ವೃತ್ತ

ಶ್ರೀಲಕ್ಷ್ಮೀವಿಲಾಸಂ | ಸುಲಲಿತಭೂಷಂ | ಸುರೇಂದ್ರವಂದಿತ ಘೋಷಂ ||
ಬಾಲಾರ್ಕಮಿತಭಾಸಂ | ಗಜಪುರಾಧೀಶಂ | ಶ್ರೀಹರಿರಕ್ಷಿಸು ಎಮ್ಮಂ  ||1||

ರಾಗ ನಾಟಿ, ಝಂಪೆತಾಳ

ಶ್ರೀಗೌರಿವರಪುತ್ರ | ಸುಜನಜನನುತಿಪಾತ್ರ |
ನಾಗಶಯನನ ಮಿತ್ರ | ನಮರೇಂದ್ರಸ್ತೋತ್ರಾ ||
ಜಯತು ಜಯ ಜಯತೂ |  || ಪಲ್ಲವಿ ||

ಅಮರವಾಹನವಕ್ತ್ರ | ಆದಿಪೂಜಾಪಾತ್ರ |
ದ್ಯುಮಣಿಕೋಟಿಪ್ರಕಾಶದುರಿತಯುಗನಾಶಾ ||
ಜಯತು ಜಯ ಜಯತೂ |  ||ಅ.ಪ.||

ಗಜಮುಖನೆ ನಿನ್ನ ಚರ | ಣಾಬ್ಜಗಳಿಗೊಂದಿಸುವೆ |
ಸುಜನರಕ್ಷಕ ದೇವ | ಭಜಕಸಂಜೀವಾ ||
ಅಜಸುರಾದಿಗಳು ಪೂ | ಜಿಪ ಪಾದವ್ರಜಗನಳನು |
ಪೂಜಿಸುವೆ ಮನವೊಲಿದು | ದ್ವಿಭುಜ ಗಣನಾಥಾ |
ಜಯತು ಜಯ ಜಯತೂ |  ||2||

ಬೇಡಿದಿಷ್ಟಾರ್ಥಗಳ | ನೀವಶ್ರೀಗಣನಾಥ |
ರೂಢಿಯಲಿ ನಿನ್ನ ಕೊಂ | ಡಾಡುವೆನು ನಲಿದೂ ||
ಕೂಡೆ ಮಂಗಲಮಪ್ಪ | ತೆರದೊಳೀ ಕೃತಿಗೆ ದಯ |
ಮಾಡಿ ರಕ್ಷಿಸೊ ಯೆನ್ನ | ಗಣಪ ಮೋಹನ್ನಾ ||
ಜಯತು ಜಯ ಜಯತೂ  ||3||

ದುಷ್ಟರಾವಣನು ತಾ | ಕೊಟ್ಟ ಲಿಂಗವ ಧರೆಯೊ |
ಳಿಟ್ಟು ಸುರರಿಗೆ ಅಭಯ | ಕೊಟ್ಟೆ ವಿಘ್ನೇಶಾ ||
ಸೃಷ್ಟಿಯಲಿ ಬಾರ್ಕೂರ | ಪಟ್ಟಣದಿ ನೆಲಸಿರ್ದ |
ಅಷ್ಟಭೈರವರೊಳತಿ | ಶ್ರೇಷ್ಠ ವಿಘ್ನೇಶಾ ||
ಜಯತು ಜಯ ಜಯತೂ  ||4||

ಭಾಮಿನಿ

ಗಿರಿಜೆ ಶಾರದೆ ಲಕ್ಷ್ಮಿಯರ ಸಿರಿ |
ಚರಣವ ಧ್ಯಾನಿಸುತ ಸುರರಿಗೆ |
ಪರಮ ಭಕ್ತಿಯೊಳೆರಗೆ ದಿಕ್ಪಾಲಕರಿಗುರೆ ಮಣಿದೂ |
ಧರೆಯ ಕವಿಗಳಿಗೆರಗಿ ಸಂತತ |
ವರಮಹಾ ಮುನಿಗಳಿಗೆ ನಮಿಸುತ |
ಪರಮಹರುಷದಿ ಗುರುವ ವಂದಿಸಿ ವ್ಯಾಸಮುನಿಗೆರಗೀ ||5||

ವಾರ್ಧಕ

ಹರನಜನ ಚರಣಕಾನತನಾಗಿ ಹರುಷದಿಂ |
ಸಿರಿಯರಸನಂ ಸ್ತುತಿಸಿ ಶೌನಕರ ನಾರದಾ |
ದ್ಯರಿಗಭಿನಮಿಸುತೊರೆವೆವಾಲ್ಮೀಕಿಮುನಿಯರಾಮಾಯಣ ಮಹಾಕಥೆಯೊಳು
ದುರಳ ಮಾರೀಮುಖನ ಸಂಹರಿಸಿ ರಾಘವಂ |
ಪರಮ ಹರುಷದೊಳಿರ್ದ ಕಥೆಯನುಂ ಸಾಂಗದಿಂ
ಒರೆಯುವೆನು ಸತತಮಾಗಿರ್ದ ಗಜಪುರದೆ ನರಸಿಂಹನ ಕಟಾಕ್ಷದಿಂದಾ ||6||

ರಾಗ ಶಂಕರಾಭರಣ, ತ್ರಿವುಡೆತಾಳ

ಧರೆಯೊಳಗೆ ಸತ್ಯಾತ್ಮರಾಗಿಹ | ಪರಮ ಕವಿಗಳ ಚರಣ ಯುಗ್ಮ |
ಕ್ಕೆರಗಿ ಪೇಳುವೆ ಹರಿಯ ಲೀಲಾ | ಚರಿತೆಗಳನೂ | ||7||

ತರಳತನದಿಂದೊರೆದೆನಲ್ಲದೆ | ಅರಿಯೆ ನಾ ಪೌರಾಣಶಾಸ್ತ್ರದೊ |
ಳಿರುವ ಲಕ್ಷಣವೆಂತು ತಾಳ ಸುರಾಗಗಳನೂ | ||8||

ಒಂದನಿದ ನಾನರಿಯೆ ಹರಿಕಪೆ | ಯಿಂದಲಾದುದು ಕೃತಿಯನದರಿಂ |
ಕುಂದನರುಹಿಪ ಜನರ ಮನದೊಳ | ಗೊಂದಿಸುವೆನೂ | ||9||

ಅಮರರೆಲ್ಲರ ಪೊರೆಯಲೋಸುಗ | ರಮೆಯ ವಲ್ಲಭ ಜನಿಸಿ ಧರೆಯೊಳು |
ದಮನಿಸುತ ದುರುಳರನು ಮೆರೆದಿಹ | ವಿಮಲ ಕಥೆಯಾ | ||10||

ಲಾಲಿಪುದುಸತ್ಪುರುಷರೆಲ್ಲರು | ಬಾಲನಿವನೆಂದೆನ್ನ ಜರೆಯದೆ |
ಲೀಲೆಯಲಿ ತಪ್ಪಿರಲುತಿದ್ದಿವಿ | ಶಾಲತನದೀ | ||11||

ವಚನ

ಈ ಪ್ರಕಾರದಿಂದ ದೇವ ಗುರುಕವಿ ಪ್ರಾರ್ಥನೆಯಂ ಮಾಡಿ
ತತ್ಕಥಾ ಪ್ರಸಂಗಮಂ ಪೇಳ್ವೆನದೆಂತನೆ  ||12||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ವಿತಳದಧಿಪತಿ ಮಾರಿಮುಖ ತಾ | ನಧಿಕ ಲಂಕಾಧಿಪತಿ ದಶಶಿರ |
ನತುಳ ವಿಕ್ರಮನಿಂಗೆ ಬೆಂಬಲ | ವಾದನ್ಯಾಕೈ ||13||

ಸತಿಶಿರೋಮಣಿಸೀತೆಯರಸನು | ಹತವ ಮಾಡಿದನೆಂತು ಅಸುರರ |
ಕಥೆಯನಿದ ಸಾಂಗ ದಲಿ ನೀ ವಿ | ಸ್ತರಿಸಬೇಕೈ ||14||

ಸಾಂಗದಿಂ ಪೇಳೆನಲು ಮುನಿಕಲ | ಪುಂಗವನು ತೊಡಗಿದ ಮಹಾಕಥೆ |
ಯಂಗವನು ಕುಶಲವರಿಗರುಹಲಾ | ರಂಭಿಸಿದನೂ ||15||

ದ್ವಿಪದಿ

ವಾಲ್ಮೀಕಿಮುನಿಪದಕೆ ನಮಿಸಿ ಕುಶಲವರೂ ||
ಕೇಳಿದರು  ರಾಮಾಯಣಾಮತವನವರೂ | ||16||

ದಶರಥನ ಸುತನೆನಿಸಿ ಧರಣಿಜೆಯ ನೊಲಿಸೀ |
ಕುಶಲದಿಂದಾಯೋಧ್ಯೆ ಪುರಕರಸನೆನಿಸೀ | ||17||

ತಂದೆ ಯಾಡಿದ ನುಡಿಗೆ ಬೇಗ ಶ್ರೀರಾಮಾ ||
ಚಂದ್ರ ಲಕ್ಷ್ಮಣ ಸೀತೆ ಸಹಿತ ನಿಸ್ಸೀಮಾ | ||18||

ಪಂಚವಟಿಯಲಿ ಶೂರ್ಪನಖಿಯ ನಾಸಿಕವಾ ||
ಚಂಚಲದಿ ತ್ರಿಶಿರ ಖರ ದೂಷಣರ ಶಿರವಾ | ||19||

ದನುಜ ಸೀತೆಯನೊಯ್ಯಲಾಗ ರಾಘವನೂ ||
ಹನುಮನಿಂದಾಗ ಸುಗ್ರೀವಸಖ್ಯವನೂ | ||20||

ವಾಲಿಯನು ಮುರಿದು ಕಪಿವಾಹಿನಿಯ ನೆರೆದೂ ||
ಶೈಲ ತರು ಗಿರಿಯಿಂದ ಸೇತುವಂ ಬಲಿದೂ ||21||

ಶರದಿಯನು ದಾಟಿದಶಶಿರನ ಕೋಟೆಯನೂ ||
ಮುರಿದು ರಾಕ್ಷಸರುಗಳ ಬಿಡದೆ ಸವರಿದನೂ ||22||

ಧೂಮ್ರಾಕ್ಷ ಕುಂಭಾ ನಿಕುಂಭ ಮೊದಲಾದ ||
ಸಂಭ್ರಮದೊಳಮಿತ ಮಿತ್ರಘ್ನನಿದಿರಾದಾ ||23||

ಕುಂಭಕರ್ಣಾಸುರನ ಕೆಡಹಿರಣದೊಳಗೇ ||
ಜಂಭಾರಿಜಿತು ಮುಖ್ಯರೆಲ್ಲರನು ಮೇಗೇ ||24||

ಮುಂದಾದ ಕಾರಣವ ಪೇಳಬೇಕೇನುತಾ ||
ಚಂದದಿಂ ಬಾಲರ್ಗೆ ಪೇಳ್ದೆಮುನಿ ನಗುತಾ | ||25||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಇತ್ತ ರಾಘವ ದನುಜರೆಲ್ಲರ |
ಮೊತ್ತವನು ಸಂಹರಿಸಿ ಕಪಿಗಳ |
ಚಿತ್ತದಲಿ ಪರಿತೋಷದಿಂದಾ | ಳುತ್ತಲಿರಲೂ ||26||

ದಶಶಿರನ ಸುತನಿಂದ್ರಜಿತುವನು |
ಅಸುವೆರದು ಜವಗೆಡಿಸಿ ರಾಘವ |
ರಸೆಯೊಳಿರುತಿರುತಿರ್ದ ವಾನರ | ವಿಸರ ಸಹಿತಾ | ||27||

ಆ ಸಮಯದೊಳಗಿತ್ತದನುಜನು |
ಮೋಸವಾದುದೆ ಯೆಂದು ಮನದಲಿ |
ಬೇಸರದಿ ರಾತ್ರಿಯನು ಕಳೆದನು | ಆಸುರೇಂದ್ರಾ | ||28||

ಮಿತ್ರಮೈರಾವಣನ ಕಳುಹಿನಿ |
ರರ್ಥವಾಯಿತು ಅಕಟ ತಾನೀ |
ಶತ್ರುವನು ಜಯಿಸುವರೆ ಕಾಣೆನು | ಯತ್ನವನ್ನೂ | ||29||

ರಾಗ ಕಾಂಭೋಜಿ ಝಂಪೆತಾಳ

ಇಂತೆಂದು ದಶಶಿರನು | ಚಿಂತಿಸುತ ಮರುಗಿದನು |
ಅಂತರಂಗದಿ ನೆನೆದು | ಪಂಥಗಳ ಬಳಲೀ ||
ಪಿಂತೆ ರಾಘವ ಧುರದಿ | ಗೆಲಿದನೈ ದನುಜರನು |
ಯೆಂತು ನಾ ಮರೆವವನ | ನೊರೆಯಲಿನ್ನೇನೂ ||30||

ತಂಗಿಶೂರ್ಪನಖಿಯ | ನುಡಿಯೆಮಗೆ ಕಡೆಗಾಲ |
ಭಂಗವಾದುದೆ ಸೇನೆ | ಮಂಗಗಳಿಂದಾಗಿ ||
ಹಿಂಗಿದುದೆ ಭುಜ ಶೌರ್ಯ | ಸಂಘಟಿಸಿತಪ ಜಯವು |
ಭಂಗಿತನು ನಾನಾದೆ ಪೋಪೆ ರಣಕೀಗಾ ||31||

ವಾರ್ಧಕ

ಸಾಲ್ದಲೆಯ ದನುಜನೀ ಪರಿಯಿಂದ ಶೋಕಮಂ |
ತಾಳ್ದಿರುವ ವೇಳೆಯೊಳ್ ಶಚಿವಜ್ರನೆಂಬ ಚರ |
ಪೇಳ್ದನಾಗೈತಂದು ರಾಘವನ ನಿಖಿಲ ವತ್ತಾಂತಮಂ ದನುಜೇಶಗೇ |
ಕೇಳ್ದಲೈ ದನುಜೇಂದ್ರ ಅಸುರ ಕುಲತಿಲಕ ಶ್ರೀ ||
ಯಾಳ್ದಪಂ ಜನಿಸಿದಂ ಧರೆಯೊಳಗೆ ನರರೂಪಿ |
ನೋಳ್ದುರವು ಸಲ್ಲದೆಲೆ ದನುಜೇಶ ಕೇಳೆಂದನಾಕ್ಷಣದಿ ಶಚಿವಜ್ರನೂ | ||32||

ರಾಗ ಭೈರವಿ ಝಂಪೆತಾಳ

ಖಳರಾಯ ಮನದೊಳಗೆ | ಬಳಲ್ವೆಯಾಕೈ ನೆಲೆಯ |
ಗಳಿಲದಿಂಪೇಳುವೆನು | ರಾಘವನ ಪರಿಯಾ | ||33||

ಸಾಕ್ಷಾತು ವಿಷ್ಣುವವ | ತಾರನಾಗಿಹ ರಾಮ |
ನಿಶ್ಚಯವು ಸೌಮಿತ್ರ | ಉರಗಪತಿ ತಾನೂ | ||34||

ಲಕ್ಷ್ಮೀದೇವಿಯು ಜನಕ | ಕುಕ್ಷಿಯಲಿ ಜನಿಸಿಹಳು |
ಸಾಕ್ಷಾತು ಸುರರುಕಪಿ | ಕುಲದೊಳುದಿಸಿದರೂ | ||35||

ಸೃಷ್ಟಿಯೊಳಗವತರಿಸಿ | ದುಷ್ಟರನು ನಿಗ್ರಹಿಸಿ |
ಅಷ್ಟದಿಕ್ಪಾಲಕರ | ಸುರವರರ ಪೋರೆಯೇ | ||36||

ಶ್ರೇಷ್ಠ ನಿನ್ನೊಳು ಪೇಳ | ಲೇನುಂಟು ಬಲ್ಲವಗೆ |
ಕಷ್ಟವಾಗುವುದಯ್ಯ | ದಿಟ್ಟ ಅಸುರೇಂದ್ರ | ||37||

ವಾರಿರುಹನೇತ್ರೆಯನು | ವಾರಿಜಕ್ಷನಿಗಿತ್ತು |
ವೀರಾ ವಿಭೀಷಣನ | ಕರೆಸಿದರೆ ಲೇಸೂ ||38||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸಾಕು ಸಾಕೆಲೆ ಚರನೆ ನಿನ್ನಯ |
ಕಾಕುತನಗಳ ನುಡಿಯನೆಮ್ಮೊಳು |
ಸೋಕದಿರು ಸಲೆ ಜೋಕೆಯಲಿ ಮಾ | ತಾಡು ಮಗುಳೆ ||39||

ರಕ್ಕಸರ ಸದೆಬಡಿದ ರಾಮನ |
ಸೊಕ್ಕ ಮುರಿವೆನು ಲಕ್ಷ್ಮಣನ | ನೆರೆ
ಜೊಕ್ಕಣಿಕೆ ನಿಲಿಸುವೆನು ಕಪಿಗಳ | ಮುಕ್ಕಿ ಭರದೀ ||40||

ಪೌರುಷದ ಮಾತುಗಳದ್ಯಾಕೈ |
ಸೂರ್ಯಕುಲಜರು ಶೌರ್ಯವಂತರು |
ಪಾರುಗಾಣೆನು ಬೇಡ ರಾಮನ | ಕೂಡೆ ಕಲಹಾ | ||41||

ಬಲ್ಲೆ ಬಲ್ಲೆನು ಅವರ ಸಾಹಸ |
ವಿಲ್ಲಿ ಕೊಂಡಾಡದಿರು ಮೂಢನೆ |
ಸೊಲ್ಲಿಸಲು ತಾಕೊಲುವೆನೆಂದನು | ಖುಲ್ಲತನದೀ | ||42||

ಕಂದ

ಚರನೆನೆ ಕೇಳ್ದಾ ರಾವಣ |
ಮನದೊಳ್ಕಿಡಿಗೆದರುಂತೆ ಖಡ್ಗವ ಝಳಪಿಸುತಂ ||
ಶಿರಮಂ ಚಂಡಾಡುವೆನಿವ |
ನನಂತರದೊಳಾ ಕಪಿಬಲ ಸಹ ರಘುವರನಂ ||43||

ವಾರ್ಧಕ

ತರಳ ಲವ ಕೇಳೆಲೀಪರಿಯಿಂದ ಶಚಿವಜ್ರ |
ನೊರೆದ ನುಡಿಯಂ ಕೇಳಿ ಕೆರಳಿದಂ ದಶಶಿರಂ |
ಜರೆದು ನುಡಿಯಲ್ಕಾಗ ಬೆದರಿ ಮರಳಿದ ನಿತ್ತಲೇನೆಂಬೆ ಮಂದಿರದೊಳೂ ||
ಭರದೊಳೈ ತಂದು ಮತ್ತನಿತರೊಳು ಪತಿಗೆರಗಿ ||
ತರುಣಿ ಶಶಿವದನೆ ಮಂಡೋದರಿಯು ತನಗಾದ |
ಉರುತರ ಸ್ವಪ್ನದುಕ್ತಿಯ ತನ್ನ ಪತಿಯೊಡನುಸುರ್ದಳಾ ಶೋಕದಿಂದಾ | ||44||

ರಾಗ ನೀಲಾಂಬರಿ, ಆದಿತಾಳ

ಕಾಂತಾ ನೀ ಲಾಲಿಸಯ್ಯ | ನಿನ್ನೊಳು ಪೇಳ್ವೆ |
ಅಂತರಂಗದ ಕನಸಾ ||
ಕಂತುಜನಕ ರಾಮನೂ | ನಿಮ್ಮನು ಕೊಂದು |
ಸಂತೋಷದಿ ಲಂಕೆಯನೂ ||45||

ವೀರ ವಿಭೀಷಣಗೇ | ಒಲಿದಿತ್ತು |
ಪೊರೆವನೈ ಅನಿಮಿಷರಾ
ವಾರಿಜಾಕ್ಷನ ಕಪೆಯೂ | ಸೇರಿದ ಮೇಲೆ |
ಬೇರುಂಟೆ ಚ್ಯುತಿಯುವರ್ಗೇ ||46||

ನೀ ತಂದ ವನಿತೆಯನೂ | ತಿರುಗಿ ಒಯ್ವ |
ರೀತಿಯ ಕಂಡೆ ನಾನೂ ||
ಮಾತಿದು ಪುಸಿಗಳಲ್ಲಾ | ಇನ್ನಾದರು |
ನೀ ತಿಳಿದು ನೋಡಯ್ಯ ನಲ್ಲಾ  ||47||

ಮನ್ನಿಸು ಶ್ರೀ ರಾಮನಾ | ಸೀತೆಯನಿತ್ತು |
ಇನ್ನಾದರವನಿಪನಾ ||
ಚಂದದಿ ಕಳುಹುವುದು | ನಾವೆಲ್ಲರಾ |
ನಂದದೊಳಿರಬಹುದೂ  ||48||

ರಾಗ ಮಾರವಿ, ಏಕತಾಳ

ಕಾಮಿನಿರನ್ನೆಳೆ ಸ್ವಪ್ನದ ಸ್ಥಿತಿಯನು |
ಎನ್ನೊಡನುಸುರದಿರೇ ||
ಸಾಮರ್ಥ್ಯಗಳಿಂದೆನ್ನನು ಜಯಸುವ |
ಮಾನವರ್ಯಾರ್ಮರುಳೇ ||49||

ರಾಗ ಕೇತಾರಗೌಳ, ಅಷ್ಟತಾಳ

ದಶವದನೇಶ ಕೇಳ್ ವಳವ ನಾ ನಿನ್ನೊಳು |
ಉಸಿರಿದೆ ಪ್ರಥಮದೊಳೂ ||
ಈ ಸುದತಿಯ ನೆವನದಿ ಕೊಲುವನು ಕೇ |
ಳಾ ಸುರರ್ಗೊಡೆಯ ಕಾಣೂ ||50||

ರಾಗ ಮಾರವಿ, ಏಕತಾಳ

ಸುರರಿಗೊಡೆಯ ತಾನಾದರೆರಾಮನು |
ತರುಣಿಯಳನೆ ತೊರೆದೂ ||
ಧರಣಿಯೊಳಗೆ ತಾ ತಿರುಗುವುದ್ಯಾತಕೆ |
ಮರುಳಾದೆ ಯೇನೇ ||51||

ರಾಗ ಕೇತಾರಗೌಳ, ಅಷ್ಟತಾಳ

ಬಣ್ಣಗೇಡಾದರು ನಮ್ಮವರೆಲ್ಲರ |
ಹೆಣ್ಣಿನ ನೆವನದಿಂದಾ ||
ಮಣ್ಣಗೂಡಿಸುವ ನಮ್ಮೆಲ್ಲರ ರಾಮ ಮು |
ಕ್ಕಣ್ಣನಾಸಖನಾಥನೇ ||52||

ರಾಗ ಮಾರವಿ, ಏಕತಾಳ

ಕೊಲುವವ ನಮ್ಮ ತಾನಾದರೆ ಕಪಿಗಳ |
ಬಳಗವಾಶ್ರಯಿಸುವನೇ |
ಗೆಲುವೆನವನ ನೀನರಿಯೆಯ ಎನ್ನಯ |
ಛಲ ಬಲ ವಿಕ್ರಮವಾ | ||53||

ರಾಗ ಕೇತಾಳಗೌಳ, ಅಷ್ಟತಾಳ

ವಿಕ್ರಮವಂತ ನೀನಾದರೆ ಕೇಳುಶ |
ಕ್ರಾರಿಯ ತೋರೆನಗೇ ||
ವಿಕ್ರಮವಂತರ ಕುಂಬಶ್ರವಣ ನ |
ರಾಂತಕರನು ಮೇಗೇ ||54||

ರಾಗ ಮಾರವಿ ಏಕತಾಳ

ಜನಕನ ತನುಭವೆ ಜಾನಕಿಯನು ತಾ |
ವಿನಯದೊಳೊಲಿಸೀಗಾ ||
ಮಾನಿನಿಯನು ತಾನಾಳಲು ಸೆರೆಯಲಿ |
ನಾನಿರಿಸಿಹೆನೀಗಾ ||55||

ರಾಗ ಕೇದಾರಗೌಳ ಅಷ್ಟತಾಳ

ನಲ್ಲ ನೀನಾಲಿಸು ನಲ್ಲೆಯ ನೆವದಿ ನ |
ಮ್ಮೆಲ್ಲರ ಕೊಲಲಿಕೆಂದು ||
ಬಲ್ಲತನದಿ ತಾನಿರಿಸಿದ ಸತಿಯನು |
ಸೊಲ್ಲಿಸಲೆನ್ನಳವೇ ||56||

ವಾರ್ಧಕ

ದಶರಥನ ಪೌತ್ರ ನೀನಾಲಿಸೀ ಪರಿಯಿಂದ |
ಶಶಿವದನೆ ಮಯ ತನುಜೆ ನುಡಿದ ನುಡಿಗಸುರೇಂದ್ರ |
ಭುಸುಗುಟ್ಟುತುರೆ ಕೆರಳಿ ಗರ್ಜಿಸುತಲಿರೆ  ಬೆದರಿ ಪಿಂತಿರುಗಿ ನಡೆತಂದಳೂ ||
ಅಸುರ ರೌದ್ರಾನ್ವಿತದಿಓಲಗಕೆ ನಡೆತಂದು |
ಶಶಿಹಾಸಮಂ ತನ್ನ ಸಿಂಹಾಸನದೊಳಿರಿಸಿ |
ಮಸುಕಿದಾನನದಿಂದ ಬಸವಳಿದು ಯೋಚಿಸುತ ಉಸುರದಿರುತಿರುತಿರ್ದನೂ ||57||

ಆಸಮಯದೊಳಗಿತ್ತ ವಿತಳದೇಶವನಾಳ್ವ |
ನಾಸಮರ್ಥನು ಮಾರಿಮುಖ ವಜ್ರಮುಖರೆಂಬ |
ಆಸೋದರ ಪ್ರಲಂಭಮುಖರೆಂಬಸುರ ವೀರ ವಿಕ್ರಮರಾಕ್ಷಣಾ ||
ತೋಷದಿಂದಾ ರಾವಣೇಶನಂ ಕಾಂಬ ಘನ |
ತೋಷದಿಂ ಬಂದು ಲಂಕಾಧೀಶನಿಂಗೆರಗಿ
ಸೂಸೆ ಹರುಷಾಂಬುವಿನೊಳೋಲಾಡಿ ಉಪಚರಿಸಿ ಕುಶಲದಿಂದಿರುತಿರ್ದನೂ ||58||

ಭಾಮಿನಿ

ಏನು ಕಾರಣ ದನುಜರಿವರೀ |
ದಾನವನ ಬೆಂಬಲಕೆ ಬಂದರ |
ದೇನು ಪೇಳೆಮೈರಾವಣನ ಮಡದಿ ಘಟೋದರಿಯೂ ||
ತಾನು ಘೋಳಿಡುತೈದೆ ಪತಿಯಳಿ |
ದಾನುಭವಗಳ ಫೇಳೆ ರೋಷದೊ | ಳಾ
ನರಾಧಿಪನಸುವನರ್ಚುವೆನೆನುತ ನಡೆತಂದಾ | ||59||

ವಸುಮತೀಪತಿ ಸೂನುಕೇಳಾ |
ಅಸುರ  ಪೂರ್ವದೊಳಂಧಕಾಸುರ |
ನೆಸೆವ ಪುತ್ರನ ವತ್ರನೆಂಬಭಿಧಾನ ರಾಕ್ಷಸನಾ ||
ಬಸುರೊಳುದಿಸಿದರಿವರು ಮೂವರು ||
ದಶಶಿರನ ಬೆಂಬಲಕೆ ಬರಲಾ |
ವಸೆದು ಪೀಠವನಿತ್ತು ಕೇಳಿದ ಕುಶಲವಾರ್ತೆಗಳಾ |  ||60||

ರಾಗ ತುಜಾವಂತು, ಝಂಪೆತಾಳ

ಕ್ಷೇಮವೇನಸುರಪತಿ | ಮಾರಿಮುಖ ನಿನಗೆ |
ಭಾಮಾಮಣಿಯು ಚಿತ್ರಮಾಲಿನಿಯು ಸುತರ್ಗೆ |    || ಪಲ್ಲವಿ ||

ಇಂದು ಪರಿಯಂತ ಪ್ರ | ಲಂಭಾಸುರ ನೀನೂ |
ಒಂದಾಗಿ ನಿಮ್ಮೊಳಗೆ | ಚಂದವೇ ಹ್ಯಾಗೆ | ||61||

ಇಂದುಶೇಖರನ ದಯ | ದಿಂದ ಸುಕ್ಷೇಮಿಗಳು |
ಒಂದಾಗಿ ಮೂವರೀ ಧರಣಿಯೊಳಗೇ ||
ಚಂದದಲಿ ನಾವಿಹೆವು | ಕಂದರೆಲ್ಲರು ಸಹಿತ |
ಇಂದು ಪರಿಯಂತರವು | ಕುಶಲ ನಮ್ಮೊಳಗೆ | ||62||

ಅಸುರರೊಳು ನಿನ್ನಂತೆ | ಹೆಸರು ಪಡೆದವರಿಲ್ಲ |
ಯೆಸೆವ ವಿಕ್ರಮದಲ್ಲಿ | ವಸುಧೆಯೊಳಗೇ ||
ಶಶಿವದನದಾ ಕಾಂತಿ | ಮಸುಳಿಸಲು ಬಂತೇನು |
ಕೊಸರು ಕುಂದುಗಳೀಗ | ಉಸುರು ತನಗೆಂದಾ | ||63||

ಭಾಮಿನಿ

ಏನಹೇಳುವೆನೀಗ ದಶರಥ |
ಸೂನುವಿನ ಭಾಮಿನಿಯ ಕಳವಿಲಿ |
ತಾನು ಪಿಡಿದರೆ ಭಾನುಸುತ ಸಹಗೂಡಿ ಲಂಕೆಯನೂ |
ದಾನವರ ಸಂಹರಿಸಿ ರಣದಲಿ |
ಭಾನುಸುತ ಸಹ ಪ್ರೇಮದಿಂದಿಹ |
ನೆನಲು ಕೇಳುತ ಯೇನು ಬೆಸಸಿದೆ ಬೆಸಸು ಮಗುಳಿನ್ನೂ | ||64||