ಕಂದ
ಅನಿತರೊಳಾ ಸಂಧ್ಯೆಯು ತ |
ನ್ನಿನೆಯಂ ಕೆಡದಿರ್ಪ ಧಾರಿಣಿಗೆ ಬಂದಂದಾ ||
ತನ ಗುಣಗಳನಂ ವರ್ಣಿಸಿ |
ನೆನೆನೆನೆವುತಯ್ದೆ ದುಃಖಿಸಿದಳುರುತರದಿಂ ||227||
ರಾಗ ಗೌಳ ಆದಿತಾಳ
ಪ್ರಾಣನಾಥ ಎನ್ನ ಮಾತ | ಮೀರಿ ಪೋಗಿ ಬರಿದೆ ||
ಪ್ರಾಣವನ್ನು ತೊರೆದೆಯಲ್ಲ | ಪಾವಮಾನಿಯಿಂದ ||
ಕಾಣುವೆ ನಾನಿನ್ನೆಂದಿಗೆ | ನಿನ್ನ ನಕಟಕಟ ||
ಕೌಣಪಾಗ್ರಗಣ್ಯ ಗತಿ | ಯಾವುದೆನಗೆ ಹೇಳು ||228||
ದುಷ್ಟ ರಾವಣೇಂದ್ರನಾ ಮಿ | ತ್ರತ್ವದಿಂದ ಕಡೆಗೆ ||
ಕಷ್ಟವೇ ಕಾರಣವಾದು | ದಿಷ್ಟವಿಲ್ಲವೆಮಗೆ ||
ದುಷ್ಟ ಮಂತ್ರಿಗಳು ಕೂಡಿ | ಸೃಷ್ಟಿಯ ಪ್ರಾಣಜಗೆ ||
ಶ್ರೇಷ್ಠ ನಿನ್ನ ಬಲಿಯ ಕೊಟ್ಟ | ರೆಷ್ಟೆಂಬೆ ನಾನಿದಕೆ ||229||
ಭುಜಬಲಪರಾಕ್ರಮಗಳೆಲ್ಲ | ತ್ಯಜಿಸಿ ದೂರ ಹೋಯ್ತೆ ||
ರಜತಾಚಲನಿವಾಸನೊಲವು | ಗಜಬಜವಿಂದಾಯ್ತೆ ||
ಅಜನಿತ್ತಿರುವ ವರದ ಬಲದಿ | ವಿಜಯಗೆಯ್ಯದಿಲ್ಲಿ ||
ನಿಜವಾಗಿ ನೀ ಮಡಿದೆಯಲ್ಲ | ರಜನೀವೇಳ್ಯದಲ್ಲಿ ||230||
ಕಂದ
ಈ ಪರಿಯಿಂದಲಿ ಸಂಧ್ಯೆ ಪ್ರ |
ಲಾಪಿಸುತಿರ್ಪುದನು ಕಂಡು ಮಾರುತಪುತ್ರಂ ||
ಕೋಪವನಡಗಿಸಿ ಧೈರ್ಯವ |
ತಾ ಪೇಳಿದನಾಗ ರಾಕ್ಷಸೇಂದ್ರನ ಸತಿಗಂ ||231||
ಭಾಮಿನಿ
ಮರುಗಲೇನ್ ಕಾರಣವು ಮಾನಿನಿ |
ದುರುಳತನದಿಂ ಖಳನಿವನು ಭೂ |
ವರರ ವಂಚಿಸಿ ತಂದ ದೋಷವು ತಟ್ಟಿತಿಂದಿನಲಿ ||
ಮರೆಯದೀ ದುರುದುಂಡಿಯಾತ್ಮಜ |
ಗಿರದೆ ದೊರೆತನವಿತ್ತು ಪಾಲಿಸಿ |
ಪೊರೆವುದತಿ ಲೇಸೆನುತ ಸಂತವಿಸಿದನು ಮಾನಿನಿಯ ||232||
ದ್ವಿಪದಿ
ಆ ಸಮಯದೊಳಗೆ ದುರುದುಂಡಿಯಾತ್ಮಜನ |
ತೋಷದಿಂ ಮರುತ ಭವ ಕರೆಸಿಕೊಂಡವನ ||233||
ಪುರದಾಧಿಪತ್ಯಗಳನಿತ್ತು ರಘುವರರ |
ಕರೆತಂದ ನಿಜ ವಾಹಿನಿಗೆ ಸಮರಧೀರ ||234||
ಎನಿತು ಸಾಹಸಿಯೊ ಪೊಗಳುವಡರಿದು ಅವರ |
ಹನುಮನೆಚ್ಚರದಂತೆ ತರಲು ತರುಚರರ ||235||
ಮೊತ್ತದೊಳಗೆಲ್ಲ ತವತವಗೆ ನಲಿದಾಡೆ |
ಅತ್ತಲಜಭವ ಸುರಾದಿಗಳು ಕೊಂಡಾಡೆ || ||236||
ಈ ರಾತ್ರಿಯೊಳು ಮೋಸವಾದ ಕಜ್ಜವನು |
ಯಾರರಿಯದಂತೋರ್ವನೆಸಗಿದುದಕಿನ್ನು ||237||
ಪೊಗಳಲೆಮ್ಮಳವಲ್ಲವೆನುತ ರವಿಜಾತ |
ಸುಗುಣಜಾಂಬವ ಮುಖ್ಯರಾದ ಕಪಿವ್ರಾತ ||238||
ತರತರದಿ ನುತಿಸುತಿರಲನಿತರೊಳಗಿತ್ತಾ |
ಧರಣಿಜಾತೆಯಶೋಕವನದಿ ಮರುಗುತ್ತ ||239||
ಪತಿಯ ನೆನೆನೆನೆದು ಸರಮೆಯ ಕರೆುತಾಗ |
ಅತಿಶಯದೊಳವಳೊಡನೆ ಪೇಳ್ದಳತಿಬೇಗ ||240||
ರಾಗ ಸಾಂಗತ್ಯ ರೂಪಕತಾಳ
ಕೇಳಿದೆಯೇನೇ ಕಾಮಿನಿರನ್ನೆ ನೀನೊಂದ
ಕೇಳದ ವತ್ತಾಂತಗಳನು ||
ಕೇಳಿನಕುಲದರಸಗೆ ಬಂದ ಬವಣೆಯ |
ಪೇಳುವೆ ನಿನಗೆ ನಾನವ್ವ || ||241||
ಕಣ್ಣಿಗೆ ನಿದ್ರೆ ಬಾರದೆ ಕಾಂತನನು ನೆನೆ |
ದೆಣ್ಣಿಸುತೀ ರಾತ್ರೆಯಲ್ಲಿ ||
ಕನ್ನೆನಾನೊರಗಿರಲೆನ್ನ ಕಾವಲಿಗಿರ್ದ |
ಭಿನ್ನ ತಂತ್ರದ ರಕ್ಕಸಿಯರು ||242||
ತಮ್ಮ ತಮ್ಮೊಳು ಮಾತನಾಡುತಿರ್ದರುಮೆನ |
ಗೊಮ್ಮೊಮ್ಮೆ ನಾ ಕೇಳದಂತೆ ||
ಅಮ್ಮ ನಾನದ ಕಿವಿಗೊಟ್ಟಾಲಿಸಿದೆ ಕಾಣೆ |
ಒಮ್ಮನದಲಿ ಸುಪ್ರವೀಣೆ || ||243||
ಶ್ರೀರಾಮಚಂದ್ರ ಲಕ್ಷ್ಮಣದೇವನನು ಸಹ |
ಈ ರಾತ್ರಿಯೊಳು ಖಳನೋರ್ವ ||
ಆ ರಾವಣನ ನೇಮದಿಂದಯ್ದಿ ಕಪಟದಿಂ |
ದಾರರಿಯದ ತೆರದಲ್ಲಿ || ||244||
ಪಾತಾಳಕೊಯ್ದು ನಿರ್ಬಂಧಿಸಿ ಸೆರೆಯೊಳು |
ತಾ ತಳುವದೆ ಇಟ್ಟನಂತೆ ||
ಮಾತಿದು ಪುಸಿಯಲ್ಲವಂತೆ ಮಾನಿನಿರನ್ನೆ |
ಈ ತೆರನಾದ ಮೇಲಿನ್ನು || ||245||
ಎನಗಾದ ಪರಿಯೆನ್ನ ಮನದನ್ನಗಾಯಿತಿ |
ನ್ನನುಮಾನವೇತಕೆ ದೇಹ ||
ವನು ಇಟ್ಟು ಬಾಳಿದರೇನು ಭೂತಳದಲ್ಲಿ |
ವನಜಾಕ್ಷಿ ಗತಿಯೇನೆ ಮುಂದೆ ||246||
ಕಂದ
ಇಂತೆನೆ ಸೀತಾಮಾನಿನಿ |
ಸಂತವಿಸುತಾಕ್ಷಣದಿ ಪೇಳ್ದಳಾಶರಮೆಯು ||
ಚಿಂತಿಪುದ್ಯಾತಕೆ ಈ ವ |
ತ್ತಾಂತವ ನಾನುಸಿರುವೆ ಲಾಲಿಸು ವಿನಯದೊಳಂ ||247||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅಮ್ಮ ಕೇಳ್ ಪಾತಾಳದೊಳಗಿಂ |
ದೆಮ್ಮ ರಾವಣಗಾಪ್ತನೆನಿಸುವ |
ಕರ್ಮಿ ಮೈರಾವಣನು ಬಂದು ಸು | ಧಾರ್ಮಿಕರನು ||248||
ದಶಶಿರನನೇಮದೊಳಗೊಯ್ದನು |
ಪುಸಿಯ ಮಾತಲ್ಲದನು ನಿಮಗಾ |
ನುಸಿರಲಾರದೆ ಸುಮ್ಮನಿರ್ದೆನು | ಬಿಸರುಹಾಕ್ಷಿ ||249||
ಬಂದುದೆಲ್ಲವನನುಭವಿಸಬೇ |
ಕಿಂದಳಲಲೇನಹುದು ದೇವರಿ |
ಗೆಂದಿಗಾದರು ಮೋಸವುಂಟೇ | ಕುಂದರದನೆ ||250||
ಸರಮೆ ಈ ಪರಿಯಿಂದುಸಿರೆ ಮನ |
ಕರಗಿ ಜಾನಕಿ ಮೂರ್ಛೆಯಲಿ ಮೈ |
ಮರೆದು ಮತ್ತೆಚ್ಚರ್ತು ಪೇಳ್ದಳು | ತರುಣಿಯೊಡನೆ ||251||
ರಾಗ ಆನಂದಭೈರವಿ ರೂಪಕತಾಳ
ಏನ ಮಾಡಲಿ ಕಾಂತೆ | ಇಂದೆನ್ನ ಸುಪ್ರೀತೆ |
ಮಾನಿನಿ ಮಣಿ ಗತಿ ಎನಗಿ | ನ್ನೇನುಸಿರದೆ ನೀನು || ಏನ || ||ಪಲ್ಲವಿ||
ನಾನೊಂದೆಣಿಸಲು ದೈವವು | ತಾನೆರಡೆಣಿಸುವುದೆಲ್ಲವು |
ಭಾನುಕುಲಾಂಬುಧಿಚಂದ್ರರಿ | ಗೂಣಯವಡಸುವರೆ ||
ನಾನಾದಿನ ಮತ್ಯುವ ಮುಂ | ಗಾಣದೆ ಒಡ್ಡಿದಕಿನ್ನೀ |
ಪ್ರಾಣವ ತೊರೆವುದೆ ಸಫಲವು | ಏಣಾಕ್ಷಿಯೆ ಕೇಳೆ || ಏನ ||252||
ನೀ ತಿಳಿದೆನ್ನೊಡನೀ ಸಲ | ಮಾತಾಡದೆ ವಂಚಿಸುವರೆ |
ಮಾತೆಯ ಸರಿ ನೀನೆನುತತಿ | ಪ್ರೀತಿಯೊಳ್ ನಂಬಿರಲು ||
ಏತಕೆ ನಿರ್ದಯಗೆಯ್ದೆ ನಿ | ಮ್ಮಾತಗಳೇನ್ ಕೋಪಿಸಿದರೊ |
ಪಾತಾಳದೊಳೇನಾಗಿಹ | ರೋ ತನ್ನ ವರ್ಗೀವಿಧಿಯೆ || ಏನ ||253||
ತರಣಿಜನಾಂಗದ ಜಾಂಬವ | ರುರು ಶತಬಲಿ ಕಪಿನಾಯಕ |
ರಿರಲಿಲ್ಲವೆ ರಣದೊಳಗಿಂ | ದಿರುಳಿನೊಳವರೆಲ್ಲ ||
ಮರುತಾತ್ಮಜ ನಾ ವೇಳ್ಯದಿ | ತೆರಳಿದನಿನ್ನಾವಲ್ಲಿಗೆ |
ಹರ ಹರ ಗ್ರಹಗತಿ ಬಂದಡ | ಸಿರಲಾರಿಂದೇನು || ಏನ ||254||
ವಚನ
ಈ ಪ್ರಕಾರದಿಂ ಧರಣಿಜಾತೆ ಪ್ರಳಾಪಿಸುತ್ತಿರಲಾ ವೇಳ್ಯದೊಳ್ ಸರಮೆ ಸಂತವಿಟ್ಟಳದೆಂತೆನೆ –
ರಾಗ ಶಂಕರಾಭರಣ ಅಷ್ಟತಾಳ
ಬೇಡವೆ | ಭಾವಕಿರನ್ನೆ ಚಿಂತಿಸ | ಬೇಡವೆ ||ಪ||
ಬೇಡವೆ ಬಾಲೆ ಸುಶೀಲೆ ನೀ ಲಾಲಿಸು |
ಆಡುವ ಮಾತನು ಗಾಢದಿ ಗುಣಶೀಲೆ || ಬೇಡವೆ || ||ಅ.ಪ.||
ಸುಮ್ಮನೆ ಬಳಲಲ್ಯಾಕಮ್ಮ | ದೇವಿ |
ನಿಮ್ಮರಸನನಿಂದು ಹನುಮ | ತಂದ |
ನೊಮ್ಮೆಗೀ ರಾತ್ರಿಯೊಳಮ್ಮ | ಈಗ |
ಹಮ್ಮಿನುತ್ತರವ ಪೇಳುಮ್ಮಳಿಸುವದ್ಯಾಕೆ |
ಸನ್ಮತವಲ್ಲ ಸದ್ಧರ್ಮವಂತೆಯೆ ಚಿಂತೆ || ಬೇಡವೆ ||255||
ಪಾತಾಳದೊಳಗಿರ್ದ ಖಳನಾ | ವಾಯು |
ಜಾತ ತಾ ಕೊಂದು ಮತ್ತವನಾ | ಯಮ |
ದೂತರ ಕೈಗಿತ್ತು ನಪನಾ | ಸಹ |
ಜಾತ ಸಮೇತ | ಮೈದಿದನನುಮಾನ |
ಮೇತರದುಸಿರಿನ್ನೀ ಮಾತೀಗ ಸಹಜವು || ಬೇಡವೆ ||256||
ತರುಚರರೊಳು ಮುಖ್ಯಪ್ರಾಣ | ಬಲು |
ತರಪರಾಕ್ರಮಿಯಲ್ಲೌ ಜಾಣ | ಇದಿ |
ರ್ಬರುವ ರಿಪುಗಳುಂಟೆ ಕಾಣೌ | ಧುರಂ |
ಧರ ವಿಜಯರು ಸಂ | ಗರಕಾಲಭೈರವ |
ನಿರಲಪ ಜಯವು ತಾ | ದೊರೆವುದೆ ದುಗುಡವು || ಬೇಡವೆ ||257||
ಭಾಮಿನಿ
ಸರಮೆ ತಾನೀ ತೆರದಿ ಸೀತಾ |
ತರುಣಿಯನು ಸಂತಯಿಸುತಿರೆ ಭಾ |
ಸ್ಕರನು ಪೂರ್ವಾದ್ರಿಯೊಳಗನಿತರೊಳುದಿಸಲಾ ಕ್ಷಣದಿ ||
ಹರಿಬಲದೊಳಾರ್ಭಟೆಯು ಮೊಳಗ |
ಲ್ಕಿರದೆ ಕೇಳುತ ಧರಣಿಸುತೆ ಬಳಿ |
ಕುರುತರೋತ್ಸಹ ದಿಂದಲಿರ್ದಳು ನೆನೆದು ರಾಘವನ ||258||
ರಾಗ ಭೈರವಿ ಝಂಪೆತಾಳ
ಅನಿತರೊಳಗಿತ್ತಾಲಾ | ತರುಚರರ ವಾಹಿನಿಯೊ |
ಳಿನ ಕುಲಾಂಬುಧಿ ಚಂದ್ರ | ನನುವಿನಿಂದಾಗ ||259||
ಬಳಿಕ ಎಚ್ಚರ್ತೆದ್ದು | ತಳುವದಲೆ ಸಂಭ್ರಮದಿ |
ಗೆಲವಿಂದ ನಿತ್ಯವಿಧಿ | ಗಳನು ಪೂರೈಸಿ ||260||
ತರಣಿಜಾದ್ಯರ ಕರೆದು | ಕರುಣದಿಂ ಕೇಳ್ದ ದಶ |
ಶಿರನ ವಧೆಗೇನ ಕಂ | ಡಿರಿ ಮಾರ್ಗವಿಂದು ||261||
ದಿನಗಳೆವುದಾಯ್ತು ಭೂ| ವನಿತೆಯೇನಾಗಿಹಳೊ
ದನುಜನುರುಬೆಗಳಿನ್ನು| ಘನವಾಯಿತಲ್ಲ||262||
ಇಂತೆನಲು ರಾಘವಗೆ | ನಿಂತು ಕರಗಳ ಮುಗಿದು |
ಸಂತಸದಿ ಭಾನುಸುತ | ನಿಂತೆಂದನಾಗ ||263||
ರಾಗ ಧನಶ್ರೀ ಏಕತಾಳ
ಸ್ವಾಮಿ ಲಾಲಿಸಿ ಕೇಳೆನ್ನ ಮಾತ |
ಭೀಮವಿಕ್ರಮ ಭುಜಬಲದಿ ಪ್ರಖ್ಯಾತ || ಸ್ವಾಮಿ || ||ಪಲ್ಲವಿ||
ದರುಳ ರಾವಣ ನಿಮ್ಮ | ಶರಕಾನಲಾಪನೆ |
ಮರೆಯ ಮಾತಲ್ಲ ವಿ | ನ್ನೊರೆವೆವು ವಿನಯದಿ || ಸ್ವಾಮಿ ||264||
ಮಾರುತಾತ್ಮಜನಿರ | ಲೀ ರಾಕ್ಷಸರ ಭಯ |
ದೋರದೆಮಗೆ ಭೂಮಿ | ಜಾರಮಣ ಪ್ರವೀಣ || ಸ್ವಾಮಿ ||265||
ಈ ದಶಕಂಠನು | ಪೋದಿರುಳಲಿ ದುಷ್ಟ |
ನಾದ ಮೈರಾವಣ | ಗಾದರಿಸುತಲೀಗ || ಸ್ವಾಮಿ ||266||
ಕಳುಹಲಾಕ್ಷಣಕವ | ಖಳ ವಿಭೀಷಣನಂತೆ |
ಒಳಹೊಕ್ಕು ನಿಮ್ಮನು | ಕಳವಿನೊಳೊಯ್ದನು || ಸ್ವಾಮಿ ||267||
ಪಾತಾಳಲಂಕೆಗೆ | ತಾ ತಳುವದೆ ಒಯ್ದ |
ಕೋತಿಗಳೆಲ್ಲ ನಿ | ಶ್ಚೈತನ್ಯರಾದರು || ಸ್ವಾಮಿ ||268||
ಆ ಸಮಯದೊಳಲ್ಲಿ | ಗಾಶುಗನಾತ್ಮಜ |
ಬೇಸರದಯ್ದಿ ಮ | ತ್ತಾಸುರನನು ಕೊಂದ || ಸ್ವಾಮಿ ||269||
ಕಂದ
ಬಳಿಕವನನುಜೆಯ ಕುವರಂ |
ಗೊಲವಿಂದಾ ರಾಜ್ಯವಿತ್ತು ನಿಮ್ಮಂನಮ್ಮೀ ||
ಬಲಕಂ ತಂದಿಹನೀ ದಿನ |
ಬಲ ಪೌರುಷಮೆಂತು ಮಾರುತಾತ್ಮಜಗೆಂದರ್ ||270||
ರಾಗ ಭೈರವಿ ಝಂಪೆತಾಳ
ಎಂದ ಮಾತನು ರಾಮ | ಚಂದ್ರನಾಲಿಸುತಾಗ |
ಲಂದು ಮರುತ ಜನನಾ | ನಂದದಿಂದಪ್ಪಿ ||271||
ಇವನ ಸಹವಾಸಮಿಂ | ತೆವಗಿಲ್ಲದಿರೆ ಕಾರ್ಯ |
ಭುವನದೊಳಗೆಂತಪ್ಪು | ದವಿಳಂಬದಿಂದ ||272||
ಎಂದೆನುತ ಪೊಗಳಿ ಭೂ | ನಂದನೆಯ ರಮಣನಲ |
ವಿಂದ ತೋಷದೊಳು ರಣ | ಮಂದಿರದೊಳಿರ್ದ ||273||
ಭಾಮಿನಿ
ಪರಿಪರಿಯೊಳಾ ಸೂತನಾ ಮುನಿ |
ವರರಿಗೀ ಚಾರಿತ್ರವನು ವಿ |
ಸ್ತರದೊಳೊರೆಯಲು ಕೇಳಿ ಬಳಿಕವರೆಂದರೊಲವಿನಲಿ ||
ಕರುಣನಿಧಿ ನೀನಾಲಿಸೈ ರಘು |
ವರನು ಮುಂದೇನ್ ಗೆಯ್ದನೆಂಬುದ |
ನೊರೆಯಬೇಕೆನೆ ಸೂತ ಭಕ್ತಿಯೊಳೆಂದನೆಲ್ಲರಿಗೆ ||274||
ರಾಗ ಸೌರಾಷ್ಟ್ರ ತ್ರಿವುಡೆತಾಳ
ದಶಶಿರನು ಮೈರಾವಣಾಖ್ಯನ |
ಒಸಗೆಯನು ತಾ ಕೇಳಿ ಬಂದಾ |
ಬಿಸರುಹಾಂಬಕನಿದಿರಿನೊಳು ನಿಂ | ದಸಮಬಲವ ||275||
ನೆರಹಿ ಯುದ್ಧವ ಮಾಡಿ ರಾಘವ |
ನುರತರಾಸ್ತ್ರಗಳಿಂದವನ ಶಿರ |
ವರಿದು ತದ್ಭಲವೆಲ್ಲವನು ಸಂ | ಹರಿಸಿ ಮುದದಿ ||276||
ತೋಷದಿಂದೊಲಿದಂದು ಶರಣ ವಿ |
ಭೀಷಣಗೆ ಲಂಕಾಧಿಪತ್ಯವ |
ಕೀಶರೀಕ್ಷಿಸುವಂತೆ ಕರುಣಿಸಿ | ಭೂಸುತೆಯನು ||277||
ಕರೆಸಿ ಬಳಿಕೊಡಗೊಂಡು ಧನಪನ |
ವರಮಹಾಪುಷ್ಪಕವನೇರ್ದಾ |
ತರುಚರರ ಬಲ ಸಹಿತ ಭೂಮಿ | ಶ್ವರಲಲಾಮ ||278||
ರಾಜಿಸುತ ನಡೆತಂದು ಭಾರ |
ದ್ವಾಜಮುನಿಪನ ಕಂಡು ಕರುಣದಿ |
ರಾಜತೇಜದೊಳೈದಿ ರವಿಕುಲ | ರಾಜನಂದು ||279||
ವಾರ್ಧಕ
ಭರತ ಶತ್ರುಘ್ನರಂ ಕಾಯ್ದುಮಾನಂದದಿಂ |
ವರಮಾತೆಯರ್ಮೂವರಂಘ್ರಿಗಂ ಮಣಿದು ಮಾ |
ಪುರಜನರು ಪರಿಜನರನೆಲ್ಲರಂ ಮನ್ನಿಸುತ ಯೋಧ್ಯಪುರಕಯ್ದಿ ಬಳಿಕಾ ||
ಸರಸಿಜೋದ್ಭವ ಮುಖ್ಯ ದಿವಿಜತತಿ ಸಂಸ್ತುತಿಸು |
ತಿರೆ ರಾಮಚಂದ್ರಗಂ ಪಟ್ಟಾಭಿಷೇಚನವ |
ಭರದಿಂದ ರಚಿಸಿದರ್ ಗುರುವಸಿಷ್ಠಾದಿಗಳ್ ಶುಭದಿಂದ ಸುಮೂರ್ಹದಿ ||280||
ಕಂದ
ಆ ಸಮಯದೊಳಾ ರಾಮಂ |
ತೋಷಾನ್ವಿತನಾಗಿ ಸಕಲರಂ ಮನ್ನಿಸುತಂ ||
ಕೀಶವ್ರಾತವ ಕಳುಹಿಸಿ |
ಪೋಷಿಸಿದಂ ಧರೆಯ ಜನರನತಿ ಧರ್ಮದೊಳಂ ||281||
ರಾಗ ಮಾರವಿ ಝಂಪೆತಾಳ
ಹೀಗೆಂದು ಸೂತಾಖ್ಯ | ನಾಗ ಮುನಿಗಳಿಗರುಹಿ |
ರಾಘವನ ನೆನೆ ನೆನೆದು | ಯೋಗಮಾರ್ಗದಲಿ ||282||
ನೈಮಿಷಾರಣ್ಯದೊಳು | ಕ್ಷೇಮದಿಂದಿರ್ದನೆಂ |
ಬೀ ಮಹಾಕಥೆಯನಿಂ | ದಾಮೋಹದಿಂದ ||283||
ಈ ವಸುಧೆಯಮರರೊಳು | ದ್ರಾವಿಡಕುಲಜನೆನಿಸು |
ವಾ ವೆಂಕಟನು ಪೆತ್ತ | ಪಾವನಾತ್ಮಕನು ||284||
ವರಸುಬ್ಬನರಸಿಯಾ | ಗಿರುವ ಲಕ್ಷ್ಮಿಯು ಪೆತ್ತ |
ತರಳ ವೆಂಕಟನು ಸ | ದ್ಗುರು ಭಜನೆಯಿಂದ ||285||
ಸರಸಿಜೋದ್ಭವನಾಮ | ಪುರದ ಸುಬ್ರಹ್ಮಣ್ಯ |
ಗುರುಪದಕಟಾಕ್ಷದಿಂ | ಪರಮ ವೈಭವದಿ ||286||
ಲೋಕನಾಯಕಿಯಾದ | ಮೂಕಾಂಬಿಕೆಯ ಕಪೆಯೊ |
ಳೀ ಕಾವ್ಯವನ್ನು ನಿ | ರ್ವ್ಯಾಕುಲತೆಯಿಂದ ||287||
ಯಕ್ಷಗಾನದೊಳಿದರ | ನೀಕ್ಷಿತಿಗೆ ತಿಳುಹಿದೆನು |
ಪೇಕ್ಷಿಸದೆ ಬರದೋದೆ | ರಕ್ಷಿಸುವ ರಾಮ ||288||
ಕಂದ
ಇಂತೀ ಕಥೆಯಂ ಭಕ್ತಿಯೊ |
ಳುಂ ತಳುವದೆ ಹೇಳಿ ಕೇಳಿದವರಂ ಸೀತಾ ||
ಕಾಂತಂಪಾಲಿಪನನುದಿನ |
ಸಂತೋಷಗಳಿಂದ ದೊರೆವುದಿಹಪರ ಸುಖಮುಂ ||
ಮಂಗಲ
ರಾಗ ಆಹೇರಿ ಏಕತಾಳ
ಮಂಗಲಂ | ಶುಭ | ಮಂಗಲಂ ||ಪ||
ಜಯ ಜಯ ಸೀತಾರಾಮನಿಗೆ |
ಜಯ ಜಯ ಸಾಕೇತಾಧಿಪಗೆ ||
ಜಯ ಜಯ ಪರಿಪೂರ್ಣಾತ್ಮಕನೆನಿಪಗೆ |
ಜಯ ಜಯ ನಾಥರ ನಾಥನಿಗೆ || ಮಂಗಲಂ ||289||
ಸಂಗರಶೂರಗೆ ಶುಭಕರಗೆ |
ತುಂಗಪರಾಕ್ರಮಿ ಧೀರನಿಗೆ ||
ಹಿಂಗದೆ ಮರುತಜಗೊಲಿದಗೆ ಭಕ್ತಾಂತ |
ರಂಗಗೆ ಶ್ರೀರಘುರಾಮನಿಗೆ || ಮಂಗಲಂ ||290||
ಅಂಜನೆಯಣುಗಗೆ ಅನುಪಮಗೆ |
ಭಂಜಿಸಿ ದನುಜರ ಮಡುಹಿದಗೆ ||
ಸಂಜೀವಗೆ ಸರ್ವಾಂತರ್ಯಾಮಿಗೆ |
ಕಂಜನಾಭನ ಪದಸೇವಕಗೆ || ಮಂಗಲಂ ||291||
ರಾಗ ಢವಾರಳ ತ್ರಿವುಡೆತಾಳ
ದೇವಿಗೆ ದಾಕ್ಷಾಯಣಿಗೆ ಕ |
ಪಾವಲಂಬೆಗೆ ಪರಶಿವೆಗೆ |
ಭಾವಜಾಂತಕನರ್ಧಾಂಗಿಗೆ ಭಾವೆಗೆ
ಪಾವನಕಾರಿಗೆ ಪೂರ್ಣೋಲ್ಲಾಸೆಗೆ |
ಕೋವಿದೆಯರು ಕಡು ಸೊಬಗಿನಿಂ ಶೋಭಿಪ |
ತಾವರೆಯಾರತಿಯ ಬೆಳಗಿರೆ || ಶೋಭಾನೆ ||292||
ಬಾಲಕುರಂಗಲೋಚನೆಗೆ ಸುಗು |
ಣಾಲವಾಲೆ ಸುಂದರಿಗೆ |
ನೀಲಾಳಕಿಗೆ ನಿರ್ಮಲಚಿತ್ತಳಿಗೆ |
ಪಾಲಾಂಬಕಿಗೆ ಪಾಲಿತ ಸುರನುತೆಗೆ |
ಮೂಲೋಕಾರ್ಚಿತೆಗೊಲಿದಪ್ಸರೆಯರು |
ನೀಲದಾರತಿಯ ಬೆಳಗಿರೆ || ಶೋಭಾನೆ ||293||
ವರ ಕೊಲ್ಲಾಪುರಧೀಶ್ವರಿಗೆ ಸ |
ದ್ಗುರುವಮರೇಂದ್ರಾತ್ಮಕಿಗೆ |
ತರಳವೆಂಕಟಹತ್ಸರಸಿಜವಾಸೆಗೆ |
ವರದೆಗೆ ವಾಗೀಶ್ವರಿಗೆ ಮೂಕಾಂಬೆಗೆ |
ವರಕರಿಗಮನೆಯರು ಪಾಡುತ |
ಕುರುಜಿನಾರತಿಯ ಬೆಳಗಿರೆ || ಶೋಭಾನೆ ||294||
ರಾಗ ಮಧ್ಯಮಾವತಿ ಆದಿತಾಳ
ಅಂಜನೆಯಣುಗಗೆ ಮಂಗಲ | ರಿಪು |
ಕುಂಜರಪಂಚಾಸ್ಯಗೆ ಮಂಗಲ || || ಪಲ್ಲವಿ ||
ರಘುವರಪದಕಮಲೇಂದಿರನಿಗೆ |
ಜಗದಾರಾಧ್ಯಗೆ ಜಿತಕಾಮನಿಗೆ ||
ಖಗರಾಜೋಪಮಗಮನಗೆ ಹರಿಕುಲಜಗೆ ||295||
ದನುಜಕುಲಾಂಬುಧಿವಡಬಾನಲನಿಗೆ |
ದಿನಕರಶತಕೋಟಿಭಾಸುರನಿಗೆ |
ಪ್ರಣವಸ್ವರೂಪನಿಗೆ ಚಿನುಮಯಾತ್ಮಕನಿಗೆ ||296||
ವರಮಹಾಲಿಂಗದಪುರನಿಲಯಗೆ ಶ್ರೀ |
ಗುರುವಮರೇಂದ್ರಸ್ವರೂಪನಿಗೆ ||
ಧುರವಿಜಯನಿಗೆ ಮೂಕಾಸುರಮರ್ದಿನಿಯಾದ |
ಪರಶಿವೆಯರಸನಂಶೀಭೂತನಿೆ ||297||
ಯಕ್ಷಗನ ಮೈರಾವಣಕಾಳಗವು ಮುಗಿದುದು
Leave A Comment