ರಾಗ ಸಾವೇರಿ ಅಷ್ಟತಾಳ

ಅತ್ತಲೆಳೆವ ಮಗರಾಜನು | ಒಳ |
ಗಿತ್ತ ಸೇದುವನಿಂದ್ರ ಜಾತನು ||
ಅತ್ತ ತೆಗೆದನೀಶಭಕ್ತನು | ಬಳಿ |
ಕಿತ್ತಲುಗಿವ ಪಾಂಡುಪುತ್ರನು ||207||

ಇವರಿಬ್ಬರೀಪರಿ ಸತ್ವದಿ | ಸಲೆ |
ಸಮಯದಿಬ್ಬರ ಶಕ್ತಿ ಮಧ್ಯದೀ ||
ಪವನಜ ಬಳಹ ಬೆಂಡಾದನು | ಕೇಳಿ |
ಅವನೀಶನಲ್ಲಿ ಬಂದೆಂದನು ||208||

ಹರಭಕ್ತ ನೀ ಧರ್ಮವರಿಯೆಯಾ | ಭೀಮ |
ನರಗೆ ಸಲ್ಲುವದಿದು ನಿಶ್ಚಯಾ ||
ಶಿರವೇ ದೇಹಕೆ ಮುಖ್ಯವೆನ್ನಲು | ಮಗವರ |
ನದೆಂತುಯೆನಲೆಂದನವನೊಳು ||209||

ಸರ್ವ ದೇಹಕೆ ತಲೆ ಮುಖ್ಯವು | ಕೇಳು |
ಸರ್ವ ಬೀಜಕೆ ಜಲಸೌಖ್ಯವು ||
ಸರ್ವಶಾಸ್ತ್ರಕ್ಕಾದಿ ವೇದವು | ಮುಖ್ಯ |
ಸರ್ವೌಷಧಿಗಳೊಳಗನ್ನವು ||210||

ಅರಸನಿಂತೆನಲೊಡಂಬಟ್ಟನು | ಬೇಗ |
ಮರುತಜಾತನ ಕಾಲ ಬಿಟ್ಟನು ||
ಹಿರಿದು ಮೆಚ್ಚಿದೆ ನಿನಗೆಂದನು | ಬೇಡು |
ವರವನೀಯುವೆನೆನಲೆಂದನು ||211||

ದಿನವೇಳು ನಮ್ಮಿಚ್ಛೆಯೊಳು ನೀನು | ಇಲ್ಲಿ |
ವಿನಯದಿ ನೆಲಸೆನ್ನಲದರನು |
ಧನದ ಮಿತ್ರಾರ್ಚಕನೊಪ್ಪಿದ | ಜಾಗ |
ವನು ಶಿವಪೂಜೆಗೆ ಕೇಳಿದ ||212||

ಭಾಮಿನಿ

ಕಂತುಪಿತನಾಜ್ಞೆಯೊಳು ತಮ್ಮವ |
ರಂತಿಕಕೆ ದೂತರನು ಕಳುಹಲು |
ಸಂತಸದಿ ಪೊರಮಟ್ಟು ಬಂದನು ಕೌರವೇಶ್ವರನೂ ||

ಬಂದ ಧುರ್ಯೋಧನ ನಪನ ಕರೆ |
ತಂದು ಮನ್ನಿಸಿ ಮಿಕ್ಕ ಭೂಪರಿ
ನೊಂದುಳಿಯ ಬರಮಾಡಿ ಕೊಂಡೊಲವಿಂದ ಭೂಸುರರಾ ||
ಸಂದಣಿಯ ಕೂಡಿಸಿ ಧರಾಮರ |
ರೆಂದವೋಲ್ ಮಖಕಖಿಳವಸ್ತುವ |
ತಂದು ಜೋಡಿಸಿ ಧರ್ಮಸುತ ಮುದಯುಕ್ತನಾಗುತ್ತ ||213||

ವಾರ್ಧಕ

ಗುರುಭೀಷ್ಮರಿಂಗೆ ಮೇಲಾರೈಕೆ ಕೌರವೇ |
ಶ್ವರನು ಕನಕಾಧ್ಯಕ್ಷನವನನುಜರರಸರ್ಗೆ |
ಪರಮ ನವವಸ್ತ್ರ ಮಾಲ್ಯಾಭರಣಮಂ ಕೊಡುವ ಕೆಲಸ ಸರ್ವರನೂಟಕೆ ||

ಕರೆದು ಕುಳ್ಳಿರಿಸಿರ್ಪುದು ವಿಕರ್ಣಂಗೆ ಭೂಪರಿಗೆ |
ಕರಿರಥ ಹಯಾದಿಗಳ ನೀವು ದಿನಜಗೆ ಮಿಕ್ಕ ||
ವರಿಗುಳಿದ ಕೆಲಸವಂ ಭೀಷ್ಮನೆಂದಂತೆ ಮುರಮಥನ ತಾ ನೇಮಿಸಿದನು ||214||

ರಾಗ ಕಾಂಭೋಜಿ ಝಂಪೆತಾಳ

ಬಂದಾಗ ಧರ್ಮಜನು ವಂದಿಸುತ ಹರಿಪದಕೆ
ನಿಂದು ಕೈಮುಗಿಯುತುಸುರಿದನೂ ||
ಮುಂದೇನು ಜೀಯಾ ಬೆಸಸೆಂದೆನುತವೇಳುತಿರ
ಲೆಂದ ಶ್ರೀಕಾಂತ ನಗುತಾ ||215||

ಧರಣಿಪತಿ ಹೋಗು ಮುನಿವರರಿಂದ ದೀಕ್ಷೆಯನು
ತರಿಸು ನಾನಿಹೆನು ಬೆದರದಿರು ||
ಸುರನದೀಸುತ ದ್ರೋಣನಿರಲು ನೀ ಮನದೊಳಗೆ
ಬರಿದೆ ಚಿಂತಿಸಲ್ಯಾತಕಿನ್ನು ||216||

ಎಂದು ಹರಿ ನುಡಿಯಲಾನಂದದಲಿ ಧರ್ಮಜನು
ವಂದಿಸುತ ದೀಕ್ಷೆಯನು ಧರಿಸೆ |
ಕಂದುಗೊರಲಾತ್ಮನಂ ಪೂಜಿಸುತಲತಿ ಭಕ್ತಿ
ಯಿಂದ ಪುಣ್ಯಾಹ ನಾಂದಿಗಳ ||217||

ವಿರಚಿಸುತ ಋತ್ವಿಜರ್ಗಾದರಣೆಯಿತ್ತು ಭೂ
ಸುರರಿಂಗೆ ವಂದಿಸಿದ ಬಳಿಕ ||
ಹರುಷದಿಂದಲಿ ಸಕಲ ವೇದಘೋಷಗಳನ್ನು
ಧರಣಿಸುರರೈದೆ ಘೋಷಿಸಲೂ ||218||

ವಾರ್ಧಕ

ಚರಣತ್ರಯಂಗಳಾಗಿರೆ ಹೇಮ ಭಾಸುರದಿ |
ಕರವೇಳರಿಂದಲೊಂದರ ಶಕ್ತಿಯಂ ಧರಿಸಿ
ಸುರಿದುಂಬ ನಾಲಿಗೆಗಳೇಳಕ್ಕೆ ಶಿರವೆರಡು ಶಂಗ ನಾಲ್ಕು ||
ತರುಣಿಯರು ಸಂಕೇತನಿಜ್ವಾಲಿನಿಯರಿಂದ |
ಮೆರೆವ ಟಗರನ್ನೇರಿ ವೈಯ್ಯರದಿಂದಿರುವ |
ಸುರಸೂಪಕಾರನಂ ಕರೆತಂದು ಪೂಜಿಸಿದನಾ ಯಾಜ್ಞವಲ್ಕ್ಯಾ ||219||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಚರು ಪುರೋಡಾಶಾಜ್ಯ ಸಮಿಧೆಯ |
ವೆರಸಿ ದ್ರವ್ಯಗಳಿಂದೆ ಹೋಮಿಸೆ |
ಸುರರು ಸಂತೋಷಿಸುತಲಿರ್ದರು | ಭರಿತರಾಗಿ ||220||

ಈ ತೆರದೊಳೇಳ್ದಿವಸ ಲಕ್ಷ್ಮೀ |
ನಾಥನಭಿನಮತದಿಂದ ಯಜ್ಞವ |
ನೋತು ಧರ್ಮಜನೆಸಗಿ ಗಂಗಾ | ಜಾತನೊಡನೆ ||221||

ರಾಗ ಸಾಂಗತ್ಯ ರೂಪಕತಾಳ

ಮುತ್ತಯ್ಯ ಕೇಳು ಕೂಡಿಹ ಬಹುಭೂಪರ |
ಮೊತ್ತದೊಳಗ್ರ ಪೂಜೆಯನು ||
ಇತ್ತಪುದಾರ್ಗಾರು ಯೋಗ್ಯರು ಎನಗದ |
ವಿಸ್ತರಿಸೆನಲೆಂದನವನು ||222||

ಕಂದ ಕೇಳೀ ಭೂಮಿಪಾಲ ಸಂದೋಹದಿ |
ನಂದನಂದನನೆ ಉತ್ತಮನು ||
ಇಂದೀ ಯಾಗಕೆ ಪೂಜ್ಯ ನಿನಗೆ ಮಾನಸದಲ್ಲಿ |
ಸಂದೇಹವ್ಯಾಕೆ ಕೃಷ್ಣನನೂ ||223||

ಕರೆತಂದು ಮನ್ನಿಸಿ ಯಾಗ ಪೂಜೆಯನೀಯೆ |
ಪರಿಪೂರ್ಣವಪ್ಪುದೀ ಮಖವು ||
ವರಮಾರ್ಕಾಂಡೇಯಾದಿಗಳನಹುದಲ್ಲವೋ |
ಭರದಿಂದ ಕೇಳು ನೀನೆನಲೂ ||224||

ಮುನಿಗಳೆಲ್ಲರೂ ಕೇಳಿ ಭೀಷ್ಮನ ಪೊಗಳುತ್ತ |
ಜನಪನೊಳೆಂದರಚ್ಚುತನೂ ||
ಮನುಜೇಶರೊಳು ಮುಖ್ಯ |
ವಿದು ದೇವಸಮ್ಮತವೆನಲದ ಕೇಳಿ ಭೂಮಿಪನೂ ||225||

ಹರುಷದಿ ಸಹದೇವಗೊರೆಯಲಾತನು ಪೋಗಿ |
ಕರೆತಂದು ನಪರ ಮಧ್ಯದಲಿ |
ಹರಿಯನು ಪೀಠದೊಳ್ ಕುಳ್ಳಿರಿಸಲು | ಕಂಡು |
ಸುರರಭ್ರದೊಳು ಜಯವೆನಲೂ ||226||

ವಾರ್ಧಕ

ಧರ್ಮಜಂ ಬಳಿಕ ಸಂತೋಷದಿಂದೈತಂದು |
ಧರ್ಮಸ್ವರೂಪಂಗೆ ರಾಜೋಪಚಾರಮಂ |
ಪೆರ್ಮೆಯಿಂದೆಸಗಿ ರಾಜರ ಮಧ್ಯದೋಳ್ಕೊಟ್ಟನಗ್ರಪೂಜೆಯನದರನೂ |
ದುರ್ಮತಿ ಮಹೀಶರೀಕ್ಷಿಸಿ ತಮ್ಮ ಮಾನಸದಿ |
ಪೇರ್ಮುನಿದು ಕೃಷ್ಣಭಯದಿಂದ ಸುಮ್ಮನಿರೆ ಚೈದ್ಯ |
ಗರ್ಜಿಸುತಲಚ್ಚುತನ ದ್ವೇಷದಿಂ ರೋಷದಿಂ ಸಹದೇವಗಿಂತೆಂದನು ||227||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಏನೆಲವೊ ಸಹದೇವ ವಸುಧೆಯ |
ಮಾನನಿಧಿಗಳ ಮುಂದೆ ನಂದನ |
ಸೂನುವಿಂಗಾಸನದ ಮೇಲೆ ಸು | ಮಾನವೇನೈ ||228||

ನೀನರಿಯದವ ನಿಮ್ಮ ಯಾಗಕೆ |
ಹಾನಿಯಲ್ಲವೆ ನಿಮ್ಮ ಹಿರಿಯರ ||
ದೇನ ಮಾಡಿದರಕಟ ಖೂಳನು | ನೀನು ಜಗದೀ ||229||

ಇವನಲೇ ಯದುರಾಜ ಕುಲಸಂ |
ಭವನು ನಪ ಮಧ್ಯದಲಿ ಹರಿ ಪೀ |
ಠವನಡರ್ವರೆ ಯೋಗ್ಯನೇ ಮೇ | ಣವನ ಗುಣವ ||230||

ಅವನಿಯೊಳಗೆಲ್ಲವರು ತಿಳಿಯರೆ |
ರವಿಸಮಾನ ಸುತೇಜ ಧಾತ್ರೀ |
ವರರ ಮಧ್ಯದೊಳಗ್ರಪೂಜೆಯ | ಶಿವಶಿವಿವಗೇ ||231||

ಪರಮಮಖವೀ ಮಖದ ಪೂಜೆಗೆ |
ಧರಣಿಪಾಲಕರೆಲ್ಲರುಳಿದೀ |
ನರಕಮರ್ದನ ಪೂಜ್ಯನಾದನೆ | ಹರಹರಿಂದೂ ||232||

ನೀ ತಿಳಿಯದವ ನಿನ್ನ ಸಂಗಡ |
ಮಾತು ನನಗೇಕೆಂದು ಜರೆದಾ |
ಭೂತಳಾಧಿಪ ಚೈದ್ಯ ಗಂಗಾ | ಜಾತಗೆಂದಾ ||233||

ರಾಗ ಕಾಂಭೋಜಿ ಝಂಪೆತಾಳ

ಸುರನದಿಪುತ್ರ ಕೇ | ಳರಿಯದವರೀ ಪಾಂಡ |
ವರು ನೀನು ರಾಜವಂಶದಲೀ ||
ಹಿರಿಯ ಘನವಿದ್ವಾಸನಾಗಿರ್ದು ಯಾದವನ |
ಕರೆದು ಪೂಜಿಸಿ ಪೇಳ್ದೆ ಭರದೀ ||234||

ಬಾಲತ್ವದಿಂದ ಅಭ್ಯಾಸಿಸಿದ ಸಚ್ಛಾಸ್ತ್ರ |
ಜಾಲಂಗಳಿಂದು ವಸುದೇವ ||
ಬಾಲನೊಳು ಮರೆತೆಯಾ ಕರುಣಿಸದೆ ಯಾಕವನಿ |
ಪಾಲಕರ ಮಧ್ಯದೊಳಗಿಂದು ||235||

ವೀರ ಮಾದ್ರೇಶ ಶಸ್ತ್ರಾಚಾರ್ಯ ಗುರುಪುತ್ರ |
ಭೂರಿಶ್ರವಾದಿ ಹಿರಿಯವರೂ ||
ಯಾರು ಪೂಜೆಗೆ ಪಾತ್ರರಲ್ಲ ನಿಮ್ಮಲಿಗೋಪ |
ನಾರಿಯರ ಜಾರನಂದದೊಳು ||236||

ಅನ್ಯನೇ ಸಿಂಧುಭೂವರನೀ ಮಹಾಮಖಕೆ
ಮಾನ್ಯನಾಗನೆ ಪಾಂಡ್ಯನಪನೂ ||237||

ವೀರ ಕಾಂಬೋಜೇಶ ಸೋಮದತ್ತ ಮಹೀಶ |
ಭೂರಮಣ ಮಾಳವಾದಿಗಳೂ ||
ಸಾರಮುಖ ಪೂಜಾರ್ಹರಲ್ಲ ತುರುವಳ್ತಿಯರ |
ಹಾರ ದಧಿಚೋರನಂದದೊಳೂ ||238||

ಸೇರಿನ ಸರಿಮಂಚದಲ್ಲಿ ಮೇಣ್ ಸರಸಿರುಹ |
ಭವನ ಸರಿ ಸಿಂಹಪೀಠದಲ್ಲಿ ||
ದಿವಿಜೇಶನುರು ಠೀವಿಯಲಿ ಮೆರೆವ ಧರಣಿಪರ |
ನಿವಹವಿರಲಿದರ ಮಧ್ಯದಲಿ ||239||

ಪರಮವೈಭವದಿಂದ ತಿಳಿಯದವರಂದದಲಿ |
ಕರೆತಂದು ಹರಿಯವಿಷ್ಟರದಿ ||
ಇರಿಸಿ ಮನ್ನಿಸಲೊರೆದೆ ಮಖವಳಿದೆ ನಿನ್ನವಗೆ |
ಸರಿ ಬರರೆ ನೆರೆದ ಭೂಭುಜರೂ ||240||

ವರನಿಲ್ಲದವಳು ಪಡೆದವಗೆ ಗತಿಯಪ್ಪುದಕೆ |
ಪರರಿಗುದಿಸಿದರ್ ಮಾಳ್ಪ ಮಖಕೆ |
ಧರಣಿಯಲಿ ತುರುವಳ್ತಿಯರ ಮಿಂಡನೇ ಪೂಜ್ಯ |
ಅರಸುಗಳು ಮಾನ್ಯರಲ್ಲಿದಕೆ ||241||

ಬೇವಿನಾರಣ್ಯದಲಿ ಕೋಕಿಲಂಗಳಿಗೆ ಸಂ
ಭಾವನೆಯು ದೊರಕದಂದದಲ್ಲಿ ||
ಈ ವಿಕಾರಧ್ವರದಿ ರಾಜರ್ಗೆ ಮನ್ನಣೆಯೆ |
ಗೋವಳರೆ ಮಾನ್ಯರೀ ಮಖಕೆ ||242||

ರಾಗ ಕಾಂಭೋಜಿ ಝಂಪೆತಾಳ

ಮರುಳ ಗೋವಳನೆ ಕೇಳ್ದರಿಯದವರುಪಚರಿಸಿ
ದರು ನಿನಗೆ ಬುದ್ಧಿ ಬೇಕಲ್ಲ ||
ದೊರೆದೊರೆಗಳಿರುತಿರಲು ಸಮ್ಮುಖದೊಳೈತಂದು
ಹಿರಿಯತನದಿಂದ ಕುಳಿತೆಯಲಾ ||243||

ಗೋವಳರೆ ಕುಲಹೀನರವರೊಳಿವನತಿ ಕೆಡುಕ |
ದೇವತತಿಗಿತ್ತ ಬಲಿಕೂಳಾ |
ಹೇವವಿಲ್ಲದೆ ತಿಂದಿರುವ ಭಂಡ ನಿನಗಿಲ್ಲ
ಭೂವರರ ಮುಂದೆ ಪೂಜೆಗಳೇ ||244||

ಲಲನೆಯರು ಹದಿನಾರು ಸಾವಿರದ ಮೇಲೆಂಟು |
ಘಳಿಸಿಕೊಂಡೆಯಲ ಹೇಸಿಸದೆ ||
ಹಳೆಯ ಹದ್ದನು ಏರಿ ಮೆರೆವವಗೆ ಮಹಾರಾಜ |
ಬಳಗದೆಡೆಯೊಳು ಕೂಟವೇನು ||245||

ನಿನ್ನ ಪಿತನಾವ ರಾಜ್ಯದ ದೊರೆಯು ಕೃಷ್ಣ ಪೇಳ್ |
ಹೊನ್ನಮಂಚದಿ ಮಂಡಿಸುವರೆ ||
ಬೆಣ್ಣೆ ಮೊಸರನು ಕದ್ದು ತಿಂದ ಡೊಳ್ಳನು ತೋರ |
ಲೆನ್ನಿದಿರೊಳೀಗ ಹಮ್ಮಿನಲೀ ||246||

ಹೆಣ್ಣುಮಕ್ಕಳ ಭ್ರಾಂತಿ ನಿಂದು ಪೋಗಿರಲು ಕಥೆ |
ಯನ್ನು ಮುಗಿಸಿಹ ಖೂಳನೈಸೆ |
ಇನ್ನು ಸಿಂಹಾಸನವನಿಳಿ ಎನಲು ಕೇಳ್ದು ಕಿಡಿ |
ಯನ್ನುಗುಳುತೆದ್ದು ಯಾದವರೂ ||247||

ಬಡಿದಿವನನೀಗ ಯಮನೆಡೆಗೆ ಕಳುಹುವೆವೆಂದು |
ಜಡಿದು ಯದುವೀರರೈತರಲು |
ಗುಡುಗುಡಿಸಿ ಭೀಮನೊಂದೆಡೆಯೊಳಗೆ ಹೂಂಕರಿಸೆ |
ನುಡಿದ ಹರಿಕೌತುಕವ ಭೀಷ್ಮ ||248||

ರಾಗ ಪುನ್ನಾಗ ತೋಡಿ ಅಷ್ಟತಾಳ

ಯಾಕಿನಿತೆಂಬೆ ಬೇಡೆಲೊ ಚೈದ್ಯ | ಪಿ | ನಾಕಿಸಖನು ಕೃಷ್ಣ ಸುರವಂದ್ಯ ||
ಕಾಕನಾಡುವರೆ ಮಾಧವನಿಗೆ | ಭಕ್ತ | ನೀಕ ರಕ್ಷಕ ಬ್ರಹ್ಮ ಜನಕಗೆ ||249||

ಖೂಳ ತಮಾಖ್ಯ ವೇದವ ಕೊಂಡು | ಪಾ | ತಾಳಕಿಳಿಯೆ ಮತ್ಸ್ಯತನುಗೊಂಡು ||
ಸೀಳಿ ದುಷ್ಟನ ಮಹತ್ತಮನೀತ | ಕೂರ್ಮ | ನೊಳು ತೋಷದಲಿ ಭೂಧರ ಪೊತ್ತ ||250||

ಭೂಮಿಯ ಶಯ್ಯೆಯಂದದಿ ಸುತ್ತಿಕೊಂಡು | ಹೇಮಾಕ್ಷನೊಯ್ಯಲು ಬೆಂಬೊತ್ತಿ ||
ತಾಮಸನನು ಕೊಂದು ಧರಣಿಯ | ತಂದ | ನೀ ಮಹಾ ವಾರಾಹ ನೋಡಯ್ಯ ||251||

ತರಳನು ಮೊರೆಯಿಡೆ ಕಂಬದಿ | ಬೇಗ | ಪೊರಟನು ನರಹರಿ ರೂಪದಿ ||
ಕರುಳ ಬಗೆದು ದೈತ್ಯನ ಕೊಂದ | ಮತ್ತೆ | ಧರಣಿಯನಳೆದು ಬಲಿಯ ಗೆದ್ದ ||252||

ಧರಣಿಯ ಮೊರೆ ಕೇಳಿ ಬೇಗದಿ | ಮುನಿ | ತರಳನಾಗಿಯೆ ರಾಮ ರೂಪದಿ |
ದೊರೆಗಳೆಲ್ಲರ ಸದೆ ಬಡಿದನು | ಎಂದು | ವರೆಯೆ ಕೇಳುತ ಚೈದ್ಯ ನುಡಿದನು ||253||

ರಾಗ ಕೇದಾರಗೌಳ ಝಂಪೆತಾಳ

ಎಲವೊ ಹಳೆ ಮುದುಕ ಕೇಳೋ | ಹೊಸಕಥೆಯ | ತಿಳುಹಿದವರಾರು ಹೇಳು |
ಜಲಚರವು ಕಮಠ ಕ್ರೋಡ | ವೆಂಬವರ | ಬಲುಮೆ ಘನವಾಯ್ತೆ ಮೂಢ ||254||

ಸಂಭವಿಸಿದಣುಗನನ್ನು | ಬಾಧಿಸಲು | ಸಂಭವಿಸಿತಘವವನನೂ ||
ಕಂಬದೊಳಗಿರ್ದ ಮಗವು | ಕೊಂದುದಿವ | ನೆಂಬುದಿನ್ಯಾವ ನಿಜವೂ ||255||

ಬಲಿಯೊಡನೆ ಮೋಸಗೈದು | ಕೇಳಿದರೆ | ಫಲವೆ ಬಾಗಿಲ ಕಾಯ್ದುದೂ |
ಇಳೆಯ ಪಾಲಕರೆಲ್ಲರೂ | ವಿಪ್ರಸುತಗ | ಳುಕಿದವರಲ್ಪಬಲರೂ ||256||

ಅರರೆ ಸಾಕಿನ್ನು ಮುದಿಯಾ | ನಾನೆಲ್ಲ | ವರಿತಿರುವೆ ಪೇಳ್ದ ಕಥೆಯಾ |
ದುರುಳ ಗೋಪನಸುತನನೂ ಹೊಗಳಿ ಬಹು | ಪರಿಯಿಂದ ದಣಿದೆ ನೀನೂ ||257||

ಇನ್ನೇನು ಕಥೆಗಳಿಹುದು | ಹೇಳಿದರೆ | ಹೊನ್ನು ವಸನಗಳು ಬಹುದೂ |
ನಿನ್ನ ವೊಲರಿತರಿಲ್ಲಾ | ಎಂದು ಮನ | ವನ್ನು ನಿರ್ಧರಿಸಿದೆಯಲಾ ||558||

ಭಾಮಿನಿ

ಭೂಪತಿಗಳಿರುತಿರಲು ಮಂಚದಿ |
ಸ್ಥಾಪಿಸಿದೆ ಕರೆತಂದು ನಮ್ಮಿದಿ |
ರೀ ಫಟಿಂಗನ ಕುಳ್ಳಿರಿಸುವರೆ ಭೀಷ್ಯ ಹೇಳೆಂದ |
ಗೋಪಿಯರ ಮಿಂಡನಿಗೆ ಪೂಜೆಯೆ |
ಕಾಪುರುಷನಿವಯೋಗ್ಯನೇನೈ |
ಭಾಪುರೇ ಭಳಿರೆಂದು ಘರ್ಜಿಸಿ ನುಡಿದನಾ ಚೈದ್ಯ ||259||

ವಚನ

ಈ ತೆರದಿಂ ಲಕುಮೀನಾಥನ ಜರೆಯಲ್ಕೇಳ್ದಾ |
ವಾತಾತ್ಮಜ ಗದೆಗೊಂಡಾಕ್ಷಣ ನದೀಜಾತನೊಳಿಂತೆಂದಂ ||

ರಾಗ ಮಾರವಿ ಏಕತಾಳ

ಹರಿಯನು ಕೆಡನುಡಿದಿರುವ ದುರಾತ್ಮನ |
ಶಿರವನು ಕೆಡಹುವೆನು |
ಅರೆನಿಮಿಷದೊಳೆಂದೇಳಲಿಕ್ಯದು ಬಲ |
ಪೊರಟುದು ಘರ್ಜಿಸುತ ||260||

ನಿಂದಿಪುದುಚಿತವೆ ಬಹುಪರಿ ಗಂಗಾ |
ನಂದನ ಸಹನಪನ |
ಇಂದಿವನನು ಬಡಿದುರುಳಿಪೆ ನೆನೆತಡೆ |
ದೆಂದನವಗೆ ಭೀಷ್ಮ |
ಸಂತವಿಸೈ ತವ ಕ್ರೋಧವ ನೀನ್ಯಾ |
ಕಿಂತು ಸುಯಾಗದೊಳೂ ||
ಚಿಂತೆಗಳ್ಯಾತಕೆ ನಮ್ಮನು ಶ್ರೀ ಭಗ |
ವಂತನು ರಕ್ಷಿಸುವ ||261||

ರಾಗ ಮಧುಮಾಧವಿ ಅಷ್ಟತಾಳ

ಮರುತ ಸಂಭವನೆ ನೀ ಕೇಳಯ್ಯ | ಈಗ |
ಧರಿಸಿದ ಕೋಪವ ತಾಳಯ್ಯ ||
ಹರಿಯ ಕಾಯುವಡೆ ಸಮರ್ಥನೆ | ನೀನು |
ಬರಿದೆ ಗರ್ವಿಸಲ್ಯಾಕೆ ಸುಮ್ಮನೆ ||262||

ಜಗದೋದ್ಧಾರನ ನಿಂದಿಪೆನೆಂದು ಬಾಯೊಳು | ಬಗು |
ಳಿದಡೇನು ಬಾರದು ಕುಂದು ||
ನಿಗಮವಂದಿತ ಧುರಕಂಜುತ || ಪೇಳ್ದ |
ಹಗರಣವನು ಕೇಳ್ದನೆನ್ನುತ ||263||

ತಿಳಿಯಬೇಡನಿಲಸಂಭವ ನೀನು | ಈತ
ಜಲಜಸಂಜಾತನ ತಾತನು ||
ಬಲುಹನೀಕ್ಷಿಪಡೆ ಸಾಧ್ಯಗಳುಂಟೆ | ಎಷ್ಟು
ಬಲನಾದರೇನೀತಗಿದಿರುಂಟೆ ||264||

ಭಾಮಿನಿ

ಸುರರ ಬಾಧಿಸೆ ರಾವಣಾದ್ಯರು |
ಸರಸಿಜಾಕ್ಷಗೆ ದೂರೆ ಕೇಳ್ದವ |
ತರಿಸಿ ಮರ್ಕಟಬಲದೊಡನೆ ಮುತ್ತಿದನು ಲಂಕೆಯನೂ ||
ತರಿದು ದುಷ್ಟರ ಕುಲವ ನಿಮಿಷದಿ |
ಧರೆಯ ಭಾರವನಿಳುಹಿ ಶ್ರೀಹರಿ |
ಸುರರ ಸಂತೋಷಿಸಿದನಾ ರಾಮಾವತಾರದಲೀ ||265||

ರಾಗ ಮಧ್ಯಮಾವತಿ ತ್ರಿವುಡೆತಾಳ

ಇಂಥಹ ಮಹಾಮಹಿಮನೊಡನೀ |
ಪಂಥ ಪೌರುಷವೇಕೆ ಚೈದ್ಯ ನಿ |
ನ್ನಂತೆ ನಪರವರಿವರು ಹಳಿದರೆ |
ಕಂತು ಪಿತನನು ಸಭೆಯೊಳು || ||266||

ಹಿಂದೆ ಮಧುಕೈಟಭ ಸುಮಾಲಿಯ |
ಕೊಂದನಿವ ಮುರ ನರಕ ದೈತ್ಯರ |
ವಂದವೆಲ್ಲಿದೆ ತೋರಿಸೈ ಜರಾ
ಸಂಧನಿರವೇನಾಯಿತು ||267||

ತರಳ ಧ್ರುವ ಪ್ರಾಹ್ಲಾದ ಮುಖ್ಯರು |
ಶರಣನಾದ ವಿಭೀಷಣಾಸುರ |
ಹರಿಯ ಭಜಕರ ದಾಸರಿಗೆ ಭಯ
ದೊರೆಯದೆಂದಿಗು ನೋಡಿಕೋ ||268||

ಶರಣರಿವರನು ಕೊಂದರೇ ಮೊದ |
ಲೊರೆದವರು ಜೀವಂತರಾದರೆ |
ಬರಿದೆ ನೀ ಕೆಡಬೇಡ ಕಡ್ಡಿಯ |
ಮುರಿದು ಸಾರಿದೆ ನಿಜವಿದೂ ||269||

ಬಲಿಯು ಗರ್ವಿಸೆ ಬಂಧಿಸಿದ ಕಡಿ |
ದಿಳುಹಿದನು ಬಾಣನ ಕರೌಘವ |
ತಿಳಿದು ನೀ ಕೆಡಲ್ಯಾಕೆ ಕೃಷ್ಣನ |
ವಲಿಸು ಭಕ್ತಿಗಳಿಂದಲೀ ||270||

ರಾಗ ಕಾಂಭೋಜಿ ಝಂಪೆತಾಳ

ಎಂದೆನಲು ಚೈದ್ಯ ಸಿಡಿಲಂದದಲಿ ಗರ್ಜಿಸುತ |
ಲೆಂದನಾ ಕಲಿಭೀಷ್ಮನೊಡನೇ |
ಹಿಂದೆ ನಾನಿರಲಿ ಕಳಿಯುವುದುಂಟೆ ಈರೈದು |
ಕಂದರಾದ್ಯಖಿಳಸುರಬಲವೂ ||271||

ಮಂಗಮುಸುಕರಡಿಗಳು ಸಿಂಗಳಿಕ ಸಹಿತ ರಣ |
ರಂಗದೊಳು ರಾಮನೆಂಬಾತಾ |
ತುಂಗವಿಕ್ರಮನ ಕೊಲ್ಲುವ ಸಮಯ ತಾನಿರದೆ |
ಭಂಗವಾಯಿತು ಸುವಿಕ್ರಮಕೇ ||272||

ಮಾನಿನಿಯ ತಂದು ಸೇವಿಸದಿರಿಸಿದುದರಿಂದ |
ವಾನರಗೆ ಬರಲು ಪಥವಾಯ್ತು |
ಕೋಣಪರಕುಲಕೆ ಹಳುವನು ತಂದ ರಾಣವನು |
ಮಾನವರ ಸಮರದಲಿ ಮಡಿದೂ ||273||

ಕುಲಕೆಡುಕ ನೀಚ ಪಂಡನು ಜೀವಗಳ್ಳ ಪರ |
ಬಲಕೆ ಸಹಯಿಗನಾದ ಕತದೀ |
ಗೆಲಿದನಲ್ಲದೆ ರಾಮನೆಂಬಾತ ರಾವಣನ |
ಗಳಹದಿರು ಭೀಷ್ಮ ನೀ ಕಥೆಯಾ ||274||

ಹಳೆಯ ಹದ್ದೇರಿ ನೆಲಕಲೆವ ನೆರಿಯುಡುಗೆಯಿಂ |
ಹೊಳೆವ ಕಸ್ತೂರಿ ನಾಮದಲೀ ||
ಲಲನೆಯರ ವಶಗೈಯ್ಯೆ ದೇವತ್ವ ಬಂದಪುದೇ |
ಹಳೆಗೂಗೆ ನಿನಗೆಷ್ಟು ಮಾತೂ ||275||

ಹಸ್ತಿನಾಪುರದಿ ಕೌರವನನ್ನ ತಿಂದ ಮದ |
ಮಸ್ತಿಯಲಿ ಮುದಿ ಪ್ರಾಯ ನಿನಗೆ ||
ಇತ್ತರ‌್ಯಾರಾದಡೊಂದರಂಗನೆಯ ಮದುವೆ ಮನ |
ವಿತ್ತಲ್ಲವೇನೋ ಸುರನದಿಜ ||276||

ಒಂಟೆ ವೈವಾಹಕ್ಕೆ ನೆಂಟರೆ ಶ್ವಾನಗಳು |
ಬಂಟರಾಗುವರು ಮರ್ಕಟರೂ ||
ಕುಂಟಗಾರ್ದಭನ ಗಾನಕ್ಕೆ ನರಿ ಬೆರಗಾಗಿ |
ತೆಂತೆಣಿಸಿ ಶಿರದೂಗುವಂತೆ ||277||

ಜಾರಜರ ಯಾಗಕ್ಕೆ ಸರ್ವಾಧಿಕಾರವನು |
ಜಾರಸಂಭವನೆ ಮಾಳ್ಪವನು ||
ಜಾರಗುರುವಿಗೆ ಪೂಜೆಯನು ಮಾಳ್ಪದನುಚಿತವೆ |
ಮೂರು ಲೋಕಕೆ ವಿಹಿತವಾಯ್ತು ||278||