ಭಾಮಿನಿ
ಖಳನು ತುರಗವ ತಂದು ಸೇನೆಯ |
ನಿಲಿಸಿ ಗೃಧ್ರಾಕಾರದಿಂದಲಿ |
ಚಲುವ ವಾಜಿಯನಿಟ್ಟು ಮಧ್ಯದಿ ಕರದಿ ಬಿಲುವಿಡಿದು ||
ಅಳವಿಗಾರೈ ತರುವರೆನ್ನುತ |
ಕಲಿತನದೊಳಿರಲಿತ್ತಲಶ್ವವ |
ಸೆಳೆದುಕೊಂಡೈದಿರುವ ರಭಸಕೆ ಬೆದರಲೆಲ್ಲವರು                     ||೧೨೫||

ರಾಗ ಸಾಂಗತ್ಯ ರೂಪಕತಾಳ
ಈ ರೀತಿಯಿಂದಲಶ್ವವನೆಳದೊಯ್ಯಲು |
ಗಾರುಗೆಟ್ಟಾಗ ಧರ್ಮಜನು ||
ಮೂರುಲೋಕದೊಳಿಂಥ ಶೂರರ ಕಾಣೆನು |
ಯಾರು ವೈರಿಗಳಿಹರ್ನಮಗೆ                       ||೧೨೬||

ಭರಿತ ಪ್ರಯತ್ನದಿ ತಂದೆವೀ ತುರಗವ |
ಅರೆಕ್ಷಣದೊಳಗೊದನಲ್ಲ |
ದೊರೆವುದೆ ಮಖವ ಮಾಳ್ಪುದ ಕಾಣೆನೆನ್ನುತ |
ಪರಿಪರಿಯಿಂದಳಲಿದನು                ||೧೨೭||

ಕೂಡಿದ ಸಭೆಯೊಳಗೆಲ್ಲ ಶೋಕಿಸುತಿರೆ |
ನೋಡಿ ಮುರಾಂತಕನಾಗ ||
ಬೇಡ ದುಃಖವ ನಿಮಗೇಳಿ ಪೇಳುವೆನಿದ |
ಮಾಡಿದರಾರೆಂದು ನಿಮಗೆ             ||೧೨೮||

ರಾಗ ಕಾಂಭೋಜಿ ಝಂಪೆತಾಳ
ಕೇಳಿರೈ ಪಿಂದೆನಾ ಸೌಭಾಪುರವನಾಳ್ವ |
ಖೂಳ ಸಾಲ್ವನ ಕೊಂದೆನದಕೆ ||
ಮೇಳವಿಸಿತವನನುಜನನುಸಾಲ್ವನೆಂಬ ಖಳ |
ಕಾಳಗದಿ ಶೂರ ರಣಧೀರ               ||೧೨೯||

ಘನ ಪರಾಕ್ರಮದಿಂದಲೈದ ತುರಗವನಿಂದು |
ಸೆಣಸಿ ಸಮರದಿಗೆದ್ದು ತರುವ |
ರಣಪರಾಕ್ರಮಿಗಳಾರಿರಲಿಲ್ಲ ಪೇಳಿರೆಂ
ದೆನಲಂಜುತೆಲ್ಲ ಕುಳಿತಿರಲು                       ||೧೩೦||

ಕರದಿ ವೀಳೆಯ ಪಿಡಿದು ಕೇಳುತಿರೆ ಸಭೆಯೊಳಗೆ |
ತರಳ ಮೀನಾಂಕತಾನೆದ್ದು ||
ಎರಗುತೆಂದನು ಧುರದಿ ಖಳನಗೆದ್ದಶ್ವವನು |
ತರುವೆನಪ್ಪಣೆಯೀವುದೆಂದು                       ||೧೩೧||

ತಾರದಿರಲಾನುವೃಷಲೀರಮಣಗಹಗತಿಗೆ |
ಸೇರುವೆನು ಪುಸಿಯಲ್ಲವೆನಲು ||
ಮಾರಮಣನಾಗ ಕುವರಂಗೀಯೆ ವೀಳಯವ |
ಧೀರ ವೃಷಕೇತನದ ಕಂಡಾ                        ||೧೩೨||

ಅಡಿಗೆರಗಿ ಮುರಹರನೊಳೆಂದನರ್ಕಜಪುತ್ರ |
ದಡಿಗನನು ಕೆಡಹಿವಾಜಿಯನು ||
ಬಿಡಿಸಿತರದಿರೆ ಶಪಥಗೈವೆ ನಿಮ್ಮಿದಿರಿನಲಿ |
ಪಡೆವೆ ದ್ವಿಜಹನನ ಪಾತಕವ                      ||೧೩೩||

ಭಾಮಿನಿ
ಇನಿತು ಪಂಥವ ಗೈಯಲವರಿಗೆ |
ಚಿನುಮಯನು ವೀಳಯವ ಕರುಣಿಸೆ |
ಘನತರೋತ್ಸಾಹಸದೊಳೀರ್ವರು ಸಕಲ ಸನ್ನಹದಿ ||
ಎಣಿಕೆಯಿಲ್ಲದ ಸೇನೆ ಗಜರಥ |
ವನುಕರಿಸುತನುಸಾಲ್ವನಲ್ಲಿಗೆ |
ರಣಕೆ ಮುಂದಿದಿರಾಗಿ ಬಹ ಸಮಶರನ ಕಂಡೆಂದ                    ||೧೩೪||

ರಾಗ ಕಾಪಿ ಅಷ್ಟತಾಳ
ಬಂದಾತನಾರೈಯ ಧುರಕೆ | ಎನ್ನೊ |
ಳಿಂದು ಶೌರ್ಯದಿ ಕಾದುವದಕೆ |
ನಿಂದು ನೋಡುವೆ ನಿವನಂದವ ಚಂದವ |
ಇಂದಿರೇಶನೊ ದಿವಿಜೇಂದ್ರ ನಂದನನೋ                 ||೧೩೫||

ಕರದಿ ಸುದರ್ಶನವಿಲ್ಲ | ಮತ್ತೆ |
ಪರಿಕಿಸಿದರೆ ನಾಲ್ಕು ಭುಜದವನಲ್ಲ |
ನರನಲ್ಲ ರಥದಿ ಕೋಡಗವಿಲ್ಲ ಮಕರದ |
ಕುರುಹು ತೋರ್ಪುದು ಸುಮ ಶರವಿದೆ ಮನುಮಥ                   ||೧೩೬||

ಬರಲೀಗ ನೋಳ್ಪೆನೆಂದೆನುತ | ಮುಂದೆ |
ತೆರಳಿ ಸೇನೆಯನಡ್ಡವಿಸುತ |
ಧುರಕೆ ನಿಂದಿಹ ಖಳನನುಕಂಡು ಪೂಶರ |
ಭರಿತ ರೋಷದಿ ಖಿಡಿಖಿಡಿಯಾಗುತಿಂತೆಂದ               ||೧೩೭||

ರಾಗ ಶಂಕರಾಭರಣ ಮಟ್ಟೆತಾಳ
ಎಲವೊ ಖಳನೆ ನಮ್ಮ ಹಯವ | ಕಳವಿನಿಂದ ತಂದೆ ಯಾಕೊ |
ಸಲುಗೆಯಿಂದ ಕೊಟ್ಟು ಜೀವ | ವುಳುಹಿಕೊಳ್ಳೆಲಾ                     ||೧೩೮||

ಕೊಡಲು ತಂದುದಿಲ್ಲಿ ನೀನು | ಹುಡುಗನೈಸೆ ನಿಲಯಕೈದಿ |
ಜಡಜನೇತ್ರನನ್ನು ಕಳುಹೊ | ಸಮರವೀಯಲಿ                        ||೧೩೯||

ನಿನ್ನ ಗೆಲುವದ್ಯಾಕೆ ತಾತ | ನೆನ್ನ ಬಲುಹ ನೋಡೆನುತ್ತ |
ಲುನ್ನತಾಸ್ತ್ರವೆಸೆದನಾಗ | ಪನ್ನತಿಕೆಯೊಳು                 ||೧೪೦||

ವಿರಹಿಗಳಿಗೆ ನಿನ್ನ ಬಾಣ | ತರವೆಯನಗೆ ಮಾಳ್ಪುದೇನು |
ಪರಿಕಿಸೆನುತಲೆಸೆಯ ಕ್ರೂರ | ಶರವ ನೊಂದನು                     ||೧೪೧||

ವಿರಹಿಗಳಿಗೆ ಬಿಡುವ ಶರದ | ಪರಿಯಿದಲ್ಲ ಬೇರೆಯೆನುತ |
ಹರಿಯಜಾತನದರ ತುಂ | ಡರಿದ ಕ್ಷಣದೊಳು             ||೧೪೨||

ತ್ರಿಣಯನನ್ನು ಕೆಣಕಿ ಹಿಂದೆ | ಫಣಿಯಕಿರಣದಿಂದಲುರಿದೆ |
ರಣದೊಳೆನ್ನ ಕಣೆಯೊಳೊಂದು | ಕ್ಷಣವು ಬಾಳ್ವೆಯಾ                ||೧೪೩||

ದನುಜರನ್ನು ಬಲ್ಲೆ ಶಂ | ಬರನ ಹನನಗೈವೆ ನಿನ್ನ |
ಗಣನೆಯಿಲ್ಲವೆನುತಲಾಗ | ಕಣೆಗಳೆಸೆಯಲು               ||೧೪೪||

ಭರಿತ ಕೋಪದಿಂದ ದನುಜ | ನರಲಶರನಿಗಮಿತ ಕಣೆಯ |
ಸುರಿಸೆ ಘಾಯವಡೆದು ಸ್ಮರನು | ಕಳವಳಿಸಿದನು                    ||೧೪೫||

ಭಾಮಿನಿ
ಸ್ಮರಣೆ ತಪ್ಪಲು ಧರೆಗೆ ಮನುಮಥ |
ನೊರಗೆ ದಾರುಕ ಬಂದು ಕೃಷ್ಣಗೆ |
ತರಳ ಸುಮಶರ ಮೂರ್ಛೆಗೈದಿಹನೈದು ಬೆದರುತ್ತ ||
ಮುರಹರನು ಭೀಮಾದ್ಯರಿಂದೊಡ |
ನರಿವರಿಸದೈತಂದು ತಾನೆಡ |
ಚರಣದಿಂದೊದೆದಾಗ ಪೇಳಿದ ನಿಂದಿಸುತ ಮಗನ                   ||೧೪೬||

ರಾಗ ನಾದನಾಮಕ್ರಿಯೆ ಅಷ್ಟತಾಳ
ತರಳ ಪಂಥವಗೈದು ಸೋತೆಯ | ಈಗ | ಧರಣಿಯೊಳಪಕೀರ್ತಿ ತಂದೆಯಾ |
ತೆರಳೆ ದ್ವಾರಕೆಗಳಲ್ಲಿ ಸತಿಯರು | ಪರಿಪರಿಯಿಂದ ಹಾಸ್ಯವ ಗೈವರು       ||೧೪೭||

ವನಕೆ ಪೋದರೆಯೆಲ್ಲ ಮುನಿಗಳು | ತಪ | ವನುಕರಿಸುತಲೆ ವಿರಕ್ತರು |
ದನುಜಬಾಣನು ಬಂಧುವೆನುತಲ್ಲಿ | ಪೋಗೆ | ತ್ರಿಣಯನಿರ್ಪನು ಸದಾಗೃಹದಲ್ಲಿ       ||೧೪೮||

ಮರುತ ಸಂಭವನೆಂದ ಹರಿಯೊಳು | ನಿನ್ನ | ತರಳ ಸೋತವನಲ್ಲ ಧುರದೊಳು | ಸ್ಮರಣೆತಪ್ಪಿಹುದಲ್ಪಕಾರ್ಯಕೆ | ನೀನು | ಜರೆವುದ್ಯಾತಕೆಬಿಡು ಸಮರಕೆ ||೧೪೯||

ಕಳುಹುಕರ್ಣ ಜನ ಯುದ್ಧಕ್ಕೆ ಬೇಗ | ಎನೆ | ನಳಿನಲೋಚನ ಭೀಮನೊಡನಾಗ | ಕೊಳುಗುಳಕೈದಲಿ ವೃಷಕೇತ | ಆತ | ಗನುವಾಗಿ ಪೋಗು ನೀ ಸಂಗಾತ            ||೧೫೦||

ಕಂದ
ಇಂತೆನಲೀರ್ವರು ಸಮರಕೆ |
ಸಂತಸದೊಳಗೈದಿ ಭೀಮಧುರಕನುವಾಗಲ್ |
ತಾಂತಳುವದೆ ವೃಷಕೇತಂ |
ಪಂಥದಿ ಪಿತನಡಿಗೆ ವಂದಿಸುತ್ತಲೆ ಪೇಳ್ದಂ                  ||೧೫೧||

ರಾಗ ಸಾವೇರಿ ರೂಪಕತಾಳ
ತಾತ ಲಾಲಿಸು | ಎನ್ನ | ರೀತಿ ಪರಿಕಿಸು |
ಜಾತರಿಂಗೆ ಸಲುವ ಧುರಕೆ ಆಶೆಬೇಡ ಬಿಡುಬಿಡೆನಗೆ                ||೧೫೨||

ಮರುತ ಸಂಭವ | ಪೇಳ್ದ | ಧುರವ ಗೈವುದ |
ತರಳರಿಂಗೆ ತೋರಿಕೊಡುವದೆಮಗೆ ಹಿತಕರ              ||೧೫೩||

ಅರಿತಿರುವೆನು | ಎಲ್ಲ | ಧುರದ ಪರಿಯನು |
ತೆರಳುವೆ ತಾನೆನಲು ಭೀಮನಾಜ್ಞೆಯಿತ್ತನು                ||೧೫೪||

ಭಾಮಿನಿ
ತಾತನಿಂದಪ್ಪಣೆಯಗೊಳ್ಳುತ |
ಖಾತಿಯಿಂ ಕರ್ಣಜನು ಸಮರಕೆ |
ಆತುರದಿ ಬರುತಿಹುದ ಕಂಡನುಸಾಲ್ವಗರ್ವದಲೀ ||
ಸೋತು ಮನುಮಥನಾಗಳೈದಿಹ |
ನೀತನ್ಯಾವ ಸುಭಟನೊನೋಳ್ಪೆನು |
ಮಾತುಳಾಂತಕನಲ್ಲ ಇನ್ನೆಮಗಾದುದೇನ್ಭಯವು                     ||೧೫೫||

ರಾಗ ಕಾಂಭೋಜಿ ಝಂಪೆತಾಳ
ಅನುಸಾಲ್ವನೊಡನೆಂದನಾಗ ಕಲಿಕರ್ಣಸುತ |
ಅನುಕರಿಪಮೇಧ ತುರಗವನು ||
ತನುಮದದಿ ಕದ್ದು ತಂದಿಹುದ್ಯಾಕೆ ಪೇಳೆನೆಗೆ |
ಘನ ಕಾರ್ಯವಾಯ್ತೆನಿನಗೆಂದ                     ||೧೫೬||

ತಂದಿರುವೆನೆನ್ನ ವಿಕ್ರಮದಿ ನಿಮ್ಮೆಲ್ಲವರ |
ಮುಂದೆ ಮಖವಾಜಿಯನ್ನಿಲ್ಲಿ ||
ಬಂಧಿಸಿಹೆ ನಿನಗೆ ಸಾಹಸವೀರ್ದಡಶ್ವವನು |
ಇಂದೊಯ್ವುದೆಂದನಸುರೇಂದ್ರ ||                ||೧೫೭||

ಧುರದೊಳಗೆ ಸೋತು ತುರಗವನಿತ್ತರೇನ್ಫಲವು |
ದೊರೆವುದೇ ಕೀರ್ತಿ ನಿನಗಿಂದು ||
ತರಿದು ನಿನ್ನನು ರಣದೊಳೊವೆ ಮಖದಶ್ವವನು |
ಮುರಹರನ ಪದದಾಣೆಯಾಗಿ                     ||೧೫೮||

ಮುರಹರನ ಬರಮಾಡುವೈರಿಯಣ್ಣನ ಕೊಂದು |
ದುರುಳ ಕಾಪಟಿಗಗೋವಳನ ||
ತರಿದು ಮೊದಲಿಗೆ ನಿನ್ನೊಳೀವೆ ಸಂಗ್ರಾಮವನು |
ಪರಿಕಿಸೆನ್ನೆಯ ಪರಾಕ್ರಮವ                        ||೧೫೯||

ನಮ್ಮ ಸಮರದಿ ಗೆಲಿದು ಬದುಕಿದರೆ ಕಡೆಗಾಯ್ತು |
ಬೊಮ್ಮಜನಕನ ಗೆಲುವ ಮಾತು ||
ಸುಮ್ಮನೇತಕೆ ಜಂಭವೀಶರದ ಸವಿಯ ನೀ |
ನೊಮ್ಮೆ ನೋಡೆನುತೆಚ್ಚನಾಗ                     ||೧೬೦||

ಶರವ ನಡುಪಥದಿ ತುಂಡರಿದೆಂದ ಕರ್ಣಜಗೆ |
ಅರಿತಿಲ್ಲ ಪೂಗೋಲನಿರವ ||
ಧುರವೆಸಗಿ ಮೈಮರೆತ ನಿನಗ್ಯಾತಕೈ ಸಮರ |
ತೆರಳುವಾಜಿಯನುಳಿದು ನೀನು                   ||೧೬೧|

ಭಾಮಿನಿ
ನುಡಿಯಕೇಳುತಲಾವೃಷಧ್ವಜ |
ಕಡೆಯಕಾಲದರುದ್ರನಂದದಿ |
ಪಿಡಿದು ಧನುವಿನ ನಾರಿಯನ್ನೆಳೆದಾಗಳೊಂದಲಗ ||
ಬಿಡಲು ದಾನವನೆದೆಗೆನಾಂಟಲು |
ಪುಡವಿಯೊಳು ಮೈಮರೆಯೆಕಾಣುತ |
ಲೊಡನೆ ಹೀಯಾಳಿಸುತ ಕರ್ಣಜನೆಂದ ಖಳನೊಡನೇ             ||೧೬೨||

ರಾಗ ತೋಡಿ ಏಕತಾಳ
ಏನನಾಡಿದೆ ದನುಜೇಂದ್ರ ನೀನಿಂತು |
ದಾನವ ಕುಲಕಪಮಾನವು ಬಂತು ||
ಮಾನವರನು ಗೆಲ್ವ ತ್ರಾಣವೇನಾಯ್ತು |
ಮಾನಿನಿಯರ ಕಾಂಬ ಋಣವಿನ್ನು ಸಂತು                  ||೧೬೩||

ಕ್ರತುವಿನಶ್ವವು ನಿನಗೇಕೆ ಬೇಕಾಯ್ತು |
ರತಿಪತಿಯನು ಗೆದ್ದಶರಗಳೇನಾಯ್ತು ||
ಹತಿಸುವೆ ಹರಿಯನೆಂದರುಹಿದ ಮಾತು |
ಗತವಾಗಿ ಹೋಯಿತೆ ಧುರದೊಳು ಸೋತು               ||೧೬೪||

ಕೊಂದಿಹನಣ್ಣನ ಹರಿಯೆಂಬುದರಿತು |
ಬಂದುಕಾದಿಹೆ ಗರ್ವದಿಂದದಮರೆತು ||
ಇಂದಿರೇಶನಪದತಲಕೊವೆನೀಗ |
ಕೊಂದುಕಳವೆನೆನುತಿರೆ ಖಳನಾಗ               ||೧೬೫||

ರಾಗ ಸೌರಾಷ್ಟ್ರ ತ್ರಿವುಡೆತಾಳ
ದನುಜನೆಚ್ಚರಿತಾಗ ಕಾಡ್ಗಿ | ಚ್ಚಿನ ತೆರದೊಳುರೆ ಕೋಪಶಿಖಿಯಿಂ |
ಘನತರಾಸ್ತ್ರವಪಿಡಿದು ಪೇಳಿದ | ಕಿನಿಸಿನಿಂದ              ||೧೬೬||

ಬಲುಭಟನು ನೀನಾದರೀಗೆ | ನ್ನಲಗಪರಿಕಿಸಬೇಹುದೆನ್ನುತ |
ಖಳನು ಕರ್ಣಜಗೆಸೆಯೆ ಮೈಮರೆ | ದೊರಗಲಾಗ                    ||೧೬೭||

ಕಂಡುದಾನವ ಭರಿತಸಂತಸ | ಗೊಂಡು ಮುಂದೈತರುತಲಾರಣ |
ಮಂಡಲದಿ ಕರ್ಣಜನ ಮೂದಲಿ | ಸುತ್ತಲೆಂದ             ||೧೬೮||

ರಾಗ ಮುಖಾರಿ ಅಷ್ಟತಾಳ
ಶೂರಾ ಏನಾಯ್ತು ವಿಚಾರಾ | ಎನ್ನೊಳು ಸೋತು |
ಈ ರೀತಿಯಾಯ್ತೆ ಸಂಗರ | ಏ ಕರ್ಣಕುಮಾರ ||
ಧಾರುಣಿಯೊಳು ಮಲಗಿಹನಾರೈಯಿವ |
ರಾರಿಹರೈಪರಿವಾರವ ಕಾಣೆನು                    ||೧೬೯||

ಎತ್ತಲೈದಿದರು ಭೀಮಕಿರೀಟ | ಎನ್ನಯವೈರಿ |
ಇತ್ತಬಾರನು ಆ ಮುರವೈರಿ | ನಿನ್ನನು ರಣಕೆ |
ಒತ್ತಿದರಲ್ಲೊಯನ್ನೆದುರಿನಲೀ ||
ಮೃತ್ಯುವಿನ್ವದನಕೆ ತುತ್ತಾಗುವತೆರ |
ನಿತ್ತರುಯೇನಿದನರ್ಥಗಳಾಯಿತು                ||೧೭೦||

ಸೂತಕುಲಜ ನಿನ್ನ ಪಿತನು | ಯಾರಿಲ್ಲದೆ ಕುರುಕುಲ |
ನಾಥನ ಸೇರಿ ಜೀವಿಸಿದವನು | ನೀನಾದರ‍್ಯಮ |
ಜಾತನೂಳಿಗದಿ ಬಾಳಿರುವವನು |
ತಾತನವಧೆ ಪುರುಹೂತನ ಸುತನಲಿ |
ಘಾತಿಪೆನಿನ್ನ ನೀ ಭೂತಲ ಮಧ್ಯದಿ               ||೧೭೧||