ವಚನ
ಇಂತೆಂದು ಮೈರಾವಣಗೆ ಸಂಧ್ಯೆ ಸೂಚಿಸಲಾ ಮಾತಿಗಂ ತಾಂ ತವಕದೊಳಿಂತೆಂದನು –
ರಾಗ ಕೇದಾರಗೌಳ ಅಷ್ಟತಾಳ
ಕನಸಿದು ಭ್ರಾಂತಿ ಕೇಳ್ ಮನಸಿನೊಳಿಡದಿರು |
ಗುಣಶಿರೋಮಣಿಸುಮ್ಮನೆ ||
ಅನುವರದೊಳಗೆನ್ನೊಳ್ ಸೆಣಸುವರುಂಟೇನೆ |
ವಿನಯದಿ ತಿಳಿಯೆಜಾಣೆ ||172||
ತಿಳಿದಿದ್ದ ಕಾರಣ ಖಳರಾಯ ನಿನ್ನೊಳು |
ವಳವ ನಾ ಸೂಚಿಸಿದೆ ||
ಇಳೆಯೊಳು ಹನುಮಂತನಳವಿಗಾನುವರ್ಯಾರಿ |
ನ್ನುಳಿವಿಲ್ಲ ನಮಗೆ ಮುಂದೆ ||173||
ಮರದಿಂದ ಮರಕೆ ಹಾರುವ ಕಪಿಯಿಂದಾಹ |
ಪರಿಯೇನೆ ಪಂಕಜಾಕ್ಷಿ ||
ತರಿವೆನವನ ನೀನಿಂದರಿಯೆಂದು ನಾ ತಂದ |
ನರರೆ ಕೇಳದಕೆ ಸಾಕ್ಷಿ ||174||
ಸಾಕ್ಷಿಯ ಮಾಡಿಹುದಹುದಯ್ಯ ಪತಿ ನಿನ್ನಾ |
ಪೇಕ್ಷೆಯು ಬರಿಬಯಲು ||
ಸಾಕ್ಷಾತವಿಷ್ಣುವಿನವತಾರರಿಂದಿವ |
ರಿಕ್ಷ್ವಾಕುವಂಶಜರು || ||175||
ಆ ಮಾತಹುದು ಮತ್ತಿನ್ನಾದರೇನಾಯ್ತು |
ಕಾಮಿನಿಯನು ಕಳೆದು ||
ಭೂಮಿಯೊಳಲೆಯುವದ್ಯಾಕೆ ದೇವಾಂಶಿಗಳ್ |
ಪ್ರೇಮದಿಂದ್ಹಾಗೆ ಹೀಗೆ || ||176||
ನಲ್ಲ ವಿಚಾರಿಸು ಬಲ್ಲೆನು ನಿೀನೆಂದ |
ಸೊಲ್ಲನು ಸಂತಸದಿ ||
ನಲ್ಲೆಯ ಕಳಕೊಂಡುದಲ್ಲ ಮತ್ಯುವ ದುಷ್ಟ |
ನಲ್ಲಿಗೆ ಕಳುಹಿರ್ಪನು ||177||
ಏನ ನೀ ನಾಡಿದೆ ಜಾನಕಿಯನು ಲಂಕಾ |
ದಾನವನೊಯ್ದು ತನ್ನ ||
ಮಾನಿನಿಯನು ಮಾಳ್ಪೆನೆಂದು ಸೆರೆಯೊಳಿಟ್ಟು |
ದಾನರ್ತುದಿಲ್ಲವೇನೆ ||178||
ಅರ್ತಕಾರಣದಿಂದಲರುಹಿದೆನಲ್ಲದೆ |
ವ್ಯರ್ಥದ ಮಾತಲ್ಲ ವೈ ||
ಅರ್ತಿಯೊಳನಲನೊಳಿಟ್ಟಹನರಸಿಯ |
ಧೂರ್ತರ ಕೊಲುವ ದೇವ ||179||
ಕೊಲುವವನಾಗೆ ತಾನಳುಕುತ ಕಪಿಯ ಬೆಂ |
ಬಳಿಯನಾಶ್ರೈಸುವನೆ ||
ಬಲಿಯನು ಕೊಡುವೆ ನಾ ಬೆಳಗಾದ ಮೇಲೆನ್ನ |
ಕುಲದೇವಿಗವರೀರ್ವರ ||180||
ಬೆಳಗಾಗುವನಕ ಮತ್ತಿನ್ನೇನಾಗುವುದೆಂಬ |
ವಳವರಿತವರ್ಯಾರಿನ್ನು ||
ಕಳವಳದಿಂದ ನಾ ಕಂಡುದನಾಡಿದೆ |
ಮುಳಿಯದೆ ಮನ್ನಿಸೀಗ ||181||
ಕಂದ
ಅನಿತರೊಳಿತ್ತಂ ಕೇಳ್ದುದು |
ಮನಿಲಜನಾರ್ಭಟೆಯುಮೈದೆ ಮೈರಾವಣಗಂ ||
ಕಿನಿಸಿನೊಳೆದ್ದೆಡಬಲನುಂ |
ಮುನಿಸನ ಜ್ವಾಲೆಯೊಳಗೀಕ್ಷಿಸುತಲಿಂತೆಂದಂ ||182||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಏನಿದೇನಾಶ್ಚರ್ಯ ನಮ್ಮಾ |
ಸ್ಥಾನದೊಳಗಾರ್ಭಟೆಯು ಕೇಳ್ವುದಿ |
ದೇನೆನುತ ಪೊರವಳೆಯಕಯ್ದಿ ನಿ | ಧಾನದಿಂದ ||183||
ತಿಳಿದುಬಹುದೆಂದೆನುತ ಖಳರಿಗೆ |
ಬಲುಹಿನಿಂ | ಮೈರಾವಣಾಖ್ಯನು |
ಚಳಕದಿಂ ಪೇಳುತ್ತಿರಲು ವೃತ್ತಳುತಲೋರ್ವ ||184||
ದನುಜನಯ್ತಂದಾಗ ತನ್ನೊಡೆ |
ಯನಪದಕೆ ವಂದಿಸುತ ಭಯದೊಳು |
ತನುನಡುಕದಿಂ ಸೂಚಿಸಿದನಾ | ಹನುಮನಧಟ ||185||
ರಾಗ ಮುಖಾರಿ ಏಕತಾಳ
ಖಳರಾಯ ಕೇಳೆನ್ನ ಬಿನ್ನಪವ | ಬಲುಹಿನಿಂ ಕಪಿಯೊಂ |
ದೊಳಪೊಕ್ಕು ಕೊಲುವುದೆಮ್ಮ ಬಲವ || ಖಳ || ||ಪಲ್ಲವಿ||
ಕಾಳಭೈರವನಂತೆ ತೋರ್ಪುದು | ದಧಟ ನೋಡೆ |
ಶೂಲಪಾಣಿಯ ತೆರದೊಳಿರ್ಪುದು ||
ಲೀಲೆಯೊಳಗೆ ಮಿಗೆ | ಪೇಳಲಳವೆ ನೀ |
ನ್ನಾಲಯದೆಡೆಯೊಳ | ಗೋಲಾಡುತ್ತತಿ |
ಚಾಲುವರಿದು ನಿ | ರ್ಮೂಲವ ಮಾಡಿದ |
ಕಾಲನ ತೆರದೀ | ಬಾಳಿಸದಸುರರ || ಖಳ ||186||
ಮದದಾಹಂಕಾರಂಗಳಿಂದ | ಮುಂದ್ವರಿದು ಬಂದು |
ದಧಿಮುಖನನ್ನು ಶೌರ್ಯದಿಂದ ||
ಒದೆವುತ ಚರಣದೊ | ಳದುಭುತ ಗೈವು |
ತ್ತೊದರಿಸಿ ಬಿಗುಹಲಿ | ಸದೆಬಡೆದಿನಜನ |
ಸದನಕ್ಕಟ್ಟಿದ | ನದನೇವೇಳ್ವೆನು |
ಬಿದಿರುದಂಷ್ಟ್ರನ ಸುಲ | ಭದೊಳೊಲವಿಂದ || ಖಳ ||187||
ತೋರ ಮರನ ಪಿಡಿದು ತಾನು | ಸೂಚೀಮುಖನ |
ಬಾರಿಬಾರಿಗೆ ಪೊಯ್ಯಲವನು ||
ಧಾರಿಣಿಗೊರಗುತ | ಕಾರುತ ರುಧಿರವ |
ಮಾರಿಯ ಭವನಕೆ | ಸಾರಿದರಸುರರಿ |
ನ್ನಾರುಳಿಯದೆ ರಣ | ಧಾರಿಣಿಯಲಿ ಕೈ |
ದೋರದಳಿದರವಿ | ಚಾರಗಳಿಂದ ||188||
ಭಾಮಿನಿ
ಚಾರಕನು ತಾನಿಂತೆನಲು ಮದ |
ವೇರಿ ಹೂಂಕರಿಸುತ್ತ ಹುರಿಗೊಂ |
ಡಾರುಭಟೆಯಿಂದೆದ್ದು ಮೈರಾವಣನು ಖಾತಿಯಲಿ ||
ಕಾರಿರುಳು ನಡೆತರಲುಗಿರಿತರು |
ಧಾರಿಣೀತಳಕುರುಳೆ ನಭದಿಂ |
ತಾರೆಯುದುರಿದವೇನ್ ಸಮರ್ಥನೊ ಖಳನು ಸಾಹಸದಿ ||189||
ಕಂದ
ಈ ರೀತಿಯೊಳಂ ಬಂದಾ |
ಮೈರಾವಣನಾರ್ಭಟಸುತಮತಿರೌದ್ರದೊಳಂ ||
ಆರೈದಂಕದ ಕಣನಂ |
ಸಾರುತ್ತಂ ನಿಲಲುಮನಿಲಜಂ ಕಂಗೆಸೆದಂ ||190||
ರಾಗ ಭೈರವಿ ತ್ರಿವುಡೆತಾಳ
ಕಂಡನಾಗ | ಹನುಮನ | ಕಂಡನಾಗ || ಪಲ್ಲವಿ ||
ಪಾಟಲಾನನದಿಂದ ಮಹಶತ |
ಕೋಟಿ ಕಾಯದಿ ರಂಜಿಸುತ ಶಶಿ |
ಜೂಟನಂಶೀಭೂತನತಿ ಬೊ |
ಬ್ಬಾಟದಿಂದೆಸೆದಿರಲು ಕಾಣುತ |
ಕೀಟಕಾಸುರ ಮುಂದುವರಿದು ವಿ |
ರಾಟರೂಪನ ನುಡಿಸಿದನು ಮ |
ತ್ತಾಟವಿಕತನದಿಂದ ಬರಿ ಬರಿ |
ಬೂಟಕದ ಮಾಯಾವಿಚಿತ್ರದಿ || ಕಂಡನಾಗ ||191||
ಎತ್ತಣಿಂದಯ್ತಂದೆ ಕಪಿ ನೀ |
ಇತ್ತ ಕಳುಹಿದರ್ಯಾರು ನಿನ್ನನು |
ಹೆತ್ತ ಜನಕನ ಹೆಸರದೇನೆಲೊ |
ಕರ್ತರುಂಟಾಗಿರಲು ಪೇಳೆಲೊ |
ಧೂರ್ತತನದಿಂದೆಮ್ಮವರ ಯಮ |
ಪತ್ತಣಕ್ಕಟ್ಟಿಸಿದುದೇನಾ |
ವರ್ತಮಾನವ ಪೇಳೆನುತ ಖತಿ |
ವೆತ್ತು ದಾನವ ಮೊರೆದುನಿಂದಿರೆ || ಕಂಡನಾಗ ||192||
ಆ ಸಮಯದೊಳಗಸುರನಧಟನು |
ಕೇಸರಿಜನೀಕ್ಷಿಸುತಲಂದು ವಿ |
ಲಾಸದಿಂ ನಸುನಗುತಲೆಂದನು |
ದಾಸಿನಂ ಗೆಯ್ಯದಲೆಯವನೊಳು |
ವೇಷಧಾರಿಯಲೇಸು ಪ್ರೌಢ ನೀ |
ಮೀಸಲಿರು ಕೀನಾಶನಗರಿಗೆ |
ನಾಶಗೈವೆ ನಿನ್ನೀಸಮಯದಿ ಸು |
ರೇಶ ಮೆಚ್ಚುವ ತೋಷದಿಂದಲಿ || ಕಂಡನಾಗ ||193||
ರಾಗ ಭೈರವಿ ಏಕತಾಳ
ಮೀಸಲಾಗಿಹರೆಲೊ ನಿನ್ನಾ | ಸಲೆ |
ಪೋಷಿಸುವಧಿಪರಿಗೆನ್ನ ||
ವಾಸದಿ ಸೆರೆಮನೆಯಾಯ್ತು | ಜಯ |
ದಾಸೆಯ ಬಿಡು ಕಪಿ ಮರೆತು ||194||
ಇಂತೆನೆ ದೈತ್ಯನ ನೋಡಿ | ಹನು |
ಮಂತನು ನಲಿನಲಿದಾಡಿ ||
ನಿಂತೆಂದನು ನಿನ್ನ ಬಿಡಲು | ಬಂ |
ದಂತವನಲ್ಲ ತಾನೆನಲು ||195||
ದನುಜನದನು ಕೇಳ್ದಾಗ | ಖತಿ |
ಯನು ತಳೆದುಸಿರಿದಬೇಗ ||
ವನಚರ ಪಂಥವನಾಡಿ | ಪೇ |
ಟ್ಟನು ತಿನ್ನದೆ ನಡೆ ಖೋಡಿ ||196||
ನಾಡಮಾತುಗಳೇಕಿನಿತು | ನೀ |
ನೋಡಿಬಂದುದ ನಾನರಿತು |
ಕೂಡೇಳ್ತಂದೆನು ಸುಭಟಾ | ಪರಿ |
ದಾಡದೆ ಖಳ ತೋರಧಟ ||197||
ಅಧಟ ನೀನೀಕ್ಷಿಸಲಿನ್ನು | ನಿ |
ನ್ನೆದೆಯಲಿ ಧೈರ್ಯವದೇನು ||
ಬದಿಯೆಲುಗಳ ನುಗ್ಗರಿವೆ | ಕೀಶ |
ನಿದಿರು ನಿಲ್ಲೆಲೊ ಪಲ್ ಮುರಿವೆ ||198||
ರಾಗ ಪಂಚಾಗತಿ ಮಟ್ಟೆತಾಳ
ಎಂದ ಮಾತು ಕೇಳುತಾಗ | ಲಂದು ಕೋಪದಿಂದ ವಾಯು |
ನಂದನನಬ್ಬರಿಸಿ ಜವದಿ | ಬಂದು ತಿವಿಯಲು ||
ನೊಂದು ಖಳನು ಬಹಳ ಕೋಪ | ದಿಂದ ಸರಳಮಳೆಯ ಕರೆಯ |
ಲಂದವಳಿದುದಾಗ ದೇವ | ವಂದ ಗಗನದಿ ||199||
ಬರುವ ಸರಳನೆಲ್ಲ ತನ್ನ | ಕರದಿ ಮುರಿದು ಮುಂದುವರಿದು |
ಧರಣಿಗೊರಗುವಂತೆ ಹನುಮ | ದುರುಳ ದೈತ್ಯನ ||
ಶಿರಕೆ ಮುಷ್ಟಿಯಿಂದ ಲೆರಗ | ಲೊರಗುತೆದ್ದು ತರಹರಿಸುತ |
ಗರುವದಿಂದ ಘರ್ಜಿಸುತ್ತ | ಪರಿಪರಿಗಳಲಿ ||200||
ಎತ್ತ ನೋಡಲತ್ತ ಸುತ್ತ | ಮುತ್ತ ಮಾಯದಿಂದ ಮಗದ|
ಮೊತ್ತವನ್ನು ಕವಿಸಲಾಗ | ಧೂರ್ತತನದಲಿ ||
ಪೊತ್ತು ತರುಗಿರಿಗಳ ಕಾಣಿ | ಸುತ್ತ ಕಪಟವೆಸಗೆ ಹನುಮ |
ಕತ್ತರಿಸಿದ ಮನದಿ ಬೇ | ಸತ್ತುಕೊಳ್ಳದೆ || ||201||
ಮಗುಳೆ ತಿರುಗಿ ನಿಗರಮಾದ | ನಗವನೊಂದನೆತ್ತಿ ಪೊಡೆಯೆ |
ಜಗದಿ ಕೆಡದ ದನುಜ ರ | ಕ್ತಗಳ ಕಾರುತ ||
ನಗುತ ವಾನರಾಗ್ರಗಣ್ಯ | ಬಿಗುಹಿನಿಂದ ಪಿಡಿದು ಪುನಹ |
ನೆಗಹುತಪ್ಪಳಿಸಿದನವನಿ | ಗೊಗುಮಿಗಿಂದಲಿ ||202||
ಕಂದ
ದುರುಳಂ ಕಂಡಾಕ್ಷಣದೊಳ್ |
ಸರಮಾಧವನಂತೆ ರೂಪವಂ ಧರಿಸುತ್ತಂ ||
ಮರುತಜಗೆಂದಂ ವಿನಯದಿ |
ಪರಿತೋಷದಿಂದೆ ಕಪಟವಿದ್ಯೆದೊಳಾಗಳ್ ||203||
ರಾಗ ತೋಡಿ ಏಕತಾಳ
ಮಾರುತಿ ನೀನಿತ್ತ ಬರೆ ತಿಳಿದೀಗಲಿ |
ನ್ನಾ ರಾವಣನು ಬಂದು ಪಿಡಿದು ನಮ್ಮ ||
ಭೋರನೆ ಕೊಂಡೊಯ್ದು ಕಾರಾಗಹದೊಳಿಟ್ಟು |
ಬೇರೆ ಘಾತಿಸುವ ನೀ ಮರಳ್ದಪುದು ||
ಮಾತಿದು ಪುಸಿಗಳಲ್ಲ | ಮನ್ನಿಸು ವಾಯು |
ಜಾತ ಕೇಳೆನ್ನ ಸೊಲ್ಲ ||204||
ಅವನಿವನೊಂದಾಗಿ ಬವರದೊಳೀಗ ನ |
ಮ್ಮುವನುಳಿಸರು ದಿಟ ಕಪಟವಲ್ಲ ||
ಅವನಿಪಾಲಕರ ಕೊಂಡವಿಳಂಬದಿಂದ ಪೋ |
ಗುವುದತಿ ಲೇಸೆಂದು ತೋರ್ಪುದಯ್ಯ ||205||
ಇಂತೆನೆ ವಿಸ್ಮಿತನಾಗುತ ಮರುತಜ |
ನಿಂತಿರೆ ದುರುದುಂಡಿಯರಿತು ಬೇಗ ||
ಸಂತಸದಿಂದ ಸಂಜ್ಞೆಯಗೆಯ್ಯೆ ಕಂಡು ಮ |
ಹಾಂತ ಕೋಪದಿ ಕೊಂದ ಖಳಮಾಯವ ||206||
ಕಂದ
ಕೊಲಲಾಕ್ಷಣದೊಳು ದನುಜಂ |
ಕಲಿಸೂರ್ಯಾತ್ಮಜನ ತೆರದಿ ಹನುಮಂತನೊಳಂ ||
ಚಲಿಸದೆ ಪೇಳ್ದಂ ಪುನರಪಿ |
ಹಲವು ವಿಧಂಗಳಲಿ ಪ್ರೀತನಾಗುವ ತೆರದಿಂ ||207||
ರಾಗ ಸೌರಾಷ್ಟ್ರ ಅಷ್ಟತಾಳ
ಬಲು ಚಂದವಾಯ್ತು ನೀ ಬಲವಂತನಹುದಯ್ಯ | ಮುಖ್ಯಪ್ರಾಣ | ನಿನ್ನ
ಬಲಪೌರುಷಗಳನ್ನು ಪೊಗಳಲೆನ್ನಳವಲ್ಲ | ಮುಖ್ಯ ಪ್ರಾಣ ||208||
ಭಯದಿಂದ ಬಂದು ದಾನವ ಮರೆಹೊಕ್ಕನು | ಮುಖ್ಯ ಪ್ರಾಣ || ರಾಮ |
ದಯದಿ ಪಾಲಿಸಿ ಪೊರೆದವನನು ಕೊಂದೆಯ | ಮುಖ್ಯ ಪ್ರಾಣ ||209||
ಮಿತ್ರದ್ರೋಹಿಗಳೆಂಬ ಮಾತನು ಗಳಿಸಿದೆ | ಮುಖ್ಯಪ್ರಾಣ || ಆ | ಮಿತ್ರವಂಶಜರಿಗೊಂದಪಕೀರ್ತಿಯನು ತಂದೆ | ಮುಖ್ಯಪ್ರಾಣ ||210||
ಶತ್ರುಪಕ್ಷದೊಳೆಲ್ಲ ನಗುವಂತೆ ಮಾಡಿದೆ | ಮುಖ್ಯಪ್ರಾಣ || ನಮ್ಮ |
ಗೋತ್ರ ಕೆಲ್ಲವು ಸಲೆ ಕುಂದ ತಂದೊಡ್ಡಿದೆ | ಮುಖ್ಯಪ್ರಾಣ ||211||
ಭಾಮಿನಿ
ಖಳನು ತಾನಿಂತೆನಲು ಕೇಳ್ದಾ|
ಕಲಿಹನುಮ ಕಡು ಚಿಂತೆಯಿಂದಿರೆ |
ನೆಲೆಯನರಿದಿಂತೆಂದಳಾ ದುರದುಂಡಿ ವಿನಯದಲಿ |
ಬಳಲಲೇತಕೆ ಜೀಯ ತಾನಿವ |
ಕುಲಗೆಡುಕ ಮೈರಾವಣನು ಕಪಿ |
ಕುಲಜನಲ್ಲೆನಲವನ ಮಾರುತಿ ಪಿಡಿದು ಸದೆಬಡಿದ ||212||
ಕಂದ
ಬಡಿಯಲ್ ದನುಜಂ ಮತ್ತಂ |
ದೊಡನಯ್ತಂದಾಗ ಜಾಂಬವಂತನ ತೆರದಿಂ ||
ಕಡು ನಿರ್ಭಯದಿಂದನಿಲಜ |
ನೆಡೆಯೊಳ್ ನಿಂದೆಂದ ಜವದೊಳತಿ ಧೈರ್ಯದೊಳಂ ||213||
ರಾಗ ನೀಲಾಂಬರಿ ಝಂಪೆತಾಳ
ಅಕಟಕಟ ಲೇಸಾಯಿತಯ್ಯ | ಪೊಡವಿಯೊಳು |
ಪ್ರಕಟವಾಯಿತು ನಿನ್ನ ದುರ್ಬುದ್ಧಿಯಯ್ಯ || ಅಕಟ || ||ಪ||
ಮಾತುಳನ ಮಡುಹಿದೆಯ ಬರಿದೆ | ಕೇಳ್ ನಿನ್ನ |
ಮಾತೆಯಗ್ರಜನೀತನೆಂಬುದನು ಮರೆದೆ ||
ನೀತಿಯುತ ನೀನೆನುತಮಿರದೆ | ನಂಬಿ ರವಿ |
ಜಾತನಿರಲವನಿಗೆಮನೂರಾಯಿತಿರದೆ || ಅಕಟ ||214||
ಮಂತ್ರಿತ್ವದಧಿಕಾರಗಳನು | ಕೊಟ್ಟು ಸ್ವಾ |
ತಂತ್ರ್ಯ ಸಾಹಸವೆಲ್ಲವಿನ್ನೇನೆಂಬೆ ನಾನು ||
ತಂತ್ರವರಿಯದೆ ಪೋದನವನು | ಈ ಬಗೆಗೆ |
ಯಂತ್ರವಾಹಕ ರಾಮನೆನಿತು ಮೆಚ್ಚುವನು || ಅಕಟ ||215||
ಈ ತೆರದ ಮೂದಲೆಯ ಕೇಳಿ | ಎಲರಣುಗ |
ತಾ ತಿಳಿದ ಖಳ ಮಾಯವೆನುತ ಖತಿ ತಾಳಿ ||
ಕಾತುರದೊಳಪ್ಪಳಿಸಿ ಹೂಳಿ | ಉರಿಗೊಳಿಸ |
ಲಾತನೆದ್ದನದೆಂತು ಸಾಹಸಿಯೊ ಕೇಳಿ || ಅಕಟ ||216||
ರಾಗ ಸೌರಾಷ್ಟ್ರ ತ್ರಿವುಡೆತಾಳ
ದನುಜನಾ ಸಮಯದಲಿ ಮಾಯವ |
ನನುಕರಿಸಿ ಕವಿಸಿದನು ಪನ್ನಗ |
ರನಿಮಿಷೋರಗ ಸಿದ್ಧ ಸಾಧ್ಯರ | ಮನುಜರಂತೆ ||217||
ಬಂದ ಬಂದವರೆಲ್ಲರನು ತಾ |
ಕೊಂದು ಕೊಂದುರೆ | ದಣಿದು ಮಾರುತಿ |
ನಿಂದು ವಿಸ್ಮಿತನಾಗಿ ಚಿಂತಿಸ | ಲಂದು ಜವದಿ ||218||
ಕಂಡು ಬೇಗದೊಳೆಂದಳಾ ದುರು |
ದುಂಡಿದಾನವಗಿರಿಕುಲಿಶನೊಳ್ |
ಮಂಡೆಯನು ಮಣಿದಾಗ ಮನದೊಳಗಂಡಲೆವುತ ||219||
ರಾಗ ಕಾಂಭೋಜಿ ಝಂಪೆತಾಳ
ಲಾಲಿಸೈ ನಾನೊಂದ ಪೇಳುವೆನು ನಿನಗೆ ಗುಣ |
ಶೀಲಯೇಕಾಂತದಿಂದೀಗ ||
ಖೂಳಖಳನಿವನು ಬಹುಕಾಲತಪವಿರ್ದಜನೊಳ್ |
ಕೇಳಿ ಪಡೆದಿಹನೊಂದು ವರವ | ||220||
ಉದದೊಳಗಿರುವ ಪಂಚಪ್ರಾಣಗಳ ಬೇರೆ |
ಸದನಕೊಯ್ದಿಡುವಂತೆ ಪಿಂತೆ ||
ಮಧುಕರದ ರೂಪದಿಂದೀಕ್ಷಿಸಲು ತೋರ್ಪುದಾ |
ಕುಧರದೊಳಗಿಹ ಶಿಲೆಯೊಳಿಂದು | ||221||
ಮತ್ತಾ ಶಿಲೆಯನಯ್ದೆ ಕಿತ್ತುಪುಡಿಗೆಯ್ಯೆ ಖತಿ |
ವೆತ್ತು ದಾನವನ ರೂಪಾಂತು ||
ಪ್ರತ್ಯಕ್ಷಮಾದ ಬವರಿಗಳೈದಿ ಪಾರುವುದ |
ನೊತ್ತಿ ಮರ್ದಿಸೆ ಮಡಿವನಿವನು | ||222||
ಕಂದ
ಇಂತಾ ದುರುದುಂಡಿಯು ಖಳ |
ನಂತಸ್ಥಾನವನು ತಿಳುಹೆ ಕೋಪದಿ ಹನುಮಂ ||
ನಿಂತುರೆ ಬಲಿದಂ ವಿಕ್ರಮ |
ದಿಂ ತಳುವದೆ ದೇವನಿಕರ ಮೆಚ್ಚುವ ತೆರದಿಂ ||223||
ರಾಗ ಪಂಚಾಗತಿ ಮಟ್ಟೆತಾಳ
ಘೋರ ರೂಪಿನಿಂದ ಹನುಮ |
ಭೋರನಂದು ಖಳನ ಪಿಡಿವು |
ತಾರುಭಟೆಯೊಳೊಂದು ಕಾಲೊ | ಳೂರಿ ಬೇಗದಿ ||
ಧಾರಿಣಿಯಲಿ ಮೆಟ್ಟಿ ತೋರ್ಪ |
ತೋರಗಿರಿಯೊಳೊಂದು ಕಾಲ |
ನೂರಿ ಶಿಲೆಯನೊದೆದು ಕೆಡಹೆ | ಕಾರಣೀಕದ ||224||
ಮಧುಕರಂಗಳಯ್ದು ಪೊರಡೆ |
ಪದುಳದಿಂದ ಪವನಜಾತ |
ನದರ ಕೊಂದು ಕಾಲಿನಡಿಯೊ | ಳೊದರುವಸುರನ ||
ಸದೆದು ಮರ್ದಿಸುತ್ತ ಬಳಿಕ |
ಮದದಿ ಹೂಂಕರಿಸಲು ಯಮನ |
ಸದನವನ್ನು ಸೂರೆಗೊಂಡ | ನೊದಗಿನಿಂದಲಿ ||225||
ಭಾಮಿನಿ
ಏನನೆಂಬೆನು ಋಷಿಗಳಿರ ಪವ |
ಮಾನಜನ ಬಲು ಪೌರುಷಂಗಳ |
ದಾನವನ ಮರಣದಲಿ ಸುರತತಿ ತೋಷದಿಂದೊಲಿದು ||
ಭಾನುಮಾರ್ಗದಿಸುರಿಸಿದರು ಸು |
ಮ್ಮಾನದಲಿ ಪೂಮಳೆಯ ಧರಣಿಗೆ |
ವಾನರರೊಳೇಂಧನ್ಯನೋ ಬಣ್ಣಿಸುವಡರಿದೆಂದ ||226||
Leave A Comment