ರಾಗ ಹಿಂದುಸ್ಥಾನಿಕಾಪಿ ರೂಪಕತಾಳ
ಸರಿಯಾರೀ ತರುಣಿಮಣಿಗೇ | ಒರೆಯಲೇನಿನ್ನಿವಳ ಬಗೇ ||
ಗುರುಕುಚಯುಗೆ ಚಂದ್ರಮುಖೀ | ಉರಗವೇಣಿ ಮದನ ಸಖೀ      || ಪಲ್ಲವಿ ||

ಭ್ರಮರಕುಂತಳೆ ಕಮಲನೇತ್ರೇ | ಅಮಿತಶೋಭೆ ವಿಮಲಗಾತ್ರೇ ||
ದ್ಯುಮಣಿಯಂತೇ ತೇಜದಿಂದಾ | ಗಮಿಸುವಳಲ್ಯೇನು ಚಂದಾ  ||೨೯೪||

ಆರೊಡೆಯನೊ ಆರ್ಪೆತ್ತನೊ | ನೀರೆ ಇವಳ ಸೊಬಗಿದೇನೋ ||
ಪೂರ್ವ ಪುಣ್ಯ ವಶದಿ ತನಗೆ | ತೋರಿತಲ್ಲದೆಂತು ಹೀಗೇ        ||೨೯೫||

ಕರಿ ಗಮನೆಯು ಹೊರಗೆ ನೋಳ್ಪ | ಳೆರೆಯನೆಲ್ಯೋ ಬಾರದೀರ್ಪಾ |
ಸರಿಯಿದನೋಡುವೆನೆನುತಾ | ಪೊರಟಾಕ್ಷಣ ಭೂಮಿಪ ತಾ     ||೨೯೬||

ಭಾಮಿನಿ
ಮನೆಯೊಡೆಯರ‍್ಯಾರಿಲ್ಲ ಚಂದ್ರಾ |
ನನೆಯು ಮಾತ್ರವೆ ಇರುವ ತೆರದಲಿ |
ತನಗೆತೋರ್ಪುದುಯೆಂತದಾಗಲಿ ಪರಿಕಿಸುವುದೆನುತಾ ||
ಜನಪನುಪ್ಪರಿಗೆಯನು ಸೇರ್ದಾ |
ಕನಕಪುತ್ತಳಿಯಂತೆ ರಂಜಿಪ |
ವನಜಲೋಚನೆಯಳನು ಕಂಡಾ ನೃಪತಿಯುಸುರಿದನೂ        ||೨೯೭||

ರಾಗ ಮುಖಾರಿ ಏಕತಾಳ

ನೀರೆ ಸುಗುಣೆ ದಯದೋರುತ ಪೇಳ್ ನೀ | ನಾರೆನುತಲಿ ಚದುರೇ ||
ನೀರಜಾಕ್ಷಿ ಮದ ವಾರಣ ನಡೆ ನಗೆ | ಬೀರುತ ನುಡಿ ಧೀರೇ          || ಪಲ್ಲವಿ ||

ಮಾನಿನಿ ನಿನ್ನಯ ಪಿತನ್ಯಾರೆನ್ನುತ | ನೀನೊರೆಯೆಲೆ ಜಾಣೇ ||
ಕಾನನದೊಳಗೋರ್ವಳೆ ನೀನಿರುತಿಹೆ | ಯೇನೆನುತಲಿ ಕಾಣೆ    ||೨೯೮||

ಮನದೊಳು ಚಿಂತಾಲತೆಯದು ಹಬ್ಬುತ | ಮೊನೆಗೊಂಡಿಹುದೇನೂ ||
ಕನಕಾಂಗಿಯೆ ಮತ್ತದು ತವ ಮೊಗದೊಳು | ಮಿನುಗುವ ಬಗೆಯೇನೂ    ||೨೯೯||

ಚಂಚಲಾಕ್ಷಿ ಬಲು ಮಿಂಚುವ ಕದಪದು | ಕೊಂಚ ಕಂದಿಹುದೇನೂ ||
ವಂಚನೆ ಗೈಯದಲುಸುರೆನ್ನೊಡ ನರ | ಸಂಚೆಗಮನೆ ನೀನೂ   ||೩೦೦||

ಬೆದರಲೇಕೆ ನಾ ವಂಚಕನೆನ್ನುತ | ಪದುಮನೇತ್ರೆ ಹೀಗೇ ||
ವಿದುಧರನಾಣೆಯು ಕುಹಕಿಗನಲ್ಲವು | ಮುದದೊಳಗರುಹೆನಗೇ  ||೩೦೧||

ಕಂದ

ಕೇಳ್ದಾ ಸುದತಿಯು ಲಜ್ಜೆಯ |
ತಾಳುತ ಶಿರ ತಗ್ಗಿಸಿದುದು ತಿಳಿದಾ ಧಾರುಣಿ ||
ಪಾಲನು ಮತ್ತಿಂತೆಂದನು |
ಲೋಲಾಂಬಕಿಯುಸುರ‍್ಯಾವನು ತವ ಪತಿಯೆನುತಂ   ||೩೦೨||

ರಾಗ ಬೇಗಡೆ ಏಕತಾಳ

ನುಡಿಯೇ | ನಿನ್ನೊಡೆಯನ ಪೆಸರೊಡ | ನುಡಿಯೇ     || ಪಲ್ಲವಿ ||

ಬಡನಡುವಿನಜಡ | ಪಿಡಿ ನಡೆದುಡು ಕೊಡ |
ಬಿಡು ಕಡು ಬೆಡಗಿನೋ | ಳುಡು ಪಡೆ ಪತಿ ಮುಖಿ || ನುಡಿಯೇ  ||೩೦೩||

ನಗೆ ಮೊಗ ನೆಗಹುತ | ಲೊಗುಮಿಗೆ ದುಗುಡಗ |
ಳುಗಿ ಮೃಗದೃಗುಯುಗೆ | ಬಗೆ ಮಿಗೆ ಸುಗುಣೇ || ನುಡಿಯೇ     ||೩೦೪||

ವನಜಾನನೆ ತನು | ವನು ನನೆ ಮೊನೆಯನು |
ಕುನಿಪನು ಮನವಿನಿ | ತೆನು ಘನತನದೊಳು || ನುಡಿಯೇ       ||೩೦೫||

ಭಾಮಿನಿ

ನಳಿನನೇತ್ರೆಯು ತಲೆಯನೆತ್ತುತ |
ಬಳಿಕ ನಾಚುತ್ತಿರಲು ತಿಳಿದಾ |
ಇಳೆಯಧಿಪನಿಂತೆಂದ ಕೋಮಲೆಯೊಡನೆ ತೋಷದಲೀ ||
ಅಳುಕದಿರು ಕೇಳಬಲೆ ನಾವೇನ್ |
ಕುಲಗೆಡುಕರಲ್ಲೇಕೆ ಯೋಚಿಪೆ |
ಘಳಿಲನೊರೆಯೆನೆ ಸುದತಿ ವಿಸ್ತರಿಸಿದಳು ತನ್ನಿರವಾ   ||೩೦೬||

ರಾಗ ಸಾಂಗತ್ಯ ರೂಪಕತಾಳ

ಯಾರಯ್ಯಾ ತನ್ನೊಡ | ನೀ ರೀತಿಯೊಳು ಕೇಳ್ವ | ಕಾರಣವೇನೂ ನಾನರಿಯೇ ||
ನಾರೀ ತನ್ನುವನು ವಿ | ಚಾರಿಸಿ ಫಲವೇನೂ | ಭಾರಿ ದುಷ್ಕರ್ಮಿತಾನಹೆನೂ       ||೩೦೭||

ಧರೆಯೊಳತ್ಯಧಿಕವಾ | ಗಿರುವಂಗ ಪಟ್ಟಣ | ದೊರೆ ದೃಢವರ್ಮನ ಸುತೆಯೂ ||
ಸಿರಿವಂತ ವತ್ಸನಿಂ | ಗಿರದೆನ್ನಾ ಮದುವೆಯಾ | ವಿರಚಿಸೆ ಪಿತ ನಿರ್ಣಯಿಸಿದಾ    ||೩೦೮||

ಅಂದರೇನ್ ಗೈವುದು | ಹೊಂದಿಹಾ ವಿಧಿ ಎನ್ನ | ನೆಂದಿಗೂ ಬಿಡುವ ಮಾತುಂಟೇ ||
ಬಂದೋರ್ವ ಭೂಪ ತಾ ತಂದೆಯ ಸೋಲಿಸಿ | ತಂದಾ ಕದ್ದೆನ್ನನೀ ವನಕೇ         ||೩೦೯||

ಬಳಿಕೋರ್ವ ರಕ್ಕಸ | ಕಲಹದಿ ಜನಪನಾ | ಕೊಲುತೆನ್ನಾ ಕೆಡಿಸಲೆಂದೆನುತಾ ||
ಹಲವಂಗ ಯತ್ನಿಸೆ | ಫಲ ಸಿಗದಿರೆ ಮತ್ತೀ | ನಿಳೆಯದಿ ತಂದೂ ಬಂಧಿಸಿಹಾ       ||೩೧೦||

ಜೀವಗೊಳ್ಳುವ ತನ್ನಾ | ಕಾಯ್ವರಿನ್ಯಾಹರ್ | ಹಾ ವಿಧಿಯನು ಮೀರಲೆಂತೂ ||
ಭೂವರ ವತ್ಸನಿಂ | ನ್ಯಾವನೆಲ್ಲಿಹನಿದ | ನೀವರಿವಿರೆ ದಯಮಾಡೀ        ||೩೧೧||

ಧರಣಿಪ ವತ್ಸನ ಮರೆಯೊಳಿರದೆ ಬೇರೆ | ಕುರಿಗಳನಿಚ್ಛಿಪುದುಂಟೇ ||
ಹರಣವ ತೆಗೆದರೀ ದುರುಳನ ಸೇರುತ | ಲಿರಲುಂಟೆ ಜಗದಿ ಬಾಳುತಲೀ ||೩೩೨||

ವಾರ್ಧಕ

ಮತ್ತೆ ಕೇಳ್ ಸುರವೈರಿ ವನಕೆ ತೆರಳಿಹನವನು |
ಗೊತ್ತು ಬರುವನು ನಮ್ಮ ಕಂಡು ಕೊಲ್ಲದಡವಗೆ |
ಹೊತ್ತು ಹೋಗದು ನೀನು ಕೆಡಲೇನು ಫಲವಿಹುದು ತೆರಳಯ್ಯ ನಿನ್ನ ಗೃಹಕೇ ||
ಮತ್ತಕಾಶಿನಿ ಇನಿತು ಪೇಳಿದುದ ಕೇಳ್ದಾನ |
ರೋತ್ತಮನು ಮನ ಮರುಗುತಾ ಸುದತಿಯನು ತಾನು |
ಎತ್ತಿ ತೊಡೆಯೋಳ್ಕುಳ್ಳಿರಿಸಿ ಪೇಳ್ದ ತನ್ನ ನಿಜ ಪರಿಯ ಮಾಜಿಸದೆ ನೃಪತೀ        ||೩೩೩||

ರಾಗ ಸುರುಟಿ ಏಕತಾಳ

ಸುದತಿ ಶಿಖಾಮಣಿಯೇ | ಪೇಳುವೆ | ನಿದೊ ಮನ್ಮನ ಕಣಿಯೇ ||
ಚದುರೆ ನೀನೆನಗಾ | ಗ್ಯಧಿಕ ಬವಣೆ ಪ | ಟ್ಟುದರಿಂ ದುಃಖಿಪೆ | ನಿದನೇನೆನಲೀ      ||೩೩೪||

ವತ್ಸನೆನಲು ನಾನೇ | ಬೇಟೆಗೆ | ಉತ್ಸಹದೊಳು ಕಾಣೇ ||
ಮತ್ತೀವಿಪಿನಕೆ | ಚಿತ್ತೈಸಿದೆ ಮೃಗ | ದೊತ್ತಿನೊಳೈ ತಂ | ದಿತ್ತೆನು ದರ್ಶನ ||೩೩೫||

ದುರುಳನ ಕಡು ಭಯಕೇ | ದುಃಖಿಸ | ದಿರು ನಾನೀಕ್ಷಣಕೇ ||
ತರಿದಟ್ಟುವೆನೆಮ | ಪುರಿಗವನನು ಚಂ | ದಿರ ಮುಖಿ ನಿನ್ನನು | ಕರೆದೊಯ್ಯುವೆನೂ          ||೩೩೬||

ಭಾಮಿನಿ
ಕೇಳುತಾಯತ ನೇತ್ರೆ ವತ್ಸ ನೃ |
ಪಾಲನನು ಬಗಿದಪ್ಪಿ ಸಂತಸ |
ತಾಳಿದುದನೊರೆಯಲ್ಕೆ ಫಣಿಪನಿಗಸದಳವು ನೃಪತೀ ||
ಲೀಲೆ ಮಿಗೆ ಘಟಿಯೆರಡು ಕಳೆಯಲ್ |
ಖೂಳನಿತ್ತಲು ನಡೆತರುತ ಕಡೆ |
ಗಾಲ ಬಂದಿಹುದರಿಯದಾ ಗಂಧರ್ವನನು ನೋಡೀ    ||೩೩೭||
ಕಂದ

ನಿರ್ಜರರೆದೆ ಕಂಪಿಸುವೋಲ್ |
ಘರ್ಜಿಸಿ ವಿದ್ಯುಲ್ಲೋಚನನೊಳ ಪೊಗುತಾಗಂ ||
ತರ್ಜಿಸಿ ಶರ ಬಿಡುತೆಂದನು |
ದುರ್ಜನ ಕೇಳೇತಕೆ ಬಂದಿರುತಿಹೆ ಎನುತಂ  ||೩೩೮||

ರಾಗ ಸುರುಟಿ ಮಟ್ಟೆತಾಳ

ಆರೆಲೊ ಹುಡುಗಾ | ಸೇರಿದೆ ಧಡಿಗಾ |
ಚೋರರ ತೆರದೊಳಗರಮನೆ | ಸೂರೆಗೈಯ್ಯಲು ಬಂದಿಹು |    || ಪಲ್ಲವಿ ||

ಆಡುಂಬುವ ತರಳನೆ ಈ | ಕಾಡಿಗೆ ಬಂದ್ಯಾಕೇ ||
ಮೋಡಿಯೊಳರಮನೆ ಹೊಕ್ಕಿಹೆ | ನೋಡಿಕೊ ತನುಜೋಕೇ     ||೩೩೯||

ಉರವನು ಬಗೆಯುತ ನಿನ್ನನು | ತರಣಿಯ ಸುತನೆಡೆಗೇ ||
ತೆರಳಿಸುವೆನು ಎನುತಲಿ ಪಲ್ | ಮೊರೆಯಲು ಸತಿ ನಡುಗೇ    ||೩೪೦||

ಮುಚ್ಚೆಲೊ ಬಾಯ್ ಖಳ ರಕ್ಕಸ | ತುಚ್ಛೆಯೊಳ್ ಫಲವೇನೂ ||
ಕೊಚ್ಚುವೆ ನೋಡ್ ನಾಲಗೆಯನು | ಬಿಚ್ಚುವೆನೆದೆಯನ್ನೂ        ||೩೪೧||

ಹಿಡಿದಪ್ಪಳಿಸುತ ನಿನ್ನನು | ಕಡಲಿಗೆ ಬಿಸುಟೀಗಾ ||
ಹುಡುಗಿಯ ಕರೆದೊಯ್ಯುವೆ ತಾ | ನಡು ನಿಶಿಚರ ಬೇಗಾ        ||೩೪೨||

ಭಳಿ ಭಳಿರೆನ್ನುತ ಕರ್ಬುರ | ಘಳಿಲನೆ ಮರ ಮುರಿದೂ ||
ತಲೆಯೊಳು ಹೊಡೆಯಲ್ಕಂಡಾ | ಬಲವಂತನು ತರಿದೂ         ||೩೪೩||

ಧರಣಿಪ ರೋಷವ ತಾಳುತ | ಶರವನು ಸುರರಿಪುಗೇ ||
ಭರದಿಂದೆಸೆಯಲು ದಾನವ | ತೆರಳಿದನೆಮಪುರಿಗೇ    ||೩೪೪||

ಭಾಮಿನಿ

ಸುದತಿಯನು ವಂಚಿಸುತ ತಂದಿರು |
ವಧಮರೆಂತೀ ಧರೆಯೊಳಿಪ್ಪರು |
ಕದನದೊಳು ಕಡೆ ಸೇರಿದರು ಬಳಿಕಿತ್ತ ತೋಷದಲೀ ||
ಪದುಮ ನೇತ್ರೆಯ ವಿನಯದಿಂ ನರ |
ರಧಿಪ ಕರಕೊಳುತಾಗ ತನ್ನಯ |
ಕುದುರೆಯಯನು ಸತಿಯೊಡನೆ ಏರುತ ಬಲದೆಡೆಗೆ ಬಂದೂ    ||೩೪೫||

ಕಂದ

ಮನ್ನಿಸಿ ಶಬರರ ನೀವ್ ಪೋ |
ಗೆನ್ನುತ ಕಳುಹಿಸಿ ತನ್ನಯ ಮಾರ್ಬಲದೊಡನಂ ||
ಸನ್ನುತ ದೃಢವರ್ಮನ ಬಳಿ |
ಗಿನ್ನೀರ್ವರು ಪೊರಟೈತಂದರು ಬಲು ಜವದಿಂದಂ     ||೩೪೬||

ರಾಗ ಭೈರವಿ ಝಂಪೆತಾಳ

ಚಿತ್ತವಿಸು ಶ್ರೀಹರ್ಷ | ನಿತ್ತ ವತ್ಸಾಖ್ಯ ಜನ |
ಪೋತ್ತಮನು ನಡೆತರಲಿ | ನ್ನತ್ತ ದೃಢವರ್ಮಾ          ||೩೪೭||

ನಿದ್ದೆಯನು ತಿಳಿದು ತಾನೆದ್ದು ನೋಡುತ ತನ್ನ |
ಮುದ್ದು ಮಗಳನು ವೈರಿ | ಕದ್ದೊ ದನೆನುತಾ  ||೩೪೮||

ಕಂಗೆಟ್ಟು ಬಳಲಿಹಲ | ವಂಗ ಚಿಂತಿಸುತ ಸುತೆ |
ಯಂಗವನು ನೆನೆ ನೆನೆಯು | ತುಂಗ ಜನಪಾಲಾ      ||೩೪೯||

ಇರಲಿತ್ತಾ ಕ್ಷಣ ಬಂದೂ | ಚರರೂ ಪೇಳ್ದರು ನಮ್ಮಾ |
ಪೊರ ಬಾಗಿಲೊಳಗೋರ್ವ | ತರಳೆಯನು ಕೂಡೀ     ||೩೫೦||

ಬಂದಿರುವನೆನಲು ನೃಪ | ನೆಂದನವರಿಗೆ ಸಭೆಯ |
ಹೊಂದಬಿಡಬಹುದೆನಲಾ | ನಂದದಿಂ ಚರರೂ         ||೩೫೧||

ಪೇಳಿದರು ಒಳಗೆ ಪೋ | ಗೇಳೆಂದುದನು ತಿಳಿದು |
ನೀಲಕುಂತಳೆ ಸಹಿತ | ಲೋಲ ವತ್ಸಾಖ್ಯಾ   ||೩೫೨||

ವಾರ್ಧಕ
ನಡೆ ತಂದು ಭೂಮಿಪಗೆ ವಂದಿಸಲು ತಿಳಿದಾಗ |
ದೃಢವರ್ಮ ತೋಷಾಬ್ಧಿಯೊಳಗಾಡೆ ಪರಿವಾರ |
ಜಡಜ ಮುಖಿ ಸೌರಂಭೆ ಸಹಿತಲಾನಂದವನು ಪಡೆದುದನು ಪೇಳಲೆಂತೂ ||
ಒಡನೆ ವತ್ಸನ ಮನ್ನಿಸುತ ಕುವರಿಯನು ಕೇಳು |
ತಡೆಸೀರ್ದ ಕಷ್ಟಕತಿ ದುಃಖಿಸಲು ನರಪತಿಯು |
ನುಡಿದಳಾ ಸುದತಿ ಚಿಂತಿಪುದೇಕೆ ವಿಧಿ ಲಿಪಿಯ ಮೀರಲಾರಳವು ಜಗದೀ          ||೩೫೩||

ರಾಗ ಮುಖಾರಿ ಝಂಪೆತಾಳ

ವ್ಯರ್ಥ ಚಿಂತಿಪುದೇಕೆ | ಮನದಿ ಜನಪಾ |
ಕರ್ತನಪ್ಪಣೆಯಂತೆ | ವರ್ತಿಸಿದೆ ನಾನಿದಕೆ || ವ್ಯರ್ಥ   || ಪಲ್ಲವಿ ||

ಲೋಕೇಶನಪ್ಪಣೆಯ | ಲೋಕದೊಳು ಮೀರ್ವರ‍್ಯಾ |
ರ‍್ಯಾಕಿನಿತು ಯೋಚಿಸುವೆ | ಯೇ ಕೃಪಾಳೂ ||
ಸಾಕಿ ಸಲಹಿದೆನೆನುತ | ಶೋಕಿಸುತಲಿರಲು ವಿಧಿ |
ತಾ ಕರುಣದೋರುವುದೆ | ಘಾಕದಲ್ಲೈ || ವ್ಯರ್ಥ        ||೩೫೪||

ಸೀತೆಯೆಂದೆನೆ ತ್ರಿಜಗ | ಮಾತೆಯೆನಿಸಿಹಳವಳ |
ಯಾತುದಾನವನೊದ | ರೀತಿಗೆಟ್ಟೂ |
ನೀತಿಯುತೆ ದ್ರೌಪದಿಯು | ಧೂರ್ತ ದುಶ್ಶಾಸನಿಂ |
ದೇತರದಿ ಬಳಲಿದಳು | ಮಾತಿದೇಕೆ ||೩೫೫||

ಸತಿಸುತೆಯರೆಂದೆಂಬು | ವತಿಶಯದ ಭವ ಪಾಶ |
ಕತಿ ಚಿಂತೆಪಡುವವನು | ಮತಿಹೀನನೂ ||
ಶತಯಾಗ ಮುಖ್ಯ ಸುರ | ವಿತತಿಗಿಹುದೀ ಕಷ್ಟ |
ಪಿತನೆ ಮರುಗುವುದೇನು | ಹಿತವೆ ಪೇಳೂ   ||೩೫೬||

ಭಾಮಿನಿ

ಮಗಳ ಮಾತಿಗೆ ಮೆಚ್ಚಿ ಜನಪತಿ |
ಮಿಗಿಲು ತೋಷವ ತಾಳಿ ಮುದ್ದಿಸಿ |
ಭಗಣಪತಿ ಮುಖಿಗಾಗ ಲಗ್ನಕೆ ದಿನವ ನಿಶ್ಚೈಸೀ ||
ಜಗದ ರಾಯರನೆಲ್ಲ ಬರೆಸುತ |
ಲಗಣಿತದ ಭೂ ದಿವಿಜರಿಂದಲಿ |
ನಗಹರಾದಿ ದಿವೌಕಸರು ಮನ ಮೆಚ್ಚುವೋಲೆಸಗೀ    ||೩೫೭||

ಕಂದ

ಮದುವೆಯ ಸಮಯದಿ ದ್ವಿಜರಿಗೆ |
ಮುದದೊಳು ದಕ್ಷಿಣೆಯಿತ್ತಾ ಜನಪತಿ ಬಳಿಕಾ ||
ವಧುವರರಿಗೆ ಬಳುವಳಿಯ |

ನ್ನಧಿಕ ತೆರದೊಳೀವುತ ಕಳುಹಿದ ಪುರವರಕಂ         ||೩೫೮||

ಶರಷಟ್ಪದಿ

ಬಳಿಕಾ ವತ್ಸನು |
ನಳಿನಾಕ್ಷಿಯನೊಡ |
ಗೊಳುತಲಿ ಪಟ್ಟಣಕೈ ತಂದೂ ||
ಇಳೆಯನು ಪಾಲಿಸಿ |
ಕಳೆದನು ಕಾಲವ |
ಜಲಜಾಕ್ಷನ ಕರುಣದೊಳಂದೂ      ||೩೫೯||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಕೇಳಿದೈ ಶ್ರೀಹರ್ಷರಾಯನೆ | ಬಾಲೆಯೋರ್ವಳಿಗಾಗ ಭೂಪರು
ಕಾಳಗದಿ ಕಾದಾಡಿದುದ ನೀ | ಲೀಲೆಯಿಂದಾ ||೩೬೦||

ವನಜ ಮುಖಿಯನು ವತ್ಸ ಲಗ್ನವ | ನೆನಿತೆಸಗಿಕೊಂಡೆಂಬ ಪರಿಯದು |
ಮನಕೆ ಬಂತೇನೆನುತ ಕೇಳಲು ಜನಪ ನುಡಿದಾ       ||೩೬೧||

ಕರುಣವಾರಿಧಿ ನಿಮ್ಮ ದಯದೊಳ | ಗರಿತೆನೆನ್ನುತ ಪದಕೆರಗಿ ಭೂ |
ವರನು ತೋಷದೊಳಿರ್ದನೆಂಬುವ | ಚರಿತೆಯಿದನೂ  ||೩೬೨||

ಪಡುಗಡಲಿನಾ ದಡದಿ ರಂಜಿಪ | ಉಡುಪಿ ಕ್ಷೇತ್ರದಿ ನಿಂದು ಭಕುತರ |
ಗಡಣ ಪಾಲಿಪ ಹರಿಯ ಕರುಣದೊ | ಳೊಡನೆ ಇದನೂ         ||೩೬೩||

ವಿಧುಧರನ ಸದ್ಭಕ್ತ ವಿದ್ಯಾ | ನಿಧಿಗಳೆನಿಸುವ ಸುಬ್ಬರಾಯರ |
ಪದ ಸಹಾಯದಿ ಬರೆದೆ ಗುರುವೆಂ | ಬುದನು ಬಗೆದೂ ||೩೬೪||

ಕುಂದು ಕೊರತೆಗಳಿದರ ಕವಿತಾ | ಬಂಧ ಛಂದಸ್ಸಿನೊಳಗಿರ್ದುದ |
ಚಂದದಿಂ ಸಮಗೈಸಿರುವೆ ನವ | ದಿಂದಲಿದನೂ       ||೩೬೫||

ಕರುಣದೊಳು ವಾಚಿಸುತ ದೋಷವ | ನಿರದೆ ತಿದ್ದಲು ಖ್ಯಾತಿ ಬರುವುದು |
ನರಹರಿಯು ಪೊರೆಯುವನು ಸರ್ವರ | ನಿರತ ದಯದೀ         ||೩೬೬||

|| ಮಂಗಳ ಪದ ||

ರಾಗ ಆಹೇರಿ ಝಂಪೆತಾಳ

ಶ್ರೀಕೃಷ್ಣನಿಗೆ ಕಮಲನಾಭನಿಗೆ ಗಿರಿಧರಗೆ |
ಲೋಕಪಾಲಕ ದೇವಕೀ ಕಂದಗೇ ||
ಪಾಕಶಾಸನ ಮುಖ್ಯ | ದಿವಿಜಗಣ ರಕ್ಷಕಗೆ |
ಕಾಕುಸ್ಥನಿಗೆ ವಿಮಲ | ವನಮಾಲಗೇ || ಜಯಮಂಗಲಂ         ||೩೬೭||
ಮಾರ ಪಿತನಿಗೆ ಲಕ್ಷ್ಮೀ | ನಾರಾಯಣಗೆ ಯೋಗಿ |
ವಾರ ವಂದಿತ ಸದಾ | ನಂದಮಯಗೇ ||
ಶ್ರೀರಮಾಧವ ಕರುಣ | ವಾರಿನಿಧಿ ಭಕ್ತಜನ |
ವಾರಿರುಹ ತರಣಿ ಭವ | ದೂರ ಹರಿಗೇ || ಜಯ ಮಂಗಲಂ     ||೩೬೮||
ನಗಧರನಿಗಘಹರಗೆ | ಖಗರಾಜ ರೂಢನಿಗೆ |
ಭೃಗುಜ ಗರ್ವಾಪಹಾರಗೆ ಗೋಪಗೆ ||
ಮಗುವನುದ್ಧರಿಸಿ ಮೂ | ಜಗವ ಸಲಹಿದ ಉಡುಪಿ |
ಯಗಣಿತಾನಂದ ಶ್ರೀ ಕೃಷ್ಣದೊರೆಗೇ ||
ಜಯ ಮಂಗಲಂ | ನಿತ್ಯ ಶುಭ ಮಂಗಲಂ

ಯಕ್ಷಗಾನ ರತ್ನಾವತೀ ಕಲ್ಯಾಣ ಮುಗಿದುದು