ರಾಗ ಆನಂದಭೈರವಿ ಏಕತಾಳ

ಯಾರಯ್ಯ ಮನುಜೇಶಾ ತನ್ನಾ | ಕೂಡಿ | ಕಾರಡವಿಯೊಳು ಸಂಪನ್ನಾ ||
ಕಾರಣವೇನಿಲ್ಲಿ ಬರಲೂ | ಪೇಳು | ಕಾರುಣ್ಯ ಭಾವವಿನ್ನಿರಲೂ   ||೨೨೩||

ಎನ್ನನ್ಯಾಕಿಲ್ಲಿ ನೀ ತಂದೇ | ಬೇಗ | ಎನ್ನೊಡನುಸುರೆನ್ನ ತಂದೇ ||
ಮುನ್ನ ಘಾತಿಸುವರೆ ಮನವಾ | ಗೈದೂ | ದನ್ನರಿಯೆನು ಪೇಳು ನಿಜವಾ  ||೨೨೪||

ತರಳೆಯೆನ್ನೊಡನೇನು ಚಿನ್ನಾ | ರತ್ನಾ | ಭರಣವೇನಿಲ್ಲಾ ಕೇಳಣ್ಣಾ ||
ಬರಿದೆ ಕರಗಿಸಲಿನ್ಯಾಕೇ | ಪ್ರೇಮ | ವಿರಿಸುತ ಪೇಳು ಪರಾಕೇ  ||೨೨೫||

ಭಾಮಿನಿ

ಧರಣಿಪತಿ ಲಾಲಿಪುದು ವನಿತೆಯು |
ಸಿರಿಯ ಕರುಮಾಡವನ ಸರದಿಂ |
ದ್ಹರಿಧರೆಯ ಮೇಲ್ಪಿಸುಡೆ ಖಗನಿಂ ಕೆಡುವವೋಲ್ತನ್ನಾ ||
ಪುರವೆನುವ ಕೊಳದಿಂದ ಬಿಡದನು |
ಸರಿಸಿರುವ ವಿಧಿಕಿತ್ತು ವನವೆಂ |
ಬುರುತರದ ಶಿಲೆಯೊಳಗೆ ಬಿಸುಟಿಹುದೆನುತ ಮರುಗಿದಳೂ     ||೨೨೬||

ಕಂದ

ಮತ್ತಿವ ದಹಿಸುವ ತನ್ನನೆ |
ನುತ್ತಾಯತಲೋಚನೆ ಚಿಂತಿಸುವದನರಿತು ನ ||
ರೋತ್ತಮನೊಡನೆಂದ ಮದೋ |
ನ್ಮತ್ತದಿ ರತ್ನಾವತಿಯೊಡನತಿ ವಿಭವದೊಳಂ ||೨೨೭||

ರಾಗ ಕಲ್ಯಾಣಿ ಆದಿತಾಳ

ಬೆದರಲ್ಯಾತಕೆ ನಾರೀ | ಮಾರನ್ ಕಠಾರೀ | ಬೆದರಲ್ಯಾತಕೆ ನಾರೀ      || ಪಲ್ಲವಿ ||

ಬೆದರಲ್ಯಾಕೆ ನಾ | ಬದಿಯೊಳಿರಲು ನೀ | ನಿದ ಬಿಡು ಮನದಲಿ | ಮುದವನುತಳೆದೂ ||     ||ಅ. ಪಲ್ಲವಿ ||

ಮದಿರಲೋಚನೆ ನಿನ್ನ | ಸೊಬಗನೊಮ್ಮೆ | ಬುಧರು ಪೇಳಲು ಚಿನ್ನಾ ||
ಪದುಮಗಂಧಿನಾ | ನಿದಕೋಸುಗ ಕದ | ನದಿ ನೃಪನೊಳು ಕಾ | ದಿದುದೆಲೆ ರಮಣೀ        ||೨೨೮||

ಕಲಹದಿ ಗೆಲಿದಿತ್ತಾ | ತಂದಿಹೆ ನಿನ್ನಾ | ಕೊಲುವರಲ್ಲಿದು ಚಿತ್ತಾ ||
ಬಲುತರದೊಳು ಭ್ರಮೆ | ಗೊಳುತಿದೆ ಯದನನು | ಗೊಳಿಸೈ ಬೇಗನೆ | ಕಲಶುಕವಾಣೀ     ||೨೨೯||

ಮಾರನುರುಬೆ ತಣಿಯೆ | ಕೇಳ್ ಗುಣಮಣಿಯೇ | ದಾರಿಯೇನೆನುತರಿಯೆ ||
ನಾರೀಮಣಿ ನಗೆ | ಬೀರುತ ನುಡಿ ದಯ | ದೋರೆಲೆ ಎನ್ನೊಳು | ನೀರೆ ಶೃಂಗಾರೆ  ||೨೩೦||

ಇಂಗಿತಯೆನಗುಸುರೇ | ದಣಿವುದೇಕೆ | ಭೃಂಗಕುಂತಳೆ ಶೂರೆ ||
ಅಂಗಜಗಿಣಿ ಸಾ | ರಂಗ ನಯನೆ ಲಲಿ | ತಾಂಗಿ ಚಿಂತಿಸುವುದ | ರಂಗವನರಿಯೆನೂ        ||೨೩೧||

ಅಷ್ಟಭಾಗ್ಯವು ಎನಗೇ | ಇಹುದು ಮೇಲ್ ವಿ | ಶಿಷ್ಟ ಭೂಪರು ಎನಗೇ ||
ಥಟ್ಟನೇ ಕಪ್ಪವ | ಕೊಟ್ಟೊಂದಿಪರಿದು | ದಿಟ್ಟವು ನಾ ಮನ | ಗೊಟ್ಟಿಹೆ ನಿನಗೇ      ||೨೩೨||

ರಾಗ ತೋಡಿ ರೂಪಕತಾಳ

ಧಾರುಣಿಪಾಲನೆಂದುದ ಲಾಲಿಸುತಲಾಗ | ನಾರಿಯಿಂತೆಂದಳಾ ನೃಪಗೇ |
ಧೀರ ನಿನ್ನಯ ನುಡಿ  ನಿಜವಾದಡೇನ್ ಗೈವೆ | ಕಾರ್ಯ ಸಂಗತಿಯು ಬೇರಿಹುದೂ ||೨೩೩||

ಪಿತ ತಾನು ಮೊದಲೇ ವತ್ಸಾಖನಾಗಿಹ ನರ | ಪತಿಯ ನೀ ವರಿಸುವದೆನುತಾ ||
ಹಿತದಿ ಪೇಳಿರಲಿನ್ನಾತನ ನುಡಿಯುಲ್ಲಂಘಿ | ಸುತಲೆಂತು ಸೇರಲೈ ನಿನ್ನಾ          ||೨೩೪||

ಅರಿಯದಾತನು ನೀನೇನಲ್ಲಾ ಸದ್ಧರ್ಮವ | ತೊರೆವುದಯೋಗ್ಯವೆಂದೆನುತಾ ||
ಪರ ಹೆಂಗಳಭಿಲಾಷೆ ನರಕಕೊದಪುದೆಂದು | ಮರಳಿ ಪೇಳುವುದೇಕೈ ನಿನಗೇ     ||೨೩೫||

ಇದರಿಂದ ಕೇಳು ನೀ ಎನ್ನನಾಶಿಸದತಿ | ಮುದದಿ ಸೋದರಿಯೆಂದು ಬಗೆದೂ ||
ಒದಗಿನೊಳೊದೆನ್ನಾ ಸದನದಿ ಬಿಟ್ಟರೆ | ಲೊದಗುವುದೈ ಪುಣ್ಯ ನಿಜವು    ||೨೩೬||

ರಾಗ ಬೇಗಡೆ ತ್ರಿವುಡೆತಾಳ

ಹೀಗೆ ಪೇಳುವರೇ ಸಖಿ | ಚಂದಿರಮುಖಿ | ಹೀಗೆ ಪೇಳುವರೆ ಸಖೀ        || ಪಲ್ಲವಿ ||

ಹೀಗೆ ಪೇಳುವುದೇಕೆ ಎನ್ನೊಳು | ನಾಗಗಮನೆ ನಿರಂತರದಿ ಸುಖ |
ಭೋಗಿಸುತಲನುರಾಗದಿಂದಲಿ | ಭೋಗಿವೇಣಿಯೇ ದಿನವಕಳೆಯದೇ || ಹೀಗೆ      || ಅ.ಪ. ||

ಚಿಕ್ಕಪ್ರಾಯದ ಕೋಮಲೇ | ಮನದಿ ವ್ಯರ್ಥ | ದುಃಖಿಸಲೇಕೆ ಬಾಲೇ ||
ರುಕ್ಮನೂ ಸೋದರಿಗೆ ಚೈದ್ಯನು | ತಕ್ಕನೂ ಎಂದೆನುತ ವೈವಾ
ಹಕ್ಕನೂ ಗೈದಿರಲು ದುರುಳನ | ಸೊಕ್ಕನೂ ಮುರಿದೊವ ತೆರದಲಿ |
ರಕ್ಕಸಾರಿಗೆ ಘಕ್ಕನೋರ್ವನೊ | ಳೊಕ್ಕಣೆಯ ಬರೆದಿಕ್ಕಲಿಲ್ಲವೆ |
ರುಕ್ಮಿಣಿಯು ತಾ ಕಕ್ಕುಲತೆ ಯಾ | ತಕ್ಕೆ ನಿನ್ನೊಳು ಸಿಕ್ಕಿಬಿದ್ದಿಹೆ ||೨೩೭||

ಮುನ್ನಾ ಶಕ್ರನ ಸುತನೂ | ಸೌರಿಯ ಸತಿ | ಯನ್ನು ತಾನೊದಿಹನೂ ||
ಇನ್ನಿದೂ ಅವಿಚಾರವಲ್ಲವು | ಎನ್ನದೂ ಪರಪುರುಷ ನಾನೆಂ
ದೆನ್ವುದೂ ಚೋದಿಗದ ವಚನವು | ನಿನ್ನದೂ ಎಂತಿರಲಿ ಬಳಿಕೇ |
ನನ್ಯ ಯುವತಿ ನೀನೆನ್ನುವುದು ಕೇ | ಳೆನ್ನ ಮನಸಿಗೆ ತೋಚದಾ ಹುಲು |
ಕುನ್ನಿ ವತ್ಸನ ಬಣ್ಣಿಸುವೆಯಾ | ಕೆನ್ನೊಳರುಹೆಲೆ ನನ್ನಿಯಿಂದಲಿ   ||೨೩೮||

ರಾಗ ತೋಡಿ ಏಕತಾಳ

ನುಡಿಯ ಕೇಳುತೊಡನೆ ಸುದತಿ | ನಡುಗಿ ಕೋಪದಿಂದಾ ||
ಸುಡು ಸುಡಿವನ ಧಡಿಗ ತನ್ನಾ | ಕೆಡಿಸುವನೆಂದೆನುತಾ          ||೨೩೯||

ಮರುಳೆ ಕೇಳಿನ್ನರೆಯೊಳ್ನೀರ | ನೆರದರೇನು ಫಲವೂ ||
ದುರುಳ ನಿನಗೀ ಪರಿಯೊಳೆರೆಯೆ | ಬರುವುದುಂಟೆ ದಯವೂ   ||೨೪೦||

ದಶಕಂಠ ರಕ್ಕಸನು ಸೀತೆ | ಗಸುವಿತ್ತಾ ಕೀಚಕನೂ ||
ಕುಸುಮಾಕ್ಷಿ ಸೈರೇಂದ್ರಿಗಾಗಿ | ವುಸುರು ತೊರೆದ ನೀನೂ       ||೨೪೧||

ದಾತ ಸುಕುಲ ಜಾತನೆಂಬೆ | ಮಾತಿದೆಲ್ಲಾ ಸಟೆಯೂ ||
ಧೂರ್ತರಿರುವ ರೀತಿ ನಡವೆ | ಪಾತಕಿ ಕೇಳ್ ದಿಟವೂ ||೨೪೨||

ಪರರ ಹೆಂಗಸರೊಳು ಮನವಾ | ನಿರಿಸಿ ಕುಜನರಂತೆ ||
ನರಕದೊಳಗೆ ಹೊರಳುತಿಹುದು | ಥರವೆ ನಿನಗೆ ಭ್ರಾಂತೆ       ||೨೪೩||

ವಾರ್ಧಕ

ಸುದತಿ ಇಂತೆನಲಾಗ ಕೋಪಿಸುತ ಭೂಮಿಪಂ |
ಹದದ ಕೂರಸಿಗೆ ಬಲಿಕೊಡುವೆನೀಕೆಯನೆನ್ನು |
ತದ ನೆಗೆಯೆ ಬಳಿಕಲಶರೀರ ನುಡಿಯಾಯ್ತು ಹೆಂಗೊಲೆಯನೆಸಗದಿರೆನ್ನುತಾ |
ಇದನರಿಯುತಚ್ಚರಿಯಗೊಳುತಾಗ ಧಾರುಣಿಪ |
ನಧಿಕ ಚಿಂತೆಯೊಳಿರಲ್ಕಿತ್ತಲಾ ಕಾನನದೊ |
ಳದುಭುತಾರ್ಭಟೆಗೊಟ್ಟು ವನವ ಸಂಚರಿಸಲ್ಕೆ ಪೊರಟ ವಿದ್ಯುಲ್ಲೋಚನಾ ||೨೪೪||

ಕಂದ

ಚರಿಸುತ ಕಾನನವನು ನಿಶಿ |
ಚರನಿವರಿರ್ಪೆಡೆಗತಿ ವಹಿಲದಿ ಬಂದೀಕ್ಷಿಸಿ |
ಹರಿದವರಂ ತಿಂಬೆನೆನ್ನುತ |
ಹರಿನಾದದೊಳಿಂತೆಂದನು ಘರ್ಜಿಸುತಾಗಂ  ||೨೪೫||

ರಾಗ ಮಾರವಿ ಅಷ್ಟತಾಳ

ಆರೆಲೋ ಮನುಜಾ | ಬಂದಿರುವವ | ನ್ಯಾರೆಲೋ ಮನುಜಾ               || ಪಲ್ಲವಿ ||
ಆರೋಸುಮ್ಮನೆ ಹುಲಿಯ ತುತ್ತಿಗೆ | ಹಾರಿ ಬಂದಿಹ ಕುರಿಯ ತೆರದಲಿ |
ನಾರಿಯನು ಒಡಗೊಂಡು ಯಮನೆಡೆ | ಸೇರುವರೆ ಸರಿಯಾಗಿ ಬಂದವ |
ನ್ಯಾರೆಲೋ ಮನುಜಾ ||             || ಅನುಪಲ್ಲವಿ ||

ಮನುಜರ ಮಾಂಸವ ಮೆಲದೇ | ಬಲು | ದಿನವಾಯ್ತು ನಾನಿಲ್ಲಿ ಬರದೇ ||
ಮನಕೆ ತೋಷವದಾಯ್ತು ಬಲು ಪರಿ | ಕ್ಷಣಕೆಹಿಡಿತಂದೀಕೆಯನು ನಾನ್ |
ಮನೆಗೆ ಕೊಂಡೊದಿಡುವೆ ಕೊಬ್ಬಿಸಿ | ಘನದಿ ಭೋಗವ ಗೈವೆನಂತರಾ    ||೨೪೬||

ಅಲ್ಲದಿರಲು ಲಗ್ನಗೈದೂ | ಸುಖ | ದಲ್ಲಿ ಮನಯೊಳಿಟ್ಟು ನಲಿದೂ ||
ವಲ್ಲಭೆಯ ತಾ ಮಾಡಿಕೊಳುವೆನು | ಮೆಲ್ಲಲೆಂತೀಯಧಮನಿರುತಿಹ |
ಚಲ್ವಪಾಕವನೆಸಗುವೆನು ತೊಡು | ನಿಲ್ಲದಿವನನು ಕೊಲ್ಲದೀಕ್ಷಣಾ          ||೨೪೭||

ಭಾಮಿನಿ

ನಿಶಿಚರನು ಹೀಗೆನಲು ಕೇಳ್ದಾ |
ಶಶಿಮುಖಿಯು ಭಯಗೊಂಡಿರಲು ಬಳಿ |
ಕಸಮ ಸಾಹಸಿ ಸಾಯಕಂಗಳ ಧರಿಸಿ ಪೊರಟಾಗಾ |
ಉಸುರಿದನು ಇನಿತ್ಯಾಕೆ ಘರ್ಜಿಪೆ |
ನುಸಿಯೆ ಗರ್ವವ ನಿಲಿಪೆನೆನುತಲಿ |
ಮಸೆದ ಬಾಣವ ಬಿಡಲು ಖಳನಿಂತೆಂದ ರೋಷದಲೀ  ||೨೪೮||

ರಾಗ ಮಾರವಿ ಏಕತಾಳ

ನರಗುರಿ ಕೇಳೆಲೊ | ಬರಿದ್ಯಾತಕೆ ಶರ | ಸರಿಮಾಡುವೆ ಮರುಳೆ ||
ಧುರದೊಳು ಎನ್ನಲಿ | ಸರಿ ನಿಲ್ಲುವರೀ | ಧರಣಿಯೊಳ್ಯಾರುಸುರೂ         ||೨೪೯||

ಖೂಳ ಖಳಾಧಮ | ತಾಳೆಲೊ ನಿನ್ನೆದೆ | ಸೀಳುತರುಧಿರದೊಳೂ ||
ಕಾಳಿಯನೋಕುಳಿ| ಕೇಳಿಪಡುಸುರುವೆ | ಮೂಳನೆ ಬಾಮುಚ್ಚೂ ||೨೫೦||

ಖುಲ್ಲ ಮನುಜ ಬರಿ | ಝಲ್ಲಿನೊಳೇನ್ ಫಲ | ನಿಲ್ಲದೆ ಹಿಡಿದೀಗಾ ||
ಚಲ್ಲ ಬಡಿದು ಬಾ | ಪಲ್ಲಿಗೆ ತಗಲದೆ | ಮೆಲ್ಲುವೆ ನೋಡೆಂದಾ     ||೨೫೧||
ಗಿರಿಗಹ್ವರದೊಳು | ನರಿಪಂದಿಗಳನು | ತಿರಿದಟ್ಟುತ ತಿಂದಾ ||

ಉರವನು ಹೊಡೆದೀ | ಧರಯೊಳು ಕೆಡಹುವೆ | ಖಳ ಕೇಳ್ ಖರೆಯೆಂದೂ          ||೨೫೨||
ಹೊಸಮಸೆತಿಹಕಣೆ | ವಿಸರದಿ ರಕ್ಕಸ | ನಸು ಕುಸಿಯುವೆನೆನುತಾ ||
ಎಸೆಯಲು ನೋಡುತ | ನಿಶಿಚರನದನು | ತುಸಗಣಿಸದೆ ಮುರಿದೂ       ||೨೫೩||

ರೌದ್ರದೊಳಿವನನು | ಛಿದ್ರಿಪೆನೆನುತಲಿ | ಅದ್ರಿಕುಜವ ಮುರಿದೂ ||
ಭದ್ರನ ಶಿರಕಾ | ಕ್ಷುದ್ರನು ಹೊಡೆಯಲು | ಬಿದ್ದನು ರಣತಳದೀ   ||೨೫೪||

ಭಾಮಿನಿ

ಧರಣಿಪತಿ ಕಾಮಿನಿಯ ಹಂಬಲ |
ತೊರೆದು ಯಮನೆಡೆಗೈದನಿತ್ತಲು |
ಭರಿತತೋಷದಿ ಕರ್ಬುರನು ಸತಿಯೆಡೆಗೆ ನಡೆತರಲೂ ||
ಅರಿತದನು ನೃಪಸುತೆಯು ಮನದೊಳು |
ಮರುಗಿದಳು ಖಗರಾಜನಟ್ಟುಳಿ |
ತೊರೆದು ನಕುಲೇಶ್ವರಗೆ ಸಿಕ್ಕಿದ ನಾಗನೋಲ್ಕಾಂತೇ ||೨೫೫||

ರಾಗ ಆನಂದಭೈರವಿ ಏಕತಾಳ
ಅಕ್ಕಟಕ್ಕಟೈಯ್ಯೋ ಮೃಡನೇ | ರಕ್ಕಸ ಮುಂದ್ವರಿವ ತಾನೇ ||
ಕೊಲ್ಲಲೂ | ತನ್ನಾ | ಮೆಲ್ಲಲೂ       ||೨೫೬||

ಪೊಡವಿಪ ದೃಢವರ್ಮನೆನ್ನಾ | ಪಡೆದ ಪಿತ ತಾನಾದಡೆನ್ನಾ ||
ಬರಹವೇ | ಯೆಂತು | ಮೀರುವೇ    ||೨೫೭||
ಯಾತಕಾಗಿ ವತ್ಸನಿಂಗೆ | ಮಾತು ಕೊಟ್ಟು ಭದ್ರನಿಂಗೇ ||
ಜರೆದನೂ | ಪಿತನೂ | ಒರೆದನೂ   ||೨೫೮||

ಯಾತಕಾಗಿ ಕಾದಲ್‌ಬಂದಾ | ಯಾತಕಾಗಿ ತನ್ನಾ ತಂದಾ ||
ನಿಲ್ಲಿಗೇ | ಭೂಪ | ಮೆಲ್ಲಗೇ ||೨೫೯||

ಬಳಿಕ್ಯಾಕೆ ರಕ್ಕಸ ತಾನಿಲ್ಲಿ | ಕಲಹಕೆನುತ ಜನಪನಲ್ಲಿ ||
ಬರುವರೇ | ಕೊಂದೂ | ಕಳೆವರೇ   ||೨೬೦||

ಭೂಪ ತನ್ನಾಗಳವ ಕಡಿಯೇ | ಕೋಪದಿಂದ ಖಡುಗ ನೆಗೆಯೇ ||
ತಡೆವುದೇ | ಸುರರು | ನುಡಿವುದೇ  ||೨೬೧||

ದುರುಳನೆನ್ನಾನೊದು ಕೆಡಿಸ | ದಿರಲಾರನಯ್ಯಯ್ಯೊ ಕೆಲಸ ||
ಕೆಡುವುದೂ | ಯೇನಾ | ನುಡಿವುದೂ          ||೨೬೨||

ಮತ್ತೆ ಕೊಲುವನೇನೋ ಎನ್ನಾ | ಚಿತ್ತಜಾರಿ ಬಲ್ಲಾ ಮುನ್ನಾ ||
ಬಿಡುವನೇ | ಆಳ | ದಿರುವನೇ       ||೨೬೩||

ವಾರ್ಧಕ

ಜಯ ಜಯ ಜಗನ್ನಾಥ ಜಾನಕೀ ಸುಪ್ರೀತ |
ಜಯ ಜಯ ಚಿದಾನಂದ ವಂದ್ಯಸುಮನಸ ವೃಂದ |
ಜಯ ರುಕ್ಮಿಣೀ ರಮಣ ಜಯ ಕೌಸ್ತುಭಾಭರಣ ಜಯ ಖಳಸ್ತೋಮ ಭೀಮಾ ||
ಭಯ ದೂರ ನೀ ಎನ್ನ ಬವಣೆಯನು ಪರಿಹರಿಸು |
ದಯದೋರು ಕರುಣವಾರಿಧಿ ತನ್ನ ಬಿಡದೆ ಚಿನ್ |
ಮಯ ಮೂರ್ತಿ ಕಾಯುತೀ ಖಳನಬಾಧೆಯು ಬಿಡಿಸು ಪದುಮನಾಭನೆ ದಯದೊಳೂ      ||೨೬೪||

ಭಾಮಿನಿ

ವಾರಿಜಾಕ್ಷನೆ ದ್ರೌಪದಿಯ ನೀ |
ಭೂರಿ ಕರುಣದಿ ಕಾದೆ ಸಮನಸ |
ವಾರವನು ಸಲಹಿರುವೆ ದಶಕಂಠನನು ಕಳೆದೀಗಾ ||
ನಾರಿಯೊಬ್ಬಳ ಸಲಹುವುದು ಬಲು |
ಭಾರವೇ ಗೋವಿಂದನೆನುತಿರೆ |
ಮಾರಪಿತ ಬಿಡದೀಗ ಪ್ರಾಣವ ಕಾಯೊ ಮುರಹರನೇ  ||೨೬೫||

ರಾಗ ಶಂಕರಾಭರಣ ತ್ರಿವುಡೆತಾಳ

ಸುದತಿ ಈ ತೆರದಿಂದ ಚಿಂತಿಸಿ | ಮಧು ರಿಪುವ ನೆನೆಯುತ್ತಿರೇ ||
ಇದಿರು ಬಂದಾದುರುಳ ರಕ್ಕಸ |
ವಿಧುಮುಖಿಯೊಳಿಂತೆಂದನೂ | ತೋಷದಿಂದಾ        ||೨೬೬||

ಕೋಮಲಾಂಗಿಯೆ ನಿನ್ನ ಪೆತ್ತಿರು | ವಾಮಹಿಮನ್ಯಾರೆನ್ನುತಾ ||
ಪ್ರೇಮದಿಂದಲಿ ಪೇಳು ಮದಗಜ |
ಗಾಮಿನಿಯೆ ಬಿಡು ಚಿಂತೆಯಾ | ಎನ್ನೊಳೀಗಾ          ||೨೬೭||

ಇತ್ತ ಕೇಳ್ ಹರಿಣಾಕ್ಷಿ ಎನ್ನನು | ಚಿತ್ತಜನು ಬಲು ತೆರದೊಳೂ ||
ವ್ಯರ್ಥ ಬಳಲಿಪನಿದಕೆ ಶಮನವ |
ಬಿತ್ತರಿಸು ನೀ ಎನ್ನೊಳೂ | ಕರುಣದಿಂದಾ    ||೨೬೮||

ತನು ಸುಖವ ಪಡೆಯಲ್ಕೆ ನಿನ್ನಲಿ | ಮನವ ಮಾಡಿದುದಲ್ಲದೇ ||
ಕೊಲುವದಿಚ್ಛಿಪುದಲ್ಲ ನಾರೀ |
ಮಣಿಯೆ ಭಯವನು ತೊರೆಯುತಾ | ಮೊಗವ ನೆಗಹೂ         ||೨೬೯||

ಬಳಿಯೊಳಿಹ ಮನುಜಾಧಮನು ತಾ | ನೆಲವ ತೊರೆಯುತಲೆಮನೆಡೇ ||
ನಲವಿನಿಂದಲಿ ಪೋಗಿಹನು ತಿಳಿ |
ತಿಲಕ ಪುಷ್ಪ ಸುನಾಸಿಕೇ | ಪುಸಿಯಿದಲ್ಲಾ     ||೨೭೦||

ಧಡಿಗನಿಂತೆನೆ ಕೇಳುತೆಲ್ಲವ | ಜಡಜಲೋಚನೆ ದುಗುಡದೀ ||
ಅಡಸಿದಾಪತ್ತಿನಲಿ ಧೈರ್ಯವ |
ಬಿಡದೆ ಪೇಳ್ದಳು ರೋಷದೀ | ದಾನವನೊಳೂ          ||೨೭೧||

ರಾಗ ಕಾಪಿ ಝಂಪೆತಾಳ

ದುರುಳ ರಕ್ಕಸ ಕೇಳು | ವರೆಯಲ್ಯಾಕಿಂತೆನಗೆ |
ದೊರೆಯುವುದ ಲಾಭವೇನ್ ಹೀಗೇ ||
ಪರಿ ಪರಿಯ ನರಕದೊಳು | ಹೊರಳುವುದು ಹಿತಕರವೆ |
ನರವೈರಿಯುಸುರು ಎನ್ನೊಡನೇ    ||೨೭೨||

ಹೆಣ್ಣಿನಾಶೆಯೊಳು ನಿ | ನ್ನಣ್ಣ ರಾವಣ ಮಡಿದು |
ಮಣ್ಣಿನ್ಹೊಂದಿಕೆಯಾದ ಬಳಿಕಾ ||
ಮಿಣ್ಣನಾ ದ್ರೌಪದಿಗೆ | ಕಣ್ಣಿಟ್ಟು ಕೀಚಕನು |
ತನ್ನಸುವ ತೊರೆದನೇನೆನಲೀ       ||೨೭೩||

ವಾಲಿ ರುಮೆಯನು ಮನೆಗೆ | ಲೀಲೆಯಿಂದೊದುತಲಿ |
ಕಾಲನೆಡೆಗೈದುದನು ಮರೆತೇ ||
ಕೀಳುತನ ಗೈದು ಸುರ | ಪಾಲ ಗೌತಮನಿಂದ
ಹಾಳಾದ ಬಗೆ ಯೋಚಿಸೀಗಾ       ||೨೭೪||

ತೊರೆದಿರುವ ಪ್ರಾಣವೀ | ದರೆಯಧಿಪ ಎನ್ನ ಕ |
ದ್ದಿರದಿಲ್ಲಿ ತಂದಕಾರಣದೀ ||
ಬರುವುದಿನ್ನವನ ಗತಿ | | ಸೆರಗಿನೊಳು ಗಂಟಿಕ್ಕು |
ಬರಿದೇಕೆ ಕೆಡುವೆ ಎನಲೊರೆದಾ     ||೨೭೫||

ರಾಗ ಕೇತಾರಗೌಳ ಅಷ್ಟತಾಳ
ಯಾಕೆನ್ನ ನುಡಿಯ ನಿರಾಕರಿಸುವೆ ಪೇಳು | ರಾಕೇಂದು ವದನೆ ಹೀಗೇ ||
ಜೋಕೆಯೊಳುಸುರೆಲ್ಲ | ಡೀ ಕಾನನದಿ ಪ್ರಾಣ | ನೀ ಕಳ ಕೊಳುವೆ ನೋಡೂ       ||೨೭೬||

ಜನಿಸಿದವನು ಸಾಯ | ಲಿನಿತೆಂಬ ನೇಮದ | ವನಜ ಸಂಭವ ನೇಮಿಸೇ ||
ತನಗೆಂತು ಬಿಡುವುದು | ವನಹರ್ಮ್ಯವೆಂದೆಂಬು | ದನು ಮೃತ್ಯು ತಾ ಕಾಂಬಳೇ   ||೨೭೭||

ಸುರನಾರಿಯರು ಕೂಟ | ಪರ ಪುರುಷನನಿಚ್ಛಿ | ಪರು ಕೇಳು ನಾಗವೇಣಿ ||
ತರವೆ ನಿನಗೆ ಎನ್ನೊ | ಳಿರುವುದೆ ಕುಂದುಗ | ಳರುಹು ಬೇಗದನು ಜಾಣೇ         ||೨೭೮||

ದಾನವ ಕೇಳು ನೀ | ಪ್ರಾಣವ ಕಳೆದರೂ | ನಾ ನಿನ್ನ ಸೇರಲುಂಟೆ ||
ಹೀನ ರಕ್ಕಸ ನಿನ್ನ | ಕಾಣೆ ನೆನ್ನುತ ಮೊಗ | ಮಾನಿನಿ ತಿರುಹಿದಳೂ      ||೨೭೯||

ಭಾಮಿನಿ

ನಾರಿ ಮೊಗವನು ತಿರುಹೆ ನೋಡುತ |
ಘೋರ ವಿದ್ಯುಲ್ಲೋಚನನು ತಾ |
ಭಾರಿ ಕೋಪವ ತಾಳುತುಸುರಿದನವಳೊಡನೆ ಭರದೀ ||
ವಾರ ವೆರಡಿತ್ತಿಹೆನು ಮನದಿ ವಿ |
ಚಾರಿಸುತ ನೀ ಸಿದ್ಧಗೈವುದು |
ಮೀರಿದಡೆ ಕಡೆಗಾಲ ತೋರುವೆನೆನುತ ಪಿಡಿದಾಗಾ   ||೨೮೦||

ಕಂದ

ಅರಮನೆಗೊಯ್ಯುತ ಸತಿಯನು |
ಪೊರಮಡದೋಲ್ ಬಂಧನೆಯೊಳಗಿಡುತಾ ಕರ್ಬುರ ||
ನಿರಲಿತ್ತಾ ವನಿತೆಯು ಬಲು |
ಪರಿ ದುಃಖಿಸಿದಳ್ ಘಾತಿಪ ರಕ್ಕಸನೆನುತಂ  ||೨೮೧||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಇನಿತು ಕಾಮಿನಿ ದುರುಳನೆಡೆಯೊಳು | ದಿನವ ಯುಗದೋಲ್ಕಳೆಯುತಿರಲಾ |
ವನಿತೆ ಸುಖಿಸುವ ಕಾಲ ಬಂದುದು | ಜನಪ ಕೇಳೂ    ||೨೮೨||

ಒಂದು ದಿನ ಕೌಶಂಬಿ ಧರಣಿಪ | ನೆಂದೆನುವ ವತ್ಸಾಖ್ಯ ಸಂತಸ |
ದಿಂದ ಮಂತ್ರಿಯ ಕರೆದು ಮತ್ತವ | ನೆಂದನಿನಿತೂ     ||೨೮೩||

ಬೇಟೆಯಾಡದೆ ಬಹಳ ದಿನಗಳು | ದಾಟಿದವು ಇದಕಾಗಿ ಶಬರರ |
ಕೂಟವನು ಬರ ಹೇಳು ತನ್ನಯ | ಘೋಟಕವನೂ     ||೨೮೪||

ತರಲುಸುರೆ ಇಂತೆನಲು ಕೇಳ್ದಾ | ವರ ಸಚಿವನಾ ಕ್ಷಣದಿ ಕರೆಸಲು |
ಪೊರಟ ಜನ ಸಂದಣಿಯಕೂಡುತ | ಧರಣಿಪಾಲ       ||೨೮೫||

ರಾಗ ತುಜಾವಂತು ಏಕತಾಳ

ಬಂದಾ ವತ್ಸಾಖ್ಯ ಬೇಟೆಗೆಂದೂ | ಸಂತೋಷದಿಂದಾ | ಬಂದಾ      || ಪಲ್ಲವಿ ||

ಬಂದನಾಗ ಬಹು | ಮಂದಿಯ ಕೂಡುತ |
ಚಂದದಿ ನರಪತಿ ನಂದನ ಕಂದೂ ||               || ಅನು ಪಲ್ಲವಿ ||

ಹಿಡಿ ಹಿಡಿ ಕಡಿ ಹೊಡಿ | ಜಡಿ ಬಡಿ ತಡಿಯೆನು |
ತೊಡನಾ ಬೇಡರ | ಪಡೆಯನು ನೆರಹೀ      ||೨೮೬||

ಪದುಮಾಕರವನು | ಕದಡಿದ ಮದ ಗಜ |
ವಿದು ನೆಲತರಿದೇ | ದಿದೊಯೆಂದೊದರೀ ||   ||೨೮೭||

ಕಲವಂಕಳಿಗಿಳಿ | ಕಲಕಂಠವು ಕೋ |
ಕಿಲ ಕುಲ ಕುಕಿಲುವ | ಬಲೆಯಲಿ ಕೆಡಹುತಾ | ಬಂದಾ ||೨೮೮||

ವಾರ್ಧಕ

ಈ ಪರಿಯೊಳಖಿಳ ಖಗ ಮೃಗ ಸಂಕುಲವ ಕೊಲುತ |
ಭೂಪ ಮುಂದೊತ್ತಿಬರಲೊಂದೆರಳೆ ತನ್ನಸುವ |
ಕಾಪಾಡಲೋಡಿದುದು ಬಹು ದೂರವಿದ ಕಂಡು ವತ್ಸ ಬೆಂಬತ್ತುತೈದೀ ||
ಆ ಪಗೆಯ ದಾಂಟಿ ಗಿರಿ ವರ್ಗಗಳ ಕಳೆದಿನನ |
ತಾಪದಿಂ ಬಲುಬಳಲಿ ಬಾಯಾರಿ ನೆಳಲಿನೊಳು |
ತಾಪವನು ಕಳೆಯಲ್ಕೆ ವಾಜಿಯಂ ತ್ಯಜಿಸಿ ಕುಳ್ಳಿರ್ದನಾಲ್ದೆಸೆ ನೋಡುತಾ          ||೨೮೯||

ಭಾಮಿನಿ

ಕಾಡ ವಿಭವಕೆ ಮೆಚ್ಚಿ ಮನದೊಳ |
ಗಾಡಿದನು ಪಿಂತೀ ವಿಪಿನವನು |
ನೋಡಲಿಲ್ಲವು ಪೊಸತೆನುತ ಮತ್ತಿರದೆ ಕಾಣುತಿರೇ ||
ಜೋಡಿರದ ಮನೆಯೊಂದು ಕಾಣಿಸೆ |
ರೂಢಿಪನು ಮಿಗಿಲಚ್ಚರಿಯೊಳಾ |
ಕೂಡೆ ಮಂದಿರದೆಡೆಗೆ ತೆರಳುತಲೆಂದನೀ ತೆರದೀ     ||೨೯೦||

ರಾಗ ಕಾಪಿ ಅಷ್ಟತಾಳ

ಏನ ಪೇಳುವೆನೀ ಸೋಜಿಗವಾ | ಇದ
ತಾನೆ ಕಟ್ಟಿಹುದ್ಯಾರೋ ತಿಳಿಯೆತಾ ನಿಜವಾ || ಏನ         || ಪಲ್ಲವಿ ||

ಬಣ್ಣಿಸಲೇನೀ ಮಂದಿರವಾ | ಬಿಡು |
ಗಣ್ಣರ ಮನೆಗಿಂತ ಸೊಬಗಿನೊಳ್ ಮೆರೆವಾ ||
ಬಣ್ಣದುಪ್ಪರಿಗೆ ವೈಭವವಾ | ನೋಡಿ
ತಣ್ಣಗಾಯಿತು ತೃಷೆ ಪೇಳಲೇನಿರವಾ         ||೨೯೧||

ಅರರೆಯೇನಚ್ಚರಿ ಭಯದಿ | ಓಡಿ
ದೆರಲೆಬಂದಿಲ್ಯೆನ್ನ  ಕಾಂಬುವ ತೆರದೀ |
ಹೊರ ನೋಟದಕ್ಷಿಗಳೆನಗೇ | ತೋರ್ಪು |
ದರಿಯಬೇಕೆನುತೆಂದು ಭೂಮಿಪ ತಿರುಗೇ    ||೨೯೨||

ಅಂಗನೆಯೆನುತ ನಿಶ್ಚಯಿಸೀ | ತಾಕಾ |
ಳಿಂಗ ವೇಣಿಯ ಬಳಿಗಾಗಿ ಮುಂದ್ವರಿಸಿ ||
ಅಂಗಣವನು ಪೊಕ್ಕು ನೋಡೀ | ನೃಪ |
ಪುಂಗವ ಮನದೊಳಗಿನಿತು ಮಾತಾಡೀ      ||೨೯೩||