ರಾಗ ಮುಖಾರಿ ಏಕತಾಳ

ಬಾಲ ಲೀಲೆಯೋಳಾಡಿದರವರು | ಭೋರ್ಗುಡಿಸುತ |
ಖೂಳರೀರ್ವರು ಸಹೋದರರೂ ||
ನಾಲುಕು ದೆಸೆ ಕಂಪಿಸುವೋಲ್ತಾಪಸ |
ಜಾಲವ ಕಂಗೆಡಿಸುತ ಕುಣಿದಾಡುತ | ಬಾಲ ||   || ಪ ||

ಇದಕೋ ಮುನಿಗಳ ಸ್ಥಳವಿಲ್ಲೀ | ಗೋಳ್ಗುಟ್ಟಿಸುವಾ |
ಮುದುಕಾ ಬ್ರಾಹ್ಮರ ಮೋಜಿನಲ್ಲೀ |
ಪಿಡಿದೆಳೆದೀಗಾ | ದುಗೀಗುಮ್ಮವಮುಷ್ಟಿಯಲ್ಲೀ |
ಜೀವ ಮಾತ್ರ ಬಿಟ್ಟು | ಬದುಕಲೆನುತ ತಮ್ಮ ತಮ್ಮಲ್ಲೀ ||
ಒದಗಿದುಖೋಯೆಂ | ದೊದರುತಮೇಲ್ವಾ |
ದದುಬುತದಲಿತ | ದ್ಬುದರ ವಿಧಾನವ |
ಮೆದೆಗೆಡಿಸುತ್ತಲಿ ವಿಧವಿಧ ಸಮಿಧಾ |
ಜ್ಯದ ಸಾಹಿತ್ಯವ | ಕೆದರುತ ವನದೀ | ಬಾಲ ||  ||122||

ದುರುಳರಾರ್ಭಟೆಯಿಂದಲವರೂ | ಬಾಯ್ಬಿಡುತೊದರೀ |
ಹರಿಯೆ ರಕ್ಷಿಸುನಮ್ಮ ಖಳರೂ | ನಿಲಲೀಸರಿಲ್ಲಿ |
ಪರಮಾಗ್ನಿಹೋತ್ರ ಕೆಡಿಸುವರು | ಎನ್ನುತ್ತ ನಾನಾ |
ತೆರದಿ ದಿಗ್ದೆಸೆಗಯ್ಯಲವರೂ ||
ಭರದಿಂ ಮುನಿಸತಿ | ಯರ ಪಿಡಿದೆಳದ |
ಬ್ಬರಿಸುತಲಿರೆ ಛಲ | ವರಿದಾತಂಕದಿ |
ಮರಳಿಸುವಾಸಿನಿ | ಯರು ನೆರೆದಾಕ್ಷಣ |
ಮರುಗುತಲಿಂತೆಂ | ದರು ತಮ್ಮೊಡನೇ || ಬಾಲ ||123||

ರಾಗ ಕಾಂಭೋಜಿ ಏಕತಾಳ

ಅಕ್ಕಯ್ಯ ನೋಡಾದರಿಂಥ | ಸೊಕ್ಕಿನಾಬಾಲಕರೂ |
ಮಿಕ್ಕಮಾತೇನಿಲ್ಲ ನಮ್ಮ | ರಕ್ಕಸರ್ಬಾಳ್ಗೊಡರೂ ||124||

ಚದುರೆಕೇಳೆನಮ್ಮನೆಯವ | ರುದರ ತುಂಬಿಸುಖದೀ ||
ಮುದದಿ ಪಾಠಪೇಳ್ವಾಗ ಬಂ | ದೊದಗಿ ತಿವಿದರ್ಭರದೀ ||125||

ತಂತು ಮಾತ್ರ ಪೇಳ್ವೆನಾ ಮ | ತ್ಕಾಂತಜಪದೊಳಿರಲೂ ||
ಎಂಥಾದೊಂದು ಗಾಂಡುಗುದಿಗಿ | ಯಂತಿತ್ತ ಬೆನ್ನಿನೊಳೂ ||126||

ಗುಟ್ಟೆನೆನ್ನ ಕೈಯ್ಯನೆಳೆದ | ಜಟ್ಟಿಯಂಥಾ ಪೋರಾ |
ತಟ್ಟನೆ ತಪ್ಪಿಸಿಕೊಂಡು  | ಬಿಟ್ಟೋಡಿದೆ ದೂರ |
ಅಜನ್ಯಾಕಿಂತ ಭೂಭಾರರ | ಸಜಿಸಿದನು ಪೇಳ್ಜಾಣೇ |
ಕುಜನರ ಗಾಬರಿಯೊಳೆನ್ನ | ಯಜಮಾನರ ನಾ ಕಾಣೆ ||127||

ದುರುಳರಿವರ ಕತ್ಯದಲ್ಲಿ | ತೊರೆವುದಾಯ್ತುಧರ್ಮ
ಗುರು ಹಿರಿಯರೆಂದೆನುವದಿಲ್ಲ | ಹರಹರೇನು ಕರ್ಮಾ ||128||

ಸುಮ್ಮಗಿರುವದುಚಿತವಲ್ಲ | ವೊಮ್ಮನದಿಂದೇಳೀ |
ಗಮ್ಮನೇ ನೀವ್ಪೋಗಿ ಕೈಕ | ಸಾಮ್ಮನೊಡನೆ ಪೇಳೀ ||129||

ಕಂದ

ತವನಂತರದಲಿ ತಾಪಸ |
ವಧುಗಳು ಮನನೊಂದು ಮರುಗಿ ಬೈವುತ ವಿಧಿಯಂ ||
ಒದಗಿಲಿ ಕೈಕಸೆಬಳಿಗೈ |
ದಿದು ಮರುಗುತ ಪೇಳ್ದರಾಗ ನಿಜಕಾತುರವಂ ||130||

ರಾಗ ಸಾರಂಗ ಅಷ್ಟತಾಳ

ಮಾತಲಾಲಿಸಿ ಕೇಳಮ್ಮ | ನಾವ್ ಬಡವರಿ | ನ್ಯಾತಕೆ ಬಾಳ್ವೆಯಮ್ಮ ||
ಆ ತಪೋವನದಿತ್ವ | ಜಾತರೀರ್ವರು ಬಂದು |
ತ್ಪಾತಮಾಳ್ಪುದನೆಲ್ಲ | ಭೂತಾಧಿಪತಿಬಲ್ಲ || ಮಾತ ||131||

ಕತುಕರ್ಮವಳಿಸಿದರೂ | ಆಮೇಲೆ ಮ | ತ್ಪತಿಗಳನಟ್ಟಿದರೂ ||
ಧತಿಗೆಟ್ಟುಮುಂದೊಂದು | ಪಥವ ತೋರದೆ ನಿನ್ನ | ಸುತರು ಗೈವಂಥದು |
ರ್ಗತಿಯೇನನೊರವೆವು || ಮಾತ ||132||

ಮಕ್ಕಳ ಮುದ್ದಿಪರು | ಆದರು ಮಾರಿ | ಮಕ್ಕಳಾದರು ಸುತರೂ |
ತಕ್ಕಂತಿದ್ದರೆ ಮನ | ದಕ್ಕರ ಹೊರತಿಂಥಾ |
ಸೊಕ್ಕು  | ಮುದ್ದಲ್ಲ ಕೇ | ಳಕ್ಕಕೋಪಿಸಬೇಡ || ಮಾತ  ||133||

ಕಿರಿಯ ವಿಭೀಷಣನೂ | ಲೋಕಕೆ ಮೆಚ್ಚ್ಚಾ | ಗಿರುವ ಸಾತ್ವಿಕನಿವನು |
ಉರಿಮೋರೆಯವರಿರು | ವರು ಗೋಳ್ಗುಟ್ಟಿಸುವದ |
ಸ್ಮರಿಸಲೀಕ್ಷಣ ಯದೆ | ತರಹರಗೊಳುತಿದೆ || ಮಾತ ||134||

ವೃತ್ತ

ಎಂದಾ ವಾಕ್ಯವ ಕೇಳಿ ತದ್ವನದಿ ನಿಃಸ್ಸಂದೇಹದಿಂದಲ್ಲಿರೀ |
ಮುಂದೀ ಮಕ್ಕಳ ಭಾಧೆಯಂ ನಿಲಿಸುವೆಂ ಪಿಂದಾದುದಂ ಮರೆಯಿರೀ ||
ಒಂದೇಚಿತ್ತದಿ ಪೋಗಿ ಮತ್ತಣುಗಂ ಕುಂದಾಡಲೇಕೆನ್ನುತಾ |
ಬಂದಾ ನಾರಿಯ ವಂದಮಂ ಕಳುಹಿ ತಾ ನಂದಾತ್ಮಜರ ಕರವುತಾ ||135||

ಭಾಮಿನಿ

ಕುವರ ರಾವಣ ಕಂದ ಕುಂಭ |
ಶ್ರವಣ ಬಾಲ ವಿಭೀಷಣರುನೀವ್ |
ಭವವಿರಿಂಚಾದಿಗಳ ಮೆಚ್ಚಿಸಿ ವಿವಿಧವರಗಳನೂ ||
ಲವಲವಿಕೆಯೊಳಗಾಂತು ವಿಭವದಿ |
ಭುವನದಲಿ ಸುಖ ಬಾಳಿರೆನ್ನುತ |
ವಿವರಿಸಲು ಪ್ರತ್ಯೇಕ ಮೂವರುಪೇಳ್ದರಿಂಗಿತವಾ ||136||

ರಾಗ ಭೈರವಿ ಅಷ್ಟತಾಳ

ಆ ಮಹಾಬ್ರಹ್ಮಗಿಂದೂ | ಮೆಚ್ಚಿಸಿಮಹಾ | ಕಾಮಿತವರವ ತಂದೂ |
ಈ ಮೂರು ಲೋಕವ ಕಂಪಿಸದಿದ್ದರೆ | ನಾಮತ್ತೆ ದಶಕಂಠನೇ ||137||

ಲೋಕೇಶನಡಿಯ ನೋಡಿ | ಆಮೇಲೆನ್ನ | ಸಾಕಾರಫಲವಬೇಡೀ |
ಲೋಕದಿಸುಖವಂತನೆನಿಸದಿದ್ದರೆೆ ಮತ್ತೆ | ನಾ ಕುಂಭಕರ್ಣನಲ್ಲಾ ||138||

ವಾರಿಜಾಸನ ಪಾದವ ಧ್ಯಾನಿಸಿಜ್ಞಾನ | ಸಾರಸಾಧನದೊಲವ |
ಭೋರನೆ ಕೈಕೊಳ್ಳದೀರ್ದರೆ ನಿನ್ನ ಕು | ಮಾರ ವಿಭೀಷಣನೇ ||139||

ಕಂದ

ಈ ವಿಧದಿಂ ನಿಜ ಮಾತೆಯ |
ಭಾವದಿ ಸಂತೈಸುತಾಗಲಪ್ಪಣೆಗೊಂಡುಂ |
ಪಾವನತರ ಜನಕಾಜ್ಞೆಯ |
ಮೂವರು ಕೈಕೊಂಡು ನಡೆದರಾ ತಪವನಕಂ ||140||

ವಾರ್ಧಕ

ವಿವಿಧನೇಮದಲನಿಲಹಾರದಲಿ ಮನವೀಸು |
ಕವಲೊಡೆಯದಂತೆ ಪಂಚಾಗ್ನಿ ಮಧ್ಯದಿಮಹಾ |
ರವಿಕಿರಣದಲಿ ದೃಷ್ಟಿಯನ್ನಿಟ್ಟು ನಿಂತೇಕ ಪಾದದಿಂ ಪರಮೇಷ್ಠಿಯಾ ||
ನವಭಕ್ತಿರಸವೆರೆದು ರಾವಣ ರಜೋತಪವ |
ನವನೊತ್ತಿ ನವನಧೋಮುಖನಾಗಿ ತಾಮಸದಿ |
ಭುವನಕೃತಿಹಿತ ಸತ್ವಯೋಗದಿ ವಿಭೀಷಣರ್ ತಪ ಗೈದರೇನೆಂಬೆನೂ ||141||

ರಾಗ ಮಾಧ್ಯಮಾವತಿ ತ್ರಿವುಡೆತಾಳ

ಉರುತರಾನುಷ್ಠಾನದಲಿ ದಶ
ಶಿರನು ನಿಜಶಿರಗಳಲಿನವ ಕಂ |
ಧರಗಳಾಹುತಿಕೊಟ್ಟು ಮತ್ತೊಂ |
ದಿರುವದಕೆ ಕೈಮಿಂಚಲೂ || ತಿಳಿವುತಾಗ  ||142||

ಒದಗಿ ವಾಣೀರಮಣನೈತಂ |
ದದುಭುತವ್ರತವೆತ್ತಿರುವ ದಶ |
ವದನನಂ ಕೈ ಪಿಡಿದು ನಾಮೆ |
ಚ್ಚಿದೆನು ಭಳಿಭಳಿರೆಂದನೂ | ನಗುತ ಬ್ರಹ್ಮಾ ||143||

ನೀ ಮಹಾಶ್ರಮಗೊಂಡೆ ಸಾಕೈ |
ತಾಮಸಂಗೊಳದೀಗ ನಿನ್ನಯ ||
ಕಾಮಿತಾರ್ಥವನೊರದಡೀಕ್ಷಣ |
ನಾ ಮುದದಿ ನಿನಗೀವೆನು || ಪೇಳುಮಗನೆ ||144||

ಎಂದನುಡಿ ಕೇಳುತ್ತಸಂತಸ |
ದಿಂದ ರಾವಣ ಪೇಳ್ದ ಮಾನವ |
ವಂದ ವೆನ್ನಿದಿರಲ್ಲ ಕೇಳ್ ನಿ |
ನ್ನಿಂದಪಡವುದ ಪೇಳ್ವೆನೂ | ಲಾಲಿಸೆಯ್ಯ | ||145||

ಸರಸಿಜೋದ್ಭವನೆನ್ನ ಸಮರದಿ |
ಸುರಪಮುಖ್ಯಾಮರಕದಂಬವು |
ತರಹರಿಸಿ ಮೂಜಗವು ನಡುಗುವ |
ತೆರದಿ ಯೋಗವ ಪಾಲಿಸೈ | ಸ್ವಾಮಿ ನೀನೂ ||146||

ಎನೆ ಮಹಾವಾಕ್ವ್ವತಿ ವಿಲೋಕಿಸಿ |
ಘನ ಮದಾಂಧಕನಿವನೆನುತ ನಿಜ |
ಮನದಿ ತಿಳಿದು ತಥಾಸ್ತುಯೆಂದವ |
ನನುಜನೆಡೆಗೈತಂದನೂ | ತವಕದಿಂದಾ ||147||

ಕಂದ

ಧಿಗಿಲೆನ್ನುತಲಮರಾವಳೀ |
ಧಗಧಗಿಸುತ ದುಷ್ಟಸಾಕು ಮೂಜಗಕೋರ್ವಂ ||
ಮಿಗೆ ಕುಂಭಶ್ರವಣನ ತಪ |
ತೆಗೆಸುವೆವೆನುತೈದಿ ಪೇಳ್ದರಾವಾಣಿಯೊಳಂ ||148||

ರಾಗ ಮಧ್ಯಮಾವತಿ ಏಕತಾಳ

ಪಾವನ ಶಾರದಾದೇವಿ ನೀ ಕಾಯೇ |
ಕೇವಲಾನಾಥರು ನಾವು ಕೇಳ್ತಾಯೇ | ಪಾವನ ||    || ಪ ||

ಆ ವಿಶ್ರವಸುವರದಿಂದ ಕೈಕಸೆಯಲ್ಲಿ |
ಮೂವರುದಿಸಿಮಹಾ ತಪದೊಳಿರೇ ||
ತಾವರಾತ್ಮಜನು ತ್ರೈಜಗವನುಜೈಸೆಂದು |
ತೀವಿದ ವರವಿತ್ತ ದಶಮುಖಗೊಲಿದು || ಪಾವನ ||149||

ತದನುಜ ಕುಂಭಶ್ರವಣನೆಸಗುವ ತಪ |
ವಿಧಿಯನೀಕ್ಷಿಸುತೇನ ಪಾಲಿಪನೋ ||
ತದನಂತರದಲಿ ಸ್ವರ್ಗವ ಬಿಡುವದಕಾಗಿ |
ಮೊದಲೇ ನಾವ್ದಾರಿಯ ನೋಡಿರಬೇಕು || ಪಾವನ ||150||

ಬಿನ್ನಹವೆಮ್ಮದು ಬುದ್ಧಿಪ್ರದಾಯಕಿ |
ಯೆನ್ನುತ ನಿನ್ನೆಡೆಗೈದೆವಿಂದೂ |
ಚನ್ನಾಗಿ ಖಳನಂತಃಕರಣದೊಳಿದ್ದವ |
ನೆನ್ನುವ ಮಾತ ನೀ ತಪ್ಪಿಸಿ ಕಾಯೇ | ಪಾವನ ||151||

ಭಾಮಿನಿ

ತ್ರಿದಶರಾಡಿದ ನುಡಿಯ ಲಾಲಿಸಿ |
ಬೆದರದಿರಿ ನಾ ಕುಂಭಕರ್ಣನ |
ಹದಯ ಮಧ್ಯದಿನೆಲೆಸಿ ವರಗಳಕೇಳ್ವ ಸಮಯದಲೀ ||
ಮುದದಿ ಜಿಹ್ವೆಯೊಳನುಚಿತದ ನುಡಿ |
ಯೊದಗಿಸುವೆ ನೀವ್ ನೋಡಿರೆನುತಾ |
ವಿಧಿಯರಸಿ ತಾಕದಡಿದಳು ದಾನವನ ಚಿತ್ತವನು | ||152|

ರಾಗ ಕಾಂಭೋಜಿ ಜಂಪೆತಾಳ

ಅತಿಕಠೋರದ ತಪಸ್ಸಿನಿಂದನಿಂದಿಹ ದೈತ್ಯ |
ಪತಿ ರಾವಣಾನುಜನ ನೋಡೀ |
ವ್ರತವಿಂದು ಸಾಕು ಕಾಮಿತ ವೀವೆನೆನುತ ವಾ |
ಕ್ಪತಿಯೊರೆಯೆ ದಿತಿಜ ಸನ್ಮತದೀ ||153||

ಶಾರದಾ ಮಹಿಮೆಯಿಂದಾ ಖೂಳನಿಂತೆಂದ |
ಬೇರೇನಪೇಕ್ಷೆ ತನಗಿಲ್ಲ್ಲಾ |
ಸಾರಾಮಿತಾಹಾರ ನಿದ್ರೆಯಿಂದನುದಿನ ಶ |
ರೀರವನು ಸುಖಪಡಿಸಬೇಕೂ ||154||

ಎಂದ ನುಡಿಕೇಳ್ದು ತಕ್ಷಣದಿ ವರವಿತ್ತಾಗ |
ಚಂದದಿ ವಿಭೀಷಣನ ಕಂಡೂ ||
ಕಂದನೀ ಬಹುಧನ್ಯ ತನುವ ಬಳಲಿಸಿದೆ ವರ |
ವಂದಮಂ ಕೇಳು ಪಾಲಿಪೆನೂ | ||155||

ಎನುವದಾಲಿಸಿ ಮಹಾ ಸುಗುಣನೆಂದನು ನಿರತ |
ವನಜನಾಭನಧ್ಯಾನವೊಂದೂ |
ವಿನಯರಸ ಸುಜ್ಞಾನ ಸತ್ಸಂಗವಿವು ಮೂರು |
ಮನವೊಲಿದು ದಯಮಾಡಿ ಸಲಹೈ ||156||

ಹರಿಕಿಂಕರನ ಮಾತಿಗತಿ ಹರುಷವಾಂತವನ |
ಕರವಿಡಿದು ತತ್ಫಲವನಿತ್ತೂ ||
ಪರಮೇಷ್ಠಿ ಮೂವರಂಮನ್ನಿಸುತಮಿಗೆ ಸತ್ಯ |
ಪುರಕೈದನಿವರ ಬೀಳ್ಕೊಟ್ಟೂ ||157||

ಭಾಮಿನಿ

ಇತ್ತಲಾ ಚತುರಾಸ್ಯನೈತರ
ಲರ್ತಿಯಿಂವಾಕ್ಪತಿಯು ದೈತ್ಯನ |
ಚಿತ್ತದಿಂ ಪೊರಮಟ್ಟು ಕಾಂತನ ಹತ್ತಿರೈತರಲೂ ||
ಮತ್ತೆ ಕುಂಭಶ್ರವಣ ಯೋಚಿಸಿ |
ವ್ಯರ್ಥವಾಯಿತು ತನ್ನ ತಪ ಸುರ |
ಕತ್ರಿಮಕೆ ಮತಿಗೆಟ್ಟೆನಕಟಕಟೆನುತ ಹಲುಬಿದನೂ ||158||

ವಾರ್ಧಕ

ಬಳಿಕ ಮೂವರು ಮಹಾ ಹರುಷದಿಂದಿರುತಿರಲು |
ಖಳನಿಕರವೀವಾರ್ತೆಯಂ ಕೇಳುತಾಕ್ಷಣದಿ |
ನಲಿವುತ ಸುಮಾಲಿ ಮತ್ತಾಮಾಲ್ಯವಂತ ಮಾರೀಚಾದಿ ದೈತ್ಯರುಗಳೂ ||
ಘಳಿಗೆಯೊಳನಂತ ಬಲ ಸಂಘಟಿಸಿ ರಾವಣನ |
ಬಳಿಗೈದಿಮತ್ಕುಲಕೆ ರತ್ನದಂತುದಿಸಿದೈ |
ಭಳಿರೆದಿತಿಜಾನ್ವಯವನುದ್ಧರಿಸಬೇಕೆನುತ ಕೊಂಡಾಡುತಿಂತೆಂದರೂ ||159||

ರಾಗ ತುಜಾವಂತು ಜಂಪೆತಾಳ

ದೂರ ನೀ ನಮಗಲ್ಲ ದನುಜಕುಲತಿಲಕಾ |
ಸೇರಿಹುದು ಸಂಬಂಧ ಸಿದ್ಧಿಬುಡತನಕಾ | ದೂರ   || ಪ ||

ಎರಡು ಬಂಧುತ್ವದಲಿ ಮಾರೀಚ ನಿನ್ನ ಸೋ |
ದರಮಾವನಣ್ಣನವ ಹಿರಿಯ ಮಾತುಳನೂ ||
ತರಳ ಕೇಳ್ನೀ ನಮ್ಮ ದೌಹೀತ್ರ ಮತ್ಸುತೆಯ |
ಕರವಿಡಿದವನ ಪಿತ ಪಿತಾಮಹನಿಧಾನಿಸೈ || ದೂರ ||160||

ಎನ್ನಮೊಮ್ಮಗಳೋರ್ವಳಿಹಳೊಲವನೇನೆಂಬೆ |
ಮುನ್ನವಳು ಸೋದರತ್ತಿಗೆನೆಂಟತನದೀ |
ನಿನ್ನ ಚೆಲುವಿಕೆಗವಳು ತರವಹುದು ವಧುಸಾಮ್ಯ |
ವೆನ್ನಲ್ಯಾತಕ್ಕೆ ನೋಡುಚಿತ ಮನಕಹುದೂ || ದೂರ ||161||

ವಾವೆವರ್ತನೆ ಸುತ್ತಿ ಬೆರಸಿಕೊಂಡಿಹುದು ನಿನ |
ಗಾವುದರಿಯದು ಮೊನ್ನಿನೆಳಗೂಸು ಮಗನೇ |
ಈ ವಿವರವಂತಿರಲಿ ಮುಂದಾಹ ಕಾರ್ಯಗಳ |
ಭಾವವೆಂತೆನೆ ಮಾಲ್ಯವಂತನಿಂತೆಂದಾ || ದೂರ ||162||

ರಾಗ ಪಂತುವರಾಳಿ ರೂಪಕತಾಳ

ಮನೆಯ ಗೆದ್ದು ಮಾರಗೆಲುವ ಮತವ ಮಾಡಿರೀ |
ದನುಜರೀಗ ಕೂಡಿ ಚಿತ್ತದನುವ ನೋಡಿರಿ || ಮನೆಯ    || ಪ ||

ಧನೃಪವಿಶ್ರವಸುವಿನಾದಿ |
ವನಿತೆಯಲ್ಲಿ ಜನಿಸಿ ಮರಳಿ |
ಜನಕನಾಜ್ಞೆಯಿಂದನಮ್ಮ
ಧನುಜರಾಳುವಾ || ಘನಸುಲಂಕೆಯಲ್ಲಿ ಮೆರೆವ |

ನನುಜನೀಕುಬೇರನೆನುವ |
ದಿನಿತು ಕಥೆಯನೀಗ ದಶಾ | ನನಗೆ ವಿವರಿಸೀ || ಮನೆಯ ||163||

ರಾಜ ರಾಜನಾ ಪುರದೊಳು |
ರಾಜಿ ಸುತ್ತಲಿರುವನೀ ಸ
ಮಾಜ ನೆರಹಿಸುತ್ತ ಲವನ | ಗೋಜು ತಪ್ಪಿಸೀ ||
ರಾಜಮುಖಿಗೆ ವಿಭವದಲ್ಲಿ |
ರಾಜಪಟ್ಟಗಟ್ಟಲಾ ಸ |
ರೋಜಜಾತನಿತ್ತ ವರಕೆ | ನೈಜ ಕಾರ್ಯವೈ | ಮನೆಯ ||164||

ಮುದದೊಳೀ ಪ್ರಹಸ್ತ ಪೋಗಿ |
ಚದುರತರಗಳಾಡಿ ಧನೃಪ|
ಕದನಕೊದಗಿಬೃಹನೊ ಪುರವ  ಬೆದರಿ ಬಿಡುವನೋ ||
ಹದನವರಿತು ವರೆದಡೀಗ |
ಲದಕೆ ತಕ್ಕುಪಾಯ ವೆಸಗಿ |
ಮುದದಿ ದೈತ್ಯ ದಳವ ಜೋಡಿ | ಸಿದರೆ ವಿಹಿತವೈ  | ಮನೆಯ ||165||

ರಾಗ ಸೌರಾಷ್ಟ್ರ ತ್ರಿವುಡೆತಾಳ

ಧನುಜರಾಡಿದ ನುಡಿಯ ಲಾಲಿಸಿ |
ವಿನಯದಲಿ ದಶವದನ ಪೇಳಿದ |
ಧನಪತಿಯ ಸಹಜಾತ ತಾನೆಂ | ದೆನುವಿರಲ್ಲಾ ||166||

ಅಣ್ಣನೊಡನೀ ಕದನಕಾರ್ಯವು |
ಹಣ್ಣುವದು ತರವಲ್ಲ ದಿತಿಜ ವ |
ರೇಣ್ಯರೆಂತಿದನೊರದಿರೆಂದೆನೆ | ಬಣ್ಣಿಸಿದರೂ ||167||

ವೈರಮಾರ್ಗದ ನೆಂಟತನದ ವಿ |
ಚಾರವೇ ದಾನವರು ದಿತಿಯ ಕು |
ಮಾರರದಿತಿಯ ಸುತರು ನಿರ್ಜರ | ವಾರವಿನಿತೂ ||168||

ಪರಮ ಕಶ್ಯಪ ಸತಿಯರುಗಳೀ |
ರ್ವರುಕಣಾ ಪೂರ್ವದಲಿ ಗೀರ್ವಾ |
ಣರ ವಹಿಸಿ ಹರಿ ತೆಗದ ದೈತ್ಯರ | ಬಿರುದುಗಳನೂ ||169||

ಭಾಮಿನಿ

ಮತ್ತವರ ಮತವರಿದು ದಶಮುಖ |
ನರ್ತಿಯಲಿಕಂಡಾ ಪ್ರಹಸ್ತನಿ |
ಗುತ್ತಮದ ನಿಜ ಮಂತ್ರಿತನವನ್ನಿತ್ತು ಮನ್ನಿಸುತಾ |||
ವಿತ್ತವನ ಬಳಿಗೈದಿ ಶೀಘ್ರದಿ |
ಚಿತ್ತವತ್ತಿಯ ತಿಳಿದು ಬಾರೆನ |
ಲಿತ್ತ ಲಂಕೆಗೆ ಬರಲವಂಸತ್ಕರಿಸಿ ಕೇಳಿದನೂ ||170||

ಕಂದ

ಪರಿಣಾಮವೆ ನಮ್ಮನುಜರು |
ಸರಸದಿ ಮೆರವುತ್ತಲಿಹರೆ ದಾನವ ಕುಲದೊಳ್ ||
ನೆರೆ ಕೋವಿದನೀ ಬಂದಿಹ |
ಪರಿಯೇನೆನಲಾ ಪ್ರಹಸ್ತ ಮೆಲ್ಲನೆನುಡಿದಂ ||171||

ರಾಗ ಕಾಂಭೋಜಿ ಅಷ್ಟತಾಳ

ಚೆನ್ನಾಗಿ ಕೇಳ್ದನಪಾಲಾ | ಮುಂದಕೆ ನಾನಿ |
ನ್ನೆನ್ನುವ ನುಡಿಸಾನುಕೂಲಾ || ಚೆನ್ನಾಗಿ    || ಪ ||

ನಿನ್ನನುಜನ ಮತವಿಟ್ಟೂ | ಈ ನಗರವ |
ತನ್ನಾಧೀನಕೆ ಬಿಟ್ಟು ಕೊಟ್ಟೂ |
ಮನ್ನಿಸೆ ಲೇಸು ಮುಂ | ದಿನ್ನಿಲ್ಲಿ ತಕ್ಕಂಥ |
ಸನ್ನಾಹವೆರದೀಗ | ಬೆನ್ನಟ್ಟಿ ಬರುವನು || ಚೆನ್ನಾಗಿ ||172||

ನೀವವರುಗಳೊಂದು ಸಿದ್ಧಾ | ಈ ವಿಷಯದಿ |
ನಾವಿಲ್ಲಿ ಬರುವದು ಬದ್ಧಾ ||
ಖಾವಂದರೊರದುದ | ಸೇವಕರೆಸಗುವ |
ಭಾವವು ಜಗದಿ ಸ್ವಭಾವಿಕವಾಗಿದೆ || ಚೆನ್ನಾಗಿ ||173||

ಘೋರ ದಾನವರ ಸಂಕುಲವು | ಭೋರ್ಗುಡಿಸುತ್ತ |
ಸೇರಿ ದಶಾಸ್ಯನೊಳಿಹವು ||
ಕೂರುಗುರಿಂ ಪೋಪ | ಬೇರನುಸವರೆ ಕು ||
ಠಾರವೇತಕೆ ಚಮ | ತ್ಕಾರವಗ್ರಹಿಸುನೀ || ಚೆನ್ನಾಗಿ ||174||

ಭಾಮಿನಿ

ಚದುರಮಂತ್ರಿಯ ಭಾವವೀಕ್ಷಿಸಿ |
ಮೊದಲಸುರರಾಳಿರುವ ಪುರವಿ |
ನ್ನಿದಕೆ ಕದನವದ್ಯಾಕೆ ದಶಮುಖನನ್ಯತನಗಲ್ಲಾ ||
ಮುದದೊಳೀಕ್ಷಣ ಬರಲಿ ಸರ್ವರು |
ತದನುಸಾರದ ನಗರವೀ ಭುವ |
ನದಲಿ ಶಿವನೇ ಕೊಡುವನೆನುತಾದರಿಸಿ ಕಳುಹಿದನೂ ||175||

ರಾಗ ಭೈರವಿ ಜಂಪೆತಾಳ

ಇಂತವನ ಬೀಳ್ಕೊಟ್ಟು | ಚಿಂತಿಸುತ ಧನೃಪಪಿತ |
ನಂತವಕದಲಿ ಕಂಡು | ನಿಂತು ವಂದಿಸಲೂ ||176||

ಬಾ ಮಗನೆ ಮೊಗಭಾವ | ತಾಮಸದೊಳಿದೆ ನಿನ್ನ |
ಕಾಮಿತವ ಪೇಳೆನುತ | ಲಾ ಮುನಿಪ ನುಡಿಯೇ ||177||

ತವ ಪದಾನುಗ್ರಹದಿ | ತವೆಹರುಷದಿಂದ ನಗ |
ರವನಾಳುತಿರ್ದೆನೀ | ದಿವಸ ಪರಿಯಂತಾ ||178||

ಭರದಿ ದಶಮುಖನು ಕಾ | ದಿರುವ ನೈ ತಂದು ಮ |
ತ್ಪುರವ ಬಿಡಬೇಕೆನುತ | ಲೊರದರಿನ್ನೇನೂ ||179||

ತಂದೆಕೇಳ್‌ಕುಜನ ಸಂ | ಬಂಧದೊಳಗಿಹುದೆಂತು |
ಮುಂದೇನು ಮಾರ್ಗವೆನ | ಲೆಂದವಿಶ್ರವಸೂ ||180||

ಭಾಮಿನಿ

ಉತ್ತಮೋತ್ತಮ ವಾತಣುಗದು |
ರ್ವತ್ತರಿಂದಹಮಾನದಿಂದಲಿ |
ಸತ್ಯವಂತರ ನಿಷ್ಠುರವೆ ಕಡುಲೇಸು ನಿನಗಿನ್ನೂ ||
ಉತ್ತರದ ದಿಗ್ಭಾಗದಳಕಾ |
ಪತ್ತನದಿಸುಖದಿಂದಲಿರುನೀ |
ಕತ್ತಿವಾಸನ ಸಖ್ಯವಾಹದೆನುತ್ತಲವ ನುಡಿದಾ ||181||

ವಾರ್ಧಕ

ಪಿತನಾಜ್ಞೆಯನ್ನಾಂತು ನವರತ್ನ ಖಚಿತ ನಿ |
ರ್ಮಿತವಾಗಿ ಮೆರೆವಳಕಪುರವರದಿ ನೆಲಸಿ ಧನ |
ಪತಿಯಾಗಿ ದಿಕ್ಪಾಲಕತ್ವಮಂಪಡೆದು ಶಿವಸಖನೆನಿಸಿಕೊಂಡಿರ್ದನೂ ||
ದಿತಿಜರಲ್ಲಿರುತಿರಲು ತನ್ಮಂತ್ರಿಮುಖದಿ ನೀ |
ವತಿ ಬೇಗದಿಂದೇಳಬೇಕೆನುವದಂ ್ರಹಿಸಿ |
ರಥವೇರುತೈ ತರುವ ರಾವಣನ ಬಳಿವಿಡಿದು ಲಂಕೆಯಂಪೊಕ್ಕರೊಲಿದು ||182||

ಮಣಿವಿಷ್ಟರದೊಳು ದಶಕಂಧರನ ಕುಳ್ಳಿರಿಸಿ |
ಝಣ ಝಣತ್ಕಾರದಿಂದುಲಿವ ವಾದ್ಯಂಗಳಿಂ |
ಕುಣಿವುತ್ತ ತೋಷದಿಂ ರಾಜಪಟ್ಟವಕಟ್ಟಿ ನೆರೆದೀರ್ದರವನೆಡೆಯೊಳೂ ||
ಗಣನಿಲ್ಲದಾಹಾರ ಸುಖನಿದ್ರೆಯೋಳ್ಮಲಗಿ |
ದಣಿದನೈ ತತ್ಕುಂಭಕರ್ಣಂಸದಾವಿಭೀ |
ಷಣ ಹರಿಧ್ಯಾನದಿಂ ಸದ್ಗುಣಕಲಾಪದಿಂದನುದಿನಂ ರಂಜಿಸಿದನೂ ||183||

ರಾಗ ಸವಾ ಏಕತಾಳ

ಧನುಜಾಧಿಪ ತಾನೀಪರಿ ಯೋಗದಿ |
ಮಣಿವಿಷ್ಟರವೇರ್ದಿರಲೊಂದೂ ||
ದಿನ ಶೂರ್ಪನಖಿಯು ಘನ ಮದದಲಿ ಯ |
ವ್ವನ ಕಂಗಜತಾಪದಿನೊಂದೂ ||184||

ಇನಯನೊಳಾಡುವ ಮನದುತ್ಸಹದಲಿ |
ಕನಲಿ ಪಿಶಾಚಿಯಧ್ವನಿಗೈದೂ ||
ಘನ ಬೇಗದಿನಡೆತಂದಗ್ರಜನೊಡ |
ನಿನಿತುಸುರಿದಲಾಕ್ಷಣ ಸುದೂ ||185||

ರಾಗ ಸಾರಂಗ ಅಷ್ಟತಾಳ

ಅಣ್ಣ ನೀ ಮದುವೆ ಮಾಡೂ | ಪ್ರಾಯದೊಳೆನ್ನ |
ಬಣ್ಣ ಹ್ಯಾಗಿಹುದು ನೋಡೂ ||
ಸಣ್ಣವಳಿಗೆ ತಕ್ಕ ಸರಿಯಾದ ಪುರುಷರ |
ಕಣ್ಣಾರೆ ಕಂಡರೆ ಕುಣಿದಾಡುತಿದೆ ಮೋಹ || ಅಣ್ಣ ||186||

ಚಿತ್ತಜನಾಟದಲೀ | ಈಕುಚವೆದೆ | ಗೊತ್ತಿ ವಿಲಾಸದಲೀ ||
ಮತ್ತೀದಂತಗಳೂರಿ ಮುತ್ತಿಡುತಾಕ್ಷಣ |
ಹೊತ್ತಗಲದೆಗಂಡನರ್ತಿಯೋಳ್ಕುಣಿಸುವೆ || ಅಣ್ಣ ||187||

ಅಹಹ ನಾನೆಂತಠೀಕೂ | ಮತ್ಕಾಂತಗೆ |
ಬಹುಜನ್ಮ ಸುಕತ ಬೇಕೂ ||
ಮಹಿಯೊಳು ಹೆಣ್ಣು ತುಂಬಿಹುದಾದೆಯು ತನ್ನ |
ಸಹಸಕ್ಕಿನ್ನೆಣಿಯುಂಟೆ ಗ್ರಹಿಸು ನೀ ಶೀಘ್ರದಿ | ಅಣ್ಣ ||  ||188||

ಎನ್ನಯ ಚೆಲುವಿಕೆಗೇ | ತಕ್ಕವನಾಗಿ |
ಮನ್ನಿಸಬೇಕು ಹ್ಯಾಗೇ ||
ಚನ್ನಾಗಿರತಿಸುಖ | ವನ್ನೀಯದಿರ್ದಡೆ
ನಿನ್ನಾಣೆ ನಿಮಿಷದಿ ತಿನ್ನುವೆ ನವನನ್ನು | ಅಣ್ಣ | ||189||