ಶಾದೂಲರ್ವಿಕ್ರೀಡಿತಂ
ಶ್ರೀಲೋಲಂ ಶಿಥಿಕಂಠಮಿತ್ರಮನಘಂ ಬಾಲಾರ್ಕ ಕೋಟಿಪ್ರಭಂ |
ನೀಲಾಂಗಂ ವಿಧಿ ತಾತನಿಂದ್ರನಮಿತಂ ಸುಗ್ರೀವರಾಜ್ಯಪ್ರದಂ |
ಕಾಳೀಪೂರ್ವಜನಂತಶೂನ್ಯನುರಗಾರಾತಿಧ್ವಜಂ ಶಂಕರಂ |
ವ್ಯಾಳಾಧೀಶ್ವರಕಲ್ಪನದ್ರಿ ಮಥನಂ ಶ್ರೀರಾಮನಂ ಧ್ಯಾನಿಪೆಂ || ||1||
ರಾಗ ನಾಟಿ ಝಂಪೆತಾಳ
ಜಯತು ಜಯ ಮಾರ್ತಾಂಡ | ಜಯತು ಜಗದೋದ್ದಂಡ |
ಜಯತು ಜಯ ಸುರಸೇವ್ಯ | ಜಯತು ಮಹಭವ್ಯ ||ಪಲ್ಲವಿ||
ಶ್ರೀಜಗಜನಸಂರಕ್ಷ | ಶ್ರೀ ಜಗಾಧಿಪನ ಪಕ್ಷ |
ಅಜಮುಖ್ಯ ಸುರವಿನುತ | ಭಜಿತ ಸುಪ್ರೀತ ||2||
ಕಮಲಾಂಬುಧವದೇವ | ಕಮನೀಯ ಕರಭಾವ |
ಕುಮುದಸಖಸುಪ್ರೀಯ | ವಿಮಲಕಾಯ ||3||
ಮೂರುಮೂರ್ತಿಸ್ವರೂಪ | ಕಾರಣ್ಯಗುಣದೀಪ |
ಭೂರಿನಿಧಿ ವಿನೋದ | ಸೂರಿನುತ ಪಾದ ||4||
ಭಾಮಿನಿ
ಶಾರದೆಯ ಬಲಗೊಂಡು ಸುಮನಸ |
ವಾರಕಭಿವಂದಿಸುತ ಶ್ರೀಚರ
ಣಾರವಿಂದಕೆ ನಮಿಸಿ ವೇದವ್ಯಾಸ ಮುನಿವರರ ||
ಚಾರುಪದಕೊಂದಿಸುತ ವಾಯುಕು
ಮಾರನನು ಕೊಂಡಾಡಿ ನಾ ಮ |
ತ್ತಾರುಮುಖವುಳ್ಳವನನರ್ಚಿಸಿ ಕತಿಯನೆಸಗುವೆನು ||5||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಅನಘ ಜನಮೇಜಯನಪಂಗಾ | ಮುನಿಪವೈಶಂಪಾಯನಾಖ್ಯನು |
ಜನಪಕುಂತೀಸುತರ ಚರಿತೆಯ | ವಿನಯದಿಂದ ||6||
ಉಸುರುತಿರೆ ಬೆಸಗೊಂಡ ಪಾಂಡವ | ರಸಮಬಲಮಾಗಧನ ಸಮರದಿ |
ಪೆಸರನಡಗಿಸಿ ಮಿಕ್ಕ ಭೂಮಿಪ | ವಿಸರವನ್ನು ||7||
ಸರಿಸುತುತ್ತಮ ರಾಜಸೂಯವ | ವಿರಚಿಸಿದರೆಂತಮಮ ಮಾಗಧ |
ಧರಣಿಪಾಲರನದಾರು ಸಾಂಗದಿ | ಕರುಣಿಸೆನಲು ||8||
ತಾಪಸೋತ್ತಮ ತೋಷದಿಂದ | ಶ್ರೀಪತಿಯ ಪಾದಾರವಿಂದವ |
ತಾ ಪದುಳದಿಂ ನೆನದುಸುರ್ದನು | ಭೂಪನೊಡನೆ ||9||
ವಾರ್ಧಕ
ಧರಣೀಶ ಕೇಳಿಲ್ಲಿ ಪರ್ಯಂತ ಪಾಂಡವರ |
ಚರಿತವನು ಒರೆದೆ ಮುಂಗಥೆಯ ನಾನೆಂದಪೆಂ |
ಧುರಧೀರ ಮಾಗಧನ ವತ್ತಾಂತವಂ ಮೊದಲೆ | ಪೇಳ್ವೆ ನಾ ಕೇಳು ನೀನು ||
ಧರಣಿಯೊಳು ಮಗಧದೇಶದಿ ಶೋಭಿಸುತ್ತಿರ್ಪ |
ವರಗಿರಿವ್ರಜಪುರವೆಂಬ ಪುರದಿ ಸಂತೋಷದಿಂ |
ದಿರುತಿರ್ದನೈ ಬಹದ್ರಥನೆಂಬವಂ | ಸಿರಿಯೊಳಿಂದ್ರಗೆ ಸಮಾನನೆನಿಸಿ ||10||
ಭಾಮಿನಿ
ಅರಸ ಕೇಳ್ಕಾಶೀಶ್ವರಾತ್ಮಜೆ
ಯರು ಕಲಾವತಿ ಭಾನುಮತಿಯೆಂ
ಬರು ಮಹೀಪಾಲಕಗೆ ರಾಣಿಯರಾಗಿ ರಂಜಿಸಲು ||
ತರಳರಹಿತವ್ಯಥೆಯೊಳೊಂದಿನ |
ಧರಿಸಿ ನಪ ಮೌನಸ್ಥನಾಗಿರೆ |
ಧರಣಿಪನ ನುಡಿಸಿದಳು ಹಿರಿಯವಳಧಿಕ ವಿನಯದಿ ||11||
ರಾಗ ಕೇದಾರಗೌಳ ಅಷ್ಟತಾಳ
ರಮಣ ಕೇಳ್ ನಿತ್ಯದಿ ಶಶಿಯ ನಿಂದಿಪ ನಿನ್ನ |
ಸುಮುಖವಿಂದಿನ ದಿನದಿ ||
ವಿಮುಖವಾಗಿರುವ ಕಾರಣವೇನು ಪೇಳೆನೆ |
ರಮಣಿಗೆಂದನು ಖೇದದಿ ||12||
ಇಂದುವಿಲ್ಲದ ರಾತ್ರಿಯರವಿಂದ ವಿರಹಿತ |
ದಿಂದಿರ್ಪಕೊಳನಂದದಿ |
ನಂದನರಿಲ್ಲದಾತನ ಬಾಳ್ವೆ ಎಂಬುದ |
ರಿಂದ ಚಿಂತಿಪೆ ಮನದಿ ||13||
ಎನಲೆಂದಳರಸ ಕೇಳ್ ದುಃಖಂಗಳೇತಕೆ |
ತನಯರಪ್ಪರೆ ಪೂರ್ವದಿ ||
ಮನುಮಥಾರಿಯ ಪೂಜಿಸಿದ ಫಲಬೇಕೆನೆ |
ವನಿತೆಗೆಂದನು ದುಃಖದಿ ||14||
ಸತಿಯೆ ಕೇಳ್ ಮಕ್ಕಳಿಲ್ಲದೆ ನಾಕವಿಲ್ಲೆಂದು |
ಶ್ರುತಿಮತವೆನ್ನಮೇಲೆ |
ಕ್ಷಿತಿಯ ಪಾಲಿಪರ್ಯಾರು ಎನಲೆಂದಳಾಗ ಭೂ ||
ಪತಿಗೆರಡನೆಯ ಬಾಲೆ ||15||
ಅರಸ ಕೇಳ್ ನಿನ್ನಯ ನುಡಿ ಸತ್ಯಗರ್ಭವ |
ಧರಿಸಿ ಬಾಲರ ಪಡೆದು ||
ವರಪುಷ್ಪಯುತವಾದ ಲತೆಯವೋಲ್ಮೆರೆಯವ ||
ತರುಣಿಯ ಪುಣ್ಯವದು ||16||
ಮೊಲೆಯನಿತ್ತಪ್ಪಿ ಮುದ್ದಿಸಿ ತೊಟ್ಟಿಲೊಳಗಿಟ್ಟು |
ಸಲೆ ಜೋಗುಳವ ಪಾಡುತ್ತ ||
ನೆಲೆ ಇಲ್ಲದಾನಂದದಿರ್ಪುದೆಲ್ಲರ್ಗೆ |
ದೊರಕುವುದಿಲ್ಲ ಕಾಂತ ||17||
ಎನಲೆಂದಬಲೆ ಕೇಳ್ ಬಾಲಕರಿಲ್ಲದ |
ಮನೆಯೊಳಗಿಹುದರಿಂದ |
ತೊರೆದು ಸಂಸಾರವ ವನವನ್ನು ಸೇರ್ಪುದೆ |
ಘನಸೌಖ್ಯ ಮನುಜಗೆಂದ ||18||
ಭಾಮಿನಿ
ವನಿತೆಯರಿಗಿಂತೊರೆದು ಸಚಿವರು |
ಘನತವಕದಿಂ ಕರೆಸಿ ನುಡಿದನು |
ವನಕೆ ಪೋಪೆನು ರಾಜ್ಯವನು ನೀ ವಾಳಿ ಎಂದೆನುತ ||
ಅನುಮತಿಯ ನೆರೆಪಡೆದು ಮುನಿಗಳ |
ನನವರತಮಾಶ್ರಯಿಸಿ ಸದ್ಗತಿ |
ಯನು ಪಡೆವೆನೆಂದೆನುತ ಸತಿಯರ ಕೂಡಿ ಪೊರವಂಟ ||19||
ರಾಗ ಸಾಂಗತ್ಯ ರೂಪಕತಾಳ
ಅರಸನೀ ಪರಿಯಿಂದ ವನಕೆಂದು ಪುರದಿಂದ | ಪೊರಮಟ್ಟು ಬರೆ ಮುಂದೆ ಪಥದಿ ||
ವರವಿಶ್ವಾಮಿತ್ರನ ಕಂಡಡಿಗೆರಗಲು | ಪರಸುತ್ತ ಪೇಳ್ದ ಸಂತಸದಿ ||20||
ಜನನಾಥ ಕೇಳ್ ಸತಿಯರು ಸಹ ಚತುರಂಗ | ವನು ಬಿಟ್ಟು ಪಯಣವಾವೆಡೆಗೆ ||
ಎನಗೆ ಪೇಳ್ ನಿನ್ನಯ ಮುಖವ್ಯಾಕೆ ಕುಂದಿರ್ಪು | ದೆನಲೆಂದ ವಂದಿಸ ಮುನಿಗೆ ||21||
ತರಳರಿಲ್ಲದೆ ಮರ್ತ್ಯರಿಹಪರವೆರಡರೊಳ್ | ದೊರೆವುದೆ ಸುಖವದರಿಂದ |
ಪೊರಟೆನುವನಕೆ ಸದ್ಗತಿಯನಾರ್ಜಿಪೆ ನಿಮ್ಮ | ವರ ಸೇವೆಯಿಂದೆನಲೆಂದ ||23||
ಅರಸ ಕೇಳ್ ನಿನ್ನಯ ನುಡಿ ಸತ್ಯಸಂಸಾರ | ತರುವು ಸಂತಾನ ಪುಷ್ಪವನು |
ಹೊರತು ಶೋಭಿಸುವುದಿಲ್ಲ ನಿನ್ನಿಷ್ಟವನು ಶಂಭು | ಕರುಣಿಪನೆನುತ ಕೌಶಿಕನು ||24||
ಜನಪನ ಸಂತೈಸಿ ಪರಮಾತ್ಮ ಪಾದಾಬ್ಜ | ವನು ನೆನೆಯುತ್ತಿರಲಾಗ |
ಇನಿತಾದ ಮಾವಿನ ಪೆಣ್ಣೊಂದು ಬಿದ್ದುದು | ಮುನಿಪನಂಕದೊಳತಿ ಬೇಗ ||25||
ತೆರೆದು ಕಂಗಳನು ಪಣ್ಣನು ಭೂಪಗಿತ್ತೆಂದ | ನೆರೆ ನಿನ್ನ ಮನದಿಷ್ಟವಹುದು |
ಮರೆಯ ಮಾತಲ್ಲ ನಿನ್ನರಸೀಯರ್ಗೀಯೆನೆ | ಎರಗಿದ ನಪತೋಷವೆರೆದು ||26||
ವಾರ್ಧಕ
ಚರಣದೊಳ್ ಬಿದ್ದ ಭೂಪನನಪ್ಪಿ ಗಾಧಿಜಂ |
ಪರಸಿ ಬೀಳ್ಕೊಟ್ಟನುತ್ಸಹದಿಂ ಮಹೀಶ್ವರಂ |
ಪುರಕೈದಿ ಪತ್ನಿಯೋರ್ವಳಿಗೀಯೆ ಭೇದವಂ ಮಾಡಿದಘ ಬರ್ಪುದೆಂದೂ ||
ಭರಿತ ಸಂತೋಷದಿಂ ಸೌಧಪ್ರದೇಶವಂ |
ವಿರಚಿಸುತ ಚೂತಫಲಮಂ ಭಾಗಮಂ ಮಾಡಿ |
ತರುಣಿಯರಿಗಿತ್ತಾ ಪರೀಕ್ಷಿತ ಕುಮಾರ ಕೇಳ್ ಮುಂದಾದ ಕೌತುಕವನೂ || ||27||
ಭಾಮಿನಿ
ಧರಿಸಿದರು ಗರ್ಭವನು ಭೂಮಿಪ |
ನರಸಿಯರು ಸೀಮಂತ ಮೊದಲಹ |
ಪರಮ ಶುಭಕರ್ಮವನು ಮಾಡಿಸಿದನು ಮಹೀಪಾಲ ||
ಇರುತಿರಲು ನವಮಾಸ ತುಂಬಿದು |
ದರಸ ಕೇಳ್ ಸೀಳೆರಡ ಬೆಸನಾ |
ದರು ಕಲಾವತಿ ಭಾನುಮತಿಯರು ಸೂತಿಕಾಗ್ರಹದಿಂ ||28||
ರಾಗ ಭೈರವಿ ಝಂಪೆತಾಳ
ಎರಡು ಸೀಳುದಿಸಿದುದ | ತರುಣಿಯರು ಪರಿಕಿಸುತ |
ಅರಸಗರುಹಲು ಕೇಳಿ | ಭರದಿ ನಡೆತಂದೂ ||29||
ತನುಜನಿರವನು ಕಂಡು | ಘನಖೇದಗೊಳುತೆಂದ |
ಜನರೆಲ್ಲ ನೋಡಿದಿರೆ | ಘನತರಾದ್ಭುತವಾ ||30||
ಮುನಿಪನಿತ್ತನು ಫಲವ | ತನುಜರುದಿಸುವರೆಂದು |
ಘನತೋಷಗೊಂಡಿರ್ದೆ | ಮನದಿ ನಾನಿರುತಾ ||31||
ಜಾತರೂಪವ ಕಂಡು | ಪ್ರೀತಿ ಬಡುವರೆ ಜಗದಿ |
ಜಾತಕಿಗಳಿಂಗಹುದೇ ಬೀತುದಭಿಲಾಷೆ ||32||
ಎನುತ ಚರಜನರಿಂಗೆ | ಜನಪ ನೇಮವನಿತ್ತ |
ತನುಭವನ ಸೀಳ್ಗಳೆರಡನು ಬಿಸುಡಿರೆನುತಾ ||33||
ಕಂದ
ಅರಸನ ನೇಮವ ಚಾರರ್ ಧರಿಸುತ |
ಸೀಳೆರಡಂ ಕೊಂಡೈದಳಲುತ್ತಂ |
ಗೋಪುರದಾಚೆಗೆ ಬಿಸುಡುತ ತಾವ್ |
ತಿರುಗಿ ಪೊಕ್ಕರ್ನಿಜಗ್ರಹಮಂ ಚಿಂತಿಸುತಂ || ||34||
ವಾರ್ಧಕ
ಅರಸ ಕೇಳಾದುದನಿತರೊಳಸ್ತಮಯ ಸಮಯ |
ಮರವಿಂದ ತಲೆ ಮುಗ್ಗಿದವು ಘೂಕ ಸಂಕುಲಂ |
ಪರಿಕಿಸಿದವೆಣ್ದೆಸೆಯನುರಿದುಳಿದ ಕೆಂಡಮನೆ ತರಣಿ ಮಂಡಲವೆಸೆದುದೂ ||
ಧರೆಯನಾವರಿಸಿತು ತಮಸ್ಸಂಘ ಜಾರೆಯರ್ |
ತಿರುಗತೊಡಗಿದರು ತನ್ನೊಳ್ ಪೊಕ್ಕ ಕತ್ತಲೆಯ
ಹರಿಪ ಭಾಸ್ಕರನ ಚಾರಕರೆಂಬವೋಲ್ದೀಪನಿಕರ ಮನೆಮನೆಗೆಸೆದುದೂ ||35||
ರಾಗ ಕೇದಾರಗೌಳ ಝಂಪೆತಾಳ
ಇಂತೆಸವ ಯಾಮಿನಿಯೊಳೂ | ಜನರು ಗತ | ಚಿಂತೆಯಿಂ ಪವಡಿಸಿರಲೂ |
ಅಂತಕನ ಸಹಚರಿಯೊಲೂ | ಮೆರೆದ ಜರೆ | ಸಂತಸದಿ ನಡುವಿರುಳೊಳೂ ||36||
ಹುಡುಕುತ್ತ ಮಾಂಸವನ್ನೂ | ಮಾನಸದಿ | ನುಡಿದಳೀ ದಿನದಿ ನರನೂ ||
ತೊಡಕಿದರೆ ಯನ್ನ ಕೈಗೆ | ಸತ್ವರದಿ | ಪಿಡಿದವನ ಕೊಂದು ಮೇಗೆ ||37||
ಎದೆಯ ಗುಂಡಿಗೆಯ ಮುರಿದೂ | ನುಗ್ಗರಿದು | ಬದಿಯಲುವ ಕರುಳ ತೆಗೆದೂ ||
ಕುದಿಸಿ ಪಾಕವನು ಮಾಡಿ | ಭುಂಜಿಸುವೆ | ಮುದದಿ ಬಂಧುಗಳ ಕರೆದೂ ||38||
ಎನತಸುರೆ ಮುಂದೆ ಬರುತಾ | ಈ ಭೂಪ | ತನುಭವನ ಸೀಳ್ ಕಾಣುತಾ ||
ಮನದೊಳಾಶ್ಚರ್ಯಗೊಳುತಾ | ಸೀಳ್ದವರ್ | ತಿನಲಿಲ್ಲವ್ಯಾಕೆನ್ನುತಾ ||4||
ತುಡುಕುವಾ ಸೀಳೆರಡನೂ | ಸಂಧಿಸಲು | ಮಿಡಿಕೇರಿ ಭೂಪಸುತನೂ ||
ಗುಡುಗು ಜರಿವಂತೊದರಲೂ | ಝೇಂಕಿಸಿತು | ಕಡು ರಭಸವಾ ನಿಶೆಯೊಳೂ ||39||
ವಾರ್ಧಕ
ಜನಮೇಜಯಾಖ್ಯ ಭೂಪಾಲ ನೀ ಲಾಲಿಸೈ |
ಜನರೆಲ್ಲ ನಿದ್ರೆ ತಿಳಿದೆದ್ದೂರ ಬಾಹ್ಯದೊಳ್ |
ಘನಶಬ್ದವೇನೆಂದು ದೀವಿಗೆಯ ಬೆಳಕಿನಿಂ ಬಂದು ಖಳೆಯನ್ನು ಕಂಡೂ ||
ಮನದೊಳಂಜುತ್ತ ಹಿಂಜರಿಯೆ ಸುಪ್ರೇಮದಿಂ |
ದನುಜೆ ಕರೆದೆಂದಳೀ ಬಾಲಕಂ ಮತ್ಸುತಂ |
ಜನಪ ಬರಲೊಡನೀತನಂ ಕೊಡುವೆನೆನೆ ಚಾರರೊರೆಯೆ ನಪನೈತಂದನೂ ||40||
ರಾಗ ಸೌರಾಷ್ಟ್ರ ತ್ರಿವುಡೆತಾಳ
ಬಂದ ಭೂಪಾಲಕನನೀಕ್ಷಿಸು | ತೆಂದಳಸುರೆ ಮಹೀಶ ಕೇಳ್ತವ |
ನಂದನನ ಸೀಳೆರಡನೀಗಾ | ಪೊಂದಿಸಿದೆನೂ ||41||
ಕರೆವುದೀತಗೆ ನನ್ನ ಪೆಸರಲಿ ಜರೆ | ಎನಿಪ ಅಭಿದಾನ ಯನ್ನದು |
ವರಜರಾಸಂಧಾಖ್ಯನಿವ ರಿಪು | ಹರನೆನಿಪನೂ ||42||
ಎನುತ ಬಾಲನ ಕೊಡಲು ಮನ್ನಿಸಿ | ದನುಜೆಯನು ಪುರಕೊಯ್ದು ತನ್ನಯ |
ತನುಜ ಸಹಿತೆಸೆದಿರ್ದ ಮನೆಯೊಳು | ಜನಪ ಮುದದೀ ||43||
ಭಾಮಿನಿ
ಭೂಪ ಕೇಳೈ ಬಳಿಕ ಮಾಗಧ
ಭೂಪ ಯೌವನವಂತನಾಗಿರೆ ಶಿ
ವಾಪತಿಯ ತಪದಿಂದ ಮೆಚ್ಚಿಸಿ ಪಡೆದು ಮೂವರವ |
ದ್ವೀಪ ಸಪ್ತಕದೊಳಗೆ ಮಲೆತ ಮ |
ಹೀಪತಿಗಳನು ತಂದು ಬಂಧಿಸು |
ತಾಪರಾಕ್ರಮಿ ಸುಖದಿ ರಾಜ್ಯವನಾಳತೆಸೆದಿರ್ದ || ||44||
ವಾರ್ಧಕ
ಜನಮೇಜಯಾಖ್ಯ ಕೇಳೈ ಯುಧಿಷ್ಠಿರ ನಪಂ |
ಜನಪ ಕೌರವನಿಂದ ದಾಯಭಾಗಂಗೊಂಡು |
ಅನಿಮಿಷೇಂದ್ರಪ್ರಸ್ಥಕರಸಾಗಿ ರಾಜ್ಯಮಂ ಸಲಹುತಿರೆ ಹರಿಯ ದಯದೀ |
ವಿನಯದಿಂ ಮಯಬಂದು ಪುರವ ಶಂಗರ ಗೈದು |
ಅನಿಲಜಾರ್ಜುನರಿಂಗೆ ಗದೆ ದೇವದತ್ತಮಂ |
ಕೊಟ್ಟು ಪುರಕೈದಲಿತ್ತಲವರೆಡೆಗೆ ನಾರದನೊಂದಿನಂ ಬಂದನೂ ||45||
ಕಂದ
ಸುರಮುನಿ ಬಂದುದ ಕಂಡಾ
ಧರಣಿಪ ಪೀಠವನಿಳಿದನುಜರು ಸಹ | ಮುನಿಯಂ |
ಕರೆತಂದಾಸನವಿತ್ತುಪಚರಿಸಲ್
ಪರಸುತ ನಾರದ ಯಮಜನೊಳೆಂದಂ ||46||
ರಾಗ ಶಂಕರಾಭರಣ ಏಕತಾಳ
ಭೂಮಿಪಾಲ ಕೇಳು ನಿನಗೆ | ಕ್ಷೇಮವೆ ಭೀಮಾದ್ಯರ್ನಿನ್ನ |
ನೇಮದಂತೆ ಇಹರೆ ಸುಖವೆ | ಸೀಮೆಯೊಳೆಲ್ಲಾ ||47||
ಸ್ವಾಮಿ ತಮ್ಮ ದಯದಿ ಸರ್ವ | ಸೀಮೆ ಸುಖದೊಳಿಹುದು ಪಾರ್ಥ |
ಭೀಮ ನಕುಲರೆಲ್ಲ ಎನ್ನ | ನೇಮಕೆಡರಿಲ್ಲ ||48||
ಅರಸುತನದ ನೀತಿಗಳನು | ತರಣಿ ಜಾತಸುತಗೆ ವಿಧಿಯ |
ತರಳ ಸಾಂಗವಾಗಿ ಪೇಳ್ದ | ಹರುಷದಿಂದಲೀ ||49||
ಅರಸ ಮಗುಳೆ ಕೇಳ್ದ ನೀಗ | ತಿರುಗಿದಿರೆಲ್ಲೆಲ್ಲಿ ನಿಮ್ಮ |
ಬರವಿದೆಲ್ಲಿಂದಾದುದೆಂದು | ಕರುಣದಿ ಪೇಳೈ ||50||
ವನಜನಾಭ ರುದ್ರಕಮಲ | ತನುಜಶಕ್ರರೂರ ತೊಳಲಿ |
ಇನಜಪುರವ ಪೊಕ್ಕು ಬಂದೆ | ಜನಪ ಕೇಳೆಂದಾ ||51||
ಮುನಿಪ ಕೇಳೂ ನಮ್ಮ ಪೂರ್ವ | ಜನಪರಾರ ಪುರದೊಳಿರ್ಪ |
ರ್ಜನಕನಾವ ನಗರವಾಸಿ | ಎನಿಸಿರ್ಪನೆಂದ ||52||
ಅನಿಮಿಷೇಶ ಪುರದಿ ಪೂರ್ವ | ಜನಪರಿಹರು ಸುಖದಿ ನಿಮ್ಮ |
ಜನಕ ಯಮನಪುರದಿದುಖ್ಖೀ | ಎನಿಸಿರ್ಪಾನೆಂದಾ ||53||
ಇನಜಪುರದೊಳ್ಯಾಕೆ ವಾಸ | ಜನಕಗಯ್ಯೋ ಸರ್ವಕಷ್ಟ |
ಜನಪರೊಳಾರ್ಪಿರಿದು ಸುಖಿ | ಗಳೆನಗೆ ಪೇಳೆಂದಾ ||54||
ವರಹರಿಶ್ಚಂದ್ರಾಖ್ಯಭೂಪ | ಸುರಪಗಿಂತ ಸುಖದೊಳಿರ್ಪ |
ಸುರರು ಇವನ ಬಹಳ ಸ್ತುತಿಸು | ತ್ತಿರುವರ್ಕೇಳೆಂದಾ ||55||
ಪಿರಿದು ಸೌಖ್ಯವಾ ತ್ರಿಶಂಕು | ತರಳಗೆಮ್ಮಯ್ಯಂಗೆ |
ದುಃಖ ದೊರಕಿತ್ಯಾಕೆ ಪಿತನ ಕಷ್ಟ | ಹರಿವುದೆಂತೆಂದಾ ||56||
ವಾರ್ಧಕ
ಈ ತೆರದೊಳಾ ಭೂಪ ಬೆಸಗೊಳಲ್ ಪ್ರೇಮದಿಂ
ದಾ ತಾಪಸೋತ್ತಮಂ ಪೇಳ್ದನೆಲೆ ರಾಯ ಕೇಳ್
ಆ ತರಣಿವಂಶಜರ ರಾಜಸೂಯಾಧ್ವರದಿ ಪಿರಿದು ಸೌಖ್ಯವ ಪಡೆದನೂ ||
ಭೂತಳಾಧಿಪ ಪಾಂಡುವಿನ ಕುಷ್ಠರೋಗದಿಂ |
ಪ್ರೇತಪುರಮಾದುದಾ ಮಹಾಯಜ್ಞಮಂ |
ನೀ ತಳುವದೆಸೆಗೆ ನಿಮ್ಮಯ್ಯಗಾತನವೊಲ್ ಘನಸೌಖ್ಯವಹುದೆಂದನೂ ||57||
ವಚನ
ಈ ರೀತಿಯಿಂದಾ ನಾರದನು ಹೇಳಿಹೋಗಲು ಧರ್ಮ ತನ್ನ ಸಹಚರರೊಡನೆ ಇಂತೆಂದ –
ರಾಗ ನೀಲಾಂಬರಿ ಆದಿತಾಳ
ಅನುಜರಾಲಿಸಿದಿರೆ ಪಾಂಡು | ಜನಪ ಯಮನ ಪುರದೀ |
ಘನದುಃಖದಿಂದಿರ್ಪನೆಂದು | ಮುನಿಪ ಪೇಳ್ದ ಭರದೀ ||58||
ಅರಸರಲ್ಲಿ ಧರ್ಮಸುತಗೆ | ಸರಿ ಇಲ್ಲೆಂದು ಜನರು |
ಒರೆವರಯ್ಯ ಇಂತು ನವೆಯು | ತಿರಲು ನಗರೆ ಸುರರೂ ||59||
ರಾಜಸೂಯವನ್ನು ಮಾಡೆ | ರಾಜಿಪೇಂದ್ರಪುರದೀ |
ತೇಜಸ್ವಿಯಾಗಿರುವನಂತೆ | ರಾಜಪಾಂಡು ಮುದದೀ ||60||
ಮನದೊಳಗದಕೆ ಮಖವ ಮಾಳ್ಪೆ | ನೆನುತ ಸಂಕಲ್ಪವನೂ ||
ಅನುಕರಿಸಿದೆ ನಿಮ್ಮ ಮತವೇ | ನೆನಲು ನುಡಿದ ನರನೂ ||61||
ಭಾಮಿನಿ
ಕಾಲನಂದನ ಕೇಳ್ಧರಿತ್ರೀ
ಪಾಲರೆಲ್ಲರ ಸದೆದು ಮಾಡುವ
ಶೀಲಮಖವಿದು ನಮ್ಮ ಮತದಿಂದೆಸಗೆ ನೆರೆದಪುದೇ ||
ನೀಲಕಂಧರಮಿತ್ತಮುನಿಕುಲ
ಪಾಲ ವರಗೋಪಾಲ ಲಕ್ಷ್ಮೀ
ಲೋಲನಿದಕನುಕೂಲನಾದರೆ ಮಖವತೊಡಗೆಂದಾ ||62||
ವಾರ್ಧಕ
ನರನೆಂದ ವಾಕ್ಯವಂ ಕೇಳ್ದು ಸಂತೋಷವಂ
ಭರಿಸುತ್ತ ನಪನಿಂದ್ರ ಸೇನಂಗೆ ನೇಮವಂ |
ಕರುಣಿಸಿದನಚ್ಚುತನ ಪುರಕೈದಿ ಒಡಗೊಂಡು ಬಾ ಎನುತವಂ ಮುದದೊಳು ||
ವರರಥಾರೂಢನಾಗತಿವೇಗದಿಂ ಬಂದು |
ಹರಿಯ ಪುರವಂ ಪೊಕ್ಕು ಸಭೆಗೆ ನಡೆತಂದು ಮುರ |
ಹರನೋಲಗಂಗೊಂಡಿರಲ್ ಕಾಲ್ಗೆರಗೆ ಬಂದ ಹದನವಂ ಕೇಳ್ದ ಬಳಿಕಿತೆಂದನು ||63||
ರಾಗ ಮುಖಾರಿ ಆದಿತಾಳ
ಕೇಳು ಕೇಳಯ್ಯ ಪೇಳ್ವ ಮಾತಾ | ವಸುದೇವ ಜಾತಾ |
ಕೇಳು ಕೇಳಯ್ಯ ಪೇಳ್ವ ಮಾತಾ ||ಪಲ್ಲವಿ||
ಸುರತಾಪಸೇಂದ್ರ ನಿನ್ನೆ ಬಂದು | ಪೇಳಿದ ಪಾಂಡು | ಧರಣೀಶಗಿಲ್ಲ ನಾಕವೆಂದೂ ||
ಅರಸನದಕೆ ಮನ ಮರುಗಿಯೆ ರಾಜ | ಧ್ವರಮನೆಸಗೆ ನಿಮ್ಮನುಮತಿಯರಿಯಲು |
ಕರೆತಹುದೆಂದೆನುತಟ್ಟಿದನೆನ್ನನು | ಹರುಷದಿ ನೀ ಬಿಜಯಂಗೈ ಎಂದನು ||64||
ಕಂದ
ಅನ್ನೆಗಂ ಮಾಗಧನ ಸೆರೆಯೊಳ್
ಬನ್ನಂಬಡುತಿಹ ನಪರಟ್ಟಿದ ದೂತಂ ತಾ ||
ಪನ್ನಗಶಯನನ ಪಾದದ
ಸನ್ನಿಧಿಗೈದುತಾ ಬಿನ್ನಯಿಸಿದ ಬಂದುದನೂ ||65||
Leave A Comment