ವೃತ್ತ

ತಂಗೀಭಾವವ ಕೇಳ್ದು ತತ್ಖಳವರೆಂ ಬಿಡ್ಚಿಂತೆಯಂ ಸ್ವಾಂತದೊಳ್ |
ಶೃಂಗಾರಂಗಳ ತೋರ್ಪ ತಕ್ಕ ಪತಿಯಂ ತಂದೀವೆ ನಾ ತೀವ್ರದೊಳ್ ||
ಅಂಗೀಕಾರದ | ಗೇಹಕೈದಿ ಮಿಗೆ ನೀಂ ಸೇರೀರ್ಪುದೊಳಗೆನ್ನುತಾ |
ಮಾಂಗಲ್ಯಾತುರದಿಂದಲೆಂದ ನಸುರಂ ಮಾರೀಚನಂಕರವುತಾ ||190||

ಭಾಮಿನಿ

ಮಾವಕೇಳೈಭಗಿನಿಗೀಕ್ಷಣ |
ನೀವರನ ತರಬೇಕು  ನಿನಗಾ |
ಭಾವವನು ನಾನೊರವೆ ವಿದ್ಯುಜ್ಜಿಹ್ವ ನೆಂಬುವನೂ ||
ಪಾವನದ ಕೌಳಿಕದ ಮನೆಯವ |
ನೀವಿವಳ ದುರ್ಗುಣವನುಸುರದೆ |
ಕೋವಿದಾಂಗನೆಯೆನುತವಂಚಿಸಿ ಘಟಿಸು ಕಾರ್ಯವನೂ ||191||

ಕಂದ

ಮೊದಲವನೇ ಮಾರೀಚಂ |
ತದನಂತರ ಕಾರ‌್ಯದೆತ್ನ ವೆಣಿಸುತ ಮನದೊಳ್ |
ಮುದದಿಂ ವಿದ್ಯುಜ್ಜಿಹ್ವನ |
ಸದನಕೆ ಬಂದವನ ಕರೆದು ಕರ್ಣದಿ ಪೇಳ್ದಂ ||192||

ರಾಗ ಕೇತಾರಗೌಳ ಝಂಪೆತಾಳ

ಬಾ ಮಗನೆಯೇಳು ಬೇಗಾ | ನಿನಗೊಂದು |
ಕಾಮಿನಿಯ ತೋರ್ಪೆನೀಗಾ |
ತಾಮಸವಿದೇಕೆ ನೋಡೂ | ನೀನವಳ |
ಕಾಮನಾಟದಲಿ ಕೂಡೂ ||193||

ನಿನಗೆ ತಕ್ಕವಳು ನಾರೀ | ಚಂದದಲಿ |
ಮನುಮಥನಕೈ ಕಠಾರೀ |
ಅನುದಿನವು ನಿನ್ನ ಗುಣವಾ | ಕೇಳುತ್ತ |
ಮನದಿ ಚಿಂತಿಪಳು ಚೆಲುವಾ ||194||

ಹೆಣ್ಣುಗಳು ಸೋಲಬೇಕೂ | ಅವಳ ಮೈ |
ಬಣ್ಣವೇ ಜಗಕೆ ಸಾಕೂ |
ತಿಣ್ಣಬಲ್ಮೊಲೆಯ ಬಗೆಯಾ | ತಿಳುಹೆಮು |

ಕ್ಕಣ್ಣಗಸದಳ ನಿರ್ಣಯಾ ||195||

ಈರೇಳು ಭುವನಂಗಳಾ | ನಡುಗಿಸುವ |
ಧೀರನಾಗಿಹ ದಶಗಳಾ ||
ಘೋರತರ ಕುಂಭಕರ್ಣಾ | ಭಾವಗಳು |
ದಾರಿದಿರು ಸುಗುಣಪೂರ್ಣಾ ||196||

ಕೈಕಸಾದೇವಿಯತ್ತೆ | ಕಿರಿಯಯ್ಯ |
ನಾ ಕಾಣೊನಿನಗೆ ಮತ್ತೇ ||
ಆ ಕಮಲಭವ ಪೌತ್ರನೂ | ವಿಶ್ರವಸು |
ಲೋಕವರಿಯಲು ಮಾವನೂ ||197||

ಆ ಹರೆಯತರದ ಹೆಣ್ಣಾ | ಭೋಗಿಸದ |
ದೇಹ ವಿನ್ಯಾತಕಣ್ಣಾ ||
ನಾ ಹೇಳ್ವೆಬಗೆಯನೆಂದೂ | ವರೆಯಲು |
ತ್ಸಾಹದಿಂ ಪೇಳ್ದನಂದೂ ||198||

ಭಾಮಿನಿ

ಹೆಣ್ಣುಹೊನ್ಮಣ್ಣುಗಳನಿತ್ತರೆ |
ಯೆಣ್ಣಿಸುತ ಸಂಗ್ರಹಿಪುದುತ್ತಮ |
ಪುಣ್ಯಹೀನರಿಗೀ ಪರಿಯ ಸಂಯೋಗ ಘಟಿಸುವದೇ ||
ಮಿಣ್ಣನೈದುವೆ ನಿನ್ನ ಸಂಗಡ |
ಕಣ್ಣಿನಲಿ ನಾನವಳ ಮುಖಮೈ |
ಬಣ್ಣದೊಲವ ನಿರೀಕ್ಷಿಸಿದಮೇಲ್ಮದುವೆಯಾಗುವೆನೂ ||199||

ರಾಗ ಕೇತಾರಗೌಳ ಅಷ್ಟತಾಳ

ಇಂತೆಂದ ಮಾತಲಾಲಿಸುತಾಗ ಮಾರೀಚ |
ಕಾಂತೆಯ ತೋರ್ಪೆನೆಂದೂ |
ನಿಂತು ದೂರದಿ ನೋಡಬೇಕು ಪೇಳಿರುವೆ ಕೇ |
ಳಂತರಂಗದೊಳಿಹಳೂ ||200||

ಎನುತ ಸಂತೈಸಿ ಮತ್ತವನೊಡಗೊಂಡು ಪ |
ತ್ತನಕೆ ಮುಂದೈತರುತಾ |
ಅನಿತರೊಳ್ಸನ್ನೆಗೈಯ್ಯಲು ಶೂರ್ಪನಖಿಸನ್ಮೋ |
ಹಿನಿಯಂತೆ ಬಂದಳಲ್ಲೀ ||201||

ಇಂದೀವರಾಕ್ಷಿ ಶಿಖಾಮಣಿಯೊ ಚೆಲ್ವ |
ಕಂದರ್ಪನರಗಿಣಿಯೋ |
ಚಂದದ ಕಣಿಯೊ ತಾನಾರೆಂಬವೋಲ್ಮಿಂಚಿ |
ನಂದದಿ ತೋರ್ದಳಾಕೇ ||202||

ದೂರದೊಳೀವಿದ್ಯುಜ್ಜಿಹ್ವನವಳಕಂಡು |
ಮಾರನಕಣೆಗಳುಕೀ |
ಮಾರೀಚನೊಡನೆ ನೀಮದುವೆಯಮಾಡಿ ಶ |
ರೀರವನುಳುಹೆಂದನೂ ||203||

ನಿನ್ನಿಂದಾದುಪಕಾರವೆಂದಿಗು ಮರೆಯೆನು |
ಬನ್ನಣೆ ಮಾತಲ್ಲಿದೂ |
ಚೆನ್ನಾರ ಚಲುವೆಯತೋರ್ದೆ | ಹೆಣ್ಣಿದುಸರಿ |
ಯಿನ್ನೆಂದು ಲಗ್ನವಯ್ಯ ||204||

ವಾರ್ಧಕ

ಇಂತೆಂದು ಪೇಳ್ದ ವಿದ್ಯುಜಿಹ್ವಗೊಡಬಡಿಸಿ |
ಸಂತಸದಿ ಪಟ್ಟಣವ ಶಂಗರಿಸಿವಿಧಿಯಿಂದ |
ಮಂತ್ರವಾದ್ಯಂಗಳ ಸುಘೋಷದಿಂ ತೆರೆಪಿಡಿದು ವರನಿರೀಕ್ಷಣೆ ಸಮಯದೀ ||
ತಾಂ ತವಕದಿಂದಲಂತರ ಪಟವ ತೆಗೆಯೆಮ |
ತ್ತಂತಕನ ಮತ್ಯುರೂಪಿನೊಳೆಸೆವ ತರುಣಿಯಂ |
ನಿಂತುನೋಡುತ್ತ ಮೂರ್ಛಿತನಾಗಿ ಭೋಯೆನುತ ನಡುನಡುಗುತಿಂತೆಂದನೂ ||205||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಮಾರಿಯೇ ಹೊರತಿವಳು ಲೋಕದ |
ನಾರಿಯಂದವಿದಲ್ಲ ಮೊದಲೆವಿ |
ಚಾರಿಸದೆ ನಾ ಸೇರ್ದೆ ಮುಂದೇ | ನ್ದಾರಿಯೆನಗೇ ||206||

ದೈವಯೋಗದೊಳೀಮಹಾದು |
ರ್ದೈವದೊಡಲೊಳು ಪೊಗದೆ ಸೌಖ್ಯದಿ |
ಜೀವಿಸಿದ ಮೇಲಿವಳ ಕೂಡಿದ | ಭಾವವಹುದೂ ||207||

ವಡನೆಬಾದೆರದೋಡುತಿರೆಬೆಂ |
ಬಿಡದೆ ಬಳಿಕಾ ಶೂರ್ಪನಖಿಕೈ |
ವಿಡಿದು ನಾನಿನ್ನರಸಿ ನೀಕಂ | ಗೆಡುವದೇಕೇ ||208||

ಅನುದಿನದೊಳು ವಿನೋದದಿಂದಲಿ |
ತನುವ ಸುಖಿಸುವೆ ನೋಡೆನುತಬ |
ಲ್ಪಿನಲಿ ಕುಚದಿಂದೊತ್ತಿ ತಂದಳು | ಕುಣಿವುತೊಡನೇ ||209||

ಭಾಮಿನಿ

ಅತಿಭಯದಿ ಗೋಳ್ಗುಟ್ಟುತಿಹ ನಿಜ |
ಪತಿಯ ಮಂಟಪದೊಳಗಿಳುಹಿಮ |
ತ್ತತಿ ವಿನೋದಗಳಿಂದ ಸಂತಸಗೊಳಿಸಿ ದಾನವರೂ |
ವಿತತ ವೈಭವದಿಂದಲಾದಂ |
ಪತಿಗಳಿಗೆ ಶುಭವೆರಸಿಭೀಕರ |
ಸತಿಯರಾರತಿಯೆತ್ತಿ ಪೂರೈಸಿದರು ಲಗ್ನವನೂ ||210||

ದ್ವಿಪದಿ

ಈ ವಿಧಧಿ ತಂಗಿಯ ವಿವಾಹವನು ಕರಿಸೀ |
ಆ ವಧೂವರರ ಸಂತಸದಿಸತ್ಕರಿಸೀ ||211||

ಇರಲೊಂದು ದಿವಸ ದಶಕಂಠನೋಲಗದೀ |
ನೆರೆಜಾಣ ಮಂತ್ರಿಯನು ಕರೆದೆಂದು ಮುದದೀ ||212||

ವನ ಬೇಟೆಯಾಡಬೇಕೆಂಬ ಮನವಿಹುದೂ |
ಅನುವಾದ ಸನ್ನಾಹಗಳ ಕೂಡಿಸುವದೂ ||213||

ಅಂತಃಪುರಾಂಗನೆಯರೆಲ್ಲರೈತರಲಿೀ |
ಹೊಂತಕಾರಿಗಳೀಗ ಸಂಘಟಿಸಿಬರಲೀ ||214||

ಮೇಲ್ಮಿಕವ ಹಿಡಿವ ಜೂಲ್ನಾಯಿಗಳ ತರಿಸೂ |
ಲೋಲ್ಮಾಡಬೇಕು ಹೊಲಗಾವ್ಲವರಕರಸೂ ||215||

ಎಂದೆನಲು ತತ್‌ಕ್ಷಣದಿ ತರಿಸಲವ ನೋಡೀ |
ಚಂದದಿಂ ಪೊರಮಟ್ಟು ಸಂದಣಿಯಗೂಡೀ ||216||

ಅದುಭುತಾರ್ಭಟದಿ ವಿಪಿನಾಂತರದೊಳಂದೂ |
ವಿಧ ವಿಧದ ಖಗ ಮಗಗಳರಸುತೈತಂದೂ ||217||

ಬಲೆಯ ಬೀಸುತಲಿಕೋ ಕರಡಿ ಪಂದಿಗಳೂ |
ಸಿಲುಕಿದವು ಗುರಿನೋಡಿ ಕೆಡಹು ಬೇಗದೊಳೂ ||218||

ಎನುತ ನಾನಾತೆರದಿ ಪೊಗುತ ಸನ್ನೆಯಲೀ |
ಘನಜೀವಿಗಳ ಸವರುತೀರ್ದರಡವಿಯಲೀ ||  ||219||

ಸಂತಸದಿ ದಶಶಿರನು ಸರ್ವರೊಡಗೂಡೀ |
ಮುಂತೆಸದವಿಪಿನದೊಳು ಮಗಭೇಟೆಯಾಡೀ ||220||

ವಾರ್ಧಕ

ಇತ್ತಮಯದಾನವಂ ಗಂಧರ್ವನಾತ್ಮಜೆಯ |
ನರ್ತಿಯಿಂ ಪರಿಣಯಂಗೊಂಡು ವಸುಮಯಹೇಮ |
ಪತ್ತನವನಾಳುತಿರಲವಗೆ ಜಿನಿಸಿದಳೋರ್ವ ಸಲೆಚೆಲುವೆ ಮಂಡೋದರೀ ||  ಯತ್ಕಿಂಚದವಧಿಯೋಳ್‌ಸತಿವಿಯೋಗವನಾಂತು |
ಚಿತ್ತರದ ಬೊಂಬೆಯಂತೆಳೆಹರಯದಿಂದೆಸವ |
ಪುತ್ರಿಯಂಲಾಲಿಸುತ ಪತ್ನಿಯನ್ನಗಲಿದ ವಿರಕ್ತಿಯೊಳಗಿರುತೀರ್ದನೂ ||221||

ಭಾಮಿನಿ

ರತುನ ನಿರ್ಮಿತವಾದ ಮತ್ತೊಂ |
ದತಿಮನೋಹರ ಭವನದಲಿನಿಜ |
ಸುತೆಯನಿಟ್ಟವಳಂಗರಕ್ಷಗೆ ಸತಿಯರಳವಡಿಸೀ ||
ದಿತಿಜನಿರೆ ಬಳಿಕಾ ತರುಣಿಮ |
ನ್ಮಥನತಾಪದಿಸಿಕ್ಕಿ ಬಳಲುತ |
ಜತೆಯೊಳಿಹ ತನ್ನಾಪ್ತವನಿತೆಯೊಳೆಂದಳನುನಯದೀ ||222||

ರಾಗ ಕಾಂಭೋಜಿ ಅಷ್ಟಾಳ

ಹೇಳುವದೇನಿನ್ನು ಸಖಿಯೇ | ಹ್ಯಾಗೆ |
ತಾಳಲಿಚಂದಿರ ಮುಖಿಯೇ ||
ನಾಳಿಕಶರನೆನ್ನ ನವಯೌವನವಕಂಡು |
ದಾಳಿಯಿಡುವ ತನ್ನ ದಂಡೆತ್ತಿ ಬಂದೀಗಾ | ಹೇಳುವ ||223||

ಇನ್ನೆಂದು ಕಾಂತನೈದುವನೋ | ಬಂದು |
ಚೆನ್ನಾಗಿ ಮುಖವದೋರುವನೋ ||
ಮನ್ನಿಸಿ ಮುತ್ತತಾ ರೆನ್ನುವದಿನವೆಂದೋ |
ನಿನ್ನಾಣೆತನುಮನವೆನ್ನಾಧೀನದೊಳಿಲ್ಲ  || ಹೇಳುವ ||224||

ಸರಸವಾಡುತ ಹೊಂತಕಾರಿ ಅಂತಃ |
ಕರಣವರಿದು ಕಲೆದೋರೀ |
ನೆರೆದು ಸೌಖ್ಯದಲಿ ಮೈಮರಸುವ ನೆರೆಜಾಣ |
ಪುರುಷನ ಬಳಿಯೊಳೆಂದೆೆರಕವಾಗಿರುವೆನಾ || ಹೇಳುವ ||225||

ಬಿಸಜಾಕ್ಷಿ ಹೆಣ್ಣುಜನ್ಮದಲೀ | ವ್ಯರ್ಥ |
ರಸೆಯೊಳುದಿಸಿದೆನೇನೆನಲೀ ||
ಹಸಿದ ವೇಳ್ಯದಲಿರಾಜಿಸುವ ಮಷ್ಟಾನ್ನವು ||
ಖುಸಿಹೊರತಾ ಮೇಲೆ ರಸಗೂಡುವದೆನೋಡು || ಹೇಳುವ ||226||

ಕಂದ

ಮಂಡೋದರಿ ಯೆಂದುದನುಂ |
ಚಂದದೊಳಾ ಚಂದ್ರವದನೆ ತಿಳಿದಾಕ್ಷಣದೊಳ್ |
ಮಂದಸ್ಮಿತ ವಚನದಿ ನಿಃ |
ಸಂದೇಹದೊಳರಿವತೆರದಿ ಪೇಳ್ದಳ್ ಮುದದಿಂ ||227||