ಭಾಮಿನಿ
ಮರುತಸುತನೈತಂದು ನೋಡುತ |
ಹಿರಿದು ರೋಷದಿ ಗದೆಯಗೊಂಡೀ |
ದುರುಳನನು ಬಡಿದುರುಳಿಸುವೆನೆಂದೆನುತಲಾರ್ಭಟಿಸೆ ||
ಪರಿಕಿಸುತ ಖಳನೆಂದನಾರೈ |
ಧುರದಪೇಕ್ಷೆಯೆ ನಿನಗೆಯನ್ನೊಳು |
ತೆರಳು ಸದನಕೆ ಬೇಡ ಜೀವವನುಳುಹಿಕೊಳ್ಳೆಂದ                    ||೧೭೨||

ರಾಗ ಶಂಕರಾಭರಣ ಮಟ್ಟೆತಾಳ
ಕಲಹದಲ್ಲಿ ಕರ್ಣಸುತನ | ಗೆಲಿದೆನೆಂಬ ಗರ್ವ ಬೇಡ |
ಬಲವ ನೋಡೆನುತ್ತ ರಥಕೆ | ಗದೆಯೊಳೆರಗಿದ                        ||೧೭೩||

ಇಳೆಗೆ ಚೂರ್ಣವಾಗಿ ಬೀಳ | ಲಡರಿ ಬೇರೆ ಸ್ಯಂದನವನು |
ಖಳಮಹಾಸ್ತ್ರದಿಂದಲೆಚ್ಚ | ನನಿಲ ಸುತನಿಗೆ                ||೧೭೪||

ಖಾತಿಯಿಂದ ಧುರವನೆಸಗೆ | ಕಾತರಿಸುತ ರಣಕಣದಲಿ |
ವಾತಸುತನು ಮಲಗೆ ಶ್ರೀ | ನಾಥಕಾಣುತ                 ||೧೭೫||

ಭೂತಲದೊಳಗಿವನಗೆಲುವ | ಖ್ಯಾತರಾರಕಾಣೆನೆನುತ |
ಮಾತುಳಾರಿ ಬಂದ ನಿಜ ವ | ರೂಥವಡರುತ             ||೧೭೬||

ಕಂಡು ದಾನವೇಂದ್ರ ಹರುಷ | ಗೊಂಡು ಪೇಳ್ದನಣ್ಣನಸುವ |
ಗೊಂಡನೀತನೈ ಭಲಾ  ಪ್ರ | ಚಂಡ ವಿಕ್ರಮೀ ||                       ||೧೭೭||

ಮೊರೆಯನಿತ್ತ ಲಲನೆಯನ್ನು | ಕೊಲೆಯಗೈದ ವೀರನೀತ |
ತಲೆಯನರಿದ ಮಾವನನ್ನು | ಬಲುಭಟಾಗ್ರಣಿ              ||೧೭೮||

ಎತ್ತಿನಂಥ ಧೇನುಕನನು | ಮತ್ತೆ ಯಾ ಪ್ರಲಂಬನನ್ನು |
ವತ್ತಿಕೊಂದರೇನು ಮಹಾ | ಸತ್ವವಾಯಿತೇ                ||೧೭೯||

ಗೊಲ್ಲರೊಡನೆ ಸೇರಿ ತುರುವ | ನೆಲ್ಲ ಕಾಯುವಲಿಕೆ ಶೂರ |
ಬಲ್ಲಿದರೊಳು ಸೆಣಸಲಹುದೆ | ಕ್ಷುಲ್ಲ ಸಾಹಸಿ               ||೧೮೦||

ಏನಪೇಳ್ವೆಖೂಳ ನಿನಗೆ | ಕಾಣೆಸುವೆನು ಸಹಜನೆಡೆಯ |
ತ್ರಾಣವಿರಲು ತುರುಕು ಧನುವ | ದಾನವಾಧಮ                      ||೧೮೧||

ಹುಡುಕುತಿರುವ ಲತೆಯು ಚರಣ | ಕೆಡವಿದಂದವಾಯಿತಿಂದು |
ಬಿಡೆನು ನಿಲ್ಲೀಗ ಕರದಿ | ತೊಡು ಮಹಾಸ್ತ್ರವ               ||೧೮೨||

ಹರಿಯು ಪೇಳ್ದ ದನುಜರನ್ನು | ಶಿರವಕಡಿವಡೆಮ್ಮ ಶರವು |
ತ್ವರೆಯಪಡುವದೆನಲು ಕೋಪ | ದುರುಬೆಯಿಂದಲೀ                 ||೧೮೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ತೆಗೆದು ಕಣೆನಾಲ್ಕರಲಿಯೀತನ |
ಪೊಗಿಸುವೆನು ಯಮನೂರಿಗೆನ್ನುತ |
ನಗಧರನ ಹಯಕಿಡಲು ಸಮರಾಂ | ಗಣವನುಳಿದ                   ||೧೮೪||

ಸಾರಥಿಯಕೈಗೊದಗದೋಡಲು |
ಮಾರಪಿತನನು ಪಿಡಿಯಲಾಖಳ |
ಭೂರಿ ಕೋಪದಿ ಬಂದು ನೋಡಲು | ಶೌರಿಯಾಗ                    ||೧೮೫||

ಅಡಗಿರಲು ಸುತ್ತೆಲ್ಲ ನೋಡಿದ |
ಜಡಜಲೋಚನ ಪೋದನೆಲ್ಲಿಗೆ |
ತಡಯದುಸುರಿದ ತನ್ನವರೊಳಾ | ದಡಿಗನೊಂದು ||                ||೧೮೬||

ವೀರರಾಲಿಸಿ ಸಮರವೆಸಗಿದ |
ಮಾರಪಿತನೀಗೆನ್ನ ದೃಷ್ಟಿಗೆ |
ತೋರದಿಹ ಕಾರಣಗಳೇನಿದು | ಚೋದ್ಯವಾಯ್ತು                     ||೧೮೭||

ಹಾನಿಯಾಗಿಹುದೇನು ರಾಜ್ಯದಿ |
ದಾನಧರ್ಮಗಳಡಗಿ ಹೋಯಿತೆ |
ದೀನರಿಗೆ ಜೀವನದ ಕಷ್ಟವೆ | ಮಾನಿನಿಯರು ||
ರಮಣರನು ಬಿಟ್ಟನ್ಯಪುರುಷರ |
ರಮಿಸಿದರೆ ಕಾಣಿಸನು ಲಕ್ಷ್ಮೀ |
ರಮಣ ನಾವೆಡೆಯೆನುತಿರಲು ಮುರ | ಮಥನು ಬೇಗ               ||೧೮೮||

ತುರುಗವನು ಬಿಗಿದಾಗ ಸಾರಥಿ |
ಗರುಹಿ ಮುಂದೈತರಲು ಕದನಕೆ |
ಪರಿಕಿಸುತ ಖಳನೆಂದ ಸಿಕ್ಕಿದೆ | ಭಾಪುಯನಲು                       ||೧೮೯||

ರಾಗ ಭೈರವಿ ಅಷ್ಟತಾಳ
ಕಡುಕೋಪದಿ ಮುರಹರನು | ಶಿರ | ಗಡಿವೆನೆನುತಲಸ್ತ್ರವನು |
ಬಿಡಲದಖಂಡಿಸುತಾಗ | ಖಳ | ನುಡಿದನು ಶೌರಿಗೆ ಬೇಗ                      ||೧೯೦||

ಧರಿಸೈ ಚಕ್ರವನೆನುತ | ಹರಿ | ಯುರಕಿಡಲಸ್ತ್ರವ ಮತ್ತಾ |
ತರಹರಿಸುತ ಮಾಧವನು | ಧರೆ | ಗೊರಗಲು ನಾರಿಯರದನು               ||೧೯೧||

ಪರಿಕಿಸಿನೆರೆದರಸುತ್ತ | ಈ | ಪರಿಭವವಾದುದೆನುತ್ತ ||
ಮರುಗಲು ಭಾಮೆಯು ನಯದಿ | ಪ್ರಿಯ | ಗೆರಗುತ ಪೇಳ್ದಳು ಮುದದಿ      ||೧೯೨||

ರಾಗ ಮಧ್ಯಮಾವತಿ ಅಷ್ಟತಾಳ
ಏನಿದಂಗಜಪಿತನೇ | ನಿನ್ನಯ ಸತ್ವ | ವೇನಾಯ್ತು ಖಳನೊಡನೇ |
ಪ್ರಾಣವಂದುಳುಹಿಸಿಕೊಂಡುದೇಲೇಸಾಯ್ತು |
ಮಾನಿನಿಯರ ಮಾನ | ಹಾನಿಯಾಯಿತಲ್ಲ ||              ||೧೯೩||

ಇನಿತು ಪರಾಕ್ರಮಕೆ | ನಿಮ್ಮಣುಗನಿ | ಗನಿತನಾಡಿದುದೇತಕೆ |
ತನಯನ ಮಾನವ ಕಳೆದಿರಿ ನಿಮ್ಮಯ |
ಘನಪರಾಕ್ರಮವೆಲ್ಲ | ಜುಣುಗಿಹೋಯಿತೆ ಕಾಂತ ||                  ||೧೯೪||

ವನಿತೆಯಂದುದ ಕೇಳುತ | ಚಿನ್ಮಯನಾಗ | ಘನಕ್ರೋಧವನು ತಾಳುತ ||
ದನುಜನ ಶಿರವ ಚೆಂಡಾಡುವೆನೆನ್ನುತ |
ವನಜಾಕ್ಷಖತಿಗೊಳ್ಳುತಲಿ ಮುಂದುವರಿಯಲು ||                      ||೧೯೫||

ಭಾಮಿನಿ
ಶ್ರೀರಮಾಧವನಿಂತು ಕ್ರೋಧದೊ |
ಳೇರಿರಥವನು ಪರಿಸೆ ಮುಂದಕೆ |
ಶೂರನರ್ಕಜ ಸುತನ ಬಂದಡಹಾಯ್ದು ದಾನವನ ||
ಮಾರಜನಕನ ಗೆದ್ದ ಶಕ್ತಿಯ |
ತೋರುತೋರೆನ್ನೊಡನೆನುತ ಕಾ |
ಮಾರಿಯಂದದಿ ಮುಸುಕಿದನು ಶರಜಾಲದಿಂದವನ                 ||೧೯೬||

ರಾಗ ಸಾರಂಗ ಅಷ್ಟತಾಳ
ಸೂತಜಸುತ ಕೇಳೋ ನಿನ್ನ | ಬಹು | ಖ್ಯಾತಿ ಪೋಗಿಹುದೆಲೊ ಮುನ್ನ |
ಖಾತಿಗೈದರೆ ಮತ್ತೆ ನಿನಗೆ | ಜೀವ | ದಾತರಾರೆಂದು ತೋರೆನಗೆ             ||೧೯೭||

ಪುಡವಿಯೊಳಗೆ ಸೋಲು ಗೆಲುವು | ಅದು | ನಡೆದುಬಂದಿರುವದು ನಿಜವು | ಬಿಡುವೆನೋಡೀಶರದಿಂದ | ನಿನ್ನ | ಕೆಡಹುವೆ ಭೂತಲಕೆಂದ                  ||೧೯೮||

ಬಿಡು ಬಡ ಕರಿಯು ಕೇಸರಿಗೆ | ಎಂದು | ತಡವುದೆ ಮರುಳನಹಾಗೆ |
ನುಡಿದಿರೆಂದದ ಕಡಿದ | ಮತ್ತೆ | ದಡಿಗನುಬ್ಬಟೆಯಿಂದಲಿಹುದ                 ||೧೯೯||

ರವಿಜನಣುಗ ನೋಡುತಾಗ | ರಮಾ | ಧವನಕೀರ್ತಿಸುತಲೆ ಬೇಗ |
ಜವದಿಂದಲೆಸೆದ ಮಾರ್ಗಣದಿ | ಖಳ | ಭವಣೆಯಿಂದಾಗ ಭೂತಳದಿ         ||೨೦೦||

ಭಾಮಿನಿ
ಭಾನುನಂದನಣುಗನಸ್ತ್ರದಿ |
ದಾನವನು ಮೈಮರೆಯೆ ಕಾಣುತ |
ದಾನವಾರಿಗೆ ಕೊಟ್ಟ ಭಾಷೆಯು ಸಫಲವಾಯ್ತೆನುತ ||
ಕೇಣದಿಂದಾ ಖಳನ ಕರ್ಣಜ |
ಸೂನುಪಿಡಿತಂದಾಗ ಕೃಷ್ಣಗೆ |
ಕಾಣಿಸುತ ಪದಕೆರಗೆ ನಸುನಗುತೆಂದ ಮಾರಮಣ                  ||೨೦೧||

ರಾಗ ಕೇತಾರಗೌಳ ಅಷ್ಟತಾಳ
ಭಳಿರೆ ವೃಷಧ್ವಜ ಕೇಳು ವಿಕ್ರಮ ನೀನು | ಖಳನೊಳು ಧುರವೆಸಗಿ ||
ಗೆಲಿದೀಗ ಪಿಡಿ ತಂದೆ ನುಡಿದ ಭಾಷೆಗಳಿಂದ | ಸಲೆ ಪೂರ್ಣವಾಯಿತಯ್ಯ  ||೨೦೨||

ಇನಿತು ಪೇಳುತಲಿರೆ ಮೂರ್ಛೆಯಿಂದೊರಗಿದ | ದನುಜನೆಚ್ಚರ್ತನಾಗ ||
ಚಿನುಮಯನನು ಕಾಣಲಡಗಿತeನವು | ಮನದೊಳುತ್ಸಾಹದಿಂದ ||         ||೨೦೩||

ಹರಿಯೆ ನೀನ್ಯಾರೆಂಬುದರಿಯದೀ ಸಂಸಾರ | ಶರಧಿಯೊಳಗೆ ಸಿಲುಕಿ ||
ಚರಿಸಿದ ದುಷ್ಕಾರ್ಯ ಮರೆದೆನ್ನ ರಕ್ಷಿಸು | ಕರುಣದೊಳನವರತ              ||೨೦೪||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳುತರ್ಕಜನಣುಗಖತಿಯಲಿ | ಖೂಳ ನಿನ್ನಯ ಬಲುಹದೇನೈ |
ಪೇಳಿದೆಯಲಾ ಪೌರುಷೋಕ್ತಿಯ | ಬಾಳು ಸುಡಲಿ                   ||೨೦೫||

ನಿಂದೆ ಗೈದಿಹೆ ಮೂಢ ಶ್ರೀ ಗೋ | ವಿಂದನನು ದುಷ್ಟಾತ್ಮ ನಿನ್ನನು |
ಕೊಂದು ಬಿಡಿಸಿದರೇನಹುದು ಎನ | ಲೆಂದ ಖಳನನು               ||೨೦೬||

ನಿಂದೆಗೈಯಲು ಶ್ರೀರಮೇಶನ | ವಂದಿಸಲು ಬಹುಜನ್ಮ ದುರಿತವ |
ಕುಂದಿಸುವ ತಾ ಸ್ಮರಣೆ ಮಾಡಲು | ಇಂದು ನಾನು                 ||೨೦೭||

ವೀರತನದೊಳು ಪೇಳ್ದ ಮಾತಿಗೆ | ತಾರನೆಂದಿಗು ಕೋಪವೆನ್ನೊಳು |
ವಾರಿಜಾಕ್ಷನ ಪಾದವನಜವ | ಸೇರಿ ಬಾಳ್ವೆ                ||೨೦೮||

ಎನುತ ಹರಿಯಪದಾರವಿಂದಕೆ | ಮಣಿದ ದನುಜನನೆತ್ತಿಪೇಳಿದ |
ಮನದೊಳಂಜಿಕೆ ಬೇಡ ಮೆಚ್ಚಿದೆ | ನಿನಗೆ ನಾನು                      ||೨೦೯||

ಅನಿಮಿಷರ ವೈರವನು ಬಿಟ್ಟೀ | ರನುಕರಿಪಹಯಮೇಧದಲಿನೀ |
ಅನುವುಗೊಟ್ಟಿರಬೇಹುದೆನೆ ಖಳ | ಸನುಮತಿಸಲು                   ||೨೧೦||

ರಾಗ ಮಾರವಿ ಏಕತಾಳ
ಅತ್ತಲು ಸಮಶರನೈದು ತರಣದೊಳು | ವತ್ತಿಬರುವ ಬಲವ ||
ಕತ್ತರಿಸುತಲಾವಾಜಿಯ ತಂದನು | ಚಿತ್ತಜಪಿತನೆಡೆಗೆ               ||೨೧೧||

ತಾತನೆ ಕೇಳ್ನಾ ಪೇಳಿದ ತೆರದೊಳ | ಗೀತುರಗವ ತಂದೆ ||
ರೀತಿಯೊಳೆಸಗಲು ಕ್ರತುವೆನೆ ಲಕ್ಷುಮೀ | ನಾಥ ನಗುತಲೆಂದ                ||೨೧೨||

ಚನ್ನಾಯಿತು ನಿಮ್ಮೀರ್ವರ ಭಾಷೆಯು | ಮುನ್ನಾಡಿದ ತೆರದಿ ||
ಇನ್ನೀಯಾಗದ ಕಾರ್ಯವು ನಡೆಯಲೆಂ | ದೆನ್ನುತ ಮುರಹರನು              ||೨೧೩||

ವಿರಚಿಪಯಾಗದ ಗಡುವಿಗೆ ಮತ್ತಾ | ತುರಗವು ದೊರತುದಕೆ ||
ಪರಮಾನಂದೊಳಿರುತಿರೆ ಧರ್ಮಜ | ಮರುತಸುತಾದಿಗಳು                   ||೨೧೪||

ಭಾಮಿನಿ
ದಾನವನು ಸೆಳೆದೊಯ್ದ ತುರಗವ |
ದಾನವಾರಿಯ ಕರುಣದಿಂದಲೆ |
ಭಾನುನಂದನನಣುಗ ಪಣಕದಿತಂದ ಸತ್ಕಥೆಗೆ ||
ಕ್ಷೋಣಿಪಾಲಕಗೊರೆದುದನು ನಾ |
ನೇನನರಿಯದೆ ಗೈದ ಕೃತಿಯಿದ |
eನನಿಧಿಗಳು ತಿದ್ದಿ ಮೆರೆಸಲಿ ದುರಿತವಿರೆ ದಯದಿ                     ||೨೧೫||

ರಾಗ ಢವಳಾರ ಏಕತಾಳ
ಮಂಗಲ ವಾರಿಜನಾಭನಿಗೆ |
ಮಂಗಲ ಸಾರಸ ನೇತ್ರನಿಗೆ |
ಮಂಗಲ ಕ್ಷೀರವಾರಿಧಿ ಗೃಹವಾಸಗೆ |
ಮಂಗಲ ದುರಿತವಿದೂರನಿಗೆ |
ಮಂಗಲಂ ಜಯ ಮಂಗಲಂ ||                    ||೨೧೬||

ಮಂಗಲ ಬಾಲಗೋಪಾಲನಿಗೆ |
ಮಂಗಲ ತುಳಸೀ ಮಾಲನಿಗೆ |
ಮಂಗಲ ಶೀಲಸಜ್ಜನ ಪರಿಪಾಲಗೆ |
ಮಂಗಲ ಪೀತ ದುಕೂಲನಿಗೆ | ಮಂಗಲಂ ||               ||೨೧೭||

ಮಂಗಲಂ ಯದುಕುಲ ತಿಲಕನಿಗೆ |
ಮಂಗಲ ಸದಮಲ ಹೃದಯನಿಗೆ |
ಮಂಗಲ ಪದುಮಭವಾಂಡವ ಪೊರೆವಗೆ |
ಮಂಗಲಂ ಮಧುಸೂದನ ಹರಿಗೆ |
ಮಂಗಲಂ ಜಯ ಮಂಗಲಂ ||                    ||೨೧೮||

ವಾರ್ಧಕ
ಮೆರೆವ ಸಿದ್ದಾಪುರದ ತಾಲೂಕಿನೊಳಗುಳ್ಳ |
ಕರಿಕೆ ಸಾಲಿನ ಗ್ರಾಮ ಜಾನಕೈ ಖೇಟಕದೊ |
ಳಿರುವ ತಿಮ್ಮಪ್ಪನೆಂಬಾತ ಪಿತ ವೆಂಕಪ್ಪ ಹೆಗಡೆಯತಿ ಧರ್ಮಯುತನು ||
ಹರಿಯಂಕಜಾನಂಗವತ್ಸರದ ಶ್ರಾವಣದಿ |
ಧರೆಯಪತಿ ಯೌವನಾಶ್ವಾನುಸಾಲ್ವರ ಕಥೆಯ |
ವಿರಚಿಸಿದೆ ಯಕ್ಷಗಾನದಲಿ ವಾಗೀಶ್ವರಿಯು ಮತಿದೋರ್ದ ರೀತಿಯಿಂದ    ||೨೧೯||

|| ಯೌವನಾಶ್ವ ಅನುಸಾಲ್ವ ಕಾಳಗ ಮುಗಿಯಿತು ||