ಕಂದ
ಗಿರಿಜಾಸುತ ನಿನ್ನಡಿಗಂ |
ಪೊಡಮಡುವೆನು ಪಾಲಿಸೆನಗೆ ಕರುಣಾಮೃತಮಂ ||
ದುರಿತವನೀಗಿಸಿ ಕೃತಿಯಿದ |
ಮೆರೆಸೈ ಗಣನಾಥ ಲೋಕತ್ರಯವಿಖ್ಯಾತ                  ||೧||

ಭಾಮಿನಿ
ಜಲರುಹಾಸನಸತಿಯೆ ತವಪದ |
ನಳಿನಕೊಂದಿಸಿ ಪೇಳ್ವೆನೀಕೃತಿ |
ಇಳೆಯೊಳನುದಿನ ಬಾಳುವಂದದಿ ನುಡಿಸು ಜಿಹ್ವೆಯಲೀ ||
ಕಲಿತವನು ನಾನಲ್ಲ ಕಾವ್ಯದ |
ತಿಳುವಳಿಕೆ ಎನಗಿಲ್ಲ ವರಕವಿ |
ಗಳಿಗೆರಗಿ ರಚಿಸುವೆನು ಕದಳೀಪಳ್ಳಿ ಗಣನಾಥ                        ||೨||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಅರಸ ಜನಮೇಜಯಗೆ ಜೈಮುನಿ |
ವರನು ಭಾರತ ಕಥೆಯನರುಹುತ ||
ಲಿರಲು ಪದಕಭಿನಮಿಸಿ ಕೇಳಿದ | ನೃಪತಿಯಾಗ                      ||೩||

ವರಯುಧಿಷ್ಠಿರನಶ್ವಮೇಧಕೆ |
ತುರಗವಾವಧರಾಧಿಪತಿಯದು |
ಧುರದಿ ಸೋಲಿಸಿ ತಂದರಾರೆಂ | ದರುಹಿ ಮತ್ತೆ                       ||೪||

ಕಾಲನಣುಗನ ಮಖದ ತುರಗವ |
ಖೂಳ ಸಾಲ್ವಾನುಜನದೇತಕೆ |
ತೋಳಬಲದಿಂದೊಯ್ದು ತಂದವ | ರಾರು ಗೆಲಿದು                    ||೫||

ಪೇಳಬೇಕೆಂದರುಹಲಾ ಮುನಿ |
ಪಾಲ ನಸುನಗುತೆಂದ ನೃಪತಿಗೆ |
ಮೂಲದಿಂದಾದ್ಯಂತ ಚರಿತವ | ಸಾಂಗವಾಗಿ             ||೬||

ರಾಗ ಕೇದಾರಗೌಳ ಅಷ್ಟತಾಳ
ಕರಿಪುರದೊಳೊಡ್ಡೋಲಗದಿ ಯುಧಿಷ್ಠಿರ |
ನಿರುತಿಹಸಮಯದಲೀ ||
ವರವ್ಯಾಸ ಮುನಿಪ ತಾನೈತರೆ ಕಾಣುತ್ತ |
ಲೆರಗಿ ಕುಳ್ಳಿರಿಸಿದನು                    ||೭||

ಹರುಷದಿಂದಾತಿಥ್ಯವೆಸಗಿ ಧರ್ಮಜ ಮೌನ |
ಧರಿಸಿರುವದನರಿತು ||
ಕೊರತೆಯಾವುದು ನಿನಗೇನಾಯಿತೆಂಬುದ |
ನರುಹಬೇಕೆನಲೆಂದನು                 ||೮||

ಕೊಂದು ದಾಯಾದ್ಯರ ಗೋತ್ರಹತ್ಯಾದೋಷ |
ಬಂದಿಹುದದರಿಂದಲೇ ||
ಕುಂದಿಹೆನಲ್ಲದಿನ್ನೇನಿಲ್ಲವೆನುತ್ಯಮ |
ನಂದನ ಪದಕೆರಗೆ                        ||೯||

ಮುನಿ ಪೇಳ್ದನಾಗ ಧರ್ಮಜನ ಶಿರವನೆತ್ತಿ |
ಜನಪರು ರಾಜ್ಯಕಾಗಿ ||
ಸೆಣಸಿ ಶತ್ರುಗಳ ಸಂಹರಿಸಲು ಗೋತ್ರ ನಾ |
ಶನದೋಷ ಬರಬಹುದೇ                ||೧೦||

ಬಾಲ್ಯದಿಂದೆಮ್ಮನು ಪಾಲಿಸಿರುವ ಭೀಷ್ಮ |
ಮೇಲಾದ ವಿದ್ಯೆಯನು ||
ಪೇಳಿದ ಗುರುವಧೆಗೈದೆವಾವೆಮ್ಮಯ |
ಬಾಳು ಸುಡಲಿ ಎಂದನು                ||೧೧||

ಬೇಡವೆನಗೆ ರಾಜ್ಯದೈಸಿರಿ ಭೀಮಗೆ |
ನಾಡಿನ ದೊರೆತನವ ||
ನೀಡಿ ನಿಶ್ಚಲತೆಯಿಂ ತಪವನಾಚರಿಸಲು |
ಕಾಡಿಗೈದುವೆನೆಂದನು                  ||೧೨||

ಮರುಳು ಯುಧಿಷ್ಠಿರ ವನಕೈದಿದರೆ ದೋಷ |
ಪರಿಹರವಾಗುವುದೇ ||
ವಿರಚಿಸು ಹಿಂದೆ ರಾಮಾದಿ ಮರುತರ್ಗೈದ |
ತುರಗ ಮೇಧವನೆಂದನು               ||೧೩||

ತುರಗ ಮೇಧದಬಗೆಯೆಂತೊ ಧನವನೆಲ್ಲಿ |
ತರುವದೊ ಹಯವಾವುದೊ ||
ಪರಿಯ ಪೇಳುವದೆನಲಾಗ ಮುನೀಂದ್ರನು |
ಅರುಹಿದ ಯಮಜಾತಗೆ                 ||೧೪||

ಮರುತರಾಯನು ಹಿಂದೆ ತುರಗ ಮೇಧದಿ ದ್ವಿಜ |
ವರರಿಗಿತ್ತಿಹ ಧನವ ||
ಇರಿಸಿಹಹಿಮಗಿರಿಯಲಿ ಭಾರವಾಗಲು |
ತರಿಸಿ ಯಾಗವ ಮಾಳ್ಪುದು                        ||೧೫||

ಧರಣಿಸುರರ ಸೊತ್ತಿನಿಂದಲಿಯಾಗವ |
ವಿರಚಿಸಲೀದೋಷದ ||
ಪರಿಹರಕಿನ್ನೊಂದು ದುರಿತವ ಕೈಗೊಂಡ
ತೆರನೆನಗಾಹುದಲ್ಲ                       ||೧೬||

ಪರಶುಧರನು ದಾನವಿತ್ತುದಕ್ಕೆಲ್ಲ ಭೂ |
ಸುರರದಾಗಿರಲದನು ||
ಪೊರೆವುದು ನೃಪವರ್ಗವದರಿಂದಲಾವಿತ್ತ |
ತರಿಸು ನಿನ್ನಧಿಕಾರವು                   ||೧೭||

ತುರಗವು ಶ್ವೇತವಾಗಿರಬೇಕು ಲಾಂಗೂಲ |
ವರಿಸಿನ ವರ್ಣದಲೀ ||
ಇರಬೇಕಿನ್ನದಕೊಂದೇ ಕಿವಿ ನೀಲ ನಸುಗಮ |
ವಿರುವದುಚಿವಪ್ಪುದು                     ||೧೮||

ಪೃಥ್ವಿಸುಮನಸರಿಪ್ಪತ್ತು ಸಾವಿರ ಮಂದಿ |
ಋತ್ವಿಜರಾಗಬೇಕು ||
ವಿತ್ತವಸ್ತ್ರಾದಿಗಳಿತ್ತು ಯಥೋಚಿತ
ಸತ್ಕರಿಸುವದೆಂದನು                    ||೧೯||

ಭಾಮಿನಿ
ಯಾರಿಹರು ದ್ರವ್ಯವನು ತರುವವ |
ರಾರು ನೃಪನನು ಗೆಲುವ ಶೂರರು |
ಯಾರ ಬಲದೊಳು ಕಾರ್ಯವಿದ ನೆಗಳ್ಚುವದು ಎಂದೆನಲು ||
ಮಾರುತಿಯು ಬಲಯುತನು ಕರ್ಣ ಕು |
ಮಾರ ವಿಕ್ರಮಿ ಮೇಘನಾದನು |
ಭೂರಿ ಸಹಸಿಗರಲ್ಲದೇ ಹರಿಯೊಲುಮೆ ನಿನಗಿಹುದು                  ||೨೦||

ಕಂದ
ಇಂತೆನಲಾ ಮುನಿನಾಥಂ |
ಅಂತಕಸುತನಾಗ ಭೀಮನಾನನ ವೀಕ್ಷಿಸಿ |
ಪಂಥದಿ ಮಾರುತ ಸುತ ಮತಿ |
ವಂತನು ಪದಕೆರಗಿ ಪೇಳ್ದನಣ್ಣನೊಳಾಗಳ್                ||೨೧||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಲಾಲಿಸಗ್ರಜ ಮನದಿ ಚಿಂತೆಯ | ತಾಳದಿರು ಮುನಿ ವ್ಯಾಸರೆಲ್ಲವ |
ಪೇಳಿಹರು ಹಯ ವಿತ್ತದೊರಕುವ | ಠಾವನಮಗೆ                      ||೨೨||

ಧುರದಿ ಸೋಲಿಸಿ ಯೌವನಾಶ್ವನ | ತರುವೆನಶ್ವವನಾಜ್ಞೆಗೊಡುಯೆನ |
ಲರಿತು ದಿನಪ ಕುಮಾರನಾತ್ಮಜ | ನೊರೆದನಾಗ                    ||೨೩||

ಮಾರುತಾತ್ಮಜನೊಡನೆ ಪೋಗುವೆ | ಗಾರುಗೆಡಿಸುವರನರಿ ಭಟಾಳಿಯ |
ಚಾರುದಯತಾರದಿರೆ ಕರ್ಣಕು | ಮಾರನಲ್ಲ               ||೨೪||

ಕೇಳುತಲೆ ಹೈಡಿಂಬಿಯಾತ್ಮಜ | ಕಾಳಗಕೆ ನಾಪೋಪೆನಯ್ಯಗೆ |
ವೀಳಯವ ಕೊಡು ತಡೆಯದೀಗಲೆ | ಕಾಲಜಾತ                      ||೨೫||

ಎನೆ ಯುಧಿಷ್ಠಿರ ಮೂವರಿಂಗಾ | ಮುನಿಯ ಮತದಿಂದಾಜ್ಞೆಗೊಡಲಾ |
ಗನುನಯದೊಳಾಶ್ರಮಕೆ ತೆರಳಲು | ವ್ಯಾಸರಂದು                 ||೨೬||

ಅವನಿಪತಿ ಮನದೊಳಗೆ ಲಕ್ಷ್ಮೀ | ಧವನ ಕರುಣವುಬೇಕು ನರನನು |
ತವಕದಿಂ ಕಳುಹಿಸುವ ಯೋಚನೆ | ಗೈವುತೀರ್ದ                     ||೨೭||

ಭಾಮಿನಿ
ಇಂತು ಯೋಚಿಪ ಬಗೆಯ ಲಕ್ಷ್ಮೀ |
ಕಾಂತ ಮನದೊಳಗರಿತು ಬೇಗದೊ |
ಳಂತರಂಗದಿ ನೆನೆವ ಭಕುತರ ನೋಡಬೇಕೆನುತ ||
ತಾಂತಳುವದಿಭಪುರಕೆ ಪೊರಡುವ |
ನಂತಮಹಿಮನ ಕಂಡು ರುಕ್ಮಿಣಿ |
ಕಂತುಪಿತನಡಿಗೆರಗಿ ವಿನಯದಿ ಕೇಳ್ದಳಿಂತೆನುತಾ                   ||೨೮||

ರಾಗ ಜಂಜೂಟಿ ರೂಪಕತಾಳ
(ಬಾರನ್ಯಾಕೆ ಮಾರಜನಕ ಎಂಬಂತೆ)
ಇಂದಿರೇಶ ಪೋಪುದೆಲ್ಲಿ ಸುಂದರಾಂಗನೆ |
ಸಿಂಧುಶಯನ ಪೇಳೊ ಎನಗೆ ಮಂದಹಾಸನೇ                       ||೨೯||

ಶರಣರೆನ್ನ ಸ್ಮರಿಸುತಿಹರು ಸರಸಿಜಾಕ್ಷಿಣಿ |
ತೆರಳಬೇಕು ಪೊರೆಯಲವರ ಮಧುರಭಾಷಿಣಿ             ||೩೦||

ಯಾರ ನಿನ್ನ ಭಜಿಪರದನು ವಾರಿಜಾಕ್ಷನೇ |
ನಾರಿಯೊಡನೆ ಪೇಳಬಾರದೇನೋ ರಮಣನೇ                       ||೩೧||

ಮನದೊಳೊಂದು ಕಾರ್ಯವೆಣಿಸಿ ಇನಜ ಪುತ್ರನು ||
ವನರುಹಾಕ್ಷಿ ನಾಗಪುರದಿ ನೆನೆಸುತೀರ್ಪನು               ||೩೨||

ಎಂಥ ಕಾರ್ಯವಪ್ಪುದಲ್ಲಿ ಕಂತುಜನಕನೇ ||
ಸಂತಸದಲಿ ಪೇಳು ಎನಗನಂತಮಹಿಮನೆ                ||೩೩||

ತೆರಳದಲ್ಲಿ ಒರೆವುದೆಂತು ಸರಸಿಜಾಕ್ಷಿಯೆ ||
ತ್ವರೆಯೊಳೈದಿ ಬರುವೆನೀಗಳುರಗವೇಣಿಯೆ               ||೩೪||

ರಾಗ ಮಧುಮಾಧವಿ ತ್ರಿವುಡೆತಾಳ
ಪರಮ ಪುರುಷನಿಗರಿಯದಾವುದು | ಧರಿಸಿರುವ ಬ್ರಹ್ಮಾಂಡವೆಲ್ಲವ |
ತರಣಿ ಎನ್ನೊಳು ಪೇಳೆ ನಿನಗಹ | ಕೊರತೆಯಿನ್ನೇನೆಂದಳು                   ||೩೫||

ಚಂದಿರಾನನೆ ಕೇಳು ಧರ್ಮಜ | ಬಂಧುಹತ್ಯಾದೋಷ ಪರಿಹರ |
ಕೆಂದು ಯಾಗಾಲೋಚನೆಯ ಕೊಳ | ಲಿಂದು ಸ್ಮರಿಸಿಹನೆನ್ನನು               ||೩೬||

ಆಗಲೊಳ್ಳಿತು ರಮಣ ಬೇಗದಿ | ಪೋಗಿಬಾರೆಂದೆರಗಲಿನಿಯಳ |
ನಾಗಶಯನನು ಮನ್ನಿಸುತ ಯಮ | ಜಾತನೆಡೆಗೈತಂದನು                  ||೩೭||

ಕಂದ
ದನುಜಾರಿಯ ಕಂಡಾಕ್ಷಣ |
ಭಾನುಜಸುತನೆದ್ದು ತನ್ನ ಸಹಜಾದಿಗಳಿಂ |
ವಿನಯದಿ ಮನ್ನಿಸಿ ಕುಳ್ಳಿರೆ |
ಚಿನುಮಯನುಸುರಿದನು ಧರ್ಮ ಜಾತನೊಳಾಗಳ್                 ||೩೮||

ರಾಗ ಮಧ್ಯಮಾವತಿ ಅಷ್ಟತಾಳ
ಹರಿಯೆಂದನಾಗ ಧರ್ಮಜ ಕೇಳೊ ನಿನಗೆ ||
ಸರಿಯಿಲ್ಲೈಶ್ವರ್ಯದಿ ಮೂರ್ಲೋಕದೊಳಗೆ ||
ಕಿರಿಯರೆಲ್ಲರು ನಿನ್ನ ಕಾರ್ಯಭಾಗವನು |
ವಿರಚಿಸುವರು ಕುಂದು ಕೊರತೆಗಳೇನು                     ||೩೯||

ಘನ ಸಂಕಟವನಿತ್ತ eತಿಗಳೆಲ್ಲ |
ತನುವಳಿದರು ಶತ್ರುಗಳ ಬಾಧೆಯಿಲ್ಲ ||
ವನಕೈದಿ ಮೃಗಬೇಟೆಯಾಡುವುದಿಲ್ಲ |
ಮನದೆಣಿಕೆಯ ಕಾರ್ಯ ಸಾಗುವದಲ್ಲ                        ||೪೦||

ಚಿನುಮಯ ಕೇಳಿಂಥ ಹಾಸ್ಯ ಮಾತುಗಳು |
ಎನಗ್ಯಾಕೆ ಸಕಲವನರಿತಿಹೆ ನೀನು ||
ಮುನಿಪ ವ್ಯಾಸರು ನಿನ್ನೆ ದಿವಸದಿ ಬಂದು |
ಅನುಕರಿಸಶ್ವಮೇಧವನು ನೀನೆಂದು             ||೪೧||

ವಿರಚಿಸೆಗೋತ್ರಹತ್ಯಾದಿ ಪಾತಕವು |
ಪರಿಹರವಹುದೆಂದಾಶ್ರಮಕೆ ಪೋಗಿಹರು ||
ತುರಗವಿರ್ಪುದು ಭದ್ರಾವತಿಯ ರಾಜನೊಳು |
ದೊರೆವುದು ಹಿಮಗಿರಿಯಲ್ಲಿ ವಿತ್ತಗಳು                        ||೪೨||

ಅನಿಲನಂದನ ತಾನು ತುರಗವತಹೆನು |
ಎನುತ ಶಪಥವ ಗೈಯಲಿತ್ತೆನಾಜ್ಞೆಯನು ||
ವನರುಹಾಕ್ಷನೆ ನಿನ್ನ ನಂಬಿ ನಾವಿದನು |
ಅನುಕರಿಸಿದೆವು ದಯಾಂಬುಧಿ ನೀನು                       ||೪೩||

ಭಾಮಿನಿ
ದಾನವಾಂತಕ ಕೇಳಿ ನಸುನಗು |
ತಾನರಾಧಿಪಗೆಂದ ನಿನಗಿ |
ನ್ನೇನು ಭ್ರಾಂತಿಯೊ ಮುನಿಯ ವಚನದ ಮೋಹಕೊಳಗಾದೆ ||
ಹಾನಿಗೈದಂತಲ್ಲ ಮಗಧನ |
ತ್ರಾಣಿಯಾಗಿಹ ಯೌವನಾಶ್ವನಿ |
ಗಾನುವನೆ ಈ ಭೀಮ ಕೋಪಿಯು ನಂಬಿಕೆಟ್ಟೆಯಲಾ                 ||೪೪||

ರಾಗ ಕೇತಾರಗೌಳ ಅಷ್ಟತಾಳ
ಅನಿಲಸುತನು ನ್ಯಾಯವಂತನಾಗಿರಲಂದು ||
ದನುಜೆಯ ಕೂಡಿದುದು ||
ಘನವಾಯ್ತೆ ನಿನಗೆನಲದಕೆ ವೃಕೋದರ
ವನಜಲೋಚನಗೆಂದನು                ||೪೫||

ಹಿಂದೆ ನರಕ ದೈತ್ಯ ಬಂಧನದೊಳಗಿಹ |
ಮಂದಗಮನೆಯರನು ||
ಹೊಂದಿದೆ ದೇವಾಂಗನೆಯರೊ ರಕ್ಕಸಿಯರೊ |
ಚಂದವೆ ನಿನಗೆಂದನು                   ||೪೬||

ನುಡಿವುದೇನೀಗ ಪೈಶಾಚಿಗಳಂದದಿ |
ಕುಡಿದು ರಕ್ತವನು ನಿನ್ನ ||
ಒಡಲ ತುಂಬಿದ ಭಂಡತನ ಸರಿಯಲ್ಲೆಂದು |
ಜಡಜಾಕ್ಷ ಜರೆಯಲಾಗ                  ||೪೭||

ನಡತೆ ಹೆಚ್ಚಿನದಯ್ಯ ಕರಡಿಯ ಮಗಳನು |
ಒಡಗೂಡಿ ಪೂತನಿಯ ||
ಬಿಡದೆ ಜೀವವ ತೆಗೆದುರವ ತುಂಬಿಸಿಕೊಂಡೆ |
ನುಡಿಯಲೇನಿನ್ನು ಭಾವ                 ||೪೮||

ಬಲ್ಲೆ ನಿನ್ನನು ಭಾವ ರಕ್ಕಸನನ್ನವ |
ನೆಲ್ಲ ಭಕ್ಷಿಸಿದವನು ||
ಕ್ಷುಲ್ಲಕತನಗೈವಗೀಕಾರ್ಯ ನಿನ್ನಿಂದ |
ಸಲ್ಲದೆನ್ನುತ ಪೇಳ್ದನು                    ||೪೯||

ನುಡಿಗೆ ತಪ್ಪದೆ ಮಖದಶ್ವವ ತಂದೀವೆ |
ತೊಡಗಿದ ಕಾರ್ಯವನು ||
ಬಿಡುವದು ನಡದುವುದೆಲ್ಲವು ನಿಮ್ಮಯ |
ಕಡೆಗೆ ಸೇರಿಹುದೆಂದನು                ||೫೦||

ಭಾಮಿನಿ
ಎಂದೆನಲು ನಸುನಗುತಲಾ ಗೋ |
ವಿಂದ ಪೇಳಿದ ತೆರಳು ವಾಜಿಯ |
ತಂದುಕೊಡು ಮಿಕ್ಕಿರ್ಪ ಕಾರ್ಯವ ಗೈವೆವಾವೆಂದ ||
ನಂದನನು ವೃಷಕೇತ ತನ್ನಯ |
ಕಂದನಾತ್ಮಜ ಮೇಘನಾದರ |
ಮಂದಿಗಳನೊಡಗೂಡಿ ಹೊರಟನು ವಾಯುಕಂದ                   ||೫೧||

ರಾಗ ಘಂಟಾರವ ಅಷ್ಟತಾಳ
ಹರಿ ಯುಧಿಷ್ಠಿರರನುಮತಿಯಿಂದಲೆ |
ತೆರಳಿದರು ಭದ್ರಾವತಿಗೆ ಮೂ | ವರು ಪಯಣಗತಿಯಿಂದಲಿ                   ||೫೧||

ಬಂದು ನೋಡುತ ರಾಯನುದ್ಯಾನವ |
ಅಂದ ಚಂದವ ಕಂಡು ಪರಮಾ | ನಂದ ಪೂರಿತರಾದರು                      ||೫೨||

ಬರುವ ವಾಜಿಗಳೆಲ್ಲವ ಪರಿಕಿಸಿ |
ತಿರುಗಿದರು ಸುತ್ತೆಲ್ಲ ಯಾಗದ | ತುರಗವೆಲ್ಲಿಯು ಕಾಣದೆ                       ||೫೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಎಲ್ಲವರು ಯೋಚಿಸುವ ಸಮಯದಿ | ಚಲ್ವವಾಜಿಯದೊಂದು ದೂರದಿ |
ಮೆಲ್ಲಮೆಲ್ಲಗೆ ಬರುತಿಹುದ ತಾ | ವಲ್ಲಿನೋಡಿ               ||೫೪||

ಪರಿಪರಿಯ ಶೃಂಗಾರಗೈದಿಹ | ತುರಗರಕ್ಷೆಗನೇಕ ಜನಗಳು |
ಮೆರವಣಿಗೆಯಿಂ ಬರುವದನಿಲಜ | ಕಂಡನಾಗ                        ||೫೫||

ತೋರೆ ವೃಷಕೇತನಿಗೆ ತನ್ನ ಕು | ಮಾರನಾತ್ಮಜನಿಂಗೆ ತುರಗವ |
ಭೂರಿ ವಿಕ್ರಮಿ ಮೇಘನಾದನು | ಶೌರ್ಯದಿಂದ                       ||೫೬||

ಅನುಮತಿಯ ನೀಡೆನಗೆ ವಾಜಿಯ | ಕ್ಷಣದಿ ತಹೆನೆನುತಾಜ್ಞೆಗೊಂಡಾ |
ದನುಜೆಯಾತ್ಮಜ ಬಂದು ಮಾಯಕ | ವೆಸಗುತಾಗ                  ||೫೭||

ಸಂಗಡಿಹ ಮಂದಿಗಳನೆಲ್ಲವ | ಭಂಗಪಡಿಸುತ ವೇಗದಿಂದ ತು |
ರಂಗವನ್ನಾಗಸದ ಮಾರ್ಗದಿ | ತಂದನಾಗ                 ||೫೮||

ಪವನಸುತನೆಡೆ ಸೇರಿರಲು ತುರ | ಗವನು ರಕ್ಷಿಪ ಚಾರರೈತಂ |
ದವನಿಪಾಲಕನಿಂಗೆ ಪೇಳ್ದರು | ಭೀತಿಯಿಂದ               ||೫೯||

ರಾಗ ಕಾಂಭೋಜಿ ಝಂಪೆತಾಳ
ಧಾರುಣಿಪ ಕೇಳಿಂದು ಚಾರುತರದಶ್ವವನು |
ಗಾರುಗೆಡಿಸುತಲೆಮ್ಮ ನಿಂದು ||
ವೀರಾಗ್ರಣಿಗಳೊದರಾರೆಂಬುದರಿಯೆವೆನೆ |
ಭೂರಿಕೋಪಾಟೋಪದಿಂದ                        ||೬೦||

ಆರಾದಡೇನವರನೀಗ ಮರ್ದಿಸಿ ಹಯವ |
ಭೋರನಿಲ್ಲಿಗೆ ತರುವಡೆಲ್ಲ ||
ಶೂರರೆದ್ದೇಳಿರೆನೆ ಕೇಳುತವನಿಪನ ಸುಕು |
ಮಾರಕ ಸುವೇಗನಿಂತೆಂದ                        ||೬೧||

ತಾತ ನೀಡೆನಗಾಜ್ಞೆ ನಾ ತೆರಳಿ ರಿಪುಬಲವ |
ನೀತತೂಕ್ಷಣ ಧುರವನೆಸಗಿ ||
ಭೂತಲಕೆ ಕೆಡಹಿತಹೆನಶ್ವವೆಂದನ್ನಲಾ |
ಜಾತನಿಂಗೆಂದ ಭೂಪಾಲ              ||೬೨||

ನಾನು ಬಹೆನೆಲ್ಲವರು ಪೋಗಬೇಕೆಂದೆನುತ |
ಸೇನೆ ಸಮುದಾಯಂಗಳಿಂದ ||
ಕ್ಷೋಣಿ ಕಂಪಿಸುವ ತೆರದಿಂದ ಸಮರಕೆ ಬಂದ |
ರೇನೆಂಬೆನವರ ಸಾಹಸವ              ||೬೩||

ಇತ್ತ ಪವನಜನರಿತು ಪೇಳ್ದ ವಾಜಿಯನು ಕಾ |
ಯುತ್ತಲಿಹುದೆಂದು ಪೌತ್ರನಿಗೆ ||
ಸುತ್ತಿ ಬರುತಿಹ ಸುವೇಗನೊಳು ತೀವ್ರದಿ ಸಮರ |
ಕೊತ್ತಿ ನಡೆಯಲು ಕಾಣುತೆಂದ                    ||೬೪||