ಭಾಮಿನಿ

ಎಂದೆನುತ ಭೂಮಿಪನು ಪೊರಮಡು |
ವಂದವನು ಕಾಣುತ್ತ ಸಚಿವನ |
ಕಂದ ಚಿತ್ರಧ್ವಜನು ತಿಳಿದಾ ನೃಪನ ಸಮ್ಮುಖಕೇ ||
ಬಂದು ಬಿನ್ನವಿಸಿದನು ಭೂಪಗೆ |
ತಂದೆ ಕೇಳ್ ನೀವೇಕೆ ಪೊರಟಿರಿ |
ಪಂದೆಭೂಪನ ಗೆಲುವಡೆನುತಿಂತೆಂದನವನೊಡನೇ    ||೭೮||

ರಾಗ ಮಾರವಿ ಏಕತಾಳ

ನುಡಿಯನು ಲಾಲಿಸು ಪೊಡವಿಪ ನೀ ಪೊರ | ಮಡುವದಿದೇನ್ ಘನವೂ ||
ಬಡಕುರಿಯನು ಗೆಲುವಡೆ ಕೇಳ್ ಮೃಗಗಳ | ಒಡೆಯನು ತೆರಳುವದೇ   ||೭೯||

ಅಪ್ಪಣೆಯಿತ್ತರೆ ಕ್ಷಿಪ್ರದಿ ಭೂಪನ | ನಪ್ಪಳಿಸುತ ಬಳಿಕಾ ||
ತಪ್ಪದೆ ಹಿಡಿದೆಳತಪ್ಪೆನು ನಿಮಿಷದಿ | ಬೊಪ್ಪನೆ ಇದು ದಿಟವೂ   ||೮೦||

ಕುನ್ನಿ ನೃಪಾಲನ ಗಣ್ಯಕೆ ತರುವೆನೆ | ಮಣ್ಣಿಗೆ ಕೂಡಿಸುತಾ ||
ಕನ್ಯೆಯ ತರುವೆನು ಸಣ್ಣವನೆನುತಲಿ | ಖಿನ್ನತ್ವವನು ಬಿಡೂ      ||೮೧||

ಭಾಮಿನಿ

ಕೇಳುತಲಿ  ಮುದವಾಂತು ಭೂಪನು |
ವೀಳೆಯವ ತಾನಿತ್ತು ಕಳುಹಲು |
ಮೇಲೆ ಚಿತ್ರಧ್ವಜನು ಪೊರಟಾತಾಯಿಗಭಿನಮಿಸೀ |
ಪೇಳಿದನು ಕೇಳ್‌ಜನನಿಯಂಗ ನೃ |
ಪಾಲನಲ್ಲಿಗೆ ಕಲಹಕೈದುವೆ |
ಲೀಲೆಯಿಂದಾಶೀರ್ವದಿಪುದೆನಗೆಂದನವಳೊಡನೇ ||   ||೮೨||

ರಾಗ ನೀಲಾಂಬರಿ ಏಕತಾಳ
(
ಧಾಟಿ : ತಪ್ತತೈಲದಿ ದೂಡುವರೆಲೆ ಇವನಾ)

ಅರಿತೆ ನಿನ್ನಯ ಮನವಾ | ಸುಮ್ಮನೆ ಭೂಮಿ | ಪರೊಳು ಕಾಳಗವಗೈವಾ ||
ಪರಿಯ ತಿಳಿಯದೆ ವ್ಯರ್ಥಾ | ಪೋಗುವೆನೆಂದು | ತೆರಳುವದೇನು ಸ್ವಾರ್ಥಾ       ||೮೩||

ಕರಿಸಂಕುಲವ ಗೆಲುವೇ | ನೆನ್ನುತ ಪೋಪ | ಮರಿಸಿಂಹದೋಲ್ ಮಗುವೇ ||
ಧುರಧೀರರೊಡನೆ ನೀನೂ | ಕಾದುವೆನೆಂಬು | ದರಿದಾಗಿ ತೋರ್ಪುದಿನ್ನೂ         ||೮೪||

ಭಾಮಿನಿ

ತನಯ ಕೇಳದರಿಂದ ಕದನಕೆ |
ಮನವಮಾಡದೆ ಕ್ಷೀರಕದಳಿಗ |
ಳನು ನಿರಂತರ ಸವಿವುತಲೆ ಮನೆಯೊಳಗೆ ಇರುತಿಹುದೂ ||
ಎನುತ ದುಗುಡದೊಳಪ್ಪಿ ಮುದ್ದಿಪ |
ಜನನಿಯನು ಕಾಣುತ್ತ ನುಡಿದನು |
ಸನುಮತವೆ ನೀ ತಾಯೆ ಎನ್ನನು ತಡೆವುದೆಂದೆನುತಾ ||೮೫||

ರಾಗ ನವರೋಜು ಏಕತಾಳ

ಅಮ್ಮಯ್ಯಾ ಬಿಡು ದುಗುಡಾ | ನೀ | ಸುಮ್ಮಗೆ ಯೋಚಿಸಬೇಡಾ ||
ಬೊಮ್ಮಾಮರರನು | ಒಮ್ಮೆಗೆ ಗಣಿಪೆನೆ | ಘಮ್ಮನಾ ಭೂಪನ | ಹಮ್ಮನು ನಿಲಿಸುವೇ       ||೮೬||

ಉಪ್ಪನ್ನಾ ಧರಣಿಪನೂ | ಇ | ತ್ತಿಪ್ಪ ಕಾರಣ ನಾನೂ |
ಒಪ್ಪದೆ ಪೋದರೆ ತಪ್ಪಲ್ಲವೆ ಮೇಣ್ | ತಪ್ಪುವ ದಾರಿಗೆ ಬಪ್ಪ ಬವಣೆಗಳೂ ||         ||೮೭||

ಇದರಿಂದ ಕೇಳವ್ವಾ | ನಾ | ನಿದಕೋ ಪೋಗುವೆ ಗೆಲುವಾ ||
ಹದನವನೆಲ್ಲವ ಮೊದಲೇ ತಿಳಿದಿಹೆ | ಬದಲೆಣಿಸದೆನೀ ಮುದದೊಳಗಿರುವುದು     ||೮೮||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಾತೆಯೊಡನಿಂತುಸುರುತಲಿ ವಿ | ಖ್ಯಾತ ಚಿತ್ರಧ್ವಜನು ಸಂಗರ |
ಕಾತುರದಿ ಪೊರಮಟ್ಟ ತಾ ನಿ | ರ್ಭೀತಿಯಿಂದಾ       ||೮೯||

ಮಂದಿಮಾರ್ಬಲ ತುರಗ ಕರಿಗಳ | ಸಂದಣಿಯನೊಡಗೊಂಡು ಸಚಿವನ |
ನಂದನನು ಕಳೆಕಳೆದು ದುರ್ಗವ | ಮುಂದೆ ಬರುತಾ  ||೯೦||

ಧರಣಿಪತಿ ದೃಢವರ್ಮರಾಯನ | ಪುರವ ಮುತ್ತುತ್ತಿರಲು ಕಂಡಾ |
ಚರರು ಬಳಿಕೋಡುತ್ತ ಪೇಳ್ದರು | ದೊರೆಯ ಕೂಡೇ    ||೯೧||

ರಾಗ ಮುಖಾರಿ ಏಕತಾಳ

ಕೇಳಯ್ಯಾ ದೃಢವರ್ಮ ಭೂನಾಥಾ | ನಾವೆಂಬ ಮಾತಾ
ಜಾಲಾವಲ್ಲಿದು ಲೋಕ ವಿಖ್ಯಾತಾ ||
ಪೇಳುವದೇನ್ ಭೂ | ಪಾಳರ ಸೈನ್ಯವು |
ಪಾಳೆಯಗೊಟ್ಟಿಹು | ದೇಳೈ ಈ ಕ್ಷಣ          ||೯೨||

ಪುರವಾ ಮುತ್ತುತ ನಮ್ಮನ್ನೆಲ್ಲಾ | ಲಾಲಿಸು ಸುಳ್ಳಲ್ಲಾ |
ಬೆರಸೀ ಕಳುಹಿರ್ಪರವರನಿತೆಲ್ಲಾ |
ದೊರೆಯೊಡನುಸುರುತ | ಕರೆತಹುದೆನುತಲಿ |
ಒರೆದೀರ್ಪರು ಭೂ | ಪರು ಇದನೆಲ್ಲಾ         ||೯೩||

ಕಂದ

ಚರರೆಂದುದ ಕೇಳುತಲಾ |
ಧರಣಿಪ ನಿಜಮಂತ್ರಿಯ ಕರೆದವನೊಡನಾಗಂ ||
ವೊರೆದನು ಕೇಳೈ ಸಚಿವನೆ |
ಪರನೃಪರೆಮ್ಮಯ ಪುರಕೈತಂದಿಹರೆನುತಂ  ||೯೪||

ರಾಗ ಸೌರಾಷ್ಟ್ರ ಅಷ್ಟತಾಳ

ಲಾಲಿಸು ನಿನ್ನೊಡನೆಂಬುವ ವಚನವಾ | ಮಂತ್ರಿ ಕೇಳೂ | ಭೂಮಿ |
ಪಾಲರು ಗೈದಿರುವನುಚಿತ ಕಾರ್ಯವಾ | ಮಂತ್ರಿ ಕೇಳೂ       ||೯೫||

ಕಳ್ಳರ ತೆರದಲ್ಲಿ ಪುರವ ಮುತ್ತಿಹರಂತೆ ಮಂತ್ರಿ ಕೇಳೂ | ತಾವು |
ಮಲ್ಲಸಾಹಸಿಗಳೆಂದೆಂಬ ಹಮ್ಮಿಹುದಂತೆ | ಮಂತ್ರಿ ಕೇಳೂ      ||೯೬||

ವೀರಭುಜಾನ್ವಿತ ಧರಣಿಪರಾದರೆ | ಮಂತ್ರಿ ಕೇಳೂ | ಇಂತು |
ಚೋರರ ತೆರೆದೊಳು ಬರುವ ಪದ್ಧತಿಯುಂಟೆ | ಮಂತ್ರಿ ಕೇಳು ||          ||೯೭||

ಕರೆಸೀಗ ನಮ್ಮಯ ಭೂರಿಮಾರ್ಬಲವನ್ನು | ಮಂತ್ರಿ ಕೇಳೂ | ಹಯ |
ಕರಿಪದಾತಿಗಳ ಸಮೂಹವ ತಡೆಯದೆ | ಮಂತ್ರಿ ಕೇಳೂ        ||೯೮||

ವಾರ್ಧಕ

ಅರಸನಪ್ಪಣೆಯನ್ನು ತಿಳಿದಾಗ ಮಂತ್ರಿತಾ |
ಕರೆಸಿದಂ ಗಜಸೇನೆ ಮಂದಿಮಾರ್ಬಲ ಸಹಿತ |
ಪುರವ ಮುತ್ತಿಹ ವೀರರಂ ಗೆಲ್ದು ಪಟ್ಟಣದ ಸಿರಿಯ ರಕ್ಷಿಪಡೆ ಬಳಿಕಾ ||
ಧರಣಿಪಾಲಕನಿತ್ತಲಸ್ತ್ರಶಸ್ತ್ರಾದಿಗಳ |
ಕರತಳದಿಧರಿಸಿ ಬೆಂಬಲವ ತಾನೊಡಗೊಂಡು |
ಬರುತ ಸಂಗರಕೆ ಮುಂದೆಸೆವ ಪರಸೈನ್ಯಮಂ ಚದರಿಸಿದ ಕಡುಹಿನಿಂದಾ          ||೯೯||

ಕಂದ

ಸೈನ್ಯವು ಚದುರುತ್ತಿಹ ಪರಿ |
ಯನ್ನೀಕ್ಷಿಸಿ ಚಿತ್ರಧ್ವಜಬಲು ಧೈರ್ಯದೊಳಂ ||
ತನ್ನಯ ಮಾರ್ಬಲಕಭಯವ |
ಮುನ್ನೀವುತಲಿರಲರಿತಾ ಭೂಪತಿಯೊರೆದಂ  ||೧೦೦||

ರಾಗ ಭೈರವಿ ಏಕತಾಳ

ಆರೆಲೊ ಫಡನೃಪ ಕುವರಾ | ಹುಲು | ಚೋರರ ತೆರದೊಳು ಪೋರಾ ||
ಭೂರಿ ಬಲವ ಸಹಿತಿಂದೂ | ಬಹ | ಕಾರಣವುಸುರೇನೆಂದೂ     ||೧೦೧||

ತರಳನೆ ನಿನಗಿದು ಹಿತವೇ | ಯಮ | ಪುರಕೈದುವದುಯುಕುತವೇ ||
ತೆರಳಿದರಿಂದ ನೀ ಪಿಂತೇ | ಮೇಣ್ | ತೆರಳಿಸು ಪಿತನನು ಮುಂತೇ     ||೧೦೨||

ಮರುಳುನೃಪನೆ ಕೇಳಿತ್ತಾ | ನಾವ್ | ತೆರಳಿಬಂದಿಹಪರಿ ಮತ್ತಾ ||
ತರಳೆ ನಿನ್ನಣುಗೆಯನೊದು | ಭೂ | ವರ ಭದ್ರಾಖ್ಯಗಿತ್ತಪುದೂ   ||೧೦೩||

ಎನುತ ಮುತ್ತಿಹೆವೈ ನಿನ್ನಾ | ಸುತೆ | ಯನು ಕರದೊವುತಲಿನ್ನಾ ||
ಜನಪತಿಗೊಪ್ಪಿಸಿ ಕಡೆಗೇ | ಪಿತ | ನನು ಕಳುಹುವೆ ನಿನ್ನೆಡೆಗೇ   ||೧೦೪||

ಭಳಿರೆ ಶಭಾಸು ಮೆಚ್ಚಿದೆನೂ | ದಶ | ಗಳ ರಾವಣ ಸೀತೆಯನೂ ||
ಕಳವಿನೊಳೊದೆಮಪುರಿಗೇ | ತಾ | ತೆರಳಿದುದರಿಯೆಯಾ ಹೀಗೆ ||೧೦೫||

ಪರ ಸತಿ ಪರ ಧನಗಳಲೀ | ಮನ | ವಿರಿಸುತ ನರಕಂಗಳಲೀ ||
ಹೊರಳುತಲಿಹುದೇನ್ ಸ್ವಾರ್ಥಾ | ಯೇ | ತರಳನೆ ಕೆಡದಿರುವ್ಯರ್ಥಾ     ||೧೦೬||

ಧರ್ಮವಿಚಾರವನರಿಯೇ | ದೃಢ | ವರ್ಮ ನಾವ್ ಬಂದಿಹ ಪರಿಯೇ ||
ಸುಮ್ಮನೆ ಬಾಯ್‌ಗಳಹದಿರೂ | ನೀ | ನಮ್ಮೊಳಗಿದನುಸುರದಿರೂ        ||೧೦೭||

ಹುಡುಗನೆ ಕೇಳ್ ಕಡು ಜಡಗೇ | ಮ | ದ್ದೊಡನೀಯಳು ನಾಲಿಗೆಗೇ ||
ಕೊಡುವುದೆರುಚಿಯಿದರಂತೆ | ನಾವ್ | ನುಡಿದುದು ಸೊಗಸುವದೆಂತೇ   ||೧೦೮||

ಪೊಡವಿಪ ಲಾಲಿಸು ಬರಿದೇ | ಈ | ಬಡಿವಾರದಿ ಫಲವಿಹುದೇ |
ಬಿಡುವೆಯ ಕುವರಿಯ ಬೇಗಾ | ನೀ | ತೊಡಗುವೆಯಾ ರಣವೀಗಾ        ||೧೦೯||

ರಾಗ ಭೈರವಿ ಅಷ್ಟತಾಳ

ತರಳನೆಂದೆನುತ ಬಿಡೇ | ಗರ್ವವು ನಿನ್ನ | ಶಿರಕಡರಿಹುದು ನೋಡೆ ||
ಅರೆ ನಿಮಿಷದಿ ನಿನ್ನ | ತರಿಯುತ್ತ ಶೈಮಿನಿ | ಪುರಕೆ ಸೇರಿಸುವೆ ನೋಡೈ ||೧೧೦||

ಧುರಧೀರ ನೃಪನೆನ್ನುತಾ | ಬಲ್ಲೆನು ನಾನು | ತರಳನಾದಡೇನ್ ಮತ್ತಾ ||
ಸರಳಿನ ಮೊನೆಗಿನ್ನು | ಕೊರತೆ ಹೊಂದಲಿಕುಂಟೆ | ಪರಿಕಿಸಬಹುದೀಗಳೂ         ||೧೧೧||

ಸಾರಿ ಕೊಲ್ಲಲು ಪಾಪವೂ | ಹೊದ್ದುದು ಎಂಬ | ಕಾರಣವಾಗಿ ನಾವೂ ||
ಈ ರೀತಿಯುಸುರಲು | ಪೋರನೆ ಮದಗರ್ವ| ವೇರಿತದನು ಭಂಗಿಪೇ     ||೧೧೨||

ಎನುತಗ್ನಿ ಶರವೆಸೆಯೇ | ಚಿತ್ರಧ್ವಜ | ವನಶರದಿಂತರಿಯೇ ||
ಫಣಿಯನು ಗರುಡನಿಂ | ಘನತರ ಗಿರಿಶರ | ವನು ಕುಲಿಶದಿ ಖಂಡಿಸೇ    ||೧೧೩||

ಪೊಡವಿಪ ರೋಷದಿಂದಾ | ತಿಮಿರ ಶರ | ಬಿಡಲದ ನಿಮಿಷದಿಂದಾ ||
ಕಡಿಯಲು ದ್ಯುಮಣಿಯಿಂ | ವಡನೆ ಖಡ್ಗವಗೊಂಡು | ಪೊಡೆಯಲು ಕುವರನಿತ್ತಾ    ||೧೧೪||

ತುಂಡಿಸಲದ ಕಾಣುತ್ತಾ | ಕನಲಿ ಗದೆ | ಗೊಂಡು ಭೂಮಿಪನ ಮತ್ತಾ ||
ಮಂಡೆಯೊಳೆರಗಲು | ಚಂಡವಿಕ್ರಮನದ | ಖಂಡನೆ ಗೈದನಾಗಾ         ||೧೧೫||

ಭಾಮಿನಿ

ಈ ತೆರದಿ ಶಸ್ತ್ರಾಸ್ತ್ರಗದೆಗಳು |
ರೀತಿಗೆಡೆ ಹುಡುಗನೊಳು ಪೃಥ್ವೀ |
ನಾತನಾಯುಧಹೀನನಾದನು ಕಣನ ಮಧ್ಯದೊಳೂ ||
ಸೋತುದನು ತಿಳಿದಾಗ ಚಿತ್ರಸು ||
ಕೇತ ಭೂಪನ ಸೆರೆವಿಡಿಯೆ ವಿ |
ಖ್ಯಾತ ನರಪತಿಯಳಲಿದನು ಬಲು ತರದ ದುಗುಡದಲೀ         ||೧೧೬||

ರಾಗ ನೀಲಾಂಬರಿ ರೂಪಕತಾಳ

ಹರ ಹರವೀ ಸಮರದಿ ನಾ | ತರಳನೊಡನೆ ಕಾದಿ ವ್ಯರ್ಥ |
ಸೆರೆಯ ಬಿದ್ದೆಯನ್ನೊಳಿನಿತು | ಕರುಣ ತೊರೆದೆಯಾ || ಕರುಣ ತೊರೆದೆಯಾ       ||೧೧೭||

ಯಾತಕಾಗಿ ಸುತೆಯನು ಭೂ | ನಾಥ ವತ್ಸಗೀವೆನೆನುತ |
ಮಾತು ಕೊಟ್ಟೆ ನಕಟ ಎನಗೆ | ಪ್ರೀತನೆನುತಲೀ || ಪ್ರೀತನೆನುತಲೀ      ||೧೧೮||

ಆರು ಎನಗಿನಿಹರು ಕಾವ | ಧೀರರೆನುತ ಮನದಿ ಮರುಗಿ |
ಧಾರುಣೀಂದ್ರ ನೆನದ ತನ್ನಾ | ಪೂರ್ವ ಮಿತ್ರನಾ || ಪೂರ್ವಮಿತ್ರನಾ     ||೧೧೯||

ವಿಂಧ್ಯಕೇತನೆಂಬ ಶಬರ |  ವಂದ್ಯಮಿತ್ರನೀರ್ದನವ ಮ |
ದಾಂಧತನದೊಳೆಂತು ಎನ್ನ | ಬಂದು ಕಾವನೂ || ಬಂದು ಕಾವನೂ      ||೧೨೦||

ಅಷ್ಟಭಾಗ್ಯವಿರಲು ನಮಗೆ | ಇಷ್ಟ ಮಿತ್ರರೆಲ್ಲರಿಹರು |
ಕಷ್ಟ ಬರಲು ಮಾತ್ರ ನಮ್ಮ | ಮುಟ್ಟಿನೋಳ್ಪರೇ || ಮುಟ್ಟಿನೋಳ್ಪರೇ      ||೧೨೧||

ಕರುಣ ಶರಧಿ ನಿನ್ನ ಪದದ | ಶರಣನೆಂಬ ಮಮತೆ ಇರಲು |
ಪೊರೆಯದೇಕೆ ಬಳಲಿಸುವೆಯ | ಬರಿದೆ ಎನ್ನನೂ || ಬರಿದೆ ಎನ್ನನೂ      ||೧೨೨||

ಭಾಮಿನಿ

ಭೂಮಿಪತಿ ಇಂತಳಲುವದ ನಿ |
ಸ್ಸೀಮ ವಿಂಧ್ಯಾಧಿಪನು ತಿಳಿಯುತ
ತಾ ಮನದಿ ಯೋಚಿಸಿದ ಬಲುತರ ಬವಣೆಗಳ ಮತ್ತೆ ||
ಅಮಹಾ ದೃಢವರ್ಮನೆಂಬುವ |
ಗೋಮಿನಿಪಗೊದಗಿರಲು ನಮ್ಮೋಲ್ |
ಪ್ರೇಮಿಗಳು ಇದ್ದೇನು ಫಲ ಫಲವಿರದ ಮರನಂತೇ    ||೧೨೩||

ಕಂದ

ಎನುತಂ ಯೋಚಿಸಿ ತನ್ನಯ |
ವನಿತೆಯ ಕರೆದಿನಿತುಸುರಿದನಂಗ ನೃಪಾಲಂ ||
ಗನುಪಮ ಬವಣೆಯು ಬರಲವ |
ನೆನದಿಹ ಎನ್ನನು ತೆರಳುವೆ ಕಾಳಗಕೆನುತಂ  ||೧೨೪||

ರಾಗ ಕೇತಾರಗೌಳ ಝಂಪೆತಾಳ

ದ್ವಿಪರಾಜ ಗಮನೆ ಬಾಲೇ | ಕೇಳ್ ಸರಿ | ಸೃಪವೇಣಿ ಮದನ ಲೊಲೇ ||
ಚಪಲಾಕ್ಷಿ ದೃಢವರ್ಮನೂ | ವೈರಿಯಹ | ನೃಪರೊಡನೆ ಕಾದಲಿನ್ನೂ      ||೧೨೫||

ಸೋತ ಕಾರಣ ಎನ್ನನೂ | ನೆನದರಿಂ | ಶೀತಾಂಶೂ ವದನೆ ನಾನೂ ||
ಈ ತತೂಕ್ಷಣ ತೆರಳುವೇ | ವೈರಿ ಬಲ | ವ್ರಾತವನು ಸದೆ ಬಡಿಯುವೇ   ||೧೨೬||

ಜಾಣೆ ಕೇಳ್ ಮಿತ್ರನವನೂ | ಪೂರ್ವದೊಳು | ಪ್ರಾಣ ಸಲಹಿಧೀರನೂ ||
ಯೇಣಾಂಬಕಿಯೆ ಹೀಗಿರೇ | ಪೊರಮಡದೆ | ಮಾಣಲೆಂತುಸುರು ನೀರೇ  ||೧೨೭||

ಕಾಂತ ಲಾಲಿಪುದು ನಿನಗೇ | ಸಖನವನು | ಯೆಂತೆಂಬುದಿದನು ಎನಗೇ ||
ನಿಂತರುಹುತಲಿ ಕದನಕೇ | ತೆರಳಯ್ಯ | ಸಂತಸವ ಬಡಿಸಿ ಮನಕೇ      ||೧೨೮||

ಕಳಕೀರವಾಣಿ ಇದನೂ | ವಿವರಿಸಲ್ | ಕುಳಿತಿರಲು ಸಮಯವನ್ನೂ ||
ಕಳೆವೆ ತಾನಾದಡೆಲೆಗೇ | ಸಂಕ್ಷೇಪ | ದೊಳು ಪೇಳ್ವೆ ಸಲಹಿದ ಬಗೇ      ||೧೨೯||

ವಾರ್ಧಕ

ನಾರಿಮಣಿ ಕೇಳ್ ಪೂರ್ವದೊಳು ನಮ್ಮ ತಪ್ಪಲನು |
ಕ್ರೂರ ದೌಂಷ್ಟಕನೆಂಬ ನಿಶಿಚರನು ಮುತ್ತಿರಲು |
ಭೂರಿ ಮಾರ್ಬಲ ಸಹಿತ ವೀರ ದೃಢವರ್ಮನೀ ವಾರತೆಯನರಿತು ಬರುತಾ ||
ಘೋರ ರಕ್ಕಸನ ಸಂಹರಿಸಿ ಬಳಿಕವನ ಪರಿ |
ವಾರವನು ದೆಸೆಗೆಡಿಸಿ ನಮ್ಮ ಶಿರ ಕಾದಿಹ ಉ |
ದಾರ ಕ್ಷೋಣಿಪಗೊದಗದಿರಲು ಮಿತ್ರನೆ ಎನ್ನ ದೂರಲಾರನೆ ದುಗುಡದೀ  ||೧೩೦||

ರಾಗ ಆನಂದ ಭೈರವಿ ಏಕತಾಳ

ಚದುರೆ ಚಂಪಕಸುನಾಸೆ | ಮದಿರನಯನೆಮಂದಹಾಸೆ |
ವದಗಿನೋಳ್ ಮಾರ್ಬಲದ ಕೂಡೆ | ಕದನಕಾಗಿ ಪೋಪೆ ಪ್ರೌಢೆ ||೧೩೧||

ಪ್ರಾಣಕಾಂತಾ ಲಾಲಿಸಿನ್ನಾ | ಕ್ಷೋಣಿಪ ನೀ ಪರಿಯೋಳ್ ನಿನ್ನಾ |
ತಾನೆ ಸಲಹಿರಲ್ಕೆ ಪಿತ ಸ | ಮಾನನವನ ಕಾವುದೈಸೆ ||೧೩೨||

ಇನಿಯ ಕೇಳ್ ನೀ ಶೀಘ್ರದೊಳಗೆ | ಮನವ ಮಾಳ್ಪುದಿತ್ತ ಕಡೆಗೇ |
ಕ್ಷಣ ನಿನ್ನಗಲಿ ಬಾಳಲಾರೇ | ಯೆನುತ ಪೇಳಲ್ಯಾಕೆ ಬ್ಯಾರೆ       ||೧೩೩||

ಭಾಮಿನಿ

ಕಾಮಿನಿಯು ಇನಿತುಸುರಿ ತನ್ನಯ |
ಪ್ರೇಮದರಸನಿಗಸ್ತ್ರ ಶಸ್ತ್ರಗ |
ಳಾ ಮಹಾಗದೆಖಡ್ಗ ತೋಮರ ಕುಂತ ಮುದ್ಗರವಾ ||
ತಾ ಮುದದಿ ತಂದಿತ್ತು ಬಳಿಕಾ |
ಹೇಮದಾರತಿಯೆತ್ತುತರಸಗೆ |
ಭಾಮಿನಿಯು ಕಳುಹಿದಳು ವೈರಿಯ ಜಯಿಸಿ ಬಹುದೆನುತಾ     ||೧೩೪||

ಕಂದ

ಇತ್ತಲು ಕಾಂತೆಯು ಕಳುಹಲು |
ಮತ್ತಾ ವಿಂಧ್ಯಾಧಿಪ ರಥವೇರುತ ಭರದಿಂ ||
ಮಿತ್ರನ ಮಂಡಲ ರಜದಿಂ |
ಮುತ್ತುವ ತೆರದೋಳ್ ನಡದಂ ಪಟು ಭಟರೊಡನಂ   ||೧೩೫||

ರಾಗ ಭೈರವಿ ತ್ರಿವುಡೆತಾಳ

ಬಂದನಾಗಾ | ಸಮರಕೈ ತಂದನಾಗಾ    || ಪಲ್ಲವಿ ||
ಬಂದನಾ ಶಬರೇಶ ಹಯಕರಿ | ಸಂದಣಿಯನೊಡಗೊಂಡು ಮಣಿಮಯ |
ಸ್ಯಂದನವನೇರುತ್ತಲರಿಗಳ | ವೃಂದವನು ಸದೆಬಡಿದು ಮತ್ತೈಮ |
ಮಂದಿರಕೆ ಕಳುಹುವೆನು ನೋಡೆನು | ತಂದು ಹೂಂಕರಿಸುತ್ತ ಘರ್ಜಿಸಿ |
ಮುಂದರಿಸುತಲಿ ರಥಿಕರನು ಧರ | ಣೇಂದ್ರನಲ್ಲಿಗೆ ವಿಂಧ್ಯಕೇತನು ||
ಬಂದನಾಗಾ | ಸಮರಕೈ ತಂದನಾಗಾ       ||೧೩೬||

ಭಾಮಿನಿ

ಧಾರುಣೀಶ್ವರ ಲಾಲಿಸಿತ್ತಲು |
ವೀರ ದೃಢವರ್ಮಕನು ಬಂದಿಹ |
ಶೂರರನು ನೋಡುತ್ತ ತೋಷಿಸುತವರ ಮನ್ನಿಸುತಾ ||
ಭೂರಿ ವೈಭವದಿಂದಲವನು ವಿ |
ಚಾರಿಸಿದ ವಿಂಧ್ಯೇಶ್ವರನೆ ತವ |
ನಾರಿಮಿತ್ರರು ಕುಶಲಿಗರೆಯೆನಲೆಂದನವನೊಡನೇ    ||೧೩೭||

ಚಿತ್ತವಿಸು ಕ್ಷೋಣಿಪನೆ ತನ್ನಯ |
ಮಿತ್ರ ಮಂಡಳಿ ಕ್ಷೇಮದಿಂದಲಿ |
ರುತ್ತಿಹರು ನಿನ್ನಯ ಕಟಾಕ್ಷದಿ ಕುಶಲವಾರ್ತೆಗಳೂ ||
ಅತ್ತಿರಲಿ ಸೆರೆವಿಡಿದ ಖಳ ತಾ |
ನೆತ್ತಲಿಹ ತೋರೆನುತ ಘುರ್ಜಿಸೆ |
ಚಿತ್ರಕೇತನು ತಿಳಿದು ಮಾರ್ಮಲೆತುಸುರಿದನು ಭರದೀ ||೧೩೮||

ರಾಗ ಮೆಚ್ಚು ಅಷ್ಟತಾಳ

ಫಡಕುಳಿಂದಕ ಕೇಳ್ ಮದಾಂಧನೇ | ಇಂಥಾ | ಬಡಿವಾರವ್ಯಾತಕೊ ಸುಮ್ಮನೇ ||
ಪೊಡವಿಪನನು ಯುದ್ಧ ಕಣದೊಳೂ | ಸೆರೆ | ವಿಡಿದೀರ್ಪ ವೀರ ತಾನಹೆ ಕೇಳೂ    ||೧೩೯||

ಹುಡುಗ ಮುಚ್ಚೆಲೆ ಬಾಯ ಹೊಸುವೇ | ನಿನ್ನ ಹೊಡೆದು ಮಾರಿಗೆ ಹಬ್ಬ ಉಣಿಸುವೇ ||
ಒಡನೆ ಮಿತ್ರಗೆ ತೋಷ ಬಡಿಸುವೇ | ನೋಡು | ಕಡುಗಲಿತನವೀಗ ನಿಲಿಸುವೇ     ||೧೪೦||

ಮಿತ್ರನೆನ್ನುತ ಪಡೆವೆರಸುತಾ | ಬಂದು | ಪೃಥ್ವಿಪಗೆಣೆಯಾದ ಕೇಳಿತ್ತಾ ||
ಧೂರ್ತನೆ ಶಿರವ ತುಂಡಿಸುತೀಗಾ | ನಿನ್ನ | ಮಿತ್ರಸುತಗೆ ಒಪ್ಪಿಸುವೆ ಬೇಗ         ||೧೪೧||

ಸಾಕು ಸಾಕೆಲೊ ಇಂಥಾ ಹಮ್ಮಿನಾ | ಬರಿ | ಕಾಕು ಮಾತೇನು ಪ್ರಯೋಜನಾ ||
ಜೋಕೆಯೋಳ್ ಪೋಗು ನೀ ಬಂದಂತೇ | ಪೋಗಿ | ಸಾಕಿದವಗೆ ಪೇಳು ಬರುವಂತೇ       ||೧೪೨||

ನದವನ್ನುತ್ತರಿಸದ ಪಿಸುಣನೂ | ಮಹೋ | ದಧಿಯ ದಾಟುವದೆಂತು ಉಸುರಿನ್ನೂ ||
ಮೊದಲೆನ್ನ ಕದನದಿ ಗೆಲು ನೀನೂ | ಸಲ | ಹಿದವರ ಬಗೆಯದಕಿನ್ನೇನೂ  ||೧೪೩||

ಮಾತಿನೋಳ್ ಚಪಳನೆನ್ನುತ ನಾನು | ಮನಃ | ಪೂರ್ತಿ ಬಲ್ಲೆನು ಕೇಳು ನಿನ್ನನೂ ||
ಘಾತಿಸದಿರೆ ನಾನು ಶಬರನೇ | ಮೇಣೀ | ಭೂತಳದೊಳು ಮೊಗದೋರ್ಪೆನೇ     ||೧೪೪||

ರಾಗ ಶಂಕರಾಭರಣ ಮಟ್ಟೆತಾಳ

ಫಾತಿಸುವ ಸಹಾಸಿಯೆಂಬು | ದರಿತೆ ಕೇಳೆಲೋ ||
ಈ ತತೂಕ್ಷಣದಲಿ ನಿನ್ನ | ಗೆಲುವೆ ನೋಡೆಲೋ        ||೧೪೫||

ಬರಿದೆ ಪಂಥವ್ಯಾಕೊ ನಿನಗೆ | ತರಳ ಸುಮ್ಮನೇ ||
ಹರಣಕಾವ ಭಟನದಾರೊ | ಒರೆಯೊ ಘಮ್ಮನೇ        ||೧೪೬||

ಎನುತಲಸ್ತ್ರ ತತಿಯ ಬಿಡಲು | ಚಿತ್ರಕೇತನೂ ||
ಕನಲಿ ಘರ್ಜಿಸುತ್ತಲದನು | ಪುಡಿಯ ಗೈದನೂ         ||೧೪೭||

ಭಳಿರೆ ವೀರನಹೆಯೊ ಎನುತ | ವಿಂಧ್ಯಕೇತನೂ ||
ಬಳಿಕ ನೂರು ಶರದೊಳವನ | ಧನುವ ಕಡಿದನೂ      ||೧೪೮||

ರಾಗ ಭೈರವಿ ಏಕತಾಳ

ಚಾಪವಕಡಿಯಲ್ಕಾಗಾ | ಪ್ರತಿ | ಚಾಪವ ಕೊಂಡತಿ ಬೇಗಾ ||
ಭಾಪೆನುತಲಿ ಶಬರನಿಗೆ | ಬಲು | ಕೋಪಿಸಿ ಶರಬಿಡಲಾಗೇ      ||೧೪೯||

ಕಂಡಾಕ್ಷಣ ವಿಂಧ್ಯೇಶಾ | ನದ | ಖಂಡಿಸುತಲಿ ಬಲು ರೋಷಾ ||
ಗೊಂಡಾಪೊಸ ಚಾಪವನೂ | ಮೂರ್ | ತುಂಡಿಸಿ ಕೆಡಹಿದನದನೂ       ||೧೫೦||

ಖೂಳ ಕಿರಾತ ಕೇಳಿತ್ತಾ | ಧನು | ಬೀಳಲ್ಕೇನ್ ಘನಮತ್ತಾ ||
ತೋಳಿನ ಬಲ ನೋಡೆಂದೂ | ಬಲು | ತಾಳುತ ರೋಷವನಂದೂ        ||೧೫೧||

ಗದೆಯನು ಗೋಳುತಾಕ್ಷಣದೀ | ಮ | ತ್ತದ ಶಭರೇಂದ್ರನ ಶಿರದೀ ||
ಒದಗಿಲಿ ಚಿತ್ರಧ್ವಜನೂ ಹೊಡೆ | ವುದ ತಿಳಿದಾಕ್ಷಣಕವನೂ       ||೧೫೨||

ಸೆಳೆಯಲ್ ಶಬರೇಶ್ವರನೂ | ಇದ | ತಿಳಿಯುತ ಚಿತ್ರಧ್ವಜನೂ ||
ಝಳಪಿಸಿ ಖಡ್ಗವ ಭರದೀ | ಶಿರ | ಕಳಚುವೆ ನೋಡೀ ಧುರದೀ  ||೧೫೩||

ಎಂದಾಕ್ಷಣ ಹೂಂಕರಿಸೀ | ಬರು | ವಂದವ ತಿಳಿದಾ ಸಹಸೀ ||
ಬಂದವ ಕಸಕೂಳೆ ಜವದೀ | ಮೇಲ್ | ಕಂದ ಕೈ ಸೋತನು ಕಣದೀ      ||೧೫೪||

ಕಂದ

ಇದನರಿತಾ ಶಬರೇಶಂ |
ಕದನದಿ ತರಳನ ಗೆಲಿದೆನು ತಾನೆಂದೆನುತಂ ||
ಮದಗರ್ವವ ತಾಳುತಲೊದ |
ರಿದ ಬಳಿಕಾ ಸಚಿವನ ಕುವರನೊಳತಿ ಭರದಿಂ         ||೧೫೫||