ಕಂದ

ಚರರೆನೆ ಕೇಳ್ದಾ ದನುಜಂ |
ಪರಿಪರಿ ವಿಧದಿಂ ಶೋಕಿಸುತಾ ಕಪಿವರನಂ ||
ಭರದಿಂ ಪಿಡಿಯುತಲೆನ್ನಯ |
ಚರಣದೆಡೆಗೆಡಹುವರಾರೆನಲ್ ಮಗನೆಂದಂ ||136||

ಭಾಮಿನಿ

ಚಿಂತಿಯಾಕೆಲೆ ಜೀಯ ರಿಪುಕುಲ |
ದಂತಕನು ತಾನಿರಲು ಕಪಿಕುಲ |
ಸಂತತಿಯ ಕಲಕುವೆನು ಕಡಲಲಿ ಚಿಂತೆ ಬೇಡೆಂದಾ ||
ಕಂತುಹರ ಕಮಲಾಕ್ಷ ಮುಳಿದೀ |
ಗಂತಕನೆ ತಾ ಬರಲಿ ಕಪಿಕುಲ |
ದಂತರೇಣಾರ್ಚಿತನು ತಾನಿರೆೆ ಪಂಥವೇಕೆಂದಾ ||137||

ರಾಗ ಆದಿತಾಳ

ಕೇಳಿದೆಯಾ | ತಂದೆ | ಕೇಳಿದೆಯಾ ||
ನಾ ಪೇಳುವೆ ನಿನಗೊಂದುಕಾರ್ಯಗಳ್ಯೊಚನೆಯಾ || || ಪಲ್ಲವಿ ||

ಗಜಗವಯ ಶತಬಲಿನಜ ಮರುತಜರ ನಳನ ಸಹಿತ |
ಅಜನ ಸುತನ ರಣದಿ ಕೆಡಹಿ | ತ್ರೈಜಗದಿ ಕೀರ್ತಿಪಡೆವೆನೂ ||138||

ಬರುವ ವಿಪುಳ ಬಲವನೆಲ್ಲ | ತರಿದು ಕೆಡಹಿ ರಣದಿ ಗೆಲಿದು |
ಗರುವ ಮುರಿದು ಭೂತಕುಣಿಪೆ | ಭರದಲಡವಿಚರರನೆಲ್ಲ ||139||

ಎಂದು ಪೌರುಷಗಳನಾಡಿ | ಬಂದ ಕುವರನನ್ನು ನೋಡಿ |
ಚಂದದಿಂದ ಪರಿಸಿ ನುಡಿದ | ಕಂದನೊಡನಾನಂದದೀ ||140||

ರಾಗ ತುಜಾವಂತು, ಝಂಪೆತಾಳ

ಸ್ಥಿರಜೀವಿಯಾಗಯ್ಯಿ ಸಿರಿವಂತ ನೀನಾಗು |
ಸರಸಿರುಹಭವ ನಿರುವ ತನಕ ಸುಖಿಯಾಗು |    || ಪಲ್ಲವಿ ||

ಸೂರ್ಯ ಚಂದ್ರರು ಸುಮನಸಾದಿಗಳು ಇರುವನಕ |
ಉರ್ವಿಯಲಿ ದೊರೆಯೆನಿಸಿ ಸುಖದಿಂದ ಬಾಳು | ||141||

ಭಯವೆಲ್ಲ ಪೋಗಿ ನಿ | ರ್ಭಯದಿ ಸುರರನು ಗೆಲಿದು |
ತೋಯಜೋದ್ಭ್ವವನಿರುವ ತನಕ ನೀ ಬಾಳೂ | ||142||

ಹಗೆಯವರ ಕೂಡೆ ನಿ | ನ್ನಾಗಮವನುಸುರದಿರು |
ನಗೆಯ ಮಾಣಿಸು ಧುರದಿ | ನೆರದ ಪಟುಭಟರಾ | ||143||

ಧುರದಿ ಶರಗಳ ಪಿಡಿದು | ತಿರುಗಿ ನಿಲ್ಲದಿರೆನುತ |
ಕರದಿ ಪಿಡಿದೆತ್ತಿದನು ಮಗನ ಮಸ್ತಕವಾ ||144||

ತರಳನನುಕೊಂದವನ | ಭರದಿ ಯಮನಡೆಗಟ್ಟು |
ಧುರವಿಜಯನೆಂದೆನಿಸಿ ಮೆರೆಯಯ್ಯ ಮಗನೇ | ||145||

ಭಾಮಿನಿ

ಮಗನ ಪರಸಿದು ಕಳುಪೆ ದಾನವ |
ತೆಗೆದು ಶಸ್ತ್ರಾಸ್ತ್ರಗಳ ಧರಿಸುತ |
ಲೊಗುಮಿಗೆಯ ಹರುಷದಲಿ ರೇಣಾರ್ಚಿತನು ನಡೆತಂದಾ |
ವೊಗುವ ನಯನಾಂಬುರುಹ ಧಾರೆಯ |
ಬಗೆಯ ಜನನಿಯ ಕಂಡು ಬಾಗುತ |
ದಗುಜಲವನೊರಸಿಮಿಗೆ ನುಡಿದನು ದೈನ್ಯಭಾವದಲೀ | ||146||

ರಾಗ ತೋಡಿ, ಅಷ್ಟತಾಳ

ಏನವ್ವಾ | ತಾಯೆ | ಏನವ್ವಾ   || ಪಲ್ಲವಿ ||

ಏನವ್ವ ತಾಯೆ ನೀಮೌನದೊಳಿಂದೂ |
ಮಲಗಿಹೆ ಮಂಚದೊಳೋರ್ವಳೆ ಬಂದೂ ||
ನೆಲೆಯಿಲ್ಲದೆ ತಿಳಿಸದೆ ಯೆನಗಿಂದೂ |
ಛಲವೇನೆ ತರಳನ ಮೇಲ್ನಿನನಗಿಂದೂ | ||147||

ಬಂದ ದುಗುಡವಿದೇನವ್ವ ಪೇಳೂ |
ಚಂದದಿಂದುಸುರುದಯಾಳೂ ||
ತಂದೀವೆ ಮನಸಿನಿಷ್ಟವ ಬೇಗದೊಳೂ |
ಎಂದು ಕೈಮುಗಿದು ನಿಂದಿರ್ದ ತೋಷದೊಳೊ | ||148||

ಚಿತ್ರಮಾಲಿನಿ ತನ್ನ ಕುವರನಪ್ಪುತಾ |
ಅತ್ಯಂತ ಹರುಷದಿಂದೆತ್ತಿ ಮುದ್ದಿಸುತಾ ||
ಚಿತ್ತದಲಿ ಮರುಗುತಿರಲಾತ ಕಾಣುತ್ತಾ |
ಮತ್ತುಸುರಿದ ಮಾತೆಗೆ ವಂದಿಸುತ್ತಾ | ||149||

ರಾಗ ಸಾರಂಗ, ಆದಿತಾಳ

ಯಾಕೆ ನೀ ಮರುಗುವೆ ಅಮ್ಮಯ್ಯ | ಬಂದ |
ವ್ಯಾಕುಲವನು ಪೇಳು || ಅಮ್ಮಯ್ಯ   || ಪಲ್ಲವಿ ||

ಹರಿಹರರೊಂದಾಗಿ ಬರೆ ಅಮ್ಮಯ್ಯ | ಅವರ |
ಪರಿಹರಿಸಿ ಪಾಲಿಸುವೆ | ಅಮ್ಮಯ್ಯ | ||150||

ಮರುಗಿ ಮೌನದೊಳಿರುವೆ ಯಾಕೆ | ಅಮ್ಮಯ್ಯ | ಈಗ |
ಸೆರಗನಿಕ್ಕಿ ಮಲಗುವರೆ | ಅಮ್ಮಯ್ಯ | ||151||

ಮೊಗವೆಲ್ಲ  ಕಂದಿಹುದೇಕೆ ಅಮ್ಮಯ್ಯ | ನಿಮ್ಮ |
ದುಗುಡವೆಲ್ಲ ಪೇಳೆನ್ನೊಡ | ನಮ್ಮಯ್ಯ ||152||

ರಾಗ ಸಾವೇರಿ, ಏಕತಾಳ

ಏನ ಹೇಳಲಯ್ಯ ನಿನಗೆ | ಕಂದ ಕಂದಾ || ಯೆನ್ನ |
ಪ್ರಾಣವುಳಿವುಪಾಯ ಕಾಣೆ | ಕಂದ ಕಂದಾ ||153||

ಇಂದಿನಾನುವರದ ಪಯಣ | ಕಂದ  ಕಂದಾ ||  ನಿನಗೆ |
ಚಂದವಲ್ಲವೆಂದು ಪೇಳ್ವೆ | ಕಂದಕಂದಾ | ||154||

ತರಳ ಮಡಿದ ನಿನ್ನೆ ರಣದಿ | ಕಂದ ಕಂದಾ || ನಿಮ್ಮ |
ಮರಣ ಕಾಂಬೆನೆಂತು ನಾನು | ಕಂದ ಕಂದಾ |  ||155||

ಪುಣ್ಯಹೀನೆನಾನೀಗೈಸೆ | ಕಂದ ಕಂದಾ | ಚಿಣ್ಣ |
ರಣಕೆ ನೀನು ಪೋಗದಿರೋ | ಕಂದ ಕಂದಾ | ||156||

ದುಷ್ಟ ರಾವಣೇಂದ್ರನೆಂದ | ಕಂದ ಕಂದಾ | ನುಡಿಗೆ
ಶ್ರೇಷ್ಠನಿಂದು ಮರುಳನಾದ | ಕಂದ ಕಂದಾ | ||157||

ಭ್ರಷ್ಟನೆಂದ ನುಡಿಯ ಕೇಳಿ | ಕಂದ ಕಂದಾ | ನಿಮಗೆ
ಕೊಟ್ಟನಲ್ಲ ವಿಷವರಮಣ | ಕಂದ ಕಂದಾ | ||158||

ಎನ್ನ ಪುತ್ರನಾದಡೀಗ | ಕಂದಾ ಕಂದಾ || ನೀನು |
ಎನ್ನ ಮಾತ ಕೇಳೊ ಬೇಗ | ಕಂದ ಕಂದಾ |  ||159||

ಸೃಷ್ಟಿಕರ್ತ ರಾಮಚಂದ್ರ  | ಕಂದ ಕಂದಾ || ವಿಷ್ಣು
ದುಷ್ಟಹನನಕಾಗಿಬಂದ | ಕಂದ ಕಂದಾ |  ||160||

ರಾಗ ಸೌರಾಷ್ಟ್ರ, ಅಷ್ಟತಾಳ

ಚಿಂತಿಸಿದಿರು ದಯ | ವಂತೆ ನೀ ಮನಸಿನೊ | ಳಮ್ಮ ಕೇಳೂ || ತಾಯೆ |
ಸಂತೋಷದೊಳಗಾ |  ನಂತ ಗುಣಾಯುತೆ | ಅಮ್ಮ ಕೇಳೂ | ||161||

ಧತಿಯಿಂದ ಕಪಿಬಲವೆಲ್ಲ ಸಂಹರಿಸುವೆ | ಅಮ್ಮ ಕೇಳೂ || ಪಥ್ವಿ |
ಪತಿ ರಾಮಲಕ್ಷ್ಮಣರೀರ್ವರ ತರಿವೇನು |  ಅಮ್ಮ ಕೇಳೂ | ||162||

ಅಣ್ಣನ ಕೊಂದಿಹ ಸಣ್ಣ ಕಪಿಯನೀಗ | ಅಮ್ಮಕೇಳೂ || ಕುಟ್ಟಿ |
ಬೊಮ್ಮನ ಪುರಕಟ್ಟಿ ಬರುವೆನು ನಿಮಿಷದಿ | ಅಮ್ಮಕೇಳೂ | ||163||

ಶತಬಲಿ ಸುಷೇಣ ಗವಯ ಗವಾಕ್ಷರ ಅಮ್ಮ ಕೇಳೂ || ಕೊಂದು |
ಖತಿಯೊಳು ಕೆಡಹುವೆ ರವಿಜನ ಮೊದಲಾಗಿ | ಅಮ್ಮಕೇಳೂ | ||164||

ಸತಿಸರಮೇಶನ ಮತಿಗೆಡಿಸುವೆನೀಗ | ಅಮ್ಮ ಕೇಳೂ || ಮುಂದೆ |
ಅತಿಬಲ ಹನುಮನ ಜಾಂಬವರೀರ್ವರ | ಅಮ್ಮ ಕೇಳೂ | ||165||

ವಾಲಿಯ ಕುವರನನಂತಕಗೀವೆನು | ಅಮ್ಮ ಕೇಳೂ || ನಳ |
ನೀಲರ ಪಾಳಯ ಗೋಳುಗುಡಿಸುವೆನು | ಅಮ್ಮ ಕೇಳೂ | ||166||

ರಾಗ ತಾಳ

ಕಂದ ನೀ ಮತಿಗೆಟ್ಟುದೇನಯ್ಯ | ಬಿಡು |
ಚಂದವಲ್ಲಿದುಮಾತ ಕೇಳಯ್ಯ ||
ಸಿಂಧುಶಯನಾ ರಾಮಚಂದ್ರನೂ | ನಲ |
ವಿಂದಲಕ್ಷ್ಮಣದೇವ ಶೇಷಾನೂ | ||167||

ಚಂದಿರಾನನೆ ಸೀತೆ ಲಕ್ಷ್ಮಿಯೂ | ಅವಳ್ |
ಬಂದು ತಾ ಜನಿಸಿದಳ್ ಧರೆಯೊಳೂ ||
ಕೋತಿಗಳೆಲ್ಲರುಸುರರಯ್ಯ | ಇಂಥ |
ಘಾತಕವೆಸಗುವರೇನಯ್ಯ | ||168||

ಸಾರಿ ಹೇಳಿದೆ ಬೇಡ ಧುರಗಳೂ | ಮತ್ತೆ |
ಸೇರಿ ಬಾಳುವುದೊಳ್ಳಿತವರೊಳೂ ||
ತರವೆ ಕಾಳಗ ಚಿಣ್ಣಯೆಂದಳೂ | ಶೋಕ |
ಭರಿತೆ ತಾನಪ್ಪಿ ಮುದ್ದಿಸಿದಳೂ | ||169||

ಭಾಮಿನಿ

ತಾಯೆ ನಿನಗಿನಿತೇಕೆ ರಾಮನ |
ಬಾಯ ಹೊಗಳಿಕೆ ಬಿಡು ವಥಾ ನರ |
ನಾಯಕನ ತಾನೀಗ ಗೆಲದಿರಲಸುರನಲ್ಲೆಂದಾ ||
ಬಾಯ ಬಡಿಕ ವಿಭೀಷಣಾಸುರ |
ಸಾಯದಂದದಿ ಪಿಡಿದು ಕಪಿಕುಲ |
ನಾಯಕರ ಸಂಹರಿಸಿ ಬರುವೆನೆನುತ್ತ ಖತಿಗೊಂಡಾ ||170||

ವಾರ್ಧಕ

ತರಳ ಲವ ಕೇಳು ಜನನಿಯ ನುಡಿಗೆ  ಖತಿಗೊಂಡು |
ದುರುಳ ದಾನವ ತನ್ನ ಚತುರಂಗ ಬಲವೆರಸಿ |
ಪೊರಟು ನಡೆತರೆ ಮುಂದೆ ಪರಿ ಪರಿಯೊಳವಶಕುನಮಾಗಲುರೆ ನಡೆತಂದನೂ ||
ವರಭದ್ರಕರಣಮಂಗೈದು ಭೂಸುರನೋರ್ವ |
ಬರುತಿರಲ್ ಮುಂದೆ ಮಾರ್ಜಾಲಗೋಮಾಯ ಫಣಿ |
ಬರುವನಿವನೆಲ್ಲಿ ಮುದಿ ಬ್ರಾಹ್ಮಣನ ಬಡಿರೆಂಬರವದಿಂದ ನಡೆತಂದನೂ | ||171||

ಕಂದ

ಇಂತವಶಕುನವನುಂ ಖಳ |
ಮುಂತರಿಯದೆ ಬರುತಿರಲಾಗಳ್ ಕಾಣುತ್ತಂ  ||
ಸಂತಸವ ತಳೆದು ಸರಮಾ |
ಕಾಂತಂ ರಘುಜನ ಪದ ಕೆರಗುತಲಿಂತೆಂದಂ ||172||

ರಾಗ ಮಧುಮಾಧವಿ, ಆದಿತಾಳ

ರಾಘವ ಸ್ವಾಮಿ |  ಪರಮ ಸುಪ್ರೇಮಿ ||
ಬೇಗದೊಳರುಹುವೆಖೂಳನಾಗಮವಾ |  || ಪಲ್ಲವಿ ||

ಖೂಳ ರಕ್ಕಸನೀತ ಮಾರೀಮುಖನ ಜಾತಾ |
ಬಾಲ ರೇಣಾರ್ಚಿತ ವೀರರೊಳ್ ಖ್ಯಾತಾ | ||173||

ಆನೆ ಕುದುರೆ ಮಂದಿ | ಸೇನೆ ಮಾರ್ಬಲಸಹಿತ |
ಕಾನನವನು ಸಂಚರಿಸುತಿರಲತ್ತಾ | ||174||

ವಾಲಖಿಲ್ಯರು ತಪಗೈದು ಸೂಕ್ಷ್ಮದೊಳಿರೆ |
ಕಾಲ ಕಾಲಕೆ ತಪಸಲಿಸುತ ಹೀಗೇ ||175||

ಕಾಲ ಮೇಲಕೆ ಎತ್ತಿ ಕರದೊಳು ಧರೆಯೊತ್ತಿ |
ಮೇಲೆ ಶೀರ್ಷಾಸನ ನೋಡಿ ಯಾರೆನ್ನುತ | ||176||

ಬಡ ಮುನಿಗಳಕಾಲ ಹಿಡಿದು ಎಳೆಯಿರೆನು
ತೊಡನೆ ಪೇಳಿದ ತನ್ನ | ಪಡೆಯ ನೋಡುತ್ತಲೆ ||177||

ಒಡೆಯನಪ್ಪಣೆಯಿಂದ ಬಡಿದು ಬ್ರಹ್ಮರ ಮಂಡೆ |
ವಡೆದು ಕೆಡಹಿ ಮತ್ತೆ ಎಳದರಸುರರೂ | ||178||

ಗುಡುಗುಡಿಸುತ ಮುನಿ ಮಡನು ಪೇಳಿದ ಜಗ |
ದೊಡಯ ಶ್ರೀರಾಮನ ಕಡೆಯನಿಲಜನಿಂ | ||179||

ಮಡಿದು ಹೋಗೆನುತಲೆ ನುಡಿದು ತಾ ಶಪಿಸಿದ |
ಕಡೆಗೆ ದಾನವ ತನ್ನ ಪಡೆಸಹ ನಡೆದಾ | ||180||

ಕಂದ

ಈ ಪರಿಯಿಂಜದಾ ರಘುಜಗೆ |
ಶಾಪದ ವಿವರವ  ಪೇಳ್ತಿರೆ ಶರಣಂ ||
ಕೋಪದೊಳೆದ್ದುಂ ಖಳಸುತ |
ಭೂಪತಿಯೆಡೆಯಂ ಸಾರುತ ಶರಣಗೆ ನುಡಿದಂ ||181||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಎಲವೂ ಸರಮಾಧವನೆ ನಿನ್ನಯ |
ವಲವ ಬಲ್ಲೆನು ಕುಲವಿಘಾತಕ |
ಕಲಹದಲಿ ನೀ ಕೆಟ್ಟೆಯೋಚಿಸಿ | ತಿಳಿಯದೀಗಾ ||182||

ಎನುತ ಕೊನೆ ಮೀಸೆಗಳ ತಿರುಹುತ |
ಕನಲಿ ದಾನವ ಶರಣಗೆಂದನು |
ಘನ ಬಲಾಯುತ ರಾಘವೇಂದ್ರನ | ನೆನಗೆ ತೋರೋ ||183||

ಒಡೆಯ ರಾಮನ ತೊಡಕ ಬಯಸುತ |
ಕೆಡನುಡಿಯ ನೀ ನುಡಿದೆಯಾದಡೆ |
ಕಡೆಯ ನಾಲಿಗೆ ಹಿಡಿದು ಕೊಯ್ವೆನು | ಬುಡವು ಸಹಿತಾ ||184||

ಕಡೆಯ ದಿನ ನಿನಗೆಂದು ರಾಮನ |
ಅಡಿಯ ಧ್ಯಾನಿಸಿ ದಡದಿ ಮರುತಜ |
ಮಡನ ರೂಪವ ಧರಿಸಿ ನಿಂದನು | ಪೊಡವಿಯೊಳಗೇ ||185||

ಎಂದು ಪರ್ವತಗಳನು ಕೈಕೊಂ |
ಡೆಂದನೆಲೆ ದನುಜೇಶ ತಾಳಿಕೊ |
ಯೆಂದು ಹೊಡೆಯಲು ತರಿದನಾ ಖಳ | ವಜ್ರದಿಂದಾ ||186||

ಆಗ ವರುಣ ಕುಬೇರ ಯಮ ಮುಂ |
ತಾಗಿಯಾಯುಧ ದಿವ್ಯ ಶರಗಳ |
ಬೇಗ ಪೊಡೆಯಲು ಮುರಿದ ಮರುತಜ | ವೇಗವಾಗೀ ||187||

ರಾಗ ಪಂತುವರಾಳಿ, ುಟ್ಟೆತಾಳ

ಎಲವೂ ದೈತ್ಯಕುಲಕೆ ಕಡೆಯ | ಕಾಲವೆನುತಲೀ ||
ಮುಳಿದು ಮುಷ್ಟಿಯಿಂದ ತಿವಿದ | ಖಳನ ಉರದಲೀ ||188||

ಕೋತಿ ಕೇಳೊ ನಿನ್ನಬಲದ | ರೀತಿ ಬಲ್ಲೆನೂ ||
ಆತ ರಾವಣೇಂದ್ರ ನಿನ್ನ | ಖ್ಯಾತಿಯಳಿದನೂ ||189||

ಬಾಲಸುಡಕನೆಂಬ ಪೆಸರ | ಕೇಳಿ ಬಲ್ಲೆವೂ ||
ಮೇಲೆಶಿರಗಳುಳಿವುಪಾಯ | ಉಳಿದುದಿಲ್ಲವೂ ||190||

ಬಾಲವಳಿದ ಮೇಲೆ ಅದರ | ಮೂಲವಳಿದುದೂ ||
ಖೂಳ ದನುಜರಿಂಗೆ ಅದರೊ | ಳ್ಕಾಲವಾದದೂ ||191||

ಬಾಲ ಸತ್ವ ತೋರ್ಪೆ ಎನುತ | ಬಾಲದಿಂದಲೀ ||
ಕಾಲ ಹಿಡಿದು ತಿರುಗಿ ಬಡಿದ | ಲೀಲೆಯಿಂದಲೀ ||192||

ಧರೆಗೆ ಬಡಿಯೆರುಧಿರ ಸೂಸೆ | ಶಿರಗಳೊಡೆಯಲೂ ||
ಭರದೊಳಸುವ ತೊರೆದು, ಕಾಲ | ನೆಡೆಗೆ ಸರಿಯಲೂ ||193||

ಭಾಮಿನಿ

ತರಳರಿರ ನೀವ್ಕೇಳಿ ರಾಮನ |
ಪರಮ ಭಕ್ತನು ಮರುತಸಂಭವ |
ಧುರದಿ ಅಸುರನ ಕೆಡಹಲಾಕ್ಷಣ ಸುರರು ಹರುಷದಲೀ ||
ಸುರಿದರಾ ಸುಮಗಳನು ರಾಕ್ಷಸ |
ಚರರು ನಡೆತಂದಾಗ ವಾರ್ತೆಯ |
ನರುಹಿದರು ಬೇಗದಲಿ ಮಾರೀಮುಖನೊಳಾಕ್ಷಣಕೇ ||194||

ಕಂದ

ಅರುಹಲು ಕೇಳ್ದಾ ದನುಜಂ |
ಮರುಗುತೆ ತನ್ನನುಜರೊಡನರುಹಲ್ ಭರದಿಂ ||
ಶಿರಮಂ ತೂಗುತ ಧುರವಿಜ |
ಯರಾವಿಹೆವೆನುತ ತತ್ಕ್ಷಣ ಪೊರಟರ್ಖಳನನುಜರ್ ||195||

ರಾಗ ಕೇತಾರಗೌಳ, ಝಂಪೆತಾಳ

ಬಿಡು ಮನದ ಚಿಂತೆಗಳನೂ | ಸಂಗರಕೆ |
ಮಡ ತಾನೆ ಬರಲವನನೂ ||
ಹಿಡಿದು ಶಿರಗಳನೈದನೂ | ಕೊಯ್ದು ಯಮ |
ನೆಡೆಗೆ ಕಳುಹುವೆ ರಾಮನೂ ||196||

ಮಡದಿಗೋಸುಗ ಬಂದನೇ | ನೋಡವನ |
ಒಡಲ ಬಗೆಯದಿರಸುರನೇ |
ಹಿಡಿಯದಕೆ ನಂಬುಗೆಯನೂ | ಕೊಡುವೆನಾ |
ನಡೆ ಮನೆಯೊಳಿರು ಎಂದನೂ | ||197||

ಸಾರಥಿಯ ಕರೆದು ಬೇಗಾ | ರಥಗಳಾ |
ನೂರುಸಾವಿರ ಸಹಿತಲೀಗಾ ||
ಬರಲಿ ಪಟುಭಟರೀಕ್ಷಣಾ | ಐವತ್ತ |
ಆರು ಪದ್ಮವು ತತ್ಕ್ಷಣಾ ||198||

ವಾರ್ಧಕ

ಕುಶನೆ ಕೇಳಾ ಮತ್ತೆ  ಕೂಡಿಸಿದ ಸೈನ್ಯಮಂ |
ರಸನೆಯೊಳ್ ಲೆಕ್ಕಿಸಲ್ಕಸದಳವು ಶೇಷಂಗೆ |
ಅಸಮಬಲದಾನವಂ ವಜ್ರನೆಂಬನುಜನಂ ಕೂಡಿ ತಾ ನಡೆತಂದನೂ ||
ವಸುಧೆಯದುರಿತು ಮೇರುಶೈಲಮಲ್ಲಾಡಿದುದು |
ಬಸವಳಿದ ಕೂರ್ಮನೆದೆಗೆಟ್ಟಷ್ಟ ದಿಗ್ದಂತಿ |
ವಶವಳಿದು ಘೀಳಿಡಲು ಕಡಲುಕ್ಕಿತೆಂಬಂತೆ ಧರೆಗರುಣ ಮಳೆ ಸುರಿದುದೂ ||199||

ಭಾಮಿನಿ

ಆದುದೀ ಉತ್ಪಾತ ಶಕುನವ |
ಶೋಧಿಸದೆ ನಡೆತಂದು ಕಪಿಗಳ |
ಬಾಧಿಸಲಿಕಜಸುತನು ಕಂಗಳ ಜೂಬುಗುದುಲುಗಳಾ ||
ಸೇದಿಸುತ ಕರತಳದಿ ಮೇಲಕೆ |
ಕಾದುವರೆ ನಾವಿಹೆವು ಎಂದನು |
ತಾದರಿಸಿನಿಂದಿರ್ದ ಸಂಧಿಸಿ ಖಳನ ಸಮ್ಮುಖದೀ ||200||

ಕಂದ

ಜಾಂಬವ ನಡೆತರಲಾಗಳ್ |
ಸಂಭ್ರಮದೊಳ್ ತಾ ವಜ್ರಮುಖನೆಂಬ ದನುಜಂ |
ಕುಂಭಿನಿ ನಡುಗೆ ಗರ್ಜಿಸುತಂ |
ಮುಂಬಲಕನುವಾಗುತೆ ರೋಷದೊಳಿಂತೆಂದಂ ||201||

ರಾಗ ಸೌರಾಷ್ಟ್ರ, ಅಷ್ಟತಾಳ

ವದ್ಧರಯ್ಯ ನಿಮಗೀಗಾ |
ಬುದ್ಧಿಸಾಲದೆಮ್ಮೊಡನೆ |
ಗಡ್ಡವಾಡಿಸುತ್ತ ಬಂದೆ | ವದ್ಧವಾನರಾ ||202||

ಹದ್ದಿನಂತ ರಟ್ಟೆಯೊಳೂ |
ಎದ್ದುತೋರುತಿದೆ ಎಲವು |
ಕದ್ದ ಕಳ್ಳರಂತೆ ಎಮ್ಮ | ಗದ್ದಿಪೆ ಯಾಕೈ | ||203||

ಕಳ್ಳನಾದ ರಾವಣಂಗೆ |
ಒಳ್ಳಿದನ್ನು ಮಾಡ ಬಂದೆ |
ಮಳ್ಳು ಭೂತಗಳಿಗೆ ಬಲಿಯ | ಕೊಡುವೆನೀಕ್ಷಣಾ ||204||

ಕೇಳು ಮುದಿಗೂಗೆನಿನ್ನಾ |
ಪೇಳುವಂತ ನಾಮವೇನು |
ಕೇಳಬೇಕೆಂಬಾಸೆಯೆನಗೆ | ಬಹಳವಾಗಿದೇ ||205||

ಕೇಳಬೇಕೆ ಎನ್ನ ಪೆಸರ |
ಕೇಳಲೇನು ಸಿಗುವುದಯ್ಯ |
ಪೇಳುವೆನು ನಾನು ನಿನಗೆ | ಕೇಳು ರೇಣಾರ್ಚಿತನಾ | ||206||

ಸೀಳಿದಾ ಹನುಮ ಮುಂದೆ |
ಆಳುವಂತ ಪದವಿಯನ್ನು |
ಪಾಲಿಪಂತ ಬ್ರಹ್ಮಪುತ್ರ | ಜಾಂಬವಂತನೂ | ||207||

ಭಾಮಿನಿ

ಸೃಷ್ಟಿಯನು ನಿರ್ಮಿಸಿದ ಅಜನೊಳು |
ಪುಟ್ಟದನೆ ನೀನೆನುತಲಾ ಖಳ |
ನಟ್ಟಹಾಸದಿ ನಗುತ ಶೂಲವ ಹೊಡೆಯಲಾಕ್ಷಣದೀ ||
ಮುಟ್ಟಿಮುರಿಯುತ ಜಾಂಬವನು ತಾ |
ನಟ್ಟಿ ಖಳನನು ಪಿಡಿದು ಕಾಲಲಿ |
ಕಟ್ಟದೆಯ ತುಳಿಯಲ್ಕೆ ಬಿದ್ದನು ಬೆಟ್ಟದಂದದಲೀ ||208||