ಭಾಮಿನಿ

ಎನಹೇಳಿದರೇನು ಅನುಜನ |
ಹಾನಿ ರಮಣಿಯ ನೀಗಿ ಬಳಿಕಿ |
ನ್ನೇನು ತನ್ನಯ ತನುವ ರಣದಲಿ ಮರಳಿ ಕೆಡಹುವೆನೂ ||
ಏನನುಸುರಿದೆ ಜೀಯ ಲಕ್ಷ್ಮಣ |
ಗೇನು ಬಂದುದು ಕೊರತೆ ನಿನ್ನಯ |
ದಾನಕರ ತಡವರಿಸಲೇಳುವನೆನುತ ಜಾಂಬವನೂ ||341||

ಕಂದ

ಸಿರಿಯರಸನು ತನ್ನಯ ವರ |
ಕರದಿಂದನುಜನ ಶಿರಮಂ ನೆಗಹುತ್ತಲಾಗಳ್ |
ಭರದಿಂ ತಡವರಿಸುತ್ತಿರೆ |
ತೆರೆದಕ್ಷಿಯನೆದ್ದಾಕ್ಷಣ ವೀರ ಸೌಮಿತ್ರಂ ||342||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ನಿದ್ರೆಯಲಿ ಮಲಗಿರ್ದ ಲಕ್ಷ್ಮಣ |
ನೆದ್ದನಾ ಸಮಯದಲಿ ಕಪಿ ಬಲ |
ವೆದ್ದುದಾಕ್ಷಣ ಶರದಿಫೋಷದೊ | ಳಬ್ಬರಿಸಲೂ ||343||

ಬೊಬ್ಬೆ ಗಳನಾಲಿಸುತ ರಾಕ್ಷಸ |
ನುಬ್ಬಿನಲಿ ನಡೆತಂದು ಕಪಿಗಳ |
ಹಬ್ಬವನು ಮಾಡುವೆನೆನುತ್ತಲೆ | ಯುಬ್ಬಿ ಮನದೀ ||344||

ಕಬ್ಬಿನಾ ತೋಟದಲಿ ಮದಕರಿ |
ಯೆದ್ದು ತುಳಿವಂದದಲಿ ಕಪಿಗಳ |
ನೊದ್ದು ಕೆಡಹುತ್ತಿರಲಿಕಾಕ್ಷಣ | ವೆದ್ದ ರಾಮಾ ||345||

ಕೇಳು ಮಾರೀಮುಖನೆ ರಾಕ್ಷಸ
ತೋಳಬಲುಹುಗಳುಳ್ಳಡೆಮ್ಮೊಳ |
ಗಾಳುತನವನು ತೋರು ನಿಮಿಷದೊ | ಳೇಳು ಬೇಗಾ ||346||

ರಾಮನೆಂಬವನಹುದೆಯನ್ನಯ |
ಪ್ರೇಮ ತನುಜೆಯ ಕುಚವ ಕೊಯ್ದವ |
ಮಾನವನು ಮಾಣಿಸುವೆ ನೋಡೆಲೆ | ಭೂಮಿಪಾಲಾ ||347||

ಎನುತಲಯುತಾಸ್ತ್ರದಲಿ ಕಪಿಗಳ |
ನೆನಹ ಮಾಣಿಸುತತ್ತ ರಘುವರ |
ದನುಜ ಕೇಳ್ಕಪಿವರರ ಬಿಟ್ಟೆನ್ನೊ | ಡನೆಸೆಣಸೂ ||348||

ರಾಗ ಶಂಕರಭರಣ, ರೂಪಕತಾಳ

ನಾನು ರಾಮ ಮಾರೀಮುಖನೆ | ನೀನು ರಾಕ್ಷಸಾ ||
ವಾನರಾದಿಗಳನು ಗೆಲುವು | ದೇನು ಸಾಹಸಾ ||  || ಪಲ್ಲವಿ ||

ಕೊಲಿಸಬೇಡ ದನುಜ ಪಡೆಯ ನಿಲಿಸು ಸುಮ್ಮನೇ
ಅಲಸದೀಗಲೆಮ್ಮೊಳ್ ಕೈಯ್ಯ | ಕಲಸು ಗಮ್ಮನೇ ||349||

ಬಿಡು ಶರಾಸ್ತ್ರ ಶಸ್ತ್ರಗಳನು | ತೊಡು ಮಹಾಸ್ತ್ರವಾ ||

ನಡೆಸು ಬೇಗ ರಥವನೇರು | ಬಿಡು ಶರೌಘವಾ ||350||

ಫಡ ಫಡೆನುತ | ಪರಶು ಶೂಲ | ಲೌಡಿಯಿಂದಲೀ ||
ಧಡಧಡೀಸಿ ಬಿಡಲು ರಾಮ | ಕಡಿದ ಶರದಲೀ ||351||

ಭಾಮಿನಿ

ಧರಣಿಜಾಸುತ ಕೇಳು ರಾಮನ |
ಶರದ ಬಳುಹಿನ್ನೆಂತೊ ಅಸುರಸ |
ಕರದ ಧನುಶರ ಸಹಿತ ಸಾರಥಿ ವರ ಪತಾಕಿನಿಯಾ ||
ಹರಿ ಚತುಷ್ಟಯವರಿದು ಪುನರಪಿ |
ಚರಣಕಭಿನಮಿಸಲ್ಕೆ ಶರವದು |
ಭರದಲಸುರನ ಕರೆದು ಪೇಳಿದ ನೀತಿಮಾರ್ಗಗಳಾ ||352||

ರಾಗ ಪುನ್ನಾಗ ಝಂಪೆತಾಳ

ಕೇಳು ಮಾರೀಮುಖನೆ | ತಾಳು ಸೈರಣೆಗಳನು |
ಖೂಳ ಮರುಳ್ತನ ಬಿಟ್ಟು | ಬಾಳೊ ಸುಖವಿಟ್ಟೂ ||353||

ಯಮನೆಂಬ ಧರ್ಮನಿಗೆ | ಮಾಮಕಾರವಿಲ್ಲವಗೆ |
ಭಾಮೆ ಮಣಿಮಾಲಿನಿಗೆ | ಪ್ರೇಮದೋರಿಸು ಮೇಗೇ ||354||

ಕೊಂದರೆ ವಿಭೀಷಣನು | ನೊಂದುಕೊಂಬನು ಈಗ |
ಮುಂದೆ ದೋಷಗಳಿಲ್ಲ | ಇಂದುಕೇಳ್ ಸೊಲ್ಲಾ ||355||

ಭಾಮಿನಿ

ಇನ್ನು ದೋಷಗಳಿಲ್ಲವೆಮ್ಮಲಿ |
ಸನುಮತವೆ ಪೇಳೈ ವಿಭೀಷಣ |
ನಿನ್ನ ಚಿತ್ತದೊಳಿವನಸದೆದರೆ ದೋಷವಿಲ್ಲವಲೇ ||
ಮುನ್ನ ಮಾಡಿದದೋಷ ಕರ್ಮ |
ಕ್ಕಿನ್ನು ಪ್ರಾಯಶ್ಚಿತ್ತವಿದೆ ಕೇ |
ಳಿನ್ನು  ಸಂದೆಹವೇಕೆ ಸದೆ ನೀ ದೋಷಕಾರಿಯನೂ ||356||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ವರ ವಿಭೀಷಣದೇವ ಪೇಳಿದ |
ಪರಿಯನೆಲ್ಲವ ತಿಳಿದು ರಾಕ್ಷಸ |
ಮರುಳು ರಾಘವ ಕೇಳು ನಮ್ಮನು | ತಿಳಿಯದಾದೇ ||357||

ಮಗಳ ಕಿವಿಮೂಗುಗಳ ಕೊಯ್ದ |
ಬಗೆಯ ತೋರುವೆನೆನುತ ದನುಜನು | ತೆಗೆದ
ನಾಕ್ಷಣವನಲಶರವನು | ಜಗತಿಬೆದರೇ ||358||

ರಾಮನದರಿಂ ಮುನ್ನ ವಾರುಣ |
ನಾಮಹಾಮಂತ್ರದಲಿ ಶರವನು |
ನೇಮಿಸುತ ಬಿಡಲಾಗಲುರಿ ಬಯ | ಾಯ್ತು ಬೇಗಾ ||359||

ವಾರ್ಧಕ

ಹವ್ಯವಾಹಾಸ್ತ್ರಮಂ ವಾರುಣಸ್ತ್ರದಿ ಗೆಲಿದು |
ಭವ್ಯಮೇಘಾಸ್ತ್ರಮಂ ಪೂಡಲ್ಕೆ ರಾಮ ವಾ |
ಯುವ್ಯಾಸ್ತ್ರದಿಂದರಿಯಲಾಗ ತಿಮಿರಾಸ್ತ್ರಮಂ ಕ್ರೋಧದಿಂ ಜೊಡಿಸಲ್ಕೆ ||
ರವ್ಯಸ್ತ್ರದಿಂ ಜಯಿಸಿ ಪರ್ವತಾಸ್ತ್ರವನೆಸೆಯೆ |
ದಿವ್ಯಕುಲಿಶಾಸ್ತ್ರದಿಂ ಕಡಿದು ಮುಕ್ಕಡಿ ಮಾಡ |
ಲಾ ವಿಭೀಷಣ ದೇವ ಕಂಡು ತಾನೆರಗುತ್ತ ರಘುವರನೊಳಿಂತೆಂದನೂ ||360||

ಸೀತೆಯರಸನೆ ಕೇಳು ಪೂರ್ವದಲಿ ನಿಯಮದೊಳ |
ಗೀತನಜನಂ ಭಜಿಸಿ ವರವ ಪಡೆದಿಹನು ಬಲು |
ನೂತನದೊಳತಿಶಯದ ಪ್ರಾಣಸಂಜೀವನವ ಪ್ರೀತಿಯಿಂದುದರದೊಳಗೇ |
ಜ್ಯೋತಿರೂಪದೊಳಿರುವುದದನು ಮಾಣಿಸ ದನಕ |
ಈತನಂ ಗೆಲ್ಲುವುದಸಾಧ್ಯವಾಗಿಹುದು ರಘು |
ನಾಥಕೇಳಜ ಮಹಾಸ್ತ್ರವನೆಸೆದದ ನರಿದೊಡೀತನಂ ಗೆಲ್ಲಬಹುದೂ ||361||

ರಾಗ ಮಾರವಿ, ಏಕತಾಳ

ಒಳಲ ವಿಭೀಷಣ ಪೇಳುತಲಿರಲಾಗ |
ಘಳಿಲಾನೆ ಶ್ರೀರಾಮಾ ||
ಎಳೆಯುತ ಸಿಂಜಿನಿಗಾಗಲೆ ತೊಡಿಸಿದ |
ನಳಿನಜ ಮಹಶರವಾ ||   ||362||

ಆ ಮಹಶರವನು ಕಿವಿವರೆಗುಗಿಯೆ ಸು |
ತ್ರಾಮರು ಹರುಷಿಸುತಾ ||
ಕ್ಷೇಮದೊಳಿರಬಹುದೆನುತಿರಲಾ ಶರ |
ವರವನು ಕಾಣುತಲೀ ||   ||363||

ನಗೆಯನು ಮಾಣಿಪೆನೆನ್ನುತ ಖಳ ಬಲು |
ಮಗಧರ ಮಹಶರವಾ ||
ನೆಗಹುತಲಾಕ್ಷಣ ಝಗಝಗಿಸಿತು ಮೂ |
ಜಗವನು ಮೋಹಿಸುತಾ ||   ||364||

ಹರಹರ ಈಮಹಶರದುರಿಯಲಿ ನಾ |
ವಿರುವದಿನ್ಹ್ಯಾಗೆನುತಾ |
ತರಹರಗೊಳುತಿಹ ಸುರರಿಗೆ ಅಭಯವ |
ಶರದಲಿ ತೋರಿಸುತಾ ||   ||365||

ಆ ಮಹ ವೈಷ್ಣವಶರದಲಿ ಶಿರವನು |
ಭೂಮಿಯೊಳಿಳುಹೆನುತಾ ||
ನೇಮಿಸಿ ಬಿಡುತಿರಲಸುರನ ಶಿರವದು |
ಗಮಿಸಿತು ಅಸುತೊರೆದು ||366||

ಬುಗುರಿಯ ತೆರದಲಿ ತಿರುಗುತಲಿರ್ದುದು |
ಶಿರ ತಾನಭಕಡರೀ ||
ಮಗಧರಸಖ ಜಯ ಜಯವೆನುತಲೆ ಕೈ |
ಮುಗಿದರ್ಸುರವರರೂ ||  ||367||

ಭಾಮಿನಿ

ದುರುಳನನು ಸಂಹರಿಸಿ ರಾಘವ |
ಪರಮ ಹರುಷದೊಳಿರಲಿಕಿತ್ತಲು |
ಸುರರು ಸುಮ್ಮಾನದಲಿ ಸುರಿದರು ಕುಸುಮವಷ್ಟಿಗಳಾ ||
ಚರರು ಹಾಯ್ದರು ಬಳಿಕ ದಾನವ |
ನರಸಿಗೀ ವತ್ತಾಂತವರುಹಿಯೆ |
ತೆರನ ನೋಡುವೆನೆನುತ ಬೇಗದೊಳಾಗ ನಡೆತರಲೂ ||368||

ವಾರ್ಧಕ

ಕುಶನೆ ಕೇಳಿತ್ತ ರಾಕ್ಷಸನರಸಿವ್ಯಸನದಿಂ |
ಶಶಿಮುಖಿಯರಂಕೂಡಿ ದುತ್ಸಾಹಹೀನದಿಂ |
ಪಶುಪತಿಯ ಪಾದಮಂ ಭಕ್ತಿಯೊಳ್ ನೆನವುತ್ತ ಪತಿಗೆ ಜಯವಾಗದೆನುತಾ |
ಕ್ಲೇಶದಿಂದಿರುವ ಸಮಯದೊಳೈದಿ ಚರರು ಬಲು |
ಕ್ಲೇಶದಿಂದಾ ಸತಿಯ ಚರಣಕಾನತರಾಗಿ |
ವಾಸವನ ಗದ್ದುಗೆಯ ಸೇರ್ದ ನಿಮ್ಮಯ ಪತಿಯು ಕೇಳ್ತಾಯೆ ಯೆಂದುಸುರ್ದರೂ ||369||

ಕಂದ

ಚರರೆಂದುದ ಕೇಳ್ದುಂ ಮನ |
ಮರುಗುತ ಚಿತ್ರಮಾಲಿನಿ ಶೋಕಿಸಿ ಬಳಿಕಂ ||
ಧುರಮಂ ನೋಡುವೆನೆನುತಂ |
ಭರದಿಂ ನಡೆತಂದೀಕ್ಷಿಸಿದಳಾಗ ಪತಿಯಂ ||370||

ವಾರ್ಧಕ

ಕರದಿ ಧನು ಪಿಡಿದಿರ್ದ ಸರಳ್ಗಳಿಂ ಕೊರಳ್ಗಳಿಂ |
ಸುರಿವ ನೆತ್ತರಿನ ತನುಕಾಯದಿಂಘಾಯದಿಂ |
ಧರಣಿಯಲಿ ಪೂರಳಿತಿಹ ಮುಂಡದಿಂರುಂಡದಿಂದರುಣಜಲಲಿಪ್ತದಿಂದಾ ||
ಹರಿದೊಗುವ ನೆತ್ತರಿನ ಹೊಳೆಗಳಿಂ ಸುಳಿಗಳಿಂ |
ಥರ ಥರದಿ ಮುರಿದ ರಥ ಹಯಗಳಿಂ ಚಯಗಳಿಂ |
ಶಿರವಳಿದು ಬಿದ್ದ ಪತಿಯಂಗಮಂ ಭಂಗಮಂ ತಾ ನಿರೀಕ್ಷಿಸುತಿರ್ದಳೂ ||371||

ಭಾಮಿನಿ

ಶರದ ಘಾಯದಿ ಸುರಿವ ನೆತ್ತರ |
ದಿರವ ನೋಡುತಲಕಟಕಟೆನುತ |
ಧರೆಯೊಳಗೆ ಹಮ್ಮೈಸಿ ಮೂರ್ಛಿತೆಯಾದಳಾಕ್ಷಣದೀ ||
ಅರೆಗಳಿಗೆಯೊಳಗೆದ್ದು ಕಂಗಳ |
ತೆರದು ವಿಧಿಯನು ಬೈದು ವರನನು |
ಕರೆದು ಗುಣಗಳ ನೆನೆದು ಮರುಗುತರ್ಲಿದಳಾ ವನೀತೆ ||372||

ರಾಗ ನೀಲಾಂಬರಿ, ಏಕತಾಳ

ಪ್ರಾಣಕಾಂತ ಎನ್ನ ಮಾತ | ಮೀರಿ ಬಂದು
ಪ್ರಾಣವನ್ನು ತೊರೆದೆಯಯ್ಯೋ ||   || ಪಲ್ಲವಿ ||

ಕಾಣುವೆನಿನ್ನೆಂದಿಗೆ | ಜಾಣ ಮಾತೊಂದಾಡಿಂದಿಗೆ ||
ಹಾಣಹಾಣಿಯಲ್ಲಿ ಕಾದಿ | ಗೋಣ ತೊರದೆಯಯ್ಯೋ ||373||

ಕಣ್ಣಿನ ಕಪ್ಪಿನ ಭಾಗ್ಯ | ವನ್ನು ಬಿಟ್ಟು ಶಿರದೊಳಗೆ ||
ಮಣ್ಣ ನಿಕ್ಕಿ ತಿರಿದುಂಬಂ | ತಾಯಿತಯ್ಯೋ ಶಿವನೇ ||374||

ಹುಣ್ಣಿಮೆಯ ಶಶಿಯ ಪೋಲ್ವ | ಬಣ್ಣದಂತ ಮೊಗವೇನಾಯ್ತ
ಪುಣ್ಯಹೀನೆ ನಾನಿನ್ನೈಸೆ | ಯೆಣ್ಣಿಸುವ ದೆಂತಯ್ಯಯ್ಯ ||375||

ರಾಗ ನೀಲಾಂಬರಿ ಅಷ್ಟತಾಳ

ಪ್ರಾಣಕಾಂತ ಎನ್ನ ಮಾತನಯ್ಯವಯ್ಯ | ಮೀರಿ |
ಪ್ರಾಣವನ್ನು ತೊರೆದೆ ಈಗಲಯ್ಯದಯ್ಯ ||376||

ಕಾಣುವೆನಿನ್ನೆಂತು ಮೊಗವ ನಯ್ಯವಯ್ಯ | ಗೀ |
ರ್ವಾಣರೆಲ್ಲ ನಗುವಂತಾಯಿತಯ್ಯವಯ್ಯ ||377||

ದುಷ್ಟ ರಾವಣೇಂದ್ರನಿಂದಲಯ್ಯವಯ್ಯ | ನಾನು |
ಕೆಟ್ಟು ಕೆಲಸಾರ್ದೆನೀಗಲಯ್ಯವಯ್ಯ ||378||

ಪುತ್ರರಳಿದ ದುಃಖವನ್ನು ಅಯ್ಯವಯ್ಯ | ಈಗ |
ಎಷ್ಟೆಂದು ಮರೆಯಲಿನ್ನು ಅಯ್ಯವಯ್ಯ ||379||

ಪತಿಯೆ ನಿನ್ನ ಮೊಗವೇನಾಯ್ತು ಅಯ್ಯವಯ್ಯ | ನೀನು |
ಖತಿಯೊಳದರನ್ಯಾರಿಗಿತ್ತೆ ಅಯ್ಯವಯ್ಯ ||380||

ದುಷ್ಟರಾವಣೇಂದ್ರನೀಗ ರಾಮ ರಾಮಾ | ನಿನ್ನ |
ಪಟ್ಟದರಸಿಯನ್ನು ಕದ್ದರಾಮರಾಮಾ ||381||
ಎನ್ನರಮಣನೇನಗೈದ ರಾಮ ರಾಮಾ | ನೀನು |
ಅನ್ಯಾಯದಿ ಪತಿಯ ಕೊಂದೆ ರಾಮ ರಮಾ ||382||

ತಪ್ಪು ಇರದೆಕೊಂದೆಯಲ್ಲೊ ರಾಮ ರಾಮಾ | ಇನ್ನು |
ಸರ್ಪಶಯನ ಕಾಯ್ವರಾರೊ ರಾಮರಾಮಾ ||383||

ರಾಗ ನಾದನಾಮಕ್ರಿಯೆ, ಅಷ್ಟತಾಳ

ಎಂದು ಸರ್ವಾಭರಣಗಳನೂ | ತೆಗೆ |
ದಂದು ಬಿಸಾಡಿದಳ್ಸುಮವನೂ ||
ಇಂದಿರೆಯರಸನೆ ಗತಿಯೇನೂ | ಎನ |
ಗೆಂದು ಮೂರ್ಛಿತಳಾದಳೇಂಪೇಳ್ವೆನೂ ||384||

ಮರೆಯೊ ಮರೆಯೊ ಎಂದು ಕೂಗುತ್ತಾ | ತನ್ನ |
ಕರದಿ ಬಾಯೊಳು ಮಣ್ಣತೀಡಿತ್ತಾ |
ಸಿರಿಯರಸನು ಇದ ನೋಡುತಾ | ಮನ |
ಕರಗಿರೆ ಬಹುವಾಗಿಯಳಲುತ್ತಾ | ||385||

ಬಂದಳೆ ನಿನ್ನ ವಲ್ಲಭೆಯಳೂ | ನಮ್ಮ |
ಕೊಂದರೆ ಬಹಳೆ ನಲ್ಲೆಯೊಳೂ ||
ಎಂದು ರಾಮನ ಪಾದದೆಡೆಯೊಳೂ | ಬಂದು |
ವಂದಿಸಿ ಕರದ್ವಯ ಮುಗಿದಳೂ ||386||

ರಾಗ ಆನಂದಭೈರವಿ, ಆದಿತಾಳ

ಎಂದು ರಾಮಚಂದ್ರಗೆರಗಿ |
ವಂದಿಸಿ ಕರದ್ವಯವ ಮುಗಿದು |
ನಿಂದಳೂ | ಸಲ | ಹೆಂದಳೂ || || ಪಲ್ಲವಿ ||

ಮಂದಬುದ್ಧಿಯಾದ ರಾವ |
ಣೇಂದ್ರನ ಸಂಹಾರಕಾಗಿ |
ಬಂದಿರೀ | ನಮ್ಮ | ಕೊಂದಿರೀ ||387||

ತಂದು ಕಣ್ಣೊಳಿಳಿವ ಜಲ |
ಬಿಂದುವಿನಿಂದಲೆ ಪಾದ |
ತೊಳೆದಳೂ | ಪೂಜಿಸಿ | ನಲಿದಳೂ ||388||

ಇಂತು ಶೋಕಿಸುವ ಅಸುರ |
ಕಾಂತೆಯನ್ನು ನೋಡಿನಗುತ |
ಲೆಂದನೂ | ಶೋಕಸಾ | ಕೆಂದನೂ ||389||

ರಾಗ ಮಧುಮಾಧವಿ ಏಕತಾಳ

ತಾಯೆ ಕೇಳ್ ಚಿತ್ರಮಾಲಿನಿ ದೇವಿ ನೀನೀ |
ಆಯಾಸವನುಬಿಡು ಕಾಯ್ವೆ ಸಂತಸದಿ ||
ತೋಯಜಾಸನ ಲಿಪಿ ತೀರಿದವರ್ಗೆ |
ಬಾಯ ಬಿಟ್ಟರೆ ಬದುಕುವರೆ ನೀ ಪೇಳೂ ||390||

ಹೊಳೆಯಲ್ಲಿ ನೊರೆಹುಟ್ಟುವಂತೆ ಈ ೇಹವ |
ತಿಳಿಯದೆ ಜನರು ದುಃಖಿಸುತಿಹರೂ ||
ನಳಿನಲೋಚನೆ ಕೇಳು ಎನ್ನುದುಭವೆಯಂತೆ |
ಇಳೆಯೊಳು ಸಲಹುವೆ ಕೇಳು ಸಂತಸದೀ ||  ||391||

ಕೊಲುವವರ‌್ಯಾರು ಕೇಳ್ ಕೊಲಿಸಿಕೊಂಬವರ‌್ಯಾರು |
ನಳಿನನಾಭನೆ ಬಲ್ಲನಿದನೆಲ್ಲ ಈಗ ||
ತಿಳಿಯದವಳೆ ನಾ ನಿನಗೆಹೇಳಲಿಕೇನೆ |
ಘಳಿಲನೆ ಮರೆದು ಶೋಕವ ಬಿಡು ನೀನೂ ||392||

ಭಾಮಿನಿ

ಚಿತ್ರಮಾಲಿನಿ ಬಳಿಕ ರಾಮನ |
ಚಿತ್ತದೊಳವನು ತಿಳಿದು  ಶಿರದಲಿ |
ಹೊತ್ತ ಚಿಂತೆಯ ಬಿಟ್ಟು ಸುಖದೊಳಗಿರ್ದಳಾಕ್ಷಣದೀ ||
ಅತ್ತಲಾ ಜಾನಕಿಯು ಮನಸಿನ |
ಕಕ್ಕುಲತೆಯಿಂದಾಗ ರಾಮನ  |
ಚಿತ್ತದಲಿ ನೆನೆನೆನೆದು ಶೋಕಿಸುತತ್ತ ಮರುಗುತಲೇ ||393||

ರಾಗ ನೀಲಾಂಬರಿ, ಆದಿತಾಳ

ರಾಮದೇವನೇ ರಾಜೀವಾಕ್ಷನೆ |
ಭೀಮವಿಕ್ರಮಾ ಪುಣ್ಯ ಮೂರುತೀ ||
ಸೋಮಸುಂದರಾ ಅಸುರಮರ್ದನಾ |
ಕಾಮಜನಕನೇ ಕಾಯೊ ಎನ್ನನೂ ||394||

ಸರಮೆ ಕೇಳಲೇ ನಿನ್ನ ನಿಶೀಯೊಳೂ |
ಧರಣಿಪಾಲನಾ ಶರಣಸಹಿತಲೀ |
ಧಿರದಿ ಗೆಲಿದನೂ ಮಾರಿಮುಖನೂ ಎಂ |
ಬಿರುವ ವಾರ್ತೆಯಾ ಕೇಳ್ದೆ ನಾನಮ್ಮಾ ||395||

ನಿರುತವಾಗಿಹಾ ಸ್ಥಿತಿಯನರಿಯುತಾ |
ಭರದಿ ಪೇಳುವಾರಿಲ್ಲದಾಯ್ತಿಗಾ ||
ಧರೆಯೊಳಿರುವದಕ್ಕಿಂತ ಸಾಯ್ವದೂ |
ಪರಮಲೇಸದೂ ಗರಳಕುಡಿಯುತಾ ||396||

ಎಂದು ಶೋಕಿಪಾ | ಜಗದ ಮಾತೆಗೇ |
ನಿಂದು ಕರಗಳಾ | ಮುಗಿದು ಸರಮೆಯೂ |
ಮಂದಹಾಸದಿ ಪೇಳ್ದಳಾಕ್ಷಣಾ |
ಚಂದದಿಂದಲೀ ಧುರದ ಪರಿಯನೂ ||397||

ರಾಗ ಸಾಂಗತ್ಯ, ರೂಪಕತಾಳ

ಏನ ಹೇಳುವೆ ತಾಯೆ ದಾನವಾರಿಗೆ ಬಂದ |
ಹಾನಿ ವದ್ಧಿಗಳಪೇಳುವೆನೂ ||
ಧಾನವಾಧಿಪ ಮಾರಿಮುಖನೆಂಬ ಅಸುರನ್ನ |
ತಾನಾಗಿ ಕರೆದು ಅಟ್ಟಿದನೂ ||398||

ಸುತರಿಬ್ಬರವನುದರದಲಿ ಸಂಜೀವನ |
ಪ್ರತಿಭಟರನು ಜರಿವವರೂ ||
ಗತವಾಗ್ವ ವೇಳ್ಯಕ್ಕೇನಿದ್ದರೇನಹುದಮ್ಮ |
ಪತಿಗವದಿರೆ ರಕ್ಕಸರೂ ||   ||399||

ಸುತರನುಜರ ಕೊಂದು ಕೆಡಹಲಾಕ್ಷಣತನ್ನ |
ಸುತೆಯೋರ್ವಳನು ಕಳುಹಿಸಿದಾ |
ಖತಿಯೊಳವಳ ಮೂಗುಮೊಲೆಯ ಕೊಯ್ದ ಮ |
ತ್ತತುಳ ವಿಕ್ರಮಿಯು ಸೌಮಿತ್ರಾ ||400||

ರಣಪರಾಕ್ರಮಿ ಮಾರಿಮುಖನಾಕ್ಷಣದೊಳು |
ತ್ರಿಣಯನ ಧನುವನೇರಿಸಿದಾ ||
ಗುಣನಿಧಿ ಶ್ರೀರಾಮಚಂದ್ರನಾಕ್ಷಣದೊಳು |
ಗಣಿಸದೆ ಅಜಮಹಶರದೀ  ||  ||401||

ಶಿರವನರಿದು ರಾಮ ಹರುಷದೊಳಿರುವನೆಂ |
ಬರುತರೋತ್ಸವದೊಸೆಗೆಗಳಾ ||
ಅರುಹಲಾ ಸರಮೆನನ್ನಿಂದಾ ಸಂಪ್ರಾಣಿಸು |
ತಿರುವೆ ನಿಮ್ಮಯ ಕಟಾಕ್ಷದಲೀ ||402||

ಭಾಮಿನಿ

ಧರಣಿಜಾಸುತ ಕೇಳು ರಾಘವ |
ವರ ಮಹಾರಕ್ಕಸರ ಶಿರಗಳ |
ನರಿದ ವಾರ್ತೆಯ ಕೇಳಿ ಹರುಷದೊಳಿರಲಿಕಾ ||
ವರಮಹಾ ಪೀಠದಲಿ ರಾವಣ |
ನುರುತರೋತ್ಸವದಿಂದಲೊಪ್ಪಿರೆ |
ಧರಣಿಗಿನನಿಳಿದಂತೆ ಬಿದ್ದುದು ಶಿರವು ರಕ್ಕಸನಾ ||403||

ಕಂದ

ಶಿರವನು ಕಾಣುತೆ ರಾವಣ |
ಮರುಗುತೆ ಮನದೊಳ್ ನೆನೆ ನೆನೆದಳಲುತೆ  ಸಖನಂ ||
ಮರೆಯುವೆನೆಂತೆನುತಾ ಕಿಡಿ |
ಗರೆಯುತೆ ಕಣ್ಣೊಳ್ ಬಲ ನೆರಹುತ ನಡೆತಂದಂ ||404||

ವಾರ್ಧಕ

ಕುಶನೆ ಕೇಳ್ಮುಂದೆ ಶ್ರೀರಾಮಚಾರಿತ್ರಮಂ |
ಅಸುರ ರಾವಣ ತನ್ನ ಸಖನ ಶಿರಮಂ ಕಂಡು |
ಮಸದಲಗು ಪೊಸಮಸೆಯನೆಸೆವುತೈ ತಂದಾಗಲಸುರಾರಿಯೋಳ್ಕಾದಿದಾ ||
ವಸುಧೀಶನಾಕ್ಷಣದಿ ಶಾರ್ಙ್ಗಧನುವರ್ಗದೊಳ್ |
ಶಶಿಮೌಳಿಯಂ ನಿಲಿಸಿ ಎಸೆಯಲಾಕ್ಷಣದೊಳಾ |
ಬಸುರ ಬಗಿದೆಳೆಗರುಳ ಸೂಸಲಾಕ್ಷಣ ದನುಜ ಶಶಿಮೌಳಿಪುರಸೇರ್ದನೂ ||405||

ರಾಗ ಸೌರಾಷ್ಟ್ರ, ತ್ರಿವುಡೆತಾಳ

ಇತ್ತ ರಾಘವ ತನ್ನ ಭಕ್ತನಿ |
ಗಿತ್ತ ಭಾಷೆಗೆ ಲಂಕೆಯೊಡೆತನ
ವಿತ್ತು ಪ್ರಜೆಗಳ ಸುಖದಿನೆಲಸಿರು | ವಂತೆ ಮಾಡೀ ||  ||406||

ಮತ್ತೆ ಸುಮನಸರ್ಮೆಚ್ಚುವಂದದಿ |
ಇತ್ತನನಲಗೆ ಸೀತೆಯನು ಮಗು |
ಳೆತ್ತಿ ತಂದಾಗನಲ ರಾಮನಿ | ಗಿತ್ತು ನಡೆದಾ ||407||

ಉತ್ಸವದೊಳಿರುತಿರಲು ಧನದನ |
ಪುಷ್ಪಕದೊಳೈತಂದು ಲಿಂಗವ |
ಮತ್ತೆ ನಡಿಸಿದನಾಗ ಶರದಿಯ | ದೊತ್ತಿನಲ್ಲೀ ||408||

ಸೇನೆಗಳನೊಳಗೊಂಡು ರಾಘವ |
ಭಾನುತನುಜನನರಸಿ ತಾರಾ |
ಮಾನಿನಿಯನೊಡಗೂಡಿ ನಡೆದಾ | ಯೋಧ್ಯಪುರಿಗೇ | ||409||

ಬಂದ ವಾರ್ತೆಯ ಕೇಳಿ ಭರತನು |
ವಂದಿಸುತ ನಡೆತಂದು ಚರಣ |
ದ್ವಂದ್ವಕಾನತನಾಗೆ ಪರಮಾ | ನಂದದಿಂದಾ | ||410||

ಜನನಿಯರು ಮೂವರಿಗೆ ರಾಘವ |
ನನುಜಸಹ ಒಡಗೂಡಿ ಯೆರಗಲು |
ಚಿನುಮಯಾತ್ಮಕ ಬಂದೆಯೈಯಲೆ | ತನುಜ ನೀನೂ | ||411||

ಭಾಮಿನಿ

ಸಿರಿವರಾಸುತ ಕೇಳು ರಾಮಗೆ |
ಪರಮ ವೈಭವದಿಂದ ಮಂಗಲ |
ವಿರಚಿಸುತ ಪಟ್ಟಾಭಿಷೇಕವ ರಚಿಸಿ ಸೇಸೆಯನೂ ||
ಶಿರದ ಮೇಲಕೆ ತಳಿಯೆ ಲಕ್ಷ್ಮಣ |
ಭರತ ಶತ್ರುಘ್ನಾದಿಯನುಜರ |
ವರೆದು ಸುಖದೊಳು ಧರೆಯನಾಳಿದ ಪರಮ ವೈಭವದೀ ||412||

ರಾಗ ಕಾಂಭೋಜಿ, ಝಂಪೆತಾಳ

ನಿರುತ ಮಾರ್ಕಂಡೇಯ |
ಪುರದ ಶ್ರೀಸೋಮೇಶ |
ಕರುಣಿಸಿದ ಮತಿಯೊಳಗೆ | ನೊರೆದೆನೀ ಕೃತಿಯಾ | ||413||
ಯಕ್ಷಗಾನಗಳಿಂದ |
ಈ ಕ್ಷಿತಿಯೊಳೊರ್ಣಿಸಿದು |
ಪೇಕ್ಷೆಯನು ಮಾಡದೆ | ರಕ್ಷಿಸಿರಿದಯದೀ ||414||

ಮಂಗಲಪದ

ದಶರಥನುದರದಿ ಜನಿಸಿದಗೆ |
ಅಸುರೇ ತಾಟಕಿ ಮಡುಹಿದಗೆ ||
ರಸೆಯೊಳು ಶಿಲೆಯಹಲ್ಯೆಯ ಕಾಯ್ದ |
ಪಶುಪತಿಸಖ ಶ್ರೀರಾಮನಿಗೆ | ಮಂಗಲಂ ಜಯಮಂಗಲಂ ||415||

ಮಿಥಿಲೆಯೊಳ್ ಹರಧನುಮುರಿದವಗೆ |
ಪಥಿವಿಜೆ ಸೀತೆಯನೊಲಿಸಿದಗೆ ||
ಖತಿಯೊಳುಭಾರ್ಗವ ಗರ್ವವ ಮುರಿದಾ |
ಕ್ಷಿತಿಪತಿಸುತ ರಘುರಾಮನಿಗೇ || ಮಂಗಲಂ ಜಯಮಂಗಲಂ ||416||

ತಂದೆಯ ವಚನಕೆ ಕಾನನಕೆ |
ಬಂದಿರೆ ದಂಡಕ ವನದೊಳಗೆ ||
ದಂಡಿಸಿ ಶೂರ್ಪನಖಿಯ ಕುಚಂಗಳ |
ಖಂಡಿಸಿದಗ್ರಜ ರಾಘವಗೆ || ಮಂಗಲಂ ಜಯಮಂಗಲಂ ||417||

ಖರದೂಷಣ ಶಿರವರಿದವಗೆ |
ದುರುಳ ಮಾರೀಚನ ಕೊಂದವಗೆ ||
ಧರಣಿಜೆಯೊಯ್ದನ ಶಿರವನ್ನರಿಯಲು |
ಸುರಪಜ ವಾಲಿಯ ಕೊಂದವಗೆ || ಮಂಗಲಂ ಜಯಮಂಗಲಂ ||418||

ಸಿಂಧುವ ಶಿಲೆಯಲಿ ಬಿಗಿದವಗೆ |
ಬಂಧುಗಳ ಸಹಿತಲಿ ರಾವಣನ ||
ಕಂಧರವನ್ನರಿದಾಗ ವಿಭೀಷಣ |
ನೊಂದಿಸಿದಾ ಶ್ರೀರಾಮನಿಗೆ || ಮಂಗಲಂ ಜಯಮಂಗಲಂ ||419||

ಭಾವಜಪಿತನಿಗೆ ಭವಹರಗೆ |
ಶ್ರೀವಧುರಮಣ ಸರ್ವೋತ್ತಮಗೆ ||
ದೇವ ವಿನಾಯಕ ನರಹರಿಗೆ |
ನಾ ವಂದಿಪೆ ಸೋಮೇಶನಿಗೆ ||
ಮಂಗಲಂ ಜಯಮಂಗಲಂ | ನಿತ್ಯ ಶುಭಮಂಗಲಂ ||420||

ಮಾರೀಮುಖನ ಕಾಳಗವು ಸಂಪೂರ್ಣವು