ವಾರ್ಧಕ

ಮುನಿಗಳಿರ ಕೇಳಿ ಮರುತಾತ್ಮಭವನಿತ್ತಮಾ |
ಜನಪತಿಗಳಿಪ್ಪ ಪಾಳೆಯಕೆಲ್ಲಮುಂ ತನ್ನ |
ಘನವಾಲದಿಂ ಕೋಟೆಯಂ ಚಿಸಿ ಕಾದಿರ್ದನನಿಮಿಷ ರ್ಮೆಚ್ಚುವಂತೆ ||
ವನಜಭವ ಭವಮುಖ್ಯರೋರ್ವರುಂ ಪೊಗುವಡಿ |
ನ್ನನುಮಾನವಾಗಿರ್ಪುದುಳಿದರಿಂಗಸದಳಂ |
ದಿನನಾಥನುರುಮಂಡಲಕ್ಕಡರಿ ಪಾತಾಳಮಂ ಭೇದಿಸಿರ್ದುದಾಗ ||61||

ರಾಗ ಕೇದಾರಗೌಳ ಅಷ್ಟತಾಳ

ಇಂತೀ ಪರಿಯೊಳಿರ್ಪ ಕೋಟೆಯ ಬಾಗಿಲೊ |
ಳಾಂತು ಘೋರಾ ಕೃತಿಯು ||
ತಾಂತವಕದಿ ಕರವೆರಡರೊಳ್ಗಿರಿಗಳ |
ನಾಂತಿರೆ ಭರ್ಗನಂತೆ ||62||

ಇತ್ತ ಮೈರಾವಣನೆಂಬಸುರನು ಮದೋ |
ನ್ಮತ್ತನಾಗಿಯೆ ಕುಳಿತು ||
ಮತ್ಯುವಂದದಿ ದಧಿಮುಖನೆಂಬ ದೈತ್ಯನ |
ಮತ್ತೆ ಕರೆದು ಪೇಳ್ದನು ||63||

ನೋಡಿ ಬಾರೆಲೊ ಕೀಶರ್ಗೂಡಿಹ ಪಾಳ್ಯವ |
ಗಾಢದಿಂದೆನುತಟ್ಟಲು ||
ಓಡಿಬಂದವನೀಕ್ಷಿಸಿದನು ಬಾಲದಿ ಕಪಿ |
ಮಾಡಿದ ಕೋಟೆಯನು ||64||

ಎತ್ತ ನೋಡಿದಡತ್ತ ದಾರಿಯ ಕಾಣದೆ |
ಸುತ್ತಿ ಪಾತಾಳಕಾಗಿ ||
ಮತ್ತಿಳಿದಲ್ಲಿಂದ ಧ್ರುವನಿಳೆಯವ ಸಾರಿ |
ಪಥ್ವಿಗಯ್ತಂದು ಬೇಗ ||65||

ಬಂದುಸಿರಿದನು ಮೈರಾವಣದೈತ್ಯಗೆ |
ನಿಂದು ಕರವ ಮುಗಿದು ||
ಚಂದದಿ ಮರುತಜನೆಸಗಿದ ಕೋಟೆಯ |
ಅಂದವನೆಲ್ಲವನು ||66||

ಕಂದ

ಕೇಳುತ ಮೈರಾವಣನಂ |
ದಾಲೋಚಿಸುತಾಗಲೊಡನೆ ಸೂಚೀಮುಖಂ ||
ಬೋಳವಿಸಿ ಕಳುಹಲಿನಕುಲ |
ಪಾಲಕನಿಹ ಪಾಳಯಕ್ಕೆ ಪುನರಪಿ ಜವದಿಂ ||67||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸೂಚಿಮುಖನೆಂಬಧಮ ಖಳ ನಾ |
ರಾಚದಂದದಿ ಬೆಳಸಿ ನಾಸಿಕ |
ಖೇಚರದ ಮೇಲ್ಬಂದ ಮನದಲಿ | ಯೋಚಿಸುತ್ತ ||68||

ಮಾರುತಿಯು ತಾ ರಚಿಸಿರು ಬಲು |
ಘೋರತರ ವಾಲಧಿಯ ಕೋಟೆಯ |
ಸಾರಿ ಪಥವನು ಕಾಣದಿರೆ ಮದ | ವೇರಿ ಬಳಿಕ ||69||

ಮೊಗವ ಮುಂದಕ್ಕೂರಿ ನಾಸದಿ |
ಬಗೆಬಗೆದು ನೋಡಲ್ಕೆ ಮುರಿದುದು |
ಬಿಗುಹಿನಿಂದಿಹ ಗೋಣ ಬಹು ರ | ಕ್ತಗಳು ಸುರಿಯೆ ||70||

ತರಹರಿಸಿ ನಿಲಲಾರದಾ ಕ್ಷಣ |
ಭರದೊಳೈತಂದಧಿಪಗರುಹಲು |
ಬೆರಳ ಮೂಗಿನೊಳಿಟ್ಟು ತೂಗಿದ | ಶಿರವನಾಗ ||71||

ಮತ್ತೆ ಕಳುಹಿದ ವಜ್ರದಂಷ್ಟ್ರನ |
ಚಿತ್ತದಲಿ ಖತಿಗೊಂಡು ದನುಜನು |
ಮತ್ಯುವಂದದೊಳಪ್ಪಣೆಯ ತಾ | ನಿತ್ತು ಬೇಗ ||72||

ಕಂದ

ಬಂದಾ ದೈತ್ಯಂ ಕೋಟೆಯ |
ನಂದೀಕ್ಷಿಸಿ ಭೇದಿಸಲ್ಕೆ ಬಗೆಯಲ್‌ದಂಷ್ಟ್ರಂ ||
ನೊಂದುರೆ ಮುರಿಯಲ್ಕವನೇ |
ಳ್ತಂದುಂ ಸೂಚಿಸಿದನಾಗ ಮೈರಾವಣನೊಳ್ ||73||

ರಾಗ ತುಜಾವಂತು ಅಷ್ಟತಾಳ

ಧೀರ ಲಾಲಿಪುದೆನ್ನ ಮಾತ | ದಯ |
ದೋರಿ ಮಮತೆಯೊಳ್ ಪ್ರಖ್ಯಾತ || ಧೀರ ||    || ಪಲ್ಲವಿ ||

ಕೀಶ ಬಲವನೀಕ್ಷಿಸಿದೆ | ನಾ ನಿ |
ನ್ನೇಸು ಪೇಳುವೆ ನೀಗ ಬರಿದೆ |
ಭಾಷಿಸುವವನಲ್ಲದಿರದೆ | ಕಪಾ |
ರಾಶಿ ಚಿತ್ತೈಸು ಕೋಪಿಸದೆ ||
ಆ ಸೇನೆಯನು ಪೊಗ | ಲೀಸಮಯದೊಳು ಮ |
ಹೇಶಗರಿದು ಕೇಳಿ | ನ್ನಾ ಸುರಾಗ್ರಗಣ್ಯ || ಧೀರ ||74||

ಕುಲಿಶೋಪಮಯವಾಗಿ ಸುತ್ತ | ತದ್ |
ಬಲಕೆಲ್ಲ ಕೋಟೆಯ ತೆತ್ತಾ | ಗೆಲವಿನಿಂ ಪ್ರಜ್ವಲಿಸುತ್ತ | ತೋರ್ಪು |
ದೊಲವಿನಿಂ ಭಯವ ಬೀರುತ್ತ ||
ಬಲುಬಗೆಯಿಂದದ | ರೊಳ ಪೊಗುವರೆ ದಾರಿ |
ಗಳನಿಂದು ನಾ ಕಾಣೆ | ಬಳಲಿ ಬಾಯಾರಿದೆ || ಧೀರ ||75||

ಉರಗಾಲಯದಿಂದ ಮೇಲೆ | ಪು |
ಷ್ಕರಕಡರಿಹುದಿನ್ನು ಲೀಲೆ |
ಗೆಲವಿಲ್ಲವಿನ್ನತಿಜ್ವಾಲೆ | ಚುಚ್ಚು |
ತಿರುವುದು ಜಯಸಿರಿ ಬಾಲೆ ||
ಮರೆಯದಿನ್ನವಳಾರ್ಗೆ ಪರಿಣಯವಾಹಳೊ |
ಪರಮೇಶನಿಂಗೋರ್ವ | ಗರಿವುಂಟು ದೊರೆರಾಯ || ಧೀರ ||76||

ರಾಗ ಭೈರವಿ ಝಂಪೆತಾಳ

ಕೇಳುತಾಕ್ಷಣ ಮನದೊ | ಳಾಲೋಚಿಸುತ ತಿಳಿದ |
ಮೇಲೊಂದುಪಾಯವನು | ಕಾಲೋಚಿತಕ್ಕೆ ||77||

ಎಲರಣುಗನೆಸಗಿರುವ | ಬಲುಪರಾಕ್ರಮಗಳಿಂ |
ಗಲಸಿದಡದೇನಹುದು | ಕೆಲಸ ಬಳಿಕೆಮಗೆ ||78||

ಆ ಸೇನೆಗತಿಹಿತ ವಿ | ಭೀಷಣನುಮವನಂತೆ |
ವೇಷವನು ತಳೆದು ನಾ | ಕೀಶಬಲದೊಳಗೆ ||79||

ಪೊಕ್ಕು ಕಾರ್ಯವ ಮಾಡಿ | ಘಕ್ಕನಯ್ದುವೆನೆನುತ |
ಅಕ್ಕರದಿ ಮೈರಾವ | ಣಾಖ್ಯ ಜವದಿಂದ ||80||

ಸರಮಾಧವನ ರೂಪ | ನುರೆ ಧರಿಸಿ ಮರುಗುತ್ತ |
ಭರದಿಂದ ಬಂದನಾ | ಮರುತಜನ ಬಳಿಗೆ ||81||

ಭಾಮಿನಿ

ಕಪಟದಸುರನ ಕಂಡು ಮಾರುತಿ |
ಕಪೆಯೊಳಿಂತೆಂದನುಮೀದೇನೈ |
ಕಪಣನಂದದಿ ಮರುಗುತಿಹೆ ಮಾತಾಡು ಮಮತೆಯಲಿ ||
ಅಪರಿಮಿತ ಬಲದೊಳಗೆ ಮತ್ತೇ |
ನಪರಬುದ್ಧಿಕೆಯಾದುದೋಯನೆ |
ಗುಪಿತದಿಂ ಖಳನೆಂದ ಮಾರುತಿಯೊಡನೆ ವಿನಯದಲಿ ||82||

ರಾಗ ಕೇದಾರಗೌಳ ಅಷ್ಟತಾಳ

ಪಾತಾಳಲಂಕೆಯಿಂದೋತು ಮೈರಾವಣ |
ತಾ ತಳುವದೆ ಬಂದೀಗ ||
ಪ್ರೀತಿಯಿಂದೆಮ್ಮಗ್ರಜಾತನೊಡನೆ ಕಿವಿ |
ಮಾತುಗಳಾಡಿಕೊಂಡು ||83||

ಬರುವನೆಮ್ಮಲ್ಲಿಗೆ ಬಹ ವಸಗೆಯ ತಿಳಿ |
ದೊರೆವ ನಿನ್ನೊಳು ಲಾಲಿಸು ||
ದುರುಳನವನು ಮಾಯೋದ್ಧತ ಅಜ ಹರಿ ಹರ |
ಗರಿದು ಜೈಸಲು ಸುಮ್ಮನೆ ||84||

ಈ ಕಪಿಗಳನೆಲ್ಲ ತಾ ಕಪಟದಿ ಕೊಂದು |
ಲೋಕನಾಯಕರೀರ್ವರ ||
ಪೋಕತನದೊಳೇನಮಾಡುವನೆಂಬುದ |
ನಾ ಕಾಣೆನೀ ವೇಳ್ಯದಿ ||85||

ಹನುಮ ಕೇಳೀಗ ನೀ ಮತ್ತೊಂದು ಕಡೆಯೊಳ |
ಗಣುಮಾತ್ರನಾಗಿರಲು ||
ದನುಜನ ಕೊಲಬಹುದಾದರೆ ನಾನವ |
ನನುವಿನಿಂ ಬಹ ದಾರಿಯ ||86||

ಈಕ್ಷಿಸುತಲೆ ಬಂದಾಕ್ಷಣ ಉಸಿರುವೆ |
ಸುಕ್ಷೇಮವಹುದೆಲ್ಲರ್ಗೆ ||
ದಕ್ಷಮಖಾಂತಕತ್ರ್ಯಕ್ಷನಂಶೀಭೂತ |
ಈಕ್ಷಿಸು ಮುಖ್ಯಪ್ರಾಣ ||87||

ರಾಗ ಮಾರವಿ ಏಕತಾಳ

ಇಂತೆನಲಾಶುಗನಾತ್ಮಜನಣುರೂ | ಪಾಂತುರೆ ಮರನಡಿಯೆ ||
ನಿಂತಿರಲಾ ನಿಶಿಚರ ಪೊಕ್ಕನು ಬಳಿ | ಕಂತರಂಗದಿ ಬಲವ ||88||

ತಳಿವುಬೇಳ್ವೆಯ ಬೂದಿಯನಾ ಕಪಿ | ಬಳಗದ ಬಲಕೆಲ್ಲ ||
ಘಳಿಲನೆ ಮುಂದೈ ತಂದು ಕಂಡನು ರಘು | ಕುಲತಿಲಕರನಾಗ ||89||

ನಿದ್ರೆಯೊಳ್ ಮಲಗಿಹ ರಘುಜರೆಚ್ಚರದಂತೆ| ಕದ್ದು ಪಾತಾಳಕ್ಕೆ ||
ಭದ್ರಮಂಚವ ತಾನೊಯ್ದು ಮನೆಯೊಳಿವ | ರಿದ್ದಿರವರಿಯದಂತೆ ||90||

ಮಲಗಿಸಿ ತಾ ಘನನಿದ್ರೆಯೊಳೊರಗಿರೆ | ತಿಳಿದಾತನ ಸತಿಯು ||
ಚೆಲುವರಿವರು ನರರಲ್ಲೆನುತೀಕ್ಷಿಸಿ | ವಳಸೌಧಾಗ್ರದಲಿ ||91||

ಎಚ್ಚರದಂದದಿ ಪಾವನಪುರುಷರ | ನಚ್ಚರಿಯೊಳಗಿಡಲು ||
ಅಚ್ಯುತನತಿ ಸೌಖ್ಯದೊಳಿರ್ದನು ತ | ನ್ನಿಚ್ಛೆಯೊಳ್ ಜಗವರಿಯೆ ||92||

ಕಂದ

ಆ ಸಮಯದೊಳಿತ್ತಲು ಮಹ |
ಕೀಶರ್ತಮತಮಗೆ ಭೀತಿಯಿಂದೆಚ್ಚರ್ತುಂ ||
ಬಾಸನ್ನಿಧಿಯಣುಗಂ ವಾ |
ಣೀಶನ ಸುತ ಮುಖ್ಯರೈದಿ ಕಾಣದೆನಪರಂ ||93||

ಭಾಮಿನಿ

ಭೂಪರಿನ್ನೇನಾದರೈ ಹಾ |
ಹಾ ಪವನಸುತನೆಲ್ಲಿಗಯ್ದಿದ |
ನೀಪರಿಯ ಕಪಟಗಳಿದೇನೆಂದೆನುತ ಚಿಂತಿಸುತ ||
ತಾಪದಿಂದೈ ತಂದು ಕಂಡರು |
ಶ್ರೀಪತಿಯ ಸ್ಮರಣೆಯೊಳು ಕುಳಿತಿರು |
ವಾ ಪರಾಪರವಸ್ತು ಹನುಮನನೊಲಿದು ಮುಂಗಡೆಯ ||94||

ರಾಗ ಕಾಂಭೋಜಿ ಝಂಪೆತಾಳ

ಮರನಡಿಯ ಮಿಣ್ಣನಾಗಿರುವ ಮರುತಜನ ಕಂ |
ಡುರುತರದ ಪ್ರೇಮದಿಂದಾಗ ||
ಸರಸಿಜೋದ್ಭವಸುತಾಯಮರ್ನಣುಗ  ಸಹ ಕೇಳ್ದ |
ರರಿಕುಲಾಚಲವಜ್ರನೊಡನೆ ||95||

ಏನಯ್ಯ ಪವನಸುತ ನೀ ಮೌನದೊಳಗಿರ್ಪೆ |
ಭಾನುವಂಶಜ ನಪರ ಕಾಣೆ ||
ನೀನರಿತಡರುಹೆನಲು ವಾನರಕುಲಾಗ್ರಣಿಯಿ |
ದೇನೆಂದು ಬೆರಗುವಟ್ಟೆಂದ ||96||

ಲಾಲಿಪುದು ನೀವೆಲ್ಲ ಖೂಳ ಸರಮಾಧವನ |
ಬಾಲಿಶತ್ವದ ಮಾಯೆಗಳನು ||
ಕೋಳುವಿಡಿದನು ಎನ್ನನವನು ವಂಚಿಸಿ ಭೂಮಿ |
ಪಾಲಾಗ್ರಣಿಗಳೀರ್ವರನು ||97||

ಕೊಂದವನ ವಂಶವೆಲ್ಲವನು ರಾವಣ ಸಹಿತ |
ಲಿಂದಬ್ಧಿಯಲಿ ಕೆಡಹಿ ಬಳಿಕ ||
ಇಂದಿರಾಪತಿಯನೆಲ್ಲಿದ್ದರೀಗಳೆ ತರುವೆ |
ನೆಂದು ಗರ್ಜಿಸುತಿದ್ದನಾಗ ||98||

ಅನಿತರೊಳು ದನುಜಾಧಿಪತಿ ವಿಭೀಷಣ ಬಂದು |
ಹನುಮನಾರ್ಭಟೆಯ ನೀಕ್ಷಿಸುತ ||
ವಿನಯದಿಂ ಕೇಳ್ದನೀ ಕೋಪವೇಂ ಕಾರಣದಿ |
ಜನಿತಮಾಯ್ತೆಂದವರೊಳಾಗ ||99||

ಕಂದ

ಆ ಸಮಯದೊಳೀಕ್ಷಿಸುತಂ |
ದಾಶುಗನಾತ್ಮಭವನಯ್ದೆ ಸರಮಾಧವನಂ ||
ನಾಶವ ಗೈವೆನೆನುತ್ತಲೆ |
ಭಾಷಿಸಿದಂ ಬಳಿಕ ಸರಸಿಜೋದ್ಭವಸುತನೊಳ್  ||100||

ರಾಗ ದೇಶಿ ಅಷ್ಟತಾಳ

ಈತನೇ ಕಡು ಪಾತಕಿಯಕಟ |
ಘಾತಿಸುವೆನೀಕ್ಷಣದೊಳಿವನ ಮ |
ಹಾತಿಶಯಗಳಿದೇನಿರೈ ||101||

ಎನ್ನ ವಂಚಿಸಿ ಪೋಗಿ ಭೂಮಿಪಕುಲ |
ರನ್ನರೀರ್ವರನೊಯ್ದು ನಮ್ಮೊಳು |
ಬನ್ನಣೆಯ ಮಾತಾಡುವ ||102||

ಮರೆವರೇ ರಾಕ್ಷಸರ್ ತಮ್ಮ ವಿದ್ಯವ |
ತರಿದಿವನ ಸಹಭವನ ಸಹಿತೆಮ |
ಪುರದೊಳಿರಿಸುವೆನೀಕ್ಷಣ ||103||

ಕಂದ

ಈ ತೆರದಿಂದಲಿ ಮಾರುತ |
ಜಾತಂ ಕೋಪಿಸಲು ಕಂಡು ಜಾಂಬವ ದೇವಂ ||
ತಾ ತಳುವದೆ ಶರಣನೊಳಂ |
ಪ್ರೀತಿಯೊಳಿಂತೆಂದ ಮಧುರವಚನಗಳಿಂದಂ ||104||

ರಾಗ ಸಾಂಗತ್ಯ ರೂಪಕತಾಳ

ಏನಯ್ಯ ರಾಕ್ಷಸಕುಲಶಿರೋಮಣಿಯೆ ಕೇಳ್ |
ನೀನಾಂಜನೇಯನೆಂದುದನು ||
ಮೌನವಿಡಿಯದೀಗಲುಸಿರು ವತ್ತಾಂತವ |
ಭಾನುವಂಶಜರೆಲ್ಲಿ ತೋರು ||105||

ಎನಲಾಗಳಂಜುತೊಯ್ಯನೆ ನಡುಗುತ ಪೇಳ್ದ |
ದನುಜೇಶನೊಲಿದು ಜಾಂಬವಗೆ ||
ಇನಿತೆಂಬ ವತ್ತಾಂತವೇನೊಂದನರಿಯೆನು |
ವನಜನಾಭನ ಪಾದದಾಣೆ ||106||

ಆ ಮಹಾಪುರುಷ ರಾಮನನರಿತವರುಂಟೆ |
ಸ್ವಾಮಿದ್ರೋಹಕನಲ್ಲ ನಾನು ||
ಕಾಮಿಗಳರಸ ರಾವಣಮೈರಾವಣನೆಂದೆಂ |
ಬಾ ಮಾಯಾವಿಯ ಲಂಕೆಗಿಂದು ||107||

ಪಾತಾಳದಿಂ ಬರಿಸಿರ್ಪನೆಂದೆನುತಲೆ |
ನಾ ತಿಳಿದರುಹಿರ್ಪೆ ಮೊದಲೆ |
ಮಾತಿದು ಪುಸಿಯಲ್ಲವನು ಬಲು ಕಪಟಿ ನ |
ಮ್ಮಾತನೊಳವಗತಿ ಪ್ರೀತಿ ||108||

ಗುರುವಿನೆಡೆಯೊಳುನಮ್ಮಣ್ಣಂದ್ಯರೊಡನೆ ನಾ |
ನೆರಕವಾಗಿಯೆ ವಿದ್ಯೆಗಳನು ||
ಪರಿ ಪರಿ ವಿಧದಿ ಸಂಗ್ರಹಿಸುವ ಕಾಲದಿ |
ದೊರಕಿತವನೊಳತಿ ಸ್ನೇಹ ||109||

ಭಾಮಿನಿ

ಬಲ್ಲಿದರು ನಾವಾದೆವಟಮಟ |
ದಲ್ಲಿ ನಾಲ್ವರು ನೋಡಲೀ ಧರೆ |
ಯಲ್ಲಿ ಚರಿಸುವ ಸಕಲ ಜೀವಿಗಳಂತೆ ರೂಪಾಂತು ||
ಬಲ್ಲವಿಕೆಯಿಂ ತೋರಲಾಪೆವ |
ದೆಲ್ಲಮಿನ್ನಂತಿರಲಿ ತಿಳಿಯಲು |
ಖುಲ್ಲ ಮೈರಾವಣನು ಮದ್ರೂಪಿನಲಿ ವಂಚಿಸಿದ ||110||

ಕಂದ

ಆತನ ಬಗೆಯಂ ತೋರುವೆ |
ನೀತತುಕ್ಷಣಕೆಂದು ಸರಮೆಯರಸಂ ಖಳನಾ ||
ರೀತಿಯೊಳಾಕೃತಿಧರಿಸಲ್ |
ವಾತಸುತಂಗೈದೆ ತೋರ್ದನಜಸುತನಾಗಳ್ ||111||

ರಾಗ ಮಧುಮಾಧವಿ ಅಷ್ಟತಾಳ

ನೋಡಿ ಮಾರುತಿಯಾಡಿದನಾಗ |
ಪ್ರೌಢಿಯೆಂದರಿತು ಕೊಂಡಾಡುತ ಖಳನನ್ನು || ನೋಡಿ ||    ||ಪಲ್ಲವಿ||

ಸಾಕಿನ್ನು ಕಂಡೆ ನೀ | ನಾಕರಿಸಿದ ರೂಪ |
ವ್ಯಾಕಿನ್ನು ನಿನ್ನೊಳು | ಸೋಕುವುದೇ ಮಾಯೆ |
ನಾ ಕಿನಿಸಿನೊಳೆಂದುದ | ಮನಕೆ ತಾರ |
ದಾ ಖೂಳನಿಹ ತಾಣದಾ | ಪಥವದೆಲ್ಲಿ |
ಲೋಕೇಶರೇನಾದ | ರೋ ಕಾಣೆನಕಟ || ನೋಡಿ ||112||

ಪಾತಕಿಯವ ನೀನೆಂ | ದಾ ತೆರನೆಸಗಿದ |
ರೀತಿಯೆಲ್ಲವು ನಿಜ | ವದುದಾಗಲಿ ದುಷ್ಟ |
ನಾತನಿರುವಠಾವೆಲ್ಲಿ | ತೋರಿದರೆ ಶ್ರೀ |
ನಾಥನ ನಿಮಿಷದಲ್ಲಿ | ತರುವೆ ತರಿ |
ದಾತನ ರಕ್ತವ | ಭೂತಗಳುಣಲೀವೆ || ನೋಡಿ ||113||

ಇಂತೆನೆ ಮಾರುತಿಯಂತ ರಂಗದಿ ಮಹ |
ಸಂತೋಷವನು ತಾಳ್ದು | ನಿಂತು ವಿಭೀಷಣ
ನಾಂತು ಮುನ್ನಿನ ರೂಪವ | ಧ್ಯಾನಿಸುತ ಸ |
ರ್ವಾಂತರ್ಯಾಮಿಯ ಪಾದವ | ಬಳಿಕ ಹನು |
ಮಂತನೊಳಿಂತೆಂದ | ಶಾಂತ ವಾಕ್ಯದಲಿ || ನೋಡಿ ||114||

ಕಂದ

ಕೇಳೈ ಮರುತಜ ನೀ ಪಾ |
ತಾಳಕ್ಕಯ್ದುವರೆ ತೋರ್ಪೆ ನಿನಗಾ ಪಥಮಂ ||
ಈ ಲಂಕೆಗೆ ದಕ್ಷಿಣದೊಳು |
ಮೇಲಾಗಿಹುದೊಂದು ಕೊಳನುಮಾಕೊಳದೊಳಗಂ ||115||

ರಾಗ ಭೈರವಿ ಝಂಪೆತಾಳ

ಎಸೆದಿಹವು ಪಂಕಜವು | ಸಸಿನೆಯಾ ಪಂಕಜದ |
ಕುಶಲಕರನಾಳದಿಂ | ಜಸದಿಂದಲಿಳಿಯೆ ||116||

ತೋರುವುದು ಮತ್ತಲ್ಲಿ | ಮೈರಾವಣನ ಪುರವು |
ಧೀರನೀ ಗಮಿಸೆಂದು | ಭೋರನರುಹಿದನು ||117||

ಹರಿಶರಣನೆಂದುದನು | ಮರುತಜನು ಕೇಳಿ ಚ |
ಚ್ಚರದೊಳಣುರೂಪದಿಂ | ಭರದಿ ಸರಸಿಯನು ||118||

ತಡೆಯದಾಕ್ಷಣಮೈದಿ | ಜಡಜನಾಳದೊಳಿಳಿದು |
ಕಡು ಸೊಬಗಿನಿಂದಿರುವ | ಪೊಡವಿಯನು ಕಂಡ ||119||

ತತ್ಸಮಯದೊಳಗೊರ್ವ | ಮತ್ಸ್ಯವಾನರನಯ್ದಿ |
ಕುತ್ಸಿತ ಮತಿಗಳಿಂದ | ಮತ್ಸರಿಸುತಾಗ ||120||

ತಡೆದಾಗ ಮರುತಜನ | ಕಡು ಬಲೋದ್ಧತಗಳಿಂ |
ಘುಡುಘುಡಿಸಿ ಮುಂದಡಿಯ | ನಿಡಬೇಡವೆಂದ ||121||

ಕಂದ

ಮೀನಾಕಾರದೊಳೆಸೆದಿಹ |
ವಾನರನಾರ್ಭಟೆಯ ಕಂಡುಮನಿಲ ಕುಮಾರಂ ||
ಏನಾಶ್ಚರ್ಯವಿದೆನುತವ |
ನಾನನ ರೂಪುಗಳನೀಕ್ಷಿಸುತಲಿಂತೆಂದಂ | ||122||