ಶಾರ್ದೂಲ ವಿಕ್ರೀಡಿತಂ
ಶ್ರೀಲಕ್ಷ್ಮೀವರಮಬ್ಜ ಜಾತ ಪಿತರಂ ಬಾಲಾರ್ಕ ಕೋಟಿಪ್ರಭಂ |
ನೀಲೇಂದೀವರಶಾಮ ಕೋಮಲ ವಪುಃ ಸಾಲಂಕೃತೋರಸ್ಥಲಂ ||
ಫಾಲಾಕ್ಷಾರ್ಚಿತ ವ್ಯಾಳರಾಜ ಶಯನಂ ಕಾಳಿಂಗ ಸಮ್ಮರ್ದನಂ |
ಮಾಲೋಲಂ ಸುರಪಾಲ ಮುಖ್ಯನುತ ಗೋಪಾಲಂ ಸದಾ ಭಾವಯೇ ||೧||
ರಾಗ ನಾಟಿ ಝಂಪೆತಾಳ
ಜಯತು ಜಯ ಗಣನಾಥ | ಜಯತು ಆಖುವರೂಢ |
ಜಯತು ಲೋಕವಿಖ್ಯಾತ | ಜಯ ಭಾಗ್ಯಾದಾತ ||೨||
ವಿಘ್ನಮೇಘ ಸಮೀರ | ವಿಘ್ನ ವಿಪಿನ ಕುಠಾಶ |
ವಿಘ್ನಾದಿ ಕಲುಷಹರ | ಶರಣಜನನುತಿ ಪಾತ್ರ ||೩||
ಕರಿವದನ ಹರಪುತ್ರ | ಶರಣಜನನುತಿ ಪಾತ್ರ |
ಸುರವಿನುತ ಸುಚರಿತ್ರ | ಪರತರ ಪವಿತ್ರ ||೪||
ಭಾಮಿನಿ
ಹರಗಿರಿಜೆಯರಿಗೆರಗಿ ವಾಣೀ
ವರಗೆ ನುತಿಸಿ ಸರಸ್ವತಿಗೆ ಮುರ
ಹರಗೆ ಭಾಸ್ಕರ ಮುಖ್ಯ ನವಗ್ರಹಗಳಿಗೆ ಶಿರಬಾಗಿ |
ಗುರುವಿನಮಲ ಪದಾಂಬುಜವನನ
ವರತ ಧ್ಯಾನಿಸಿ ಮುಂಗತೆಯನಾ
ಮುರಹರನ ಕೃಪೆಯಿಂದ ವರ್ಣಿಪೆ ಯಕ್ಷಗಾನದಲಿ ||೫||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಭೂಮಿಯೊಳಗತ್ಯಧಿಕ ಕಾಶ್ಮೀರ | ಗೋಮಿನಿಪ ಶ್ರೀ ಹರ್ಷರಾಯಂ |
ಗಾ ಮಹಾಮಾಂಡವ್ಯ ಮುನಿಪತಿ | ಪ್ರೇಮದಿಂದ ||೬||
ಬರೆಯುತಿರೆ ಬೃಹತ್ ಕಥಾನಕ | ವರ ಪುರಾಣವ ಕೇಳುತಾ ಮುನಿ|
ವರನ ಪದಯುಗಕೆರಗಿ ಪೃಥ್ವೀ | ಶ್ವರನು ನುಡಿದ ||೭||
ಅದರೊಳಾ ವತ್ಸಾಖ್ಯರಾಯನು | ಪದುಮ ಮುಖಿ ರತ್ನಾವತಿಗೆ ತಾ
ಮದುವೆಯಾದನದೆಂತೆನುವುದನು | ಮುದದೊಳೆನಗೆ ||೮||
ಮೊದಲರುಹ ಬೇಕೆನುತ ಬಿನ್ನವಿ | ಸಿದ ನೃಪಾಲನ ನುಡಿಗೆ ಮೆಚ್ಚುತ
ಯದುವರನ ನೆನೆದುಸುರ್ದ ತಾಪಸ | ನಿಧಿಯು ಬಳಿಕ ||೯||
ರಾಗ ಭೈರವಿ ಝಂಪೆತಾಳ
ಧಾರಿಣೀಶ್ವರಕೇಳು | ಊರ್ವಿಯೊಳು ಮೆರೆವೈವ |
ತ್ತಾರು ದೇಶದೊಳು ಭಾ | ಗೀರಥಿಯ ತಟದಿ ||೧೦||
ಚಾರು ಸಂಭ್ರಮದಿ ವಿ | ಸ್ತಾರವಾಗಿರುವ ವಂಗ |
ಧಾರಿಣಿಯು ವೈಭವದಿ ಮೀರಿದುದು ಸ್ವರವ ||೧೧||
ಬೆಡಗಿನಿಂ ರಂಜಿಸುವ ಪೊಡವಿಯನು ಪ್ರೇಮದೊಳು |
ದೃಢವರ್ಮನೆಂದೆನುವ ಕಡು ಪರಾಕ್ರಮಿಯು ||೧೨||
ಸತ್ಯ ಸದ್ಗುಣದಿಂದ ಪೃಥ್ವಿಯನು ದಯದಿ ಪೊರೆ |
ಯುತ್ತಿರ್ದ ಮಂತ್ರಿ ಜನ ಮೊತ್ತದಿಂ ಜನಪ ||೧೩||
ವಾರ್ಧಕ
ಇಂತು ಕೆಲಗಾಲ ಶ್ರೀಕಾಂತನ ಕಟಾಕ್ಷದೊಳು |
ಸಂತೋಷದಿಂದ ಭೂಕಾಂತೆಯರ ಪಾಲಿಸಿರ |
ಲಂತರಂಗದಿ ಪುತ್ರಸಂತತಿಗಳಿಲ್ಲೆಂಬ ಸಂತಾಪದಿಂದ ತನ್ನ ||
ಮಂತ್ರಿಯೊಡನುಸುರಿ ಬಲು ಚಿಂತೆಯೊಳಗಿರುತಿರಲ್ |
ಕಂತುಪಿತನಂ ಮನದಿ ಚಿಂತಿಸುತ ನಾರದ ಮ |
ಹಾಂತ ಮುನಿ ನಡೆತಂದನಿಂತೆನುತಲುಸುರಿದಂ ತಾಂ ತಡೆಯದೋರ್ವ ಚರನು ||೧೪||
ರಾಗ ಕೇತಾರಗೌಳ ಅಷ್ಟತಾಳ
ದ್ವಾರಪಾಲಕನೆಂದ ವಾರತೆಯನು ಕೇಳಿ | ಭೂರಿ ಸಂತೋಷದಿಂದ ||
ನಾರದ ಮುನಿಯನ್ನು | ಭೋರನೆ ಕರೆತಂದು | ಏರಿಸಿ ಪೀಠವನು ||೧೫||
ವಂದನೆಗೈಯುತ್ತ ನಿಂದಿರೆ ಭೂಪನ | ಕಂದಿದಾನನವ ನೋಡಿ ||
ಬಂದಿಹ ಬವಣೆಯೇನೆಂದೆನುತಚ್ಚರಿ | ಯಿಂದ ತಾ ಬೆಸಗೊಂಡನು ||೧೬||
ರಾಗ ಸೌರಾಷ್ಟ್ರ ಏಕತಾಳ
ಧಾರಿಣಿ ಪಾಲಕನೇ ನಿನ್ನ | ಚಾರುವದನ ಬಾಡಿದಂತೆ |
ತೋರುತಿಹುದು ಎನಗಿನ್ನದರ | ಕಾರಣ ಪೇಳೈ ||೧೭||
ಋತ್ವಿಜ ಲಾಲಿಸುವುದೆನ್ನಾ | ಚಿತ್ತವೃತ್ತಿಗಳ ಸಂಪನ್ನಾ |
ವಿಸ್ತರಿಸುವುದೇನು ನಿನಗೆ | ಗೊತ್ತಿರದುಂಟೇ ||೧೮||
ಆದಡೇ ಪೇಳ್ವೆ ಲಾಲಿಪುದು | ಮೇದಿನಿಯೊಳು ಪುತ್ರರಿಲ್ಲ |
ದಾದೆ ನರಕ ಪಾತ್ರನೆಂಬ | ಖೇದವೊದಗಿದೆ ||೧೯||
ಭೂವರೇಣ್ಯ ಲಾಲಿಸೈ ನೀ | ನೀ ವಿಧದಿ ದುಃಖಿಸುವುದೇಕೆ |
ಭಾವಜಾರಿ ಕರುಣದಿಂದಲೀವ ಮಕ್ಕಳ ||೨೦||
ಪಿಡಿ ಈ ಚೂತ ಫಲವ ನಿನ್ನ | ಮಡದಿ ರನ್ನೆ ಸವಿಯಲವಳು |
ಪಡೆವಳೋರ್ವ ಸುತೆಯನೆಂದು | ನಡೆದ ಮುನಿರಾಯ ||೨೧||
ಭಾಮಿನಿ
ಮುನಿಪತಿಯು ತಾ ತೆರಳಲಿತ್ತಲು |
ಮನದಿ ಹರುಷವನಾಂತು ಭೂಪನು |
ವನಿತೆ ಸೌರಂಭೆಯನು ಕರೆದಿಂತೆಂದನವಳೊಡನೆ ||
ವನಜಮುಖಿ ಕೇಳ್ ನಾರದಾಹ್ವಯ |
ಘನತಪೋನಿಧಿ ಕರುಣಿಸಿದ ಫಲ |
ತಿನಲು ಪುತ್ರಿಯ ನೀ ಪಡೆವೆಯೆಂದಿತ್ತನಾಕ್ಷಣದಿ | ||೨೨||
ಕಂದ
ಅನಿತರೊಳಾ ಕಾಮಿನಿ ತಾ |
ಮನದೊಳಗಕ್ಕಜಗೊಳುತತಿ ತವಕದೊಳಾಗಂ ||
ಜನಪಾಲಕನಿತ್ತಿಹ ಫಲ |
ವನು ಭುಂಜಿಸಿದಳು ಪುರಹರನನು ನೆನೆಯುತ್ತಂ ||೨೩||
ರಾಗ ಸಾಂಗತ್ಯ ರೂಪಕತಾಳ
ಇಂತು ಕಾಮಿನಿಯು ಭೂಕಾಂತನಿತ್ತಿಹ ಫಲ | ವಂತಾನು ಭುಂಜಿಸೆ ಬಳಿಕ ||
ಆಂತಳು ಗರ್ಭವ ನಂತರ ಸದ್ಗುಣ | ವಂತ ನೃಪಾಲ ತಾ ತಿಳಿದು ||೨೪||
ವರಪುರೋಹಿತರನ್ನು ಕರೆಸಿ ಶೀಮಂತವ | ನೆರವೇರಿಸಿದ ಭೂಪ ಬಳಿಕ ||
ತರುಣಿ ಸೌರಂಭೆಗೆ ಹರಿದುದು ನವಮಾಸ | ಪುರಜನರ್ಸಹಿತ ತೋಷದಲಿ ||೨೫||
ಇರುತಿರಲಿತ್ತ ಭೂವರನರ್ಧಾಂಗಿಯು ಬಲು | ತರ ವೇದನೆಯೊಳು ತಾ ಬಳಲಿ ||
ಇರದೋರ್ವ ಗೆಳತಿಯೊಳೊರೆದಳು ಮನಸಿನ | ಪರಿಯನಿಂತೆಂದು ವಿಸ್ತರಿಸೀ ||೨೬||
ರಾಗ ನೀಲಾಂಬರಿ ತ್ರಿವುಡೆ
ಕೇಳಮ್ಮ ತನುವಿನೊಳು | ಇರುವ ಕಷ್ಟ | ತಾಳಲಿನ್ನೆಂತು ಪೇಳು ||
ಜಾಲವಲ್ಲದು ಕ್ಷಣಗಾಲ ತಡೆಯಲಾರೆ |
ಪೇಳಿ ಕಳುಹು ಭೂಪಗೆ | ನಮಿಪೆ ಹೀಗೆ ||೨೭||
ಜಾನುಕಟಿಗಳು ಕಾಣೆ | ನೋಯುತಲಿವೆ | ಏನ ಮಾಡಲಿ ನಾ ಜಾಣೆ ||
ಮಾನಿನಿಮಣಿ ಬ್ರಹ್ಮ ತಾನೆ ಗೈದಿಹ ಕೃತ್ಯ |
ಕ್ಕಾನುವರಾರು ಸಖಿ | ವನಜಮುಖಿ ||೨೮||
ರಸನೇಂದ್ರಿಯವು ಕೆಟ್ಟಿದೆ | ಒಡಲಿನೊಳು | ಹಸಿವು ತೃಷೆಗಳು ಕಟ್ಟಿದೆ |
ಕುಸುಮಾಕ್ಷಿ ಪೇಳಲೇನುಸುರು ಸಿಕ್ಕಿದಂತಿದೆ |
ಉಸುರು ಯೇನೆನುತ ನೀರೆ | ಸಹಿಸಲಾರೆ ||೨೯||
ಭಾಮಿನಿ
ಅರಸ ಕೇಳ್ ಬಳಿಕಿತ್ತ ಭೂಮಿಪ |
ನರಸಿ ಮರುದಿನ ಶುಭಮುಹೂರ್ತದಿ |
ವರ ಸುಪುತ್ರಿಯ ಪಡೆದಳಾ ಮುರಹರನ ಕರುಣದೊಳು |
ಪರಮ ಹರುಷದಿ ಜನಪ ಮಂತ್ರಿಯ |
ಕರೆದು ಪೇಳಿದ ಪಟ್ಟಣವ ಶೃಂ |
ಗರಿಪುದೆನೆ ಕೇಳುತ್ತ ಸಚಿವನು ಮನದಿ ಮುದವಾಂತು ||೩೦||
ರಾಗ ಸೌರಾಷ್ಟ್ರ ತ್ರಿವುಡೆ
ಪುರವರವ ಶೃಂಗರಿಸಿ ಮಂತ್ರೀ | ಶ್ವರನು ವಿಪ್ರಸ್ತೋಮವನು ತಾ
ಕರೆಸಿ ಕೊಡಿಸಿದ ಧನ ಕನಕವನು | ಹರುಷದಿಂದ ||೩೧||
ಇತ್ತಲಾ ಶಿಶುವಿಂಗೆ ದಿನಗಳು | ಹತ್ತು ಸಂದವು ಮರುದಿವಸ ಭೂ |
ಪೋತ್ತಮನು ಪುಣ್ಯಾಹ ವಾಚನ | ಬಿತ್ತರಿಸಿದ ||೩೨||
ಪೊಡವಿ ಪಾಲಕ ಲಾಲಿಸಾಧರೆ | ಯೊಡೆಯ ಹನ್ನೆರಡೆಯದಿನ ದ್ವಿಜ
ಗಡಣವನು ಬರಹೇಳಿ ತನ್ನಯ | ಮಡದಿ ಸಹಿತ ||೩೩||
ಪುಟ್ಟಿರುವ ಕುವರಿಂಗೆ ತಾ ಪೆಸ | ರಿಟ್ಟ ರತ್ನಾವತಿಯೆನುತ ನೃಪ |
ಕಟ್ಟಳೆಯನನುಸರಿಸಿ ದ್ವಿಜರುಗ | ಳಿಷ್ಟದಿಂದ ||೩೪||
ಕಂದ
ಅವನಿಪ ಲಾಲಿಸು ನಿಶಿಯೊಳ್
ಕುವರಿಯ ರನ್ನದ ತೊಟ್ಟಿಯೊಳಿಡುತರೆ ಜವದಿಂ |
ನವಮೋಹನ್ನೆಯರಾ ನೃಪ
ಭವನದಿ ತೂಗಿದರೊಲವಿಂ ಪಾಡುತಲಾಗಂ ||೩೫||
ರಾಗ ಬಿಲಹರಿ ಅಷ್ಟತಾಳ
ಜೋ ಜೋ ವಾರಿಜಗಂಧಿ ಸುಶೀಲೆ
ಜೋ ಜೋ ಚಾರುಚಂದಿರಮುಖಿ ಬಾಲೆ
ಜೋ ಜೋ ಮಾರಸನ್ನಿಭೆ ಗುಣಮಾಲೆ
ಜೋ ಜೋ ಶ್ರೀರಾಮ ಸಲಹಲಿ ಮೇಲೇ ||೩೬||
ರತ್ನಾವಳಿಯೆಂಬ ರತ್ನವೆ ಜೋ ಜೋ
ಪೃಥ್ವಿಪ ದೃಢವರ್ಮ ಪುತ್ರಿಯೆ ಜೋ ಜೋ
ಮಿತ್ರರಂಜನಿ ಸುಚರಿತ್ರೆಯೆ ಜೋ ಜೋ
ಚಿತ್ರಾಂಗಿ ಲಲಿತಾಬ್ಜನೇತ್ರೆಯೆ ಜೋ ಜೋ ||೩೭||
ರಾಗ ಸುರುಟಿ ಏಕತಾಳ
ಲಾಲಿಸು ಜನನಾಥ | ನಿನ್ನೊಳು | ಪೇಳುವುದನು ಖ್ಯಾತ
ಬಾಲೆಯರ್ತಾಂ ತ | ಮ್ಮಾಲಯಸೇರಲು
ಬಾಲಕಿತಾ ಭೂ | ಪಾಲನ ನಿಳಯದಿ ||೩೮|
ದಿನ ದಿನಕಾ ಕುವರಿ | ಬೆಳೆದಳು | ಘನಲೀಲೆಯದೋರಿ ||
ಮನಸಿಜ ನಂಗೈ | ಗಿಣಿ ತನ್ನಯ ಕರ |
ವನು ತಿರುಗಿಸಿ ನಗೆ | ಯನು ಬೀರುತ್ತಾ ||೩೯||
ಮೊಗಚಂದಿರಗಿಂತ | ಬಲುತರ | ಮಿಗಿಲಿರಲಿನ್ನಿಂಥ
ಮಗುವೀ ಜಗದೊಳ | ಗೊಗೆವುದಿನ್ನೆಂತೆನೆ
ಮಿಗಿಸೊಬಗಿನ ನೃಪ | ರುಗಳ ಸಮೂಹದಿ ||೪೦||
ಇಂಥ ಬಾಲಕಿಗೆ | ವರುಷವು | ಸಂದಿತೇಳು ಹೀಗೆ
ನಂತರ ಹತ್ತಾ | ನಂತರ ಹನ್ನೆರ
ಡಂ ತಾಳ್ದಳು ಬಲು | ಸಂತಸದಿಂದ ||೪೧||
ಪದುಮಸಖನ ತೆರದಿ | ಶೋಭಿಪ | ಪದುಮಾಕ್ಷಿಗೆ ಮುದದಿ ||
ಪದಿನಾರ್ಕಳೆಯಲು | ಮದಗಜಗಮನೆಯು |
ಮದನನುರಿಗೆ ಬಲು ಬೆದರಿರಲಿತ್ತ ||೪೨||
ವಾರ್ಧಕ
ಭಾವಕಿಯ ಮನದೊಳಿಹ ಭಾವವನ್ನರಿತಾಗ
ಭೂವರೇಣ್ಯಂ ಮನದಿ ಭಾವಿಸಿದನಿವಳಿಂಗೆ
ಭೂವಜನು ಬಹುತೆರದೊಳೀವ ಕಷ್ಟವನಿನ್ನು ನಾವು ಸುಮ್ಮನೆ ಕುಳಿತರೆ |
ಆವುದಪಕೀರ್ತಿಯಿನ್ನೀವನಿತೆಯನು ನಿಜದಿ
ಭೂವಧು ಕುಶಂಬಿಯೆಂಬಾ ವಸುಧೆ ಪತಿ ವತ್ಸ
ಗೀವುದೆಂದೆನುತಲವನೀ ವಿಧದಿ ಮಂತ್ರಿಯೊಳು ತಾ ವಿವರಿಸಿದನು ಬಿಡದೆ ||೪೩||
ರಾಗ ಕಾಂಭೋಜಿ ಝಂಪೆತಾಳ
ಅತ್ತಲವನಿಪತನ್ನಾ | ಪುತ್ರಿಯನು ವತ್ಸನಿಂ | ಗಿತ್ತು ಲಗ್ನವ ಗೈವುದೆನುತಾ ||
ಚಿತ್ತದೊಳು ಯೋಚಿಸಿರ | ಲಿತ್ತವರಕಾಳಿಂಗ | ಪೃಥ್ವಿಪಾಲಕ ಭದ್ರಸೇನಾ ||೪೪||
ಎಂದೆನುವ ನರಪತಿಯು | ವಂದಿಮಾಗಧಮಂತ್ರಿ | ಸಂದಣಿಯೊಳೊಂದುದಿನವೆಸೆಯೆ ||
ಬಂದೋರ್ವಚರಭೂಪಗೆಂದ ಹೊರಬಾಗಿಲೊಳು | ಬಂದಿಹರು ಭೂದಿವಿಜರೆನಲೂ ||೪೫||
ಒಡನೆ ಕಳುಹಿದ ವಿಪ್ರ | ಗಡಣವನು ಕರೆತರಲು | ಪೊಡವಿ ಪಾಲಕನು ಬಳಿಕಿತ್ತಾ || ತಡೆಯದೈತಂದು ಚರ | ನುಡಿದನೈ ನಿಮ್ಮನೊಳ | ಬಿಡಲು ಪೇಳಿರುವ ದೊರೆಯೆನುತಾ ||೪೬||
ಕಂದ
ಬಂದಾವಿಪ್ರರು ಭೂಪಗೆ |
ಚಂದದೊಳಾಶೀರ್ವದಿಸುತಲಿರಲನಿತರೊಳಂ|
ಬಂದಿಹುದೆಲ್ಲಿಂದಲಿ ನೀ |
ವೆಂದೆನುತಲಿ ಬೆಸಗೊಂಡನು ವಿನಯದಿ ನೃಪತೀ ||೪೭||
ರಾಗ ಕೇತಾರಗೌಳ ಅಷ್ಟತಾಳ
ಪೊಡವಿಸುರರು ನೀವು | ನಡೆತಂದುದೆಲ್ಲಿಂದ | ನುಡಿಯಬೇಕದನೆನ್ನೊಳೂ
ಒಡನೆ ಯಾತ್ರಿಕರಂತೆ | ಪೊರಮಟ್ಟಿರೆಲ್ಲಿಗೆ | ಬಿಡದೆ ಸೂಚಿಸುವದೈಸೇ ||೪೮||
ಲಾಲಿಸೈ ಧಾರುಣಿ | ಪಾಲಕ ಪೇಳ್ವುದ | ಶೀಲಗುಣಾನ್ವಿತನೇ ||
ಭೂಲಲನೆಯ ಸುತ್ತಿ | ಮೇಲೆನಡೆದು ಜಹ್ನು | ಬಾಲೆಯೊಳ್ ಸ್ನಾನಗೈದೂ ||೪೯||
ಇರದೆಬಂದೆವು ಮುಂದೆ | ಮೆರೆವಂಗದೇಶದ | ದೊರೆ ದೃಢವರ್ಮನಲ್ಲಿ ||
ಪೊರಟೆವಲ್ಲಿಂದ ನೀ | ಕರುಣಿಸೇನಾದರು | ತೆರಳಿಪೋಗುವೆವು ನಾವೂ ||೫೦||
ರಾಗ ಆರ್ಯ ಸವ್ವಾಯಿ
ನುಡಿಯನು ಕೇಳುತ | ಪೊಡವಿಪ ಮನದೊಳು | ಕಡು ಹರುಷದೊಳಿರೆ ಮನ್ನಿಸುತಾ | ಕೊಡಿಸುತ ಬೇಕಾದೊಡವೆಯ ವಿಪ್ರರ | ನುಡಿದನು ಮಣಿಯುತ್ತ್ಹೀಗೆನುತಾ ||೫೧||
ಅನುದಿನ ತಮವನು | ತೃಣಸಮಕೆಣಿಸುತ | ಜನಪದಗಳನೆಲ್ಲವ ತಿರುಗೀ ||
ದಣಿದಿರುವಿರಿ ನಾಲ್ | ದಿನವಿಲ್ಲಿರುತಲಿ | ತನು ಶ್ರಮವಳಿದಾ ಮೇಲ್ ಪೋಗಿ ||೫೨||
ಭಾಮಿನಿ
ಇದು ಹೊರತು ಮನ್ಮನವು ನೀವ್ ತಿರು |
ಗಿದ ನಗರ ವೈಚಿತ್ರ್ಯವನು ತಿಳಿ |
ವುದಕೆ ಕೋರುವುದದನು ದಯೆ ಪಾಲಿಸುವುದೆನೆ ಕೇಳ್ದೂ ||
ಅದರೊಳೋರುವ ವಿಪ್ರ ತಾನತಿ |
ಮುದದೊಳುಸುರಿದ ಭೂಪ ಕೇಳೈ |
ಬುಧರು ನಾವ್ ನಮಗೇನು ತಿಳಿವುದು ಪೊಸತು ವಾರ್ತೆಗಳೂ ||೫೩||
ಕಂದ
ಆದಡೆ ಲಾಲಿಸು ಭೂಮಿಪ |
ಮೇದಿನಿಪತಿ ದೃಢವರ್ಮಾಖ್ಯನ ಸುತೆಯೋರ್ವಳ್ ||
ಈ ಧರೆಯೊಳಗನುಪಮತರ |
ವಾದತಿ ಸೊಬಗಿನೊಳಿರುವಳು ಗಜಗಮನೆಯು ತಾಂ ||೫೪||
ರಾಗ ಘಂಟಾರವ ಏಕತಾಳ
ಚಿತ್ತವಿಸು ಭೂ | ಪೋತ್ತಮನೆ ನುಡಿಯಾ | ದೃಢವರ್ಮರಾಯನ |
ಪುತ್ರಿಯಳ ಸುಚರಿತ್ರೆಯನು ಜೀಯಾ ||
ಇತ್ತ ಭೂಮಿಪ ಪುತ್ರರಿಲ್ಲದೆ | ಚಿತ್ತ ಚಂಚಲಿಸುತ್ತಲಿರೆ ಕೇಳ್ |
ಮತ್ತೆ ನಾರದ ಋತ್ವಿಜೋತ್ತಮ | ನಿತ್ತ ಫಲವನು ಪೃಥ್ವಿಪಾಲಗೆ ||೫೫||
ಫಲವ ಭೂಮಿಪಲಲನೆಮಣಿಗೀಯೇ | ವಿವರಿಸುವ ಕಥನವ |
ನಲವಿನಿಂದಲಿ ಲಾಲಿಸೈ ದೊರೆಯೇ ||
ಜಲಜಮುಖಿತಾ | ಮೆಲಲು ಫಲವನು | ಬಳಿಕ ಪಡೆದಳೀ ಸುಲಲಿತಾಂಗಿಯ |
ನಳಿನನೇತ್ರೆಯು ಬೆಳದಿಹಳು ಬಹು | ಚೆಲುವೆ ಭೂಮಿಪನಿಳಯದಲ್ಲಿಯೆ ||೫೬||
ಎಂತು ವರ್ಣಿಪೆ ಕಾಂತೆಯನು ರಾಯಾ | ಭೂಮಿಪನ ಸುತೆ ಗುಣ |
ವಂತೆ ರಾಜಿಸುವಂತ ಪರಿ ಜೀಯಾ ||
ದಂತಿಗಾಮಿನಿ ಕಂತುಶರದುರಿ | ಯಂತರಿಸದತಿ ಚಿಂತೆಯೊಳಿಗಿರ |
ಲಿಂತಿದನು ನೃಪ ತಾಂ ತಿಳಿದು ಭೂ | ಕಾಂತವತ್ಸಗೆಗೊಂತುಮಾಡಿಹ ||೫೭||
ಭಾಮಿನಿ
ತರುಣಿಯನು ವತ್ಸಾಖ್ಯನಾಗಿಹ |
ನರಪತಿಗೆ ತಾನಿತ್ತು ಮದುವೆಯ |
ವಿರಚಿಸಲು ಬೇಕೆನುತ ದೃಢವರ್ಮಕನ ಮನದಿಚ್ಛೇ ||
ಅರಿತಿಹೆವು ನಾವಿಷ್ಟೆಯೆನುತಲಿ |
ತೆರಳಿ ಪೋಗಲು ಭದ್ರಸೇನನು |
ಹರುಷದಿಂದಲಿ ನುಡಿದ ತನ್ನಯ ಮಂತ್ರಿವರ್ಯನೊಳೂ ||೫೮||
ರಾಗ ದೇಶಿ ಅಷ್ಟತಾಳ
ಕೇಳಯ್ಯಾ | ಮಂತ್ರಿ | ಕೇಳಯ್ಯಾ || ಪಲ್ಲವಿ ||
ಕೇಳಯ್ಯಾ ಮಂತ್ರಿ ನಾ ಪೇಳುವ ನುಡಿಯಾ |
ಜಾಲವಲ್ಲಿದುವಿಪ್ರರಾಡಿದ ಪರಿಯಾ || ಕೇಳಯ್ಯಾ || ಅನು ಪಲ್ಲವಿ ||
ಅಂಗದೇಶದ ನೃಪ ದೃಢವರ್ಮನೆನುತಾ |
ತುಂಗವಿಕ್ರಮನಿಹನವನಿಂಗೆ ಮತ್ತಾ ||
ಅಂಗಜನರಗಿಣಿಯೊಲು ಸೊಬಗಿನೊಳೂ ||
ಭೃಂಗಕುಂತಳೆ ಪುಟ್ಟಿರುವಳಂತೆ ಕೇಳೂ ||೫೯||
ಚಂದಿರಮುಖಿಯನ್ನು ವತ್ಸಾಖ್ಯ ನೃಪಗೇ |
ಚಂದದೊಳಿತ್ತು ಮದುವೆ ಮಾಳ್ಪೆ ಹೀಗೆ ||
ಎಂದೆನುತಲಿ ಭೂಪ ಯೋಚನೆಗೈವ |
ನೆಂದು ವಿಪ್ರರು ಪೇಳಿ ಪೋದರು ನಿಜವಾ ||೬೦||
ಅದರಿಂದ ನೀನು ಚಾರಕರನ್ನು ಕರೆದು |
ಪದುಮನೇತ್ರೆಯ ನಾನಿಚ್ಛಿಪೆನೆಂದು ಬರೆದೂ ||
ವದಗಿನೊಳಮಿತ ವಿಚಿತ್ರ ವಸ್ತುಗಳಾ |
ಮುದದೊಳೀವುತ ಕಳುಹಿಸು ಕಂಚುಕಿಗಳಾ ||೬೧||
ಅಪ್ಪಣೆಯನು ಕೇಳಿ ಮಂತ್ರಿಯು ತಿಳಿದೂ |
ಒಪ್ಪುವ ಪತ್ರಿಕೆಯನು ತಾನೆ ಬರೆದೂ |
ತಪ್ಪದೆ ದೃಢವರ್ಮನಲ್ಲಿಗೆ ಪೋಗೀ |
ಒಪ್ಪಿಸಿ ಬರುವುದೆಂದೆನೆ ಶಿರಬಾಗೀ ||೬೨||
ಕಂದ
ಪೊರಟಾಕ್ಷಣ ಕಂಚುಕಿಗಳ್ |
ವರದೃಢವರ್ಮಾಖ್ಯನ ಪಟ್ಟಣಕತಿ ಜವದಿಂ ||
ಬರಲಾ ಭೂಪನ ಮನ್ನಿಸು |
ತಿರದುಸುರಿದನವರೊಳು ಬಂದಿಹುದೇನೆನುತಂ ||೬೩||
ರಾಗ ತೋಡಿ ರೂಪಕತಾಳ
ಆರು ನೀವೆಲ್ಲಿಂದ ಬಂದಿರೀ ವಸ್ತುಗ | ಳ್ಯಾರು ಕೊಟ್ಟಿರುವರೆಂದೆನಲೂ ||
ಚಾರಕರೆಂದರ್ನಮ್ಮಯ ದೊರೆ ಕಳುಹಿದ | ಚಾರುಲೇಖನ ಸಹಿತಿಂದೂ ||೬೪||
ಎನುತಾ ಪತ್ರಿಕೆಯನ್ನು ಕೊಡಲಾ ಭೂಪನು ಮಂತ್ರಿ | ಯನು ಕರೆದೆಂದ ವಾಚಿಪಡೇ ||
ಅನಿತರೊಳ್ ಮಂತ್ರಿಯು ತೆರೆದು ಪತ್ರಿಕೆಯನ್ನು | ಇನಿತೆಂದು ವಾಚಿಸಿ ಪೇಳ್ದಾ ||೬೫||
ರಾಗ ಕಾಂಭೋಜಿ ಝಂಪೆತಾಳ
ಮಿತ್ರಾಂಬುಜಾವಳಿಗೆ ಮಿತ್ರನಂತೆವಂಗ | ಧಾತ್ರಿಪತಿ ದೃಢವರ್ಮ ನೃಪಗೇ ||
ಉತ್ತಮಕಳಿಂಗ ಧಾರಿತ್ರಿಗೊಡೆಯನು ತಾನು | ಮಿತ್ರಭಾವದಿ ಬರೆದ ಲಿಖಿತಾ ||೬೬||
ಇದುವರೆಗೆ ನಾವು ಶ್ರೀ ಪದುಮನಾಭನ ದಯದಿ | ಪದುಳಿಗರು ಭೂಮಿಪತಿ ನಿನ್ನಾ ||
ಸುದತಿ ಪರಿವಾರದಭ್ಯುದಯವನು ಸೂಚಿಸುತ | ಮುದದೊಳಿತ್ತಪುದುತ್ತರವನೂ ||೬೭||
ಭೂಮಿಪತಿ ಕೇಳ್ ನಿನ್ನ ಕಾಮಿನಿಯು ಪೆತ್ತ ಗಜ | ಗಾಮಿನಿಯ ಬೆಡಗ ನಾ ತಿಳಿದೂ ||
ಕಾಮಿಸಿಹೆನದರಿಂದ ಸೋಮ ಪ್ರಭೆಯನ್ನು ಕೊಟ್ಟು | ಪ್ರೇಮದಿಂ ವೈವಾಹವೆಸಗೂ ||೬೮||
ಈ ತೆರದಿ ಬರೆದ ಲಿಖಿತಾರ್ಥವನು ತಿಳಿದು ಭೂ | ನಾಥ ನುಡಿದನು ಸಚಿವನೊಡನೆ ||
ಮಾತುಕೊಟ್ಟಿಹೆನು ಸುಪ್ರೀತ ವತ್ಸಾಖ್ಯನಿಂ | ಗೀ ತರುಣಿಯನು ಕೊಡುವೆನೆನುತಾ ||೬೯||
ಅದರಿಂದಲೀನೃಪನು ಬದಲು ಕುವರಿಯ ನೋಡಿ | ಮದುವೆಯಾಗುವುದು ಬಲು ಲೇಸೂ ||
ಇದಕಾಗಿ ನೃಪತಿ ದುರ್ಮುದತಾಳದಂತೆ ಬರೆ | ವುದು ಭದ್ರಸೇನನಿಗೆ ತಿರುಗೀ ||೭೦||
ಬರೆದು ಕಳುಹಿಸುವುದೆನಲರಿತು ಮಂತ್ರಿಯು ಬಂದ | ಚರರೊಡನೆ ಕೊಟ್ಟು ಕಳುಹಿಸಲೂ |
ತೆರಳಿ ಬಂದಾದೂತರರಸಗಭಿನಮಿಸಿ ತಂ | ದಿರುವ ಲೇಖನವಿತ್ತರಾಗಾ ||೭೧||
ರಾಗ ಕೇತಾರಗೌಳ ಝಂಪೆತಾಳ
ಧಾರುಣಿಪನೋದಿ ಲಿಖಿತಾ | ಮನದೊಳಗೆ | ಭೂರಿರೋಷವತಾಳುತಾ |
ವೀರ ಮಂತ್ರಿಯ ಕರೆಯುತಾ | ವುಸುರಿದನು | ವಾರತೆಯ ಹೀಗೆನ್ನುತ || ||೭೨||
ಕೇಳಯ್ಯ ಮಂತ್ರಿವರ್ಯ | ಭೂಮಿಪನು | ಪೇಳಿಕಳುಹಿರ್ಪ ಪರಿಯ |
ಬಾಲೆಯನು ಕೊಡೆನೆನುತಲೀ | ನಮ್ಮ ಹೀ | ಯಾಳಿಸಿಹ ಗರ್ವದಲ್ಲಿ ||೭೩||
ಪೊಡವಿಪನು ವತ್ಸನಹುದೂ | ಗೋವಳರ | ಹುಡುಗರಾವ್ ಹೀಗೆನುವದೂ
ಫಢ ನೃಪನೊಳಿರಲಿಕಿಂತೂ | ನಾವಿನ್ನು | ಹುಡುಗಿಯನು ಬಿಡುವದೆಂತೂ ||೭೪||
ಬದಲು ಕುವರಿಯ ನೋಡುತಾ | ಲಗ್ನಗೈವುದು ಎಂದು ಬರೆದ ಮತ್ತಾ ||
ಉದಧಿಜಲಕಾರಪ್ಪಣೇ | ಭೂಪ ತಾ | ನಿದಬರೆದಿಹನು ಸುಮ್ಮನೇ ||೭೫||
ಗೊಡವೆ ಬಿಡಬೇಕೆನುವರೇ | ಆರಾದ | ರೊಡೆತನವನಿತ್ತಿರುವರೇ ||
ಬಡಿವಾರ ನಿಲಿಸಿ ಬಿಡುವೇ | ಅರಸನಿಗೆ | ಕಡೆಗಾಲ ತೋರಿ ಕೊಡುವೇ ||೭೬||
ಕರೆಸು ಮಾರ್ಬಲವನೀಗಾ | ನಾ ಪೋಗಿ | ತರುವೆ ಕುವರಿಯನುಬೇಗಾ ||
ಪುರವ ಮುತ್ತುತ ಭೂಪನಾ | ಗರ್ವವನು | ತರಿದು ಬರುವೆನು ಈಕ್ಷಣಾ ||೭೭||
Leave A Comment