ರಾಗ ಶಂಕರಾಭರಣ ಮಟ್ಟೆತಾಳ
ಎಲ್ಲಿಗೊಯ್ವೆ ನಮ್ಮ ಹಯವ ಕಳ್ಳರಂದದಿ |
ನಿಲ್ಲು ಸಮರಕೀಗ ನೋಳ್ಪೆನೆನುತ ಶೌರ್ಯದಿ ||
ಬಿಲ್ಲಿಗೇರಿಸುತ್ತ ಶರವ ಬಿಡಲು ತೀವ್ರದಿ ||
ಹಲ್ಲಗಡಿವುತಾಗ ಪವನಜಾತ ಕೋಪದಿ                     ||೬೫||

ಧುರಕೆ ಸರಿವರಲ್ಲವೆನುತ ಶರವ ಕಡಿದನು |
ಮರಳಿ ನಾಲ್ಕು ಕಣೆಯ ಭೂಪತರಳಗೆಚ್ಚನು ||
ಸರಿಸಮಾನತೆಯಲಿ ಕಲಹವೆಸಗಲಿತ್ತಲು |
ಭರದಿ ಬಂದ ಯೌವನಾಶ್ವ ಸಮರಕಾಗಳು                ||೬೬||

ಪೊಡವಿಪತಿಗೆ ಸಮರಗೊಡಲಿಕಿನಜ ಜಾತನು |
ಫಡಫಡೆನುತ ನಿಲಲು ನೋಡುತೆಂದ ಭೂಪನು ||
ಹುಡುಗನೈಸೆ ನಿನ್ನೊಳ್ಯಾಕೆ ಖಡುಗ ಸದನಕೆ |
ನಡೆವುದುಚಿತವೆನಲು ಪೇಳ್ದ ಯೌವನಾಶ್ವಗೆ               ||೬೭||

ಹರಿಯು ಚಿಕ್ಕದಾದರೇನು ಕರಿಗೆ ಸೋಲ್ವುದೇ |
ಧುರವನರಿತನೆನ್ನ ಗೆಲಲು ನಿನ್ನೊಳಾಹುದೆ ||
ತುರಗದಾಸೆ ಇರಲು ಧರಿಸು ಧನುವನೆನ್ನುತ ||
ಸರಳ ಮಳೆಯ ಕರೆದನಾಗಳರ್ಕಜನಸುತ                 ||೬೮||

ಭಾಮಿನಿ
ಈ ತೆರದಿ ಕಾದುತಿರೆ ಭಾನುಜ |
ಜಾತ ನವನಾರಾಚ ಬಿಡುವೆನು |
ಆತುಕೊಳ್ಳೆನುತೆಸೆಯೆ ಭೂಪತಿಯುರವ ಭೇದಿಸಲು ||
ಭೂತಲದಿ ಮೈಮರೆಯೆ ಕರ್ಣಜ |
ಸೋತವನ ತಾ ಬಂದು ನುಡಿಸಿದ |
ಮಾತನಾಡದಿರಲ್ಕೆ ಜನಪನ ಮೇಲೆ ದಯವುದಿಸಿ                    ||೬೯||

ಕಂದ
ಸಿರಿರಮಣನ ದಯವೆನಗಿರೆ |
ಧರಣಿಪನೆಚ್ಚರಿಸಲೆನುತ ಕರವಾಡಿಸಲಾ ||
ತೆರೆದಕ್ಷಿಯ ನೋಳ್ಪುದ ತಾ |
ಪರಿಕಿಸಿ ನಿಜರಥವನಡರಿ ಧುರಕನುವಾಗಲ್               ||೭೦||

ರಾಗ ಮಾಯಾಮಾಳವಗೌಳ ರೂಪಕತಾಳ
ಧಾರುಣಿಪತಿಯೆದ್ದು ನೋಡಿದ ಸುತ್ತಲು |
ಯಾರು ತನ್ನುಪಚರಿಸಿದರು ||
ಬೇರೊಬ್ಬರಿಲ್ಲ ನಮ್ಮವರಿಲ್ಲಿ ಮುಂದೀರ್ಪ |
ವೀರ ಬಾಲಕನೆಂದು ತಿಳಿದ                        ||೭೧||

ಧುರವಗೈಯುವ ಮನವಿಲ್ಲವೆನಗೆ ಇಂದು |
ಅರಿವೆನೀತನ ಮೂಲವೆನುತ ||
ಸರಿಸಕೆ ನಿಂತುಕೇಳಿದ ನಿನ್ನ ಪುರವಾವು |
ದರುಹು ನೀನಾರೆಂಬ ಪರಿಯ                     ||೭೨||

ಮೂರು ಲೋಕದಿ ಗೆಲ್ಲುವವರ ಕಾಣೆನು ನಾನು |
ಶೂರ ನಿನಗೆ ದಯವೇಕೆ ||
ಕಾರಣವೆಲ್ಲ ಪೇಳೆನಲರ್ಕಜಾತಕು |
ಮಾರನು ಜನಪಗಿಂತೆಂದ              ||೭೩||

ರಾಗ ಕೇದಾರಗೌಳ ಝಂಪೆತಾಳ
ದಿನಪಸುತ ಕಲಿಕರ್ಣನು | ಆತನಿಗೆ | ತನಯನಾದ ವೃಷಕೇತನು ||
ಚಿನುಮಯನ ಕಾರುಣ್ಯದಿ | ಹಯಮೇಧ | ವನುಕರಿಪ ಯಮಜ ಮುದದಿ   ||೭೪||

ತುರುಗವಿದೆ ನಿನ್ನೊಳೆಂದು | ಕಳುಹಿದನು | ಮರುತಸುತನೊಡನೆ ಇಂದು ||
ತ್ವರಿತದಿಂದೊಯ್ವೆವಾವು | ನಿನ್ನ ಮನ | ದಿರವಿದೇನೆಂದು ಪೇಳು                        ||೭೫||

ಎಲೆಕುವರ ಇಲ್ಲಿವರೆಗೆ | ಈ ವಿಷಯ | ತಿಳುಹಲಿಲ್ಲೇತಕೆಮಗೆ ||
ನೆಲೆಯರಿಯದಿಂದು ನಾವು | ನಿಮ್ಮೊಡನೆ | ಕೊಳಗುಳವ ಗೈದಿರ್ಪೆವು      ||೭೬||

ಭೂತಲದ ಧರ್ಮವೆಲ್ಲ | ಕೂಡಿ ಸಂ | ಜಾತನಾಗಿಹ ಧರ್ಮಜ ||
ಆತಗಚ್ಚುತನ ದಯೆಯು | ಇರೆ ಹಯವ | ಪ್ರೀತಿಯಿಂ ಕೊಡುವೆವಾವು       ||೭೭||

ಭಾಮಿನಿ
ಎಲ್ಲಿರುವ ನಾ ಭೀಮನೆಂದೆನ |
ಲಲ್ಲಿ ಸಮರವ ಮಾಳ್ಪನೆನ್ನಲು |
ನಿಲ್ಲಿಸುವದೀಕ್ಷಣವೆನುತಲೀರುವರು ನಡೆತಂದು ||
ಸಲ್ಲದಿನ್ನೀ ಧುರವ ಬಿಡಿರೆನು |
ತೆಲ್ಲವಿಷಯವನರುಹಿ ಭೂಮಿಪ |
ನುಲ್ಲಸದಿ ಪೇಳಿದನು ಮಾರುತಿಯೊಡನೆ ಮನದಿರವ                ||೭೮||

ರಾಗ ಶಂಕರಾಭರಣ ಏಕತಾಳ
ಮರುತಜಾತ ಕೇಳು ನೀವು | ವಿರಚಿಸುವ ಮಖಕೆ ಹರಿಯ |
ನೆರವೀರ್ದಡೀವೆನು ಎನ್ನ | ತುರಗವಲ್ಲದೆ                   ||೭೯||

ಭರಿತದ್ರವ್ಯವಸ್ತುವೆಲ್ಲ ಸಿರಿಯಕಾಂತಗಿತ್ತು ಬರುವೆ |
ತೆರಳುವದೆಂದೆಲ್ಲರಿಭ | ಪುರಿಗೆ ಬಂದರು                    ||೮೦||

ಇಂದಿರೇಶನಡಿಯೊಳಿಟ್ಟು | ವಂದಿಸಿದರೆಲ್ಲವಿವರ |
ದಿಂದಲರುಹೆ ಕೇಳುತಲಾ | ನಂದಗೊಂಡಿರೆ               ||೮೧||

ಭಾಮಿನಿ
ಮಂದರಾದ್ರೀಧರನು ಯಮಜನೊ |
ಳೆಂದ ನೀನಾಚರಿಪಯಾಗಕೆ |
ಬಂದುದಿಲ್ಲ ಮುಹೂರ್ತವಿದೆ ಪನ್ನೊಂದು ತಿಂಗಳವು ||
ಇಂದು ದ್ವಾರಕೆಗೈದಿ ಬಹೆನೀವ್ |
ತಂದಿರಿಸಿ ವಿತ್ತಾದಿ ವಸ್ತುಗ |
ಳೆಂದೆನುತ ನೆರೆ ತಿಳುಹಿ ನಿಲಯಕೆ ತೆರಳ್ದನಸುರಾರಿ                ||೮೨||

ವಾರ್ಧಕ
ಇತ್ತಲ್ಯಮನಂದನಂ ಸಹಜಾದಿ ಸೇನೆಗಳ |
ಮೊತ್ತದೊಡನೈದಿ ಹಿಮಗಿರಿಯೊಳಿಹ ನಿಧಿಗೆ ಬಹ |
ಳುತ್ತಮೋತ್ತಮ ವಿಧಾನದಿ ಪೂಜೆಯಂಗೈದನತ್ಯಧಿಕ ಭಕ್ತಿಯಿಂದ ||
ವಿತ್ತರಾಶಿಗಳ ತಾನೆಲ್ಲ ವಾಹನಗಳಿಂ |
ಪೊತ್ತು ತಂದಿರಿಸಿ ಕೆಲದಿನಗಳೆಯೆ ಧರ್ಮಜಂ |
ಋತ್ವಿಜರ್ಗಾಮಂತ್ರಣವನಿತ್ತು ಬಹದ್ವಿಜರ ಮನ್ನಿಸುತಲೀರ್ದ ಪುರದಿ         ||೮೩||

ರಾಗ ಕಾಂಭೋಜಿ ಝಂಪೆತಾಳ
ಇರಲಿತ್ತ ವ್ಯಾಸಮುನಿಪತಿ ಬರಲು ಧರ್ಮಜನು |
ಹರುಷದಿಂದೆದ್ದು ಪದಕೆರಗಿ ||
ಕರವಿಡಿದು ತಂದು ಕುಳ್ಳಿರಿಸುತುಪಚಾರದಿಂ |
ಪುರವು ಪಾವನವಾದುದೆಂದ                       ||೮೪||

ಇಂದುಕುಲಜನೆ ಕೇಳು ಹಿಂದೆ ಪೇಳಿಹ ಮಖಕೆ |
ಬಂದುದು ಮುಹೂರ್ತ ಸನಿಹದಲಿ ||
ತಂದಿಹೆಯೊ ಧನವ ಹಿಮಗಿರಿಯಿಂದ ಮೌನಿಗಳು |
ಬಂದರೋ ಕೃಷ್ಣಗರುಹಿದೆಯೋ                   ||೮೫||

ಎಂದನ್ಯಮಜಾತವಿತ್ತಗಳ ತರಿಸಿಹೆವು ದ್ವಿಜ |
ವೃಂದಕಾಮಂತ್ರಣವಿತ್ತಿಹೆನು ||
ಇಂದು ಕಳುಹುವೆ ವೃಕೋದರನ ದ್ವಾರಾವತಿಗೆ |
ಇಂದಿರಾವರನ ಕರೆವುದಕೆ              ||೮೬||

ಭಾಮಿನಿ
ಬಂದಿಹರು ಮೌನಿಗಳು ತವಕೃಪೆ  |
ಯಿಂದ ದೊರೆತಿಹುದೆಲ್ಲ ವಸ್ತುಗ |
ಳೆಂದೆನುತ ಪವನಜನ ಕರೆವುತ ಪೇಳ್ದನ್ಯಮಸೂನು ||
ಇಂದು ದ್ವಾರಕೆಗೈದಿ ಹರಿಯನು |
ಬಂದ ಮಖಕೆಲ್ಲವರ ಸಂದಣಿ |
ಯಿಂದ ಕರತಹುದೆನೆ ವೃಕೋದರ ಕೇಳಿ ಸಂತಸದಿ                  ||೮೭||

ರಾಗ ಕೇತಾರಗೌಳ ಅಷ್ಟತಾಳ
ವಂದಿಸಿ ಯಮನಜನಿಂದಪ್ಪಣೆಗೊಳ್ಳುತ |
ಮಂದಿಗಳೊಡನೆ ತಾನು ||
ಮುಂದೆ ಸಂಭ್ರಮವ ನೋಡುತ ಪಯಣದಮೇಲೆ |
ಬಂದ ದ್ವಾರಾವತಿಗೆ                      ||೮೮||

ರಾಜಬೀದಿಯೊಳ್ಪರಿವಾರವನುಳಿದು ತಾ |
ರಾಜಿಸುವರಮನೆಯ ||
ರಾಜೀವಾಕ್ಷನ ಭೋಜ್ಯಶಾಲೆಗೈದಲು ಮತ್ತೆ |
ಸೋಜಿಗವೆನೆಂಬೆನು                     ||೮೯||

ದ್ವಾರಕಪುರದಿ ರಮಾಧವ ಸತಿ ಪರಿ |
ವಾರ ಬಂದುಗಳೊಡನೆ ||
ಸೇರಿ ಮೃಷ್ಟಾನ್ನ ಭೋಜನ ಗೈವುತಿರಲೋರ್ವ |
ಚಾರ ಬಂದೆರಗಿದನು                    ||೯೦||

ಭಾಮಿನಿ
ವನರುಹಾಕ್ಷನೆ ಕೇಳು ಬಾಗಿಲೊ |
ಳನಿಲ ಸಂಭವ ಬಂದುನಿಂದಿಹ |
ನೆನುತ ತೆರಳಲು ಮಾಧವನು ಯೋಚಿಸಿದ ಮನದೊಳಗೆ ||
ಘನ ವಿನೋದವ ಗೈವೆ ಭಾವಗೆ |
ಚಿನುಮಯನು ಭುಂಜಿಸುವ ಸಮಯ ವಿ |
ದನುಚಿತವು ಪೇಳಿನುತ ದೂತಿಯ ಕರೆದು ಪೇಳಿದನು               ||೯೧||

ಕಂದ
ತಿಳುಪಲ್ ದೂತಿಯು ಬಂದಾ |
ನಿಲಸುತನಿಗೆ ಸಮಯವಿಲ್ಲ ಲಕ್ಷ್ಮೀರಮಣಂ
ನಲವಿಂದಾಪ್ತರು ಸಹಿತಲೆ |
ಕುಳಿತಿಹ ಭೋಜನಕೆ ಸ್ವಲ್ಪ ತಾಳೈ ಭೀಮಾ               ||೯೨||

ರಾಗ ಮಾರವಿ ಏಕತಾಳ
ದೂತಿಯೆ ಕೇಳೀಗೂಟದ ಸಮಯವೆ | ಭೂತಗಳಡರಿಹುದೇ ||
ಮಾತುಗಳಿಲ್ಲದೆ ಮೌನದೊಳೀರ್ಪುದಿ | ದೇತರ ಕೌತುಕವು                    ||೯೩||

ಮಾರಮಣಗೆ ತಾಯಿಲ್ಲವೆ ತನ್ನಯ | ನಾರಿಯರಡಗಿಹರೇ ||
ಯಾರಿತ್ತರು ನಿನಗಾಜ್ಞೆಯನಲ್ಲಿಗೆ | ಬಾರದೆನುವಹಾಗೆ               ||೯೪||

ಸದನಕೆ ಬಂದವರಿಂಗುಪಚರಿಸದೆ | ವಿಧುಮುಖಿಯರ ಕೂಡಿ ||
ಮದನವಿಲಾಸದೊಳಿಹನಿಗೆ ದೊರೆತನ | ಒದಗಿದುದನುಚಿತವು               ||೯೫||

ದೇವತ್ವವನುಳಿದೀಗಳೆ ಮಾನವ |  ಜೀವನವಿದು ಘನವೇ |
ಆವನು ಸೈರಿಪನೆನುತ ವಿಭಾಡಿಸ | ಲಾವನಜಾಕ್ಷನಿಗೆ               ||೯೬||

ಭಾಮಿನಿ
ಪವನಜನ ಖತಿಯರಿತು ಲಕ್ಷ್ಮೀ |
ಧವನು ಮತ್ತೋರುವನ ಕಳುಹಿದ |
ತವಕದಿಂ ಬರಹೇಳು ಭೀಮನನೆನಲು ಸೂಚಿಸಿದ ||
ಅವಿತುಕೊಂಡಿಹ ಕೋಪದಿಂ ಬರೆ |
ಜವದೊಳೇಳುತಲಾಗ ಮಾಧವ |
ನವನೊಳೆಂದನು ಮುಗುಳು ನಗೆಯಿಂ ಕೋಪವಿಳಿವಂತೆ                       ||೯೭||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದೆಯಾ ಕಲಿಭೀಮ ನಿನಗಾ | ನಂದವೆ ಧರ್ಮಜಗೆ ಕುಶಲವೆ |
ಮಂದಿ ಪರಿವಾರಗಳು ಸುಖಿಗಳೇ | ನಿಂದು ಪೇಳು                   ||೯೮||

ಸಾಕು ನಿನ್ನಯ ಮಾನವಿದಿರಿನೊ | ಳ್ಯಾಕೆ ಬಾಗಿಲೆಳೆನ್ನನಿಲಿಸಿದೆ |
ನಾಕ ಪತಿಸುತಗಿಹುದು ಮನ್ನಣೆ | ಬೇಕೆ ನಮಗೆ                      ||೯೯||

ಮಾಧವನು ನಗುತೆಂದ ನಿಮ್ಮೊಳು | ಭೇದವಿಹುದೇನೀಗಳೊಂದುವಿ |
ನೋದ ಮಾಡಿದೆ ಸೈರಿಸೈ ಕಲಿ | ಭೀಮ ನೀನು                       ||೧೦೦||

ಬಂದು ಸೆರಗನು ಪಿಡಿದು ತಾ ಕರೆ | ತಂದು ಭೋಜನವಿಕ್ಕಿಸುತಲಾ |
ನಂದದಿಂದುಪಚರಿಸಲನಿಲಜ | ಹೊಂದಿಮುದವ                     ||೧೦೧||

ಇಂದಿರಾಧವ ಕೇಳು ನಿನಗಾ | ನೆಂದ ನುಡಿ ದೋಷಗಳ ಪಾಲಿಪು ||
ದೆಂದೆರಗೆ ಶಿರವೆತ್ತಿ ಕೇಳಿದ | ಬಂದಹದನ                  ||೧೦೨||

ವಾರ್ಧಕ
ವನಜಾಕ್ಷ ಲಾಲಿಸಾದೊಡೆ ಯುಧಿಷ್ಠಿರ ಗೈವ |
ಘನವಾದ ವಾಜಿ ಮೇಧಾಧ್ವರ ಸಮೀಪಿಸಿತು |
ಮುನಿಗಳೈತಂದಿಹರು ನಿಮ್ಮ ಸಕುಟುಂಬದೊಡಕರತರಲ್ ನೇಮಿಸಿದನು ||
ಎನೆಕೇಳ್ದುಮಾರಮಣನಧಿಕ ಸಂತೋಷದಿಂ |
ಜನನಿ ಜನಕರಿಗರುಹಿ ಸಕಲಸನ್ನಾಹದಿಂ |
ವನಿತೆಯರನೊಡಗೊಂಡು ಪುರದ ಬಾಧ್ಯತೆಯ ಬಲರಾಮಪಿತರಿಂಗರುಹಿದ          ||೧೦೩||

ಭಾಮಿನಿ (ಅರ್ಧ)
ಬರುವನಕ ರಕ್ಷಿಸುವದೆನ್ನುತ |
ಲೆರಗುತಾಜ್ಞೆಯಗೊಂಡು ವೇಗದಿ |
ತೆರಳಿ ಬರೆ ಪಯಣವನು ಮಾಡುತ ಹಸ್ತಿನಾಪುರಿಗೆ                  ||೧೦೪||

ರಾಗ ಕಾಪಿ ಅಷ್ಟತಾಳ
ಕಂಡನು ಧರ್ಮಜನಾಗ | ಬಹ | ಪುಂಡರೀಕಾಕ್ಷನ ಬೇಗ |
ತಂಡತಂಡದಿ ಬರುತಿರವಲರಿಂಗೆ ಉ |
ದ್ದಂಡವಂದನೆ ಗೈವುತಿರಲತಿ ವಿನಯದಿ                     ||೧೦೫||

ತರುಣಿಯರಿಂಗೆ ದ್ರೌಪದಿಯು | ಉಪ | ಚರಿಸೆ ಸುಭದ್ರೆ ಎಲ್ಲವರು |
ಭರಿತ ಮೃಷ್ಟಾನ್ನ ಭೋಜನದೊಳೆಲ್ಲರ ತೃಪ್ತಿ |
ಕರಿಸಿ ಕುಳ್ಳಿರಲೆಂದ ಮುರಹರನ್ಯಮಜಗೆ                   ||೧೦೬||

ತರಿಸು ವಾಜಿಯನಿಲ್ಲಿಗೀಗ | ವಸ್ತ್ರಾ | ಭರಣಗಳಿಂದಲಿ ಬೇಗ |
ಭರಿತಶೃಂಗರಗೈಸಿ ಗಂಧ ಪುಷ್ಪಗಳಿಂದಾ |
ಚರಿಸಿ ಪೂಜೆಯ ಯಾಗ ಶಾಲೆಗೈದುವದೆನೆ               ||೧೦೭||

ಮುರಹರನೆಂದ ರೀತಿಯೊಳು | ಮೇಧ | ತುರಗ ಶೃಂಗರಗೈವುತಿರಲು ||
ತರುಣಿ ಸತ್ರಾರ್ಜಿತ ಕುವರಿ ದ್ರೌಪದಿಯೊಳು |
ಕಿರುನಗೆಯಿಂದ ಪೇಳಿದಳೊಂದು ವಚನವ                 ||೧೦೮||

ರಾಗ ಸಂವಾದ ಏಕತಾಳ
ಹದಿನಾರುಸಾವಿರದೆಂಟು | ಸುದತಿವರ್ಗವೀರ್ದಡೆಮಗೆ |
ಮದನಪಿತನು ಸಿಲುಕನೀನೆ | ಮುದದೊಳೊಲಿಸಿದೆ                 ||೧೦೯||

ಹರಿಯಕರುಣವಿರದಿರೆನ್ನ | ಪೊರೆವರಾರುಮಾನಗಳೆದ |
ಪರಿಯನರಿತು ರಕ್ಷಿಸಿದ | ಪರಮ ಪುರುಷನು               ||೧೧೦||

ಪತಿಗಳೈವರಿಂಗೆ ನೀನು | ಹಿತದೊಳೀರ್ಪ ನಿನ್ನೊಳಾವ |
ಸತಿಯರು ಮಾತಾಡೆ ಭಯವು | ಚತುರೆ ಲಾಲಿಸು                   ||೧೧೧||

ಪಾರಿಜಾತ ನೋಂಪಿಗಾಗಿ | ನಾರದನಿಗಿತ್ತೆ ಪತಿಯ |
ಮಾರಜನಕನ್ಯಾಕೆ ನಿಮಗೆ | ವಾರಿಜಾಕ್ಷಿಯೇ              ||೧೧೨||

ಕಂದ
ತರುಣಿಯರೀಪರಿ ವಾದಿಸು |
ತಿರಲನಿತರೊಳ್ಮಖದ ಹಯವ ಪೂಜಿಸಿ ಭಕ್ತಿಯೊ |
ಳಿರುತಿರೆ ಗಂಗಾತಟದೋಳ್ |
ಅರುಹುವೆ ಮುಂಗಥೆಯ ಲಾಲಿಸೈ ಭೂಪಾ                ||೧೧೩||

ರಾಗ ಸೌರಾಷ್ಟ್ರ ತ್ರಿವುಡೆತಾಳ
ಜನಪಕೇಳನುಸಾಲ್ವನೆನ್ನುವ | ದನುಜ ಸೌಭಾಪುರದಿ ರಾಜ್ಯವ |
ಘನ ಪರಾಕ್ರಮದಿಂದಲಾಳು | ತ್ತಿರಲು ಕೇಳು              ||೧೧೪||

ಚದುರಮಂತ್ರಿ ಸುಧಾರಮತ್ತಾಗ | ವಿಧವಿಧದ ಮಾಯಾವಿದನುಜರು |
ಕದನ ಕಲಿಗಳು ಸಹಿತಲೊಪ್ಪಿ | ಸಭೆಯೊಳಾಗ                        ||೧೧೫||

ಬಂದು ಚರನೋರುವನು ಖಳನಿಂ | ಗೊಂದಿಸುತ ತಾನಾಗ  ಗಜಪುರ ||
ದಿಂದ ಬಂದಿಹೆ ನೀರ್ಪುದೈ ನಿನ | ಗೊಂದು ವಾರ್ತೆ                  ||೧೧೬||

ವರಯುಧಿಷ್ಠಿರನಶ್ವಮೇಧವ | ವಿರಚಿಪನು ಗಂಗಾತಟಾಕದಿ |
ಪರಿಪರಿಯ ಶೃಂಗಾರಗೈಯುವ | ರೊರೆವುದೇನು                     ||೧೧೭||

ಬಂದಿಹನು ಮುರಹರನು ಎಲ್ಲವ | ರಿಂದ ಮೇಲಧಿಕಾರಿಯಾಗಿಹ |
ವಂದಿಸುತಲಿಹರೆಲ್ಲ ಪರಮಾ | ನಂದದಿಂದ                ||೧೧೮||

ರಾಗ ಕೇದಾರಗೌಳ ಝಂಪೆತಾಳ
ಎಂದನುಡಿಯನು ಕೇಳುತ | ಮಂತ್ರಿಯೊಡ | ನೆಂದ ರೋಷವ ತಾಳುತ |
ಬಂದಿಹುದು ಸಮಯವೆನಗೆ | ಮುರಹರನ | ಕೊಂದಪೆನು ಸಮರದೊಳಗೆ            ||೧೧೯||

ಅಣ್ಣ ಸಾಲ್ವನ ಕೊಂದನು | ಸೌಭಪುರ | ವನ್ನು ತಾದಹಿಸೀರ್ಪನು |
ಬೆನ್ನ ಬಿಡದೇ ಆತನ | ಪೋಗಿ ನಾ | ಮಣ್ಣಗೂಡಿಪೆ ಕೃಷ್ಣನ                      ||೧೨೦||

ತರುವೆ ಮಖದಶ್ವವನ್ನು | ಬಿಡಿಸಲೈ | ತರುವರಾಪಾಂಡವರನು |
ಧುರದಿ ಗೆಲಿದರೆ ಕೃಷ್ಣನು | ಅಲ್ಲಿ ಬಹ | ಕೊರಳರಿಯದೆಂದು ಬಿಡೆನು         ||೧೨೧||

ರಾಗ ಘಂಟಾರವ ಅಷ್ಟತಾಳ
ಎಂದು ಮಂತ್ರಿ ಸುಧಾರನೊಳೀಮಾತ |
ಬಂದನೋರ್ವನೆ ಜಾನ್ಹವೀತಟ | ಕೆಂದು ವೀರಾವೇಶದಿ             ||೧೨೨||

ನಿಂದು ದೂರದಿ ಸುತ್ತಲು ನೋಡಿದ |
ಮಂದಿಗಳನಡುವೀರ್ಪ ತುರಗದ | ಚಂದವನ್ನುರೆ ಕಂಡನು                     ||೧೨೩||

ಪೋಗಿವಾಜಿಯ ಪಿಡಿದಂತರಿಕ್ಷದಿ |
ಸಾಗಿಸಿದನೊಂದರ್ಧ ನಿಮಿಷದಿ | ವೇಗವಿನ್ನೇನೆಂಬೆನು             ||೧೨೪||