊಯ್ದು | ನುಡಿದು ಬಿಸುಸುಯ್ದೂ ||269||

ಉರಿ ಬಹಳ ಎನಗೀಗ | ಕರೆಸು ವೈದ್ಯನ ಬೇಗಾ |
ಬರಿಸು ಬೆಂಬಲಕೀಗ | ರಥಿಕರನು ಬೇಗಾ ||270||

ಹೆಂಗುಸಿವಳಿಗೆ ಮಾನ | ಭಂಗವೆಸಗಿದ ಮೇಲೆ |
ವಿಂಗಡದಿ ನಾವಿದ್ದು | ಇನ್ನೇನು ಸಫಲಾ ||271||

ನೋಡು ನಿನ್ನಯ ಕುವರ | ರೀರ್ವರಾ ಶಿರಗಳನು |
ಕೆಡದಿಹನ ನೋಡೆನುತ | ನೀಡಿದಳು ಬೇಗಾ ||272||

ಭಾಮಿನಿ

ಶಿರವ ಕಾಣುತ ಖಳನು ತನ್ನ ಕು |
ವರರ ಶಿರವಹುದೆನುತಲೀಕ್ಷಿಸಿ |
ಕರದಿ ನೇವರಿಸುತ್ತ ಮುದ್ದಿಸಿ ಮರುಗಿ ಬಿಸುಸುಯ್ದೂ ||
ತರಳರೀರ್ವರು ಮಡಿದರೇ ವರ |
ತರಳೆಯಭಿಮಾನವನು ಕಳೆದರೆ |
ಹರ ಹರಾಯೆನುತೊಡನೆ ಮೂರ್ಛಿಸುತಾಗಲೆಚ್ಚರ್ತೂ ||273||