ರಾಗ ನೀಲಾಂಬರಿ ರೂಪಕತಾಳ

ಖೂಳದಾನವ ಪೋಗಲತಿ ದುಃಖದೊಳು ಕಪಿ |
ಬಾಲನ ತೆಗೆದು ಮುದ್ದಿಸುತ ವಾಯುಜನು ||
ಬಾಲದೊಳವನ ಇಕ್ಕಡಿಗಳ ಬಂಧಿಸಿ |
ನೀಲಾದ್ಯರೊಡಗೂಡಿ ಬರುತಿರ್ದನಂದು ||292||

ಜಡಜನಾಭನೊಳೇನನೆಂಬೆನೊ ಹಾಯೆಂದು |
ಕಡುಗಲಿ ವಾಯು ಸಂಭವನು ಚಿಂತಿಸುತ ||
ಕಡಿದ ಇಕ್ಕಡಿಗಳ ದುಃಖಿಸುತಲೆ ರಾಮ |
ನಡಿಯೊಳಿಟ್ಟಾಗ ಬಿನ್ನಯ್ಸಿದನೊಡನೆ ||293||

ವೀರ ಲಾಲಿಸು ಘೋರ ಮಾರಣಯಜ್ಞವು |
ಸೂರೆಹೋದುದು ಇವನಾರುಭಟೆಯಲಿ ||
ಚಾರು ಕೋಮಲ ಸುಕುಮಾರ ನಂಗದನನ್ನು |
ವೀರ ರಾವಣ ನಿಂದುಹಾಸದಿಂ ತರಿದ ||294||

ಎಂದು ಮಾರುತಿ ಪೇಳಲಂದು ದುಃಖಿಸಿ ರಘು |
ನಂದನನುಸಿರಿದ ವಾಯುಜನೊಡನೆ ||
ಕಂದನೀತನ ಚಂದದಿಂದ ರಕ್ಷಿಪುದೆಂದು |
ಇಂದ್ರಜನಂದೆನ್ನೊಳಿತ್ತುದನರಿಯಾ ||295||

ನಗೆಗೇಡ ಮಾಡಿದೆ ಜಗದೊಳೀತನನಿಂದು |
ಹಗೆಯ ಕೈಯೊಳಗಿತ್ತ ಸುಗುಣ ನೀನಲ್ಲೆ ||
ಮಿಗುವರಿಯಿತು ಕಾರ್ಯವೆನೆ ಬ್ರಹ್ಮಸುತನುಕೈ |
ಮುಗಿದು ಬಿನ್ನಯಿಸಿದನಾಗ ರಾಘವಗೆ ||296||

ಭಾಮಿನಿ

ಶರಣನಾ ಪವಮಾನಿ ನಿಮ್ಮಯ |
ಚರಣ ಸೇವಕನಾಗಿರಲು ಭಯ |
ಹರನೆ ನೀನಾತನೊಳು ದೋಷವನೆಣಿಸಲಳವಲ್ಲ ||
ಪರಮ ಸಂಜೀವನವಿಹುದು ರಘು |
ವರನೆ ನಮ್ಮೀ ವೈದ್ಯನಾಥನೊ |
ಳರುಹುವುದು ಭವರೋಗ ವೈದ್ಯಯೆನುತ್ತ ಕೈಮುಗಿದ ||297||

ರಾಗ ಮಧ್ಯಮಾವತಿ ತ್ರಿವುಡೆತಾಳ

ಚಿತ್ತಜನ ಪಿತನಾಗ ತಾ ಮುದ |
ವೆತ್ತು ಕರೆದಾ ಕಲಿಸುಷೇಣನೊ |
ಳಿತ್ತ ನಂಗದನಿಕ್ಕಡಿಯ ಪಿಡಿ |
ದೆತ್ತುತಾ ಕಪಿವರನೊಳು | ರಾಘವೇಂದ್ರ ||298||

ಭರದಿ ಸಂಜೀವನದೊಳಾ ಕಪಿ |
ವರನು ತಂದೆರೆಯಲ್ಕೆ ಜೀವಿಸಿ |
ತರಳ ಚೇತರಿಸುತ್ತಲೆದ್ದನು |
ಭರಿತ ರೌದ್ರವೇಶದಿ | ಧುರವನೆಸಗೆ ||299||

ಕಂಡು ರಾಘವನಂಘ್ರಿಗಳಿಗು |
ದ್ದಂಡಬಲನೆರಗಲ್ಕೆ ತೋಷದಿ |
ಪುಂಡರೀಕಾಂಬಕನು ನೆಗಹಿದ |
ಗಂಡುಗಲಿಯಂಗದನನು | ಪ್ರೇಮದಿಂದ ||300||

ಚಂದದಿಂ ಮುದ್ದಿಸುತ ವಾಯುಜ |
ಗೆಂದನೇನೈ ದುಗುಡದೊಳಗಿಹ |
ಅಂದವೇನೆನೆ ಕೈ ಮುಗಿದು ಬರ |
ದಿಂದ ವಾತಜನುಸಿರಿದ | ರಾಮನೊಡನೆ ||301||

ರಾಗ ಕಾಂಭೋಜಿ ಝಂಪೆತಾಳ

ದೇವ ದುಮ್ಮಾನವಿನ್ನೆಲ್ಲಿ ತವ ಕರುಣದಿಂ |
ಜೀವಿಸಲಸಾಧ್ಯ ಶರಣರಿಗೆ ||
ಭೂವರೇಣ್ಯನೆ ನಿನಗಿದೆಂಬ ಮಾತಲ್ಲ ಪರ |
ಸೇವೆ ಕಡುಕಷ್ಟಧರೆಯೊಳಗೆ ||302||

ಗರಳವನು ಕುಡಿದು ಜೀವಿಸಬಹುದು ಪುರಹರನ |
ನುರಿಯ ನಪ್ಪುತ ತರಣಿಸುತನ |
ಧುರಕೆ ಸನ್ನಿಹಿತನಾಗಲು ಬಹುದು ಭೈರವನ |
ಭರವ ನಿಲಿಸುತ ಧನಂಜಯನ ||303||

ಸರಸದಿಂ ಕೆಣಕಿ ಫಣಿಯನು ಚುಂಬಿಸುತ ಹರಿವ |
ಗರಗಸಕೆ ಮುಂದಲೆಯ ಜವದಿ ||
ಹರಿಯ ತುಡುಕಿದರಿಂತು ಪರಸೇವೆಯಿಂದಧಿಕ |

ತೆರನಲ್ಲ ಲೋಕದೊಳು ಜೀಯ ||304||

ಸೇವೆ ದುಷ್ಕರ್ಮರತ ಸೇವೆಯವ ಮಾನಪಥ |
ಸೇವೆ ಸಾವಿನ ತವರು ಮನೆಯು ||
ಸೇವೆ ದುಷ್ಟಾಚಾರ ಸೇವೆನರಕವಿಚಾರ |
ಸೇವೆ ದುಮ್ಮಾನಸಾಗರವು ||305||

ಮಾನಭಂಗವಗೊಳಿಸಿ ಹೀನವತ್ತಿಯ ಬಳಸಿ |
ಜ್ಞಾನ ಕೆಡಿಸುವದು ಲೋಕದಲಿ ||
ಗೋಣ ತಗ್ಗಿಸುವ ಬಗೆ ತ್ರಾಣ ಕುಗ್ಗಿಸುವ ನಗೆ |
ಮಾಣಿಪುದು ಸೇವೆ ನಿಮಿಷದಲಿ ||306||

ಎಂದು ಮಾರುತಿಯು ಮನನೊಂದು ಪೇಳಿದ ಮಾತಿ |
ಗಂದು ರಘುನಾಥನಾ ಕ್ಷಣದಿ ||
ಬಂದು ವಾಯುಜನ ಪಿಡಿದಪ್ಪಿ ಮುದ್ದಿಸುತಕಪಿ |
ವಂದ ತೋಷಿಸಲೆಂದ ಮುದದಿ ||307||

ರಾಗ ಮಧ್ಯಮಾವತಿ ತ್ರಿವುಡೆತಾಳ

ಮಗನೆ ನೀನೀ ಪರಿಯೊಳರುಹುವ |
ಬಗೆಯದೇನೈ ಮನದಲಿ ||
ಬಗೆಯದಿರು ಸೇವಕನೆನುತ್ತಲಿ | ಸುಗುಣ ನೀನು ||308||

ಕರಕರಿಸಬೇಡಕಟ ನಿನ್ನನು |
ಜರೆವರಿಲ್ಲಾ ಸುಮ್ಮನೆ ||
ಶಿರವ ತಗ್ಗಿಸಿ ಚಿಂತಿಸುವ ಬಗೆ | ಯರಿತುದಿಲ್ಲ ||309||

ನೀನು ಸೇವಕನಹುದೆ ಜಗತಿಯ |
ಪ್ರಾಣರೂಪನು ನಿನ್ನನು ||
ಹೀನನೆಂದುಸಿರುವರ ಕಾಣೆನು | ಜ್ಞಾನದೀಪ ||310||

ನಿನ್ನ ಸೇವಿಸುವವನು ಲೋಕದಿ |
ಮಾನ್ಯನಹನು ಮನದೊಳು ||
ಅನ್ಯ ಭಾವವನೆಣಿಸಲೇತಕೆ | ಚಿಣ್ಣ ನೀನು ||311||

ಎಂದು ಮಧುರೋಕ್ತಿಯಲಿ ಮರುತನ |
ಕಂದಗಂದು ಸಂತಸ ||
ದಿಂದ ಪಿಡಿದಪ್ಪಿದನು ಕರುಣದಿ | ಮುಂದೆ ಬಂದು ||312||

ಭಾಮಿನಿ

ಇಂತು ಹನುಮನ ಮಧುರ ವಚನದಿ |
ಸಂತವಿಸೆ ಸುಮನಸರು ತವಕದಿ |
ಕಂತುಪಿತನಿಗೆ ಸಂಪಿಗೆಯ ಮಳೆಗರೆಯೆ ಕಪಿಕಟಕ ||
ಸಂತಸವ ಪಡುತಿರಲು ರಾವಣ |
ನಂತು ಚಿಂತಾಭಾರದಲಿ ಮತಿ |
ವಂತೆ ಸತಿಯೊಡಬಡಿಸಿ ಸಮರೋದ್ಯೋಗಮನನಾದ ||313||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಅಳಿದುಳಿದ ಬಲಸಹಿತ ರಾವಣ |
ಕೊಳಗುಳಕೆ ನಡೆತರಲಿಕಿತ್ತಲು |
ನಳ ಹನುಮ ನೀಲಾಂಗದರು ಕಳ | ವಳಿಸುತಿರಲು ||314||

ಮುಳಿದು ಹೊಕ್ಕರು ಖಳನ ಪಡೆಯನು |
ತಿಳಿದು ರಾವಣ ರೋಷದಿಂದಲೆ |
ಹಳಚಿದನು ಹನುಮಂತ ದೇವನ | ಬಳಿಗೆಬಂದು ||315||

ಮಾರುತಿಯು ಕಂಡಾಗರೋಷದಿ |
ವೀರ ಖಳ ನೀನೆನ್ನ ಮುಷ್ಟಿಯ |
ಸಾರವನು ನೋಡೆನುತ ಭರದೊಳ | ಗಾರುಭಟಿಸೆ ||316||

ಹಾರಿ ರಥದೊಳಗೇರಿ ಮುಷ್ಟಿಯ |
ನೇರಿಸಿದ ನವನುರಕೆ ಸತ್ತ್ವದಿ |
ವೀರ ರಾವಣ ಬಿದ್ದನಾಕ್ಷಣ | ಧಾರಿಣಿಯಲಿ ||317||

ಚೇತರಿಸುತರೆಗಳಿಗೆಯೊಳು ಖಳ |
ಪೂತುರೇ ಶಾಭಾಸು ಭಲೆಸ |
ತ್ತ್ವಾತಿ ಶಯಕೆಣೆಯಿಲ್ಲ ಜಗವಿ | ಖ್ಯಾತಿನಹುದು ||318||

ಎನ್ನ ಮುಷ್ಟಿಯ ಹತಿಗೆ ನೀನುಳಿ |
ದಿನ್ನು ಎನ್ನನು ಪೊಗಳಲ್ಯಾತಕೆ |
ನಿನ್ನ ಸತ್ತ್ವವ ತೋರೆನುತ ಸಂ | ಪನ್ನ ನುಡಿದ ||319||

ಮುಷ್ಟಿಯನು ಬಂಧಿಸುತಲಾ ಜಗ |
ಜಟ್ಟಿಗೆರಗಲು ಸಹಿಸಿ ಮರುತಜ |
ದುಷ್ಟ ದಶಕಂದರನೆಡೆಗೆ ಪೊಗು | ವಷ್ಟರೊಳಗೆ ||320||

ರಾಗ ಶಂಕರಾಭರಣ ಮಟ್ಟೆತಾಳ

ಮಡನ ತೆರದೊಳಗ್ನಿ ರೋಮ |
ದಡಿಗ ದಾನವೇಂದ್ರಕೀಶ |
ಗಡಣವೆಲ್ಲ ಎಸುತಬರಲು | ಕಡುಗಿ ಮರುತಜ ||
ಗಡಿಬಡಿಸುತಲಸುರನಸುವ |
ಪಿಡಿದು ಮುಷ್ಟಿಯಿಂದ ತಿವಿದು |
ಕಡಲಿಗೆಸೆಯೆ ಕಂಡು ದೈತ್ಯ | ಗಡಣ ಬೆದರಿತು ||321||

ಅನಿತರೊಳಗೆ ಸರ್ಪರೋಮ |
ನೆನಿಪ ದನುಜಭುಜಗತತಿಯ |
ನನುಕರಿಸುತಲೈದೆ ಪ್ಲವಗ | ರನಿಬರೋಡಲು ||
ಕ್ಷಣದಿ ವಾಲಿತನುಜನವನ |
ಕೆಣಕುತೊಡನೆ ಗಿರಿಗಳಿಂದ |
ಧನುಜನುರವ ಹೂಳಿನಿತ್ತ | ಕಿನಿಸಿನಿಂದಲೆ ||322||

ರಾಗ ಮಾರವಿ ಏಕತಾಳ

ರಾಕ್ಷಸನಾ ವಶ್ಚಿಕರೋಮನು ಕಂ |
ಡಕ್ಷಿಯೊಳ್ ಕಿಡಿಗೆದರಿ ||
ತೀಕ್ಷಣ ಕ್ರಿಮಿಕೀಟಗಳನು ಕೊಡಹಿದ |
ನಾಕ್ಷಣದೊಳು ಗಜರಿ  ||323||

ಚೇಳಿನುರುಬೆಯನು ತಾಳಲಾರದೆ ಕಪಿ |
ಪಾಳಯ ನಡನಡುಗಿ ||
ಗೋಳುಗುಟ್ಟುವ ಪರಿ ನೋಡುತ ಬೇಗದಿ |
ನೀಲ ತಾನುರಿಮಸಗಿ ||324||

ಗಿರಿ ತರುಗಡಣದೊಳೆರಗಲು ಧರೆಯೊಳು |
ಸರಿದವು ಕೀಟಗಳು ||
ಭರದೊಳು ವಶ್ಚಿಕ ರೋಮನ ಶಿರವನು |
ತರಿಯಲು ನಿಮಿಷದೊಳು ||325||

ರಾಗ ಪಂತುವರಾಳಿ ಮಟ್ಟೆತಾಳ

ಖಡುಗ ರೋಮನೆಂಬ ದೈತ್ಯ | ಕಿಡಿಯ ನುಗುಳುತ ||
ಮಡನ ತೆರದಿ ರೋಷದಿಂದ | ಲಸಿಯ ಸೆಳೆಯುತ ||
ಗುಡುಗುಡಿಸುತ ಫ್ಲಗವ ಭಟರ | ಕಡಿದು ಬಿಸುಡುತ ||
ಸಡಗರದಲಿ ಬರಲು ನಳನು | ಕಂಡು ಗಜರುತ ||326||

ಕಲ್ಲು ಮರಗಳಿಂದಲವನ | ಚೆಲ್ಲ ಬಡಿದನು ||
ಭುಲ್ಲವಿಸುವ ಧನುಜಭಟರ | ನೆಲ್ಲ ತರಿದನು ||
ನಿಲ್ಲು ನಿಲ್ಲೆನುತ್ತ ಬರುವ | ದಾನವರುಗಳ ||
ಹಲ್ಲು ಮುರಿಯ ಬಡಿದನಾಗ | ಖುಲ್ಲರನಿಬರ ||327||

ಭಾಮಿನಿ

ದುರುಳ ದೈತ್ಯರು ಮಡಿಯಲಿತ್ತಲು |
ತರಹರಿಸಿ ದಶಕಂಠ ರಥವನು |
ತಿರುಹಿದನು ಶ್ರೀರಾಮಚಂದ್ರನೊಳಳವಿಗೆಂದೆನುತ ||
ಬರುವ ಬರವನು ಕಾಣುತಲೆ ರಘು |
ವರನು ತಿಳಿದಾಕ್ಷಣವೆ ತನ್ನಯ |
ವರ ಮಹಾ ಕೋದಂಡ ವನು ಕೈಗೊಂಡನಾ ಕ್ಷಣಕೆ ||328||

ದ್ವಿಪದಿ

ತರಳರಿರ ಕೇಳಿರಾಕ್ಷಣದಿ ಸುರರುಗಳು |
ಧುರವ ನೀಕ್ಷಿಸಲಿಕಂಬರದೊಳಿರುತಿರಲು ||329||

ವೀರರಾವಣನು ರಥವೇರಿ ನಿಂತಿರುವ |
ಮಾರಮಣ ಪಾದಚಾರಿಯೊಲಯ್ದಿಬರುವ ||330||

ನೀತಿಯಲ್ಲಿದು ಕೇಳು ದೇವ ನೀನೆನುತ ||
ಆ ತತುಕ್ಷಣಕಮರರೆನಲು ಸುರನಾಥ ||331||

ಹರ ವಿರಂಚಿಗಳನುಜ್ಞೆಯನು ಪಡೆದಾಗ |
ಕರೆದು ಮಾತಲಿಗೆ ಪೇಳಿದ ಸುರಪಬೇಗ ||332||

ಸಾರಥಿತ್ವವ ಮಾಡು ಪೋಗಿ ಧರೆಯೊಳಗೆ |
ವೀರ ದಶರಥಕಂದನಾದ ಮಾಧವಗೆ ||333||

ಭಾಮಿನಿ

ಎಂದು ಸುರಪತಿ ನುಡಿಯೆಮಾತಲಿ |
ಸ್ಯಂದನದಿ ಪೀಯೂಷವಿಟ್ಟಾ |
ನಂದದಲಿ ಧರೆಗಯ್ದಿ ರಾಮನ ಚರಣಕಭಿನಮಿಸಿ ||
ಸಿಂಧುಶಯನನೆ ನೀನಖಿಳ ಸುರ |
ವಂದ ರಕ್ಷಕನಮಿತ ವಿಕ್ರಮ |
ನೆಂದು ಪೊಗಳುತ ಬಿನ್ನವಿಸಿದನು ಸುರಪನೆಂದುದನು ||334||

ರಾಗ ಬೇಗಡೆ ಅಷ್ಟತಾಳ

ದೇವ ನೀ ಲಾಲಿಸಿ ಕೇಳು ಬಿನ್ನಪವ |
ನಾ ವಿವರಿಪೆ ನಾಕ ಪತಿಯ  ಸನ್ಮತವ || ದೇವ || || ಪಲ್ಲವಿ ||

ದುರುಳನಾಥನು ರಥವೇರಿ ನಿಂದಿರುವ |
ಪರಮಾತ್ಮ ನೀ ಪಾದಚಾರಿಯಾಗಿರುವ ||
ಪರಿಗಳ ಯೋಚಿಸುತೀಗವರೆಲ್ಲ |
ಹರುಷದಿ ರಥವನು ಕಳುಹಿದರಲ್ಲ ||335||

ಧನು ಶರ ಬಾಣ ಬತ್ತಳಿಕೆಗಳಿಂತು |
ಅನುಕೂಲವಾಗಿರ್ಪ ರಥದೊಳು ನಿಂತು ||
ದನುಜರಿಗಿದಿರಾಗಿ ಕಾದುವ ಪರಿಯ |
ಸನುಮತದಿಂ ನೋಳ್ಪೆವೆಂದರು ಜೀಯ ||336||

ಸುರಪನ ಸಾರಥಿಯಾಗಿಹೆ ನಾನು |
ಕರೆವರು ಮಾತಲಿಯೆನುವ ನಾಮವನು ||
ಹರಿಯೆ ನೀ ರಥವೇರು ತಡಮಾಡಬೇಡ |
ದುರುಳ ನಾರ್ಭಟಿಸುತ್ತ ಬರುವನು ನೋಡಾ ||337||

ಭಾಮಿನಿ

ಮಾತಲಿಯೆ ನಾನೊಲ್ಲೆನೀ ಪುರು |
ಹೂತ ಕಳುಹಿದ ಧನುಶರಗಳ ವ |
ರೂಥಸಹವರ ಹಂಗಿಗೊಳಗಾಗುವನು ತಾನಲ್ಲ ||
ನೀತೆರಳು ನಭಕಲ್ಲದೊಡೆ ನ |
ಮ್ಮೀ ತೆರದ ಸಮರಾಂಗಣದ ಸ |
ತ್ತ್ವಾತಿಶಯ ಪರಿಕಿಸುವ ಮನವಿರೆ ಪಿಂತೆ ಸಾರೆನುತ ||338||

ಕಂದ

ನೀರಜ ಲೋಚನನಿತ್ತಲು |
ವೀರಾವೇಷದಿ ಕೋದಂಡವ ಝೇಗೆಯ್ದುಂ |
ಸಾರಲಿಕಿತ್ತಾ ನಾರದ |
ಮಾರಮಣನ ಸಂಸ್ತುತಿಸುತ ಬರುತಿರ್ದಾಗಳ್  ||339||

ರಾಗ ಮೋಹನ ಅಷ್ಟತಾಳ

ನಾರಾಯಣ ಹರಿ ನಾರಾಯಣ ಹರಿ |
ನಾರಾಯಣ ಲಕ್ಷ್ಮೀನಾರಾಯಣ ||
ಮಾರನಯ್ಯನೆ ಸುಕುಮಾರ ಶರೀರನೆ |
ಮಾರಮಣನೆಯೆಂದು ನಾರದನೈತಂದ ||340||

ಆನಂದ ಮಯನೆ ಲೋಕಾನಂದಕರ ಸಚ್ಚಿ |
ದಾನಂದರೂಪ ಮಹಾನಂದ ನೆ  ||
ಭಾನುವಂಶಜ ಬಹುಮಾನವಂತನೆ ಘೋರ |
ದಾನವಾಂತಕನೆ ಮಹಾನು ಭಾವನೆ ||341||

ತಂದೆ ತಂದೆಯ ಸ್ತುತಿಸುತ್ತ ಭಕ್ತಿಯೊಳೈ |
ತಂದೆರಗಿದ ರಾಮಚಂದ್ರಗಂದು ||
ಇಂದಿರೇಶನೆ ದಯದಿಂದ ಬಿನ್ನಪವನ್ನು |
ಚಂದದಿ ಲಾಲಿಸೊ ಸಿಂಧುಶಯನ ಹರಿ ||342||

ದೊರೆಯೆ ನೀ ರಥವೇರಿ ಧುರದಿ ಖೂಳನ ಶಿರ |
ವರಿಯಲು ನೋಳ್ವೆವೀ ಧುರವಲ್ಲದೆ ||
ಬರಿದೆ ನೀ ಧರೆಯೊಳು ಚರಿಸಿ ರಣಾಗ್ರವ |
ವಿರಚಿಸಲದ ನೋಡಲೊಲ್ಲೆವೆಂದರು ಸುರರು ||343||

ಇಂತೆಂದು ಹರ ಪಿತಾಮಹ ಸುರಪತಿ ಮುಖ್ಯರ್ |
ಸಂತಸದಿಂದೆನ್ನ ಕಳುಹಿದರು ||
ಅಂತಕಾಂತಕ ರಥವೇರೆನಲಾಗ ಶ್ರೀ |
ಕಾತನಿಂತೆಂದನು ನಾರದ ಮುನಿಯೊಳು ||344||

ರಾಗ ಉದಯಚಂದ್ರಿಕೆ ಅಷ್ಟತಾಳ

ಮಾತಲಾಲಿಸಯ್ಯ ಮೌನಿ | ನಾಥ ನಾನೆಂಬುದ ನೀ ||
ಪ್ರೀತಿಯೊಳ್ ವಿಚಾರಿಸೆಲ್ಲ | ನೂತನವಾದುದನೆಲ್ಲ ||345||

ತಂದೆಯಾಜ್ಞೆಯಿಂದ ನಾನೈ | ತಂದೆವನದೊಳು ಕಾಣೆ ||
ಸ್ಯಂದನವನೇರಿ ದೈತ್ಯ | ವಂದವ ನಾ ಗೆದ್ದುದಿಲ್ಲ ||346||

ನೋಡಲಿ ಯುದ್ಧವ ನೋಡ | ದೋಡಿದರು ನಮಗಿನ್ಯಾವ |
ಕೇಡುಬಾರದೆಂಬ ಮಾತ | ನಾಡಲಿತ್ತ ರಘುನಾಥ ||347||