ಶಾದೂಲರ್ವಿಕ್ರೀಡಿತ ವೃತ್ತ

ಶ್ರೀಗೌರೀ ವರಮಿಂದು ಶೇಖರ ಜಟಾಜೂಟಂ ಜಗತ್ಪಾವನಂ |
ಯೋಗೀಂದ್ರಾರ್ಚಿತಪಾದಪದ್ಮಯಗಳಂ ಗಂಗಾಧರಂಶಂಕರಂ |
ಭೂಗೀರ್ವಾಣಸಮಸ್ತದೇವವಿನುತಂ ವ್ಯಾಘ್ರಾಜಿನಾಲಂಕತಂ |
ನಾಗಾರಾತಿತುರಂಗಮಿತ್ರನಮಿತಂ ಶ್ರೀ ಮಂಜುನಾಥಂ ಭಜೇ ||  ||1||

ರಾಗ ನಾಟಿ ರೂಪಕತಾಳ

ಜಯ ಜಯನುತಿಹರಿ ಚಂದನ | ಜಯ ಜಯಕತ ಸುರವಂದನ |
ಜಯ ಜಯಪಶುಪತಿನಂದನ | ಜಯ ಜಯ ಗುಣಸದನಾ ||
ಜಯ ಜಯ ಸನಕಸನಂದನ | ಜಯ ಲೇಪಿತ ಹಚ್ಚಂದನ |
ಜಯ ಮೂಷಿಕ ಸ್ಯಂದನ | ಜಯವಾರಣವದನಾ || ಜಯ ಜಯ ||2||

ಘೋರಭವಾರ್ಣವ ತಾರಣ | ಚಾರುತರೋತ್ಸಹ ಕಾರಣ |
ಭೂರಿ ಕಪಾಸಂಪೂರಣ | ಬಹು ವಿಘ್ನವಿಹರಣಾ ||
ವಾರಿಧಿಸಮಗಂಭೀರಣ | ವೈರಿಕುಲಾಭ್ರ ಸಮೀರಣ
ಸೂರಿಮನೋಸಂಚಾರಣ | ಶುಭಕರತಚ್ಚರಣ || ಜಯ ಜಯ ||3||

ನಿರತಸು ಬುದ್ಧಿ ಪ್ರದಾಯಕ | ಪರತರ ರೂಪ ವಿನಾಯಕ |
ಶರಣಾಗತ ಪರಿಪಾಲಕ | ಸಾಲಂಕತ ತಿಲಕಾ ||
ವರ ಪಾಶಾಂಕುಶ ಮೋದಕ | ಧರವೆಂಕಟ ಹಚ್ಛಾಯಕ |
ದುರಿತಾವಳಿ ವಿಚ್ಛೇದಕ | ಕವಿತಸ್ಫುರ ದಳಕಾ || ಜಯ ಜಯ ||4||

ವಾರ್ಧಕ

ಗಿರಿಶನಂ ಗಿರಿಜೇಶನಂ ಸುಪ್ರಕಾಶನಂ |
ಪುರೂಹೂತನುತಿಪಾತ್ರನಂ ಫಾಲನೇತ್ರನಂ |
ಶರಜನ್ಮಮುಖತಾತನಂ ಮಹಾಖ್ಯಾತನಂ ಸುರಯೋಗಿ ಸುಪ್ರೀತನಂ ||
ದರಹಸಿತ ಪಂಚಾಸ್ಯನಂ ನಿರಾಲಸ್ಯನಂ |
ಪರಮರುಚಿ ವಿಹಾರನಂ ಹಾರನಂ ವರಕಪಾಸಾರನಂ|
ಸ್ಫುರದಸಿತಸುಗ್ರೀವನಂ ವಾಮದೇವನಂ ಭಜಿಸುವೆನು ಮನ್ಮನದೊಳೂ ||5||

ಭಾಮಿನಿ

ಶ್ರೀರಮೆಯ ಭಜಿಸುತ್ತ ಚಿತ್ತದಿ |
ಭಾರತಿಗೆ ವಂದಿಸಿ ಭವಾನಿಯ |
ಚಾರು ಪದಕಭಿನಮಿಸಿ ದಿಕ್ಪಾಲಕರ ಬಲಗೊಂಡೂ ||
ನಾರದಾದಿ ಮಹಾ ಮುನೀಂದ್ರರ |
ವಾರಕಾನತನಾಗಿ ವಿನಯದಿ |
ಸಾರಸಾಸನಗೆರಗುತಲಿ ಸತ್ಕಥೆಯನುಸುರುವೆನೂ ||6||

ದ್ವಿಪದಿ

ಶ್ರೀಮದುತ್ತರಕಾಂಡ ರಾಮಾಯಣದಲೀ |
ರಾಮನಿಗಗಸ್ತ್ಯ ಮುನಿಪೇಳ್ದ ಕಥನದಲೀ ||7||

ರಾವಣಾದಿಗಳುದಿಸಿ ಮೆರೆದ ಸಂಗತಿಯಾ |
ನಾವಿವರಿಸುವೆ ಸರಸಗಾನದಲಿ ಕಥೆಯಾ ||8||

ದುಷ್ಟನ ಚರಿತ್ರ ವೆಂದೆನತದೂಷಿಸದೇ ||
ವಿಷ್ಣುಸೇವಕ ವಿಭೀಷಣಗುಪೇಕ್ಷಿಸದೇ ||9||

ಯತ್ಕಿಂಚಿದಪಶಬ್ಧವಿರೆ ತಿದ್ದಿ ಜನರೂ |
ಚಿತ್ತವಿಟ್ಟೀ ಕಥೆಯ ಕೇಳಿಕೋವಿದರು ||10||

ಮರನೇರ್ದ ಮನುಜರಡಿ ಕೆಳಗೆಂಬುದರಿತೂ |
ವಿರಸವೆಸಗದೆ ಸರ್ವರಾದರಿಪುದಿನಿತೂ  ||11||

ವಾರ್ಧಕ

ದಶರಥನೊಳುದಿಸಿ ಕೌಶಿಕನ ಮಖವಾರೈದು |
ವಸುಮತೀ ಸಂಭವೆಗೆ  ಪತಿಯಾಗಿ ಪಿತನಾಜ್ಞೆ |
ಯೆಸಗಿ ರಾವಣನಿಂದ ಸತಿವಿರಹಮಂ ತಾಳ್ದು | ಕಪಿಸೈನ್ಯದಿಂದರಿವುತಾ ||
ಮಸಗಿಸೇತುವಕಟ್ಟಿ ದನುಜರಂ ಸದೆ ಬಡಿದು |
ಕುಶಲದಿ ವಿಭೀಷಣಗೆ ಲಂಕೆಯನ್ನಿತ್ತು ನಿಜ |
ಬಿಸಜಾಕ್ಷಿ ಸಹಿತ ಪುಷ್ಪಕವೇರಿ ರಘುರಾಮ ಪುರಿಗೈದನುತ್ಸಹದೊಳು ||12||

ಕೌಸಲ್ಯೆ ಮೊದಲಾದ ಮಾತಳಿಗಭಿನಮಿಸಿ |
ತೋಷದಿಂ ಭರತ ಶತಘ್ನರಂ ಸಂತೈಸಿ |
ವಾಸಿಷ್ಠ ಮುನಿಮುಖ್ಯರಭಿಮತದಿ ಪಟ್ಟಾಭಿಷೇಚನದಿ ಸಲೆ ರಂಜಿಸೀ ||
ಆ ಸಮೀರಜ ರವಿಜ ದಶಗಳಾನುಜರನು |
ಲ್ಲಾಸದಿಂ ಮನ್ನಿಸುತ ಸುಮನಸಾಧ್ಯರನತಿವಿ |
ಲಾಸದಿಂ ಸಾಕೇತಪುರದಿ ರಂಜಿಸಿದ ಲಕ್ಷ್ಮಣ ಸಹಿತ ರಘುನಾಥನೂ ||13||

ಭಾಮಿನಿ

ಅತಿವಿನೋದದಿ ರಾಮ ತಾಪಸ |
ತತಿಗಳೊಡನಿರೆ ತನ್ಮುನಿವ್ರಜ |
ನುತಿಸಿ ರಾವಣ ಕುಂಭಕರ್ಣಪುರಂದರಾರಿಗಳು ||
ಮಥಿಸಿದೇನಾಶ್ಚರಿಯ ನಿನ್ನಯ |
ವಿತತ ಕೀರ್ತಿಯಬಣ್ಣಿಸುವಡಹಿ |
ಪತಿಗಸಾಧ್ಯವೆನುತ್ತಲೆಂದರಗಸ್ತ್ಯ ಮೊದಲಾಗೀ ||14||

ರಾಗ ಸೌರಾಷ್ಟ್ರ  ತ್ರಿವುಡೆತಾಳ

ಇಂತು ಮುನಿಸನ್ನುತಿಯ ಕೇಳ್ದ |
ತ್ಯಂತಹರುಷಿತನಾಗಿ ಕೌತುಕ |
ವಾಂತಗಸ್ತ್ಯನೊಳೆಂದ ಸೀತಾ | ಕಾಂತನಂದೂ ||15||

ಯೆಲೆಮುನಿಪ ನೋಡೀ ಪರಾಕ್ರಮ |
ಬಲಮಹಾ ಶೌರ್ಯಾದಿ ಗುಣದಶ |
ಗಳನಿಗೊಲಿದವರ‌್ಯಾರು ವಿವರಿಸಿ | ತಿಳುಹಬೇಕೈ ||16||

ಲಂಕೆಯೊಳಗಿರುವಸುರರೆಡಬಲ |
ವಂಕದಲಿ ರಾವಣಗಿದೇನೈ |
ಕಿಂಕರರು ಪರಿಹರಿಸು ನೀ ಮಮ | ಶಂಕೆಗಳನೂ ||17||

ಇನಿತು ಪೇಳ್ದುದ ಕೇಳುತಾಗಲೆ |
ಮುನಿಪ ಹಿಗ್ಗುತ ನೀ ಜಗನ್ಮಯ |
ನಿನಗೆ ತಾನಿನ್ನೊರೆವುದಾವುದು | ಘನಚರಿತ್ರೇ ||18||

ನಿನ್ನಮಾಯವ ನಿನ್ನೊಳರುಹಲು |
ಮನ್ನಣೆಗಳೀಸೇಕೆಬರಿದೈ |
ನಿನ್ನ ಚಂಚಲವ್ಯಾಕೆನುತ ಸಂ ಪನ್ನನುಡಿದಾ ||19||

ವಾರ್ಧಕ

ತರಣಿ ವಂಶಜನೆ ಕೇಳ್‌ಬ್ರಹ್ಮ ನಿರ್ಮಿತದಕ |
ರ್ಬುರ ಕುಲದಿ ಜನಿಸಿ ವಿದ್ಯುತ್ಕೇಶಿಯೆಂಬ ಖಳ |
ಸರಸದಿಂ ನಿಜ ಸತಿಗೆ ಗರ್ಭವನ್ನಿತ್ತು ಮತ್ತವ ದೂರ ತವದೊಳಿರಲೂ ||
ಮರಳಿ ತನ್ನಾರಿ ಪುತ್ರನ ಪಡೆದು ಬಿಸುಟಲ್ಲಿ |
ಪುರುಷನಿದ್ದೆಡೆಗೈಯ್ಯುಲಿತ್ತ ಹರಪಾರ್ವತಿಯ |
ರರಿತು ಶಿಶುವಂ ಕೊಂಡು ವರಸುಕೇಶಿಯುಯೆನುವಪೆಸರಿಟ್ಟು ಪಾಲಿಸಿದರೂ ||20||

ಭಾಮಿನಿ

ಬೆಳೆದು ಯೌವನ ವೇರಲವನಿಗೆ |
ಚೆಲುವಗಂಧರ್ವಿಕೆಯ ಪರಿಣಯ |
ಗೊಳಿಸಲಾತಗೆ ಮಾಲ್ಯವಂತ ಸುಮಾಲಿಮಾಲಿಗಳೂ ||
ಖಳರುದಿಸಿ ವಿಧಿವಶದಿ ಲಂಕಾ |
ನಿಳಯಿದಲಿ ತದ್ವಿಶ್ವಕರ್ಮನ |
ಕಲಿತವಾಗಿಹ ಪುರದಿ ನೆಲೆಸಿದರತಿಪರಾಕ್ರಮದೀ ||21||

ಕಂದ

ಇಂತಾರ್ಭಟದಿಂ ಖಳರು ಮ |
ಹಾಂತವಿಷಾದದೊಳು ಜಗವನುರೆ ಕಂಗೆಡಿಸಲ್ |
ಚಿಂತಿಸುತಲಿ ವಿಭುಧರ್ಸುರ |
ಕಾಂತನ ಸಾಮಿಪ್ಯ ಕೈದಿನುಡಿದರ್ಭರದೊಳ್ ||22||

ರಾಗ ಕೇದಾರಗೌಳ ಝಂಪೆತಾಳ

ಚಿತ್ತ ವಿಟ್ಟಿದರ ಕೇಳೂ | ದೇವೇಂದ್ರ |
ಮತ್ತನಾಗುವರೆ ಪೇಳೂ ||
ಎತ್ತ ನೋಡಿದಡಸುರರೂ | ಮೂಜಗದಿ |
ಕತ್ತಲೆಯ ಮುಸುಕುತಿಹರು ||23||

ತಕ್ಕ ಕಾರ್ಯಗಳ ಹೂಡೀ | ನಾವೀಗ |
ರಕ್ಕಸರ ಪಾಳುಮಾಡಿ ||
ಸೊಕ್ಕುಗಳ ಮುರಿಯಬೇಕೂ | ಹೊರತವರು |
ದಕ್ಕರೈ ನೋಡ್ಪರಾಕೂ  ||24||

ಅರಿಗಳಿಂಗಿಂಬು ಕೊಡದೆ | ಬೇಗ ಸಂ |
ಹರಿಪುದೇಲೇಸು ಬರಿದೇ ||
ಮರತಿರುವದುಚಿತವಲ್ಲ | ಎಂದೆನಲು |
ಪುರುಹೂತ ಪೇಳ್ದಸೊಲ್ಲ ||25||

ಶಾರ್ದೂಲವಿಕ್ರೀಡಿತವೃತ್ತ

ಬನ್ನಿಸರ್ವರು ನೀಲಕಂಠನೆಡೆಯೊಳ್ ಬಿನೈಸಲಗಜಾಧವಾ |
ತನ್ನಿಂದಾದುಪಕಾರಮನ್ನೆಗಳಿಸಂಪನ್ನಂ ಸದಾ ಸಲಹುವಾ ||
ಇನ್ನೇಕೀ ಬರಿಮಾತಿನಿಂಬರುವದೇನೆನ್ನುತ್ತ ಪುರುಹೂತನು |
ಪನ್ನಾಂಗಾಭರಣಂ ವಿಲಾಸದೊಳಿರಲ್ ಚೆನ್ನಾಗಿ ಮಣಿದೆಂದನೂ ||26||

ರಾಗ ಕಾಂಭೋಜಿ ಅಷ್ಟತಾಳ

ಲಾಲಿಸಬೇಕು ಶ್ರೀ ಸಾಂಬಾ | ಬೇಗ |
ಪಾಲಿಸು ಭಕ್ತಾವಲಂಬ |
ಮಾಲಿ ಸುಮಾಲಿಮತ್ತಾಮಾಲ್ಯವಂತರ |
ನೋಲೈಸುವಂತಾ ದುಷ್ಕಾಲವು ದೊರಕಿತು ||ಲಾಲಿಸು ||  ||27||

ಆದಿಯೊಳ್ವರವ ಪಾಲಿಪಿರೀ | ನಮ್ಮ |
ಖೇದವಕಂಡು ಸೈರಿಸಿರೀ |
ವ್ಯಾಧಗೆ ಭಂಡಿಮತ್ತೊಡೆಯಗೆ ಪಥಮೆಂಬ |
ಗಾದೆಯ ಕಣ್ಣಾರೆ ಕಂಡೆವೈ ನಾವಿಲ್ಲಿ || ಲಾಲಿಸ ||  ||28||

ಗೋವುತಾ ತ್ರಣವ ಮೆಲ್ಲುವದೂ | ಮತ್ತಾ |
ಪಾವನಕ್ಷೀರವತಹುದೂ ||
ಹಾವಿಗೆ ಹಾಲಿತ್ತರೇನದ ಕೊಡುವದೈ |
ನಾವಿನ್ನೆಂಬುವದ್ಯಾಕೆ ನಮ್ಮ ಕೈವಿಡಿದುನೀ ||ಲಾಲಿಸು||29||

ಕಂದ

ಗೀರ್ವಾಣರ ಮಾತಾಲಿಸಿ
ಪೂರ್ವಾಪರವರಿತು ರಾಜಶೇಖರಭರದಿಂ |
ಪಾರ್ವತಿಯಂ ನೋಡುತತ
ತ್ಪೂರ್ವಾಮರರಳಿವ ಪಥವ ಸುರಪತಿಗೆಂದಂ ||30||

ರಾಗ ಸುರುಟಿ ಏಕತಾಳ

ಅಂಜಲ್ಯಾತಕಿಂತೂ | ಇಂಥಾ |
ಅಂಜಿಕೆಯೇನ್ಬಂತೂ |
ಸಂಜೀವನ ಮಣಿರಂಜಿಸುತಿರುತಿರೆ |
ಜಂಜಡವೇಹುಲು ನಂಜಿನ ಜೀವನ || ಅಂಜ  ||31||

ದಾರಿಯತಪ್ಪಿದಿರಿ | ಶ್ರೀ ಮ |
ನ್ನಾರಾಯಣಗುಸುರೀ ||
ವಾರಿಧಿಶಯನ ವಿಚಾರಿಸಿ ನಿಮ್ಮ ಮ |
ನೋರಥವಿತ್ತುಪಚಾರದಿ ಸಲಹುವ || ಅಂಜ ||32||

ನೊಂದಿರಿಖಳರ್ಭಯದಿಬಹುನಿ |
ರ್ಬಂದಿಪರನುದಿನದೀ |
ಪಿಂದಾದುದ ಮನಕೊಂದೆಣಿಸದೆ ನೀ
ವ್ಮಂದಾಗುವದ ಮುಕುಂದಗೆ ಸೂಚಿಸಿ || ಅಂಜ ||33||

ಕಂದ

ಹರನೆಂದುದನರಿತಮರರು |
ಭರದಿಂ ಮನೆಯಳಿಯನಾಗಿ ರತ್ನಾಕರನೊಳ್ |
ಉರಗನಮೇಲ್ಮಲಗಿಹ ಹರಿ |
ಚರಣವ ಕಂಡೆರಗಿ ನುತಿಸಿದರು ಸಂತಸದೊಳ್ ||34||

ಭಾಮಿನಿ

ಜಯ ಮಹಾಲಕ್ಷ್ಮೀ ಮನೋಹರ |
ಜಯತು ನಿತ್ಯಾನಂದ ಮುರಹರ |
ಜಯ ವಿನುತ ಪರಮೇಷ್ಠಿಸುರವರ ಜಯತು ಗುಣನಿಕರಾ ||
ಜಯ ಜಯಾ ಘಸಮೂಹ ಭೀಕರ
ಜಯ ನಿಜಾಶ್ರ್ರಿತಕುಲ ಕ್ಷಪಾಕರ |
ಜಯ ವಿನುತ ಕಮಲಾಕ್ಷ ಶುಭಕರ ಜಯವರದ ಸುಕರಾ ||35||

ರಾಗ ಮಧುಮಾಧವಿ ಏಕತಾಳ

ಶ್ರೀ ಲೋಲಾನಂದ ಮುಕುಂದ ಪರಾಕೂ |
ಅಲಸ್ಯ ಬಿಟ್ಟೆಮ್ಮರಕ್ಷಿಸಬೇಕೂ ||
ಮಾಲಿ ಸುಮಾಲಿ ಮಾ | ಲ್ಯವಂತರುಗಳು |
ಬಾಳಲೀಸರು ನಮ್ಮ ತಮ್ಮಾಟೋಪದೊಳು || ಶ್ರೀ ಲೋಲಾ ||36||

ಧರೆಯೊಳಾಗುವಯಾಗ ಭಾಗವಿನ್ನೆಂತು |
ದೊರವುದಿಲ್ಲವು ಸಿದ್ದ ದೈತ್ಯರ್ಗೆ ಸಂತೂ |
ದುರುಳರ್ಗೆ ಕೈ ಜೋಡಿಸುವ ಕಾಲ ಬಂತೂ |
ತರಳಾಕ್ಷಿಯರನೊವರವರೊಂದೇ ಗೊಂತೂ || ಶ್ರೀ ಲೋಲಾ ||37||

ಶ್ರೀಕಂಠನಲ್ಲಿಬಿನೈಸಿದಡವನೂ |
ವೈಕುಂಠ ಸಂತೈಪನೆಂದನೀಶ್ವರನೂ |
ಭೂಕಾಂತೆಭಾರವನಿಳುಹಬೇಕೆಂದೂ |
ಮಾ ಕಾಂತಗರುಹಲು ಹರಿಪೇಳ್ದನಂದೂ || ಶ್ರೀ ಲೋಲಾ ||38||

ರಾಗ ತೋಡಿ ಅಷ್ಟತಾಳ

ನೊಂದಿರೇ ನೀವುನೊಂದಿರೆ    || ಪಲ್ಲವಿ ||

ನೊಂದಿರೇ ಸಂಕ್ರಂದನಾದಿಗಳೆಲ್ಲಾ |
ಇಂದೆಂಬುದೇಕೆ ಮುಂದಾಗುವ ಸೊಲ್ಲಾ || ನೊಂದಿರೇ || ಅನುಪಲ್ಲವಿ ||    ||ಪ||

ಭೀತಿಯ ಬಿಡಿರೆನ್ನ ಮಾತನೀವ್ ಕೇಳಿ |
ಕಾತುರಗೊಳ್ಳದೆ ಪ್ರೀತಿಯೊಳ್ ಬಾಳಿ |
ಭೂತಾಧಿಪತಿಯೆಂದ ಚಾತುರ್ಯದೊಲವಾ |
ಯಾತಕೆನ್ನಲಿ ದೈತ್ಯ ತಾತನಲ್ಲಿರುವಾ || ನೊಂದಿರೇ ||39||

ದುರುಳಸುಕೇಶಿಯೆಂಬವಗೀದಾನವರೂ |
ತರಳರು ಮೂವರಾಗಿಹರತಿಬಲರು |
ಪುರವೈರಿಯರಿದು ಪರಸ್ಪರದಲ್ಲಿ
ಹರೆಯ ಲೆಂದೆನುತಲಟ್ಟಿದ ನಿಮ್ಮನಿಲ್ಲಿ || ನೊಂದಿರೇ ||40||

ಆದರಾಗಲಿ ನಿಮ್ಮಾಯಾಸವ ಬಿಡಿಸಿ
ಮೇದಿನಿಭಾರಾಪಹಾರವ ಗೊಳಿಸೀ |
ಬಾಧಿಪ ದೈತ್ಯರ ಕೊಲುವೆನೆಂದೆನುತಾ |
ಮಾಧವನುಪಚರಿಸಿದ ನಸುನಗುತ || ನೊಂದಿರೇ ||41||

ಭಾಮಿನಿ

ಹರಿನಿರೂಪಿಸ ಲಧಿಕ ಹರುಷದಿ |
ಮರಳಿನುತಿಸುತಸುಮನಸರು ನಿಜ |
ಪುರಕೆ ಪೋಗಲ್ಕಿಂದಿರಾಧವನೊರೆದ ವಾರ್ತೆಯನೂ ||
ಭರದಿಮತ್ತಾ ಮಾಲ್ಯವಂತನ |
ದರಿತು ಪೂರ್ವಜ ಮಾಲಿಯೆಂಬವ |
ನಿರಲಿಕೊಡ್ಡೋಲಗದಿ ಬಂದರುಹಿದ ರಹಸ್ಯದಲೀ ||42||

ರಾಗ ಕಾಂಭೋಜಿ ಝಂಪೆತಾಳ

ಅಣ್ಣ ಕೇಳ್ದರಿಯೆ ಮೈ | ಗಣ್ಣ ಮುಂತಾಗಿ ಮು |
ಕ್ಕಣ್ಣನಿದ್ದೆಡೆಯಲ್ಲಿ ಬಂದೂ |
ಮಿಣ್ಣನೆಮ್ಮನುತೆಗೆವ | ಬಣ್ಣದಾಲೋಚನೆಯ |
ನೆಂಣ್ಣಿಸಲ್ಕವನೆಂದನಂತೇ ||43||

ತಮಸಿಬಣ್ಣದಿಂದೆಸೆವ ಮೈಗಳ್ಳನಾದಹರಿ ||
ಯುಸುರುವನು ನಿಮ್ಮಿಷ್ಟವರಿತು |
ಅಸುರ ಸಂಕುಲವ ಸಂಹರಿಸಿ ಪೋಷಿಸುವನೆನೆ |
ಬಸವಳಿದು ಗೀರ್ವಾಣರೆಲ್ಲ ||44||

ಕ್ಷೀರಾಬ್ಧಿಗೈದನ ಕಾಲ್ಗೆರಗಿರತರತರದಿ |
ದೂರಲಚ್ಚುತಮನದಿ ಮರುಗೀ |
ಘೋರ ಖಳರಂತರಿದು ನಿಮ್ಮನಾರೈದುಭೂ
ಭೂ ಭಾವಿಳುಹುವೆ | ನೆಂದನಂತೇ ||45||

ಇನಿತು ಕಾರ‌್ಯಗಳ ಮತ್ತನುಸರಿಸಿಗೋಪ್ಯದಿಂ |
ದನಿಮಿಷರು ಸಮಯವೀಕ್ಷಿಪರು|
ಮನಸಿನಲಿತನ್ನಾಪ್ತಜನವೆರದು ಮುಂದೆದ್ದು |
ಘನಯತ್ನಗಳ ನಡೆಸಬೇಕೂ ||46||

ಭಾಮಿನಿ

ಅನುಜನೆಂದುದನರಿತು ಸಾಹಸ |
ದನುಜಕೆಂಗಿಡಿಯುಗುಳಿ ಮೀಸೆಯ |
ಕುಣಿಸಿ ಕುಂಭಿನಿನಡುಗುವಂತಾರ್ಭಟಿಸಿ ಖಡ್ಗವನು ||
ಘನಮದಾಂಧದಿ ಝಳಪಿಸುತ ಮು |
ನ್ನನಿಮಿಷರ ಸಂಕುಲವ ಸವರುವೆ  |
ನೆನುತ ತನ್ನಾಪ್ತರನುಕರದಿಂತೆಂದ ಕೋಪದಲೀ ||47||

ರಾಗ ಭೈರವಿ ಏಕತಾಳ

ಕೇಳ್ದಿರೆ ನೀವಿದನೆಲ್ಲ | ನಾವ್ |
ತಾಳ್ದಿರುವದುಚಿತವಲ್ಲಾ |
ಸೀಳ್ದೊರಗಿಪೆನಮರರನೂ | ಮುಂದೆ |
ಬಾಳ್ದಿರಲವರನು ಬಿಡೆನೂ ||48||

ಮೂರ್ಕಣ್ಣಿನ ಹರ ಬರಲೀ | ಈ |
ದೂರ್ಕೇಳ್ದವನೈತರಲೀ |
ಬೇರ್ಕಡಿದರೆ ಮರವೆಲ್ಲಿ | ಪೇಳ್ |
ತಾರ್ಕಣ್ಯಗಳಿದರಲ್ಲೀ ||49||

ಗೀರ್ವಾರ್ಣರ ತೆಗೆದನಕಾ | ಆ |
ನೀರ್ಮನೆಯವ ಬಿಡಬಳಿಕಾ |
ಮೇರ್ವರಿದ್ಯಾತಕೆ ಬರುವಾ | ಮ |
ತ್ತೋರ್ವರು ನೋಡರು ಪುರವಾ ||50||

ಮಾರ್ಮಲತರು ಸುರರಿಂದೂ | ಮ |
ತ್ತಾರ್ಮಾಡುವದೇನ್ಬಂದೂ |
ಕಾರ್ಮುಕವಿದುಸಾಕೆಂದೂ | ಖಳ |
ಭೋರ್ಮೊರೆದನು ಮುನಿದಂದೂ ||51||

ವಾರ್ಧಕ

ಸುರಥವನಡರ್ದು ಮೂವರು ದೈತ್ಯರತಿಭರದಿ |
ಕರಿವರೂಥ ಪದಾತಿಪರಿಪರಿ ಸೈನ್ಯದಿಂ |
ಸುರಪುರವ ಮುತ್ತಿ ಮೇಲಾದು ಮತ್ತರಿ ಶಿರವ
ಹರಹಿದರ್ಮೇದಿನಿಯೊಳೂ ||
ಮೊರೆವ ರಭಸದಲಿ ಕಂಡವರ ಶಿರವರಿವುತ್ತ |
ಲಿರಲು ನಿರ್ಜರನಗರ ಜನರು ಗಾಬರಿಗೊಂಡು |
ಮರುಗಿ ಗಜಬಜಿಸುತ್ತಲಿರದೆ ಬಂದಾಗ ತತ್ಸುರವರಗೆ ಸೂಚಿಸಿದರೂ ||52||

ಭಾಮಿನಿ

ಲಾಲಿಸಮರಾವತಿಯರಸಖಳ |
ಜಾಲದಿಂದೈತಂದು ಮುತ್ತಿತು |
ಮಾಲಿಯೆಂಬವನೈದಿರುವ ದಂಡೆತ್ತಿ ರೌದ್ರದಲೀ ||
ಏಳಬೇಕೆಂದೆನಲು ನಿರ್ಜರ |
ಪಾಲನೈರಾವತವನೇರ್ದು ವಿ |
ಶಾಲತರ ಸೇನಾ ಸಮೂಹದಿ ಪೊಕ್ಕನರಿಬಲವಾ ||53||

ರಾಗ ಶಂಕರಾಭರಣ ಮಟ್ಟೆತಾಳ

ಎರಡು ಬಲ ಮಹಾ ವಿರೋಧ ವೆರದು ಖತಿಯಲೀ |
ಭರದಿ ವೈರಿಬಲವ ಸೆಣಸಿ ತರಿದು ಧುರದಲೀ |
ಸುರಪನಿತ್ತ ಸಮರಕಾಗಿ ಬರುವದೀಕ್ಷಿಸೀ |
ದುರುಳ ಮಾಲ್ಯವಂತನೆಂದ | ಜರೆದು ಘರ್ಜಿಸೀ ||54||

ಸಕುಣಿವ ಬಗೆಯ ಬಲ್ಲೆನಿಂದ್ರ | ಕೆಣಕಿ ನೋಳ್ಪೆಯಾ |
ನೆಣದ ಕೊಬ್ಬಿನಿಂದಕಾದು | ತೃಣಕ ಮಾಳ್ಪೆಯಾ ||
ಪಣೆಯ ಬರಹವಡಗಿತೆನುತ | ಲೆಣಿಸು ನಿನ್ನನೂ |
ರಣದಿ ಪಲ್ಮುರಿವೆನೆನುತ್ತ | ಕಣೆಗಳೆಸದನೂ  ||55||

ಚೋರನೆಂದ ಮಾತನೆಚ್ಚಿ | ಹಾರಿಬೀಳ್ಪದೂ |
ಶೂರತನವಿದೇನೆಲಾಸು | ಸಾರವಲ್ಲಿದೂ |
ದೂರುಕೇಳ್ದ ಕಳ್ಳನೆಲ್ಲಿ | ತೋರು ಬೇಗದೀ |
ಮಾರಿಗೀವೆನೆನುತ ಸರಳ | ತೂರಲುಗ್ರದೀ ||56||

ದಲಂಡತನದ ಮಾತುಸುಪ್ರಚಂಡನೆಂಬುದೂ |
ಕಂಡಿತೀಗ ಮೈಯೊಳಿರುವ ಖಂಡಿ ಪೇಳ್ದುದೂ ||
ಗಂಡುಗಲಿಗಳಲ್ಲಿ ಲಜ್ಜಾಭಂಡನೆಂನ್ನುತಾ |
ತಂಡಕೋಳ್ಗಳೆಸೆದನವನು ದಂಡಗಜರುಪಿ ||57||

ಕಪ್ಪೊಡಲಿನವನಿಗೊರೆದನಿ | ನ್ನಪ್ಪನೇ ಹರಿ |
ಬೆಪ್ಪನಂತೆ ಮೋರೆ ಮೋರೆ | ನೋಳ್ಪೆ ನರಗುರೀ |
ತಪ್ಪಿ ಕೊಂಡರಿದಕೆನಾನಿ | ನೊಪ್ಪಿಕೊಳ್ಳೆನೂ |
ಚಿಪ್ಪು ಚೂರು ಮಾಳ್ಪೆನೆನುತ ಲಪ್ಪಳಿಸಿದನೂ ||58||

ಇಂತು ಮೂದಲಿಸುತಲಮರ ಕಾಂತಮನದಲಿ |
ಪಂಥವಾಂತುನಿಂತು ಮಾಲ್ಯ ವಂತನಿದಿರಲೀ |
ಕಂತುಪಿತನ ಬೈದರವನ | ನಂತಗುಣಗಳಾ |
ಭ್ರಾಂತರರಿಯರೆನುತಲೆಚ್ಚ | ಮಂತ್ರಶರಗಳಾ ||59||

ಕಿಡಿಯನುಗುವಸಮ ಸರಳ | ನಡುವೆ ಖಂಡಿಸಿ |
ಕಡಲಶಯನಗೊರದ ಹಮ್ಮ | ನೊಡನೆ ನಿಲ್ಲಿಸೀ ||
ದಢದೊಳ ಮರಲೋಕವಾಳ್ವ | ತೊಡಕ ತಪ್ಪಿಸೀ |
ಕೊಡುವೆನೆನುತ ಹೊಡೆದ ದುರುಳ | ಬಿಡದೆ ಝಾಡಿಸೀ ||60||