ರಾಗ ನಾದನಾಮಕ್ರಿಯೆ ಅಷ್ಟತಾಳ

ತಡೆಯುವುದೇತಕೋ ನೀನೆನ್ನ | ನಿನ್ನ |
ಪಡೆದವರ್ಯಾರು ಪೇಳೆಲೊ ಮುನ್ನ ||
ಬಿಡು ಬಿಡು ದಾರಿಯ ಸುಮ್ಮನೆ | ಅತ್ತ |
ನಡೆ ನಡೆ ನಿಲ್ಲದೆ ಘಮ್ಮನೆ ||123||

ಏತಕೆ ನೀನೆನ್ನ ಜನನವ | ಕೇಳ್ವ |
ರೀತಿಯದೇನು ನೀನಾರವ ||
ಮಾತಾಡೆ ಕೊಲ್ಲುವೆನೆಂದನು | ಮತ್ಸ್ಯ |
ಜಾತ ವಾನರನುರೋಷದಿ ತಾನು ||124||

ಕೊಂದೇನೆಂದರೆ ನಿನ್ನನೆನಗಿಂದು | ಕಪೆ |
ಹೊಂದಿದೆ ಮನ್ಮನದಲಿ ಬಂದು ||
ಇಂದು ಪಥವನೀಯಲ್ ಬಿಡುವೆನು | ಇಂ |
ತೆಂದು ಹನುಮನೆನಲೆಂದನು ||125||

ಪಥವನೀವೆನು ನಿನಗರ್ಯಮಾ | ಸುತ |
ನತಿಶಯದೂರಿಗೆ ವಿಕ್ರಮಾ ||
ಗತಿಗೊಂಡು ಪೋಗುವುದೇಳೆಲಾ | ನಿಲ್ಲು |
ಮತಿಗೆಡಬೇಡ ನೀ ತಾಳೆಲಾ ||126||

ಕಲಹಕೆ ಬಂದವನಲ್ಲಯ್ಯ | ನಿನ್ನ |
ನೆಲೆಯ ಪೇಳಿದರೆ ಕೇಳ್ವೆನೆಲ್ಲಯ್ಯ ||
ಛಲವೇತಕೆನೆ ಹನುಮಗೆಂದನು | ಝಷ |
ಕುಲಜ ತನ್ನಯ ವತ್ತಾಂತಗಳನು ||127||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಲಾಲಿಪುದು ಬಳಿಕಾದಡೆಯು ನೀ |
ಕೇಳಿ ಬಲ್ಲೆಯ ವಾಯುಪುತ್ರನ |
ಬಾಲತನದೊಳಗಿನನ ತುಡುಕಿದ | ಲೀಲೆಯವನ ||128||

ಆ ಮಹಿಮನುರು ಪುತ್ರ ತಾನಿಂ |
ತೀಮಹಿಯೊಳಿನಿತ್ಯಾತಕಿಹೆಯೆನೆ |
ಪ್ರೇಮದಿಂದರುಹುವೆನು ನಿನ್ನೊಳು | ನೇಮದಿಂದ ||129||

ತರಣಿಜನ ತಾ ಋಷ್ಯಮೂಕದ |
ಗಿರಿಯೊಳಿರಲಾ ತಾಣಕೊಲಿದುರೆ |
ವರ ಮಹಾ ಶ್ರೀರಾಮಚಂದ್ರನು | ಭರದೊಳಂದು ||130||

ಅನುಜ ಸಹ ನಡೆತಂದಿಹನು ಗಡ |
ಘನಮಹಿಮ ತಾ ವಿಷ್ಣುಗಡ ಭೂ |
ವನಿತೆ ರಮೆ ಗಡ ದುಷ್ಟರನು ತಾ | ಹನನಗೊಳಿಸೆ ||131||

ದಶರಥಾಖ್ಯನ ಸತಿಯ  ಬಸಿರಿಂ |
ರಸೆಯೊಳಗೆ ಜನಿಸಿರ್ಪ ಗಡ ಕೇಳ್ |
ವಸಗೆಯನು ಮತ್ತೊಂದೆ ಮನವೊಲಿ | ದುಸಿರುತಿಹೆನು ||132||

ದ್ವಿಪದಿ

ನಿನ್ನಣುಗಗೀವೆನೆನೆ ಮಾನಿನಿಯು ಬಳಿಕ |
ಮನ್ನಣೆಯೊಳುಸಿರಿದಳು ಮಾರುತಿಯೊಳನಕ ||133||

ದ್ವಾರದಲಿ ಶೋಧಿಪರು ದುಷ್ಟ ರಕ್ಕಸರು |
ಮಾರುತಜನೀನೆಂತು ಬಹೆ ಸುಮ್ಮನಿರರು ||134||

ಎನಲಾಗ ಕೇಳ್ದಾಂಜನೇಯನು ನಗುತ್ತಾ |
ವನಿತೆಯೊಳು ಪೇಳಿದನು ಮುದವ ತಾಳುತ್ತ ||135||

ಕಂದ

ಪಂಚಾಣುರೂಪದಿಂದಂ |
ಕಾಂಚನಗಿರಿದಶನಾಗಬಲ್ಲೆನು ಬಳಿಕಂ ||
ನೀಂ ಚಲಿಸದೆ  ಬೇಗೆನ್ನಯ |
ವಾಂಛಿತಮಂ ಸಲಿಸುವುದೆನಲವಳಿಂತೆಂದಳ್ ||136||

ರಾಗ ನವರೋಜು ಆದಿತಾಳ

ವಾಯುಜಾತನೆ ಕೇಳು | ಸು | ಪ್ರೀಯದಿಂ ಕರುಣಾಳು ||
ಆಯತದಿಂ ಶುಭ | ಕಾಯವನಿಂದೀ |
ತೋಯಕಮಂಡಲ | ಬಾಯೊಳು ಪೊಗಿಸಲು ||137||

ಕರೆದೊಯ್ವೆ ನಾ ನಿನ್ನ | ದು | ಷ್ಟರು ಕಾಣದೋಲೆನ್ನ ||
ಪುರಕೆನೆ ಮಾರುತಿ | ಯಣುರೂಪಿಂದಾ |
ತರುಣಿಯ ಪೊಗಳುತ | ಚ್ಚರಿಯೊಳೀಕ್ಷಿಸುತ ||  ||138||

ಅಂಬುಜಾಕ್ಷಿಯ ಕಯ್ಯ | ಸ್ವರ್ಣ |
ಕುಂಭವ ಪೊಗಲು ಕಪಿಯ ||
ಅಂಬರವಾಸಿಗಳ್ | ಪೊಗಳಿದರಾ ಮಹ |
ಶಂಭು ಸಂತೋಷದಿ | ಬೆರಗುವಟ್ಟಿರ್ದನು ||139||

ಭಾಮಿನಿ

ದಢಮನದಿ ನೀವ್ ಕೇಳಿರೈ ಜತಿ |
ಗಡಣಮಾನಂದದಲಿ ಮರುತಜ |
ನಡಗಿರಲು ರಕ್ಕಸಿಯು ಪೊತ್ತಿಹ ಕೊಡದೊಳಾಗಸುರೆ ||
ನಡೆತರಲು ದ್ವಾರದಲಿ ದನುಜರು |
ಕೊಡನ ತೂಗಲ್ಕೊಲೆದುದಾ ತ |
ಕ್ಕಡಿಯು ತುಸುಮಾತ್ರದಲಿ ಕಾಣುತ ಘರ್ಜಿಸುತ ಖಳರು ||140||

ಕಂದ

ಶೋಧಿಸಿ ಬೀಳ್ಗೊಡಲಾ ಸತಿ |
ಯಾದರದಿಂದಾಂಜನೇಯನನ್ನೊಲಿದಂದುಂ ||
ಮೋದದಿ ಪುರಮಂ ಪೊಗಿಸ |
ಲ್ಕಾದುದು ಶುಭಶಕುನಮಾಗಲಚ್ಚರಿಯಿಂದಂ ||141||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸತಿಯು ಸಂತಸದಿಂದಲಾ ಮಾ |
ರುತಿಯ ಪುರವರಕೊಯ್ಯಲಾಕ್ಷಣ |
ಮತಿಯುತನು ಘಟದಿಂದ ಪೊರಟಂ | ದತಿಶಯದೊಳು ||142||

ಕಂಡು ದುರುಳನ ಪುರವನಾ ದುರು |
ದುಂಡಿ ಸಹ ನಡೆತಂದು ಮಾರುತಿ |
ತಂಡ ತಂಡದ ಭಟರನೀಕ್ಷಿಸು | ತಂಡಲೆಯೊಳು | ||143||

ಆ ಸಮಯದೊಳಗೆಂದಳಾದನು |
ಜೇಶನನುಜೆಯು ಹನುಮ ಕೇಳೆನು |
ತಾಸೆಯಲಿ ಮನವೊಲಿದು ಪೂರ್ಣೋ | ಲ್ಲಾಸೆಯಾಗಿ ||144||

ತರಣಿಕುಲಜರನೀರ್ವರನು ಕೇಳ್ |
ಮರೆವುತಿಹ ಸೌರಮ್ಯ ಸೌಧದೊ |
ಳರಿಯದಂದದೊಳಿಟ್ಟಹಳು ನ | ಮ್ಮರಸನರಸಿ ||145||

ಮೊದಲವರ ಕೈವಶವ ಗೆಯ್ದಿ |
ನ್ನದರಮೇಲಾದುದನುಕಾಂಬುದು |
ಚದುರ ಲೇಸಾಗಿಹುದು ನೀನರಿ | ಯದುವದೇನು ||146||

ಕಂದ

ಎಂದಸುರೆಯ ವಚನವಮಾ |
ನಂದಗಳಿಂದಾಲಿಸುತ್ತೆ ಪವನಕುಮಾರಂ ||
ತಂದಾ ಭೂಮಿಪರೆಚ್ಚರ |
ದಂದದೊಳಂ ಮೋಸವಿಲ್ಲದೆಡೆಯೊಳಗಿಟ್ಟಂ ||147||

ರಾಗ ಪಂಚಾಗತಿ ಮಟ್ಟೆತಾಳ

ಬಳಿಕ ಮಹಾಬಲಕುಮಾರ | ನೊಲಿದು ತನುವ ಪೆರ್ಚಿಸುತ್ತ |
ಹಲವು ವಿಧಗಳಿಂದ ದನುಜ | ಕುಲವ ಸವರುತ ||
ನಲವಿನಿಂದ ಭೂತಗಣಕೆ | ಬಲಿಯ ಕೊಟ್ಟು ಭುಜಬಲಂಗ |
ಳೊಳಗೆ ಸಿಂಹನಾದದಿಂದ | ಲುಲಿಯಲಾ ಕ್ಷಣ ||148||

ದಧಿಮುಖಾಖ್ಯನೆಂಬ ದೈತ್ಯ | ನೊದರಿ ಬಂದು ವಾಯುಜಾತ |
ನಿದಿರೊಳಾರ್ಭಟಿಸುತ ನಿಂದ | ಮದಗಳಿಂದಲಿ ||
ಬಿದಿರುಕಾಯನೊಡನೆ ಪೇಳ್ದ | ನದುಭುತಂಗಳಿಂದ ಸುರರು |
ಬೆದರುವಂತೆ ಭಯವ ತೋರಿ | ವಿಧವಿಧಂಗಳ | ||149||

ಎತ್ತಣಿಂದ ಬಂದೆ ಕೀಶ | ನಿತ್ತ ನಮ್ಮ ಪಟ್ಟಣಕ್ಕೆ |
ತುತ್ತುಗೊಂಬೆ ನಿನ್ನನು ಈ | ಹೊತ್ತು ನೋಡೆಲಾ ||
ಮತ್ತೆ ಚಲಿಸಲ್ಯಾಕೆ ನಿಲ್ಲೆ | ನುತ್ತ ಮುಷ್ಟಿಯಿಂದಲವನು |
ನೆತ್ತಿಗೆರಗಲಾಗ ರೋಷ | ವೆತ್ತು ಪವನಜ ||  ||150||

ಪೇಳ್ದನೆಲವೊ ದಾನವ ನಿ | ನ್ನಾಳ್ದಗರುಹಿ ಬಂದೆಯಾದ |
ರೊಲ್ದು ಧೈರ್ಯದಿಂದ ನಿಲ್ಲು | ಕಾಲ್ದೆಗೆಯದೆ ||
ಬಾಳ್ದು ಪೋಪೆನೆಂದು ಮನದಿ | ತಾಳ್ದು ಮದವ ಬಗುಳಬೇಡ |
ಸಾಲ್ದಲೆಯನ ಭಂಗವನ್ನು | ಕೇಳ್ದುದಿಲ್ಲವೊ ||151||

ಈ ತೆರದೊಳುಸಿರ್ದ ರಾಮ | ದೂತನೊಡನೆ ದಧಿಮುಖ ಮ |
ಹಾತಿ ರೌದ್ರದಿಂದ ನುಡಿದ | ನಾತತೂಕ್ಷಣ ||
ಕೋತಿ ಕೇಳು ನಿನ್ನ ಬಲದ | ರೀತಿಯೆಲ್ಲ ಬಲ್ಲೆ ವಾಲ |
ಕೋತು ಉರಿಯನಿಟ್ಟನಸುರ | ನಾಥ ರಾವಣ ||152||

ಎನುತ ಮೂದಲಿಸಲು ಖಳನು | ಹನುಮನಯ್ದೆ ರೋಷ ಪೆರ್ಚಿ |
ತೊನದು ಶಿರವ ತವಕದಿಂದ | ಕಿನಿಸತಾಳುತ ||
ನೆನೆದು ರಾಘವನ ಸುಪದವ | ನನಿಮಿಷಾರಿಯುರಕೆ ತಿವಿಯೆ |
ದಿನಪಜಾತನವನಿಗಿತ್ತ | ಸನುಮತಿಗಳನು ||153||

ಕಂದ

ಈ ಚತುರತೆಯಂ ಕಂಡಾ |
ಸೂಚೀಮುಖನಯ್ದೆ ಬಂದು ಮಹಾತಿರೋಷದೊಳಂ ||
ತಾ ಚಲಿಸದೆ ನಿಂದೆಂದಂ |
ನೀಚತ್ವಂಗಳಿಮ್ಮನಿಲಜನೊಳಾಗಳ್ ||154||

ರಾಗ ಮಾರವಿ ಏಕತಾಳ

ಏನು ಕಪಿಯೆ ನ | ಮ್ಮೀ ನಗರಕೆ ಬರೆ |
ನೀನಾರವ ಬಲು | ದಾನವರನು ಸು  |
ಮ್ಮಾನದಿ ಕೊಂದವ | ಮಾನವಗೊಳಿಸಿದೆ |
ತಾನಾರೆಂದು ನೀ | ಧಾನಿಸಿ ನೋಡೈ | ಧೈರ್ಯವಾಂತು ||155||

ಎಂಸುರನ ಮನ | ದಂದವನೀಕ್ಷಿಸು |
ತಂದಾ ಕೇಸರಿ | ನಂದನನಾಡಿದ |
ನೊಂದನು ಸುಮನಸ | ವಂದ ಮೆಚ್ಚುವ ತೆರ |
ದಿಂದ ನಗುತಲಾ | ನಂದದೊಳಾಗ | ಖಾತಿಗೊಂಡು ||156||

ಹುಚ್ಚುಖಳನೆ ನೀ | ನೆಚ್ಚರಿಲ್ಲದೆ ಬಲು |
ರಚ್ಚಿಸಿ ಕಾದುತ | ಮಚ್ಛರಿಸುವದೇ |
ನುಚ್ಚುವೆ ಕರುಳ್ಗಳ | ನಚ್ಚರಿ ನೋಡಿ |
ನ್ನುಚ್ಚರಿಸದಿರೆನು | ತಚ್ಯುತದೂತ | ಗಾಢದಿಂದ ||157||

ತೋರಮರನ ಪಿಡಿ | ದಾರುಭಟೆಯೊಳಾ |
ಘೋರದನುಜನುರ | ಕೋರಂತಿಡಲದ |
ಗಾರುಗೆಡಿಸುತಲಿ | ಭೋರನೆ ತಡೆದಾ |
ಮಾರುತಜನ ಮೇ | ಲೇರಿ ಸೆಣಸಿದ | ನೇನನೆಂಬೆ ||158||

ಕಂಡಾಕ್ಷಣ ಮುಂ | ಕೊಂಡು ಹನುಮ ತಾ |
ನಂಡಲೆಯುತಲು | ದ್ದಂಡ ಕುಜಂಗಳ |
ಕೊಂಡವನೆದೆಗೆ ಪ್ರ | ಚಂಡತನದೊಳಿಡೆ |
ದಿಂಡುರುಳುತ ಭೂ | ಮಂಡಲಕೊರಗೆ | ಭೀತಿತಾಳಿ ||159||

ಆ ಸಮಯದಿ ಖಳ | ನಾ ಶಿರದಗ್ರಕೆ |
ತೋಷದಿ ಮರುತಜ | ಬೇಸರದೆರಗಲು |
ಮೋಸದೊಳವನೆಮ | ವಾಸಕೆ ತೆರಳಿದ |
ನೇಸು ಬಣ್ಣಿಸುವೆ | ಕೀಶನ ಬಲುಹ | ಸಂಗರದೊಳು ||160||

ಭಾಮಿನಿ

ಜತಿಗಳಿರ ನೀವ್ ಕೇಳಿ ಮರುತಜ |
ನತಿಶಯದಿ ಸೂಚೀಮುಖನ ರವಿ |
ಸುತನ ನಗರಕೆ ಕಳುಹಿ ಮೆರದಿರಲನಿತರೊಳಗಿತ್ತ ||
ಖತಿಯ ತಳೆದಾಕುಲಿಶದಂಷ್ಟ್ರನು |
ಪಥಿವಿಯೊಡೆವಂದದಲಿ ಘರ್ಜಿಸಿ |
ಮತಿಯರಿಯದೊಡನೆಂದನಾ ಕೇಸರಿಜನಿದಿರಿನಲಿ ||161||

ರಾಗ ನಾದನಾಮಕ್ರಿಯೆ ಮಟ್ಟೆತಾಳ

ದಿಟ್ಟತನಗಳೆಷ್ಟು ಸುಮ್ಮನೆ | ಕೇಳೊ ಕಪಿಯೆ |
ದಿಟ್ಟತನಗಳೆಷ್ಟು ಸುಮ್ಮನೆ ||   ||ಪಲ್ಲವಿ||

ಅಕ್ಕರಿಂದಲೆಮ್ಮ ನೆಲನ | ಪೊಕ್ಕು ಜೀವಿಸಿದರ ಕಾಣೆ |
ಘಕ್ಕನೈದು ನಿನ್ನ ತಾಣ | ಕಕ್ಕಟಕಟ ಸಿಕ್ಕಿ ಸಾಯ |
ಲಿಕ್ಕೆ ಬಂದೆ ವ್ಯರ್ಥವಿಲ್ಲಿಗೆ || ಸಾಕು ಸಾಕು |
ಮಕ್ಕಳಾಟಿಕೆಯೊಳು ಕಲ್ಲಿಗೆ | ತಲೆಯ ಬೇಗ |
ಸೊಕ್ಕಿನಿಂದ ಬಡಿದು ಬರಿದೆ | ಕಕ್ಕಸಬಡುವದ್ಯಾಕೆ || ದಿಟ್ಟ ||162||

ಎಂದು ನುಡಿದ ವಜ್ರದಂಷ್ಟ್ರ | ನಂದವನ್ನು ನೋಡುತಾಗ |
ಲಂದು ಕೋಪದಿಂದ ವಾಯು | ನಂದನನಬ್ಬರಿಸಿ ಭರದೊ |
ಳೊಂದು ಮಾತನೆಂದ ನಗುತಲಿ | ಖೂಳ ದೈತ್ಯ |
ಮುಂದುವರಿದು ಧೈರ್ಯದಿಂದಲಿ | ಪಿಂದೆ ಸರಿಯ |
ದಿಂದು ಸಮರಕಾಗಿ ಬಾ ಬಾ | ರೆಂದು ಪೊಯ್ದುನಧಟಿನಿಂದ || ದಿಟ್ಟ ||163||

ಪೊಡೆದಪೊಯ್ತವನ್ನು ತಾಳು | ತೊಡನೆ ದೈತ್ಯನಕ್ಷಿಯಲ್ಲಿ |
ಕಿಡಿಗಳುದುರಿಸುತ್ತ ತಿವಿಯ | ಲಡಗಿ ರೋಷದಿಂದ ಹನುಮ |
ಕಡುಹಿನಿಂದ ವಜ್ರಮುಷ್ಟಿಯ ||  ಬಲಿದು ಖಳಗೆ |
ಪೊಡೆಯಲಾಮಹಾಂತದಾಡೆಯ | ಮುರಿದು ನೆಲಕೆ |
ಕೆಡೆವುತೇಳದಂತೆ ತುಳಿಯೆ | ನಡೆದನಿನಜನಲ್ಲಿಗಸುರ || ದಿಟ್ಟ ||164||

ವಾರ್ಧಕ

ಈ ಪರಿಯೊಳಾ ವಜ್ರದಂಷ್ಟ್ರನಳಿಯಲ್ಕಾಗ |
ಲಾಪಾಕಶಾಸನಾದ್ಯಮರ ತತಿ ಸಂಭ್ರಮದೊ |
ಳಾ ಪಾವಮಾನಿಯಂ ಸಂಸ್ತುತಿಸುತಲಿ ಪುಷ್ಪವಷ್ಟಿಯಂ ಕರೆಯಲತ್ತಾ ||
ತಾಪದಿಂದಯ್ದಿ ಮೈರಾವಣಾಖ್ಯನ ಸತಿಯು |
ಮಾಪೇಕ್ಷೆಯಿಂದೆದ್ದುಮವಗೆರಗಿ ವಿನಯದಿಂ |
ತಾ ಪೇಳ್ದಳಾದ ದುಃಸ್ವಪ್ನ ಸೂಚನೆಗಳಂ ಮರೆಯದತಿ ವಿಸ್ತಾರದಿ ||165||

ರಾಗ ನೀಲಾಂಬರಿ ಏಕತಾಳ

ಪತಿಯೆ ನೀ ಲಾಲಿಸಯ್ಯ | ಪೇಳುವೆ ನಿನ್ನೊ |
ಳತಿಶಯದೊಂದು ಕನಸು ||
ಮತಿಯುತ ನೀನಾಳುವ | ಧರಣಿಗೀಗ |
ಕ್ಷಿತಿಯಿಂ ಹನುಮನೆನುವ ||166||

ಕಪಿಯೋರ್ವನೈದಿ ನಿಮ್ಮ | ನೆಲ್ಲರ ಕೊಂದು |
ಕಪೆಯಿಂದ ದುರುದುಂಡಿಯ ||
ಶಪಥದಿ ಕಾಯ್ದವಳಾ | ಮಗನಿಗೀಭೂ |
ಮಿಪತಿತ್ವವಿತ್ತ ಮೇಲಾ ||167||

ನೀ ತಂದ ಧರಣಿಪರಾ |
ನೀರ್ವರನೊಯ್ವ |
ರೀತಿಯೊಳ್ ಕಂಡೆ ಧೀರಾ ||
ಮಾತಿದು ಪುಸಿಗಳಲ್ಲ | ಇನ್ನಾದರು |
ನೀ ತಿಳಿಯಯ್ಯ ನಲ್ಲ ||168||

ನರನಾಥನವನು ನೋಡೆ | ಶ್ರೀಹರಿಯಂತೆ |
ಸುರರೆಲ್ಲ ಕಪಿಗಳಂತೆ ||
ಶಿರಹತ್ತರವನ ಕೊಂದು | ಕೀರ್ತಿಯ ಪಡೆದು |
ಧರೆಯಾಳ್ವರಂತೆ ಮುಂದು ||  ||169||

ಮಾನುಷಾಕೃತಿ ವೆರಸಿ | ಮಾರ್ತಾಂಡವಂಶ |
ದಾ ನರೇಂದ್ರನೊಳುದಿಸಿ ||
ಈ ನರರೂಪಿನೊಳು | ತೋರುವರೆನ್ನ |
ಪ್ರಾಣೇಶ ಬೇಗದೊಳು ||170||

ಮನ್ನಿಸಿ ಮರುತಜನಾ | ಬೀಳ್ಗೊಡು ನೀ |
ನಿನ್ನಾದರವನಿಪನ ||
ಚೆನ್ನೆಸೆವುದು ಕಾರ್ಯವು | ನಿನಗೆ ನಾನು |
ಬಿನ್ನೈಸುವಡ ಯೋಗ್ಯವು | ||171||