ಶಾರ್ದೂಲವಿಕ್ರೀಡಿತಂ

ರಾಮಂ ರಾಜಶಿಖಾಮಣಿಂ ರಘುವರಂ ದೇವಾರಿದರ್ಪಾಪಹಂ |
ಲೋಕಾನಾಂ ಹಿತಕಾರಿಣಂ ಗುಣನಿಧಿಂ ಕಾರುಣ್ಯಪುಣ್ಯೋದಯಮ್ |
ಮುಕ್ತಾವಿದ್ರುಮರತ್ನಶೋಭಿತತನುಂ ಸೌಂದರ್ಯಹಸ್ತಾಂಬುಜಂ
ಕೌಸಲ್ಯಾತನಯಂ ಭಜಾಮಿ ಸತತಂ ಶ್ರೀಜಾನಕೀನಾಯಕಮ್ ||1||

ರಾಗ ನಾಟಿ ಝಂಪೆತಾಳ

ಗಜವದನ ಗೌರಿಯಾತ್ಮಜನಮಲ ಶಾರೀರ |
ಭುಜಗಭೂಷಣ ಭವೇಂದ್ರಾದ್ಯಮರವಿನುತ ||
ಸುಜನಜನಪೋಷ ಸುರುಚಿರ ರತ್ನಭೂಷಮುನಿ |
ವ್ರಜಸುಸೇವಿತಪಾದ ಪರಮಾಹ್ಲಾದ | ||2||

ಕಮಲಧರ ಕಾಮಪಿತ ವರನೀಲಗಾತ್ರ ಸ |
ತ್ಕಮಲಪಾಣಿ ಮುಕುಂದವಿನುತ ಶುಭಚರಿತ ||
ಕಮಲಾಪ್ತ ಕಮಲನಲದ್ಯುತಿವಿರಾಜಿತ ಸು |
ಕಮಲನಿಭಚರಣ ಚಿನ್ಮಯ ಶುಭೋಧರಣ ||3||

ಗೋಪಾಲಕುಲಜಾತ ಗೋಪಾಲಸುರಸೂತ |
ಗೋಪತಿಧ್ವಜಮಿತ್ರ ಗೋಪನುತಿಪಾತ್ರ ||
ಗೋಪತೀಪಿತಕ್ಷೀರಗೋಪಮಂದಿರ ವೇಣು |
ಗೋಪಾಲ ಪಾಲಿಸೀ ಕೃತಿಗೆ ಮಂಗಲವ ||4||

ಭಾಮಿನಿ

ಸರಸಿಜೋದ್ಭವನಡಿಗೆ ವಂದಿಸಿ |
ಗಿರಿಜೆ ಸಿರಿ ಸರಸ್ವತಿಯರಂಘ್ರಿಗೆ
ಕರವ ಮುಗಿದು ಮಹಾಮುನಿವ್ರಜತತಿಗೆ ತಲೆವಾಗಿ ||
ಧರಣಿಯೊಳಗುಳ್ಳಮಿತ ಸತ್ಕವಿ |
ವರರ ನುತಿಸಿದು ಋಕ್ಷಕಪಿಗಳ |
ನೆರವಿಯನು ಕೊಂಡಾಡಿ ರಚಿಸುವೆನೀ ಚರಿತ್ರೆಯನು ||5||

ಕಂದ

ಚಿದ್ಘನತರ ತೋಷದಿ ಮತ್ |
ಹದ್ಗೃಹನಿವಾಸ ವಿದ್ಯಾಪ್ರದಾನಗಂ ||
ಸದ್ಗುಣ ಪದ ಶಾಂತಿಯುಗಂ |
ಸದ್ಗುರುವಮರೇಂದ್ರವರ್ಯಗಂ ತುಳಿಲ್‌ಗೈವೆಂ  ||6||

ವಾರ್ಧಕ

ಭೂಕವಿಗಳೊಳ್ ಶೋಭಿಸುತ ಮೆರೆವ ಬಾಲವಾ |
ಲ್ಮೀಕಿಯೆಂದೆನಿಸಿ ಸಂಸ್ಕೃತಮಾದ ರಾಮ ಚರಿ |
ತಾಕಥಾಸಾರಮಂ ಕರ್ಣಾಟಕಾವ್ಯದಿಂದತಿ ಮನೋಹರಮಾಗಿಯೆ ||
ಪ್ರಾಕವದ್ಧಬಲೆಯರು ಎಲ್ಲರುಂ ತಿಳಿವಂತೆ |
ಪ್ರಾಕಟಿಸಿದುರು ಮಹಿಮೆ ಹಂಪೆಯಾತ್ಮಜ ಸದ್ವಿ |
ವೇಕ ವೆಂಕಾರ್ಯ ಪ್ರಧಾನನಂ ತುಳಿಲ್ಗೈವುತುಸಿರ‌್ವೆನೀ ಚಾರಿತ್ರಮಂ ||7||

ರಾಗ ಕಲ್ಯಾಣಿ ತ್ರಿವುಡೆತಾಳ

ಅಜಪುರದ ದ್ವಿಜಕುಲದೊಳುದಿಸಿದ |
ಸುಜನಜನಸುರಧೇನು ವೆಂಕಾ |
ರ್ಯಜನೆನಿಪ ಸುಬ್ಬಾಭಿದಾನನು | ನಿಜಪದಗಳ ||8||

ವಸಗೆಯಿಂ ಸಂಸ್ತುತಿಸಿಬಲುರಂ |
ಜಿಸುತೆ ಪಡೆದವರ್ಗಭಿನಮಿಸಿ ಸ |
ತ್ಕುಶಲದಿಂ ಮರುತಾತ್ಮಭವನೀ | ರಸೆಯೊಳೊಲಿದು ||9||

ವರಮಹಾರಾಮಾಯಣದಿ ಚ |
ಚ್ಚರದಿ ಸರಸಿಜನಾಳದೊಳಗಿಳಿ |
ದಿರದೆ ಮತ್ತಾ ಪೊಡವಿಯಸುರರ | ತರಿದು ಭರದಿ ||10||

ದುರುಳ ಮೈರಾವಣನನುರೆ ಸಂ |
ಹರಿಸಿ ಸೀತಾಧವನ ಕೀರ್ತಿಯ |
ಮೆರೆಸಿದತ್ಯುತ್ಸವದ ಕಥೆಯನು | ವಿರಚಿಸುವೆನು ||11||

ಆಲಿಪುದು ಸತ್ಪುರುಷರೆಲ್ಲರು |
ಬಾಲನಿವನೆಂದೆನದೆ ಪೇಳ್ದುದ |
ಲೀಲೆಯಿಂ ತಪ್ಪಿರಲು ತಿದ್ದಿ ವಿ | ಶಾಲದಿಂದ ||12||

ವಚನ

ಈ ರೀತಿಯಿಂದ ಸಕಲ ಗುರು ದೇವ ಕವಿಪ್ರಾರ್ಥನೆಯಂ ಮಾಡಿ ಮುಂದೆ ತತ್ಕಥಾಪ್ರಸಂಗಮಂ ಪೇಳ್ವೆನದೆಂತೆನೆ –

ದ್ವಿಪದಿ

ಧರೆಯೊಳತ್ಯಧಿಕವೆಂದೆನಿಪ ಸಂಭ್ರಮದಿ |
ಮೆರೆವುತಿಹ ನೈಮಿಷಾರಣ್ಯದೊಳು ಮುದದಿ ||13||

ವರಮಹಾಶೌನಕಾದಿಗಳು ತಪದಿಂದ |
ಹರಿಹರರ ನುರೆ ಭಜಿಸುತಿರೆ ಮೋದದಿಂದ ||14||

ಇರುತಿರಲು ಸೂತಮುನಿ ಬರಲಲ್ಲಿಗೊಲಿದು |
ಭರದಿಂದ ಮುನಿಗಳುಪಚರಿಸಿದರು ನಲಿದು ||15||

ಕರವನುರೆ ಮುಗಿದು ಕೇಳಿದರು ಪರಿಪರಿಯ |
ಮರುತಜನು ಮೈರಾವಣನ ಕೊಂದ ಕಥೆಯ ||16||

ಆಗಲತಿ ದಯದಿಂದ ಸೂತ ವಿನಯದಲಿ |
ನಾಗಶಯನನ ನೆನೆದು ಕರುಣೋದಯದಲಿ ||17||

ಹೇಳಿದನು ವಿಸ್ತಾರವಾಗಿ ಮುನಿಗಳಿಗೆ |
ಆಲಸ್ಯವಿಲ್ಲದತಿ ಮೋದದಿಂ ಮೇಗೆ ||18||

ರಾಗ ಮಧ್ಯಮಾವತಿ ತ್ರಿವುಡೆತಾಳ

ಋಷಿಗಳಿರ ನೀವ್ ಕೇಳಿ ಧರೆಯೊಳ |
ಗೆಸೆವಯೋಧ್ಯಾನಗರದೊಳಗಾ |
ವಸುಮತೀಶನು ದಶರಥೇಂದ್ರನ |
ಬಸಿರಿನಿಂ ಹರಿ ಮುದದೊಳು | ಪುಟ್ಟಿಬೇಗ ||19||

ರಾಮನಾಮದೊಳಿರಲು ಮತ್ತಿ |
ನ್ನಾ ಮಹಿಮಗನುಜಾತರ್ ಮೂವರು |
ಭೀಮಬಲರೆಂದೆನಿಸಿ ಜನಿಸಿದ |
ರೀ ಮಹಿಯೊಳಾನಂದದಿ | ಬೆಳೆವುತಿರಲು ||20||

ಉರಗಪತಿಯವತಾರಿಯನುಜನ |
ಭರದೊಳೊಡಗೊಂಡಯ್ದಿ ಮುನಿಯ |
ಧ್ವರವ ಪಾಲಿಸಿ ನಡೆದಹಲ್ಯಾ |
ತರುಣಿಯಘವನುಪರಿದನು | ರಾಮಚಂದ್ರ ||21||

ಮಿಥಿಳೆಯೊಳು ಹರಧನುವ ಮುರಿದಾ |
ಪಥಿವಿಜೆಯನೊಡಗೊಂಡು ಭಾರ್ಗವ |
ನತಿಶಯದ ಗರ್ವವನು ಮರ್ದಿಸಿ |
ಕ್ಷಿತಿಪ ನಡೆದನಯೋಧ್ಯೆಗೆ | ತೋಷದಿಂದ ||22||

ಪೆತ್ತವನ ನುಡಿ ಕೇಳಿ ಸತಿ ಸೌ |
ಮಿತ್ರಿಸಹ ವನಕಾಗಿ ಬರುತಿರೆ |
ಧೂರ್ತ ದಶಶಿರನಯ್ದಿ ಸೀತೆಯ |
ಮತ್ತೆ ಕಳವಿನೊಳೊಯ್ದನು | ವ್ಯಥಿಸಿ ರಾಮ ||23||

ಭಾಮಿನಿ

ಸತಿಯನರಸುತ ಪೋಗಿ ವಾನರ |
ಪತಿಯ ಸಖ್ಯವ ಬೆಳಸಿ ಜನಕ |
ಕ್ಷಿತಿಪನಾತ್ಮಜೆಯಿರ್ಪ ವಾರ್ತೆಯನರಿತು ಮರುತಜನ ||
ಜತೆಗೊಳಿಸಿ ಕಪಿ ಬಲವನಾಕ್ಷಣ |
ಪಥವಿಡಿದು ನಡೆತಂದು ಶರಧಿಯ |
ನತಿಶಯದಿ ಬಂಧಿಸುತ ಲಂಕೆಯ ಮುತ್ತಿದನು ರಾಮ ||24||

ರಾಗ ಭೈರವಿ ಝಂಪೆತಾಳ

ಸುರಪಜಿತು ಮುಂತಾದ | ದುರುಳ ರಕ್ಕಸರನೆ |
ಲ್ಲರ ಕೊಂದು ರಾವಣನ | ಧುರದಿ ಜವಗೆಡಿಸಿ ||25||

ಚಂದದಿಂದೆಸೆವ ರಣ | ಮಂದಿರದಿ ಶ್ರೀ ರಾಮ |
ಚಂದ್ರನಿರಲಿತ್ತಸುರ | ವಂದಾಧಿಪತಿಯು ||26||

ಚಿಂತಿಸುತ ಮನೆಗಯ್ದಿ | ಕಂತುವೈರಿಯ ನೆನೆದು |
ತಾಂ ತವಕದಿಂ ನಿಶಿಯೊಳ್ | ಭ್ರಾಂತನಂದದಲಿ ||27||

ತೊಳತೊಳಲಿ ಬಳಬಳಲಿ | ಕುಳಿರುತೇಳುತ ತನ್ನ |
ತಿಳಿತಿಳಿದು ಮನದೊಳಗೆ | ತಳುವದಾಕ್ಷಣದಿ ||28||

ನೆನೆಯೆ ಮೈರಾವಣನ | ಘನಬೇಗ ನಾ ದೈತ್ಯ |
ಸನುಮತದೊಳಯ್ತಂದ | ದನುಜೇಂದ್ರನೆಡೆಗೆ ||29||

ಕಂದ

ಬಂದಾ ದನುಜನನೀಕ್ಷಿಸು |
ತಂದಾಸನವಿತ್ತುಮುಪಚರಿಸುತ್ತಾಗಳ್ |
ಎಂದಂ ವಾನರರಾ ಜಯ |
ದಂದವನತಿ ಚಿಂತೆಯಿಂದಮಾ ದಶಕಂಠಂ ||30||

ರಾಗ ತುಜಾವಂತು ಝಂಪೆತಾಳ

ಕ್ಷೇಮವೇ ಮೈರಾವಣಾಖ್ಯ ನಿನಗೆ |
ಕಾಮಿನಿಯು ಸಂಧ್ಯೆ ಪರಿ | ಣಾಮದಿಂದಿಹಳೇನೈ || ಕ್ಷೇಮವೇ || ||ಪ||

ಪುರಜನರು ಪದುಳಿಗರೆ ಪರಿಜನರು ಕುಶಲಿಗರೆ |
ಧರೆಯೆಲ್ಲ ನಿನ್ನ ಕೈ ಸೇರಿರ್ಪುದೆ ||
ಉರಗಪತಿಯವನಿಯನು ಸಾಧಿಸಿದೆಯಾ ಬಳಿಕ |
ಸುರರ ಪಿರಿಯನ ಮಾತಿಗೆರವಿಲ್ಲದಿಹರೇನೈ  || ಕ್ಷೇಮವೇ ||31||

ನಿನ್ನಯ ಕಟಾಕ್ಷದಿಂದೆಲ್ಲ ಸುಕ್ಷೇಮಿಗಳು |
ಎನ್ನಧೀನದೊಳಿಹುದು ತದ್ಭೂಮಿಯು ||
ಪನ್ನಗಾದ್ಯರು ವದಗಿಕೊಂಡಿಹರು ತನ್ನಂತೆ |
ಖಿನ್ನನಾಗಿರುವೆ ನೀನೇಕೆ ದಶಕಂಠ || ಕ್ಷೇಮವೇ ||32||

ಪಾತಾಳವಾಸಿ ಕೇಳ್ ಭೂತಳದೊಳೆಸೆವ ಸಾ |
ಕೇತಪತಿ ದಶರಥೇಂದ್ರಾತ್ಮಜರ್ಗೆ ||
ಆತ ತುರಗಾಧಿಪತಿಯಾತ್ಮಜೆಯ ದೆಸೆಯಿಂದ |
ವೋತು ವನವಾಸ ಪ್ರವೇಶವಾಯ್ತು ಕೇಳು || ಕ್ಷೇಮವೇ ||33||

ಆದರೇನಾಯಿತಾ ಪಂತಿರಥನೆಂಬವಗೆ |
ಮೇದಿನಿಯೊಳುದಿಸಿದರು ನಾಲ್ವರಂತೆ ||
ಭೇದದಿಂದಲಿ ವಿಪಿನಕಟ್ಟಿದವರ್ಯಾರಿದರೊ |
ಳೇದಯಾಂಬುಧಿಯರಿತಡುಸಿರೆನ್ನೊಳತಿ ಜವದಿ || ಕ್ಷೇಮದಿ ||34||

ಧೀರ ಕೇಳೈ ತಿಳಿದೆ ನೀನೆಂದ ನಾಲ್ವರೊಳ |
ಗಾ ರಾಮನೆಂಬಾತ ಪಿರಿಯಾತನೈಸೆ ||
ಆರಣ್ಯವಾಸಕೆಂದೆನುತಟ್ಟಲವರೊಡನೆ |
ಭೋರನಯ್ತಂದ ಲಕ್ಷ್ಮಣನೆಂಬ ತರಳನೆಲೆ || ಕ್ಷೇಮವೇ ||

ಕಂದ

ಇಂತೆನಲಾ ದಶಕಂಠಂ |
ಸಂತಸದಿಂದಾಲಿಸುತಂ ಮೈರಾವಣನುಂ ||
ನಿಂತಾಲೋಚಿಸಿ ಬಳಿಕಂ |
ತಾಂ ತಿಳಿದುದನೊಂದ ಪೇಳ್ದನವನತಿ ಜವದಿಂ ||35||

ರಾಗ ಕೇದಾರಗೌಳ ಝಂಪೆತಾಳ

ದನುಜೇಶ ಲಾಲಿಸಯ್ಯ | ನೀನೆಂದ |
ಜನಪಗಾರಣ್ಯಸಿರಿಯ ||
ವನಿತೆ ಕೈಸೇರ್ದರಿನ್ನು | ನಿನಗವರ |
ಸೆಣಸಾಟದಿರವಿದೇನು ||36||

ತಾಮಸೀಚರನೆ ಕೇಳು | ರಾಮನೆಂ |
ಬಾ ಮಹಿಮನಿಂಗೋರ್ವಳು ||
ಕಾಮಿನಿಯು ಸಂಗಡಿರಲು | ಎನ್ನನುಜೆ |
ವ್ಯಾಮೋಹದಿಂ ಕಂಡಳು ||37||

ಕಂಡು ಮತ್ತೇನ್‌ಗೆಯ್ದಳು | ಈರೈದು |
ಮಂಡೆಯುಳ್ಳವನೆ ಪೇಳು ||
ಪುಂಡರೀಕಾಕ್ಷಿಯವಳ | ವಿನಯದಲಿ |
ಕೊಂಡು ಬಂದಳೆ ನೀ ಪೇಳಾ ||38||

ಪೇಳಲೇನಾ ನೀರೆಯ | ತರಲಯ್ದೆ |
ತಾಳಿ ನಪವರರು ಖತಿಯ ||
ಮೇಲುವರಿದೆಮ್ಮನುಜೆಯ | ಕಿವಿ ಮೂಗ |
ಜಾಳಿಸುತ ಕೊಯ್ದುದರಿಯ ||39||

ಭಾಮಿನಿ

ಖಳಪತಿಯು ತಾನಿಂತೆನಲು ಕೇ |
ಳ್ದಳಲುತಲೆ ಮೈರಾವಣಾಖ್ಯನು |
ಪೊಳೆವ ಖಡ್ಗವ ಪಿಡಿದು ಮಗುಳುಸುರಿದನುಮವನೊಡನೆ ||
ಇಳೆಯೊಳವರಿಂತೆ ಸಗಲಸುರೆಯು |
ಚಳಕದಿಂದೇನ್ ಗೆಯ್ದಳೆಂಬುದ |
ತಿಳಿಸು ಸಾಂಗದೊಳೆನಲು ಸಾಲ್ದಲೆಯವನು ಇಂತೆಂದ ||40||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನನುಸಿರುವೆನೆನ್ನನುಜೆಯಭಿ |
ಮಾನವನು ನಪವರರು ಕಳೆಯಲು |
ದಾನವಿಯು ತಾನಯ್ದಿ ಖರನಾ | ಸ್ಥಾನಕಾಗ ||41||

ಉಸಿರಿಲೀ ವಾರ್ತೆಯನು ಕೇಳು |
ತ್ತಸಮಬಲರುಗಳಯ್ದಿ ಯುದ್ಧದಿ |
ಬಿಸಜಸಖವಂಶಜನ ಬಾಣದಿ | ವಸುಧೆಯೊಳಗೆ ||42||

ವರ ಮಹಾ ಖರ ದೂಷಣ ತ್ರಿಶಿ |
ರರು ಚತುರ್ದಶಸಾವಿರಾಸುರ |
ಧುರಪರಾಕ್ರಮಿಗಳು ಮಡಿದರದ | ನೊರೆವುದೇನೈ ||43||

ಆಗ ಪುನರಪಿ ಶೂರ್ಪನಖೆಯದ |
ರಾಗಮಂಗಳನೈದುತೆನ್ನೊಳು |
ಬೇಗದಿಂದುಸಿರಲ್ಕೆ ಕೇಳ್ದು ಸ | ರಾಗದಿಂದ ||44||

ಮಾವಮಾರೀಚನ ಮುಖದಿ ಕಪ |
ಟಾವಲಂಬನದಿಂದ ಸೀತೆಯ |
ನಾ ವಸುಧೆಯೊಡಗೊಂಡು ಬರೆ ಮ | ತ್ತಾವನಿಪರು ||45||

ವಾರ್ಧಕ

ಘೋರ ಮಾರೀಚನಂ ಕೊಂದುಮವನರಸಿಯಂ |
ಬೇರೆ ಬೇರರಸುತಯ್ತಂದು ಪಂಪಾಕ್ಷೇತ್ರ |
ದಾರಾಮಕಯ್ದಿ ಮರುತಾತ್ಮಜನ ದೆಸೆಯಿಂದ ರವಿಸುತನ ಕಂಡುಮಾಗ ||
ಭೂರಿನೇತ್ರಜನವನ ಪಿತನೆಡೆಗೆ ಕಳುಹುತ್ತ |
ಭೋರನುರೆ ಕೀಶಬಲಮಂ ಕೂಡಿ ಕೇಸರಿ ಕು |
ಮಾರಕನನಟ್ಟಿ ನಮ್ಮೆಡೆಗೆ ವಾರ್ತೆಯನರಿತು ತರುಚರರವೆರಸಿ ರಘುಜ ||46||

ಕಂದ

ಬಂದಾ ವಾರ್ಧಿಯನುಂ ಸಲೆ |
ಬಂಧಿಸಿ ಮತ್ಪುತ್ರಮಿತ್ರಬಾಂಧವರುಗಳಂ ||
ನಿಂದಾ ರಣದೊಳು ಮರ್ದಿಸಿ |
ಚಂದದೊಳಿಹ ರಾಮನೆಂದನಾ ದಶಕಂಠಂ ||47||

ರಾಗ ಮಾರವಿ ಏಕತಾಳ

ಇನಿತ್ಯಾತಕೆ ಚಿಂತಿಪೆ ದನುಜಾಪತಿ |
ಮನುಜರದೇನ್ ಗಣನೆ ||
ಘನವೇ ವಾನರರಾಹವವೆನಗಿಂ |
ದಣುಮಾತ್ರವು ಕೇಳು ||48||

ತಿಕ್ಕುವೆ ಕೀಶರ ಲೆಕ್ಕಿಸದೀಗಳೆ |
ಮುಕ್ಕಣ್ಣನು ಮುನಿಯೆ ||
ಸೊಕ್ಕ ಮುರಿವೆನವರೀರ್ವರ ರಣದೊಳು |
ಜಕ್ಕುಲಿಕೆಯೊಳೊಲಿದು ||49||

ಎನಲೀಕ್ಷಿಸಿ ರಾವಣನತಿ ಜವದಲಿ |
ವಿನಯದೊಳಾ ಖಳಗೆ ||
ಸನುಮತದಿಂದಪ್ಪಣೆ ಕೊಡಲಯ್ತಂ |
ದನು ತನ್ನಯ ಪುರಕೆ ||50||

ಆ ರಾತ್ರೆಯೊಳ್ ಮೈರಾವಣನಯ್ದಿಹ |
ತಾರತಮ್ಯವರಿತು ||
ನಾರೀಮಣಿ ಸರಮೆಯು ಬಳಿಕೋರುವ |
ಚಾರಕನನು ಕರೆದು ||51||

ಪತಿಯೆಡೆಗಟ್ಟಲ್ಕತಿ ಜವದಿಂದಲಿ |
ಪಥಿವೀಶರ ಬಳಿಗೆ ||
ಮತಿಚತುರತೆಯಿಂದಯ್ದುತ ರಾಕ್ಷಸ |
ಪತಿಯನು ಕಂಡೆಂದ ||52||

ರಾಗ ಭೈರವಿ ಝಂಪೆತಾಳ

ಕೇಳು ರಾಕ್ಷಸಪತಿಯೆ | ಕರುಣದಿಂ ಮನವೊಲಿದು |
ಊಳಿಗವನಿದನೊಂದ | ಪೇಳಿ ಬಾರೆಂದು ||53||

ಏಕಾಂತದಿಂ ಸರಮೆ | ತಾ ಕಳುಹಲೈತಂದೆ |
ಪೋಕರಾವಣನುಮವಿ | ವೇಕದಿಂದೀಗ ||54||

ನೆನೆದು ಮೈರಾವಣನ | ಘನ ಬೇಗದಿಂ ಕರೆದು |
ರಣಕೆ ಕಳುಹಿರ್ಪನೆಂ | ಬನುವ ನಿನ್ನೊಡನೆ ||55||

ಉಸಿರಿ ಬಾರೆಂದು ನಿ | ನ್ನರಸಿ ಕಳುಹಿದಳೆಂದು |
ಜಸದಿಂದಲೆರಗಿ ರಾ | ಕ್ಷಸ ನಡೆದ ಪುರಕೆ ||56||

ಕಂದ

ಚಾರಕನೈದಲ್ ಕಾಣುತ |
ಲಾ ರಾಕ್ಷಸನಾಥನೈದೆ ತನ್ನೊಳು ತಿಳಿದುಂ ||
ಕಾರಣಗಳ ಮೇಲವನುಂ |
ಭೋರನೆ ಹನುಮಾದಿಗಳ್ಗೆ ಪೇಳುತ್ತಿರ್ದನಾಗಳ್ ||57||

ರಾಗ ಮುಖಾರಿ ಆದಿಾಳ

ಲಾಲಿಸಿ ಕೇಳಿರೈ ನೀವಿನ್ನು | ಪೇಳುವೆನೊಂದ |
ನಾಲಸ್ಯವಿಲ್ಲದೆಲ್ಲವನ್ನು || ಲಾಲಿಸಿ ||ಪ||

ರಾವಣಾಸುರನು ತಾನೀಗ | ಮರುತಜನ ಸಂ |
ಜೀವನದಿಂದ ಬಲು ಬೇಗ ||
ಈ ವನಚರರೆ | ದ್ದಾವಾರ್ತೆಯ ಕೇ |
ಳ್ದೀ ವಸುಧೆಗೆ ಮೈ | ರಾವಣ ದೈತ್ಯನ |
ಭಾವಿಸಿ ನೆನೆಯ | ಲ್ಕೀವೇಳೆಯೊಳವ |
ಠೀವಿಯೊಳಯ್ದೆ ಮ | ಹಾ ವಿನಯದಲಿ || ಲಾಲಿಸಿ ||58||

ಈ ಸೇನೆಗಯ್ದೆನುತಲಿನ್ನು |  ಅಪ್ಪಣೆಯಿತ್ತು |
ವಾಸಿಯೊಳ್ ಕಳುಹಿದನೆನ್ನು ||
ತಾಸರಮೆಯು ತಿಳಿ | ದಾ ಚರನೋರ್ವನ |
ಬೇಸರದಟ್ಟಿದ | ಳೇಸೆನಲವಕ
ಟ್ಟಾಸುರ ನಿನ್ನೀ | ಕೀಶಸಮೂಹವ |
ಮೋಸವಗೆಯ್ಯುವ | ಜೈಸುವಡರಿದು || ಲಾಲಿಸು ||59||

ಈ ರೀತಿಯಿಂದ ವಿಭೀಷಣನು | ಜಾಂಬವ ರವಿಜ |
ಮಾರುತಾತ್ಮಜರ್ಗೆಲ್ಲ ತಾನು ||
ಭೋರನರುಹಿ ಮ | ತ್ತಾ ರಾತ್ರಿಯೊಳ್ಕಪಿ |
ವಾರಿಧಿಸೇನೆಯ | ಬೇರೊಂದೆಡೆಯೊಳು |
ಭೂರಿ ಜಾಗ್ರತೆಯಿಂ | ಶ್ರೀರಾಮನ ನೆನೆ |
ದೋರಣದಿಂ ಗಂ | ಭೀರದೊಳಿರ್ದ || ಲಾಲಿಸಿ ||60||