ರಾಗ ಸೌರಾಷ್ಟ್ರ ತ್ರಿವುಡೆತಾಳ

ಎನಲು ಕೈಬೀಸುತ್ತ ಭೀಮನು |
ಕನಲಿಗದೆಯನು ಕೊಂಡು ಗರ್ಜಿಸಿ |
ವಿನಮಿಸುತಲಿಂತೆಂದ ಗಂಗಾ | ತನುಜನೊಡನೇ ||279||

ದುಷ್ಟನಿವ ಕಡುಪಾಪಿ ಮೂರ್ಖರಿ |
ಗೆಷ್ಟು ಹೇಳಿದರೇನು ಕ್ಷೀರವ |
ಕೊಟ್ಟಡಹಿಗುಣಸುಧೆಯ ಪೋಲ್ವುದೆ | ಸಷ್ಟಿಯೊಳಗೇ ||280||

ಮೂಢರಿಗೆ ಶ್ರೀಹರಿ ಕಥಾಮತ |
ವಾಡುವುದು ವೇದವನು ಕಾಡಿನ |
ಕೋಡಗನಿಗೊರೆದಂದವಾದುದು | ರೂಢಿಯಲ್ಲೀ || ||281||

ಹರಿಗೆ ಕೆಡು ನುಡಿದಿವನ ಜಿಹ್ವೆಯ |
ನರಿಯದುಳಿಯೆನು ನೋಡೆನುತ್ತಲೆ |
ಭರಿತ ರೋಷದೊಳೆದ್ದು ಗದೆಯನು | ತಿರುಹುತೆಂದಾ ||282||

ರಾಗ ಘಂಟಾರವ ಅಷ್ಟತಾಳ

ರಾಯಸೂಯಯಾಗದ ಸಭೆಯೊಳು |
ರಾಯರಾಯರನೇಕರಿಹರ್ ಯದು | ರಾಯನಿಗೆ ಕೆಡನುಡಿವರೇ ||283||

ಬಲ್ಲರಿಲ್ಲವೆ ಇವನಷ್ಟು ಶಾಸ್ತ್ರವ |
ಇಲ್ಲ ಸರಿ ತನಗೆಂಬ ಖೂಳನ | ಹಲ್ಲು ಮುರಿವೆನು ನಿಮಿಷದೀ ||284||

ಎಲ್ಲ ಯಾದವರೆಮ್ಮವರೀಕ್ಷಣ |
ಬಿಲ್ಲ ಹಿಡಿಯಲಿ ಬಲಸಹಿತ ಧುರ | ಕುಲ್ಲಾಸದೊಳನುವಾಗಲೀ ||285||

ಎಂದ ಮಾತನು ಕೇಳುತ್ತ ಶಿಶುಪಾಲ |
ಮಂದಹಾಸದಿ ಕಿಡಿಯನುಗುಳುತ್ತೆಂದ ಗಂಗಾತ್ಮಜನೊಳು ||286||

ಮಂದೆ ಬೀಳಲು ಭೀಮನು ನೋಡೀಗ |
ಒಂದೆ ನಿಮಿಷದಿ ದಕ್ಷಯಾಗದ | ಇಂದುಧರನನು ಮರಸುವೇ ||287||

ದುರುಳನೆಂದುದ ಕೇಳುತ್ತ ಭೀಮನು |
ಕರಕರನೆ ಹಲುದಿನುತಲಾತನ | ಕರೆದು ಮತ್ತಿಂತೆಂದನೂ ||288||

ರಾಗ ಶಂಕರಾಭರಣ ಮಟ್ಟೆತಾಳ

ಫಡ ಫಡೆಲವೊ ಚೈದ್ಯ ಕೇಳು ಕೃಷ್ಣಮೂರ್ತಿಯಾ |
ಬಿಡದೆ ಹಳಿವುದುಚಿತವಲ್ಲ ಕೇಳು ನಿನ್ನಯಾ ||
ಪಿಡಿವ ಗದೆಯೊಳೀಗ ಬಡಿವೆ ನೋಡೆನುತಲೆ |
ನಡೆಯಲಾಗ ಭೀಷ್ಮ ಬಂದು ತಡೆದನಾಗಲೇ ||289||

ತಡೆಯಬೇಡಿರೆನ್ನ ವೀರ ದಕ್ಷಯಜ್ಞದ |
ಮಢನ ಬಲುಹ ನೋಡಬೇಕೆನುತ್ತ ಮರುತಜ ||
ಗುಡುಗುಡುಸಿ ಯಮಭಟೌಘವುರವಣಿಸಲು |
ತಡೆದು ಭೀಮನೊಡನೆ ಭೀಷ್ಮ ನುಡಿದನಾಗಲೂ ||290||

ಎಲವೊ ಪವನಜಾತ ಶೌರ್ಯಪಿತ್ತ ನಿನ್ನನೂ |
ನಿಲಲುಗೊಡದೆ ಕುಣಿಸುತಿಹುದು ಏನನೆಂಬೆನೂ ||
ನಳಿನನೇತ್ರನನ್ನು ಕಾಯುವಡೆ ಸಮರ್ಥನೆ |
ತಿಳಿದು ನೋಡು ಕಾಲವಾವುದೆನುತ ಸುಮ್ಮನೆ ||291||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಈಸು ಕಾರ್ಯವು ದೈವಘಟನೆಯೋ |
ಳೀಸು ಪರಿಯಂತಾಯ್ತು ಯಜ್ಞದ |
ಮೀಸಲಳಿಯದೆ ನಿಮ್ಮ ಕರುಣದ | ವಾಸನೆಯಲೀ ||292||

ಇವನು ನಮ್ಮವ್ವಂಗೆ ತಂಗಿಯ |
ಕುವರ ಸಹ ಇವನೈಸೆ ಯಾಗದಿ |
ಹದನ ಗಂಟಿಕ್ಕುವುದು ದೈವದ | ಹವಣವೆಂತೋ ||293||

ಈ ಸಮಸ್ತ ನಪಾಲಬಲ ವಾ |
ರಾಶಿಮೇರೆಯನೊದವುತಿದೆ ನಿಮ |
ಗೈಸೆ ಭಾರವಿಂದೆನುತ ಬಿ | ನ್ನೈಸೆ ಯಮಜ ||294||

ಅಂಜದಿರು ಭಯಬೇಡ ನರರಿಗೆ |
ನಂಜು ಪಥ್ಯವೇ ಗಿಳಿಯ ಮರಿಗಳು |
ಮಂಜರನ ಮೇಲ್ ಹಾಯಲುಳಿವವೆ | ಅಂಜಬೇಡ ||295||

ರಾಗ ಮಾರವಿ ಆದಿತಾಳ

ಕೇಳುತ ಕುಳ್ಳಿರಲಾಗ | ಶಿಶು | ಪಾಲನ ಕಾಣುತ ಬೇಗ ||
ಖೂಳರಿಗೀ ಘನ ಬಂತೇ | ನಮ್ಮ | ಕಾಳಗ ಸರಸವಿದಾಯ್ತೆ ||296||

ಹರಿ ವಿಧಿ ಬಿಡುಗಣ್ಣವರು | ಈ | ಧರೆಯೊಳಗಿಹ ಭೂವರರೂ ||
ಕರವ ಮುಗಿದು ಜೀವಿಪರು | ತಮ್ಮ | ಶಿರವನುಳುಹಿಕೊಂಡಿಹರೂ ||297||

ಗೋಪನಸುತ ಪಾಂಡುಜರು | ಸಮ | ನಾಪತ ಯನಗಿಂತವರೂ ||
ರೂಪು ಯವ್ವನ ಸಿರಿ ಬಲದಿ | ಭುಜ | ತಾಪ ಕೌತುಕ ಸಂಗರದಿ ||298||

ಶುದ್ಧ ಘಂಟಿಗನ ನಪರ | ನಡು | ಮಧ್ಯದೊಳಿರಿಸಿ ಪೂಜಿಪರ |
ಗದ್ದಲ ನಿಲಿಸದಿರಲ್ಕೆ | ಯನ | ಗಿದ್ದ  ಪರಾಕ್ರಮವ್ಯಾಕೆ ||299||

ಭಾಮಿನಿ

ಎನುತ ಶಿಶುಪಾಲಕನು ಘರ್ಜಿಸೆ |
ಧನುವ ಕೊಂಡಾ ಭೀಮಸೇನನು |
ಕನಲುತಿರೆ ತಡೆದೆಂದ ಗಂಗಾತ್ಮಜನು ಸಭೆಯೊಳಗೇ ||
ದನುಜಹರ ಭೂಭಾರ ಭಂಜನ |
ವೆನುವ ಕೆಲಸದೊಳೊಗೆದನಲ್ಲದೆ |
ಚಿನುಮಯನ ಕಷ್ಣಾವತಾರದ ಕಥೆಯ ಕೇಳೆಂದಾ ||300||

ರಾಗ ಶಂಕರಾಭರಣ ಅಷ್ಟತಾಳ

ಇಳೆಯ ದೂರನು ಕೇಳಿ ಸುರರೆಲ್ಲ | ಪೋಗಿ
ಜಲಜಾಕ್ಷಗರುಹೆ ಕೇಳುತ ಸೊಲ್ಲ ||
ನಳಿನಭವಾದ್ಯರಿಗೆಂದನು | ಯದು
ಕುಲದೊಳುದ್ಭವಿಸುವೆ ನೀವಿನ್ನೂ ||301||

ಪುಟ್ಟಿ ಯಾದವರಾಗಿ ಧರೆಯಲಿ | ನಾನು
ಥಟ್ಟನೈದುವೆ ಕೃಷ್ಣನೆನುತಲಿ ||
ಕೊಟ್ಟ ಮಾತಿಗೆ ದೇವಕಿಯಲಿ | ಬಂದು
ಪುಟ್ಟಿದ ಖಳರನು ಧುರದಲಿ ||302||

ವೈರವೆಣಿಪರ ಸಂಹರಿಸಿದ | ತನ್ನ
ಸೇರಿದ ಜನರನುದ್ಧರಿಸಿದ ||
ಧೀರತ್ವ ನಡೆವುದೇ ಇವನಲ್ಲಿ |
ಎನೆ ಮಾರುತಿ ಕೇಳಿದ ಮುದದಲಿ ||303||

ದುರುಳನಾಡಿದ ದುಷ್ಟ ಮಾತಿಗೆ | ರಮೆ
ಯರಸನ್ಯಾತಕೆ ಕುಳಿತನು ಹೀಗೆ |
ವರೆಯಬೇಕೆನಗೆಂದ ಭೀಮಗೆ | ಪೇಳ್ದ
ಸುರನದಿಜನು ಪವಮಾನಿಗೇ ||304||

ರಾಗ ಕಾಂಭೋಜಿ ಝಂಪೆತಾಳ

ಮರುತ ಸಂಭವನೆ ಕೇಳ್‌ಹರಿಯ ಬಾಗಿಲ ಕಾಯು |
ತಿರಲು ಜಯವಿಜಯರುಗಳಂದು ||
ಬರಲಾ ಸನತ್ಸುಜಾತರ ತಡೆದ ಕಾಣರದಿ |
ದೊರಕಿತಾಸುರ ಜನ್ಮ ಮೂರು ||305||

ಕತಿಯೊಳು ಹಿರಣ್ಯಕಶ್ಯಪು ಕಾಶ್ಯಪಾತ್ಮಭವ |
ರತಿ ಮುದದಿ ಸುರರ ಬಾಧಿಸಲೂ ||
ಪ್ರಥಮ ಜನ್ಮದ ಕ್ರೋಡನರಸಿಂಹ ರೂಪದಿಂದ |
ತುಳಬಲರನು ಕೆಡೆದ ಹರಿಯೂ ||306||

ಮರುಭವದಿ ರಾವಣಾಸುರ | ಕುಂಭಕರ್ಣಸುರ |
ತರುಣಿ ಕೈಕಸೆ ಪುಲಸ್ತ್ಯಜಗೆ ||
ಧರೆಯೊಳುದ್ಭವಿಸಿ ಬಾಧಿಸುತಿರಲು ಸುರಪುರವು |
ಹರಿಗೆ ದೂರಿದುದು ತ್ರೇತೆಯಲೀ ||307||

ಮಂದಹಾಸದಿ ದಶಕಂಧರನ |
ನರಿಯಲು ರಾಮಾಭಿದಾನದಲಿ ||
ಬಂದು ಮಹಿಯೊಳು ಖಳರ ವಂದವೆಲ್ಲಗೆಲಿದ |
ಸಂದಿತೆರಡು ಜನ್ಮಗಳೂ ||308||

ಮೂರನೆಯೊಳೀಗ ಧಮಘೋಷಸುತ ಶಿಶುಪಾಲ |
ಭೂರಮಣ ಶೇಷನಿಗೆ |
ನಾರಿಸತಿ ಶ್ರುತದೇವಿಯೊಳು ದಂತವಕ್ತ್ರ ನೀ |
ಧಾರುಣಿಯೊಳಗೆ ತಾಮಸರೂ ||309||

ಜನಿಸುತಿರೆ ಶಿಶುಪಾಲನಿಂಗೆ ಶಿರದೊಳು ನಯನ |
ಮಿನುಗುತಿಹ ಕರನಾಲ್ಕರಿಂದ ||
ಮುನಿನಾರದನ ನೇಮದಿಂದ ಕೃಷ್ಣನ ಕರದಿ |
ಜನನಿ ತಂದಿತ್ತಳರ್ಭಕನ ||310||

ಸುರಮುನಿಪನೆಂದಂತೆ ನವನೇತ್ರಕರವಡಗೆ |
ಹರಿಗೆ ಶ್ರುತದೇವಿ ವಂದಿಸುತ ||
ತರಳನ ಶತಾಪರಾಧವ ಕ್ಷಮಿಸಿ ಕಾಯ್ವುದೆನೆ |
ತರುಣಿಗಿತ್ತನು ಭಾಷೆಯನ್ನೂ ||311||

ತರಳನ ಶತಾಪರಾಧಕೆ ಮುನಿಯುವುದಿಲ್ಲವ್ವ |
ಮರುಗಬೇಡೆಂದು ಸೈವಿಡುತ ||
ವರವಿರುವ ಕಾರಣದಿ ಕುಳಿತನೀ ಗೋವಿಂದ |
ದುರುಳನಿವನಿಗೆ ಬೆದರುವನೆ ||312||

ಇಂದಿವನ ಮರಣ ಕಂಗೈಸುವರೆ ನೀನೋ ಮು |
ಕುಂದನೋ ವಿಚಾರಿಸೆಲೆ ಭೀಮ ||
ಎಂದು ನಿಂದಿರಲು ಬೇಡ ನಡೆಯೆಂದೆನಲು ಕೇಳ್ದು ಸಿಡಿ |
ಲಂದದಲಿ ನುಡಿದ ಶಿಶುಪಾಲಾ ||313||

ರಾಗ ಕೇದಾರಗೌಳ ಝಂಪೆತಾಳ

ನಂದಜನು ನನ್ನ ಧುರದಿ | ಕೊಲುವ ಕಥೆ
ಯೊಂದ ಕೇಳ್ದೆನು ತೋಷದಿ ||
ಇಂದು ಈ ಮುದಿ ಭೀಷ್ಮನ | ಕೆಡದ ಹೊ
ರ್ತಿಂದು ಬಿಡೆನೀ ಭೀಮನಂ ||314||

ಕೊಲುವವನೆ ಈತ ನನ್ನ | ಇವನಿಂದ |
ಲಳಿವವನೆ ತಾನು ಮುನ್ನ ||
ಹಳೆಯವಗೆ ಭ್ರಮೆಯಾಯಿತು | ಇವನವೆ |
ಗ್ಗಳಿಸಿ ಫಢ ಮೋಸಬಂತೂ ||315||

ಕುಲಕೆಡುಕ ಕಳ್ಳ ಸಟನ | ಹರೆಯದ
ಲಲನೆಯರ ಭೋಗಿಸುವನ |
ಹಳೆಯ ಹದ್ದೇರಿ ಮೆರೆವ | ನೀತಸುರ |
ಕುಲಕಾಹುದುಂಟೆ ದೇವ ||316||

ಖೂಳರಿಗೆ ಜಗದೊಡೆಯನು | ಭ್ರಷ್ಟರೊಳು |
ಮೇಲಾದ ದೈವ ಇವನೂ ||
ಈತನೇ ದೈವವೇನು | ಕ್ಷಣದಿ ಯಮ |
ಜಾತಗೈಯ್ಯುವ ಮಖವನೂ ||317||

ಮಾತುಮಾತಿಲಿ ಕೆಡಿಸುವೆ | ಭೂ ಭುಜ |
ವ್ರಾತವನು ಸಂಹರಿಸುವೆ ||
ಸಲಹಲಿದ ನೋಳ್ಪೆ ನಾನು | ನಾ ಬಡಿದು |
ಕೊಲುವ ಸಮಯದೊಳೀತನೂ ||318||

ರಾಗ ಮಾರವಿ ಏಕತಾಳ

ಎಲವೋ ಗೋವಳ ಮಂಚವ ಬಿಟ್ಟಿನ್ನಿಳೆಗವತರಿಸೀಗ |
ಘಳಿಲನೆ ನಾನೀ ದೇವರಿಗಸ್ತ್ರದ ಚಳಕವ ತೋರಿಸುವೆ ||319||

ಸುಮ್ಮನೆ ಬದಿಯೊಳು ಕುಳ್ಳಿರದೆ ನೀ ನಮ್ಮೆಲ್ಲರ ನಡುವೆ |
ಹೆಮ್ಮೆಯೊಳ್ ಮಂಡಿಸಿ ಪೂಜೆಯಗೊಂಡಾ ಹಮ್ಮನು ನಿಲ್ಲಿಸುವೆ ||320||

ಬರಲೀಕ್ಷಣ ನಪರೆನುತಲೆ ಚಪ್ಪರ ಹೊರಗೈತರಲಾಗ |
ಧುರ ವಾದ್ಯದ ರವ ಮೊಳಗಲು ಸೈನ್ಯವು ನೆರೆಯಲಿ ಕರೆ ಬೇಗ ||321||

ಭಾಮಿನಿ

ಕಂಡು ಮುನಿಗಳು ಬೆದರಿ ಭೀತಿಯ |
ಗೊಂಡು ಕದಪಿನ ಕರದಿ ಕುಳ್ಳಿರೆ |
ಮಂಡೆಯನು ತೂಗುತ್ತ ಭೂಪರು ಹರಿಯ ಜಪಿಸಿದರು ||
ಬಂದ ಭೂಪರು ಕೆಲರು ಚೈದ್ಯನ |
ತಂಡದೊಳು ಸೇರಲ್ಕೆ ತದುಭಯ |
ಗೊಂಡು ಧರ್ಮಜ ಸುಮ್ಮನಿರೆ ಕಂಡೆಂದನಚ್ಚುತನೂ ||322||

ರಾಗ ಮಧುಮಾಧವಿ ಏಕತಾಳ

ಕೇಳಿರೈ ಮುನಿಗಳು ಭೂಮಿಪರೆಲ್ಲ |
ಖೂಳನಾಡಿರುವ ದುರ್ವಚನಗಳನೆಲ್ಲ ||
ಲಾಲಿಸಿದಿರೆಲಾ ವಿಹಿತವಾಯ್ತೆ ನಿಮಗೆ |
ಪಾಲಿಪುದೆಂತು ತಿಳಿದು ಹೇಳಿರೆನಗೆ ||323||

ಕಾಲಜ ನರ ಭೀಮಾದ್ಯರು ನದೀಸುತರು |
ಪೇಳಿದ ಶ್ರುತಿವಚನವನು ಮೀರಿದನು ||
ಪಾಲಿಸದಪರಾಧವೆಸಗಿದ ಮೇಲೆ |
ತಾಳುವುದಲ್ಲ ಮರ್ದಿಪುದು ನೀತಿಯಲೀ ||324||

ಧರಣಿಪಾಲಕರು ಮುನಿಗಳು ಭೂಸುರರು |
ಸುರರು ದಿಕ್ಪಾಲಕರು ಕೇಳಿರೆಲ್ಲವರೂ ||
ದುರುಳ ಮಾಡಿರುವ ಶತಾಪರಾಧವನು |
ಮರೆದು ಸುಮ್ಮನೆ ಕುಳಿತುದನು ಪೇಳುವೆನು ||325||

ರಾಗ ಕೇದಾರಗೌಳ ಅಷ್ಟತಾಳ

ಮುತ್ತಯ್ಯ ಶೂರಸೇನನು ಶ್ರುತದೇವಿಯ | ಪೃಥ್ವಿಪ ದಮಘೋಷಗೆ ||
ಇತ್ತನು ವಸುದೇವನ ಸಹೋದರಿಯಾಕೆ | ಹೆತ್ತಳು ಶಿಶುಪಾಲನ ||326||

ದುರುಳನುದ್ಭವಿಸುವಾಗಧಿಕಾಕ್ಷಿ ಶಿರದೊಳ | ಗೆರಡು ನೂತನ ಭುಜದಿ ||
ಇರಲಿಕದ್ಭುತ ರೂಪವನು ಕಂಡು ಇವನವ್ವ | ಮರುಗುತ್ತಲಿರುತಿರಲು ||327||

ಅತ್ತೆಗೆ ಪುತ್ರನಾದುದ ಕೇಳಿ ನೋಳ್ಪ ನಿ | ಮಿತ್ತದಿ ನಾ ಪೋಗಲು |
ಹಸ್ತದಿ ಶಿಶುವೀಯಲಡಗಿತು ಸುರಮುನಿ | ಪೋತ್ತಮ ಪೇಳಿದಂತೆ ||328||

ಕಂಡಳಧಿಕ ನೇತ್ರ ಬಾಹುವಡಗೆ ಭಯ | ಗೊಂಡಳಿವನ ಜನನಿ ||
ದಂಡದಂತೆರಗಿ ಶತಾಪರಾಧವ ಮರೆ | ಗೊಂಡೆನ್ನನಿವನೆಂದಳೂ ||379||

ತಾಯೆ ಕೇಳೆನಗೆ ಶತಾಪರಾಧವನೀತ | ಗೈಯಲು ಕ್ಷಮಿಪೆನೆಂದು ||
ಕೈಯ್ಯ ಮೇಲ್ ಭಾಷೆಯ ಕೊಟ್ಟುದಕಿವನಿಷ್ಟು | ಬೈಯ್ಯಲು ಕೇಳಲಾಯ್ತು ||330||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮುನಿಗಳಂಜದಿರಿ ನಪ |
ಜನಕೆ ಗಜಬಜ ಬೇಡ ಯಾದವ |
ಜನಪರುರವಣಿಸದಿರಿ ಪಾಂಡವ | ತನುಜರಿಂಗೆ ||331||

ಮೊನೆ ನಗೆಯ ಸಿರಿಮೊಗವ ನೆಗಹಿದ |
ಜನತೆ ಹಸ್ತಾಂಬುಜವ ತೋರುತ |
ವಿನುತ ಚಕ್ರವ ಪಿಡಿದು ಪಾಂಡವತನುಜರಿಂಗೆ ||332||

ಶರಣರಿಗೆ ಬಂದೆಡರ ಧರಿಸುವ |
ಬಿರುದು ನಮ್ಮದಿದೈಸೆ ಯಾಗದ |
ಹೊರಿಗೆ ನಿನಗ್ಯಾಕೆಮ್ಮದೈ ನೀ | ನರಿಯದವನೇ ||333||

ವಾರ್ಧಕ

ಸಲ್ಲಿಸಿದ ತಾಯ್ಗೆ ಕೊಟ್ಟಿರ್ದ ಭಾಷೆಯ ಸಾಂಗ |
ದಲ್ಲಿ ಸಾಗಿಸಿದೆ ಸೇರಿಸಿ ತಪ್ಪ ಪರಿಗಣನೆ |
ಯಲ್ಲಿ ಕ್ಷಮಿಸಿದೆ ದುಷ್ಟ ಮಾಡಿದ ಶತಾಪರಾಧಕೆ ಮೀರಿತೆರಡುತಪ್ಪು ||
ಭುಲ್ಲವಿಸಿ ಯಜ್ಞಮಂ ಕೆಡಿಸುವೆನು ಬಂದ ಭೂ |
ವಲ್ಲಭರ ಬಡಿದೆನೆಂದೆನುತಾಡಿದೀಮಾತಿ |
ನಲ್ಲಿ ಸೈರಿಸಲಾರೆನೆಂದು ಸಿಂಹಾಸನವನಿಳಿದು ಚಕ್ರವ ತುಡುಕಿದ || ||334||

ರಾಗ ಸಾಂಗತ್ಯ ರೂಪಕತಾಳ

ಮಂದರಧರ ಯದುವಂದವ ನಿಲಿಸಿದ | ಹಿಂದೆ ಕರೆದೆಂದು ಛಂದದಲಿ |
ಮುಂದಿಹ ಶಿಶುಪಾಲಗಿದಿರಾಗಿ ಶರವಿಡಿ  | ದೆಂದ ಕ್ರೋಧದಿ ನಸುನಗುತ ||335||

ವರಪತಿವ್ರತೆ ನಿನ್ನ ಮಾತೆಗೋಸುಗ ಮತ್ | ಕರಿಸಿದೆನಪರಾಧ ಶತವ |
ದುರುಳ ಕೇಳೆನಗೆ ಪಾತಕವಿಲ್ಲ ನಿನ್ನನು | ಧುರದೊಳು ಮರ್ದಿಸಲಿನ್ನು ||336||

ಎಂದೆನೆ ಕಿಡಿಯುಗುಳುತ ಚೈದ್ಯ ನಿರ್ಜರ | ವಂದದಿ ವಂದ್ಯನಾದವನೊಡನೆ |
ಬಂಧುಗಳನು ಸಮರದಿ ಗೆದ್ದ ಪಾತಕಿ | ಕೊಂದಪೆ ನಾನೀಗ ನಿನ್ನ ||337||

ಎನಲೆಂದ ಹರಿಯು ನಿನ್ನಿಂದಾದ ಪಾಪಿ | ಗಳೆನುತ ನಾ ಬಡಿದೆ ಕೇಳವರ |
ಎನುತಾಗ ಚೈದ್ಯನ ಸರಳಿಂದ ಮುಸುಕಿದ | ದನುಜ ವೈರಿಯ ಕೇಳ್ ಭೂಪತಿಯೆ ||338||

ರಾಗ ಕೇದಾರಗೌಳ ಝಂಪೆತಾಳ

ಎಂದ ಶಿಶುಪಾಲ ನಾಗ | ನಮ್ಮಿದಿರು | ಬಂದು ನೀ ಕುಳಿತೆಯಲ್ಲಾ |
ಹಂದಿ ನೀ ಪೂಜ್ಯನೇನೋ | ಇಕೋ ಶರ | ವಂದ ಪೂಜೆಯ ಗೈವೆನು ||339||

ದುರುಳ ಸಚರಾಚರದಲಿ | ವಂದಿಸಲು | ಬರುವುದರಸುತ್ತೆನ್ನಲೀ |
ಧರಣಿಯೊಳು ಪೂಜೆ ಮಾಳ್ಪ | ದೇವರು | ಕರೆದು ತೋರೆನ್ನಲಿನಿತು ||340||

ಇರುವುದೆನ್ನೊಳು ಸರ್ವವೂ | ಪೂಜಿಸಲು ದೊರಕುವುದೆ ಪ್ರತಿದೈವವೂ |
ಚರಣಭಜಕರ ಕೆಲಸಕೆ | ಮೂರ್ಖ ನೀ | ಬರಿದೆ ಮನಗುಂದಲ್ಯಾಕೆ ||341||

ಕರೆದು ಕೆಣಕಲಿಕೆನ್ನನು | ನಾ ಕೇಳಿ | ಬರಿದೆ ಬಿಡುವೆನೆ ನಿನ್ನನು |
ಧುರವ ಕೊಡು ಕೊಡುಯೆನ್ನುತ | ಬಲು ಕಠಿಣ | ಶರದೊಳುಭಯರು ಹೆಣಗುತೆ ||342||

ಹರಿಯ ಕಠಿಣದ ಯುದ್ಧದಿ | ರಣವಾದ್ಯ | ಸುರರ ದುಂದುಭಿ ಘೋಷದಿ ||
ಸರಳುರಿಯ ಕಡುಜ್ವಾಲೆಗೆ | ಉತ್ಪಾತ | ವೆರಸಿದುದು ಧರಣಿಯೊಳಗೆ ||343||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಒಡನೆ ಯಮಸುತ ನಡುಗಿ ಭಯದಿಂ |
ದಡಿಗೆ ವಂದಿಸಿ ವ್ಯಾಸ ನಾರದ |
ರೊಡನೆ ಕೇಳಿದನೀ ಮಹಾದ್ಭುತ | ಪೊಡವಿಯೊಳಗೆ ||344||

ಒದಗುತಿಹುದೇನೆನಲು ನುಡಿದರು |
ಬೆದರಬೇಡ ಸುರಾರಿಯಾಟದೊ |
ಳಿದು ಮಹಾದ್ಭುತವೆನಲಿಕಿತ್ತಲು | ಪದುಮನಾಭ ||345||

ಬೆಸಸಿದನು ಚಕ್ರವನು ಧಾರಾ |
ವಿಸರ ಭೂತಪುರಿ ಸ್ಫುಲಿಂಗ |
ಪ್ರಸರ ತೇಜಃಕಾಂತಿರಸ್ಕೃತವೆಸೆಯಲಾಗ ||346||

ದೆಸೆದೆಸೆಗೆ ದುವ್ವಾಳಿಸುವ ಬೆಳ |
ಕೆಸೆಯೆ ಬಂದು ಪುನೀತ ಕಂಠದ |
ಬೆಸುಗೆ ಬಿಡಲೆರಗಲಿಕೆ ಹಾಯ್ದ | ಗಸಕೆ ಶಿರವು ||347||

ಹರಿಗೊರಳ ಚೌಧಾರೆಯಲಿದರು |
ದುರಸಿ ನೂಕಿತು ರಕ್ತವದರಲಿ |
ಮಿನುಪ ತೇಜಃಪುಂಜವಡಗಿತು | ಹರಿಯ ಪದದೀ ||348||

ರಾಗ ಕಾಂಭೋಜಿ ಝಂಪೆತಾಳ

ಮೊರೆಯಿಡುತ ಶಿಶುಪಾಲಕನ ಸೂನು ಕೃಷ್ಣನಡಿ | ಗೆರಗಿ ಭಕ್ತಿಯೊಳು ನುತಿಸುತ್ತ ||
ಕರುಣಾಳು ಸಲಹೆನ್ನ ಪಿತನ ದುರ್ನಡತೆಯೊಳು | ಚರನ ಹೊಂದಿದನೈಸೆ ನಿನ್ನ ||349||

ಎಂದೆನುತ ಬಲಬಂದು ವಂದಿಸಲಿಕಡಿಗೆರಗೆ | ಮಂದರಧರನು ಕರುಣದಲಿ |
ಮುಂದಿನ್ನು ಭೀತಿ ಬೇಡೆಂದೆತ್ತಿ ಮೋಹದಲಿ | ನಂದನನ ಪಿಡಿದಪ್ಪುತಾಗ ||350||

ತರಳ ನೀ ಬೆದರದಿರು ಇರುವೆ ಬೆಂಬಲಕಾನು | ವಿರಚಿಸಿಗೌರ್ಧ್ವ ದೇಹಿಕವ ||
ಸ್ಥಿರದಿ ಚೈದ್ಯಾಧಿಪತಿಯಾಗೆಂದು ಪಟ್ಟವನು | ಕರುಣಾಳು ಹರಿಸಿ ಬೀಳ್ಕೊಳುತ ||351||

ಶಿಶುಪಾಲಸಂಭವನ ವ್ಯಸನವನು ಪರಿಹರಿಸಿ | ವಸುಧೆಪಾಲಕರ ಸಂತೈಸಿ |
ದೆಸೆದೆಸೆಗೆ ಹಾಯುತಿಹ ಸುಭಟರೆಲ್ಲ ಕೂಡಿ | ನಸುನಗುತ ಕೃಷ್ಣ ದಯಮಾಡೆ ||352||

ರಾಗ ರೇಗುಪ್ತಿ ಏಕತಾಳ

ಧರಣಿಪ ಕೇಳ್ ಶ್ರೀಹರಿಗೆ ಭಕ್ತರ ಮೇ |
ಲಿರುವದೇನ್ ಸಂತೋಷಂ ಪ್ರಿಯ ಸತತಾ ||
ಧುರದಿ ಚೈದ್ಯನ ಚರಣದ ಮನೆಯೊಳ |
ಗಿರಿಸೀ ವೈಕುಂಠಕೆ ಕಳುಹಿಸುತ ||353||

ಬಂದಾ ಗೋವಿಂದ ಸಾನಂದದಿಂದಲಿ ಧರ್ಮ |
ನಂದನನಧ್ವರಶಾಲೆಗೆ ಬೇಗ ||
ಇಂದೀವರಾಕ್ಷನೈತಂದುದೀಕ್ಷಿಸಿ ಕುಂತಿ |
ನಂದನರೆರಗೆ ಭಕ್ತಿಯೊಳಾಗಾ ||354||

ದೂರ್ವಾಸನದಲಿ ಕುಳ್ಳಿರಿಸಿ ನಪವರ |
ಪಾರ್ವರು ಮುನಿಗಳನುಚರಿಸಿ ||
ಗೀರ್ವಾಣದಿ ಸಮಸ್ತರಿಗಭಯವ |
ಸಾರ್ವಭೌಮನು ತೋರ್ದನತಿ ವಿಭವ ||355||

ಚಿತ್ತದಿ ಸಂತೋಷಿಸುತಲಿ ಕುಂತಿ |
ಪುತ್ರ ಗಂಗಾತ್ಮಜರಿರುತಿರಲೂ ||
ಇತ್ತರಾಹುತಿಯ ಪಾವಕನಿಗೆ ಹವಿಘತ |
ವರ್ತಿಯ ಸಮಿಧದ್ರವ್ಯಗಳಿಂದಾ ||356||

ವಚನ

ಯಾಗಾಂತ್ಯದೊಳಚ್ಚುತನಿಂ |
ಗಾಗಮೋಕ್ತ ವಿಧಾನದೊಳವನಂ ತಾಂ ಪೂಜಿಸಿ ಎತ್ತಿದನಾರತಿಯಂ || ||357||

ರಾಗ ಸುರುಟಿ ಏಕತಾಳ

ಹರಿ ಸರ್ವೋತ್ತಮ ರುಕುಮಿಣಿವರ ಶಂ |
ಕರಪ್ರಿಯ ಕೌಸ್ತುಭ ವನಮಾಲಾ || ಸುರಪಾಲಾ ||
ಸುರಪಾಲಿತ | ಗಂಗಾತರುಣಿಯ ಪೆತ್ತಿಹ ಸಿರಿಚರಣಕಾರತಿಯ ಬೆಳಗಿರೆ ||358||

ಧರಣಿಯ ಪ್ರಿಯ ಸುರಜ್ಯೇಷ್ಠಾದ್ಯರು |
ಮೊರೆ ಇಡೆ ಕೇಳುತ ದೇವಕಿಯುದರದೊಳು ಬಂದೂ ||
ಕಪಾಸಿಂಧುವೆಂದೆನಿಪ ಶ್ರೀಕೃಷ್ಣನ ಚರಣಕಾರತಿಯ ಬೆಗಿರೆ ||359||

 

|| ಸಂಪೂರ್ಣಂ ||