ಖೂಳ ಕೇಳು ಬರಿದೆ ಶ್ರೀ | ಲೋಲನೊಳು ವಿರೋಧಿತನದಿ |
ಬಾಳಿದವರ ತೋರ್ಪುದೀರೇಳು ಭುವನದಿ ||
ಲೋಲನೇತ್ರ ಕರುಣದಿಂದ | ಪಾಲಿಸುವರ ಕೊಲುವುದುಂಟೆ |
ತಾಳುವವೆ ಪತಂಗ ದೀಪದೊಡನೆ ಸೆಣಸಲೂ ||146||

ಮಾರುತಾತ್ಮ ಭವನೆ ಮೂ | ರಾರು ಬಾರಿ ಧುರಧಿ ಸೋತು |
ದಾರಿದೆಗೆದು ಪುರವಗೈದ ವಾರಿನಿಧಿಯೊಳೂ ||
ಪೋರನೆಂದ ಮಾತ ಕೇಳಿ | ವೀರತನವನರಿಯದೆನ್ನ |
ಹೋರಲೆನುತ ಬಂದಿರಲ್ಲ ಪೋರರೀರ್ವರು ||147||

ಎಲವೋ ಮಗಧ ಕೇಳು ನಿನ್ನ | ಬಲವ ಕೇಳಿ ಬಂದೆವೈಸೆ |
ನಿಲುನಿಲಾದಡೆನುತ ಭೀಮ ಮುಳಿದು ತಿವಿದನು ||

ಅನಿಲಜಾತ ಕೇಳು ಜಗದೊ | ಳೆನಗೆ ನಿನಗೆ ಸಮಬಲಂಗ |
ಳೆನುತ ಜನರು ಪೇಳ್ವರದುವೆ ಹುಸಿಯೋ ಸತ್ಯವೋ |
ಎನುವದಿಂದು ಕಾಣಬೇಕು | ಧನುಶರಾದಿಕೈದುವ್ಯಾಕೆ |
ಘನನಿಯುದ್ಧಕಾನೆನುತ್ತ ಮಲೆತ ಭೀಮಗೆ ||148||

ಬಳಿಕರೋರ್ವರೋರ್ವರನ್ನು | ಹಳಿದು ಕೊಳುತ ಕಾದುತಿರ್ದ |
ರುಳಿದರೆಲ್ಲಿವರ ಧುರವ ನೋಡುತಿರ್ದರು ||
ಸುಳಿದ ಸಿಡಿಲ ಶಬ್ದವನ್ನು | ಪಳಿದು ಭದ್ರಮುಷ್ಟಿಘಾತ |
ವಳಿಯದಧಟೆ ಸುತಸುರಾಳಿ ಪೊಗಳ್ದುದುಭಯರ ||149||

ಭಾಮಿನಿ

ಈ ತೆರದಿ ಹದಿನಾಲ್ಕು ದಿನ ಭೂ |
ನಾಥ ಭೀಮರು ಬಿಡದೆ ಹಳಚಲು |
ಧಾತುಗೆಟ್ಟನು ಮಗಧನದನಸುರಾಂತಕನು ತಿಳಿದು ||
ವಾತಜನೊಳಿತೆಂದ ನಿನ್ನಯ |
ತಾತನನು ಭಜಿಸವನ ಬಲದಿಂ |
ದೀತನನು ಜೈಸೆನಲು ಮಾರುತಿ ಧ್ಯಾನಪರನಾದ ||150||

ವಾರ್ಧಕ

ಅನಿಲಜಂ ಪಿತನೊಲುಮೆವೆತ್ತು ಮಗಧೇಂದ್ರನಂ |
ಘನಕೋಪದಿಂ ತುಡುಕಿ ಪಿಡಿದು ಕಾಲ್ಗಳ ಮೆಟ್ಟಿ |
ಅನಿಲಜಂ ಪೂರ್ವದಿ ಮಹೋದರನ ಸೀಳ್ದಂತೆ ಸಿಗಿದು ಬಿಸುಡಲ್ಕವನನು ||
ಜನರೆಲ್ಲ ನೋಡಿ ಹಾಹಾರವದಿ ಘೋಳಿಡಲ್ |
ಅನಿಲಜಂ ಬಂದು ಕಷ್ಣಂಗೆರಗೆ ಮಾಧವಂ |
ವಿನಯದಿಂದೆತ್ತಲನಿತರೊಳವನ ಹೋಳು ಬೆಚ್ಚರೆ ಮಲೆತು ಜರೆದೆಂದನು ||151||

ರಾಗ ಭೈರವಿ ಏಕತಾಳ

ಅನಿಲಜ ಕೇಳ್ಪುರಹರನ | ವರ | ವೆನಗಿದೆ ಮೇಣ್ ಕುಶಿಕಜನ ||
ಘನದಯೆಯಿಂ ಯುತನಾದ | ಯ | ನ್ನನು ಜಯಿಸುವರಾರೀಗ ||152||

ಎನುತವ ಮುಷ್ಟಿಯೊಳೆರಗೆ | ಮಗುಳನಿಲಜ ಸೀಳುತಲಿಳೆಗೆ ||
ಘನವೇಗದೊಳೀಡಾಡೆ | ಗುಹ | ಜನಕನ ವರದಿಂ ಕೂಡೆ ||153||

ಸಂಧಿಸಿ ಸೀಳ್ಮಾಗಧನು | ಮುಳಿ | ದೆಂದನು ಭೀಮಗೆ ತಾನು ||
ಹಿಂದಣ ಬಕ ಮುಂತಾದ | ಖಳ | ರಂದವೆನುತ್ತಿದಿರಾದ ||154||

ಅರಿಯಲು ಬಹುದೆಂದೆನುತ | ನಪ | ಜರಿಯಲು ಮಾರುತಜಾತ |
ಬೆರಗಾಗುತ ಮನದೊಳಗೇ | ಹರಿ | ಗೆರಗಿದನಾ ಖಳನೆಡೆಗೆ ||155||

ಗುದ್ದಿದನವನೀತನನು | ಸಮ | ರೋದ್ಧತಪವನಾತ್ಮಜನು |
ಹದ್ದಹಿಗೆರಗುವ ತೆರದಿ | ಧರೆ | ಗೊದ್ದುರುಳಿಸಿದನು ಭರದಿ ||156||

ವಾರ್ಧಕ

ಉತ್ತರಾಸುತಪುತ್ರ ಕೇಳ್ ಶರ್ವವರದಿಂದ |
ಮತ್ತೆ ಸೀಳ್ಪದಿನೆಂಟು ಸೂಳಿನೊಳ್ ಮಾಗಧಂ |
ಮತ್ತದಂತಿಯ ತೆರದಿ ಕಾದಿದಂ ಮೂಜಗಂ ಬೆರಗಾಗೆ ವಾಯುಜನೊಳು ||
ಚಿತ್ತಜಪಿತಂ ಕರವ ಪಲ್ಲಟಿಸಿ ಕೂಡಿಸಲ್ |
ಮತ್ತದಂ ಮರುತಸುತನರಿದು ರಿಪುಭೂಪಂ |
ವತ್ತಾಯದಿಂ ಸೀಳಿಯದರಂತೆ ಸಂಧಿಸಲು ಅಸುಜಾರಿತಾಕ್ಷಣದೊಳೂ ||157||

ಭಾಮಿನಿ

ಅರಸನಳಿವನು ಕಂಡು ಬೆದರಿದರ್
ಪುರಜನರು ಮಂತ್ರಿಗಳು ದುಃಖಾ |
ಕರಣಾದರು ಕೇಳಿದಳು ಪತಿಯಳಿದುದನು ಅರಸೀ ||
ಕೊರಗಿ ರಾಣೀ ನಿವಹ ಮಧ್ಯದಿ |
ಉರಗ ವೇಷ್ಟಿತಚಂದ್ರನೋಲ್ ಮುಖ
ವಿರೆ ನಿಜೇಶನ ಶವದೆಡೆಗೆ ನಡೆತಂದು ಮರುಗಿದಳೂ ||158||

ರಾಗ ಸೌರಾಷ್ಟ್ರ ಆದಿತಾಳ

ಹರ ಹರ ಪತಿಯೆ ಹೀಗೆ | ಮಾರುತಿಯಿಂದ |
ಮರಣವಾಯಿತೇ ನಿನಗೆ ||
ಸುರನರೋರಗ ವಂದದಿ | ನಿನ್ನನು ಪೋಲ್ವ |
ಧುರಧೀರರುಂಟೆ ಲೋಕದೀ ||159||

ಹರನಿತ್ತ ವರ ಹಿಂಗಿತೇ | ಕೌಶಿಕಮುನಿ |
ಕರುಣವಿಂದಿಗೆ ತೀರಿತೇ |
ಅರಸ ದೀರ್ಘಾಯುವಾಗೆಂದು | ವಿಪ್ರರು ನಿತ್ಯ
ಹರಸಿದುದೆಲ್ಲ ಹೋಯಿತಿಂದು ||160||

ಕಮಲಬಾಂಧವನಸ್ತಕೆ | ಪೋಗುವ ನಿದ್ರೆ |
ಸಮವಲ್ಲವೇಳೀ ವೇಳ್ಯಕೆ ||
ದಮಘೋಷಜಾದಿ ಮಿತ್ರರೂ | ಬಂದೀಗ ನಿನ್ನ |
ಸಮಯವ ನೋಡುತಿರ್ಪರೂ ||161||

ವಾರ್ಧಕ

ಈ ತೆರದಿ ಚಿಂತಿಸುವ ಮಾಗಧನ ರಾಣಿಯಂ |
ದೈತೇಯ ವೈರಿಯಪ್ಪಣೆಯಿಂದ ಮಂತ್ರಿಗಳ್ |
ಕಾತರಿಸಬೇಡೆಂದು ತಿಳುಪೆ ನಸು ಸಂತೈಸಿಕೊಂಡು ನಿಜಸುತನ ಕರೆದು ||
ಪ್ರೀತ ನೋಡಗ್ನಿಯಂ ಪೊವೆನನುಕೂಲಮಂ |
ನೀತಳುವದೆಸಗೆಂದೊರೆದುಬಂದಸುರ ಕುಲವಿ |
ಘಾತಕನ ಚರಣಾಬ್ಜದೊಳ್ ಮಣಿದು ಭಕ್ತಿಯಿಂ ಕೈಮುಗಿಯುತಿಂತೆಂದಳು ||162||

ರಾಗ ಮಧ್ಯಮಾವತಿ ಆದಿತಾಳ

ದೇವರ ದೇವ ಲಾಲಿಸು ಎನ್ನ ಸೊಲ್ಲ |
ಭಾವಜಾಂತಕ ಮಿತ್ರ ಯದುವಂಶ ಮಲ್ಲ ||ಪಲ್ಲವಿ||

ಸೆರೆಮನೆಯೊಳಗಿರ್ದ ಭೂಮಿಪ ತತಿಯ |
ಪೊರೆಯಲೋಸುಗ ಕೊಲ್ಲಿಸಿದೆ ಎನ್ನ ಪತಿಯ ||
ಮರುಕವಿನ್ನೆನಗಿಲ್ಲ ದುಷ್ಟರ ನೀನು |
ತರಿದು ಸಜ್ಜನರ ಪಾಲಿಪ ದೇವ ನೀನು ||163||

ತರಳ ಈ ಸಹದೇವನೆನ್ನ ನಂದನನು |
ಸ್ಮರನವೋಲೀತನ ರಕ್ಷಿಸು ನೀನು ||
ಅರಸನ ಕೂಡೆ ವಹ್ನಿಯನು ಹೊಕ್ಕಪೆನು |
ಕರುಣಿಸಪ್ಪಣೆಯೆನಲಾಗ ಮಾಧವನು ||164||

ತರಳನ ವೈಭವವನು ನೋಡಿ ಸುಖದಿ |
ಇರು ಚಿತ್ತವಿಲ್ಲದಿರ್ದಡೆ ವಹ್ನಿಮುಖದಿ ||
ಉರುಹಿ ದೇಹವ ಕಾಂತಸಹಿತ ನಾಕವನು |
ಸೇರಿಸೆನ್ನುತ ಕೊಟ್ಟನವಳ್ಗೆ ನೇಮವನು ||165||

ಭಾಮಿನಿ

ಹರಿಯ ನೇಮವ ಪಡೆದು ಪತಿಯೊಡ |
ನುರಿಯ ಪೊಕ್ಕಳು ಕಾಂತೆ ಮಗಧನ |
ತರಳಗುರು ಪಟ್ಟಾಭಿಷೇಕವ ದೇವ ಮಾಡಿಸಿದ ||
ಪುರಜನರ ಸಂತೈಸಿ ಕಾರದೊ |
ಳಿರುವ ಭೂಪರ ಬಿಡಿಸಿ ಕಾಣಿಕೆ |
ವೆರಸಿ ಬಂದರು ಮೂವರಿಂದ್ರಪ್ರಸ್ಥಪುರವರಕೆ ||166||

ವಾರ್ಧಕ

ಅನಘನೈತಂದು ಧರ್ಮಜಗೆ ವತ್ತಾಂತಮಂ |
ಮನವಲಿದು ಪೇಳ್ದು ಮಖಕಾಲಕೈ ತಹೆವೆಂದು |
ಮನೆಗಿಂದು ಪೋಪೆನೆಂದೆನುತ ನೇಮವಗೊಂಡು ಪುರಕೈದೆ ಮರುದಿನದೊಳು ||
ಜನಪನೊಡ್ಡೋಲಗಂಗೊಟ್ಟು ಬಿಸುಸುಯ್ದಿನ್ನು |
ಮನುಜೇಶಯಜ್ಞ ಸಂೂರ್ಣವಾದಪುದೆಂತೋ |
ಎನುತ ಕೆಲಬಲದ ವೇದವ್ಯಾಸ ಭೀಮಾರ್ಜುನಾದ್ಯರೊಡನಿಂತೆಂದನು ||167||

ರಾಗ ಭೈರವಿ ಝಂಪೆತಾಳ

ಅನುಜ ಮುಖ್ಯರು ಕೇಳಿ | ಜನಪಯಜ್ಞವು ಮುಂದೆ |
ಕೊನೆಗಾಂಬ ಬಗೆ ಎಂತು | ಎನಗದನು ಹೇಳೀ ||168||

ಪಾರ್ಥಿವರ ಗೆಲಿದವರ | ಅರ್ಥವನು ತಂದನಕ |
ಸ್ವಾರ್ಥದಿಂದೀ ಯಜ್ಞ | ಪೂರ್ತಿ ಎನ್ನಿಸದು ||169||

ಅರಸರೆಲ್ಲರು ಅಳುಕಿ | ಕರವನೀಯರು ಸುರರ |
ತರುಣಿಯರು ಮಖವಾಗ | ದಿರಲು ನಕ್ಕಪರು ||170||

ಅಣಕಿಪನು ಕುರುನಪತೀ | ಕುಣಿದಪಳು ಜನರಾಸ್ಯ |
ಗಣಿಕಾಪಶಯವನಿತೆ | ಎಣಿಕೆ ಯೇನಿದಕೇ ||171||

ಎನುತ ಭೂಮಿಪ ಸುಯ್ಯೆ | ಅನಿಮಿಷೇಂದ್ರಜ ಕೇಳಿ |
ಘನ ಪೌರುಷದೊಳೆ ಯಮ | ತರಳಗಿಂತೆಂದ ||172||

ರಾಗ ಮಾರವಿ ಏಕತಾಳ

ಅಗ್ರಜ ಬಿಡು ಬಿಡು ಚಿಂತೆಯ ಮಲತರ | ನಿಗ್ರಹವನು ಮಾಡಿ ||
ವ್ಯಗ್ರದಿ ಕಪ್ಪವ ತರುವೆನು ನೇಮಿಸಿ | ಶೀಘ್ರದಿ ದಯಗೂಡೀ ||173||

ಮಣಿಯರೆ ನಪರಪಕೀರ್ತಿ ನಿತಂಬಿನಿ | ಕುಣಿದಳೆ ಜನಮುಖದೀ ||
ಅಣಕವಗೈವನೇ ಕೌರವ ನಗುವರೆ | ಗಣಿಕೆಯರಾದಿವದೀ ||174||

ನೊರಜುನಪಾಲಕರಂಜಿಸಿ ಕಪ್ಪವ | ತರದಿರೆ ಪಾವಕನು |
ಕರುಣಿಸಿದಸ್ತ್ರ ಶರಾಸನವನು ನಾ | ಧರಿಸಿದ ಫಲವೇನು ||175||

ಎನುತಲಿ ಪಾರ್ಥ ಪರಾಕ್ರಮಗೈಯ್ಯಲು | ಮುನಿಪ ಪರಾಶರನ ||
ತನುಜನು ವೀಕ್ಷಿಸಿ ನುಡಿದನು ಪೊಗಳುತ | ಅನಿಮಿಷಪತಿಸುತನಾ ||176||

ಭಾಮಿನಿ

ಪೂತು ಫಲುಗುಣ ಭರತ ವಂಶಸು |
ಜಾತನಲ್ಲವೆ ನೀನು ನಿನಗೀ |
ಮಾತು ಸಹಜವೆನುತ್ತ ವೇದವ್ಯಾಸನಿಂತೆಂದಾ ||
ನೀ ತೆರಳು ಬಡಗಕ್ಕೆ ಮಾರುತ |
ಜಾತ ಪೂರ್ವಕೆ ನಕುಲ ಪಶ್ಚಿಮ |
ಕಾತನನುಜನು ದಕ್ಷಿಣಾದಿಶೆ ಪೋಗಲೆಂದೆನುತ ||177||

ವಾರ್ಧಕ

ಮುನಿಪರಾಶರ ಪುತ್ರನಾಜ್ಞೆಯಿಂ ನೇಮವಂ |
ಜನಪನನುಜರ್ಗೀಯಲವರು ನಪನಂಘ್ರಿಯ |
ಘನಭಕ್ತಿಯಿಂದ ಬಲವಂದೆರಗಿ ಮುನಿಗಳ್ಗೆ ನಮಿಸಿ ಸಂತೋಷವೆರಸಿ |
ಮನದೊಳಚ್ಚುತನಡಿಯ ಭಜಿಸಿ ಗುರುವಂ ನುತಿಸಿ |
ವಿನುತ ಸುಮುಹೂರ್ತದೋಳ್ ಸೇನೆ ಸಹ ಪೊರಮಟ್ಟ |
ರನಿಲಜಾತಾದಿಗಳ್ ದಿಗ್ವಿಜಯಕೆಂದೆನುತ ರಿಪುಜನಂ ತಲ್ಲಣಿಸಲು ||178||

ಕಂದ

ಧುರದೊಳ್ ಸಕಲನಪಾಲರ
ನುರೆಗೆಲಿದು ಕಪ್ಪವನುತರಲಾನಪನಾಗಳ್ |
ಹರಹರಹರಿನಿಧಿಗಳನಪ |
ಹರಿಸಿತೊಎನಲೊಪ್ಪಿತು ನೋಳ್ಪರಕಂಗಳಿಗಂ ||179||

ಭಾಮಿನಿ

ವ್ಯಾಸನಾಜ್ಞೆಯೊಳಂದು ಧರ್ಮಜ |
ವಾಸುದೇವನ ಕರೆದುತಾರೆನು |
ತಾಸುರೇಶ್ವರ ಸುತಗೆ ಬೆಸಸಲ್ ದ್ವಾರಕೆಗೆ ಪೋಗಿ |
ಭೂಸುತಾಧಿಪಗೆರಗೆ ಮನ್ನಿಸು |
ತಾ ಸುಭದ್ರಾಜ್ಯೇಷ್ಠ ಮನ್ನಿಸಿ |
ವಾಸವಾತ್ಮಜನೊಡನೆ ನುಡಿದನು ಮಧುರವಚನದಲೀ ||180||

ರಾಗ ಕೇದಾರಗೌಳ ಅಷ್ಟತಾಳ

ಬಂದೆಯ ಫಲುಗುಣ ಕುಶಲವೇ ಸರ್ವರು | ತಂದಿರೆ ಕಪ್ಪವನೂ ||
ಇಂದು ನಿಮ್ಮಾಜ್ಞೆಯೈವತ್ತಾರು ದೇಶದಿ | ಸಂದುವೆ ಎನಲೆಂದನು ||181||

ದೇವ ನಿಮ್ಮಡಿಯ ಕಿಂಕರರಾದ ನಮ್ಮಾಜ್ಞೆ | ಗಾವನಡ್ಡೈಸುವನು ||
ಭೂವಲ್ಲಭರು ಕಪ್ಪವಿತ್ತರೆಂದಾ ವಾಸು | ದೇವಂಗೆ ಮಗುಳೆಂದನು ||182||

ಪರಿವಾರ ಸಹ ನಿಮ್ಮ ಕರೆದು ತಾರೆನ್ನುತ್ತ | ಧರಣೀಶ ಕಳುಹಿದನು ||
ಕರುಣದೀ ನೀ ಬಿಜಯಂಗೈಯ್ಯಬೇಕೆಂದು | ಚರಣಾಬ್ಜಕೆರಗಿದನು ||183||

ವಾರ್ಧಕ

ನರನೆಂದ ವಾಕ್ಯವಂ ಕೇಳ್ದು ಸಂತೋಷವಂ |
ಧರಿಸಿ ಪರಿವಾರ ಸಹ ಲಕ್ಷ್ಮೀಮನೋಹರಂ |
ಪೊರಟು ಶಕ್ರಪ್ರಸ್ಥಪುರಕೈತರಲ್ಕಾಗ ಚರರು ಬಂದೊರೆಯೆ ನಪನು ||
ಹರುಷದಿಂ ಬಂದಿದಿರ್ಗೊಂಡು ಪೂಜೆಯಂ  |
ವಿರಚಿಸಿ ಸುವರ್ಣಾಸನಗ್ರದೊಳ್ ಕುಳ್ಳಿರಿಸಿ ಚರಣಗಳಿ
ಗೆರಗಿ ಕೈಮುಗಿದೆದ್ದು ಭಕ್ತಿಯಿಂ ಮಾಧವಂಗಿಂತೆಂದನು ||184||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಎಲೆ ಮುರಾಂತಕ ಕೇಳು ನಿತ್ಯದಿ | ನೆಲವ ಶುದ್ಧೀಕರಿಪ ಕೆಲಸವು |
ಕೆಲವು ಜನರಿಂದಾಗದದಕೇ | ನೊಲಿದು ಬೆಸಸು ||185||

ಎನಲು ನುಡಿದನು ಬೇಗ ಮಾರುತಿ | ಯನುಕರಿಸಿ ನೇಮಿಸು ಪುರಾರಿಯ |
ನೆನೆವ ಪುರುಷಾಮಗವ ತರಲೆನೆ | ಜನಪ ಪೇಳ್ದ ||186||

ಇರುವನೆಲ್ಲಿ ಮಗೇಂದ್ರನೆನಗದ | ಕರುಣದಿಂ ಪೇಳೆನಲು ನುಡಿದನು |
ಮುರವಿನಾಶನು ನಪಗೆ ಹೇಮದ | ಗಿರಿಯ ಬುಡದೀ ||187||

ಹರನ ನೆನೆಯುತ ಮಾನಸಾಹ್ವಯ | ಸರದ ತೀರದೊಳಿಹುದು ಹೋಗೆನೆ |
ತೆರಳಿ ಭವನಕೆ ಭೀಮಸೇನನ | ಕರದುಸುರ್ದಾ ||188||

ಅನುಜ ಕೇಳೈ ಹರಪದಾಂಬುಜ | ವನು ಭಜಿಪ ಪುರುಷಾಮಗೇಂದ್ರನ |
ಘನತವಕದಿಂ ತಾರೆನಲು ಮಾರುತಿ | ಜನಪಗೆರಗೀ ||189||

ಕರದಿ ಗದೆಯನು ಪಿಡಿದು ಮಗವರ | ನಿರುವ ಜಾಗವ ಕೇಳಿ ಮುಂದಕೆ
ತೆರಳೆ ದಾರಿಯೊಳೊಂದು ವನದಲಿ | ಪರಿಕಿಸಿದನು ||190||

ಭಾಮಿನಿ

ಜನಪ ಕೇಳ್ ದಶಕಂಧರನ ಮದ |
ವನು ಹರಿಸೆ ರಾಮಂಗೆ ಸೇವಕ |
ನೆನಿಸಿ ಸೀತಾ ಶೋಕನಾಶವಗೈಯ್ಯೆ ನಿರ್ಜರರಾ ||
ವಿನಯದಿಂ ರಕ್ಷಿಸೆ ಕಪೀಶ್ವರ |
ನೆನಿಸಿದಚಲಾತನುಜೆಯರಸನು |
ಅನಿಲಜನ ಮಾರ್ಗದಲಿ ರಾಮನ ನೆನೆಯುತೆಸದಿರ್ದ ||191||

ವಾರ್ಧಕ

ಪುರವೈರಿ ವೀರ್ಯ ಸಂಜಾತನಂದಾತನಂ |
ನರಕ ಭಯವಿದ್ರಾವನಂ ಮಹಾದೇವನಂ |
ದುರಿತಾಬ್ಧಿ ಕುಂಭಸಂಜಾತನಂ ಖ್ಯಾತನಂ ಸೋಮನಂ ರಿಪು ಭೀಮನಂ ||
ಧರಣಿಜಾ ಶೋಕಹಂತಾರನಂ ಧೀರನಂ |
ಸುರನರೋರಗಪುರ ವಿಹಾರನಂ ಶೂರನಂ |
ಧುರಧೀರ ವಿಜಯಹನುಮಂತನಂ |
ಶಾಂತನಂ ಭೀಮನಿದಿರೋಳ್ಕಂಡನೂ ||192||

ರಾಗ ಕೇದಾರಗೌಳ ಅಷ್ಟತಾಳ

ಇದಿರೊಳು ನೆಲಸಿ ವಜ್ರದೇಹವ ಕಂಡು |
ಮುದದಿಂದ ವಾಯುಜನು ||
ಪದಕಭಿವಂದಿಸೆ ತೆಗೆದಪ್ಪಿ ಹರಸುತ್ತ |
ಪದುಳದಿ ಬೆಸಗೊಂಡನು ||193||

ಜನಪ ಫಲುಗುಣ ಮಾದ್ರಿತನುಜರು ದ್ರೌಪದಿ |
ತನುಭವರ್ಕಳು ಸಹಿತ ||
ಘನಸೌಖ್ಯಯುತರೇ ನೀ ಬಂದ ಕಾರಣವೇನು |
ಎನೆ ಪೇಳ್ದ ಪಾಂಡುಜಾತಾ ||194||

ಅರಸ ಯಾಗವ ಮಾಳ್ಪ ಪುರುಷಮಗೇಂದ್ರನ |
ಕರೆದೊಯ್ಯಲೈತಂದೆನು ||
ಪಿರಿದು ಜನ್ಮಾಂತರ ಪುಣ್ಯದಿಂದಲೆ ನಿಮ್ಮ |
ಚರಣಾಬ್ಜವನು ಕಂಡೆನು ||195||

ಅನುಜ ಕೇಳಾ ಮಗರಾಜ ಮನೋವೇಗ |
ಬಲ್ಲವನನೊಡನೆ ||
ಅನಿಲಗಸಾಧ್ಯವೈದುವರೆ ನಿನ್ನಯ ಪಾಡೇ
ನೆನಲೆಂದನಿವನೊಡನೇ ||196||

ಬಿಡುಬಿಡೀ ಮಾತು ಘನವೆಯನ್ನೆಯ ಮೇಲೆ ನೀ |
ನ್ನಡಿಯೊಲವೊಂದಿರಲೀ |
ನಡೆವೆ ನಾ ಮಗಕಿಂತ ಮುಂದೆನೆ ವಾಯುಜ |
ನುಡಿದ ತನ್ನನುಜನಲ್ಲೀ ||197||

ಆದರಂಜದಿರಿನ್ನು ನಿನ್ನ ಭಾಷೆಯನೀಗ |
ಕಾದುತೋರ್ಪೆನು ಬಾಲದೀ ||
ಐದರ ಮೇಲ್ಮೂರು ರೋಮವ ಕೀಳೆನೆ |
ಕೈದುಡುಕುತ ಸತ್ವದೀ ||198||

ತೆಗೆಯಲಾರದೆ ಕಡು ಬಳಲಿ ಮರುತಜಾತ
ಒಗೆದು ಮುಂದೈತರಲು |
ಉಗಿದೆಂಟು ಕೂದಲು ನೀಡಿದ ಕುಂತಿಯ |
ಮಗಗೆ ತಾ ತೋಷದೊಳೂ ||199||

ಭಾಮಿನಿ

ತರಳನೀ ಪೋಗಾಮಗೇಂದ್ರನ |
ಕರೆ ತವಕದಿಂ ನಿನ್ನ ಸಂಗಡ |
ಬರುವೆನೆಂದಾಕ್ಷಣವೆ ರೋಮವನೊಂದನಿಳೆಗಿಡಲು |
ಹರನು ಜನಿಸುವನವನ ಪೂಜೆಯ |
ವಿರಚಿಸುತ ಮಗವಿರಲು ಮುಂದಕೆ |
ಸರಿಪಥದೊಳೀಕ್ರಮದಿ ಪೋಗೆಂದೆನುತ ಬೀಳ್ಕೊಟ್ಟಾ ||200||

ವಾರ್ಧಕ

ಹನುಮನಿಂ ಬೀಳ್ಗೊಂಡು ಮುರವೈರಿಯನು ಮನದಿ |
ನೆನೆಯುತಾ ಮಗದ ಬಲಗೈದಲನಿತರೊಳತ್ತ |
ಮನುಜವಾಸನೆಯಲ್ಲಿ ಗೋಚರಿಪುದೆನುತ ನಾಸಿಕವನರಳಿಸಿ ದೆಸೆಯನೂ ||
ಮುಖವಾಗಿ ನೋಡುತಿರಲನಿತರೊಳ್ ವಾಯುಜಂ |
ತನಗಿದೇ ಸಮಯವೆಂದೈತಂದು ಮಗರಾಜ |
ನನು ಕಂಡು ಕಾಲ್ಗೆರಗಲೆತ್ತಿ ಸುಪ್ರೇಮದಿಂ ಭೀಮನಂ ಬೆಸಗೊಂಡನೂ ||201||

ರಾಗ ಆನಂದಭೈರವಿ ಆದಿತಾಳ

ಯಾರ ನಂದನ ಯಾರ ವಂಶಜ ನಾಮವೇನು ನಿನ್ನ | ಬಂದಿಹ |
ಕಾರಣಂಗಳನೀಗ ಪೇಳೆಲೆ | ವೀರನೈಸೆ ನೀನು || ಮನುಜ ಸಂ ||
ಚಾರವಿಲ್ಲದ ಎನ್ನ ಠಾವಿಗೆ | ಸೇರಿದುದಕೆ ನಾನು | ಮೆಚ್ಚಿದೆ |
ಪೂರೈಸುವೆನು ನಾನಿನ್ನಪೇಕ್ಷೆಯ | ಸಾರೆನಲು ಕಲಿಭೀಮ ಪೇಳಿದ ||202||

ಕೌರವ ಪ್ರಿಯವಂಶಜೋತ್ತಮ | ವೀರಪಾಂಡು ನಪನ | ದ್ವಿತೀಯಕು |
ಮಾರಕನು ಜನರೆಲ್ಲರೆನ್ನಯ ನಾಮ ಭೀಮಸೇನ | ಎನುವರು |
ಧೀರ ಲಾಲಿಸಿ ಕೇಳು ಕಿರಿಯನು ನಾನು ಧರ್ಮಸುತನಾ | ನಮ್ಮಯ
ಚಾರುಯಜ್ಞಕೆ ನಿಮ್ಮನೊಯ್ವರೆ | ಸಾರಿದೆನು ಕಪೆ ಮಾಡಿ ಯಂದನು ||203||

ನಾಗಬಲ ಕೇಳ್ ಬರ್ಪೆ ನಿನ್ನೊಡನೀಗ ಮುಂದೆ ನೀನು | ನಡೆ ಹಿಂ |
ದಾಗದಿರು ಹಿಂದಾದರಾಕ್ಷಣ | ಸಾಗಬಂದು ನಾನು | ಕಾಲ್ಗಳ |
ತಾಗಿ ಕಲ್ಲೊಳು ಪೊಯ್ವೆ ಮರೆಯದೆ | ಪೋಗಲೆಂದನವನು | ಒಡಬಡು |
ತಾಗ ರೋಮದೊಳೊಂದ ಭೂಮಿಗೆ | ನೀಗಿ ನಿಜಪುರದತ್ತ ತಿರುಗಿದ ||204||

ಭಾಮಿನಿ

ಹರಿ ಕುಲಾಗ್ರೇಸರನ ರೋಮವು |
ಧರೆಗೆ ಬೀಳಲು ಲಿಂಗ ಮೂಡಿತು |
ಪರಿಕಿಸುತ ಮಗವರನು ಪೂಜಿಸುತಿರುವನಿತರೊಳ್ ಪಥವಾ ||
ಸರಿದನೆಂಟಾವರ್ತಿ ಈ ಪರಿ |
ವಿರಚಿಸುತ ಮಗಪತಿಗೆ ಸಿಕ್ಕದೆ |
ಪುರಕೆ ಬಳಲುತ ಬರಲು ನರತಿಳಿದಾಗಲನಿಲಜನ ||205||

ಕಂದ

ಶಿರವಂ ಫಲುಗುಣ ಪಿಡಿಯಲ್ |
ಭರದಿಂ ಬಂದಾಮಗವರ ಭೀಮನ ಕಾಲಂ |
ತ್ವರಿತದಿ ಪಿಡಿಯುತ ನಿಂದಿರೆ |
ದೊರಕಿತು ಮಗಪತಿ ನರನಿಗೆ ಘನಹೋರಾಟಂ ||206||