ರಾಗ ಕೇತಾರಗೌಳ, ಝಂಪೆತಾಳ

ಮಾರಿಮುಖ ಧುರವಿಜಯನೇ | ಸಂಗರದ |
ವಾರತೆಯ ಕೇಳು ನೀನೇ ||
ಧುರದೊಳಾ ರಘುರಾಮನೂ | ಕೀಶಬಲ |
ವೆರಸಿ ಸಂಗರದೊಳವನೂ | ||65||

ಧುರದಿ ರಕ್ಕಸ ಪಡೆಯನೂ | ಸಂಹರಿಸಿ |
ಹರುಷ ದಿಂದಿರುವನವನೂ ||
ಕುಲಕೆ ಘಾತಕಿಯಾದಳೂ | ಎನ್ನನುಜೆ |
ಗೆಲುವಿಲ್ಲದಾಯ್ತವರೊಳೂ | ||66||

ಖಳ ವಿಭೀಷಣನವರಲೀ | ನಮ್ಮ ನಿಜ |
ವಳವ ಪೇಳುತ ಮನದಲೀ ||
ಖಳನ ಸದೆಬಡಿದು ಭರದೀ | ಸೆರೆವಿಡಿದು |
ಚಳಕದಿಂ ತಹದು ಮುದದೀ | ||67||

ಕಂದ

ರಕ್ಕಸನೆಂದುದ ಕೇಳ್ದಾ |
ಘಕ್ಕನೆ ಮಾರೀಮುಖ ಮನದೊಳ್ತೋಷಿಸುತಂ ||
ತಿಕ್ಕುವೆ ಕಪಿಬಲಗಳನೆನು |
ತಕ್ಕರದೊಳಗುಸುರಿದದನುಜನೊಳತಿ ಜವದಿಂ ||68||

ರಾಗ ಮಾರವಿ, ಏಕತಾಳ

ಸಾಲ್ದಲೆಯಾಧಿಪ ಕೇಳ್ಕಪಿಬಳಗವ |
ಗೋಳ್ಗುಡಿಪೆನು ಕ್ಷಣದೀ ||
ನಾಲ್ಮೊನೀಕ್ಷಣ ಮುಳಿದೈತಂದರು |
ಸೀಳ್ವೆನು ಸಮರದಲೀ ||69||

ಕುಲ್ಗೇಡಿಕಾ ವಿಭೀಷಣನೋರ್ವನ |
ತೋಳ್ಗಳನುರೆ ಕಟ್ಟಿ ||
ತೋಳ್ಪಿಡಿವೆನು ರವಿಕುಲಜರನೀರ್ವರ |
ಕೇಳ್ದನುಜಾಧಿಪನೇ ||70||

ಈ ತೆರದೊಳು ಮಾರೀಮುಖನೆಂದುದ |
ದಿತಿಜಾಧಿಪ ಕೇಳ್ದೂ ||
ಭೂತಳಪತಿಯನು ಜಯಸೆಂದಿತ್ತನು |
ಪ್ರೀತಿಯೊಳ್ವೀಳಯವಾ ||71||

ವೀಳಯವನು ಕೈಕೊಂಡಾ ಖಳನತಿ |
ಪಾಳಯಗಳ ನೆರಹೇ ||
ಗೂಳೆಯವನುತೆಗೆ ತೆಗೆಯೆಂಬಾರ್ಭಟೆ |
ಮೊಳಗಿತು ಭೂತಳದೀ | ||72||

ವಾರ್ಧಕ

ತರಳ ಕುಶ ಲಾಲಿಸೈ ಅಸುರ ರಾವಣನೊಡನೆ |
ಮಾರಿಮುಖ ವೀಳ್ಯಮಂ ಕೈಕೊಂಡು ರೋಷದಿಂ |
ಧುರಕೆ ಚತುರಂಗ ಬಲವೆರಸಿಪೊರಡಲ್ಕಾಗ ಸುರವರರು ಭೀತಿಯಿಂದಾ ||
ಭೇರಿ ತಂಬಟೆ ರವವು ನಾರುಭಟಿಸುತ್ತಿರಲು |
ಭೂರಿ ಜಾಗ್ರತೆಯಾಗಿ ಚಿತ್ರಮಾಲಿನಿಯುನಡೆ |
ತರುತ ನಿಜಪತಿಯ ಶರಗಂ ಪಿಡಿದು ತರುಣಿಮಣಿಯಾಗ ನುಡಿದಳ್ ಮುದದೊಳೂ ||73||

ರಾಗ  ಆದಿತಾಳ

ವಲ್ಲಭ ನೀ ಎನ್ನ ಬಿಟ್ಟು ಪೋಗುವುದಿದು |
ಬಲ್ಲತನವೆ ಪೇಳು ನಲ್ಲ | ನೀ ಪೇಳೂ | ||74||

ಪುಷ್ಪವತಿಯು ನಾನಾಗಿ ಐದನೆ ದಿನ |
ತಪ್ಪಿನಡೆಯುವಿರಲ್ಲಾ | ಏ ನಲ್ಲಾ | ||75||

ಕರ್ಪೂರವೀಳ್ಯವ ಮಡಿದುಬಾಯೂಳಗಿಟ್ಟು ನಿನ್ನಾ |
ಅಪ್ಪಿ ಮುದ್ದಿಸುವೆನು | ಸರಸಾದಿ ನಾನೂ | ||76||

ಮಾರನಟ್ಟುಳಿ ಬಹಳವಾಗಿ ನಾ ದಣಿವುದು |
ನೀರ ನಿನಗಯೋಗ್ಯ | ಮರೆವುದಯೋಗ್ಯ | ||77||

ಸರಸ ಚುಂಬನಗೊಟ್ಟು | ಸವಿತಾಂಬೂಲವ ನಿಟ್ಟು |
ಗುರು ಕುಚಗಳ ಮುಟ್ಟು | ನೆರೆದು ಸುಖವಿಟ್ಟೂ | ||78||

ಮಾಲಿನಿ ವೃತ್ತ

ಮದನಶರಗಳಿಂದ ಮೈನೋವಾದರಿಂದ |
ಕದನಕೊದಗೊ ಜಾಣಾ |
ಕಪಟವ್ಯಾಕೊ ಪ್ರವೀಣಾ ||
ಕರವ ಮುಗಿವೆನೀಗ ಕಾಂತ ಮೋಹನ್ನ |
ಬೇಗ ಸುರತದೊಲವ ತೋರೊ |
ಶೀಘ್ರದಿ ಮನೆಗೆ ಬಾರೊ | ||79||

ರಾಗ ತೋಡಿ, ಆದಿತಾಳ

ಭಾವಕಿ ನೀ ಯೆಂದ ಮಾತಾ |  ದೇವರ್ಕಾಳು ಮೆಚ್ಚೂವಾರೇ |
ರಾವಣನು ತಾ ವೀಳ್ಯವಿತ್ತ | ಹವಕೆ ಪೊರಡಲೂ | ||80||

ನಲ್ಲ ನೀನೇನುತಿಳಿಯದವನೆ | ವಲ್ಲಭೆಯೊಳಿರುವ ಬಯಕೆ |
ಯೆಲ್ಲ ಸಲಿಸದಿರಲೂಮುಂದೆ | ಗೆಲವಿಲ್ಲವಯ್ಯ | ||81||

ಆಳ್ದವನ ನುಡಿಯ ಮೀರಿ | ಬಾಳ್ದವಳ ಮಾತ ಕೇಳ್ದರೆ |
ಬಾಳ್ಗೇಡಿಕಾನೆಂದು ಸುರರು | ಗುಳ್ದು ಜರೆವರೂ | ||82||

ಹೆಂಗಸಿನ ಮಾತ ಮೀರಿ | ಭಂಗಿಸಿ ಹೋದರೆ ಮಾನ |
ಭಂಗವಾಗುವುದು ರಣ | ರಂಗದಿ ನಿಮ್ಮಾ | ||83||

ಒಡೆಯನೆಂದ ಮಾತ ಮಿರಿ | ನಡೆವರುಂಟೆ ಪೊಡವಿಯೊಳಗೆ |
ಬಿಡು ಬಿಡು ದಾರಿಯ ಮುಂದೆ | ನಡೆಯೊ ಕಾಮಿನೀ | ||84||

ಭಾಮಿನಿ

ಅಮಿತ ಶೋಕದಿ ಪೇಳ್ವ ವನಿತೆಗೆ |
ಕ್ಷಮಿತ ವಚನವ ಪೇಳ್ದು ರಾಕ್ಷಸ |
ಭ್ರಮಿತದಿಂದಿರುತಿರ್ದ ಸುತರ್ಸಹಿತಾಗ ಸಂಭ್ರಮದೀ ||
ಮಮತೆಯಿಂದಲಿ ಪೇಳ್ದು ವನಿತೆಗೆ |
ಕುಮತಿ ಮಾರೀಮುಖನು ಸುಪರಾ
ಕ್ರಮದಿ ಸತಿಯನು ನುಡಿಸಿ ಮನ್ನಿಸಿ ಪೇಳ್ದನುಚಿತದಲೀ ||85||

ದ್ವಿಪದಿ

ಇಂತು ಮಾರೀಮುಖನು ಕಾಂತೆಯೊಳು ಪೇಳ್ದೂ ||
ತಾಂ ತವಕದೊಳು ಖಳನು ತೋಷಮಂ ತಾಳ್ದೂ | ||86||

ಆನೆ ಕುದುರೆವರೂಥ ಸೇನೆಗಳು ಸಹಿತಾ ||
ದಾನವರ ಭಾರಕ್ಕೆ ಕೂರ್ಮನೆದೆಗೆಡುತಾ | ||87||

ಪೊರಡುತಿರೆ ಕಂಡಾಗ ಚಿತ್ರಮಾಲಿನಿಯೂ ||
ಹರಣವಳಿವೆನು ಯೆನುತಲಿರ್ದಳಾ ಸತಿಯೂ | ||88||

ಸಂತಾನವಳಿವ ದಿನ ಬಂತು ಯಿಂದೆಮಗೇ ||
ಕಾಂತೆ ಕಾಂತನ ಬಯ್ದು ಬಂದಳರಮನೆಗೇ | ||89||

ಇಂತಿದರ ವರ್ಣಿಪಡೆ ಶೇಷನಿಂಗರಿದೂ ||
ನಿಂತು ನೋಡಿದ ಸುರರು ಆಶ್ಚರ್ಯವೆರದೂ |  ||90||

ಆ ಸಮಯದೊಳಗುಗ್ರಕೇತು ಎಂಬವನೂ ||
ತೋಷದಿಂದೈದಿ ಕರಗಳ ಮುಗಿದು ತಾನೂ | ||91||

ತಂದೆ ನಿಮಗಾರೊಡನೆ ಕಲಹಯಿಂದಿನಲೀ |
ಬಂದ ಭಟನಾರವನು ಪೇಳು ತನಗಿಲ್ಲೀ | ||92||

ಕೊಂದು ಕೊಡುವೆನು ಎನ್ನ ಸಾಹಸವ ನೋಡೀ |
ರೆಂದು ಕರಗಳ ಮುಗಿಯುತಪ್ಪಣೆಯ ಬೇಡೀ | ||93||

ರಾಗ ಭೈರವಿ, ಝಂಪೆತಾಳ

ಕೇಳಯ್ಯ ತಾತ ನಾ | ಪೇಳುವೆನು ನಿನಗೀಗ |
ಕೀಳುಬಲರುಗಳ ನೆರೆ | ಕಾಳಗದಿ ಗೆಲಿದೂ | ||94||

ಭಾಳಲೊಚನನಿಂದು | ಮುಳಿದು ಬಂದರು ಬಿಡೆನು |
ಬೀಳುಗಡಿವೆನು ನರನ | ಪಾಳಯವ ಕ್ಷಣದೀ | ||95||

ಗಾಳಿ ಸಿಡಿಲಿನ ತೆರದಿ | ಕೋಲಮಳೆಯನು ಸುರಿದು |
ಕಾಳಗದೊಳೀರ್ವರನು | ಪಿಡಿದು ತಂದೊಪ್ಪಿಸುವೆ | ||96||

ನೋಡೆನ್ನ ಸಾಹಸವ | ಗಾಡದಿಂದಲೆ ಕಳಹು |
ರೂಢಿಯಲಿ ಪಿಡಿತಹೆನು ಕುಲವಿಘಾತಕನಾ ||97||

ಕಂದ

ಪಿತನೊಡನೆಂದಾ ವಚನಕೆ |
ಹಿತದಿಂ ನಸುನಗುತಲೆ ಚಳಕದಿ ಧರಣಿಪನಂ ||
ಅತಿ ಜವದಿಂ ಪಿಡತಹುದೆ |
ನ್ನುತ ಸುತನೊಡನುಸುರಿದ ತಾ ಮುದದೊಳ್ ದುರುಳಂ | ||98||

ರಾಗ ಪಂತುವರಾಳಿ, ಮಟ್ಟೆತಾಳ

ತಂದೆ ನೀವು ಯಾಕೆ ಮನದಿ | ನೊಂದುಕೊಳುವಿರೀ ||
ಬಂದ ಕೋತಿಬಳಗ ಗೆಲುವೆ ನೇನ ಪೇಳ್ವಿರೀ | ||99||

ತರಿಸು ರಥವ ಕರಸುಬಲವ | ಧುರಸಮರ್ಥರಾ ||
ಬರಿಸು ಕರಿ ರಥಾಶ್ವ ಪ | ದಾತಿರಥಿಕರಾ | ||100||

ಭರದಿ ಬರುವ ಭಟರನೆಲ್ಲ | ತರಿದು ಕ್ಷಣದಲೀ ||
ಹರುಷದಿಂದ ನಿಮ್ಮ ಕೀರ್ತಿ | ಮೆರೆವೆ ರಣದಲೀ | ||101||

ತಂದೆಗೆರಗಿ ಪೊರಟು ಸೈನ್ಯ | ಸಹಿತ ಭರದೊಳೂ ||
ಬಂದು ನಿಲಲು ರಾಮನೊಡನೆ | ಪೇಳ್ದ ಶರಣನೂ | ||102||

ಭಾಮಿನಿ

ಶರಣಜನಸುರಧೇನು ಕರುಣಾ |
ಶರಧಿಯವಧರಿಸೀಗ ದುರುಳನು |
ಪರಮ ವಿಕ್ರಮಿಯವನ ತರಿಯಲಿಕೊಂದೆ ಯೆಡೆಯಿಹುದೂ ||
ಪರಮ ಸಂಭ್ರಮದಿಂದ ಬೇಟೆಗೆ |
ತೆರಳಿರಲು ಕೈಲಾಸಕೊಂದಿನ |
ಹರನ ಸೇವಕ ನಂದಿ ತಡೆಯುತಲೆಂದನವನೊಡನೇ | ||103||

ಚಂದ್ರಶೇಖರನಿರುವ ಶೈಲಕೆ |
ಮಂದಿಗಳ ಕೂಡುತಲೆ ರಕ್ಕಸ |
ಬಂದೆ ಯಾಕಲೊ ತೆರಳು ಬೇಗನೆ ಕೇಳಿ ನಗೆಸೂಸೀ |
ನಂದಿಯೇ ನಡೇಯಾಚೆ  ಸೇರದಿ |
ರಿಂದು ಮುದಿಯಾ ಕೋತಿ ಮೊಗವನು |
ಎಂದು ಹೀಯಾಳಿಸಲು ಕೋಪಿಸಿ ಶಪಿಸಿದಾ ನಂದೀ |  ||104||

ದುಷ್ಟ ಖಳ ಕೇಳ್ನಿನ್ನ ಕೊಲುವುದು |
ಎಷ್ಟರಾ ಕೆಲಸವದು ವಚನರ |
ಶಿಷ್ಟಪಾಲಕ ರಾಮ ಭಕ್ತನು ಕೊಲಲಿಯಂಗದನೂ ||
ಕಷ್ಟಗೊಳಿಸದೆ ಬಲವನಂಗದ |
ದುಷ್ಟನನು ಸಂಹರಿಸಲೆನಲಾ |
ಗಟ್ಟಹಾಸದಿ ಶರಣಗೆಂದನು ದನುಜರೋಷದೊಳೂ | ||105||

ರಾಗ ಪಂತುವರಾಳಿ, ಮಟ್ಟೆತಾಳ

ಎಲವೊ ಶರಮೆಯರಸ ನಿನ್ನ | ಬಲುಹುತನವನೂ ||
ಗೆಲಿದುಹರನ ಗಣಕೆ ಕೊಡುವೆ | ಬಲಿಯ ನಿನ್ನನೂ | ||106||

ಎನುತ ಸರಳ ಸುರಿಯೆ ದುರುಳ | ತನಯ ಭರದೊಳೂ |
ಕನಲುತೊಂದು ಶರದಿತರಿದ | ಧನುವ ಶರಣನೂ | ||107||

ಅಂದು ಕೋಪದಿಂದ ಖಳನು | ಬಂದು ತಿವಿದನೂ ||
ನೊಂದು ಮಗುಳೆ ಶರಣ ಖಳನ | ನಿಂದು ಬಡಿದನೂ | ||108||

ಬಿಡಲು ಗಿರಿಯ ಸಾಯಕವನು | ಕಡಿಯಲೆಂದನೂ ||
ಮಡನ ಸಖನ ಶರಣ ಬೇಗ | ನಡುವೆ  ತರಿದನೂ | ||109||

ಖಳನ ಶರವ ತರಿದು ಬೇಗ | ಬಳಿಕ ಶರಣನೂ |
ಮುಳಿದು ಮುಷ್ಟಿಯಿಂದ ತಿವಿದ | ಖಳನ ಒಡಲನೂ | ||110||

ಭರದಿ ಕೋಲಮಳೆಯಗರೆದು | ದುರುಳ ದೈತ್ಯನೂ ||
ಬರುವ ಸರಳ್ಗಳೆಲ್ಲ ತರಿದು | ಜರೆದು ಪೇಳ್ದನೂ | ||111||

ಕುಲವಿಘಾತ  ಕೇಳು ನಿನ್ನ | ಬಲುಹ ಬಲ್ಲೆನೂ ||
ಅಲಸಬೆಡವೆನುತಬಿಗಿದ | ಮೌನ ಶರವನೂ | ||112||

ಭಾಮಿನಿ

ದುರುಳ ಮೌನಾಸ್ತ್ರದಲಿ ಬಿಗಿಯಲು |
ಶರಣನನು ಕಾಣುತ್ತ ರವಿಜನು |
ಗಿರಿತರುವ ಕಿತ್ತಾರ್ಭಟಿಸಿ ಬರೆ ಕಂಡು ರಕ್ಕಸನೂ ||
ಬರಲಿ ನಿನ್ನ ಸಮಸ್ತ ಕಪಿಬಲ |
ವರಿದು ಪುಡಿಪುಡಿಗೈವೆ ನೋಡೆನು |
ತುರೆ ಭಯಂಕರ ರವದೊಳೊರೆದನು ದನುಜ ತರಣಿಜಗೇ | ||113||

ರಾಗ ಭೈರವಿ ಮಟ್ಟೆತಾಳ

ಎಲವೊ ಕೀಶಬಲದ ಪತಿಯೆ |
ಬಲುಹು ತೋರೆನುತ್ತ ಖಳನು |
ತಳುವದೆಚ್ಚನಾಗ ಸರಳ | ಗೆಲವಿನಿಂದಲೀ ||114||

ಜಡಿದು ಪರ್ವತಗಳ ರವಿಜ |
ತಡವ ಮಾಡದಾಗ ಪೊಡೆಯೆ |
ಕಡಿದ ದನುಜ ವಜ್ರಶರವ | ಬಿಡುತ ಅದರನೂ ||115||

ನಡುವೆಯದರ ಕಡಿದು ರವಿಜ |
ನುಡಿದ ನಾಗ ತೆರಳು ನಿನ್ನ |
ಪಡೆಯು ಸಹಿತವಿತಳಕಾಗಿ | ನಡೆಯೊ ಗಮ್ಮನೇ ||116||

ಎನಲು ರೋಷದಿಂದ ದನುಜ |
ಕನಲ್ದು ಮೌನಶರವ ಬಿಡಲು |
ಇನಜ ಮೂರ್ಛೆಗೈಯಲಾಗ | ಹನುಮನೆಂದನೂ ||117||

ಎಲವೊದನುಜ ಕೀಶಪತಿಯ |
ಗೆಲಿದೆನೆಂದು ಹಿಗ್ಗ ಬೇಡ |
ಕಲಹದಲ್ಲಿ ನಿನ್ನ ಬಲವ | ಕಲಕಿಬಿಡುವೆನೂ ||118||

ರಾಗ ಭೈರವಿ ಅಷ್ಟತಾಳ

ಹನುಮನೆಂಬವನೆ ನೀನೂ | ನಿನ್ನಯ ಭುಜ | ತ್ರಾಣವ ಬಲ್ಲೆ ನಾನೂ ||
ಘನ ವೇಗದಿದಿರಾಗು ಇದಿರಾಗೆಂದೆಚ್ಚನು | ಕನಲುತಲಾಖಳನೂ ||119||

ಕೇತು ಯೆಂಬವನೆ ನೀನೂ | ನೀನ್ನನು ಇನ | ಜಾತ ಗೊಪ್ಪಿಸುವೆ ನಾನೂ ||
ಘಾತಕಿ ಪಢ ಎನುತೆರಗಿದ ಮುಷ್ಟಿಯೊಳ್ | ಕಾತರಿಸುತ ಬಿದ್ದ ಕೇಳವನೂ ||120||

ಖಳನು ಮೂರ್ಛೆಯ ತಿಳಿದೂ | ಬ್ರಹಾಸ್ತ್ರವ | ಕಿವಿಯ ತುದಿಗೆ ಯೆಳೆದೂ ||
ಘಳಿಲನೆ ಬಿಡೆ ಶರದುರಿಯೊಳು ಬಿದ್ದನು | ಇಳೆಯೊಳು ಮರುತಜನೂ | ಕೇಳವನೂ ||121||

ಭಾಮಿನಿ

ಲವನೆ ಕೇಳೈ ಖಳನ ಸಾಹಸ |
ವವನಿಯಲಿ ರವಿತನಯ ಪವನಜ |
ಗವಯ ವೀರ ರುಮಣ್ವ ನಾಯಕ ಕಲಿವಿಭೀಷಣರಾ ||
ಬವರದಲಿ ತಾ ಗೆಲಿದ ರಕ್ಕಸ |
ನಿವನ ಗೆಲುವ ಸಮರ್ಥ ಧರೆಯಲಿ |
ದಿವಿಜಪತಿ ಸುತತನಯನಂಗದಗೆಂದನಾ ರಾಮಾ ||122||

ರಾಗ ಕೇತಾರಗೌಳ, ಅಷ್ಟತಾಳ

ತರಳ ಅಂಗದ ಕೇಳು ಘನವಾದ ಉಪಟಳ |
ದುರುಳನದೇನಪೇಳ್ವೇ ||
ಮರುತಜ ರವಿಜರನೆಲ್ಲರ ಸೋಲಿಸಿ |
ಧರಿಣಿಯೊಳ್ ಕೆಡಹಿದನೂ ||123||

ದೂಷಿತ ರಕ್ಕಸ ಸಾಹಸದಲಿ ಬಂದು |
ಘೋಷಿಸಿನಿಂದಿರಲೂ ||
ಮೋಸವಾಯಿತು ನೀ ಹೋರತು ಬೇರಿಲ್ಲ ಮ |
ತ್ತಾಸಾಂಬ ಶಿವನೇ ಬಲ್ಲಾ ||124||

ಎಂದ ಮಾತನು ಕೇಳು | ತಂದು ಅಂಗದ ತೋಷ |
ದಿಂದ ರಾಮನ ಪಾದಕೇ ||
ವಂದಿಸಿ ಪೊಡಮಟ್ಟು ಬಂದು ನೋಡಿದ ತಾನು |
ಚಂದದಿ ಖಳನಾಟವಾ ||125||

ಕರದಲಿತರುಗಿರಿಗಳ ಧರಿಸುತ್ತ ಬೋ |
ಬ್ಬಿರಿಸುತ್ತ ರೋಷದಲೀ ||
ಪರಿಪರಿಯಿಂದ ರಾಘವನ ಧ್ಯಾನಿಸಿ ತರು |
ಚರ ಧುರಕನುವಾದನೂ ||126||

ರಾಗ ಪಂತುವರಾಳಿ, ಮಟ್ಟೆತಾಳ

ಎಲವೊ ಖಳನೆ ನಿನ್ನ ಬಲದ | ಬಲ್ಲವಿಕೆಯನೂ ||
ತಿಳಿದೆನೊಂದು ಗಳಿಗೆಯೊಳಗೆ | ಗೆಲುವೆ ನಿನ್ನನೂ ||127||

ಎನುತ ಗಿರಿ ತರುವಗೊಂಡು | ಕನಲಿ ಹೊಯ್ದನೂ ||
ದನುಜನಾಗ ದಿವ್ಯ ಕುಲಿಶ | ಶರದಿ ತರಿದನೂ ||128||

ಎಲವೊ ಕಪಿಯೆ ಜೀವದಾಸೆ | ಯೊಲವು ಉಂಟೆನೋ ||
ಕಲಹಬಿಟ್ಟು ಕಾಲಿಗೆರಗು | ಸಲಹಿಕೊಂಬೆನೊ ||129||

ಕಾಲ ಹಿಡಿವುದಕ್ಕೆಬಹಳ ವೇಳೆ ಕಾಣೆನೂ ||
ಖೂಳ ದನುಜ ಭಳಿರೆಯೆನುತ | ಬೀಳ ಹೊಯ್ದನೂ ||130||

ಹೊಡೆದ ಭರಕೆ ಶಿರದಿ ರುಧಿರ | ವೊಡೆದು ಸೂಸಲೂ ||
ಝಡಿಯುತೆಮನ ದೂತರೊಯ್ದು | ನಡೆದರತ್ತಲೂ ||131||

ದುರುಳ ಧರೆಗೆ ಬೀಳಲಾಗ | ಸುರರು ಹರುಷದಿ |
ಸುರಿದರಾಗ ಕುಸುಮ ಮಳೆಯ | ತರಳನಂಗದೀ ||132||

ಭಾಮಿನಿ

ದುರುಳ ದಾನವ ಬೀಳೆ ಧರಣಿಗೆ |
ಮರುಗುತಾಕ್ಷಣ ಚರರು ನಡೆತಂ |
ದರುಹುವೆವು ಧನಿಗೆನುತ ಮರೆಸುತ ರೂಪ ವೇಗದಲೀ ||
ಭರದಿ ಪೊರಟೈತರುತ ದನುಜನ ||
ಪೊರಗೆ ಬಂದೀಕ್ಷಿಸುತಲೊಂದಿಸಿ |
ಚರರು ಮಾರೀಮುಖಗೆ ಪೇಳಿದರಾಗ ಈಹದನಾ ||133||

ರಾಗ ಮುಖಾರಿ, ಆದಿತಾಳ

ಮಾರೀಮುಖನೆ ಲಾಲಿಸಯ್ಯ | ನಿನ್ನಯ ಸುತ |
ಕ್ರೂರ ಕೇತುವು ಜೀಯಾ ||
ಹಾರಿಸಿ ರವಿಜನ | ಘೋರಿಸಿ ಶುಗಜನ |
ಸೇರಿಸಿನಳನ ನಿ | ವಾರಿಸಿ ಗವಯನ
ತೋರಿಸಿ ಯಮಪುರ | ಹಾರಿಸಿ ಕಪಿಕುಲ |
ವಾರವ ಕೆಡಿಸಿದುದೇನ ಪೇಳುವೆನು ||134||

ಅಂಗವಿಕಾರದ ಕಪಿಯೊಂದು | ಮೇಲ್ವಾಯ್ದ |
ಅಂಗದನೆಂಬಾತ ಬಂದೂ ||
ಸಂಗರದಲಿಭಟ | ರಂಗವ ಕೆಡಿಸಿ ರ |
ಣಾಂಗದಿ ಕುವರನ | ಭಂಗಿಸುತಾ ಗಗ |
ನಾಂಗಣ ಮಾರ್ಗವ | ನಿಂಗಿಸಿ ತೋರಿದ |
ರಂಗವ ನಾನಿನ್ನೇನ ಪೇಳುವೆನೂ ||135||