ರಾಗ ಸಾರಂಗ ಅಷ್ಟತಾಳ

ಮುರವೈರಿ ಲಾಲಿಸಯ್ಯ | ಕಪಾಕರ | ನರಕಮರ್ದನ ಮಾಪ್ರಿಯ |
ಧರಣೀಶ ಮಗಧನ ಸೆರೆಮನೆಯೊಳಗಿರ್ದ
ಅರಸರ ಹುಯ್ಯಲನು || ನಾ ಪೇಳ್ವೆನೂ ||66||

ಸಮರದೊಳಗೆ ತಮ್ಮನೂ | ಬಂಧಿಸಿ | ತಂದಾ ಕುಮತಿ ಜರಾಸಂಧನೂ |
ರಮೆಯ ವಲ್ಲಭನೆ ಕೇಳ್ ಸೆರೆಯೊಳಗಿಟ್ಟಿಹ |
ಮಮತೆಯಿಂದ ಬಿಡಿಪರನ್ನೂ || ಕಾಣೆವು ನಾವು ||67||

ಧರೆಯ ಭಾರವನಿಳುಹೇ | ಭಕ್ತೌಘನ | ಕರುಣದಿಂದಲಿ ಪೊರೆಯೇ |
ಹರಿಯೇ ಮಾನವನಾಗಿ ಜನಿಸಿರ್ಪನೆಂಬುದ |
ಸುರಮುನಿ ನಾರದನೂ || ಹೇಳಿದನೂ ||68||

ಅದರಿಂದವೆಲ್ಲರೀಗಾ | ವಂದಿಸುವೆವು | ಸದೆದು ಮಾಗಧನ ಬೇಗಾ ||
ಉದಧಿಶಯನನೆ ನಮ್ಮ ಬಂಧನವನು ನೀನೆ
ಮುದದಿಂದ ಬಿಡಿಸೆಂದರು || ಭೂಮಿಪರೂ ||69||

ಕಂದ

ಅರಸರ ದೂತನ ಮಾತಂ
ಮುರಹರ ಕೇಳುತ ಸದ್ಯದಿ ನಿಮ್ಮಯ ಸೆರೆಯಂ ||
ಬಿಡಿಸುವೆನೆನ್ನುತ ಯದುಕುಲ |
ವರನುಸುರಿದನೆಂ ದೊರೆಯೆನ್ನುತ ಕಳುಹಿಸಿದಂ ||70||

ರಾಗ ಕಾಂಭೋಜಿ ಝಂಪೆತಾಳ

ಇಂತೆಂದು ಹೇಳುತ್ತಲಾ ಮುರವೈರಿ | ಕುಂತಿಯಣುಗರ ದೂತಗಂದು |
ಸಂತಸದಿ ಕರೆದೆಂದ ನಾಳೆ ಪೋಗುವುದೀಗ | ನೀ ತೆರಳು ಮಮ ಸದನಕಿಂದು ||71||

ಕರೆದು ಬಲಭದ್ರ ಮುಖ್ಯರಿಗೆಂದ ನಾ ನಾಳೆ | ತೆರಳುವೆನು ಪಾಂಡವರ ಬಳಿಗೆ ||
ಪುರವ ಚೆನ್ನಾಗಿ ಕಾದಿಹುದೆಂದು ಬೀಳ್ಕೊಟ್ಟು | ಸರ್ವರನು ತಂತಮ್ಮ ಮನೆಗೆ ||72||

ರಾಗ ದ್ವಿಜಾವಂತಿ ಝಂಪೆತಾಳ

ಮನೆಗೆ ಸರ್ವರನಿಂತು ಕಳುಹಿ ಮಾಧವನೂ |
ವನಿತೆ ಸತ್ರಾಜಿತನಸುತೆಯ ಭವನವನೂ ||
ಘನವೇಗ ಪೊಕ್ಕಳವನೆರಸಿ ಮಂಚದೊಳು |
ವಿನಯದಿಂದಲೆ ಕುಳಿತು ನುಡಿದ ದೇವಿಯೊಳೂ ||73||

ತರುಣಿ ಕೇಳ್ ಧರ್ಮಸುತ ರಾಜಸೂಯವನು |
ವಿರಚಿಪಡೆ ಕರಸಿರ್ಪ ಪೋಗಬೇಕಾನು |
ಧರಣಿಪತಿ ಮಾಗಧನ ಸೆರೆಮನೆಯೊಳಗೇ |
ಇರುವ ಭೂಪರ ದೂರು ಬಂದಿಹುದು ನಮಗೇ ||74||

ಎನಲೆಂದಳರಸ ಕೇಳ್ ತನಗಿಲ್ಲದಿರುವಾ |
ಬಿನುಗು ದೇವತೆ ಪರರಿಗೀಯುವದೆ ವರವಾ |
ಎನುವ ಗಾದೆಯನೊಂದ ಕಂಡೆನಿಂದಾನು |
ಜನಪ ಮಾಗಧಗಂಜಿ ಊರ ಬಿಡೆ ನೀನೂ ||75||

ಘನದೈವ ನೀನೆಂದು ಮರುಳಾಗಿ ನಪರೂ |
ನಿನಗೆ ದೂರಿದರವರು ಎಂತುಪಾರಹರೋ ||
ಜನಪರರಿಯರು ನಿನ್ನ ಮಹಿಮೆಗಳೆನಗೆ |
ಮನನವಾಗಿಹುದೆಂದು ನುಡಿದಳ್ ವಲ್ಲಭಗೆ ||76||

ಅರಸಿ ಲಾಲಿಸು ನಿನ್ನ ಹಾಸ್ಯವಂತಿರಲಿ |
ಮರುತನಂದನನಿಂದ ಅವನ ಯುದ್ಧದಲಿ ||
ತರಿಸಿ ಕಾರದೊಳಿರ್ದ ಧರಣಿಪಾಲರನೂ |
ಪೊರೆದು ಪಾಂಡವರ ಮಖವನ್ನು ಸಾಗಿಪೆನೂ ||77||

ಭಾಮಿನಿ

ವನಿತೆಗಿಂತೊರೆದಚ್ಚುತನು ಮರು |
ದಿನದೊಳಾ ಪಾಂಡವರ ನಗರಕೆ |
ಘನತವಕದಿಂ ಬಂದನೆಂತೋ ಭಜಿಪರೊಳು ಮಮತೇ ||
ಇನಜಸುತಗಿದನೈದೆ ಚಾರಕ |
ಜನರೊರೆಯೆ ಸಂತೋಷದಿಂ ತ |
ನ್ನನುಜ ಬಾಂಧವ ಜನರು ಸಹಿತಿದಿರಾಗಿ ನಡೆತಂದಾ || ||78||

ವಾರ್ಧಕ

ಕಮಲದಳನೇತ್ರನಂ ಜಲಜನಿಭಗಾತ್ರನಂ |
ಸಮಬಾಣತಾತನಂ ಮೂರ್ಲೋಕತಾತನಂ |
ತಮದೈತ್ಯ ವಿಧ್ವಂಸನಂ ಪರಮಹಂಸನಂ ಲಕ್ಷ್ಮೀಮನೋಹರನನೂ |
ಕಮಲದಳಮಿತ್ರನಂ ಕಮಲನಿಭವಕ್ತ್ರನಂ |
ಕಮಲಚರಣರೂಪನಂ ಕುಮತಿ ಹತ್ತಾಪನಂ |
ಅಮರೇಂದ್ರ ಪಾಲನಂ ದೈತ್ಯಕುಲಕಾಲನಂ ಭೂಪನಿದಿರೋಳ್ಕಂಡನೂ || ||79||

ರಾಗ ಸಾರಂಗ ಅಷ್ಟತಾಳ

ಇದಿರಾಗಿ ಬರುವ ಮಾಧವನನ್ನು | ಕಂಡು | ಮುದದಿಂದ ಧರ್ಮಕುಮಾರನೂ ||
ಅಧಿಕ ಭಕ್ತಿಯಲಿ ವಂದಿಸೆ ಕಂಡು | ಬಂದು | ಮಧುವೈರಿ ತಕ್ಕವಿಸಿದನಂದೂ ||80||

ಚರಣಕ್ಕೆ ಮಣಿದ ಭೀಮಾದ್ಯರಾ | ಅಪ್ಪಿ | ಮುರವೈರಿ ಬಳಿಕ ಭಾವಂದಿರಾ |
ಕರವ ಪಿಡಿದು ಪೊಕ್ಕ ಸಭೆಯನ್ನು | ದಿವ್ಯ ಹರಿಪೀಠದಲಿ ಕುಳಿತೆಂದನೂ ||81||

ಧರಣೀಶ ಕೇಳಿಂದು ನಮ್ಮನೂ | ನೀನು | ಕರಸಿದ ಮೂಲಕಾರಣವೇನು ||
ಕುರುಸೇನೆಯಲಿ ದಾನವರೊಳು | ಭೀತಿ | ದೊರಕಿತೆ ಎನಲೆಂದ ಹರಿಯೊಳೂ ||82||

ನೀ ತಿಳಿಯದ ಮರ್ತ್ಯನಂತಿದೂ | ಕೇಳ್ವು | ದ್ಯಾತಕೆ ನಾರದಮುನಿ ಬಂದೂ ||
ತಾತಗೆ ದಿವದೊಳಿಂಬಿಲ್ಲೆಂದೂ | ಪೇಳ್ದ | ಭೂತಳಾಧಿಪಯಾಗ ಗೈ ಎಂದೂ ||83||

ಮನದೊಳದಕೆ ರಾಜಸೂಯವ | ಮಾಳ್ಪ | ನೆನುತ ಮಾಡಿದೆನು ಸಂಕಲ್ಪವ |
ಎನಗೆ ನಿಮ್ಮಭಿಮತದಂದವ | ಪೇಳಿ | ಎನಲೆಂದನಾಗ ರಮಾಧವ ||84||

ರಾಗ ಕಲ್ಯಾಣಿ ಅಷ್ಟತಾಳ

ವನಜಾರಿ ಕುಲರತ್ನ ಕೇಳೂ | ದೇವ | ಮುನಿಪ ನಾರದನ ಮಾತಿನೊಳೂ ||
ಮನುಜೇಶಯಾಗವ ಮಾಡುವೆನೆನೆ ಸರ್ವ |
ಜನಪರೊಪ್ಪುವರಲ್ಲ ನಿನಗ್ಯಾಕೆ ಮಖದಾಸೆ ||85||

ಪರರ ಮಾತಂತಿರಲಿಂದೂ | ನಿಮ್ಮ | ವರು ನಿಮ್ಮ ಸಿರಿಯನ್ನೆ ಕಂಡೂ ||
ಹರುಷಗೊಂಬರೆ ಮಾಗಧನ ಮನೆಯೊಳಗತ್ತ |
ದುರುಳ ಕಂಸನ ಕೆಟ್ಟ ಪರಿವಾರವಿರ್ಪುದು ||86||

ವೀರ ಮಾಗಧ ಶಿಶುಪಾಲಾ | ಮತ್ತೆ | ಧಾರುಣಿಪುತ್ರನ ಬಾಲಾ ||
ಘೋರವಿಕ್ರಮಸಾಲ್ವ ಮುಂತಾದ ಭೂಮಿಪ |
ಪರಿವಾರ ಯಜ್ಞಕ್ಕೆ ಮುನಿಯದಿರ್ಪರೆ ಪೇಳು ||87||

ವಿಗಡರಾದೆಲ್ಲರಸರೊಳು | ಚೈದ್ಯ | ಮಗಧರೀರ್ವರೆ ಸಾಹಸಿಗಳು ||
ಪಗೆಗಳಿಬ್ಬರೆ ನಮ್ಮ ಮಖಕೆ ಮಿಕ್ಕವರೆಲ್ಲ |
ಹಗರಣ ಮಾಡಿದರಂಜಿಕೆ ನಮಗಿಲ್ಲಾ ||88||

ಅವರಿಬ್ಬರೊಳಗೆ ಮಾಗಧನೂ | ವೀರ | ನವನ ಗೆಲ್ಲುವ ಸಾಹಸಿಗಳನು ||
ಅವನಿಯೊಳ್ ನಾ ಕಾಣೆ ಮಧುರೆಯ ಬಿಟ್ಟು ನಾ |
ವವನ ಭೀತಿಯೊಳ್ ಗೈದೆವಬ್ಧಿಯೊಳ್‌ಭವನವಾ ||89||

ಕೊಂದೆವು ನಾವು ಕಂಸನನೂ | ಆತ | ನಿಂದುಮುಖಿಯರು ಹುಯ್ಯಲನೂ ||
ತಂದೆಗೊರೆಯೆ ಮಧುರೆಯ ಮೇಲೆ ದಂಡೆತ್ತಿ |
ಬಂದೆಮ್ಮ ಗೆಲ್ದನು ಹದಿನೆಂಟನೆ ಬಾರಿ ||90||

ಅನುಚರರ್‌ನಾವ್ ನಿಮಗೆಂದೂ | ಆತ | ಮುನಿಯದೆ ಬಿಡನವನಿಂದೂ ||
ಇನಜನ ಪುರವನಿತ್ತನಕ ಸಾಗದು ಯಜ್ಞ |
ಘನಸಾಹಸಿಗಳ ಕಾಣೆನು ನಮ್ಮಲ್ಲೀ ||91||

ಭಾಮಿನಿ

ಇನಿತು ಘನವೇ ಕೃಷ್ಣಯಾಗಕೆ |
ಜನಪರುಪಟಳ ನಿನ್ನ ಕೈಯ್ಯಲೀ |
ದನುಜರಗಣಿತ ಮಡಿದರೀ ಮಾಗಧ ನಪಾಲಕರೂ |
ನಿನಗೆ ಮಣಿಯರೆ ಶಿವ ಮಹಾದೇ |
ವೆನಗೆ ನಪಮಖದಾಸೆ ಯಾಕೆನೆ |
ಇನಜಸುತನಡಿದಾವರೆಗೆ ಮಣಿದೆಂದನಾ ಭೀಮ ||92||

ರಾಗ ಮಾರವಿ ಏಕತಾಳ

ಪೊಡವಿಪ ಕೇಳ್ತವ ಸಂಕಲ್ಪಂಗಳ | ಕೆಡಿಸುವರಾರ್ಜಗದೀ |
ಕೊಡು ನೇಮವ ನಿನಗಹಿತನ ಮಗಧನ | ಕೆಡಹುವನೀಕ್ಷಣದೀ ||93||

ನರಹರಿ ಪಾದಾಂಬುಜ ದಯ ನಿನ್ನಲಿ | ಪಿರಿದಾಗಿರಲಿಂದೂ ||
ಧರಣೀಶರು ಮುನಿದೆಸಗುವರೇಂ ಮುರ | ಹರ ನಸುನಗುತಂದು ||94||

ಉಸುರಿದನೆಲೆ ಮರುತನ ಕೇಳ್ಮಾಗಧ | ವಸುಧೇಶನ ನೀನೂ |
ಅಸುಗೊಂಡರೆ ಮಿಕ್ಕವರಾರ್ಗೆಲ್ಲುವ | ರುಸುರೆನೆ ಫಲುಗುಣನೂ ||95||

ಒರೆದನು ಮಾಧವ ಕೇಳ್ತವ ದಯವಿರೆ | ತರಿದುಳಿದರಸರನೂ |
ನೆರಪುವೆ ವಿತ್ತವನಧ್ವರಕೆಂದನು | ತಿರುಗಿ ಮುರಾಂತಕನೂ ||96||

ನುಡಿದನು ಧರ್ಮಜ ಲಾಲಿಸು ಮಾಗಧ | ರೊಡೆಯಗೆ ಪವನಜಗೇ |
ಪಡಿಯಪ್ಪುದು ಬಲಗೆಲ್ಲುವನಾತನ | ಕೊಡು ವೀಳ್ಯವನಿವಗೆ ||97||

ಬಹುಜಗ ಭೂಮಿಪರಾತನ | ಕಾರದೊಳಿಹರವರೆಲ್ಲರನೂ ||
ವಹಿಲದಿ ಬಿಡಿಸಲು ಕರಸಹ ಯಜ್ಞಕೆ | ಬಹರೆನೆ ಧರ್ಮಜನೂ ||98||

ಭಾಮಿನಿ

ಕನಕಪಾತ್ರೆಯೊಳಿತ್ತು ವೀಳ್ಯವ |
ನನಿಲಜಗೆ ಹರಿದಯದಿ ಮಾಗಧ |
ಜನಪನನು ಜೈಸೆನುತ ಮಧುಸೂದನನ ಹಸ್ತದಲಿ ||
ಅನುಜರನು ಕೊಟ್ಟೆಮ್ಮ ರಕ್ಷಿಪು |
ದೆನುತ ಸೇನೆಯ ನೆರಪಿ ಮುರಮ |
ರ್ದನಗೆ ಸೇನಾಧಿಪತ್ಯವಗಟ್ಟಿ ಬೀಳ್ಗೊಟ್ಟಾ ||99||

ಭೂಪ ಕೇಳೈ ಬಳಿಕ ಮಾಗಧ |
ಭೂಪ ಯೌವನವಂತನಾಗಿ ಶಿ |
ವಾಪತಿಯ ತಪದಿಂದ ಮೆಚ್ಚಿಸಿ ಪಡೆದು ಮೂವರವಾ ||
ದ್ವೀಪಸಪ್ತಕದೊಳಗೆ ಮಲೆತ ಮ |
ಹೀಪತಿಗಳನು ತಂದು ಬಂಧಿಸಿ |
ಆ ಪರಾಕ್ರಮಿ ಸುಖದಿ ರಾಜ್ಯವನಾಳುತೆಸೆದಿರ್ದಾ ||100||

ಕಾಲಜಾತನ ಬೀಳುಗೊಂಡಾ |
ಕಾಲನೇಮಿ ವಿರೋಧಿ ಬಲ ಸಹ |
ಭಾಲಲೋಚನ ವರದಿ ಬಲ್ಲಿದ ಮಾಗಧೇಶ್ವರನಾ ||
ಶೀಲರಾಜ್ಯವ ಪೊಕ್ಕು ಸೇನಾ
ಜಾಲವನು ಪಿಂದುಳಿದ ಮಗಧನ |
ಮೂಲಬಲವೆಂದೆನಿಪ ಭೇರಿಗಳಿರುವ ಗಿರಿಗಡರ್ದಾ ||101||

ರಾಗ ಶಂಕರಾಭರಣ ತ್ರಿವುಡೆತಾಳ

ಅರಸ ಕೇಳ್ ಹರಿ ಪಾರ್ಥಭೀಮರು | ಗಿರಿಯನೇರುತ್ತಿದಿರಲಿ |
ಅರಿಭಯಂಕರ ಭೇರಿಗಳು ಮೂ | ರಿರಲುಕಂಡರು ಸನಹದೀ ||102||

ಅದ ನಿರೀಕ್ಷಿಸಿ ಪಾರ್ಥ ಕೇಳಿದ | ಮದನಪಿತ ಕೇಳಿವುಗಳೂ ||
ಅದುಭುತದ ದುಂದುಭಿಗಳೆಂತಿವ | ಗೊದಗಿದವು ಪೇಳೆಂದನೂ ||103||

ಹರಿ ನುಡಿದ ನರಕೇಳು ಪೂರ್ವದಿ | ಕೊರಳು ಮೂರರ ಮಾಷನೂ ||
ಸುರರ ಬಾಧಿಸಲವನ ಮರ್ದಿಸೆ | ಪರಮ ಶಿವನೈತಂದನೂ ||104||

ಶೂಲದಿಂದಾ ಖಳನ ಕಂಠದ | ನಾಳವನು ಕತ್ತರಿಸಲೂ ||
ಕಾಳನಂದದೊಳವನನುಜ ವಷ | ಶೂಲಧರಗಿದಿರಾಗಲು ||105||

ಮೆಟ್ಟಿ ಚರ್ಮವ ಸೀಳಿಯವನೊಡ | ಹುಟ್ಟಿದನ ಮುಕ್ಕೊರಳೊಳೂ ||
ಕಟ್ಟಿ ಭೇರಿಯ ಮಾಡಿ ಪರಶಿವ | ತಟ್ಟಿದನು ಸಂಭ್ರಮದೊಳೂ ||106||

ಭಾಮಿನಿ

ಎಲೆ ಧನಂಜಯ ಕೇಳು ರುದ್ರನ |
ವಲಿಸಿ ಮಾಗಧ ಪಡೆದನಾತಗೆ |
ಮಲೆತ ವೈರಗಳದರ ಶಬ್ದವ ಕೇಳಲೋಡುವರು ||
ಗೆಲಿದನವನದರಿಂದ ರಿಪುಗಳ |
ನೆೆಲಕಿದರ ಬಡಿದಿಡುವದನ್ನಕ |
ಸಲೆ ಭಯಂಕರದಾಗದಪಜಯವಾಗದವಗೆಂದಾ ||107||

ಹರಿಯ ಮಾತನು ಕೇಳಿ ಫಲುಗುಣ |
ಮರುತಜರು ಭೇರಿಗಳ ಬಡಿದೆಳೆ |
ಗೊರಗಿಸಿದರಾಧ್ವನಿಗೆ ನಡುಗಿತು ಲೋಕ ಮಾಗಧನಾ ||
ಕರಣ ಕಳವಳಿಸಿದುದು ತೋರಿತು |
ಪುರದಿ ಬಹಳುತ್ಪಾತ ವಿಪ್ರರ |
ಕರೆಸಿ ಬೆಸಗೊಳೆ ಮಾಡು ಶಾಂತಿಯನೆಂದರವನಿಪಗೇ ||108||

ರಾಗ ಭೈರವಿ ಏಕತಾಳ

ಬುಧಜನರಿಂತೆನೆ ಕೇಳ್ದು | ಮಾ | ಗಧನುರೆ ಮುದವನು ತಾಳ್ದು ||
ವಿಧಿಸುವೆ ಘನಶಾಂತಿಯನೂ | ಬಹು | ದುದಯದೊಳೆನುತೆಲ್ಲರನೂ ||109||

ಗ್ರಹ ಕಟ್ಟಿದ ನಿಶಿ ಕಳಿಯೆ | ಆ | ಮಿಹಿರನು ಮುದದಿಂ ಸುಳಿಯೇ ||
ವಹಿಲದಿ ಸಭೆಯೊಳು ನಪನೂ | ತಾ | ಬಹುಜನ ಸಹಿತೊಪ್ಪಿದನೂ ||110||

ಹರಿಭೀಮಾರ್ಜುನರಿತ್ತಾ | ನಿಜ ಪರಿವಾರವನಗಲುತ್ತಾ ||
ಧರೆಯಮರರ ವೇಷವನೂ | ಮೂ | ವರು ಧರಿಸುತ ಬರೆ ಮಾಗಧನೂ ||111||

ಪರಿಜನ ಸಹಿತೊಪ್ಪಿರುವಾ | ಸಭೆ | ಗುರವಣಿಸಲು ನಡೆತರುವ ||
ಧರೆಯಮರರ ಕಂಡೆದ್ದೂ | ನೆರೆ | ಧರಿಣಿಪ ವಂದನೆಗೈದು ||112||

ನಸುನಗುತಿವರ್ಗಳ ಶುಭವಾ | ತಾ | ಬೆಸಗೊಂಡೀಕ್ಷಿಸುತಿರವಾ ||
ವಸುಧಾಮರರಲ್ಲೆಂದೂ | ಚಿಂ | ತಿಸಿದನು ಮನದೊಳಗಂದೂ ||113||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಹರಹರೇನಾಶ್ಚರ್ಯವೀ ಮೂ | ವರು ಧರಾಮರರಲ್ಲವೆಮ್ಮೊಳು ||
ಧುರವ ಬಯಸಿಯೆ ಬಂದ ಭೂಪರು | ಪರಿಕಿಸುವಡೇ ||114||

ಈಗ ಮಿಡುಕುಳ್ಳವರು ಮಹಿಯಲಿ | ನಾಗಪುರದರಸುಗಳು ನಮ್ಮವ ||
ರಾಗಿಹರು ಖಳನಲ್ಲ ಧರ್ಮಜ | ಮೇಗೆ ಜಗದೀ ||115||

ಸಾಗರೋಪಾಂತದ ನರೇಂದ್ರರು | ಭೋಗಿಸಿದ ಮುತ್ತುಗಳು ಭಾವಿಸ ||
ಲೀ ಗಯಾಳರ ಬರವಿಚಿತ್ರವಿ | ದೀಗಳೆಂದಾ ||116||

ಯಾದವರು ಹಿಂದೆಮ್ಮೊಡನೆ ಹಗೆ | ಯಾದವರು ಮತ್ತವರೊಳಗೆ ತುರು |
ಗಾವವನ ಮಾತೇನು ಮಿಕ್ಕಿನ | ಭೂಮಿಪರೊಳೂ ||117||

ಎನಗೆ ಮಲೆತವರಾರು ಎಂದಾ | ಜನಪ ಯೋಚಿಸಿ ಬಳಿಕ ಕಷ್ಣಾ |
ರ್ಜುನ ವಕೋದರರುಗಳ ಕೇಳ್ದನು | ವಿನಯದಿಂದಾ ||118||

ರಾಗ ಕೇದಾರಗೌಳ ಅಷ್ಟತಾಳ

ಧರಣಿಯಮರ ವೇಷದಿಂದ ನೀವೇಕೆನ್ನ | ಪುರಕೆ ಬಂದಿರಿಯದನೂ
ತ್ವರಿತದೊಳುಸುರಿ ಸತ್ಪುರುಷರಾದವರಿಗೆ | ತರವೇ ಕಪಟವೆಂದನೂ ||119||

ಜನಪರು ಕಪಟದೊಳಲ್ಲದೆ ರಿಪುಗಳ | ಮನೆಯನ್ನು ಪೊಗುವರೇನೊ |
ಮನುಜೇಶ ರಿಪುಸಂಗರಕಾಗಿ ಬಂದೆವೆಂ | ದನು ದೈತ್ಯ ಕುಲನಾಶನೂ | ||120||

ಶಿವಶಿವ ನಿಮಗೆ ನಾವ್ ರಿಪುಗಳೆ ನಮ್ಮಯ | ಭವನ ವೈರಿಯ ಗಹವೇ ||
ನಿಮಗೆಮಗೇನು ಕಾರಣ ವೈರಬಂತೆನೆ | ದಿವಿಜ ವಂದಿತನವಗೇ ||121||

ನುಡಿದನು ಹಲವರಿಳಾಧಿಪರನು ನೀನು | ಕೂಡಿರ್ಪೆ ಕಾರದೊಳು ||
ಬಿಡು ಭಂಡತನ ಬೇಡವರ ಹುಯ್ಯಲ ಕೇಳಿ | ಬಿಡಿಸಲಾವೈತಂದೆವು ||122||

ಆ ನಪಾಲರಿಗೆ ನೀ ಮೊಮ್ಮನೋ ಮಿತ್ರನೋ | ಸೂನುವೋ ಶ್ಯಾಲಕನೋ ||
ನಾನವರನ್ನು ಬಂಧಿಸಲೊಡಲುರಿ ನಿನ | ಗೇನು ಪೇಳೆನಲೆಂದನೂ ||123||

ಮಲೆತವರನು ಕೊಂದು ಮರೆಯ ಹೊಕ್ಕವರನ್ನು | ಸಲಹಿ ದುಷ್ಟಾತ್ಮರನೂ ||
ತಲೆಗೊಂಡಾ ಧರ್ಮವ ನಿಲಿಪುದೆಮ್ಮಯ ಕಾರ್ಯ | ಕೆಲೆಯ ಬೇಡೆನಲೆಂದನು ||124||

ಭಾಮಿನಿ

ಶಿವಶಿವಾ ನೀವ್ ಶಿಕ್ಷರಕ್ಷಾ
ಸವನ ದೀಕ್ಷಿತರೇ ಧರಿತ್ರೀ
ಧವರ ಹುಯ್ಯಲ ಕೇಳಿ ಬಿಡಿಸಲು ಬಂದಿರೇ ಅವರ ||
ಅವನಿಯೊಳಗಾಶ್ಚರ್ಯವಿಂದಿನ |
ದಿವಸ ಕಂಡೆನು ನಿಮ್ಮ ನಿಜವನು |
ವಿವರಿಸಲ್ ಐತಂದ ಭಂಡತನಗಳೇಕೆಂದಾ ||125||

ರಾಗ ಕೇದಾರಗೌಳ ಝಂಪೆತಾಳ

ದಿವಿಜ ವಂದಿತ ದೇವನೂ | ಬಳಿಕೆಂದ | ನವಗೆ ನಾನಸುರಹರನೂ ||
ಪವನಸುತನಿವನೀತನೂ | ಪಾರ್ಥ ಕೊಡು | ನಮಗೊಬ್ಬರೊಳು ಧುರವನೂ ||126||

ಎನಲಚ್ಚುತನ ಮಾತನು | ಕೇಳುತ್ತ | ಜನಪ ಬೆರಗಾಗಿ ತಾನೂ |
ಘನನಗೆಯ ಕಡಲಿನೊಳಗೆ | ಬಿದ್ದೆದ್ದು | ತೊನೆದೆಂದ ತನ್ನವರಿಗೆ ||127||

ಈತನಾರೆಂದರಿಯಿರೈ | ಜಗದಿ ನ | ಮ್ಮಾತನೀತನು ಕಾಣಿರೈ |
ಈತ ಕಂಸಂಗಳಿಯನೂ | ಅದರಿಂದ | ನಮಗೆ ಮೊಮ್ಮಗನಾದನೂ ||128||

ಇವನ ಕುಲವನು ಬಲ್ಲಿರೈ | ನೀವೆಲ್ಲ | ಇವನ ಶೀಲವನರಿಯಿರೈ ||
ಇವನು ಗೋಮಂತ ನಗರದೀ | ಓಡುಳಿದ | ಬವರಗಲಿ ಹಿಂದೆ ಧುರದೀ ||129||

ಎಂದು ತನ್ನವರಿಗೊರೆದು | ಮಗಧ ನಪ | ನಂದು ಘನಶೌರ್ಯವೆರೆದೂ ||
ನಂದ ನಂದನನ ನೋಡಿ | ಜರೆಯುತ್ತ | ಲಿಂತೆಂದ ರೋಷ ತಾಳೀ ||130||

ರಾಗ ಕಾಂಭೋಜಿ ಝಂಪೆತಾಳ

ಎಲವೋ ಗೋಪಾಲಕ ಸಂಗರಕೆ |
ಮಲೆತಲ್ಪರಾದ ಭೂಮಿಪರಾ ||
ತಲೆಗೊಂಡೆನೆಂಬ ಸಾಹಸದಿಂದಲೆನಗಿಂದು |
ಮಲೆತೆ ಶಾಭಾಸು ಮಜವೀರಾ ||131||

ಕರಿಯಮರಿ ಸಿಂಹಗಿದಿರಾಗಿ ಜೀವಿಪುದುಂಟೇ |
ಹುಲಿಯ ಮರಿ ಉರವಣೆಯೆ ಹರಿಣವಾಗುವುದೆ ||
ಸರಿಯೇ ನೀ ಎನಗೆ ಮದಸೊಕ್ಕಿಂದ ಬಂದೆನ್ನ |
ಕೆರಳಿಸಿಯೆ ಕೆಟ್ಟೆ ನೀ ಬರಿದೇ ||132||

ವೀರರಿಂಗಾಭರಣವಾವುದಾತ್ಮಸ್ತುತಿಯೋ |
ಕೂರಲಗಿನಾರ‌್ಭಟೆಯೋ ನೀನು ||
ಭಾರಿ ಬಲನಾದರಂಜದೆ ಯುದ್ಧಕೇಳೆಂದು |
ಮಾರಪಿತ ನಪಗೆ ಪೇಳಿದನೂ ||133||

ದನಗಾಹಿ ಕೇಳ್ ಕಂಸನರಸಿಯರ ದುಃಖಶಿಖಿ |
ಯನು ನಿನ್ನ ರಕ್ತ ತೋಯದಲಿ ||
ನೆನಸಿ ಕಂಸಾದಿಗಳ ಹರಿಬವನು ಗೆಲ್ದು |
ಗೆಳೆತನವನೆಸಗುವೆನು ದನುಜರಲೀ ||134||

ಗೋವಳರು ಮಾನಯುತರಲ್ಲವನ ಮಾತಿರಲಿ |
ನೀವೀರ್ವರೂ ರಾಜಸುತರು ||
ಸಾವ ಬಯಸುವವನೊಡನೆ ಬಂದು ಕೆಟ್ಟಿರಿ ಎಂದ |
ದೇವಪತಿಜಾತ ಭೀಮರೊಳು ||135||

ಬಲಯುಕ್ತರಾದವರು ಗಳಪುವರೆ ಭುಜದಿ ಘನ |
ಬಲವಿರಲು ತೋರಿಸುವುದೆಮಗೆ ||
ಜಲಜಾಕ್ಷ ಗೋವಳಗೆ ನೀನುತ್ತಮನೆ ಎಂದು |
ಫಲುಗುಣನು ಜರೆದ ಖತಿ ಮಿನುಗೆ ||136||

ರಾಗ ಭೈರವಿ ಅಷ್ಟತಾಳ

ನರನೆಂದ ವಾಕ್ಯವನ್ನು | ಕೇಳುತ್ತಲಾ | ಧುರಧೀರ ಮಾಗಧನು |
ಧರಣಿಯ ಕದಲಿಪ ಶಕ್ತ ರಾಮನ ಗೆಲ್ದೆ | ಸರಿಯೇ ಮಿಕ್ಕವರೆಂದನು ||137||

ಮಗಧ ಕೇಳ್ ರಾಮನನು | ಗೆಲ್ದರೆ ಮಿಕ್ಕ | ವಿಗಡ ಭೀಮಾದ್ಯರನ್ನು ||
ಜಗಳದಿ ಜಯಿಸುವ ವೀರನಾದೆಯ ಎಂದು | ನಗಧರ ಗಜರಿದನು  ||138||

ತುರುಗಾಹಿ ಕೇಳೋ ನಾನು | ಗರ್ವದಿ ನಿಮ್ಮ | ಜರೆದು ಫಲಂಗಳೇನು ||
ಇರಿತಕಾನುವ ಸತ್ವವಿರೆ ನಿಲ್ಲಿ ಮೂವರ | ತರುಬುವೆನೊಬ್ಬ ನಾನು ||139||

ದುರುಳ ಕೇಳ್ ಮೂವರನೂ | ಭಂಗಿಪೆನೆಂದು | ಒರಲಿದೆ ಮುದದಿ ನೀನು |
ಇರಲಿ ಆ ಮಾತೆಮ್ಮೊಳೊಬ್ಬನ ಗೆಲ್ದರೆ | ಅರಿವೆ ಸಾಹಸವೆಂದನು ||140||

ಓಟಕ್ಕೆ ವೀರ ನೀನು | ಕೆೀಳ್ ನಿನ್ನ ಕಾ | ದಾಟಕ್ಕೆ ಜಗದಿ ನಾನು ||
ಸಾಟಿಯಿಲ್ಲದರಿಂದ ಇಂದು ನಿನ್ನೊಡನೆ ಹೊ | ಯ್ದಟಕಾನಂಜುವೆನು ||141||

ನರನೀತ ಬಾಲಕನು | ಸಂಗರಕ್ಕೆನ್ನ | ಸರಿಯೊಬ್ಬನೀ ಭೀಮನು |
ಧುರಧೀರನಾಗಾಯುತ ಬಲನೀತಂಗೆ | ಧುರವನಿತ್ತಪೆನೆಂದೆನು ||142||

ಭಾಮಿನಿ

ಇಂತೊರೆದು ಮಾಗಧ ಮಹೀಪತಿ |
ಸಂತಸದಿ ಹರಿ ಭೀಮ ಪಾರ್ಥರ |
ಮುಂತೆ ವಸ್ತ್ರಾಭರಣಗಳ ತಂದಿರಿಸಿ ಸಂಗರಕೆ |
ತಾಂ ತನುವ ಶಂಗರಿಸಿ ಪವನಜ |
ನಂತಿಕಕೆ ನೆರೆಸಾರೆ ಮರುತಜ |
ಕಂತುಪಿತನಡಿಗೆರಗಿ ಅವಗಿದಿರಾಗಿ ನಡೆತಂದ ||143||

ರಾಗ ಭೋಗಷಟ್ಪದಿ ಮಟ್ಟೆತಾಳ

ಧರಣಿಪಾಲ ಕೇಳು ನಿನಗೆ | ಧುರದಿ ಚಾಪ ಬಾಣ ಖಡ್ಗ |
ಪರಶು ಮುಖ್ಯ ಕೈದುವಿನಲಿ ಧುರಪರಿಶ್ರಮ |
ತರುಬು ಯುದ್ಧದೊಳಗೆ ಸತ್ವ | ದಿರವನೋಳ್ಪುದೆಂದು ವಾಯು |
ತರಳ ನುಡಿಯೆ ಮಾಗಧೇಂದ್ರ ನಗುತಲೆಂದನು ||144||

ಮರುತತನಯ ನಮ್ಮ ಧುರವ | ನರಿಯದಿವನ ಮಾತ ಕೇಳಿ |
ಬರಲು ಬಹುದೇ ಮಿತ್ರರಾಗಿ ದುರುಳತನದಲೀ ||
ಕರೆದು ತಂದ ಕೃಷ್ಣನಿರವ | ನರಿಯದಾದಿರಲ್ಲ ನೀವು |
ಕರುಳ ಬಗೆದು ಬಲಿಯ ಕೊಡುವೆ ದುರುಳ ಬಳಗಕೆ ||145||