ಭಾಮಿನಿ

ಬಿಡುವಥಾ ದುಮ್ಮಾನವ್ಯಾಕೀ |
ದಡಿಗ ದಾನವ ನಿನ್ನ ಶರದಲಿ |
ಮಡಿಯದಿರೆ ಸುರಸೂತನೇ ತಾನೆನುತ ಗರ್ಜಿಸಿದ ||
ಕಡುಗಲಿಯತನಗಳನು ಮೆರೆಸೆಂ |
ದೊಡನೆ ಪೇಳ್ತಿರಲಂದು ರಾಘವ |
ಬಿಡದೆ ಯೋಚಿಸುತೆಂದ ಮಾತಲಿಗಧಿಕ ದುಗುಡದಲಿ ||429||

ರಾಗ ಕೇದಾರಗೌಳ ಅಷ್ಟತಾಳ

ದೇವನಾನಾದರೆ | ಈ ವಿರೋಧಿಯ ಕೊಲ್ವು |  ದಾವುದು ಘನವೆಮಗೆ ||
ನೀವು ದೇವರದೇವ | ದೇವನೆಂದೆನುತಲಿ |  ಭಾವಿಸುವಿರಿ ಸುಮ್ಮನೆ ||430||

ಮರುಳೆ ಸಾರಥಿಯೆಮ್ಮ | ಧುರದೊಳ್ ಸಾಯುವನೆ ಈ |  ಧುರಪರಾಕ್ರಮಿ ಖೂಳನು ||
ಬರಿದೆ ಮಾನವರಿಗೀ | ತೆರನ ಪೇಳದಿರಿನ್ನು |  ಅರಿತಿಕೋ ಮನದಿ ನೀನು ||431||

ಎಂದು ಪೇಳುತ ರಘು | ನಂದನನು ದಿವ್ಯಾ |  ಸ್ಯಂದನದಿಂದಿಳೆಗೆ ||
ಚಂದದಿಂದಿಳಿಯಲಿ | ಕಂದು ರಾವಣನೋಡು |  ತೆಂದನು ರಘುವರಗೆ ||432||

ಮನದೊಳಂಜುವೆ ಯಾಕೆ | ಜನಪ ಕೇಳ್ ನಿನಗೀಗ |  ರಣದೊಳಲ್ಲದೆ ನಾನಿಂದು ||
ಧನುವಿಗೆ ಶರ ತೊಡು | ವೆನೆ ನೀನು ಬೆದರದಿ |  ರೆನುತೆಂದ ರಾಮಗಂದು ||433||

ಕಂದ

ರಥದಿಂದಿಳೆಗಯ್ದಿದ ರಘು |
ಪತಿಯಂ ಕಾಣುತಲಾ ಕಮಲಜ ಬೇಗದೊಳಂ ||
ಮತಿಯುತನಾ ಕಲಶಜನಂ |
ಕ್ಷಿತಿಪನೆಡೆಗೆ ಪೋಗೆನೆ ನಲವಿನೊಳೈತಂದಂ ||434||

ರಾಗ ಬಿಲಹರಿ ರೂಪಕತಾಳ

ಮತ್ಯುಂಜಯ ಮತ್ಯುಂಜಯ | ಮತ್ಯುಂಜಯ ಶಿವನೆ ||
ಉತ್ತಮ ಶ್ಲೋಕನೆ ತ್ರೈಜಗ | ಕುತ್ತಮ ಶುಭಿಕರನೆ ||435||

ಚಿತ್ತಜವೈರಿಯ ಸ್ಮರಿಸುತ | ಗಸ್ತ್ಯನು ನಡೆತಂದ ||
ಚಿತ್ತದಿ ಹರುಷದೊಳಾ ಪುರು | ಷೋತ್ತಮ ನೆಡೆಗೆಂದ ||436||

ಜಯ ರಾಘವ ಜಯರಾಘವ | ಜಯಜಯ ರಘುವರನೆ ||
ಭಯಹರ ತ್ರೈಜಗಪಾವನ | ಜಯ ಶಂಕರ ಪ್ರಿಯನೆ ||437||

ದಯಸಾಗರ ನಿಗಮಾಗಮ | ಚಯನುತ ಶ್ರೀಕರನೆ ||
ನಯದಿಂದೀಮೂರ್ಲೋಕಕೆ | ನಿಯಮಕ ಸುಚರಿತನೆ ||438||

ರಾಗ ಅರಭಿ ಆದಿತಾಳ

ಪಾಲಿಸು ಪರಮ ಪವಿತ್ರ | ಜಯಜಯ | ಪಾಲಿಸು   || ಪಲ್ಲವಿ ||

ಜೀಯ ನಿನ್ನಯ ಬಹು | ಮಾಯಕತನದ ಉ |
ಪಾಯ ಸಾಕೆಲೊ ದೇವ | ಕಾಯಜಾಂತಕಪ್ರೀಯ ||439||

ದುರುಳ ರಾವಣನಿಂದು | ತರಿಯದಿರಲು ಮುಂದು |
ಸುರರು ಬಾಯ್ ಬಿಡುತಲೆ | ತರಹರಬಡುತಲೆ ||440||

ಅವಧರಿಪುದು ಸೂರ್ಯ | ಕವಚವಿಂದಿಗೆ ಕಾರ್ಯ |
ಸವನಿಸುವದು ತ್ರೈ | ಭುವನ ರಕ್ಷಕ ನೀನೈ ||441||

ಭಾಮಿನಿ

ಮನದಿ ಹರಿ ಬ್ರಹ್ಮೇಶ್ವರರ ನೆನೆ |
ದಿನಿತು ಪ್ರಾಣಾತ್ಮಕನ ಭಾವಿಸು |
ಗುಣಮಹಿಮ ತ್ರಿಗುಣಾತ್ಮಕನ ತ್ರೈಲೋಕ್ಯಪಾಲಕನ ||
ಘನಮಹಿಮ ಕಾಲಾಗ್ನಿ ರೂಪನ |
ಚಿನುಮಯನ ಶ್ರೀ ಸೂರ್ಯನಾರಾ |
ಯಣನ ಸತ್ಕವಚವಿದು ಶುದ್ಧದೊಳನುಕರಿಸು ದಢದಿ ||442||

ರಾಗ ಮಾರವಿ ಏಕತಾಳ

ಸುರಮುನಿ ಪೇಳಿದ ಕವಚವ ಬೇಗದಿ |  ಸರಸಿಜದಳನಯನ ||
ಪರಮಶುದ್ಧದಿಂ ಧರಿಸಲೈತಂದನು |  ತರಣಿ ಬೇಗದೊಳಿನ್ನಾ ||443||

ಕೊಟ್ಟನು ಹರಿಹರಬ್ರಹ್ಮಾದಿಗಳತಿ |  ಗುಟ್ಟಿನ ಮಂತ್ರಗಳ ||
ಸೃಷ್ಟಿಪಾಲಗಿತ್ತುಪಚರಿಸುತ ಬೀ |  ಳ್ಳೊಟ್ಟರೆ ತವಕದೊಳು ||444||

ಇತ್ತಲು ಮಾತಲಿ ಶಾರ್ಙ್ಗಮಹಾಶರ |  ಚಿತ್ತಜಪಿತಗೀಯೆ ||
ಹತ್ತಿ ರಥವ ಧನುವೆತ್ತಲು ಕೀಶರ |  ಮೊತ್ತವು ಬೊಬ್ಬಿರಿಯೆ ||445||

ಭಾಮಿನಿ

ಮೆರೆವ ಶಾರ್ಙ್ಗಮಹಾಶರವ ಕರ |
ಸರಸಿರುಹದಲಿ ಪಿಡಿದ ಧನುವಿಗೆ |
ಗುರಿವಿಡಿಯಲನಿತರೊಳು ವಿಶ್ವಾಕಾರ ತಾನಾದ ||
ಹರಪಿತಾಮಹ ಸುರಪ ಮನುಮುನಿ |
ವರರನುರೆ ಬ್ರಹ್ಮಾಂಡಕೋಟಿಯ |
ಧರಿಸಿರುವ ಶ್ರೀ ವಿಮಲ ಮೂರ್ತಿಯ ಕಂಡನಸುರೇಂದ್ರ ||446||

ರಾಗ ಯರಕಲಕಾಂಭೋಜಿ ತ್ರಿವುಡೆತಾಳ

ಕಂಡನು ದಶವದನ | ಕೋದಂಡರಾಮನ   || ಪಲ್ಲವಿ ||

ಪುಂಡರೀಕಾಂಬಕನ ಜಗದೋ |
ದ್ದಂಡರೂಪನ ಖಂಡಬಲ ಬ್ರ |
ಹ್ಮಾಂಡಕೋಟಿಯ ತಂಡಗಳ ಕಪೆ |
ಗೊಂಡು ಸಲಹುವ ಜಾಂಡಧೀಶನ || ಅ ||

ಮೂರು ಮೂರ್ತಿಯ ರೂಪನ | ವಿಶ್ವಾಕಾರ |  ಸಾರಸಗುಣದೀಪನ || ವೀರನ |  ತೋರುತಿಹ ಮಾಯಾವಿ | ಚಾರನ |  ಕ್ಷೀರಾಬ್ದಿಶಯನ ಗಂ | ಭೀರನ |  ಕಾರಣಿಕ ಸೂತ್ರಾ | ಧಾರನ ||
ಚಾರುನಿಗಮವಿದೂರ ನಿರುಪಮ |
ಶೂರ ಸುರುಚಿರ ಹಾರ ದುರಿತಸಂ |
ಹಾರ ಹರಸುರವಾರನುತ ಖಗ |
ದೇರ ದೀನೋದ್ಧಾರನೆನಿಪನ || ಕಂಡನು ||447||

ಸುಂದರ ನೀಲಗಾತ್ರನ | ಸರ್ವಾಭರಣ |  ವಂದ ಸನ್ನುತಿಪಾತ್ರನ || ಸಿಂಧುವ |
ಹರಕೋಟಿಗಡಣಗ | ಳಂದವ |
ಅರ್ಬುದ ಪಿತಾಮಹ | ವಂದವ |
ಸುರನಾಥರಮರರಚಂದವ ||

ಇಂದಿರೇಶ ಮುಕುಂದ ವದನದ |
ಮಂದಹಾಸವ ವಂದಿಸುತ ಪುರ |
ಮಂದಿಗಡಣದೊಳಂದು ತಾಪೂ |
ರ್ಣೆಂದು ತೇಜದಿ ನಿಂದಿರುವವನನು || ಕಂಡನು ||448||

ನಿರುಪಮ ನಿಶ್ಚಿಂತನ | ನಿರ್ಧರಿಸಲಿ |  ಕರಿಯದ ಮತಿವಂತನ || ಕರುಣನ |  ಸರ್ವರೊಳು ವ್ಯಾಪಿಸು | ತಿರುವನ |  ಶರಣರನು ರಕ್ಷಿಸಿ | ಮೆರೆವನ |  ಪರಮಾತ್ಮ ಸದ್ಗುಣ | ಭರಿತನ |
ಮರಣ ರಹಿತನ ಪರಮ ಶಾಂತನ |
ನಿರತಿಶಯ ಸಚ್ಚರಿತ ಪರಮೇ |
ಶ್ವರ ಪರಾತ್ಪರ ಪರಮ ವಿಶ್ವಂ |
ಭರನ ಸೀತಾವರನ ಮೂರ್ತಿಯ || ಕಂಡನು ||449||

ಭಾಮಿನಿ

ನುಡಿಗೆ ನಿಲುಕದ ನಿಗಮ ರೂಪನ |
ಷಡುವಿಕಾರವಿಹೀನನನು ಕಂ |
ಡೊಡನೆ ಜಯ ಜಯವೆನುತ ನುತಿಸಿದನಂದು ಮನದೊಳಗೆ ||
ಜಡಜನಾಭ ಮುಕುಂದ ಕೈಟಭ |
ಧಡಿಗಮಧುಖಳನಾಶ ತ್ರೈಜಗ |
ದೊಡೆಯ ಶ್ರೀವರ ನಾರಸಿಂಹನೆ ಎನುತ ಕೈ ಮುಗಿದ ||450||

ರಾಗ ಕಲ್ಯಾಣಿ ಝಂಪೆತಾಳ

ಜಯತು ಜಯ ಸಚ್ಚಿದಾನಂದ ರೂಪ |
ಜಯ ಜಯತು ಘನಮಹಿಮ ಕೀರ್ತಿಕಲಾಪ   || ಪಲ್ಲವಿ ||

ಎಲ್ಲಿ ಸುತಪಿತರುಗಳು ಎಲ್ಲಿ ಸತಿಸೌಭಾಗ್ಯ |
ಎಲ್ಲಿ ಮಿತ್ರವಿಚಾರ ಎಲ್ಲಿ ಅತಿಹಿತರು ||
ಎಲ್ಲಿ ಮಾಯಕತತ್ತ್ವದಲ್ಲಿ ತೋರುವ ಪರಿಗೆ |
ಳೆಲ್ಲಿವಿದು ಸ್ಥಿರವಲ್ಲ ಬಲ್ಲ ಸುಜ್ಞಂಗೆ ||451||

ನಾರಿ ಜಾನಕಿಯೆತ್ತ ಘೊರರಕ್ಕಸರೆತ್ತ |
ವಾರಿಧಿಯ ಬಂಧಿಸುವದ್ಯಾರಿಗುಚಿತ |
ವಾರಿಜೋದ್ಭವನ ಸುಕುಮಾರಕರ ಶಾಪದವಿ |
ಚಾರವಲ್ಲದೆ ನಮಗಿನ್ನೀ ರೀತಿಯಹುದೆ ||452||

ಭಾಮಿನಿ

ಎಂದೆನುತ ಸಚರಾಚರಾತ್ಮಕ |
ಗಂದು ಮನ್ಮನದೊಳಗೆವಂದಿಸಿ |
ಸಿಂಧುಶಯನನ ನೋಡಿ ಬಿಲುಧ್ವನಿದೋರಿ ಬೊಬ್ಬಿರಿದ ||
ಇಂದಿರಾ ಪತಿ ಕಾಣುತಲೆದಶ |
ಕಂದರನ ನಯನುಡಿಯ ಮಾತುಗ |
ಳಿಂದ ಮಾತಾಡಿಸಲುಪಕ್ರಮ ಗೆಯ್ದನಾಕ್ಷಣಕೆ ||453||

ರಾಗ ಖಮಾಚ್ ತ್ರಿವುಡೆತಾಳ

ಸಾಕು ಸಾಕು ಬೇಡ ಛಲ ಫಡ | ಬಲುಜೋಕೆ ನೋಡು    || ಪ ||

ಮೂರುಲೋಕ ವೀರ ನಿ | ನ್ನಾರು ಭಟೆಯ ನೋಡೆ ಸುಮನ |
ವಾರವೆಲ್ಲ ಬೆದರುತಿರವ | ಧೀರ ಪಟುಭಟಾಗ್ರಗಣ್ಯ || ಸಾಕು || ಅ ||

ಒಂದು ಸಾರಿ ಕೊಡೆಯ ತರಿದೆನು | ಎರಡನೆಯ ಬಾರಿ |  ಯಂದು ನಿನ್ನ ಕೆಡೆಯ ಲೆಚ್ಚೆನು ||
ಮಂದಮತಿಯೆ ಮೂರನೆಯೊಳು | ಸ್ಯಂದನವನು ಸಹಿತನಿನ್ನ |
ನೊಂದು ಪೈಶಾಚಕನ ತೆರದಿ | ಮಂದಿರದೊಳು ಹೊಂದಿಸಿದೆನು || ಸಾಕು ||454||

ಮೂರುಬಾರಿ ಎನ್ನ ಬಲುಹನು | ನೀ ನೋಡುತಲೆ ವಿ |
ಚಾರಶೂನ್ಯನಂತೆ ರಣವನು ||
ಧೀರತನದಿ ಗೆಯ್ದರೇನು | ಸೇರುವಳೆಜಯಾಂಗನೆಯು |
ಸಾರಿದೆ ನಾನಿನ್ನನಿಂದು | ಧಾರಿಣಿಯು ಮೆಚ್ಚುವಂತೆ || ಸಾಕು ||455||

ಶರಣುಬಂದರೆನ್ನ ನೀಕ್ಷಣ | ನಿನಗೀವೆ ಲಂಕೆ |  ಯರಸುತನವ ನೋಡು ವಿಚಕ್ಷಣ ||
ಧರಣಿಯಿರುವ ತನಕ ನಿನ್ನ | ಶರಣರಂತೆ ಸಲಹೆ ಮುನ್ನ |
ಭರಿತ ಸುಖಗಳಿತ್ತು ದ್ರುಹಿಣ | ನಿರುವವರೆಗೆ ಪೊರೆವೆ ನಿನ್ನ | ಸಾಕು ||456||

ಅಂದು ಹರಿಯ ಮೊಮ್ಮನೊಂದಿಗೆ | ನಾಪೇಳ್ದ ಪರಿಗ |  ಳೊಂದು ಚಲಿಸದಂತೆ ಇಂದಿಗೆ ||  ಚಂದದಿಂದ ನಡೆಸಿಕೊಡುವೆ | ಕುಂದದಧಿಕ ಭಾಗ್ಯವೀವೆ |  ನೆಂದ ಮಾತಿಗೆರಡದಿಲ್ಲ | ಪೊಂದು ನಮ್ಮನಿಂದು ಮಲ್ಲ || ಸಾಕು ||457||

ಭಾಮಿನಿ

ಧರಣಿ ತಲೆಕೆಳಗಾದಡೆಯು ನಾ |
ಶರಣು ಬರುವವನಲ್ಲ ಮಿಕ್ಕಿನ |
ಸಿರಿಯು ತನಗಿನ್ನುಂಟು ಕೇಳಿನ್ನಿಳೆಯನಂದನೆಯ ||
ಸರುವಥಾ ಕೊಡೆ ನಿನ್ನೊಳಾಹವ |
ವಿರಚಿಸಲಿಕಂಜಿದರೆ ಗಿರಿಜಾ |
ವರನ ಬಂಟನೆ ತಾನೆನುತ ಬೊಬ್ಬಿರಿದ ದಶಕಂಠ ||458||

ರಾಗ ಕೇದಾರಗೌಳ ಅಷ್ಟತಾಳ

ಏನಯ್ಯ ಶರಣ ನಿನ್ನಣ್ಣನ ಮಾತು ನಿ |
ಧಾನಿಸಿದೆಯೊ ಮನದಿ ||
ನಾನೆಷ್ಟು ಪೇಳ್ದರು ಕೇಳನಿತನು  ಬುದ್ಧಿ |  ಶೂನ್ಯನಲ್ಲವೆ ಜಗದಿ ||459||

ಕೊಲಲೊ ಈತನ ಕೊಲ್ಲದುಳಿಹಲೊ ಪೇಳು ನಿ |  ನ್ನೊಳವ ಬೇಗದೊಳೆನ್ನೊಳು ||
ತಿಳಿಯಲಿಬ್ಬರ ಮಾತೆಯೊಬ್ಬಳಲ್ಲವೆ ಚಿತ್ತ |
ದೊಳು ಬೇಸರಿಹುದೆ ಪೇಳು ||460||

ದುಷ್ಟ ದುರಾಚರದೊಳಗಿರುತಿಹ ಮತಿ |  ಭ್ರಷ್ಟ ನಮ್ಮಣ್ಣನನು ||
ಕುಟ್ಟಿಕೆಡಹಿ ತ್ರಿಭವನವ ರಕ್ಷಿಸೊ ಭಕ್ತಾ |  ಭೀಷ್ಟದಾಯಕನೆನೀನು ||461||

ತಂದೆತಾಯಿಗಳಣ್ಣ ತಮ್ಮಂದಿರೆನ್ನಯ |
ಬಂಧುಬಾಂಧವರೆಲ್ಲರು ||

ಇಂದಿರಾಪತಿಯೆ ನೀನೆಂದು ಬಂದಿರುವೆ ಆ |  ನಂದದಿ ಕಪೆಯ ತೋರೋ ||462||

ಈ ಖೂಳನಿಂಗೆ ನಾ ಸಾರಿ ಪೇಳಿದೆಮೂರು |  ಲೋಕ ಮೆಚ್ಚುವ ತೆರದಿ ||

ನಾಕದವರು ಸಾಕ್ಷಿಯಿರಲಿಮ್ಮೊಳು ಅವಿ |  ವೇಕವಿಲ್ಲವು ನಿಜದಿ ||463||

ಭಾಮಿನಿ

ಮೂರು ಮೂರ್ತಿಗಳಿಂದ ಪಡೆದಿಹ |
ಘೋರತರದಸ್ತ್ರಗಳಿರಲು ನೀ |
ತೋರು ಈ ಕ್ಷಣದೊಳಗೆ ತಡವ್ಯಾಕೆನುತಲಿದಿರಾಗೆ ||
ಸೂರ್ಯಕುಲ ಸಂಜಾತನೊಡನಾ |
ಭೋರನೇಳ್ತಂದಾಗ ಶರಣನು |
ದಾರಬಲ ಖಳನುರಕೆ ಬಿಡು ನಿನ್ನಸ್ತ್ರವೆನಲದಕೆ ||464||

ವಾರ್ಧಕ

ಕುಂಭಕರ್ಣಾನುಜನೆ ಕೇಳು  ನಿನ್ನಣ್ಣನೆದೆ |
ಗಂಬನೆಸೆವುದಕೆ ಕಾರಣ ವೇನು ಪೇಳು ಪೇ |
ಳೆಂಬ ಮಾತಿಗೆ ಪೂರ್ವದೊಳಗೀತ ಹರನ ಸಭೆಯೊಳು ನಂದಿಕೇಶನುರಕೆ ||
ಜಂಬೀರಪಣ್ಣನಣಕಿಸುತಿಡಲು ವಷಭ ತ |
ನ್ನಂಬಕದಿ ಕಿಡಿಸೂಸಿ ಹದಯದಲಿ ನಿನಗೆ ಮರ |
ಣಂಬರಲಿ ಎಂದೆನುತ ಶಾಪವಿತ್ತುದರಿಂದ ತೊಡು ಎದೆಗೆ ಮಾರ್ಗಣವನು  ||465||

ರಾಗ ಭೈರವಿ ಏಕತಾಳ

ಎಂದಾ ಶರಣನ ಮಾತ | ರಘು |  ನಂದನ ಲಾಲಿಸಿನಗುತಾ ||
ಮಂದಮತಿಗೆ ಕೂರ್ಗಣಿಯ | ಬಿಡ   ಲಂದೆಣಿಸಲು ಖಳಮಣಿಯು ||466||

ತಿಳಿದನನುಜನೆಂದುದನು | ತಾ |  ನಳಲಿದರಿಂದಹುದೇನು ||
ಅಳಿವುದೆ ಋಷಿ ವಾಕ್ಯಗಳು | ಸರಿ |  ಗೊಳಿಸುದುದೀ ರೀತಿಯೊಳು ||467||

ಆತ್ಮಜ್ಞಾನವ ಬೆಳೆಸಿ | ಅಂತ |  ರಾತ್ಮನ ತನ್ನೊಳು ಸ್ಮರಿಸಿ |
ಆತ್ಮಾನಂದವ ನರಿದ | ವಿ |  ಶ್ವಾತ್ಮನ ನೋಡಿ ಬೊಬ್ಬಿರಿದ ||468||

ನೋಡಿದ ರಘುಕುಲಜಾತ | ದಯ |  ಗೂಡಿ ಪೇಳ್ದನೊಂದು ಮಾತ ||
ಕೂಡಿಕೊ ಎನ್ನೊಳು ಬೇಗ | ಛಲ |  ಬೇಡ ಸಾರಿದೆ  ನಾನೀಗ ||469||

ಸನ್ನುತ ವಿಶ್ವಾತ್ಮಕನು | ನೀ |  ನೆನ್ನುವುದರಿತೆನು ನಾನು ||
ಮನ್ನಣೆ ಮಾತುಗಳಲ್ಲ | ನೀ |  ನೆನ್ನೊಳರುಹಿ ಫಲವಿಲ್ಲ ||470||

ತಪ್ಪುಗಳೆನ್ನೊಳಗಿಲ್ಲ | ಇದ |  ಕೊಪ್ಪುವುದೀ ಜಗವೆಲ್ಲ ||
ಅಪ್ಪಳಿಸುವೆ ನಿನ್ನೆನುತ | ಭುಜ |  ಚಪ್ಪರಿಸಲು ಶ್ರೀನಾಥ ||471||

ರಂಜನೆ ಮಾತುಗಳೇನು | ಖಳ |
ಭಂಜನ ನೀನೆಂಬುದನು |
ಸಂಜನಿಸಲು ಮನಸಿನೊಳು | ನಾ |  ನಂಜೆನು ರಣಭೂಮಿಯೊಳು ||472||

ನುಡಿಯನು ಕೇಳುತ ರಾಮ | ಶರ |  ಬಿಡಲಾಕ್ಷಣ ನಿಸ್ಸೀಮ ||
ಪೊಡವಿಯು ಕಂಪಿಸಲಾಗ | ಖಳ |  ನೆಡೆಗಯ್ತಂದುದು ಬೇಗ ||473||

ಭಾಮಿನಿ

ಶರಹತಿಗೆ ತನು ಬಿಡುತ ರಾವಣ  |
ತರಹರಿಸಿ ಮೂರನೆಯ ಜನ್ಮಕೆ |
ತೆರಳಲಿತ್ತಲು ಸುರರು ಪೂಮಳೆಗರೆದರಾ ಕ್ಷಣಕೆ ||
ಹರುಷದಿಂದಾ ಸುಮನಸರ ಸತಿ |
ಯರು ವಿನೋದಗಳಿಂದ ಸುಸ್ವರ |
ವೆರೆಸಿ ಜಯ ಜಯವೆನುತ ಪಾಡಿದರತಿ ವಿಚಿತ್ರದಲಿ ||474||

ರಾಗ ಬಿಲಹರಿ ರೂಪಕತಾಳ

ಮಂಗಳ ಜಯ ಮಂಗಳ
ಜಯ ಮಂಗಳ ರಘುವರನೆ ||
ಮಂಗಳ ಜಯ ಮಂಗಳ ನರ |
ಸಿಂಗನೆ ಭಯಹರನೆ || ಮಂಗಳ ||475||

ಜಯ ಜಯ ಖಳ | ಕುಲನಾಶಕ |  ಜಯ ಜಯ ಸುಚರಿತನೆ ||
ಜಯ ಮಾಧವ | ಜಯ ಕೇಶವ |  ಜಯ ನಾರಾಯಣನೆ || ಮಂಗಳ ||476||

ರಘುವಂಶೋ | ದ್ಧಾರಕ ತ್ರೈ |  ಜಗವಂದಿತ ರೂಪ ||
ಅಗಣಿತ ವಿ | ಕ್ರಮ ಸದ್ಗುಣ |  ನಿಗಮಾಗಮ ಭರಿತ || ಮಂಗಳ ||477||

ಶರಣಾಗತ | ಜನರಕ್ಷಕ |  ನಿರುಪಮ ಗುಣವ್ರಾತ ||
ಸರಸಿಜಲೋ | ಚನ ಅಘಹರ |  ಸುರಮನು ಮುನಿಪ್ರೀತ || ಮಂಗಳ ||478||

ವಾರ್ಧಕ

ಬಳಿಕಾ ವಿಭೀಷಣನ ಮಂಡೋದರಿಯ ಸೊಸೆಯ |
ರಳಲ ಪರಿಹರಿಸಿ ದಶಕಂಠ ಮೊದಲಾದಸುರ |
ರಳಿದವರಿಗೌರ್ಧ್ವದೈಹಿಕವ ಮಾಡಿಸಿ ಶರಣನಿಂಗೆ ಲಂಕಾದುರ್ಗದ ||

ಚೆಲುವ ದೊರೆತನವಿತ್ತಾ ಧರಣಿ ನಂದನೆಯ |
ನೊಲಿಸಿ ಸಹಜನ ಕೂಡಿಕೊಂಡು ಕಪಿವರರ ಸಹಿ |
ತಲಕಾಧಿಪನ ಪುಷ್ಪಕವನೇರಿ ಶ್ರೀರಾಮ ನಿಜನಗರಿಗಯ್ತಂದನು ||479||

ಭಾಮಿನಿ

ಮಾತೆಯರ ಸಂತಯಿಸಿ ತನ್ನನು |
ಜಾತ ಮುಖ್ಯರಕೂಡಿಯಾಸಾ |
ಕೇತಪುರಪಟ್ಟಾಭಿಷೇಕವ ಶುಭಮಹೂರ್ತದಲಿ ||
ಜ್ಯೋತಿಷಜ್ಞರ ಮತದಿ ರಚಿಸಲಿ |
ಕಾ ತತುಕ್ಷಣದೊಳಗೆ ಸತಿಯರು |
ನೂತನದ ಹಾಡಿಕೆಯೊಳೆತ್ತಿದರಾರತಿಯನಂದು ||480||

ಮಂಗಳ
ರಾಗ ಮೋಹನ ಆದಿತಾಳ

ಮಂಗಲಂ ಜಯ  ಮಂಗಲಂ    || ಪ ||
ಮಂಗಲ ಜಯ ಜಯ ರಾಘವಗೆ | ಜಯ |
ಮಂಗಲ ತ್ರೈಜಗಪೋಷನಿಗೆ ||
ಮಂಗಲ ಶ್ರೀಕರ ಮಾಧವಗೇ | ಜಯ |
ಮಂಗಲ ಸೀತಾ ವಲ್ಲಭಗೆ || ಮಂಗಲಂ ||481||

ಇನಕೋಟಿ ತೇಜ ವಿಶ್ವಾತ್ಮಕಗೇ | ಚೆಲ್ವ |
ಇನಕುಲಾಂಬುಧಿಪೂರ್ಣಚಂದ್ರನಿಗೆ ||
ದನುಜ ಕುಲಾಚಲಹೀರನಿಗೆ | ವರ |
ಮನುಮುನಿಜನಮನ ಮಧುತರಗೆ || ಮಂಗಲಂ ||482||

ಸುಂದರರೂಪಗೆ ಶುಭಕರಗೆ | ಚೆಲ್ವ |
ಇಂದಿರಾಪತಿ ಇನತುಕುಲಸ್ಮರಗೆ ||
ಕಂದುಗೊರಳಸಖ ಕೇಶವಗೆ | ಸುರ |
ವಂದರಕ್ಷಕ ದ್ರುಹಿಣನ ಪಿತಗೆ || ಮಂಗಲಂ ||483||

ಭಾಮಿನಿ

ತರಳರಿರ ನಿಮ್ಮಯ್ಯನೀ ಪರಿ |
ಹರುಷದಿಂ ಸಾಕೇತಪುರದೊಳು |
ಭರಿತ ಸುಖದಿಂ ರಾಜ್ಯವನು ಪಾಲಿಸುತಲಿರುತಿರ್ದ ||
ಪರಮಮಂಗಳ ಸಚ್ಚರಿತ್ರವ |
ನರುಹಿದೆನು ನಿಮಗಿದನು ಸಾಂಗದಿ |
ಪರಮ ಸುಖಸಾಮ್ರಾಜ್ಯಪದಗಳ ಸಿದ್ಧಿಸುವ  ಕಥೆಯ ||484||

ಮೆರೆವ ಕಾಸರಗೋಡಪುರನೊಳ |
ಗಿರುತಿರುವ ಭೂಸುರಕುಲೋತ್ತಮ |
ಪರಮ ಭಗವದ್ಭಕ್ತ ಬೀ. ಕೃಷ್ಣಯ್ಯ ನೆಂಬುವನ ||
ತರಳನಾಸಿದ್ಧಾಂತ ಪಂಡಿತ |
ವರನು ಸುಬ್ಬಾಯಾಖ್ಯನೆಸಗಿಹ |
ಚರಿತೆಯಿದು ಶ್ರೀರಾಮಚಂದ್ರನ ಕರುಣದಿಂದೋದು ||485||

ಧನ್ಯ ಜಯಶಕದುತ್ತರಾಯಣ |
ತನ್ನಋತು ಮೊದಲನೆಯ ಮಾಸದೊ |
ಳಿನ್ನೆಸೆವ ಮತ್ಯುವಿನ ತಿಥಿ ಶನಿವಾರದೊಳಗಿದನು ||
ಪನ್ನಗಾಶನವಾಹನನ ಕಥೆ |
ಯನ್ನು ರಚಿಸಿದೆ ತ್ರೈಜಗತ್ಪತಿ |
ಯಿನ್ನು ನಮ್ಮನು ಪೂರೆವನತಿ ಕಾರುಣ್ಯದಿಂದೊಲಿದು ||486||

ಮಂಗಲಂ ಜಯನಾರಸಿಂಹಗೆ |
ಮಂಗಲ ಲೋಕೈಕ ವೀರಗೆ |
ಮಂಗಲಂ ತ್ರೈಭುವನಸಂಜೀವನಿಗೆ ಜಯ ಜಯತು ||
ಮಂಗಲಂ ಧಾತ್ರಿಜೆಯ ವರನಿಗೆ |
ಮಂಗಲಂ ಸಿತಕಂಠಮಿತ್ರಗೆ |
ಮಂಗಲಂ ಶ್ರೀಶೇಷ ಶೈಲನಿವಾಸ ಶ್ರೀಪತಿಗೆ ||487||

ಯಕ್ಷಗಾನ ರಾವಣವಧೆ ಮುಗಿದುದು