ಭಾಮಿನಿ
ಮರುಳೆ ಕೇಳ್ ರಣಪರಿಯನರಿಯದೆ |
ಹರಿಯ ತುತ್ತಿಗೆ ಸಿಕ್ಕಿಬಿದ್ದಿಹ |
ಕುರಿಯತೆರದಲಿ ಬಂದೆ ತನ್ನಲಿ ಕಾದಲೆನುತೀಗ ||
ಕೊರಳ ಕಾವವನೆಲ್ಲಿಹನುಯೆನ |
ಗೊರೆಯೆನುತ ಖಡುಗವನು ನೆಗೆಯಲು |
ಧರಣಿಪತಿ ಇದನರಿತು ಬಂದಿಂತೆಂದನವನೊಡನೇ ||೧೫೬||
ರಾಗ ಕಾಂಭೋಜಿ ಅಷ್ಟತಾಳ
ಚಿತ್ತವಿಸೀಗೆನ್ನಾ ಮಾತಾ | ನಿನ್ನೊಳ್ | ಬಿತ್ತರಿಪುದು ವಿಂಧ್ಯನಾಥಾ ||
ಮತ್ತಾ ಕುವರ ಕಾದಿ ಹೊತ್ತು ಕೈಸೋತೆನೆಂ |
ದುತ್ತಮವೆ ಕಡೆ ಯೋಚಿಸುವದಾ | ಪತ್ತಿನೊಳಗಿಹ ಕ್ಷತ್ರಿಪುತ್ರನ ||೧೫೭||
ಸಾಯಕಂಗಳನೆಲ್ಲ ಕಳೆದೂ | ಈಗ | ನಾಯಕನಾಗಿಹ ದಣಿದೂ ||
ನ್ಯಾಯವೆ ಭುಜ ಲಕ್ಷ್ಮೀ ತಾಯಿ ತೊಲಗಳೆ ಮೇಣ್ |
ನೋಯಿಸಲ್ಕೀ ತರಳನನು ಪರ | ರಾಯರೊರೆವರ | ನ್ಯಾಯಿಯೆನ್ನುತಾ ||೧೫೮||
ಅದರಿಂದಲಿವನ ಬಂಧನೆಯೋ | ಳಿಡು | ವುದು ಯೋಗ್ಯವೆಂಬುದನರಿಯೋ ||
ಇದು ಹೊರತಿನಿತಾದ ಹದನವನರಿತೆಮ್ಮೊ |
ಳೊದಗುವರು ಕಾಳಗದೊಳೀತನ | ಕದನಕಟ್ಟಿದ ಚದುರ ಭೂಪರು ||೧೫೯||
ತೋರು ಶೌರ್ಯವ ವೀರರಲ್ಲಿ | ಮತ್ತೆ | ಗಾರುಗೆಡಿಸಿ ರಣದಲ್ಲಿ ||
ಸೇರಿಸು ಖಳರನು ಸೌರಿಯ ಪುರದೊಳೀ |
ಪೋರನನು ಸಂಹರಿಸದಿರು ಅವಿ | ಚಾರದೊಳು ಧುರ ಧೀರ ಸುಮ್ಮನೇ ||೧೬೦||
ಭಾಮಿನಿ
ಅರಸನಪ್ಪಣೆಯಂತೆ ಶಬರೇ |
ಶ್ವರನು ಬಳಿಕಾ ಚಿತ್ರಕೇತುವ |
ಸೆರೆ ಮನೆಯೊಳಿಟ್ಟೀರ್ದನೆತ್ತಲು ಪೋಗದೋಲಿನಿತೂ ||
ಪರಿಕಿಸುತ ಪೊರಟಾಗಳೋರ್ವನು |
ಚರನು ಬಂದಾ ಭದ್ರಸೇನನಿ |
ಗೆರಗಿ ಬಿನ್ನವಿಸಿದನು ಬಹುತರ ಭಯವ ತಾಳುತಲೀ ||೧೬೧||
ರಾಗ ಮುಖಾರಿ ಏಕತಾಳ
ಲಾಲಿಸೈ ಭದ್ರಸೇನಾ ಧೊರೆಯೇ | ಸೌಭಾಗ್ಯದ ಸಿರಿಯೇ |
ಲಾಲಿಸೈ ಭದ್ರಸೇನಾ ಧೊರೆಯೇ || ಪಲ್ಲವಿ ||
ತರಳ ಸಚಿವ ಪುತ್ರ ತಾನೂ | ವರಚಿತ್ರಧ್ವಜನೂ |
ಧುರದೋಳ್ ಕೆಡಹಿದ ವೀರರನ್ನೂ ||
ಕರಿ ತುರಗವ ಸಂ | ಹರಿಸುತ ದಳವನು | ತರಣಿಸುತನ ಪುರ | ವರಕಟ್ಟುತ ಮೇಣ್ |
ಮೆರೆದನು ಶಕ್ರನ ತರಳನ ಸುತನೋ | ಲುರು ವಿಕ್ರಮನಿದ ನೊರೆಯಲಿನ್ನೆಂತೊ ||೧೬೨||
ಪೊಡವೀಶ ದೃಢವರ್ಮ ತಾನಾಗಾ | ಸಂಗರಕತಿಬೇಗಾ |
ಪಡೆಕೂಡಿ ಬಂದು ಕಾದುತಾಗಾ ||
ಹುಡುಗಗೆ ಶರಗಳ | ಬಿಡಲದ ಖಂಡಿಸಿ | ತಡೆಯದೆ ಭೂಪನ ಕಡು ಹಮ್ಮುಗಳೂ |
ಕೆಡಿಸುತಲಿವ ಸೆರೆವಿಡಿದನು ಭೂಪನ | ಒಡೆಯನೆ ಲಾಲಿಸು ಕಡೆಪರಿಗಳನೂ ||೧೬೩||
ಬಳಿಕೋರ್ವಶಬರ ನೈದಿ ರಣದಿ | ಮಾರ್ಬಲವನು ಕಣದೀ |
ಗೆಲಿದೂ ಮುಂದೊತ್ತಿಬರಲು ಜವದೀ ||
ತಿಳಿದಿದನೆಲ್ಲ ತರಳ ರೋಷದಿ ಶರ | ಮಳೆಯನುಗೆರೆವುತ ಘಳಿಲನೆ ಶಬರನೊ | ಳಳವಿಯಗೊಡಲಾ ಖಳನಿವನನು ಕ್ಷಣ | ದೊಳು ಸೆರೆಪಿಡಿಯುತಲೆಳದೊದಿಹನೂ ||೧೬೪||
ಕಂದ
ನುಡಿಯಂ ಕೇಳುತ ಭೂಪಂ |
ಕಡೆಗಾಲದ ಮೃಡನಂದದಿ ಕೋಪಿಸಿ ಬಳಿಕಂ |
ಘುಡುಘುಡಿಸುತ ನಯನದೊಳಂ |
ಕಿಡಿಯಿಡುತೆಂದನು ಮಂತ್ರಿಯೊಳತಿಭರದಿಂ | ||೧೬೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಕೇಳೆಲವೊ ಮಂತ್ರೀಶನಂಗ ನೃ | ಪಾಲನಲ್ಲಿಗೆ ಕಲಹಕೈದಿಹ |
ಬಾಲನನು ಸೆರೆವಿಡಿದನಂತಾ | ಖೂಳನೃಪನೂ ||೧೬೬||
ಇಂತರಿತು ಕಾಳಗಕೆ ಪೋಗದೆ | ಕುಂತಿರಲ್ಕನುಚಿತವು ಈಕ್ಷಣ |
ಮುಂತೆ ಹವಣಿಸು ಬಲವ ಪೊರಮಡು | ವಂತೆ ಧುರಕೇ ||೧೬೭||
ಎನುತನುಜ್ಞೆಯನಿತ್ತು ಭದ್ರಾ | ಖ್ಯನು ಧನುರ್ಬಾಣವನುಗೊಳುತಲಿ |
ಮನವ ಮಾಡುತ ಪೊರಟ ದೃಢವರ್ | ಮನೊಳು ರಣಕೇ ||೧೬೮||
ಪೇಳಲೇನ್ ಜನನಾಥ ರಾಯನ | ಪಾಳಯವು ಪರ್ವದಿ ಸಮುದ್ರದೊ |
ಳೇಳುತಿಹ ತೆರೆಯಂತೆ ನಡೆದುದು | ಕಾಳಕಗಕ್ಕೇ ||೧೬೯||
ಚೂಣಿ ನಡೆವಬ್ಬರದೊಳಾಗಸ | ಕಾಣದಂತಿರೆ ರಜದಿ ಮತ್ತಿ |
ನ್ನೇನೆನುವೆ ರಾವುತರಘೋಷಕೆ | ಕ್ಷೋಣಿಪಾಲಾ ||೧೭೦||
ವಾರ್ಧಕ
ಧರೆಯಧಿಪ ಲಾಲಿಸೈ ಇನಿತಖಿಲ ಮಾರ್ಬಲವು |
ಗಿರಿನದಂಗಳನುತ್ತರಿಸಿ ಮುಂದೆ ನಡೆತಂದು |
ಧರಣಿಪತಿ ದೃಢವರ್ಮನಾಳ್ವ ಸೀಮೆಯನರಿತು ಪೊಕ್ಕುದಾದುರ್ಗವನ್ನೂ ||
ಪುರವ ಮುತ್ತುತ್ತಿರುವದನು ತಿಳಿದು ಭೂಮಿಪತಿ |
ಯರಿಗಳೊಳುಕಾದಲ್ಕೆ ರಥಿಕರಿಂದೊಡಗೂಡಿ |
ಬರುತ ಪರಸೈನಮಂ ದೆಸೆಗೆಡಿಸುತನುವಾದ ಭದ್ರಸೇನನೊಳು ಧುರಕೇ ||೧೭೧||
ರಾಗ ತುಜಾವಂತು ಮಟ್ಟೆತಾಳ
ಆರೆಲೋ ನೃಪಾಲ ಕುವರನೇ |
ಧೀರ ಕರಿರಥಾಶ್ವಚಯವ | ಸೇರಿಬಂದು ಪುರವ ಮುತ್ತಿ |
ಗಾರುಗೆಡಿಸಿ ಮುಂದುವರಿವ | ಪಾರಸತ್ವನಹೆಯೊವೆತ್ತ |
ವೀರನಾರು ಪೆಸರದೇನೆಲೊ | ನೀನಿರ್ಪ ನಗರ |
ಕಾರು ಒಡೆಯನೆಂಬುದುಸುರೆಲೋ | ಬಂದಿರುವರಿಲ್ಲಿ |
ಕಾರಣವನು ನುಡಿಯೊ ಬೇಗೆಲೊ ||೧೭೨||
ಅಂಗಜಯ್ಯನ ಸುಪದಾಬ್ಜ | ಭೃಂಗಮಿತ್ರವೃಂದ ಕುಮುದ |
ತಂಗದಿರ ಮದಾಂಧ ನೃಪಮಾ | ತಂಗ ಪಂಚ ವದನನೆನಿಸು |
ವಂಗ ಧಾತ್ರಿಯೊಡೆಯನಾಗಿಹೇ | ಧೃಡವರ್ಮನೆಂಬ |
ತುಂಗನಾಮಧೇಯ ಪಡೆದಿಹೇ | ನೀ ಕಾದಲೆನುತ |
ಅಂಗವರಿಯದಿಲ್ಲಿ ಬಂದಿಹೇ || ಆರೇಲೋ ನೃಪಾಲಕುವರನೇ ||೧೭೩||
ವಸುಧೆಪಾಲ ಕೇಳು ಧರೆಯೊ | ಳೆಸೆವ ವರ ಕಳಿಂಗ ಪುರದ |
ರಸ ಭದ್ರಾಖ್ಯನೆಂದು ತನ್ನ | ವೆಸರು ಧರಣಿಪಾಲರೊಳಗಿ |
ನ್ನಸಮ ವೀರನೆಂಬುದರಿಯೆಯಾ | ನಾವ್ ಬಂದ ಪರಿಯ |
ನುಸುರಲೇನು ನಿನ್ನ ಕುವರಿಯಾ | ಕೊಂಡೊದು ಲಗ್ನ |
ವೆಸಗ ಬೇಕೆನುವದ ಮರೆತೆಯಾ | ಯಾಕೆಲೋ ವಿಚಾರ ಸುಮ್ಮನೇ ||೧೭೪||
ರಾಗ ಘಂಟಾರವ ಅಷ್ಟತಾಳ
ಸಾಕು ಸಾರೆಲೊ ಇನಿತು ಹೆಗ್ಗಳಿಸುವ |
ದ್ಯಾಕೆ ನಿನ್ನನು ಬಡಿದು ಕಳಚುವೆ | ಪೋಕ ತೆರಳೈ ಘಮ್ಮನೇ ||೧೭೫||
ತರಳನೋರ್ವನು ಬಂದು ಕಾದುತ ಮತ್ತೆ |
ಸೆರೆಯೊಳಿಹ ನೀನವನ ತೆರದೊಳು | ಬರಿದೆ ಕೊಡದಿರು ಪ್ರಾಣವಾ ||೧೭೬||
ಮಂಕು ಭೂಪನೆ ಬಿಡು ನಿನ್ನ ಬಡಿವಾರಾ |
ಶಂಕರನು ಬರಲೊಮ್ಮೆಗಾತನ | ಬಿಂಕ ನಿಲಿಸುವೆನಿನಿತಿರೇ ||೧೭೭||
ಬಗೆವೆನೇ ನಿನ್ನ ಸಮರದಿ ಹೊಡೆದುರ |
ಬಗೆದು ಶಾಕಿನಿ ಢಾಕಿನಿಯರಿಗೆ | ಮಿಗಿಲು ತೋಷವ ಬಡಿಸುವೇ ||೧೭೮||
ಎಂದು ಕೋಲ್ಗಳ ನೆಸೆಯಲು ಭೂಪನು |
ಒಂದಿರದ ತೆರನಂತೆ ಖಂಡಿಸು | ತಂದು ಮರು ಶರವೆಸೆಯಲೂ ||೧೭೯||
ಭದ್ರಸೇನನು ಬಳಿಕ ರೋಷದೊಳದ |
ಛಿದ್ರಿಸುತ ತಾನೆಚ್ಚ ಕಡುಹಿನೊ | ಳದ್ರಿ ಶರವನು ಭೂಪಗೇ |೧೮೦||
ಭಾಮಿನಿ
ಗೋತ್ರ ಶರಹತಿಯಿಂದೆ ಭೂಪನು |
ಧಾತ್ರಿಗೊರಗಲು ಶಬರರೊಡೆಯ ವಿ |
ಚಿತ್ರತರದಸ್ತ್ರಗಳ ಧರಿಸುತ ರೋಷ ಮಿಗೆ ಪೆರ್ಚೀ ||
ನೇತ್ರದೊಳು ಕಿಡಿಗೆದರಿ ಬಳಿಕಾ |
ಚಿತ್ರಕಾಯನ ತೆರದಿ ಘರ್ಜಿಸಿ |
ಕ್ಷತ್ರಿಯನಿಗಿದಿರಾಗಿ ಮುಳಿದಿಂತೆಂದನವನೊಡನೇ ||೧೮೧||
ರಾಗ ಶಂಕರಾಭರಣ ಮಟ್ಟೆತಾಳ
ಎಲ್ಲಿ ಪೋಪೆಯಧಮ ಮನುಜ | ನಿಲ್ಲು ನೃಪನ ಗೆಲ್ದ ಹಮ್ಮ |
ನಿಲ್ಲಿಸುವೆನು ನೋಡು ತನ್ನ | ಮಲ್ಲ ಸಾಹಸಾ ||೧೮೨||
ಎನುತಲಸ್ತ್ರ ಬಿಡಲು ಕ್ಷಿತಿಪ | ಮನದಿ ಕೋಪಿಸುತ್ತಲದನು |
ಗಣಿಸದಾಗ ಪುಡಿಯಗೈದು | ಕನಲುತೆಂದನೂ ||೧೮೩||
ಕ್ಷುದ್ರ ಶಬರ ಕೇಳುಜನಪ | ಬಿದ್ದಿಹನು ಕೈಸೋತು ರಣದಿ |
ಹೊದ್ದಿಪೆನು ನೋಡವನೊಳೀಗ | ಯುದ್ಧರಂಗದೀ ||೧೮೪||
ಹುಲು ನೃಪಾಲ ಕೇಳು ಬಾಯ | ಗಳಹಲೇಕೆ ನಿನ್ನನೆಮಗೆ ||
ತಳುವದೀಗಲೊಪ್ಪಿಸುವೆನು | ತಿಳಿಯೆನುತ್ತಲೀ ||೧೮೫||
ಕೂರ್ಗಣೆಗಳನೆಸೆಯೆ ಮಧ್ಯ | ಮಾರ್ಗದೊಳಗೆ ತರಿದು ನೃಪತಿ |
ಭೋರ್ಗರೆವುತಲೆಸೆದ ಸರಳ | ವರ್ಗವಾಕ್ಷಣ ||೧೮೬||
ಮತ್ತೆ ಶಬರ ಶೂಲಧರನೋ | ಲೆತ್ತು ಕೋಪವನ್ನು ಭರದಿ |
ಕತ್ತರಿಸಲು ತಿಳಿದು ಜನಪ | ಪತ್ತು ಬಾಣದೀ ||೧೮೭||
ತೇರ ಪುಡಿಯ ಗೈವುತವನ | ಸಾರಥಿಯನು ಸೌರಿ ಪುರಕೆ |
ಸೇರಿಸುತ್ತ ಬಳಿಕಲೆಚ್ಚ | ನೂರು ಶರವನೂ ||೧೮೮||
ಶರಹತಿಯೊಳು ಪಲ್ಲಕಿರಿದು | ಧರಣಿಗೊರಗೆ ಸಂಸ್ಮೃತಿಯನು |
ತೊರೆದ ತೆರದೊಳೀರ್ದ ಕೇಳು | ಧರಣಿಪಾಲಕಾ ||೧೮೯||
ಕಂದ
ಚಿತ್ತವಿಸೆಲೆ ವಸುಧಾಪತಿ |
ಇತ್ತಾ ಶಬರನು ಮಡಿಯಲ್ ದೃಢವರ್ಮಂ ಭೂ ||
ಪೋತ್ತಮ ಮೂರ್ಛೆಯ ತಿಳಿದೇ |
ಳುತ್ತಾಕ್ಷಣ ನಡೆತಂದಂ ಹರಿಬಕೆ ಜವದಿಂ ||೧೯೦||
ಭಾಮಿನಿ
ಬರುತ ರಣರಂಗದೊಳು ಬಿದ್ದಿಹ |
ಪರಮ ಮಿತ್ರನ ನೋಡಿ ಧರಣೀ |
ಶ್ವರನು ದುಗುಡದೊಳಶ್ರುಜಲವನು ಸೂಸಿ ದುಃಖಿಸುತಾ ||
ಹರ ಹರಾ ತನಗಾಗಿ ರಣದೊಳು |
ಹರಣ ತೆತ್ತಿಹ ವೈರಿ ಬಲಕಿ |
ನ್ನರರೆ ದುರ್ಗತಿಯಿಂತಡಸಿತೆಂದೆನುತ ಮರುಗಿದನೂ ||೧೯೧||
ರಾಗ ನೀಲಾಂಬರಿ ಆದಿತಾಳ
ಅಕಟಕಟಾ ರಣಧೀರಾ | ಪ್ರಕಟಿಸಲೇನ್ ಭಯದೂರಾ ||
ವಿಕಟದೊಳು ಕ್ಷಿತಿ ತಿಲಕಾ | ಶಕುತಿಯ ಪೀರ್ದನೆ ಕೃತಕಾ ||೧೯೨||
ಎನ್ನನು ಕಾಯಲು ಬಂದೂ | ಚೆನ್ನವೆ ಮೌನವು ಇಂದೂ ||
ಇನ್ಯಾರೂ ತನಗಿಹರೈ | ಸನ್ಮಿತ್ರಾ ಯೆನಗರುಹೈ ||೧೯೩||
ಯಾತಕೆ ನಿನ್ನನು ಕರೆದೇ | ಘಾತಿಸಲೂ ತಾ ಬರಿದೇ ||
ಭೂತಪತೇ ಕರುಣವನೂ ನೀತೊರೆಯೇ ಇನ್ನೇನೂ ||೧೯೪||
ಭಾಮಿನಿ
ಈ ಪರಿಯೊಳಳಲುವ ಧರೇಶನ |
ತಾಪವನು ಕಂಡಾಗ ಭದ್ರನು |
ಕೋಪಿಸುತಲಿಂತೆಂದ ಮರುಳು ನೃಪಾಲ ಕೇಳಿತ್ತಾ ||
ಈ ಪೆಣನ ಮೇಲ್ಬಿದ್ದು ಸುಮ್ಮನೆ |
ನೀ ಪ್ರಳಾಪಿಸಲೇಕೆ ಕರಗಳ |
ಚಾಪಕೋಲ್ಗಳ ಬಿಸುಟೆಯೋಯೆನಲೆಂದ ಘರ್ಜಿಸುತಾ ||೧೯೫||
ರಾಗ ಶಂಕರಾಭರಣ ಮಟ್ಟೆತಾಳ
ಖಳ ಧರಾಧಿಪಾ | ಒದರಲೇತಕೇ | ಕಳೆವೆ ನಿನ್ನನೂ | ನಿಮಿಷಮಾತ್ರದೀ ||
ಜಲಜ ಸಂಭವಾ | ಬರಲು ಗೆಲುವೆನೊ | ಕಲಹ ಮಧ್ಯದೀ | ಯೆನುತ ನುಡಿದನೂ ||೧೯೬||
ಧಾತ್ರಿ ಪಾಲನೇ | ಕೇಳು ನಿನ್ನಯಾ | ಮಿತ್ರನೋರ್ವನೂ | ಕಾದಿ ರಣದೊಳು ||
ಪೃಥ್ವಿಗೊರಗಿಹಾ | ನವನ ತೆರದೊಳೂ | ಮಿತ್ರಸುತನಿಗೇ | ನಿನ್ನ ಕಳುಹುವೇ ||೧೯೭||
ಹುಚ್ಚು ಭೂಪನೇ | ಬರಿದೆ ನುಡಿಯನೂ | ವೆಚ್ಚಗೈವೆ ಯಾ | ಕೀಗ ನಿನ್ನನೂ ||
ನುಚ್ಚುಗೈಯುವೇ | ನೆನುತ ಕಣೆಗಳಾ | ನೆಚ್ಚಡಾನೃಪಾ | ತರಿವು ತುರು ಶರಾ ||೧೯೮||
ಮತ್ತೆ ರೋಷದೋ | ಳೌಡುಗಚ್ಚುತಾ | ಯೆತ್ತಿ ಹೊಡೆಯ ಲಾ | ನೃಪಗೆ ಶರವನೂ ||
ನೆತ್ತಿ ತಿರುಗುತಾ | ಬಳಲಿ ಕಣದೊಳೂ | ಮರ್ತ್ರಪಾಲನೂ | ಬಿದ್ದ ಧರೆಯೊಳೂ ||೧೯೯||
ವಾರ್ಧಕ
ಕ್ಷೋಣೀಶ ಕೇಳುದೃಢವರ್ಮ ಪುನರಪಿ ಹತಿಗೆ |
ತ್ರಾಣಗುಂದುತ ಮೂರ್ಛಿಸಲ್ಕೆ ಭದ್ರಾಖ್ಯ ನೃಪ |
ಕಾಣುತಿದನಾಗ ತೋಷಿಸಿ ಬಂಧನದೊಳಿರುವ ಚಿತ್ರಕೇತನನು ಕರೆಸೀ ||
ಕ್ಷೀಣಪಟ್ಟಿಹ ತರಳನನು ಕಂಡುಭೂಪ ದು |
ಮ್ಮಾನ ತಾಳುತ ನುಡಿದ ಕುವರ ಕೇಳೆನಗಾಗಿ |
ಬಾಣಹತಿಯಿಂದಧಿಕ ಕಷ್ಟಬಟ್ಟೆಯೊಯೆನುತ ಮಮತೆಯಿಂದುಪಚರಿಸಿದಾ ||೨೦೦||
ರಾಗ ಭೈರವಿ ಝಂಪೆತಾಳ
ಕಂದಾ ಕೇಳೆನಗಾಗಿ | ಬಂದೂ ಕಾಳಗದಿ ಬಲು |
ನೊಂದು ಬಳಲಿದೆ ಇಂಥಾ | ಬಂಧನೆಯೊಳ್ಸಿಲುಕೀ ||೨೦೧||
ಆಗಿ ಗತಿಸಿಹ ಕಾರ್ಯ | ಕ್ಕಾಗಿ ಚಿಂತಿಸಲು ಫಲ |
ವಾಗುವುದೆ ಇದರಿಂದಾ | ನೀಗಿ ಕಳೆ ದುಗುಡಾ ||೨೦೨||
ತರಳ ನಿನ್ನನು ಸೆರೆಯೊ | ಳಿರಿಸಿದಧಮನು ಧರೆಯೊ |
ಳಿರಲುಂಟೆ ಶೈಮಿನಿಗೆ | ತೆರಳಿಹನು ರಣದೀ ||೨೦೩||
ಭಾಮಿನಿ
ಇನಿತು ತರಳನ ತಕ್ಕವಿಸುತಾ |
ಜನಪನವನೊಡನೆಂದ ಕೇಳೈ |
ಸನುಮ ತದಿ ನೀ ತೆರಳು ಮಾರ್ಬಲದೊಡನೆ ಪುರವರಕೇ ||
ಅನಿತರೊಳು ತಾ ತರುವೆ ತರಳೆಯ |
ನೆನುತ ಕಳುಹಿಸಿ ಭದ್ರಸೇನನು |
ವನಜನೇತ್ರೆಯ ತರಲು ಪೊಕ್ಕನು ರಾಜನಾಲಯವಾ ||೨೦೪||
ರಾಗ ತೋಡಿ ಅಷ್ಟತಾಳ
ಕೇಳಿತ್ತ ಧರಣಿಪಾಲಾ | ನಿನ್ನೊಳು ನಾನು | ಪೇಳ್ಪುದ ಸುಗುಣ ಶೀಲಾ ||
ಭೂಲೋಲಾ ಭದ್ರನಾ | ಬಾಲೆಯ ತರಲು ನೃ |
ಪಾಲಯವನು ನಿಶಿ | ಕಾಲದಿ ಸೇರುತ್ತಾ ||೨೦೫||
ರಾಜನೋಲಗವ ಪೊಕ್ಕು | ಮೇಣಲ್ಲಿ ವಿ | ರಾಜಿಪ ಸಿರಿಗೆನಕ್ಕೂ |
ರಾಜೀವ ಸಖನಂತೆ | ತೇಜದಿ ನವರತ್ನ |
ರಾಜಿಯಿಂದಿಹ ಮೃಗ | ರಾಜಪೀಠವ ನೋಡಿ ||೨೦೬||
ಅಚ್ಚರಿಯವ ತಳೆದೂ | ವೈಭವಕಾಗಿ | ಮೆಚ್ಚಿ ಮೇಣದ ಕಳೆದೂ |
ಅಚ್ಚ ಕುಸುಮಗಂಧಿ | ಗಿಚ್ಛಿಸುತಲಿ ನೃಪ |
ಪಚ್ಚೆಗೆತ್ತಿದ ದ್ವಾರ | ಬಿಚ್ಚಿ ಮುಂದೊತ್ತುತಾ ||೨೦೭||
ರನ್ನದುಪ್ಪರಿಗೆಗೇರೀ | ನಿದ್ರಾಂಗನೆ | ಯೆನ್ನುವ ಸಖಿಯ ಸೇರಿ ||
ಕನ್ಯೆರತ್ನಾವತಿ | ಸ್ವರ್ಣ ಪಲ್ಲಂಗದಿ |
ಮುನ್ನ ವಿಶ್ರಮಿಸಿಹುದನ್ನು ನಿರೀಕ್ಷಿಸಿ ||೨೦೮||
ನನೆಗೋಲನುರುಬೆಗಾಗೀ | ಭೂಮಿಪ ತನ್ನ | ಮನ ಸೋತು ಬಳಿಗೆ ಪೋಗಿ ||
ವನಿತೆಯ ಸುಂದರಾ | ನನವ ನೋಡುತ ತನ್ನೊ |
ಳಿನಿತೆಂದು ನುಡಿದನು | ಘನತೋಷವನು ತಾಳಿ ||೨೦೯||
ರಾಗ ಕಾಪಿ ಏಕತಾಳ
ಏನನುಸುರಲಿ ಮಾನಿನಿಯ ಚಲುವಾನನದ ಪರಿಗೇ || ಮದ ಗಜ |
ಯಾನೆ ಕೋಕಿಲ ಗಾನೆ ಸತಿಯಾನೂನ ಮೊಗ ಸಿರಿಗೇ || ಮತ್ತುಡು |
ಸೇನೆ ಯಧಿಪತಿ ಬಾನ ತ್ಯಜಿಸುತಲೀ ನಿತಂಬಿನಿಗೇ || ನಿಟಿಲದಿ |
ಸಾನುರಾಗದೊಳ್ತಾನೆ ಮೆರೆಯುತ ಪೂರ್ಣಕಳೆ ಯೆಸಗೇ || ಇದಕನು
ಮಾನವಿಲ್ಲ ವಿ | ದೇನೆನಲು ಹಗೆ | ಮಾನವಗೆ ತಾವ್ | ಬೇನೆ ಪಡುವಂ
ತೀ ನಳಿನಗಳು | ನ್ಯೂನಗೊಂಡಿವೆ | ಹೀನಿಸುತಲಾ | ಯೇಣಧರನನೂ ||೨೧೦||
ಅಂಬುಜಾಕ್ಷಿಯು ಸಂಭ್ರಮದಿ ಮುಗುಳುಂಬಿನಿಗೆ ತನುವಾ | ಇತ್ತಾ |
ಡಂಬರದಿ ತನ್ನಂಬಕಕೆ ಮರೆಗೊಂಬ ವೋಲನುವಾ || ಗೈದಿಹ |
ಳೆಂಬುದಿದು ಪುಸಿಯೆಂಬರೇನೆನೆ ರಂಭೆ ತನ್ಮನವಾ | ಬೇರೊಂ |
ದಿಂಬುಗೊಳಿಸುತ ಕುಂಭಿನಿಯನಕದಂಬದೊಳು ಚಲುವಾ | ಪುರುಷರ |
ಹಂಬಲಿಸಿ ಮೇಣ್ | ಬೆಂಬಿಡದೆ ತರೆ | ಕಂಬು ಕಂಠಿನಿ | ತುಂಬಿರುವ ನಗೆ |
ಯೆಂಬ ಬಲೆಯ ಸೌ | ರಂಭದೊಳು ತಾ | ಹಂಬಿಸಿಹಳಾ | ರಂಭದಲ್ಲಿಯೆ ||೨೧೧||
ನಾರಿ ರತುನೆಯ ಚಾರು ವದನದಿ ಬೀರುವೆಳೆನಗೆಯು || ಕುಂದಲ್ |
ಕಾರಣಂಗಳು ಬೇರೆ ಮನಸಿಗೆ ತೋರದೀ ಬಗೆಯೂ | ಬಳಿಕಾ |
ವಾರಿಜಾಕ್ಷಿಯ ಮೋರೆ ತೊರೆದಿಹ ಭೂರಿ ಸ್ಮಿತ ಬಲೆಯು || ಯೆನ್ನನು |
ಸೇರಿ ಸುತ್ತುತ ದಾರಿಗೆಡಿಸೀ ನೀರೆಯೆಡೆಗೊಯ್ಯು || ತ್ತರಸಿಯ |
ಕಾರ್ಯ ಕೆಡದೋಲ್ | ತಾರೆಯುಧಿಪಗೆ | ಪೂರ ಒಪ್ಪಿಸೆ | ಧೀರತನ್ನನು |
ಸೂರೆಗೊಂಡಿಹ | ಭಾರಿ ಬಳಲಿಸಿ | ಯಾರಿಗೊರೆಯಲ | ಪಾರ ಕಷ್ಟವಾ ||೨೧೨||
ಕಂದ
ಕೇಳವನಿಪ ಭದ್ರಾಖ್ಯಂ |
ಬಾಲೆಯನೀಪರಿ ವರ್ಣಿಸಿ ಸುಮಶರದುರಿಯಂ
ತಾಳದೆ ಮತ್ತಿಂತೆಂದನು |
ಲೋಲಾಕ್ಷಿಯ ಸುಂದರ ತನುವಿನ ಸೌರಭಕಂ ||೨೧೩||
ರಾಗ ಯಮುನಾಕಲ್ಯಾಣಿ ಅಷ್ಟತಾಳ
ಅಮಮ ಯೇನ್ ಬೆಡಗುಗಾರ್ತಿಯೊ ಕನ್ಯೆ | ಕಾಣೆ |
ಕಮನೀಯ ಗಾತ್ರೇ ಮನ್ಮಥರನ್ನೇ || ಪಲ್ಲವಿ ||
ಭುವನ ಸ್ತ್ರೀ ನಿಕುರಂಬ ವನದಲ್ಲೀ | ಇಂಥ |
ನವ ಮೃದುಲತೆಯಿನ್ನು ಇಹುದೆಲ್ಲೀ ||
ದಿವರಾಜನೆಂತು ಬಂದಿಹನಿಲ್ಲೀ | ಯೆಂದು |
ತವೆಶಂಕೆತೋರ್ಪುದು ಮನದಲ್ಲೀ ||೨೧೪||
ನಾಗವೇಣಿಯ ಮುದ್ದು ಮೊಗಕಾಗೀ | ಮೇಲ್ವೈ |
ರಾಗಿಗಳ್ ಸಹ ಸೋಲ್ವರ್ಮನ ನೀಗೀ ||
ಮಾಗಿಯೊಳ್ ದಣಿದ ಪಾಂಥಿಕ ತಾನೂ | ಒಮ್ಮೀ |
ನಾಗ ನಡೆಯ ನೋಡೆ ತೃಷೆಯನ್ನೂ ||೨೧೫||
ತೊರೆವ ತಾನಿದ ಸಿದ್ಧ ವನಜಾಕ್ಷಿ | ಗೆಣೆ |
ಇರದಿದು ನಿಜ ಮಾರಪಿತ ಸಾಕ್ಷೀ ||
ಸುರ ತರುಣಿಯರಿಂಗೀ ಸೊಬಗಿನ್ನೂ | ಪೂರ |
ದೊರೆವುದಸಾಧ್ಯವಾಗಿಹುದಿನ್ನೂ ||೨೧೬||
ಭಾಮಿನಿ
ಬೇದಬಿಜ್ಜೆಗನೀ ತರುಣಿಯನು |
ಸಾದರದಿ ನಿರ್ಮಿಸಿದನಿದಕಪ |
ವಾದವಿಲ್ಲಿದು ನಿಶ್ಚಯವು ಕರಿ ಕುಂಭ ಕುಚಯುಗೆಯಾ ||
ಮೋದದಿಂದೊಯ್ಯುತಲಿ ಮದುವೆಯ |
ನಾದೆನೆಂದರೆ ತನ್ನ ಭಾಗ್ಯಕೆ |
ಮೇದಿನಿಯೊಳೀಡಿಲ್ಲವೆಂದಾ ಕ್ಷಣದೊಳಾಸತಿಯಾ ||೨೧೭||
ವಾರ್ಧಕ
ಕದಲದೋಲೆತ್ತಿ ಕೊಂಡೊದಾಗ ಮಂಚಮಂ |
ಒದಗಿನಿಂ ನಿಶಿಯೊಳಾಪುರಗಿರಿಗಳಂ ಕಳೆದು |
ಪದುಮಸಖನುದಯದೊಳ್ ದಿಂಡೀರವೆಂಬ ವನದೆಡೆಗೈದು ಪೊರೆಯನಿಳುಹೀ ||
ಉದಧಿವಸನೇಶ ಶ್ರಮವನು ಕಳೆಯಲೋಸುಗವೆ |
ಮುದದಿ ಕುಳಿತರಲಿತ್ತ ನಿದ್ದೆ ತಿಳಿದೆದ್ದಾಗ |
ಳದುಭುತವಿದೇನೆಂದು ಬಾಯ್ ಬಿಡುತ ಮರುಗಿದಳ್ ಕಡು ಭಯವ ತಾಳ್ದು ಸುದತೀ ||೨೧೮||
ರಾಗ ನೀಲಾಂಬರಿ ಏಕತಾಳ
ಹರ ಹರಾ ಕರುಣಾನಿಧೇ | ಯೇನಚ್ಚರಿ | ಯರಿಯೆನರುಹಬಾರದೇ ||
ಪುರವ ತ್ಯಜಿಸುತಲಿಲ್ಲೀ | ಪಲ್ಲಂಗದೊಡ | ಬರಲೇನಾರಣ್ಯದಲ್ಲೀ ||೨೧೯||
ಚೋರರ್ಮಂದಿರವ ಹೊಕ್ಕೀ | ಸುಲಿದು ಎನ್ನಾ | ಘೋರ ಕಾನನದೊಳಿಕ್ಕೀ ||
ಸೇರಿದರೇನೊ ಹೀಗೇ | ಅಲ್ಲದಡೆನ್ನಾ | ತೀರಿಸಲ್ ನೆನೆದ ಬಗೇ ||೨೨೦||
ಭೂತಗಳೆನ್ನನಿಂತೂ | ಗೈದವೊ ಗಿರಿ | ಜಾತೆಯ ಪತಿಗೆ ಗೊತ್ತೂ ||
ಈ ತೆರನೆಸಗುವುದೇ | ಶಿವ ಶಿವ ಎನ್ನಾ | ಘಾತಿಸದೈದುವುದೇ ||೨೨೧||
ಈ ಪರಿ ದುಗುಡದಿಂದಾ | ನಾಲ್ದೆಸೆಯನು | ತಾಪದಿ ನೋಡಲ್ಲಿಂದಾ |
ಭೂಪನ ನೀಕ್ಷಿಸು ತಾ | ಭಯದಿ ತಾ ಪ್ರ | ಳಾಪಿಸುತೆಂದಳ್ ಮಾತಾ ||೨೨೨||
Leave A Comment