ಭಾಮಿನಿ
ಇಂತವರ ಸಂಗರದ ಕಣನೊಳ |
ನಂತವಾರಣ ಹಯಪದಾತಿಗ |
ಳಂತಕನ ಪುರಕೈವರಭಸವನೆಂತು ವಿವರಿಸುವೇ ||
ಹೊಂತಕಾರಿಗಳೀರ್ವರು ರುತರ |
ಪಂಥ ಪಾಡುಗಳಿಂದಲನಿಮಿಷ |
ಕಾಂತನುರುಬೆಗೆ ನಿಮಿಷ ಖಳಮರನಂತೆ ಮಲಗಿದನೂ ||61||
ವಾರ್ಧಕ
ಅಸುರ ಬಲ ಕಂಗೆಟ್ಟು ಕೂಗುತ್ತ ನೀಗುತ್ತ |
ಬಸವಳಿದು ಬಾಯ್ದರೆದು ಸೊರಗುತ್ತ ಲೊರಗುತ್ತ |
ಲಸು ದಾನ ನೀಡೆಂದು ಬೇಡುತ್ತ ಲೋಡುತ್ತ ಬಿಸುಸುಯ್ದ ಧೈರ್ಯಬಿಡುತಾ ||
ಮುಸುಕಿರುವ ಕೂರ್ಗಣೆಗೆ ಬೆದರುತ್ತ ಲೊದರುತ್ತ |
ಹಸಗೆಟ್ಟು ಬಾದೆರೆದು ಚೀರುತ್ತ ಸಾರುತ್ತ |
ಬಸಿವ ರಕ್ತಾಬ್ಧಿಯಲಿತೊಳಲುತ್ತ ಬಳಲುತ್ತ ದೆಸೆದೆಸೆಗೆ ಸೇರಿಕೊಳುತಾ ||62||
ಕಂದ
ಈ ತೆರದಿಂದಿಹ ಸೈನ್ಯದ |
ಕಾತುರವನು ಕಂಡು ಮರಳಿನೆರಹುತ ದಳಮಂ ||
ಭೂತಳನಡುಗುವವೋಲ್ಪುರು |
ಹೂತನ ಮೇಲ್ಪಾದು ಮಾಲಿ ಬಾಣ್ಗಳ ಸುರಿದಂ ||
ರಾಗ ಸುರುಟಿ ಮಟ್ಟೆತಾಳ
ಕಾದಿದರವರು ಕ್ರೋಧದೊಳಿದಿರು || ಪಲ್ಲವಿ ||
ಕಾರ್ಮಯ್ಯವನೋಲ್ಮೆಯ ಗೋ | ಳ್ಮೇರ್ಮೆಲಾಗಿಹುದೂ ||
ಗಾರ್ಮಾಡುವೆನೆನುತಸ್ತ್ರಾವ | ನೂrfರರ್ಮಾಡುತ ಸುರಿದೂ | ಕಾದಿದರವರೂ ||63||
ಖೂಳ್ಗಳಹದಿರಾ ಲಂಕೆಯ | ನಾಲ್ಗಡಿಗಳ ಮರಸೀ |
ಕಾಲ್ಗಳಚುವೆನೆನ್ನುತ ಮೇ | ಲ್ಮೇಲ್ಗಣೆಗಳವಡಿಸೀ || ಕಾದಿದರವರೂ ||64||
ಬಲ್ಗಣ್ಣಿನಸುರವರಕೇ | ಪಲ್ಗಿರಿಸುವೆನೆಂದೂ |
ನಿಲ್ಗರುವವಿದೇಕೆನ್ನುತ | ಕೋಲ್ಗಳನೆಸೆದಂದೂ || ಕಾದಿದರವರೂ ||65||
ಮೂರ್ಖರಗುಣವೆಂತೆಲೆಸಿಲೆ | ನೀರ್ಕೋಂಬುವ ತೆರದೀ |
ತಾರ್ಕಣೆಯೇಕೆನುತಸುರನ | ತೇರ್ಕಡಿಯಲು ಭರದೀ || ಕಾದಿದರವರೂ ||66||
ಭೋರ್ಗುಡಿಸುತ ನಿಮಿಷದೊಳೆಮ | ನೂರ್ಗಟ್ಟುವೆನೆನುತಾ ||
ಕಾರ್ಗತ್ತಲೆ ಮುಸುಕುವ ವೋ | ಲ್ಮಾರ್ಗಣಗಳನಿಡುತಾ || ಕಾದಿದರವರೂ ||67||
ನಾಲ್ಮೊಗನಿತಾವರ ಬಲ | ತಾಳ್ಮೆರೆಯದಿರಿಲ್ಲೀ |
ಗಾಲ್ಮೇಲ್ಮಾಡುವೆನೆನ್ನುತ ಕೋಲ್ಮಳೆಗರದಲ್ಲಿ || ಕಾದಿದರವರೂ ||68||
ವಾರ್ಧಕ
ಸರಿಬಲದೊಳುರವಣಿಸಿ ವರ ಖಡ್ಗಮುಸಲ ತೋ |
ಮರಗದಾಕುಂತಪರಶುಗಳಿಂದಪೊದು ಮೇ |
ಲ್ವರಿದಡರಿ ತೊಡರಿ ಪದಕರಗಳಿಂಬಿಗಿದು ಭೋರ್ಮೊರವುತ್ತ ಕಾದುತಿರಲೂ ||
ಪುರುಹೂತನವನ ಸಂಗರದಿ ಮೈಮರೆದು ತಾ |
ನರೆನಿಮಿಷ ಮೂರ್ಛೆಯೊಳ್ಮಲಗಿ ಚೇತರಿಸಿ ಕಂ |
ದೆರದು ಖಳನಚ್ಚರಿಯ ಖತಿಗೆ ಬೆರಗಾಗುತ್ತ | ನುತಿಸಿದಂ ಶ್ರೀಹರಿಯನೂ ||69||
ಭಾಮಿನಿ
ವರದ ಲಕ್ಷ್ಮೀಲೋಲ ಜಯಜಯ |
ಸರಸ ಕೀರ್ತಿವಿಶಾಲ ಜಯಜಯ |
ಶರಣಕಿಂಕರ ಪಾಲ ಜಯ ಜಯ ಸುರವಿನುತ ವಿಜಯಾ ||
ಸರಸಿಜಾಕ್ಷ ಮುಕುಂದ ಜಯಜಯ |
ದುರಿತಹರ ಗೋವಿಂದ ಜಯ ಜಯ |
ಪರಮ ನಿತ್ಯಾನಂದ ಜಯ ಜಯ ಪಾಹಿ ದಿಗ್ವಿಜಯಾ ||70||
ರಾಗ ಸೌರಾಷ್ಟ್ರ ತ್ರಿವುಡೆತಾಳ
ನೆನೆದವರ ಮನದಲ್ಲಿ ನೆನೆಸಿಹ |
ನೆನುವವೋಲ್ನಿಮಿಷದಲಿ ಸುರನಾ |
ಥನ ಸಮೀಪದಿ ಶೋಭಿಸಿದ ಶ್ರೀ | ವನಧಿಶಯನಾ ||71||
ಸುರರು ಮೊರೆಯಿಡಲವರಿಗಭಯವ |
ಕರುಣಿಸುತ್ತಾ ದುರುಳರೀಕ್ಷಿಸೆ |
ಭರದಿ ಚಕ್ರವದಾನವರ ಕಂ | ಧರಕೆ ಬಿಡಲು ||72||
ನೋಡುತಾಖಳ ಬೆದರಿನಿಂದಿರ |
ದೋಡಲವನ ಮಹಾಶಿರವು ಚೆಂ |
ಡಾಡಿಸಿತುಗೀರ್ವಾಣ ಪತಿಕೊಂ | ಡಾಡುವಂತೇ ||73||
ಪರಮ ಪುರುಷನ ಶಿರದಿ ಪೂಮಳೆ |
ಗರೆಯೆ ಹರುಷದಿ ದೇವನಿಕರವು |
ಸ್ಮರಿಸಲಾ ಮಾಲಿಯಸಹೋದರ | ರೊರದರಂದೂ ||74||
ಅರರೇ ಕೇಳ್ಕ್ಷತ್ರಿಯರ ಮತವೇ |
ಪರಿಕಿಸಲು ಮೊಗದೆಗದವರ | ಸಂ |
ಹರಿಸಿದಿದು ಸರಿಯಲ್ಲೆನುತ ಮೇ | ಲ್ವರಿದರವನಾ ||75||
ಭಾಮಿನಿ
ದುರುಳರಿರವಂ ಕಂಡು ಮಾಧವ |
ಗರುಡಗಟ್ಟಲ್ಗರಿಯ ಘಾಳಿಯೊ |
ಳೆರಡು ಸಾವಿರ ಯೋಜನಕೆ ಜಜ್ಝರಿತವಾದಂತೇ ||
ಧರೆಗಿಳಿದು ಖಳರೀರ್ವರಳುತಾ |
ಸೊರಗಿ ಸಮಯವಿದಲ್ಲೆನುತ ತ |
ಮ್ಮರಸಿಯರನೊಡಗೊಂಡು ಪಾತಾಳದಲಿ ನೆಲೆಸಿದರೂ ||76||
ವಾರ್ಧಕ
ರವಿಕುಲಜ ಲಾಲಿಸೈ ಬ್ರಹ್ಮಗೆ ಪುಲಸ್ತ್ಯ ಸಂ |
ಭವಿಸಿ ತೃಣ ಬಿಂದುಮುನಿಯಾಶ್ರಮದಿ ರಂಜಿಸು |
ನವ ನೂತನದ ಸರೋವರ ವಂದಿರಲ್ಕದರತಡಿಯಲ್ಲಿ ತಪವಿರುತಿರೇ |
ವಿವಿಧ ಸುರವನಿತೆಯರು ಜಲೇಳಿಗೈವುತಿರೆ |
ಲವರಂ ವಿಲೋಕಿಸುತ ತಪಕೆ ವಿಘ್ನವಿದೆನುತ |
ಯುವತಿಯರ ಕುಲವಿಲ್ಲಿ ಗೈತಂದಡಾಕ್ಷಣದಿ ಗರ್ಭಮದು ಬರಲೆಂದನೂ ||77||
ಉರುಶಾಪವರಿಯದೆ ತೃಣಬಿಂದುವಿನ ಪುತ್ರಿ |
ಬರಲೊಂದು ದಿನ ಬಸುರತಳೆದಂಜಿ ಪಿತಗರುಹು |
ತಿರಲಿದೇಂ ಮಹಿಮೆ ಯೆಂದರಿತವಳು ನಿರ್ದೋಷಿ | ಯೆನುತ ಮುನಿಗೀಯುತಿರಲೂ ||
ವರಪುತ್ರನಂ ಪಡೆಯೆ ವಿಶ್ರವಸುವೆಂದವನ |
ಕರೆದು ಭಾರದ್ವಾಜನಾತ್ಮಸಂಭವೆಯನ್ನು |
ಪರಿಣಯಂ ಗೊಳಿಸಲಾಸತಿಯಲ್ಲಿ ಸುಕುಮಾರನೋರ್ವ ಸಂಜನಿಸೆ ಬಳಿಕಾ ||78||
ಅನುಪಮದ ವೈ ಶ್ರವಣನೆಂಬ ನಾಮವ ಪಡೆದು |
ಘನತಪದಿ ವಿಧಿಯ ಮೆಚ್ಚಿಸುತ ದಿಕ್ಪಾಲತ್ವ |
ವನು ಸುವೇಗದಿ ಪುಷ್ಪಕಂಗಳಂ ಕೈಗೊಂಡು ವರಕುಬೇರಾಖ್ಯಮನ್ನೂ ||
ವಿನಯದಿಂ ಪಡೆದು ತನ್ನಯ್ಯಂಗೆಬಿನ್ನವಿಸಿ |
ತನಗುಚಿತವಾದ ಸುಸ್ಥಳವನ್ನು ತೋರಬೇ |
ಕೆನೆ ಕೇಳುತರಿಭಯದಿದಾನವರ್ಲಂಕೆಯಂ ಬಿಟ್ಟಿಹರು ಕೇಳೆಂದನೂ ||79||
ಭಾಮಿನಿ
ತನಯ ನೀನಿಲ್ಲಿಹುದೆನುತ ತ |
ನ್ಮುನಿಯೊರೆಯೆ ಕೇಳುತ್ತಲಾಕ್ಷಣ |
ಘನ ಹರುಷದಿಂದಾ ಪುರದೊಳಿರುತಿರ್ದನೊಲವಿನಲೀ ||
ಅನುಪಮೋತ್ಸವದಿಂದ ಲೊಂದಿನ |
ಘನ ವಿಮಾನವಡರ್ದು ಹರುಷದಿ |
ಜನನಿಜನಕರ ನೋಳ್ಪತವಕದಿ ಬರಲವರಬಳಿಗೇ ||80||
ರಾಗ ನಾದನಾಕ್ರಿಯೆ ಅಷ್ಟತಾಳ
ಇತ್ತಮಾಲಿಯ ಸೋದರೀರ್ವರು | ಮದ |
ವೆತ್ತು ಪಾತಾಳದಿಂದಸುರರೂ ||
ಪಥಿವಿಯೋಳ್ಸಂಚರಿಸುವೆವೆಂದೂ | ಚಿತ್ತ |
ವೆತ್ತಿಳೆಗೈತಂದರವರಂದೂ ||81||
ಸಂತಸದಿಂದ ಪುಷ್ಪಕದಲ್ಲೀ | ಜಯ |
ವಂತ ಕುಬೇರನ ಕಂಡಲ್ಲೀ |
ಚಿಂತಿಸುತಾಗ ಸುಮಾಲಿಗೇ | ಮಾಲ್ಯ |
ವಂತನಿಂತೆಂದ ದುಃಶ್ಯೀಲಗೆ ||82||
ಆ ಲಂಕಾಪುರದ ವೈಭವಗಳಾ | ನಾವು |
ಪೇಳುವದ್ಯಾತಕೀಕೃತಿಗಳಾ |
ಮೂಲೋಕದೊಳಗೆಲ್ಲಿ ತೋರಿಸೂ | ಬಂದು |
ಕಾಲನೂರಿದನಿವ ಶಭಾಸು | ||83||
ಚೂಣಿಸಾದನಕೆ ನಾವಾದೆವು | ದೈತ್ಯ |
ಶ್ರೇಣಿಕೊಡವನಿಗೊಪ್ಪಿಸಿದೆವು |
ಮಾಣಿಕ್ಯ ವೈದನ್ಯರಲಿಕೊಟ್ಟೂ ಕ |
ಣ್ಕಾಣದಾದುದು ಕೇಳೆಮ್ಮಯ ಗುಟ್ಟೂ ||84||
ವಿಧ ವಿಧ ಮಕರಂದಗಳತಂದು | ಸೃಷ್ಟಿ|
ಸಿದ ಜೇನು ಹುಳುವಿನಂದದೊಳಿಂದೂ |
ವಿಧಿಯೋಗದೊರಕಿತೆಂದೆನೆ ಬೇಗಾ | ಕಂಡು |
ತದನಂತರದಿ ಪೇಳ್ದನವನಾಗಾ ||85||
ರಾಗ ಯರಕಲಗೌಳ ಅಷ್ಟತಾಳ
ತಮ್ಮನಿದಾನಿಸು ತವಕವಿದಲ್ಲ |
ಹೆಮ್ಮೆಯಿಂದಿಷ್ಟಾಯ್ತುಪೇಳುವೆನೆಲ್ಲ | ತಮ್ಮ || ಪಲ್ಲವಿ ||
ಆ ವಿಶ್ರವಸುವ ಸಂ | ಭಾವಿತ ಮುನಿಯಿಂದ |
ಪಾವನ ಭರದ್ವಾಜ | ಮಾವನಾದುದರಿಂದ |
ದೇವವರ್ಣಿನಿಗೀ ಪುತ್ರಾ | ಸಂಭವಿಸಿಹ |
ದಾವ ದೇವನ ವಿಚಿತ್ರಾ | ನಾವಾ ತಕ್ಕ |
ಭಾವದಿಂದಿವನ ನಿ | ರ್ಜೀವದೊಳಿಡುವ ಕೇಳ್ | ತಮ್ಮಾ | ||86||
ಮೋಸದೊಳ್ಮೋಸವ | ಘಾಸಿಗೈದಲ್ಲದೇ |
ಸಾಸಿರಮಾತೇಕೆ | ಬೇಸರಗೊಳ್ಳದೆ |
ಖಾಸಮತ್ಪುತ್ರಿಯಿಂದೂ | ಕೈಕಸೆಪೋಗಿ |
ನೀಸು ಮಕ್ಕಳನೀಡೆಂದೂ | ತಮ್ಮನಿಗೆ |
ಭಿನ್ನೈಸಲಾಕ್ಷ್ಯಣದಿ ಸಂ | ತೈಸುವ ಕರುಣದಿ | ತಮ್ಮ ||87||
ಆ ತರಳಾಕ್ಷಿ ಸಂಜಾತರಾದವರೆಮ್ಮ |
ಪ್ರೀತಿಯಮೊಮ್ಮಕ್ಕ | ಳಾತರಳರು ತಮ್ಮ |
ನೀ ತಿಳಿಮನಸ್ಸಿನಲ್ಲೀ | ಶೌರ್ಯದಲಿ |
ಖ್ಯಾತಿಯಪಡೆವರಲ್ಲೀ | ಮುಂದಸುರರ |
ವ್ರಾತವೇರ್ವುದು ಸುಮ್ಮ | ನ್ಯಾತಕೀ ಬರಿಮಾತು || ತಮ್ಮ ||88||
ಕಂದ
ಇಂತೆನುತಲೆ ಮನೆಗೈದಿದು |
ಕಂತುವಿನರ್ಧಾಂಗಿಯಂತೆ ರಂಜಿಪ ಸುತೆಯಂ |
ಸಂತಸದಿ ಸುಮಾಲಿಯು ಕರ |
ದಂತರ್ಯವ ಪೇಳ್ದನಾಗಲೇ ||89||
ರಾಗ ಭೈರವಿ ಜಂಪೆತಾಳ
ಬಿಸಜಾಕ್ಷಿ ದಾನವರ ಪೆಸರಡಗಿಜಗದಿ ಜೀ |
ವಿಸುವದಿನ್ನೆಂತೆನ್ನೊ | ಳುಸುರುನೀಭರದೀ ||90||
ಕುಲದಿ ಹೆಣ್ಣೊಂದುದಿಸಿ | ಬೆಳೆಸುವಳು ಮತ್ಕುಲವ |
ಕಳೆವಳೈ ಹೆಂಗಳಿಂ | ದಳಿವುಳಿವುಕುಲವು ||91||
ವರವಿಶ್ರವಸುವಿಂಗೆ | ಹರುಷದಿ ಭರದ್ವಾಜ |
ಕರೆದು ನಿಜಸುತೆಯ ನಿ | ತ್ತಿರುವ ಕಾರಣದೀ ||92||
ವನಿತೆಗೆ ಕುಬೇರ ಸಂ | ಜನಿಸಿ ಲಂಕೆಯನಾಳ್ವ |
ಘನವಾದ ಸಂಭ್ರಮವ | ನೆನುವದೇನ್ಮಗಳೇ ||93||
ಅದರಿಂದ ಮುನಿಯ ಸ | ನ್ನಿಧಿಗೈದಿ ಮತ್ತವನ |
ಹದಯ ಮರುಗುವತೆರದಿ | ಮುದಗೊಳಿಸು ಭರದೀ ||94||
ಭೂಸುರ ಶ್ರೇಷ್ಠನಲಿ | ನೀ ಸಂತತಿಯ ಪಡೆಯೆ |
ಲೇಸು ಮುಂದೆಮ್ಮ ಕೊನೆ | ಮೀಸೆ ಮೇಲಾತೂ ||95||
ನಿನ್ನಿಂದ ದೈತ್ಯಕುಲ | ದುನ್ನತಿಯ ನೋಳ್ಪೆನೆಂ |
ದೆನ್ನಲಾಕ್ಷಣದಿ ಮೋ | ಹನ್ನೆಪೇಳಿದಳು ||96||
ಭಾಮಿನಿ
ರೋಗಿ ವೈದ್ಯರ ಮತವಿದೊಂದಾ |
ತೀಗ ಮನ್ಮನಸಿನಲಿ ಮಕ್ಕಳ |
ತೂಗಿ ಪಾಡುತ ಮುದ್ದಿಸುತ ಮೇಲ್ಬಾಲಲೀಲೆಗಳಾ ||
ಸೋಗ ನೋಳ್ಪೆನೆನುತ್ತ ಮನದನು |
ರಾಗದಿಂದಿರುತೀರ್ದೆ ಪೂರ್ವದ |
ಯೋಗ ಘಟಿಸಿತು ತಂದೆ ನಿನ್ನಿಂದೆನುತಲೈದಿದಳೂ ||97||
ಕಂದ
ಆ ಮುನಿಯಗ್ನಿಯೊಳಾಹುತಿ |
ನೇಮದಿ ಸಂಪೂರ್ಣ ಭಾಗವೀವವಸರದೊಳ್ |
ಕಾಮನ ಪೊಸ ಸರಳಂದದಿ |
ಕಾಮಿನಿ ಬಂದೆರಗಿ ನಿಲಲವಂ ನಗುತೆಂದಂ ||98||
ರಾಗ ಚರಿತ್ರೆ ಸಾಂಗತ್ಯ ರೂಪಕತಾಳ
ವಾರಿಜ ನೇತ್ರೆ ಶೃಂಗಾರದ ಚೇಷ್ಟೆ ನೀ |
ದೋರುತ್ತ ಬಲುವೈಯ್ಯರದಲಿ ||
ಘೋರ ಕಾನನಕೈದ | ಕಾರಣವೇನು ನೀ |
ದಾರು ಪೇಳನುಮಾನವ್ಯಾಕೇ ||99||
ಕಸುರರಕನ್ನಿಕೆಯೊ ಕಿನ್ನರ ಯಕ್ಷ ಗಂಧರ್ವ |
ತರುಣಿಯುರಗಜಾತಿಹೆಣ್ಣೋ ||
ಪರಿಣಯಾಗಿಹುದೊ ಸ | ದ್ವರನ ಮೇಲಾಸೆಯೊ |
ತರಳರು ಬೇಕೆಂಬ ಮನಸೋ ||100||
ಪತಿಯೋಳ್ಬೇಸರಗೊಂಡು | ಖತಿಯಿಂದ ಬಂದೆಯೊ |
ಮತಿವಂತೆ ಮಾಜಬೇಡೆನಲೂ ||
ಅತಿಚಮತ್ಕಾರ ದೃಷ್ಟಿತಳಾಗಿ ತನ್ನ ಸಂ |
ಗತಿಯ ತಾನೆಂದಳಾತನಿಗೇ ||101||
ರಾಗ ಕೇದಾರಗೌಳ ಅಷ್ಟತಾಳ
ಪರಮ ತಾಪಸ ಕೇಳೆನ್ನಿಚ್ಛೆಂುು ನಿನ್ನಂತಃ |
ಕರಣಕ್ಕೆ ಗೋಚರವೂ ||
ಪುರುಷರಿದಿರು ಸ್ತ್ರೀಯರೆಂತಾದರೆನುವರೆ |
ಮರಳಿ ನಾಚಿಕೆ ಬಿಡದೂ ||102||
ಎನೆ ಕೇಳ್ದು ಮುನಿಪ ಮಾನಿನಿಯೇ ನಾತಿಳಿದೆ ನೀ |
ನಿನಿತಿಲ್ಲಿ ಬಂದುದನು ||
ತನುಜಾತರಾಗಬೇಕೆನುವದೊಂದಿದೆ ಕೇಳೆಂ |
ದೆನಲು ಕೈ ಮುಗಿದೆಂದಳೂ ||103||
ವಸುಧೆಯೊಳ್ಮಿಗಿಲಾದ ಶಿಶುಗಳಾದರೆ ತಾನು |
ಹಸುಗೂಸನಾಡಿಸುತ ||
ಎಸೆವ ಜೋಲ್ಲಿಳಿದು ರಂಜಿಸುವಗಲ್ಲವಮೇಲು |
ಮುಸುಕಿನೋಳ್ಮುದ್ದಿಸುವೇ ||104||
ಚೆಲುವೆ ಕೇಳಗ್ನಿ ಪ್ರಜ್ವಲಿಸೆಪೂರ್ಣಾಹುತಿ |
ಯೊಳಗಿಹ ಕಾಲದೊಳೂ |
ಮಲತು ಕೇಳ್ದುದರಿಂದಲಿಳೆಯೊಳುತ್ಪಾತ ಮ |
ಕ್ಕಳುಗಳಾಗುವರೀರ್ವರೂ ||105||
ಹಾರೈಸಿನಾರಿ ಕುಮಾರಾ ಪೇಕ್ಷೆಯುಲಿ ಮೈ |
ಲಾರಕೈದಂತಾಯಿತೂ ||
ಕ್ರೂರ ಮಕ್ಕಳ ನಾನಿನ್ನಾರೈವ ಬಗೆ ಯೆಂತೀ |
ಪ್ರಾರಬ್ದಕೇನೆಂಬೆನೂ ||106||
ಅಂಜದಿರಂಗನೆ ಮಂಜುಳ ಸುತನೋರ್ವ |
ಸಂಜನಿಸುತಮರಳೀ |
ಕಂಜಾಕ್ಷಿ ಲೋಕದಿರಂಜಿಸಿತನ್ನವ |
ರ್ಭಂಜಿಸಿ ಬಾಳುವನೂ ||107||
ಇಂತಾದರಿನ್ನದರಂತೆ ಮತ್ತೊಂದುಂಟು |
ಚಿಂತೆಯ ವಿವರಿಸುವೇ ||
ಅಂತರಿಸದೆ ಹೆಣ್ಣುಸಂತಾನ ಕರುಣಿಸಿ |
ಸಂತೈಸು ಕರುಣನಿಧೀ ||108||
ಮಡದಿ ಕೇಳ್ಕುಲದಬೇರ್ಕಡಿದು ಬೋರ್ಗುಡಿಸುವ |
ಹುಡುಗಿಯೋರ್ವಳನು ನೀನೂ ||
ಪಡೆವೆಯಿನ್ನಾತಂಕಕೊಡದಿರಿತ್ತಿರುವೆ ನಿ |
ನ್ನೊಡಲಿಷ್ಟವೆಲ್ಲವನೂ ||109||
ಕಂದ
ಹರುಷದೊಳಿರಲಾ ಕೈಕಸೆ |
ವರಮುನಿಪ ಮುನ್ನಪೇಳ್ದ ಸುವಿಧಾನದೊಳಂ |
ಪರಮೋತ್ಪ್ಪಾತದ ಲಗ್ನದಿ |
ಬರೆದಶಮುಖಕುಂಭ ಕರ್ಣರೀರ್ವರಪಡೆದಳ್ ||110||
ವಾರ್ಧಕ
ತಳುಕಿತೈಜಲಧಿ ಮತ್ತುಳುಕಿದಂ ಫಣಿಪ ಭೂ |
ತಳ ಕಂಪಿಸಿತು ಕೂರ್ಮನಳವಳಿದ ದಿಗ್ದಂತಿ |
ಕುಲವದುರೆ ತಾರೆಗಳ್ಮಳೆಯಂತೆ ನೆಲ ಕುದುರೆ ಘಳಿಲನೆ ಸಹಸ್ರ ಸಿಡಿಲೂ||
ಮೊಳಗುವಂತಾರ್ಭಟಿಸಿ ತಲೆದೋರಿ ಭೋರೆನಲ್ |
ಪೊಲಬರಿಯದಿಂದ್ರಾದಿ ನಿಳಯದೊಳ್ಕಂಗೆಟ್ಟು |
ಬಲಿದಿನೆಯರಂತೆಕ್ಕೆಗೊಳಿಸಿದರ್ಸತಿಯರಂದೆಳೆ ಮಕ್ಕಳಳುವ ಭರಕೇ ||111||
ರಾಗ ಮಾರವಿ ಏಕತಾಳ
ಮತ್ತಾಸತಿ ಮುದವೆತ್ತು ವಿಭೀಷಣ | ನುತ್ತಮ ಲಗ್ನದಲೀ ||
ಸತ್ಯವಂತಸತ್ಪುತ್ರನೆನುವ ವೋಲ್ | ಪೆತ್ತಳು ತವಕದಲೀ ||112||
ಹರಿಕಿಂಕರನುರು ತರ ಲಾವಣ್ಯದಿ | ಪರಿಶೋಭಿಪನೆನುತಾ |
ಸುರರಂಬರದೊಳು ಹರಸುತ ಪೂಮಳೆ | ಗರೆದರು ತೋಷಿಸುತಾ ||113||
ತದನಂತರಮಹ ದದುಭುತರೂಪದೊ | ಳುದಿಸಲು ಶೂರ್ಪನಖೀ |
ಒದರಿದಳೀಜಗ ವದುರುವತೆರದೊಳು | ಕದನ ಕಠೋರಮುಖೀ ||114||
ವಾರ್ಧಕ
ಈ ಪರಿಯ ಸಂತತಿಯ ನೀಕ್ಷಿಸುತ ತರಳರ್ಗೆ |
ತಾಪಸೋತ್ತಮ ನಾಮಕರಣ ವಿದ್ಯುಕ್ತ ಚೌ |
ಲೋಪನಯನಾದಿಯಂ ವಿಧಿಸಿ ತಜ್ಯೇಷ್ಠರೀರ್ವರ ಮಹೋತ್ಪಾತಗುಣವಾ ||
ತಾಪರೀಕ್ಷಿಸಿ ದುಷ್ಟರೆಂದರಿದಿರಲು ಸುಪ್ರ |
ತಾಪದಿಂದಿನದಿನಕೆ ರೂಪು ಕಲೆವರ್ಧಿುತ |
ವೈಪರೀತ್ಯದ ಬಾಲಲೀಲೆಯೊಳ್ಕುಂಭಕರ್ಣನೊಳೆಂದ ದಶಕಂಠನೂ ||115||
ರಾಗ ಕೇತಾರಗೌಳ ಅಟತಾಳ
ತಮ್ಮ ಯಾತಕೆನಿಂತೆ ಬೇಗೇಳು ವನಕೈದಿ |
ಸುಮ್ಮಾನದಿಂದಾಡುವಾ ||
ದಮ್ಮಯ್ಯಯಂದರು ಬಿಡದವರ್ಗಳ ಪಿಡಿ |
ದೊಮ್ಮೆಗೋಳ್ಗುಟ್ಟಿಸುವಾ ||116||
ಅಣ್ಣನಾಬಹೆ ನೋಡು ಮುದಿ ಹಾರುವರಗುದ್ದಿ |
ಕಣ್ಣನೀರಿಕ್ಕಿಸುವಾ ||
ದೊಣ್ಣೆಯೊಳೊಬ್ಬೊಬ್ಬರನೆ ಸದೆಬಡಿದವ |
ರ್ಪೆಣ್ಗಳಪಿಡಿದೊಯ್ಯುವಾ ||117||
ಶಭಾಸು ತಮ್ಮಹಾಗಿರಬೇಕು ಮೆಚ್ಚಿದೆ |
ನೀ ಬಡವಿಭೀಷಣನೂ ||
ತಾ ಬರಲೊಲ್ಲೆನೆನುತತಾಯಿ ಬದಿಯಲ್ಲಿ |
ಗೂಬೆಯಂತಿರುತಿಹನೂ ||118||
ಮನೆಯಲ್ಲಿ ಕೇಳಣ್ಣ ನಮ್ಮಮ್ಮಬಡಿಸಿದ |
ರಿನಿತು ಕುಕ್ಷಿಗೆ ಸಾಲದೂ ||
ವನದಿಮಹಾ ಮಗಗಳಕೊಂದು ಹಸಿಬಿಸಿ |
ತಿನಬೇಕು ಸವಿಸವಿದೂ ||119||
ಅಮ್ಮ ಕಂಡರೆಬೈವಳೆಂಬ ಭೀತಿಯಬಿಡು |
ನಮ್ಮ ವಿಲಾಸದಲೀ |
ಕಮ್ಮಗಾಗಿಹ ಮಾಂಸಾಹಾರವನುಂಡಿಲ್ಲಿ |
ಘಮ್ಮನೈದುವ ಮರಳೀ ||120||
ಅಪ್ಪಯ್ಯ ಕರದೆಮ್ಮಕೊಲುವನೀನೋಡಣ್ಣ |
ನಿಪ್ಪತ್ತು ದಿನವಾದರೂ ||
ಸಪ್ಪಳಿಲ್ಲದೆ ನಿದ್ರೆ ಗೈವನೆಂದಾತನೆಂ |
ದೊಪ್ಪಿಕೊಂಡೈದಿದರೂ ||121||
Leave A Comment