ಭಾಮಿನಿ

ದಾನವಾಂತಕನಂಘ್ರಿಯೊಳಗಾ |
ಭಾನುಸುತ ನಳ ನೀಲ ಹನುಮ ಸು |
ಷೇಣಜಾಂಬವ ಮುಖ್ಯರೆರಗಲು ಕಂಡು ರಘುಪತಿಯು ||

ವಾನರರ ಮತವಿಡಿದು ನಾ ಗೀ |
ರ್ವಾಣ ಪತಿ ಹಂಗಿನೊಳು ಗೆಲುವ ವಿ |
ಧಾನ ತಪ್ಪದುಯೆನುತ ರಥವೇರಿದನು ಖರವೈರಿ ||348||

ಕಂದ

ರಾಘನಂಘ್ರಿಗೆ ನಮಿಸುತ |
ಬೇಗದೊಳೇರಿದ ನಾರದ ನಂಬರಕಾಗಂ ||
ವಾಘೆಯ ಪಿಡಿದಾ ಕ್ಷಣದೊಳ್ |
ತಾಗಿದ ಮಾತಲಿಧನುಜನ ರಥದೆಡೆಗಾಗಂ ||349||

ರಾಗ ಮಾರವಿ ಏಕತಾಳ

ಕಳುಹಿದ ನಿನಗೀರಥವ | ಎನ್ನ | ಕೊಳಗುಳಕೆನುತಲೆ ಮಘವ ||
ತಳುವದೆ ನಿನ್ನನು ಗೆಲುವೆ | ಬಳಿ | ಕಳವಿಯೊಳಾತನ ಕೊಲುವೆ ||350||
ಎಮ್ಮೀರ್ವರ ಗೆಲುವುದನು | ನೀ | ನೆಮ್ಮಿದ ಬಗೆಯಿನ್ನೇನು ||
ಸಮ್ಮತವಾಗಿಹ ರಣವೊ | ಕಡು | ಹಮ್ಮಿನ ಮಾರಣದಿರವೊ ||351||

ದನುಜರು ಮಾಯಾವಿಗಳು | ಬಲು | ಘನತರ ಅಷ್ಟಸಿದ್ದಿಗಳು ||
ಅನುಕರಿಸಿರುವರು ನೋಡು | ಇದ | ನರಿತು ವಿಚಾರವ ಮಾಡು ||352||
ಈ ರೀತಿಯ ವಿದ್ಯದೊಳು | ಕಲಿ | ಯೇರಿತೆ ನಮ್ಮ ಧುರದೊಳು ||
ಸಾರಿದೆಯಪಮಾನದೊಳು | ಮೂ | ರ್ಬಾರಿಯ ಮರೆತೆಯೊ ಪೇಳು ||353||

ಭಾಮಿನಿ

ಸಾಕೆಲವೊ ನಾ ಬಲ್ಲೆ ನಿಮ್ಮಿ |
ಕ್ಷ್ವಾಕುಕುಲದವನಿಪರ ನೂತನ |
ದಾಕೆವಾಳತನಂಗಳನು ಸತ್ತ್ವಾತಿಶಯದಿಂದ ||
ನೀ ಕುಹಕವಿದ್ಯೆಗಳ ಮಾತುಗ |
ಳೀ ಕಣನೊಳಾಡದಿರು ಸುಮ್ಮನೆ |
ಜೋಕೆನೋಡೆಂದೆನುತ ಮೀಸೆಯ ತಿರುಹಲವನೆಂದ ||354||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸುಟ್ಟ ಮೀಸೆಯು ಪುಟ್ಟಿತೇ ಜಗ |
ಜಟ್ಟಿ ಕೇಳ್ ನಿನ್ನಟ್ಟ ಹಾಸವ |
ಕುಟ್ಟಿ ಕಳೆವೆನು ದೃಷ್ಟಿಸೆನ್ನಯ | ದಿಟ್ಟತನವ ||355||

ಪೂತುರೇ ಮಝಭಾಪುಕಲಿ ವಿ |
ಖ್ಯಾತನಹೆಮಾತಿನೊಳು ನಿನ್ನಯ |
ರೀತಿಯನು ತತ್‌ಕ್ಷಣ ಗೆಲುವೆ ಸ | ತ್ತ್ವಾತಿಶಯದಿ ||356||

ಕಳ್ಳತನವೇ ರಣವಿಚಾರಗ |
ಳಲ್ಲಿ ನಿನ್ನಗ್ಗಳಿಕೆ ಗರ್ವದ |
ಮಲ್ಲತಿಕೆಯನು ನೋಳ್ಪೆನಿಲ್ಲೆಲೊ | ಖುಲ್ಲ ದನುಜ ||357||

ಆಲಿಸುತ ಕಿಡಿಗೆದರಿ ದನುಜ ತ್ರಿ |
ಶೂಲವನು ಕೈಗೊಂಡು ಭುಜದ |
ಸ್ಫಾಲನವ ಗೈದೊಡನೆ ಪೇಳ್ದ ಕ | ರಾಳನಾಗಿ ||358||

ನಿನ್ನುಳಿವ ನಾ ಕಾಣೆನಿದರೊಳ |
ಗಿನ್ನು ಸೀತೆಯೊಳೆಂಬಮಾತುಗ |
ಳನ್ನು ಪೇಳೆನ್ನೊಡನೆ ರಾಘವ | ಚೆನ್ನವಾಗಿ ||359||

ಸೀತೆಯಿಂ ಮಯಜಾತೆ ನಿನ್ನನು |
ಜಾತಮುಖ್ಯರ ಸಂತವಿಸುವರೆ |
ನಾ ತಿಳಿದುದನು ಪೇಳ್ವೆಕೇಳ್‌ದನು | ಜಾತನೀನು ||360||

ಭಾಮಿನಿ

ಕಾವರೇ ಚತುರಾಸ್ಯ ಸುರಪತಿ |
ದೇವನಾ ಶಂಕರನು ಸುಮ್ಮನೆ |
ಜೀವದಾಸೆಗಳಿರಲು ಎನ್ನನು ಸೇರಿ ಬದುಕೆಲವೊ ||
ನೀ ವಿರೋಧವ ಮಾಡಿಕೆಡದಿರು |
ಭಾವಿತತ್ತ್ವವ ನೋಡು ದೈತ್ಯರ |
ಸಾವಧಾನವದೇಕೆನಲು ನಗುತೆಂದನಾರಾಮ ||361||

ರಾಗ ಭೈರವಿ ಅಷ್ಟತಾಳ

ಖಳರೊಳ್ ಬಾಯ್ಬಡಿಕ ನೀನು | ನಿನ್ನಯಶೂಲ |
ದೊಲವನೀಕ್ಷಿಪೆನು ನಾನು ||
ಗೆಲುವಿನ ಗೆಯ ನೀ ನೋಡಿಕೋ ಎನುತಸ್ತ್ರ |
ಗಳ ಬಿಡಲಾ ರಾಮನು ||362||

ಕಿಡಿಯುಗುಳುತ ಖಳನು | ಕೋಪದಿ ಶೂಲ |
ವಿಡುತಿರೆ ರಘುವರನು ||
ಒಡನೆ ಕಂಗೆಡುತಿಹ ಕಪಿಗಳೆಲ್ಲರಿಗಂದು |
ಒಡಬಡಿಸುತಲಿ ತಾನು ||363||

ಮೂರು ಮೂರ್ತಿಗಳ ಮಂತ್ರ | ಆವಾಹಿಸಿ |
ಏರಿಸಿಬಿಡಲನಂತ್ರ ||
ಹಾರ ತ್ರಿಶೂಲವ ಚೂರು ಮಾಡಿಯೆ ಶರ |
ಸಾರಿತು ಮೂಡಿಗೆಗೆ ||364||

ಭಾಮಿನಿ

ಕೇಳುಕುಶ ನಿಮ್ಮಯ್ಯ ಶರಗಳ |
ಮೇಳಕರ್ತುಗಳೊಡೆಯನಾಗಿರೆ |
ಶೂಲದಿನ್ನೇನ್ ಘನವು ಕೇಳಾಮೂಲರೂಪನಿಗೆ ||
ಆಲಿಗಳು ಕೆಂಪಡರಿ ರಾವಣ |
ಕಾಲಭೈರವನಂತೆ ಖತಿಯನು |
ತಾಳುತೈತಂದಾಗ ಹಳಚಿದನಂದು ರೋಷದಲಿ ||365||

ರಾಗ ಶಂಕರಾಭರಣ ಮಟ್ಟತಾಳ

ಕಂಡು ದನುಜನು | ಕೊಂಡು ಶರವನು |
ಗಂಡುಗಲಿಯನೆಚ್ಚ ಸುಪ್ರ | ಚಂಡವೀರನು ||366||

ಕ್ರೂರದಾನವ | ತೋರುಗರ್ವವ |
ಭೂರಿಭುಜ ಬಲಾತಿಶಯದ | ಸಾರಸತ್ತ್ವವ ||367||

ಎನಲು ಕೇಳುತ | ಕನಲಿ ಗಜರುತ |
ಕಿನಿಸಿನಿಂದ ಪರ್ವತಾಸ್ತ್ರ | ವೆಸೆಯೆ ಕಾಣುತ ||378||

ಕುಲಿಶಶರದೊಳು | ಗೆಲಲುಕ್ಷಣದೊಳು |
ಕಲಿತ ರೋಷದಿಂದಲಗ್ನಿ | ಶರವನೆಸೆಯಲು ||369||

ವರುಣ ಬಾಣದಿ | ತರಿಯೆ ಸತ್ತ್ವದಿ |
ಭರಿತ ರೌದ್ರದೊಡನೆ ತಿಮಿರ | ಶರವ ಬೇಗದಿ ||370||

ಬಿಡಲು ಕಾಣುತ | ಪೊಡವಿಪಾಲಕ |
ಕಡಿಯೆ ಸೂರ್ಯಶರದಿ ಕಂ | ಡೊಡನೆ ದಿತಿಸುತ ||371||

ಮೇಘಬಾಣವ | ಬೇಗ ಬಿಡಲವ |
ನಾಗ ಶಯನ ವಾಯುಶರದಿ | ನೀಗೆಕಂಡವ ||372||

ಸರ್ಪಬಾಣವ | ದರ್ಪದಿಂದವ |
ದರ್ಪಕಪಿತಗೆಸೆಯೆ ಕಂಡು | ವಿಹಗಬಾಣವ ||373||

ಬಿಡಲು ತವಕದಿ | ಕಡಿಯೆ ಹರುಷದಿ |
ಮಡನ ತೆರದೊಳಿದ್ದ ದೈತ್ಯ | ರೊಡೆಯ ತವಕದಿ ||374||

ಭಾಮಿನಿ

ನಿಖಿಳ ಮಂತ್ರಾಸ್ತ್ರಗಳು ಪೋಗಲು |
ವಿಕಳಮತಿ ಮುಳಿದಾ ಕ್ಷಣವೆರಣ |
ಯುಕುತಿಯನು ಗ್ರಹಿಸಿದನು ಖಳಮಾರೀಚನಿತ್ತಿರುವ ||
ಪ್ರಕಟ ಮಾಯಾಚಕ್ರದೊಳಗೀ |
ಸಕಲ ಕಪಿಬಲದೊಡನೆ ರಾಘವ |
ವಿಕಟಭುಜ ಸಿರಿಯೊಲಿಸುವೆನು ತಾನೆನುತ ಗರ್ಜಿಸುತ ||375||

ರಾಗ ಮಾರವಿ ಏಕತಾಳ

ವಿಕ್ರಮಿ ರಾವಣ | ಚಕ್ರವನಾಗ ತ್ರಿ |
ವಿಕ್ರಮನಂದದಿ | ವಕ್ರಿಸುತಲೆ ಖಳ |
ಚಕ್ರಿಯ ಬಿಡಲಿಕು | ಪಕ್ರಮಿಸಲು ಬೇ |
ಗಕ್ರಮಿಸಿತು ಶ | ಕ್ರಾದ್ಯರ ತೋಷ ||376||

ಸುತ್ತಿದುದಾ ಖಳ | ಮೊತ್ತಗಳೆಲ್ಲವು |
ಉತ್ತಮ ಧನುಶರ | ವೆತ್ತುವ ರೋಷದಿ |
ಹತ್ತುತ ರಥ ಬೆ | ನ್ನೊತ್ತುತಲಾ ಪುರು |

ಷೋತ್ತಮ ನೆಡೆಯೊಳು | ಬಿತ್ತರಿಸಿದರು ||377||

ಕಂಡುದು ಖಳಕುಲ | ತಂಡವುಕೇಳು |
ದ್ದಂಡತನದಿ ಖತಿ | ಗೊಂಡು ರಣಾಗ್ರದಿ |
ಭಂಡ ಕಪಿಗಳನು | ಹಿಂಡುವೆ ನೆನುತಲೆ |
ಗಂಡುಗಲಿಗಳುರೆ | ಕೊಂಡರು ಶರವ ||378||

ವಾರ್ಧಕ

ಸುರಪಜಿತು ಮಕರಾಕ್ಷನತಿಕಾಯ ಮಿತ್ರಘ್ನ |
ದುರುಳ ಧೂಮ್ರಾಕ್ಷ ವಿದ್ಯುನ್ಮಾಲಿ ಘಟಕರ್ಣ |
ನರವೈರಿ ಕುಂಭ ದುರ್ಮದ ವಿರೂಪಾಕ್ಷನೆಂಬಸುರಪಡೆ ಸಹಿತ ಪೊರಟು ||

ಪರಿಘ ಮುಸಲ ಮುಸುಂಡಿ ಭಿಂಡಿಪಾಲಾದಿ ಶರ |
ಕರದೊಳೆತ್ತುತಲೆ ಕಾಡ್ಗೋಣ ಶಾರ್ದೂಲ ವಕ |
ಕರಡಿ ಹರಿ ಶರಭ ರಥ ತುರಗ ವಾಹನಗಳಿಂದೈದಿತಾ ಕ್ಷಣದೊಳಾಗ ||379||

ರಾಗ ಮಧ್ಯಮಾವತಿ ಏಕತಾಳ

ಏನಿದೇನಿದು ಶರಣ | ಚೋದಿಗವಿ | ದೇನಿದೇನಿದು ಶರಣ   || ಪಲ್ಲವಿ ||

ಏನಿದೇನಿದು ಜಾಣ | ದಾನವರೆನಗೇನ |
ಹೀನ ಕತ್ಯಗಳ ನಿ | ಧಾನವೇನಿದು ಪೇಳು ||379||

ಅಂದು ಮಾಡಿದ ಯಜ್ಞ | ದಿಂದಲೀ ಖಳರೆಲ್ಲ |
ರೊಂದಾಗಿ ಜನಿಸಿದ | ರಿಂದೀಗೆಂಬುದು ಸರಿ ||380||

ಸಿಂಧುವಿನಂದದಿ | ಮುಂದೆ ಬರುವ ಸೇನೆ |
ಯಂದ ನೋಡಲು ಕಪಿ | ವಂದ ಕಂಗೆಡುವುದು ||381||

ಭಾಮಿನಿ

ನರರ ತೆರದಲಿ ಕೇಳುವೆಯೊರಘು |
ವರನೆ ನಿನ್ನಗ್ಗಳದ ಮಾಯಕೆ |
ಸರಿಯಹುದೆ ರಕ್ಕಸರ ಮಾಯವಿದೆಂದನಸುರೇಂದ್ರ ||

ಶರಣನೆಂದುದ ಕೇಳಿ ವೈಷ್ಣವ |
ಪರಮ ಮಂತ್ರಾಸ್ತ್ರವನು ಬಿಡುತಿರೆ |
ತರಿದು ಬಿಸುಟಿತು ಮಾಯಕದ ಚಕ್ರವನು ನಿಮಿಷದಲಿ ||382||

ಕಂದ

ಅಚ್ಚರಿಯದೊಳಾ ರಾವಣ |
ಕೊಚ್ಚಿದನೇ ರಾಘವನೀ ಚಕ್ರವನೆನುತಂ ||
ಕಿಚ್ಚನುಗುಳುತಾ ಕ್ಷಣದೊಳ್ |
ಹೆಚ್ಚಿತೆ ಪೌರುಷ ಮನುಜಗೆನುತ ಯೋಚಿಸಿದಂ ||383||

ರಾಗ ಸಾರಂಗ ಆದಿತಾಳ

ತೋರಿತುತನಗೊಂದುಪಾಯ | ಕಲಿ |
ಯೇರುವ ಬಗೆಗಿದು ತೋರ್ಪುದು ನ್ಯಾಯ   || ಪಲ್ಲವಿ ||

ಪೂರ್ವದೊಳಾ ಪಿತಾಮಹನು | ತನ್ನ |
ಸರ್ವ ಶಕ್ತಿಯ ಬಾಣವೊಂದನಿತ್ತಿಹನು ||
ಊರ್ವಿಪನೀ ರಘುವರನ | ಗೆದ್ದು |
ಗರ್ವವ ಮಧಿಸುವೆ ಕೊಳುಗುಳದೊಳು ನಾ ||384||

ಬಾಣವ ತೆಗೆದು ಬೊಬ್ಬಿರಿದ | ಎನ್ನ |
ತ್ರಾಣವ ನೋಡಿಕೊ ಎನುತ ಮುಂಬರಿದ ||
ಹೀನಮಾನವನೆಂದು ಜರೆದ | ನಿನ್ನ |
ಜಾಣತನವ ನೋಳ್ಪೆನೆಂದು ಗರ್ಜಿಸಿದ ||385||

ಎನುತ ದಿವ್ಯಾಸ್ತ್ಯವ ಭರದಿ | ಬಿಡ |
ಲನಿತರೊಳ್ ವಿಪ್ರವೇಷದಿ ಬ್ರಹ್ಮನೈದಿ ||
ಚಿನುಮಯಾತ್ಮಕನ ಕಂಡೆರಗಿ | ಪೇಳ್ದ |
ನಿನಕುಲೇಶನಿಗಂಬು ಜೋದ್ಭವ ನಡುಗಿ ||386||

ಭಾಮಿನಿ

ಪಿತನೆ ಕೇಳೆನ್ನೊಲುಮೆಯಿಂದಲಿ |
ದಿತಿಜ ಪಡೆದಹನಸ್ತ್ರವಿದರನು |
ಪ್ರತಿಗೆ ತನ್ನಯ ಶರವ ಬಿಡು ನೀನೆನುತಲಜನುಡಿಯೆ ||
ಪಥವಿಯಮರನ ಕಳುಹಿರಘುಪತಿ |
ಯತಿಶಯದ ಪೈತಾಮಹಾಶರ |
ನತುಳ ಮಿಕ್ರಮಿಯೆಸೆದು ಕಡಿದಿಕ್ಕಿದನು ಖಳಶರವ ||387||

ಕಂದ

ದಿವ್ಯಾಶರಾಸನವಡಗಲು |
ಕ್ರವ್ಯನು ಕಂಡಾಕ್ಷಣ ಕೋಪದಿ ಕಿಡಿಯಿಡುತಂ ||
ಅವ್ಯಯ ನಡೆದೈತಂದಾ |
ಭವ್ಯರತೆರದೊಳು ಮಾತುಗಳಾಡಿದನಾಗಳ್ ||388||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಸೀತೆಯೊಳಗತಿ ಹಿತದ ಮನವಿ |
ನ್ನ್ಯಾತಕೆಲೆ ರಘುನಾಥ ಕೇಳ್ ಪುರು |
ಹೂತ ಕಳುಹಿದ ರಥದ ಹಮ್ಮಿನ | ಖ್ಯಾತತನವೋ ||389||

ಹತ್ತು ಶಿರ ವಿಪ್ಪತ್ತು ಭುಜಗಳ |
ಹೊತ್ತು ತಿರುಗುವ ದುರುಳ ನಿನ್ನೆದೆ |
ಕತ್ತರಿಸಿ ನಾನೊಲಿಪೆನೀ ರಣ | ಪಥ್ವಿಸುತೆಯ ||390||

ಕಾಮಹರ ಕಮಲಜ ದಿವೌಕಸ |
ಸ್ತೋಮಗಳಿಗಂಜುವನೆ ರಾವಣ |
ನೀ ಮನುಜ ಕೆಣಕಿದೆಯ ಕೇಳು | ದ್ದಾಮತನದಿ ||391||

ನಾ ಮನುಜನೋ ಹರವಿರಿಂಚಿಗ |
ಳಾ ಮಹಾತ್ಮರ ಸೃಷ್ಟಿಸಿದ ನಿ |
ಸ್ಸೀಮ ನೀ ನೋಡೆನುತಲಾ ರಣ | ಭೀಮನುಡಿದ ||392||

ಬಲ್ಲಿದವನಾಗಿರಲಯೋಧ್ಯೆಯ |
ನಲ್ಲಗಳೆದಿಲ್ಲಿಗೆ ಪ್ರವಾಸಿತ |

ಖುಲ್ಲನಂತಯ್ತಂದು ದ್ಯಾತಕೆ | ಮಲ್ಲ ನೀನು ||393||

ಅಹುದು ಕೇಳ್ ನಿನ್ನಂತ ದುರುಳರ |
ಬಹಳ ಕಾಮುಕರುಗಳ ಚೋರರ |
ಗಹನವನು ಭೇದಿಸಲು ಬಂದೆನು | ಕುಹಕಿ ಕೇಳು ||394||

ರಾಗ ಕಾಂಭೋಜಿ ಝಂಪೆತಾಳ

ಬಲ್ಲೆ ನಾ ತಾಟಕಿಯ | ಚೆಲ್ಲ ಬಡಿದಿಹ ಪರಿಯ |
ಹುಲ್ಲು ಚಾಪವ ಮುರಿದು ಮತ್ತಾ ||
ಉಲ್ಲಾಸದೊಳು ದ್ವಿಜನ | ಬಿಲ್ಲನೆಳೆಯುತ ಹುಲ್ಲಿ |
ನಲ್ಲಿ ಕಾಗೆಯ ಗೆದ್ದ ಚರಿತ ||395||

ನಿಚ್ಚಳದಂಗೈ ನೋಡ | ಲಚ್ಚ ಕನ್ನಡಿ ಯಾಕೆ |
ಮುಚ್ಚು ಬಾಯ್ಬಡಿಕತನಗಳನು |
ಹುಚ್ಚ ನೀ ಕಾರ್ತವೀರ್ಯನ ಕೆಣಕಿದುದ ಬಲ್ಲೆ |
ಕೊಚ್ಚದಿರು ಪೌರುಷಂಗಳನು ||396||

ಯಾರು ಸರಿಗಾಣೆ ಹರಿ | ಣನ ಕೊಲುವ ವಿದ್ಯದ ವಿ |
ಚಾರ ಬಲ್ಲವನು ನೀನೆನುತ ||
ನಾರಿಯನು ಹೋಗಾಡಿ | ಹಾರದಿಹ ಪಕ್ಷಿಯ ವಿ |
ಚಾರಿಸುತ ಬಂದ ವಿಖ್ಯಾತ ||397||

ಹುರಿಯ ಹಗ್ಗದೊಳು ಪ | ಲ್ಗಿರಿದು ತೊಟ್ಟಿಲ ನಡುವೆ |
ಸರಿದಾಡಿದುದ ಮರೆತೆಯೇನೈ ||
ಹರನ ರಜತಾದ್ರಿಯಡಿ | ಯೊಳಗೆ ಕೈಗಳು ಸಿಕ್ಕಿ |
ದಿರವ ಯೋಚಿಸ ಬಾರದೇನೈ ||398||

ಕಾಡುಗಳ ಸಂಚರಿಪ | ಕೋಡಗಗಳೊಡಗೊಂಡು |
ನಾಡ ಸಂಚರಿಸಿ ಬಗೆಯೇನು ||

ಮೂಢರಂದದಲಿ ಪೇ | ಚಾಡಿ ಸೇತುವ ಗೆಯ್ದ |
ಗಾಢ ಗರ್ವಿತನಲ್ಲೊ ನೀನು ||399||

ಬಲಿಯ ಮನೆಯೊಳು ಸೇರಿ | ಗೆಲಿದ ಪರಿ ಪೇಳಿದರೆ |
ನಲಿವರಲ್ಲವೆ ಲೋಕದೊಳಗೆ |

ಬಲವಂತ ಜನಕನಲಿ | ಬಿಲುವೆತ್ತಿದುದ ಕೇಳಿ |
ಕಳಕಳಿಪರಲ್ಲೆ ಭೂಮಿಪರು ||400||

ಮೂಢ ರಕ್ಕಸರ ಕಡಿ | ದಾಡಿದೀ ಪೌರುಷಗ |
ಳಾಡಲಂಜುವನಲ್ಲ ತಾನು ||

ಗಾಢ ನಿದ್ರೆಯ ಮಾಳ್ಪ | ಖೋಡಿ ದನುಜನ ನಿರಿದ |
ಪಾಡುಗಳ ತೋರದಿರು ನೀನು ||401||

ಅನ್ಯಾಯದಿಂದ ಶತ | ಮನ್ಯು ಮುಂತಾದವರ |
ಸೈನ್ಯವನು ಬಡಿದು ತ್ರೈಜಗದಿ ||

ಮಾನ್ಯ ತಾನೆಂಬ ಘನ | ನಿನ್ನ್ಯಾಕೆ ಬಿಡುಜ್ಞಾನ |
ಶೂನ್ಯ ದಶಕಂಠ ಕಾಳಗದಿ ||402||

ರಾಗ ಭೈರವಿ ಏಕತಾಳ

ಅನರಣ್ಯಕ ನೆಂಬವನು | ನೀ |
ಮ್ಮನುವಯದೊಳಗೆ ಪುಟ್ಟಿಹನು ||
ರಣದೊಳು ತರಿದಂಥವ ನಾ | ನೀ |
ಕೆಣಕಲು ನೋಡಿಕೊ ಹವಣ ||403||

ಗುರುದ್ರೋಹವು ನಿನ್ನೊಳಗೆ | ಇರು |
ತಿರೆ ಕಾದುವೆಯಾಂ ಹೀಗೆ ||
ತರುಣಿಯ ದೆಸೆಯಿಂದಲ್ಲ | ಕೇಳ್ |
ದುರುಳನೆ ಸಾರಿದೆನೆಲ್ಲ ||404||

ಪೂರ್ವದ ಹಗೆತನ ಬೆಳೆಸಿ | ನಿನ್ನ |
ಗರ್ವವ ತೋರ್ಪೆಯ ಸಹಸಿ ||

ನಿರ್ವಹಿಸದೆ ಬಿಡೆ ನಿನ್ನ | ಛಲ |
ಸರ್ವಥ ತೋರದಿರಿನ್ನಾ ||405||

ಉರಿಮಸಗುತ ರಘುವರನು | ದಶ |
ಶಿರನಿಗೆಸೆಯಲಸ್ತ್ರವನು ||
ತರಿದೊಟ್ಟಿತು ಶಿರಗಳನು | ತಲೆ |
ಭರದಿ ಚಿಗುರೆ ಬಳಿಕವನು  ||406||

ಕುತ್ತಿದ ಚಿಗುರಿದ ತಲೆಯ | ಭುಜ |
ಕತ್ತರಿಸಿದ ರಘುರಾಯ ||
ಮತ್ತೆಪುಟ್ಟಿತು ಮೊದಲಂತೆ | ಬಿಡ |
ದೊತ್ತರಿಸಿದ ನೋರಂತೆ ||407||

ಪಲ್ಲವಿಸಿತು ಬಾಹುಗಳು | ಅದ |
ನೆಲ್ಲ ತರಿದನನಿತರೊಳು ||
ತಲ್ಲಣಿಸುತ ಕೋಪದೊಳು | ಅದ |
ನಿಲ್ಲದ ತೆರ ಖಂಡಿಸಲು ||408||

ಶಿರಗಳು ಭುಜಗಳು ಸಹಿತ | ಬಲು |
ತ್ವರಿತದಿ ಪುಟ್ಟಲು | ಮತ್ತಾ ||
ಪುರುಷೋತ್ತಮ ನೀಕ್ಷಿಸಿದ | ಅ |
ಚ್ಚರಿಯೊಳು ಯೋಚನೆಗೆಯ್ದ ||409||

ಕಂದ

ವನಜಾಂಬಕನೀ ಪರಿಯೊಳು |
ಮನದೊಳು ಚಿಂತಿಸೆ ಕಂಡಾ ಮಾತಲಿಯಾಗಳ್ |
ಚಿನುಮಯನಂಘ್ರಿಗೆ ನಮಿಸುತ |
ಲನುನಯದಿಂ ಪೇಳಿದ ರಣ ಕೌತುಕದಿರವಂ ||410||

ರಾಗ ಕಾಂಭೋಜಿ ಅಷ್ಟತಾಳ

ಬೇಸರಿಸಲು ಕಾಲವಲ್ಲಿದು ನೋಡಿಕೊ | ರಾಮಚಂದ್ರ || ಈಗ |
ಘಾಸಿಮಾಡೀತನ ದೋಷವನೆಣಿಸದೆ | ರಾಮಚಂದ್ರ  ||411||

ಚಿಗುರುವ ತೆರಗಳ ನೋಡಿಯಂಬರದೊಳು | ರಾಮಚಂದ್ರ || ಸುರ |
ನಗರೇಶ ಸಹಿತೆಲ್ಲ ಮಿಡುಕುತ್ತಲಿರುವರು | ರಾಮಚಂದ್ರ ||412||

ತಡ ಮಾಡಲ್ಯಾತಕೊ ತೊಡುಜೀವ ಶರವನು | ರಾಮಚಂದ್ರ || ಕ್ರೂರ |
ದಡಿಗನ ಶಿರವ ಕತ್ತರಿಸೊ ಈಕ್ಷಣದೊಳು | ರಾಮಚಂದ್ರ ||413||

ಭಾಮಿನಿ

ಮಾತಲಿಯ ಮಾತುಗಳ ಲಾಲಿಸಿ |
ಭೂತಳೇಶನು ಮಾರ್ಗಣದೊಳಾ |
ಯಾತುಧಾನನ ಶಿರಗಳನು ಕಡಿದುರುಳಿಸಲು ಬಳಿಕ ||
ಆ ತತುಕ್ಷಣ ಶೋಭಿಸುವದತಿ |
ನೂತನದ ಶಿರಪಂಕ್ತಿ ಚಾಪಸ |
ಮೇತ ಬಾಹುಗಳುದುಭವಿಸೆ ಕಂಡಾಗ ರಘುನಾಥ ||414||

ವಾರ್ಧಕ

ಸಿಟ್ಟಿನಿಂ ಕುಟ್ಟಿದಂ ಪುಟ್ಟುತೈತಹ ತಲೆಗೆ |
ಳೊಟ್ಟಿದುದು ಬೆಟ್ಟದೊಲ್ ರಟ್ಟೆಗಳ ಕೊಚ್ಚಿ ಮಿಗೆ |
ಯಟ್ಟಹಾಸದೊಳಿರಲು ತಟ್ಟನಾ ಭುಜಕೆ ಭುಜ ಶಿರಕೆ ಶಿರವಾಗಲೊಡನೆ ||
ಎಷ್ಟ ತರಿದೊಟ್ಟೆ ಮತ್ತಷ್ಟೆ ಪುಟ್ಟುವ ಪರಿಯ |
ದಿಟ್ಟಿಸುತ ನಿಟ್ಟುಸಿರ ಬಿಟ್ಟೊಡನೆ ರಥದಿ ಕಂ |
ಗೆಟ್ಟು ಧನುಶರ ಬಿಟ್ಟು ಕುಳಿತ ದನುಜಘರಟ್ಟನೊಡನೆ ಮಾತಲಿ ನುಡಿದನು ||415||

ರಾಗ ಮುಖಾರಿ ಏಕತಾಳ

ಲಾಲಿಸು ದೇವರ ದೇವ | ನೀಲಮೇಘಶ್ಯಾಮ ||
ಖೂಳ ದಶಕಂಧರನು ಬರುವ | ನೇಳು ರಣನಿಸ್ಸೀಮ ||416||

ಗಾಢದಿಂದ ಓಡಿಬರುವ | ಮೂಢ ದುರುಳನಾತ ||
ನೋಡು ರಣವ ಮಾಡು ಶರವ | ಹೂಡೆಲೊರಘುನಾಥ ||417||

ಹಾರುತಿಹವು ವಾರುವಗಳು | ಸಾರಿ ಮುಂದಕಾಗಿ ||
ಭೂರಿ ವಿಕ್ರಮಾತಿಶಯವ | ತೋರು ಕಳವಿಗಾಗಿ ||418||

ರಾಗ ದ್ವಿಜಾವಂತಿ ಝಂಪೆತಾಳ

ಮಾತಲಿಯೆ ನಾನೆಂಬ | ಮಾತ ನೀ ಕೇಳು ||
ಯಾತುಧಾನನೊಳು ಕೈ | ಸೋತುದಿಂದಿನೊಳು || ಪಲ್ಲವಿ ||

ನೂಕಿದೆವು ಶರಗಳ ಸ | ಮೀಕ ಬಾಹಿರನೆಡೆಗೆ |
ಛೀಕರಿಸಿದಳು ಮತ್ಯು | ಈ ಕಡುಗಲಿಯೊಳು |
ಯಾಕೆ ಜಯದಭಿಲಾಷೆ | ಸಾಕು ಬಳಲಿದೆಬರಿದೆ |
ನಾಕೇಶನೆಡೆಗೆ ಸುವಿ | ವೇಕದಿಂ ತೆರಳು ||419||

ಶರಣ ಬಾರೈ ಎನ್ನ | ಮರೆಯ ಹೊಕ್ಕೆಯ ಬರಿದೇ
ಎರಡು ವಚನದಾಯ್ತು | ಧರೆಯೊಳೆಮಗಿಂದು ||
ತೆರಳು ನಿನ್ನಗ್ರಜನ | ಚರಣ ಕಾನತನಾಗಿ |
ಹರುಷದಿಂ ಜೀವಿಸುವ | ತೆರನ ನೋಡಿನ್ನು ||420||

ಇನಕುವರ ಬಾರಿತ್ತ | ದಣಿದಿರಲ್ಲವೆ ಬಣಗು ||
ದನುಜರೊಳು ಕಾದಿದಿರೆ | ಎನಿತುನಮಗಾಗಿ ||
ಬನದೊಳಾಡಿದ ನುಡಿಯಿಂ | ದಿನಲಿನಿಲುಗಡೆಯಾಯ್ತು |
ಘನ ಬೇಗ ಪೋಗು ಕಪಿ | ಗಣಸಹಿತ ಪುರಕೆ ||421||

ರಾಗ ಭೈರವಿ ಝಂಪೆತಾಳ

ಪಾವಮಾನಿಯೆ ಬಾರೊ | ಸೇವೆಯೊಳು ನಿನ್ನ ಸರಿ  |
ಯಾವಾತನನು ಕಾಣೆ | ಭೂವಲಯದೊಳಗೆ ||
ಭಾವಿತನು ನಮಗೆ ಸಂ | ಭಾವ್ಯರೀ ಜಾಂಬವರು |
ಈ ವಿರೋಧಗಳೆಲ್ಲ | ನೀವು ನೋಡಿದಿರೆ ||422||

ತಮ್ಮ ನೀನ್ಯಾಕಿಂದು | ದುಮ್ಮಾನದಿಂದಿರುವೆ |
ನಮ್ಮ ರಣಗಲಿತನವ | ನೊಮ್ಮೆ ನೋಡಿದೆಯ ||
ಸುಮ್ಮನೀಯಾಣಕವು | ನೆಮ್ಮಿತಲ್ಲವೆ ಜಗದಿ |
ದುಮ್ಮಾನದಿಂದಿನ್ನು | ಹಮ್ಮಯಿಸಲೇನು ||423||

ಧರಣಿಜೆಯ ನೀಗಾಡಿ | ಧುರದೊಳಪಜಯಗೂಡಿ |
ಧರೆಯ ಸಂಚರಿಸಿ ರಘು | ವರ ಪೋದನೆಂದು ||
ಅರುಹು ನೀನದ ಪೋಗಿ | ತೆರಳು ಪುರದೆಡೆಗಾಗಿ |
ಬರಿದೆ ತಡಮಾಡದಿರು | ತರಹರಿಸಿ ನೀನು ||424||

ಭಾಮಿನಿ

ಮಾತೆಯರಿಗನುಜಾತಮುಖ್ಯ ಸ |
ಮೇತ ಪುರಪರಿವಾರ ಜನರೊಳು |
ಈ ತೆರನ ಪೇಳೆನಲು ಕೈ ಮುಗಿದೆಂದ ಸುರಸೂತ ||
ಮಾತಕೇಳೆಲೊ ದೇವನೀದನು |
ಜಾತವಂಶಾಂತಕನು ದ್ರುಹಿಣನ |
ತಾತ ನೀನೀ ಪರಿಯ ಮಾತುಗಳಾಡಲೇಕಿನ್ನು ||425||

ರಾಗ ಬಿಲಹರಿ ಅಷ್ಟತಾಳ

ಬಲ್ಲೆ ದೇವ ನಿನ್ನ ಚರಿತ | ಇದ |
ನೆಲ್ಲ ತೋರಿಸಲ್ಯಾಕೊ ಶ್ರೀ ರಘುನಾಥ ||
ಮಲ್ಲ ಮಾಯಾವಿ ನೀನೆನುತ | ನರ |
ನಲ್ಲ ನೀ ಪುಲ್ಲಲೋಚನ ನೆಂಬಮಾತ | ಬಲ್ಲೆ ||426||

ಸುಜನಪಾಲಕ ವಿಶ್ವಂಭರನೆ | ನೀನು |
ಭಜಕ ರಕ್ಷಕನಲ್ಲೊ ದಶರಥಾತ್ಮಜನೆ ||
ಭುಜಗಶಯನ ಲಕ್ಷ್ಮೀವರನೆ | ನೀನು |
ಅಜಪಿತನಾಗಿಹೆ ಖಳಕುಲಾಂತಕನೆ | ಬಲ್ಲೆ ||427||

ಎನಗೆ ಹೊಸಬ ನೇನಲ್ಲಾ | ನಿನ್ನ |
ಘನ ಮಾಯೆಯನು ಇವರರಿತವರಲ್ಲ ||
ಚಿನುಮಯಾತ್ಮಕ ನಿನ್ನ ನಿಜವ | ನಾನು |
ಮನದಿ ನಿಶ್ಚಯಿಸಿಹೆ ತೆಗೆಧನುಶರವ || ಬಲ್ಲೆ ||428||